ನೋಡಪ್ಪಾ ಮರಿದೇವ್ರೆ
ನೀನು ನಿಜವಾಗ್ಲೂ ಮರಿದೇವ್ರಲ್ಲ ಮಾಯ್ಕಾರ ಮಾದಯ್ಯ
ಆದರೆ ನಮ್ಮ ಗುರುಮಠದಲ್ಲಿ ಚಾಕರಿ ಮಾಡಬೇಡ ಕಣಪ್ಪ
ಅರ್ಧನಳ್ಳಿ ಮಠಕ್ಕೆ ಯಾರೂ ಗುರುಗಳಿಲ್ಲ
ನಿನ್ನನ್ನು ಏಳನೇ ಗುರುವಾಗಿ
ಪಟ್ಟಾ ಕಟ್ತೀನಿ ನಡಿಯಪ್ಪಾ ಅಂದ್ರು
ಇಲ್ಲ ಗುರುವೇ
ನಿಮ್ಮ ಚಾಕರಿ ಮಾಡಬೇಕು ಅಂದ
ಹಾಗಾದರೆ ನೋಡಪ್ಪ ನನ್ನ ಚಾಕರಿ ಮಾಡಬೇಕಾದರೆ
ನೂರೊಂದು ಲಿಂಗವಿದೆ ನನ್ನ ಗುರುಮಠದಲ್ಲಿ
ಏಳು ಜನ ಜಂಗಮರಿದ್ದಾರೆ
ಏಳುಜನ ಜಂಗಮರೂ ಹೂ ತಂದರೆ
ಆ ಏಳುಜನ ಜಂಗಮರು ತಂದಂಥ ಹೂವು
ನೂರೊಂದು ಲಿಂಗಕ್ಕೆ ಏಟುಕದೇನೆ
ಏಳು ಲಿಂಗದ ಪೂಜೆ ನಿಂತೋಗಿದೆ
ನೀನು ಕೂಡ ಅವರ ಜತೆಯಲ್ಲೋಗಿ
ಆ ಹೂ ತಂದು ಪೂಜೆ ಮಾಡಪ್ಪ ಅಂದ್ರು
ಆಗಲೀ ಗುರುವೇ ಅಂತೇಳಿ
ಆವಾಗೊಪ್
ಹೂವಿನ ಕುಕ್ಕೆ ಕೈಗೆ ಕೊಟ್ರು
ಆದರೆ ಮರಿದೇವ್ರೆ
ಮೂಡ್ಲಾಗಿ ಹೋಗಿ ಹಾವೆತ್ಕೊಂಡ್ ಬ
ತೆಂಕಲಾಗೋಗು ಪಡುಲಾಗೋಗು
ಬಡಗಲ ದಿಕ್ಕಿಗೆ ಮಾತ್ರೆ ಹೋಗ್ಬೇಡ ಅಂದ್ರು
ಓಹೋ ಗುರುಗಳೇನಪ್ಪ ಬಡಗಲಾಗಿ ಹೋಗ್ಬೇಡ ಅಂತೇಳವರೇ
ಇದನ್ನ ಪರೀಕ್ಷೆ ಮಾಡಬೇಕಂತೇಳಿ
ತೆಂಕಲಾಗಿ ಜಂಗಮರ ಜೊತೆಯಲ್ಲಿ
ಅವರು ಹೂವ ತರುವುದಕ್ಕೆ ಹೊರಟಾರೇ ಮಹದೇವಾs || ನೋಡಿ ನಮ್ಮ ಶಿವನಾ ||

ಕುಂತೂರು ಒಳಗೆರೆವೊಳಗೆ ಹೊಯ್ತಾ ಹೊಯ್ತಾ
ಮಾಯ್ಕಾರ ಗಂಡ ಮಾದಪ್ಪ
ಈ ಜಂಗಮರ ಸತ್ಯ ನೋಡ್ಬೇಕು
ನಮ್ಮ ಗುರುಗಳ ಪರೀಕ್ಷೆ ಮಾಡಬೇಕು ಅಂತೇಳಿ
ಹೋಗ್ತಾ ಹೋಗ್ತಾ ಒಂದು ಮುಳ್ಳದಸಿ ತ್ರಿಷ್ಣೆಮಾಡಿ
ಆ ಮುಳ್ಳಿನ ಮೇಲೆ ಕಾಲ್ಮಡುಗ್ಬುಟ್ಟು ಬಾಯ್ಬಡ್ಕೊಂಡು
ಮಲೀಕೊಂಡ್ರು
ಏಳು ಜನ ಜಂಗಮರು ಬಂದು
ಆ ಮುಳ್ದಸಿ ಕೀಳ್ತರೆ ಮುಳ್ದಸಿ ಬರ್ಲಿಲ್ಲ
ಅಯ್ಯಾ ನಮ್ಮ ಗುರುಗಳು ಬಿಡೋದಿಲ್ಲ
ಹೊಸ ಮರಿ ದೇವ್ರು ಇವ
ಆದರೆ ಒಬ್ಬ ಚಿಕ್ಕೋನ ಕರೆದ್ರು
ಅಪ್ಪಾ ಮರಿದೇವರೇ
ನೀನು ಬೇಲೆ ಮರೆಯಲ್ಲಿ ಕೂತ್ಕೊ
ಈ ಮರಿದೇವ್ರು ಏನು ಮಾಡ್ತಾನೆ ನೋಡ್ಕೊ
ನಿನ್ನ ಬದ್ಲು ನಾವು ಹೂತತ್ತೀವಂತೇಳಿ
ಅವರಾರ್ಜನ ಹೊರಟೋದ್ರು
ಅವರ ತಲೆ ಮರೆಯಾಯ್ತಲೆ ಮಾದೇವ
ಆ ಮುಳ್ದಗಿ ಕಿತ್ತು ಬಿಸಾಕ್ಬುಟ್ಟು
ಅವರು ಬಡಗಲಾಗಿ ತಿರುಗವರೇ ಮಹದೇವಾs || ನೋಡಿ ನಮ್ಮ ಶಿವನಾ ||

