ದೀರ್ಘ ದಂಡವಾಗಿ ಗುರುಗಳ ಪಾದ ಹಿಡಕೊಂಡು
ಗುರುವೇ ನನ್ನನ್ನು ದೂರ ಮಾಡಬೇಡಿ
ನಿಮ್ಮ ಕಾಯಕ ಮಾಡ್ತೀನಿ ಅಂದ್ರು
ಹಾಗಲ್ಲ ಮರಿದೇವ್ರೆ
ನೀನು ದೇವನಲ್ಲ
ಮರಿದೇವ್ರಲ್ಲ
ಆದರೆ ನೀನು ಪ್ರಪಂಚದ ಲೋಕ ಕಲ್ಯಾಣ ಮಾಡಬೇಕು
ಬಾರಪ್ಪ
ಈವಾಗ ನೀನು ಹೋಗಿ ಇನ್ನು ಮುಂದೆ
ಕುಂತೂರು ಮಠಕ್ಕೋಗಿ ಪ್ರಭುದೇವ್ರು ಸೇರು
ಪ್ರಭುದೇವ್ರು ನಿನಗೆ ಕಾಯಕ ಕೊಡ್ತಾರೆ ಅಂದ್ರು
ಗುರುವೇ ಹಾಗಾದ ಮೇಲೆ
ಈ ರಾಗಿ ಕಲ್ಲ ನಾನು ಕಾಯಕ ಮಾಡಿದ್ದೀನಿ
ಸೂರ್ಯ ಚಂದ್ರಾದಿಗಳಿರುವವರೆಗೆ
ಸುತ್ತೂರು ಮಠ ಸುಖ ಅಂತಾ ಬಂದಿ
ಕುಕ್ಕೇಲಿ ರಾಗಿ ತುಂಬಿ ಮಡಗಿದ್ದೀರಿ
ಸುತ್ತೂರು ಮಠದಲ್ಲಿ ಹುಟ್ಟಿದಂಥ ಹೆಣ್ಣುಮಕ್ಕಳೆಲ್ಲ
ಸಾಲಿಗೆ ಮುಂಡೇರಾಗಲಿ
ಸುತ್ತೂರು ಮಠದಲಿ ಹುಟ್ಟಿದಂಥ ಗಂಡುಮಕ್ಕಳ್ಗೆಲ್ಲ
ಪಟ್ಟದತ್ತುವಾಗಲೀ ಅಂತ್ಹೇಳಿ
ಶಾಪ ಕೊಟ್ಬುಟ್ಟು ಮಾದಪ್ಪ
ಅವರು ಕುಂತೂರು ಮಠಕೆ ದಯಮಾಡವರೇ ಮಾಯ್ಕಾರಾs || ನೋಡಿ ನಮ್ಮ ಶಿವನಾ ||

ಮಲೆಯಲಿ ಮಾದೇವ ಬರುವ ಚೆಂದವಾ
ನೋಡಿ ನಮ್ಮ ಶಿವನಾ ||

ಮಾಯ್ಕಾರ ಗಂಡ ಮಾದೇವ
ಸುತ್ತೂರು ಮಠಕೆ ಶಾಪ ಕೊಟ್ಬುಟ್ಟು
ಅವರು ಕುಂತೂರು ಮಠಕೆ ದಯಮಾಡವರೇ ಮಾಯ್ಕಾರಾs || ನೋಡಿ ನಮ್ಮ ಶಿವನಾ ||

ಆದಿ ಕುಂತೂರು ಮಠಕೆ ಬಂದರು
ಕುಂತೂರು ಮಠದಲ್ಲಿ
ಪ್ರಭುಸ್ವಾಮಿಯವರು
ಆರನೇ ಜಗದ್ಗುರುವಾಗಿ ಪಟ್ಟವಾಗಿದ್ದಾರೆ
ಆ ಕುಂತೂರು ಮಠದಲ್ಲಿ ಬಂದು
ಆ ಕುಂತೂರು ಮಠದೊಳಗೆ ನಿಂತ್ಕೊಂಡು ಗುರುಗಳ ಮುಂದೆ
ಅವರು ಶಿವಬೊಗ್ಗಿ ಶರಣ ಮಾಡವರೇ ಮಾಯ್ಕಾರಾs || ನೋಡಿ ನಮ್ಮ ಶಿವನಾ ||

