ಎಲ್ಲಿದ್ದೀಯಪ್ಪ ಮಾದೇವಾ
ನಿಮ್ಮ ಭಕ್ತರ ನಿಜವ ನೋಡಾಯ್ಯಾ
ಮನವ ಒಪ್ಪಿ ದುಡುಗಳ ನೋಡೋ
ದುಂಡುಳ್ಳ ಮಾದೇವಾ

ಮಾಯಕಾರ ಗಂಡ ಮಾದೇಸ್ವರ ಸ್ವಾಮಿ
ಸಂಕಮ್ಮನ ದುಃಖವನ್ನು ನೋಡಲಾರದೇ
ಪ್ರತ್ಯಕ್ಷವಾಗುಬುಟ್ರು ನಿಜರೂಪ ತಾಳಕೊಂಡು
ಯಾತಕ್ಕೋಸ್ಕರ ನೀಲೇಗೌಡ ಕಣ್ಣು ಮುಚ್ಚುಬುಡ್ತಾನೆ ಇನ್ನು ಅಂತೇಳಿ
ಎಳಗಾವಿ ಎಳದೊದ್ದು ಸುಳಗಾವಿ ಮುಸಗಿಟ್ಟುಕೊಂಡು
ಮುತ್ತಿನ ಜೋಳಿಗೆ ಮುಂಗೈಲಿ ಧರಿಸಿಕೊಂಡು
ಮಾದೇವಾ
ಧರೇ ಗಾತ್ರದ ದುಂಡಕೋಲು ಕೈಲಿಡುಕೊಂಡು
ಮಹಾಪ್ರಭು ಸಂಕಮ್ಮನ ಪಕ್ಕದಲ್ಲಿ ನಿಂತ್ಕೊಂಡ್ರು
ಕಂದಾ ಸಂಕಮ್ಮ
ನನ್ನ ಗಂಡನಾದ ನೀಲೇಗೌಡ
ನಿಂತಾಗೇ ಗೋಗಲ್ಲು ಮಾಡ್ತಾನೆ ಅಂತೇಳದಲ್ಲ ಕಂದಮ್ಮ
ನಿನ್ನ ಗಂಡಾನ ವಿದ್ಯಾ ನನ್ನ ವಿದ್ಯಾ ನೋಡು ಮಗಳೆ ಅಂತೇಳಿ
ಹೆದರಬೇಡ ಕಂದ ಅಂತೇಲಿ
ತಮ್ಮ ಕಾವಿದಟ್ಟಿಯಲ್ಲಿದ್ದಂತಾ ವಿಷದ ಕಲ್ಲು ತೆಗೆದು
ನೀಲೇಗೌಡನ ಕೈಮೇಲೆ ಮಡಗಿದ್ರು
ಆ ವಿಷಾನೆಲ್ಲ ಎಳದುಬುಡ್ತು ಮೂರುಕೊಳಗ ವಿಷವ
ವಿಷಾ ಯಾವಾಗ ಎಳದುಬುಡ್ತೋ
ಆ ಕಲ್ಲೆತ್ತುಕೊಂಡು ಮಾದಪ್ಪ
ಮಾಯವಾಗಿ ಹೋಗಿ ಬಿಳಿಪಲ್ಲಿಯಾಗಿ ಕೂತ್ಕಂಡ್ರು
ವಿಷಾ ಯಾವಾಗ ಹೋಗಬುಡ್ತೋ
ನೀಲೇಗೌಡನಿಗೆ ಹೋಗಿದ್ದಂತ ದೊಡ್ಡಸೂಲು
ಆ ಸಣ್ಣ ಸೂಲಿನೊಂದಿಗೆ ಬಂದುಬಿಡ್ತು
ಸ್ವಲ್ಪ ಚೇತರಿಸ್ಕಂಡ ನೀಲೇಗೌಡ

ಮಡದಿ ಮೊಕುವ ನೋಡವನೆ
ಮಲೆಯಸ್ವಾಲುಗ ನೀಲಯ್ಯಾ
ಅರೆಗಣ್ಣ ಬಿಟ್ಟು ನೋಡಾವನೇ
ಮಲೆಯಾ ಸೋಲುಗ ನೀಲಯ್ಯಾ
ಮಡದೀ ಮೊಕವ ನೋಡವನೇ
ಚಕ್ಕನೆ ಮೇಲಕ್ಕೆ ಎದ್ದವನೇ
ಕೇಳೊ ಕೇಳೋ ಸಂಕೆಣ್ಣೆ
ಹಾವಾಡ್ಗನ ಮಡಗಿದ್ದೀಯಾ
ಅವರಿಂದ ಕಾಣೋ ಸಂಕೆಣ್ಣೆ
ಗಾಡಿಗರ ವಿದ್ಯಾ ಕಲತಿರುವೇ
ಕೇಳೋ ಕೇಳೋ ಸಂಕೆಣ್ಣೆ
ಮಡದಿ ಹೇಳುವ ಸತ್ಯ ಮಾಡೆಣ್ಣೆ
ನಿನ್ನ ಪ್ರಾಣಕ್ಕೆ ಬುದ್ದಿ ಹೇಳೆಣ್ಣೇs || ಕೋರಣ್ಯ ||

