ಅಯ್ಯೋ ಗುರುವೆ ಗುರುಪಾದವೇ
ನಾನ್ಯಾವು ಮಾತೇಳ್ಲಿ ನನ್ನಗಂಡ ನೀಲೇಗೌಡನಿಗೆ
ನಿಮ್ಮ ಹೆಸರೇಳ್ತೀನಿ ಗುರುವೆ
ನನ್ನಪ್ಪನ ಮನೆದೇವ್ರು
ಮಾದಪ್ಪ ಬಂದು ನನ್ನ ಕಷ್ಟ ಪರಿಹಾರ ಮಾಡಿ
ಬಡಸ್ತಾನ ಬಯಲುಮಾಡಿ
ಸಿರಿಸ್ಥಾನ ಉಂಟುಮಾಡುಬುಟ್ಟು
ಮಕ್ಕಳ ಭಾಗ್ಯ ಕೊಟ್ಟು ಹೋದ್ರು ಯಜಮಾನ
ಅಂತೇಳಿ ನಿಮ್ಮ ಮೇಲೆ ಹೇಳ್ತೀನಿ ಗುರುವೇ ಅಂದಳು
ಸಭಾಷ್ ಕಂದ
ನಿನ್ನ ಗರ್ಭದಲ್ಲಿ ಎರಡು ಮಕ್ಕಳು ಹುಟ್ಟುತಾ ಇದ್ದಾವೆ
ಮಕ್ಕಳಿಗೆ ಏನು ನಾಮಕರಣ ಮಾಡಿಯೇ ಅಂದ್ರು
ಮಾದಪ್ಪ
ಅಂದ ಚಂದವಾಗಿ ಎರಡು ಗಂಡ್ಮಕ್ಳು ಹುಟ್ಟುಬುಟ್ರೆ

ಸ್ವಾಮಿ ಮೊದಲಾಗುಟ್ಟಿದ ಮಗಾನಾ
ದೊಡ್ಡಮಾದು ಎಂದು ಕರೆಯುವೆನು
ಕಡೆಯಲ್ಲುಟ್ಟಿದ ಮಗಾನಾ
ಪುಟ್ಟಮಾದು ಎಂದು ಕರೆಯುವೆನೊ
ಚಿಕ್ಕಮಾದು ಎಂದು ಕರೆಯುವೆನೊ
ಮರುಮಾದು ಎಂದು ಕರೆಯುವೆನೋ

ಅಪ್ಪ ದೊಡ್ಡಮಾದು ಚಿಕ್ಕಮಾದು ಎಂದು ನಾನು
ನಾಮಕರಣ ಮಾಡುವೆನೋs || ಕೋರಣ್ಯ ||

ದೊಡ್ಡಾ ಮಾದು ಪುಟ್ಟು ಮಾದು ಚಿಕ್ಕ ಮಾದು
ಮರುಮಾದು ಅಂತ ಹೆಸರ ಕಟ್ತೀನಿ ಗುರುವೆ
ಇನ್ನು ಬೇರೆ ಕಟ್ಟೂದಿಲ್ಲ ಅಂದ್ರು
ಕಂದಮ್ಮ
ಆ ರೀತಿಯಾಗಿ ನಿನ್ನ ಗರ್ಭದಲ್ಲಿ
ಹುಟ್ಟುವಂತಹ ಮಕ್ಕಳನ್ನು
ಆ ರೀತಿ ಹೆಸರಿಟ್ಟು ಕರಿಬ್ಯಾಡ ಕಂದ
ಮತ್ಯಾವ ರೀತಿ ಕರೆಯಲ್ಲಿ ಹೇಳಿಕೊಡಿ ಗುರುವೆ ಅಂದಳು
ಕಂದಮ್ಮ
ನಿನ್ನ ಗರ್ಭದಲ್ಲಿ ಹುಟ್ಟುವಂತ ಮಕ್ಕಳು
ನನ್ನ ಏಳುಮಲೆ ಕೈಲಾಸದಲ್ಲಿ
ಕಲಿ ಕಟ್ಟಾಳಬೇಕು
ಕಾಸಿನ ಧೂಪ ಹಾಕಿಸಿಕೊಳ್ಳಬೇಖು
ಮೈಸೂರು ಮೇಲುನಾಡಿನ ಪರುಸೆಯಿಂದ
ಅವರು ಮಾಡುವಂತ ಹರಕೆ
ಅವರೇ ಒಪ್ಪಿಸಿಕೊಳ್ಳಬೇಕು
ಅಂತಹ ಋಷಿಗಳು ಮಾಡ್ತೀನಿ
ಕಂದ ನಾನು ಹೇಳಿದ ರೀತಿಯಾಗಿ
ನಾಮಕರಣ ಮಾಡಬೇಕು
ಹೆಸರಿಡಬೇಕು ಕಂದ ಅಂದ್ರು
ಹೇಳಿಕೊಡಿ ನನ್ನಪ್ಪ ಅಂದಳು

