ಮಾಯ್ಕಾರಗಂಡ ಮಾದಪ್ಪ
ಈಏಳುಮಲೆ ಕೈಲಾಸದಲ್ಲಿ ಬಂದು
ಆವಾಗಲೀಗ ಬೆನ್ನಿಂದ ಬ್ಯಾಡರ ಕಣ್ಣಯ್ಯ
ಬಲಭಾಗದಲ್ಲಿ ಆಲಂಬಾಡಿ ಬಸವಣ್ಣ
ಅಂತರಗಂಗೆವೊಳಗೆ ಒಂಟಿ ಜೀವ ಸೇರ್ಕಂಡ
ಮೂರು ಜನ ಋಷಿಗಳಿದ್ದಾರೆ
ಇನ್ನು ಮೈಸೂರು ಮೇಲ್ನಾಡಿನ ಪರುಸೆ ಬೇಕಾದಷ್ಟು ಬರುತಾವ್ರೆ
ನನ್ನ ಗುರುಮಠ ಇನ್ನೂ ಉತ್ತಮವಾಗ್ತದೆ
ಸಾಲೂರು ಮಠದಲ್ಲಿ
ಬೇಕಾದಷ್ಟು ದೀಕ್ಷೆಮಾಡ್ತಾ ಇದ್ದಾರೆ
ಬೇಕಾದಷ್ಟು ಗುಡ್ಡರು ಬರ್ತಾಯಿದ್ದಾರೆ
ಆದರೆ ನನಗೆ ಇನ್ನೂ ಐದ್ಜನ ಋಷಿಗಳಾಗಬೇಕು
ಇನ್ನಿಬ್ರು ಋಷಿಗಳಾದರೆ
ನಾನು ಒರಗು ಪ್ಟ್ಟವಾಗಬೇಕು ಅಂತ್ಹೇಳಿ

ಅವರು ಏಕವಾಗಿ ನೋಡವರೆ ಮಹದೇವಾs || ನೋಡಿ ನಮ್ಮ ಶಿವನಾ ||

ಆಲಂಬಾಡಿ ಮಾದೇವಾs
ಗುರುವೇ ಅರಗಣ್ಯ ಬಿಟ್ಟು ನೋಡಯ್ಯ
ಹಾಲರವಿ ಮ್ಯಲೂವಿನ ದಂಡೆ
ವಾಲಾಡಿ ಬಂದೋ

ಮಾದೇವಾ ಏಳು ಮಲೆ ಕೈಲಾಸ್ದಲ್ಲಿ ಕೂತ್ಕಂಡು
ಯಾವ ರಾಜ್ಯದಲ್ಲಿ ನಾನು
ಒಕ್ಕಲು ಪಡೀಬೇಕು
ಯಾವ ರಾಜ್ಯದಲ್ಲಿ ಶಿಷ್ಯರ ಪಡೀಬೇಕಂತ್ಹೇಳಿ
ನಾಕು ರಾಜ್ಯಾನೆಲ್ಲ ಏಕವಾಗಿ ನೋಡ್ತಾಯಿದ್ರು
ಅಷ್ಟು ಹೊತ್ತಿಗೆ
ಆ ನೂರು ಒಂದು ಜನ ಬ್ಯಾಡಗಂಪಣದವರಿದ್ರಲ್ಲ
ಆ ಬ್ಯಾಡಗಂಪಣದವರಲ್ಲಿ
ದೊಡ್ಡ ಮಾಡಪ್ಪ ತಮ್ಮಡಿ
ಚಿಕ್ಕ ಮಾದಪ್ಪ ತಮ್ಮಡಿ
ಗುರುಪ್ರಸಾದ ತಮ್ಮಡಿ
ಗುಡ್ಡಮಾಡಪ್ಪ ತಮ್ಮಡಿ
ಹೆಗಡೆಮಾಡಪ್ಪ ತಮ್ಮಡಿ ಅಂತ್ಹೇಳಿ
ನೂರೊಂದು ಜನ ತಮ್ಮಡಿ ಮಕ್ಕಳಿದ್ರು
ಅದರಲ್ಲಿ ಗುರುಪ್ರಸಾದ ತಮ್ಮಡಿ ಮಗಳು
ಒಬ್ಬ ಬೇಡಗಂಪಣದವರಾದರೂವೆ
ಚೆಂದುಳ್ಳ ಚೆಲುವೆಯಾಗಿದ್ದ ಹೆಣ್ಣುಮಗಳು
ಆ ಹೆಣ್ಣು ಮಗಳ ನೋಡ್ಬುಟ್ಟು
ಕುಂಪಣೀ ದೇಶದ ರಾಜ ಬರ್ತಾಯಿದ್ದ
ಆ ಹೆಣ್ಣು ಮಗಳ ಹೊಡಕೊಂಡು ಹೋಗಬೇಕಂತ್ಹೇಳಿ
ಮಾಡಪ್ಪ ಆವಾಗಲೀಗ ಬರುವಂತಾ ರಾಜರಿಗೆ
ನಾನು ಅಡ್ಡಗಟ್ಟಬೇಲ್ಕು ಅಂತ್ಹೇಳಿ
ಆ ಮೇಟೂರಿಗೆ ಹೋಗುವ ದಾರಿವೊಳುಗೆ
ಆವಾಗ ಮಾಯ್ಕಾರ ಗಂಡಾ

