ರುದ್ದುರುಗೋಪದಲ್ಲಿ ಕದವನ್ನು ಒದ್ದುಬಿಟ್ಟ
ಎರಡು ಭಾಗವಾಗುಬುಡ್ತು ಬಾಗಿಲು
ಛೇರಿನ ಮ್ಯಾಲೆಗೊಂಬೆ ಕುಂತಿತ್ತಲ್ಲ
ಸಂಕಮ್ಮನ ರೂಪವಾಗಿ
ಮಾತುಕತೆ ಒಂದೂ ಆಡ್ನಿಲ್ಲ
ಛೇ ಕೆಟ್ಟ ಮುಂಡೆ ಮಗಳೆ
ನೀನು ಅಹಂಕಾರದಲ್ಲಿ ಕೂಂತಿದ್ಯಾ ಅಂತೇಳಿ
ಅಯ್ಯ ಹೆಜ್ಜೇನುಕತ್ತಿ ಎಳದವನೇ
ಗೊಂಬೆ ಶಿರಸಕ್ಕೆ ಹೊಡೆದವನೇs || ಕೋರಣ್ಯ ||

ಹೆಜ್ಜೆಣು ಕತ್ತಿಯನು ಎಳೆದು
ಗೊಂಬೆ ಶಿರಸಕ್ಕೆ ಯಾವಾಗ ಎಳೆದು ಹೊಡೆದ್ನೋ
ಗೊಂಬೆ ಶಿರಸ ರುಂಡ ಒಂದು ಕಡೆ ಮುಂಡೊಂದ್ಕಡೆ ಬಿದ್ದೋಯ್ತು
ಎರಡು ತುಕುಡವಾಗಿ
ಆ ಮುಂಡದಲ್ಲಿ ರಕ್ತ ಕೋಡಿ ಕಟ್ಟಿ ಹರಿತಾ ಇತ್ತು
ನೀಲೇಗೌಡ ಕತ್ತಿ ಹಿಡಕಂಡು ನೋಡ್ದ
ಕಣ್ಣಿಗೆ ಅಂಜನೆ ಹೊಡೆದಪ್ಪಂದವಾಯ್ತು
ಮೂರ್ಚೆ ಬಂದುಬಿಡ್ತು
ಪರಮಾತ್ಮ ನನ್ನ ಕೋಪ ಅನ್ನುವಂತಾದ್ದು ನನ್ನ ಪಾಪಿ ಮಾಡ್ಬುಡ್ತು
ನನ್ನ ಮಡದಿಯಾದ ಸಂಕೆಣ್ಣ
ಅಂದವಾದವಳು ಚಂದವಾದವಳು
ಆರು ತಿಂಗಳ ಬಿಟ್ಹೋಗಿ ಯಾರು ಮಾತಾಡ್ನಿಲ್ಲ
ಏಟಗೊಂದು ತುಕುಡ ಕಡಿದಾಕುಬುಟ್ಟೇ
ಇನ್ನು ನಾನೊಬ್ಬನೇ ಹೋಗಬಾರದು ನಮ್ಮ ದೊಡ್ಡಿಗೆ
ಹುಟ್ಟಿದ ಮರ ಹುಟ್ಟಿದಾಗೇ
ನನ್ನ ಮಡದಿ ಪ್ರಾಣಬಿಟ್ಟ ಜಾಗದಲ್ಲಿ
ನಾನು ಕೂಡ ಪ್ರಾಣ ಬಿಟ್ಟುಬಿಡೋಣ ಅಂತೇಳಿ

ಅಯ್ಯ ಹೆಜ್ಜೇನು ಕತ್ತಿ ಎತ್ತವನೆ
ತನ್ನ ಶಿರುಸದಮ್ಯಾಲೆ ಮಡುಗವನೇs || ಕೋರಣ್ಯ ||

ಹೆಜ್ಜೇನು ಕತ್ತೆಯನ್ನೆ ಎತ್ತಿ ತನ್ನ ಶಿರಸದ ಮ್ಯಾಲೆ ಮಡಗಿದ
ಸಂಕಮ್ಮ ಪಟ್ಟೆಮಂಚದಿಂದ
ದಡಾದಡನೆ ಇಳಿದು ಓಡಿಬಂದು
ಗಂಡನ ಮುಂಗೈ ಹಿಡಕೊಂಡಳು
ಯಜಮಾನರೇ ಯಜಮಾನರೇ
ಅಯ್ಯ ಪಾಪನಾದರು ಮಾಡಬ್ಯಾಡಿ
ಪಾದ ಹೊತ್ತೇನು ಯಜಮಾನಾs || ಕೋರಣ್ಯ ||

ಶಿವ ಶಿವೋ ಯಜಮಾನ ಮೋಸ ಮಾಡಬ್ಯಾಡಿ ಅಂತ ಬಂದ್ಲು
ನೀಲೇಗೌಡ ಮ್ಯಾಲಕೆ ಅಂತು ನೋಡ್ದ
ಬಾರಿಕೋಅ ಬಂದು ಬುಡ್ತು
ಆವಾಗ ತಪ್ಪು ನೆಪ್ಪು ಒಂದೂ ಕೇಳಲಿಲ್ಲ

