ತಂದೆತಾಯಿಗಳ ಮಾತ ಯಾವಾಗ ಕೇಳಿದ್ರೋ
ಮಾಯ್ಕಾರ ಗಂಡನಿಗೆ
ಬರಸಿಡಿಲು ಹೊಡೆದಪ್ಪಂದವಾಯ್ತು
ತಂದೆತಾಯಿಗಳು ಇಲ್ದೇ ಇದ್ದಮೇಲೆ
ಗುರುಹಿರಿಯರು ಇಲ್ದೇ ಇದ್ಮೇಲೆ
ಈ ಲೋಕ ಕಲ್ಯಾಣ ಮಾಡುವುದಕ್ಕೆ ಸಾಧ್ಯವಿಲ್ಲ
ಮೊದಲಾಗಿ ನಾನು ತಂದೆತಾಯಿ ಪಡೀಬೇಕು
ಲೋಕ ಕಲ್ಯಾಣ ಮಾಡಬೇಕು ಅಂತ್ಹೇಳಿ
ಶ್ರವಣದೊರೆ ಮಾತನ್ನ ಕೇಳಿ
ಮುಂಗಾರು ಮಿಂಚಿದಪ್ಪಂದವಾಗಿ
ಅವರು ಮಾಯವಾಗಿ ಹೊರಟವರೇ ಮಾಯ್ಕಾರಾs || ನೋಡಿ ನಮ್ಮ ಶಿವನಾ ||

ಮಾಯವಾಗಿ ಎಲ್ಲಿಗೆ ಹೊರಟಿದ್ದಾರೆ ಅಂದ್ರೆ
ಮುಗಿಲು ಸೇರಕೊಂಡ್ರು ಮಾಯ್ಕಾರ
ಮೂಡಲ ಮುಗಿಲಿದ್ದರೆ ಮೂಡಲ ಸಂಚಾರ
ಪಡುಲ ಮುಗಿಲಿದ್ದರೆ ಪಡುವಲ ಸಂಚಾರ
ತೆಂಕ್ಲು ಬಡಗಲು ಮುಗಿಲನ್ನೇ ತೊಟ್ಲು ಮಾಡಿಕೊಂಡು
ಮುಗಿಲು ತೂಗ್ತಾಯಿದ್ದಾರೆ
ಮರ್ತ್ಯು ಲೋಕ್ದಲ್ಲಿ ನನಗೆ ತಂದೆತಾಯಿಗಳಾರು?
ಅಂಥಾ ಸತ್ಯವಂತರು ಯಾರು ?
ಅಂಥಾ ಭಕ್ತಿವಂತರು ಯಾರು ? ಅಂತ್ಹೇಳಿ
ಮುಗಿಲು ತೋಟ್ಲು ಮಾಡ್ಕಂಡ್ ನೋಡ್ತಾವರೇ
ಆವಾಗ ಬಂಕೇಶಪುರಿವೊಳುಗೆ
ಉತ್ತಮಾಪುರದ ಪಕ್ಕದಲ್ಲಿ ಬಂಕಾಪುರಿ
ಆ ಬಂಕಾಪುರಿವೊಳಗೆ
ಶಂಕರ ಪ್ರಿಯ ಅಂತ್ಹೇಳಿ
ಒಬ್ಬ ದೊರೆಯಿದ್ದಾನೆ
ಆ ಪರಮೇಶ್ವರನ ವರದಲ್ಲುಟ್ಟಿದೋನು
ಆದರೆ ಪಾರ್ವತಿ ವರದಲ್ಲುಟ್ಟಿದಂಥ
ರಾಮಾಂಬಿಕೆ ಪತಿಶೀಲೆ ಅಂತ್ಹೇಳಿ
ಅವರಿಬ್ಬರ್ನೂ ಲಗ್ನವಾಗಿ
ಆ ಶಂಕರ ಪ್ರಿಯ ಬಂಕೇಶಪುರಿವೊಳಗಿದ್ದ
ಆದರೆ ಮಕ್ಕಳ ಭಾಗ್ಯವಿರಲಿಲ್ಲ
ಆ ಪರಮಾತ್ಮನ ಶಿವನನ್ನೇ ಕುರಿತು
ತಪಸ್ಸು ಮಾಡಿ
ಆ ತಪ್ಪಸ್ಸಿನ ಜ್ವಾಲೆಗೆ
ಎರಡನೇ ಹೆಂಡತಿಯಾದ ಪತಿಶೀಲೆಗೆ
ಗರ್ಭಧಾರಣೆ ಮಾಡಿದ ಶಿವನು
ಆ ಪತಿಶೀಲೆ ಗರ್ಭದಲ್ಲಿ ಓರ್ವ ಕುಮಾರ ಹುಟ್ದ
ಶಿವನ ವರದಲ್ಲಿ ಹುಟ್ಟಿದಂತಾ ಮಗನಿಗೆ
ಶಿವದಾಸ ಅಂತ್ಹೇಳಿ ನಾಮಕರಣ ಮಾಡ್ಕಂಡು
ಅಲ್ಲಿ ರಾಜ್ಯನ್ನಾಳವರೇ ಜಗದೊಡೆಯಾ || ನೋಡಿ ನಮ್ಮ ಶಿವನಾ ||

