ಗುರುವೇ ಗುರುಪಾದವೇ ನಮ್ಮಪ್ಪಾಜಿ
ಅಖಂಡ ಮಹಿಮ ಅಲ್ಲಮಾಪ್ರಭು
ಜಗಕೆ ಸೂತ್ರಧಾರಿ
ಜಗತ್ತಿಗೆ ಒಡೆಯನಾದ ತಂದೆ
ಬೂದಿಮುಚ್ಚಿದ ಕೆಂಡ
ಭೂಲೋಕದಲ್ಲಿ ಉದ್ಧಂಡ
ಮಾದೇವ ಏಳು ಮಲೆಯಲ್ಲಿ ಕೂತ್ಕಂಡ್ರು
ಇವರ ಪೂಜೆ ನೈವೇದ್ಯ ನಮಗೆ ಗೊತ್ತಿಲ್ಲ
ಸರಿಯಾಗಿ ಐದು ಜನ ಋಷಿಗಳ ಪಡಕೊಂಡು
ನಾನು ಏಕವಾಗಿರಬೇಕು
ಏಳು ಮಲೆ ಕೈಲಾಸದಲ್ಲಿ
ಕಲಿಯನ್ನ ಕಟ್ಟಿ ಆಳಬೇಕು ಅಂತ್ಹೇಳಿ
ಆವಾಗ ಮಾದೇವ
ಸ್ನಾನ ಮಡಿ ಮಾಡಬೇಕಾದರೆ
ಅಂತರಗಂಗೆ ಹರಿವಾರಕ್ಕೆ ಹೋಗ್ತಾಯಿದ್ರು
ಎಷ್ಟು ಹೊತ್ತಿನೊಳಗೆ ಅಂದ್ರೆ
ಹನ್ನೆರಡು ಗಂಟೆ ರಾತ್ರಿವೊಳಗೆ
ಮಹಾದೇವ ಸ್ನಾನ ಮಡಿಗೆ ಹೋಗುವಾಗ
ಹಕ್ಕಿ ಗಲಗು ಇರಬಾರದು
ಪಕ್ಷಿ ಗಲಗು ಇರಬಾರದು
ಅಂಥಾ ವ್ಯಾಳ್ಯದಲ್ಲಿ ಸ್ನಾನ ಮಡಿಯನ್ನ ಮಾಡ್ಕಂಡು
ಮಹಾದೇವ ಏಳು ಮಲೆ ಕೈಲಾಸದಲ್ಲಿ

ಅಯ್ಯಾ ಏಳು ಮಲೆಯ ಕೈಲಾಸದಲ್ಲಿ ಗುರುವೇ
ಯೋಗವಾಗಿ ಒರಗವರೇs

ಕೋರಣ್ಯ ನೀಡಮ್ಮ ಕೋಡುಗಲ್ಲು ಮುನಿಗೇ
ಆ ಮಲೆ ಈ ಮಲೆ

ಮಾದೇವ ಇರುವುದು ಯಾವ ಮಲೆಯೋs
ದೇವರ ಗುಡ್ಡರ ಮಾದೇವ ಇರುವಾದು
ದೇವ ಮಲೆಯೊಳಗೆs

ಮಾದೇವ ಸರಿಯಾಗಿ ನಾನು ಒಕ್ಲು ಪಡೀಬೇಕು ಅಂತ್ಹೇಳಿ
ಆವಾಗಲೀಗ ಆನೆದಿಂಬದ ಮಲೆಗೆ ಬಂದ್ರು
ಚಿಕ್ಕಾಲಳ್ಳ ದೊಡ್ಡಾಲಳ್ಳವನ್ನ ಕಡದು
ಕಂಬದ ಬೋಳಿಮ್ಯಾಲೆ ನಿಂತ್ಕಂಡು ನೋಡ್ತಾಯಿದ್ದಾರೆ
ಮಾಯ್ಕಾರ ಗಂಡ
ಯಾವ ಗ್ರಾಮದಲ್ಲೂ ಕೂಡ
ದೇವಾನುದೇವತೆಗಳಿಲ್ಲ
ಮಾರೀರಿಲ್ಲ ಮಸಣಿಯರಿಲ್ಲ
ದುರ್ಗಿ ಚಾಮುಂಡಿಯರಿಲ್ವಲ್ಲ
ಈ ಮೈಸೂರು ಮೇಲ್ನಾಡ್ನಲ್ಲಿ
ಎಲ್ಲೋಗಿದ್ದಾರೆ ಎಲ್ಲಿ ಯಾವ ಕಾರಾಗೃಹದಲ್ಲಿದ್ದಾರೆ
ನೋಡಬೇಕು ಅಂತ್ಹೇಳಿ

