ಓಡಿಬಂದು ಬಿಳಿಗಿರಿ ರಂಗಸ್ವಾಮಿಯವರು
ನಮ್ಮಪ್ಪಾಜಿ ಮಹದೇವರಿಗೆ ದೀರ್ಘದಂಡ ನಮಸ್ಕಾರವನ್ನು ಮಾಡಿ
ಗುರುವೇ ಗುರುಪಾದವೇ
ಯಾವ ನಾಡ್ನವರಪ್ಪ ಗುರು ಶಿವಜಂಗುಮರೇ
ಎಲ್ಲಿಗೋಗ್ತಾಯಿದ್ದೀರಿ ಅಂದ್ರು
ನೋಡಪ್ಪಾ ರಂಗಸ್ವಾಮಿ
ನಾನು ಏಕಾಂಗಿ ಮಲೆಗ್ಹೋಗಬೇಕು
ಅಖಂಡ ಮಹಿಮನಾಗಬೇಕು ಅಲ್ಲಮ ಪ್ರಭುವಾಗಬೇಕು
ನಾನು ಮೂಡಲಾಗೋಗ್ತಾಯಿದ್ದೀನಿ ಸೀಗೆ ಸಿರುಗಂಧ
ಕೆಮ್ಮಚ್ಚಿ ಬಾಡುಬಾಕುನ ಗುತ್ತಿವೊಳುಗೆ ಅಂದ್ರು
ಗುರುವೇ ನಾನೂ ಕೂಡ ಜೊತೇಲಿ ಬರ್ತೀನಿ
ಕರ್ಕೊಂಡ್ ನಡೀಯಪ್ಪ ಅಂದ್ರು
ಅಯ್ಯಾ ರಂಗಸ್ವಾಮಿ
ನನ್ನಕೂಡ ನೀನು ಬರಬೇಡ
ನೀನು ಈ ಒಡ್ನಲ್ಲೇ ನೆಲೆಗೊಂಡು ಬಿಟ್ರೆ
ನನ್ನ ಮೈಸೂರು ಮೆಲ್ನಾಡಿನ ಪರುಸೆ
ಮೈಸೂರು ಮೇಲ್ನಾಡಿನ ಪರುಸೆ ಅಂದ್ರೆ
ಯಾವ ನಾಡಿನವರಪ್ಪ ಅಂದ್ರು
ನೋಡಪ್ಪ ರಂಗಸ್ವಾಮಿ
ನಾನು ಸುತ್ತೇಳು ಲೋಕವನ್ನೆಲ್ಲ ಕಟ್ಟಾಳ್ತಾಯಿದ್ದೀನಿ
ಗುಬ್ಬಿ ಧಾರವಾಡ ನಾಗೆರೆ ನಂಜನಗೂಡು
ಕೋಡೂರು ಕೊಯಮತ್ತೂರು
ಅರೇಪಾಳ್ಯ ಮರೇಪಾಳ್ಯ
ಅರಕೆಗೆ ಬನ್ನೂರು
ಆದರೆ ಹೇಳ್ತಾಯಿದ್ದೀನಿ ಕೇಳಪ್ಪ
ಬೆಂಗಳೂರು ಬಿಡದಿ ಪರುಸೆ
ಹೆಣ್ಣೇಳು ಕೋಟಿ ಗಂಡೇಳು ಕೋಟಿ
ತಿಂಗಾತಿಂಗ್ಳು ಬರ್ತರೆ ಕಂದ
ಬಿಳಿಗಿರಿರಂಗಪ್ಪ
ಬರುವಂಥಾ ಪರುಸೆ ಗಣಂಗಳು
ಬೆಳಗಿನ ಪೂಜೆ ನಿನಗೆ ಮೊದಲು ಮಾಡ್ಬುಟ್ಟು
ಮಧ್ಯಾಹ್ನದ ಪೂಜೆ ನನಗಾಗಲಿ
ನೀ ಇಲ್ಲೇ ನೆಲೆಗೊಂಡಿರಪ್ಪ ಅಂತ್ಹೇಳಿ
ಆ ಸಸ್ತರುಕಣ್ಮೆ ಒಡ್ನಲ್ಲಿ ರಂಗಸ್ವಾಮಿ ನೆಲೆಗೊಂಡುಸ್ಪುಟ್ಟು ಮಾದಪ್ಪ
ಚಿಕ್ಕಾಲಳ್ಳ ದೊಡ್ಡಾಲಳ್ಳ ದಾಟ್ಕೊಂಡು

