06_81_MM-KUH

ಮಾದೇವ ಉರ್ಸಿಂಗಿ ಕೊರಡಲ್ಲಿ
ಮೂರ್ ಎಳ್ತ ಎಳ್ದುಬಿಟ್ರು
ಹನ್ನೆರಡೆಜ್ಜೆ ಹುಲಿ ಗಾಬ್ರಿಯಾಗ್ ಬಿಡ್ತು
ಗರ್ಜನೆ ಮಾಡ್ಕಂಡು
ಏಳ್ ಮಲೆ ಕೈಲಾಸವನ್ನು ಬಿಟ್ಟು ಬರ್ತಾ ಇದೆ

ಅಪ್ಪ ಗುಡಿಯ ಗುಂಡಾಲ ಕಡೆದವರೇ
ಗುಡಿಯ ಗುಂಡಾಲ ಕಡೆದವರೇ
ಮೂಡಲ ಮಲೆ ಮಾದೇವಾ
ಹತ್ತಿಯ ಕಟ್ಟೆ ಬಿಟ್ಟವರೇ
ಆಲದ ಕಟ್ಟೆ ಕಡೆದವರೇ
ಅಯ್ಯ ಮಾಂತಕಟ್ಟೆ ಕಡೆದವರೇ
ಬಸವನಕಟ್ಟೆ ಬಿಟ್ಟವರೇ
ಎಣದಿಮ್ಮಿ ಕೊಳವ ಕಡೆದವರೇ
ದುರುಮಾಳ ಬಿಟ್ಟವರೇ
ತಂಬಡಗೇರಿ ಬಂದವರೇ
ಮೂಡಲಮಲೆಯ ಮಾದೇವ
ಅಯ್ಯ ದಿಂಬದ ಮಲೆಯ ಮೇಲೆ ಅವ್ರು
ಮಾದೇವ್ರು ದಯ ಮಾಡವ್ರೆ
ಆನೆದಿಂಬದ ಮಲೆಯ ಮೇಲೆ ಗುರುವೆ
ಆದಿಗುರು ದಯ ಮಾಡವ್ರೆ

ಮಹಾದೇವ
ಆನೆತಲಿದಿಂಬದ ಮೇಲ್ ನಿಂತ್ಗಂಡು
ನಾಕ್ ರಾಜ್ಯವನ್ನು ನೋಡ್ತಾ ಇದ್ದಾರೆ
ಇನ್ನು ಗೋಚರವಾಗ್ಲಿಲ್ಲ
ಮಾಯ್ಕಾರ ಗಂಡ ಮಾದಪ್ನಿಗೆ
ಆನೆ ತಲೆದಿಂಬವನ್ನುಬಿಟ್ಟು

ಚಿಕ್ಕಾಲಳ್ಳ ಕಡೆದವರೇ
ದೊಡ್ಡಾಲಳ್ಳ ಬಿಟ್ಟವರೇ
ರಾಮವ್ವೆ ಕೊಳವ ಕಡೆದವರೆ
ರಂಗನ ಒಡ್ಡ ಕಡೆದವರೇ
ಅಯ್ಯಾ ಕಂಬದ ಬೋಳಿ ದಿಂಬದ ಮೇಲೆ
ಆದಿಗುರು ದಯ ಮಾಡಾವ್ರೆ
ಬೆಟ್ಟದ ಮಾದೇವ ಬರುವಾಗ
ಹುಟ್ಟುಗಲ್ಲು ಗುಡುಗುಟ್ಟಿದವು
ಮಾದೇವ
ಕತ್ತಲರಾಜ್ಯದ ಕೋಗಿಲೆ ಎದ್ದು
ಸ್ವರವೆತ್ತಿ ಕೂಗಿದವೋ

