ಓಡಿ ಬಂದು ಆಂಜನೇಯ ಗುರುಗಳಿಗೆ ನಮಸ್ಕಾರ ಮಾಡಿ
ಗುರುಗಳೇ ಎಲ್ಲಿಗೋಗ್ತಾಯಿದ್ದೀರಿ ಒಬ್ರೇ ನೀವು
ಇಷ್ಟು ಅಂದಾ ಚೆಂದ್ದಾಗಿ ಹೋಗ್ತಾಯಿದ್ದೀರಲ್ಲ
ಎಲ್ಲಿಗೋಗ್ತಾಯಿದ್ದೀರಿ ನಾನು ಬರ್ತೀನಿ ಅಂದರು
ಅಪ್ಪಾ ಆಂಜನೇಯ
ನೀನು ಈ ಕಣಿವೆ ಕಡೆ ಬಾಗಿಲಲ್ಲಿ ಬಂದ್ಬುಡು
ನನ್ನ ಬಡುಗಲ ಪರಸೆ
ಬರುವಂಥವರು ಗುಂಡೇಳು ಕೋಟಿ ಹೆಣ್ಣೇಳು ಕೋಟಿ
ನಿನಗೆ ಧೂಪ ಹಾಕಿ ಮುಂದಕ್ಕೆ ಬರಲಿ
ಇಲ್ಲೇ ಇರಪ್ಪ ಅಂತ್ಹೇಳಿ ಕಣಿವೆಯೊಳಗೆ ಇರ್ಸುಬುಟ್ಟು
ಎರಡನೇ ಗುರುಜಿಲ್ಲೆ ಮಾಳ ದಾಟ್ಕೊಂಡು

ಅವರು ಸಲಾಂನ ಬ್ವಾರೆಗಣೆ ಹೊಯ್ತಾವರೇs ಮಹದೇವಾs || ನೋಡಿ ನಮ್ಮ ಶಿವನಾ ||

ಸಲಾಂನ ಬ್ವಾರೇಲಿ ನಿಂತ್ಕೊಂಡು ಮಾದಪ್ಪ
ಮೂಡ್ಲು ಮನೆ ಆನಂದ ನೋಡುದ್ರು
ಅಲ್ಲಿಗೆ ಹತ್ತಿರವಾಗ್ತದೆ ಮಲೆ
ಯಾವದಪ್ಪ ಅಂದ್ರೆ ಎಪ್ಪತೇಳು ಮಲೆ
ಆವಾಗಲೀಗ ಸಲಾಂನ ಬ್ವಾರೆಯನ್ನು ಇಳಿದು
ಉಳುದೋರೆ ಹಳ್ಳವನ್ನ ಕಡದು
ಮಾದೇವ ಮಾಯ್ಕಾರಗಂಡ ಬೂದಿಮುಚ್ಚಿದ ಕೆಂಡ
ಲಿಂಗದ ಮೊರೆತ ಜಂಗಿನ ಶಬ್ದ
ಕಂಚಿನ ಕಂಸಾಳಿ ಶಬ್ಧ ಮಾಡಿಕೊಂಡು

ಅವರು ಕೌದಳ್ಳಿ ಬಾಗಿಲಿಗೆ ಬರುತಾವ್ರೆ ಮಹದೇವಾs || ನೋಡಿ ನಮ್ಮ ಶಿವನಾ ||

ಕೌದಳ್ಳಿ ರಾಡು ಬಾಗಿಲಿಗೆ ಬರುವಂಥ ಕಾಲ್ದಲ್ಲಿ
ಕೊದಳ್ಳಿವೊಳುಗೆ ಇಬ್ಬರು ಮಾರಿಯರಿದ್ದಾರೆ
ಯಾರಪ್ಪ ಅಂದ್ರೆ ಮೂಗುಮಾರಿ ಕಿವುಡುಮಾರಿ
ಅಕ್ಕಾ ತಂಗೀರು ಇಬ್ಬರೂ ನಿಂತ್ಕೊಂಡು ನೋಡುದ್ರು
ಅಕ್ಕಯ್ಯಾ ಯಾರೋ ಒಬ್ಬ ಜಂಗಮರು ಬತ್ತಾವ್ರೆ
ಕೆಂಪಗೆ ತೊಂಡೆ ಹಣ್ಣಿನಾಗಿದ್ದಾರೆ
ನಾ ನುಂಗಿಬಿಡ್ತೀನಿ ಅಂತ್ಹೇಳಿ ಕಿವುಡುಮಾರಿ
ಮೂಗುಮಾರಿ ನಾ ನುಂಗ್ತೀನಿ ಕಣಕ್ಕಯ್ಯ ಅಂತ
ಇಬ್ಬರೂ ಕೂಡ ನಿಂತ್ಕಂಡು ಮಾರೀರು ರಾಡ್ ಬಾಗ್ಲಲ್ಲಿ