ಮಲೆಯಲಿ ಮಾದೇವ ಬರುವ ಚಂದವಾ || ನೋಡಿ ನಮ್ಮ ಶಿವನಾ ||

ಮರಿದೇವ್ರು ಶರಣ ಮಾಡಿದ ತಕ್ಷಣ ಗುರುಗಳುನೋಡುದ್ರು
ಪ್ರಭುಸ್ವಾಮಿಯವರು
ಏನಪ್ಪಾ ಮಗುವೇ?
ಯಾವೂರಿನವರಪ್ಪಾ ಅಂದರು
ಗುರುವೇ ನಾನು ಉತ್ತುರ ದೇಶದ ಮರಿದೇವ್ರು ಅಂದ್ರು
ಏನಾಗಬೇಕಪ್ಪ ನನ್ನ ಮಠದಲ್ಲಿ ಅಂದ್ರು
ಏನೂ ಬೇಕಿಲ್ಲ ಗುರುವೇ
ನಿಮ್ಮ ಗುರು ಸೇವೆ ಮಾಡಬೇಕು
ಯಾವುದಾದರೂ ಚಾಕರಿ ಕೊಡಿ ಅಂದ್ರು
ನನ್ನ ಗುರು ಮಠದಲ್ಲಿ ಯಾವ್ದೂ ಚಾಕರಿ ಇಲ್ವಲ್ಲಪ್ಪ ಮಗನೇ ಅಂದ್ರು
ಇಲ್ಲಾ ಗುರುವೇ
ಹೇಳಿದ ಕೆಲ್ಸ ಬಿಡದೆ ಮಾಡ್ತೀನಿ ನನಗೆ ಚಾಕರಿ ಕೊಡಿ ಅಂದ್ರು
ಆವಾಗಲೀಗ ನಿನಗೆ ದೀಕ್ಷೆ ಆಗಿದೆಯಾ ಮರಿದೇವ್ರೆ ಅಂದ್ರು
ನನಗೆ ದೀಕ್ಷೇವೂ ಗೊತ್ತಿಲ್ಲ ಮೋಕ್ಷವೂ ಗೊತ್ತಿಲ್ಲ
ನನಗೆ ಹೇಳಿಕೊಡಿ ಗುರುವೇ ಅಂದರು
ಆವಾಗ ಪ್ರಭುಸ್ವಾಮಿ
ಏಳುಜನ ಜಂಗಮರ ಕರೆದು
ಅವರು ಕಲ್ಯಾಣಿಗೆ ಕಳುಗವರೆ ಗುರುದೇವೋs || ನೋಡಿ ನಮ್ಮ ಶಿವನಾ ||

ನೋಡಿದೆಯಾ ಜಂಗಮರೇ
ಈ ಹೊಸಮನೆ ದೇವರು ಉತ್ತುರದೇಶದವನಂತೆ
ಕಲ್ಯಾಣಿ ಕೊಳ ಏರಿಮ್ಯಾಲೆ ಹೋಗಿ
ಹಡಪದ ಮುದ್ದಣ್ಣನನ್ನ ಕರೆದು
ಇವನ ಮಂಡೇ ಬೋಳು ಮಾಡ್ಸಿ
ಅರಿಶಿನ ಸೀಗೇಕಾಯಿ ಹಾಕಿ
ಸ್ನಾನ ಮಡಿಯನ್ನು ಮಾಡ್ಕಂಡು
ಹೊಸ ಉಡುದಾರ ಕಟ್ಟಿಸಿ
ಪುಟಗೋಸಿ ಕಟ್ಟಿಸ್ಕಂಡು
ಕಾವಿ ಚೌಕ ಮುಸಗಾಕ್ಕೊಂಡು ಕರ್ಕೊಂಡ್ ಬನ್ನಿ
ಇವನಿಗೆ ದೀಕ್ಷೆ ಮಾಡಬೇಕು ಅಂದರು
ಗುರುಗಳ ಮಾತ್ಕೇಳಿ ಏಳುಜನ ಜಂಗಮರೂವೆ
ಮಾಯ್ಕಾರಗಂಡ ಮಾದಪ್ಪನ
ಅವರು ಕಲ್ಯಾಣಿಗೆ ಕರ್ಕೊಂಡೋಯ್ತಾವರೇ ಜಂಗಮರೂs || ನೋಡಿ ನಮ್ಮ ಶಿವನಾ ||

ಕಲ್ಯಾಣಿ ಕೊಳದೇರಿ ಮ್ಯಾಲೆ
ಹಡಪದ ಮುದ್ದಣ್ಣನನ್ನು ಕರೆದು
ಅವನಿಗೆ ಅಕ್ಕಿ ಬೇಳೆ
ಆದರೆ ನಾಲ್ಕಾಣೆ ದಕ್ಷಿಣೆ ಮಡಗಿ
ಕಡ್ದೀಕರ್ಪೂರ ಹಸ್ಸಿ
ಅವನ ಕಬ್ಬಿಣದ ಬಟ್ಲಿಗೆ ಹಾಲು ತುಪ್ಪ ತಂದೂದು
ನೀರನ್ನು ಬೆರಸಿ
ಅವನ ಮಂಡೆಗೆ ಆವಾಗ ನೀರನ್ನು ಎರೆದು
ಮಾಯ್ಕಾರ ಗಂಡನಿಗೆ ಕಲ್ಯಾಣಿ ಕೊಳದೇರಿಮ್ಯಾಲೆ
ಬೋಳುಬತ್ತಗವನ್ನ ಮಾಡಿದ್ದಾರೆ
ಮಂಡೇಯನ್ನ ಬೊಳುಬತ್ತಗ ಮಾಡ್ಬುಟ್ಟು
ಏಳು ಜನ ಜಂಗುಮರು ಅರಿಶಿನ ಸೀಗೆಕಾಯನ್ನು ಒತ್ತಿ
ಸ್ನಾನ ಮಡಿಯನ್ನು ಮಾಡಿಸಿ
ಆವಾಗ ಮೀಸಲು ಮಡಿಯನ್ನ ಉಡಿಸ್ತಾಯಿದ್ದಾರೆ
ಹೊಸ ಉಡುದಾರವನ್ನು ಕಟ್ಸಿ
ಪುಟಗೋಸಿ ಕಟ್ಕೊಂಡು
ಕಾವಿ ಚೌಕ ಮುಸುಕಾಕಿಕೊಂಡು
ಅವರು ಕುಂತೂರು ಮಠಕೆ ಬರುತವರೇ ಮಾಯ್ಕಾರಾs || ನೋಡಿ ನಮ್ಮ ಶಿವನಾ ||