ಅಯ್ಯಾ ಏಳುಮಲೆಯ ಒಳಗೇ ಗುರುವೇ
ಯೋಗವಾಗಿ ನೋಡವರೇs
ಕೋರಣ್ಯ ನೀಡಮ್ಮ ಕೋಡುಗಲ್ಲು ಮುನೀಗೇs

ಸೀಗೆ ತಾಳಲ್ಲಿ ಶಿವನಂತೆ
ಬರಗೂರು ಬೆಟ್ಟಕ್ಕೆ ಬನ್ಯಪ್ಪಾs ಮಾದೇವಾ
ಮನವ ಒಪ್ಪಿ ದುಡುಗಳ ನೋಡೋ
ದುಂಡುಳ್ಳ ಮಾದೇವಾs

ಕಂಬದ ಬೋಳಿ ಸೀಮೆಮ್ಯಾಲೆ ನಿಂತ್ಕಂಡು ನೋಡುದ್ರು
ದಕ್ಷಿಣ ಭಾಗದಲ್ಲಿ
ಯಾವ್ದೋ ಒಂದು ಅರಮನೆ ಶಿಖರ ಕಂಡ್ಬುಡ್ತು
ಅರಮನೆ ಶಿಖರ ಅಂದ್ರೆ
ಬಂಕಾಪುರಿ ಶ್ರವಣೇಶ್ವರನ ಪಟ್ಟಣ
ಓಹೋ ಯಾವ್ದೋ ಒಂದು ಪಟ್ಟಣ ಕಾಣ್ತಾಯಿದೆ
ಇದನ್ನ ನೋಡಬೇಕಲ್ಲ ಅಂತ್ಹೇಳಿ ಮಹಾಗುರುವು
ಮುತ್ತಿನ ಜೋಳಿಗೆ ಧರಿಸ್ಕಂಡು
ಕಂಚಿನ ಕಂಸಾಳೆ ಹಿಡಕಂಡು
ಧರೆಗಾತ್ರ ದುಂಡು ಕೋಲ ಹಿಡಕಂಡು

ಅವರು ಬಂಕಪುರಿಗೆ ದಯಮಾಡವರೇ ಮಹದೇವಾs || ನೋಡಿ ನಮ್ಮ ಶಿವನಾ ||

ಬಂಕಾಪುರಿ ಪಟ್ಟಣ ಅಂದರೆ
ಆ ಶ್ರವಣದೊರೆ ಸುತ್ತಾ ಕೋಟೆ ಕಟ್ಟಿಸ್ಕಂಡು
ಬಾಳ ಐಶ್ವರ್ಯದಲ್ಲಿ ಸಿಂಹಾಸನದ ಮೇಲೆ
ಕೂತ್ಕಂಡು ಆಳ್ತಾಯಿದ್ದಾನೆ
ಆಳಬೇಕು ಅಂದರೆ
ನಾರಾಯಣ ಶಕುನ ನೋಡುವುದಕ್ಕೆ
ಬ್ರಹ್ಮದೇವ ಲೆಕ್ಕ ಬರೆಯುವುದಕ್ಕೆ
ದೇವಾನುದೇವತೆಗಳೆಲ್ಲ ರಜ ಹೊಡೆದು ರಂಗಾಲೆ ಬಿಡುವುದಕ್ಕೆ
ಆ ಶನಿಮಾತ್ಮ
ಛಾಯಾಧೇವಿ ಮಗ ಪುತ್ರ
ಶನೇಶ್ವರ ಮುಖವನ್ನ ಕಪ್ಪು ಕಸ್ತೂರಿ ನೋಡಿ
ಇವನ ಮುಖ ನೋಡಬಾರ‍ದು ಅಂತ್ಹೇಳಿ
ಸಿಂಹಾಸನದ ಕೆಳಗೆ ಮೊಕಣ್ಣನಾಗಿ ಮಲಗಿಸಿಕೊಂಡು
ಅವನ ಬೆನ್ನು ಮ್ಯಾಲೆ ಕಾಲಿಟ್ಕಂಡು ರಾಜ್ಯ ಆಳ್ತಾ ಅವ್ನೆ
ಅಷ್ಟು ಹೊತ್ತಿಗೆ ಮಾಯ್ಕಾರಗಂಡ ಮಾದಪ್ಪ
ಕಂಚಿನ ಬಟ್ಟಲ ನಾದ ಮಾಡ್ಕಂಡು
ಜಂಗಿನ ಮೊರ್ತ ಮಾಡ್ಕಂಡು