ಅವರು ಉರುಗಣ್ಣ ಬಿಟ್ಟು ನೋಡವರೇ ಮಾರಮ್ಮ || ನೋಡಿ ನಮ್ಮ ಶಿವನಾ ||

ಉರಿಗಣ್ಣ ಬಿಟ್ಕೊಂಡು ಬಾಯ್ಬಿಟ್ಕೊಂಡು ನಿಂತಿದ್ದಾರೆ ಮಾರೀರು
ಮಾಯ್ಕಾರ ಗಂಡ ಮಾದಪ್ಪ
ಯಾರೋ ಕೆಟ್ಟು ಮುಂಡೇರು
ಇಬ್ಬರು ಮಾರೀರು ನಿಂತ್ಕೊಂಡು ನೋಡ್ತಾಯಿದ್ದಾರ‍ೆ
ಇವರ ಶಕ್ತಿ ನನ್ನ ಶಕ್ತಿ ನಾನು ರೋರಿಸಬೇಕಂತ್ಹೇಳಿ
ಮುತ್ತಿನ ಜೋಳಿಗೆಯಿಂದ ಮಾದಪ್ಪ
ಏಳುಮಲೆ ಭಸುಮಾ ತಗದು ಅಂಗೈಮ್ಯಾಲಿಟ್ಕೊಂಡು
ನಮ್ಮಪ್ಪ ಶಿವಪ್ಪ
ನನಗೆ ವಿದ್ಯಾಬುದ್ಧಿ ಕಲಿಸಿದಂಥ ಗುರುವೇ
ಶಾಂತಮಲ್ಲಿಕಾರ್ಜುನ ಸ್ವಾಮಿ ಅಂತ್ಹೇಳಿ

ಅವರು ಬಸ್ಮ ಉರುಬರೇ ಮಹದೇವಾs || ನೋಡಿ ನಮ್ಮ ಶಿವನಾ ||

ಯಾವಾಗ ಬಸವಣ್ಣನ ಹೆಸರೇಳಿ ಬಸುವಂಗ ಉರುಬಿದರೋ
ಆ ಮಾರಿರಾಗಿರ್ತಕ್ಕಂಥವರಿಗೇ
ಮೈಕೈಯೆಲ್ಲ ಉರೀ ಬಂದ್ಬುಡ್ತು
ಅವರು ಟಮ್ಮ ಟುಮ್ಮನೆ ಕುಣಿದವರೇ – ಮಾರಮ್ಮ || ನೋಡಿ ನಮ್ಮ ಶಿವನಾ ||

ಟಮ್ಮಾ ಟಮ್ಮನೆ ಕುಣ್ಕಂಡು ಇಬ್ಬರು ಮಾರೀರುವೆ
ಮಾದಪ್ಪನಿಗೆ ದೀರ್ಘದಂಡ ನಮಸ್ಕಾರ ಮಾಡ್ತಾಯಿದ್ದಾರೆ
ಅಪ್ಪಾ ಗುರುದೇವಾ
ನಿಮ್ಮ ಇಂಥ ಉರಿಗಣ್ಣ
ಕೆಚ್ಚುಗಣ್ಣ ಕಿಡಿಗಣ್ಣ ಎಂಬುದು ಗೊತ್ತಿಲ್ಲ
ನಮ್ಮ ಉರಿ ತಕ್ಕೊಂಡು ತಂಪು ಕೊಡಪ್ಪ
ನೀವು ಹೇಳಿದ ಮಾತು ಕೇಳ್ತೀವಿ ಅಂದ್ರು
ಏನಮ್ಮ ಮಾರೀರೇ
ನನ್ನನ್ನು ನುಂಗಬೇಕು ಅಂತ ಬೇರೆ ಬಂದಿದ್ದೀರಿ
ನನ್ನನ್ನು ನೀವು ನುಂಗುವುದಕ್ಕೆ ಸಾಧ್ಯವಿಲ್ಲ
ನಾನು ಹೇಳಿದ ಮಾತು ಕೇಳಬೇಕು ಅಂದ್ರು
ಕೇಳ್ತೀನಿ ಗುರುವೇ ಅಂತ್ಹೇಳಿ ಕೈಮುಗುದ್ರು
ಎಲಾ ಮೂಗುಮಾರಮ್ಮ
ನೀನು ತಾಳು ಬೆಟ್ಟಕ್ಕೆ ನಡೀ
ಒಂಭತ್ತು ಮೈಲಿ ದೂರ
ತಾಳು ಬೆಟ್ಟದಲ್ಹೋಗಿ ಕೂತ್ಕೊ
ನಾನು ಬಂದು ನಿನಗೆ ಬುದ್ಧಿವಾದ ಹೇಳ್ತೀನಿ ಅಂತ್ಹೇಳಿ
ತಾಳುಬೆಟ್ಟಕ್ಕೆ ಮೂಗುಮಾರಿ ಕಳಿಸ್ಬುಟ್ರು
ಈ ಕಿವುಡು ಮಾರಿ ಕರೆದ್ರು
ಅಮ್ಮಾ ಕಿವುಡುಮಾರಿ
ಈ ಕೌದಳ್ಳಿ ಬೀದಿವೊಳುಗೆ ನೀನು ಕಾವಲಾಗಿರು
ಮೈಸೂರು ಮೇಲ್ನಾಡಿನ ಹೆಣ್ಣೇಳುಕೋಟಿ ಗಂಡೇಳುಕೋಟಿ ಪರುಸೆ
ನನ್ನ ಏಳು ಮಲೆ ಕೈಲಾಸಕ್ಕೆ ಬರ್ತರೆ
ಅಮವಾಸ್ಯೆ ಒಂದಿನ ಅಂತ್ಹೇಳಿ
ಕಾಸಿನ ಧೂಪಾಹಾಕಿ ಕರವೆತ್ತು ಕೈಮುಗಿದು
ಒಂದೇ ಮನಸ್ನಲ್ಲಿ ಒಂದೇ ಜ್ಞಾನದಲ್ಲಿ ಹೋದರೆ ಸರಿಯಯ್ತು
ಏನಾರು ಒಂದು ಮನ್ಸ್ ಎರಡು ಮನ್ಸ್ ಮಾಡಿದವರಿಗೆ
ಹಿಂದುಗುಂಟ ಹೋಗಿ ಅವರ ಗ್ರಾಮ್ದಲ್ಲಿ