ಕುಂತೂರು ಮಠದಲ್ಲಿ ಬಂದು
ಆವಾಗಲೀಗ ಮಧ್ಯಾ ನಡಟ್ಟಿವೊಳಗೆ
ಪಂಚೇಳು ಕಳಶವನೂಡಿ
ಮಠದೊಳಗೆ ಕುಂತೂರು ಮಠದೊಳಗೆ
ಕಳಸದ ಮುಂದೆ ಮಾದಪ್ಪ ಕೂರಿಸಿಕೊಂಡು
ಮಾಯ್ಕಾರಾ ಗಂಡ ಮರಿದೇವರೇ
ಈ ಹೊತ್ತು ನಿನಗೆ ದೀಕ್ಷೆ ಮಾಡ್ತಾಯಿದ್ದೀವಿ
ಮೋಕ್ಷಕ್ಕೆ ದಾರಿಯಾಗ್ತದೆ
ನಾವೇಳಿದ ಮಾತು ಕೇಳ್ಬೇಕು ಅಂದ್ರು
ಆಗಲೀ ಗುರುವೇ ಅಂದ್ರು
ಆವಾಗ ಮಾಯ್ಕಾರ ಗಂಡನಿಗೆ
ಮಂಡೇ ಮೇಲೆ ತೇರ್ಥವನ್ನು ಹಾಕಿ
ಹೂವನ್ನು ಮಡಗಿ
ಅವರು ಬಸುಮ ಧಾರಣೆಯನ್ನು ಮಾಡಿ
ಆವಾಗೆರಡು ಕೈಗೂವೆ
ಕಸ್ತೂರಿ ಗ್ವಾರಂದವನ್ನು ಕೊಟ್ಟು
ನಿನ್ನ ದೇಹಕ್ಕೆ ಕುಡಿಯಪ್ಪ ಅಂತೇಳಿ ಗ್ವಾರಂದವನ್ನು ಕುಡಿಸಿ
ಆವಾಗ ಮಾಯ್ಕಾರ ಗಂಡನಿಗೆ
ಅವರು ಕಂಕಣ ಧಾರಣೆಮಾಡವರೇ ಗುರುಗಳೂs || ನೋಡಿ ನಮ್ಮ ಶಿವನಾ ||

ಕಂಕಣ ಧಾರಣೆಯನ್ನು ಮಾಡಿ
ಏಳುಕಳ್ಸಕ್ಕೂ ಸೂತ್ರವನ್ನು ಸುತ್ತುಬುಟ್ಟು
ಮಾಯ್ಕಾರ ಗಂಡ ಮಾದಪ್ಪ ನೆತ್ತೀಮ್ಯಾಲೆ
ಸೂತ್ರವನ್ನು ಬುಟ್ಬುಟ್ಟು
ಆವಾಗ ಪಂಚಮುಖದ ರುದ್ರಾಕ್ಷಿ ಕೈಲಿಡಕೊಂಡು
ಹರಿಶಿನದ ದಾರವನ್ನು ಹಾಕಿ
ನೋಡಪ್ಪಾ ಮರಿದೇವರೇ
ಇದು ರುದ್ರಾಕ್ಷಿ ಭದ್ರಾಕ್ಷಿ ಅಂತ್ಹೇಳಿ ಅಪಹಾಸ್ಯ ಮಾಡ್ಬೇಡ
ಇದು ಹಾವು ಚೇಳಾಗ್ತದೆ
ಏನಾದರೂ ಟೈಮ್ನಲ್ಲಿ ಕಚ್ಚಬಹುದು ಕಡೀಬಹುದು
ಕಚ್ಚೀಸ್ಕೊಂಡಿಯಪ್ಪ ಅಂದ್ರು
ಗುರುದೇವ ನಿಮ್ಮ ದಯವಿದ್ದರೆ
ಹಾವಾಗಲೀ ಚೇಳಾಗಲೀ
ಬೇಕಾದಂಥ ಕೊಲೆಕೊಟ್ರು ನಾನು ತಡಕಂತೇನಿ
ನನಗೆ ಲಿಂಗಧಾರಣೆ ಮಾಡಿ ಅಂತ್ಹೇಳಿ
ಆವಾಗ ಗುರುಗಳ ಪಾದ ಹಿಡಕಂಡರು
ಆವಾಗಲೀಗ ಅಲ್ಲಿರುವಂಥ ಜಂಗಮರ ಕೈಲಿ ಮುಟ್ಟಿಸಿ
ಆ ರುದ್ರಾಕ್ಷಿಯನ್ನು ಪಂಚಮುಖದ ರುದ್ರಾಕ್ಷಿಯನ್ನು
ಮಾಯ್ಕಾರ ಗಂಡ ಮಾದಪ್ಪನಿಗೆ
ಕೊಕ್ಕ ತರಿದು ಕೊರಳಿಗೆ ಲಿಂಗವನ್ನು ಮಾಡಿ
ಅವರು ಪಂಚೇಳು ದೀಕ್ಷೆ ಮಾಡವರೇ ಗುರುಗಳೂs || ನೋಡಿ ನಮ್ಮ ಶಿವನಾ ||

