ಮಾದೇವ ಬಂದಾ ಗುರುವೇ
ಲೋಕಕ್ಕಾನಂದ ತಂದ
ನೀಲಗಿರಿ ನಿಜಭಕ್ತರ ಮನೇಲಿ
ಲೋಲ ಕಾಣೋ ದೇವ

ನನ್ನ ಮಾದಪ್ಪ ಕೊಟ್ಟ ಬಾಗ್ಯ
ಮನೆ ಮಠವೆಲ್ಲಾ ತುಂಬಿದೆ
ಭಾಗ್ಯ ಕೊಟ್ಟಂತ ಗುರು ಬಂದು
ಬಾಗ್ಲಲ್ಲಿ ನಿಂತಿದ್ದಾರೆ
ಆಪಾರ ಹೊತ್ತು ನಿಲ್ಸಬಾರ್ದು
ಹಾಗೇ ಕೂತಗಬಾರದು ಹಾಗೆಯೇ ಕಳುಗಬಾರ್ದು
ಜಾಗ್ರತೆಯಾಗಿ ದಾನ ಕೊಡ್ಬೇಕು ಅಂತೇಳಿ

ಆಲಂಬಾಡಿ ಮಾದೇವ
ಅರಗಣ್ಣ ಬಿಟ್ಟು ನೋಡಯ್ಯs || ಕೋರಣ್ಯ ||

ಸಂಕಮ್ಮ ತನ್ನ ಕಷ್ಟ ಏಳ್ತ ಇದ್ದಾಳೆ
ಮಾದೇವ ನನ್ನಪ್ಪ ಮನೆದೇವ್ರೆ
ನನ್ನ ಕಷ್ಟ ಏನೆಳ್ಳಿ ಗುರುವೆ
ಮಾದಪ್ಪ ನೀವೇ ತಂದೆ ನಾನೇ ಮಗಳು
ನನ್ನ ಕಷ್ಟ ಪರಿಹಾರ ಮಾಡಿದ್ದೀರಿ
ನನ್ನ ಕಷ್ಟ ಹೇಳ್ತಿನಿ ಗುರುವೇ ಅಂದಳು
ಹೇಳು ನನ್ನ ಕಂದ ಅಂದರು
ನನ್ನ ಗಂಡನಾದ ನೀಲೇಗೌಡರು
ಅಸಮಾನಕಾರ ದುಸಮಾನಕಾರ
ಬಹಳ ಕೋಪಿಷ್ಟ ಮನ್ಸ
ನನ್ನ ರೂಪು ರೇಕೆ-ನನ್ನ ಬಣ್ಣ ಬಂಗಾರವನ್ನು
ಕಣ್ಣೆತ್ತಿ ನೋಡಿ
ನಾನು ಉಟ್ಟಿರುವಂತಾ ಸೀರೆ
ತೊಟ್ಟಿರುವಂತಾ ಕುಪ್ಸ
ಬಣ್ಣ ಬಂಗಾರನೆಲ್ಲಾ ಕಳಸಿಗಂಡು
ಪೊಟ್ಣ ಕಟ್ಟಸ್ಕಂಡು ಮಾದಪ್ಪ
ಉಗ್ನಿ ಅಂಬಿನ ಉಡ್ಗೆ ಉಡ್ಸಿ
ಎಕ್ಕದ ಎಲೆ ಎದೆಕ್ಕಟ್ ಕಟ್ಟಿ
ತೇಗ್ದೆಲೆ ಮುಸುಕಾಕಿ
ಕೊಡಬಾರ್ದ ಕೊಲೆ ಕೊಟ್ಟು
ಪಿಚಾಚಿ ಮಾಡೋಗಿದ್ರು ಗುರುವೇ
ಈವಾಗ ನಾನು ಹುಟ್ಟಿದ ನಿರ್ವಾಣದಲ್ಲಿದ್ದೀನಿ ತಂದೆ

ಅಪ್ಪಾ ಯಾಗೆ ತಾನೆ ಬರಲಿ
ಪಾಪಿಯ ಮೊಕವ ತೋರಲಿ
ನನಗೆ ಉಟ್ಟುಗಳಕ್ಕೊಂದು ಸೆರಗ
ಕೊಟ್ಟೋಗಪ್ಪ ಮಾದೇವs || ಕೋರಣ್ಯ ||
ಮನವ ಒಪ್ಪಿ ದುಡಗಳ ನೋಡೋ
ದುಂಡುಳ್ಳ ಮಾದೇವಾ