ನೀನು ಕರಿಯ ಗ್ವಾರ‍ದ ಮಾರಿಯಾಗು ಅಂತವರೇ ಮಹದೇವಾs|| ನೋಡಿ ನಮ್ಮ ಶಿವನ ||

ಕರಿಯಾಗ್ವಾರದ ಮಾರಿಯಾಗ್ಹೋಗಿ

ನೀನು ಅಂಬಿಗ್ವಾರಗ್ವಾರವ ಕೊಟ್ಟು
ಅವರಿಗೆ ಕಷ್ಟ ಕೊಟ್ಬುಡಮ್ಮ
ಇಲ್ಲಿ ಕಾವಲಾಗಿರು ಅಂತ್ಹೇಳಿ ಕೌದಳ್ಲಿ ಬೀದಿವೊಳುಗೆ
ಅ ಕಿವುಡುಮಾರಿ ಉಳಿಸಿಬಿಟ್ಟು ಮಾದಪ್ಪ
ಕೌದಳ್ಳಿ ಬೀದಿಯನ್ನ ಬಿಟ್ಟು ಅವರು
ಆವಾಗ ಗಾಣಗನಕಟ್ಟೆ ದಿಬ್ಬವನ್ನು ದಾಟ್ಕೊಂಡು

ಅವರು ಸಂತೇಕಾನಿ ಹಳ್ಳಗಣೆ ಹೊರಟವರೇs ಮಾಯ್ಕಾರಾs || ನೋಡಿ ನಮ್ಮ ಶಿವನಾ ||

ಒಂದೊಂದು ಪಾದಾ
ಗುರುವೇ ಒಂದೊಂದು ಪಾದಾ
ಒಂದೊಂದು ಪಾದಾದ ಮುಂದೆ ಮಾದೇವರ ಪಾದಾ

ಸಂತೇಕಾನಿ ಹಳ್ಳ ಅಂದರೆ
ಆವಾಗ ಅಲ್ಲಿ ಇರ್ತಕ್ಕಂತಾವ್ರು ಸುತ್ತಾಮುತ್ಲಾವ್ರು
ಕುರಟಿ ಹೊಸೂರಿನವರು
ಇದುವಲ್ದೇ ನಾಯನೆತ್ತ ಕೆಂಪಯ್ನ ದೊಡ್ಡಿಯೆಲ್ಲ ಸೇರ್ಕಂಡು
ಅಲ್ಲಿ ಸಂತೆ ಕಟ್ಟತಾಯಿದ್ರು
ವಾರಕ್ಕೊಂಡು ಸಾರಿ ದನಿನ ಯಾಪಾರ ಮಾಡ್ಕಂಡ್ರು
ಮಾದಪ್ಪ
ಯಾವ ಕಾಲ್ದಲ್ಲಿ ನೀರಿಲ್ಲದಿದ್ದರೂವೆ
ಸರ್ವಮುನ್ನೂರು ಕಾಲ ಈ ಸಂತೇಕಾನಿ ಹಳ್ಳದಲ್ಲಿ
ನನ್ನ ಬರುವಂತ ಪರುಸೆಗೆ ಜಲ ಸಿಕ್ಕಲಿ ಅಂತ್ಹೇಳಿ
ಅ ಸಂತೇಕಾನಿ ಹಳ್ಳದಲ್ಲಿ ವರ ಕೊಟ್ಬುಟ್ಟು ಮಾದಪ್ಪ

