ಮಾದೇವ ಲಿಂಗದ ಮೊರ್ತ
ಜಂಗನ ಶಬ್ದ ಮಾಡ್ಕಂಡು

ಹರಹರನ ಭಿಕ್ಷ
ಗುರುಧರ್ಮ ಕ್ವಾರಣ ಭಿಕ್ಷ
ಯತಿಗಳ ಮುನಿಗಳ ಭಿಕ್ಷ
ತಂದೆ ಕಲ್ಯಾಣದವ್ರ ಭಿಕ್ಷ
ತಾಯಿ ಉತ್ರಾಜಮ್ಮನ ಭಿಕ್ಷ
ಜ್ಯೋತಿ ಲಿಂಗ್ನ ಭಿಕ್ಷ
ಜೋಳ್ಗೆ ಇಡ್ದ ಆತ್ಮನ ಭಿಕ್ಷ
ನಾಲ್ಕು ಪಾದ್ದ ಜೋಳ್ಗೆ ಭಿಕ್ಷ

ಭವತಿ ಭಿಕ್ಷಾಂದೇಹಿ
ಬವತಿ ಬಿಕ್ಷಾಂದೇಹಿ ಅಂತ ಕೂಗುದ್ರು
ಹೆಣ್ಣುಮಗಳಿಗೆ ಮಾತ್ನಾಡೋಣ ಅಂದ್ರೆಬಾಯಿಲ್ಲ
ಹೇಳಿ ಕೇಳೋಣ ಅಂದ್ರೆ ಕೈಯಿಲ್ಲ ಕಾಲಿಲ್ಲ
ಎಲ್ಲಾನು ಕಟ್ಟಿ ಮಲಗ್ಸಾವ್ನೆ ನೀಲೆಗೌಡ
ಆವಾಗ ಸಂಕಮ್ಮಿಗೆ
ದಾನ ಧರ್ಮ ಭಿಕ್ಸೋ ಭಿಕ್ಸೋ ಎಂಬ ಶಬ್ದವು
ಕರ್ಣದಲ್ಲಿ ಕೇಳ್ಬುಡ್ತು ಮೊಕಣ್ಣಾಗ್ ಮಲ್ಗಿದ್ದಳು
ಆವಾಗ ಸಂಕಮ್ಮ
ಭೂಮಿತಾಯಿ ಆಕಾಸವೇಣಿ
ನನ್ನ ಗಂಡನ್ ಮನೆದೇವ್ರು ಆ
ನನ್ನ ಕಸ್ಟ ಕಾಯ್ನಿಲ್ಲ
ಯಾರೊ ಅಂತೇಳಿ ಪರದೇಶಿಯೋ
ಇಲ್ಲ ಕುಂಟ ಕುರ್ಡನೋ
ಇಲ್ಲ ಎಡ್ದ ಎಳವ್ನೊ
ಕಾಳಮುಖ ಸನ್ಯಾಸಿಯೋ
ನನ್ನ ಮನೆ ಬಾಗ್ಲಲ್ಲಿ ಬಂದು
ಬಿಕ್ಸಾ ಕೂಗ್ತಾ ಇದ್ದಾರೆ
ನಾನು ಎದ್ದು ಹೋಗಿ
ನನ್ನ ಮನೆಯಲ್ಲಿ ದಾನ್ಯವಿಲ್ಲದಿದ್ದರೂ
ಕೈಮುಗ್ದು ಅವರ್ನ ಮುಂದಲ ಮನ್ಗೆ ಕಳಿಸಿದ್ರೆ
ನನ್ನ ಕರ್ಮ ಕಳಿತಾ ಇತ್ತು
ಎದ್ದು ಹೋಗೊದಕ್ಕೆ ಸಾಧ್ಯವಿಲ್ಲ
ಅಯ್ಯೋ ಭೂಮ್ತಾಯಿ ಆಕಾಶವೇಣಿ
ನನ್ನ ದೇವ್ರಗಳು
ಯಾವ್ ದೇವ್ರಿಗೂ ಅರ್ವಾಗ್ಲಿಲ್ಲ
ನಮ್ಮಪ್ಪನ ಮನೆ ಉದ್ದಾರ ಮಾಡಿರುವಂತ
ಏಳುಮಲೆ ಮಾದೇಶ್ವರ
ಆಸ್ವಾಮಿಗೂ ಕೂಡ ಕೈಮುಗ್ದಿ
ಹನ್ನೆರಡ್ ಗಂಟೆ ರಾತ್ರಿ ಒಳಗೆ
ಆ ನನ್ನಪ್ನಿಗೂ ಕೂಡ ಅರ್ವಾಗ್ನಿಲ್ಲ
ಮಾದೇವ

