ನನ್ನಪ್ಪನ ಮನೆದೇವ್ರೆ
ನಾನು ಮಾಡುವಂತ ಅರ್ಕೆ
ನಿಮಗೆ ಒಪ್ಪವಾಗಲಿ ಗುರುವೇ
ಇನ್ನೊಂದರಕೆ ಮಾಡ್ತಿನಿ ಗುರುವೇ ಅಂದಳು
ಎಂತ ಅರ್ಕೆ ಕಂದಮ್ಮ ಎಂದರು
ಅದು ಕೂಡ ಸೂರ್ಯ ಚಂದ್ರಾದಿಗಳಿರೋವರೆಗೆ
ಮಾಡ್ತಿನಿ ಎಂದಳು
ಓಹೋ ಅಂತಹದ್ದು ಯಾವುದು ಕಂದ ಎಂದರು
ಮಾದೇವ
ಏಳು ಮಲೆ ಕೈಲಾಸದಲ್ಲಿ
ಆ ದೇವಸ್ಥಾನದಲ್ಲಿ ಮೆರಿವಂತ ತೇರಿಲ್ಲ
ತೇರಿಗೆ ತಕ್ಕಂತಹ ವಿಗ್ರಹವಿಲ್ಲ
ಆ ದೇವಸ್ಥಾನಕ್ಕೆ
ರುದ್ರಾಕ್ಷಿ ತೇರುಮಾಡ್ಸಿಕ್ಕೊಂಡು
ತೇರಿಗೆ ತಕ್ಕಂತಹ ಅಪರಂಜಿ ಕೊಳಗ
ಅಪರಂಜಿ ಕೊಳಗದ ಮ್ಯಾಲೆ
ಏಳು ತಲೆ ಕಾಳಿಂಗ ಸರ್ಪನಿಟ್ಕಂಡು
ರುದ್ರಾಕ್ಷಿ ಮಂಟಪದ ಮೇಲೆ
ವರಸುತ್ತು ಒಳಸುತ್ತು ಬರೆಸಿಬಿಟ್ಟು
ಆ ಚಿನ್ನದ ಕೊಳಗದ ಮೇಲೆ
ವಿಳಾಸ ಬರೆಸಿಬಿಡ್ತೀನಿ
ಸಂಕಮ್ಮನ ಅರ್ಕೆ ಅಂತೇಳಿ
ಇದು ಸೂರ್ಯ ಚಂದ್ರಾದಿಗಳಿರುವವರೆಗೆ
ಶಾಶ್ವತವಾದ ಅರ್ಕೆ
ಇದನ್ನಾರೂ ಒಪ್ಪ್ ಕೊಂಡು

ನನಗೆ ಮಕ್ಕಳ ಭಾಗ್ಯ ಕೊಟ್ಟೋಗಿ
ನನ್ನಪ್ಪನ ಮನೆಯ ಮಾದೇವಾs || ಕೋರಣ್ಯ ||

ಅಯ್ಯೋ ಕಂದಮ್ಮ
ಯಾತಕ್ಕಾಗಿ ಇಂತ ಸಿರಿ ಸಂಪತ್ತಿನ ಮಾತಾಡಿಯೇ
ಕಂದಾ
ರುದ್ರಾಕ್ಷಿ ತೇರು ಅಂದ್ರೇನು
ಅಪರಂಜಿ ಕೊಳಗ ಅಂದ್ರೇನು ಕಂದ
ಅಪರಂಜಿ ಮುತ್ತು ಅಂದ್ರೆ ಸಾಮಾನ್ಯವಲ್ಲ ಮಗಳೆ
ಸಿರಿ ಸಂಪತ್ತಿನ ಮಾತಾಡಬೇಡ ಕಂದ
ನಿನ್ನಿಂದ ಸಾಧ್ಯವಿಲ್ಲ ಮಗಳೆ
ನನಗೆ ರುದ್ರಾಕ್ಷಿ ತೇರು
ಅಪರಂಜಿ ಕೊಳಗ ಮಾಡಿಸುವಮ್ತ ಭಕ್ತರನ್ನ
ಎಲ್ಲಿ ಪಡೆದಿವುನಿ ಅಂದ್ರೆ ಕಂದ
ಹೇಳ್ತಾಯಿದ್ದೀನಿ ಕೇಳು ಮಗಳೇ