ಕಂಬದಬೋಳಿ ದಿಂಬದ ಮೇಲೆ ನಿಂತ್ಗಂಡು
ಮಾಯ್ಕಾರ ಗಂಡ
ಹುಲಿಯನ್ನಿಳಿದು ಅರೆಕಲ್ಲ ಮೇಲೆ ನಿಂತ್ಗಂಡು
ಮೈಸೂರ ಮೇಲ್ನಾಡ ನೋಡ್ತಾ ಅವ್ರೆ
ಹದಿನಾರು ಸೀಮೆ ಪರಸೆ
ಅಮವಾಸೆ ಒಂದಿನ ಅಂತೇಳಿ
ಯಾವ್ ನಾಡಿನ ಪರ್ಸೆ ಬರ್ತಾ ಇದೆಯೋ
ಯಾವ ನಾಡಿನ ಪರ್ಸೆ ಬರುವುದಿಲ್ಲವೋ
ನಂಬಿದವರ ಮನೆಯಲಿ
ತುಂಬಿ ತುಳ್ಕಾಡಬೇಕು ಅಂತ್ತೇಳಿ
ಮಾದೇವ
ಮೈಸೂರ ಮೇಲ್ನಾಡ್ ನೋಡ್ತಾ ಇದ್ದಾರೆ
ಎಲ್ಲಾ ನಾಡಿನ ಪರ್ಸೆ
ಮೀದು ಮಡಿ ಉಟ್ಗಂಡು
ಮೀಸಲು ಬುತ್ತಿ ಕಟ್ಗಂಡು
ತಮ್ಮ ಊರ ಗುಂಪೆಲ್ಲಾ ಹೊರಟು
ಒಬ್ಬೊಬ್ರಾಗಿ ಬರ್ತಾ ಇದ್ದಾರೆ
ಇದ್ರೊಳಗೆ ಮಗ್ಗ ಮರಳಿ
ಹೆಗ್ಗಡದೇವನ ಕೋಟೆ
ಬೀಮನ ಕೊಲ್ಲಿಯೊಳಗೆ
ಎಪ್ಪತ್ತೊರ್ಷದ ಮುಪ್ಪಿನ ಕಾಲದ ಮುದ್ಕಮ್ಮ
ಮಾದೇಶ್ವರ ಯಾತ್ರೆಗೆ ದೊಣ್ಣೆ ಊರ್ಕಂಡು
ನೂರ್ ಯಾತ್ರೆ ಮಾಡಿದ್ದಳು
ಅವರ ಊರ ಪರ್ಸೆಯೆಲ್ಲಾ
ಬೆಳಗಿನ ಜಾವದಲ್ಲಿ ಮಾದೇಶ್ವರನ
ಯಾತ್ರೆಗೆ ಹೊರಟೋಗಿದ್ದಾರೆ
ಮುದ್ಕಮ್ಮನಿಗೆ ಹತ್ ಗಂಟೆ ಮೇಲೆ ಗ್ಯಾನವಾಯ್ತು
ಮನಬಳ್ಗ ಸೊಸೇರು ಮಕ್ಕಳ ಕರ್ದು
ಆ ಮುದ್ಕಮ್ಮ ಇನ್ನೊಂದ್ ಯಾರೆ ಮಾಡ್ಬುಡ್ತಿನಿ
ಮಾದೇಶ್ವರನ ಯಾತ್ರೆ
ನಾನು ಸಾಯುವಂತ ಕಡೆಯೊಳಗೆ
ಮಾದೇಶ್ವರ್ನ ಹೆಸ್ರ ಮೇಲೆ ಮುಕ್ತಿ ಪಡೆಬೇಕಂತ್ಹೇಳಿ
ಮನೆಯೊಳಗೆ ಮಕ್ಕಳಿಗೇಳ್ಕಂಡು

ಅಮ್ಮ ಮೀದು ಮಡಿಯ ಉಟ್ಟಾವಳೆ
ಮೀಸಲ ಬುತ್ತಿ ಕಟ್ಟವಳೇ
ಅ ಮಲೆ ಈ ಮಲೆ
ಮಾದೇವ ಇರುವುದು ಯಾವ ಮಲೆಯೋ
ದೇವರ ಬೆಟ್ಟದ ಮಾದಪ್ಪ ಇರುವುದು
ದೇವ ಮಲೆಯೊಳಗೆ

ಮನೆ ಒಳಗೆ ಮೀಸಲು
ಬುತ್ತಿಕಟ್ಸ್ಗಂಡು ಮುದ್ಕಮ್ಮ
ಹೋಗ್ ಬರ್ತಿನಿ ಕಾಣ್ರಪ್ಪ ಅಂತ್ಹೇಳಿ
ಮಕ್ಕಳಿಗೆಲ್ಲಾ ಬುದ್ಧಿ ಹೇಳ್ಬುಟ್ಟು
ಆವಾಗ್ ಅಜ್ಜಿಗೆ ನಮಸ್ಕಾರ ಮಾಡಿ
ಏಳುಮಲೆ ಮಾದೇಶ್ವರನ ಯಾತ್ರೆಗೆ ಕಳುಸ್ತಾ ಇದ್ದಾರೆ
ಮುದ್ಕಮ್ಮ ದೊಣ್ಣೆ ಊರ್ಕಂಡು
ಬುತ್ತಿ ಹೆಗ್ಲಮ್ಯಾಲಿಡ್ಕಂಡು