ಆನೆದಿಂಬದ ಮಲೆಗೆ ಬಂದವರೇs ಮಹದೇವಾs || ನೋಡಿ ನಮ್ಮ ಶಿವನಾ ||

ಆನೆದಿಂಬದ ಮಲೆಯಲ್ಲಿ ನಿಂತುಕೊಂಡು
ಸೀಗೆ ಸಿರುಗಂಧ ಕೆಮ್ಮಚ್ಚಿ ಬಾಡು ಬಾಕುನ ಗುತ್ತಿಯನ್ನು
ದೃಷ್ಟಿಸಿ ನೋಡುತ್ತಾ ನಿಂತಿದ್ದಾರೆ
ಅಷ್ಟು ಹೊತ್ತಿಗೆ
ಇಲ್ಲಿ ಕುಂತೂರು ಮಠದಲ್ಲಿ
ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಇದ್ದರಲ್ಲ
ಅವರು ಅದೇ ಉಕ್ನಳ್ಳಿ ಬಸವಣ್ಣನ ಕರೆದರು
ಏಳು ತಲೆ ಕಾಳಿಂಗ ಸರ್ಪನ ಕರೆದ್ರು
ಅಯ್ಯಾ ಬಸವಣ್ಣ ಸರ್ಪಾ
ನಮ್ಮ ಮಠದಲ್ಲಿ ಊಳಿಗ ಮಾಡ್ತಾಯಿದ್ದಂಥ ಮರಿದೇವ್ರು
ಮಾಯ್ಕಾರನಾಗಿ ಮೂಡಲಾಗಿ ಹೊರಟೋಗಿದ್ದಾನೆ
ಅವನು ಯಾವೂರ್ನಲ್ಲಿ ತಂಗ್ತಾಯಿದ್ದಾನೆ
ಯಾವೂರ್ನಲ್ಲಿ ಮನೆ ಮಾಡ್ತಾಯಿದ್ದಾನೆ
ಅವನ ನೆಲೆನೋಡ್ಕೊಂಡೋಗಿ ನೀವು
ಪತ್ತೆ ಮಾಡಬೇಕಂತ್ಹೇಳಿ ಗುರುಗಳು
ಯಾರು ಶಾಂತಮಲ್ಲಿಕಾರ್ಜುನ ಸ್ವಾಮಿ

ಅವರು ಬೇಗ ಕಳುಗವರೇ ಬಸವಣ್ಣನಾs || ನೋಡಿ ನಮ್ಮ ಶಿವನಾ ||

ಉಕ್ನಳ್ಳಿ ಬಸವಣ್ಣ ಸರ್ಪಣ್ಣ
ಕಾಳಿಂಗ ಸರ್ಪ ಮಾದೇಶ್ವರನ ಹೋದಂತ ಹೆಜ್ಜೆಯನ್ನು ಮೂಸ್ಕಂಡು
ಮೂಡ್ಲಾಗಿ ದಾರಿಯಿಡ್ಕೊಂಡು ಹೋಯ್ತಾಯಿದ್ದಾವೆ
ಬಸವಣ್ಣ
ಮಾದೇಶ್ವರ ಹೋದ ಪ್ರಕಾರ‍ವಾಗಿ
ಸಿಂಗಾನಲ್ಲೂರು ಕಾಮಗೆರೆ ಕೊಂಗರಳ್ಳಿ
ಕಣ್ಣೂರು ಮಂಗಲ ದಾಟ್ಕೊಂಡು
ಹುಣಸೇಕಟ್ಟೆ ದಿಬ್ಬ ದಾಟ್ಕೊಂಡು
ಹನೂರು ಬೀದೆಗಾಣೆ ಕಡೆದು
ಇದೂ ಅಲ್ಲದೆ
ಸಲಾಂನ ಬ್ವಾರೆಯಲ್ಲಿ ಕಡ್ದು
ಹನುಮಂತ್ರಾಯ್ನ ಕಣಿವೆಯಲ್ಲಿ ಕಡದು

ಕೌದಳ್ಳೀ ಬೀದಿಗಾಣೆ ಹೊಯ್ತಾವರೇ ಬಸವಣ್ಣಾ  || ನೋಡಿ ನಮ್ಮ ಶಿವನಾ ||

ಆ ಉಕ್ನಳ್ಳೀ ಬಸವಣ್ಣನಿಗೆ ಗೋಚರವಾಗ್ದೇಯಿದ್ರೂವೆ
ಕಾಳಿಂಗ ಸರ್ಪ ಮಾದೇಶ್ವರ ಇಟ್ಟ ಹೆಜ್ಜೇನೆಲ್ಲ ಮೂಸ್ಕಂಡು
ಮಾದೇಶ್ವರನ ಹೆಜ್ಜೆ ಪಾದ ಪತ್ತೆ ಮಾಡ್ಕಂಡ್ ಹೋಗ್ತಾಯಿದ್ದಾರೆ
ಕೌದಳ್ಳಿ ಬೀದಿಗಾಣೆ ಕಡೆದು ಗಾಣಿಗನ ಕಟ್ಟೆಯನ್ನು ದಾಟ್ಕೊಂಡು
ಸಂತೇಕಾನಿಹಳ್ಳ ದಾಟ್ಕೊಂಡ್
ಒಡಕೇಹಳ್ಳವನ್ನು ದಾಟ್ಕೊಂಡು ಬಸವಣ್ಣ ಕಾಳಿಂಗಸರ್ಪ