ಕಂದ ಮೈಸೂರ ಜಿಲ್ಲೆ ಒಳಗೆ
ಮಡಗಿವುನಿ ಅರಸರಾ || ಕೋರಣ್ಯ ||

ಮೈಸೂರು ಜಿಲ್ಲೆ ಒಳಗೆ ಕಂದಾ
ಜಾತಿ ಒಳಗೆ ಜಟ್ಟಿ ವಂಶದರಸು
ಮೈಸೂರು ಮಾರಾಜರೆಂದರೇ
ಹೇಳ್ತಾಯ್ದಿನಿ ಕೇಳು ಕಂದ
ನಾಲ್ವಡಿ ಕೃಷ್ಣರಾಜ ಒಡೆಯರಲ್ಲ
ನಂಜರಾಜ ಒಡೆಯರಲ್ಲ
ಮಮ್ಮಡಿ ಕೃಷ್ಣರಾಜ ಅರಸರಲ್ಲ
ಅವರಿಗಿಂತ ಮೊದಲಿದ್ದವರು
ನಂಜರಾಜ ಒಡೆಯರ ಕಾಲದಲ್ಲಿ
ಹರಹರ ಆಗಲೀಗ ಮೈಸೂರು ಮನತನಾಲ್ಲಿ
ಕೇಳವ್ವ ನನಕಂದ ಸಿವಶರಣೆ ಸಂಕಮ್ಮ
ಮಹಾರಾಜರು ನಾನಿರುವವರೆಗೂ ಈ ಸಿಂಹಾಸನ
ನಾನು ಹೋದ ಮೇಲೆ ಈ ಸಿಂಹಾಸನಕ್ಕೆ ಒಡೆಯರಿಲ್ಲಾಂತೇಳಿ
ಮಹಾರಾಜರು ಯೋಚ್ನೇ ಮಾಡ್ತಾಯಿದ್ದಾರೆ
ಬರೀ ಹೆಣ್ಣು ಮಕ್ಕಳೇ ಆಗ್ತಾಯಿದ್ದಾವೆ ಮನೆತನಕೆ
ಆವಾಗ ಮೈಸೂರು ಮೇಲುನಾಡಿನಿಂದಾ
ಮಗ್ಗ ಮರಳ್ಳಿ ಹೆಗ್ಗಡೆದ್ಯಾವನಕೋಟೆ
ಭೀಮನಕೊಲ್ಲಿ ಬೀರಂಬಳ್ಳಿ
ಪಿರಿಯಾ ಪಟ್ಟಣದಿಂದ ಏಳುಮಲೆ ಕೈಲಾಸಕ್ಕೆ
ತಲೆಮ್ಯಾಲೆ ಬುತ್ತಿ ಹೊತ್ತಕೊಂಡು
ಎಲ್ಲಾ ಹೆಣ್ಣು ಗಂಡೆಲ್ಲ ಸಾಲಿಟ್ಟುಕೊಂಡು
ಉಗ್ಯೋ ಮಾತ್ಮಲೆ ಮಾದೇವಾ ಒಗ್ಯೋ ಅಂತೇಳಿ
ಮೈಸೂರು ಬೀದಿಯೋಳಗೆ ಬರ್ತಾರೆ ನನ ಕಂದ

ಬರುವಂತಾ ಪರಸೆ ಗಣಂಗಳ ಮಹಾರಾಜ ನೋಡುಬುಟ್ಟು
ಅರಮನೆಯಿಂದೀಚೆ ಬಂದು ನಿಂತುಗಂಡು
ಬರುವಂತಾ ಪರುಸೆಗಳ ಅಡ್ಡ ಹಾಕ್ಕಂಡು ನಿಂತುಕೊಳ್ಳುತ್ತಾರೆ
ಏನಪ್ಪ ಪರುಸೆಗಣಂಗಳೇ
ಯಾವ ದೇವರ ಹೆಸರೇಳ್ರಪ್ಪ ಅಂತೇಳಿ
ಅಯ್ಯೋ ಸ್ವಾಮೀ
ರಾಜರೆ ನಿಮಗಿನ್ನೂ ಗೊತ್ತಿಲ್ಲ
ನಮ್ಮಮನೆದೇವ್ರು ಕೊಂಕಣಿ ರಾಜ್ಯದಲ್ಲಿದ್ದಾನೆ
ಕೊಳ್ಳೇಗಾಲದ ತಾಲೋಕು
ಕೊಯಮತ್ತೂರು ಜಿಲ್ಲೆ
ಏಳುಬೆಟ್ಟದ ಮಧ್ಯದಲ್ಲಿದ್ದಾರೆ