ಹೆಬ್ಬುಲಿಯಾಗಿ ನಿಂತವರೇ ಮಾಯ್ಕಾರಾs || ನೋಡಿ ನಮ್ಮ ಶಿವನಾ ||

ಆ ನೂರೊಂದು ಜನ ತಮ್ಮಡಿ ಮಕ್ಕಳ ಗೋಳು ಜಾಸ್ತಿಯಾಗ್ಬುಡ್ತು
ಕುಂಪಣಿ ರಾಜರು ಬಂದು
ನಮ್ಮ ಹೆಣ್ಣು ಮಕ್ಕಳ ಮಡಗೋದಿಲ್ಲ ಮಾದಪ್ಪ ಅಂತ್ಹೇಳಿ
ಮೊರೆ ಬಿದ್ದುಬಿಟ್ರು
ಮಹದೇವ ಹೆಬ್ಬುಲಿ ವಾನ ಏರ್ಕೊಂಡು
ಆವಾಗಲೀಗ ಬಾಲೇರು ಹೋಗುವ ದಾರಿವೊಳುಗೆ
ಹೆಬ್ಬುಲಿಯಾಗಿ ನಿಂತ್ಕಂಡ್ರು
ಆ ಕುಂಪಣಿ ರಾಜ ದಂಡೆತ್ಕೊಂಡು ಬಂದ
ದಂಡೆತ್ಕೊಂಡು ಬಂದ್ರೂವೆ
ಮಾದಪ್ಪ ಅವರನ್ನ ಬಿಡನಿಲ್ಲ
ಆವಾಗ ಅಡ್ಡವಾಗಿ ಹೆಬ್ಬುಲಿ ವಾನವಾಗಿ ನಿಂತ್ಕಂಡು
ಗರ್ಜನೆ ಮಾಡಿ.

ಅಲ್ಲಿ ಅಡ್ಡಲಾಗಿ ನಿಲ್ಸವರೇ ಹುಲಿಗಳಾs || ನೋಡಿ ನಮ್ಮ ಶಿವನಾ ||

ಮಲೆಯಲಿ ಮಾದೇವ ಬರುವ ಚೆಂದವಾs || ನೋಡಿ ನಮ್ಮ ಶಿವನಾ ||

ಮಾಯ್ಕಾರ ಗಂಡ ಮಾದೇವಾ
ಆ ಕುಂಪಣಿ ದೊರೆಗಳ ಸೈನ್ಯವನ್ನು
ಹಾಳು ಮಾಡಬೇಕೆಂದು
ಹೆಬ್ಬುಲಿವಾನವಾಗಿ ಹೋಗಿ ಅಡ್ಲಾಗಿ ನಿಂತ್ಕಂಡು
ಮಹದೇವ
ಇವರನ್ನ ಯಾವ ರೀತಿ ಮಾಡಬೇಕಂತ್ಹೇಳಿ
ಮುತ್ತಿನ ಜೋಳಿಗೆಯಿಂದ ಹಸ್ತವನ್ನ ಮಡಗಿ
ಏಳುಮಲೆ ಬಸುವಂಗ ಕೈಮ್ಯಾಲಿಟ್ಕೊಂಡು
ಈ ಮದನಿಂಡು ಸೀಮೆವೊಳಗೆ
ಈ ಕೊಂಗು ಜನ ಕ್ವಾತ್ ಜನ
ನನ್ನ ತಮ್ಮಡಿ ಮಕ್ಕಳ ಹದಗೆಡಿಸಿಬುಡ್ತಾರೆ ಅಂತ್ಹೇಳಿ