ಅವರು ತಾಳುಬೆಟ್ಟಕ್ಕೆ ಬಂದವರೇs ಕಾಳಿಂಗಾs || ನೋಡಿ ನಮ್ಮ ಶಿವನಾ ||

ತಾಳುಬೆಟ್ದಲ್ಲಿ ನಿಂತ್ಕಂಡ್ರು ಬಸವಣ್ಣನೂ ಕಾಳಿಂಗಸರ್ಪನೂವೆ
ಈವಾಗ ನಾವು ಎಲ್ಲಾಣೆ ಹೋಗಬೇಕಂದ್ರೆ
ಬಸವಣ್ಣಾ
ನಾನು ಮುಂದೆ ಹೋಗಿ ಪತ್ತೆ ಮಾಡ್ತೀನಿ ಮರಿದೇವರ
ನೀನು ಮಟ್ಟವಾಗಿ ನಿಧಾನದಲ್ಲಿ ಬಾಪ್ಪ ಅಂತ್ಹೇಳುಬುಟ್ಟು
ಸರ್ಪ ಒಂದ್ಕಡೆ ಬಸವಣ್ಣ ಒಂದ್ಕಡೆ

ಅವರು ದಾರಿ ಹುಡೀಕೊಂಡು ಹೊಯ್ತಾವರೇ ಬಸವಣ್ಣಾs || ನೋಡು ನಮ್ಮ ಶಿವನಾ ||

ಬಸವಣ್ಣ ಹೋದಂತ ದಾರೀವೊಳುಗೆ
ಬಸವನ ಹಾದಿ ಅಂತ್ಹೇಳಿ ನಾಮಕರಣವಾಯ್ತು
ಸರ್ಪ ಹೋದಂತ ದಾರಿಯಲ್ಲಿ
ಸರ್ಪನದಾರಿ ಅಂತ ನಮಕರಣ ಮಾಡಿ
ರಂಗನೋಡ್ನಲ್ಲಿ ಹೋಗಿ ನಿಂತ್ಕಂಡು ನೋಡುದ್ರು
ಅಲ್ಲೂ ಕೂಡ ಮಾದಪ್ಪ ಸಿಕ್ಕಲಿಲ್ಲ
ರಂಗಸ್ವಾಮಿ ಓಡ್ಬಂದ
ಕಾಳಿಂಗ ಸರ್ಪ ಬಸವಣ್ಣ ಎಲ್ಲಿಗೋಗ್ತಾಯಿದ್ದೀರಿ ಅಂದ್ರು
ಉತ್ತುರ ದೇಶದ ಮಾಯ್ಕಾರ‍ಮಹದೇವ
ಮೂಡಲಾಗಿ ಬಂದಿದ್ದಾನೆ ಅವನ ಹುಡೀಕೊಂಡು ಹೋಗ್ತೀವಿ ಅಂದ್ರು
ಇಗೋ ನೋಡಪ್ಪ ಇದೇ ಮಾರ್ಗವಾಗಿ ಮೂಡ್ಲಾಗಿ ಹೋಗಿ
ಆ ಮರೀದೇವ್ರು ಸಿಕ್ತಾನೆ ಅಂತೇಳುದ್ರು
ಆವಾಗ ಬಿಳಿಗಿರಿ ರಂಗಸ್ವಾಮಿ ಮಾತ ಕೇಳ್ಕೊಂಡು
ಆವಾಗಲೂ ಕೂಡ ಸರ್ಪ ಒಂದು ಕಡೆ ಬಸವ ಒಂದು ಕಡೆ