ಅಪ್ಪ ಏಳುಮಲೆ ಮಾದೇವ ಎಂದು
ಕರೆವಾರು ಕಾಣೋ ಮಹಾರಾಜಾs || ಕೋರಣ್ಯ ||

ಏಳುಮಲೇ ಮಾದೇಶ್ವರ ಅಂದರೇ
ಬೂದಿ ಮುಚ್ಚಿದ ಕೆಂಡ
ಭೂಲೋಕದಲ್ಲಿ ಉದ್ದಂಡ
ಮಾಯಾಕಾರ ಗಂಡ ಮಾದಪ್ಪ
ನಂಬಿದವರಿಗೆ ತುಂಬಿ ತುಳುಕಾಡುತ್ತಿದ್ದಾರೆ
ಹುಟ್ಟು ಬಂಜೆಗೆ ಮಕ್ಕಳ ಭಾಗ್ಯ ಕೊಡ್ತಾಯಿದ್ದಾರೆ
ನಮ್ಮ ಏಳುಮಲೆ ಮಾದೇಶ್ವರ
ಮಹದೇವಾ
ಅಂತ ಭಕ್ತಿವಂತನಾದರೆ
ನೋಡಪ್ಪ ಪರಿಸೆಗಣಗಳೆ
ನನ್ನ ಮನತನದಲ್ಲಿ ಬರಿ ಹೆಣ್ಣು ಮಕ್ಕಳೇ
ಮಾದೇಶ್ವರ ಅಂಥ ಭಕ್ತಿವಂತನಾದರೆ
ನನ್ನ ಮಹಾರಾಣಿ ಗರ್ಭದಲ್ಲಿ
ಇನ್ನು ವರ್ಷ ತುಂಬುವ ಹೊತ್ತಿಗೆ
ಒಂದು ಪುತ್ರ ಸಂತಾನವಾದರೆ
ಆ ಏಳುಮಲೆ ಮಾದೇಶ್ವರನಿಗೆ
ರುದ್ರಾಕ್ಷಿ ತೇರು ಮಾಡಿಸಿಗಂಡು ಬಂದು
ರುದ್ರಾಕ್ಷಿ ತೇರಿಗೆ ಅಪರಂಜಿ ಕೊಳಗ
ಅಪರಂಜಿ ಕೊಳಗದ ಮ್ಯಾಲೆ
ಏಳು ತಲೆ ಕಾಳಿಂಗನ ಸರ್ಪನ ಮಾಡಿಸಿಕೊಂಡು
ಏಳುಮಲೆ ಕೈಲಾಸಕ್ಕೆ ಹೊತ್ತುಕೊಂಡು ಬಂದು
ನಡೆವೋಕೆ ದಾರಿ ಇಲ್ಲದಿದ್ದರೂವೇ
ನನ್ನ ಜವಾನರ ಕೈಲ್ಲಿ ಆಳುಗಳ ಕೈಲಿ
ಪಲ್ಲಕ್ಕಿ ಮ್ಯಾಲೆ ಹೊರಿಸಿಕೊಂಡು ಬಂದು
ಏಳುಮಲೆ ಕೈಲಾಸದಲ್ಲಿ
ಹೊರ ಪರಕಾರದಲ್ಲಿ
ಒಂದು ಸುತ್ತ ಹೊರಸುತ್ತ
ಒಂದು ಸುತ್ತ ಬಳಸುತ್ತ
ದೇವಸ್ಥಾನದೊಳಗೆ ಮೆರಿಸಿಬುಟ್ಟು
ಆ ದೇವಸ್ಥಾನದ ಮಣೆಗಾರ‍ನ ಕರೆದು
ನನ್ನ ವಿಳಾಸ ಹಾಕಿಸ್ಬಿಟ್ಟು
ಇಗೋ ನನ್ನ ಹೆಸರೇಳಿ
ಒಂದು ಕಾಸಿನ ಧೂಪ ಹಾಕಿ ಅಂತ್ಹೇಳಿ
ಅರಶಿಣಬಟ್ಟೆ ಹಾಕಿ ಮಾರಾಜರು
ಒಂದು ಬಿಡಗಾಸು ಕಾಣಿಕೆಕೊಟ್ಟು
ಕಳಿಸ್ತಾ ಇದ್ದಾರೆ
ಕಂದ ಸಂಕಮ್ಮ
ಆ ಕಟ್ಟಿದಂತ ಒದು ಬಿಡುಗಾಸು ತಕ್ಕಂಡು ಬಂದು
ನನ್ನ ಮೈಸೂರಿನ ಮೇಲನಾಡಿನ ಪರುಸೆ
ಏಳು ಮಲೆ ಕೈಲಾಸದಲ್ಲಿ ಧೂಪದ ಗುಂಡಿ ಸುತ್ತ
ಧೂಪವನ್ನು ಹಾಕ್ಕಂಡು
ಒಂದು ಕಾಸಿನ ಧೂಪ ತಕ್ಕಂಡು
ಮಹದೇವ ಮೂಡಲ ಮಲೆ ಮಾದೇಅ
ಹುಲಿವಾನದಯ್ಯ
ಮೈಸೂರು ಮನೆತನದಲ್ಲಿ
ನಿನ್ನ ಹೆಸರು ಕೊಂಡಾಡಿಸ್ಕೊಳ್ಳಪ್ಪ
ಮೈಸೂರು ಮನೆತನಕ್ಕೆ
ನೀನು ಒಕ್ಕಲು ಪಡಿಯಪ್ಪ ಅಂತೇಳಿ
ಮಾರಾಜರಿಗೊಂದು ಪುತ್ರ ಸಂತಾನ ಕೊಡಪ್ಪ
ಮಾರಾಜರ ಕೈನ ಧೂಪ ಅಂತೇಳಿ
ಧೂಪದ ಗುಂಡಿಯೊಳಗೋಗಿ
ಧೂಪ ಹಾಕುಬುಟ್ಟು
ಉಗ್ಯೋ ಮಾತ್ಮಲೆ ಅಂತಾರೆ ಕಂದಮ್ಮ
ವರ್ಷ ತುಂಬುವತ್ತಿಗೆ ಸಂಕಮ್ಮ
ಮೈಸೂರು ಮಹಾರಾಣಿಗೆ
ನಾನು ಪುತ್ರ ಸಂತಾನ ಕೊಡ್ತೀನಿ
ಮಾಹಾರಾಜರು ನನಗೆ ಹರಕೆ ಮಾಡ್ತಾರೆ ಕಂದ
ನಿನ್ನಿಂದ ಸಾಧ್ಯವಿಲ್ಲ ಮಗಳೇ
ನಿನ್ನಿಂದ ಸಾಧ್ಯವಿಲ್ಲ ಈ
ಈ ಹುಲಿವಾನ ಮಾಡಿಸುವುದಕೆ

