ಮಲೇ ಸ್ವಾಲಿಗರ ನೀಲೇಗೌಡಾ
ಕೆಟ್ಟು ಮುಂಡೇ ಮಗ
ಸಂಕಮ್ಮನ ಕಷ್ಟ ನಿಷ್ಠುರ ನೋಡಲಿಲ್ಲ
ಕಣ್ಣಿಗೆ ಬಟ್ಟೆಯನ್ನ ಕಟ್ಟಿ ಕತ್ತಿ ಮ್ಯಾಲೆ ತಳ್ಳುಬಿಟ್ಟ ಮೊಕಣ್ಣಾಗಿ
ಸಂಕಮ್ಮ
ಮಹಾದೇವ ನನ್ನಪ್ಪನ ಮನೆ ದೇವರೆ
ಅಂತೇಳಿ ಮೊಕಣ್ಣಾಗಿ ಮಲೀಕಂಡಳು
ಸಂಕಮ್ಮ ಮಲಿಗಿದ ತಕ್ಷಣವೇ
ಆ ಎರಡು ಕತ್ತುವೆ ಭೂಮಿಗೆ
ಬಾಲೆಎಲೆ ಮಾಡಿ ಒಪ್ಪಂದವಾಗಿ ಮಡಿಕಂಡೋ
ಅರೆಗಳಿಗೆ ನೋಡ್ದ
ಅರ್ಧ ಗಂಟೆ ಟೈಮ್ ನೋಡ್ದ
ನೀಲೇಗೌಡ
ಕತ್ತಿ ಸಹಿತವಾಗಿ
ನನ್ನ ಮಡದಿ ಪ್ರಾಣಹೋಗಿದೆ ಒಳಗಡೆ
ಪ್ರಾಣ ಇದ್ರೇ ಮ್ಯಾಕ್ಕೆ ಹೇಳ್ತಾಯಿದ್ದಳು ಅಂತೇಳಿ
ಕೆಟ್ಟು ಮುಂಡೇ ಮಗ
ಆವಾಗ ಓಡುಬಂದು

ಅವಳ ಮಾರುದ್ದ ಮಂಡೆ ಇಡದವನೇ
ಮೇಲಕ್ಕೆ ಎತ್ತಿ ನಿಲಿಸವನೇs || ಕೋರಣ್ಯ ||

ಮೇಲಕೆತ್ತಿ ನಿಲ್ಸಗಂಡು ಕಣ್ಣಿನ ಬಟ್ಟೆ ಬಿಚ್ದಾ
ಗಂಡನ ಪಾದಕ್ಕೆ ನಮಸ್ಕಾರಗೊಳು ಮಾಡ್ತಾವಳೆ
ಛೇ ಕೆಟ್ಟ ಮುಂಡೇಮಗಳೆ
ಎಂಥ ವಿದ್ಯೆಯನ್ನ ಕಲ್ತಿದ್ದಿಯೇ

ಆರು ತಿಂಗಳು ಹಿಂದೆ ಬಿಟ್ಟು ಹೋದ ಮಾತ್ರಕ್ಕೆ
ಹೆಣ್ಣೆ ಕಾಡು ಕಟ್ಟವನ ಮಡಗಿದಿಯಾ
ಬೀಡು ಕಟ್ಟವನ ಮಡಗಿದಿಯ
ಕಾಡು ಸೋಲಗನ ಮಡಗಿದಿಯ
ಬೆಟ್ಟ ಸೋಲಗನ ಮಡಗಿದಿಯ
ಮಾರಾಠಿಯವನ ಮಡಗಿದೀಯ
ಮಾತುಳ್ಳೊನ ಮಡಗೀದೀಯ

ಕೇಳು ಕೇಳು ಸಂಕೆಣ್ಣೆ
ಗೆಲ್ತಿಯೇ ಕಾಣೋ ಸಂಕೆಣ್ಣೆ
ಮಡದಿ ಹೇಳಿದ ಮಾತ ಕೇಳೆಣ್ಣೆ
ನಿನ್ನ ಜೀವಕ್ಕೆ ಬುದ್ಧಿ ಹೇಳೆಣ್ಣೆs || ಕೋರಣ್ಯ ||

ಈ ಸತ್ಯ ನಾನು ಒಪ್ಪಲಿಲ್ಲ ಮಡದಿ
ಇನ್ನು ಒಂದು ಸತ್ಯಮಾಡಬೇಕು ಅಂದ್ರು
ಅಯ್ಯೋ ಯಜಮಾನ ನಿನ್ನ ಧಮ್ಮಯ್ಯ
ಜಿನ ಜಿನಕೆ ನನಗೆ ಹೊಟ್ಟೆ ಬಾರ ಜಾಸ್ತಿಯಾಗ್ತಾಯಿದೆ
ಮಕ್ಕಳು ಬೆಳೆತಾವೆ ಯಜಮಾನ
ನನ್ನ ದೋಸಮಾಡಬೇಡ ದಮ್ಮಯ್ಯ
ನನ್ನ ಮಕ್ಕಳು ಜನನವಾಗುಲಿ ಅಂದಳು