ಕಂದ
ಮಾದಲಾಗುಟ್ಟಿದ ಮಗಾನಾ
ಬಿಲ್ಲಯ್ಯ ಎಂದು ಕರಿಯವ್ವ
ಕಂದ ಕಡೆಯಲ್ಪಟ್ಟಿದ ಮಗಾನ
ಕಾರಯ್ಯ ಎಂದು ಕರಿಯವ್ವಾ
ಕಾರಯ್ಯ ಬಿಲ್ಲಯ್ಯ ಎಂದು
ನಾಮಕರಣ ಮಾಡವ್ವಾs || ಕೋರಣ್ಯ ||

ಆಗಲಿ ಗುರುವೆ
ನೀವೇಳಿದ ಪ್ರಕಾರವಾಗಿ ಹೆಸರಿಡ್ತೀನಿ ಅಂದಳು
ಮುತ್ತಿನ ಜೋಳಿಗೇಳಿ ಹಸ್ತ ಮಾಡ್ಗಿದ್ರು ಮಾದಪ್ಪ
ಎರಡು ಕಾಡು ಬಾಳೆಹಣ್ಣು ತಕ್ಕಂಡ್ರು
ಆವಾಗಲೀಗ ಏಳುಮಲೆ ಬಸ್ಮ ತಗದು
ಆ ಕಾಡುಬಾಳೆ ಹಣ್ಣಿಗಾಕಿ
ಆರುಮಂತ್ರ ಹದಿನೆಂಟು ಪುರಾಣ ಮಾಡುದ್ರು
ನಮ್ಮ ಗುರುಗಳಾಗಿರ್ತಕ್ಕಂತಾವ್ರು
ಆದಿ ಗುರು ಶಾಂತ ಮಲ್ಲಿಕಾರ್ಜುನಸ್ವಾಮಿ
ನಿಮ್ಮ ಗುರು ಕಟಾಕ್ಷವಿದ್ದರೇ
ಇನ್ನೂ ಮುಂದೆ ಆಡಿದ ಮಾತು ಅಮೃತವಾಗಲಿ
ಹೇಳಿದಂತ ಭಾಷೆ ನಡೆಯಲಿ ಗುರುವೇ
ಆ ಪಿಂಡು ಪ್ರಸಾದ ನಿಮ್ಮ ಹೆಸರಿನಲ್ಲಿ
ಸೂರ್ಯ ಚಂದ್ರಾದಿಗಳಿರುವವರೆಗೂವೆ
ಮೈಸೂರು ಮೇಳುನಾಡಿನಲ್ಲಿ
ಒಂದು ಮನಸ್ಸನಲ್ಲಿ ಬಂದು
ಒಂದೇ ಜ್ಞಾನದಲ್ಲಿ ಏಳುಮಲೆ ಕೈಲಾಸದಲ್ಲಿ
ಅಂತರ ಗಂಗೇಲಿ ಸ್ನಾನ ಮಾಡಿ
ನಿಮ್ಮ ಗುರು ಮಠಕ್ಕೆ ಬಂದಂಥ ಹೆಣ್ಣುಮಕ್ಕಳಿಗೆ
ಇದೇ ರೀತಿಯಾಗಿ ಗುರುದೇವ
ಪಿಂಡ ಪ್ರಸಾದವನ್ನು ಕೊಟ್ಟು
ಮಕ್ಕಳ ಸಂತಾನವನ್ನು ಕೊಟ್ಟು
ಮನೆಗೆ ಬೆಳಕು ಮಾಡಪ್ಪ
ಈ ಸಂಕಮ್ಮನಿಗೆ ಕೊಡುತ್ತೀನಿ
ಗುರುಪಾದದ ಸಾಕ್ಷಿಯಾಗಿ ಅಂತೇಳಿ
ಅಂಗೈಮ್ಯಾಲೆ ಇಟ್ಟುಕೊಂಡು
ಆವಾಗ ಮಾದಪ್ಪ