ಮಗ ಶಿವದಾಸನಿಗೆ ಯೌವನದ ಕಾಲ ಬಂದಾಗ
ಉತ್ತುಮಾಪುರದಲ್ಲಿ ಭದ್ರಕಾಳಿ ವರದಲ್ಲುಟ್ಟಿದ್ದ
ಆ ಉತ್ರಾಜಮ್ಮ ಯೋಗ್ಯವಾದ ಪುತ್ರಿ
ಆ ಉತ್ರಾಜಮ್ನಿಗೂ ಶಿವದಾಸನಿಗೂ ಲಗ್ನಮಾಡಿ
ಪಟ್ಟವನ್ನು ಕಟ್ಟಿ ಬಂಕೇಶಪುರಿವೊಳುಗೆ ಬಿಟ್ಟು
ಅವರು ದೈವಾಧೀನರಾದರು.
ಯಾರು ? ಶಂಕರ ಪ್ರಿಯ ಪತೀಶೀಲೆಯರು
ಈ ಉತ್ರಾಜಮ್ಮ ಅಂದ್ರೆ
ಬಹಳ ಶಿವನ ಭಕ್ತಿಯವಳು
ಬೆಳಗಾಗಲೆದ್ದು ಪತಿಪಾದಕ್ಕೆ ಪೂಜೆ ಮಾಡ್ಕಂಡು
ಗಂಗೆವೊಳಗೋಗಿ ಕಲ್ಯಾಣಿವೊಳಗೆ
ಸ್ನಾನ ಮಡಿಯನ್ನು ಮಾಡಿ ಆತ್ಮಲಿಂಗ ಪೂಜೆ ಮಾಡ್ಕಂಡು
ಕುನ್ನೀರು ಚೆಂಬ್ನಲ್ಲಿ ನೀರ್ ತಕ್ಕೊಂಡ್ಬಂದು
ನೂರೊಂದು ಲಿಂಗಕ್ಕೂ ಪೂಜೆ ಮಾಡ್ಬುಟು
ಉತ್ರಾಜಮ್ಮ ದಂಪತಿಗಳು ಒಂದು ಮಂಚ್ದಲ್ಲಿ ಮಲಗ್ತಾಯಿರಲಿಲ್ಲ
ಏಳು ತಲೆ ಕಾಳಿಂಗ ಸರ್ಪನನ್ನ ಕರ್ದು ತಲೆದಿಂಬು ಮಾಡ್ಕಂಡು
ಅವರು ನಿದ್ರೆಮಾಡಿ ಮಲಗವರೇ ಉತ್ರಾಜಮ್ಮಾs || ನೋಡಿ ನಮ್ಮ ಶಿವನಾ ||

ಇದೇ ಪ್ರಕಾರವಾಗಿ ದಂಪತಿಗಳು ಶಿವನಪೂಜೆಯಲ್ಲಿ ಬಂದ್ರು
ಉತ್ರಾಜಮ್ಮನಿಗೆ ನಲವತ್ತು ವಯಸ್ಸು ನಡೀತಾಯಿದೆ
ಆದರೂ ಕೂಡ ಮಕ್ಕಳ ಫಲವಿಲ್ಲ
ನಾವು ಶಿವನ ಭಕ್ತರಾಗಿ
ನಮ್ಮ ರಾಜ್ಯಕ್ಕೆ ತಕ್ಕಂಥ ಮಗನಿಲ್ಲ ಅಂತ್ಹೇಳಿ
ಆ ಪರಮೇಶ್ವರನ ಕುರಿತುಕೊಂಡು ತಪಸ್ಸು ಮಾಡ್ತಾಯಿದ್ರು
ಆಗ ಪರಮಾತ್ಮ
ಕನಸಿನಲ್ಲಿ ನಿನಗೆ ಒಂದು ವರ ಕೊಡ್ತೀನಂದ್ರು
ಆಗ ತಮ್ಮ ಗುರುಗಳಾಗಿರ್ತಕ್ಕಂಥ
ವ್ಯಾಘ್ರಾನಂದ ಸ್ವಾಮಿಗಳ ಕೇಳುದ್ರು
ಗುರುವೇ ನಾವು ಆ ಪರಮಾತ್ಮನ ಕುರಿತು
ತಪಸ್ಸು ಮಾಡ್ತಾಯಿದ್ದೀವಿ
ನಮಗೆ ತಕ್ಕಂಥ ವರ ಕೊಡಲಿಲ್ಲ
ನೀವಾದರೂ ಆತೀರ್ವಾದ ಮಾಡಿ ಅಂದ್ರು
ಆಗ ವ್ಯಾಘ್ರಾನಂದ ಸ್ವಾಮಿಗಳು
ಅಮ್ಮಾ ಉತ್ರಾಜಮ್ಮಾ
ಏನಾದರೂ ನಿನಗೆ ಪುತ್ರಸಂತಾನವಾದರೆ
ಏನು ವರ ಕೊಡ್ತೀಯಮ್ಮ ಅಂದ್ರು
ನೀವು ಕೇಳಿದ್ದ ಕೊಡ್ತೀನಿ ಗುರುವೇ ಅಂದಳು
ಅದನ್ನೊಪ್ಕೊಂಡು
ಆ ವ್ಯಾಘ್ರಾನಂದಸ್ವಾಮಿ ಪರಮೇಶ್ವರನ ಆತೀರ್ವಾದದಿಂದ
ನಿನಗೆ ಮಕ್ಕಳಭಾಗ್ಯ ಕೊಡ್ತೀನಿ ಇರಮ್ಮ ಅಂತ್ಹೇಳಿದ್ರು
ಆ ಮಕ್ಕಳಾಗಿರ್ತಕ್ಕಂಥವರು ಯಾರು ಅಂದರೆ
ಈ ಮಾಯ್ಕಾರನೇ ಬರ್ತಾಯಿದ್ದಾನೆ
ಆ ಮಾಯ್ಕಾರ ಗಂಡ
ಉತ್ರಾಜಮ್ಮ ಸ್ನಾನ ಮಡಿ ಮಾಡ್ಕೊಂಡು
ಕೊಳದಲ್ಲಿ ದಿನಾ ನೀರ್ ತಕ್ಕೊಂಡು
ಹೂ ಹೊತ್ತುಕೊಂಡು ಬತ್ತಾಯಿದ್ಲಲ್ಲ
ಆ ಕಲ್ಯಾಣಿ ಕೊಳಕ್ಕೆ ಮಾದೇವ
ಮುಗಿಲ ತೊಟ್ಲು ಮಾಡ್ಕಂಡಿದ್ದವರು
ಅವರು ಕೊಳದ ಏರಿಗೆ ಇಳಿದವರೇ ಮಾಯ್ಕಾರಾs || ನೋಡಿ ನಮ್ಮ ಶಿವನಾ ||