ನಿನಗೆಮನದಲ್ಲಿ ಮಕ್ಕಳ ಕೊಟ್ಟರೆ ಮಗಳೆ
ನನಗೇನ್ಹರಿಕೆ ಮಾಡೂವೆs || ಕೋರಣ್ಯ ||

ಮಲೆಗಳ ನೋಡಯ್ಯ ಮಾದೇವ
ಹೊನ್ನೇ ಗಿಡಗಳ ನೋಡಯ್ಯಾ
ಮಲೆಯಲ್ಲಿರುವ ಮಾದೇವ ನಿಮ್ಮ
ಐಭೋಗ ನೋಡಯ್ಯ

ಗುರುವೇ ಗುರುಪಾದವೇ ನನ್ನಪ್ಪನ ಮನೆ ದೇವರೆ
ಮಾಯ್ಕಾರಗಂಡ ಮಾದಪ್ಪ
ಹೆಣ್ಣು ಪ್ರಾಣಿ ನಾನು
ಆದರೆ ಗಂಡುಸರು ಮಾಡಿದರೆ
ಹರಕೆಯನ್ನು ಒಪ್ಪುಗೋತ್ತಿದ್ರಿ
ಗಂಡಸರು ಮಾಡಿದ ಮಾತು
ಗ್ವಾಡೆ ಹಾಕಿದಪ್ಪಂದವಾಯ್ತು
ಹೆಂಗಸರ ಮಾತು
ನೆರಿಗೆ ಕಟ್ಟಿದಪ್ಪಂದವಾಯ್ತು
ನಾನು ಹೆಣ್ಣು ಪ್ರಾಣಿ ಮಾಡುವಂತ
ಹರಕೆ ನಿಮಗೆ ಒಪ್ಪುವಲ್ಲ ಗುರುವೇ
ಇನ್ನೊಂದರಕೆ ಮಾಡ್ತಿನಿ ಮಾದಪ್ಪ
ಇದಕ್ಕೆ ಒಪ್ಪಿಕೊಂಡು ಮಕ್ಕಳ ಭಾಗ್ಯಕೊಡು
ಕೊಟ್ರೆ ಕೊಡಬಹುದು
ಕೊಡದಿದ್ರೆ ಮೂಡಲ ಕೈಲಾಸಕ್ಕೆ ಹೊರ್ಟೋಗಿ
ನನ್ನ ಪಾಡು ನನ್ನದಾಗಲಿ
ನಿಮ್ಮ ಪಾಡು ನಿಮ್ಮದಾಗಲಿ ಗುರುವೆ ಅಂದಳು
ಇನ್ನಾವರಗೆ ಮಾಡಿಯೆ ಕಂದಮ್ಮ
ಧೈರ್ಯವಾಗಿ ಹೇಳು ಮಗಳೆ ಅಂದ್ರು
ಮಾದೇವಾ ಆ ರೀತಿಯಾಗಿ ಏಳುಮಲೆ ಕೈಲಾಸಕ್ಕೆ
ಹೆಣ್ಣೇಳು ಕೋಟಿ ಗಂಡೇಳು ಕೋಟಿ
ಬರುವಂತ ಪರುಸೆ ಗಣಂಗಳಿಗೆ
ಶಿವರಾತ್ರಿ ಯುಗಾದಿಗಳಿಗೆಯೊಳಗೆ
ಕುಡಿಯೊದಕೆ ಈ ಏಳುಮಲೆ ಬೆಟ್ಟದ ದಾರಿ ಒಳಗೆ ನೀರಿಲ್ಲ
ಉಣ್ಣುವುದಕ್ಕೆ ಅನ್ನವಿಲ್ಲ
ಅಸ್ತು ಹಳಸಲು ತಂಗ್ಳನ್ನ ತಿಂದು
ಕಣ್ಣೀರು ಕುಡುದು
ಗಡಿಗೇಲಿ ನೀರಿಟ್ಟುಕೊಂಡು ಬರ್ತಾರೆ
ಆ ನೀರು ಎಲ್ಲಿಗಂಟ ಬರ್ತಾವೆ ಮಾದಪ್ಪ
ಅಂತಹ ಜಾಗದಲ್ಲಿ
ನಾನು ತಾಳು ಬೆಟ್ಟದಲ್ಲಿ ಕೂತುಕೊಂಡು
ಬರುವಂತ ಪರುಸೆ ಗಣಂಗಳಿಗೆ
ಅಂಬಲಿ ಅರೋಬಿಗೆ ಹಾಕಿಸ್ತೀನಿ
ನೀರು ಮಜ್ಜಿಗೆ ಪಾನಕ ಮಾಡಿಸ್ತೀನಿ
ಎಸಿರು ಬೇಳೆ ಕಳ್ಳೆಬ್ಯಾಳೆ ದಾನಕೊಟ್ಟು
ಅವರ ಸಂಕಟ ಸುಸ್ತು ಪರಿಹಾರ ಮಾಡ್ತೀನಿ ಮಾದಪ್ಪ
ಎರಡು ತಿಂಗಳು
ಶಿವರಾತ್ರಿ ಯುಗಾದಿಯೊಳಗೆ
ಯಾವಾಗ ಅಂದ್ರೆ
ಕಾಲು ಉಗಿಬಂದು ಬೇಯುವಾಗ
ಬೆಟ್ಟವೆಲ್ಲ ಬೇಯ್ತಾ ಇದೆ
ಅಂತಾ ದಗೆ ಕಾಲ್ದಲ್ಲಿ ಮಾಡ್ತೀನಿ ಮಾದಪ್ಪ
ಇದೊಂದು ಹರಕೆಯನಾದ್ರು ಒಪ್ಪಿಕೊಂಡು