ಅವರು ಮುಂದಕೆ ದಯಮಾಡವರೇ ಜಗದೊಡೆಯಾs || ನೋಡಿ ನಮ್ಮ ಶಿವನಾ ||

ಸಂತೇಕಾನಿ ಹಳ್ಳವನ್ನೇ ಬಿಟ್ಕೊಂಡು ಮೈಲಿದೂರ ಹೋದ್ರು
ಅಲ್ಲಿ ಒಡಕೆ ಹಳ್ಳವಿದೆ
ಒಡಕೆ ಹಳ್ಳದಲ್ಲಿ
ಬಿದರಕ್ಕಿ ಹಲಗೇಗೌಡ ಅಂತ್ಹೇಳಿ
ಹಿಂದಿನ ಕಾಲದ ಮನಸ
ಧರ್ಮದ ಬಡ್ಡಿಯಲ್ಲಿ
ಸಾಲ ಕೊಟ್ಕಂಡು
ಹೊನ್ನು ಬಂಗಾರ‍ಸಂಪಾದ್ನೆ ಮಾಡ್ಕಂಡು
ಎರಡು ಗಡಿಗೆ ಹೊನ್ನು ತುಂಬ್ಕಂಡು
ಆ ಬಿದಿರಕ್ಕಿ ಹಲಗೇಗೌಡನಿಗೆ ಒಬ್ಬಳೇ ಮಗಳಿದ್ದಾಳೆ
ಯಾರಪ್ಪ ಅಂದರೆ ಹೊನ್ನುಣ್ಸೆ ಕಾಳಮ್ಮ
ಆ ಹೊನ್ಸುಣ್ಸೆ ಕಾಳಮ್ಮನಿಗೆ
ಅ ಕೆಂಪಯ್ಯ ಹಟ್ಟಿವೊಳಗ್ಹೋಗಿ
ಒಬ್ಬ ಓರ್ವ ಸುಪುತ್ರ
ಒಳ್ಳೆ ಕುಮಾರನಾಗಿರ್ತಕ್ಕಂತಾವ್ನು
ಕೆಂಡೇಗೌಡ ಅಂತ್ಹೇಳಿ ಹುಡುಗನ್ನ ಎಳಕೊಂಡು ಬಂದು
ಕಾಳಮ್ಮನಿಗೆ ಲಗ್ನ ಮಾಡ್ಕಂಡು

ಅಲ್ಲಿ ಕಾಲ ಮಾಡವ್ನೆ – ಕೆಂಡಯ್ಯಾ  || ನೋಡಿ ನಮ್ಮ ಶಿವನಾ ||

ಆದರೆ ಕಾಲ ಮಾಡ್ಕಂಡಿದ್ರು
ಬಿದಿರಕ್ಕಿ ಹಲಗೇಗೌಡ
ಮಗಳಿಗೆ ಹೇಳ್ತಾಯಿದ್ರು
ಕಾಳಮ್ಮ
ಒಂದು ಗಡಿಗೆ ಹೊನ್ನು ಒಂದು ಗಡಿಗೆ ಬಂಗಾರ ಮಡಿಗಿವ್ನಿ
ಕೊಡ್ತೀನು ಮಗಳೆ ನಿನಗೆ
ನಿನಗೆ ಅಲ್ಲದಿದ್ದರೆ ಮತ್ಯಾರಿಗೂ ಕೊಡುವುದಿಲ್ಲ ಅಂತ ಹೇಳ್ತಾಯಿದ್ದ
ಅಂದರೆ ಮಡಗಿರುವಂಥ ಜಾಗ ತೋರ್ನಿಲ್ಲ
ಯಾರು? ಬಿದಿರಕ್ಕಿ ಹಲಗೇಗೌಡ
ಆವಾಗ ಹಲಗೇಗೌಡ ತಂದೆ ಸೊತ್ತೋಗ್ಬುಟ್ಟ
ಕಾಳಮ್ಮನಿಗೆ ಹೊನ್ನು ಬಂಗಾರ ಸಿನಿಲ್ಲ
ಏಳು ಜನ ಗಂಡು ಮಕ್ಕಳು ಹುಟ್ಟುದ್ರು
ಆ ಕಾಳಮ್ಮನಿಗೆ ಗಂಡನಾದ ಕೆಂಡೇಗೌಡನಿಗೆ
ಆ ಒಡಿಕೆ ಹಳ್ಳದಲ್ಲಿ ಕ್ಷಾಮಗಾಲ ಬಂದ್ಬುಡ್ತು ಮಳಿಲ್ದೇನೆ
ಬಾಳ ಕಷ್ಟದಲ್ಲಿ ಕಾಳಮ್ಮನಿಗೆ
ಮಕ್ಕಳಿಗೆ ಉಡುವುದಕ್ಕೆ ಬಟ್ಟೆಯಿಲ್ಲ ಉಣ್ಣುವುದಕ್ಕೆ ಅನ್ನವಿಲ್ಲ
ಗಂಡನಾದ ಕೆಂಡೇಗೌಡನಿಗೆ
ಒಡಿಕೆ ಹುಲ್ಲು ಒಡದಾರವಾಗಿದೆ
ಅಡಿಕೆ ಎಲೆ ಲಂಗೋಟಾಗಿದೆ
ಕಾಳಮ್ಮ ಕೌದಳ್ಳಿ ಬೀದಿವೊಳುಗೆ ಬಂದು
ಕ್ವಾಮಟಗೇರಿವೊಳಗೆ
ರಜಾಹೊಡೆದು ರಂಗಾಲೆ ಬಿಟ್ಕಂಡು
ಅವರ ಮನೆ ಚಾಕರಿ ಮಾಡ್ಕಂಡು
ಬೇವಿನಕಾಯಿ ಗಾತ್ರ ಹಿಟ್ಕೊಟ್ರೆ ನಿಂತಹಾಗೆ ಕಡಕೊಂಡು
ಮಕ್ಕಳಿಗೆಲ್ಲ ಸಪ್ಪೆ ಸೊಪ್ಪಿನ ನೀರ ಅಂಬಲಿ ಕಾಯಿಸ್ಕೊಂಡು
ಹಲಗೇಗೌಡ ತಂದೆ ಕಟ್ಟಿದಂತ ಹಟ್ಟಿ ಹಾಳಾಗ್ಬುಡ್ತು
ಆದರೆ ಒಂದಂಕಣ ಸೊಪ್ಪಿನ ಗುಡ್ಲ ಹಾಕ್ಕೊಂಡು
ಗಂಡ ಹೆಂಡಿರು ಇಬ್ಬರೂವೆ
ಒಂದೊರೆ ಸೌದೆ ಆಯ್ಕೊಂಡು
ಒಂದೊರೆ ಹುಲ್ಲು ಕುಯ್ಕಂಡ್ಹೋಗಿ
ಕೌದಳ್ಳಿ ಕ್ವಾಮಟಗೇರಿವೊಳಗೆ ಬೀದೀಲಿ
ಮೂರುದುಡ್ಡಿಗೆ ಮಾರ್ಬುಟ್ಟು
ಮೂರು ಕಾಸಿನ ಉಪ್ಪು ತಕ್ಕೊಂಡು
ಕಾಳಮ್ಮ ಬಂದು
ಒಂದು ಬಿಡಿಗಾಸ ಹರಿಶಿನದ ಬಟ್ಟೆಯಲ್ಲಿ ಕಟ್ತಾಯಿದ್ದಳು
ಯಾವ ದೇವರು ನನ್ನ ಕಷ್ಟ ಕಾಯ್ನಿಲ್ಲ
ಬಡಸ್ಥಾನ ಬಯಲುಮಾಡ್ನಿಲ್ಲ
ನನಗೆ ಸಿರಿಸಂಪತ್ತು ಕೊಡ್ಲಿಲ್ಲ
ನನ್ನ ಮನೆದೇವ್ರು ಕುಲದೇವ್ರು ಕೊಡ
ಪಟ್ಟದರಂಗಸ್ವಾಮಿ ಮೇಲ್ಕೋಟೆ ಚೆಲುವರಾಯ
ಇವರೂ ನನ್ನ ಕಷ್ಟ ಕಾಯ್ನಿಲ್ಲ
ನನ್ನ ಕಷ್ಟ ಕಾದಂಥ ದೇವರಿಗೆ ಕಾಣಿಕೆ ಅಂತ್ಹೇಳಿ
ಒಂದು ಬಿಡಿಗಾಸು ಕಟ್ಕೊಂಡು ಕಾಳಮ್ಮ
ಒಂದಂಕಣ ಸೊಪ್ಪಿನ ಗುಡ್ಲಲ್ಲಿ