ಕಲ್ಯಾಣಿ ಕೊಳದ ಏರೀವೊಳಗೆ ಮಾಯ್ಕಾರ
ಬಿಳೀಪಲ್ಲಿಯಾಗಿ ಕಾದು ಕುಂತಿದ್ದಾರೆ
ಉತ್ರಾಜಮ್ಮ ಸ್ನಾನ ಮಡಿ ಮಾಡ್ಕೊಂಡು
ಹೋಗೋದ್ನೆಲ್ಲ ನೋಡುದ್ರು
ಮತ್ತೆ ತುಂಬಿದ ಸೋಮವಾರ ಬಂದ್ರು ಕಾರ್ತಿಕಮಾಸ
ತಾಯಿ ಸ್ನಾನ ಮಡಿಯನ್ನು ಮಾಡಿ
ತಮ್ಮ ಆತ್ಮಲಿಂಗವನ್ನು ಪೂಜೆ ಮಾಡ್ಕಂಡು
ತಮ್ಮ ಕುನ್ನೀರ ಚೆಂಬನ್ನು ಬೆಳಗಿ ನೀರ ತುಂಬಿ ಮಡಗ್ಬುಟ್ಟು
ಪುಸುಮಾ ಎತ್ತುವುದಕ್ಕೆ ಕಲ್ಯಾಣಿ ಸುತ್ತ ಬಂದ್ರು
ಆ ಪುಸುಮದ ಗಿಡದಲ್ಲಿ ಒಂದೂ ಪುಸುಮಿಲ್ಲದ ಹಾಗೆ
ಮಾಯ್ಕಾರ ಗಂಡ ಮಾದೇವ
ಅವರು ಮಾಯ ಮಾಡಿ ಕುಂತವರೇsಮಾಯ್ಕಾರಾs || ನೋಡಿ ನಮ್ಮ ಶಿವನಾ ||

ಗುರುವೇ ಗುರುಪಾದವೇ ಉತ್ರಾಜಮ್ಮ
ಕಲ್ಯಾಣದ ಸುತ್ತ ನೋಡ್ಬುಟ್ರು
ಇಂದೀಗ ನನ್ನ ಮಾಡಿದಂಥ ಶಿವನ ಯಾಗ ವ್ಯರ್ಥವಾಗ್ಬುಡ್ತಲ್ಲ
ಭೂಮಿ ತಾಯಿ ಆಕಾಶವೇಣಿ
ನನಗೊಂದು ಪುಸುಮವಿಲ್ಲ ಅಂತ್ಹೇಳಿ ನಿಂತ್ಕಂಡ್ರು
ಬಿಳೀಪಲ್ಲಿಯಾಗಿ ಕೂತಿದ್ದಂಥ ಮಾಯ್ಕಾರ ಗಂಡ
ಆವಾಗ ನಡುಕಲ್ಯಾಣಿವೊಳಗೆ
ಒಂದು ಕೆಂದಾವರೆ ಪುಸುಮವಾಗಿ ಕುಂತವರೇ ಮಾಯ್ಕಾರಾs || ನೋಡಿ ನಮ್ಮ ಶಿವನಾ ||

ಕೆಂದಾವರೆ ಕಮಲವಾಗಿ ನಡುಕಲ್ಯಾಣಿವೊಳಗೆ
ಆ ತಾವರೆ ಹೂವಿನ ಮಧ್ಯದಲ್ಲಿ ಪುಟುಲಿಂಗವಾಗಿ
ಈವಾಗ ನಾಗಲಿಂಗ ಪುಸುಮ ಇದಿಯಲ್ಲ
ಅದೇ ರೀತಿಯಾಗಿ ತೇಲಾಡ್ತಾಯಿದ್ರು
ಉತ್ರಾಜಮ್ಮ ಕಲ್ಯಾಣಿ ಕಡೆಗೆ ನೋಡಿದ್ರು
ಓ ಪರಮಾತ್ಮಾ
ಈ ಕಲ್ಯಾಣಿವೊಳುಗೆ ಯಾವುದೋ ಒಂದು ತಾವರೆ ಕಮಲ ಇದೆ
ಇದನ್ನಾದರೂ ಎತ್ಕೊಂಡೋಗಿ
ನಾನು ಲಿಂಗಪೂಜೆ ಮಾಡಬೇಕು ಅಂತ್ಹೇಳಿ
ಕಲ್ಯಾಣಿಗೆ ಇಳೀತಾಯಿದ್ದಾರೆ ಉತ್ರಾಜಮ್ಮ
ಮಾಯ್ಕಾರಗಂಡ ತೇಲಾಡ್ತ ತೇಲಾಡ್ತ
ಕಡೆ ಕಲ್ಯಾಣಕೆ ಬಂದ್ಬುಟ್ರು
ಆವಾಗೆರಡು ಹಸ್ತಿದಿಂದ ಎತ್ಕೊಂಡು
ಇದನ್ನ ಮಡಿಲಲ್ಲಿ ಕಟ್ಕೊಂಡೋದರೆ ಬಾಡೋಗುತ್ತೆ ಅಂತ್ಹೇಳಿ
ತನ್ನ ಕುನ್ನೀರ ಚಂಬ್ನ ನೀರನಲ್ಲಿಟ್ಕೊಂಡು
ತನ್ನದ ಮನೆಗೆ ಬಂದವರೇ ಉತ್ರಾಜಮ್ಮಾs || ನೋಡಿ ನಮ್ಮ ಶಿವನಾ ||

