ಗುರುವೇ ಗುರುತಂದೆ ನನ್ನಪ್ಪಾಜಿ
ಹೊಸಲಲ್ಲೇ ಕುಳ್ತಿದ್ದಾರೆ ಮಾದಪ್ಪ
ಬಿಳಿ ಪಲ್ಲಿಯಾಗಿ
ಯಾಕವ್ವ ಕಂದ ಸಂಕಮ್ಮ ದುಃಖ ಮಾಡಿಯ ಮಗಳ
ಆ ಕಾರಾಚನ ಕಂಬವನ್ನು ಬಾಳೆಕಂಬ ಮಾಡ್ತೀನಿ ಕಂದ
ನಿನ್ನ ಗಂಡನಾದ ನೀಲೇಗೌಡ ತಂದು ಮಡಗಿದ ಕಂಬ
ಅವನ ಕಣ್ಣಿಗೆ ಕಾರಾಚನ ಕಂಬ
ನಿನ್ನ ಕೈಗೆ ಬಾಳೆಕಂಬ ಮಾಡ್ತೀನಿ ಕಂದಮ್ಮ

ಕಂದ ಹೆದರಬೇಡ ಕಂದಮ್ಮ
ಬೆದರುಬೇಡ ಕಂದಮ್ಮ
ಪತಿವ್ರತೆ ಸಂಕಮ್ಮ
ಮಗಳೇ ನಾನಿದ್ದು ಮೇಲೆ ಭಯವೇಕಮ್ಮ
ಸತ್ತು ಭಾವೆ ಸಂಕಮ್ಮಾs || ಕೋರಣ್ಯ ||

ಮಲೆಯ ಸ್ವಾಲುಗ ನೀಲೇಗೌಡ
ಸಂಕಮ್ಮನ ಪತಿವ್ರತೆ ಧರ್ಮನೆಂಬ ನಿಜ ನೆಚ್ಚನಿಲ್ಲ

ಅಯ್ಯ ಗಂಡೂಗೊಡಲೀ ತೆಗೆದವನನೇ
ಅಟ್ಟ ಬೆಟ್ಟಕ್ಕೆ ಹತ್ತವನೇ
ಕಾರಾಚನ ಕಂಬ ತರದವನೇ
ಹೆಗಲಾ ಮೇಲೆ ಮಡುಗವನೇ
ಅಯ್ಯ ಸತ್ಯ ಭಾವ ಸಂಕಮ್ಮನ ಮನೆಗೆ
ಬತ್ತವನಲ್ಲೋ ನೀಲಯ್ಯಾs || ಕೋರಣ್ಯ ||

ಪಕ್ಕದಲ್ಲಿರುವಂತಾ ಬೆಟ್ಟಕತ್ತಿ
ಬಾರೀ ಕಾರಾಚನ ಕಂಬನ ತರುಕಂಡ
ಒಳಗೆ ಕರಿ ಚೇಗಿರಬೇಕು ಅಂತಾ ಕಂಬ ತಕ್ಕಂಡ್ಬಂದು
ಬಂದು ಅರಮನೆ ಮುಂದೆ ಮಡಗ್ದ
ಎಲೋ ಸಂಕೆಣ್ಣೆ ಜಾಗ್ರತೆಯಾಗಿ ಬಂದು ಸತ್ಯಮಾಡು ಅಂದ
ಪತಿವ್ರತೆಯಾದ ಸಂಕಮ್ಮ
ಅಯ್ಯೋ ಮಾದೇವ ನನ್ನಪ್ಪನ ಮನೆದೇವ್ರೆ
ನಿನ್ನ ದಯದಿಂದ ಈವತ್ತು ಕಾರಾಚಿನ ಕಂಬ
ನೀನು ಹೀಳಿದ ಪ್ರಕಾರವಾಗಿ
ನನ್ನ ಪತಿವ್ರತೆ ಧರ್ಮವಿದ್ರೆ ಬಾಳೆ ಕಂಬವಾಗ್ಲಿ ಅಂತೇಳೀ

ಅಮ್ಮ ಅರಮನೆಯಿಂದ ಬಂದವುಳೇ
ಕಾರಾಚನ ಕಂಬ ನೋಡವಳೇ
ಪತಿವ್ರತೇ ಸಂಕಮ್ಮ
ಎರಡೂ ಕೈಲಿ ಹಿಡಿದವಳೇ
ಪತಿವ್ರತೇ ಸಂಕಮ್ಮ
ಬಾಳೇಕಂಬ ನೋಡವಳೇ
ಪತಿವ್ರತೇ ಸಂಕಮ್ಮ
ಬಾಳೆಪಟ್ಟ ಯಡದವುಳೇ
ಮಧ್ಯದಿಂದ ತಗದವುಳೇ
ಗಂಡನ ಮುಂದೆ ಮಡುಗವಳೇs || ಕೋರಣ್ಯ ||

