ಅಪ್ಪ ಬಡಗು ಬಾಗಲ ಬಡದಾಳೆ
ಗುರುವಿಗೆ ಬೆಡಗಿನಲ್ಲಿ ಚೆನ್ನ ಹರಸಾವೇ
ಬೆಡಗು ಬಾಗಲ ಮಾದೇವ
ಕೊಡು ನಮಗೆ ವರವ

ಆವಾಗಲೀಗ ಮೂಕಳ್ಳಿ ಮಾರಮ್ಮ
ಸಂಕಮ್ಮನ ಅರಮನೆಗೆ ಬಂದು
ಹನ್ನೆರಡು ಗಂಟೆ ರಾತ್ರಿ ಒಳಗೆ
ಸದ್ದಿಲ್ದ ರೀತಿಲೀ ಬಂದವಳೆ
ಗೋಚರವಾಗಬಾರ್ದು
ಏನಾದ್ರು ಗಲಭೆಯಾದ್ರೇ
ಹೊರಗಡೆ ಬಾಗಲಲ್ಲಿ ಮಲಗವನೇ ಕೆಟ್ಟಮುಂಡೇಮಗ
ಕೇಳ್ಕಂಬುಡ್ತಾನೆ ಅಂತೇಳಿ
ಮೂಕಳ್ಳಿ ಮಾರಮ್ಮ ಮಾಯದಲ್ಲಿ
ಸಂಕಮ್ಮನ ಪಟ್ಟೇಮಂಚದ ಪಕ್ಕದಲ್ಲಿ ನಿಂತ್ಕಂಡಳು
ಕಂದಾ ಹೆದರಬೇಡ ಮಗಳೇ
ನಾನು ಸೂಲಗಿತ್ತಿ ಬಂದಿದ್ದೀನಿ
ನಿಮ್ಮ ತಾಯಿಯಾಗಿ ಮಗಳೆ
ಮೇಲಕ್ಕೆ ಅಂತುನೋಡು ಅಂದ್ರು
ಮೊಕ್ಕಣ್ಣಾಗಿ ಮಲಗಿದ್ದ ಸಂಕಮ್ಮ ಬಲಮಗ್ಗುಲ್ಲಾಗಿ ನೋಡ್ದುಳು
ಮೂಕಳ್ಳಿ ಮಾರಮ್ಮ ಒಳ್ಳೇ ಸೌಂದರ್ಯವಾದ ಸ್ತ್ರೀ
ತಾಯಿ
ನಿನ್ನ ಕಷ್ಟ ನಾನು ತಕ್ಕೋತ್ತೀನಿ ಅಂತೇಳಿ
ಹೆದರಬೇಡ ಅಂತೇಳಿ
ಸಮಾನಿಸ್ತಯಿದ್ದಳು
ಕಲ್ಲು ನೀರು ಕರ್ಗು ಹೊತ್ತಿನಲ್ಲಿ
ಹನ್ನೆರಡು ಗಂಟೆ ರಾತ್ರಿ ಒಳಗೆ
ಎರಡು ಮಕ್ಕಳು ಬೆನ್ನಲಿ ಸೀಳಕ್ಕಂಡು

ಅಮ್ಮ ಎಡಗಡೆ ಕಾರಯ್ಯ ಬಲಗಡೆ ಬಿಲ್ಲಯ್ಯ
ಮಕ್ಕಳು ಬರುವರು ನೋಡಯ್ಯಾs || ಕೋರಣ್ಯ ||
ಹೊತ್ತಲ್ಲಿ ಮೂಡಲೀ ಗುರುವೆ ಹೂವನ್ನೆ ಅರಳಿ
ಬೆಟ್ಟದರಸು ಮಾದಪ್ಪ ನಿಮಗೆ ಮಜ್ಜನದ ಹೊತ್ತಾದೋ
ಕರೆತನ್ನಿ ಕಾರಯ್ಯನ
ಇಡತನ್ನಿ ಬಿಲ್ಲಯ್ಯನ
ನೀಲಗಿರಿ ನಿಜ ಭಕ್ತಾರು ಮನೆಲಿ ಲೋಲಕಾರ ದೇವ