ಆವಾಗ ಸೂತ್ರವನ್ನು ತೆಗೆದ್ಬುಟ್ಟು
ಕಂಕಣಧಾರಣೆ ಅಕ್ಕಿ ಬೆಲ್ಲವನ್ನು ಕಾಯನ್ನು
ಆವಾಗ ಮೊರಕ್ಕೆ ಬಡಿಸ್ಬುಟ್ಟು
ಆವಾಗ ಕಾವಿ ಚೌಕ ಮುಸುಗಾಕ್ಕೊಂಡು
ಎರಡು ಕಣ್ಣು ಕುಕ್ಕದೆ ಹೇಳ್ತಾಯಿದ್ದಾರೆ
ನೋಡಪ್ಪ ಮರಿದೇವರೇ
ಬಸವಣ್ಣನ ಹೆಸರೇಳಿ ಬಸವಂಗ
ನೀನು ಬಸವಂಗ ಧರಿಸಬೇಕಾದ್ರೆ
ಮೊಟ್ಟ ಮೊದಲನೆಯದಾಗಿ ಮುಖವನ್ನು ತೊಳೆಯಬೇಕಾದರೆ
ಈ ಪಂಚಮುಖದ ದೇವರು
ಈ ಲಿಂಗವನ್ನು ತೊಳೆದು
ಈಬೂತಿ ಧರಿಸುವಾಗ
ಈಬೂತಿಯನ್ನು ಕೈಲಿಡಿದುಕೊಂಡು
ಓಂ ನಮಃ ಶಿವಾಯ
ಓಂ ಗುರುವೇ ಗುರುನಾದವೇ ಮರೆಯಬೇಡ ಮರುಳೆ
ಓಂ ನಮಃ ಶಿವಾಯಿ ಓಂ ನಮಃ ಶಿವಾಯಿ
ಬಸವೇಶ್ವರ ಅಂತ್ಹೇಳಿ ಭಸ್ಮ ಧರಿಸಿ
ಆನಂತರವಾಗಿ
ನೀನು ಊಟ ಉಪಚಾರಣೆ ಮಾಡುವಾಗ
ನಿನಗೆ ಇಕ್ಕದಂಥ ಊಟವನ್ನು ತೆಗೆದು
ಆ ಅನ್ನವನ್ನು ಕೈಲಿಡಿದುಕೊಂಡು
ನಮಸ್ಕಾರವನ್ನು ಮಾಡಿ
ಆ ಕಟ್ಟಿರುವಂಥ ಕೊರಳಲ್ಲಿರುವಂಥ ಲಿಂಗದೇವರಿಗೆ ತೋರಿ
ಒಂದು ಕಡೆ ಎಡೆ ಮಡಗ್ಬುಟ್ಟು ಊಟ ಮಾಡಬೇಕಂತ್ಹೇಳಿ
ಗುರು ಭೋದನೆ ಮಾಡ್ಬುಟ್ಟು
ಮೇಲಕ್ಕೆತ್ತಿ ನಿಲ್ಸಿಕೊಂಡ್ರು ಮಾಯ್ಕಾರ ಗಂಡನ
ಭೂಮುತ್ತನ ಜೋಳಿಗೆ ತಗದು ಮುಂಗೈಗೆ ಧರಿಸಿದ್ರು
ಧರೆಗಾತ್ರ ದಂಡುಗೋಲು ಬಲಗೈಗೆ ಕೊಟ್ರು
ಎಡದ ಕೈಲಿ ಕಂಚಿನ ಕಂಸಾಳೆ ಆಧಾರ ಮಾಡ್ದ್ರು
ಐದು ಮನೆ ಭಿಕ್ಷಾ ಮಾಡ್ಕಂಡು ಬಾ
ಏನಂಥ?
ಧರ್ಮ ಗುರು ಕ್ವಾರಣ್ಯದ ಭಿಕ್ಷಾ
ಭವತಿ ಭಿಕ್ಷಾಂದೇಹಿ
ಗುರುಧರ್ಮ ಕ್ವಾರಣ್ಯದ ಭಿಕ್ಷಾ
ಪಂಚೇಳು ದೀಕ್ಷಾ ಭಿಕ್ಷಾ ಅಂತೇಳಿ
ನೀ ಭಿಕ್ಷೇ ಮಾಡು ಅಂತವರೇs ಗುರುಗಳೂs || ನೋಡಿ ನಮ್ಮ ಶಿವನಾ ||

ಬೀದಿಯಲ್ಲಿ ಐದುಮನೆಗೆ ಭಿಕ್ಷಕ್ಕೇ ಹೋದಾಗ
ಯಾರಾದರೂ ನಮ್ಮಂಥ ಕಾವಿ ಜಂಗಮರ ಕಂಡ್ರೆ
ನಮಸ್ಕಾರ ಗುರುವೇ ಅಂತೇಳಪ್ಪ ಮಗನೇ
ಯಾರಾದ್ರೂ ನಿನ್ನಂಥ ಗುಡ್ಡ ಕಂಡ್ರೇ
ಶರಣಾರ್ಥಿ ಗುಡ್ಡಪ್ಪ
ನಾಲ್ಕು ಜನ ಗುಡ್ಡಗಳ ಕಂಡ್ರೆ
ಶರಣು ಶರಣಾರ್ಥಿ ಅಂತ್ಹೇಳು
ಮತ್ತೇ ಜೋಗಪ್ಪ ಕಂಡ್ರೆ
ಆದೇಶ ಜೋಗಪ್ಪ ಶರಣಾರ್ಥಿ ಅನ್ನು
ದಾಸಯ್ಯ ಕಂಡರೆ ಬಿಳಿಗಿರಿರಂಗನ ಸ್ವಾಮಿಯವನು
ಅಡಿಯಿಂದ ಶರಣಾರ್ಥಿ ದಾಸಪ್ಪ ಅಂತ್ಹೇಳು
ಈ ತರವಾಗಿ ನಮಸ್ಕಾರ ಮಾಡಿ
ಭಿಕ್ಷೆಯನ್ನ ಮಾಡ್ಕಂಡ್ ಬಾ ಅಂದ್ರು
ಗುರುಗಳ ಮಾತಕೇಳಿ ಕಂಚಿನ ಕಂಸಾಳೆ ಹೊಡೆದುಕೊಂಡು
ಭವತಿ ಭಿಕಾಂದೇಹಿ
ಧರ್ಮಗುರು ಕ್ವಾರಣ್ಯದ ಭಿಕ್ಷಾ ಅಂತ್ಹೇಳಿ
ಅವರು ಭಿಕ್ಷ ಮಾಡಿಕೊಂಡು ಬಂದವರೇ ಮಾಯ್ಕಾರಾs || ನೋಡಿ ನಮ್ಮ ಶಿವನಾ ||