ಅವರು ಮಲೆಯ ಭಸ್ಮ ಪಿಡುದವರೇ ಮಹದೇವಾs || ನೋಡಿ ನಮ್ಮ ಶಿವನಾ ||

ಬಣ್ಣಾದೆಬ್ಬುಲಿಯೋ
ಮಾದೇವ ಚಿನ್ನಾದೆಬ್ಬುಲಿಯೋ
ಸನ್ನೆ ಮಾಡಿ ಕರೆದಾರು ನಮ್ಮ ಬಣ್ಣದೆಬ್ಬುಲಿಯಾ

ಹುಲಿಯ ವಾನದವರು ಉತ್ತುರ ದೇಶದವರು
ಮಾಯ್ಕಾರಗಂಡ ಯಾವಾಗ ಭಸುಮ ಪಿಡಿದರೋ
ಆ ಕುಂಪಣೀ ದೊರೆಯ ಸೈನ್ಯವಾಗಿರ್ತಕ್ಕಂತಾದ್ದು
ನಿಂತ ಜಾಗ್ದಲ್ಲಿ ಅಲ್ಲೇ ಗೋಗಲ್ಲಾಗಿ ನಿಂತ್ಕಂಡ್ರು
ಆವಾಗ ಕುಂಪಣೀ ದೊರೆ
ಮಾಯ್ಕಾರ ಗಂಡ
ಅಯ್ಯೋ ಮಾದಯ್ಯ
ಇನ್ನು ಮೇಲೆ ನಿನ್ನ ಮೇಲೆ ವೈರಾಗ್ಯಕ್ಕೆ ಬರೋದಿಲ್ಲ
ನನ್ನ ಕುಂಪಣೀ ರಾಜ್ಯ
ಸಂತೋಷವಾಗಿ ಬಾಳಲಪ್ಪ
ನಿಮಗೆ ವರುಷಾ ವರುಷಾ ನಾವು ಉಗಾದಿ ತಿಂಗ್ಳು
ನಿಮಗೆ ಬಂದು ಐಭೋಗದಲ್ಲಿ
ಸೇವೆ ಮಾಡ್ತೀವಿ ಅಂತ್ಹೇಳಿ
ಆ ಕುಂಪಣೀ ದೊರೆಯಾಗಿರ್ತಕ್ಕಂತಾವನು

ಅಲ್ಲಿ ಕರವೆತ್ತಿ ಕೈಯ ಮುಗಿದಾರೆ ದೊರೆಗಾಳುs || ನೋಡಿ ನಮ್ಮ ಶಿವನಾ ||

ಮಾದೇವ ಮಾಯ್ಕಾರ ಗಂಡ
ಈ ಪ್ರಜೆಗಳನ್ನ ನಾನು ಪ್ರಾಣ ತೆಗೆದ್ಬುಟ್ಟು
ಯಾತ್ಕಾಗಿ ಬಾಳಬೇಕು
ಅವನು ಪ್ರಜೆ ಹಿಂದೆ ಶರಣಾಗತನಾಗಿದ್ದಾನೆ
ಹಿಂತಿರುಗಿ ಹೋಗಲಿ ಅಂತ್ಹೇಳಿ
ಮಲೆಯ ಭಸ್ಮ ತಕ್ಕೊಂಡು
ತನ್ನ ಸಾಲೂರು ಮಠದ ಗುರುಗಳ ಕರೆದು
ಗುರುದೇವಾ ಈವಾಗ
ನಿಮ್ಮ ಆತೀರ್ವಾದದಿಂದ
ಈ ಮಲೆಯ ಭಸ್ಮದಿಂದ
ಈ ಪ್ರಜೆಯೆಲ್ಲ ಹಿಂದಿರುಗೋಗ್ಲಿ
ವರ್ಷಕ್ಕೊಂದು ಸಾರಿ
ನನಗೆ ಉಗಾದಿ ತಿಂಗಲು ಬಂದು
ಐಭೋಗದಲ್ಲಿ ಈ ಕುಂಪಣೀ ದೇಶದ ಜನಗಳು ಬಂದು
ನನಗೆ ಯಾತ್ರೆ ಮಾಡ್ಲಿ ಸೇವೆ ಮಾಡ್ಲಿ ಗುರುವೇ
ಇನ್ನು ನವಮಾರು ಹನ್ನೆರಡು ತಿಂಗಳು ನವಮಾಸ
ಹನ್ನೊಂದು ತಿಂಗಳು ಮೈಸೂರು ನಾಡವರು ಪರುಸೆ ಮಾಡಲಿ
ಒಂದು ತಿಂಗಳು ಪ್ರಿಯವಾಗಿ ಬಿಟ್ಟುಬಿಡಾಬೇಕು ಅಂತ್ಹೇಳಿ
ಗುರುಗಳ ಆಶೀರ್ವಾದ ಪಡಕೊಂಡು
ಆ ಗೋಗಲಾಗಿದ್ದಂಥ ಪ್ರಜೆಯ ಮೇಲೆ
ಅಯ್ಯಾ ಮಲೆಯ ಭಸ್ಮ ಪಿಡಿದವರೇ ಮಾಯ್ಕಾರs || ನೋಡಿ ನಮ್ಮ ಶಿವನಾ ||