ಬಲ ಭಾಗದಲ್ಲಿ ಬಿಲ್ಲಯ್ಯ ಹುಟ್ದಾ ಮೊದಲಾಗಿ
ಎಡಭಾಗದಲ್ಲಿ ಕಾರಯ್ಯ ಹುಟ್ದಾ
ಎರಡು ಮಕ್ಕಳನ್ನು ಮೂಕಳ್ಳಿ ಮಾರಮ್ಮ
ಎತ್ತಿ ತೊಡೆ ಮೆಲೆ ಮಲಗಿಸ್ಕಂಡಳು
ಸಂಕಮ್ಮನ ಮೈ ಕೈಯೆಲ್ಲ ಸವರಿ
ಬಟ್ಟೆಬರಿಯನ್ನು ಉಡಸಿ
ಮೇಲಕ್ಕೆತ್ತಿ ಕೂರುಸ್ತಾ
ಕಂದಾ ಹೆದರಬ್ಯಾಡ ಮಗಳೇ
ಈ ಮಕ್ಕಳನ್ನ ನೀನು ಮುತ್ತಿಕ್ಕು ಬ್ಯಾಡಕಣಮ್ಮ
ನಿನ್ನ ಎದೆ ಹಾಲನ್ನು ಕಚ್ಚಿಸಿ ಹಾಲ ಕೊಡಬೇಡಕನಮ್ಮಾ
ಮಾದಪ್ಪ ಸಂಕಮ್ಮ ಹೇಳದಂಗೇ
ಎದೆ ಬಾರ ಕೊಡ್ನಿಲ್ಲ
ಮೈತೂಗು ಕೊಡ್ನಿಲ್ಲ
ಸಂಕಮ್ಮನಿಗೆ ಮಾಯದಲ್ಲಿ ಮಕ್ಕಳು ಕೊಟ್ಟಿದ್ದಾರೆ
ಆವಾಗಲೀಗ ಸಂಕಮ್ಮ
ಎದ್ದು ಕೂತ್ಗಂಡಳು
ಮಕ್ಕಳು ನೋಡ್ತಾಳೆ
ಸೂರ್ಯನಾಗಿಉರಿತಿದಾರೆ
ಕಾರಯ್ಯ ಬಿಲ್ಲಯ್ಯಾ
ಆವಾಗ ಮೂಕಳ್ಳಿ ಮಾರಮ್ಮ
ಸಂಕಮ್ಮನ ತೊಡೆ ಮೇಲೆ
ಎರಡು ಮಕ್ಕಳ ಮಲ್ಗಿಸಿಬಿಟ್ಟು
ಕಳ್ಳಿ ಹಾಲು ತಂದು
ಕಾರಯ್ಯನಿಗೆ ಕುಡಿಸ್ತಾ ಹೊಟ್ಟೆಗೆ
ಎಕ್ಕದ ಹಾಲ ತಂದು ಬಿಲ್ಲಯ್ಯನಿಗೆ ಕುಡಿಸಿಬಿಟ್ಟು
ಬೆಳ್ಳಿ ಮೂಡಿ ಬೆಳಗಾಗ್ತಯಿದೆ
ಸೂರ್ಯ ಮೂಡಿ ಕೆಂಪಾಗ್ತಾ ಇದೆ
ಅಮ್ಮಾ ಸಂಕಮ್ಮ
ಬೆಳಗಾಗುಬುಟ್ಟ್ರೇ ನಿನ್ನ ಗಂಡ ಬೀಗತಗ್ದುಬುಡ್ತನೆ
ನಾನು ಹೊರಟೋಗ್ತೀನಿ ಕಂದಾ
ಧೈರ್ಯವಾಗಿರು ಅಂತೇಳಿ ಸಂಕಮ್ಮನಿಗೆ ಧೈರ್ಯಹೇಳುಬಿಟ್ಟು
ಮೂಕಳ್ಳಿ ಮಾರಮ್ಮ ತಾಳು ಬೆಟ್ಟಕ್ಕೆ ಬಂದಳು

ಬೆಳ್ಳಿ ಮೂಡಿ ಬೆಳಗಾಗಿ
ಸೂರ್ಯ ಉದಯವಾದ
ಮಲೇ ಸ್ವಾಲುಗ ನೀಲೀಗೌಡ
ಹೆಜ್ಜೇನು ಕತ್ತಿ ಬಲಗೈಲಿ ಇಡ್ಕಂಡು
ನನ್ನ ಮಡದಿಯಾದ ಸಂಕಣ್ಣು ಸತ್ಯ ಮಾಡದೆ ಇದ್ರೆ
ಏಟ್ಗೊಂದು ತುಕ್ಕಡ ಮಾಡಬೇಕು ಅಂತೇಳಿ