ಸಹಬಾಸ್ ಕಂದ ಸಂಕಮ್ಮ
ಎಂತಾ ಮಾತ್ ಕೇಳ್ತ ಇದ್ದಿಯಲ್ಲ ಮಗಳೇ
ಪತಿವ್ರತೆಯಾಗಿರೋ ಹೆಣ್ಮಕ್ಕಳಿಗೆ
ಇದೇ ಒಳ್ಳೆಯ ಮಾತು ಕಂದ
ನಾನೇನು ಸೀರೆ ಕೊಡುವುದಕ್ಕೆ
ನಾನು ದೇವಾಂಗ ಸೆಟ್ಟಿಯಲ್ಲ ಕಂದ ಅಂದ್ರು
ಮಾದಪ್ಪ
ದೇವಾಂಗ ಸೆಟ್ಟಿಯಾಗ್ಬೇಡಿ ಗುರುವೇ
ಈ ಬಾಗ್ಯವೆಲ್ಲಾ
ಕಣ್ಮುಚ್ಚಿ ಕಣ್ಬುಡವೊತ್ಗೆ ಕೊಟ್ಟೆಲ್ಲಾ ಗುರುವೇ
ಈ ಅರ್ಮನೆ ಆಸ್ತಾನ
ಮನೆ ಇಡೀದ ಬಾಗ್ಯ ಕೊಟ್ಟಿದ್ದೀರಿ
ಈ ಬಾಗ್ಯನೆಲ್ಲ ಎಲ್ಲಿಂದ ಗಾಡಿಕಟ್ಟಿ
ಊಡ್ಕ ಬಂದೆಪ್ಪ
ಈ ಬಾಗ್ಯ ಯಾವ್ ರೀತಿಯಾಗಿ ಕೊಟ್ರಿ
ಅದೇ ರೀತಿಯಾಗಿ ಸಿವ ಸೆರಗ ಕೊಡಪ್ಪ ಅಂದ್ರು
ನಾನು ಕೊಡ್ನಿಲ್ಲ ಕಂದ
ಪ್ರಪಂಚದಲ್ಲಿ ಸುಪುತ್ರವತಿಯಾಗಿ ಉಟ್ಟಿರೊವಂತ ಮಕ್ಕಳು
ಯಾವ ದೇವಾಲಯಕ್ಕೂ ಹೋಗಬಾರದು
ಮನೆ ಬಳ್ಗ ತಂದೆತಾಯ್ಗಳೆ ದೇವ್ರು ಆ ಮಕ್ಕಳಿಗೆ
ನಿನ್ನಂತ ಪತಿವ್ರತೆಯಾದ ಹೆಣ್ಮಗಳಿಗೆ
ನಿನ್ನ ಪತಿಯೆ ದೇವರು
ನಿನ್ನ ಅತ್ತೆ ಮಾವ್ನೆ ದೇವ್ರು
ತಂದೆ ತಾಯ್ಗಳೆ ದೇವ್ರು ಕಂದ
ನಾನು ಕೊಡ್ನಿಲ್ಲ ಕಂದ
ನಿನ್ನ ಪತಿವ್ರತಾ ದರ್ಮ ನಿನ್ನ ಕಾಪಾಡ್ತ ಅದೆ

ಅಮ್ಮ ಕೈಕಾಲು ಮೊಕವ ತೊಳಿಯವ್ವ
ಅರಿಸಿನ ಕುಂಕುಮ ದರುಸವ್ವ
ತಾಯಿ ತಂದೆ ನೆನಿಯವ್ವ
ಅತ್ತೆ ಮಾವನ ನೆನಿಯವ್ವ
ಕೈಹಿಡ್ದ ಪತಿಯಾ ನೆನಿಯವ್ವ
ಪೆಟ್ಟಿಗೆ ಬೀಗ ತೆಗಿಯವ
ಪಟ್ಟೆ ಪೀತಾಂಬ್ರ ಉಟ್ಕವ್ವ
ಮಗಳೇ ಲಿಂಗಾದ ಬಿಕ್ಸ ನೀಡವ್ವ
ಮೂಡಲ ಮಲೆಗೆ ಕಳುಹವ್ವಾs || ಕೋರಣ್ಯ ||

ಬೆಳ್ಳಿಯ ತಟ್ಟೆಲಿ ಬಿನ್ನವ ತಂದವ್ರೆ
ಕೊಂಗಳ್ಳಿ ಮಲ್ಲಣ್ಣನಿಗೆ
ಮುತ್ತಿನ ಕಂತೆ ಮುನಿಗಳು ಬಂದವ್ರೆ
ಭಿಕ್ಸ ನೀಡವ್ವಾ

ಪತಿವ್ರತೆಯಾದ ಸಂಕಮ್ಮ
ಮಾದೇಶ್ವರ ಬಂದು ಬಾಳ ಹೊತ್ತಾಗ್ಬುಡ್ತು
ನನ್ನ ಅಪ್ಪನ ಮನೆದೇವ್ರಿಗೆ ಭಿಕ್ಸಾ ಕೊಡ್ಬೇಕು ಅಂತೇಳಿ
ಆ ಸಿವ ಸರಣೆಯಾದ ಸಂಕಮ್ಮ