ಬೆಟ್ಟೆಲ್ಲ ಜೋಲು ಮಾದೇವ ಬಿದುರೆಲ್ಲಾ ಜೋಲು
ಬೆಟ್ಟದರಸು ಮಾದಪ್ಪ ನಿಮ್ಮಾ
ಮುಟ್ಟಿದರೇ ಜೋಲೂ

ಅರಮನೆಯಿಂದ ಓಡುಬಂದು
ಮಹಾದೇವ ನಿನ್ನ ಕಟಾಕ್ಷೆ ಅಂತೇಳಿ
ಕಾರಾಚನಕಂಬ ಕೈಲೆತ್ತಿ ಹಿಡುಕಂಡಳು
ಬಾಳೆಕಂಬ ಬಾಗುಬುಡ್ತು
ಸುತ್ತಾ ಇರುವಂತಾ ಬಾಳೆ ಪಟ್ಟ ಯಡೆದು ಬೀಸಾಡುಬುಟ್ಟು
ಮದ್ಯಾ ಇರುವಂಥಾ ದಿಂಡ ಗಂಡನ ಮುಂದೆ ಮಡುಗೆ
ಪಾದಕ್ಕೆ ಶರಣು ಮಾಡ್ದಳು
ನೀಲೇಗೌಡ್ನ ಪಾದಕ್ಕೆ ಶರಣು ಮಾಡಿದ ತಕ್ಷಣವೇ

ಅಯ್ಯ ಕೆಂಜರಗಣ್ಣ ಬಿಟ್ಟವನೇ
ನೊರ್ ನೊರ್ ನಲ್ಲ ಕಡುದವನೇ
ಕೇಳೊ ಕೇಳೊ ಸಂಕೆಣ್ಣೆ
ಅಂಡೆ ಜೋಗಿಯ ಮಡಗಿದ್ದೀಯ
ಬುಂಡೇ ಜೋಗಿಯ ಮಡಗಿದ್ದೀಯಾ
ಕಾಡ ಕಟ್ಟೋವ್ನ ಮಡಗಿದ್ದೀಯ
ಕೇಳೊ ಕೇಳೊ ಸಂಕೆಣ್ಣೆ
ಗೆಲತೀಯ ಕಾಣೋ ಸಂಕೆಣ್ಣೆ
ಸೋಲ್ತಿಯೋ ಕಾಣೋ ಸಂಕೆಣ್ಣೆ
ಮಡದಿ ಹೇಳಿದ ಸತ್ಯ ಮಾಡೆಣ್ಣೆ
ನಿನ್ನ ಪ್ರಾಣಕ್ಕೆ ಬುದ್ಧಿ ಹೇಳೆಣ್ಣೆs || ಕೋರಣ್ಯ ||

ಎಲೋ ಕೆಟ್ಟಮುಂಡೇ ಮಗಳೇ ಸಂಕೆಣ್ಣೆ
ಇಂತಹ ವಿದ್ಯನೆಲ್ಲ ಕಲಿತು ನನಗೆ ಮೋಸ ಮಾಡ್ತಾ ಇದ್ದೀಯ
ಇಂತಹ ಹೆಣ್ಣು ಪ್ರಾಣಿಯನ್ನು ಅರಮನೆಯೊಳಗೆ ಮಡಗಬಾರ್ದು
ಮೊಕಾಡನಾಗೆ ಮನುಗುಸುಬುಟ್ಟು
ಎರಡೇಟು ಮೂರೇಟಿನಾಗೆ ಪ್ರಾಣ ತೆಗೆದುಬಿಟ್ರೆ
ಇವಳ ಮೊಕನೋಡೊವಾಗಿಲ್ಲ
ಗಂಡನಿಗೆ ದುಂಡಾ ಮಾಡ್ದವಳು

ಪತಿಗೆ ಪ್ರತಿ ಉತ್ತರ ಕೊಟ್ಟೋಳು ಅಂತೇಳಿ
ಇನ್ನೊಂದು ಸತ್ಯಮಾಡು ಸಂಕೆಣ್ಣೆ ಅಂದ್ರು
ಏನು ಮಾಡ್ಲಿ ಯಜಮಾನ ಅಂದಳು
ನೋಡು ನನ್ನ ಮ್ಯಾಣಗಂಪನ ಚೀಲದಲ್ಲಿ
ಮೂರು ವರ್ಷದಿಂದ ಒಂದು ಗೋಟಡಿಕೆ ಮಡ್ಗೀವ್ನಿ
ನನ್ನ ಅರಮನೆ ಮುಂಭಾಗ್ದಲ್ಲಿ ನಿನ್ನ ಮೊಕಾಡ್ನಾಗೆ ಮಲ್ಗಿಸ್ತೀನಿ
ನಿನ್ನ ಬೆನ್ನಿನ ಮೇಲೆ ಗೋಟಡಿಕೆ ಮಡ್ಗಿ
ಕಬ್ಬಿಣದ ಕೊರ್ಡ ತಕ್ಕಂಡು ಮೂರೇಟು ಹೊಡಿತೀನಿ
ಏಟಿಗೆ ಮೂರು ಚೂರು ಮೂರೇಟಿಗೆ ಒಂಬತ್ತು ಚೂರು ಅಡಿಕೆ ಆಗ್ತದೆ
ಮೂರೇಟಿನಲ್ಲೂ ನೀನು ಪ್ರಾಣ ಹೋಗದೆ ಹೋದ್ರೆ
ಅಡಕೆ ಚೂರಾದ ಮೇಲೆ ಎದ್ದು ನೀನು ನನ್ನಪಾದ ಶರಣು ಮಾಡಿದ್ರೆ