ಛೇ ಕೆಟ್ಟ ಮುಂಡೇ ಮಗಳೇ
ಈಗ್ಲೂ ಕೂಡ ಗಂಡಾನಿಗೆ ಡುಂಡಾರಿಕೆ ಮಾಡಿಯ
ಪತಿಗೆ ಪ್ರತಿ ಉತ್ತರ ಕೊಡಬೇಡ
ಹೆಜ್ಜೇನು ಕತ್ತಿಲಿ ತುಂಡೆರಡು ಮಾಡಿಬಿಟ್ಟೇನು
ಇಲ್ದೇವೋದ್ರೆ ಹೇಳ್ದಾ ಸತ್ಯಮಾಡು ಅಂದ್ರು
ಇನ್ನು ಯಾವ ಸತ್ಯ ಮಾಡ್ಲಿ ಯಜಮಾನ ಅಂದಳು

ನೋಡಲ ಮಡದಿ ಸಂಕೆಣ್ಣೇ
ನನ್ನ ಅರಮನೆ ಮುಂಭಾಗದಲ್ಲಿ
ಕೊಂಡಾ ತೆಗೆದುಬಿಟ್ಟೀನಿ
ಮೂರು ಗಾಡಿ ಬೆಜ್ಜಲು ಸೌದೆ ತಂದು ಹಸುಳೆ ಕೊಂಡ ಹಾಕ್ತಿನಿ
ಕೊಂಡಕೆ ಬೆಂಕಿ ಹಚ್ಚತೀನಿ ಸಂಕೆಣ್ಣೆ
ಕೊಂಡ ಧಗಧಗನೆ ಕತ್ತಿ ಉರಿತಾದೆ
ಆವಾಗ ನಿನಗೆ ಎಂಟುಮೊಳದ ಪಂಚೆಕೊಡ್ತಿನಿ
ಕಾಡು ಮಲ್ಲಿಗೆ ಹೂವು ಕೊಡ್ತಿನಿ
ಹುಟ್ಟಿರುವಂತ ಸೀರೆ ಬಿಚ್ಚಿ ಬಿಸಾಡುಬಿಟ್ಟು
ಎಂಟು ಮೊಳದೆ ಪಂಚೆ ಹುಟ್ಟಗಂಡು
ಕಾಡುಮಲ್ಲಿಗೆ ಹೂವು ಮುಡ್ಕಂಡು
ಹಸಳೆ ಕೊಂಡದ ಮೇಲೆ ಹೋಗಿ ನಿಂತ್ಕಳಬೇಕು ನೀನಿ
ನಿನ್ನ ಪ್ರಾಣ ಹೋಗಬಾರ್ದು
ಹುಟ್ಟಿರುವಂತ ಪಂಚೆ ಕಪ್ಪು ಮೆತ್ತಬಾರ್ದು
ಮಂಡೇಲಿ ಮುಡ್ದಿರುವಂಥ ಮಲ್ಲಿಎ ಬಾಡಬಾರದು
ಆಗ ಅದೇ ರೀತಿಯಾಗಿ
ಕೊಂಡದ ಒಳಗಡೆ ಮೀದು ಬಂದ್ರೆ

ನಿನ್ನ ಏಳುಮಲೆ ಮಹಾದೇವನ ಸತ್ಯ
ಒಪ್ತೀನಿ ಕಾಣೋ ಸಂಕೆಣ್ನೆs || ಕೋರಣ್ಯ ||

ಶಿವಶರಣೆ ಗಂಡನ ಮಾತನ್ನ ಕೇಳಿ
ದುಃಖ ಮಾಡ್ಕಂಡು ಮನದಲ್ಲಿ
ಮಾದಪ್ಪ
ನನ್ನಪ್ಪನ ಮನೆ ದೇವರೆ
ಹಸೆಳೇ ಕೊಂಡ ಧಗಧಗನೆ ಕತ್ತಿ ಬಗ್ಗನೆ ಉರಿತಾದೆ
ಆ ಕೊಂಡದ ಮೇಲೆ ಎಂಟುಮೊಳದ ಪಂಚೆ ಉಟ್ಕಂಡು
ಕಾಡು ಮಲ್ಲಿಗೆ ಹೂವು ಮುಡುಕೊಂಡ ತಕ್ಷಣವೇ
ಸುಟ್ಟು ಬಸ್ಮ ಬೂದಿಯಾಯ್ತಿನಿ ತಂದೆ
ಮಾದಪ್ಪ