ಆಯ್ತು ಗುರುವೇ ನಿಮ್ಮ ಕಾಯಕವಾಯ್ತು
ಯಾವ್ದಾದರೂ ಚಾಕರೀ ಕೊಡಿ ಅಂದ್ರು
ಏನು ಚಾಕರಿ ಮಾಡಿರಿ ಮರಿದೇವ್ರು ಅಂದ್ರು
ನೀವೇಳಿದ ಚಾಕರಿ ಬಿಡದೆ ಮಾಡ್ತೀನಿ ಅಂದ್ರು
ಆವಾಗ
ಕುಂತೂರು ಬೆಟ್ಟದ ಫ್ರಭುಲಿಂಗಸ್ವಾಮಿ ಬೆಟ್ಟದ ಪಕ್ಕದಲ್ಲಿ
ಎಲ್ಲಪ್ಪ ಅದು ಬೆಟ್ಟ ಅಂದ್ರೆ
ಕುಂತೂರು ಬೆಟ್ಟದ ಪಕ್ಕದಲ್ಲಿ
ಮಂಗೀವುಂಡಿ ಕುಂತೂರ್ಗೂ ಮಧ್ಯೆ
ಬಸವಣ್ಣನ ದೇವಸ್ಥಾನವಿದೆ
ಆ ಬಸವಣನ ದೇವಸ್ಥಾನ ಅಂದ್ರೆ ಉಕ್ನಳ್ಳಿ ಬಸವಣ್ಣ
ಪೂಜೆ ಮಾಡಕ್ಕೋದಂಥ ಪೂಜಾರಿನ
ದಿನಕ್ಕೊಬ್ಬೊಬನ್ನ ನುಂಕ್ತಾಯಿದ್ದ
ಉಕ್ನಳ್ಳಿ ಬಸವಣ್ಣ
ತೊಂಬತ್ತೊಂಬತ್ತು ಜನ ಪೂಜಾರಿ ನುಂಗಿದ್ರು
ಏನಯ್ಯಾ ಮರಿದೇವ್ರೆ
ಹೇಳಿದ ಚಾಕರಿ ಮಾಡಿಯಾ? ಅಂದ್ರು
ಮಾಡ್ತೀನಿ ಗುರುವೇ ಅಂದ್ರು
ಇಗೋ ನೀನು ದಿವ್ಸಕ್ಕೊಂದ್ಸಾರಿ ಹೋಗಿ
ಆ ಉಕ್ನಳ್ಳಿ ಬಸವಣ್ಣನ ಪೂಜೆ ಮಾಡ್ಕಂಡ್ ಬಾ
ಅನುತೇಳಿ ಗುರುದೇವ
ಒಂದು ಪುಸುಮದ ಕುಕ್ಕೆ
ಒಂದು ಕಾವಿ ಚೌಕ ಕೈಲಿ ಕೊಟ್ರು
ಕಾವಿ ಚೌಕ ತಕ್ಕಂಡ್ರು
ಒಂದು ಕುನ್ನೀರು ಚೆಂಬು ತಕ್ಕೊಂಡು
ಪುಸುಮದ ಕುಕ್ಕೆ ಕೈಲಿಡುಕೊಂಡು
ಅವರು ಕಲ್ಲೂರು ತೋಪಿಗೆ ದಯಮಾಡವರೇ ಮಾಯ್ಕಾರಾs || ನೋಡಿ ನಮ್ಮ ಶಿವನಾ ||

ಕಲ್ಲೂರು ತೋಪಿನಲ್ಲೋಗಿ ಸ್ನಾನ ಮಡೆಯನ್ನು ಮಾಡಿ
ಕಾವೇರಿವೊಳುಗೆ ಮಾಲಂಗಿ ಮಡುವಿನಲ್ಲಿ
ಸ್ನಾನ ಮಡಿಯನ್ನ ಮಾಡ್ಕಂಡ್ರು
ಪೂಜಾರಿಗಳೆಲ್ಲ ಹೋಗಿ ಹೂವಿನಗಿಡದಲ್ಲಿ
ಜಾತಿಗೆ ಒಂದೊಂದು ಬಗೆ ಹೂವೆತ್ತುತಾ ಇದ್ರು
ಈ ಮಾಯ್ಕಾರಾ ಗಂಡ ಹಾಗೆ ಮಾಡ್ಲಿಲ್ಲ
ಪುಸುಮದ ಕುಕ್ಕೆ ಎಡಗೈಲಿ ಹಿಡಕೊಂಡು
ಅಂಕೋಲೆ ಪತ್ರೆ ಕಿತ್ತಿ ತುಂಬ್ಕಂಡು
ಉಕ್ನಳ್ಳಿ ಬಸವಣ್ಣ ಅಂತ್ಹೇಳವರೇ ಗುರುಗಳು
ಅವನಿಗೆ ಉಕ್ಕುನ ಕಡ್ಲೆ ತಿನ್ನಿಸಬೇಕು ನಾನು ಅಂತೇಳೀ
ತಮ್ಮ ಕಾವಿ ಚೌಕದಲ್ಲಿ ಮೂರುಸೇರು ಮರಳ ಕಟ್ಟಿಕೊಂಡು
ಆಗ್ನಿ ಚೆಂಬ್ನಲ್ಲಿ ನೀರ ತುಂಬ್ಕಂಡು
ಅವರು ಬಸವಣ್ಣನ ಪೂಜೆಗೆ ಬರುತಾವರೆ ಮಹದೇವಾs || ನೋಡಿ ನಮ್ಮ ಶಿವನಾ ||