ನನ್ನ ಪಾಪಿ ಮಾಡಿದ ಕಣ್ಣೀರು
ನಿಮ್ಮ ಪಾದಕ್ಕರ್ವಾಗಿ ಮಾದೇವಾs || ಕೋರಣ್ಯ ||

ಮೊಕ್ಕಣ್ಣಾಗ್ ಮಲಿಕಂಡು
ಮಾದಪ್ಪನ್ಗೆ ಕೈ ಮುಗ್ದಳು ಸಂಕಮ್ಮ
ಆ ಹೆಣ್ ಮಗಳತ್ತಂತ ಕಣ್ಣೀರು
ಸೊಪ್ಪಿನ ಗುಡ್ಳ ಬಾಗ್ಲಲ್ಲಿ ನಿಂತಂತ
ಮಾದಪ್ನ ಪಾದಕ್ಕೆ ಅರ್ವಾಗ್ಬುಡ್ತು
ಹೆಣ್ಣು ಮಗಳ ಕಣ್ಣೀರು ಆರ್ವಾದ್ ತಕ್ಷಣವೇ
ಆ ಮಹಾಗುರುಸ್ವಾಮಿ ಮಾದೇವ್ನಿಗೆ
ಜಂಗಿನ ಪಾದ ಜಲೀರ್ ಅಂದ್ಬುಡ್ತು
ಜಲಾಜಲ್ನ ಬೆವತುಬುಟ್ರು ಮಾದಪ್ಪ ಅವರು
ಒಹೋ ಎಂತಾ ಪರಿವ್ರತೆ ಇರಬಹ್ದು
ಒಂದ್ಸಾರಿ ದುಕ್ಕಾ ಮಾಡ್ದಾಗ್ಲೆ
ನನ್ನ ಲಿಂಗ ಜಂಗೆಲ್ಲ ಜಲೀರ್ ಅಂದ್ಬುಡ್ತು
ನನ್ಗೆ ಜಲಾಜಲ್ನೆ ಬೇವ್ರು ಬಂದ್ಬುಟ್ಟದೆ ಸೆಕೆನೀರು
ಆದ್ರೆ ಇನ್ನೊಂದ್ ಸಾರಿ ದುಕ್ಕಮಾಡುದ್ರೆ ಹೆಣ್ ಮಗ್ಳು
ನಾನು ಸುಟ್ಟೋಗ್ ಬುಡ್ತಿನಿ
ತಕ್ಷಣ ಇವ್ಳ ಕಸ್ಟ ಪರಿಹಾರ
ಮಾಡ್ಬೇಕಲ್ಲ ಅಂತ್ಹೇಳಿ
ಮುತ್ತನ ಜೋಳ್ಗೆಯಿಂದ
ಏಳ್ ಮಲೆ ವಿಭೂತಿ ತಕ್ಕಂಡು ಮಹಾಗುರು
ತನ್ಗ ವಿದ್ಯಾಬುದ್ದಿಯನ್ನ ಕಲ್ಸಿ
ಪಂಚೇಳು ದೀಕ್ಷೆ ಮಾಡ್ದಂತ ಗುರು
ಸಾಲೂರು ಮಠದ ಶಾಂತ ಮಲ್ಲಿಕಾರ್ಜುನಸ್ವಾಮಿ
ನಮ್ಮ ಗುರುಗಳ ಕಟಾಕ್ಷವಿರಲಿ ಅಂತ್ಹೇಳಿ
ನಮ್ಮಪ್ಪ ಶಿವಪ್ಪ ಶಾಂತಮಲ್ಲಯ್ಯ ಅಂತ್ಹೇಳಿ

ಅಯ್ಯ ಮಲೆಯ ಬಸ್ಮ ತಗದವ್ರೆ
ಸರಣೆ ಮಂಡೆ ಮೇಲೆ ಪಿಡುದವ್ರೇs || ಕೋರಣ್ಯ ||

ಮಾದೇಶ್ವರ ಸ್ವಾಮಿ
ಜಾಗ್ರತೆಯಾಗಿ ಸಂಕಮ್ಮನ ಮಂಡೆಮೇಲೆ
ಬಸ್ಮ ಪಿಡದ್ಬುಟ್ರು
ಮಾದಪ್ನ ಬಸ್ಮ ಬಿದ್ದ ತಕ್ಷಣವೆ
ಆ ಮಲೆ ಸ್ವಾರ್ಲ್ಗು ನೀಲೇಗೌಡ
ಆ ಹೆಣ್ ಮಗ್ಳಿಗೆ ಏನ್ ಕಟ್ ಬಂದ್ನ ಮಾಡಿದ್ನೋ
ಒಂದೊಂದಾಗಿ ಬಿಡ್ಗಡೆ ಆಗ್ತಾ ಅವೆ
ಮಾದಪ್ನ ಬಸ್ಮ ಬಿದ್ದ ತಕ್ಷಣ