ಅಲ್ಲಿ ಕಾಲ ಮಾಡವಳೇs ಕಾಳಮ್ಮಾs || ನೋಡಿ ನಮ್ಮ ಶಿವನಾ ||

ಆವಾಗ ನನ್ನಪ್ಪಾಜಿಯವರು
ಅಖಂಡ ಮಹಿಮ ಅಲ್ಲಮಪ್ರಭು
ಮುತ್ತಿನ ಜೋಳಿಗೆ ಮುಂಗೈಲಿ ಧರಿಸ್ಕೊಂಡು
ಕಂಚಿನ ಕಂಸಾಳೆ ಶಬ್ದ ಮಾಡ್ಕಂಡು
ಬಲಗೈಲಿ ದಂಡಗೋಲು ಹಿಡ್ಕೊಂಡು ಹೋಗ್ತಾಯಿದ್ರು
ಕಾಳಮ್ಮ ಸೊಪ್ಪಿನ ಗುಡ್ಲಿಯಿಂದಾಚೆ ಓಡ್ಬಂದಳು
ಯಾರೋ ಜಂಗುಮರು ಬತ್ತಾವ್ರೆ
ಕಾವಿ ಬಟ್ಟೆ ಜಂಗುಮರು
ಅವರ ಜೋಳಿಗೆಯಲ್ಲಿ ಏನಾದರೂ
ದವಸ ಧಾನ್ಯಯಿದ್ದರೆ ಈಸ್ಕೊಂಡು
ನನ್ನ ಮಕ್ಕಳಿಗೆ ಗಂಜಿ ಕಾಯಿಸಿ ಕೊಡೋಣ ಅಂತ್ಹೇಳಿ
ಹೊರಗಡೆ ಬಂದು ನಿಂತ್ಕಂಡು ನೋಡ್ತಾಯಿದ್ದಳು
ಮಹದೇಶ್ವರ ಹತ್ತಿರ ಬಂದ್ರು
ಬಂದ ತಕ್ಷಣವೇ
ಕಾಳಮ್ಮ ಏನೂ ಕೇಳ್ನಿಲ್ಲ ಓಡ್ಹೋಗಿ