ನನ್ನ ಹೆಣ್ಣು ಪ್ರಾಣಿಯ ಗೋಳು ನಿಮಗೆ
ಎಲ್ಲರುವಾಯ್ತು ಮಾದೇವಾs || ಕೋರಣ್ಯ ||
ಆಲಂಬಾಡಿ ಮಾದೇವ ಅರಗಣ್ಣ ಬಿಟ್ಟು ನೋಡಯ್ಯ
ಹಾಲರಬಿ ಮೇಲೆ ಹೂವಿನ ದಂಡೆ ವಾಲಾಡಿ ಬಂದೋ

ಮಾದಪ್ಪ ಮಾಯಿಕಾರ ಗಂಡ
ಸಂಕಮ್ಮನ ಬುಟ್ಟು ಬಿಟ್ಟೋಗಲಿಲ್ಲ
ಒತ್ತಲೆ ಕಾದು ಕುಂತಿದ್ದಾರೆ
ಈ ನೀಲೇಗೌಡನ ಆಟ
ನನ್ನ ಸತ್ಯ ನೋಡ್ಲಿ ಅಂತೇಳಿ
ಸಂಕಮ್ಮನ ದುಃಖ ನೋಡ್ಲಾರದೇ
ಎದರಬೇಡ ಕಂದ ಸಂಕಮ್ಮ
ಕಂದಾ ಹಸೆಳೆ ಕೊಂಡದ ಮೇಲೆ
ಅರಗಳಿಗೆ ಇಲ್ದಿದ್ರೆ ಅರ್ಧಗಂಟೆ ನಿಂತಿದ್ದು ಬಾ ಕಂದ
ಕೊಂಡವನ್ನೆ ಮಿಯ್ದು ಬಾ ಕಂದ
ಆ ಕೊಂಡವನ್ನೆಲ್ಲ ತಾವರೆ ಹೂವಿನ ಗದ್ಗೆ ಮಾಡ್ತಿನಿ ಕಂದಾ

ನಿನ್ನ ಗಂಡ ಮಾಡುವ ಗಾರುಡಿ ವಿದ್ಯಾ
ನೋಡುವೆನು ಒಂದರೆಗಳಿಗೇs || ಕೋರಣ್ಯ ||

ಸರಗೂರು ಶರಣರು ಬರುವಾಗ
ಸಡಗರವೆಲ್ಲ ಮಲೆಯೊಳಗೆ
ಮಾದೇವ ನಿಮ್ಮ ಮಾಯವೇ
ಚೆಂದ ನಿಮ್ಮ ಮಾಯ ರೂಪಿನಿಂದ

ಆವಾಗಲೀಗ ಮಲೇಸೋಲಿಗ ನೀಲೇಗೌಡ
ಸಂಕಮ್ಮನ ಧರ್ಮಪತಿವ್ರತೆಯೆಂಬುದು ಗೊತ್ತಿಲ್ಲ
ಅಸಮಾನಕಾರ ದುಸಮಾನಕಾರ
ತನ್ನ ಹೊಟ್ಟೆ ಒಳಗೆ ಕಳವಳ
ಯಾತಕ್ಕೋಸ್ಕರ ಅಂದ್ರೆ
ನನ್ನ ಮಡದಿಅಂದವಾದೋಳು ಚಂದವಾದೋಳು
ಯಾರ್ಯಾರ್ನೋ ಸೇರಸ್ಕಂಡು
ಎಲ್ಲ ವಿದ್ಯ ಕಲ್ತು ಬಿಟ್ಟವಳೇ ನನ್ಗಿಂತ ಹೆಚ್ಚಾಗಿ
ನನ್ನನ್ನು ಮೋಡಮಾಡ್ತಳೆ
ಕೆಟ್ಟ ಮುಂಡೇ ಮಗಳ ಪ್ರಾಣ ತೆಗಿಬೇಕು
ಇಲ್ಲವಾದ್ರೆ ಅವಳು ಮಾಡುವ ಸತ್ಯ ನಾನು ನೋಡಲೆಬೇಕು
ಅಂತೇಳಿ
ಹಟ ಮಾಡ್ತಾವನೆ ನೀಲೇಗೌಡ
ಅರಮನೆ ಮುಂಭಾಗದಲ್ಲಿ
ಕೊಂಡವನ್ನ ತೆಗೆದು
ಮೂವತ್ತೇಳು ಬಂಡಿ ಬೆಜ್ಜಲ ಸೌದೆತಂದು
ಹಸೆಳೆ ಕೊಂಡ ಹಾಕುಬಿಟ್ಟೂ
ಕೊಂಡಾಕ್ಕೆ ಬೆಂಕಿ ಹಚ್ಚಿದ್ದಾನೆ