ಅಪ್ಪ ಮಾದೇವ್ರ ಮಾತ ಕೇಳವ್ರೆ
ಮಾದೇವ್ರ ಮಾತ ಕೇಳವರೆ
ಪತಿವ್ರತೆ ಸಂಕಮ್ಮ
ಕೈಕಾಲು ಮಕವ ತೊಳದವರೇ
ಅರಸಿಣ ಕುಂಕುಮ ಧರಿಸವರೇ
ತಾಯಿ ತಂದೆ ನೆನೆದವರೇ
ಅತ್ತ ಮಾವನ ನೆನೆದವರೇ
ಕೈಹಿಡ್ದ ಪತಿಯ ನೆನೆದವರೇ
ಬಡ್ಗಾಲಟ್ಟಿಗೆ ಹೋಗವರೇ
ಬೆಡಗಿನ ಏಣಿ ಊಡವರೇ
ಪೆಟ್ಟಿಗೆ ಬೀಗಾ ತೆಗೆದವರೇ
ಮಾದೇವ ಮಾದೇವ ಎಂದವರೇ
ಪಟ್ಟೆ ಪಿತಾಂಬ್ರ ಉಟ್ಟವರೇ
ಅಮ್ಮ ಬೆತ್ತದ ಮೊರವ ತಗ್ದವ್ರೆ
ಅಕ್ಕಿ ಬೇಳೆ ತುಂಬುವರೆs || ಕೋರಣ್ಯ ||

ಬೆತ್ತದ ಮೊರವನ್ನು ತಗ್ದು
ಸಿವ ಸರಣೆಯಾದ ಸಂಕಮ್ಮ
ಅಕ್ಕಿ ರಾಜಣವನ್ನು ತುಂಬಕಂಡು
ಅತ್ತಡ್ಕ ಐದೆಲೆ ಚಿಕ್ಕದೊಂದಣ್ಣ
ಬೆಜ್ಜಲ ಕೆಂಡಾ ಮಡ್ಗಿ ಮಡ್ಟಿ ದೂಪ ಹಾಕ್ಕಂಡು
ಮಾದಪ್ಪನಿಗೆ ಕ್ವಾರಣ್ಯ ತುಂಬ್ಕಂಡು
ಎತ್ಗಂಡು ಕಡೆ ಬಾಗ್ಲಗ್ ಬಂದಳು
ನನ್ನ ಗಂಡನಾದ ನೀಲೇಗೌಡರು
ಎಡಗಡೆ ಒಂದು ಬಲಗಡೆ ಒಂದು ರಾಕ್ಸ ಗೊಂಬ್ಗಳ ನಿಲ್ಸಿದ್ರು
ಎಪ್ಪತ್ತೇಳ್ ಮಂಡ್ಲ ಬರ್ದಿದ್ರು ಸುತ್ತಿ
ಈವಾಗ ನಾನ್ ವಸಲ್ ದಾಟಿ ಆಚೆ ವೋದ್ರೆ
ನನ್ನ ಗಂಡನಾಗ್ನೆ ಮೀರ್ದಂಗಾಯ್ತು
ಗಂಡನಾಗ್ನೆ ಮೀರುವುದು ಒಂದೇ
ನಾನು ಪರ ಪುರುಸರ ಕಣ್ಣೆತ್ತಿ ನೋಡುವುದು ಒಂದೆ
ಪತಿವ್ರತ ದರ್ಮ ಹಾಳಾಗ್ತದೆ
ನನ್ನ ಗಂಡನ ಆಗ್ನೆ ಮೀರಬಾರ್ದು
ಮಾದೇಶ್ವರನಿಗೆ ಭಿಕ್ಸೆ ಕೊಡ್ದೆ ಹಾಗೇ ಕಳ್ಸಬಾರ್ದು
ಆ ರೀತಿಯಾಗಿ ಕೊಡ್ಬೇಕಂತ್ಹೇಳಿ
ಬರ್ತಾ ಬರ್ತಾ ಯೋಚ್ನೆ ಮಾಡ್ಕಂಡು ಸಂಕಮ್ಮ
ಕಡೆ ಬಾಗ್ಲಿಗೆ ಬಂದು ಒಳ ಬಾಗ್ಲಿಗೆ ನಿಂತ್ಕಂಡಳು

ಅಪ್ಪ ಬಾಗ್ಯ ಕೊಟ್ಟ ಮಾದೇವ
ನೀವು ಬಾಗಲ ಗಿಂಡಿಗೆ ಬನ್ಯಪ್ಪಾs
ಭಾಗ್ಯ ಕೊಟ್ಟ ಮಾದೇವ
ದಾನ ತಕ್ಕೊಳ್ಳಿ ಹೆತ್ತಯ್ಯಾ || ಕೋರಣ್ಯ ||

ಸಹಬಾಸ್ ನನ್ನ ಕಂದ
ಹೇಳ್ತಾ ಹೇಳ್ತಾ ಚೆನ್ನಾಗಿರುವಂತ ಮಾತೆಳ್ದೆಲ್ಲಾ ಕಂದ
ಮಗಳೇ ಸಂಕಮ್ಮ
ತಾಯಿ ಕೈ ಕೆಳಗಿರುವ ಮಕ್ಳು
ಅತ್ತೆ ಕೈ ಕೆಳಗಿರುವ ಸೊಸೇರ ಕೈಲಿ
ಕದ್ದು ದರ್ಮ ತಕ್ಕಂಡೋಗುವಂತ
ಕಳ್ಳ ಜಂಗುಮನಲ್ಲ ಕಂದ
ಹೆಳ್ತಾ ಇದ್ದೀನಿ ಕೇಳು ಮಗಳೇ
ವಸ್ತಿಲ ದಾಟಿ ಮೂರೆಜ್ಜೆ ಬರಬೇಕು
ವಸ್ತಿಲಂದಾಚೆ ನಿಂತ್ಗಂಡು ಬಿಕ್ಸಾ ಕೊಟ್ರೆ
ನೀನು ಕೊಟ್ಟಾಗಲ್ಲ ನಾನು ತಕ್ಕಂಡಾಗಲ್ಲ
ಮಧ್ಯೆ ವಸ್ತಲಾಗ್ತದೆ ಕಂದ