ಅವಳು ಬಾಚಿ ತಬ್ಬವಳೇ ಮಾದೇವರಾs || ನೋಡಿ ನಮ್ಮ ಶಿವನಾ ||

ವೀರಯ್ಯ ಶರಣೂ
ವೀರು ಭದ್ರಯ್ಯ ಶರಣೂ
ಅಯ್ಯಯ್ಯಾ ಶರಣು ಬೆಟ್ಟದಮಾದಪ್ಪ ಶರಣೂ

ಗುರುವೇ ಗುರುಪಾದವೇ ನನ್ನಪ್ಪಾಜಿ
ಯಾವ ನಾಡಿನವರಪ್ಪ ಗುರುಗಳೇ
ನಿಮ್ಮ ಹೆಸರು ಕುಲ ಒಂದೂ ಗೊತ್ತಿಲ್ಲ
ನಾನು ಅನ್ನಕ್ಕೆ ಆರುಬಟ್ಟೆಯಾಗಿ ಚಿನ್ನಕ್ಕೆ ಮೂರ್ಬಟ್ಟೆಯಾಗಿದ್ದೀನಿ
ನನ್ನ ಮಕ್ಕಳಿಗೆ ಕುಡಿಯುವುದಕ್ಕೆ ಅಂಬಲಿ ಇಲ್ಲ
ಉಡುವುದಕ್ಕೆ ಬಟ್ಟೆಯಿಲ್ಲ
ನನ್ನ ಬಡಸ್ಥಾನ ಬಯಲುಮಾಡಪ್ಪ
ಇಲ್ಲವಾದರೆ ನಿಮ್ಮ ಜೋಳಿಗೆವೊಳುಗೆ
ಏನಾದರೂ ಇದ್ದರೆ ಕೊಡಪ್ಪ
ಊಟ ಮಾಡ್ತೀನಿ ಅಂದಳು
ಕಾಳಮ್ಮನ ಮಾತ ಕೇಳಿ
ಮಾದಪ್ಪನಿಗೆ ಹೊಟ್ಟೆ ಕಳ್ಳು ಚುರುಕ್ ಅಂದ್ಬುಡ್ತು
ಆಕಾಶ ಅಂತುನೋಡಿ ಭೂಮಿತಾಯಿ ಬಗ್ಗಿನೋಡಿದ್ರು
ಇಂಥಾ ಭಕ್ತರಿಗೆ ಭಾಗ್ಯ ಕೊಟ್ಟೋಗಬೇಕು

ಅಯ್ಯೋ ಅಂದವರಿಗೆ ಅಂತ್ಹೇಳಿ ಮಾದಪ್ಪ
ತಮ್ಮ ದಿವ್ಯಾದೃಷ್ಟಿಯಿಂದ ನೋಡಿದ್ರು
ಅವರಪ್ಪ ತಂದೆ ಬಿದಿರಕ್ಕಿ ಹಲಗೇಗೌಡ
ಮಡಗಿದ್ದಂಥ ಹೊನ್ನು ಬಂಗಾರ ಕಾಣಿಸ್ಬುಡ್ತು ಮಾದಪ್ಪನಿಗೆ
ಬಾರವ್ವ ಕಂದಾ
ನನ್ನ ಜೋಳಿಗೆವೊಳಗೆ ನನ್ನ ಬಸ್ಮ ಮಡಗಿದ್ದೀನಿ
ಧವಸ ಧಾನ್ಯವಿಲ್ಲ
ನಿನಗೆ ಭಾಗ್ಯಕೊಡ್ತೀನಿ ಅಂತ್ಹೇಳಿ
ಅ ಕೋಡು ಬಂಡೆಯನ್ನು ಮಾದಪ್ಪ
ಉರಿಗಣ್ಣು ಕಿರುಗಣ್ಣು ಬಿಟ್ಟು
ಎರಡು ಭಾಗ ಮಾಡಿ
ಎರಡು ಗಡಿಗೆ ಹೊನ್ನು ಬಂಗಾರ ತೋರುದ್ರು
ಕಂದಾ ಕಾಳಮ್ಮ
ಈ ಹೊನ್ನು ಬಂಗಾರದಿಂದ
ಬದುಕಿ ಭಾಗ್ಯವಂತಳಾಗವ್ವ ಅಂತ್ಹೇಳಿ ಎತ್ತುಗೋ ಅಂದ್ರು
ಗಂಡನಾದ ಕೆಂಡೇಗೌಡ ಕಾಳಮ್ಮ
ಒಂದೊಂದು ಗಡಿಗೆ ಎತ್ಕೊಂಡ್ರು
ಕಾಳಮ್ಮ ಹೇಳ್ತಳೆ ಬಾ ಗುರುವೇ
ನಿನ್ನ ಹೆಸರೇನಪ್ಪಾ ಅಂದ್ರು
ನಾನು ಉತ್ತುರದೇಶದ ಮಹದೇವಾ ಅಂದ್ರು
ಮಾದಪ್ಪ ನೀವು ಎಲ್ಲಿ ಹೋಗಿ ನೆಲೆಗೊಂಡ್ತಾಯಿದ್ದೀರಿ
ಅಲ್ಲಿಗೆ ನಾನು ಒಕ್ಕಲಾಗುತ್ತೀನಿ
ನನಗೆ ಹುಟ್ಟಿದ ಮಕ್ಕಳಿಗೆಲ್ಲ ನಿನ್ನ ಹೆಸರು ಕರೀತೀನಿ
ಬಿತ್ತಿದ ಬೆಳೇಲಿ ಸರಿಪಾಲು ಕೊಡ್ತೀನಿಕನಪ್ಪ
ತಿಂಗಾತಿಂಗಳಿಗೆ ಕಂಡುಗ ಧೂಪ ತಂದು
ನಿಮ್ಮ ಕೊಂಡದ ಗುಳಿಗೆ ಧೂಪ ಹಾಕ್ತೀನಿ
ಈ ಋಣ ಎಂದಿಗೆ ತೀರಿಸಲಪ್ಪ ಅಂದಳು
ಕಾಳಮ್ಮ ನೀನು ನನ್ನ ಋಣ ತೀರಿಸಬೇಡ
ನಾನು ಇನ್ನು ಮುಂದೆ ಕಾಲಾನಂತರ ಅಂದು
ನಿನ್ನಲ್ಲಿ ಭಿಕ್ಷಾ ಬೇಡಿ ಋಣಾ ತೀರಸ್ಕೊತೀನಿ ಮಗಳೇ
ಭಾಗ್ಯವಂತಳಾಗು ಅಂತ್ಹೇಳಿ
ಮಾದಪ್ಪ ಆಶೀರ್ವಾದ ಮಾಡ್ಬುಟ್ಟು