ಕೊಂಡ ಧಗಧಗಣೆ ಕತ್ತಿ ಭಗಭಗನೆ ಉರಿತಾದೆ
ಎಂಟು ಮೊಳದ ಪಂಚೆ ಕೊಟ್ಟ ಸಂಕಮ್ಮನಿಗೆ
ಕಾಡುಮಲ್ಲಿಗೆ ಹೂವು ತಂದು ಕೊಟ್ಟ
ಎಲೋ ಸಂಕೆಣ್ಣೆ ಜಾಗೃತಿಯಾಗಿ ಹುಟ್ಗಂಡು ಕೊಂಡುಕ್ಕೆ
ಬಾ ಅಂದ
ಸಂಕಮ್ಮ ಪತಿ ಕೊಟ್ಟದ್ದೇ ನನಗೆ ಪರಮಾನ್ಯ
ಪತಿಯಿಂದಲೇ ಮೋಕ್ಷ ಪತಿಯಿಂದಲೇ ಸ್ವರ್ಗ
ಪತಿಯಿಲ್ಲದ ಹೆಂಗಸು ಪಾಸಣಕಿಂತ ಕಡೆ ಅಂತೇಳಿ
ಪತಿ ಕೊಟ್ಟತೆ ಎಂಟುಮೊಳದ ಪಂಚೆ ಹುಟ್ಗಂಡಳು
ಕಾಡುಮಲ್ಲಿಗೆ ಹೂವು ಮುಡ್ಕಂಡು
ಮಾದಪ್ಪನಿಗೆ ಕೈಮುಕ್ಕಂಡು ಬರ್ತಾವಳೆ
ಪತಿವ್ರತೆಯಾದ ಸಂಕಮ್ಮನ ಕೂಡಾ
ಮಾದಪ್ಪ ಬೆನ್ನ ಒತ್ತಲ್ಲಿ ಬಂತಾವ್ನೇ
ಹೆಣ್ಣು ಮಗಳಿಗೆ ನಾನು ದೈರ್ಯ ಕೊಡಬೇಕು ಅಂತೇಳಿ
ಮಾದಪ್ಪ ಹಿಂದಗಡೆ ಬರ್ತಾಯಿದ್ರೇ
ಆ ಕೆಂಡವಾಗಿರ್ತಕ್ಕಂತದೆಲ್ಲ
ತಾವರೆ ಹೂವಿನ
ಗದ್ದುಗೆ ಆಗುಬುಡ್ತು
ನೀಲೆಗೌಡ್ನ ಕಣ್ಣಿಗೆ ಕತ್ತಿ ಉರಿತಾದೆ
ಅರಗಳಿಗೆ ಹೋಗಿ ಸಂಕಮ್ಮ ನಿಂತ್ಕಂಡಳು ಕೈಮುಕ್ಕಂಡು
ಸುತ್ತ ಬೆಂಕಿ ಉರಿ ಕಾಣ್ತಾದೆ ಅವನ ಕಣ್ಣಗೆ
ಸಂಕಮ್ಮ ಕೊಂಡದಲ್ಲಿ ನಿಂತಿದ್ದಾಳೆ
ತಾವರೆ ಹೂವಿನ ಗದ್ದುಗೆ ಮೇಲೆ
ಅರೆಗಳಿಗೆ ನೋಡದ ಅರ್ಧಗಂಟೆ ಟೈಮ್ ನೋಡ್ದ
ಕೆಟ್ಟು ಮುಂಡೇ ಮಗಳು
ಬಿಟ್ಟೂ ಕಣ್ ಬಿಟ್ಟಾಗೆ ನಿಂತವಳಲ್ಲ
ಎಂಥ ವಿದ್ಯಾ ಕಲ್ತರಬಹುದು
ಇವಳ ಹೆಜ್ಜೇನು ಕತ್ತಿಗೆ ಈಡುಮಾಡಬೇಕು ಅಂತೇಳಿ
ಎಲೋ ಸಂಕೆಣ್ಣೇ ಕೊಂಡವನ್ನ ಬಿಟ್ಟು ಎದ್ದು ಬಾ ಅಂದ್ರು
ಆವಾಗ ಪತುವ್ರತೆಯಾದ ಸಂಕಮ್ಮ

ಅಮ್ಮ ಗಂಡಾನ ಮಾತ ಕೇಳವಳೇ
ಕೊಂಡನಾದರು ಬಿಟ್ಟವಳೇ
ಕೊಂಡನಾದರು ಇಳದವಳೆ
ತನ್ನ ಗಂಡನ ಪಾದ ಇಡದವಳೇs || ಕೋರಣ್ಯ ||