ಅವಳ ಮುಂದಲೆನಾದ್ರೆ ಹಿಡಿದವ್ನೆ
ಮೇಲಕ್ಕೆ ಎತ್ತಿ ನಿಲ್ಸವನೇ
ಅವಳ ಮುಂದಲೆನಾರೆ ಹಿಡುದವನೇ
ಮೂರುಬಾರಿ ತಿರುಗವನೇs || ಕೋರಣ್ಯ ||

ಮುಂದಲೆಯನ್ನ ಹಿಡಿದು ಮೂರು ಬಾರಿ ತಿರುಗಿ
ಕಣದಲ್ಲಿ ಹುಟ್ಟು ಕಟ್ಟುಕಂಡು ಬತ್ತ ಬಡುದಂಗೆ
ಮೂರು ಸಾರಿ ತಿರುಗಿ ಒಂದು ಕಡೆ ಬಿಸಾಡಿ ಬಿಟ್ಟ
ಕೆಟ್ಟ ಮುಂಡೆ ಮಗಳೆ ಇಂಥಾ ಅರಮನೆ ಕಟ್ಟಿಸ್ಕಂಡಿದ್ದೀಯೆ ಅಂತ
ಸಂಕಮ್ಮ
ಅಸ್ಸೋ ಉಸ್ಸೋ ಅಂತ ಎದ್ದು ಮ್ಯಾಲಕ್ಕೆ ಕೂತುಕಂಡು
ಅಯ್ಯೋ ಯಜಮಾನರೆ ನನ್ನ ಪ್ರಾಣಾತ್ಮ ಮಾಡಬ್ಯಾಡಿ
ನೀವು ಮಾಡಿದಂತ ಅಲೆ ಕೊಲೆಯೊಳಗೆ
ಬಿಸ್ಲಲ್ಲಿ ಒಣಗಿ ಗಾಳಿಯಲ್ಲಿ ನೆಂದುಲ್ಲಿ
ಕೋಳಿಯಾಗಿ ಕೂಗಿ ನಾಯಿಯಾಗಿ ನಳ್ತಾಯಿದ್ದಿ
ನಿನ್ನ ಮನೆದೇವ್ರು ಕುಲದೇವ್ರು ಅಂದ್ರೆ
ಬೆರಳ್ ತೋರಿಸಿದ್ರೆ ಹಸ್ತು ನುಂಗುವಂತ ದೇವ್ರು
ಮೇಲಕೋಟೆ ಚಲುವರಾಯ
ತಿರುಪ್ತಿ ವೆಂಕಟ್ರಮಣ ಸ್ವಾಮಿ
ಕನ್ನಂಬಾಡಿ ಚನ್ನಗೋಪಾಲರಾಯ
ಅಕ್ಕಮ್ಮ ಚಿಕ್ಕಮ್ಮ ಚಿಕ್ಕಮ್ಮ ಚಿಕ್ಕದೇವಿ
ಬದ್ದರ ಬನುಮಕಾಳಿ ಬನ್ನೂರು ಯಾಮಾದ್ರಿ
ಮೂಗೂರು ತಿಬ್ಬಾದೇವಿ
ಇಂತಾದೇವ್ರು ಕೂಡ ನನ್ನ ಕಷ್ಟಕಾಯನಿಲ್ಲ
ನನ್ನ ಕಷ್ಟವಾಗಿರುತಕ್ಕಂತ್ತಾದ್ದು
ನನ್ನಪ್ಪನ ಮನೆದೇವ್ರುಗೆ ಕೈ ಮುಗುದಿ
ಕಟ್ಟ ಕಡೆಯಲ್ಲಿ
ನನ್ನಪ್ಪನ ಮನೇದೇವ್ರು ಮಲೆಮಾದೇಶ್ವರ ಬಂದು
ನನ್ನ ಕಷ್ಟನ್ನೆಲ್ಲ ಪರಿಹಾರ ಮಾಡಿ
ಬಡಸ್ತಾನ ಬಯಲು ಮಾಡಿ ಸಿರುಸ್ತಾನ ಉಂಟುಮಾಡಿ
ಈ ಅರಮನೆ ಭಾಗ್ಯವನ್ನು ಕೊಟ್ಟುಬುಟ್ಟು
ನನ್ನ ಬಂಜೆ ಅನ್ನುವಂತಾ ಸ್ವರನ ತಪ್ಸಿದ್ದಾರೆ
ಮಕ್ಕಳ ಭಾಗ್ಯವನ್ನು ಪಿಂಡ ಪ್ರಸಾದ ಕೊಟ್ಟೋಗಿದ್ದಾರೆ