ಎಲ್ಲೋ ಕೆಟ್ಟ ಮುಂಡೇ ಮಗಳೇ
ಈ ಅಡವಿ ಅರಣ್ಯದಲ್ಲಿ ಹಾವಾಡಿಗರು ಬರ್ತಾ ಇದ್ರು
ಹಾವು ಹಿಡಿಯದಕ್ಕೆ
ಅವುರನ್ನೇನಾದ್ರು ಕರದು ಕೂರಸ್ಕಂಡು
ಅವರಲ್ಲಿ ಇದ್ಯಾ ಕಲಿರಬಹುದು
ಅದರಿಂದ ನನಗೆ ಸರಪ್ಪನ ಕೈಲಿ ಕಚ್ಚಿಸಿದ್ದೀಯೇ
ಈ ಸತ್ಯ ನಾನು ಒಪ್ಪೋದಿಲ್ಲ
ಇನ್ನೊಂದು ಸತ್ಯದಲ್ಲಿ ನಿನ್ನ ಪ್ರಾಣ ತಗಿತೀನಿ ಮಡ್ದಿ
ನಾನು ಹೇಳಿದ ಸತ್ಯ ನೀನು ಮಾಡಿದ್ರೆ
ನಿನ್ನಪ್ಪನ ಮನೆ ಮಾದೇವ್ನ ಸತ್ಯ ಒಪ್ತೀನಿ ಅಂದ್ರು
ಯಜಮಾನಾ ಯಜಮಾನರೇ
ನನ್ನಪ್ಪನ ಮನೆ ಮಾದೇವ್ನ ಮ್ಯಾಲೆ ಹಟ ಮಾಡಬ್ಯಾಡ
ನನ್ನಪ್ಪನ ಮನೆ ದೇವ್ರು ಅಂದರೇ
ನಂಬಿದರೆ ಮಾದೇಶ್ವರ
ನಂಬದೀದ್ದರೆ ಹನ್ನೆರಡನೇ ಕಡೆ ಶನಿ ಆಗ್ತಾನೆ
ನಂಬುಕೊಂಡ್ರೆ ಮಾದೇಶ್ವರನಾಗ್ತಾನೆ
ನಂಬದೇ ಹೋದ್ರೆ
ಅಟ್ಟಿಯೊಳಗೆ ಹುಟ್ಟುರೋಗ
ಮನೆಯೊಳಗೆ ಮನರೋಗ
ತಪ್ಪುಕಾಣಿಕೆ ಕಟ್ಟಿದರೆ ಅವನೇ ಗಂಡನಾಗ್ತಾನೆ

ನನ್ನಪ್ಪನ ಮನೆಯ ಮಾದೇವ್ನ ನೀವು
ಜರಿಬ್ಯಾಡಿ ಸ್ವಾಮಿ ಪತಿದೇವಾs || ಕೋರಣ್ಯ ||

ಹಾಗಾದ್ರೆ ಇನ್ನೂ ಒಂದು ಸತ್ಯಮಾಡಬೇಕು ಸಂಕೆಣ್ಣೆ ಅಂದ್ರು
ಇನ್ನು ಯಾವ ಸತ್ಯ ಮಾಡ್ಲಿ ಯಜಮಾನ ಅಂದಳು
ನೋಡು ಮಡದಿ ಸಂಕೆಣ್ಣೆ
ಒಂದೇ ಕ್ಷಣ ಮಾತ್ರದಲ್ಲಿ ತೆಂಗಿನಕಾಯಿ ಚಟ್ನಿ ಅರದಪ್ಪಂದ ಮಾಡ್ತಿನಿ
ನಿನ್ನ ಅಂದ್ರು
ಯಾವ ಸತ್ಯ ಯಜಮಾನಾ ಅಂದಳು
ನೋಡು ಅಟ್ಟಂಬಾರವಾರದಲ್ಲಿ ಅರ್ಧಬೆಟ್ಟದಲ್ಲಿ ತಂದು
ನಿಲ್ಲುಸುಬುಡ್ತಿನಿ
ಅರ್ಧಬೆಟ್ಟದಲ್ಲಿ ಹಿಂದುಕ್ಮುನ್ನಾಗಿ ತಂದು ನಿಲ್ಲುಸುಬುಟ್ಟು
ನಿನ್ನ ಮಾರುದ್ದ ಮಂಡೆಗೆ ಸೂತ್ರ ಕಟ್ಟಿಕೊಂಡು ಹೋಗಿ
ಬೆಟ್ಟದ ನೆತ್ತಿಮ್ಯಾಲೆ ಬಾರಿಗುಂಡು ಕಟ್ಟುಬುಟ್ಟು
ಗುಂಡನ್ನ ಪೂಜೆ ಮಾಡಿ ಉಳ್ಳುಸುಬುಡ್ತಿನಿ
ಆ ಗುಂಡು ಬರುವಂತಾ ರಬಸಕೆ
ನೀನು ಗುಂಡ ಬೆನ್ನು ಕೊಟ್ಟು ತಡದು ನಿಲಿಸ್ಕಂಡ್ರೆ