ಮಠ ಮನೆಯಲ್ಲಿ ಬಂದು ಗದ್ದುಗೆ ಮೇಲೆ ಚೆಂಬ ಮಡಗ್ಬುಟ್ಟು
ಆ ಪುಸುಮಾ ಎತ್ತಿ ಅಲ್ಲಿ ಒಂದೆಡೆ ಮಡಗ್ಬುಟ್ಟು
ನೂರೊಂದು ಲಿಂಗುಕ್ಕೂ ಮಜ್ಜನ ಎರೆದುಬುಟ್ಟು
ಈಬೂತಿ ಧಾರಣೆ ಮಾಡ್ಬುಟ್ಟು
ಅಂಗೈ ಮೇಲೆ ನಾಗಲಿಂಗದ ಪುಸುಮ ಇಟ್ಕೊಂಡು
ಎಲ್ಲಾ ಲಿಂಗಕ್ಕೂ ಒಂದೊಂದು ಗರಿಯಾಗಿ ಮುಡಿಸ್ಕೊಂಡು ಬಂದ್ರು
ಹೂವನ ಧರಿಸ್ಕೊಂಡು ಬಂದು
ಮಧ್ಯೆ ಇರುವಂಥ ದಿಂಡನ್ನು
ಬಿಸಾಡ್ಬುಟ್ರೆ ನಾಳೆ ಸಿಕ್ಕೋಗುತ್ತೆ ಅಂತ್ಹೇಳಿ
ತನ್ನ ಗಂಧದ ಕರಡಿಗೆಯಲ್ಲಿಟ್ಟಂಥ
ಆ ಗುರುವಿನ ಲಿಂಗ
ಗುರು ಕೊಟ್ಟಂಥ ಲಿಂಗದಲ್ಲಿ ಗಂಧದ ಕರಡಿಗೆಯೊಳಗೆ ಇರಿಸಿಕೊಂಡು
ತಾಯಿ ನಿದ್ರೆ ಮಾಡ್ತಾ ಮಲಿಕ್ಕೊಂಡರು
ಬೆಳ್ಳಿ ಮೂಡಿ ಬೆಳಗಾಗುವ ಹೊತ್ತಿಗೆ
ಆ ಗಂಧದ ಕರಡಿಗೆಯಲ್ಲಿದ್ದಂಥ ಪುಟುಲಿಂಗವು
ಉತ್ರಾಜಮ್ಮನ ಮಗ್ಗುಲಲ್ಲಿ
ಸಣ್ಣ ಬಾಲಕನಾಗಿ ಮಲಗವರೇs ಮಾಯ್ಕಾರಾ || ನೋಡಿ ನಮ್ಮ ಶಿವನಾ ||