ಅಯ್ಯ ಕಾಡುಬಾಳೆ ಹಣ್ಣ ತಗುದು
ಪಿಂಡು ಪ್ರಸಾದ ಕೊಟ್ಟವರೇs || ಕೋರಣ್ಯ ||

ತನ್ನ ಮುತ್ತಿನ ಸೆರಗಿನ ಮೊಡಲ ಒಡ್ಡಿ
ಕಾಡು ಬಾಳೆಹಣ್ಣು ತಕ್ಕಂಡ ಸಂಕಮ್ಮ
ಮಗಳೆ ಮಡಿಕೊಂಡೋಗುಬ್ಯಾಡ ಕಂದ
ಇದೇ ಆಲೆಸ್ತ್ರೀ ಒಳುಗೆ
ಒಂದೊಂದು ಹಣ್ಣಾಗಿ ನುಂಗುಬುಡು ಕಂದ
ಸಿಪ್ಪೇನು ತಗಿಬ್ಯಾಡ
ಹಲ್ಲಲ್ಲಿ ಅಗಿಬ್ಯಾಡ ಕಂದ ಆಂದ್ರು
ಮಾದಪ್ಪನ ಮಾತು ಕೇಳಿ
ಒಂದೊಂದಣ್ಣಾಗಿ ಮೊಡಲಿಂದ ಎತ್ತುಕೊಂಡು
ಸಂಕಮ್ಮ
ಮಾದಪ್ಪನಿಗೆ ಕೈಮುಗಿದು
ಒಂದೊಂದಣ್ಣಾಗಿ ಊಟಮಾಡ್ಕಂಡು ನುಂಗುಬುಟ್ಟಳು
ಮಾದಪ್ಪನ ಪಾದಕ್ಕೆ ನಮಸ್ಕಾರ ಮಾಡ್ದಳು
ಅರಮನೆಯೊಳಗೋಗಿ ಸುಖವಾಗಿ ಮಲ್ಗಿರು ಕಂದ ಅಂದ್ರು
ಮಾದೇವಾ
ನನ್ನ ಬಡಸ್ತಾನ ಬಯಲುಮಾಡಿ
ಅರಮನೆ ಕಟ್ಟಿಸಿಬುಟ್ಟು
ಮಕ್ಕಳ ಭಾಗ್ಯ ಕೊಟ್ಟುಬುಟ್ಟು
ಕಣ್ಣಿಗೆ ಮರೆಯಾಗಿ ಹೋಗ್ಬುಡ್ತೀರಿ
ನನ್ನ ಗಂಡನಾದ ನೀಲೇಗೌಡ
ಅಸಮಾನುಕಾರ ದುಸುಮಾನುಕಾರ
ಅರಮನೆ ನೋಡಿದ ತಕ್ಷಣವೇ
ನನ್ನ ತುಂಡೇಟು ಮುಂಡೇಟು ಮಾಡ್ತಾರಲ್ಲಪ್ಪ

ನನ್ನ ಹೋಗುವಂತಾ ಪ್ರಾಣಕ್ಕೆ ಗುರುವೆ
ಹೊಣೆಯಾರಪ್ಪ ಮಾದೇವಾs || ಕೋರಣ್ಯ ||

ಸಂಕಮ್ಮ
ಕಂದ ಮುಂದೆ ಬರುವಂತಾ ಕಷ್ಟ
ಈಗಲೇ ಕೇಳ್ತಾ ಇದ್ದೀಯಲ್ಲಾ ಮಗಳೆ
ನಿನ್ನ ಗಂಡನಾದ ನೀಲೇಗೌಡ
ಬಹು ಕೋಪಿಷ್ಟ ಮನುಷ್ಯ
ಅದಕ್ಕೊಂದು ಉಪಾಯಾ ಹೇಳ್ತಿನಿ ಕೇಳು ಮಗಳೆ
ನಡಿಯಮ್ಮ ಕಂದ ಅಂತೇಳಿ
ಅರಮನೆಗೆ ಕರ್ಕೊಂಡೋದ್ರು
ಅರಮನೆಯಲ್ಲಿ ಪಟ್ಟೆ ಮಂಚದಮ್ಯಾಲೆ
ಸುಖವಾಗಿ ಮಲಗಿರು ಕದವನ್ನೂ ಮುಚ್ಚುಗೊಂಡು
ಒಳಬಾಗಿಲಲ್ಲಿ ಒಂದು ಚೇರಿನಮ್ಯಾಲೆ
ಮಾಯದ ಗೊಂಬೆ ಮಾಡಿ
ನಿನ್ನ ರೂಪು ರೇಖೆ ಹಾಕಿ ಕೂರುಸ್ತಿನಿ ಕಂದ
ಪಕ್ಕದಲ್ಲಿ ಒಂದು ಚೆಂಬುನಲ್ಲಿ ನೀರು ಮಡುಕ್ತೀನಿ
ನೀಲೇಗೌಡ ಬರ್ತನೆ ಕ್ವಾಪದಲ್ಲಿ
ಬಂದು ನಾಲ್ಕೈದು ಸಾರಿ ಕೂಗ್ತಾನೆ
ಎದ್ದು ತೆಗಿಬ್ಯಾಡಾ ಕಂದಾ
ಕ್ವಾಪದಲ್ಲಿ ಕೂದಂತ ಮೂಗು ಶಾಂತಿಯಲ್ಲಿ ಬರೋದಿಲ್ಲ
ಕೂಗುಬುಟ್ಟು ಕ್ವಾಪದಲ್ಲಿ ಕದವನ್ನು ವದ್ದುಬುಡ್ತನೆ
ಕದ ತುಂಡೇಡು ಮುಂಡೇಡು ಎರಡು ಬಾಗವಾಗಬುಡ್ತದೆ
ಚೇರಿನ್ ಮೇಲಿರುವ ಗೊಂಬೆ ನೋಡ್ಬುಟ್ಟು
ಮಾತುಕತೆ ಒಂದೂ ಆಡೂದಿಲ್ಲ
ಗೊಂಬೆಗೆ ಏಟ್ ಹೊಡದ್ ಬುಡ್ತನೆ ಕತ್ತಿಯೊಳಗೆ
ಏಟಿಗೊಂದು ತುಕ್ಕುಡವಾಗಿ
ಮುಂಡ ಒಂದು ಕಡೆ ರುಂಡ ಒಂದು ಕಡೆ ಉಳ್ಳೋಗಿ
ಆ ಮುಂಡದಲ್ಲಿ ರಕ್ತ ಕೋಡಿಕಟ್ಟಿ ಹರಿತದೆ ನನ ಕಂದ
ನಿನ್ನ ಗಂಡನಾದ ನೀಲೇಗೌಡನ ಕಣ್ಣಿಗೆ
ಅಂಜನೆ ಹೊಡೆದಪ್ಪಂದವಾಗಿ ಮೋರ್ಚೆ ಬಂದುಬಿಟ್ಟು
ಅಯ್ಯೋ ಭಗವಂತ
ನನ್ನ ಮಡದಿ ತಪ್ಪು ನೆಪ್ಪು ಒಂದೂ ಕೇಳಲಿಲ್ಲ
ಒಂದು ಮಾತೂ ಕೊಡ ಆಡಲಿಲ್ಲ
ಅಂದವಾದ ಮಡದಿ ಆರುತಿಂಗ್ಳು ಬಿಟ್ಟೋದ್ನಲ್ಲ ಗುರುವೆ
ನನ್ನ ಮಡದಿ ಪ್ರಾಣ ಹೋಗ್ಬುಡ್ತು
ನಾನು ಕೂಡ ಇಲ್ಲಿ ಪ್ರಾಣ ಬುಡುಬೇಕಂತೇಳಿ
ಕತ್ತಿ ಎತ್ತಿ ಹೆಗಲ ಮೇಲೆ ಇಡತಾನೆ
ಆವಾಗ ಬಂದು ಮುಂಗೈ ಹಿಡುಕೋ ಕಂದ