ನಿನ್ನ ಅಪ್ಪನ ಮನೆಯ ಮಾದೇವ್ನ ಸತ್ಯ
ಒಪ್ತೀನಿ ಕಾಣೋ ಸಂಕೆಣ್ಣೆs || ಕೋರಣ್ಯ ||
ಅಯ್ಯಾ ಹಿಡುಗಲ್ಲಿನ ಬೋರೆಯವೊಳಗೆ
ಮಡುಗವುರೇ ಒಂದೆಬ್ಬುಲಿಯಾ
ಮಾದೇವಾ
ಸನ್ನೆಮಾಡಿ ಕರೆದಾರು ನಮ್ಮಾ
ಬಣ್ಣದೆಬ್ಬುಲಿಯಾ

ಅಯ್ಯೋ ಮಾಯಕಾರ ಗಂಡ ಮಾದಪ್ಪ
ನನ್ನಪ್ಪಾಜಿ ಮಾದೇವಾ
ಅಟ್ಟಾಂಬಾರಿವಾರದಲ್ಲಿ
ಬೆಟ್ಟದ ನೆತ್ತಿಯಿಂದ ಬರುವಂಥಾ ಗುಂಡು
ಗಿಡಾಮರನೆಲ್ಲ ಅರಕಂಡು ಬರ್ತಾದೆ
ನನ್ನನು ಕೂಡ ಆ ರೀತಿಯಾಗಿ ಅರದು ಚಟ್ನಿ ಮಾಡ್ಬುಡಲ್ವ ತಂದೆ
ಇಂತಾ ಕಷ್ಟಕ್ಕೆ ಈಡು ಮಾಡ್ದೆಲ್ಲಪ್ಪ
ಮಾದೇವಾ

ನನ್ನ ಹೆಣ್ಣು ಪ್ರಾಣಿಯ ಗೋಳು ನಿಮಗೆ
ಎಲ್ಲುರುವಾಯ್ತೋ ಮಾದೇವಾs || ಕೋರಣ್ಯ ||

ಕೇಳವ್ವ ಕಂದಾ ಸಂಕಮ್ಮಾ
ದುಃಖ ಮಾಡುಬ್ಯಾಡ ಮಗಳೇ
ಆ ಬರುವಂತಾ ಗಂಡುಗೆ
ನೆಪ ಮಾತ್ರಕ್ಕೆ ಬೆನ್ನುಕೊಟ್ಟು ನಿಂತ್ಕೋ ಕಂದ
ನಿನ್ನಮೈಗೆ ಸೋಕದೇ ಇದ್ದ ರೀತಿ ಮಾಡೀನಿ
ಹೆದರಬೇಡ ಕಂದಾ

ಕಂದಾ ಹೆದರಬೇಡ ಕಂದಮ್ಮ
ಬೆದರಬೇಡ ಕಂದಮ್ಮ
ಪತೀವ್ರತೇ ಹೆಣ್ಣು ಮಗಳೇ
ಕೇಳೂ ಕೇಳೋ ಸಂಕಮ್ಮ
ಮಗಳೆ ನಾನಿದ್ದ ಮ್ಯಾಲೆ ಭಯವೇಕಮ್ಮ
ಸತೂ ಭಾವಳೆ ಸಂಕಮ್ಮಾs || ಕೋರಣ್ಯ ||

ಕಂದಾ ಸಂಕಮ್ಮ ದೈರ್ಯವಾಗಿರು ಮಗಳೇ ಅಂದರು
ಮಲೇ ಸ್ವಾಲುಗ ನೀಲೇಗೌಡ
ಎಲೋ ಸಂಕೆಣ್ಣೆ ಕಟ್ಟಮುಂಡೇ ಮಗಳೇ
ಯಾವ ದೇವ್ರ ನೆನಿತಾಯಿದ್ದೀಯೇ
ಯಾವ ಯಂತ್ರಗಾರನ ನೆನಿತಾಯಿದ್ದೀಯೇ ಮಡದೀ
ಜಾಗ್ರತೆಯಾಗಿ ಬಾ ಅಂತೇಳಿ