ತಾಯಿ ಉತ್ರಾಜಮ್ಮ ಎಡಮೊಗ್ಗಲಿಂದ ಬಲಮೊಗ್ಗಲಾಗಿ ಹೊರಳಿ
ಮೇಲಕ್ಕೆದ್ದು ನೋಡಿದ್ರು
ಸಣ್ಣ ಬಾಲಕ ಕರ್ರಾಕುರನೆ ಅಳ್ತಿದ್ದ
ಆ ಬಾಲಕನ ಅಂದಾಚಂದ ನೋಡಿ ಎತ್ತಿ
ತನ್ನ ತೊಡೆ ಮೇಲಿಟ್ಟುಕೊಂಡು
ಆವಾಗ ಜೋಗುಳ ಪಾಡಿ ಮುದ್ದಾಡ್ತಿದ್ರು
ತಾಯಿ ಆ ಮಗನ ಯೌವನಕ್ಕೆ
ಹದಿನಾಲ್ಕು ವರ್ಷದ ವಯ್ಸಿನ
ಯೌವನದ ಎದೆಪಾಲು ಬಂದ್ಬುಡ್ತು ಎದೆಭಾರವಾಗ್ಬುಡ್ತು
ಆವಾಗ ಮಾಯ್ಕಾರ ಗಂಡ
ಅರೆಗಣ್ಣ ಬಿಟ್ಟುಕೊಂಡು ನೋಡ್ತಾಯಿದ್ದಾನೆ
ಅಪ್ಪ ಮಗನೇ
ಮಹಾಲಿಂಗು ಶಿವಲಿಂಗು
ನನ್ನ ಎದೆಪಾಲು ಊಟ ಮಾಡು ಅಂದ್ರು
ಎರಡು ಕೈನ ಹಸ್ತವನ್ನು ಒಡ್ಡುಬುಟ್ಟ
ಯಾರು ? ಮಹಲಿಂಗು ಮಾಯ್ಕಾರ
ಅಮ್ಮ ನಿನ್ನ ಎದೆಯನ್ನು ಕೊಟ್ಟು
ಎದೆಪಾಲು ಊಟ ಮಾಡಿಸ್ಬೇಡ
ನನ್ನ ಮುತ್ತಿಕ್ಕಿ ಮುದ್ದಾಡಬೇಡ
ಇನ್ನು ಮುಂದೆ ನಾನು ಕಲಿಕಟ್ಟಾಳಬೇಕು
ಆಡಿದ ಮಾತು ಅಮೃತ ಆಗೋದಿಲ್ಲ
ಹೇಳಿದ ಮಾತು ವಾಕ್ಸುವಾಗೋದಿಲ್ಲ ತಾಯಿ
ಮತ್ತೆ ನನ್ನ ಎದೆಭಾರ ಯಾರಪ್ಪ ತಪ್ಸೋರು ಅಂದ್ರು
ನೋಡು ತಾಯಿ
ನಿನ್ನ ಎದೆಪಾಲನ್ನು ಹೋಗಿ
ನೀಲಗಿರಿ ತಾಳೆರೆ ತವಸರೆ ಕಂಭದ ಬೋಳಿವೊಳುಗೆ
ಹುಟ್ಟರೇ ಕಲ್ಲಮ್ಯಾಲೆ ಕರೆದುಬುಡಮ್ಮಾ
ಶೂರ್ಣಾವತಿ ನದಿಯಾಗಿ ಹರೀಲಿ
ಇನ್ನೂ ಮುಂದೆ ಚಿಕ್ಕಾಲಳ್ಳ ದೊಡ್ಡಾಲಳ್ಳವಾಗಲಿ
ನಾನು ಏಳು ಮಲೆಗೋದಾಗ
ನೂರೊಂದು ಜನ ಕೊಡಮಕ್ಕಳ ತಂದು
ದೀಪಾವಳಿ ತಿಂಗ್ಳು ನನ್ನ ಮಂಡೇಮ್ಯಾಲೆ ಎರೆದಾಗ
ನನ್ನ ತಾಯಿ ಹಾಲರಬಿ ಅಂತ್ಹೇಳಿ
ನೆನಪು ಮಾಡ್ಕಳ್ತೀನಿ ಅಂತ್ಹೇಳಿದ್ರು
ಆವಾಗ ತಾಯಿ
ಹೇಳಿದ ಮಾತಿನಂತೆ ಶಿವನ ಮಾತಿನಂತೆ
ಶಿವಯಾಗ ಮಾಡ್ಕಂಡು ಬರ್ತಾಯಿದ್ದಾರೆ
ಈ ಮಗನಿಗೆ
ಮಹಾಲಿಂಗು ಶಿವಲಿಂಗು ಅಂತ್ಹೇಳಿ ಕರೆದ್ಬುಟ್ಟಿ
ನಮ್ಮಕುಲಗುರುಗಳಾಗಿರ್ತಕ್ಕಂಥ ವ್ಯಾಘ್ರಾನಂದ ಸ್ವಾಮಿ ಕರ್ದು
ನಾಮಕರಣ ಮಾಡಬೇಕು ಅಂತ್ಹೇಳಿ
ಅವರು ವ್ಯಾಘ್ರಾನಂದ ಸ್ವಾಮಿ ಕರೆದವರೇ ಉತ್ರಾಜಮ್ಮಾs || ನೋಡಿ ನಮ್ಮ ಶಿವನಾ ||

ಇಂಥಾಮಗನು ನನಗೆ ಸಿಕ್ಕಬಹುದಪ್ಪಾ
ಗುರುದೇವಾ ಈ ಮಗನಿಗೆ ನಾಮಕರಣ ಮಾಡಿ
ನಾವು ಸಾಕ್ಕೋಳ್ತೀವಿ ಚೆನ್ನಾಗಿ ಅಂದ್ರು
ಆಗ ವ್ಯಾಘ್ರಾನಂದ ಸ್ವಾಮಿಗಳು
ಅಮ್ಮ ಮಗುವಾದರೂ ದೇವನಾಗಿದ್ದಾನೆ
ನನಗೆ ನಾಮಕರಣ ಮಾಡುವುದಕ್ಕೆ ಭಯವಾಗುತ್ತೇ
ದೂರ್ದಲ್ಲಿ ನಿಂತ್ಕಂಡು ವ್ಯಾಘ್ರಾನಂದ ಸ್ವಾಮಿಯವರು
ಮರಿದೇವ್ರೇ ಮರಿದೇವ್ರೇ ಅಂತೇಳಿ ನಾಮಕರಣ ಮಾಡಿದ್ರು
ಆವಾಗಲೀಗ ಉತ್ರಾಜಮ್ಮ ಆನಂದವಾಗಿ ಸಾಕ್ತಾಯಿದ್ದ
ಮಗನು ಹುಟ್ಟಿ ಐದು ವರ್ಷ ಆರು ವರ್ಷ
ಓಡಾಡುವಾಗ ಬೆಳೆಯುವಾಗ
ಆ ವ್ಯಾಘ್ರಾನಂದ ಸ್ವಾಮಿಗಳು ಬಂದರು
ಅಮ್ಮ ತಾಯಿ ಉತ್ರಾಜಮ್ಮ ಶಿವದಾಸರೆ
ನಮಗೆ ಒಬ್ಬ ಮಗನು ಹುಟ್ಟಿದರೆ
ಕಾಣಿಕೆ ಕೊಡ್ತೀವಿ ಅಂದ್ರಲ್ಲ ಏನುಕೊಟ್ರಿ ಅಂದ್ರು
ಗುರುದೇವಾ
ಈ ಉತ್ರಾಜಮ್ಮ ಆಡಿದ ಮಾತ ಕಳಕೋದಿಲ್ಲ
ಏನು ಕೇಳ್ತೀರಿ ಕೇಳಿ ಗುರುವೇ ಅಂದ್ಲು
ಏನು ಇಲ್ಲಮ್ಮ ನನಗೇನು ಭಾಗ್ಯ ಬೇಕಾಗಿಲ್ಲ
ಒಂದು ಬಂಗಾರ ಬೇಕಾಗಿಲ್ಲ
ನಿಮ್ಮ ಮರಿದೇವ್ರ ಕಾಣಿಕೆ ಕೊಡಮ್ಮ ಅಂದ್ರು
ಉತ್ರಾಜಮ್ಮ ದುಃಖ ಮಾಡಾಕೆ ಸುರು ಮಾಡ್ದಳು
ಗುರುದೇವಾ
ನಮ್ಮ ಮಗನ ಕಾಣ್ಕೆ ತಕ್ಕೊಂಡೋದ್ರೆ
ನಾವು ಯಾರ ಸೇರಬೇಕು ಅಂದ್ರು
ನೀವು ಸೂರ್ಯ ಚಂದ್ರಾದಿಗಳು ಇರೂವರ್ಗೂವೆ
ಲಿಂಗೈಕ್ಯವಾಗಿ ಬಾಳಿರಮ್ಮ
ಆ ಮಗನ ಕಾಣಿಕೆ ಕೊಡು ಅಂತ್ಹೇಳಿ
ಮಗನ ಕಾಣಿಕೆ ತಕ್ಕೊಂಡು
ಆ ವ್ಯಾಘ್ರಾನಂದ ಸ್ವಾಮಿಗಳೂ
ಶ್ರೀ ಶೈಲದಲ್ಲಿ ಹೋಗಿ
ಅವರು ವಿದ್ಯೆಬುದ್ಧಿ ಕಲಿಸವರೇ ಗುರುಗೊಳೂs || ನೋಡಿ ನಮ್ಮ ಶಿವನಾ ||