ನಿನ್ನ ಗಂಡ ಮಾಡುವ ಗಾಡುಗರಿದ್ಯಾ
ನೋಡುವೆನೊಂದರಗಳಿಗೇs || ಕೋರಣ್ಯ ||

ಮಚ್ಚುಮಲೆ ಮಾದಪ್ಪ ನಿಮಗೆ
ಮಂಜುನಲ್ಲಿ ಶಿವ ಪೂಜೆಗಳೋ
ಮರಳಿಬಂದ ಮಾದಪ್ಪ ನಿಮಗೆ
ನೆರಳಲ್ಲಿ ಗದ್ದುಗೆಯೋ

ಸಂಕಮ್ಮನಿಗೆ ಬುದ್ಧಿಹೇಳಿ ಪಟ್ಟೆ ಮಂಚದ ಮೇಲೆ ಮಲಗಿಸಿಬುಟ್ಟು
ಮಾದೇವಾs
ಆವಾಗಲೀಗ ಒಳಭಾಗದಲ್ಲಿ
ಒಂದು ಕುರ್ಚಿಮ್ಯಾಲೆ ಮಾಯದ ಗೊಂಬೆಮಾಡಿ
ಸಂಕಮ್ಮನ ರೂಪು ರೇಖೆಯಾಗಿ
ತಲೆತುಂಬ ಸೆರಗ್ಹಾಕಿ ಛೇರಿನ ಮೇಲೆ ಗೊಂಬೆ ಕೂರಿಸುಬುಟ್ಟು
ಪಕ್ಕದಲ್ಲಿ ಒಂದು ಚೆಂಬು ಮಡುಗುಬುಟ್ಟು
ಕದವನ್ನೂ ಮುಚ್ಚುಕೊಂಡು ಮಲಗು ಕಂದ
ಎಂದು ಹೇಳಿ ಸಂಕಮ್ಮನನ್ನು ಮಲಗಿಸುಬುಟ್ಟು
ಆವಾಗಲೀಗ
ಅದೇ ಆಲೇಸ್ತ್ರೀ ಕೊಳಕ್ಕೆ ಬಂದು
ಹೊನ್ನರಳ್ಳಿ ಮರದ ಮ್ಯಾಲೆ ಕುಳಿತಿದ್ದ
ವಾಸುದೇವನ ಕರೆದ್ರು
ವಾಸುದೇವ ಬಾರಯ್ಯ ಅಂತ್ಹೇಳಿ ಕರಿದ್ರು
ಆಲೇಸ್ತ್ರೀಯೊಳಗೆ ಒಂದು ಚಂಬಿನಲ್ಲಿ ನೀರು ತಗುದ್ರು
ಪನ್ನೀರು ಚೆಂಬಿನಲ್ಲಿ
ಏಳುಮಲೆ ವಿಭೂತಿಯನ್ನು ಮಂತ್ರಿಸಿ
ಆ ಪನ್ನೀರಿಗಾಕಿ
ಇಗೋ ನೋಡಪ್ಪ ವಾಸುದೇವಾ
ಆ ವಜ್ಜರಗಿರಿ ಮಲೆವೊಳಗೆ
ಹೆಜ್ಜೇನು ಬೇಟೆ ಮಾಡ್ತಾರೆ ಹಿಂಡು ಸ್ವಾಲುಗುರು
ಹಿಂಡು ಸ್ವಾಲುಗರೊಳಗೆ ನೀಲೇಗೌಡ ಅಂದ್ರೆ
ಅವನ ಕಣ್ಣೂ ನೋಡಿದ್ರೆ ಕೆಂಪಾಗಿದೆ ಕೆಂಡಗಣ್ಣೂ
ಬಹಳ ಕೋಪಿಷ್ಟ ಮನುಸ
ಕೆಂಪಾಗಿದ್ದಾನೆ
ಅಲ್ಲಿರೋ ಗುಂಪಿಗೆಲ್ಲ ಉದಯವಾದ ಆಳು
ಅವನೇ ನೀಲೇಗೌಡಾ
ಅವನ ಮಂಡೆ ಮೇಲೋಗಿ ಪನ್ನೀರು ಪಿಡಿದು ಬಿಡಪ್ಪ
ಮಡದಿಮ್ಯಾಲೆ ಅವನಿಗೆ ಗ್ಯಾನವಾಗಿಬರ್ಲ್ಲಿ ಅಂತೇಳಿ
ವಾಸುದೇವನ ಕೈಲಿ ಪನ್ನೀರು ಕೊಟ್ಟು ಮಾದಪ್ಪ
ವಜ್ಜುರುಗಿರಿಮಲೆಗೆ ಕಳಿಸುಬುಟ್ಟು