ನಿನ್ನ ಬಾಗಲ ಗಿಂಡಿ ಕ್ವಾರಣ್ಯ ನನಗೆ
ಬೇಡ ಹೋಗು ಕಂದಮ್ಮಾs || ಕೋರಣ್ಯ ||

ಹರನ ಕಂಡೆ ಹಾದಿಯಲ್ಲಿ
ಶಿವನಕಂಡೆ ಶಿವರಾತ್ರಿಯಲ್ಲಿ
ಸಂದೆಲಿ ಕಂಡೆ ಸರಗೂರು ಬೀದೀಲಿ
ಗಂಧದ ಬಟ್ಟಲ ಮಾದೇವಾ

ಅಯ್ಯೋ ಮಾದೇವ
ನನ್ನ ಅಪ್ಪನ ಮನೆದೇವ್ರೆ
ನನ್ನ ಗಂಡನ ಆಜ್ಞೆ ಯಾವ್ ರೀತಿ ಮೀರ್ಲಿ ಅಂದಳು
ಮಾದಪ್ಪ ಅರಗಣ್ ಕಿರಗಣ್ ಬಿಟ್ನೋಡ್ದ
ಆ ರಾಕ್ಸ ಗೊಂಬ್ಗಳು
ಒಂದೊಂದ್ ಮಾರು ದೂರ್ದಲ್ಲೋಗಿ
ಗೇಣುದ್ದಕ್ಕೆ ನಿಂತ್ಗಂಡು
ಕತ್ತಿ ಹಿಡ್ಕಂಡು ಮೊರಮೊರ್ನೆ ಮೊರಿತಾ ಇದ್ದೋ
ನೀಲೇಗೌಡ
ಏನಂತ ತಾಕೀತಿ ಮಾಡಿದ್ದ ಅಂದ್ರೆ
ನೋಡಪ್ಪ ವೀರಣ್ಣ ಬೊಮ್ಮಣ್ಣ
ನನ್ನಂತ ಸೋಲ್ಗರು ಬಂದ್ರೆ
ತಲೆ ಬುಂಡೆ ತರ್ದು ಸೋಪ್ನ ಗುಡ್ಲ ಕಟ್ಟು
ಏನಾದ್ರು ಅಟ್ಮುನಿ ಜುಟ್ಮುನಿ
ಸಾಧು ಸನ್ಯಾಸ್ಗಳು ಬಂದ್ರೆ
ಒಂದ್ ಗೇಣುದ್ದಕ್ಕೆ ನಿಂತ್ಗಂಡು
ಮುಂಗಾಲ್ ಕತ್ತರ್ಸು ಅಂತೇಳಿದ್ರು
ಆವಾಗ ಮಾದಪ್ನ ಸನ್ಯಾಸ ರೂಪ ನೋಡಿ
ಆ ವೀರಣ್ಣ ಬೊಮ್ಮಣ್ಣ
ಎಡಗಡೆ ಬಲಗಡೆ ಮಾರ್ದುರದಲ್ಲಿ ನಿಂತ್ಗಂಡು
ಒಂದ್ ಗೇಣುದ್ದಕ್ಕೆ ಮೊರಮೊರ್ನೆ ಮೊರಿತಾ ಇದ್ದೋ
ಮಾಡಪ್ಪ ಎಡಬಲ ತಿರ್ಗಿನೋಡಿದ್ರು
ನರ್ ಮನ್ಸ ಮುಂಡೆ ಮಕ್ಳ
ಎಂತ ವಿದ್ಯಾ ಕಲ್ತವ್ರೆ ಅಂತ್ಹೇಳಿ

ಅಯ್ಯ ಜಂಗಿನ ಪಾದ ಎತ್ತವ್ರೆ
ಜಾಡಿಸಿ ಗೊಂಬೆ ತುಳ್ದವರೇs || ಕೋರಣ್ಯ ||

ಮುನ್ನೂರ ಮೂವತ್ತು ಜಂಗಿನ ಪಾದವನೆತ್ತಿ
ನನ್ನಪ್ಪಾಜಿ ಅರಗಣ್ಣು ಕಿರ್ಗಣ್ ಬಿಟ್ಟು
ಗೊಂಬೆಗಳನೆತ್ತಿ ಮೇಲ್ ಮಡ್ಗುದ್ರು
ಆ ರಾಕ್ಸ ಗೊಂಬ್ಗಳು ಪಾತಾಳ್ ಲೋಕ ಕಂಡ್ಬುಟ್ಟೋ
ಏಳ್ ಮಲೆ ಬಸ್ಮ ತಗ್ದು
ಆರ್ಮನೆ ಸುತ್ತ ಪಿಡ್ದ್ ಬುಟ್ರು ಮಾದಪ್ಪ
ನೀಲೇಗೌಡ ಬರ್ದಿರುವಮ್ತ ಮಂಡಲಗಳು
ಮಾದೇಶ್ವರನ ಬಸ್ಮ ಬಿದ್ದ ತಕ್ಷಣವೇ