ಅವರು ತಡೀಕೊಂಡು ಹೋಯ್ತಾವರೇ ಬಸವಣ್ಣಾs || ನೋಡಿ ನಮ್ಮ ಶಿವನಾ ||

ಅಷ್ಟು ಹೊತ್ತಿಗೆ ಮಾಯ್ಕಾರ ಗಂಡ ಮಾದಪ್ಪ
ಆನೆ ದಿಂಬದ ಮೆಲಯಲಿ ನಿಂತ್ಕಂಡು ನೋಡಿದ್ರು
ಸೀಗೆ ಸಿರುಗಂಧ ಕೆಮ್ಮಚ್ಚಿ ಬಾಡು ಬಾಕುನ ಗುತ್ತಿ
ಬಿದಿರುಮೆಳೆ ಪೊದೆವೊಳಗೆ
ಹುಟ್ಟರೆಯ ಮೇಲೆ ಏಳುಬಾಯಿ ಹೊನ್ನುತ್ತ ನೋಡಿದರು
ಇದೇ ನನ್ನ ನಡುರಾಜ್ಯ
ನಾನಿರ್ತಕ್ಕಂಥ ಜಾಗ
ತಪಸ್ಸನ್ನು ಮಾಡಿ ನಾನು ಕಲಿಯನ್ನು ಕಟ್ಟಾಳಬೇಕೆಂದು ಹೇಳಿ

ಅವರು ಏಳುಮಲೆಗೆ ದೃಷ್ಟಿ ಮಡಗವರೇ ಮಹದೇವಾs || ನೋಡಿ ನಮ್ಮ ಶಿವನಾ ||

ಆನೆದಿಂಬದ ಮಲೆಯಿಂದ ಮೂರು ಮೈಲಿ ದೂರ
ಮಾದೇಶ್ವರ ನೆಲೆಗೊಂಡು ತಪಸ್ಸು ಮಾಡಿದಂಥ ಜಾಗ
ಆ ಸೀಗೆ ಸಿರುಗಂಧ ಕೆಮ್ಮಚ್ಚಿ ಬಾಡಬಕ್ಕಲ ಒತ್ತೆವೊಳುಗೆ ನಿಂತ್ಕಂಡು
ಸುತ್ತಾ ಎಪ್ಪತ್ತೇಳು ಮಲೆ ಬಿಟ್ಟುಕೊಂಡರು
ಮಹದೇವಾ ಪಡುಲಾಗಿ ತಿರೀಕೊಂಡು ನಿಂತ್ಕೊಂಡ್ರು
ಇದೇ ನನಗೆ ತಕ್ಕಂಥ ನಡುರಾಜ್ಯ
ಈ ಜಾಗದಲ್ಲಿ ತಪಸ್ಸನ್ನು ಮಾಡಿ ನನಗೆ
ಪಾತಾಳ ಲೋಕದಲ್ಲಿ ಪಾದಪೂಜೆ ಆಗಬೇಕು
ಮೇಘ ಲೋಕದಲ್ಲಿ ಸಿದ್ಧಪೂಜೆ ಆಗಬೇಕು
ಈ ಮರ್ತ್ಯಲೋಕದಲ್ಲಿ ಲಿಂಗಪೂಜೆ ಆಗಬೇಕು ಅಂತ್ಹೇಳಿ
ತೆಂಕಲಾಗಿ ಕೊಯಮತ್ತೂರು ಬಿಟ್ಟರು
ಮೂಡಲಾಗಿ ಕಾವೇರಿ ನದಿ ಬಿಟ್ರು
ಹೊಗೇನಿಕಲ್ಲು ಅದೇ ಕಾವೇರಿ ನದಿ ಮೆಟ್ಟೂರು ಡ್ಯಾಂ ಬಿಟ್ಕೊಂಡು
ಮಾದೇವ ಬಡಗಲಾಗಿ
ಅಂತರಗಂಗೆ ಆಲಂಬಾಡಿ ಸೀಮೆ ಬಿಟ್ಟುಕೊಂಡು
ಪಡುಲಾಗಿ ಕೂಡುದಲೆ ಕೊಳ್ಳೇಗಾಲ
ಬಡಗು ಬಿದಿರನಾಡುಸೀಮೆ ಬಿಟ್ಕೊಂಡು

ಅಲ್ಲಿ ಧೀರ ನೆಲೆಗೊಂಡವರೇ ಮಹದೇವಾs

ಏಳು ಮಲೆಗೆ ಹೋಗುವರೂ
ಗುರುವೇ ಎಡವಿದ ಕಲ್ಲಿಗೆ ಶರಣ ಮಾಡುವರೂ
ಎಡವಿದ ಕಲ್ಲಿನ ಮಾದೇವ
ಕೊಡು ನನಗೆ ಮತಿಯಾs