ಅಪ್ಪ ಆಲಳ್ಳದ ಹಾದಿಗುಂಟ
ಆದಿಗುರು ದಯ ಮಾಡವರೇs || ಕೋರಣ್ಯ ||
ಏಳು ಮಲೆಮಾದಪ್ಪ ನಿಮಗೆ
ಎತ್ತಿದೆವು ಮಂಗಳಾರತಿಯಾ
ಧೂಪ ಸಾಮ್ರಾಣಿ ಹೊಗೆ
ಮಂಜು ಕವಿದಾವೋ

ಏಳು ಮಲೆ ಕೈಲಾಸದಲ್ಹೋಗಿ ನನ್ನಪ್ಪ
ಬಲಗಡೆ ಆಲಂಬಾಡಿ ಬಸವಣ್ಣ
ಅಂತರಗಂಗೆ ಅರುವಾನದಲ್ಲಿ ಒಂಟು ಜಡೆ ಶೇಷಣ್ಣ
ಅಂತರಗಂಗೆ ಪಕ್ಕದಲ್ಲಿ ಸಾಲೂರು ಮಠದ ಗುರುಗಳು
ಬೆನ್ನಿಂದೆ ಬ್ಯಾಡರ ಕಣ್ಣಪ್ಪ
ಬೇಡಗಂಪಣದ ಮಲೆಯೊಳಗೆ
ಹೆನ್ನೆರಡಂಕಣ ಚಜ್ಜೇ ಗುಡಿಯೊಳಗೆ
ತಪಸ್ಸು ಮಾಡಿಕೊಂಡು
ಪೂಜೆ ನೈವೇದ್ಯ ತೆಗೆದುಕೊಂಡು ಕುಂತಿದ್ದಾರ‍ೆ
ಈ ಕಡೆ ಶಿವಶರಣೆ ಸಂಕಮ್ಮ ಅರಮನೆಯೊಳಗೆ ಮನುಗಿದ್ದಾಳೆ
ಈ ಕಡೆ ಹೊನ್ನರಳಿ ಮರದ ವಾಸುದೇವ ತಕ್ಕಂಡೋಗಿ
ಆ ವಜ್ಜುರಗಿರಿ ಮಲೆಯೊಳಗೆ
ಸ್ವಾಲುಗರ ಗುಂಪನ್ನೆಲ್ಲ ಓಡಾಡಿಕೊಂಡು ನೋಡ್ದ
ವಾಸುದೇವನ್ಗೆ ಗೊತ್ತಾಗೋದಿಲ್ಲ
ನೀಲೇಗೌಡ ಬಂಡೆಮ್ಯಾಲೆ ಕುಂತಗಂಡು
ಹೆಜ್ಜೇನು ತುಪ್ಪ ಕೀಳ್ತಾಯಿದ್ದ
ನೋಡುಬುಟ್ಟು ವಾಸುದೇವ
ಇವನೇ ನೀಲೇಗೌಡ ಅಂತೇಳಿ
ಅವನ ಮಂಡೆ ಮ್ಯಾಲೆ ಪನ್ನೀರು ಪಿಡಿದುಬುಟ್ರು
ಓಹೋ ಈವತ್ತು ನನ್ನ ಮಂಡೆ ಮ್ಯಾಲೆ ಪನ್ನೀರ್ ಬೀಳ್ತಾ ಇದೆ
ಮೇಘದಲ್ಲಿ ಮೋಡಕಟ್ನಿಲ್ಲ ಗುಡುಗುನಿಲ್ಲ ಮಿಂಚುನಿಲ್ಲ
ನನ್ನ ಮಡದಿಯಾದ ಸಂಕೆಣ್ಣು
ಏನಾಗಿರುವಳೋ
ಆರು ತಿಂಗಳಾಯ್ತು ನಾನು ಸೊಪ್ಪಿನಗುಳ್ನಲ್ಲಿ ಬಿಟ್ಟುಬಂದು
ಯಾವೋನು ಕೈವಸವಾಗಿದ್ದಾಳೋ
ಮಂತ್ರಿ ಮಗನೋ ಪರದಾನಿ ಮಗನೋ
ಕೊಳ್ಳೆಗಾಲದ ತಹಸೀಲ್ದಾರನೋ
ಕೊಯಮುತ್ತೂರು ಜಿಲ್ಲೇದಾರನೋ
ಇಲ್ಲ ನನ್ನಂತ ಸ್ವಲುಗನ ಕೈವಾಸವಾಗುಬುಟ್ಟವಳೆ
ಇದಕ್ಕೋಸ್ಕರ ಮಂಡೆಮ್ಯಾಲೆ ಪನ್ನೀರು ಬೀಳ್ತಾ ಇದೆ ಅಂತೇಳಿ