ಅಯ್ಯಾ ಉಳ್ಕು ಮಂಡಲ ಉಳುತೋಯ್ತು
ಕೊಳಕು ಮಂಡಲ ಕೊಲುತೋಯ್ತು
ಗೆಜ್ಜು ಮಂಡಲ ಜೆಜ್ಜೋಯ್ತು
ಆರು ಮಂಡಲ ಆರೋಯ್ತು
ಊರು ಮಂಡಲ ಊರೋಯ್ತು
ಸಿಡ್ದಾಲೆ ಮಂಡಾಲ ಸಿಡುದೋಯ್ತು
ಎಪ್ಪತ್ತೇಳು ಮಂಡಲವೆಲ್ಲ
ಕೆದರಿ ಬೆಟ್ಟ ಸೇರೋಯ್ತು
ಮದ್ದು ಮಾಯ ಬಲ್ಲವರ್ಯಾರು
ಮುದ್ದುಳ್ಳ ಏಳು ಮಲೆಯವರುs || ಕೋರಣ್ಯ ||

ಮನವ ಒಪ್ಪಿ ದುಡಗಳ ನೋಡು
ದುಂಡುಳ್ಳ ಮಾದೇವ

ಎಲ್ಲಾ ಮಂಡಲಗಳು ಬೆಟ್ಟ ಸೇರ್ಬುಟ್ಟೋ
ಸಿವ ಸರಣೆಯಾದ ಸಂಕಮ್ಮ
ವಸಲು ದಾಟಿ ಮೂರೆಜ್ಜೆ ಬಂದಳು
ಸಾಕು ಸಾಕು ನಿಲ್ಸು ಕಂದ ಸಂಕಮ್ಮ
ನೀನು ವಸಲದಾಟಿ ಮೂರೆಜ್ಜೆ ಬಂದ ಮೇಲೆ
ನಿನ್ನ ಮುತ್ತೈದೆ ಕೈನಾ ದಾನ
ನನ್ನ ಮುತ್ತುನ್ ಜೋಳಗ್ ಬಂದಂಗಾಯ್ತು
ನಾನು ತಕಂಡತಾಯ್ತು ಮಗಳೇ
ಒಂದ್ ಮಾತ್ ಕೇಳ್ತಿನಿ ಕ್ವಾಪ ಮಾಡ್ಬೇಡ ಅಂದ್ರು
ಕೇಳಿ ನನ್ನಪ್ಪ ಅಂದಳು
ನಾನು ಬಂದಲಾಗಾಯ್ತು ಇಲ್ಲೀವರ್ಗೂ
ನೀನೊಬ್ಬಳೇ ಮಾತಾಡ್ತಾ ಇದ್ದಿಯೆ

ನೀನ್ಗೆ ಗಂಡು ಮಕ್ಕಳು ಎಷ್ಟವ್ವ
ಹೆಣ್ಣು ಮಕ್ಕಳು ಎಷ್ಟವ್ವ
ತಾಯಿ ತಂದೆ ಇರುವಾರ
ಬಂದು ಬಳಗ ಇರುವಾರ
ಅತ್ತೆ ಮಾವ ಇರುವಾರ
ಕೈಯಿಡ್ದ ಪತಿಯು ಇರುವಾರ
ಕಂದ ನಿನ್ನ ಕೈನಾ ಬಿಕ್ಸ ಬೇಡ
ಮಕ್ಕಳ ಕೈಲಿ ಕೊಡಿಸವ್ವಾ
ನಿನ್ನ ಮಕ್ಕಳ ಮರಿಯಾ ಕರಿಯವ್ವ
ಮಲೆಯ ಬಸ್ಮ ಇಕ್ಕುವೆನು ಬಾರವ್ವಾs || ಕೋರಣ್ಯ ||

ಮಕ್ಕಳ ವಾಕ್ಯವನ್ನು ಕೇಳಿ ಸಂಕಮ್ಮ
ಬೆತ್ತದ ಮೊರವನ್ನು ಇಡ್ಕಂಡು
ದುಕ್ಕ ಬಂದ್ಬುಡ್ತು ಆ ಹೆಣ್ಮಗಳಿಗೆ
ಕಣ್ಣಿನಲ್ಲಿ ನೀರು ದಾರವತಿಯಾಗಿ ಅರಿತಾ ಅವೆ
ಯಾಕೋ ನನ ಕಂದ ಸಂಕಮ್ಮ
ಮಕ್ಕಳ ಕೇಳಿದ್ರೆ ದುಕ್ಕಾ ಮಾಡ್ತಿದ್ದಿಯಲ್ಲ ಅಂದ್ರು