ಮಲೆಯ ಭಸ್ಮ ಪಿಡಿದು
ಆ ಕುಂಪಣೀ ದೊರೆ ಸೈನ್ಯನೆಲ್ಲನೂವೆ
ಮಾಯ್ಕಾರಗಂಡ ಮಾದಪ್ಪ
ಹಿಂತಿರುಗಿ ಕಳಿಸ್ಬುಟ್ರು
ಮಾಯ್ಕಾರಗಂಡ
ಹಿಂತಿರುಗಿ ಹೋದಮೇಲೆ
ನಡುಮಲೆ ಆನಂದ ನೋಡುಕೊಂಡರು
ಇನ್ನು ಮುಂದೆ ಹೋಗಿ ನಾನು
ನಾಗುಮಲೆ ಕೃಷ್ಣಶಿಲೆವೊಳಗೆ
ತಪಸ್ಸು ಮಾಡಿ
ಅಲ್ಲಿ ಆಶ್ಚರ್ಯ ನೋಡಬೇಕೂಂತ್ಹೇಳಿ
ಮಾದೇವ ಮೂಡಲಾಗಿ ಕಾವೇರಿ ನದಿ ಇದೆ
ಆ ನದಿ ಆನಂದ ನೋಡಬೇಕಂತ್ಹೇಳಿ
ನಾಗಮಲೆ ಕೃಷ್ಣಸೆಲೆವೊಳಗೇ

ಅವರು ಆನಂದವಾಗಿ ಕುಳಿತವರೇ ಮಹದೇವಾs || ನೋಡಿ ನಮ್ಮ ಶಿವನಾ ||

ನಾಗುಮಲೆ ಕೃಷ್ಣಶಿಲೆವೊಳಗ್ಹೋಗಿ
ಪುಟ್ಟುಲಿಂಗವಾಗಿ ತಪಸ್ಸು ಮಾಡ್ತಾ ಕೂತ್ಕಂಡ್ರು
ನೋಡಬೇಕಲ್ಲ ಇಲ್ಲಿನ ಭಕ್ತಿಯ
ಅಲ್ಲೂ ಬ್ಯಾಡಗಂಪಣದವರು
ಕಾಡುಗೊಲ್ಲರಿದ್ದಾರೆ
ಆ ಗೊಲ್ಲರ ದೃಢ ನೋಡಬೇಕಂತ್ಹೇಳಿ ಕೂತ್ಕಂಡ್ರು
ಒಬ್ಬ ಕುರುಬಗೌಡ
ಅ ಗುಡ್ಡೆ ಮೇಲೆ ನಾಗಮಲೆ ಬೋಳಿವೊಳಗೆ
ಮಾದಪ್ಪನ ಲಿಂಗ ಅಂದ್ರೆ ಅವನಿಗೇನು ಗೊತ್ತು
ಆ ಲಿಂಗವಾಗಿರ್ತಕ್ಕಂತಾದ್ದು ಕುರಿ ಬಿಟ್ಕೊಂಡು
ಅಡಕೆಲೆ ಚೆಚ್ಚಿ ಹಾಕಂಡ
ಮಾಯ್ಕಾರ ಗಂಡ ನೋಡುದ್ರು
ಓಹೋ ಇವನು ನನ್ನ ದೇವ್ರು ಅನ್ನೋದು ಗೊತ್ತಿಲ್ಲ
ನಾನು ಇವನಿಗೆ ಗೊತ್ತು ಮಾಡಬೇಕಂತ್ಹೇಳಿ
ಮಾದೇವ ತಿರ್ಗಾ ಬೆಳಿಗ್ಗೆ ಕುರಿಗೊಲ್ಲಗೌಡ ಬರುವ ಹೊತ್ತಿಗೆ
ಎದೆಮಟ್ಟ ಅರಳಿನಿಂತ್ಕಂಡದೆ ಪುಟ್ಟಲಿಂಗ
ಹಿಂದಗಡೆ ನಾಗಸರ್ಪ ಬರ್ತಾಯಿದ್ದಾನೆ
ನಾನು ಬರ್ತೀನಿ ದೊರೆಯೇ ಅಂತ್ಹೇಳಿ
ಅಪ್ಪಾ ಕಾಳಿಂಗ
ಸ್ವಲ್ಪ ಮರೆಯಾಗು
ಈ ಕುರುಬಗೌಡನ ಭಕ್ತಿ ನೋಡ್ತೀನಿ ಅಂತ್ಹೇಳಿ
ಎದೆಮಟವಾಗಿ ನಿಂತ್ಕಂಡು