ಅವಳ ಕಣ್ಣಿನ್ ಸೂಜಿ ಕಳದೊಯ್ತು
ಕರ್ಣದ ದಬ್ಳ ಬಿದ್ದೊಯ್ತು
ಬಾಯಿನ ಬೀಗ ಕಲೆದೊಯ್ತು
ಇಂಕೈ ಮುರಿಯು ಬಿದ್ದೋಯ್ತು
ಮುಂಕೈ ಮುರಿಯು ಸಿಡಿದೊಯ್ತು
ಕಾಲಿನ ಸಂಕೋಲೆ ಕಳೆದೊಯ್ತು
ಬೆನ್ನಿನ ಗುಂಡು ಉರುಳೋಯ್ತು
ಬೆದ್ರಿ ಬೆಟ್ಟ ಸೇರೊಯ್ತು
ಅಮ್ಮ ಉಸ್ಸಂತಮೇಲಕ್ಕೆ ಎದ್ದವ್ಳೆ
ಸತ್ಯು ಬಾವನ ಸಂಕಮ್ಮಾs || ಕೋರಣ್ಯ ||

ಯಾವಾಗ ಗಂಡ ಮಾಡಿರುವಂಥ ಕಟ್ಟು
ಕಣ್ಣಿನ ಸೂಜಿ ಕರ್ಣದ ದಬ್ಳ
ಬಾಯಿನ ಬೀಗ
ಇಂಕೈ ಮುರಿ ಮುಂಕೈ ಮುರಿ
ಬೆನ್ನಿನ ಗುಂಡು ಯಾವಾಗ್ ಉರ್ಳೊಗ್ ಬುಡ್ತು
ಸಂಕಮ್ಮ ಉಸ್ಸೊ ಅಂತ್ಹೇಳಿ
ಮೇಲ್ಕೆ ನೆಟ್ಗೆ ಎದ್ಬುಟ್ಟಳು
ಆ ನಗ್ಗಲ ಮುಳ್ಳೆಲ್ಲಾ ಬೂದಿಬಸ್ಮಾವಾಗೋಗ್ ಬುಟ್ಟಿತ್ತು
ಮೇಲ್ಕೆದ್ದು ಕೂತ್ಗಂಡು
ಹೆಣ್ಣುಮಗಳು ತನ್ನ ಶರೀರನೋಡ್ತಾ ಇದ್ದಾಳೆ
ನೀಲೇಗೌಡ ಉಡ್ಸಿದಂತ ಅವ್ರೆ ಅಂಬು
ಒಣ್ಗಿ ಗಾಳಿಗ್ ತೂರೋಗಿದೆ
ಎಕ್ಕದ್ ಕಟ್ನ ಎದೆಸೊಪ್ಪಿಲ್ಲ
ತೇಗದೆಲೆ ಮುಸುಗಿಲ್ಲ
ಎಲ್ಲ ಒಣ್ಗಿಗಿ ಎಡ ಬಲ್ದಲಿ ತರ್ಗು ಬಿದ್ದವೆ
ಮಹದೇವ
ಆ ತರ್ಗು ಬುರ್ಗನೆಲ್ಲಾ ಗೋರಿ
ತನ್ನ ಮಾನವನ್ನು ಮರಮಾಚ್ಗಂಡು ಸಂಕಮ್ಮ
ಸೊಪ್ಪಿನ ಗುಡ್ಲ ಅರವಾಗಲಿ ತಗ್ದು