ಮಹದೇವಾ
ಯಾವಾಗ ಪುಟಲಿಂಗದಲ್ಲಿ ಕೂತ್ಕೊಂಡ್ರೊ
ಏಳುಬಾಯಿ ಹೊನ್ನುತ್ತದಲ್ಲಿ ಕೂತ್ಕೊಂಡ್ರೊ
ಕಾಳಿಂಗ ಸರ್ಪ ನೋಡ್ದ ಆನೆ ತಲೆದಿಂಬದಲ್ಲಿ
ಇಬ್ಬರೂ ಅಲ್ಲೇ ಜೊತೆ ಸೇರುದ್ರು ಬಸವಣ್ಣನೂವೆ ಅವರೂವೆ
ಬಸವಣ್ಣಾ
ಆ ಮಾಯ್ಕಾರ ಗಂಡ ಮಹದೇವರ ಮರಿದೇವರ
ನಾನು ಪತ್ತೆ ಮಾಡ್ತೀನಿ ಬಾಪ್ಪ ಅಂತ್ಹೇಳಿ
ಅಲ್ಲಿಂದಲೇ ಜೊತೇವೊಳುಗೆ
ಇಬ್ಬರೂ ಕೂಡ ಸೀಗೆ ಸಿರುಗಂಧ
ಕೆಮ್ಮಚ್ಚಿ ಬಾಡುಬಾಕುನ ಗುತ್ತಿಗೋದ್ರು
ಬಸವಣ್ಣನಿಗೆ ನುಗ್ಗುಕಾಗ್ಲಿಲ್ಲ
ಏ ಬಸವಣ್ಣ
ಇಲ್ಲಿ ನೀನು ಕುಂತ್ಕೊಪ್ಪ ಅಂತ್ಹೇಳಿ ಮುಂದುಗಡೆ ಕೂರಿಸ್ಬುಟ್ಟು
ಕಾಳಿಂಗ ಸರ್ಪ ಹೋಗಿ
ಏಳುಬಾಯಿ ಹೊನ್ನುತ್ತದಲ್ಲಿ ಕುಂತಿರುವಂಥ ಮಾದಪ್ಪನಿಗೆ
ಏಳು ಹೆಡೆ ನೆರಳು ಮಾಡಿಕೊಂಡು
ಆವಾಗ ಕಾಳಿಂಗ ಸರ್ಪ
ಮರಿದೇವ್ರೆ ನೀವು ಎಲ್ಲಿಗೋದ್ರು ಬಿಡೋದಿಲ್ಲ
ನಾನು ನಿನಗಿಂದ ಮುಂದಾಗಿ ಬೆಳೀತೀನಿ ಅಂತ್ಹೇಳಿ
ಏಳು ಹೆಡೆಯ ನೆರಳು ಮಾಡ್ಕಂಡು

ಅಲ್ಲಿ ಏಳುಮಲೆಯಲಿ ಕುಂತವರೇ ಕಾಳಿಂಗಾs || ನೋಡಿ ನಮ್ಮ ಶಿವನಾ ||

ಆವಾಗ ಮಹದೇವಾ
ಬಸವಣ್ಣ ಹೇಳಿದನಂತೆ ಉಕ್ನಳ್ಳಿ ಬಸವಣ್ಣ
ಉಕ್ಕನ ಕಡ್ಲೆ ಕದೀತಿದ್ನಲ್ಲ ಆ ಕ್ವಾಪಕ್ಕೆ
ಓ ಮರಿದೇವ್ರೇ
ಮಾಯ್ಕಾರ ಗಂಡ
ನಿನ್ನ ಎಲ್ಲಿಗೋದ್ರು ಬಿಡೂದಿಲ್ಲ ಕಟ್ಟಾಕ್ತೀನಿ ಅಂದ ಬಸವಣ್ಣಾ
ನನ್ನನ್ನು ಕಟ್ಟಾಕಬೇಡ
ನನ್ನ ಸಾವಿರ ಕೋಟಿಗಣಂಗಳು ಬಂದಂತಾವರು
ನಿನಗೆ ಒಂದೊಂದು ಒದೆಯ ಒದೀಲಿ
ನನ್ನ ಮುಂದೆ ಮಂಡೀ ಬಸವಯ್ಯನಾಗಿ ಕೂತ್ಕೊ ಅಂತ್ಹೇಳಿ
ಆ ಬಸವಣ್ಣನ ಮುಂದೆ ಕೂರಿಸ್ಕಂಡು ಮಾದಪ್ಪ
ಏಳು ಮಲೆವೊಳುಗೆ ತಪಸ್ಸು ಮಾಡ್ತಾಯಿದ್ದಾರೆ
ಅಷ್ಟು ಹೊತ್ತಿಗೆ ಶಾಂತಮಲ್ಲಿಕಾರ್ಜುನ ಸ್ವಾಮಿ

ಅದೇ ಸಂಸಾರಿ ಸಂಗಪ್ಪನ ಕರಕೊಂಡು
ಅವರು ಏಳು ಮಲೆಗೆ ಹೊರಟವರೇ ಗುರುದೇವಾs || ನೋಡಿ ನಮ್ಮ ಶಿವನಾ ||