ಬಡಲಾಗಿ ತಿರುಗಿ ನೋಡಿದ್ರು
ಪ್ರಭುಸ್ವಾಮಿ ಬೆಟ್ಟದ ಮೇಲೆ
ಹನ್ನೆರಡೆಜ್ಜೆ ಸಿದ್ಧರಾಮ
ಹನ್ನೆರಡೆಜ್ಜೆ ಸಿದ್ಧರಾಮ ಅಂದರೆ
ಹನ್ನೆರಡೆಜ್ಜೆ ಹುಲಿಯಲ್ಲಿ
ಒಂದೆಜ್ಜೆ ಎತ್ತಿ ಮಡಗಿದರೆ ಹನ್ನೆರಡೆಜ್ಜೆ ಆಗಬೇಕು
ಅಂಥಾ ಹೆಬ್ಬುಲಿ
ಬಿಸಿಲು ಕಾಯ್ತಾ ಕೂತಿತ್ತು
ಆವಾಗ ಮಾಯ್ಕಾರ ಗಂಡ
ಆ ಬಿಸಿಲು ಕಾಯುವಂತ ಹುಲಿಯನ್ನು
ಅವರು ಕೈಸನ್ನೆ ಮಾಡಿ ಕರೆದವರೇ ಮಾಯ್ಕಾರಾs || ನೋಡಿ ನಮ್ಮ ಶಿವನಾ ||

ಕೈಸನ್ನೆ ಮಾಡಿ ಕುಂತೂರು ಒಳಗೆರೆಗೆ ಕರೆದು
ಹನ್ನೆರಡೆಜ್ಜೆ ಹುಲಿಮ್ಯಾಲೆ ಕೂತ್ಕಂಡು ಸವಾರಿ ಮಾಡಿ
ವಾಗ ಮೈ ಸವರಿ ಹುಲಿಯನ್ನು ಬೆಟ್ಟಕ್ಕೆ ಕಳ್ಸಿಬುಟ್ಟು
ಹೂವಿನ ಕುಕ್ಕೆ ಕೈಲಿಡ್ಕೊಂಡು
ಕಾವಿ ಚೌಕ ಹೆಗಲ ಮೇಲೆ ಇಟ್ಕೊಂಡು
ಅವರು ಕಲ್ಲೂರು ತೋಪ್ಗೆ ದಯಮಾಡವರೆ ಮಹದೇವಾs || ನೋಡಿ ನಮ್ಮ ಶಿವನಾ ||

ಗುರುವೇ ಗುರುಪಾದವೇ ಕಲ್ಲೂರು ತೋಪ್ನಲ್ಲಿ ಬಂದು
ಹೂವಿನ ಕುಕ್ಕೆ ಆಲದ ಮರಕ್ಕೆ ತಗುಲಾಕ್ಬುಟ್ರು
ದನಾ ಕುರಿ ಕಾಯುವಂಥ ಹುಡುಗ್ರನ್ನೆಲ್ಲ ಕರುದ್ರು
ಅಪ್ಪಾ ಹುಡುಗ್ರೆ ಇವತ್ತು ಚೆಂಡಾಟ ಆಡೋಣ ಬನ್ನಿ
ನಾನು ಆಡಿ ಬಾಳಾ ದಿವ್ಸವಾಗಿದೆ ಅಂದ್ರು
ಏನಯ್ಯ ಜಂಗಮ?
ಕಾವಿ ಬಟ್ಟೆ ಜಂಗುಮ
ನಮ್ಮ ಕೂಡ ಚೆಂಡಾಟ ಆಡೀಯ ಅಂದ್ರು
ಇಲ್ಲ ಕಣಪ್ಪ ಹುಡುಗ್ರೇ
ನೀವೆಲ್ಲ ಒಂದು ಕಡೆ ಸೇರ್ಕಳಿ
ನಾನೊಬ್ನೆ ಒಂದ್ಕಡೆ ಇರ್ತೀನಿ
ಮೊದಲಾಟ ನೀವಾಡಿ
ಕಡೆ ಆಟ ನನಗೆ ಕೊಡಿ ನಾನಾಡ್ತೀನಿ ಅಂತೇಳಿ
ಮಾದೇವಾ ಕಲ್ಲೂರು ತೋಪಿನೊಳಗೆ
ಅವರು ಚೆಂಡಾಟಕೆ ನಿಂತವರೇ ಮಹದೇವಾs || ನೋಡಿ ನಮ್ಮ ಶಿವನಾ ||