ಅಪ್ಪ ಸೊಪ್ಪಿನ ಗುಡ್ಲ ತಗ್ದವಳೆ
ಮಾದೇವ್ನ ರೂಪ ನೋಡವಳೇs || ಕೋರಣ್ಯ ||

ಒಂದು ಕಡ್ಡಿ ಒಳ್ಗ ಸೊಪ್ಪಿನ ಗುಡ್ಲ
ಇಕ್ಕಾಲು ಮಾಡಿ ಮಾದಪ್ಪನ ಸನ್ಯಾಸ ರೂಪನೋಡ್ದಳು
ಓಹೋ ಯಾರೊ ಸನ್ಯಾಸಿಗಳು ಬಂದಿದ್ದಾರೆ
ಹಿಂದೆ ನನ್ನ ಗಂಡನಾದ ನೀಲೆಗೌಡ ಹೇಳಿದ್ರು
ಲಗ್ನವಾದ ಕಾಲ್ದಲ್ಲಿ
ಬಂಕಾಪುರಿ ರಾವಳೇಶ್ವರ
ಜಗನ್ಮಾತೆ ಸೀತಾದೇವಿಯನ್ನು
ಅಶೋಕ ವನದಲ್ಲಿ
ಬಿಕ್ಸಕ ಬಮ್ದು ಸನ್ಯಾಸರೂಪ್ದಲ್ಲಿ
ಅಪಹರ್ಸ್ ಕೊಂಡು ಹೋಗಿದ್ದ ಮಡದಿ ಅಂತ್ಹೇಳಿದ್ರು
ನನ್ನ ಗಂಡನ ಮಾತು ಅದೇ ಕಲ್ಮೇಲೆ
ಅಕ್ಷರ ಒಡ್ಡೊಪಂದವಾಯ್ತು
ಯಾರೋ ಸನ್ಯಾಸಿಗಳು ಬಂದ್ರವೇ
ಯಾರೇ ಆಗಲಿ
ನನ್ನ ಪತಿವೃತ ದರ್ಮವಿದ್ದರೆ
ನನ್ನ ಕಾಪಾಡ್ಲಿ
ಮೊದ್ಲಾಗಿ ಅವ್ರು ಹೆಸ್ರು ಕುಲಸ್ಥಳ ಕೇಳ್ಬೇಕಂತ್ಹೇಳಿ
ಒಳ್ಗಡೆ ಕುತ್ಗಂಡು ಸಂಕಮ್ಮ

ಅಪ್ಪ ಯಾವ ಕಾಡ್ನೆಲದ ಮುನ್ಗಳಯ್ಯ
ಹೇಳಿಕೊಡಿ ದಮ್ಮಯ್ಯಾ || ಕೋರಣ್ಯ ||

ಸಹಬಾಸ್ ನನ ಕಂದಾ
ಶಿವಸರಣೆಯಾದ ಸಂಕಮ್ಮ
ನನ್ನನ್ನ ಯಾರು ಇಲ್ಲಿವರ್ಗೆ ಕೇಳಿರ್ಲಿಲ್ಲ ಕಂದ
ಈ ರೀತಿಯಾಗಿ ಹೆಸ್ರು ಕುಲನೆಲ್ಲಾ ಕೇಳಿರ್ಲಿಲ್ಲ
ಈ ಅಡ್ವಿ ಅರಣ್ಯದಲ್ಲಿ
ನನ್ನಂತ ಪರದೇಶಿ ಜಂಗುಮನ ಕಷ್ಟವನ್ನು
ನಿನ್ನಂತ ಪರಿವ್ರತೆ ಕೂಡ ಹೇಳ್ತೀನಿ ಕಂದ
ನಾನು ಯಾರೆಂಬುದಾಗಿ ತಿಳ್ದಿರುವೆ ಮಗಳೇ
ತುಂಬಿದ ಸೋಮವಾರ
ಏಳುಮಲೆ ಕೈಲಾಸ್ದಿಂದ ಬಂದಿದ್ದೀನಿ ಕಂದ
ನಾನು ಹುಟ್ಟಿದು ಉತ್ತುರದೇಶ
ಬಂದುದೇ ಬಾಳೆಲೆ ಸೀಮೆ
ಸೇರಿದ್ದು ಆದಿ ಕುಂತೂರು ಮಠ
ಕುಂತೂರು ಮಠದಲ್ಲಿ ಪರದೇಶಿ ದೀಕ್ಸವಾಗಿ
ಪರನಾರಿಯರ್ಗೆಲ್ಲಾ ಸೋದರ ಸಮ್ನಾದೆ
ಹೆಣ್ಣುಬಾಲೆ ಮತ್ತೆ ಕನ್ನಬಾಲೆ ತೊರ್ದೆ
ಕರಿಜಾತಿ ಕಣ್ಣೆತ್ತಿ ನೋಡ್ಲಿಲ್ಲ
ಕನ್ನೆಂಬ ಕೈಲಾಸ ತೋರ್ದು ಕಂದ
ಏಕಾಂಗಿ ಮಲೆಯೊಳಗೆ ಬಂದು
ಏಳುಬಾಯಿ ಹೊನ್ನುತ್ತದಲ್ಲಿ
ಅಖಂಡ ಮಯಿಮನಾಗಬೇಕು
ಅಲ್ಲಮ ಪ್ರಭುವಾಗ್ಬೇಕು ಅಂತ್ಹೇಳಿ
ಪುಟ್ಟಲಿಂಗವಾಗಿದ್ದೀನಿ ಕಂದ

ನನ್ನ ಏಳುಮಲೆಯ ಮಾದೇವ ಎಂದು
ಕರೆವರು ಕಾಣೋ ಕಂದಮ್ಮ
ಮಗಳೇ ಲಿಂಗದ ಬಿಕ್ಸ ನೀಡವ್ವ
ನನ್ನ ಮೂಡಲ ಮಲೆಗೆ ಕಳುಗವ್ವs || ಕೋರಣ್ಯ ||