ಅವರು ಕೋಟೆ ಬಾಗಿಲಿಗೆ ದಯಮಾಡವರೇ ಮಾಯ್ಕಾರಾs || ನೋಡಿ ನಮ್ಮ ಶಿವನಾ ||

ಯಾವಾಗ ಕೋಟೆ ಬಾಗಿಲಿಗೆ ಕಂಚಿನ ಬಟ್ಲ
ಶಬ್ಧ ಮಾಡ್ಕಂಡು ಹೋದ್ರೋ
ಅಲ್ಲಿರುವಂಥ ದೇವಾನು ದೇವತೆಗಳೆಲ್ಲ
ಕೈ ಚಪ್ಪಾಳೆ ಹೊಡಕಂಡು ಮ್ಯಾಲಕೆದ್ದುಬುಟ್ರು
ಉತ್ತುರ ದೇಶದ ಮಾಯ್ಕಾರ
ಉತ್ತುರ ದೇಶದ ಮರಿದೇವರು ಬರ್ತಾಯಿದ್ದಾರೆ ಅಂತ್ಹೇಳಿ
ಶ್ರವಣ ದೊರೆ ಸಿಂಹಾಸನದ ಮೇಲೆ ಕೂತಿದ್ದ
ಅಯ್ಯಾ ಬ್ರಹ್ಮದೇವಾ ನಾರಾಯಣ
ಯಾರು ಬರ್ತಾಯಿದ್ದಾರೆ ಅಂದ
ಉತ್ತುರದೇಶದ ಮರಿದೇವರು ಮಾಯ್ಕಾರ ಮಾದಪ್ಪ ಅಂದ್ರು
ಕರಿಯಯ್ಯ ಹತ್ತಿರ ಅಂದ್ರು
ಆವಾಗ ಹತ್ರ ಕರ್ದ ತಕ್ಷಣವೇ
ಏನಪ್ಪ ನಿನ್ನ ಹೆಸರೇನು ಅಂದರು
ಉತ್ತುರ ದೇಶದ ಮಾದಯ್ಯ
ಮಾದಾರಿಯೋ
ಮಾದಯ್ಯ ಉತ್ತುರದೇಶದ ಮಾದಾರಿ
ಮಾದಯ್ಯ ಉತ್ತುರ ದೇಶದ ಮಾದಯ್ಯ ಅಂದ್ರು
ಮಾದಾರಿ ಅಂತ ಐದ್ಸಾರಿ ಕೇಳ್ದ
ಐದು ಸಾರಿಗೂ ಮಾದಾರಿ ಅಂದ್ರು
ಹಾಗಾದರೆ ಮಾದಾರಿ ಅಂದ್ಮೇಲೆ
ನನ್ನ ಕಾಲಿಗೆ ತಕ್ಕಂಥ ಚೆಮ್ಮಾಳಿಗೆ ಮಾಡ್ಕಂಡು ಬಂದಿಯ ಅಂದ್ರು
ಮಹದೇವ ಇದೇ ಒಳ್ಳೆ ಟೈಮು
ಈ ಶ್ರವಣ ಮಹಾತ್ಮನ ಸಂಹಾರ ಮಾಡಿ
ದೇವಾನುದೇವತೆಗಳ ಬಿಡುಗಡೆ ಮಾಡಬೇಕು ಅಂತ್ಹೇಳಿ
ಮಾಡ್ತೀನಿ ದೊರೆಯೆ ಅಂದ್ರು
ಏನಾಗಬೇಕು ನಿನಗೆ ಅಂದ್ರು
ಏನಿಲ್ಲ ಅಳತೆ ಕೊಡಿ ಅಂದ್ರು
ಆವಾಗ ಗಜಕಡ್ಡಿ ತಕ್ಕೊಂಡು
ನಾರಾಯಣ ಬ್ರಹ್ಮದೇವಾ
ಅಳತೆ ಮಾಡಿ ಅಂತೇಳು ಬುಟ್ರು
ಆವಾಗ ಮಾದಪ್ಪ ನಿಂತ್ಕಂಡು ನೋಡುದ್ರು
ಆಡ್ಡಳ್ತೆ ಆರುಗಜ
ಉದ್ದಳ್ತೆ ಹನ್ನೆರಡು ಗಜ
ಅಳತೆ ಮಾಡ್ಕಂಡ್ರು
ನಾಳೆ ಬರುವ ಶನಿವಾರ
ಈ ಹುಟ್ಟರೆಯ ಮೇಲೆ
ಚಮ್ಮಾಳಿಗೆ ಮೆಟ್ಟಿಸ್ತಾಯಿದ್ದೀನಿ
ಧೈರ್ಯವಾಗಿರು ದೊರೆ ಅಂತ್ಹೇಳಿ
ಮಾದಯ್ಯ ಆವಾಗಲೀಗ
ಆ ಶ್ರವಣ ಮಹಾತ್ಮನಿಂದ ಆಶೀರ್ವಾದ ಪಡಕೊಂಡು