ನಿನ್ನಪ್ಪನ ಮನೆಯ ಮಾದೇವ್ನ ಸತ್ಯ
ನಾನೋಪ್ತಿನಿ ಕಾಣೋ ಸಂಕೆಣ್ಣೆs || ಕೋರಣ್ಯ ||
ಬಂಡಳ್ಳಿಯ ಬಸವಣ್ಣನವರು
ಹಿಂದಿದೆ ಶೇಷಣ್ಣನವರೂ
ಮುಂದಲ ಪೂಜೆ ಮಾಡಿರಿ ಗುರುವೆ
ನಾಗಭೂಷಣಗೆ

ಪತಿವ್ರತೆಯಾದ ಸಂಕಮ್ಮನಿಗೆ
ಗಂಡನ ಮಾತ ಕೇಳಿ
ಪರಮಾತ್ಮ ಮೂರು ತಿಂಗಳ ಗರ್ಭಿಣಿಯಾಗಿದ್ದೀನಿ
ಮಾದೇವಾ
ನೀವು ಕೊಟ್ಟಂತ ಮಕ್ಳು ಉಳಿಯೋದಿಲ್ಲ
ನಿಮ್ಮ ಹೆಸರು ಉಳಿಯೋದಿಲ್ಲ ತಂದೆ
ಮೊಕಾಡ್ನಾಗೆ ಮಲಿಕಂಡು ಕೊಡ್ಲಿ ಏಟುಬಿದ್ದ ತಕ್ಷಣವೇ
ನಾನು ಭೂಮುತಾಯಿ ಪಾಲಾಗ್ತಿನಿ ತಂದೆ
ಇಂಥಾ ಕಷ್ಟಕ್ಕೆ ಈಡುಮಾಡ್ದಲ್ಲ ಮಾದಪ್ಪ

ನಾನು ಪಾಪಿ ಮಾಡಿದ ಕಣ್ಣೀರು ನಿಮುಗೆ
ಪಾದಕ್ಕರುವಾಗ್ಲಿ ಮಾದೇವಾs || ಕೋರಣ್ಯ ||

ಪಾತಳ ಶಿವಗಂಗೇಗೋಗಿ
ಧೂಪದಲ್ಲಿ ಸೇವೇಮಾಡಿs
ಪಾಪಾ ಬಂದರೆ ಪರಿಹಾರ ಮಾಡೋ
ಮಾಯ್ಕಾರ ಮಾದೇವಾ

ಮಲೆ ಸ್ವಾಲುಗ ನೀಲೇಗೌಡ
ಜಾಗ್ರತೆಯಾಗಿ ಒಳಗಡೆ ಹೋಗಿ
ಅರಮನೆಯಿಂದ ತನ್ನ ಮೇಣಗಂಪಣ ಚೀಲ ಎತ್ಕೊಂಡು ಬಂದ
ಪತಿವ್ರತೆಯಾದ ಸಂಕಮ್ಮನ
ಮಾರುದ್ದ ಮಂಡೆ ಹಿಡಿದು ದರಾದರನೆ ಎಳಕೊಂಡು ಬಂದು
ಅರಮನೆ ಮುಂಭಾಗದಲ್ಲಿ ಮಲಗಿಸ್ದ
ಸಂಕಮ್ಮ ದುಃಖ ಮಾಡ್ತಾ ಮಲಿಕಂಡಳು
ಮಾದಪ್ಪ ಹೇಳ್ತಾಯಿದಾನೆ
ಕಂದ ದುಃಖ ಮಾಡಬ್ಯಾಡ ಮಗಳೇ
ಅವನಾ ಕಬ್ಬಿಣದ ಕೊಡಲಿಯೇಟು ಬಿದ್ದರೆ
ನಿನಗೆ ಮಲ್ಲಿಗೆ ಹೂವು
ಸಂಪಿಗೆ ಹೂವು ಬಿದ್ದಪ್ಪಂದ ಮಾಡ್ತಿನಿ ಕಂದ
ಇಂತಾ ವಿದ್ಯೆಯೆಲ್ಲಾ ನನ್ನ ಮೇಲೆ ಭಸ್ಮದಲ್ಲಿದೆ