ಅಯ್ಯ ಹೆಜ್ಜೇನು ಕತ್ತಿ ತೆಗೆದವನೇ
ಬಲಗೈನಾದ್ರೆ ಇಡುವವನೇ
ನರಮುತಿಜೋಡ ಮಟ್ಟವನೇ
ನೋರನೊರ್ನಲ್ಲ ಕಡ್ಡಾವನೇ
ವಜ್ರದ ಬಾಗಲ ತಗದವನೇ
ವಜ್ರದ ಮನೆಗೆ ಬಂದವನೇ
ಬಾಗುಲ ಬೀಗ ತಗದವನೇ
ಮಲೆಯ ಸೋಲುಗ ನಿಲಯ್ಯಾs || ಕೋರಣ್ಯ ||

ವಜ್ರದ ಮನೆಯ ಬೀಗ ತಗ್ದು ನೋಡ್ದಾ
ಸಂಕಮ್ಮನ ತೊಡೆ ಮೇಗೆ ಎರಡು ಮಕ್ಕಳು ನೋಡ್ದಾ
ಸೂರ್ಯನಂಗೆ ಉರಿತಾಯಿದ್ದೋ ಚಂದ್ರನಂಗೆ ಹೊಳಿತಾಯಿದ್ದೋ
ಕತ್ತಿ ತೂದು ಬಿಸಾಡ್ ಬುಟ್ಟ ಎಲೋ ಸಂಕೆಣ್ಣೇ
ಇಂದಿಗೆ ನಾವು ಧನ್ಯರಾದೋ ಅಂದ
ಯಾಕ್ರೋ ಯಜಮಾನ
ಯಾತಕ್ಕೋಸ್ಕರ ಯಜಮಾನ ಅಂದಳು
ಸಂಕೆಣ್ಣೇ
ನಾವಿಬ್ಬರು ಧನ್ಯರಾದೋ ನಾ ಒಬ್ಬ ಮಗ್ನ ಎತ್ಕತ್ತಿನೀ
ನೀ ಒಬ್ಬನ ಎತ್ತುಕೋ
ಪೋಡ್ ಗೋಗುನು ಅಂದ
ಯಜಮಾನರೆ ಯಾರ ಮಕ್ಕಳ ಎತ್ತಿಕೋದಿಯೇ
ಯಜಮಾನ ಅಂದಳು
ಹಾಗಂದ್ರೇನು ಮಡದಿ ಅಂದ
ಮಾದೇಶ್ವರ ಮಾಯಿದ ಮಕ್ಳು ಯಜಮಾನ ಅಂದಳು
ಛೇ ಕೆಟ್ಟು ಮುಂಡೇ ಮಗಳೇ
ಹನ್ನೆರಡು ಕಂಬದ ಸಾಕ್ಷಿಯಾಗಿ
ಏಳೇಳು ಹದಿನಾಲ್ಕು ದೊಡ್ಡಿಯನ್ನು ತಿರುಗಿ
ಅಂದವಾಡ ಮಡದಿ ಚಂದವಾದ ಮಡದಿ ಅಂತೇಳಿ
ಹನ್ನೆರಡು ಕಂಬದ ಸಾಕ್ಷಿಯಾಗಿ ನಿನ್ನ ಲಗ್ನ ಮಾಡ್ಕಂಡಿದ್ದೆ
ಅದಕ್ಕೋಸ್ಕರ ಮಾದೇವನ ಮಕ್ಕಳಾದವ
ಮಾದೇವನ ಕಟ್ಟ ಬಾಳು ನೀನು ಅಂತೇಳೀ
ಹೋಗಿ ತೊಡೆಮೇಲೆ ಇದ್ದಂತ ಮಕ್ಕಳ

ಎಡದಲ್ಲಿ ಕಾರಯ್ನಾ ಬಲದಲ್ಲಿ ಬಿಲ್ಲಯ್ಯಾ
ಎತ್ಕಂಡು ಹೋಯ್ತವನೆ ನೀಲಯ್ಯಾs || ಕೋರಣ್ಯ ||

ಹಿಂದು ಕಂಡೆ ಕಾರ‍ಯ್ಯನ
ಮುಂದು ಕಂಡೆ ಬಿಲ್ಲಯ್ಯನ
ಸಂದೆಲಿ ಕಂಡೆ ಸರಗೂ ಬೀದೀಲಿ
ಗಂದದು ಬಟ್ಟಲ ಮಾದೇವನಾ