ಅಪ್ಪ ಯಾರ ಮಕ್ಕಳ ಕರಿಯಲಿ ಗುರುವೇ
ಯಾಗೇ ದಾನ ನೀಡಾಲೀs || ಕೋರಣ್ಯ ||

ಪತಿವ್ರತೆಯಾದ ಸಂಕಮ್ಮ
ದಡಾರನೆ ಭೂಮ್ಗಿಳಿದ್ ಬುಟ್ಟಳು
ಬೆತ್ತದ ಮೊರ ಒಂದ್ಕಡೆ ಮಡ್ಗ್ ಬುಟ್ಟಳು
ಮಾದಪ್ಪನ ಪಾದ ತಬ್ಕಂಡಳು
ಅಯ್ಯೊ ನನ್ನ ಅಪ್ಪನ ಮನೆ ದೇವ್ರೆ
ನಾನು ಮಕ್ಕಳಿಲ್ಲದ ಬಂಜೆ ಅಂದಳು
ಸಂಕಮ್ಮ ಮೇಲಕ್ಕೇಳು ಮಗಳೇ
ನಾನು ಕೇಳ್ದನೆ
ನೀನು ಹೇಳ್ದೆನೆ
ನೀನು ದಟ್ಟದರಣಿ ಹುಟ್ಟು ಬಂಜೆ
ಎಂಬುದು ಗೊತ್ತಿಲ್ಲದೆ ನಾನು
ನನ್ನ ಮುತ್ತಿನ ಜೋಳ್ಗೆಯನ್ನು ಒಡ್ಡಿ
ನಿನ್ನ ಬಂಜೆ ಕೈನ ಬಿಕ್ಸ ತಕ್ಕಂಡಿದ್ರೆ
ನನ್ನ ಭೂಮು ತೂಕದ ಜೋಳ್ಗೆ ಬಂಜಯಾಗದಲ್ಲ ಕಂದ
ನನ್ನ ಏಳು ಮಲೆ ಕೈಲಾಸ್ದಲ್ಲಿರ್ತಕಂತ
ಬೆಟ್ಟ ಬಿದ್ರೆಲ್ಲಾ ಬಂಜೆಯಾಗೋದು
ಹುಲಿ ಬಂಜೆಯಾಗದು ಹುಲಿ ಮರಿ ಬಂಜೆಯಾಗದು
ಕರಡಿ ಬಂಜೆಯಾಗದು ಕರಡಿ ಮರಿ ಬಂಜೆಯಾಗದು
ಕಂದ ನನ್ನ ನೂರೊಂದು ವಕ್ಕಲು ಬ್ಯಾಡಗಂಪುಣದವರು
ತಂಬಡಗಳು ಕೂಡ ಬಂಜೆಯಾಗೋರಲ್ಲ ಕಂದ

ನಿನ್ನ ಬಂಜೆ ಕೈನ ಕ್ವಾರಣ್ಯ ನನಗೆ
ಬೇಡ ಹೋಗೆ ಕಂದಮ್ಮಾs || ಕೋರಣ್ಯ ||
ಕೊಂಬು ಕೋಡು ಸುಳಿ ಸುದ್ಧಿ ನೋಡು
ಜಂಜು ದೀಪದ ಬಸವಣ್ಣಾ

ಮಹಾದೇವ
ಸಿವಸರಣೆಯಾದ ಸಂಕಮ್ಮ
ಮಾದಪ್ಪನ ಮಾತ ಕೇಳ್ದ ತಕ್ಷಣವೇ
ಬರಸಿಡ್ಲು ಹೊಡದಪ್ಪಂದವಾದ್ಲು
ಧರೆ ಮೇಲೆ ಮೊರ ಮಡುಗ್ಬುಟ್ಟು
ಮಾದಪ್ಪ ಪಾದ ಹಿಡ್ಕಂಡಳು
ಮಹಾದೇಅ
ಇಂದು ಕೊಟ್ಟು ನಾಳಿಗ್ ಕಿತ್ಕಂಡ್ರು ಸರಿಯೇ
ಬೆಳಿಗ್ಗೆ ಹುಟ್ಟಿ ಸಾಯಂಕಾಲ ಸತ್ತೋದ್ರು ಸರಿಯೇ
ನಾನು ಭೂಮಿ ತಾಯಿಗೆ ಭಾರವಾಗಿದ್ದೀನಿ
ನಿಮ್ಮ ಬಾಯ್ಲಿ ದಟ್ಟಧರಣಿ ಹುಟ್ಟು ಬಂಜೆ ಅನ್ನುಸ್ಕೊಂಡ ಮೇಲೆ
ಇದ್ದರೂ ಸುಖವಿಲ್ಲ
ಸತ್ತರೂ ಸ್ವರ್ಗವಿಲ್ಲ ನನ್ನಪ್ಪ

ನನಗೆ ಮಕ್ಕಳ ಭಾಗ್ಯ ಕೊಟ್ಟೋಗಿ
ನಮ್ಮಪ್ಪನ ಮನೆಯ ಮಾದೇವಾs || ಕೋರಣ್ಯ ||
ಏಳು ಮಲೆ ಮಾದಪ್ಪ ನಿಮಗೆ
ಎತ್ತಿದೆವು ಮಂಗಳಾರತಿಯ