02_81_MM-KUH

ಇವರು ಚೆಂಡಾಡ್ತಾಯಿದ್ರೆ
ಈ ಕಡೇವೊಳಿಗಿದ್ನಲ್ಲ ಚಿಕ್ಕ ಮರಿದೇವ್ರು
ಈ ಮರಿದೇವ್ರು ಎಲ್ಲೋಗ್ತನೆ ಏನ್ಮಾಡ್ತನೆ
ಇದೆಲ್ಲಾನೂನು ಬೇಲಿಮರೇಲಿ
ನೋಡ್ಕೊಂಡೇ ಬರ್ತಾವ್ನೆ
ಆವಾಗ ಸಾಯಂಕಾಲ ಐದು ಗಂಟೆವರ್ಗೂವೆ
ಹುಡುಗರೊಂದಿಗೆ ಚಂಡಾಟ ಆಡ್ಬುಟ್ಟು ಕಲ್ಲೂರು ತೋಪ್ನಲ್ಲಿ
ಕಡೇ ಆಟ ಬಂತು ಮಾದಪ್ಪನಿಗೆ
ಲೋ ಹುಡುಗ್ರೆ
ಕಾಯ್ಕಳಿ ನಾನು ಹೊಡೀತೀನಿ ಚೆಂಡಾ ಅಂತೇಳಿ
ಆವಾಗ ಚೆಂಡೆತ್ಕೊಂಡು ಹೊಡೆದ ತಕ್ಷಣವೇ
ಚೆಂಡು ಲಗ್ಗೆಯಾತಿರ್ತಕ್ಕಂಥಾದ್ದು
ತಲಕಾಡು ತಡಿ ಮಾಲಂಗಿಗೆ ಹೋಗ್ಬುಡ್ತು
ಕಲ್ಲೂರು ತೋಪಿಗೂ ಮಾಲಂಗಿಗೂ ಮೂರು ಮೈಲಿ ದೂರ
ದನಾಕುರಿ ಕಾಯುವಂತ ಹುಡುಗರೆಲ್ಲ ಸಾಲಾಗೋಯ್ತಾವರೆ
ಇವರು ಬರುವಂತ ಟೈಮಾಯ್ತದೆ ಅಂತೇಳಿ
ತಮ್ಮ ಹೂವಿನ ಕುಕ್ಕೆ ಕೈಲಿಡ್ಕೊಂಡು
ಅವರು ಬೇಲಿ ಬೇಲುಗುಂಟ ಹೊರಟವರೇ ಮಹದೇವಾs || ನೋಡಿ ನಮ್ಮ ಶಿವನಾ ||

ಬೇಲಿ ಬೇಲಿ ಗುಂಟಾ ಬಂದರು
ಅಲ್ಲಿ ಹಾವ್ರಾಣಿ ಗೊದ್ದೆ ಗೋಸುಂಬೆ ಹಾವು ಚೇಳು
ಎಲ್ಲವನ್ನೂ ಕೈಸನ್ನೆ ಮಾಡಿ ಕರೆದ್ರು
ಅಪ್ಪಾ ಕಾಡಮೃಗ ಜಾತಿಗಳೇ
ನರಮನ್ಸರ ಕೈಗೆ ಸಿಕ್ಕಿದ್ರೆ ನಿಮ್ಮನ್ನು ಹೊಡ್ದು
ನರಕದ ಗುಂಡೀಲಿ ಮಣ್ಣ ಮಾಡ್ತಾರೆ
ನನ್ನ ಕೈಗೆ ಬನ್ನಿ ನೀವು
ನಿಮ್ಮ ಜೀವಸೈತವಾಗಿ ಶಿವನಪಾದ ಸೇರಿಸ್ತೀನಿ ಅಂತೇಳಿ
ಎಲ್ಲಾ ಕಾಡ ಮೃಗ ಜಾತಿಯನ್ನು ಕರೆದು
ಮಾಯ್ಕಾರ ಗಂಡ ಮಾದೇವ
ತಮ್ಮ ಪುಸುಮದ ಕುಕ್ಕೇಲಿ ತುಂಬ್ಕೊಂಡೋಗಿ
ಮಾಲಂಗಿ ಮಡುವಿಗೆ ಎಸೆಯುತ್ತಿದ್ದಾರೆ
ಜಾತಿಗೊಂದು ಬಗೆ ಪುಸುಮಮಾಯ್ತು
ಮರುಗ ಮಲ್ಲಿಗೆ ಸುರಗಿ ಶಾವಂತಿಗೆ
ಜಾತಿಗೊಂದು ಬಗೆ ಹೂ ಮಾಡಿ
ಅವರು ಕೈಲಿದುಕೊಂಡು ಬರುತಾವರೇ ಮಹದೇವಾs || ನೋಡಿ ನಮ್ಮ ಶಿವನಾ ||

ಮಲ್ಲಾ ಮಲ್ಲೀಗೆಯೋ
ಮಾದೇವಾ ಮಡೆವಾಳ ಸಂಪಿಗೆಯೋ
ಮಾದಾಳೆಲೂವು ಮಾಡಿಸು ಗದ್ದಿಗೆ
ಮಾದೇವ ಲಿಂಗನಿಗೆ

ಮಾದಪ್ಪನ ಹೂವುನ ಗಮಲ
ಕುಂತೂರು ಮಠಕ್ಕೆ ಝೇಂಕರಿಸ್ತಾಯಿತ್ತಂತೆ
ಈ ಚಿಕ್ಕ ಮರಿದೇವ್ರು ನಿಜವಾದ ಹೂ ತತ್ತಾಯಿಲ್ಲ
ಹಾವು ಚೇಳನ್ನು ಹಿಡಕೊಂಡು ಬಂದು
ಆ ಮಾಲಂಗಿ ಮಡುಗಚ್ಕೊಂಡ್ ಬತ್ತಾವ್ನೆ
ಮಾಯ್ಕಾರ ಯಂತ್ರಗಾರ ಅಂದ್ರು
ಹೋಗಯ್ಯ ನಾನು ಪರೀಕ್ಷೆ ಮಾಡ್ತೀನಿ ಅಂದ್ರು
ಆವಾಗ ಮಾಯ್ಕಾರ ಗಂಡ
ಗುರುಗಳ ಮುಂದೆ ಸುರಗಿ ಸಾಮಂತ್ಗೆ ಸುರುದ್ರುಟ್ಟು
ಅವರು ಶರಣ ಮಾಡಿ ನಿಂತವರೇs ಮಾಯ್ಕಾರಾs || ನೋಡಿ ನಮ್ಮ ಶಿವನಾ ||

ಆವಾಗ ಮಾಯ್ಕಾರ ತಂದಂಥ ಹೂವನ್ನು
ನೂರೊಂದು ಲಿಂಗಕ್ಕೂ ಪೂಜೆ ಮಾಡ್ಕೊಂಡ್ಬಂದ್ರು
ಮತ್ತಷ್ಟು ಉಳಿದ್ಬುಡ್ತು
ಏನ್ರಯ್ಯಾ ಮರಿದೇವ್ರೇ ?
ಹೊಸ ಮರಿದೇವ್ರು ಅಂತೇಳಿ
ನೀವು ಏಳು ಜನಾನು ಚಾಡಿ ಹೇಳ್ತಾಯಿದ್ರಿ
ನಾಳೆ ನಾನೇ ಪರೀಕ್ಷೆ ಮಾಡ್ತೀನಿ ಅಂತೇಳಿ ಸುಮ್ಮನಾದ್ರು ಗುರುಗಳು
ತಿರುಗಾ ಬೆಳಗಾಗುತ್ತಲೇ ಎದ್ದು
ಮಾದೇಶ್ವರ ಏಳ್ಜೆನ ಜಂಗುಮರಾ ಮುಂದೆ
ಹೂ ತರುವುದಕ್ಕೆ ಹೊರಟೋದ್ರು ಈ ಕಡೆಗೆ ತೆಂಕಲಾಗಿ
ಗುರುಗಳು ಮ್ಯಾಲೆ ಹೂವಿನ ರಥ ಏರ್ಕೊಂಡು ಬತ್ತಾವ್ರೆ
ಅದೇ ರೀತಿಯಾಗಿ ಮುಳ್ಳಸಿ ಮೇಲೆ ಕಲ್ಮಡುಗುದ್ರು
ಆರ್ಜೆನ ಜಂಗುಮರು ಹೋದ್ಮೇಲೆ
ಆ ಮುಳ್ದಸಿ ಕಿತ್ತಾಕ್ಬುಟ್ಟು
ಹುಲಿಯನ್ನು ಕರೆದು ಸವಾರಿ ಮಾಡ್ತಾಯಿದ್ರು
ಹುಲಿ ಮೈ ಸವರಿ ಬೆಟ್ಟಕ್ಕೆ ಕಳಿಸ್ಬುಟ್ರು
ಕಲ್ಲೂರು ತೋಪಿಗೆ ಹೋದ್ರು
ಅದ್ನೂ ನೋಡ್ಕಂಡ್ರು ಗುರುಗಳು
ಕಲ್ಲೂರು ತೋಪ್ನಲ್ಹೋಗಿ ವಿಳ್ಳೇದಾಟ ಆಡ್ತರೆ
ಇವತ್ತು ನೀವು ಜಿಲ್ಲೀದಂಡೆ ಅಂತೀರಿ
ನಾವು ವಿಳ್ಳೇದ ಕೋಲಿನಾಟ ಅಂತೀವಿ
ವಿಳ್ಳೇದ ಕೋಲಿನಾಟ ಆಡ್ಬುಟ್ರು
ಸಾಯಂಕಾಲ ಆದ್ಮೇಲೆ ಹಾವ್ರಾಣಿ ಕರೆದ್ರು
ಎಲ್ಲವನ್ನೂ ತಮ್ಮ ಹೂವಿನ ಕುಕ್ಕೇಲಿ ತುಂಬ್ಕೊಂಡ್ ಬಂದು
ಮಾಲಂಗಿ ಮಡುಗೆ ಅಜ್ಜುದ್ರು
ಜಾತಿಗೊಂದು ಬಗೆ ಹೂವಾಗ್ಬುಡ್ತು
ಗುರುಗಳು ಮ್ಯಾಲೇ ನೋಡ್ಕಂಡ್ರು
ಮಾದೇಶ್ವರ ಬರುವುದಕ್ಕಿಂತ ಮುಂದೆ ಬಂದು
ಉರೀಗದ್ದುಗೆ ಮ್ಯಾಲೆ ಕುಂತಿದ್ರು
ಮಾದೇವ ಗದ್ದುಗೆ ಮ್ಯಾಲೆ ಯಾವನ್ನ ಸುರಿದ್ಬುಟ್ಟು
ಗುರುಗಳಿಗೆ ಶರಣ ಮಾಡಿ ನಿಂತವರೇ ಮಹದೇವಾs || ನೋಡಿ ನಮ್ಮ ಶಿವನಾ ||

ಪ್ರಭುಸ್ವಾಮಿಯವರು ಉರಿಗದ್ದುಗೆಯನ್ನಿಳಿದ್ಬುಟ್ಟು
ಮಾದಪ್ಪ ಎರಡು ಮುಂಗೈ ಹಿಡಕಂಡ್ರು
ಮರಿದೇವ್ರೆ ನೀವು ನಿಜಮಾಗ್ಲೂ ಮರಿದೇವ್ರಲ್ಲ
ಮಾಯ್ಕಾರನಾಗಿದ್ದೀಯೆ ಕಾಣಪ್ಪ
ಲೋಕ ಕಲ್ಯಾಣ ಮಾಡು
ನಡಿಯಪ್ಪ ಅರ್ಧನಳ್ಳಿ ಮಠಕೆ ಅಂತ್ಹೇಳಿ
ಮಾದಪ್ನ ಬಿಡದೆ ಹಿಡಕೊಂಡು
ಅವರು ಅರ್ದ್ನಳ್ಳಿ ಮಠಕೆ ಕರಕೊಂಡೊಯ್ತಾವರೇ ಗುರುಗಳು || ನೋಡಿ ನಮ್ಮ ಶಿವನಾ ||

ಅರ್ಧನಳ್ಳಿ ಮಠದಲ್ಲಿ ಹೋಗಿ
ಮಾದಪ್ಪನಿಗೆ ಶೂನ್ಯಸಿಂಹಾಸನದ ಮೇಲೆ
ಆವಾಗಲೀಗ ಏಳನೇ ಗುರುವಾಗಿ
ಮಾದಪ್ಪನಿಗೆ ಪಟ್ಟವನ್ನು ಕಟ್ಟಿ
ಅದೇ ಕಂಚಿನ ಕಂಸಾಳೆಯನ್ನು ಕೊಟ್ಟು
ಮುತ್ತಿನ ಜೋಳಿಗೆಯನ್ನು ಕೊಟ್ರು
ಈ ರಾಜ್ಯವನ್ನ ಆಳಪ್ಪ ಅಂತೇಳ್ಬುಟ್ರು
ಯಾರು ? ಪ್ರಭುಸ್ವಾಮಿಯವರು
ಮಾದೇಶ್ವರನಿಗೆ
ಊಳಿಗ ಮಾಡುವುದಕ್ಕೆ
ಒಬ್ಬ ಸಂಸಾರಿ ಸಂಗಪ್ಪ ಅಂತ್ಹೇಳಿ ಸಂಗಪ್ನ ಇಟ್ಟು
ಆ ಮಠದೊಳುಗೆ ಊಳಿಗ ಮಾಡುವುದಕ್ಕೆ
ಅದೇ ರೀತಿಯಾಗಿ ಅರ್ಧ್ನಳ್ಳಿ ಮಠದಲ್ಲಿ
ನಾಲ್ಕಾರು ದಿನ ಕಾಲ ಕಳೆದ್ಬುಟ್ಟು
ಸಂಗಪ್ಪ ಇನ್ನು ಮಾತ್ರ ಈ ಲೋಕ್ದಲ್ಲಿ ಇರನಾರಿ
ನಾನು ಯಾರೂ ಇಲ್ಲದ ಮಲೆಗ್ಹೋಗ್ಬೇಕು
ನಾನು ಕಲಿಯುಗ ಕಟ್ಟಾಳಾಬೇಕು
ಕಾಸಿನ ಧೂಪ ಹಾಕಿಸಿಕೊಳ್ಳಬೇಕು
ಕರವೆತ್ತಿ ಕೈ ಮುಗಿಸಿಕೊಳ್ಳಬೇಕು
ನಂಬಿದವರ ಮನೆಯಲ್ಲಿ ತುಂಬಿ ತುಳುಕಾಡಬೇಕು
ನಂಬಿದಿದ್ದವರಿಗೆ ಹನ್ನೆರಡನೇ ಕಡೆ ಶನಿಯಾಗಬೇಕು
ನಂಬಿದರೆ ಮಾದೇಶ್ವರನಾಗಬೇಕೂಂತ್ಹೇಳಿ
ಅವರು ಅರ್ಧನಲ್ಲಿ ಮಠವ ಬಿಡುತವರೇ ಮಹದೇವಾs || ನೋಡಿ ನಮ್ಮ ಶಿವನಾ ||

ಅರ್ಧನಳ್ಳಿ ಮಠವನ್ನ ಬಿಟ್ಟು
ಯಾವಾಗ ಹೊರಟ್ರೂ ಮಾಯ್ಕಾರಗಂಡ
ಸಂಸಾರಿ ಸಂಗಪ್ಪ ಗುರುವೇ ನಾನು ಬತ್ತೀನಿ ಅಂತ್ಹೇಳಿ
ಓಡ್ಹೋಗಿ ನಮಸ್ಕಾರ ಮಾಡ್ತ

ಅಯ್ಯಾ ಸಂಗಪ್ಪ
ನೀನು ಸಂಸಾರಿ
ನನ್ನ ಕೂಡ ಬರಬೇಡ
ಇಲ್ಲಾ ಗುರುವೇ ಬರ್ತೀನಿ ಅಂದ್ರು
ಹಾಗಾದರೆ ನಿನ್ನ ಮನೆಯಲ್ಲಿ ಹೆಂಡ್ತೀನ ಕೇಳ್ಕೊಂಡ್ ಬಪ್ಪಾ
ಆ ನಿನ್ನ ಮನೇ ಹೇಂಡ್ರು ಆರ್ಡ್ರೂ ಕೊಟ್ರೆ ಬಾ ಅಂದ್ರು
ಇಲ್ಲಾ ಗುರುವೇ
ನಾನು ಹೊರಟ ಮಾರ್ಗವನ್ನು ನನ್ನ ಹೆಂಡ್ರು ಅಡ್ಡ ಮಾಡುವುದಿಲ್ಲ
ಆಡ್ತೀ ಮಾಡುವುದಿಲ್ಲ
ನಾನೂ ಬರ್ತೀನಂತ್ಹೇಳಿ
ಆ ಸಂಗಪ್ಪ ಹೊರಟಿದ್ದಾರೆ
ಹಾಗಾದ ಮೇಲೆ ಇನ್ನು ಮೂರ್ತಿಂಗಳು ಬಿಟ್ಕೊಂಡು ಬಾರಪ್ಪ
ಈಗ ಬರ್ಬೇಡ ಅಂತ್ಹೇಳಿ ಮಾದೇವ
ಮುತ್ತಿನ ಜೋಳ್ಗೆ ಮುಂಗೈಲಿ ಧರಿಸ್ಕೊಂಡು
ಧರೆ ಗಾತ್ರ ದಂಡಕೋಲ ಬಲಗೈಲಿ ಹಿಡಕೊಂಡು
ಕಂಚಿನ ಕಂಸಾಳೆ ಹಿಡಕೊಂಡು
ಅವರು ಪೂರ್ವಾಭಿಮುಖವಾಗಿ ಹೊರಟವರೇ ಮಾಯ್ಕಾರಾs || ನೋಡಿ ನಮ್ಮ ಶಿವನಾ ||

ಮಲೆಯಲ್ಲಿ ಮಾದೇವ ಬರುವಾ ಚೆಂದಾವಾ
ನೋಡಿ ನಮ್ಮ ಶಿವನಾ
ಮಲೆಯಲಿ ಹುಲಿವಾನ ಮೇರೆದ ಚಂದಾನಾ
ನೋಡಿ ನಮ್ಮ ಶಿವನಾ

ಹರಹರಾ ನನ್ನಪ್ಪಾಜಿ ಮಾಯ್ಕಾರ ಗಂಡ ಮಾದೇವ
ಏಕಾಂಗಿ ಏಳುಮಲೆಯಲ್ಲಿ ಹೋಗಿ ನಾನು
ಕಲಿಯುಗವನ್ನು ಕಟ್ಟಾಳಬೇಕು ಅಂತ್ಹೇಳಿ
ಸಂಸಾರಿ ಸಂಗಪ್ಪನಿಗೆ ಬುದ್ಧಿ ಹೇಳ್ಬುಟ್ರು
ಅವರು ಮೂಡಲಾಗಿ ದೃಷ್ಟಿ ಮಡಗವರೇ ಮಹದೇವಾs || ನೋಡಿ ನಮ್ಮ ಶಿವನಾ ||

ನೋಡಪ್ಪ ಸಂಸಾರಿ ಸಂಗಪ್ಪ
ನಾನು ಹೋಗದೇ ಇಲ್ಲಿ ನೆಲೆ ಮಾಡ್ತಾಯಿದ್ದೀನಿ
ಯಾವ ಜಾಗ್ದಲ್ಲಿ ತಪಸ್ಸು ಮಾಡ್ತಾಯಿದ್ದೀನಿ
ಅದನ್ನು ನೋಡ್ಕಂಡು
ನನ್ನ ಆದಿ ಕುಂತೂರು ಮಠದಲ್ಲಿ
ಪ್ರಭುಸ್ವಾಮಿಯಿಂದ ನೀನು
ಅಪ್ಪಣೆ ಬರೆದುಕೊಂಡು ಬಾರ‍ಪ್ಪ ಅಂತೇಳುಬುಟ್ಟು
ಅವರು ಧೀರ ಹೊರಟವರೇ ಮಹದೇವಾs || ನೋಡಿ ನಮ್ಮ ಶಿವನಾ ||

ಕೊಳ್ಳೆಗಾಲದತ್ತ ಹೋಗಿ ನಿಂತ್ಕಂಡು ಯೋಚ್ನೆ ಮಾಡುದ್ರು ಗುರುವೇ
ಅಯ್ಯೋ ಪರಮಾತ್ಮ
ನನಗೆ ವಿದ್ಯಾಭುದ್ಧಿಯನ್ನ ಕಲಿಸಿ
ಮೋಕ್ಷಕ್ಕೆ ದಾರಿ ಕೊಟ್ಟಂಥ ಗುರು
ಪಂಚೇಳು ದೀಕ್ಷೆ ಮಾಡಿದಂಥ ಗುರು
ಶಾಂತಮಲ್ಲಿಕಾರ್ಜುನ ಸ್ವಾಮಿಯವರಿಗೆ
ನಾನು ಶರಣ ಮಾಡ್ದೆ ಹೋಗ್ತಾಯಿದ್ದೀನಿ ಅಂತ್ಹೇಳಿ
ಆ ದಿನ ನಾನು ಮುಂದಕ್ಕೆ ಇಟ್ಟಂಥ ಹೆಜ್ಜೆಯನ್ನು
ಹಿಂದಕ್ಕೆ ಇಡಬಾರದು
ಆದರೆ ಇಲ್ಲೇ ನಿಂತ್ಕೊಂಡು ಗುರುಗಳಿಗೆ
ನಾನು ನಮಸ್ಕಾರ ಮಾಡ್ಬೇಕು ಅಂತ್ಹೇಳಿ
ಪಡುಗಲಾಗಿ ತಿರೀಕೊಂಡು ಕೊಳ್ಳೇಗಾಲ ಬಲಗಡೆ ಬಿಟ್ಕೊಂಡು
ಎರಡು ಮಂಡಿ ಊರ್ಕೊಂಡು ಮಾದಪ್ಪ