ನೀಲಯ್ಯಾ ಹೊತ್ಗಂಡು ಹೋಯ್ತಾ ಇದ್ರೆ
ಮಾದಪ್ಪ ನಿಂತ್ಗಂಡು ನೋಡುದ್ರು
ಎಲ್ಲಿ ಕಂಬದ ಬೋಳಿ ದಿಂಭದಲ್ಲಿ
ನನ್ನ ಮಾಯಿದು ಮಕ್ಕಳು ಎತ್ಕಂಡು ಹೋಗಿ
ಭಿನ್ನ ಮಾಡುಬುಡ್ತಾನೆ ಮುಂಡೇಮಗ
ಭಿನ್ನವಾಗೋದ್ರೆ ನನ್ನ ಕೈಲಿ ಆಚೆಗೆ ಸಲ್ಲೋದಿಲ್ಲ ಮಕ್ಕಳು
ಅಂತೇಳಿ
ಆ ಕಂಬದ ಬೋಲಿ ದಿಂಭದ ಮೇಲೆ ನಿಂತ್ಗಂಡು
ಹುಲಿ ಕೂಗ್ತಾ ಇದ್ದಾರೆ

ಅಯ್ಯ ಕ್ವಾನಾಚೆ ಕೊಲಗಯ್ಯ ಬಾ
ಕ್ವಾನಾಚೆ ಕೊಲಗಯ್ಯ ಬಾ
ನಡುಬೆಟ್ಟದ ನಡು ಸಣ್ಣವಾ
ಕೌದಳ್ಳಿ ಕರುಬರಗ ಬಾ
ಗಂಧದಾಣೆ ಗೌರಣ್ಣ ಬಾ
ಇಕಡಳ್ಳಿ ಮರಿ ಕುಂಟ ಬಾ
ಕಾರೆತಾಳಲ್ಲಿ ಕಾಯವನೆ ಬ
ಬೆಟ್ಟ ಬೆಟ್ಟಾ ಹಾರವನೆ ಬಾ
ತಪ್ಪುತಾಳಲ್ಲಿ ಕಾಯವನೆ ಬಾ
ತಪ್ಪುನೆಪ್ಪ ಮಾಡ್ದವರ
ಕದ್ದು ಎತ್ಗಂಡು ಹೋಗವನೇ
ನಮ್ಮ ಕುಂತೂರು ಮಟದ ಗುರುಗೋಳು ಕೊಟ್ಟ
ಹನ್ನೆರಡೆಜ್ಜೆ ಸಿದ್ಧರಾಮ ಬಾs || ಕೋರಣ್ಯ ||

ಎಪ್ಪತ್ತೇಳು ಹುಲಿಯ ಕೂಗು ಬುಟ್ರು ಮಾದಪ್ಪ
ಹಳ್ಳದಲ್ಲಿ ಕೊಳ್ಳದಲ್ಲಿರುವಂತ ಹುಲಿಗಳು
ನಮ್ಮ ಸ್ವಾಮಿಯೋರು ಕೂಗುತ್ತಿದ್ದಾರೆ ಅಂತೇಳಿ
ಹಿಂದುಲು ದೂಳು ಹಿಂದಕ್ಕೆ
ಮುಂದುಲು ದೂಳು ಮುಂದಕ್ಕೆ
ಕೆರ್ದು ಎರಚ್ಗಂಡು
ತೊಂಡೆ ಬಾಲ ಎತ್ತಿ ನಿತ್ತಿಮ್ಯಾಲೆ ಇಟ್ಗಂಡು
ಆಲ್ತಾ ಕೂಗ್ತಾ ಹುಲಿಗೋಳು ಬಂದೋ
ಸ್ವಾಮಿಪಾದಕ್ಕೆ ನಮಸ್ಕಾರ ಮಾಡ್ ದೋ