ಸಹಬಾಸ್ ನನ್ನ ಕಂದ
ಸಿವ ಸರಣೆಯಾದ ಸಂಕಮ್ಮ
ಮಕ್ಕಳ ಬಾಗ್ಯವನ್ನು ಕೇಳ್ತಾ ಇದ್ದಿಯಲ್ಲ ಕಂದ
ಹೇಳ್ತಾ ಇದ್ದಿನಿ ಕೇಳು ಮಗಳೇ
ಪ್ರಪಂಚದಲ್ಲಿ ಈವತ್ತು
ಹುಟ್ಟ್ ಬಂಜೆ ಅಂತ ಹೇಳ್ತಾಯಿದ್ದಿಯಲ್ಲ ಕಂದ
ಒಣ ಮರವನ್ನು ನೆಟ್ಟು ನೀರಾಕಿದ್ರೆ ಚಿಗ್ರು ಬರುವುದಿಲ್ಲ
ಉರಿಗಡ್ಲೆಯನ್ನು ಗಾಣಕ್ಕಾಕೀ ಹಿಂಡಿದ್ರೆ ಎಣ್ಣೆ ಬರುವುದಿಲ್ಲ
ಆ ರೀತಿಯಾಗಿ ನಿನ್ನ ಹುಟ್ಟು ಬಂಜೆಗೆ ಮಕ್ಳೆಲ್ಲಿಂದ ಕೊಡ್ಲಿ ಕಂದ

ಅಲ್ಲಿಂದ ನೀನು ತರನಿಲ್ಲ
ಇಲ್ಲಿ ಕೇಳುದ್ರೆ ಬರುವದಾs || ಕೋರಣ್ಯ ||

ಕಂದ ಬ್ರಹ್ಮಲೋಕದಿಂದ ನೀನು ಬರುವಾಗ
ನಿನ್ನ ಹಣೆಬರದಲ್ಲಿ ಬ್ರಹ್ಮ ಬರಿನಿಲ್ಲ
ನಾನೆಲ್ಲಿ ಕೊಡ್ಲಿ ಅಂದ್ರು
ಮಾದಪ್ಪ ಬ್ರಹ್ಮ ಕೊಡಬೇಕಾಗಿಲ್ಲ
ಈ ಬಾಗ್ಯ ಐಶ್ವರ್ಯನೆಲ್ಲ ಕೊಟ್ರಲ್ಲ ಗುರುವೆ
ಇದರಂತೆ ನನಗೆ ಒಂದು ಪುತ್ರ ಸಂತಾನವನ್ನು ಕೊಟ್ಟು
ಬಂಜೆ ಅನ್ನುವಂತ ಸೊಲ್ಲ ತಪ್ಸಪ್ಪ ಮಹಾಗುರುವೆ
ನನ್ನ ಅಪ್ಪನ ಮನೆದೇವ್ರೆ ಅಂತ್ಹೇಳಿ

ಅಯ್ಯ ಜಂಗನ ಪಾದ ಇಡ್ದವ್ರೆ
ಶಿರಬಗ್ಗಿ ಶರಣ ಮಾಡವ್ರೆ || ಕೋರಣ್ಯ ||
ಉತ್ತುರ ದೇಸದ ಮಾದೇವ
ಹುಲಿ ಮುಟ್ಟುವ ಗನ ಲಿಂಗಯ್ಯ || ಕೋರಣ್ಯ ||

ಕೇಳವ್ವ ಕಂದ ಸಂಕಮ್ಮ
ಮಕ್ಕಳ ಬಾಗ್ಯ ಮಕ್ಕಳ ಬಾಗ್ಯ ಅಂತೇಳಿ
ನೀನು ಕೂಗ್ತಾ ಇದ್ದಿಯಲ್ಲ ಕಂದ
ಹೊನ್ನಲ್ಲ ದವಸಲ್ಲ ದಾನ್ಯವಲ್ಲ
ಅಂಗಡಿಯಲ್ಲಿ ಕೊಡ್ಕೊಂಡು ಬಂದು ಕೊಡಬೇಕು ಅಂದ್ರೆ
ಆಯ್ತಮ್ಮ ಸಾಮಾನು ಸರಕಲ್ಲ
ಬ್ರಹ್ಮಲೋಕದಲ್ಲಿ ಬ್ರಹ್ಮ ಪಂಚಾಂಗ ನೋಡ್ತೀನಿ
ಏನಾದ್ರು ನಿನ್ನ ಹಣೆ ಬರದೊಳ್ಗೆ ಫಲ ಬರ್ದಿದ್ರೆ
ಅದನ್ನ ನೋಡ್ಕಂಡ್ ಬಂದು ನಿನ್ಗೆ ಪಿಂಡ ಪರಸಾದವನ್ನು ಕೊಡ್ತಿನಿ
ಆವಾಗ ಮಕ್ಳ ಬಾಗ್ಯ ಆಗುತ್ತೆ ಕಂದ