ಅವರು ಲಾಲೈಸಿ ನೋಡವರೇ ಮಾಯ್ಕಾರಾs || ನೋಡಿ ನಮ್ಮ ಶಿವನಾ ||

ತಿರುಗಾ ಬಂದ ಕುರುಬಗೌಡ ಕುರಿ ಬಿಟ್ಕೊಂಡು
ಅದೇ ಗುಡ್ಡೇ ಮೇಲೆ ಮೆಯಿಸ್ಕೊಂಡ್ಬಂದು
ಏನಪ್ಪಾ ನೆನ್ನೆ ಒಂದು ಮಂಡೀ ಉದ್ದ ಇತ್ತು ಈ ಕಲ್ಲು
ಇವತ್ತು ಎದೆಮಟ್ಟ ಬೆಳ್ದದಲ್ಲ
ನಾನು ಕೂತುಕೊಳ್ಳುವ ಹಾಗೇಯಿಲ್ಲ
ನಿಂತ್ಕಂಡೆ ಅಡಕೆಲೆ ಚೆಚ್ಚೋಣ ಅಂತ್ಹೇಳಿ
ಆವೊತ್ತು ಅಡಕೆಲೆ ಮಡಿಸಿಕೊಂಡು
ಮಾದಪ್ಪ ಮಂಡೆ ಮೇಲೆ

ಅಡಕೆಲೆ ಚೆಚ್ತ ನಿಂತವನೇ ಕುರುಬಯ್ಯ || ನೋಡಿ ನಮ್ಮ ಶಿವನಾ ||

ಮಾಯ್ಕಾರ ಗಂಡ ಮಾದಪ್ನಿಗೆ ಕೋಪ ಬಂದುಬಿಡ್ತು
ಈ ಮುಂಡೆ ಮಕ್ಳಿಗೆ ಇನ್ನೂ ಗೋಚರವಿಲ್ಲ
ದೇವರು ಅನೋದು ಅಂತ್ಹೇಳಿ
ಅ ಕುರುಬುಗೌಡ್ನ ತೆಗೆದು
ಹೊಳೆಕೆರೆ ಗೋಪಿನಾಥ್ ಗೆ ಎಸೆದುಬುಟ್ರು
ಗೋಗಲ್ಲಾಗಿರು ನೀನು ಅಲ್ಲಿ ಅಂತ್ಹೇಳಿ
ಮಹದೇವಾ ಆವಾಗಲೀಗ ನಾನು ಇನ್ನೂ ಮಲ್ನಾಡ ನೋಡಬೇಕಲ್ಲ
ಕೃಷ್ಣ ಶಿಲೆವೊಳಗೆ ಅಂತ ಬೆಳೀತಾಯಿದ್ರು
ಕಾಳಿಂಗಸರ್ಪ ಮಾದೇವ ಇನ್ನೂ ಎಲ್ಲಿಗೆ ಮೇಲುಕ್ಕೊಯ್ತಾಯಿದ್ದೀಯೆ
ಹಿಂದಿಂದುಗುಂಟ ನಾನು ಬರ್ತೀನಿ ಅಂತ್ಹೇಳಿ
ಆ ಕಾಳಿಂಗ ಸರ್ಪನೂವೆ ಹೋಯ್ತಾಯಿತ್ತು
ಮಾದಪ್ಪನಿಗೆ ಕ್ವಾಪ ಬಂದ್ಬುಡ್ತು