ಅಮ್ಮ ಊರಬಿಟ್ಟು ಕಡದವಳೆ
ಮುಪ್ಪಿನ ಕಾಲದ ಮುದಕಮ್ಮ || ಕೋರಣ್ಯ ||

ಊರ ಬಿಟ್ಟು ಮುಪ್ಪಿನಕಲದ ಮುದ್ಕಮ್ಮ
ಹುಣ್ಸೂರ್ ಗೇಟಿಗೆ ಬಂದಳು
ಹಿಂದೂ ನೋಡ್ತಾಳೆ ಮುಂದೂ ನೋಡ್ತಾಳೆ
ಪರ್ಸೆ ಇಲ್ಲ
ಪಡ್ಲಾಗು ತಿರ್ಗ್ ನೋಡ್ದಳು
ಮೂಡ್ಲಾಗು ತಿರ್ಗ್ ನೋಡ್ದಳು ಪರ್ಸೆ ಇಲ್ಲ
ಅಯ್ಯೋ ಮಾದೇಅ
ನಿನ್ನ ಏಳುಮಲೆ ಕೈಲಾಸ ಅಂದ್ರೆ
ಏಳುಬೆಟ್ಟ ಹತ್ತಬೇಕು
ಏಳುಬೆಟ್ಟ ಇಳಿಬೇಕು
ನಾನು ಮುಪ್ಪಿನ್ನಾಲದ ಮುದ್ಕಿ
ಒಂದ್ಸಾರಿ ಕಾಲೆಡಗಿ ಬಿದ್ಬುಟ್ರೆ
ನನ್ನ ಎತ್ತಿ ಕೂರ್ಸೊರಿಲ್ಲ
ಎತ್ತಿ ಕುಂಡ್ಸಿ ನನ್ಗೊಂದೆಳನೀರು
ಕೊಡೋರಿಲ್ವಲ್ಲಪ್ಪ
ಮಹದೇವ ಪರ್ಸೆ ಜೊತೆ ಒಳಗಿದ್ರೆ
ಆನಂದವಾಗ್ತ ಇತ್ತು
ಪರ್ಸೆ ಒಬ್ರು ಇಲ್ದೆ ಹೊಂಟೋಗವ್ರೆ
ಬರೋ ತಿಂಗಳ್ದಾದ್ರು ಬರ್ತಿನಿ ಅಂತೇಳಿ
ಮುಪ್ಪಿನ್ಕಾಲದ ಮುದ್ಕಮ್ಮ
ಆ ಹುಣ್ಸೂರ್ ಗೇಟ್ ನಲ್ಲಿ

ಅಲ್ಲಿ ಮಾದೇವ್ನ ಗ್ಯಾನ ಮರ್ತವ್ಳೆ
ತನ್ನ ಮನೆಯ ಗ್ಯಾನ ಮಾಡವಳೇ || ಕೋರಣ್ಯ ||

ಹಿಂದಿರುಗಿ ಮನೆಗೆ ಬಂದ ಮುದ್ಕಮ್ಮ
ಎಲ್ಲಾ ಓಡ್ ಬಂದ್ಬುಟ್ರು ಮಕ್ಳು
ಅಜ್ಜಿ ಬೆಳಿಗ್ಗೆ ಹತ್ಗಂಟೋದವ್ಳು
ಒಂದ್ಗಂಟೆ ಆಯ್ತಲ್ಲ ಬಂದ್ಬುಟ್ಟೆಲ್ಲ ಅಜ್ಜಿ
ಮಾದೇಶ್ವರ್ನ ಯಾತ್ರೆಗೋಗಿದ್ದ ಅಂದ್ರು
ಇಲ್ಲ ಮಕ್ಳೆ ಯಾರು ಕೂಡ
ಪರ್ಸೆ ಸಿಕ್ನಿಲ್ಲ ನನಗೆ
ಬರೋತಿಂಗ್ಳಾದ್ರೂ ಹೋಗ್ತೀನಿ
ಈ ಮೀಸ್ಲ ಬುತ್ತಿ ತಕ್ಕಂಡೋಗಿ
ನಡುಮನೆಯಲ್ಲಿ ಮಡಗ್ದ
ಸೊಸೇರ ಕರ್ದು ಅಮ್ಮ
ಈ ಬುತ್ತಿಯನ್ನು ಪೂಜೆಮಾಡಿ
ಬಸವಣ್ಣನಿಗೆ ಕೊಟ್ಬುಡ್ತಿನಿ
ಊಟ ಮಾಡ್ಕಳ್ಳಿ ಅಂತ್ಹೇಳಿ
ಮುದ್ಕಮ್ಮ ತಾನು ಮಲಗುವ
ಮಂಚದ ಮ್ಯಾಲೋಗಿ ಮಲಕಂಡಳು
ಮಾದಪ್ಪ
ಅಲ್ಲಿ ಕಂಬದ ಬೋಳೀಲಿ
ನಿಂತ್ಗಂಡು ನೋಡ್ತಾ ಅವ್ನೆ
ಇನ್ನೀಗ ನನ್ನ ಸತ್ಯ ಹೋಗ್ ಬುಡ್ತು
ನರಮನ್ಸ ಮುಂಡೇಮಕ್ಳು
ಕಾಸಿನ್ ದೂಪ ಹಾಕೋದಿಲ್ಲ
ಕರವೆತ್ತಿ ಕೈಮುಗಿಯೊದಿಲ್ಲ
ನನ್ನ ಮಲೆಯ ಮಾದೇಶ್ವರ ಅಂತ್ಹೇಳಿ
ನಡುಮಲೆ ಒಳ್ಗೆ ನನ್ನ ಕೈಮುಗಿಯೋದಿಲ್ಲ
ಈವೊತ್ತು ನನ್ನ ಸತ್ಯ ತೋರ್ಸಬೇಕು ಅಂತೇಳಿ
ಮಾದಪ್ಪ ಕಂಬದಬೋಳಿ ದಿಬ್ಬದ ಮೇಲ್ ನಿಂತ್ಗಂಡು
ಅರಗಣ್ಣು ಕಿರುಗಣ್ಣು ಬಿಟ್ಟವ್ರೆ