ಗುರುವೇ ಗುರುಪಾದವೇ ನನ್ನಪ್ಪಾಜಿ
ಮಹದೇವ
ಮಾಯ್ಕಾರ ಗಂಡ
ನನ್ನಪ್ಪನ ಮನೆದೇವ್ರ್ ಬಂದಿದ್ದೀರಿ
ಮಟ್ಟ ಮೊದ್ಲಾಗಿ ಬಂದಿದ್ದೀರಲ್ಲ ಗುರುವೆ
ತುಂಬಿದ ಸೋಮವಾರ‍
ನನ್ನ ಗಂಡನಾದ ನೀಲೇಗೌಡ್ರು
ಅಸಮಾನ ಕಾರ ದುಸುಮಾನಕಾರ
ಕಳವಳವುಳ್ಳಂತ ಮನ್ಸ
ಈ ಅಡ್ವಿ ಅರಣ್ಯದಲ್ಲಿ
ನನ್ನ ಸೊಪ್ಪಿನ ದೊಡ್ಡಿ ಒಳ್ಗೆ
ಒಬ್ಳನ್ನೆ ಬಿಟ್ಟು ಹೋಗಲಾರದೆ
ಕುಡಿವದಕ್ಕೆ ನೀರಿಲ್ಲ
ಕೊಡಬಾರ‍ದ ಕೊಲೆ
ಮಾಡಬಾರದ ಸಿಕ್ಸಿ ಮಾಡ್ಬುಟ್ಟು
ಉಣ್ಣುವುದ್ಕೆ ಅನ್ನವಿಲ್ಲ
ಕುಡಿವುದಕ್ಕೆ ನೀರಿಲ್ಲ
ಉಡುವುದಕ್ಕೆ ಬಟ್ಟಿಲ್ಲ ಮಾದಪ್ಪ
ಆ ರೀತಿಯಾಗಿ ಕೊಲೆ ಕೊಟ್ಬುಟ್ಟು ಯಜಮಾನ

ಅಯ್ಯ ಎಜ್ಜೇನುಮಲೆಗೆ ಹೋಗವ್ರೆ
ಯಜಮಾನ ನೀಲಯ್ಯಾs || ಕೋರಣ್ಯ ||

ಕಂಚಿನ ಕಂಸಾಳೆ ಚಂದ
ಗುರುವಿಗೆ ಪಂಚೈದು ಕಳಸ ಚಂದ
ಏನವ್ವ ಕಂದ ಸಂಕಮ್ಮ
ಏನಿಲ್ಲ ಅಂತ ಹೇಳ್ತಾ ಇದ್ದಿಯಲ್ಲ ಮಗಳೇ
ನನ್ನ ಏಳುಮಲೆ ಕೈಲಾಸ್ದಲ್ಲಿ
ಎತ್ತಿದಂತ ಜೋಳ್ಗೆ
ಎಲ್ಲೂ ಕೂಡ ಇಳಕ್ನಿಲ್ಲ
ಯಾರ ಮನೆ ಬಾಗ್ಲಿಗೂ ಬಿಕ್ಸಕ ಹೋಗ್ನಿಲ್ಲ
ತುಂಬಿದ ಸೋಮವಾರ
ಮೊಟ್ಟ ಮೊದಲ್ನೆದಾಗಿ ನಿನ್ನ ಮನೆಗೆ
ಕ್ವಾರ‍ಣ್ಯ ಬಿಕ್ಸೆಗೆ ಬಂದಿದ್ದೀನಿ ಕಂದ
ನನ್ನ ಮುತ್ತಿನ್ ಜೋಳ್ಗೆ ಅಸ್ತೋಗ್ ಬುಟ್ರೆ
ಈ ಪ್ರಪಂಚವೇ ಅಸಿತಾ ಇದೆ
ಕಂದ ಸಂಕಮ್ಮ
ಮೇಗದಲ್ಲಿ ಮಳೆಯಿಲ್ಲ
ಭೂಮಿಲಿ ಬೆಳೆಯಿಲ್ಲ
ಅಗ್ಗಮ್ಮಅತ್ತೋದಿಲ್ಲ
ಕಾಂಬೋದಿ ಕರೆಯೋದಿಲ್ಲ
ಜೋತಮ್ಮ ಉರಿಯೋದಿಲ್ಲ
ಅಸುಮಕ್ಕಳಿಗೆ ಹಾಲಿಲ್ಲ
ಸಿಸು ಮಕ್ಳಗ್ ಊಟವಿಲ್ಲ ಕಂದ
ನನ್ನಂತ ಜಂಗಮರಿಗೆ
ಸಿವಪೂಜೆ ಸಿವಾಜ್ಞೆ ಇಲ್ದೆ ಹೋಗ್ಬುಡುತ್ತೆ ಕಂದ
ನನ್ನ ಜೋಳ್ಗೆ ಅಸಿಯಬಾರ್ದು ಮಗಳೆ