ನನಗೆ ಪಾಪನಾದರು ಮಾಡಬೇಡ
ಪಾದ ಹೊತ್ತೇನು ಯಜಮಾನಾs || ಕೋರಣ್ಯ ||

ಛೇ ಕೆಟ್ಟ ಮುಂಡೆ ಮಗಳೆ
ಯಂತಾ ಮಾತ್ ಹೇಳ್ತಾಯಿದ್ದೀಯೆ ಮಡದಿ
ಯಲ್ಲವನ್ನೂ ಬಿಟ್ಟು ದೇಶದಲ್ಲಿರುವಂತಾ ರಾಜ್ರೆ
ಯಾವ ಜನಗಳ್ನೂ ಬಿಟ್ರು
ಆ ಕಾಡ್ನಲ್ಲಿ ತಪಸ್ಸು ಮಾಡುವಂತ ಜಂಗುಮನ್ಮೇಲೆ ಹೇಳ್ತಾಯಿದ್ದೀಯೆ
ಆ ಸನ್ಯಾಸಿ ಬೇಡಗಂಪಣದವರ ಕಟ್ಕೊಂಡು
ಮನೆಮನೆಯಲ್ಲಿ ಹಿಟ್ಟಿನ ಭಿಕ್ಷ ಮಾಡಿಕಂಡು
ಆ ಸೊಪ್ಪುನ ಜೋಪುಡಿಯೊಳಗೆ
ದಾಸೋಹ ಮಠ ಇಟ್ಟುಕೊಂಡು
ಸಾಲೂರು ಮಠ ಸಾಲೂರುಮಠ ಅಂತೇಳಿ
ದಾಸೋಹ ಮಾಡ್ತಾಯಿದ್ದಾನೆ
ಮಾದೇಶ್ವರ ಅರಮನೆ ಕಟ್ದ ಅಂತಾ ಹೇಳ್ತಾಯಿದ್ದಿಯಲ್ಲ
ಮಾದೇಶ್ವರ ಗಾರೆ ಕೆಲಸ ಮಾಡಬಲ್ಲನಾ
ಇಲ್ಲ ಕಂಟ್ರಾಕ್ಟ್ ಮಾಡಬಲ್ಲ
ಇಲ್ಲ ದುಡ್ಡು ಮಡ್ಗಿದನಾ ಏನಾದ್ರು ಗುಂಡಿ ಒಳಗೆ ತುಮ್ಬಿ
ಕೆಟ್ಟ ಮುಂಡೆ ಮಗಳೇ
ಮಾದೇಶ್ವರನ ಮೇಲೆ ಹೇಳುಬ್ಯಾಡ
ಯಜಮಾನರೇ
ನಿಮ್ಮ ಪಾದದ ಸಾಕ್ಷಿಯಾಗಿ
ಆ ಸೂರ್ಯ ಚಂದ್ರಾದಿಗಳ ಪಾದು ಸಾಕ್ಷಿಯಾಗಿ
ಭೂಮಿತಾಯಿಯಾಣೆ
ನನ್ನ ತಂದೆ ತಾಯಿಗಳ ಪಾದದಾಣೆ
ಮಾದಪ್ನೆ ನನ್ನ ಬಡಸ್ತಾನ ಬೈಲುಮಾಡ್ದ ಅಂದಳು
ಹಾಗಾದ್ರೆ ನಿನ್ನ ಮಾದಪ್ಪ ಅಂತಾ ಸತ್ಯವಂತನ
ಹೌದು ಯಜಮಾನ ಅಂದಳು
ನಿಮ್ಮ ಮಾದಪ್ಪ ಸತ್ಯವಂತನಾದರೆ
ಹೇಳ್ತಾಯಿದ್ದೀನಿ ಕೇಳುಮಡದಿ