ಅವನು ಹೆಜ್ಜೇನು ಮಲೆಗೆ ಹತ್ತವನೇ
ಹೆಜ್ಜೇನು ಬೇಟೆ ಮಾಡವನೇ
ಕಿರುಜೇನು ಮಲೆಗೆ ಹತ್ತವನೇ
ಕಿರುಜೇನು ಬ್ಯಾಟೆ ಮಾಡವನೇ
ಕಾಡುಬಾಳೆ ತರುದವನೇ
ಕಟ್ಟೆಯ ನೀರ ಮೊಗುವನೆರೇ
ಬಿದೂರಕ್ಕಿ ಕೂದ್ಯವನೇ
ಬೆಲ್ಲುಗೆಣಸ ಕಿತ್ತವನೇ
ಅಲಸುಂಡೆ ಹಣ್ಣ ಆದವನೇ
ಬ್ಯಾಲದ ಹಣ್ಣ ಆದವನೇ
ತನ್ನ ಬೇಟೆ ಮಾಡವನೇ
ಕುಲದವುರ ಬಳಿಗೆ ಅಂದವುನೇs || ಕೋರಣ್ಯ ||

ಎಲ್ಲಾ ಬ್ಯಾಟೆ ಆಡುಕೊಂಡು ಬಂದು
ಕುಲುದೋರು ಮುಂದೆ ನಿಂತುಗಂಡಾ
ಏಳೂರು ಗಡಿಕಾರ್ರು ಏಳೂರು ಕುಲಸ್ತ್ರು
ಎಲ್ಲಾ ಒಂದೇ ಜಾಗದಲ್ಲಿ ಪದಾರ್ಥನೆಲ್ಲೆ ಗುಡ್ಡೆ ಹಾಕಿದ್ರು
ಏಳೂರು ಗಣೆಕಾರರ ಮುಂದೆ ನೀಲೇಗೌಡ
ತನ್ನ ಬೆನ್ನಿನಲ್ಲಿದ್ದಂತ ಕರಿ ಕಂಬ್ಳಿ ಹಾಸಿಕೊಂಡು
ದೀರ್ಘದಂಡ ನಮಸ್ಕಾರ ಮಾಡ್ದ
ಅಪ್ಪ ಕುಲಸ್ತ್ರೇ ನೀವು ಕಂಡಾಗೆ ನಾನು
ಲಗ್ನ ಮಾಡಿಕಂಡು ಒಂದೋರ್ಷ ತುಂಬ್ನಿಲ್ಲ
ನನ್ನ ಮಡದಿಗೊಸ್ಕರವಾಗಿ
ಬೇರೆ ಮನೆ ಮಾಡ್ಕೊಂಡಿದ್ದಿ
ಬೇರೆ ಮನೆ ಮಾಡ್ಕಂಡು ಒಂದೊರ್ಷ ತುಂಬ್ನಿಲ್ಲ
ನಿಮ್ಮ ಕುಲ ಬಿಡಬಾರ್ದು ಅಂತೇಳಿ
ನನ್ನ ಮಡದಿಯಾದ ಸಂಕೆಣ್ಣ ಸೊಪ್ಪಿನ ದೊಡ್ಡಿಯೊಳಗೆ
ಮಾಳಿಗೆ ಮನೆಯೊಳಗೆ ಒಂದೇ ಒಂದ್ ಪ್ರಾಣಿ ಬುಟ್ ಬಂದಿದ್ದೀನಿ
ಇವತ್ತು ಹೋಗ್ಬುಡ್ತಿನಿ ಆರು ತಿಂಗಳಾಯ್ತು
ನನ್ನ ಭಾಗ ಕೊಟ್ಟು ಬಿಡ್ರಪ್ಪ ಅಂದ
ಈ ಚಿಕ್ಕೆಜಮಾನ್ರು ದೊಡ್ಡೆಜಮಾನ್ರು ಒಪ್ಪುಕಂಡ್ರುನಿಜ
ನೀಲೇಗೌಡ ನಮ್ಮ ಕುಲ ಬಿಡದೆ ಬಂದಿದ್ದಾನೆ
ಕೊಟ್ಟುಬಿಡ್ರಯ್ಯ ಅವನ ಭಾಗವ ಅಂತೇಳಿ
ಎಲ್ಲಾ ಪದಾರ್ಥವನ್ನೂ ಭಾಗ ಮಾಡಿ ಕೊಟ್ಟು ಬಿಟ್ರು
ನೀಲೇಗೌಡ ಎಲ್ಲಾ ಪದಾರ್ಥವನ್ನು ಗ್ವಾಟೇಲಿ ತುಂಬುಕೊಂಡು
ನರಮುರಿ ಜೋಡು ಮೆಟ್ಟುಕೊಂಡ