ಬಸವಣ್ಣನ ಪೂಜೆಗೆ ಬಂದ್ರು
ಬಸವಣ್ಣ ತೊಂಬತ್ತೊಂಬತ್ತು ಜನ ಪೂಜಾರಿ ನುಂಗಿ
ಏನು ವ್ಯಾಗ್ರನ ಹಾಗೆ ಹೂಂಕರಿಸುತ್ತ ಕುಂತವ್ನೆ
ಓಹೋ ಇವತ್ಯಾರೋ ಹೊಸ ಮರಿದೇವರು ಬತ್ತಾವ್ನೆ
ಕೆಂಪಗೆ ತೊಂಡೆ ಹಣ್ಣಾಗಿ
ಗೊಟಕ್ನೆ ನುಂಗಬೇಕು ಅಂತ್ಹೇಳಿ
ಮಾಯ್ಕಾರ ಗಂಡ ಆ ರೀತಿ ಮಾಡ್ನಿಲ್ಲ
ಆ ಪೂಜಾರಿಗಳು ಅವನ ಮೈಕೈನೆಲ್ಲ ತೀಡಿ ತೊಳಿತಾಯಿದ್ರು
ಮಹದೇವಾ ಹಾಗೆ ಮಾಡ್ನಿಲ್ಲ
ನೆತ್ತಿಮ್ಯಾಲ್ನಿಂದ ಬಾಲದವರ್ಗೂ
ಕುನ್ನೀರು ಚೆಂಬ್ ತಕ್ಕೊಂಡ್ ನೀರೂದ್ಬುಟ್ಟರು
ಆವಾಗಲೀಗ ಈಬುತ್ತಿ ತಗದು ಈಬುತ್ತಿ ಬಸುವಂಗ ಬಳಿದ್ಬುಟ್ರು
ಅಂಕೋಲೆ ಪತ್ರೆ ಎತ್ತಿ ನೆತ್ತಿ ಮ್ಯಾಲೆ ಮಡಗ್ಬುಟ್ರು
ಧೂಪದಾರ್ತಿ ನೈವೇದ್ನೆ ಮಾಡುಬಿಟ್ಟು
ತಮ್ಮ ಕಾವಿ ಚೌಕ್ದಲ್ಲಿತ್ತಲ್ಲ ಮೂರು ಕಂಡುಗ ಮರಳು
ಮೂರು ಸೇರು ಮರಳು
ಅದಕ್ಕೆ ಮೂರು ಸೇರು ಉಕ್ಕಿನ ಕಡಲೆ ಮಡುಗುದ್ರು
ಬಸವಣ್ಣನ ಮುಂದೆ ಮಡುಗುದ್ರು
ಲೇ ಬಸವಣ್ಣ ನಮ್ಮ ಗುರುಗಳು ಉಕ್ನಳ್ಳಿ ಬಸವಣ್ಣ ಅಂತೇಳುದ್ರು
ಅದಕ್ಕೆ ಉಕ್ಕುನ ಕಡ್ಲೆ ತಂದಿದ್ದೀನಿ
ಮೂರು ಸಾರಿ ಗುಟುರಾಕಿ
ಮೂರು ಮುಕ್ಕು ಮುಕ್ಕಬೇಕು
ಇಲ್ದೇಹೋದ್ರೆ ನೋಡು
ಉರಿಸಿಂಗಿ ಕೊರಡಲ್ಲಿ ಮೂರೇಟು ಹೊಡೀತೀನಿ ಅಂತ್ಹೇಳಿ
ತಮ್ಮ ಕೊರಡ ಎಳಕೊಂಡ್ರು ಮಾಯ್ಕಾರಾs || ನೋಡಿ ನಮ್ಮ ಶಿವನಾ ||

ಯಾವಾಗ ಉರ್ಸಿಂಗಿ ಕೊರಡ ನೋಡುದ್ನೋ ಬಸವಣ್ಣ
ನನ್ನ ಮೈಕೈ ಎಡೆದೋಗ್ಬುಡ್ತದೆ
ಈ ಕೊರಡದೇಟು ಬಿದ್ರೆ ಅಂತೇಳಿ
ತೊಂಬತ್ತೊಂಬತ್ತು ಜನ ಪೂಜಾರಿ ನುಂಗಿದ್ದ ಬಸವಣ್ಣ
ಮಾಯ್ಕಾರ ಗಂಡ ಮಾದಪ್ಪನ ಮಾತ ಕೇಳಿ
ಗಡಾಗಡ್ನೆದ್ದು ಮ್ಯಾಲಕೆ
ನಡೀಕೊಂಡು ಗಂಜಲ ಹುಯ್ಕೊಂಡು
ಮೂರು ಮುಕ್ಕು ಮುಕ್ದ
ಅಂಗಳೆಲ್ಲ ತರಚೋಗ್ಬುಡ್ತು
ಹಲ್ಲೆಲ್ಲ ಉದುರೋಗ್ಬುಡ್ತು
ಲೇ ಬಸವಣ್ಣ
ಇದೇ ನಿನಗೆ ಮೊದಲು
ಇನ್ನು ನಾನಿರುವವರೆಗೂ ನಿನಗೆ ಉಕ್ಕಿನ ಕಡ್ಲೆ ಊಟ
ಅಂತೇಳುಬುಟ್ಟು ಮಾಯ್ಕಾರ ಗಂಡ
ಅವರು ಕುಂತೂರು ಮಠಕೆ ದಯಮಾಡವರೇ ವಾಯ್ಕಾರಾs || ನೋಡಿ ನಮ್ಮ ಶಿವನಾ ||