ಮಾದೇವ ಅವರು ಚೆಮ್ಮಾಳಿಗೆ ಮಾಡುವುದಕೆ ಹೊರಟವರೇ ಮಹದೇವಾs || ನೋಡಿ ನಮ್ಮ ಶಿವನಾ ||

ಆವಾಗ ಚಮ್ಮಾಳಿಗೆ ಮಾಡುವುದಕ್ಕೆ ಮಾದಪ್ಪ
ಹುಟ್ಟರೆ ಕಲ್ಲಿನ ಮ್ಯಾಲೆ ನಿಂತ್ಕಂಡು ಯೋಚನೆ ಮಾಡುದ್ರು
ತಪಸ್ಸನ್ನು ಮಾಡುದ್ರು
ಎಲ್ಲಿ ಅಂದರೆ ಕಂಬದ ಬೋಳಿ ದಿಂಬದ ಮೇಲೆ
ತವಸೆರೆ ಬೆಟ್ಟವಿದೆ
ಇವತ್ಗೂ ಕೂಡ ಕಡೇ ಶ್ರವಣದಲ್ಲೋಗಿ
ಒಂದು ತಿಂಗಳ ಧೂಪ ಹಾಕ್ತಾರೆ
ಮಾದೇಶ್ವರ ಬಂದು ವರ ಕೊಡ್ತಾರೆ
ಆ ತವಸರೆ ಬೆಟ್ಟದ ಮೇಲೆ ಕೂತ್ಕಂಡು
ಯೋಗವಾಗಿ ತಪಸ್ಸು ಮಾಡುದ್ರು
ಆವಾಗ ಕಲ್ಯಾಣ ಪಟ್ಟಣದಲ್ಲಿ
ಬಸವಣ್ಣನವರಿಗೆ ಮಾಡಿದ್ರಲ್ಲ
ಯಾರು ಹರಳಪ್ಪನವರು ಮಾದಲಾಂಬಿಕೆ
ಅದೇ ರೀತಿಯಾಗಿ
ಮಾಯ್ಕಾರ ಗಂಡ ಮಾದಪ್ಪ
ಬಸವಣ್ಣನವರಿಗೆ ಮಾಡಿದಂಥ ಉರಿಚಮ್ಮಾಳಿಗೆ ಮಾಡಿಸಿದರು
ಯಾವ ರೀತಿಯಾಗಂದ್ರೆ ಆ ತರದ ಚಮ್ಮಾಳಿಗೆಯಲ್ಲ
ಅವರ ತೊಡೆ ಚರ್ಮವನ್ನು ತೆಗೆಸಿ
ಮೂರು ಕಂಡುಗ ಅರಗು
ಮೂರು ಕಂಡುಗ ಬೆಂಕಿ ತುಂಬುದ್ರು
ಆ ಚಮ್ಮಾಳಿಗ್ಗೆ
ಆಗ್ನಿ ದೇವತೆ ಕಾವು ಮಾಡಬೇಕು
ವಾಸುದೇವ ತಿದಿ ಒತ್ತಬೇಕು
ಆ ರೀತಿಯಾಗಿ ಹರಳಪ್ಪನವರ ಕೈಲಿ
ಚಮ್ಮಾಳಿಗೆ ಮಾಡಿಸ್ಕಂಡು