ನಿನ್ಗೆ ಮಾಯ್ದಲ್ಲಿ ಮಕ್ಕಳ್ಳ ಕೊಟ್ಟರೆ ಮಗಳೇ
ನನಗೇನ್ ಆರ್ಕೆ ಮಾಡೂವೇs || ಕೋರಣ್ಯ ||

ಗುರುವೇ ಗುರುಪಾದವೇ
ನನ್ನಪ್ಪನ ಮನೆದೇವ್ರೆ
ಮಾದಪ್ಪ ಈ ಅಡ್ವಿ ಅರಣ್ಯದಲ್ಲಿ
ನನ್ನ ಅರ್ಕೆ ಕೇಳ್ವಾ ಇದ್ದೀರಲ್ಲ
ಈ ಅರಣ್ಯದಲ್ಲಿ ನಾನ್ ಯಾವ ಆರ್ಕೆ ಮಾಡ್ಲಿ ಹೆಣ್ ಪ್ರಾಣಿ
ಒಂದ್ ಆರ್ಕೆ ಮಾಡ್ತಿನಿ ಗುರುವೇ
ಸೂರ್ಯ ಚಂದ್ರಾದಿಗಳಿರೋವರ್ಗೂವೆ
ಶಾಶ್ವತವಾದ ಅರ್ಕೆ ಅಂದಳು
ಅಂತಾದ್ಯಾವ್ದು ಕಂದ
ಮಹದೇವ
ಹೆಣ್ಣೇಳು ಕೋಟಿ ಗಂಡೇಳು ಕೋಟಿ
ಪಡುವಲ ರಾಜ್ಯದಿಂದ ಬರ್ತಾ ಇದ್ದಾರೆ ಅಂತ ಹೇಳ್ತಾ ಇದ್ದೀರಿ
ಪಡುವಲ ರಾಜ್ಯದಿಂದ ಬರುವಂತ ಪರ್ಸೆ ಗಣಂಗಳ್ಗೆ
ತಾಳು ಬೆಟ್ಟದವರ್ಗು ಒಂಬತ್ ಮೈಲಿದೂರ
ಕಾಡು ತರಿಸ್ ಬಿಟ್ಟು ಕಲ್ಲಾಯ್ಸಿ ಮುಳ್ಳಾಯ್ಸಿ
ಆಯ್ ರೋಡ್ ಮಾಡುತ್ತೀನಿ ಮಾದಪ್ಪ
ತಾಳ್ ಬೆಟ್ಟದಿಂದ ಒಂಬತ್ ಮೈಲಿದೂರ ನೀವು ನೆಲೆಗೊಂಡಿರುವಂತ
ಏಳ್ ಮಲೆ ಕೈಲಾಸಕ್ಕೆ
ಒಂದೇ ಅಂಕಣ ಕಾಡ್ ತರಿಸಿ
ಸೋಪಾನ್ ದಂತ ಕಟ್ಟುಸ್ಬುಡ್ತೀನಿ
ಇದು ಸೂರ್ಯ ಚಂದ್ರಾದಿಗಳಿರೋ ವರ್ಗುವೇ
ಪರ್ಸೆ ಗಣಂಗಳು ನಡ್ದು ಹೋಗೊ ದಾರಿ ಮಾಡ್ತಿನಿ
ಇದ್ನಾರು ಒಪ್ಗಂಡು

ನನ್ಗೆ ಮಕ್ಕಳ ಬಾಗ್ಯ ಕೊಟ್ಟೋಗಿ
ನನ್ನಪ್ಪನ ಮನೆಯ ಮಾದೇವs || ಕೋರಣ್ಯ ||
ಬಂಡಕ್ಕಿ ಬಸವಣ್ಣನವರು
ಮುಂದ್ ಮುಂದೆ ಶೇಷಣ್ಣನವರು
ಮಹದೇವ
ಮುಂದಲ ಪೂಜೆಮಾಡ್ದೇ ಗುರುವೇ ನಾಗಭೂಷಣರಿಗೇ
ಕೇಳವ್ವ ನನ ಕಂದ ಸಂಕಮ್ಮ
ಮಾದೇಶ್ವರ ಇಷ್ಟ್ ಬಾಗ್ಯ ಕೊಟ್ಟಿದ್ದಾರೆ
ಇರಲರ್ಧ ಖರ್ಚುಮಾಡಿ ಹೈ ರೋಡ್ ಮಾಡುಸ್ತಿನಿ ಅನ್ನಬೌದು
ಸೋಪಾನ್ ದಂತ ಕಟ್ಟುಸ್ತಿನಿ ಅನ್ನಬೌದು
ಸಿರಿ ಸಂಪತ್ತಿನ ಮಾತಾಡಬೇಡ ಮಗಳೇ
ನಿನ್ನಿಂದ ಸಾಧ್ಯವಿಲ್ಲ ಅಯ್ ರೋಡ್ ಮಾಡ್ಸೊದಕ್ಕೆ
ಸೋಪಾನ್ ದಂತ ಕಟ್ಸುವುದಕ್ಕೆ
ಅಂತ ಒಕ್ಕಲ ಎಲ್ಲಿ ಪಡದಿದ್ದೀನಿ ಅಂದ್ರೆ
ದೂರ್ವಲ್ಲ ಕಂದ ಹೇಳ್ತ ಇದ್ದೀನಿ ಕೇಳ್ ಮಗಳೇ

ಕಂದs ಕೌದಳ್ಳಿಯ ಬೀದಿಯ ಒಳಗೆ
ಒಕ್ಕಲು ಪಡದು ಮಡಾಗಿವುನಿ
ಕೌದಳ್ಳಿಯ ಬೀದಿಯ ಒಳಗೆ ನೂರೊಂದು
ಒಕ್ಕಲ ಪಡದಿವುನೀs || ಕೋರಣ್ಯ ||