ನನಗೆ ಮಕ್ಕಳಭಾಗ್ಯ ಕೊಟ್ಟೋಗಿ
ನಮ್ಮಪ್ಪನ ಮನೆಯ ಮಾದೇವಾs || ಕೋರಣ್ಯ ||
ಅಂತರಗಂಗೆ ಅಳುವಾರದಲ್ಲಿ
ಸಂತೋಷವೇನೋ ನೋಡಯ್ಯ
ನೂರೊಂದಯ್ಯನ ತಮ್ಮಡಿಮಕ್ಕಳು
ಹೂವಿಗೆ ಬರುವಾರೋ

ಸಹಾಬಾಷ್ ಕಂದಮ್ಮ
ಸಾವಿರಾರು ಕೋಟಿ ಗಣಂಗಳಿಗೆ
ಅಂಬಲಿ ಅರವಾಟಿಗೆ ಹಾಕಿ
ನೀರು ಮಜ್ಜಿಗೆ ಪಾನಕ ಮಾಡಿ
ಎಸಿರುಬೇಳೆ ಕಡ್ಲೆಬೇಳೆ ಕೊಡಬಹುದು ಕಂದ
ಆದರೆ ನೀನು ಸಾವಿರಕೋಟಿ ಗಣಂಗಳಿಗೆ
ಕೊಟ್ಟಂತ ಕಾಲದಲ್ಲಿ ಕಟ್ಟ ಕಡೆಯಲ್ಲಿ
ಎಲ್ಲಾ ಪರುಸೆ ಗಣಂಗಳು ಹೋದ ಮೇಲೆ
ಒಬ್ಬ ಕಣ್ಣು ಕಾಣದ ಕುರುಡ
ಸನ್ಯಾಸಿ ಬಂದು ಅಮ್ಮ ಅಂಬ್ಲಿ ಅಂತಾನೆ
ಆವಾಗ ಇಲ್ಲಾಂದ್ರೆ
ನೀನು ಸಾವಿರ ಕೋಟಿ ಗಣಂಗಳಿಗೂ
ಮಾಡಿದಂತ ಧರ್ಮ ಹುಲ್ಲಾಗಿ ಹೋಗ್ಬುಡ್ತದೆ ಕಂದ
ನಿನ್ನಿಂದ ಸಾಧ್ಯವಿಲ್ಲ ಮಗಳೆ
ಆ ರೀತಿ ಅಂಬಲಿ ಅರವಟಿಗೆ ಹಾಕುವಂತವರು
ಎಲ್ಲಿ ಪಡೆದಿದ್ದೀನಿ ಅಂದ್ರೆ ನನ್ನ ಕಂದ

ಮಗಳೆ ಕಾವಗೆರೆಯ ಬೀದಿಯ ಒಳಗೆ
ಒಕ್ಕಲು ಪಡೆದು ಮಡಗಿವನೀs || ಕೋರಣ್ಯ ||
ಕಂಪಣದವರು ಕರಯೋಕೆ ಬಂದವರೆ
ಎದ್ದು ಬಾರೋ ಮಾದೇವಾ
ಮುತ್ತಿನ ಕಂತೆ ಮುನಿಗಳು ಬಂದವರೆ
ಭಿಕ್ಷಾ ನೀಡವ್ವಾ