ಅಯ್ಯ ಗಂಡುಲಿಯಾಸ ತಾಳವರೇ
ಅವಳಟ್ಟಿ ಒಳಗೆ ಗುಡುಗವರೇ
ಗುಡುಗುಡುಗುಟ್ಟಿದವೋ
ಮಾದೇವ ನಡುಬಾಣ ಮಿಂಚಿದವೋ
ಕಾರ‍ಯ್ಯ ನಿನ್ನ ಮಲೆಯ ಒಳಗೆ
ಕಾಮದೇನು ಕರೆದೋ

ಮುಂಗಾರು ಮಿಂಚಿನಪ್ಪಂದವಾಗಿ
ಮಾದೇಶ್ವರ ಮುಪ್ಪನ್ ಕಾಲದ
ಮುದ್ಕಮ್ಮನ್ ಅಟ್ಟಿ ಒಳ್ಗೆ
ಒಂದು ಸಾರಿ ಒರಗುಡ್ಗು ಗುಡ್ಗತ್ ಬುಟ್ರು
ಹಟ್ಟಿ ಒಳಗಿರತಕ್ಕಂತ ದನಕುರಿಗಳೆಲ್ಲ
ಜಲ ಜಲ್ನ ಬೆದರ್ಬುಟ್ಟೊ
ಮುದ್ಕಮ್ಮ ಮಲ್ಗಿರೋ ಮಂಚ
ಗಡಾಗಡ್ನ ಹೊದರ್ಬುಡ್ತು
ಮುದ್ಕಮ್ಮ ಅತ್ರಸ್ಗಂಡು ಮೇಲ್ಕೆದ್ಬುಟ್ಳು
ಏನಪ್ಪ ನನ್ನಟ್ಟಿ ಒಳ್ಗೆ
ಗುಂಡುನ್ ಸಬುದವಾಗ್ತದೆ
ಮೇಗ್ದಲ್ಲಿ ಮೋಡಕಟ್ಟಿದೆಯೊ ನೋಡಿ ಅಂತ್ಹೇಳಿ
ಮೇಗ ನೋಡ್ತಾಳೆ ಮೋಡ್ವಲ್ಲ
ಒಹೋ ಮಕ್ಳೆ ಬನ್ನಿ
ಸೂಸುಲ್ ಕಡ್ಬು ಮೀಸಲ್ ಬುತ್ತಿ
ಬಿಚ್ಚು ಬಿಟ್ಟಿದ್ದೀರಾ ಅಂತಕೇಳ್ದಳು
ಇಲ್ಲಾ ಕಾಣತ್ತಮ್ಮ ಅಂದ್ರು
ಓಡ್ ಬಂದ ಮುದ್ಕಮ್ಮ
ಮಾದೇಶ್ವರನ ಸೂಕ್ಷ್ಮ ಇದು
ನನ್ನಟ್ಟಿ ಒಳ್ಳ ಏನ್ ಆಗ್ಬೇದು ಇನ್ನುಂದೆ
ನಾನೋಗೆ ಬರ್ತಿನೆ ಕಾಣವ್ವ
ಅ ಮಾದಪ್ನೆಸ್ರಮೇಲೆ ನಡು ದಾರಿಒಳ್ಗೆ
ನನ್ನ ಪ್ರಾಣ ಓದ್ರು ತಲಾಗೊಂದಂದ್ ಕಲ್ಲಾಕಿ
ಊಪ್ಪ ಮಾಡ್ತಾರೆ
ಆಗಂತ್ತೇಳಿ ಮುದ್ಕಮ್ಮ
ಮೀಸಲಬುತ್ತಿ ಎಗಲ ಮ್ಯಾಲಿಟ್ಗಂಡು