ಹನ್ನೆರಡು ಗಂಟೆ ರಾತ್ರಿವೊಳುಗೆ
ಅಡವಿಯಾರಣ್ಯ ಕಾಡು
ಇಂಥಾ ಅಡವಿಯಾರಣ್ಯಕ್ಕೆ ಕರ್ಕೊಂಡೋಗೋದು
ಅಲ್ಲಿ ಆವ್ರಾಣಿ ಗೊದ್ದ ಗೋಸುಂಬೆ
ಹಾವು ಚೇಳು ಹುಲಿ ಚಿರತೆ ಎಲ್ಲಾನೂ ಕರೆಯೋದು
ಎಲ್ಲವನ್ನೂ ಮೈಸವರಿ ಮೈಸವರಿ ದೀಪುದಿಕ್ಕೆ ನಿಲ್ಲಿಸ್ತಿದ್ರು
ಗುರುವೇ ಏನಪ್ಪಾ ಕಾಡುಮೃಗ ಜಾತಿ ಅಂದ್ರು
ಹಾಗಲ್ಲ ಮರಿದೇವ್ರೆ
ನಾವು ಎಷ್ಟು ಸಾಧುವಾಗಿದ್ದೇವೊ
ಅವು ಕೂಡ ಅಷ್ಟು ಸಾಧುವಾಗಿದ್ದು ಬುದ್ಧಿಯಾಗಿರ್ತವೆ
ನೀನು ಹುಲಿವಾಹನವಾಗಿ
ರಾಜ್ಯದ ಮೇಲೆ ಮೆರಿಯಪ್ಪ ಅಂತ್ಹೇಳಿ
ಹುಲಿಮ್ಯಾಲೆ ಕೂರಿಸಿ ಸವಾರೊ ಮಾಡಿಸ್ತಾಯಿದ್ರು
ಯಾರು ? ವ್ಯಾಘ್ರಾನಂದ ಸ್ವಾಮಿಗಳು
ಆವಾಗಲೀಗ ಮಾಯ್ಕಾರ ಗಂಡ
ಗುರುಗಳ ಸೇವೆ ಮಾಡ್ಕಂಡು
ಅಲ್ಲಿ ವಿದ್ಯಾಬುದ್ಧಿ ಕಲಿತವರೇ ಮಾಯ್ಕಾರಾs || ನೋಡಿ ನಮ್ಮ ಶಿವನಾ ||

ಆವಾಗಲೀಗ ವಿದ್ಯಾಬುದ್ಧಿ ಕಲಿಯುವಾಗ
ನೋಡಪ್ಪ ಮರಿದೇವರೇ
ಈವಾಗ ಕಣ್ಮುಚ್ಚಿ ನೋಡು ಅಂದ್ರು ಶ್ರೀಶೈಲದಲ್ಲಿ
ಆವಾಗ ಗುರುಗಳ ಮಾತಿನಂತೆ ಕಣ್ಮುಚ್ಕೊಂಡ
ಒಂದತ್ತು ನಿಮಿಷ ಕಣ್ಮುಚ್ಚಿದ ಮೇಲೆ
ಕಣ್ಬಿಟ್ಟು ನೋಡಪ್ಪಾ ಅಂದ್ರು
ಬಿಟ್ಟಿದ್ದೇನೆ ಗುರುವೇ ಅಂದ್ರು
ಏನು ಕಂಡೆ ಮಗನೇ? ಅಂದ್ರು
ಆ ಬೆಳಕೇ ನಿನ್ನದು
ನೀನು ಲೋಕ ಕಲ್ಯಾಣಕ್ಕೋಗು
ನನ್ನ ಗುರುಮಠವನ್ನು ಬಿಟ್ಟು ಅಂದ್ರು
ಗುರುದೇವಾ ನಿಮ್ಮ ಅಪ್ಪಣೆಯಂತೆ ಆಗ್ಲಿ ಅಂತ ಅಂತ್ಹೇಳಿ
ಆವಾಗಲೀಗ ಮಾಯ್ಕಾರಗಂಡ
ಶ್ರೀಶೈಲ ಪರ್ವತವನ್ನು ಬಿಟ್ಟು
ಅವರು ರಾಜ್ಯ ಹುಡೀಕೊಂಡು ಹೊರಟವರೇ ಮಾಯ್ಕಾರಾs || ನೋಡಿ ನಮ್ಮ ಶಿವನಾ ||