ಆವಾಗಲೀಗ ಮದೇವಾ
ಆವಾಗ ಬಸವಣ್ಣನ ಕಳಿಸಿದ್ದಾರೆ
ಬಸವಣ್ಣ ನನ್ನ ಮುಂದೆ ನೀನು ಸಾಸ್ವಿತವಾಗಿ ಕೂತ್ಕಳೂವೆ
ನನ್ನ ಗುರುಗಳಾಗಿರ್ತಕ್ಕಂತಾವ್ರು ಪಂಚೇಳು ದೀಕ್ಷೆ
ಮಾಡಿದಂಥವರು ಬತ್ತಾವ್ರೆ
ತಾಳು ಬೆಟ್ಟದಿಂದ ಕರ್ಕೊಂಡು ಬಾರಪ್ಪ ಅಂತ್ಹೇಳಿ
ಬಸವಣ್ಣನ ಕಳಿಸಿದರು
ಆವಾಗ ಉಕ್ನಳ್ಳಿ ಬಸವಣ್ಣ ತಾಳುಬೆಟ್ಟದಲ್ಲಿ ಕಾವಲಾಗಿದ್ದು
ಆ ಕುಂತೂರು ಮಠದ ಆದಿಗಣೇಶ್ವರ ಸ್ವಾಮಿ ಅಂತ್ಹೇಳಿ
ನಾಮಕರಣವಾಗಿತ್ತು
ಪ್ರಭುಸ್ವಾಮಿ ಅಂತ್ಹೇಳಿ ಕರೀತಾಯಿದ್ರು
ಯಾರಿಗೆ ಶಾಂತಮಲ್ಲಿಕಾರ್ಜುನ ಸ್ವಾಮಿಗೆ
ಆ ಗುರುಗಳು
ಸಂಸಾರಿ ಸಂಗಪ್ಪನ ಕರ್ಕೊಂಡು

ಏಳು ಮಲೆಗೆ ದಯಮಾಡವರೇ ಗುರುದೇವಾs  || ನೋಡಿ ನಮ್ಮ ಶಿವನಾ ||

ಏಳು ಮಲೆಗೆ ಕೈಲಾಸಕೆ ಬಂದು ಗುರುಗಳು
ಆವಾಗ ಮರಿದೇವ್ರ ಮಾತಾಡಿಸ್ತಾಯಿದ್ದಾರೆ
ಏನಪ್ಪಾ ಮರಿದೇವರೇ
ನಮ್ಮನ್ನೆಲ್ಲಾ ಬಿಟ್ಟು ಪರದೇಶಿ ಮಾಡ್ಬುಟ್ಟು ಬಂದಿಯಲ್ಲ
ಯಾತ್ಕಾಗಿ ಬಂದೆ ಆ ಮಲೆಗೆ ಅಂದ್ರು
ಗುರುದೇವಾ
ನಿಮ್ಮ ಗುರು ಆತೀರ್ವಾದದಿಂದ
ನಾನು ಲೋಕ ಕಲ್ಯಾಣ ಮಾಡಬೇಕು
ಇಗೋ ನೋಡಿ ಅಂತರಗಂಗೆ ಪಕ್ಕದಲ್ಲಿ
ನೀವು ಹೋಗಿ ಒಂದೇ ಕಂಭವನ್ನು ನೆಟ್ಟು
ಒಂದು ಹುಲ್ಲು ಮನೆಯನ್ನು ಮಾಡಿ ಸೊಪ್ಪುನ ಗುಡ್ಲಲ್ಲಿ
ಆ ಹುಲ್ಲುಮನೆವೊಳುಗೆ ನೀವಿದ್ದುಕೊಂಡರೇ
ನನಗೆ ಗುರುವಾಗಿ ನೀವು
ದಿವಸಾ ಬಂದು ನನಗೆ ಹೂವು ನೀರು ಹಾಕಿ ಪೂಜೆಮಾಡಬೇಕು
ಈ ಬೇಡುಗಂಪಣದ ಮನೆವೊಳಗೆಲ್ಲ ನಾನು ಕಂತೇಭಿಕ್ಷೆ ಮಾಡ್ತೀನಿ
ಕಂತೇ ಭಿಕ್ಷ ಅಂದರೆ ಊಟದ ಭಿಕ್ಷ
ಕಂತೇ ಭಿಕ್ಷವನ್ನ ಮಾಡ್ತಾಯಿದ್ದೀನಿ
ನಿಮ್ಮ ಗುರುಮಠದ ದಾಸೋಹ ಮಠ ಅಂತ್ಹೇಳಿ
ನಾಮಕರಣ ಮಾಡ್ತೀನಿ
ಈ ಬೇಡಗಂಪಣದವರನ್ನೆಲ್ಲ ಕರೆದು
ನಾನು ವಿದ್ಯಾಬುದ್ಧಿಯನ್ನು ಕಲಿಸಿ
ಅವರಿಗೆ ಲಿಂಗಧಾರಣೆ ಮಾಡಿಸಿ
ಶಿವಾರ್ಚನೆ ಶಿವಪೂಜೆ ಮಾಡುವುದಕ್ಕೆ
ನೇಮಕ ಮಾಡ್ತೀನಿ ಗುರುವೇ ಅಂತ್ಹೇಳಿ
ಅಂತರಗಂಗೆ ಪಕ್ಕದಲ್ಲಿ
ಒಂದೇ ಕಂಬವನ್ನು ನೆಟ್ಟು