ಮಲೆಯಲಿ ಮಾದೇವ ಬರುವ ಚಂದಾವಾ || ನೋಡಿ ನಮ್ಮ ಶಿವನಾ ||

ಆವಾಗಲೀಗ ಕಾಳಿಂಗ ಸರ್ಪ
ಮಾಯ್ಕಾರ ಗಂಡ ಮಾದಪ್ಪ
ಇನ್ನೂ ಎಲ್ಲಿಗೋಗ್ತಾಯಿದ್ದಿಯೊ
ನಾನು ಬರ್ತೀನಿ ಅಂತ್ಹೇಳಿ
ಕಾಳಿಂಗಸರ್ಪ ಮಾದಪ್ಪನ ಮ್ಯಾಲೆ ಹೋಗ್ತಾವನೆ ಕಾಳಿಂಗಾ || ನೋಡಿ ನಮ್ಮ ಶಿವನಾ ||

ಏನಯ್ಯಾ ಕಾಳಿಂಗ ಸರ್ಪ
ನನ್ನ ಜೊತೆಯಲ್ಲಿ ಬರ್ಬೇಡ
ನಾನು ಮೇಘ ಲೋಕವನ್ನು ನೋಡ್ಬೇಕು ಅಂತ್ಹೇಳಿ
ಕಾಳಿಂಗ ಸರ್ಪ್ನ ಹಿಂದಕ್ಕೆ ತಳ್ಬಿಟ್ರು
ಆ ಕಾಳಿಂಗ ಸರ್ಪ ಅದೇ ರೀತಿಯಾಗಿ ಕೂತ್ಕಂಡ
ಮಾಯ್ಕಾರಗಂಡ ನನ್ನಪ್ಪಾಜಿ ಅಖಂಡ ಮಹಿಮ
ಈ ಕೃಷ್ಣ ಶಿಲೆ ಒಳಗೆ ಇದೇ ರೀತಿಯಾಗಿ
ಭಕ್ತಾದಿಗಳು ಈ ಬೇಡಗಂಪಣದವರು
ಪೂಜೆ ಮಾಡಲಿ ಅಂತ್ಹೇಳಿ
ಕೃಷ್ಣಶಿಲೆಯಲ್ಲಿ ಮಾದಪ್ಪ

ಅವರು ಉಪ್ಪರಿಗೆಯ ಮೇಲೆ ಕುಂತವರೇ ಮಾಯ್ಕಾರ || ನೋಡಿ ನಮ್ಮ ಶಿವನಾ ||

ಉಪ್ಪರಿಗೆಯ ಮ್ಯಾಲೆ ಕುಂತ್ಕಂಡು ನನ್ನಪ್ಪಾಜಿಯವರು
ಆದರೆ ನನ್ನ ಮೈಸೂರು ಮೇಲ್ನಾಡಿನ ಪರುಸೆ
ಯಾರು ಹೋಮ ನೇಮವಾಗಿ
ನನ್ನಾಗೆ ಬ್ರಹ್ಮಚಾರಿಯಾಗಿ
ಬಹಳ ನಿಷ್ಠೆಯಿಂದ ಬಂದವರು
ಧೂಪ ಹಕ್ಕೊಂಡು ಹೋಗ್ಲಿ
ಏನಾರ ಈ ಅಪಚಾರ ಅನಾಚಾರ ಮಾಡಿದವರಿಗೆ
ಈ ಹೆಬ್ಬುಲಿ ಬಾಯಿಗೆ ತುತ್ತಾಗ್ಲಿ ಅಂತ್ಹೇಳಿ ಮಾದಪ್ಪ
ಆ ಕೃಷ್ಣ ಶಿಲೆಯಲ್ಲಿ ಪುಟುಲಿಂಗವಾಗಿ
ಏಕಾಂಗಿ ವಸ್ತು ಏಳುಮಲೆ ಕರತು
ನಡುಮಲೆ ಒಳಗೆ ಬಂದು ಮಾದಪ್ಪ
ಆನಂದ ನೋಡ್ತಾ ಕುಂತವರೇ ಮಹದೇವಾ || ನೋಡಿ ನಮ್ಮ ಶಿವನಾ ||

ಏಳು ಮಲೆಯ ಮಾದೇವಾ
ಗುರುವೇ ಇತ್ತಿದರು ಮಂಗಳಾರತಿಯಾ
ಎತ್ತಿ ಮೆರೆದರು ಮಹದೇವರ ಗಂಡುಲಿಯ ಮ್ಯಾಲೆ