ಕೇಳಪ್ಪ ನನ್ನ ಕಂದಗಳಿರಾ
ನನ್ನತ್ರ ನೀವು ಬರಬ್ಯಾಡಿ
ಆ ಕೊಕ್ಕರೆಬೋಳ ಬೆಟ್ಟದ ಮಾಳದಲ್ಲಿ
ನೀಲೇಗೌಡ ನನ್ನ ಮಾಯದ ಮಕ್ಕಳ ಎತ್ಗಂಡು ಹೋಯ್ತಾವ್ನೆ
ಅವನ ಹತ್ರ ಹೋಗಿ ನಿಂತ್ಗಂಡು ಘರ್ಜನೆ ಮಾಡ್ ಬುಡಿ
ಆ ನೀಲೇಗೌಡನಿಗೆ ಚಳಿಜ್ವರ ಬಂದ್ ಬುಡ್ಲಿ
ಹಿಂಬೇದಿ ಮುಂಬೇದಿ ಆಗಲಿ ಅಂತೇಳಿ
ಹುಲಿಗಳಿಗೆ ಬುದ್ಧಿ ಹೇಳ್ ಬುಟ್ರು

ಮಾದಪ್ಪನ ಮಾತ ಕೇಳ್ಕಂಡು
ಆ ಹುಲಿಗಳು ಘರ್ಜನೆ ಮಾಡ್ಕಂಡು
ಅಯ್ಯಾ ಬರಗ ಕೂಗುವ ಸದ್ದಿಗೇ

ಬರಗೂರು ಬೆಟ್ಟ ನಡುಗಿದವೋ
ಬರಗೂರು ಬೆಟ್ಟ ನಡುಗಿದವೋ
ನೀಲಯ್ಯನ ಪಾದ ಗುಡುಗಿದವೋs || ಕೋರಣ್ಯ ||

ಹುಲಿ ಕೂಗುತಾ ಇದ್ದರೆ
ಆ ಬರಗೂರು ಬೆಟ್ಟ ಗುಡಗುತ ಇತ್ತಂತೆ
ನೀಲೇಗೌಡ ಎಡ ಬಲ ನೋಡ್ದಾ
ಚಳಿ ಜ್ವರ ಬಂದುಬಿಟ್ತು
ನನ್ನ ಮಡದಿಯಾದ ಸಂಕೆಣ್ಣು ಹೇಳ್ತಾಯಿದ್ಲು
ನಿಜವಾಯ್ತು
ಮಾದೇಶ್ವರ್ನ ಮಕ್ಳು ಅಂತ ಹೇಳ್ತಾಯಿದ್ಲು
ಮಾದಪ್ಪನ ಮಕ್ಕಳಾಗು ಒತ್ತಿಗೇ
ಅ ಮಾದೇಶ್ವರನ ಹುಲಿ ತಿನ್ನುವುದಕ್ಕೆ ಬತ್ತಾವೆ
ಇನ್ನು ಈ ಹುಲಿ ಬಾಯಿ ಬಿಟ್ಟೂ ನಾ ಎಂಗೆ ಹೋಗಲಿ
ಯಪ್ಪ ಹುಲಿ ಬಾಯಿ ತಪ್ಪಿಸ್ಗಂಡು
ಆ ಮಕ್ಕಳ ನಾ ಮುಟ್ಟುಬಾರ್ದು
ಈ ಮಕ್ಕಳೆಲ್ಲಾದ್ರು ಅವಸಿಬಿಡೋಣ ಅಂತೇಳಿ
ಒಂದು ಕಲ್ಲು ಗವಿ ಕಾಣಸ್ತಂತೆ
ಅ ಕಲ್ಲು ಗವಿ ಪೊಟ್ರೆ ಒಳಗೆ ತಕ್ಕಂಡೋಗಿ ಮಲ್ಗಿಸ್ ಬುಟ್ಟು
ಎರಡು ಮಕ್ಕಳ್ನುವೇ
ಒಂದು ಬಾರಿ ಗುಂಡ ಅ ಗವಿ ಬಾಗಲಗೇ ಎಳ್ದುಬುಟ್ಟು
ಹಿಂತಿರುಗುದ್ನಂತೆ ನೀಲೇಗೌಡ
ಆವಾಗ ನೀಲೇಗೌಡ
ಹಿಂತಿರುಗಿ ಸಂಕಮ್ಮನ ಮನೆಗೆ ಬತ್ತಾವರೆ
ನನ್ನ ಹೆಂಡ್ತಿನಾರ ಕರ್ಕಂಡು ವಂಟೋಗೋಣ
ಈ ಮಕ್ಕಳಿಲ್ಲೆ ಇರಲಿ ಕಾಡಲ್ಲಿ ಅಂತೇಳುಬುಟ್ಟು
ನೀಲೇಗೌಡ ಬರೋಹೊತ್ತಿಗೆ
ಅಷ್ಟೊತ್ತಿಗೆ ಎರಡು ಮಕ್ಕಳು ಬಂದು
ಸಂಕಮ್ಮನ ತೊಡೆಮೇಲೆ ಮಲಗಿದ್ದೋ
ನೀಲೇಗೌಡ
ದುರುದುರ್ನೇ ನೋಡ್ತ ಇದ್ದ
ಎಲಾ ಸಂಕೆಣ್ಣೆ
ಇದೇನು ಆಶ್ಚರ್ಯ
ಕಲ್ಲು ಗವಿಯಲ್ಲಿ ಮಲಗಿಸಿದ್ದ ಮಕ್ಳು ಇಲ್ಬಂದವೇ ಅಂದ
ಯಜಮಾನರೇ
ನನ್ನಪ್ಪನ ಮನೆ ಮಾದೇವ
ಮಾಯ್ದ ಮಕ್ಳು ಅಂದಳು
ನಿನ್ನಪ್ಪನ ಮನೆ ಮಾದೇವನ ತೋರು ಅಂದ್ರು
ನೋಡಿ ಗುರುವೆ
ಇನ್ನು ಒಂದುಗಳಿಗೆ ಅರಗಳಿಗೆ ಒಳಗೆ
ನನ್ನ ಅಪ್ಪನ ಮನೆ ದೇವರು ಬತ್ತಾರೆ
ನೋಡಪ್ಪ ಅಂದ್ರು
ಅಷ್ಟು ಹೊತ್ತಿಗೆ ಮಾದಪ್ಪಗೆ ಹರವಾಗ್ ಬುಡ್ತು
ಇನ್ನು ಹೆಚ್ಚಾಗಿ ಮಡಗದರೇ
ನನ್ನ ಮಕ್ಕಳಿಗೆ ಭಿನ್ನ ಮಾಡ್ ಬುಡ್ತನೆ ಅಂತೇಳಿ
ತುಂಬಿದ ಸೋಮುವಾರ
ನನ್ನಾಪ್ಪಾಜಿ ಸೂರ್ಯ ಉದಯವಾಗು ಹೊತ್ತಿನಲ್ಲಿ
ಮುತ್ತಿನ ಜೋಳಿಗೆ ಮುಂಗೈಲಿ ಧರಿಸ್ಕಂಡು
ಮಾದೇವ
ಧರೆಗಾತ್ರದ ದುಂಡಕೋಲು ಬಲಗೈಲಿ ಇಡ್ಕಂಡು