ಅವರು ಏಳುಮಲೆಗೆ ದಯಮಾಡವರೇ ಮಹದೇವಾs || ನೋಡಿ ನಮ್ಮ ಶಿವನಾ ||

ಒಡಕೇ ಹಳ್ಳವನ್ನು ಬಿಟ್ಟು ಮಾದಪ್ಪ
ತಾಳುಬೆಟ್ಟಕ್ಕೋದ್ರು ನಾಲ್ಕು ಮೈಲಿ ದೂರ
ತಾಳು ಬೆಟ್ದಲ್ಲಿ ಮೂಕಳ್ಳಿ ಮಾರಮ್ಮ ಕಾದುಕೂತವಳೆ
ಇನ್ನು ಮುಂದೆ ಹೋಗುವುದಕ್ಕೆ ಜಾಗವಿಲ್ಲ ಅವರಿಗೆ
ಆ ತಾಳುಬೆಟ್ಟಕ್ಕೋದ್ರು
ಮಾದಪ್ಪ ನಾಲ್ಕಾರು ದಿಕ್ಕು ನೋಡುದ್ರು
ಆನುಮಲೆ ಜೇನುಮಲೆ ಗುಂಜಿಮಲೆ
ಗುರುಗಂಜಿಮಲೆ ಗುತ್ತಿಮಲೆ
ತುಂಬಿದಮಲೆ ತುಳಸೀಮಲೆ
ಜಾರುವಮಲೆ ನಾಗುಮಲೆ ನಡುಮಲೆ
ಎಪ್ಪತ್ತೇಳುಮಲೆ ಆನಂದ ನೋಡುದ್ರು
ಆವಾಗ ಮೂಗು ಮಾರಮ್ನ ಕರುದ್ರು
ಕಂದಾ ಮಾರಮ್ಮ
ಇನ್ನು ಮುಂದೆ ಕಲಿಯುಗದಲ್ಲಿ
ನನ್ನ ಮೈಸೂರು ಮೇಲ್ನಾಡಿನವರು
ಏಳುಮಲೆ ಕೈಲಾಸಕ್ಕೆ ಹೆಣ್ಣೇಳು ಕೋಟಿ ಗಂಡೇಳು ಕೋಟಿ ಬರ್ತರೆ
ಬರುವಂಥಾ ಪರುಸೆ ಗಣಂಗಳು
ತಂಗಳನ್ನ ತಿಂದು ತಣ್ಣೀರು ಕುಡ್ದು
ಅಸ್ಸೋ ಉಸ್ಸೋ ಅಂತ್ಹೇಳಿ ಬಂದು
ಹತ್ತಲಾರದೇಯಿರವರು ಇಲ್ಲಿ ತಂಗ್ತರೇ ಕಂದಾ
ಆದರೆ ಬಂದಂಥ ಪರುಸೆ ಗಣಂಗಳ
ನೀನು ಕಣ್ಣಲ್ಲಿ ಕಾವಲಾಗಿ ಕಾಯಬೇಕು
ಒಂದು ಹಾವು ಅಲ್ಲಿ ಕಾಣಬಾರದು
ಹಕ್ಕಿ ಪಕ್ಷಿ ಕಾಣಬಾರದು
ಗೊದ್ದ ಗೋಸುಂಬೆ ಏನೂ ಕಾಣಬಾರದು
ಒಂದು ಕಾಡು ಮೃಗ ಜಾತಿ
ಹುಲಿ ಚಿರತೆ ಆನೆ ಯಾಮ್ದೂ ಕಾಣಬಾರದು
ಅ ರೀತಿಯಾಗಿ
ನೀನು ಮೂಗು ಮಾರಿಯಲ್ಲ
ಮೂರು ಕಣ್ಣಿನ ಮಾರಿ ಮೂಕಳ್ಳಿ ಮಾರಮ್ಮನಾಗಿ