ಅಯ್ಯ ಕೆಂಜಾರುಗಣ್ಣ ಬಿಟ್ಟಾವರೆ
ನೊರನೊರನಲ್ಲ ಕಡದವರೇ
ಮಲೆಯ ಸೋಲುಗ ನೀಲಯ್ಯಾ
ಅವುಳ ಮಾರುದ್ದ ಮಂಡೆ ಹಿಡದವುರೇ
ಯಳಕೊಂಡೆಳಕೊಂಡ್ ಹೋಯ್ತಾವುರೇs || ಕೋರಣ್ಯ ||

ಪತೀವ್ರತೆಯಾದ ಸಂಕಮ್ಮನ ಮಾರುದ್ದ ಮಂಡೆ ಹಿಡುದು
ದರಾದರನೆ ಯಳಕೊಂಡೋಗಿ ಅಟ್ಟೆಂಬಾರವಾರದಲ್ಲಿ
ಅರ್ಧ ಬೆಟ್ಟದಲ್ಲಿ ನಿಲ್ಲುಸುಬುಟ್ಟ
ಎಲೋ ಸಂಕೆಣ್ಣೆ
ಇನ್ನು ಮುನ್ನಾಗಿ ಮೇಲಕ್ಕೆ ನೋಡಬ್ಯಾಡ
ಮೂಡ್ಲಾಗಿ ತಿರಿಕೋ ಅಂತೇಳಿ ಮೂಡ್ಲಾಗಿ ತಿರುಗಿಸಿ ನಿಲ್ಸುಬುಟ್ಟು
ಅವಳ ಮಾರುದ್ದ ಮಂಡೆಗೆ ಸೂತ್ರ ಕಟ್ಟಿಕೊಂಡು
ಬೆಟ್ಟದ ನೆತ್ತಿಯಮ್ಯಾಲೆ ಹೋಗಿ ನಿಂತ್ಕೊಂಡ
ಬಾರಿಗುಂಡಿಗೆ ಸೂತ್ರವನ್ನು ಕಟ್ಟಿ ನೀಲೇಗೌಡ
ಗುಂಡನ್ನೆ ಪೂಜೆಮಾಡಿ
ಗುಂಡಾನ್ನೆ ಉರುಳುಸ್ತಾಯಿದ್ದಾನೆ
ಬೆಟ್ಟದಲ್ಲಿ ಗಿಡಮರನೆಲ್ಲ ಅರೆದು ಚಟ್ನಿಮಾಡ್ಕೊಂಡು ಬರ್ತಾಯಿದೆ
ಮಾದಪ್ಪಾ ಹೊಸಲಲ್ಲಿ ಬಿಳಿಪಲ್ಲಿಯಾಗಿ ಕುಳತಿದ್ದು
ನಿಜರೂಪ ತಾಳಕಂಡ್ರು
ನೀಲೇಗೌಡನ ಕಣ್ಣಿಗೆ ಗೋಚ್ರವಿಲ್ಲ
ಸಂಕಮ್ಮನ ಬಲಭಾಗದಲ್ಲಿ ಹೋಗಿ
ದಂಡು ಕೋಲು ಹಿಡುದು ನಿಂತವರೇ
ಬರುವಂತಾ ಗುಂಡಿಗೆ ಮಹಾಗುರು

ಅಯ್ಯ ದಂಡುಕೋಲ ಕೊಟ್ಟವರೇ
ಚಂಡುಪಿಡಿಯೋ ಹಾಗೆ ಪಿಡುದವರೇs || ಕೋರಣ್ಯ ||

ಆಲಂಬಾಡಿ ಮಾದೇವಾ
ಅರಗಣ್ಣ ಬಿಟ್ಟು ನೋಡಯ್ಯಾ
ಆಲರವಿ ಮೇಲೂವಿನದಂಡೆ
ವಾಲಾಡಿ ಬಂದೋ

ಬರುವಂತಾ ಗುಂಡಿಗೆ ದಂಡುಕೋಲು ಕೊಟ್ಟು ಮಾದಪ್ಪ
ಚಂಡು ಪಿಡಿಯೋ ಹಾಗೆ ಪಿಡುದು ನಿಲ್ಲುಸ್ಕಂಡ್ರು
ನೀಲೇಗೌಡ ಬೆಟ್ಟದಿಂದ ಕೆಳಗೆ ಇಳಿದುಬಂದು ನೋಡ್ದ
ಸಂಕಮ್ಮ ಗುಂಡಿಗೆ ಬೆನ್ನು ಕೊಟ್ಟುಕೊಂಡವಳೆ
ಅಷ್ಟು ಹೊತ್ತು ಇಷ್ಟು ಹೊತ್ತು ನೋಡ್ದ
ಕೆಟ್ಟಮುಂಡೆ ಮಗಳೇ ಗುಂಡನ್ನು ಬಿಟ್ಟು ಇಳಿದು ಬಾ ಅಂದ
ಆ ಗುಂಡುಬಿಟ್ಟು ಇಳಿದುಬಂದು
ಗಂಡನಪಾದಕ್ಕೆ ನಮಸ್ಕಾರ ಮಾಡುದ್ಲು