ಛೇ ಕೆಟ್ಟು ಮುಂಡೇ ಮಗಳೇ ಅಂತೇಳಿ
ಕಾಲುಗೆ ನಮಸ್ಕಾರ ಮಾಡುಕೆ ಬಂದೋಳಿಗೆ
ಒದ್ದುಬಿಟ್ಟ ನೀಲೇಗೌಡ
ಸಂಕಮ್ಮನಿಗೆ ಎಂಟು ತಿಂಗಳು
ಮುಂದುವರಿದು ಒಂಬತ್ತನೆ ತಿಂಗಳು ನಡಿತಾಯಿದೆ
ಒಂಭತ್ತು ತಿಂಗಳು ಗರ್ಭಿಣಿ
ಅಸ್ಸೋ ಉಸ್ಸೋ ಅಂತೇಳಿ
ಬಲಮಗ್ಗಲಾಗಿ ಮೇಲ್ಕೆದ್ದು ಕುಂತ್ಗಂಡಳು
ಯಜಮಾನ
ನಿನ್ನ ಪಾದ ಒತ್ತಿನಿ ದಮ್ಮಯ್ಯಾ
ನಾನು ಪ್ರಾಣ ಹೋದ್ರು ಹೋಗ್ಲಿ
ಮಕ್ಕಳು ಜನನವಾಗಲೀ ಯಜಮಾನ
ಇನ್ನು ಇದೊಂದು ಉದ್ಧಾರಮಾಡಬೇಕು ಎಂದ್ರು
ಛೇ ಕೆಟ್ಟ ಮುಂಡೇ ಮಗಳೇ
ನನಗೇನು ಮಕ್ಕಳು ಹುಟ್ಟಲಿಲ್ಲ
ಆರು ತಿಂಗಳು ಬಿಟ್ಟೂ ಹೋಗಿದ್ದೀ ನಿನ್ನ
ಆರು ತಿಂಗಳ್ಗೂ ಬರುವತ್ತಿಗೆ ಗರ್ಭಿಣಿಯಾಗಿದ್ದೀ ಮಡದಿ
ಮಾದಪ್ಪ ಮಾದಪ್ಪ ಅಂತೇಳಿ
ಕಾಡು ಜಂಗುಮನ್ನ ಕೂಡ್ಕಂಡಿದ್ದೀಯಾ
ಕೆಟ್ಟು ಮುಂಡೇ ಮಗಳೇ
ಇವತ್ತಿನ ರಾತ್ರಿ ಹೇಳಿದ ಸತ್ಯ ಮಾಡದೆ ಹೋದ್ರೆ
ಹೆಜ್ಜೇನು ಕತ್ತಿಲಿ ನಿನ್ನ ಮಂಡೆರಡು ತುಂಡೆರಡು ಮಾಡ್ತಿನೀ
ಯಾರು ಸಪೋಟ್ ಕೊಡ್ತರೆ ನಿನಗೆ
ಕಾಡು ಕಟ್ಟೋವು ಮೇಡು ಕಟ್ಟೋವು
ಯಂತ್ರಗಾರ ಮಂತ್ರಗಾರ ಬರ್ತಾರೆ ನನ್ನ ಕಾಣದಾಗೆ
ಅದರಿಂದ ಗೆಲ್ತ ಇದ್ದಿಯೇ
ಇವತ್ತು ಅರಮನೆ
ಒಳಗೆ ನಿನ್ನ ಸತ್ಯಮಾಡಿಸ್ತಿನಿ ಅಂದ್ರು
ಯಜಮಾನ
ಒಂಬತ್ತು ಮಾಸ ತುಂಬೋಗುಬುಡ್ತು
ನಾಳೆ ಬೇಕಾದರೆ ಹೇಳ್ದಾ ಸತ್ಯ ಮಾಡ್ತಿನಿ
ಹೇಳ್ದಾ ಸತ್ಯಕ್ಕೆ ಒಳಗಾಗುತ್ತೀನಿ ಅಂದಳು
ಎಲಾ ಮಡದಿ ಇವತ್ತಿನ ರಾತ್ರಿ ಮಾಡಬೇಕು ಅಂದ್ರು
ಯಾವ ಸತ್ಯ ಯಜಮಾನ ಅಂದಳು
ನನ್ನ ಅರಮನೆ ಒಳಗೆ ವಜ್ರದೀಪ ಅದೆ ಚಿಕ್ಕ ಮನೆ
ಆ ಮನೆಗೆ ಮೂರು ಕಂಡುಗ ಎಳ್ಳು ಮೂರು ಕಂಡುಗ ಜೀರಿಗೆ
ಮೂರು ಕಂಡುಗ ಸಣ್ಣಕ್ಕಿ
ಆರು ಮೂರು ಒಂಬತ್ತು ಕಂಡುಗಾನು ಬೆರಸಿ ಒಳಗೆ ತುಂಬು ಬಿಟ್ಟಿವುನಿ
ಒಳಗಡೆ ನಿನ್ನ ಕೂಡುಬಿಟ್ಟು
ಬೀಗ ಹಾಕಂದು ಬಾಗಲ್ಲಲ್ಲಿ ಕುಂತ್ಕತ್ತಿನಿ
ಯಾವ್ನು ಬರ್ತನೆ ನೋಡ್ತಿನಿ
ಬೆಳ್ಳಿ ಮೂಡಿ ಬೆಳಗಾಗು ಹೊತ್ಗೆ ಸಂಕೆಣ್ಣೇ
ಮೊರ ತಕ್ಕಂಡು ಮಾಡಬಾರ್ದು
ಕಿಟಕಿ ಬಾಗಲು ತಗಿಬಾರ್ದು
ದೀಪ ಅಂಟಿಸಬಾರ್ದು
ಆ ರೀತಿಯಾಗಿ ನಿನ್ನ ಎರಡು ಕೈನಲ್ಲುವೇ
ಮೂರು ಜಾತಿಯ ದಾನ್ಯವನ್ನು ಹಾದು ಮೂರ್ರಾಶಿ ಮಾಡಬುಟ್ರೇ