ನೋಡೋ ನನ ಕಂದ
ಕಾಮಗೆರೆ ಬೀದಿಯ ಒಳಗೆ
ಜಾತಿಯೊಳಗೆ ಗಂಗಡಕಾರ ಗೌಡ
ಕಾಮಗೆರೆ ಕೆಂಗೇಗೌಡ ಅಂದರೆ
ಆ ಏಳುಗ್ರಾಮಕ್ಕೂ ಮುಂದಾದ ಮನುಷ್ಯ
ಕಾಮಗೆರೆ ಕೆಂಗೇಗೌಡನಿಗೆ ಒಬ್ಬನೇ ಮಗ
ಒಬ್ಬ ಸೊಸೆ ಒಬ್ಬ ಮಗನಿಗೆ
ಹುಚ್ಚು ಬೆಪ್ಪು ಕೊಡುತಿನ
ಮೊಲ್ಲಾಗ್ರದ ಗಾಳಿ ಕೊಡುತಿನಿ
ಆ ಮಗನಿಗೆ ಉಟ್ಟಬಟ್ಟೆ ಮ್ಯಾಲೆ ಗ್ಯಾನವಿಲ್ಲ
ಊಟದ ಮ್ಯಾಲೆ ಗ್ಯಾನವಿಲ್ಲ
ಊರೂರು ತಿರುಗಬೇಕೆಂಬ ಅಂಥ ಗ್ಯಾನ ಕೊಡ್ತಿನಿ
ಒಬ್ಬ ಸೊಸೆಗೆ ಮೊಲ್ಲಾಗ್ರದ ಗಾಳಿ ಕೊಟ್ಟು
ಮಲಗಿದ ಜಾಗಬಿಟ್ಟು ಏಳಬಾರುದು
ಕರೆದವರೊಂದಿಗೆ ಮಾತಾಡಬಾರದು
ಅಂತಾ ಕಷ್ಟ ಕೊಡುತೀನಿ ಕಂದ
ಆಗ ಕಾಮಗೆರೆ ಕೆಂಗೇಗೌಡ
ಏಳುಗ್ರಾಮ ಸುತ್ತಾಡ್ತನೆ ಶಾಸ್ತ್ರ ಕೇಳ್ತಾನೆ
ಯಂತ್ರ ಮಂತ್ರ ಮಾಡ್ತಾನೆ
ಏನು ಮಾಡಿದರೂ ಹೋಗೋದಿಲ್ಲ ಕಂದ
ಆಗ ಯೋಚನೆ ಮಾಡ್ತಾನೆ
ಕೆಂಗೇಗೌಡ ಕುಂತುಗೊಂಡು ಜಗಲಿ ಮ್ಯಾಲೆ
ಅವುನು ಯೋಚನೆ ಮಾಡುವಾಗ
ಮೈಸೂರಿನ ಮೇಲುನಾಡು ಪರಸೆ
ಕಾಮಗೆರೆ ಕೊಂಗರಳ್ಳಿ ಬೀದಿಯೊಳಗೆ
ಉಗ್ಯೋ ಉಗ್ಯೋ ಮಾತ್ಮಲೆ ಅಂತೇಳಿ
ಅಟ್ಟಿ ಹೊತ್ತುಕೊಂಡು ಬರ್ತಾರೆ
ಆ ಪರಸೆ ಗಣಂಗಳ ಕೂಗು ನೋಡುಬಿಟ್ಟು
ಕೆಂಗೇಗೌಡ ಓಡಿಬಂದು
ಬರುವಂತಾ ಪರುಸೆ ಗಣಂಗಳಿಗೆ
ದೀರ್ಗದಂಡವಾಗಿ ಆಡ್ಲಾಗಿ ನಮಸ್ಕಾರ‍ಮಾಡ್ತಾನೆ ನಿತ್ಕಂಡು
ಅಪ್ಪ ಪರುಸೆಗಣಂಗಳೇ
ಉಗ್ಯೋ ಮಾತ್ಮಲೆ ಮಾಂದಮಲೆಯ ಹರಸಿದ್ದೀರಿ
ಎಲ್ಲಿಯಪ್ಪ ಆ ಮಾದಪ್ಪ ಎರೋದು
ಮಾಂದಮಲೆ ಇರುವುದು ಎಲ್ಲಿ
ಆ ದೇವ ದೇವರೆಸರು ಹೇಳಿ ನೋಡಿ
ಆ ದೇವರಿಂಗ ನನ್ನ ಮನೆ ಕಷ್ಟ ಪಾರಾಗಲಿ ಅಂತಾವುರೆ
ಅಯ್ಯೋ
ಹೋಗೋದು ಬರೋದು ಅದೇ ದಾರಿ ಕಾಣಪ್ಪ
ತಿಂಗಾತಿಂಗಳು ಅಮಾಸೆ ಒಂದಿನ ಅಂತೇಳಿ
ಮಾದಪ್ಪನಿಗೋಗಿ ಎಣ್ಣೆಮಜ್ಜನ ಮಾಡಿಸ್ಕೊಂಡು
ಎಣ್ಣೆಮಜ್ಜನ ಪ್ರಸಾದ ತೆಕ್ಕೊಂಡು ಬರ್ತೀವಿ
ನಿಮಗಿನ್ನೂ ಗೊತ್ತಿಲ್ಲವ ಗೌಡ್ರೇ ಅಂತಾರೆ
ನಾ ಹೋಗಲಿಲ್ಲ ಹೇಳಿರಪ್ಪ ಅಂತಾರೆ
ನೋಡು ಗೌಡ ಏಳು ಬೆಟ್ಟದ ಮಧ್ಯದಲ್ಲಿ
ಏಳು ಮಲೆ ಕೈಲಾದಲ್ಲಿ
ಸೀಗೆ ಸಿರಿಗಂಧ ಕೆಮ್ಮತ್ತಿ ಬಾಡು ಒಕ್ಕಲ್ಲ ಗುತ್ತಿಯೊಳಗೆ
ಬಿದಿರುಮೆಳೆ ಪೊದೆವೊಳಗವನೆ ಮಾದಪ್ಪ
ಮಾಯಾಕಾರ‍ದ ಗಂಡ
ಬೂದಿ ಮುಚ್ಚಿದ ಕೆಂಡಾ
ಭೂಲೋಕದಲ್ಲಿ ಉದ್ದಂಡ
ಅಖಂಡ ಮಹಿಮ ಅಲ್ಲಮಪ್ರಭು
ಮಾದಪ್ಪನ ಮಾಯ ಇನ್ನಾರಿಗೂ ಗೊತ್ತಿಲ್ಲ
ನಂಬಿದೋರ ಮನೆಯಲ್ಲಿ ತುಮ್ಬಿ ತುಳುಕಾಡುತ್ತಾನೆ
ನಡುನಾಲಿಗೆ ಸದ್ಭಕ್ತಿಯಿಂದ
ಮಲಗಿದ ಜಾಗದಲ್ಲಿ ಮಾದಪ್ಪ
ಹುಲಿವಾನದಯ್ಯ ನನಕಷ್ಟ ನಿನಗೆ ಪರಿಯಾರವಾಗ್ಲಿ ಅಂದ್ರೆ