ನಿನ್ನ ಗಂಡಮಾಡುವ ಗಾಡುಗರಿದ್ಯ
ನೋಡುವೇನೊಂದರಗಳಿಗೇ || ಕೋರಣ್ಯ ||

ಅರಮನೆ ಮುಂಭಾಗದಲ್ಲಿ ಮೊಕಾಡ್ನಾಗಿ ಮಲಗಿಸ್ದ ನೀಲೇಗೌಡ
ಮೇಣಗಂಪಣ ಚೀಲದಲ್ಲಿದ್ದಂತ ಗೋಟಡಿಗೆ ತಗದು
ಸಂಕಮ್ಮನ ಬೆನ್ನಿನ ಮೇಲೆ ಮಡಗ್ದ
ಕಬ್ಬಿಣದ ಕೊಡಚಿ ಎತ್ತುಕೊಂಡ
ಎಲೋ ಸಂಕೆಣ್ಣೆ
ನಿನ್ನ ತಂದೆ ತಾಯಿ ನೆನಕೋ
ಬಂದು ಬಳಗ ನೆನೆಕೋ
ಅಣ್ಣ ತಮ್ಮನ ನೆನಕೋ
ಅಕ್ಕ ತಂಗಿ ನೆನೆದುಬಿಡು
ಇಲ್ಲಿಗೆ ನಿನ್ನ ಪ್ರಾಣ ಸರಿ ಅಂತೇಳಿ

ಅಯ್ಯ ಕಬ್ಬುಣದ ಕೊಡಲಿ ಎತ್ತವನೇ
ಮೂರು ಏಟ ಹೊಡದವನೇ
ಕಬ್ಬುಣದ ಕೊಡಲಿ ತಗುದವನೇ
ಮೂರು ಏಟ ಹೊಡುದವನೇ || ಕೋರಣ್ಯ ||

ಕಬ್ಬುಣದ ಕೊಡಲಿ ಎತ್ತುಕೊಂಡು
ಮೂರು ಸಾರಿ ಗೋಟಡಿಕೆ ಮೇಲೊಡದ
ಏಟಿಗೆ ಮೂರು ಮೂರು ಚೂರು ಒಂಬತ್ತು ಚೂರಾಯ್ತು
ಆ ಪತಿವ್ರತೆಯಾದ ಸಂಕಮ್ಮನಿಗೆ
ಮಾಯಾಕಾರ ಗಂಡ ಮಾದಪ್ಪ
ಆ ಕಬ್ಬುಣದ ಕೊಡಲಿ ಏಟು ಮಲ್ಲಿಗೆ ಹೂವು
ಸಂಪುಗೆ ಹೂವು ಬಿದ್ದ ಅಪ್ಪಂದವಾಯ್ತು
ಮೊಕಾಡ್ನಾಗಿ ಮಲ್ಕಂಡಿದ್ದ ಸಂಕಮ್ಮ
ಒಂಬತ್ತು ಚೂರು ಆಡ್ಕೆಯನ್ನು ಅಯ್ಕೊಂಡು
ನೀಲೇಗೌಡ ಕಬ್ಬುಣದ ಕೊಡಲಿ ತೂದು ಬಿಸಾಡ್ಬುಟ್ಟ
ನನ್ನ ಮಡದಿ ಪ್ರಾಣ ಹೊಂಟೋಗದೆ
ಎತ್ಕೊಂಡೋಗಿ ಎಲ್ಲಾರು ಹಳ್ಳ ಕೊಳ್ಲದಲ್ಲಿ ಬಿಸಾಕಿ ಬಿಡೋಣ
ಬೆಂಕಿ ಹಾಕಿ ಬೇಯಿಸಿ ಬಿಡೋಣ ಅಂತೇಳಿ
ಅಡಿಕೆ ಚೂರು ತಕ್ಕಂಡು ಗ್ವಾಟೆ ಒಳಗೆ ಇರಸ್ಕಂಡು
ಅವಳ ಮಾರುದ್ದ ಮಂಡೆ ಹಿಡುದು ಮ್ಯಲಕ್ಕೆತ್ತಿ ಕೂರುಸ್ತಾ
ಸಂಕಮ್ಮಾ ಉಸ್ಸೋ ಅಂತೇಳಿ
ಮಾದೇವ್ನಿಗೆ ಕೈಮುಗಿದುಬುಟ್ಟು
ಗಂಡನ ಪಾದಕ್ಕೆ ನಮಸ್ಕಾರಮಾಡ್ದಳು
ಛೇ ಕೆಟ್ಟ ಮುಂಡೆ ಮಗಳೆ ದೂರ ನಿಂತ್ಕೋ
ನನ್ನ ಪಾದ ಶರಣ ಮಾಡಬ್ಯಾಡ
ಗಂಡನಿಗೆ ದುಂಡಾರತಿ ಮಾಡದೋಳು
ನಿನಗಿನ್ನೂ ಕೊಡಬಾರದ ಕೊಲೆ ಕೊಡ್ತೀನಂತೇಳಿ

ಮಡದಿ ಹೇಳಿದ ಮಾತ ಕೇಳೆಣ್ಣೆ
ನಿನ್ನ ಜೀವಕ್ಕೆ ಬುದ್ಧಿ ಹೇಳೆಣ್ಣೆs || ಕೋರಣ್ಯ ||

ಮಡದಿ ಅಡಕೆ ಮಾರೋನ ಮಡಗಿದ್ದೀಯಾ
ಅದರಿಂದ ಕಾಣೋ ಸಂಕೆಣ್ಣೆ
ಗೆಲ್ತೀಯ ಕಾಣೋ ಸಂಕೆಣ್ಣೆ
ಸೋಲ್ತೀಯ ಕಾಣೋ ಸಂಕೆಣ್ಣೆ