ಅವರು ಹುಟ್ಟರೆ ಬಂಡೆಗೆ ಬರುತವರೇ ಮಹದೇವಾs || ನೋಡಿ ನಮ್ಮ ಶಿವನಾ ||

ಶ್ರವಣಯ್ಯ ಅರಮನೆಗೆ ಬಂದರು
ಆವಾಗ ಶ್ರವಣದೊರೆ ಸಿಂಹಾಸನದ ಮೇಲೆ ಕೂತಿದ್ದ
ಏನಯ್ಯಾ ಮಾದಾರಿ
ಚೆಮ್ಮಾಳಿಗೆ ಆಯ್ತಾ ಒಮ್ದು ವಾರ ಆಯ್ತಲ್ಲ ಅಂದ್ರು
ಆಯ್ತು ದೊರೆ ಅಂದ್ರು
ಎಲ್ಲಿ ಚೆಮ್ಮಾಳಿಗೆ ಅಂದ್ರು
ಈ ಅರಮನೆ ಮುಂಭಾಗದಲ್ಲಿ
ಚಮ್ಮಾಲಿಗೆ ಮೆಟ್ಟಿದರೆ ಯೋಗ್ಯವಲ್ಲ ನಿಮಗೆ
ಆನೆ ಮೇಲೆ ಅಂಭಾರಿ ಹಾಕ್ಕೊಂಡು ಬನ್ನಿ
ನೋಡಿ ಆ ಮುಂದೆ ಕಾಣುವಂತ ಹುಟ್ಟರೆಯ ಮೇಲೆ
ಚಮ್ಮಾಳಿಗೆ ಮೆಟ್ಟಬೇಕು ನೀವು ಒಬ್ಬರೇ ಹೋಗಿ
ಯಾರೂ ಕೂಡ ಅಲ್ಲಿಗೆ ಬರಬಾರದು ಅಂದ್ರು
ಆಗಲೀ ಮಾದಾರೀ ಅಂತ್ಹೇಳಿ
ಆವಾಗ ಹೊರಟಿದ್ದಾರೆ ಯಾರು? ಶ್ರವಣದೊರೆ
ಮನೆ ಸಿಂಹಾಸನದಿಂದ ಇಳಿದು
ಪೇಠವನ್ನೆ ಕಟ್ಕೊಂಡು
ಒಂದೆಜ್ಜೆ ಎತ್ತಿ ಮಡಗಿದ್ರು

ಅಲ್ಲಿ ಬೆಕ್ಕು ಅಡ್ಲಾಗಿ ಬರುತಾವೆ ಜಗದೊಡೆಯಾs || ನೋಡಿ ನಮ್ಮ ಶಿವನಾ ||

ಒಂದನೇ ಬಾಗ್ಲಿಂದ ಕಡೆದ ತಕ್ಷಣ ಬೆಕ್ಕು ಅಡ್ಲಾಗಿ ಬಂದ್ಬುಡ್ತು
ಅಯ್ಯಾ ನಾರಾಯಣ
ಏನು ಅಪಶಕುನ ಅಂದ್ರು
ಸ್ವಾಮಿ ದೊರೆಯೇ
ಎಲ್ಲೋ ಹಾಲ್ಕುಡಿಯೋದಿಕ್ಕೆ ಹೋಗಿತ್ತು ಬೆಕ್ಕು
ನಡೀರಿ ಅದೇನೂ ಇಲ್ಲ ಅಂದ
ನಾರಾಯಣನಿಗೂವೆ ಬ್ರಹ್ಮದೇವರುಗೂವೆ
ಮಾರೀರು ಮಸಣಿಯರಿಗೆಲ್ಲ
ಮಾದಪ್ಪ ಕೈಸನ್ನೆ ಮಾಡಿ ಕಣ್ಣು ಸನ್ನೆ ಮಾಡಿ
ಬರ್ತಾ ಬರ್ತಾ ನೀವು ಹಿಂದೆ ಹೋಗುಬಿಡಿ
ನಾನು ಒಬ್ಬನೇ ಕರ್ಕೊಂಡ್ಹೋಗ್ತೀನಿ ಅಂತ್ಹೇಳಿ
ಬರ್ತಾ ಬರ್ತಾ ಅವರು ಒಬ್ಬೊಬ್ಬರ್ನೆ ಹಿಂದಿಂದೆ ಕಳಿಸ್ತಾವ್ರೆ
ಎರಡನೇ ಬಾಗಿಲಿಂದ ಕಡೆದ ಅಪ್ಪಂದ
ಆ ಶ್ರವಣ ದೊರೆಗೆ
ತಲೆ ಪೇಟ ಕಳ್ಕಂಡು ಬುಡ್ತು
ಲೋ ನಾರಾಯಣ ಇದೇನು ಅಪಶಕುನ ಅಂದ
ಸ್ವಾಮಿ ಕೋಟೆಬಾಗ್ಲು ಚಿಕ್ಕದಾಗಿದೆ
ನೀವು ಎತ್ತರಾಗಿದಿರಿ ಬಗ್ಗಿ ನಡೀರಿ ಅಂದ
ಅದನ್ನೂ ಕಳಕೊಂಡು ಕೋಟೆಯಿಂದ ಈಚೆಗೆ ಬಂದು
ಆನೆ ಮೇಲೆ ಅಂಬಾರಿಹಾಕ್ಕೊಂಡು ಶ್ರವಣದೊರೆ