ಅಯ್ಯಾ ಮಕ್ಕಳ ಭಿಕ್ಷಕ್ಕೆ ಬತ್ತವರೆ
ಕತ್ತಲ ರಾಜ್ಯದ ಮಾದೇವಾs || ಕೋರಣ್ಯ ||
ಮುಂದು ಮುಂದು ಮಾದೇಶ್ವರ ತಂದೆ
ಬೆನ್ನಿಂದೆ ನಾಗರ ಸೆಡೆಯು
ಮುಂದಲ ಪೂಜೆ ಮಾಡಿರಿ ಗುರುವೆ ನಾಗುಭೂಷಣಗೆ

ಸಂಕಮ್ಮನ ಅರಮನೆಗೆ ಬಂದ್ರು ಮಾದಪ್ಪ
ತುಂಬ್ದು ಸೋಮವಾರ‍
ಲಿಂಗದ ಮೂರ್ತ ಜಂಗನು ಶಬ್ದಮಾಡ್ಕಂಡು
ಮನೆಬಾಗಲ್ಗೇ ಬಂದು ನಿಂತ್ಕಂದ್ರು
ಹರಾ ಹರ ಭಿಕ್ಷ ಗುರು ಧರ್ಮ ಕೋರಣ್ಯ ಭಿಕ್ಷ
ಯತಿಗಳ ಮುನಿಗಳ ಭಿಕ್ಷ
ತಂದೆ ಕಲ್ಯಾಣದೋರ ಭಿಕ್ಷ
ತಾಯಿ ಉತ್ರಾಜಮ್ಮನೋರ ಭಿಕ್ಷ
ಜ್ಯೋತಿ ಲಿಂಗಯ್ಯನ ಭಿಕ್ಷ
ಜೋಳಗಿಡ್ಡ ಆತ್ಮನ ಭಿಕ್ಷ
ನಾಲ್ಕು ಪಾವು ಜೋಳದ ಭಿಕ್ಷ
ನಾಗು ಬೆತ್ತದ ಭಿಕ್ಷ ಅಂತೇಳಿ