ಮಡದಿ ಹೇಳಿದ್ದು ಸತ್ಯ ಮಾಡೇಣ್ಣೆ
ನಿನ್ನ ಪ್ರಾಣಕ್ಕೆ ಬುದ್ಧಿ ಹೇಳೆಣ್ಣೆs || ಕೋರಣ್ಯ ||

ನಿನ್ನ ಅಪ್ಪನ ಮನೆ ಮಾದೇಶ್ವರಾ
ಸತ್ಯವಂತನಾದರೆ
ನನ್ನ ಸತ್ಯಮಾಡು ಅಂದ್ರು
ಹೇಳಿ ಯಜಮಾನ ಯಾವ ಸತ್ಯ ಮಾಡ್ಲಿ ಅಂದಳು
ನೋಡು ಮಡ್ದಿ ಯಾವ ಸತ್ಯ ಅಂತ ಮಟ್ಟಿಗೆ ಮಾತಾಡ್ತಿದ್ದಿಯೆ
ನನ್ನ ನಡುಮನೆ ಮುಂಭಾಗದಲ್ಲಿ ಮೂರು ಕಲ್ಲನ್ನು ಮಡುಗಿ
ಒಲೆಯನ್ನು ಹಸ್ಸಿಬುಡ್ತೀನಿ
ಕೊಪ್ಪರಿಕೆಯನ್ನು ಮಡುಗ್ತಾ ಇದ್ದೀನಿ ಕಬ್ಬಿಣದ ಕೊಪ್ಪುರಿಗೆಯ
ನನ್ನ ಗ್ವಾಟೆಯೊಳಗಿರುವಂತಾದು
ಮೂರು ಕಂಡುಗ ಹೆಜ್ಜೇನುತುಪ್ಪ ಕಿರಿಜೇನುತುಪ್ಪ
ಊದುಬುಟ್ಟು ಬೆಂಕಿ ಅಚ್ಚುತೀನಿ
ಹೆಜ್ಜೇನು ತುಪ್ಪಕಾದು ಉಗೋ ಅಂದು ಬೇಯುವಾಗ
ಉಕ್ಕುನ ಮೂರು ಗುಂಡು ಉರುಳುಸ್ತಿನಿ
ಗುಂಡು ಕಾದು ಗುಡುಗುವಾಗ
ಸಂಕೆಣ್ಣೆ ಮೂರುಸಾರಿ ಮೂರುಳ್ಳು ಮುಳುಗಿ
ಮೂರು ಗುಂಡನ್ನ ಈಚೆಗೆ ತಂದು ಮಡಗಿ
ನಿನ್ನ ಪ್ರಾಣ ಹೋಗದೆ ನನ್ನ ಪಾದಕ್ಕೆ ಶರಣು ಮಾಡಿದ್ರೆ

ನಿನ್ನ ಅಪ್ಪನ ಮನೆಯ ಮಾದೇವನ ಸತ್ಯ
ಒಪ್ತೀನಿ ಕಾಣೋ ಸಂಕೆಣ್ಣೆs || ಕೋರಣ್ಯ ||

ಪಾತಾಳ ಶಿವಗಂಗೆಗೋಗಿ
ಧೂಪದಲ್ಲಿ ಸೇವೇಮಾಡಿ
ಪಾಪವಿದ್ದರೆ ಪರಿಹಾರ ಮಾಡೋ
ಮಾಯ್ಕಾರ ಮಾದೇವಾ

ಸಂಕಮ್ಮ ಗಂಡನ ಮಾತು ಕೇಳ್ದಳು
ಅರಮನೆಯೊಳಗೆ ಕುಳ್ತುಕೊಂಡು ದುಃಖ ಮಾಡ್ತಳೆ
ಮಾದಪ್ಪ ಮಾಯ್ಕಾರ ಗಂಡ
ನನ್ನಪ್ಪನ ಮನೆದೇವ್ರೇ
ಒಂದು ಗುಂಡಲ್ಲ ಎರಡು ಗುಂಡಲ್ಲ
ಮೂರುಗುಂಡು ಹೆಜ್ಜೇನು ತುಪ್ಪ
ಉಗುಬಂದು ಬೇಯುವಾಗ
ಒಂದು ಸಾರಿ ಮುಳುಗುದಾಗಲೇ
ನಾನು ಸುಟ್ಟು ಬಸ್ಮವಾಗ್ತೀನಿ ತಂದೆ

ನನ್ನ ಹೆಣ್ಣು ಪ್ರಾಣಿಯಗೋಳು ನಿಮಗೆ
ಎಲ್ಲರುವಾಯ್ತು ಮಾದೇವಾs || ಕೋರಣ್ಯ ||

ಶಿವಶರಣೆ ಅರಮನೆಲ್ಲಿ ಕುಂತುಕೊಂಡು
ಮಾದಪ್ಪನಿಗೆ ಕರವೆತ್ತಿ ಕೈಮುಗುದಳು
ಅರಮನೆಯಲ್ಲಿ ಅತ್ತಂತ ಕಣ್ಣೀರು
ಆ ನನ್ನಪ್ಪಾಜಿಗೆ ಏಳುಮಲೆ ಕೈಲಾಸದಲ್ಲಿ ಅರುವಾಯ್ತು
ಏಳುಮಲೆ ಕೈಲಾಸ
ಧಗಧಗನೆ ಕತ್ತಿ ಬಗಬಗನೆ ಉರುದುಬುಡ್ತು
ಹುಣಸೆ ತರುಗೆಂಡವಾಗಬುಡ್ತು
ಅರಮನೆಯಲ್ಲಿ ಅತ್ತಂತ ಕಣ್ಣೀರು
ಆ ನನ್ನಪ್ಪಾಜಿಗೆ ಏಳುಮಾಲೆ ಕೈಲಾಸದಲ್ಲಿ ಅರಿವಾಯ್ತು
ಏಲುಮಲೆ ಕೈಲಾಸ
ಧಗ ಧಗನೆ ಕತ್ಕ್ತಿ ಬಗ ಬಗನೆ ಉರುದ್ದಬುಡ್ತು
ಹುಣಸೆ ತರುಗೆಂಡವಾಗಬುಡ್ತು
ಮಾದಪ್ಪ ಆಕಾಶ ನೋಡಿದ್ರು
ಆ ಕೊಕ್ಕರೆ ಬೋಳಿ ಬೆಟ್ಟದ ಮಾಳದಲ್ಲಿ
ಶಿವಶರಣೆಯಾದ ಸಂಕಮ್ಮನಿಗೆ
ನೀಲೇಗೌಡ ಬಂದು ಕೆಟ್ಟಮುಂಡೆ ಮಗ
ಅಲೆ ಕೊಲೆ ಕೊಡ್ತಾಯಿರಬಹುದು
ಆ ಹೆಣ್ಣು ಮಗಳ ಕಣ್ಣೀರು ನನ್ನ ಏಳುಮಲೆಯೊಳಗೆ
ಇಂತಾಹ ಉರಿಯಾಗ್ತಾಯಿದೆ
ನಾನು ಸುಂಗಾರ ಮಾಡುಕಂಡು
ಹುಲಿಮ್ಯಾಲೆ ಕೂತುಗೊಂಡು ಹೋಗೊ ಹೊತ್ತಿಗೆ
ಆ ಕೆಟ್ಟ ಮುಂಡೆ ಮಗ ಪ್ರಾಣ ತಗದ್ಬುಡ್ತನೆ ಅಂತೇಳಿ
ಮಾದಪ್ಪ
ಮುಂಗಾರು ಮಿಂಚಿದಪ್ಪಂದವಾಗಿ