ಕಂದ ಇದ್ದಷ್ಟು ದಾನ ನೀಡವ್ವ
ನನ್ನ ಮೂಡಲ ಮಲೆಗೆ ಕಳುಹವ್ವ
ಗುರುವಿಗೆದಾನ ನೀಡವ್ವ
ಜಂಗಿನ ಪಾದ ಇಡಿಯವ್ವಾs || ಕೋರಣ್ಯ ||

ಗುರುವೇ ಗುರುಪಾದವೇ
ನನ್ನಪ್ಪನ ಮನೆದೇವ್ರೆ ಮಾದಪ್ಪ
ನಿಮ್ಮ ಪಾದ ಸಾಕ್ಸಿಯಾಗಿ
ನಿಮ್ಮ ಲಿಂಗ ಜಂಗು ಸಾಕ್ಸಿಯಾಗಿ
ನನ್ನ ಮನೆ ಒಳಗೆ
ಸುಂಡ ಕುರ್ಕಬೇಕು ಅಂದ್ರೆ
ಮೂರು ಕಾಳು ಅಕ್ಕಿಯಿಲ್ಲ
ನಿಮ್ಮ ಕಂಚಿನ ಬಟ್ಟಲಿಗೆ
ತಾವ್ರದ ಕಾಂಚಾಣ ನೀಡೋಣ ಅಂದ್ರೆ
ಮೊಕ ನೋಡ್ತಿನಿ ಅಂದ್ರೆ
ಒಂದು ತಾಮ್ರದ ಕಾಂಚಾಣ ಇಲ್ಲ ಗುರುವೇ
ಕಂದ ಸಂಕಮ್ಮ
ಹಾಗಾದ ಪಕ್ಷದಲ್ಲಿ ಈವೊತ್ತು
ತುಂಬಿದ ಸೋಮವಾರ
ನನ್ನ ಜೋಳ್ಗೆ ಅಸ್ತೋಗ್ಬುಡ್ತಲ್ಲ ಕಂದ
ಹಾಗೇ ಮುತ್ತೈದೆ ಬಾಯ್ನಲ್ಲಿ
ಏನು ಇಲ್ಲ ಅಂತ ಹೇಳ್ಬೇಡ ಮಗಳೇ
ಏನಾದರೂ ನೀನು ಬಿದ್ರಕ್ಕಿನಾದ್ರು ತಂದು
ಗಂಜಿ ಕಾಯ್ಸಿ ಕುಡಿವುದಕ್ಕೆ ಬಿದ್ರಕ್ಕಿ ಮಡ್ಗಿಲ್ವ ಕಂದ
ಇಲ್ಲ ಗೆಡ್ಡೆ ಗೆಣ್ಸು ಇಲ್ಲವ ಮಗಳೇ
ಯಾವ್ ದ್ನಾರು ತಂದು ನನ್ನ ಮುತ್ತಿನ್ ಜೋಳಗ್ ನೀಡವ್ವ
ಮುತ್ತಿನ ಜೋಳ್ಗ ಅಸಿಬಾರ್ದು ಅಂದ್ರು
ಮಾದಪ್ಪ ನಿನ್ನ ಮುತ್ತಿನ್ ಜೋಳ್ಗೆ
ಆ ರೀತಿ ಆಸ್ತೋಗುತ್ತೆ ಅಂದ್ರೆ
ನಾನು ಮುತ್ತಿನ ಜೋಳ್ಗೆ ಅಸ್ಸುದೋಗೋದಿಲ್ಲ ಗುರುವೇ
ನಿಮಗ್ ದಾನ ತುಂಬ್ತ ಇದ್ದೀನಿ
ಯಾವ್ ರೀತಿಯಾಗಿ ಕಂದಮ್ಮ ಅಂದ್ರು
ನನ್ನ ಗಂಡನಾದ ನೀಲೆಗೌಡರು
ಎಜ್ಜೇನು ಮಲೆಗೋಗಿದ್ದಾರೆ
ಎಜ್ಜೇನು ತುಪ್ಪ ಕಿರಿಜೇನು ತುಪ್ಪ
ಕಾಡುಬಳೆ ಕಟ್ಟೆನೀರು
ಬಿದ್ರಕ್ಕಿ ಬೆಲ್ಲ ಗೆಣಸು
ಅಲ್ಸುಂಡಿಹಣ್ಣು ಮಾಗಾಳಿಬೇರು
ಕಾಡ ಬಾಳೆಹಣ್ ತಕ್ಕಂಡ್ ಬತ್ತರೆ
ತಂದ್ ಪದಾರ್ತ ಏಡ್ ಬಾಗಮಾಡಿ
ನನಗೊಂದು ಬಾಗ ತಮಗೊಂದ್ ಬಾಗ
ಊಟ ಮಾಡ್ತಾರೆ
ನನಗೆ ಕೊಟ್ಟ ಜಾಗದಲ್ಲಿ
ಹೊಸ ಮಡ್ಕೆ ಒಳ್ಗೆ
ಹೆಜ್ಜೇನು ತುಪ್ಪ ಕಿರಿಜೇನು ತುಪ್ಪ ತುಂಬಿ
ಕಾಡು ಬಾಳೆಣ್ಣು ತುಂಬಿ
ಬಾಯಿ ಕಟ್ಟಾಕಿ ನೆಲಿನ್ ಮ್ಯಾಲ್ ಎತ್ ಮಡ್ಗತೀನಿ
ಮಿಕ್ಕನಾದ ಪದಾರ್ತವನ್ನು
ನಾನು ಊಟ ಮಾಡ್ಕೊಳ್ತಿನಿ
ಸಾಲ್ದೆಹೋದ್ರೆ ಮಾದಪ್ಪ ಅಂತ್ಹೇಳಿ
ನನ್ನ ಹೊಟ್ಟೆಗೆ ಒದ್ದೆಬಟ್ಟೆ ಕಡ್ಗಂಡು
ವಾಸ ಮಾಡ್ತಿನಿ ಗುರುವೇ