ಇದೇ ಪ್ರಕಾರವಾಗಿ ಆರು ದಿನ
ಬಸವಣ್ಣನ ಪೂಜೆ ಮಾಡುದ್ರು
ಆರು ಮೂರ್ಲಿ ಹದಿನೆಂಟು ಸೇರು
ಉಕ್ಕಿನ ಕಡ್ಲೆ ಮುಕ್ಕಿ ಮುಕ್ಕಿ ಬಸವಣ್ಣ
ಒಳಗಲ ಕಳ್ಳೆಲ್ಲ ಹೋಗ್ಬುಡ್ತು
ದಿನಾದಿನಕೆ ಸಮದೋಗ್ಬುಟ್ಟ
ತಡಕೆಯಾಗಿ ಅಳ್ಳಾಡ್ತಾವ್ನೆ
ನಾಳೆ ಏಳ್ನೆ ದಿವ್ಸಕ್ಕೆ ನನ್ನ ಪ್ರಾಣೊಂಟೋಯ್ತದೆ
ಇವತ್ತು ಹೋಗಿ ನಾನು ಗುರುಗಳ್ಗೆ ದೂರೇಳ್ಬುಟ್ಟು
ನನ್ನ ಚೆನ್ನಾಗೊಪ್ಪ ಮಾಡ್ಲಿ ಗುರುಗಳು
ಪ್ರಭುಸ್ವಾಮಿ ಅಂತೇಳಿ
ಹನ್ನೇರಡ ಗಂಟೆ ರಾತ್ರೆವೊಳ್ಗೆ ಉಕ್ನಳ್ಳಿ ಬಸವಣ್ಣ
ಅವನು ಕುಂತೂರು ಮಠಕೆ ಬರುತವನೇ ಬಸವಣ್ಣಾs || ನೋಡಿ ನಮ್ಮ ಶಿವನಾ ||

ಕುಂತೂರು ಮಠಕೆ ಬಂದು ಹನ್ನೆರಡು ಗಂಟೆ ರಾತ್ರೆವೊಳಗೆ
ಪ್ರಭುಸ್ವಾಮಿಯವರ ಮಂಚದ ಪಕ್ದಲ್ಲಿ ನಿಂತ್ಕೊಂಡು
ದುಃಖ ಮಾಡ್ತ ನಿಂತ್ಕಂಡ ಬಸವಣ್ಣ
ಪ್ರಭುಸ್ವಾಮಿಯವರ್ಗೆ ಹನ್ನೆರಡ್ ಗಂಟೆವೊಳಗೆ ಎಚ್ಚರ ಆಯ್ತು
ಬಲಗಡೆ ಎದ್ದು ನೋಡುದ್ರು ಬಸವಣ್ಣ
ಏನು ಬಂದ್ಯಪ್ಪ ಅಂತ ಮೈ ಸವರುದ್ರು
ಗುರುದೇವಾ ನನಗೆಂಥ ಪೂಜಾರಿ ಕೊಟ್ರಿ
ನನ್ನ ಮೈ ಕೈ ನೋಡೆ ನನ್ನ ಬಾಯ್ನಲ್ಲಿ ಹಲ್ಲಿಲ್ಲ
ಆರು ಮೂರ್ಲಿ ಹದಿನೆಂಟು ಸೇರು
ಉಕ್ಕುನ ಕಡ್ಲೆ ನುಂಗಿ ನನಗೆ ಕಳ್ಳಿಲ್ಲ ಗುರುವೇ
ನಾಳೆ ಪ್ರಾಣ ಬಿಟ್ಬುಡ್ತೀನಿ
ನನ್ನ ಚೆನ್ನಾಗೊಪ್ಪ ಮಾಡ್ಬುಡಿ ಗುರುವೇ ಅಂತೇಳಿ
ಅವನು ಗುರುಗಳ ಪಾದಕೆ ನಮಸ್ಕಾರ ಮಾಡವ್ನೇ ಬಸವಣ್ಣಾs || ನೋಡಿ ನಮ್ಮ ಶಿವನಾ ||

