ಕೊಂಗಾರು ಕೊಟ್ಟ ತೀಜಿಯ ಮ್ಯಾಲೆ
ಸಾಗರವಾದರು ಮದೇವ
ಬಂಗಾರದ ಬೆಳ್ಳಿ ಬರಗನ ಮ್ಯಾಲೆ
ಬೀಗಿ ಮೆರೆದಾರೊ

ಆವಾಗ ನೀಲೇಗೌಡ
ತನ್ನ ದೊಡ್ಡಿವೊಳಗೆ ಬಂದೂ
ಹಿಂದೆ ಯವ ರೀತಿಯಾಗಿ ಕೆಲಸ ಬದುಕು ಮಾಡ್ತಾ ಇದ್ದ
ಅದೇ ಆಪ್ಪಂದವಾಗಿ ಕೆಲಸ ಮಾಡ್ಕೊಂಡೋಗ್ತಾಅವನೆ
ಆ ಬೊಪ್ಪೇಗೌಡನಿಗೆ ವಯಸಾಗ್ಬುಟ್ಟಿದೆ
ಒಬ್ಬ ಮಗ ದನಾ ಮೇಯಿಸುವುದು
ಒಬ್ಬ ಮಗ ಎಮ್ಮೆ ಮೇಯಿಸುವುದು
ಒಬ್ಬ ಮಗ ಆರಂಭ ಮಾಡುವುದು
ಒಬ್ಬ ಮಗ ಕುರಿ ಕಾಯುವುದು
ಒಬ್ಬ ಮಗ ಆಡು ಕಾಯುವುದು
ಈ ರೀತಿಯಾಗಿ ಎಲ್ಲಾಮಕ್ಕಳಿಗೂ ಕೆಲಸ ನೀಮಿಸಿದ್ದ
ನೀಲೇಗೌಡ್ನಿಗೆ ಮಾತ್ರ ಹುಟ್ಟಿದಾರಭ್ಯದಿಂದಲೂ
ಕುರಿಕಾಯ್ಕೊಂದಿರೋದೆ
ಕಿರೀಮಗನಿಗೆ ಬಹಳ ಹೆಚ್ಚಾಳದಲ್ಲಿ
ಲಗ್ನಮಾಡ್ಬೇಕು ಅಂತ್ಹೇಳಿ
ಬೊಪ್ಪೇಗೌಡನು ಏಳೇಳುಹದ್ನಾಲ್ಕು ದೊಡ್ಡೀಗೂವೆ
ಲಗ್ನಪತ್ರಿಕೆ ಕೊಟ್ಟು
ನಂಟ್ರಿಗೇಳ್ಬುಟ್ಟು ಬರ್ರಪ್ಪಾ ಅಂತ್ಹೇಳಿ
ಎಲ್ಲಾ ಮಕ್ಕಳ್ನೂ ಕಳಿಸ್ಬುಟ್ಟು
ಏಳೇಳು ಹದ್ನಾಲ್ಕು ದೊಡ್ಡಿವೊಳಗೆ
ನೆಂಟ್ರೆತ್ತರಿಗೆ ಹೇಳ್ಕಂಡ್ರು
ಬರುವಾರ ಸುಟ್ಟ ಸುಕ್ರವಾರದ್ದಿನ
ಲಗ್ನಮಾಡ್ತೀವಿ ಅಂತ್ಹೇಳ್ಬುಟ್ರು
ಅದೇ ಪ್ರಕಾರವಾಗಿ
ಲಗ್ನಕ್ಕಾಗುವಂಥ ಸಾಮಾನು ಜೋಡಿಸ್ಕಂಡು
ವಾರಾವಾರ ಎಂಟುದಿನ ತುಂಬು ಹೊತ್ಗೆ
ಸುಟ್ಟ ಸುಕ್ರವಾರದ್ದಿನ ಸೂರ್ಯೋದಯವಾಗುವ ಹೊತ್ನಲ್ಲಿ
ಬೊಪ್ಪೇಗೌಡನ ದೊಡ್ಡಿವೊಳಗೆ

ಓಂದ ಸೀತಾಳ ಚಪ್ರ ಹಾಕವರೆ
ಹೊಲೇರ ಹೊನ್ನಯ್ಯ ಬಂದವರೆ
ವಾದವನ್ನಾದರೆ ಮಾಡವರೆ
ಮಡಿವಾಳ ಮಾಚಯ್ಯ ಬಂದವರ
ನೀಲಿ ಮಡಿಯ ಕಟ್ಟವರೆ
ಹನ್ನೆರಡು ತೋರಣ ಕಟ್ಟವರೆ
ಹವಳದ ತೋರಣ ಕತ್ಟವರೆ
ಮಲೆಯ ಸ್ವಾಲುಗ ನೀಲಯ್ಯ
ಒಂದ ಕಂಬ ಮೂರ್ತ ಮ್ಸಡವರಂತೆ
ಮಲೆಯ ಸ್ವಾಲುಗ ನೀಲಯ್ಯ || ಕೋರಣ್ಯ ||

ಕಂಬ ಮೂರ್ತವನ್ನು ಮಾಡಿ ಸುಟ್ಟ ಸುಕ್ರವಾರದ್ದಿನಾ
ದುಂಡೇಗೌದನ ಪೋಡುಗ್ಹೋಗಿ
ಹೆಣ್ಣನ್ನೇ ಕರಕೊಂಡು ಬಂದರು
ಆ ಸ್ವಾಲುಗರ ಪದ್ಧತಿಯಂತೆ
ಆವಾಗ ನೆಂಟರೆತ್ತರೆಲ್ಲ ಸೇರ್ಕೊಂಡು

ಅಯ್ಯಾ ಸ್ವಂತಕ ಸೋದರು ಬಂದವರೆ
ನೀಲಯ್ನಾದರೆ ಕರೆದವರೆ
ಹಸೆಯ ಮ್ಯಾಲೆ ನಿಲುಸವರೆ
ಹಸೆಯ ಮ್ಯಾಲೆ ಕೂಡಸವರೆ
ಕಂಕಣ ಧಾರಣೆ ಮಾಡವರೆ
ಸ್ವಂತಕ ಸೋದರು ಬಂದವರೆ
ಕಂಕಣ ಧಾರಣೆ ಮಾಡವರೆ
ಸಂಕಮ್ಮನ್ನಾದರೆ ಕರೆದವರೆ
ಹಸೆಯ ಮ್ಯಾಲೆ ಕೂರ್ಸವರೆ
ಕಂಕಣ ಧಾರಣೆ ಮಾಡುವರೆ
ಅಲ್ಲಿ ಕಂಕಣಾ ಧಾರಣೆ ಮಾಡವ್ರೆ
ಮಲೆಯ ಸ್ವಾಲುಗ ನೀಲಯ್ಯಾs || ