ಮಲೆಯಲಿ ಮಾದೇವ ಬರುವ ಚಂದಾವಾs
ನೋಡಿ ನಮ್ಮ ಶಿವನಾs

ಉರಿಯ ಬೆಂಕಿಯ ಮುಂದೆ ಅರಗಳಿಗೆ ನಿಲಬಹುದು
ಮಹದೇವ ನಿಮ್ಮ ಕರಿಯ ಬರಗಾನ ಮುಂದೆ ನಿಲುಬಹುದಾ || ನೋಡಿ ನಮ್ಮ ಶಿವನಾ ||

ವಯ್ಯಾರ ಗಂಡ ಮಾದೇಶ್ವರ
ಬೂದಿ ಮುಚ್ಚಿದ ಕೆಂಡ ಭೂಲೋಕದಲ್ಲಿ ಉದ್ಧಂಡ
ನನ್ನಪ್ಪಾಜಿ ಅಖಂಡಾ ಮಹಿಮ ಅಲ್ಲಮಪ್ರಭು
ಮರ್ತ್ಯಲೋಕದಲ್ಲಿ ಮಹದೇವನೆಂಬ ನಾಮವನ್ನು
ಯಾವ ರೀತಿಯಾಗಿ ಪಡೆದರು ಧರೆಯಲ್ಲಿ ಅಂದರೆ
ಕೈಲಾಸದಲ್ಲಿ ಬ್ರಹ್ಮ ವಿಷ್ಣು ಈಸ್ಪುರ ಕೂತುಕೊಂಡು

ಅವರು ಪಂಥ ಮಾಡವರೇ ಮುನಿಗಾಳೂs || ನೋಡಿ ನಮ್ಮ ಶಿವನಾ ||

ಬ್ರಹ್ಮದೇವರು ವಿಷ್ಣು ದೇವರು ಕೂತ್ಕಂಡು
ನೋಡಯ್ಯ ಈಸ್ಪುರ
ನೀನು ಪ್ರಪಂಚದಲ್ಲಿ ಸೃಷ್ಟಿಕರ್ತನಾಗಿರುತಕ್ಕಂಥವನು
ತ್ರೇತಾಯುಗ ಕೃತಾಯುಗ ದ್ವಾಪರಾಯುಗ
ಮುಂದು ಮುಂದೆ ಕಲಿಯುಗ ಬರ್ತಾಯಿದೆ
ಕಲಿಯುಗದಲ್ಲಿ ಭೂಲೋಕದಲ್ಲಿ ಧರ್ಮಗಳು ಹಾಳಾಗಿ
ಕರ್ಮವೇ ಹೆಚ್ಚಾಗ್ತಾಯಿದೆ
ಕಾಸಿನ ಧೂಪ ಹಾಕುವರಿಲ್ಲ ಕರವೆತ್ತಿ ಕಯ್ಯ ಮುಗಿಯುವರಿಲ್ಲ
ನಮ್ಮ ಶಿವಾ ಶಿವಾ ಎಂದು ಶಿವನ ಜ್ಞಾನ ಮಾಡುವರಿಲ್ಲ
ನೀನು ಅವತಾರ ಎತ್ತು ಅಂಥವರೆ ಜಗದೊಡೆಯಾ || ನೋಡಿ ನಮ್ಮ ಶಿವನಾ ||

ಬ್ರಹ್ಮದೇವ ವಿಷ್ಣುದೇವರ ಮಾತನು ಕೇಳಿ
ಆಗ ಪರಮಾತ್ಮ ಹೇಳ್ತಾಯಿದ್ದಾರೆ
ಅಯ್ಯಾ ಬ್ರಹ್ಮದೇವ ವಿಷ್ಣುದೇವ
ನಾನು ಅವತಾರ ಎತ್ತುಬೇಕಾದ್ರೆ
ನನಗಿಂತ ಹೆಚ್ಚಿನವರಿದ್ದಾರೆ
ಅವರನ್ನು ಕೇಳ್ತಾಯಿದ್ದೀನಿ ಅಂತೇಳಿ
ಕೈಲಾಸದಲ್ಲಿ ಪರಮೇಸ್ಪುರ
ಅವರು ಉಗ್ರತಪಸಿಗೆ ಕುಳಿತವರೇ ಪರಶಿವಾs|| ನೋಡಿ ನಮ್ಮ ಶಿವಾ ||

ಯಾವಾಗ ಪರಮಾತ್ಮ ಕೈಲಾಸದಲ್ಲಿ
ಉಗ್ರತಪಸಿಗೆ ಕುಳಿತುಕೊಂಡ್ರೋ
ಪರಮಾತ್ಮನ ತಪಸ್ಸಿನ ಜ್ವಾಲೆವೊಳುಗೆ
ಇಡೀ ಕೈಲಾಸವೆಲ್ಲ ತಲ್ಲಣಿಸುತ್ತಾಯಿದೆ
ಧಗಧಗನೆ ಹತ್ತಿ ಭಗಭಗನೆ ಉರಿತಾಯಿದೆ
ಆ ಕೈಲಾಸದಲ್ಲಿರುತಕ್ಕಂಥ ಮುನಿಗಳು
ಕಣ್ಣಿಲ್ಲದವರು ಕಾಲಿಲ್ಲದವರು ಕೈಯಿಲ್ಲದವರು
ಪರಮೇಸ್ಪುರನ ಜ್ವಾಲೆಗೆ ತಾಳಲಾರದೆ
ಅವರು ಓಡಿ ಬಂದವರೇ ಮುನಿಗಾಳುs|| ನೋಡಿ ನಮ್ಮ ಶಿವಾ ||

ಪರಮಾತ್ಮ ಪರಮಾತ್ಮ ಕೈಲಾಸದಲ್ಲಿ
ನಮ್ಮಂತಾವರು ಉಳಿಯೋದಿಲ್ಲ
ನಿಮ್ಮ ತಪಸ್ಸು ಬಿಡಪ್ಪಾ ಅಂತೇಳಿ ಓಡಿಬಂದ್ರು ಮುನಿಗಳು
ಅಯ್ಯಾ ಮಹಾಮುನಿಗಳೇ
ಇನ್ನು ಮುಂದೆ ಕಲಿಯುಗದಲ್ಲಿ
ನಾನು ಅವತಾರ ಎತ್ತಬೇಕಂತೆ
ಬ್ರಹ್ಮದೇವ ವಿಷ್ಣುದೇವ ಕೇಳ್ತಾಯಿದ್ದಾರೆ
ನಾನು ಯಾವ ಅವತಾರ ಎತ್ತಲಿ ಅಂದ್ರೆ
ಆವಾಗ ಮುನಿಗಳು ಹೇಳ್ತಾಯಿದ್ದಾರೆ
ಪರಮಾತ್ಮ ನೀವು ಅವತಾರ ಎತ್ತಬೇಕಾದರೆ
ನಿಮ್ಮ ತಪಸ್ಸನ್ನೇ ಬಿಟ್ಟುಬಿಡಿ ನಾವೇಳುತ್ತೇವೆ ಅಂತೇಳಿ
ಪರಮೇಶ್ವರನ ತಪಸ್ಸು ಬಿಡಿಸ್ಪುಟ್ಟು
ನೋಡಿ ಪರಮಾತ್ಮ
ನಿಮ್ಮ ಅವತಾರ ತೋರಬೇಕಾದರೆ ಭೋಲೋಕದಲ್ಲಿ
ಬಲಗಡೆ ಜಡೆ ಎಡಗಡೆ ಜಡೆ
ಎರಡು ಸಾರಿ ವದರುಬುಡಿ
ಮತ್ತೆ ಜಗದಗಲ ಜಡೇನೆಲ್ಲ ಒಂದು ಸಾರಿ ವದರಿ
ಅವಾಗ ಅವತಾರ ತೋರುತ್ತೆ ಎಂದರು

ಅವಾಗ ಮುನಿಗಳ ಮಾತು ಕೇಳಿ ಪರಮಾತ್ಮ
ನೋಡಿದೆಯಾ ಬ್ರಹ್ಮದೇವ ವಿಷ್ಣುದೇವಾ ಅಂತೇಳಿ
ತಮ್ಮ ಬಲಗಡೆ ಜಡೆಯನ್ನು ಹಿಡುಕೊಂಡು
ಅಲ್ಲಿ ಜಡಿದು ವದರವರೇ ಜಗದೊಡೆಯಾs || ನೋಡಿ ನಮ್ಮ ಶಿವನಾ ||

ಪರಮಾತ್ಮ ಯಾವಾಗ ಜಡೆಯನ್ನು ವದರಿದರೋ
ಮರ್ತ್ಯಲೋಕದಲ್ಲಿ ಭೂಲೋಕದಲ್ಲಿ ಏಳುಲಿಂಗ ಉದ್ಭವವಾದೊ
ನೋಡಯ್ಯ ಬ್ರಹ್ಮದೇವ ವಿಷ್ಣುದೇವ
ಏಳವತಾರ ತ್ರಿಷ್ಣೆ ಮಾಡಿದೆ ಅಂದ್ರು
ಯಾವ ಅವತಾರ ಅಂದ್ರು
ಪಾತೇಳೇಶ್ವರ ಮರಳೇಶ್ವರ ನಂದೀಶ್ವರ
ಗುರಗುಂಜೀಶ್ವರ ನಂಜುಂಡೇಶ್ವರ ಮಲ್ಲಿಕಾರ್ಜುನೇಶ್ವರ ಶನೇಶ್ವರ ಅಂದ್ರು
ಮತ್ತೆ ಎಂಟನೇ ಅವತಾರ ತೋರು ಅಂದ್ರು
ಎಡಗಡೆ ಜಡೆ ಇಡಕೊಂಡು ಜಗದೀಶ್ವರ
ಅಲ್ಲಿ ಜಡೆಯ ವದರವರೇ ಜಗದೊಡೆಯs || ನೋಡಿ ನಮ್ಮ ಶಿವನಾ ||

ಎಡಗಡೆ ಜಡೆಯನ್ನ ವದರಿದ ತಕ್ಷಣವೇ
ಒಂದು ಲಿಂಗವಾಗಿರ್ತಕ್ಕಂತಾದ್ದು ಮರ್ತ್ಯಲೋಕಕ್ಕೂ ಕೈಲಾಸಕ್ಕೂವೆ
ಕೀಲುಕೊಟ್ಟು ನಿಂತ್ಕೊಂಡ್ಬುಡ್ತು
ಇದಾವ ಅವತಾರ ಅಂದ್ರು
ಇದೇ ರಾಕ್ಷಸಾವತಾರ
ಇವನೇ ಶ್ರವಣೇಶ್ವರ ಅಂದ್ರು
ಮತ್ತೆ ಒಂಭತ್ತನೇ ಅವತಾರ ತೋರು ಅಂದ್ರು
ಒಂಭತ್ತನೇ ಅವತಾರಕ್ಕೆ ಪರಮಾತ್ಮ
ತಮ್ಮ ಜಗದಗಲ ಜಡೇನೆಲ್ಲ ಒಂದ್ಸಾರಿ ಇಡಕೊಂಡು
ಅವರು ಜಡಿದು ವದರವರೇ ಜಗದೊಡೆಯಾs || ನೋಡಿ ನಮ್ಮ ಶಿವನಾ ||

ಒಂಭತ್ತನೇ ಅವತಾರೆ ಇದು ಅಂತ್ಹೇಳಿ
ತಮ್ಮ ಜಡೆಯನ್ನು ವದರಿದ್ದಾರೆ
ಆಗ ಒಂಭತ್ತನೇ ಅವತಾರದಲ್ಲಿ ಹುಟ್ಟಿದಂತ ಲಿಂಗ
ಯಾರ ಕಣ್ಣಿಗೂ ಗೋಚರವಾಗಲಿಲ್ಲ
ಮರ್ತ್ಯ ಲೋಕದಲ್ಲಿ ಒಂದು
ಮಗ್ಗ ಮರಳ್ಳಿ ಹೆಗ್ಗಡದೇವನಕೋಟೆ ಭೀಮನಕೊಲ್ಲಿವೊಳಗೆ
ಜಾತಿವೊಳಗೆ ಹಾಲುಮತಸ್ಥ ಹಲಗಪ್ಪನ ಮನೆ ಮುಂದುಗಡೆ
ಬೇವುನ ಮರದ ಜಗಲಿ
ಆ ಬೇವುನ ಮರದ ಪ್ವಾಟೆವೊಳಗೆ
ಅವರು ಪುಟುಲಿಂಗವಾಗಿ ಕುಂತವರೇ ಜಗದೊಡೆಯಾs || ನೋಡಿ ನಮ್ಮ ಶಿವನಾsss ||

ಅಲ್ಲಯ್ಯಾ ಪರಮಾತ್ಮ
ಒಂಭತ್ತನೇ ಅವತಾರ ಎಲ್ಲಿ ಅಂದ್ರು
ಆವಾಗ ಪರಮೇಶ್ವರ ಹೇಳ್ತಾಯಿದ್ದಾರೆ
ನೋಡಪ್ಪ ಅವ್ನೆ ಒಂಭತ್ತನೇ ಅವತಾರದಲ್ಲಿ
ಮಾಯಕಾರನಾಗಿ ಮರ್ತ್ಯಲೋಕಕ್ಕೆ ಹೋಗಿದ್ದಾನೆ
ಇನ್ನು ಮುಂದೆ ಲೋಕ ಕಲ್ಯಾಣಕ್ಕೆ ಬರ್ತನೆ
ಅವನೆ ಮಾಯಕಾರ ಕಾಣ ಎಂದರು
ಈ ಎಂಟನೇ ಅವತಾರದಲ್ಲಿ ಹುಟ್ಟಿದಂಥ ಲಿಂಗ
ರಾಕ್ಷಾವತಾರ ಶ್ರವಣೇಶ್ವರ ಪ್ರತ್ಯಕ್ಷವಾಗಿ
ತಂದೆ ನನ್ನನ್ನು ಯಾತ್ಗಾಗಿ ಉದ್ಭವ ಮಾಡ್ದೆ ಅಂದರು
ನೀನು ಲೋಕ ಕಲ್ಯಾಣ ಮಾಡಪ್ಪ ಅಂದ್ರು
ನಾನು ಲೋಕ ಕಲ್ಯಾಣ ಮಾಡಬೇಕಾದರೆ
ಇಡೀ ಬ್ರಹ್ಮಾಂಡನೆಲ್ಲ ನನ್ನ ಕೈವಶಕ್ಕೆ ಕೊಡು ಅಂತ್ಹೇಳಿ
ತಾಮ್ರದ ಚಪ್ಪೋಡ ತೆಗೆದು
ಆವಾಗ ಪರಮಾತ್ಮ ತಾಮ್ರದ ಚಪ್ಪೋಡಿನಲ್ಲಿ
ಇಡೀ ಬ್ರಹ್ಮಾಂಡವನ್ನೆಲ್ಲವನ್ನೂ ಆ ಶ್ರವಣನ ಕೈಗೆ
ಅವರು ಚಪ್ಪೋಡ ಕೊಟ್ಟವರೇ ಜಗದೊಡೆಯಾs || ನೋಡಿ ನಮ್ಮ ಶಿವನಾsss ||

ಆವಾಗ ಶ್ರವಣೇಶ್ವರ
ದಕ್ಷಿಣ ಭಾಗದಲ್ಲೋಗಿ
ಪಟ್ಟಣವನ್ನು ಕಟ್ಟಿಕೊಂಡು
ಪ್ರಪಂಚದಲ್ಲಿ ಭೂಲೋಕದಲ್ಲಿರ್ತಕ್ಕಂಥ
ದೇವಾನು ದೇವತೆಗಳನ್ನೆಲ್ಲ
ತನ್ನ ಕಾರಾಗೃಹದಲ್ಲಿಟ್ಟುಕೊಂಡು
ಆವಾಗಲೀಗ ತಾನು ರಾಜ್ಯ ಆಳ್ತಾಯಿದ್ದಾನೆ
ಈ ಒಂಭತ್ತನೇ ಅವತಾರದಲ್ಲಿ ಹುಟ್ಟಿದಂಥ ಮಾಯಕಾರ
ಬೇವಿನ ಮರದ ಜಗಲಿ ಪ್ವಾಟೆವೊಳಗಿದ್ದವರು
ನಾನು ಈ ರೀತಿಯಾಗಿ ಕೂತರೆ ಲೋಕ ಕಲ್ಯಾಣ ಮಾಡಲಾರಿ
ಮೊದಲು ಹಲಗಪ್ಪನಿಂದ ಪೂಜೆ ಮಾಡಿಸ್ಕೊಂಡು
ನಾನು ಲೋಕ ಕಲ್ಯಾಣಕ್ಕೆ ಹೋಗಬೇಕಂತ್ಹೇಳಿ
ಆ ಹಲಗಪ್ಪನ ಹನ್ನೆರಡು ಕಂಬದ ಹಟ್ಟಿವೊಳಗೆ
ನಡುಮನೆವೊಳಗ್ಹೋಗಿ ಮಾಯಕಾರ
ಅವರು ಹೊನ್ನುತ್ತವಾಗಿ ಮೂಡವರೇs – ಮಯ್ಕಾರಾs || ನೋಡಿ ನಮ್ಮ ಶಿವನಾ ||

ಯಾವಾಗ ನಡುಮನೆವೊಳಗೆ ಹೊನ್ನುತ್ತ ಮೂಡುಬುಡ್ತೋ
ಹಲಗಪ್ಪನವರಿಗೂವೆ ಅವ್ರ ಹೆಂಡ್ತಿ ಮುದ್ದಮ್ಮನಗೂವೆ ಯೋಚ್ನೆ ಬಂದ್ಬುಡ್ತು
ಯಜಮಾನ್ರೆ ನಮ್ಮ ಎತ್ತಮುತ್ತನ ಕಾಲ್ದಲ್ಲಿ
ಕಟ್ಟಿದಂಥ ಹಟ್ಟಿ ಇದು
ಯಾವ ಕಾಲದಲ್ಲೂ ಈ ಶಕುನವಾಗ್ನಿಲ್ಲ
ನಡೀರಿ ಯಜಮಾನ್ರೆ
ನಾವೊಂದು ಶಾಸ್ತ್ರ ಕೇಳೋಣ ಅಂತ್ಹೇಳಿ
ಗಂಡಾ ಹೆಂಡ್ತೀರು ಮೊಡಲಲ್ಲಿ ಎಲಡಕೆ ಮೂರು ದುಡ್ದು ಕಟ್ಕೊಂಡು
ಮಗ್ಗಾ ಮರಳ್ಳಿ ಭೀಮನಕೊಲ್ಲೀನೆಲ್ಲ ಸುತ್ತುದ್ರು
ಯಾರು ಶಾಸ್ತ್ರ ಹೇಳುವವರು ಇಲ್ಲ
ಆವಾಗ ಊರಮುಂದ್ಗ ಕೆರೆ ಏರಿ ಮೇಲೆ ಒಂದು
ಜಗಲಿ ಕಟ್ಟೆ ಮೇಲೆ ಉಸ್ಸೋ ಅಂತ್ಹೇಳಿ ಕುಳ್ತಿದ್ದಾರೆ
ಅಲ್ಲಿ ಮಾಯ್ಯಾರ ಗಂಡ
ಒಂದು ಹರಕು ಪಂಚೆ ಉಟ್ಕೊಂಡು
ಅಡ್ಡ ಜನಿವಾರ‍ಹಾಕ್ಕೊಂಡು
ಪಂಚಾಂಗದ ಕಟ್ಟ ಕೈಲಿಡಕೊಂಡು
ಅವರು ಜಗಲಿಕಟ್ಟೇಗೆ ಬರುತವರೇ -ಮಾಯ್ಕಾರಾs || ನೋಡಿ ನಮ್ಮ ಶಿವನಾ ||

ಜಗಲಿಕಟ್ಟೇಗೆ ಬಂದು ಕುಳಿತುಕೊಂಡ್ರು
ಈ ದಂಪತಿಗಳು ಅಸ್ಸೋ ಉಸ್ಸೋ ಅಂತ್ಹೇಳಿ ಕುಳ್ತಿದ್ರು
ಏನಪ್ಪಾ ದಂಪತಿಗಳೇ ಗಂಡಾ ಹೆಂಡಿರು
ಬಾಳ ದಣಿವಿನಿಂದ ಕುಳ್ತಿದ್ದೀರಲ್ಲ ಏನು ಅಂದ್ರು
ನೋಡಪ್ಪ ಬ್ರಾಹ್ಮಣೋತ್ತಮರೇ
ನನ್ನ ಮನೆವೊಳಗೆ ಅಪಶಕುನವಾಗಿದೆ
ನಮ್ಮ ಎತ್ತಮುತ್ತನ ಕಾಲ್ದಿಂದಲೂ ಇಲ್ಲ
ಒಂದು ಶಾಸ್ತ್ರ ಹೇಳಿಕೊಡಿ ಗುರುವೇ ಅಂತ್ಹೇಳಿ
ತಮ್ಮ ಮೊಡಿಲಲ್ಲಿದ್ದಂಥ ಎಲೆ ಅಡಿಕೆ
ಮೂರು ದುಡ್ದು ಮಡಗಿ ಕಡ್ದಿ ಕರ್ಪೂರ ಹಚ್ಚಿದ್ರು
ಆ ಮಾಯ್ಕಾರ ಗಂಡ ಪಂಚಾಂಗದ ಗಂಟ ಬಿಚ್ಚಿ
ಪೂಜೆ ಮಾಡಿ ಹೇಳ್ತಾಯಿದ್ದಾರೆ
ಅಪ್ಪಾ ಹಲಗಯ್ಯ ಮುದ್ದಮ್ಮ
ನೀವು ಸತ್ಯವಂತರು ದೃಢವಂತರು
ನಿಮ್ಮ ಮನೆವೊಳುಗೆ ಅಪಶಕುನವಾಗ್ನಿಲ್ಲ
ನಿಮ್ಮ ಮನೆ ದೇವರಾಗಿ ಬಂದಿದ್ದಾನೆ ಮಾಯ್ಕಾರ
ಅವನಿಗೆ ಮೊದಲು ನೀವು ಪೂಜೆ ಮಾಡಬೇಕು
ನಿಮ್ಮ ಮನೆಯ ಬಿಡಬೇಕು ಅಂತಾವರೇ ಮಾಯ್ಕಾರಾs || ನೋಡಿ ನಮ್ಮ ಶಿವನಾ ||

ಹಲಗಪ್ಪನವರು ಆ ಮಾಯ್ಕಾರನ ಮಾತು ಕೇಳಿದ್ರು
ಮಾಯ್ಕಾರ ಎಂಬುದು ಗೊತ್ತಿಲ್ಲ
ಕಾಸಿ ಪುರೋಹಿತ ಅಂತ್ಹೇಳಿ
ಏನಪ್ಪಾ ಪುರೋಹಿತ್ರೆ
ನಾನು ಬುಟ್ ಬುಡ್ತೀನಿ
ನಾನು ಒಬ್ಬ ಮಗನಿಗೇನೂ ತೊಂದರೆ ಕೊಡಬಾರ್ದು
ನಮಗೆ ಇನ್ನು ಮುಂದೆ ರುಜುಬಲ ಕೊಡಬೇಕು ಅಂದ್ರು
ಇನ್ನೂ ಮತ್ತಷೈರ್ಶ್ವರ್ಯ ಕೊಡ್ತೇನೆ ಕಣಪ್ಪ
ನೀನು ಮನೇ ಬಿಡು ಅಂತೇಳುದ್ರು
ಈ ಮುದ್ದಮ್ಮ ಹೆಣ್ಣು ಪ್ರಾಣಿ
ಅಯ್ಯಾ ಬ್ರಾಹ್ಮಣೋತ್ತಮರೇ
ಆಳ ಕರ್ಕೊಂಡ್ ಬಂದು ಹಾರೆಗುದ್ಲಿ ಕರ್ಕೊಂಡ್ ಬಂದು
ಆ ಹೊನ್ನತ್ತವನ್ನು ಅಗೆದು ಬಿಸಾಕ್ಬುಟ್ಟು
ಗಾರೆಗಚ್ಚು ಹಾಕ್ಕೊಂಡು ನಾವು ಕಾಲಮಾಡ್ತೀವಿ
ಮನೆ ಬುಡೂದಿಲ್ಲ ಅಂದ್ಲು
ಅಮ್ಮ ತಾಯಿ ಹಾಗನ್ನಬೇಡ
ಮೊದಲಾಗಿ ನಿಮ್ಮಿಂದ
ಹಾಲು ಮಜ್ಜನವಾಗ್ಬೇಕು
ಮನೆ ದೇವರು ಒಳಗೆ ಪುಟುಲಿಂಗವಾಗಿದ್ದಾನೆ ಕಣಮ್ಮ
ನಿಮ್ಮ ಅಭಿವೃದ್ಧಿ ಮಾಡ್ತಾನೆ
ನಿಮ್ಮ ಮನೆ ಬಿಡಿ ಅಂದವರೇ ಮಾಯ್ಕಾರಾs || ನೋಡಿ ನಮ್ಮ ಶಿವನಾ ||

ಆ ಪುರೋಹಿತರ ಮಾತ ಕೇಳ್ಕೊಂಡು
ಗಂಡ ಹೆಂಡಿರು ಬಂದು
ಮನೇಲಿದ್ದ ಸಾಮಾನ್ನೆಲ್ಲ ತಗದು ಹಿಂದುಗಡೆ ಹಾಕಿ
ಮನೆ ಹಿಂದಗಡೆ ಹಿತ್ತಲಲ್ಲಿ ಒಂದು ಜೋಪಡಿ ಹಾಕ್ಕೊಂಡ್ರು
ಆ ಹೊನ್ನುತ್ತುಕ್ಕೆ ಗಂಡಾಹೆಂಡಿರು ಇಬ್ಬರೂ ಕೂಡಿ
ಬೆಳಗಾಗಲೆದ್ದು ಸ್ನಾನ ಮಡಿಯನ್ನು ಮಾಡಿ
ತಮ್ಮ ಹಸುವಿನಿಂದ ಹಾಲನ್ನು ಕರ್ಕೊಂಡು ಬಂದು
ಆ ಹೊನ್ನುತ್ತುಕ್ಕೆ ಹಾಲನ್ನು ಎರೆದ್ಬುಟ್ಟು
ಮೊದಲು ಪೂಜೆ ಮಾಡ್ತಾಯಿದ್ದಾರೆ
ಆವಾಗ್ ಮಾಯ್ಕಾರ ಗಂಡ
ಪುಟಲಿಂಗವಾಗಿ ಕುಳಿತಿದ್ದು
ಮೊಟ್ಟಮೊದಲು ಕೈಲಾಸದ ಮುಂದೆ
ನನಗೆ ಹಾಲು ಮಜ್ಜನ ಮೊದಲಾಯ್ತು
ಇನ್ನು ಮುಂದೆ ಲೋಕ ಕಲ್ಯಾಣ ಮಾಡಬೇಕಂತ್ಹೇಳಿ
ಈ ಹಲಗಯ್ಯನಿಂದ ನಾನು ಹಬ್ಬ ಮಾಡಿಸ್ಕಂಡು
ಮುಂದೆ ಹೊರಡಬೇಕು ಅಂತ್ಹೇಳಿ
ಆ ಮಗ್ಗಾ ಮರಳಿ ಭೀಮನಕೊಲ್ಲಿ
ಮೂರು ಗ್ರಾಮಕ್ಕೊವೆ
ಅವರು ಕ್ಷಾಮಗಾಲವ ಕೊಟ್ಟವರೇ ಮಾಯ್ಕಾರಾs || ನೋಡಿ ನಮ್ಮ ಶಿವನಾ ||

ಕ್ಷಾಮಗಾಲ ಅಂದ್ರೆ ಮಳೆ ಇಲ್ಲ
ಬೆಳೆಯಿಲ್ಲ ದುರ್ಭಿಕ್ಷವಾಗ್ಬುಡ್ತು
ಮೂರು ಕೇರಿ ಜನರೆಲ್ಲ
ಮಡಗಿದಂತ ಬಿತ್ತನೆ ಬೀಜ ಎಲ್ಲನೂವೆ
ಹಿಟ್ಟು ಮಾಡ್ಕಂಡು ಆಮ್ಲಿ ಕಾಯಿಸ್ಕೊಂಡು
ಗಂಜಿ ಕಾಯಿಸ್ಕೊಂಡು ಎಲ್ಲಾನು ಕುಡುದ್ಬುಟ್ರೆ
ಈ ಹಲಗಪ್ಪ ಮಾತ್ರ ಒಂದು ಕಣಜದಲ್ಲಿ ರಾಗಿ ತುಂಬಿದ್ದಾನೆ
ಆರು ತಿಂಗಳ ಮೇಲೆ ಮಳೆಗಾಲ ಚೆನ್ನಾಗಾಗ್ಬುಡ್ತು
ಮೂರು ಬಿತ್ತನೆ ಬೀಜ ಬೇಕಲ್ಲ ಅಂತ್ಹೇಳಿ
ಮೂರು ಗ್ರಾಮದವರೂ ಓಡ್ಬಂದ್ರು ಹಲಗಪ್ಪನ ಮನೆ ಮುಂದಕ್ಕೆ
ಯಜಮಾನರೇ ನನಗೆ ನಾಲ್ಕು ಸೇರುಕೊಡು
ನನಗೈದು ಸೇರು ಕೊಡು ನನಗೆ ಹತ್ತು ಸೇರು ಕೊಡು
ಬಿತ್ತನೆ ಬಿತ್ಕಂಡು ನಿಮ್ಮಿಂದ ಬೆಳೆ ಬೆಳೀತೀವಿ ಅಂದ್ರು
ಅಯ್ಯಾ ಗ್ರಾಮದವರೆ
ನನ್ನ ಬಾಣಗಾರ ಕೆಬ್ಬೆಹೊಲಕ್ಹೋಗಿ ಮೂರಡಿ ಬಿತ್ತನೆ ಇಟ್ಬುಟ್ಟು
ಬತ್ತೀನಿ
ಆಮೇಲೆ ಕೊಡ್ತೀನಿ ಇರಿ ಅಂತ್ಹೇಳ್ಬುಟ್ಟು
ಆ ಮಗನ ಹೇರು ಕಟ್ಸಿ ಹೊಲತಾಕೆ ಕಳಿಸ್ಬುಟ್ಟು
ರಾಗಿ ಕುಕ್ಕೇಲಿ ಬಿತ್ತನೆ ಕುಕ್ಕೆ ಪೂಜೆ ಮಾಡ್ಕಂಡು
ಒಂದು ಚಂಬ್ನಲ್ಲಿ ನೀರು ಇಡ್ಕೊಂಡು ಹಲಗಪ್ಪ
ಬಾಣಗಾರ ಕೆಬ್ಬೆಹೊಲಕ್ಕೆ ಹೊಯ್ತಾವನೆ ಹಲಗಯ್ಯಾs || ನೋಡಿ ನಮ್ಮ ಶಿವನಾ ||

ಬಾಣಗಾರ ಕೆಬ್ಬೇಹೊಲಕ್ಕೋಗಿ
ತೆವರಿ ಮೇಲೆ ಬಿತ್ತನೇ ಕುಕ್ಕೆ ಮಡಗ್ಬುಟ್ಟು
ಆ ಮಗನ ಹೇರು ಕಟ್ಟಪ್ಪ ಅಂತ್ಹೇಳಿ ಹೇರು ಕಟ್ಸಿ ಮೂಡ್ಲಾಗೆ ನಿಲ್ಸಿಸ್ಬುಟ್ಟು
ಪಡೂಲಿನಿಂದ ಮೂಡ್ಲಾಗಿ
ಕಾಲಿನಿಂದ ಪಟ್ಟೆವೊಡಕೊಂಡು ರಾಗಿಬಿತ್ಕೊಂಡು ಹೋದ
ಯಾರು ? ಹಲಗಪ್ಪ
ಎಲ್ಲೆಲ್ಲಿ ಹೆಜ್ಜೆ ಮಡೀಕೊಂಡು ಹೋಗಿದ್ನೋ
ಆ ಹೆಜ್ಜೆಜ್ಜೆಗೂ ಪಟುಲಿಂಗ ಎದ್ದು ನಿಂತಿವೆ
ಪಡುಲಾಗಿ ತಿರುಗಿ ನೋಡ್ದ ಹಲಗಪ್ಪ
ಹೆಜ್ಜೆಜ್ಜೆಗೂವೆ ಲಿಂಗ ಕಂಡ್ಬುಡ್ತು
ಅಯ್ಯೋ ಮಾಯ್ಕಾರ
ಊರ್ನಲ್ಲಿ ಇಲ್ಲಾ ಗ್ರಾಮದವರೂ ಹಸಿದು ಕುಂತವರೆ
ಬಿತ್ನೇಗಿರಲಿ ಅಂತ್ಹೇಳಿ
ನನ್ನ ಹೆಜ್ಜಜ್ಗೂವೆ ಲಿಂಗವಾಗಿದ್ದೀಯಪ್ಪ ಅಂತ್ಹೇಳಿ
ಅಲ್ಲಿ ಮಾಯ್ಕಾರನಿಗೆ ಹೆಸರು ಬಂತು
ಯಾವ ಹೆಸ್ರು ಅಂದ್ರೆ

ಗುಡಿಯಲ್ಲಿ ಲಿಂಗ
ಗುಡಿಯ ಬಳಬಳಸು ಲಿಂಗ
ಉತ್ತುರ ದೇಶದ ಮಾದೇವ ನೀವು
ಹುಟ್ಟುವಾಗ ಲಿಂಗs

ಮೂಡಚಾರಿ ತೆವರಿಮ್ಯಾಲೆ ಮಡಗ್ಬುಟ್ಟು ಬಿತ್ನೆಕುಕ್ಕೆಯ
ಭೂಮ್ತಾಯಿಗೆ ನಮಸ್ಕಾರ ಮಾಡ್ಬುಟ್ಟು
ಮಗನೇ ಹೇರು ಕಟ್ಕೊಂಡಿರಪ್ಪ
ಗ್ರಾಮದಲ್ಲಿರುವವರಿಗೆಲ್ಲ ಬಿತ್ತನೆ ರಾಗಿ
ಅಳೆದು ಕೊಟ್ಟುಬುಟ್ಟು ಬತ್ತೀನಿ ಅಂತ್ಹೇಳಿ
ಊರಿಗೆ ಬಂದು ಹಲಗಪ್ಪ
ಬಿತ್ತನೆ ರಾಗೀನ ಅಳೆದು ಕೊಟ್ಟುಬುಟ್ರು
ಅವಾಗೋಗಿ ತನ್ನ ಹೊಲ ಬಿತ್ತನೆ ಮಾಡ್ಕಂಡ್ ಬಂದ್ರು
ಆವಾಗ ಮಾಯ್ಕಾರ ಗಂಡ
ಆವಾಗಲೀಗ ಹಲಗಪ್ಪನವರ ಕನಸಿನಲ್ಲಿ
ನೋಡಪ್ಪಾ ಗೌಡ
ಗಂಡಹೆಂಡಿರು ನೀವು ಸತ್ಯವಂತರು
ವರ್ಷಕ್ಕೊಂದ್ಸಾರಿ ಶಿವರಾತ್ರಿವೊಳಗೆ
ಮಗ್ಗಾಮರಳ್ಳಿ ಭೀಮನ ಕೊಲ್ಲಿ
ಮೂರು ಗ್ರಾಮ ಸೇರ್ಕೊಂಡು
ಭೀಮನ ಕೊಲ್ಲಿ ಮಾದಪ್ಪ ಅಂತ್ಹೇಳಿ
ನನಗೆ ಜಾತ್ರೆ ಮಾಡ್ರಪ್ಪ ಅಂತ್ಹೇಳಿ
ಜಾತ್ರೆ ಮಾಡಿಸ್ಕಂಡು ಮಾದೇವ

ಅವರು ಭೀಮನಕೊಲ್ಲಿಯ ಬಿಡುತವರೇ ಮಹದೇವಾs || ನೋಡಿ ನಮ್ಮ ಶಿವನಾ ||

ಆವಾಗಲೀಗ ಭೀಮನಕೊಲ್ಲಿ ಬಿಟ್ಟು ಬರುವಾಗ
ಮಹಾದೇವ ನಾಲ್ಕು ರಾಜ್ಯದ ಏಕವಾಗಿ ನೋಡ್ಕಂಡ್ ಬತ್ತಾವ್ರೆ
ಮಾಯ್ಕಾರಗಂಡ
ಯಾವ ದೇಶದಲ್ಲೂವೆ ಯಾವ ಊರ್ನಲ್ಲೂವೆ
ಮಾರೀರಿಲ್ಲ ಮಸಣಿಯರಿಲ್ಲ
ದುರ್ಗಿ ಚಾಮುಂಡಿಯರಿಲ್ಲ
ಯಾವ ದೇವಾನುದೇವತೆಗಳೂ ಇಲ್ಲ
ಯಾವ ಕಾರಾಗೃಹದಲ್ಲಿದ್ದಾರೋ
ಯಾವ ಅಡವಿ ಯಾವ ಅರಣ್ಯದಲ್ಲಿದ್ದಾರೋ ಅಂತ್ಹೇಳಿ
ಲೋಕನೆಲ್ಲಾನೂ ಅರಗಣ್ಯಕಿರುಗಣ್ಣುಬಿಟ್ಕೊಂಡು ನೋಡ್ಕಂಡ್ ಬತ್ತಾವ್ರೆ
ಆವಾಗ ದಕ್ಷಿಣ ಭಾಗದಲ್ಲಿ
ಬಂಕಪುರಿವೊಳಗೆ ಶ್ರವಣದೊರೆ
ಎಲ್ಲಾ ದೇವಾನುದೇವತೆಗಳನೂವೆ ತನ್ನ ಕಾರಾಗೃಹದಲ್ಲಿಟ್ಕೊಂಡು
ತನ್ನ ಚಾಕರಿ ಮಾಡಿಸ್ಕಂಡ್ ಇದ್ದಾನೆ
ಆ ಸೂರ್ಯನ ಪುತ್ರ ಛಾಯಾದೇವಿ ಮಗ ಶನಿದೇವ
ಅವನ ಮ್ಯಾಲಕ್ಕೆ ಮುಖ ನೋಡಬಾರ್ದು ಅಂತ್ಹೇಳಿ
ಮಂಚದ ಕೆಳಗೆ ಮೊಕ್ಕಣ್ಣಾಗಿ ಮಲಗಿಸ್ಕೊಂಡು
ಅವನ ಬೆನ್ನಮೇಲೆ ಇಟ್ಟಕೊಂಡವ್ನೆ
ಬ್ರಹ್ಮದೇವ ಲೆಕ್ಕ ಬರೆಯುವುದಕ್ಕೆ
ನಾರಾಯಣ ಶಕುನ ನೋಡುವುದಕ್ಕೆ
ಮಾರೀರು ಮಸಣೀರೆಲ್ಲ ರಜಾ ಹೊಡೆದು ರಂಗೋಲೆ ಬಿಡುವುದಕ್ಕೆ
ಈ ರೀತಿಯಾಗಿ ಶ್ರವಣ ಮಹಾತ್ಮ
ಅಲ್ಲಿ ರಾಜ್ಯಾನ್ನಾಳವನೇ ಶ್ರವಣಯ್ಯಾs || ನೋಡಿ ನಮ್ಮ ಶಿವನಾ ||

ಮಾಯ್ಕಾರ ಗಂಡ
ಎಳಗಾವಿ ಎಳೆದೊದ್ದು ಸುಳಿಗಾವಿ ಮುಸಕಿಟ್ಟುಕೊಂಡು
ಒಕ್ಕಳ ಗಂಟೆ ಹುಲಿ ಚರ್ಮ
ಅಷ್ಟಪಾದಕ್ಕೆ ಅಮೀರಗೆಜ್ಜೆ
ಕೊರಳ ತುಂಬ ರುದ್ರಾಕ್ಷಿ
ಬಾರಿ ಜಂಗಿನ ಬಲಗೈಲಿಡಕೊಂಡು
ಬಂಕಾಪುರ ಕೋಟೆ ಬಾಗಿಲಿಗೆ ಹೋದರು
ಕೋಟೆ ಬಾಗಿಲಲ್ಲಿ ಜಂಗಿನ ಶಬ್ದ ಕೇಳಿ
ಅಲ್ಲಿನ ದೇವಾನುದೇವತೆಗಳೆಲ್ಲ
ಕೈ ಚಪ್ಪಾಳೆ ಹೊಡಕೊಂಡು
ಉತ್ತುರ ದೇಶದ ಮಾಯ್ಕಾರ ಬತ್ತಾವ್ನೇ
ಉತ್ತುರ ದೇಶದ ಮಾಯ್ಕಾರ ಅಂತ್ಹೇಳಿ ಮ್ಯಾಲಕ್ಕೆದ್ದು ನಿಂತ್ಕಂಡ್ರು
ಶ್ರವಣದೊರೆ ಸಿಂಹಾಸನದ ಮೇಲೆ ಕೂತಿದ್ರು
ಯಾರಯ್ಯಾ ನಾರಾಯಣ ಬ್ರಹ್ಮದೇವ ಯಾರು ಬರ್ತಾರೆ ಅಂದ್ರು
ಉತ್ತರ ದೇಶದ ಮಾಯ್ಕಾರ ಅಂದ್ರು
ಉತ್ತರ ದೇಶದ ಮಾಯ್ಕಾರನಾದರೆ
ನನ್ನ ಕಾರಾಗೃಹಕ್ಕೆ ಕರೆಯಿರೆ
ಅವನ್ನೂ ಕೂಡ ಸೇರಿಸ್ಕಳಾಣ ಅಂದ್ರು
ಮಾಯ್ಕಾರ ಗಂಡ ಹತ್ತಿರ ಬಂದ್ರು
ನೀನಾರಪ್ಪ ಮಗುವೇ ಅಂದ್ರು
ನಾನು ಉತ್ತುರ ದೇಶದ ಮಾಯ್ಕಾರ ಅಂದ್ರು
ಬ್ರಹ್ಮದೇವ ಉತ್ತುರ ದೇಶದ ಮರಿದೇವರಾದರೆ
ಇದನ್ನೂ ಕೂಡ ನಮ್ಮ ಡೈರಿ ಬುಕ್ಕೂಗೆ ಬರ್ಕೊ
ಇವನು ನಿಮ್ಮ ಕಾರಾಗೃಹದಲ್ಲಿರಲಿ ಅಂತ್ಹೇಳಿ
ಬ್ರಹ್ಮದೇವರಿಗೆ ಹೇಳಿದ್ದಾರೆ
ಬ್ರಹ್ಮದೇವರು ಬುಕ್ ತಕ್ಕೊಂಡು
ಲೇಖನಿ ಕಡ್ದಿ ಬಲಗೈಲಿ ಹಿಡಕಂಡ್ರು
ನಿಲ್ಲಪ್ಪ ಮೊದಲಾಗಿ ಇವನ ಹೆಸರು ಬರೀಬೇಡ
ಇವರ ತಂದೆತಾಯಿ ಕೇಳು ಅಂತವರೇ ಶ್ರವಣಯ್ಯಾs || ನೋಡಿ ನಮ್ಮ ಶಿವನಾ ||