ನೀನು ಕಾದು ಕುಂತಿರು ಅಂತವರೇ ಮಹದೇವಾs || ನೋಡಿ ನಮ್ಮ ಶಿವನಾ ||

ನೋಡು ಕಂದ ಮೂಕಳ್ಳಿ ಮಾರಮ್ಮ
ಬಂದಂಥ ಪರುಸೆ ಗಣಂಗಳು ನಿನಗೆ ಧೂಪ ಹಾಕ್ತರೆ
ನಾನು ಅಖಂಡ ಮಹಿಮನಾಗಬೇಕು
ಯಾರ ಕಣ್ಣಿಗೂ ಗೋಚರವಾಗುವುದಿಲ್ಲ
ಆದರೆ ನನ್ನ ಗುರುಗಳು ಪತ್ತೆ ಮಾಡ್ಕಂಡು ಬರಬಹುದು
ಅಂಥಾ ಜಾಗ್ದಲ್ಲಿ ಹೋಗಿ ನಾನು
ಏಕವಾಗಿ ನೆಲೆಗೊಂಡಬೇಕು
ತಪಸ್ಸು ಮಾಡಬೇಕು
ಇನ್ನು ಮುಂದೆ ಯಾರಿದ್ದಾರೆ
ಕಾಡು ಜನಗಳು
ಬೇಡಗಂಪಣದವರ ನೋಡಬೇಕಂತ್ಹೇಳಿ
ಮಾದಪ್ಪ ತಾಳುಬೆಟ್ಟವನ್ನು ಬಿಟ್ಟು
ಅವರು ಇಂಬೀಮೆಳೆ ಒಡ್ದ ಹತ್ತವರೇ ಮಾದೇವಾs  || ನೋಡಿ ನಮ್ಮ ಶಿವನಾ ||

ಇಂಬೀಮೆಳೆ ಒಡ್ನಲ್ಲಿ ನಿಂತ್ಕಂಡು ಮಾದೇವ
ನಾಲ್ಕು ದಿಕ್ಕನ್ನೆ ನೋಡಿದ್ರು
ಬಡಗಾಲ ನೋಡಿರು ಪೊನ್ನಾಚಿ ಬೆಟ್ಟಕಾಣಿಸ್ತು
ಪಡೂಲಾಗಿ ನೋಡುದ್ರು
ಇನ್ನೂ ಕೂಡ ಬೆಟ್ಟದ ಚಾಮುಂಡೇಶ್ವರಿ
ಶಾಂತಮಲ್ಲಿಕಾರ್ಜುನಸ್ವಾಮಿ
ಪ್ರಭುದೇವರು ಬೆಟ್ಟ ಕಾಣ್ತಾ ಅದೆ
ತೆಂಕಲಾಗಿ ತಿರುಗಿ ನೋಡುದ್ರು
ಎಪ್ಪತ್ತೇಳು ಮಲೆ ಅನಂದವಾದ ಮಲೆ
ಕಂಬದ ಬೋಳಿ ತವಸರೆ ಬೆಟ್ಟನೋಡಿದ್ರು
ಮೂಡ್ಲಾಗಿ ತಿರುಗಿ ನೋಡಿದ್ರು ಮಾದಪ್ಪ
ಎಪ್ಪತ್ತೇಳುಮಲೆ ಆನಂದ ನೋಡುದ್ರು

ಮಲೆಯಲಿ ಮಾದೇವ ಬರುವ ಚೆಂದಾವಾ
ನೋಡಿ ನಮ್ಮ ಶಿವನಾ

ಮಾಯ್ಕಾರ ಗಂಡಾ ಮಾದೇಸ್ವುರಾ
ಮೂಡಲಾಗಿ ನಿಂತುಕೊಂಡು
ಎಪ್ಪತ್ತೇಳು ಮಲೆ ಆನಂದವನ್ನು ನೋಡಿ
ನನಗೆ ತಕ್ಕಂಥ ಮಲೆಗ್ಹೋಗಬೇಕು ಅಂತೇಳಿ

ಅವರು ಶಸ್ತ್ರಗಡಿಮೆ ಒಡ್ಡಿಗೆ ಬಂದವರೇ ಮಹದೇವಾs || ನೋಡಿ ನಮ್ಮ ಶಿವನಾ ||

ಶಸ್ತ್ರಗಡಿಮೆ ಒಡ್ನಲ್ಲಿ ನಿಂತ್ಕಂಡು
ಎಪ್ಪತ್ತೇಳು ಮಲೆ ಆನಂದವನ್ನು ನೋಡುತಾಯಿದ್ದಾರೆ
ಆ ಟೈಮಿಗೆ ಸರಿಯಾಗಿ ಹನ್ನೆರಡು ಗಂಟೆಯಾಗಿದೆ
ಬಿಳಿಗಿರಿ ರಂಗಸ್ವಾಮಿ ಬ್ಯಾಟೆಯಾಡುವುದಕ್ಕೆ ಬಂದಿದ್ರು
ಮಹದೇಸ್ಪುರನ ರೂಪು ಲಾವಣ್ಯವನ್ನು ನೋಡಿ
ಯಾರೋ ಕಾವಿಬಟ್ಟೆ ಶಿವಜಂಗಮರು ಬತ್ತಾವ್ರೆ ಅಂತ್ಹೇಳಿ

ಅವರು ಓಡಿ ಬಂದವರೇ ರಂಗಯ್ಯಾ || ನೋಡಿ ನಮ್ಮ ಶಿವನಾ ||