ಅವರು ಹುಟ್ಟರೆಗೆ ಬರುತಾವರೇ ಶ್ರವಣಯ್ಯಾ || ನೋಡಿ ನಮ್ಮ ಶಿವನಾ ||

ಹುಟ್ಟರೆಯ ಬಂಡೆಗೆ ಬರುತ್ತಾ ಬರುತ್ತಾ
ಎಲ್ಲ ದೇವಾನುದೇವತೆಗಳು ಹಿಂದಕ್ಕೆ ಹೊರಟ್ರು
ಬ್ರಹ್ಮದೇವ ಹೊರಟುಬಿಟ್ಟ
ನಾರಾಯಣ ಹೊರಟುಬುಟ್ರು
ಎಲ್ಲಾ ಹೋಗ್ಲಿ ದೊರೆಯೇ ಯಾರೂ ಬರಬಾರದು
ಅಂಥಾ ಚಮ್ಮಾಳಿಗೆ ಅದು ಉರಿಚಮ್ಮಾಳಿಗೆ
ನೀವು ಒಬ್ಬರೇ ಆ ಚಮ್ಮಾಳಿಗೆ ಮೆಟ್ಟಬೇಕು ಬನಿ ಅಂತ್ಹೇಳಿ
ಆನೆಯ ಮೇಲೆ ಅಂಬಾರಿಯನ್ನ ಇಳಿಸಿ
ಅಂಬಾರಿಯನ್ನ ಬಿಟ್ಟುಬಿಟ್ಟು
ಒಬ್ಬನ್ನೇ ಕರ್ಕೊಂಡು ಮ್ಯಾಲೆ ಹುಟ್ಟರೆಯ ಕಲ್ಲಮ್ಯಾಲೆ ಹೋದರು
ಚಮ್ಮಾಳಿಗೆ ಆನಂದವಾಗಿ ಏನು ಆನಂದವಾಗದೆ ಅಂದ್ರು
ಹೌದು ದೊರೆ
ಅಷ್ಟು ಹೊತ್ತಿಗೆ ವಾಸುದೇವ ತಿದಿ ಹೊತ್ತುತ್ತಿದ್ದಾನೆ
ಅಗ್ಗಿ ದೇವರೆ ಕಾವು ಮಾಡ್ತಾಯಿದ್ದಾಳೆ ಒಳಗಡೆ
ಕಾವು ಇನ್ನೇನು ಸ್ವಲ್ಪ ಹೊತ್ತು
ಕತ್ತು ಉರಿಬೇಕು
ಆ ರೀತಿಯಾಗಿ ಕಾವು ಮಾಡ್ತಾಯಿದ್ದಾರೆ
ಶ್ರವಣದೊರೆ ಬಂದ
ಬಲಗಾಲು ಹಾಕಿದ
ಮಾದರಿ ಚೆನ್ನಾಗಿದೆ ಚಮ್ಮಾಳಿಗೆ ಅಂದ
ಎಡಗಾಲು ಹಾಕಿದ
ಯಾರು ಶ್ರವಣಯ್ಯ
ತುಂಬಿದ ಶನಿವಾರ
ಮಟ್ಟ ಮಧ್ಯಾಹ್ನ ಹನ್ನೆರಡು ಗಂಟೆ ಟೇಮಿನಲ್ಲಿ
ಎಡೆಗಾಲು ಹಾಕ್ದ ಉಂಗುಷ್ಟ ಸ್ವಲ್ಪ ಬಿಗಿಯಾಗಿತ್ತು
ಎಡೆಗಾಲ ಉಂಗುಷ್ಟ ಸ್ವಲ್ಪ ಬಿತಿ ಮಾದಾರಿ ಅಂದ
ಆದರೆ ಬಗ್ಗಿ ಎಡಗೈಲಿ ಎಳಕೊಳ್ಳಿ ದೊರೆಯೇ ಅಂದರು
ಯಾವಾಗ ಉಂಗುಷ್ಟ ತಳ್ಳುವುದಕ್ಕೆ ಬಗ್ಗುದ್ನೋ
ವಾಸುದೇವ ಅಗ್ನಿದೇವರೆ