ಅಯ್ಯಾ ಬಸವಣ್ಣಾ
ದುಃಖ ಮಾಡ್ಬೇಡ
ಬೆಳಿಗ್ಗೆ ನಾನು ಪರೀಕ್ಷೆ ಮಾಡಿ
ಆ ಮರಿದೇವ್ರಿಗೆ ಬುದ್ದಿ ಹೇಳ್ತೀನಿ ನಡಿಯಪ್ಪ ಅಂತೇಳಿ ಕಳಿಸ್ಬುಟ್ರು
ಬೆಳಿಗ್ಗೆ ಎದ್ದು ಮಾಯ್ಕಾರ ಗಂಡ ಮಾದಪ್ಪ
ಅದೇ ರೀತಿಯಾಗಿ ಬಸವಣ್ಣನ ಪೂಜೆಗೆ
ಕಲ್ಲೂರು ತೋಪಿಗೆ ಹೋಗಿದ್ದಾರೆ ಸ್ನಾನ ಮಡಿ ಮಾಡುವುದಕ್ಕೆ
ಆ ಟೈಮ್ನಲ್ಲಿ ಪ್ರಭುಸ್ವಾಮಿ ಬಂದು
ಬಸವಣ್ಣನ ದೇವಸ್ಥಾನದಲ್ಲಿ ಬಂದು
ಮೂಲೆವೊಳಗೆ ಮರೆಯಾಗಿ ಕೂತವ್ರೆ
ಮರಿದೇವ್ರು ಮಾಯ್ಕಾರ ಗಂಡ
ಆಗ್ನಿ ತಪ್ಲೇಲಿ ನೀರ ತುಂಬ್ಕಂಡ
ಅಂಕೋಲೆ ಪತ್ರೆ ಕಿತ್ಕೊಂಡು
ಕಾವಿ ಚೌಕ್ದಲ್ಲಿ ಮೂರ್ಸೇರು ಮರಳು ಕಟ್ಕೊಂಡು
ಬಸವಣ್ಣನ ಪೂಜೆಗೆ ಬಂದವರೇ ಮಹದೇವಾs || ನೋಡಿ ನಮ್ಮ ಶಿವನಾ ||

ದಿನಾ ಮಾಡ್ತಾಯಿದ್ದಂಥ ರೀತಿಯಲ್ಲಿ
ಬಸವಣ್ಣನ ನೆತ್ತೀಮ್ಯಾಲೆ ನೀರೆರೆದ್ಬುಟ್ರು
ಈಬತ್ತಿ ಬಸವಂಗ ಎಳೆದ್ಬುಟ್ರು
ಅಂಕೋಲೆ ಪತ್ರೆ ಧರಿಸ್ಬುಟ್ರು
ಧೂಪದಾರ‍ತಿ ನೈವೇದ್ಯ ಮಾಡ್ಬುಟ್ರು
ಆ ಉಕ್ಕಿನ ಕಡ್ಲೆ ಮುಂದೆ ಮಡಗ್ಬುಟ್ರು
ಲೇ ಬಸವಣ್ಣ
ಏಳನೇ ದಿನ ಮುಕ್ಕಪ್ಪ ಅಂತೇಳಿ ಕೊರಡ ಎತ್ತಿದ್ರು
ಓಡಿಬಂದು ಗುರುಗಳು ಪ್ರಭುಸ್ವಾಮಿ ಮುಂಗೈ ಹಿಡ್ಕೊಂಡ್ರು
ಮರಿದೇವ್ರೇ ಮರಿದೇವ್ರೇ
ನೀವು ನಿಜವಾಗ್ಲೂ ಮರಿದೇವ್ರಲ್ಲ
ಮಾಯ್ಕಾರ ನಡಿಯಪ್ಪ ಅಂತ್ಹೇಳಿ ಎಳೀತಾವ್ರೆ
ಎಳೆದರೂ ಹೋಗ್ನಿಲ್ಲ
ತಳ್ಳದ್ರು ಹೋಗ್ನಿಲ್ಲ
ಮಾತಾಡಿಸ್ದ್ರೂ ಮಾತಾಡ್ಲಿಲ್ಲ ನಿಂತ್ಕೊಂಬುಟ್ಟ ಮಾದಪ್ಪ
ಗುರುಗಳಿಗೆ ಕ್ವಾಪ ಬಂದ್ಬುಡ್ತು
ಏನೋ ನೀನು ಮಹಾ ದೈವ ಆಗಿ ನಿಂತಿದ್ದೀಯ ಅಂದ್ರು
ಓಹೋ ಗುರುದೇವಾ
ನನ್ನ ಹೆತ್ತಂತ ತಾಯಿ
ಮಹಾಲಿಂಗು ಶಿವಲಿಂಗು ಅಂತ್ಹೇಳಿ ನಾಮ್ಕರಣ ಮಾಡ್ದಳು
ನನ್ನ ಗುರುಗಳು ಅಂದಾಚಂದಾ ನೋಡಿ
ವ್ಯಾಘ್ರಾನಂದ ಸ್ವಾಮಿಗಳು
ಚಂದ್ರಶೇಖರ ಅಂತ್ಹೇಳಿ ಕರೆದ್ರು
ಚಂದ್ರಶೇಖರ ಮೂರ್ತಿ ಅಂತ್ಹೇಳಿ
ಆದರೆ ನನಗೆ ವಿದ್ಯಾಬುದ್ಧಿಯನ್ನು ಕಲಿಸಿ
ನನಗೆ ಸುತ್ತೂರು ಮಠದಲ್ಲಿ
ಆದಿ ಗುರು ಮಾಯ್ಕಾರ ಮಾದೇವ
ಅಂತ್ಹೇಳಿ ನಾಮ್ಕರಣ ಮಾಡುದ್ರು
ಈವಾಗಿನ ಹೆಸರಿಂದ
ಮಾದಯ್ಯ ಮಾದಯ್ಯ ಅಂದ್ರೆ
ಪ್ರಪಂಚಕ್ಕೆ ಮಹಾದಪ್ಪವಾದವ್ನು ನಾನು
ಗುರುದೇವಾ ಅಂತ್ಹೇಳಿ
ಗುರುಗಳಿಗೆ ನಮಸ್ಕಾರ ಮಾಡ್ಬುಟ್ಟು
ಅವರು ಕುಂತೂರು ಮಠಕೆ ದಯಮಾಡವರೇ ಮಹದೇವಾs || ನೋಡಿ ನಮ್ಮ ಶಿವನಾ ||