ನನ್ನ ಗಂಡ ಬರುವ ಯಾಳ್ಯ ನೋಡಿ
ಬನ್ನಿ ಹೋಗ್ಯಪ್ಪ್ರ ಮಾದೇವಾs || ಕೋರಣ್ಯ ||
ಆನೆದಿಂಬದ ಮಲೆಯಂತೆ
ಗುರುವಿಗೆ ಬಳಬಳಸು ಬೇಡರ ಗಣವಿ
ಮಹದೇವ
ನಿಮ್ಮ ಮುಟ್ಟಿ ಪೂಜೆ ಮಾಡ್ದವರ್ಯಾರೊ ಬೇಡರಕಣ್ಣಯ್ಯ ಆ

ಸಾಹಬಾಸ್ ಕಂದ
ಹೇಳ್ತಾ ಒಳ್ಳೆ ಮಾತೆಳ್ದಲ್ಲ ಕಂದ
ಇದಾದ್ರು ನಿಜ್ವಾದ ಮಾತು
ಪತಿವೃತೆಯಾದ ಹೆಣ್ಮಕ್ಳಿಗೆ
ಇದು ನಿಜ್ವಾದ ಮಾತು ಕಂದ
ಕಂದ ಹೆದರಬೇಡ ಕಂದಮ್ಮ
ಬೆದರಬೇಡ ಕಂದಮ್ಮ
ಪರಿವ್ರತೆ ಸಂಕಮ್ಮ

ಕಂದ ನಾನಿದ್ದ ಮೇಲೆ ಬಯವೇಕಮ್ಮ
ಸತ್ಯ ಬಾವನೆ ಸಂಕಮ್ಮಾs || ಕೋರಣ್ಯ ||

ಮಾದಪ್ಪ ನಿತ್ಗಂಡು
ಅರಗಣ್ಣು ಕಿರಗಣ್ಣು ಬುಟ್ಟು ನೋಡ್ದ್ರು
ಇಂತ ಪರಿವೃತೆ ನನ್ಗೆ ಎಲ್ಲೂ ಸಿಕ್ಕುವುದಿಲ್ಲ
ನನ್ನ ತಾಯಿ ಉತ್ರಾಜಮ್ಮನಿಗಿಂತ
ಹೆಚ್ಚಿನ ಪರಿವೃತೆ ಇವ್ಳು ಅಂತ್ಹೇಳಿ
ಇಂತ ಹೆಣ್ಮಗಳಿಗೆ ಬಾಗ್ಯವನ್ನು ಕೊಟ್ಟು
ಇವ್ಳ ಭಕ್ತಿ ಸೋದ್ನೆ ಮಾಡ್ಬೇಕಂತ್ಹೇಳಿ
ಮಾದಪ್ಪ ಮುತ್ತಿನ ಜೋಳ್ಗೆಯಿಂದ
ಏಳುಮಲೆ ಬಸ್ಮ ತಗ್ದು ಅಂಗೈ ಮೇಲಟ್ಗಂಡ್ರು
ಆ ಸಾಲೂರು ಮಠದ ಗುರುಗಳು
ನನಗೆ ಮೋಕ್ಸಕ ದಾರಿಕೊಟ್ಟವ್ರು
ಪಂಚೇಳು ದೀಕ್ಸೆ ಮಾಡ್ದವ್ರು
ಗುರುವೇ ನಿನ್ನ ಕಟಕ್ಸವಿರಲಿ
ಸೂರ್ಯ ಚಂದ್ರಾದಿಗಳಿರೋವರ್ಗುವೇ
ಏಳುಮಲೆ ಕೈಲಾಸ್ದಲ್ಲಿ
ಚಪ್ಪನೈವತ್ತಾರು ದೇಸ್ದಲ್ಲೂವೆ
ನಿನ್ನ ಕಟಾಕ್ಸವಿರಲಿ ಅಂತ್ಹೇಳಿ
ತನ್ನ ಸಾಲೂರು ಮಠದ ಗುರ್ಗಳ
ಪಾದ ನೆನದ್ಬುಟ್ಟು