ಮಡದಿ ಹೇಳಿದ ಸತ್ಯ ಮಾಡೆಣ್ಣೆ
ನಿನ್ನ ಪ್ರಾಣಕ್ಕೆ ಬುದ್ಧಿ ಹೇಳೆಣ್ಣೆs || ಕೋರಣ್ಯ ||

ಅಯ್ಯೋ ಯಜಮಾನರೇ ಯಜಮಾನರೇ
ಇನ್ಯಾವ ಸತ್ಯ ಮಾದಲಿ ದಮ್ಮಯ್ಯ ಅಂದಳು
ಸಂಕೆಣ್ಣೆ ಇನ್ಯಾವ ಸತ್ಯ ಅಂತ ಕೇಳ್ತಾಯಿದ್ದೀಯ
ಇನ್ನು ಒಂದು ಸತ್ಯದಲ್ಲಿ ನಿನ್ನ ಪ್ರಾಣ ಮುಗಿಸ್ತಿನಿ
ಭೂಮಿ ತಾಯಿ ಮೇಲೆ ತಿರುಗಾಡಬಾರ‍ದು
ಅಂತಾ ಸತ್ಯ ಮಾಡ್ತೀನಿ ಅಂದ್ರು
ಯಾವ ಸತ್ಯ ಮಾಡ್ಲಿ ಯಜಮಾನ ಅಂದಳು
ನನ್ನ ಅರಮನೆ ಮುಂಭಾಗದಲ್ಲಿ
ಮೂರಾಳುಮಟ ಗುಂಡಿ ತಗೀತಿನಿ
ಗುಂಡಿಯೊಳಗೆ ನಿನ್ನ ಕೂಡುಬುಟ್ಟು
ಮ್ಯಾಲೆ ಮೂರು ಕಂಡುಗ ಗೆಜ್ಜಲುಕೆಂಡ ಮಡುಗ್ತೀನಿ
ಮೂರು ಕಂಡುಗ ಮೆಣಸಿನಹಣ್ಣ ಊದ್ಬುಟ್ಟು
ಮ್ಯಾಲೆಚಪ್ಪಡಿ ಕಲ್ಲು ಮಡಗ್ತೀನಿ
ಚಪ್ಪಡಿ ಕಲ್ಲನಮ್ಯಾಲೆ ಹಣ್ಣು ತಂದೂ
ಕೀರೇ ಪಾತಿಯನ್ನು ಕಟ್ಟಿ
ಕೀರೇ ಬೀಜವನ್ನು ಬಿತ್ತೀನಿ
ನೀರನ್ನ ಕಟ್ಟಿ ಬರ್ತೀನಿ ಮಡದಿ
ಕೀರೇ ಬೀಜ ಹನ್ನೆರಡು ದಿನ ಹದಿಮೂರು ದಿನಕ್ಕೆ
ಹುಟ್ಟಿ ಬರ್ತಾಯಿದೆ
ಕೀರೆ ಸೊಪ್ಪು ಹುಟ್ಟಿ ಬಂದುಮೇಲೆ
ಸೊಪ್ಪನ್ನು ಕೂದು ಊಟಮಾಡಿಕೊಂಡು
ಪಟ್ಟಣದ ಕಲ್ಲು ತೆಗೆದು ಮುಸುಗು ತೆಗೆದು ಕೂಗ್ತೀನಿ
ಅಲ್ಲೀವರೆಗೂ ಗುಂಡಿಯೊಳಗೆ ನಿನ್ನಪ್ರಾಣ ಹೋಗ್ದೆ ಉಳುಕಂಡ್ರೆ

ನಿನ್ನಾ ಸತ್ಯ ನೋಡುವೆನು ನಿನ್ನ
ಮಾದೇವ್ನ ಸತ್ಯ ನೋಡುವೆನೂs || ಕೋರಣ್ಯ ||

ಅಯ್ಯ ಸಾಲೂರು ಮಠದ ಶರಣರು ಬಂದಾವ್ರೆ
ಎದ್ದೂ ನೋಡಯ್ಯ
ಮುತ್ತಿನ ಕಂತೆ ಮುನಿಗಳು ಬಂದವರೆ
ಭಿಕ್ಷಾ ನೀಡವ್ವ

ಮಲೆ ಸ್ವಾಲುಗ ನೀಲೇಗೌಡ ಹೇಳಿದ ಮಾತಿಗೆ
ಸಂಕಮ್ಮ ದುಃಖ ಮಾಡ್ತಾ ಇದ್ದಾಲೆ
ಮಾದಪ್ಪಾ
ನಿನ್ನ ಹೆಸರೇಳಿಕೊಂಡು ಕೈಮುಗಿತಿದ್ದೇ ಗುರುವೇ
ಅದೂ ಕೂಡ ತಪ್ಪೋಯ್ತು
ಭೂಮಿತಾಯಿ ಗುಂಡಿಗೆ ಹೋದ ತಕ್ಷಣವೇ
ಭೂಮಿತಾಯಿ ಪಾಲಾಗಿ ಮಣ್ಣಾಗ್ತೀನಲ್ಲ ಗುರುವೆ
ನನ್ನ ಇಂಥಾ ಕಷ್ಟಕ್ಕೆ ಇಟ್ಟಲ್ಲ ಗುರುವೇ
ನನ್ನಪ್ಪನ ಮನೆದೇವ್ರೇ