ಒಂದು ಹುಲ್ಲು ಜೋಪಡಿ ಮಾಡವರೇ ಮಹದೇವಾs  || ನೋಡಿ ನಮ್ಮ ಶಿವನಾ ||

ಆಕಾಶದಲ್ಲಿನ ಮಲೆಯೊಳಗೇ
ಮಾದೇವ ಲೇಸಾದ ಕೊಂಗನಾಡಲ್ಲಿ
ಹ್ಯಾಗೆ ಹೋಗಿ ನೆಲೆಗೊಂಡಪ್ಪ ಏಳುಮಲೆವೊಳಗೆ

ಏಳುಮಲೆ ಕೈಲಾಸ್ದಲ್ಲಿ ನೆಲೆಗೊಂಡುಬುಟ್ರು
ಗುರುಮಠಕೆ ಒಂದು ಹುಲ್ಲು ಜೋಪಡಿಯನ್ನ ಮಾಡುದ್ರು
ಮಹದೇವಾ
ಅಲ್ಲಿರ್ತಕ್ಕಂಥವರೆಲ್ಲ ಬ್ಯಾಡಗಂಪಣದವರು
ಕೊಂಗು ಜನ ಕ್ವಾತ್ ಜನ ಮರಾಠಿಯವರು ರೆಡ್ಡಿಗರು
ಹಿಂದಿಲ್ನರಿಯವ್ರೌ ಮುಂದಲ್ನರಿಯವರು
ಇವರ ಮಾತು ಅವರಿಗೊತ್ತಿಲ್ಲ ಅವರ ಮಾತು ಇವರಿಗೊತ್ತಿಲ್ಲ
ಆದರೂ ಕೂಡ ಮಾದೇಶ್ವರ ಕುಂಡುಸ್ಕೊಂಡು
ತಾವು ತಪಸ್ಸು ಮಾಡುವಂತ ಜಾಗದಲ್ಲಿ
ಅವರಿಗೆ ವಿದ್ಯಾಬುದ್ಧಿಯನ್ನು ಕಲಿಸಿ
ಗುರುಬೋಧನೆ ಅಂದರೆ
ಗುರುಗಳು ಮಾತನ್ನ ಹೇಳಿದರೆ ಅದೇ ಗುರುಬೋಧನೆ
ಅವರಿಗೆಲ್ಲ ಪೂಜೆ ನೈವೇದ್ಯ ಮಾಡುವುದು
ಇದನ್ನೆಲ್ಲ ಬೇಡಗಂಪಣದವರನ್ನ ಕಟ್ಕೊಂಡು
ಈ ಕಡೆ ಬರಗೂರು ಬಟ್ಟದಲ್ಲಿ ಬರಗೂರು ಮಠ
ಈ ಕಡೆ ಹಳೇ ಊರ್ನಲ್ಲಿ ಹಳೆ ಊರು ಮಠ
ಇದೂ ಒಮ್ದು ಮಧ್ಯೆ ಗುರುಮಠ
ಇದಕ್ಕೆ ಇನ್ನು ಮುಂದೆ
ಸಾಲೂರುಮಠ ಅಂತ ಹೆಸರೇಳಾಗಲಿ ಗುರುವೇ
ನಾನಿನ್ನು ಮುಂದೆ ಕಲಿಯನ್ನ ಕಟ್ಟಾಳಬೇಕು
ನನಗೆ ಲಿಂಗಪೂಜೆ ಆಗಲೀ ಅಂತ್ಹೇಳಿ
ಮಹದೇವಾ ಈ ಏಳುಮಲೆ ಕೈಲಾಸದಲ್ಲಿ