ಅಲ್ಲಿ ಶಿರಬೊಗ್ಗಿ ಶರಣ ಮಾಡವರೇ ಮಹದೇವಾs
ಗುರುವಿಗೆ ಒಂದು ಶರಣಾರ್ತಿ
ಗುರುವಿನ ಭಕ್ತಿರಿಗೊಂದು ಶರಣಾರ್ತಿ
ನಮಗೆ ಲಿಂಗಧಾರಣೆ ಮಾಡಿದ ಗುರುವಿನ ಪಾದಕ್ಕೆ ಶರಣು
ಗುರುವೇ ಗುರುಪಾದವೇ
ನನ್ನ ಶರಣು ನಿಮ್ಮ ಪಾದಕ್ಕೆ ಅರುವಾಗಲಿ ಅಂತ್ಹೇಳಿ
ಶಾಂತಮಲ್ಲಿಕಾರ್ಜುನ ಸ್ವಾಮಿಯವರಿಗೆ ನಮಸ್ಕಾರ ಮಾಡ್ಬುಟ್ಟು
ಮಾಯ್ಕಾರಗಂಡ ಮಾದಪ್ಪ
ಮುತ್ತಿನ ಜೋಳಿಗೆ ಮುಂಗೈಲಿ ಧರಿಸ್ಕೊಂಡು
ಕಂಚಿನ ಕಂಸಾಳೆ ಕೈಲಾಧಾರ ಮಾಡ್ಕೊಂಡು
ಧರೆಗಾತ್ರ ದಂಡುಕೋಲ ಬಲಗೈಲಿಡಕೊಂಡು
ಆವಾಗ ಕೊಳ್ಳೇಗಾಲವನ್ನು ಬಿಟ್ಟು ಮಾದಪ್ಪ
ಅವರು ಮಧೂನಲ್ಲಿ ಬೀದಿಗಾಣೆ ಹೊರಟವರೇ ಮಹದೇವಾs || ನೋಡಿ ನಮ್ಮ ಶಿವನಾ ||

ಮಧೂನಳ್ಳಿ ಬೀದಿಗಾಣೆ ಕಡ್ದು ಸಿದ್ಧಯ್ನಪುರ್ನಕೆರೆ ಏರಿಮ್ಯಾಲೆ ಕಡ್ದು
ನನ್ನಪ್ಪಾಜಿ ಮಾಯ್ಕಾರ ಗಂಡ
ಆ ಪುಟ್ಟ ಪಾದವನ್ನು ಮತ್ತಗಿಟ್ಟುಕೊಂಡು
ಗುಂಡಲವನ ದಾಟಿಕೊಂಡು
ಅವರು ಸಿಂಗಾನಲ್ಲೂರ ಕಡೆಯ ಬೀದಿಗಾಣೆ ಹೊಯ್ತಾವರೇ ಮಹದೇವಾs || ನೋಡಿ ನಮ್ಮ ಶಿವನಾ ||

ಸಿಂಗಾನಲ್ಲೂರ ಕಡೆಯ ಬೀದಿವೊಳಗೆ
ಲಿಂಗದ ಮೊರೆತ ಜಂಗಿನ ಶಬ್ಧ ಮಾಡ್ಕೊಂಡು
ಕಂಚಿನ ಕಂಸಾಳೆ ಶಬ್ಧ ಮಾಡ್ಕೊಂಡು ಹೋಗ್ತಾಯಿದ್ರು
ಆ ಸಿಂಗನಲ್ಲೂರು ಬಸವಣ್ಣ ಓಡ್ಬಂದ
ಅಪ್ಪಾ ಜಂಗಮಯ್ಯ
ಸ್ವಲ್ಪ ನಿಲ್ಲಿ ಗುರುವೇ
ನನ್ನ ಬೀದಿಯಲ್ಲಿ ಹೋಗುತ್ತಕ್ಕಂಥವರು
ದಾಸ ಜೋಗಿ ಗುಡ್ಡ ಗೊರವ
ಅರದೇಶಿ ಪರದೇಶಿ ಕಾಲಮೊಕ ಸನ್ಯಾಸಿ
ಯಾರು ಬಂದ್ರೂ ನನಗೆ
ಮೂರು ಕಾಸು ಸುಂಕ ಕಟ್ಟೋಗ್ಬೇಕು
ನಾನು ಇಲ್ಲಿ ಸುಂಕದ ಬಸವನಾಗಿ
ಕಾದು ಕುಂತಿದ್ದೀನು ಗುರುವೇ
ನನಗೆ ಸುಂಕ ಕಟ್ಟೋಗಿ ಅಂಥವರೇ ಬಸವಣ್ಣಾs || ನೋಡಿ ನಮ್ಮ ಶಿವನಾ ||