ನಂಬಿದೋರ ಮನೆಯಲ್ಲಿ ತುಂಬಿ ತುಳಿಕಾಡುತ್ತಾನೆ ಕಂದ
ಗೌಡ ಮಕ್ಕಳಸಿರಿ ಮನಸಿರಿ
ಕೋಟೈಸಿರಿ ಕುಮಾರ್ಯಭಾಗ್ಯ ಕೊಡ್ತಾರೆ ಅಂತಾರೆ
ಹಾಗಾದರೆ ಆ ಮಾದಪ್ಪನಿಗೆ
ನಾನು ಬಂದು ಯಾತ್ರೆ ಮಾಡುವುದಕ್ಕೆ ಸಾಧ್ಯವಿಲ್ಲ
ನಮ್ಮ ಒಬ್ಬ ಮಗ ಒಬ್ಬ ಸೊಸೆಗೆ ಬಂದಿರುವ ಕಷ್ಟ
ಆ ಮಾದೇಶ್ವರ ಹುಲ್ಲಾಗಿ ಕಳೆದುಬಿಟ್ರೆ
ನೀವೆಲ್ಲ ಹೆಣ್ಣೇಳು ಕೋಟಿ ಗಂಡೇಳು ಹೋಟಿ
ಪರುಸೆ ಗಣಂಗಳು ಏಳು ಮಲೆಯಲ್ಲೋಗಿ
ಕಾಸಿನ ಧೂಪ ಹಾಕಿ ಸೇವೆ ಮಾಡಿ ಬರುವಾಘ
ಒಂದು ದಿನವಲ್ಲ ಒಂದ ಹಗಲಲ್ಲ
ಕಾಮಗೆರೆ ಮಠದೊಳಗೆ
ಮೂರು ರಾತ್ರೆ ಮೂರು ಹಗಲು
ಅಂಬ್ಲಿ ಅರವಟ್ಟಿಗೆ ಹಾಗಿ
ನೀರು ಮಜ್ಜಿಗೆ ಪಾನಕ ಮಾಡಿ
ಸುತ್ತ ಏಳು ಗ್ರಮಕ್ಕೂ ತಮಟೆ ಹಾಕ್ಕೊಂಡು ಸಾರುಸ್ಬುಟ್ಟು
ಯಾರೇ ಆಗಲಿ ಅರದೇಸಿಯಾಗಲಿ ಪರದೇಸಿಯಾಗಲಿ
ಕಾಳಮುಡ ಸನ್ಯಾಸಿಯಾಗಲಿ
ದಾಸ ಜೋಗಿ ಗುಡ್ಡ ಗೊರವ
ನಿಮ್ಮ ಕೂಡ ಎಲ್ಲಾ ಬಂದು ಊಟ ಮಾಡಿಕೊಂಡು ಹೋಗ್ಲಿ
ಮೂರು ರಾತ್ರಿ ಮೂರು ಹಗಲು
ಹಚ್ಚಿದ ಒಲೆ ಕೆಡುವಾಗಿಲ್ಲ
ಆ ರೀತಿ ಮಾಡ್ತೀನಿ ಕಣಪ್ಪ
ನನ್ನ ಹೆಸರೇಳಿ
ಒಂದು ಬಿಡುಗಾಸು ತಕ್ಕೊಂಡೋಗಿ
ಧೂಪ ಹಾಕ್ಬುಡು ಅಂತರೆ
ಕೊಡಪ್ಪ ಅಂತೇಳಿ ಈಸ್ಕಂಡೋಗಿ
ಏಳುಮಲೆ ಕೈಲಾಸದಲ್ಲಿ ಪರುಸೆ ಗಣಂಗಳು
ಮಾದೇವನ ದೇವಸ್ಥಾನ ಬಳಸುಬುಟ್ಟು
ಅಂಗೈನಲ್ಲಿ ಧೂಪ ಇಟ್ಟುಕೊಂಡು
ಪೀಠದ ದೂಪ ಹಾಕ್ಕಂಡು ಬರ್ತಾರೆ
ಮಾದಪ್ಪನಿಗೆ ಕಂಬ ಕಂಬಕ್ಕೂವೇ
ಧೂಪ ಇಟ್ಟಕಂಡು ಬರ್ತಾರೆ
ಅದೆ ಪೀಠದ ಧೂಪ
ಆ ಪೀಠದ ಧೂಪವನ್ನು
ಮೈಸೂರಿನ ಮೇಲುನಾಡಿನ ಪರುಸೆ
ಹೆಣ್ಣು ಪ್ರಾಣಿಗಳು
ಅಂಗೈ ಮೇಲೆ ಹಾಕ್ಕೊಂಡು ಗುಡುಸ್ಕೊಂಡು ಬರ್ತರೆ
ಯಾತುಕ್ಕೋಸ್ಕರ ಅಂದ್ರೆ
ಆ ಪೀಠದ ಧೂಪ ತಕ್ಕಂಡು ಬಂದು
ಮನೆಯೊಳಗೆ ಮಕ್ಕಳು ಬಾಣಂತಾನದಲ್ಲಿ
ಸಣ್ಣಮಕ್ಕಳಿಗೆ ಬಾನಂತಿ ಮನೆಯೊಳಗೆ
ಮಕ್ಕಳಿಗೆ ನೀರು ಹಾಕುವಾಗ
ಆ ಮಗೂಗೆ ಧೂಪ ಹಾಕಿ ಧೂಪ ಕಾಯಿಸಿದರೆ
ಮಗೆಗೆ ತಲೆ ನೋವು ಬರುವುದಿಲ್ಲ
ನೆಗಡಿ ಬರೋದಿಲ್ಲ ಕೆಮ್ಮುಲು ಬರುವುದಿಲ್ಲ ಅಂತೇಳಿ
ಆ ಪೀಠದ ಧೂಪ ಮಡಿಕೊಂಡು ಬಂದು
ಆ ಕೆಂಗೇಗೌಡ ಕೊಟ್ಟಿದ್ನಲ್ಲ
ಅ ಒಂದು ಕಾಸಿನಧೂಪದ ಪ್ರವೀಟಾಗಿ ತಕ್ಕಂತಾರೆ
ಮಾದೇವ ನಾವು ಹೋಗಿ ಬರೋವಂತ ದಾರಿಯೊಳಗೆ
ಕಾಮಗೆರೆ ಕೆಂಗೇಗೌಡರ ಮನೆ ಕಷ್ಟ ಪರಿಹಾರ ಮಾಡಪ್ಪ
ಕೆಂಗೇಗೌಡನ ಮನೆ ಧೂಪ ಅಂತೇಳಿ
ಧೂಪ ಹಾಕಿಬುಟ್ಟು
ಉಗ್ಯೋ ಮಾತ್ಮಲೆ ಅಂತಾರೆ ನನಕಂದ
ಆ ಟೈಮ್ ಗೆ ಸರಿಯಾಗಿ ನಾನು
ಕಾಮಗೆರೆ ಕೆಂಗೇಗೌಡನ ಮನೆಯೊಳಗೆ

ಕಂದ ಬೆಟ್ಟನೇಗಿ ಬಂದ ಕಷ್ಟ
ಹಲ್ಲುನಾಗೆ ಪರಿಹಾರಾs || ಕೋರಣ್ಯ ||
ಬಣ್ಣ ಉಟ್ಟವಳೇ ತಾಯಿ
ಬಳೆಗಳ ತೊಟ್ಟವಳೆ
ಕಣ್ಣು ಮಣಿ ಕಾಲುಂಗರದವಳೇ
ಶರಣೇ ಸಂಕಮ್ಮಾ

ಆವಾಗ ಕಂದಮ್ಮ
ಕಾಮಗೆರೆ ಕೆಂಗೇಗೌಡ ಮಾಡ್ತಾ ಇದ್ದಾನೆ
ನಿನ್ನಿಂದ ಸಾಧ್ಯವಿಲ್ಲ ಮಗಳೇ
ಅಂತ ಸಿರಿಸಂಪತ್ತಿನ ಮಾತನಾಡಬೇಡ ಕಂದ

ನಿನಗೆ ಮಾಯದಲ್ಲಿ ಮಕ್ಕಳ ಕೊಟ್ಟರೆ ಮಗಳೆ
ನನಗೇನರುಕೆ ಮಾಡುವೆs || ಕೋರಣ್ಯ ||