ಎಲೋ ಸಂಕೆಣ್ಣೆ
ಕಲ್ಲ ಒಡ್ಡಾನ ಮಡಗಿದ್ದೀಯ
ಅದರಿಂದ ಕಾಣೊ ಸಂಕೆಣ್ಣೆ
ಕಲ್ಲಕಟ್ಟೀಗ ಉಳಸವನೇ
ಕೇಳೊ ಕೇಳೊ ಸಂಕೆಣ್ಣೆ
ಅಂಡೇ ಹೋಗಿ ಮಡಗಿದ್ದೀಯಾ
ಬುಂಡೆ ಜೋಗಿ ಮಡಗಿದ್ದೀಯಾ
ಅದರಿಂದ ಕಾಣೋ ಸಂಕೆಣ್ಣೆ
ಗೆಲತೀಯ ಕಾಣೋ ಸಂಕೆಣ್ಣೆ
ಸೋಲ್ತಿನೀ ಕಾಣೋ ಸಂಕೆಣ್ಣೆ
ಮಡದಿ ಹೇಳುವ ಸತ್ಯಮಾಡೆಣ್ಣೆ
ನಿನ್ನ ಜೀವಕ್ಕೆ ಬುದ್ಧಿ ಹೇಳೆಣ್ಣೆs || ಕೋರಣ್ಯ ||

ಪಾತಾಳ ಶಿವಗಂಗೆಲೋಗಿ
ಧೂಪದಲ್ಲಿ ಸೇವೇಮಾಡಿ
ಮಾದೇವಾ
ಪಾಪವಿದ್ದರೆ ಪರಿಹಾರ ಮಾಡೋ
ಮಾಯ್ಕಾರ ಮಾದೇವಾ

ಅಯ್ಯೋ ಯಜಮಾನ ಯಜಮಾನ
ನಿನ್ನ ಪಾದ ಹೊತ್ತೇನು ದಮ್ಮಯ್ಯ
ಇನ್ಯಾವ ಸತ್ಯ ಮಾಡ್ಲಿ ಯಜಮಾನ ಅಂದಳು
ಎಲಾ ಕೆಟ್ಟಮುಂಡೇ ಮಗಳೇ
ಗಂಡನಿಗೆ ದುಂಡಾರೀಗಿ ಮಾಡಬೇಡ
ಪತಿಗೆ ಪ್ರತಿ ಉತ್ತರ ಕೊಡಬೇಡ
ಇನ್ನೂ ಒಂದು ಸತ್ಯದ್ಲ್ಲಿ
ನನ್ನ ಕೈಗೆ ಸಿಕ್ಕಬಾರ್ದು ಹೆಬ್ಬುಲಿ ಬಾಯಿಗೆ ತುತ್ತಾಗಬೇಕು
ಅಂತಾ ಸತ್ಯ ಮಾಡಿಸ್ತೀನಿ ಅಂತೇಳಿ
ನೋಡಲಾ ಮಡದಿ ಸಂಕೆಣ್ಣೆ
ನೀನು ಏಳು ತಲೆ ಕಾಳಿಂಗ ಸರ್ಪನ
ತೆಕ್ಕೆ ಮಡಸಿಕೊಂಡು
ಮುಳ್ಳಿನ ಪಂಜರದಲ್ಲಿ ನೀರೊತ್ತುಕೊಂಡು
ಹುಲಿಮ್ಯಾಲೆ ಕೂತ್ಕಂಡು ಬಂದೂ
ನನ್ನ ಪಾದಕ್ಕೆ ಪನ್ನೀರೆರೆದರೆ