ನಿನ್ನ ಅಪ್ಪಾನ ಮನೆಯ ಮಾದೇವ್ನ ಸತ್ಯ
ಒಪ್ತೀನಿ ಕಾಣೋ ಸಂಕೆಣ್ಣೆs || ಕೋರಣ್ಯ ||
ಹಲೆಸಾನು ಮರದ ನೆರಳಲ್ಲಿ ಪರಸೆ ಪಾವಡ ಹೂಡವರೇ
ಹರುಷದಿಂದ ಮಾದಯ್ಯಗಿರಿ
ಪರಸೆ ಮೆರೆದಾವೋ

ಮಾದಪ್ಪ ಎಲ್ಲಿ ಮರೆಯಾದೆ ತಂದೆ
ನನಗೆ ಧರ್ಮ ಹೇಳ್ತಿದ್ರಲ್ಲ ಗುರುವೆ ಇವತ್ತು ನೋಡ್ತಿನಿ
ನಿನ್ನ ಹೆಸ್ರು ಮೇಲೆ
ನಾಳೆ ಬೆಳಗ್ಗೆ ನನ್ನ ಪ್ರಾಣ ಹೋದ್ರು ಸರಿಯೇ
ಮಾದಪ್ಪ ಅಂತೇಳಿ ಅರಮನೆ ಒಳಗೋಗಿ ಪಟ್ಟೇ ಮಂಚದ
ಮೇಲೆ ಮಲೀಕಂಡಳು ಸಂಕಮ್ಮ
ಮಲೆ ಸೋಲಗ ನೀಲೇಗೌಡ
ಕೆಟ್ಟು ಮುಂಡೇ ಮಗನು ಮಾಯಿ ಸತ್ಯ ಮಾಡ್ತಾಯಿದ್ದಾನೆ
ಮೂರು ಕಂಡುಗ ಎಳ್ಳು ಮೂರು ಕಂಡುಗ ಜೀರಿಗೆ
ಮೂರು ಕಂಡುಗ ಸಣ್ಣಕ್ಕಿ
ಆರು ಮೂರು ಒಂಬತ್ತು ಕಂಡುಗಾನು
ವಜ್ರದ ಮನೆ ಬೀಗ ಹಾಕುಬಿಟ್ಟ
ಅಲ್ಲೋ ಸಂಕೆಣ್ಣೆ
ಬೆಳಗಾಗು ಹೊತ್ಗೆ ಈ ಸತ್ಯಮಾಡು ಅಂತೇಳು ಬಿಟ್ಟು
ಯಾವಾಗ ವಜ್ರುದ ಮನೆ ಬೀಗ ಹಾಕುಬುಟ್ಟು
ಈಚೆಗೆ ಬಂದು
ಮಲೀಕಂಡನೋ
ಬಾಗಲಲ್ಲಿ ಕಾಯ್ಕಂಡು
ಆವಾಗಲೀಗ ನನ್ನಪ್ಪಾಜಿ ಮಾದೇವ
ಉತ್ತುರು ದೇಶದೋರು
ಉಡುಮೂಡದ ಲಿಂಗಯ್ಯ
ಸಾಮಾನ್ಯವಲ್ಲ
ಉಡುಮೂಡದ ಲಿಂಗಯ್ಯ ಅಂದ್ರೆ ಏನು?
ಉಳಿಯಲ್ಲಿ ಹೊಡಿಯಲಿಲ್ಲ ಬಾಚಿಯಲ್ಲ ಕೆತ್ತಲಿಲ್ಲ
ಅಂತ ಪುಟ್ಟು ಲಿಂಗದ ಮಾದಪ್ಪ
ಪ್ರತ್ಯಕ್ಷವಾಗೋದ್ರು
ಸಂಕಮ್ಮನ ಅರಮನೆ ಒಳಗೆ

ಎಳುಗಾವಿ ಉಟ್ಟುಕೊಂಡು
ಸುಳುಗಾವಿ ಮುಚ್ಚಿಕೊಂಡು
ಹೊಕ್ಕಳುಗಂಟ ಹುಲಿ ಚರ್ಮ
ಹಸ್ತ ಪಾದಕೆ ವೀರಗೆಜ್ಜೆ
ನನ್ನಯ್ಯ
ತೋಳುತುಂಬ ರುದ್ರಾಕ್ಷಿ
ಜಂಗು ಬಲಗೈಲಿ ಇಡ್ಕಂಡು
ಮುತ್ತಿನ ಜೋಳಿಗೆ ಧರಿಸಿ ಎಡಗೈಲಿ ಇಡ್ಕಂಡು