ಅಮ್ಮ ಊರಬಿಟ್ಟು ಕಡದವಳೇ
ಮುಪ್ಪಿನ ಕಾಲದ ಮುದ್ಕಮ್ಮ
ಬೆಟ್ಟೆಲ್ಲಾ ಜೋಲು
ಮಾದೇವ ಬಿದ್ರೆಲ್ಲಾ ಜೋಲು
ಬೆಟ್ಟದರಸು ಮಾದಪ್ಪ ನಿಮ್ಮ
ಮುಟ್ಟಿದರೆ ಜೋಲು

ಊರು ಬಿಟ್ಟು ಹುಣಸೂರು ಬಿಟ್ಟು
ಪಿರಿಯಾ ಪಟ್ಟಣಕ್ಕೆ ಬಂದಳು
ಸಾಯಂಕಾಲ ಆಗೋಗ್ ಬಿಡ್ತು
ಪಿರಿಯಾ ಪಟ್ಣದಲ್ಲಿ ತಂಗಿದ್ದು
ಬೆಳಿಗ್ಗೆ ಎದ್ದು ಮೈಸೂರ್ ಬೀದಿಗ್ ಬಂದಳು
ಮೈಸೂರ್ ಬೀದಿಲಿ ಪರ್ಸೆ ಸಿಕ್ನಿಲ್ಲ
ಮುದ್ಕಮ್ಮ ದೊಣ್ಣೆ ಊರ್ಕಂಡ್
ನಡ್ಕಂಡ್ ಬತ್ತಾ ಅವ್ಳೆ
ಮೈಸೂರ್ ಮಾರ್ಗವಾಗ್ ಕಡ್ದು
ಟೀನರ್ಸಿಪುರಕ್ಕೆ ಮಾರ್ಗವಾಗಿ
ಕೊಳ್ಳೇಗಾಲಕ್ಕೆ ಬಂದ ಮುದ್ಕಮ್ಮ
ಸಾಯಂಕಾಲ ನಾಲ್ಕಂಟೆ ಆಯ್ತು
ಹಿಂದಲ ಪರ್ಸೆ ಬರ್ತಾ ಅವ್ರೆ ಆಗ ಒಬ್ಬೊಬ್ರಾಗಿ
ಎಲ್ಲಿಂದ
ಅರ್ಧನಳ್ಳಿ ಅಮ್ಮಚೋಡಿ
ಚಾಮ್ ರಾಜನಗರ ಕಡೆಯಿಂದ ಬರ್ತಾಯಿದ್ರು
ಪರ್ಸೆ ನೋಡ್ದ ಮುದ್ಕಮ್ನಿಗೆ ನಗ್ಮೂಕ ಆಯ್ತು
ಮಹದೇವ
ಪರ್ಸೆ ಇಲ್ಲ ಅಂತ್ಹೇಳಿ ಹಿಂದಂಕ್ ಹೋಗ್ತಾ ಇದ್ದೆ
ಸ್ವಲ್ಪ ಸೂಕ್ಷ್ಮ ತೋರ್ದ ನನ್ನಟ್ಟಿ ಒಳ್ಗೆ
ಅದ್ನು ಮರ್ತ್ ಬಿಟ್ಟಿದ್ದೆ
ಕೊಡಬಾರ್ದ ಕಷ್ಟ ಕೊಡ್ತಿದೆಲ್ಲಪ್ಪ ಅಂತ್ಹೇಳಿ
ಕಾಕ ಹಾಕ್ಕಂಡು ಮುದ್ಕಮ್ಮ
ಹೊತ್ತಿದ್ದಂತ ಮಿಸ್ಲ ಬುತ್ತಿ ತಕ್ಕಂಡೋಗಿ
ಆ ಬಂಗಾರ‍ಸೆಟ್ಟಿಕೊಳದೊಳ್ಗೆ
ಗುಡ್ಡಗೊರವ
ದಾಸ ಜೋಗಿಯನ್ನು ಕರೆದು
ಪೂಜೆಮಾಡಿ ಅವ್ರಿಗೆ ಎಡೆಬಡಿಸ್ಬುಟ್ಟು
ತಾನು ಊಟ ಮಾಡ್ಕಂಡು
ಅಂಗ್ಡಿಸಾಲ್ನಲ್ಲಿ ಹೋಗಿ ಕಡ್ಡಿ ಕರ್ಪೂರ ತಗ್ದು
ತನ್ನ ಆಸ್ಬೆ ಒಳ್ಗ್ ಆಕ್ಕಂಡು
ದೊಣ್ಣೆ ಊರ್ಕಂಡು ಮುದ್ಕಮ್ಮ