ಒಂದು ಈಳ್ಯಾಕೋಲು ಚಿಗಿಯುವಾಗೆ
ಚಿಗುದವರಲ್ಲೋ ಮಾದೇವಾs || ಕೋರಣ್ಯ ||

ನಮ್ಮ ಕಾಲದಲ್ಲಿ ಇಳ್ಯಾದ ಕೋಲು ಅಂತಾ ಇದ್ದೋ
ಈವಾಗ ಹೊಸ್ತಾಗೇಳ್ತಾರೆ ಅದು ನಮಗೆ ಗೊತ್ತಿಲ್ಲ
ಇಲ್ಲಿ ಹೊಡೆದರೆ ಈಳ್ಯಾ ಕೋಲು ಯಾವ ರೀತಿ ಹಾರ್ತಾದೆ
ಅದೇ ರೀತಿಯಾಗಿ ಮುಂಗಾರು ಮಿಂಚಪ್ಪಂದವಾಗಿ
ಬಂದ್ರು ಮಾದಪ್ಪ
ಅಲ್ಲಿಗೆ ಬಂದ್ರು
ಸಂಕಮ್ಮನ ಕಣ್ಣಿಗೆ ಗೋಚ್ರವಾಗನಿಲ್ಲ ಮಾದಪ್ಪ
ನೀಲೇಗೌಡನ ಕಣ್ಣೀಗೂ ಗೋಚ್ರವಾಗ್ನಿಲ್ಲ
ಮಾದಪ್ಪ ಸಂಕಮ್ಮನ ಅರ್ಮನೆ ಹೊಸಲಿನೊಳಗೆ
ಬಿಳಿ ಪಲ್ಲಿಯಾಗಿ ಕಾದು ಕೂತ್ಕಂಡ್ರು
ಆವಾಗ ಸಂಕಮ್ಮ ದುಃಖ ಮಾಡ್ತಾಯಿದ್ದಳು ಒಳಗಡೆ
ಆ ಕೆಟ್ಟ ಮುಂಡೆ ಮಗ ಮಲೆ ಸ್ವಾಲುಗಾ
ಅರಮನೆ ಮುಂಭಾಗದಲ್ಲಿ ಮೂರು ಕಲ್ಲನ್ನು ಒಡ್ಡಿ
ಕೊಪ್ಪರಿಗೆಯನ್ನು ಮಡುಗಿ
ಹೆಜ್ಜೇನು ತುಪ್ಪ ಉಗುಬಂದು ಬೇಯ್ತಾಯಿದೆ
ಉಕ್ಕುನ ಮೂರು ಗುಂಡು ತಕ್ಕೊಂಡೋಗಿ ಉರುಳಿಸ್ಬುಟ್ಟು
ಅವಾಗ ಸಂಕಮ್ಮನ ದುಃಖ ನೋಡಲಾರದೆ ಮಾದಪ್ಪ ಕೂತ್ಕಂಡು
ಕಂದ

ಹೆದರಬ್ಯಾಡ ಕಂದಮ್ಮ
ಬೆದರ ಬ್ಯಾಡ ಕಂದಮ್ಮ
ಪಾತಿವ್ರತೆ ಸಂಕಮ್ಮ
ಕಂದ ನಾನಿದ್ದ ಮ್ಯಾಲೆ ಭಯವೇಕಮ್ಮ
ಹೆಣ್ಣು ಮಗಳೇ ಸಂಕಮ್ಮs || ಕೋರಣ್ಯ ||

ಕಂದ ಮೂರು ಸಾರಿಯಲ್ಲದಿದ್ದರೆ ಆರು ಸಾರಿ ಮುಳುಗು ಕಂದ
ಒಂದಾಳ್ ಮಟ ತಣ್ಣೀರಿನಲ್ಲಿ ಸ್ನಾನ ಮಾಡಿದಪ್ಪಂದ ಮಾಡ್ತಿನಿ
ಹೆದರಬ್ಯಾಡಕಂದ
ನಿನ್ನ ತಂದೆ ತಾಯಿ ನಿನ್ನ ಅತ್ತೆ ಮಾವ
ಕೈಹಿಡಿದಂಥ ಪತಿನ ಗ್ಯಾನ ಮಾಡ್ಕಂಡು ಮುಳುಗು ಕಂದ