ನನ್ನ ಹೆಣ್ಣು ಪ್ರಾಣಿಯ ಗೋಳು ನಿಮಗೆ
ಎಲ್ಲರುವಾಯ್ತು ಮಾದೇವಾs || ಕೋರಣ್ಯ ||

ಆವಾಗಲೀಗ ನನ್ನಪ್ಪಾಜಿ ಮಾಯಾಕಾರದ ಗಂಡ
ಮಾದೇವಾ
ಭೂದಿಮುಚ್ಚಿದ ಕೆಂಡ ಹೊಸ್ತಲಲ್ಲೆ ಕುಳ್ತಿದ್ದಾರೆ
ಎಲ್ಲೂ ಹೋಗ್ನಿಲ್ಲ
ಕಂದ ಸಂಕಮ್ಮ ದುಃಖ ಮಾಡಬ್ಯಾಡ ಮಗಳೇ
ಮೂರಾಳುಮಟ ಗುಂಡಿಯೊಳಗೆ
ಮೂರು ಕಂಡುಗ ಗೆಜ್ಜಲ ಕೆಂಡ
ಮೂರು ಕಂಡುಗ ಮೆಣಸಿನಹಣ್ಣು ಹೂದರೆ
ಆ ಮೂರು ಕಂಡುಗ ಮೆಣಸಿನ ಹಣ್ಣ
ಆಲದ ತರಗ ಮಾಡ್ತೀನಿ
ಜೋತೇಲಿ ವಾಸುದೇವ್ನ ಕಳೂಗ್ತೀನಿ
ದಾರಿ ಮೇಲೆ ಯಾವ ರೀತಿ ತಿರುಗಾಡ್ತಯಿದ್ದೀಯೊ
ಅರಮನೆಯಲ್ಲಿ ಯಾವ ರೀತಿ ಮಂಚದ ಮ್ಯಾಲೆ ಮಲಗಿದ್ಯೋ
ಅದೇ ರೀತಿ ಮಲಗಿರಸ್ತೀನಿ ಕಂದ
ಹನ್ನೆರಡು ದಿವಸ ಇಲ್ದೇದ್ರೆ
ಇಪ್ಪನಾಲ್ಕು ದಿನಕ್ಕೆ ಚಪ್ಪಡಿ ಕಟ್ ತಗಿಲೀ
ಹೆದರಬೇಡ ಕಂದ

ಕಂದ ಹೆದರಬೇಡ ಕಂದಮ್ಮ
ಬೆದರಬೇಡ ಕಂದಮ್ಮ
ಪಾತೀವ್ರತೆ ಸಂಕಮ್ಮ
ನಿನ್ನ ಗಂಡ ಮಾಡುವ ಗಾಡುಗರಿದ್ಯ
ನೋಡುವೇನೊಂದರಗಳಿಗೇs || ಕೋರಣ್ಯ ||

ಆವಾಗಲೀಗ ಮಲೆಸ್ವಾಲುಗ ನೀಲೇಗೌಡ
ಅರಮನೆ ಮುಂಭಾಗದಲ್ಲಿ ಮೂರಾಳ್ಮಟ ಗುಂಡಿ ತಗ್ದಾ
ಕಾಡಿನಲ್ಲಿ ಬೆಜ್ಜಲ್ಲ ಸೌದೆ ಕಡಕಂಡ್ ಬಂದ
ಸೌದೆಯನ್ನು ಬೇಯಿಸಿ
ಮೂರು ಕಂಡುಗ ಬೆಜ್ಜಲ ಕೆಂಡ ಮಾಡ್ಕಂಡ
ಮೂರು ಕಂಡುಗ ಮೆಣಸಿನಹಣ್ಣು ತಂದ್ಮಡಿಕಂಡ
ಪತಿವ್ರತೆಯಾದ ಸಂಕಮ್ಮನ ಅರಮನೆಯಿಂದ ಎಳಕಂಡುಬಂದು
ಎಲೋ ಸಂಕೆಣ್ಣೆ
ಇಂದೀಗ ನಿನ್ನ ಮೊಕ ನಾನೋಡುವಂಗಿಲ್ಲ
ನನ್ನ ಮೊಕ ನೀ ನೋಡುವಾಗಿಲ್ಲ
ಭೂಮಿತಾಯಿ ಪಾಲಾಗಿ ಬಸ್ಮನಾಗ್ತಾಯಿದ್ದೀಯೆ
ಆ ಭೂದಿನಾರು ಎತ್ತಕೊಂಡೋಗೆ ಆಮೆಲೆ
ಹನ್ನೆರಡು ದಿನದ ಮೇಲೆ ಹರಿವಂತ ಗಂಗೆಗೆ ಬಿಡ್ತೀನಿ ಮಡದಿ
ಬಾ ಅಂತೇಳಿ
ದರಾ ದರನೆ ಎಳಕೊಂಡು ಬಂದು
ಮೂರಾಳು ಮಟ ಗುಂಡಿಯೊಳಗೆ ಬುಟ್ಟುಬುಟ್ಟು
ಮ್ಯಾಲೆ ಮೂರು ಕಂಡುಗ ಗೆಜ್ಜಲು ಕೆಂಡ ಹೂದ
ಸಂಕಮ್ಮನಿಗೆ
ಗೆಜ್ಜಲಕೆಂಡವೆಲ್ಲ ತಾವರೆ ಹೂವಿನ ಗದ್ದಿಗೆಯಾಗುಬುಡ್ತು
ಮೂರು ಕಂಡುಗ ಮೆಣಸಿನ ಹಣ್ಣ ಊದ
ಆಲದ ತರಗಾಗುಬುಡ್ತು
ಮಹಾದೇವ
ಮ್ಯಾಲೆ ಚಪ್ಪಡಿಕಲ್ ಮುಚ್ಚು ಬುಟ್ಟು
ಮಣ್ಣತಂದು ಮೇಲೆ ಕೀರೆಪಾತವು ಕಟ್ಟಿದ ಮಣ್ಣಾಸಿಬುಟ್ಟು
ಕೀರೇ ಬೀಜವನ್ನು ಬಿತ್ತಿ ನೀರಾಕ್ತಾ ಇದ್ದಾನೆ