ನಿನ್ನ ಅಪ್ಪನ ಮನೆಯ ಮಾದೇವ್ನ ಸತ್ಯ
ಒಪ್ತೀನಿ ಕಾಣೋ ಸಂಕೆಣ್ಣೆs || ಕೋರಣ್ಯ ||

ಬೆಟ್ಟೆಲ್ಲಾ ಜೋಲು ಮಾದೇವ
ಬಿದುರೆಲ್ಲಾ ಜೋಲೂ
ಉತ್ತುರು ದೇಶದ ಮಾದಪ್ಪ
ನಿಮ್ಮ ಮುಟ್ಟಿದರೇ ಜೋಲು

ಅಯ್ಯಾ ತಂದೆ ನನ್ನಪ್ಪನ ಮನೆದೇವ್ರೆ
ಮಾಯಿಕಾರಗಂಡ ಮಾದಪ್ಪ
ಸರಪನ ತೆಕ್ಕೆ ಮಡಿಸಬೇಕಂತೆ
ಸರಪನ ಕಂಡ್ರೆ ಸಳಿಜರ ಬತ್ತದೆ
ಹುಲಿ ಕಂಡರೆ ನನಗೆ ಹುಚ್ಚುಬೆಪ್ಪು ಬರ್ತದೆ
ಗುರುವೆ ಹುಲಿಮ್ಯಾಲೆ ಕೂತ್ಕಂಡು
ಸರ್ಪನ ತೆಕ್ಕೆ ಮಡಚ್ಕಂಡು
ಆ ಮುಳ್ಳು ಪಂಜರದಲ್ಲಿ ನೀರು ನಿಲ್ಲುತಾದ ಗುರುವೇ
ಇಂತಾ ಕಷ್ಟಕ್ಕೆ ಈಡುಮಾಡ್ದೆಲ್ಲಾ ತಂದೇ
ಮಹದೇವಾ ಮಾದಪ್ಪ
ಯಾವ ರೀತಿಯಾಗಿ ನನ್ನ ಗಂಡನ ಸತ್ಯ ಮಾಡಲಿ

ನಾನು ಪಾಪಿ ಮಾಡಿದ ಕಣ್ಣೀರು ನಿಮಗೆ
ಎಲ್ಲರುವಾಯ್ತೊ ಮಾದೇವಾ || ಕೋರಣ್ಯ ||

ನನ್ನಪ್ಪಾಜಿ ಅಖಂಡ ಮಹಿಮ ಅಲ್ಲಮಾಪ್ರಭು
ಹೊಸ್ತಲಲ್ಲೇ ಕುಂತವರೇ ಬಿಳಿಪಲ್ಲಿಯಾಗಿ
ಮಾದೇವಾ
ಬೂದಿ ಮುಚ್ಚಿದ ಕೆಂಡ ಭೂಲೋಕದಲ್ಲಿ ಉದ್ದಂಡಾ
ಮಾತಿಗೆ ಮರುದೇವ್ರು ನೀತಿಗೆ ಲಿಂಗಯ್ಯ
ಚಂದಕ್ಕೆ ಚಂದ್ರಶೇಖರಮೂರ್ತಿ ದುಡಕ್ಕೆ ದುಂಡುಳ್ಳ ಮಾದಪ್ಪ
ಇದ್ಯ ಬುದ್ಧಿಗೆ ಮಾಯ್ಕಾರದ ಗಂಡ
ಹೆದರಬೇಡ ಕಂದ ಹೇಳ್ತಾಯಿದ್ದೀನಿ ಕೇಳು ಮಗಳೆ
ಮುಳ್ಳು ಪಂಜರ ನಿನ್ನ ಗಂಡ ಕೊಟ್ರೆ
ನಾನು ತಾಮ್ರದ ಕಡಾಯಮಾಡ್ತಿನಿ
ಇಲ್ಲವಾದರೆ ಮಣ್ಣಿನ ಅರವಿಮಾಡ್ತಿನಿ
ಏಳುತಲೆ ಕಾಳಿಂಗ ಸರ್ಪನ ಅಂದ್ರೆ
ಮನೆ ಹಿಂದಲ ತೋಟಕ್ಕೆ ಹೋಗಿ
ಉಗುನಿ ಹಂಬನ್ನ ಕಿತ್ತು ತೆಕ್ಕೆ ಮಡುಸ್ಕೋ ಕಂದ
ಆ ಉಗನಿ ಹಂಬಿನ ತೆಕ್ಕೆನು ಸರ್ಪನ ಮಾಡ್ತಿನಿ
ಕಂದಾ ನಿನ್ನ ಅರಮನೆ ಹಿಂಭಾಗದಲ್ಲಿ
ಒಂದು ಗೋಗೆಲ್ಲ ಮ್ಯಾಲೆ ಕುಂತುಕೊಂಡು ನಿನ್ನ ಗಂಡನ ಕೂಗು
ಆ ಗೋಗಲ್ಲನ್ನೆ ಹನ್ನೆರಡ್ಹೆಜ್ಜೆ ಹುಲಿಮಾಡ್ತಿನಿ

ಕಂದಾ ಹೆದರಬೇಡ ಕಂದಮ್ಮ
ಬೇದರಬೇಡ ಕಂದಮ್ಮ
ಪತೀವ್ರತೆ ಸಂಕಮ್ಮ
ಮಗಳೆ ನಾನಿದ್ದ ಮೇಲೆ ಭಯವೇಕಮ್ಮ
ಹೆಣ್ಣು ಮಗಳೇ ಸಂಕಮ್ಮಾs || ಕೋರಣ್ಯ ||
ಪಡುವ ಬಾಗಿಲ ಗುಡಿಯಾ ಮುಂದೆ
ಗುರುವೆ ಬೆಡಗಿನಲ್ಲಿ ಚಂದರಶಾಲೇ
ಪಡುವಾಬಾಗಲ ಮಾದೇವಾ
ಕೊಡು ನಮಗೆ ವರವಾ