ನಿನ್ನ ಗಂಡಾ ಮಾಡುವ ಗಾಡುಗರಿದ್ಯ
ನೋಡುವೇನೊಂದರಗಳಿಗೇs || ಕೋರಣ್ಯ ||

ಹೆಜ್ಜೇನು ತುಪ್ಪ ಉಗುಬಂದು ಬೇಯ್ತಾಯಿದೆ
ಉಕ್ಕುನವು ಮೂರುಗುಂಡು ಮುಳುಗುಸುಬುಟ್ಟು
ಒಳಗಡೆ ಬಂದ ನೀಲೇಗೌಡ
ಸಂಕಮ್ಮ ದುಃಖ ಮಾಡ್ತಾಯಿದ್ದಳು
ಎಲೋ ಸಂಕೆಣ್ಣೆ
ಕೆಟ್ಟ ಮುಂಡೆ ಮಗಳೆ ಏನು ಯೋಚ್ನೆ ಮಾಡ್ತಾಯಿದ್ದೀಯೆ ಅಂತೇಳಿ

ಅವಳ ಮಾರುದ್ದ ಮಂಡೆ ಹಿಡುದವನೆ
ಎಳ್ಕಂಡ್ ಎಳ್ಕಂಡ್ ಬತ್ತವನೆs || ಕೋರಣ್ಯ ||

ಮಾರುದ್ದ ಮಂಡೆ ಹಿಡಿದು
ದರಾದರನೆ ಎಳಕಂಡು ಬಂದು
ಕೊಪ್ಪರಿಗೆ ಮುಂದೆ ನಿಲ್ಲುಸುಬುಟ್ಟು
ಛೇ ಕೆಟ್ಟ ಮುಂಡೆ ಮಗಳೇ
ಜಾಗ್ರತೆಯಾಗಿ ಮೂರು ಮುಳುಗು ಮುಳುಗಿ
ಮೂರು ಗುಂಡನ್ನೂ ತಂದು ಮಡಗಿ
ನಿನ್ನ ಪ್ರಾಣ ಹೋಗದಂತೆ ನನ್ನಪಾದ ಶರಣು ಮಾಡು ಅಂದ್ರು
ಪತಿವ್ರತೆಯಾದ ಸಂಕಮ್ಮ
ಆ ಕೊಪ್ಪರಿಗೆ ನೋಡ್ದಳು ಉಗುಬಂದು ಬೇಯ್ತಾಯಿದೆ
ಹೆಜ್ಜೇಣು ತುಪ್ಪ ಕುದಿತಾಯಿದೆ
ನನ್ನ ಪತಿವ್ರತಾಧರ್ಮ ಇದ್ದರೆ ಮಾದಪ್ಪ
ನನ್ನನ್ನು ಕಾಪಾಡು ಅಂತ ಹೇಳೀ

ತನ್ನ ತಾಯಿತಂದೆ ನೆನದವರೇ
ಒಂದೂ ಮುಳುಗ ಮುಳುಗವರೇ
ಒಂದೂ ಗುಂಡ ಎತ್ತವರೇ
ಅತ್ತೆ ಮಾವನ ನೆನದವರೇ
ಎರಡೂ ಸಾರಿ ಮುಳುಗವರೆ
ಎರಡನೇ ಗುಂಡು ಎತ್ತವರೇ
ಪತಿಯಾ ಪಾದ ನೆನೆದವರೆ
ಮೂರು ಸಾರಿ ಮುಳುಗವರೇ
ಮೂರನೆ ಗುಂಡ ಎತ್ತವರೇ
ಮೂರು ಗುಂಡ ಎತ್ತವರೆ ತನ್ನ
ಗಂಡನ ಪಾದ ಹಿಡದವರೇs || ಕೋರಣ್ಯ ||

ಮೂರು ಗುಂಡು ಎತ್ತಿ ಮಡುಗಿ ಗಂಡನ ಪಾದಕ್ಕೆ ನಮಸ್ಕಾರ ಮಾಡದಳು
ಸಂಕಮ್ಮನ ಮೈಗೆ ಹೆಜ್ಜೇನುತುಪ್ಪ ಅಂಟಿರಿಲಿಲ್ಲ
ಎಲ್ಲೋ ಮುಂಡೆ ಮಗಳ ಕೊನೆ ಗೂದಲಿನಲ್ಲಿ ಇದ್ದದ್ದು
ನಮಸ್ಕಾರ ಮಾಡುಕ್ಹೋದ್ಲಲ್ಲ ಅವನ ಪಾದದ ಮ್ಯಾಲೆ ಬಿದ್ಬುಡ್ತು
ನೀಲೇಗೌಡನಿಗೆ ಬರಾಬರನೆ ಉರಿ ಬಂದು ಬುಡ್ತು