ಕಂದಾ ಹೆದರಬೇಡ ಕಂದಮ್ಮ
ಹೆದರಬೇಡ ಕಂದಮ್ಮ
ಬೆದರು ಬೇಡ ಕಂದಮ್ಮ
ಪಾತಿವ್ರತೆ ಹೆಣ್ಣು ಮಗಳೇ
ಮಗಳೇ ನಾನಿದ್ದ ಮೇಲೆ ಭಯವೇಕಮ್ಮ
ಸತ್ಯುವಂತೆ ಸಂಕಮ್ಮಾs || ಕೋರಣ್ಯ ||

ಅಯ್ಯಾ ಬೆಟ್ಟೆಲ್ಲ ಜೋಲು ಮಾದೇವ
ಬಿದುರೆಲ್ಲ ಜೋಲು
ಉತ್ತರ ದೇಶದ ಮಾದಪ್ಪ
ನಿಮ್ಮ ಮುಟ್ಟಿದರೆ ಜೋಲು

ಹೆದರಬೇಡ ಕಂದಾ
ಧೈರ್ಯವಾಗಿರು ಮಗಳೆ ಸಂಕಮ್ಮ
ಈ ಹೊತ್ತು ಹನ್ನೆರಡು ಗಂಟೆ ರಾತ್ರಿ ಒಳಗೆ
ಕಲ್ಲು ನೀರು ಕರ್ಗು ಹೊತ್ತು
ಹಕ್ಕಿ ಗಲಗಿಲ್ಲ ಪಕ್ಷಿ ಗಲಗಿಲ್ಲ
ಹರಿವಂತೆ ಗಂಗಮ್ಮ
ಅರಗಳಿಗೆ ನಿದ್ರೆ ಮಾಡುವಂತ ಟೈಮ್ ನಲ್ಲಿ
ನಿನ್ನ ಗರ್ಭದಲ್ಲಿರುವಂತ ಮಕ್ಕಳು ಬರ್ತರೆ ಕಂದ
ಮಕ್ಕಳು ಬರು ಸ್ಥಳ ಹೇಳಕ್ಕೋಡಪ್ಪ ಅಂದ್ರು ಸಂಕಮ್ಮ
ಕಂದಾ
ಒಂಬತ್ಥುದ್ವಾರದಲ್ಲಿ ಬಂದರೆ
ಮಕ್ಕಳು ಲೋಕ ಕಲ್ಯಾಣ ಮಾಡಲಾರರು
ಸೂತ ಪುತ್ರರಾಗ್ತಾರೆ
ನಿನಗೆ ಹೊಟ್ಟೇ ಬಾರ ಜಾಸ್ತಿಯಾದಾಗ ನೋವು
ಮೊಕ್ಕಣ್ಣಾಗಿ ಮಲಗಬಿಡು ಕಂದಾ
ಹಿಂದಿರುಗು ಮಗಳೆ
ಮಕ್ಕಳು ಬರುವಂತ ಸ್ತಳದಲ್ಲಿ ಗೆರೆ ಬರಿತಿನಿ ಅಂತೇಳಿ
ಅವರು ನಾಗಬೆತ್ತ ಕ್ಕೈಲಿಡ್ಕಂಡು ಮಾದಪ್ಪ
ಸಂಕಮ್ಮನ ಬೆನಿನ ಮೇಲೆ ಬರಿತ ಇದ್ದಾರೆ
ಮಗಳೆ ಧೈರ್ಯವಾಗಿರು
ನಿನ್ನ ಜೊತೆಯೇ ಒಬ್ಬ ಸೂಲಗಿತ್ತಿ ಬರ್ತಾ ಇದ್ದಾಳೆ
ನಿನಗೆ ಹುಷಾರಾಗಿ ನೋಡ್ಕೋತಾಳೆ ಕಂದ
ಅಂತೇಳಿ ನಾಗಬೆತ್ತ ಇಡ್ಕಂಡು
ಬೆನ್ನಿನ ಮೇಲೆ ಬರಿತಾ ಇದ್ದಾರೆ ಎಡಗಡೆ ಬಲಗಡೆ