ಎಲೋ ಕೆಟ್ಟಮುಂಡೇ ಮಗಳೇ
ಸಂಕೆಣ್ಣೆ
ಮನೆಯೊಳಗೆ ಅರಮನೆಯೊಳಗೆ
ಯಾವ ಯಂತ್ರಗಾರ ಮಂತ್ರಗಾರ
ಇಲ್ಲಿ ಅರಮನೆ ಕಟ್ಟಿಸಿರುವಂತಾ
ಕೊಳ್ಳೇಗಾಲದ ತಹಸೀಲ್ದಾರನೋ
ಕೊಯಮತ್ತೂರು ಜಿಲ್ಲೇದಾರನೋ
ಅವನಿಗೇನಾರೆ ಕೈಮುಗಿತಾಯಿದ್ದೀಯಾ
ಜಾಗ್ರತೆಯಾಗಿ ನೀನು ಹೊರಗಡೆ ಹೋಗಿ ಸತ್ಯಮಾಡು ಅಂದ್ರು
ಆಗಲಿ ಯಜಮಾನ್ರೆ ಮಾಡ್ತಾಯಿದ್ದೀನಿ ಅಂತೇಳಿ
ಅರಮನೆ ಹಿಂಬಾಗಕ್ಕೆ ಬಂದು ಸಂಕಮ್ಮ
ಅಯ್ಯೋ ನನ್ನಪ್ಪನ ಮನೆ ಮನೆದೇವ್ರೆ
ಮಾದಪ್ಪಾ
ಈ ಮುಳ್ಳ ಪಂಜರ ಯಾವರೀತಿ ಹೊತ್ಕಂಡೋಗ್ಲಿ ಅಂತೇಳಿ
ಆವಾಗ ಅರಮನೆ ಹಿಂಭಾಗದಲ್ಲಿ
ಉಗನಿ ಅಂಬಿನ ಮೆಳೆಗೋದಳು
ಉಗನಿ ಅಂಬು ಉಗನಿ ಸೊಪ್ಪೆಲ್ಲ ಕಿತ್ತಕಂಡ ಸಂಕಮ್ಮ
ತೆಕ್ಕೆ ಮಡಸಕಂಡು ತಲೆಮ್ಯಾಲೆ ಮಡಿಕಂಡಳು
ಆ ನೀಲೇಗೌಡ ಮಡಗಿದಂತ ಮುಳ್ಳಪಂಜರ
ಮಣ್ಣಿನ ಅರವಿಯಾಯ್ತು
ಹಳ್ಳದ ಕೆರೇಲಿ ಹೋಗಿ ನೀರೊತ್ಕಂಡಳು
ಅರಮನೆ ಹಿಂಭಾಗದಲ್ಲಿ ಬಂದೂ
ಒಂದು ಗೋವುಗಲ್ಲಿನ ಮೇಲೆ ಬಂದು ಕುಂತುಕೊಂಡಳು
ಹನ್ನೆರಡೆಜ್ಜೆ ಹುಲಿಕಾಣಸ್ತಾಯಿದೆ ನೀಲೇಗೌಡನಿಗೆ
ಸಂಕಮ್ಮನಿಗೆ ಹುಟ್ಟುಬಂಡೆ
ಯಜಮಾನ ಯಜಮಾನರೇ
ಬನ್ನಿ ನಿಮ್ಮ ಪಾದಕ್ಕೆ ಪನ್ನೀರ ಕೊಡ್ತೀನಿ ಅಂದಳು
ನೀಲೇಗೌಡ
ಸಂಕಮ್ಮನ ಶಬ್ದವನ್ನು ಕೇಳಿ