ಅವರು ಧಗಧಗನೆ ಕತ್ತಿಸಿ ಉರಿಸವರೇ ವಾಸುದೇವಾs || ನೋಡಿ ನಮ್ಮ ಶಿವನಾ ||

ಅಡಿಯಿಂದ ಅಗ್ನಿದೇವತೆ ಕತ್ತಿ ಧಗಧಗನೆ ಹೊಗೆ ಎದ್ಬುಡ್ತು
ಮಾಯ್ಕಾರ ಗಂಡ ಮಾದೇವ
ತ್ರಿಶೂಲ ಹಿಡಕೊಂಡು
ಶ್ರವಣಯ್ಯನ ಎದೆಯಮ್ಯಾಲೆ

ತ್ರಿಶೂಲ ಇಡಕೊಂಡು ನಿಂತವರೇ ಮಾಯ್ಕಾರಾ || ನೋಡಿ ನಮ್ಮ ಶಿವನಾ ||

ಬಂಕಾಪುರಿ ಶ್ರವಣದೊರೆ
ಅಂಗಲಾಚ್ಕೊಂಡು ಮಲೀಕೊಂಡು
ಗುರುವೇ ಮಾಯ್ಕಾರ
ನಿನ್ನ ಇಂಥ ಉರಿಗಣ್ಣ ಕಿಚ್ಚುಬಣ್ಣ ಕಿಡುಗಣ್ಣ ಎಂಬುದು ಗೊತ್ತಿಲ್ಲ
ನನಗೆ ಸದ್ಗತಿ ಯಾವಾಗ ಕೊಟ್ಟಿಯಪ್ಪ ಅಂದ
ಅಯ್ಯಾ ಶ್ರವಣದೊರೆ
ನೋಡು ನನ್ನ ಮೈಸೂರು ಮೇಲ್ನಾಡಿನ ಪರಸೆ ಬರ್ತರೆ
ಹನ್ನೆರಡು ತಿಂಗಳು ಚಾಕರಿ ಮಾಡುದ್ರು
ನಿನಗೆ ಒಂದು ಧೂಪ ಹಾಕೋದಿಲ್ಲ
ಕಡೇ ಶ್ರವಣದಲ್ಲಿ
ಈ ಹುಟ್ಟರೇ ಬಂಡೆ ಹತ್ತಿರ ಬಂದು
ಎಲ್ಲಾ ರೊಟ್ಟಿ ಪರ ಮಾಡ್ತರೆ
ಅಂದರೆ ಊರ್ನಿಂದ ತರೋದಿಲ್ಲ
ಇಲ್ಲೇ ರೊಟ್ಟಿ ಪರ ಮಾಡ್ತರೆ
ಯಾವ ರೀತಿಯಾಗೆಂದರೆ
ಸೌದೆ ತಕ್ಕೊಂಡುಬಂದು
ಅರೆ ಕಲ್ಲಿನ ಮ್ಯಾಲೆ ಬೆಂಕಿ ಹಾಕಿ ಬೇಯಿಸ್ಬುಟ್ಟು
ಕೊಡನೆಲ್ಲ ಗುಡುಸ್ಬುಟ್ಟು
ಕಲ್ಲಿನ ಮ್ಯಾಲಿಟ್ಟು ಕೆಂಡರೊಟ್ಟಿ ಅಂತ್ಹೇಳಿ
ಆ ಕೆಂಡರೊಟ್ಟಿಯನ್ನ ಮಾಡಿ
ರೊಟ್ಟಿ ಪರ ಮಾಡ್ಕಂಡು
ಕಡೆಶ್ರಾವಣದಲ್ಲಿ ಧೂಪ ಹಾಕ್ಕೊಂಡು ಹೋಗ್ತಾರೆ
ಆವಾಗ ನಿನಗೆ ಸದ್ಗತಿ ಸ್ವರ್ಗ
ಅಂತ್ಹೇಳುಬುಟ್ಟು ಮಾದಪ್ಪ
ಆ ಬಂಕಾಪುರಿ ಶ್ರವಣನ ಸಂಹಾರ ಮಾಡ್ಬುಟ್ಟು
ಕತ್ತಿ ಉರಿಸಿಬಿಟ್ಟು