ಬಸವಣ್ಣನ ಮಾತ ಕೇಳಿದ್ರು ನನ್ನಪ್ಪಾಜಿ ಅಲ್ಲಿ ನಿಂತ್ಕಂಡು
ನೋಡಪ್ಪ ಬಸವಣ್ಣ
ಇಲ್ಲಿಂದೀಚೆಗೆ ನೀನು ಸುಂಕದ ಬಸವಯ್ಯನಾಗಬೇಡ
ನಾನು ಸುಂಕ ಕೊಡುವಂಥ ಜಂಗಮನಲ್ಲ
ಏಕಾಂಗಿ ಮಲೆಗೆ ಹೋಗುತ್ತಾಯಿದ್ದೀನಿ ಏಕವಾಗಿ ನಾನು
ಇನ್ನು ಮುಂದೆ ನನ್ನ ಮೈಸೂರು ಮೇಲ್ನಾಡಿನ ಪರಸೆ ಬರ್ತದೆ
ಹೆಣ್ಣೇಳು ಕೋಟಿ ಗಂಡೇಳು ಕೋಟಿ ಬಂದಂಥ ಪರಸೆ
ಮೊದಲ ಪೂಜೆ ನಿನಗೆ ಮಾಡಲಿ

ನೀನು ಇಲ್ಲೆ ಕೆಟ್ಟೆ ಬಸವಯ್ಯನಾಗಿ
ನೆಲೆಗೊಂಡು ಅಂತವರೇ ಮಹದೇವಾs  || ನೋಡಿ ನಮ್ಮ ಶಿವನಾ ||

ಸಂಗನಲ್ಲೂರ ಕಡೇ ಬಾಗ್ಲಲ್ಲಿ ಕಟ್ಟೇ ಬಸವಣ್ಣ ಅಂತ್ಹೇಳಿ
ನಾಮಕರಣ ಮಾಡ್ಬುಟ್ಟು ಮಾದಪ್ಪ
ಆವಾಗ ಸಿಂಗನಲ್ಲೂರ ಬಿತ್ಟು
ಕಾಮಗೆರೆ ಕೊಂಗರಳ್ಳಿ ಬೀದಿವೊಳಗೆ ಕಡ್ದು
ಮಹದೇವಾ
ಕಣ್ಣೂರ ಮಂಗಲವನ್ನ ದಾಟ್ಕೊಂಡು

ಅವರು ಹುಣಸೆಕಟ್ಟೆ ದಿಬ್ಬಕ್ಕೆ ಹೊಯ್ತಾವರೇ ಮಹದೇವಾs || ನೋಡಿ ನಮ್ಮ ಶಿವನಾ ||

ಹುಣಸೆ ಕಟ್ಟೆ ದಿಬ್ಬದಲ್ಲಿ ನಿಂತ್ಕೊಂಡು ನಾಲ್ಕಾರು ಕಡೆ ತಿರುಗಿ ನೋಡಿ
ಮಹದೇವ ಮೂಡಲು ಕೈಲಾಸವನ್ನು
ಅಂತು ನೋಡಿ ದೃಷ್ಟಿ ಮಡಗಿದ್ದಾರೆ
ಆವಾಗ ಹುಣಸೆಕಟ್ಟೆ ದಿಬ್ಬವನ್ನು ಇಳಿದು
ರುದ್ರುಶೆಟ್ಟಿ ದೊಡ್ಡಿ ಕೆರೆ ಏರೀಮ್ಯಾಲೆ ಕಡದು
ಮಾಯ್ಕಾರಗಂಡ ಮಾದಪ್ಪ

ಅವರು ಹನೂರ ಬೀದಿಗಾಣೆ ಹೊರಟವರೇ ಮಹದೆವಾs  || ನೋಡಿ ನಮ್ಮ ಶಿವನಾ ||

ಹನೂರ ಬೀದಿಗಾಣೆ ಕಡದು ನನ್ನಪ್ಪಾಜಿ ಗುರುದೇವ
ಲಿಂಗದ ಮೊರೆತ ಜಂಗಿನ ಶಬ್ಧ ಮಾಡ್ಕಂಡು
ಅದೇ ಮಾರ್ಗವಾಗಿ
ಚರಡೀಪುರದ ಎಲ್ಲೇಮಾಳವನ್ನ ದಾಟ್ಕೊಂಡು
ಮಾಯ್ಕಾರ ಗಂಡ
ಎಲ್ಲೇ ಮಾಳದ ಹತ್ರ ಒಂದು
ದೊಡ್ಡ ಬಾರಿ ಬಿಟ್ಟಸಿಕ್ಬುಡ್ತು
ಅದ್ಕೆ ಮಾಯ್ಕಾರ ಗಂಡ ಮಾದಪ್ಪ
ಅಲ್ಲಿ ಹನುಮಂತ್ರಾಯ್ಯ ಕಣಿವೆ ಅಂತ್ಹೇಳಿ
ಕಾಡಿನಲ್ಲಿ ಆಂಜನೇಯಸ್ವಾಮಿ ಬ್ಯಾಟೇಮ್ಯಾಲೆ ಓಡಾಡ್ತಾಯಿದ್ದ
ಮಾದಪ್ಪನ ಲಿಂಗದ ಮೊರ್ತ ಜಂಗಿನ ಶಬ್ಧ ಕೇಳಿ

ಅವರು ಓಡೋಡಿ ಬಂದವರೇ ಆಂಜನೇಯಾs || ನೋಡಿ ನಮ್ಮ ಶಿವನಾ ||