ಒಂದು ಮಾಯದ ಸತ್ಯಮಾಡವನಲ್ಲ
ಮಲೆಯ ಸ್ವಾಲುಗ ನೀಲಯ್ಯ
ಮದ್ದುಮಾಯಾ ಮಾಡವನೇ
ಮಲೆಯ ಸೋಲುಗ ನೀಲಯ್ಯಾs || ಕೋರಣ್ಯ ||

ಮಲೆಸೋಲುಗ ನೀಲೇಗೌಡ
ಕೆಟಮುಂಡೆ ಮಗ ಹನ್ನೆರಡು ದಿವಸ್ದವರೆಗೂ ನೀರಾಕ್ಕಂಡು ಬಂದ
ಹನ್ನೆರಡು ದಿವಸ ಹದಿಮೂರುದಿವುಸ ಹದಿನೈದು ದಿವುಸಕ್ಕೆ
ಬರೋವಂತ ಕೀರೇಸೊಪ್ಪು
ಹನ್ನೆರಡು ದಿವುಸಕ್ಕೇ ಬಂದುಬುಡ್ತು
ನೀಲೇಗೌಡ ಕೀರೆಸೊಪ್ಪನ್ನೆಲ್ಲ ಆಯ್ಕೊಂಡೋಗಿ
ಅಡಿಗೆ ಮಾಡಿ ಉಪ್ಪುನ ಸಾರುಮಾಡಿ ಊಟಮಾಡ್ದ
ತನ್ನ ಮಡದಿ ಆಸೆಯಿಲ್ಲ ಕೆಟ್ಟಮುಂಡೆಮಗನಿಗೆ
ಊಟಮಾಡುಕಂಡು
ತನ್ನ ಮಡದಿಯಾದ ಸಂಕೆಣ್ಣು ಒಳಗಡೆ ಸುಟ್ಟು ಬಸ್ಮವಾಗಿರಬಹುದು
ಆ ಬೂದಿ ತೆಕ್ಕೊಂಡೋಗಿ ಹರಿವಂತಾ ಗಂಗೇಲಿ ಬಿಟ್ಟುಬುಟ್ಟ್
ನನ್ನ ದೊಡ್ದಿಗೆ ಹೋಗೋಣ ಅಂತ್ಹೇಳಿ
ಪಟ್ಟಣಕಲ್ಲ ತೆಗದು ಬೀಸಾಡ್ಬುಟ್ಟು
ಗುಂಡಿಯನ್ನು ಬಗ್ಗಿ ನೋಡ್ತಾಯಿದ್ದ
ಎಲೋ ಸಂಕೆಣ್ಣೆ ಸಂಕೆಣ್ಣೆ ಅಂತೇಳಿ ಕೂಗ್ದ
ಸಂಕಮ್ಮಾ
ತಾವರೆ ಹೂವಿನ ಗದ್ದಿಗೆ ಮೇಲೆ ಮಲಗಿದ್ದವುಳು
ಬಲದಮೊಗ್ಗಲಾಗೆದ್ದು ಮ್ಯಾಲಕ್ಕೆ ಉಸೋ ಅಂತೇಳಿ ಕೈಕೊಟ್ಟಳು
ಯಜಮಾನ್ರೆ ಮೇಲಕ್ಕೆತ್ತುಕೊಳ್ಳಿ ಅಂದಳು
ಸಂಕಮ್ಮನ ಸಬುದ ಕೇಳ್ದ
ಮತ್ತಷ್ಟು ಕೋಪ ಬಂದುಬುಡ್ತು
ಇಂಥಾ ಕೆಟ್ಟಮುಂಡೆ ಮಗಳ ಧರೆಮ್ಯಾಲೆತ್ತಬಾರ್ದು
ಇವಳ ನೆತ್ತಿಮ್ಯಾಲೆ ಬಾರಿ ಗುಂಡಾಕಿ
ಗುಂಡಿಯೊಳಗೆ ಪ್ರಾಣತಗಿಬೇಕು ಅಂತೇಳಿ
ಒಂದು ಬಾರಿ ಗುಂಡು ಎತ್ತಿ ಹೊತ್ಗೋ ಹೋದ
ಇಂಥ ಗುಡ್ಡೇವೊಳಗೆ
ಹೊಸಲಲ್ಲಿ ಕುಳಿತಿದ್ದೋರು ಮಾಯ್ಕಾರಗಂಡ
ಕೆಟ್ಟಮುಂಡೆಮಗ ಕಲ್ಲೆತ್ತಾಕುಬುಡ್ತನೆ
ಇವನಿಗಿಲ್ಲೇ ನಾನು ಸೂಕ್ಷ್ಮ ಕೊಡಬೇಕು ಅಂತೇಳಿ
ಮಾದೇವ ಆ ಗುಂಡಿನ ಅಡಿವೊಳಗೋಗಿ
ಕಾಳಿಂಗ ಸರ್ಪನಾಗಿ ಮಲಗಿದ್ದಾರೆ
ನೀಲೇಗೌಡ ಹೋಗಿ ಕೈಹಾಕಿದ ತಕ್ಷಣವೇ
ನೀಲೇಗೌಡನ ಕೈ ಕಚ್ಚುಬುಟ್ಟು
ಮೂರುಕೊಳಗ ವಿಷಾಕೊಟ್ಟು
ಮೂರುಕೊಳಗ ರಕ್ತಾ ಎಳದುಬುಟ್ರು
ವಿಷಾ ಯಾವಾಗ ಮೈನಾ ಅಂಗಕ್ಕೇರುಬುಡ್ತು