ಅಮ್ಮ ಕೊಳ್ಳೇಗಾಲದ ಬೀದಿಯೊಳಗೆ
ಕುಣ್ಕಂದ್ ಕುಣ್ಕಂದ್ ಹೊಯ್ತವಳೆ
ಅಂದವಾದ ಕೊಳದಲ್ಲಿ
ಮಾದೇವ ಚಂದದ ಜೋತಿ ಬೆಳಕಲ್ಲಿ || ಕೋರಣ್ಯ ||

ಕೊಳ್ಳೇಗಾಲದ ಬೀದಿ ಒಳ್ಗೆ
ಬರುವಂತ ಪರ್ಸೆ ಹಿಂದ್ಮಾಡ್ಕಂದ್
ದೊಣ್ಣೆ ಉರ್ಕಂಡ್ ಕುಣ್ಕಂಡ್ ಕುಣ್ಕಂಡ್
ಮುಪ್ನ ಕಾಲ್ದ ಮುದ್ಕಮ್ಮ
ಮಧುನಳ್ಳಿ ಬೀದ್ಗಾಣ್ ಕಡ್ದು
ಸಿಂಗಲ್ಲೂರು ಬಸವಣ್ಣ
ಕಟ್ಟೆ ಬಸವಣ್ಣನ ಪೂಜೆ ಮಾಡ್ಕಂಡು
ಯಾರು? ಮುಪ್ಪಿನ ಕಾಲ್ದ ಮುದ್ಕಮ್ಮ
ಮಾದಪ್ಪ ನೋಡ್ದ್ರು
ಇನ್ನುಂದೆ ಸೂರ್ಯಚಂದ್ರಾದಿಗಳು ಇರೋವರ್ಗು
ನನ್ನ ಮೈಸೂರ್ನ ಮೇಲ್ನಾಡಿನ ಪರ್ಸೆ
ಇದುವಲ್ದೆ ಕೀಳ್ನಾಡ್ನ ಪರ್ಸೆ
ಅಂದೂರು ಬವಾನಿ
ಪಾಲರ ಮೇಟೂರು
ಈ ಕಡೆ ಕೊಯಮತ್ತೂರ್ ಪರ್ಸೆ
ಇದೇ ರೀತಿಯಾಗಿ
ನಡುಮಲೆ ಒಳ್ಗೆ ಸದ್ಭಕ್ತಿಯಿಂದ
ಮಾದೇವ ಅಂತೇಳಿ
ನಿಮ್ಗೆ ಕಷ್ಟಬಂದ ಯಾಳ್ಯದಲ್ಲಿ
ಗೊಂಡಾರಣ್ಯದಲ್ಲಿ ಮಲ್ಗದ್ ಜಾಗ್ವಾಗ್ಲಿ
ಇಲ್ಲ ದಾರಿಯಲ್ಲಿ ಹೋಗುವಂತ ಜಾಗದಲ್ಲಿ
ಸದ್ಭಕ್ತಿಯಿಂದ ನಾಮಸ್ಮರಣೆ ಮಾಡಿ
ಅವ್ರಿಗೆ ಮಕ್ಕಳ ಸಿರಿ ಮನಸಿರಿ
ಕೋಟೈಶ್ವರ ಕೋಮಾರ್ ಬಾಗ್ಯ ಕೊಡ್ತಿನಿ
ಇದೇ ಸತ್ಯವಾಗಿ ದೂಪಹಾಕ್ಲಿ ಅಂತೇಳ್ಬಿಟ್ಟು
ಆವಾಗ ನನ್ನಪ್ಪಾಜಿ
ಆ ಹೆಣ್ ಮಗಳು ಯಾವ್ ಅಡ್ಡಿ ಒಳ್ಗಿರುವಳೋ ಅಂತೇಳಿ
ತೆಂಕಲಾಗಿ ಹೋಗ್ತಾ ಇದ್ದಾರೆ
ಆವಾಗ ಪಾದ್ದರೆ ಒಳ್ಗೆ ಹೋಗಿ ನಿಂತ್ಗಂಡು
ಉಟ್ಟರೆ
ಅದಕ್ಕೀಗ ಪಾದ್ದರೆ ಅಂತ್ಹೇಳಿ ನಾಮ್ಕರ್ಣವಾಗದೆ
ಮಾದಪ್ಪ ಉಟ್ಟರೆ ಮೇಲ್ ನಿಂತ್ಗಂಡು
ನೆಲಕ್ಕೆ ಪಾದ ಊರಿದ್ದಾರೆ
ಹುಲಿಯನ್ನಿಡ್ದು ಕಲ್ಲಿನ ಕಂಬಕ್ಕಟ್ಟಾಕ್ ದ್ರು