ದೇಶದ ಮೇಲೆ
ಮಠಾಧಿಪತಿಗಳನ್ನು ನೋಡಿಕೊಂಡು ಬರ್ತಾಯಿದ್ರು
ಅದೇ ದಕ್ಷಿಣ ಮುಖವಾಗಿ ಬಂದ್ರು ಶ್ರೀಶೈಲದಿಂದ
ಆ ಸುತ್ತೂರು ಮಠದಲ್ಲಿ
ಸಿದ್ಧಾನಂದ ದೇಶಿಕ ಸ್ವಾಮಿಗಳು
ಎಲ್ಲಾ ಗ್ರಾಮವನ್ನು ಸೇರಿಸ್ಕೊಂಡು
ಶಿವರಾತ್ರಿವೊಳಗೆ ಘನವಾಗಿ ಜಾತ್ರೆ ಮಾಡ್ತಾಯಿದ್ರು
ಹಬ್ಬ ಮಾಡ್ತಾಯಿದ್ರು
ಆ ಸುತ್ತೂರು ಮಠದಲ್ಲಿ ಏನಪ್ಪಾ ಅಂದ್ರೆ
ಅಲ್ಲಿ ಸೇರಿದಂಥ ಜಂಗುಮರ ಕಾಯಕ
ಬಡಗು ಬಾಗಿಲ ಅಂಕಣದಲ್ಲಿ ಒಂದು ದೊಡ್ಡ ರಾಗೀಕಲ್ಲು
ಆ ರಾಗೀಕಲ್ಲಲ್ಲಿ ಮೂರ್ಕೊಳಗ ರಾಗೀ ಬೀಸ್ಬೇಕು
ಹೋದ ಹೋದ ಜಂಗುಮರಿಗೆ ಅದೇ ಕಾಯಕ
ಆವೊತ್ತಿನ ದಿನ ಜಾತ್ರೆ ನಡೀತಾಯಿದೆ
ಬೇಕಾದಷ್ಟು ಪರಸೆ ಸೇರಿದೆ
ತೇರು ಎಳ್ಕೊಂಡೊಯ್ತಾಯಿದ್ದಾರೆ
ಆ ಟೈಮಿನಲ್ಲಿ
ಯಾವೊನೊ ಒಬ್ಬ
ಮನುಷ್ಯನಿಗೆ ಒಂದು ಸರ್ಪ ಕಡಿದ್ಬುಟ್ಟು
ಅಲ್ಲಿ ಅ ಮನ್ಸ ಸತ್ತೋಗ್ಬುಟ್ಟ
ಯಾವಾಗ ಸರ್ಪ್ನ ಏಟು ಬಿದ್ದ ತಕ್ಷಣ ಮನ್ಸ ಸತ್ತೋದ್ನೋ
ಹೋಯ್ತಾಯಿದ್ದಂಥ ತೇರು ನಿಂತೋಗ್ಬುಡ್ತು
ಆವಾಗ ಪರಮಾತ್ಮ ಊರೆಲ್ಲ ಹಾಗೆ ನಿಂತ್ಬುಡ್ತು
ಮಾಯ್ಕಾರ ಗಂಡ ಮಾದಪ್ಪ
ತಾ ಓಡೋಗಿ ಒಂದು ಬೇಲಿವೊಳಗೆ
ಸೊಪ್ಪು ಕಿತ್ಕೊಂಡು ಬಂದು
ಜನಾವೆಲ್ಲ ಇಕ್ಕಲು ಮಾಡಿಬಿಟ್ಟು
ಅಪ್ಪ ಪ್ರಜೆಗಳೇ ದಾರಿಬಿಡಿ
ಆ ಪ್ರಾಣ ಹೋಗಿರುವಂಥ ಮನ್ಸನ್ನ ನಾ ಪಡಿತೇನಿ ಅಂತ್ಹೇಳಿ
ಆ ಸೊಪ್ಪುನ ರಸ ತಂದು ಅವನ ಬಾಯ್ಗಾಕಿ
ಪ್ರಾಣ ಹೋಗಿರುವಂಥ ಮನ್ಸನ ಏಳಿಸ್ಬುಟ್ರು
ಓಡಿಬಂದು ದೇಶಿಕ ಸ್ವಾಮ್ಗಳು
ಯಾರಪ್ಪ ಮರಿದೇವ್ರೆ ಯಾವ ಕಾಡ್ನವರು
ಅಂತ್ಹೇಳಿ ಮುಂಗೈ ಹಿಡಕಂಡ್ರು
ಗುರುವೇ ಗುರುಪಾದವೇ
ನಾನು ಉತ್ತುರ ದೇಶದ ಮರಿದೇವ್ರು ಅಂದ್ರು
ಆಗ ನನ್ನ ಗುರುಮಠಕ್ಕೆ ಬಾರಪ್ಪ ಅಂತ್ಹೇಳಿ
ಅವರು ಸುತ್ತೂರು ಮಠಕೆ ಕರ್ಕೊಂಡೊಯ್ತಾವರೇ -ಸ್ವಾಮಿಗಳೂs || ನೋಡಿ ನಮ್ಮ ಶಿವನಾ ||