ಅಪ್ಪ ಪಂಚೇಳಕ್ಷರ ಕೂಗವರೆ
ಮಾಯಿಕಾರ ಮಾದೇವ
ಅಂಗೈಲಾಧಾರ ಮುಂಗೈಲಿ ಜೋಳಿಗೆ
ಲಿಂಗಯ್ಯ ದಯಮಾಡವರೆ
ಗುರುಧರ್ಮ ಕೋರಣ್ಯ ಭಿಕ್ಷಕೆ
ಮಹದೇವ ಬಂದವರೇs || ಕೋರಣ್ಯ ||

ಪಂಚೇಳಕ್ಶರವನ್ನ ಸಾರುದ್ರು
ಭವತಿ ಭಿಕ್ಶಾಂದೇಹಿ
ಧರಮ ಗುರು ಕೋರಣ್ಯದ ಭಿಕ್ಷ
ನನ್ನ ಗುರು ದರ್ಮ ಕೋರಣ್ಯದ ಭಿಕ್ಷ ಅಂತೇಳಿ
ಸಂಕಮ್ಮ ಮಾದಪ್ನ ಸ್ವರ ಕೇಳ್ದಳು
ಯಜಮಾನರೇ
ನನ್ನಪ್ಪನ ಮನೆ ದೇವರು ತೋರು ಅಂದ್ರಲ್ಲ
ಬನ್ನೀ ನನ್ನಪ್ಪನ ಮನೆದೇವರು ಭಿಕ್ಷಕ್ಕೆ ಬಂದವರೆ
ಎತ್ತಿಗಳ್ಳಿ ನೀವೊಬ್ಬ ಮಗನ ನಾನೊಬ್ಬ ಮಗನ
ಎತ್ ಗಂಡೋಗೋಣ
ಮಾದಪ್ಪನಿಗೆ ದಾನಕೊಟ್ಟುಬಿಡೋಣ ಅಂತೇಳಿ
ಮಕ್ಕಳೆತ್ಗಂಡು ಬತ್ತಾ ಇದ್ದಳು ಸಂಕಮ್ಮ
ಬಾಗಲ್ಗೇ ಬಂದ ತಕ್ಷಣವೆ ನೋಡುದ್ರು
ಕಂದಾ ಮಕ್ಕಳು ದಾನ ಕೊಡುಕೆ ಬರ್ತಾಯಿದ್ದಿರೋ ಅಂದ್ರು
ಹೌದು ಗುರುವೆ ನನ್ನಪ್ಪ ಅಂದ್ರು
ಆ ರೀತಿ ಕೈನಲ್ಲಿ ಧಾನ ತಕ್ಕೋಳ್ಳದಿಲ್ಲ ಮಗಳೇ
ಮುತ್ತೈದೆಗೆ ಮುತ್ತೈದೆ ಸ್ಥಾನ
ಚಿರಂಜೀವಿಯಾಗಬೇಕಾದರೆ
ಮುತ್ತೈದೆಗೆ ಏನು ಲಕ್ಷಣ ಅಂದ್ರೆ
ಬೆತ್ತದ ಮೊರ ಕಂದ
ಆರು ಕಾಳಾಗಲಿ ಮೂರು ಕಾಳಾಗಲಿ
ಮೂರು ಗಿಡಿಯಾಗಲೀ
ಹರದೇಶಿ ಪರದೇಹಿ
ದಾಸ ಜೋಗಿ ಗುಡ್ಡ ಗೊರವ
ಯಂತ್ರಗಾರ‍ಮಂತ್ರಗಾರ
ಕುಂಟ ಕುರುಡ
ಹೆಡ್ಡ ಹೆಳವ ಯಾರೇ ಬರಲಿ ನಿನ್ನ ಮನೆಬಾಗಲಗೇ
ಮುತ್ತಿನ ಮೊರದಲ್ಲಿ
ಅವರು ಜೋಳಿಗೆ ದಾನ ಕೊಟ್ಟರೆ ಕಂದ
ನಿನಗೆ ಮುತ್ತೈದೆ ಸ್ಥಾನ ಚಿರಂಜೀವಿ ಆಗುತ್ತೆ ಅಂದ್ರು
ಮಾದಪ್ಪನ ಮಾತು ಕೇಳ್ದಾ ಸಂಕಮ್ಮ
ಹಿಂದಕ್ಕೆ ಓಡೋದ್ರು ಗಂಡ ಹೆಂಡ್ತುವೇ
ಮನೆ ಒಳಗೆ ಎರಡು ಮೊರ ತಕ್ಕಂಡ್ರು
ಎರಡು ಮೊರ್ದಲ್ಲು ಮಕ್ಕಳು ಮಲ್ಗಿಸ್ಕಂಡು
ಬಾಗಲಿಂದ ಈಚೆ ಬಂದು ನಿಂತ್ಗಂಡು