ಅಯ್ಯ ಟಮ್ಮ ಟುಮ್ಮನೆ ಕುಣುದವನಲ್ಲ
ಮಲೆಯ ಸ್ವಾಲುಗ ನೀಲಯ್ಯ || ಕೋರಣ್ಯ ||

ಎಲಾ ಕೆಟ್ಟ ಮುಂಡೆ ಮಗಳೇ ನನ್ನ ಕಾಲೇ ಉರಿ ಬಂದ್ಬುಡ್ತು
ನೀನು ಯಾವ ರೀತಿ ಮೂರು ಸಾರಿ ಮುಳುಗ್ದೇ
ಅಂತೇಳಿ ತನ್ನ ಕಾಲಿಗೆ ಏನುಬೇಕು ಔಸ್ತಿ ಅದನ್ನ ಹಾಕತಾವ್ನೆ
ಔಸ್ತಿಯನ್ನ ಆಕ್ಕಂಡು
ಎಲೋ ಸಂಕೆಣ್ಣೆ ಇಂಥಾ ವಿದ್ಯವನ್ನು ಗೆಲ್ಲಬೇಕಾದ್ರೆ
ನಾನು ಆರು ತಿಂಗಳು ಬಿಟ್ಟೋದಿ ನಿನ್ನ
ಈ ಅಡವಿ ಅರಣ್ಯದಲ್ಲಿ

ಅಂಡೇ ಕುರುಬನ ಮಡಗಿದ್ದೀಯಾ
ಆಲುಗುರುಬನ ಮಡಗಿದ್ದೀಯಾ
ಮರಾಟ್ಯೋನ ಮಡಗಿದ್ದೀಯಾ
ಮಾವಿಳ್ಯಾವನಾ ಮಡಗಿದ್ದೀಯಾ
ಕೇಳೋ ಕೇಳೋ ಸಂಕೆಣ್ಣೆ
ಮಡದಿ ಸೋಲ್ತೀಯೋ ಕಾಣೋ ಸಂಕೆಣ್ನೆ
ಗೆಲ್ತೀಯೋ ಕಾಣೋ ಸಂಕೆಣ್ಣೆ
ಮಡದಿ ಹೇಳೊದಮಾತ ಕೇಳೆಣ್ಣೆ
ನಿನ್ನ ಪ್ರಾಣಕ್ಕೆ ಬುದ್ಧಿ ಹೇಳೆಣ್ಣೇs || ಕೋರಣ್ಯ ||

ಎಲೋ ಕೆಟ್ಟ ಮುಂಡೆ ಮಗಳೆ ಸಂಕೆಣ್ಣೆ
ಆರು ತಿಂಗಳು ಬಿಟ್ಟು ಹೋದೆ ಮಡದಿ
ಈ ನಾಡಿನೊಳ್ಗೆ ಈ ಅಡವಿ ಅರಣ್ಯದಲ್ಲಿ
ನಾನೇ ಹೆಚ್ಚಲ್ಲ ಮಡದಿ
ಬೇಕಾದಂತ ಯಂತ್ರಗಾರರು ಮಂತ್ರಗಾರರು
ಮಾಟಗಾರರು ಬರ್ತಾ ಇದ್ದಾರೆ
ಅವರ್ನೆಲ್ಲ ಹಿಡ್ಕೊಂಡು ಕೈವಾಸಮಾಡಿ
ಅವರ ವಿದ್ಯಾ ಕಲ್ತುಗೊಂಡು
ನನ್ನನ್ನು ಸೋಲುಸ್ತಾ ಇದ್ದೀಯ ಮಡದಿ

ಮಡದಿ ಹೇಳೂರು ಸತ್ಯಮಾಡೆಣ್ಣೆ
ನಿನ್ನ ಪ್ರಾಣಕ್ಕೆ ಬುದ್ಧಿ ಹೇಳೆಣ್ಣೇ || ಕೋರಣ್ಯ ||

ಅಯ್ಯೋ ಯಜಮಾನ ಯಜಮಾನ್ರೆ ಕೇಳಿ ದಮ್ಮಯ್ಯ
ನಾನು ಯಾರನ್ನೂ ಕಣ್ಣೆತ್ತಿ ನೋಡುವಿಲ್ಲ
ಯಾವ ಸ್ವಾಲುಗುನ್ನು ಕಾಣಲಿಲ್ಲ ಯಜಮಾನ
ಇಂತಾ ಅನ್ಯಾಯದ ಮಾತು ಆಡಬ್ಯಾಡಿ ಯಜಮಾನ
ನೀವು ಮಾಡಿದಂತೆ ಅಲೆಕೊಲೆಯೊಳಗೆ
ನರಳ್ತಾ ಮೊಕಾಡ್ನಾಗಿ ಮಲಗಿದ್ದಿ
ಭೂತಾಯಿ ಪಾಲಾಗ್ತಾ ಇದ್ದಿ