01_81_MM-KUH

ಸುತ್ತೂರು ಮಠಕೆ ಕರ್ಕೊಂಡ್ಹೋಗಿ ಗುರುಸೇವೆ ಮಾಡ್ತಾಮಾಡ್ತಾ

ಮರಿದೇವ್ರೆ ನನ್ನ ಮಠದಲ್ಲಿ ಇದೇ ಒಂದು ಕಾಯಕ ಅಂದ್ರು
ಹೇಳಿಕೊಡಿ ಗುರುವೇ ನಿಮ್ಮ ಕಾಯಕ ಮಾಡ್ತೀನಂದ್ರು
ನೋಡಪ್ಪ ಒಳಗಲ ಅಂಗಳದಲ್ಲಿ
ಮೂರು ಕೊಳಗ ರಾಗಿ ಬೀಸ್ಕೊಡಬೇಕು ದಿನಕ್ಕೊಂದ್ಸಾರಿ ಅಂದ್ರು
ಅಯ್ಯೋ ಗುರುವೇ
ಪ್ರಪಂಚದಲ್ಲಿ ಯಾವ ಕಾಯಕ ಮಾಡಿದರೆ
ದೇವರ್ಗೆ ಅರಿವಾಗುವುದಿಲ್ಲ ಶಿವನ್ಗೆ
ಈ ಕಾಯಕ ಮಾಡಿದರೆ ದೇವರಿಗೆ ಅರಿವಾಗುತ್ತೆ
ಯಾತಕ್ಕೋಸ್ಕರ ಅಂದ್ರೆ
ಇರೆಂಬತ್ತು ಕೋಟಿ ಜೀವರಾಶಿಗಳು
ಊಟ ಮಾಡುವಂಥ ಕಾಯಕ ಇದು
ದಾಸೋಹ ಅಂದರೆ ಈ ರಾಗೀಕಾಯಕ ಬೀಸೋ ಕಾಯಕ
ಮಾಡ್ತೀನಿ ಗುರುವೇ ಅಂತ್ಹೇಳಿ ಮಾಯ್ಕಾರ ಗಂಡ
ಮೂರು ಕೊಳಗ ರಾಗಿ ತುಂಬ್ಕೊಂಡ್ಹೋಗಿ
ಆ ದೊಡ್ಡ ರಾಗೀ ಕಲ್ಲಮ್ಯಾಲೆ ಮಡಗ್ಬುಟ್ಟು
ಕಣ್ಮುಚ್ಕೊಂಡು ಬಾಗ್ಲಲ್ಲಿ ಕೂತ್ಕಂಡು
ನಮ್ಮ ವ್ಯಾಘ್ರಾನಂದ ಸ್ವಾಮಿಗಳ ನೇಮಕವಾಗಿ
ಓಂ ನಮ ಶಿವಾಯ ಓಂ ನಮ ಶಿವಾಯ ಅಂತ್ಹೇಳಿ
ಗುರು ಜಪದಲ್ಲಿ ಕಣ್ಮುಚ್ಕೊಂಡು ಕೂತ್ಕಂಡ್ರು
ಆ ರಾಗೀಕಲ್ಲು ಆಗಿರ್ತಕ್ಕಂತಾದ್ದು ತಾನೇ ಬೀಸ್ತಾಯಿದೆ
ಅಕ್ಕಪಕ್ಕದಲ್ಲಿದ್ರಲ್ಲ ಜಂಗಮರು ನಿಮ್ಮಂತಾವರು
ಓಡಿ ಬಂದು ಬಗ್ಗಿ ನೋಡುದ್ರು
ಆವಾಗ ಗುರುಗಳ ಕರೆದ್ರು
ಗುರುದೇವಾ ಗುರುದೇವಾ ಬನ್ನಿ ಮರಿದೇವ್ರು ಮಾಯ್ಕಾರ
ಯಂತ್ರಗಾರ ಮಂತ್ರಗಾರ
ಉತ್ತುರ ದೇಶದವನಿವನು
ನೋಡ್ಬನ್ನಿ ರಾಗೀಕಲ್ಲು ತಿರುಗ್ತಾದೆ ಅಂತೇಳುದ್ರು
ಆವಾಗ ದೇಶಿಕಸ್ವಾಮಿಗಳು ಬಂದು ನೋಡುದ್ರು
ಇವ್ನು ಸುಮ್ಮನೆ ಮಾಯಾವಿ ಅಲ್ಲಪ್ಪ ಇವನು
ಸಾಮಾನ್ಯದ ಮಾಯಾವಿಯಲ್ಲ
ಮರಿದೇವ್ರೆ ಮೇಲಕ್ಕೇಳಪ್ಪ ಅಂತ್ಹೇಳಿ ಮುಂಗೈ ಹಿಡಕಂಡ್ರು
ಕೈ ಹಿಡಿದ ತಕ್ಷಣ ದೇಶಿಕಸ್ವಾಮಿಗಳಿಗೆ
ಅವರು ಶಿರಬೊಗ್ಗಿ ಶರಣ ಮಾಡವರೇ ಮಾಯ್ಕಾರಾs || ನೋಡಿ ನಮ್ಮ ಶಿವನಾ ||