ಅಪ್ಪ ಜೋಡಿ ಮಕ್ಕಳ ತಂದವರೆ
ಸತುವಂತೆ ಸಂಕಮ್ಮ
ಜೋಡಿ ಮಕ್ಕಳ ತಂದವರೇ
ಜೋಳುಗು ದಾನ ನೀಡವರೇs || ಕೋರಣ್ಯ ||

ಗಂಡ ಹೆಂಡಿರಿಬ್ಬರು ಎರಡು ಮಕ್ಕಳು ದಾನ ನೀಡುಬುಟ್ಟು
ಯಜಮಾನ
ನನ್ನಪ್ಪನ ಮನೆದೇವರ ಪಾದಕ್ಕೆ ನಮಸ್ಕಾರ ಮಾಡಿ ಅಂದ್ರು
ಸಂಕೆಣ್ಣೇ
ನಾವಿಬ್ಬರು ಒಂದೇ ಸಾರಿ ಮಾಡಬೇಕು ಮಾದಪ್ಪನಗೇ
ಅಂತೇಳಿ
ಮಲೇ ಸೋಲುಗ ನೀಲೇಗೌಡ
ಎಡಗಡೆ ಪಾದ ಇಡಕ್ಕಂಡ
ದಡ್ಡ ಮುಂಡೇಮಗ
ಯಂತ್ರಗಾರನಾದ್ರು ದಡ್ಡನಾಗೋದ
ಪತುವ್ರತೆಯಾದ ಸಂಕಮ್ಮ ಬಲಗಡೆ ಪಾದ ಇಡ್ಕಂಡಳು
ನನ್ನಪ್ಪನ ಮನೆ ದೇವರು
ಮಾದೇವ ಅಂತೇಳಿ ನಮಸ್ಕಾರ ಮಾಡುದ್ರು
ಸಂಕಮ್ಮ
ನೀನು ಚಿರಂಜಿವಿಯಾಗಿ ಬಾಳು ಅಂದ್ರು
ನಿನ್ನ ಹೆಸರು ಸೂರ್ಯ ಚಂದ್ರಾದಿಗಳಿರುವವರೆಗೂವೇ
ಮೂರು ಲೋಕದಲ್ಲಿ ಕೊಂಡಾಡ್ಲೀ ಕಂದಾ ಅಂದ್ರು

ಮಾದಪ್ಪ
ಹಿಂದಿನ ಬಾಳು ಹಿಂದ್ಲಾಗೆ
ಗಂಡ ಹೆಂಡ್ತಿರಿಬ್ಬರು ಕೂಡ ನಾವು ಹುಟ್ಟುವ ಮರ ಹುಟ್ದಾಗೆ
ದೊಡ್ಡಿಗೋದ್ರೆ ನಮ್ಮ ಬಂಜೆ ಅನ್ನುವ ಸ್ವರ ತಪ್ಪುದಿಲ್ಲ
ತಂದೆ ಅಂದರು

ಕಂದ ಹೆದರಬೇಡ ಕಂದಮ್ಮ
ಹೆದರಬೇಡ ಕಂದಮ್ಮ
ಪತಿವ್ರತೆ ಸಂಕಮ್ಮ
ಅಯ್ಯಾ ನಾವಿದ್ದಮೇಲೆ
ಭಯವೇತಕಪ್ಪ ಸತುವಂತೆ ಸಂಕಮ್ಮಾs || ಕೋರಣ್ಯ ||