ಅಮ್ಮ ಎಡಗಡೆ ಕಾರಯ್ಯ ಬಲಗಡೆ ಬಿಲ್ಲಯ್ಯ
ಮಕ್ಕಳು ಬರುವರು ನೋಡಮ್ಮಾs || ಕೋರಣ್ಯ ||

ಎಡಗಡೆ ಕಾರಯ್ಯ ಬಲಗಡೆ ಬಿಲ್ಲಯ್ಯ
ಬೆನ್ನ ಮಧ್ಯ ಸಿಳಿಕ್ಕಂದು ಬರ್ತರೆ ಮಗಳೆ
ಮೊದಲೇ ನೀನು ಮುಟ್ಟಿ ಮುದ್ದಾಡಬೇಡ ಕಂದಾ
ಅದಕ್ಕೊಬ್ಬ ಸೂಲಗಿತ್ತಿ ಬರ್ತಳೆ ಅಂತೇಳಿ
ಸಂಕಮ್ಮನಗೆ ಧೈರ್ಯ ಹೇಳಿ
ಪಟ್ಟೇ ಮಂಚದಲ್ಲಿ ಬಿಟ್ಟು ಬಿಟ್ಟು ಮಾದಪ್ಪ

ಅಯ್ಯಾ ನಾಗಳ್ಳಾದ ಬೋರೆಗಾಣೆ
ಆದಿ ಗುರು ದಯಮಾಡವರೇs || ಕೋರಣ್ಯ ||
ಬೆಟ್ಟದ ಮೇಗಳ ಕಲ್ಲಿಗೆ
ಹನ್ನೆರಡು ಸಾವಿರ ಮಲ್ಲಿಗೆಯೋ
ರಾಮವ್ವ ತಂದು ಇರಿಸಿದಳಯ್ಯ ರಾಜಮಲ್ಲಿಗೆಯಾ

ಮಾದಪ್ಪ ಆವಾಗಲಿಗ ಕೊಕ್ಕರೆ ಕೊನಬೋಳಿ
ಬೆಟ್ಟದ ಮಾಳವನ್ನ ಬಿಟ್ಟು
ಆವಾಗ ಸತ್ತುರೆ ಮೂಡ್ಲಿಗೆ ಬಂದರು
ಸತ್ತುರೆ ಮೂಡ್ಲಲ್ಲಿ ನಿಂತ್ಕೊಂಡು
ತಾಳು ಬೆಟ್ಟದಲಿ ನಿಂತ್ಕೊಂಡು ಮೂಕಳ್ಳಿ ಮಾರವ್ವನ ಕರುದ್ರು
ಕಂದಾ
ಮೂಕಲ್ಲಿ ಮಾರಮ್ಮ
ಜಾಗ್ರತೆಯಾಗಿ ಓಡ್ ಬಾ ಕಂದ
ಕ್ಷಣಮಾತ್ರದಲ್ಲಿ ಬಂದ್ರು ಮೂಕಳ್ಳಿ ಮಾರಮ್ಮ
ಆ ಳಬ್ಬರಿಸ್ಕಂಡು ಓಡ್ಬಂದಳು ಸತ್ತುರೆ ಮೂಡ್ಲುಗೆ
ಛೇ ಮುಂಡೇ
ರಾಕ್ಷಸ ರೂಪ ಮರ್ತು ಬಿಡು
ಮರಸೋ ಸಣ್ಣ ಬಾಲಕಿಯಾಗಿ
ನೀನು ವಯಸ್ಸು ರೂಪು ತಾಳಿಕೊಂಡು
ಬಿಳಿ ಸೀರೆಯನ್ನ ಹುಟ್ಟಗಂಡು
ಆ ಕೊಕ್ಕರೆ ಕೊನಬೋಳಿ ಬೆಟ್ಟದ ಮಾಳದಲ್ಲಿ
ಸಂಕರಮ್ಮನ ಅರಮನೆ ಒಳಗೆ ಹೋಗಿ
ಆ ಸಂಕಮ್ಮನ ಪಕ್ಕದಲ್ಲಿ ನಿಂತುಕೋ ಪಟ್ಟೇ ಮಂಚದಲ್ಲಿ
ಆ ಮಗಳಿಗೆ ಗಂಡು ಮಕ್ಕಳು ಜನನವಾಗ್ತವೆ
ಆ ಮಕ್ಕಳನ ಎತ್ತಗಂಡು
ನಿನ್ನ ತೊಡೆ ಮೇಲೆ ಇಟ್ಟಗಂಡು
ಆ ಸಂಕಮ್ಮನಿಗೆ
ಮೈಕೈ ಸವರಿ ಬಟ್ಟೆ ಉಡ್ಸಿ
ಸಂತೈಸಿ
ಅವಳಿಗೆ ಆಶೀರ್ವಾದ ಮಾಡುಬಿಟ್ಟು
ಬಾ ಕಂದ ಅಂದ್ರು
ಮೂಕಳ್ಳಿ ಮಾರಮ್ಮ

ಮಾದೇವನ ಮಾತ ಕೇಳಕಂಡು
ಆವಾಗ ಬಿಳಿ ಸೀರೆ ಉಟ್ಟಗಂಡು

ಅಯ್ಯ ಸತ್ತುಬಾಲೆ ಸಂಕಮ್ಮನ ಮನೆಗೆ
ಬಂದವಳಲ್ಲ ಮಾರಮ್ಮ || ಕೋರಣ್ಯ ||