ಒಂದು ಬಾರಿಯ ಬೆಟ್ಟ ಹತ್ತವನೇ
ಕೆಟ್ಟ ಸೋಲುಗ ನೀಲಯ್ಯಾs || ಕೋರಣ್ಯ ||

ಬಾರಿ ಬೆಟ್ಟದ ಮೇಲೆ ಹತ್ತಿ ನಿಂತ್ಕಂಡು ನೋಡ್ತಾ ಇದ್ದ
ನಾನು ಕಟ್ಟಿದಂತ ಮನೆ ಅರಮನೆಯಾಗೋಗಿದೆ
ಅರಮನೆ ಅನ್ನೋದು ಗೊತ್ತಿಲ್ಲ ಅವನ್ಗೆ
ಯಾವುದೋ ಪಟ್ನ ಅಂತ ಕಾಣ್ತಾ ಇದೇ ಅಂತ
ಆ ಬೆಟ್ಟಾದ ಮ್ಯಾಲೆ ನಿಂತಕಂಡು ನೋಡ್ತಾ ಇದ್ದ
ಮಾದೇಶ್ವರ ಸ್ವಾಮಿ
ಕೆಟ್ಟ ಮುಂಡೆ ಮಗ ಅಸಮಾನುಕಾರ
ಕಾಡುಕಚ್ಚಿ ತಿರುಗಿ ಪ್ರಾಣ ಬುಟ್ಟು ಬುಡ್ತಾನೆ
ಹೆಣ್ಣು ಮಗಳಿಗೆ ಮೊಕತೋರೋದಿಲ್ಲ ಸಂಕಮ್ಮನಿಗೆ ಅಂತೇಳಿ
ಅರಮನೆಮ್ಯಾಲೆ ಒಂದು ಸಣ್ಣ ಸೊಪ್ಪುನ್ ಗುಳ್ ಉಂಟು ಮಾಡುದ್ರು
ನೀಲೇಗೌಡ ದ್ರಿಷ್ಟಿ ಇಟ್ಟು ನೋಡ್ದ
ಹೋಹೋ ನನ್ನ ಮಡದಿಯಾದ ಸಂಕೆಣ್ಣು
ನನ್ನ ಮಂಡೆಮ್ಯಾಲೆ ಪನ್ನೀರು ಬಿದ್ದಿದ್ದು ಗೋಚರವಾಯಿತು
ಅರಮನೆ ಕಟ್ಟಸ್ಕಂಡವಳೆ
ಕೊಳ್ಳೆಗಾಲದ ತಾಸಿಲ್ ದಾರ
ಕೊಯುಮತ್ತೂರು ಜಿಲ್ಲೇದಾರ
ಅವನ ಕೈವಸ ಮಾಡ್ಕಂಬುಟ್ಟವಳೆ
ನನ್ನ ಕೈಗೆ ಸಿಕ್ಕೋದಿಲ್ಲ
ಕೆಟ್ಟ ಮುಂಡೆ ಮಗಳಾ
ನನಗೇನಾದ್ರು ಪಾದುಕ್ಕೆ ಪನ್ನೀರು ತಂದ ತಕ್ಷಣವೇ
ಹೆಜ್ಜೇನು ಕತ್ತೀಲಿ ತುಂಡೇಟು ಮುಂಡೇಟು ಮಾಡಿಬುಡಬೇಕು
ಅವಳ ಕೂಡ ಮಾತಾಡಬಾರದು ಅಂತೇಳಿ
ಈ ಪದಾರ್ಥ ಅವಳಿಗೆ ತಕ್ಕಂಡೋಗಿ ಕೊಡಬಾರದು ಅಂತೇಳಿ
ಎಲ್ಲಾನೂ ಬಿಸ್ಸಾಡುಬುಟ್ಟ
ಕಾಡುಬಾಳೆ ಕಟ್ಟಿನೀರು ಬಿದುರಕ್ಕಿ ಬೆಲ್ಲ ಗೆಣಸು
ಅಲಸುಂಡೆ ಹಣ್ಣು ಮಾಗಳಿಬೇರು ಬ್ಯಾಲದ ಹಣ್ಣು
ಬಿಸಾಡು ಬುಟ್ಟ
ಹೆಜ್ಜೇನು ತುಪ್ಪ ಕಿರುಜೇನು ತುಪ್ಪ
ಸತ್ಯಮಾಡಿಸ್ ಬೇಕು ಅಂತೇಳಿ ಗ್ವಾಟಿ ಒಳಗಿರಿಸಿಕೊಂಡಾ