ಅರಮನೆನಾದ್ರೆ ಬಿಟ್ಟವನೇ
ಸಂಕಮ್ಮನ ಬಳಿಗೆ ಬತ್ತಾವುನೇs || ಕೋರಣ್ಯ ||

ಬಾ ನನ್ನ ಗುರುವೇ ಭಕ್ತರ ಗಂಡಾ
ಬಾಗಿದೇನು ಮದೇವರಾ
ನಿಮ್ಮ ಮಾಯವೇ ಚಂದಾ
ನಿಮ್ಮ ಮಾಯರೂಪಿನಿಂದಾ

ಅರಮನೆ ಬಾಗಿಲ ಬಿಟ್ಟು ಹಿಂದಕ್ಕೆ ತಿರುಗಿ ನೋಡ್ದ
ಹನ್ನೆರಡ್ಹೆಜ್ಜೆ ಹುಲಿ ಬಾಯಿಬಿಟ್ಕಂಡದೆ
ಮೊಟ್ಟೆ ಗಾತ್ರದ ತಲೆ
ಮೂಲಂಗಿ ಗೆಡ್ಡೆ ಗಾತ್ರದ ಹಲ್ಲು
ಕೊಳಗದಗಲ ನಾಲಿಗೆ
ಕುಡ್ಲು ಬರೆ ಬಟ್ಟ ಬರೆ ನೋಡುಬುಟ್ಟು
ಮಡದಿಯಾದ ಸಂಕಮ್ಮನ ನೆತ್ತಿ ನೋಡ್ದ
ಮಳ್ಳುಪಂಜರ ಕಾಣಸ್ತದೆ
ಏಳುತಲೆ ಕಾಳಿಂಗದ ಸರ್ಪ
ಹೆಡೆ ತೋರುಸ್ತಾದೆ
ಯಾವುದು? ಉಗುನಿ ಹಂಬಿನ ಎಲೆ
ನೀಲೇಗೌಡನ ಕಣ್ಣಿಗೆ ಏಳುತಲೆ ಕಾಳಿಂಗ ಸರ್ಪನಾಯ್ತು
ಅಲ್ಲೇ ಸಳಿಜರ ಬಂದುಬುಡ್ತು ನೀಲೇಗೌಡ್ನಿಗೆ
ಮಲೆಸ್ವಾಲಗದ ನೀಲೇಗೌಡ
ಸಂಕಮ್ಮನ ಪತಿವ್ರತ ಧರ್ಮ
ನೆಚ್ಚಲಿಲ್ಲ ನಂಬಲಿಲ್ಲ
ಅಲ್ವೆ ಸಂಕೆಣ್ಣೆ
ನಾನೇಳುದು ಸತ್ಯ ಮಾಡಲೇಬೇಕು
ನಿನ್ನಪ್ಪನ ಮನೆ ಮಾದೇವನ ಸತ್ಯ ನೋಡ್ತಿನಿ ಎಂದರು
ಯಜಮಾನ ಯಜಮಾನ್ರೇ
ನನ್ನಪ್ಪನ ಮನೆ ದೇವ್ರನ್ನ ಜರಿಯಬೇಡ
ಆರುತಿಂಗಳ ಗರ್ಭಿಣಿ ಆಗಿದ್ದೀನಿ
ನನ್ನ ಮಕ್ಕಳು ಜನನವಾಗಲಿ
ಒಂಬತ್ತು ಮಾಸ ತುಂಬಿದ ತಕ್ಷಣ
ಮಕ್ಕಳು ಜನನವಾದ ಮೇಲೆ
ಏಳಿದ ಸತ್ಯಕ್ಕೆ ಒಳಗಾಗುತೀನಿ ಯಜಮಾನ ಅಂದಳು

ಛೇ ಕೆಟ್ಟ ಮುಂಡೆ ಮಗಳೆ
ನಿನ್ನ ಮಕ್ಕಳು ಜನನವಾದರೇನು
ಮರಣವಾದರೇನು
ನನಗೇನು ಬೇಕಾಗಿಲ್ಲ

ಮಡದಿ ಹೇಳಿದು ಸತ್ಯ ಮಾಡೆಣ್ಣೆ
ನಿನ್ನ ಪ್ರಾಣಕ್ಕೆ ಬುದ್ಧಿ ಹೇಳೆಣ್ಣೇs || ಕೋರಣ್ಯ ||

ಶಿವ ಶಿವ
ಭೂಮುತಾಯಿ ಆಕಾಶವೇಣಿ
ಯಜಮಾನರೇ ಯಾವ ಸತ್ಯ ಅಂದಳು
ನೋಡ್ದಾ ಮಡದಿ ಸಂಕೆಣ್ಣೇ
ನನ್ನ ಹೆಜ್ಜೆಣು ಕತ್ತೀನು ಮಾಳುಮಲಾ ಕತ್ತೀನು
ತುರುಗಲ್ಲ ಮೇಲೆ ಗರಗರ್ನ ಮಸ್ದು

ಅರಮನೆ ಮುಂಬಾಗದಲ್ಲಿ ಒಂದು ಮೊಳ
ಕತ್ತಿನೆಟ್ಟು ಎರ್ಡಕತ್ತಿಯ
ನಿನ್ನನ್ನು ಎಳಕ್ಕೊಂಡು ಬಂದು
ಕತ್ತಿಯ ಮುಂದೆ ನಿಲ್ಸಿ
ಕಣ್ಣಿಗೆ ಬಟ್ಟೆ ಕಟ್ಟಿ
ಕತ್ತಿಯ ಮ್ಯಾಲೆ ಮೊಕಡ್ನಾಗೆ ತಳ್ತಿನಿ
ಹೊಟ್ಟೆಲಿ ನುಗ್ಗದಂತಹ ಕತ್ತಿ
ಬೆನ್ನಲ್ಲಿ ಕಡಿಬೇಕು

ಅಯ್ವ ಕಣ್ಗಿಗೆ ದಟ್ಟಿ ಕಟ್ಟವ್ನೇ
ಕತ್ತಿಯ ಮೇಲೆ ತಳ್ಳವನೇs || ಕೋರಣ್ಯ ||