ಅಯ್ಯ ಮಲೆಯ ಬಸ್ಮ ತೆಗೆದವ್ರೆ
ಸೊಪ್ಪಿನ ಗುಡ್ಲಿಗೆ ಪಿಡುದವರೇs || ಕೋರಣ್ಯ ||
ಗುರುವಿಗೆ ಒಂದು ಶರಣಾರ್ತಿ
ಗುರುಭಕ್ತರಿಗೊಂದು ಶರಣಾರ್ತಿ
ನಮಗೆ ಲಿಂಗಧಾರಣೆ ಮಾಡಿದ ಗುರುವಿನ
ಪಾದಕ್ಕೆ ಶರಣು

ಮಾದಪ್ಪನ ಬಸ್ಮ ಬಿದ್ದ ತಕ್ಸಣವೇ
ಆ ಸೊಪ್ನ ಗುಡ್ಲು ಅರ್ಮನೆ ತೊರ್ಮನೆ ಆಗ್ಬುಡ್ತು
ಅರ್ಮನೆ ಮೇಲೆ ಅಪ್ರಂಜಿ ಕಳ್ಸವಾಯ್ತು
ಮನೆಯಲ್ಲಿ ನವಕ್ಕಿ ನವಧಾನ್ಯ
ವಜ್ರ ಗೋಮೇದ್ಯ ತುಂಬಿ ತುಳುಕಾಡ್ತ ಇದೆ
ಕಂದಾ ಸಂಕಮ್ಮ
ನನಗೆ ಏನು ಇಲ್ಲ ಅಂತ ಏಳ್ತಾ ಇದ್ದಿಯಲ್ಲ ಮಗಳೇ
ಈವಾಗ್ ನೋಡು ಮಗಳೇ
ನನ್ನ ಮುತ್ತಿನ್ ಜೋಳಿಗ್ ದಾನ ನೀಡವ್ವ
ಏಳು ಮಲೆಗೆ ಹೋಗೀನಿ ಅಂದ್ರು
ಸಂಕಮ್ಮ ನಾಲ್ಕಾರ್ಕಡೆ ತಿರಗ್ ನೋಡ್ದಳು
ಅಯ್ಯೋ ಭಾತಾಯಿ ಆಕಾಶ್ ವೇಣಿ
ನನ್ಗೆ ಬಡಸ್ತಾನ ಬಂತು ಅಂತ್ಹೇಳಿ
ನನ್ನ ನೆಂಟ್ರು ಎತ್ತರ ಮನೆ
ನನ್ನ ಅಕ್ಕ ತಂಗೇರು
ಬಂದು ಬಳ್ಗದ ಮನೆಗೋಗಿದ್ರೆ
ತಲ್ಲೆಮ್ಯಾಲ್ ಹೊರ್ಸಿ ಕಳ್ಸವು
ಅವ್ರು ಕೊಟ್ಟಂತ ಬಾಗ್ಯ ತಂದು
ಮನೆಗಾಕಿದ್ರೆ ಮೂಲೆಗೆ ಸಾಲ್ತಾ ಇರ್ಲಿಲ್ಲ
ಗಾಡಿ ಕಟ್ಟಿ ಕಳಿಸವ್ರು
ಅವ್ರು ಕೊಟ್ಟ ಬಾಗ್ಯ ತಂದು
ಮನೆಗಾಕಿದ್ರೆ
ಮೂದೇವಿ ಕೊಟ್ಟ ಬಾಗ್ಯ
ಮೂಲಗ್ ಸಾಲ್ತ ಇರಲಿಲ್ಲ

ನನ್ನ ಮಾದಪ್ಪ ಕೊಟ್ಟ ಬಾಗ್ಯವೆಲ್ಲ
ಮನೆ ಮಠವೆಲ್ಲ ತುಂಬೋಯ್ತು s || ಕೋರಣ್ಯ ||