ಅಯ್ಯ ಹೆಜ್ಜೇನು ಕತ್ತಿ ತೆಗೆದವನೇ
ತುರುಗಲ್ ಮ್ಯಾಲೆ ಮುಸದವನೇ
ಕೆಂಜರುಗಣ್ಣ ಬಿಟ್ಟವನೇ
ಮತಿಯ ಸೋಲುಗ ನೀಲಯ್ಯ
ಅಟ್ಟಬೆಟ್ಟಾ ಅತ್ತವನೇ
ಕೆಟ್ಟ ಸೋಲುಗ ನೀಲಯ್ಯ
ಕಾಣ್ದಕಮ್ರಿ ಇಳಿದವನೇ
ಮಲೆಯ ಸೊಲುಗ ನೀಲಯ್ಯ
ಅವ್ನು ಮೂರು ತಿಂಗಳು ನಡಿಯಾ ಪಯಣ
ಮೂರೇ ದಿನದಲ್ಲಿ ಬಂದವನೇs || ಕೋರಣ್ಯ ||

ಹೆಜ್ಜೇನು ಕತ್ತಿ ಕೈಲಿಡುಕೊಂಡು
ಕಾಕು ತೂಕನೆ ಬಂದ
ಅರಮನೆ ಮುಂಭಾಗದಲ್ಲಿ ನಿಂತುಕೊಂಡ
ಅರಮನೆ ಮೂರು ಬಳಸು ಬಂದ
ಯಾರೂ ಇಲ್ಲ
ಈಶಾನ್ಯ ಬಾಗಲು ಬಂದು ಬಾಗಲು ಮಡುಗವರೆ ಮಾದಪ್ಪ
ಈಶಾನ್ಯ ಬಾಗಲಲ್ಲಿ ನಿಂತುಕೊಂಡ ಕೋಪದಲ್ಲಿ

ಅಯ್ಯ ಮಡದಿ ಮಡದಿ ಎಂದವನೇ
ತನ್ನ ಮಡದಿಯನಾದರು ಕೂಗವನೇ
ಸಂಕೆಣ್ಣೆ ಸಂಕೆಣ್ಣೆ ಎಂದು
ಮೂರು ಸಾರಿ ಕೂಗವನೇs || ಕೋರಣ್ಯ ||

ನಾಲ್ಕೈದು ಸಾರಿ ಕೂಗಿದ
ಸಂಕಮ್ಮ ಕದ ತಗಿಲಿಲ್ಲ
ಮಾದೇಶ್ವರನ ಅಪ್ಪಣೆಯಂತೆ
ಪಟ್ಟೇಮಂಚದ ಮೇಲೆ ಮಲಗಿದ್ದಾಳೆ ಹೆಣ್ಮಗಳು
ನೀಲೇಗೌಡನಿಗೆ ಕೋಪ ಬಂದುಬುಡ್ತು
ಕೆಟ್ಟ ಮುಂಡೆ ಮಗ ಯಾರೋ
ಮಂತ್ರಿಮಗ ಪರದಾನಿಮಗನ್ನ ಕಟ್ಟುಕೊಂಡು
ಪಟ್ಟೇ ಮಂಚದ ಮ್ಯಾಲೆ ಮನುಗವಳೇ
ನಾನು ಕೂಗಿದರು ಕದ ತಗಿಲಿಲ್ಲ ಅಂತೇಳಿ

ಅಯ್ಯ ರುದ್ದರುಗೋಪ ತಾಳವನೇ
ಜಗ್ಗಿಸಿಕದವಾ ಒದ್ದವನೇs || ಕೋರಣ್ಯ ||