ಅವರು ಏಗವಾಗಿ ನೆಲೆಗೊಂಡವರೇ ಮಹದೆವಾs || ನೋಡಿ ನಮ್ಮ ಶಿವನಾ ||

ಕಂಡಿನ ಕಂಸಾಳೆ ಎಡಗೈಲಿಡಿಕೊಂಡು
ಮುತ್ತಿನ ಜೋಳಿಗೆ ಮುಂಗೈಲಾಧಾರ ಮಾಡ್ಕಂಡು
ಆ ಬೇಡಗಂಪಣದವರ ಮನೇಲೆಲ್ಲ ಭಿಕ್ಷ ಮಾಡ್ತಾಯಿದ್ರು ಗುರುವೇ
ಭಿಕ್ಷಾ ಮಾಡ್ಕಂಡು ಬಂದು
ಈ ಗುರುಮಠದಲ್ಲಿ ಸುರೀತಾಯಿದ್ರು
ಆ ಗುರುಗಳು ಶಾಂತಮಲ್ಲಿಕಾರ್ಜುನಸ್ವಾಮಿ
ಸಂಸಾರಿ ಸಂಗಪ್ಪ
ಎಲ್ಲ ಬೇಡಗಂಪಣದವರಗೂವೆ ದಾಸೋಹ ನೀಡ್ತಾಯಿದ್ದರು
ಆವಾಗಲೀಗ ಮಹದೇವಾ
ನಾನು ಈ ಬೇಡಗಂಪಣದ ಮನೆವೊಳುಗೆ
ಇದೇ ರೀತಿಯಲ್ಲಿ ಕೂತಿದ್ದರೆ
ಬಿಸ್ಲಲ್ಲಿ ಒಣಗಬೇಕು ಮಳೆಯಲ್ಲಿ ನೆನೆಯಬೇಕು
ಆದರೆ ಸಂಗಪ್ಪ
ನಾನು ಲಿಂಗೈಕ್ಯವಾಗ್ತಾಯಿದ್ದೀನಿ
ಇಗೋ ನೋಡಪ್ಪ ಮುತ್ತಿನ ಜೋಳಿಗೆ ತೆಗೆದುಕೋ ಅಂತ್ಹೇಳಿ
ಸಾಂಗಪ್ಪನ ಕೈಲಿ ಮುತ್ತಿನ ಜೋಳಿಗೆ ಕೊಟ್ರು
ಕಂಚಿನ ಕಂಸಾಳೆಯನ್ನು ಕೊಟ್ರು
ಆ ಗುರುಮಠದಲ್ಲಿ ಇಟ್ಟುಕೊಳ್ಳಿ ಸಾಲೂರು ಮಠದಲ್ಲಿ
ಇನ್ನು ಮುಂದೆ ಮೈಸೂರು ಮೇಲ್ನಾಡಿನಲ್ಲಿ
ನನ್ನ ಸಾವಿರಾರು ಒಕ್ಕಲಲ್ಲಿ ಮೊದಲಾಗಿ ಮಗನುಟ್ಟಿದರೆ
ಆ ಮಗನಿಗೆ ಬಸವ ಅಂತ್ಹೇಳಿ ಬಿಡ್ತಾರೆ
ಅವನಿಗೆ ಈ ಮಠದಲ್ಲಿ ದೀಕ್ಷೆಮಾಡಿ
ನನ್ನ ಸಾಲೂರು ಕಂಸಾಳೆ ಮುತ್ತಿನಜೋಳಿಗೆ ಕೊಡ್ತಾರೆ
ಕೊಕ್ಕ ತರಿದು ಕೊರಳಿಗೆ ಲಿಂಗ ಅಂದರೆ
ಪಂಚಮುಖದ ರುದ್ರಾಕ್ಷಿ ಕಟ್ಟಿ
ಪಂಚೇಳು ದೀಕ್ಷೆ ಮಾಡ್ತಾರೆ
ಅ ಗುರುಮಗೆನೆ ದೇಶದ ಮೇಲೆ ಮೆರೆಯಬೇಕು
ನನ್ನ ಚರಿತ್ರೆಯನ್ನಾಡಿಕೊಂಡು ಅಂತ್ಹೇಳಿ
ಆವಾಗ ಸಂಸಾರಿ ಸಂಗಪ್ಪನ ಕೈಲಿ ಮುತ್ತಿನ ಜೋಳಿಗೆ
ಕಂಸಾಳೆಯನ್ನು ಕೊಟ್ಟುಬುಟ್ಟು

ಅವರು ಏಳುಮಲೆವೊಳಗೆ ನೆಲೆಗೊಂಡವರೇ ಮಹದೇವಾs || ನೋಡಿ ನಮ್ಮ ಶಿವನಾ ||

ಕಂಚಿನ ಕಂಸಾಳೆಚೆಂದ
ಗುರುವಿಗೆ ಪಂಚೈದು ಗೋಡೆ ಚೆಂದ
ಗುಡ್ಡುಗಳ ಕೈನ ವಾಲುಗಚೆಂದ
ದೊಡ್ಡು ಮಲೆವೊಳುಗೆ