ಅವನ ಅರಮನೆಗೆ ಬಂದವರೇ ಮಹದೇವಾs || ನೋಡಿ ನಮ್ಮ ಶಿವನಾ ||

ಉತ್ತುರ ದೇಶದ ಮಾದೇವಾs
ನೀವು ಹುಲಿಮುಟ್ಟಿದ ಘನಲಿಂಗಯ್ಯಾ
ಮನವ ಒಪ್ಪಿ ದುಡುಗಳ ನೋಡೋ
ದುಂಡುಳ್ಳ ಮಾದೇವ

ಅರಮನೆಗೆ ಬಂದು ಎಲ್ಲಾ ದೇವಾನುದೇವತೆಗಳ ಜೊತೆ ಸೇರಿಕಂಡ್ರು
ಮಾದೇವಾ ಉತ್ತುರದೇಶದ ಮಾಯ್ಕಾರಾ
ನೀವು ಬಂದ ಮೇಲೆ ನಮಗೆ ಸ್ವರ್ಗ ಬಂತು ಕಾಣಪ್ಪ
ಆ ಶ್ರವಣ ದೊರೆಗೆ
ನಾವು ಕಾಡುಮೃಗ ಜಾತಿಲೆಲ್ಲ
ಆಳ್ ಕರ್ಕೊಂಡು ಒತ್ತಾಯಿದ್ದೂ ಅಂದ್ರು ಮಾರೀರು ಮಸಣೀರು
ಬ್ರಹ್ಮದೇವ ಆದಿ ನಾರಾಯಣ
ಎಲ್ಲಾ ದೇವಾನುದೇವತೆಗಳನ್ನು ಕೂಡಿಸ್ಕೊಂಡು ಮಾದಪ್ಪ
ನಿಮಗೆ ಯಾವ ಯಾವ ಟೈಮ್ನಲ್ಲಿ ಜಾತ್ರೆಯಾಗಬೇಕು
ಹಬ್ಬವಾಗ್ಬೇಕು ಅಂತ್ಹೇಳಿ
ವರ್ಷ ಹನ್ನರಡು ತಿಂಗಳು ಒಪ್ಪಿಸ್ಕೊಂಡು ಬಂದ್ರು
ಎಲ್ಲಾ ದೇವರ್ಗಳೂ ಶನಿವಾರ ಶುಕ್ರವಾರ ಗುರುವಾರ
ಬೇಯಿಸ್ತ್ವಾರ ಸೋಮವಾರ ಮಂಗಳವಾರ
ಇದೇ ರೀತಿಯಾಗಿ ಎಲ್ಲಾ ಒಪ್ಕಂಡು ಬಂದ್ರು
ಪೂರ್ಣಮಿವೊಳಗೆ ಎಲ್ಲಾ ದೇವರು ಒಪ್ಕೊಂಡ್ ಬಂದ್ರು
ಅಮಾಸೆ ಕತ್ಲ ಒಳಗೆ ಯಾರೂ ಒಪ್ಲಿಲ್ಲ
ಎಲ್ಲಾ ದೇವರ್ಗೂವೆ ಹಬ್ಬ ಹಂಚ್ಬುಟ್ಟು
ಮಾದಪ್ಪ ಅವರವರ ಸ್ತಾನಕ್ಕೆ ಕಳಿಸ್ಬುಟ್ಟು
ಅಮವಾಸ್ಯೆ ಕತ್ಲೆವೊಳಗೆ ನನಗೇ ಆಗಲಿ
ಅಮವಾಸ್ಯೆ ಪೂಜೆ ನನಗಾಗಲಿ ಅಂತ್ಹೇಳಿ
ಎಲ್ಲಾ ದೇವಾನುದೇವತೆಗಳಿಗೂ ಸದ್ಗತಿಯನ್ನ ಕೊಟ್ಬುಟ್ರು

ಅವರು ಏಳುಮಲೆಗೆ ದಯಮಾಡವರೇ ಮಹದೇವಾs || ನೋಡಿ ನಮ್ಮ ಶಿವನಾ I