ಅಲ್ಲಿ ಲಾಲೈಸಿ ನೋಡ್ರು ಮಾದಪ್ಪ
ಕೊಕ್ಕರಬೋಳಿ ಬೆಟ್ಟದ ಮಾಳದಲ್ಲಿ
ಆ ಶಿವಶರ್ಣೆಯಾಗಿರ್ ತಕ್ಕಂತ ಹೆಣ್ಮಗಳು
ಕೋಳಿಯಾಗ್ ಕೂಗಿ ನಾಯಿಯಾಗ್ ನರಳ್ತ ಇದ್ಲು
ಕರ್ಣದಲ್ಲಿ ಕೇಳ್ಬುಟ್ರು ಮಾದಪ್ಪ
ಈ ಹುಲಿ ಮ್ಯಾಲ್ ಕೂತ್ಗಂಡೊದ್ರೇ
ಹೆಣ್ ಮಗಳು ಬೆದ್ರಿ ಬೆಟ್ಟ ಸೇರ್ಬುಡ್ತಳೆ ಅಂತ್ಹೇಳಿ
ಉಲಿಯನ್ನೆ ಇಡ್ದು ದಾಳಿಂಬ ಗಿಡಕ್ ಕಟ್ಟಾಕ್ ದ್ರು
ಕಂದಾ
ಹನ್ನೆರಡೆಜ್ಜೆ ಸಿದ್ರಾಮ
ನಾನು ಬರೋವರ್ಗು ನಿನ್ನ ಹೊಟ್ಟೆ ಹಸುವಾದ್ರೆ
ನಾಲ್ಗೆ ಒಳ್ಗೆ ಜೇಡಿಮಣ್ ನೆಕ್ಬುಟ್ಟು
ಗಾಳಿಗ್ ಬಾಯ್ ಬಿಡು
ಅಸಿಮಾಂಸ ಬಿಸಿರಕ್ತ ಕುಡ್ದಪಂದ ಮಾಡ್ತಿನಿ ಅಂದ್ರು
ಇಲ್ಲ ತಂದೆ ನನ್ನ ಆಹಾರ ಕೊಟ್ಟೋಗು
ಅಂತೇಳಿ ಮುಂದ್ಕ ಅಡ್ಡಾಗಿ ಕೈ ಊರ್ಬುಡ್ತು
ಎಲಾ ಕೆಟ್ಟಮುಂಡೆ ಮುಗ್ನುಲಿಯೋ
ನಾನು ಹೋಗುವಂತ ಕಾರ್ಯಕ್ಕೆ ಅಡ್ಡಿಯಾಗ್ ಬೇಡ
ನಾನು ಬರುವರ್ಗೂ ಗೋಗಲ್ಲಾಗು ಅಂತ್ಹೇಳಿ
ಆ ಪಾದ್ದರೆ ತೆಂಕ್ಲಾಗಿ
ಗೋಗಲ್ಲು ಮಾಡ್ಬುಟ್ರು ಮಾದಪ್ಪ
ಮುತ್ತಿನ್ ಜೋಳ್ಗೆ ಮುಂಗೈಲಿ ದರಿಸ್ಕಂಡು
ದರೆಗಾತ್ರ ದುಂಡಕೋಲು ಕೈಲಿಡಕಂಡು
ಕಾಲ್ನಡ್ಗಲಿ ಹೊರಟ್ರು ಸಂಕಮ್ಮನ ಗುಡ್ಲುಗೆ
ಕಾಡಿಲ್ಲಿರುವಂತ ಕಾಡುಮೃಗ ಜಾತಿಯಲ್ಲಿ ಓಡ್ಬಂದೋ
ಅಲ್ಲಿ ಆಪ್ರಾಣಿ ಗೊದ್ದೆ ಗೋಸುಂಬೆ ಹಾವು ಚೇಳು
ಎಲ್ಲಾ ಬಂದು ಕಲ್ಲುಮುಳ್ಳಾದೋ
ನನ್ನಪ್ಪಾಜಿ ಮಾಯ್ಕಾರ ಗಂಡ ಮಾದಪ್ಪನಿಗೆ
ದಾರಿಮಾಡ್ತ ಇದಾವೆ ರೋಡ್ ಮಾಡ್ತ ಅವೆ
ನವಲು ಬಂದು
ನೆರಳ್ ಮಾಡ್ಕಂಡು ಗರಿಯನ್ನ ಕೆದ್ರಿ
ಸತ್ಗೆ ಇಡ್ಕಂಡ್ ಬತ್ತಾ ಅವೆ