ಅಲ್ಲಿ ಮೂರ್ಚೆನಾದರೆ ಹೊಂದವನೆ
ಮಲಗವನಲ್ಲ ನೀಲಯ್ಯಾs || ಕೋರಣ್ಯ ||

ಮೂರ್ಚೆ ಬಂದು ಮಗಲುಬಿಟ್ಟ ವಿಷ ಏರಿತ್ಲೇ
ದೊಡ್ಡ ಸೂಲು ಹೊಂಟೋಗದೆ
ಬಿಟ್ಟಗಣ್ ಬಿಟ್ಟಾಗೆ ಮ್ಯಾಲಕ್ಕೆ ಬಿಟ್ಟುಗಂಡು
ಸಣ್ಣ ಸೂಲು ಪುಕ್ಕ ಪುಕ್ಕಾ ಅಂತಾದೆ
ಸಂಕಮ್ಮ ಅಷ್ಟೊತ್ತು ಇಷ್ಟೊತ್ತ ನೋಡ್ದಳು
ತನ್ನ ಪತಿಯಾದ ನೀಲೇಗೌಡ ಕೂಗುಬುಟ್ಟು
ಎಲ್ಲಿ ಮರೆಯಾಗಿ ಹೋದ್ರೋ
ಈ ಕಾಡಿನಲ್ಲಿ ಬಿಟ್ಟು ಅಂತೇಳಿ
ಅಸ್ಸೋ ಉಸ್ಸೋ ಅಂತೇಳಿ ಕಷ್ಟದಿಂದ ಮ್ಯಲಕತ್ತಕೊಂಡು ಬಂದು
ಬಲಗಡೆ ತಿರುಗಿನೋಡ್ದಳು
ಓಡಿ ಬಂದು ಯಜಮಾನ್ರೆ ಯಜಮಾನ್ರೆ
ಮ್ಯಾಲಕ್ಕೇಳಿ ಅಂತೇಳಿ ಉರುಳುಸ್ತಾಳೆ
ಕೈಕಾಲಿಲ್ಲ
ಎದೆಗೆ ಕೈಯಾಕಿ ನೋಡ್ದಳು
ಪುಕ್ಕ ಪುಕ್ಕಾ ಅಂತಾ ಇತ್ತು ಸಣ್ಣ ಸೂಲು
ಗಂಡನ ತಲೆಯನ್ನು ತೊಡೆಯ ಮ್ಯಾಲಿಟ್ಟುಕೊಂಡು
ಮಾದಪ್ಪಾ ನನ್ನಪ್ಪನ ಮನೆದೇವ್ರೇ
ನನ್ನ ಮುತ್ತೈದೆ ಭಾಗ್ಯ ಹಾಳಾಗಿ ಹೋಯ್ತು
ನನ್ನ ಮಾಂಗಲ್ಯ ಸೂತ್ರ ಇಂದಿಗೆ ಸರಿಮಾಡ್ದಪ್ಪ ಅಂತೇಳಿ
ಗಂಡನ ತಾಲೆಯನ್ನು ತೊಡೆಯ ಮ್ಯಾಲಿಟ್ಟುಕೊಂಡು

ಅಮ್ಮ ಗಾಳುಗೋಳಿಂತಳುತಾವಳೆ
ಮಾದೇವ್ನಗ್ಯಾನ ಮಾಡವಳೇs || ಕೋರಣ್ಯ ||