ಇಂತಾ ಪಾಪಾದ ಮಾತಾನಾಡಬ್ಯಾಡಿ
ನಿಮ್ಮ ಪಾದ ಹೊತ್ತೇನು ಯಜಮಾನಾs || ಕೋರಣ್ಯ ||

ಹರನ ಕಂಡೆ ಹಾದಿಯಲ್ಲಿ
ಶಿವನ ಕಂಡೆ ಶಿವರಾತ್ರಿಲ್ಲೀ
ಎನ್ನೊಡೆಯ ಮಾದೇವರ ಕಂಡೆ
ನಾಗುಮಲೆಯೊಳಗೆ

ಎಲೋ ಕೆಟ್ಟಮುಂಡೆ ಮಗಳೆ ಅಡವಿ ಅರಣ್ಯದೊಳಗೆ
ಗಂಡನಿಗೆ ದುಂಡಾರೂತಿ ಮಾಡಬ್ಯಾಡ
ನಾನು ಹೇಳಿದ ಸತ್ಯಮಾಡು
ನಿಮ್ಮಪ್ಪನ ಮನೆ ಮಾದೇಶ್ವರನ ಸತ್ಯ ಒಪ್ತೀನಿ ಅಂದರು
ಯಜಮಾನ ಯಜಮಾನ್ರೆ
ನೀವೇಳಿದ ಸತ್ಯಮಾಡ್ತೀನಿ ಹೇಳಿ ಗುರುವೆ ಅಂದಳು
ನೋಡಲಾ ಮಡದಿ ಸಂಕೆಣ್ಣೆ
ನನ್ನ ಅರಮನೆ ಮುಂಭಾಗದಲ್ಲೇ
ಹೊರಗಡೇ ಹೋಗಿ ನಾನು ಗುಡ್ಡದೊಳಗೆ
ಈ ಬೆಟ್ಟದಲ್ಲಿ ಒಂದು ಕಾರಾಚಿನ ಕಂಬ ತರಕೊಂಡು ಬರ್ತೀನಿ
ಆ ಕಾರಾಚಿನ ಕಂಬದಲ್ಲಿ
ಮೇಲಿರುವಂತ ಬಿಳಿನಾರನ್ನೆಲ್ಲ ಎಡದುಬಿಟ್ಟು
ಒಳಗಿರುವಂತಾ ಚೇಗುತಂದು
ಅರಮನೆಯ ಮುಂದೆ ಮಡಗ್ತಿನಿ
ನಾನ್ನ ಪಾದ ಶರಣು ಮಾಡಿ ನಿಂತ್ಗೋ
ನಿನಗೆ ಮಚ್ಚು ಕೊಡ್ಲಿ ಎನೂ ಕೊಡೋದಿಲ್ಲ ಬಾಚಿ ಕೊಡೋದಿಲ್ಲ
ಕೈನಾಗೆ ಎಡಿಬೇಕು ಮಡದಿ ಅಂದ್ರು
ಅಯ್ಯೋ ಯಜಮಾನ
ಈ ಸತ್ಯ ಮಾಡಬೇಕಾ ಗುರುವೇ ಅಂದಳು
ಹೌದು ಸಂಕೆಣ್ಣೆ
ಈ ಸತ್ಯಮಾಡಿ ನನ್ನಪಾದ ಶರಣು ಮಾಡಿದ್ರೆ

ನಿಮ್ಮ ಅಪ್ಪನಮನೆ ಮಾದೇವ್ನ ಸತ್ಯ
ಒಪ್ತೀನಿ ಕಾಣೋ ಸಂಕೆಣ್ಣೆs || ಕೋರಣ್ಯ ||

ಆಲಂಬಾಡಿ ಮಾದೇವಾ
ಅರಗಣ್ಣ ಬಿಟ್ಟು ನೋಡಯ್ಯ

ಹಾಲರವಿ ಮ್ಯಾಲ್ಹೂವಿನ ದಂಡೆ
ವಾಲಾಡಿ ಬಂದೋ

ಅಯ್ಯೋ ಶಿವ ಶಿವ ಮೂಡಾಲ ಮಲೆಯ ಯತ್ತಯ್ಯ
ನನ್ನಪ್ಪನ ಮನೆದೇವ್ರೆ
ಕಾರಾಚಿನ ಕಂಬ
ಕೊಡ್ಲಿ ಮಚ್ಚು ಬಾಜಿ ತಕ್ಕಂಡೋದದ್ರೂವೇ ಹೊಡೆಯೋದಿಲ್ಲ
ಅಂಥಾ ಕಂಬವನ್ನು ಕೈನಲ್ಲಿ ಯಾವ್ರೀತಿಯಾಗಿ ತೆಗೆಲಿ ಮಾದಪ್ಪ

ನನ್ನ ಹೆಣ್ಣು ಪ್ರಾಣಿಯ ಗೋಳು ನಿಮಗೆ
ಎಲ್ಲರುವಾಯ್ತು ಮಾದೇವಾs || ಕೋರಣ್ಯ ||