ಅಪ್ಪ ಕಾಲು ನಡ್ಗೇಲಿ ಬರ್ತಾವುರೇ
ಕಿತ್ತಾಲ ರಾಜ್ಯದ ಮಾದೇವಾs || ಕೋರಣ್ಯ ||

ಬಡಗ್ಲು ಭಾಗದ ಮಠದವ್ರು
ಗುರುವೆ ಬೆಡಗಿನಲ್ಲಿ ಚಂದದ ಸಾಲು
ಮನವ ಒಪ್ಪಿ ದುಡುಗಳ ನೋಡೊ
ದುಂಡುಳ್ಳ ಮಾದೇವ

ಮಾದೇಶ್ವರ ನನ್ನಪ್ಪಾಜಿ ತುಂಬ್ದ ಸೋಮವಾರ
ಕಾಲ್ನಡ್ಗೆಯಲ್ ಬಂದ್ರು

ಶಿವಶರಣೆಯಾದ ಸಂಕಮ್ಮನ
ಸೊಪ್ಪುನ ಗುಡ್ಲು ನೋಡುದ್ರು
ಅಯ್ಯಾ ಇಂತ ಅಡವಿ ಅರಣ್ಯದಲ್ಲಿ

ಸೂರ್ಯ ಚಂದ್ರಾದಿಗಳ ಬೆಳಕಿನಲ್ಲಿ
ಕಾ ಅನ್ನಕ ಕಾಗಿಲ್ಲ
ಗೂ ಅನ್ನಕ ಗೂಗಿಲ್ಲ
ಹಕ್ಕಿ ಗಲಗಿಲ್ಲ ಪಕ್ಷಿ ಗಲಗಿಲ್ಲ
ಇಂತ ಅಡವಾರಣ್ಯದಲ್ಲಿ ನರ್ಸಮನ್ಸ ಮುಂಡೆಮಗ
ಇಂತ ಹೆಣ್ಣ ಪ್ರಾಣಿಯನ್ನು ತಂದು
ಇಂತ ಕೊಲೆಯಲ್ಲಿ ಮಲಗ್ಸಿದ್ದಾರೆ
ನಾನೆಚ್ಚಲ್ಲ ಪ್ರಪಂಚದಲ್ಲಿ
ಈ ಸೊಪ್ನ ಗುಳ್ಳಲ್ಲಿರುವಂತ ಹೆಣ್ಣು ಮಗಳು
ನನಗಿಂತ ಹೆಚ್ಚಿನ ಪರಿವ್ರತೆ
ಇವ್ಳು ಅತ್ತಂತ ಕಣ್ಣೀರು
ನನ್ನ ಏಳುಮಲೆ ಕೈಲಾಸಕ್ಕೆ ಅರಿವಾಗ್ ಬೇಕಾದ್ರೆ
ಎಂತ ಪರಿವ್ರತೆ ಆಗಿರಬಹುದು
ಮಹಾದೇವ ಏಳು ಪ್ರದಕ್ಷಿಣೆ ಬಂದ್ರು
ಸೊಪ್ಪಿನ ದೊಡ್ಡಿಯನು
ಈಶಾನ್ಯ ಭಾಗದಲ್ಲಿ ನಿಂತ್ಗಂಡು
ಸಣ್ಣ ದನಿಯಲ್ಲಿ ಮುಪ್ಪಿನ ಕಾಲದ್ ಮುದ್ಕನಾಗಿ
ಲಿಂಗದ ಮೊರ್ತ ಜಂಗಿನ ಸಬ್ದ ಮಾಡ್ಕಂಡು
ಹೆಣ್ಣು ಮಗಳು ಅಂಜುವಳೊ ಬೆಚ್ಚವಳೊ ಅಂತ್ಹೇಳಿ

ಕಂದಯಾರೋ ಯಾರೋ
ಕಂದಮ್ಮ ಯಾರೋ ಯಾರೋ ಕಂದಮ್ಮ
ಯಾರಮ್ಮ ಕಂದ ಮನೆಯೊಳಗೆ
ಅರನಿಗೆ ಬಿಕ್ಷಾ ನೀಡವ್ವ
ಗುರುವಿಗೆ ದಾನ ನೀಡವ್ವ
ಶಿವನಿಗೆ ಧರ್ಮ ನೀಡವ್ವ
ಮಗಳೆ ಮುತ್ತೈದೆ ಕೈನ ದಾನ ನೀಡಿ
ಮೂಡಲ ಮಲೆಗೆ ಕಳುಗವ್ವಾs || ಕೋರಣ್ಯ ||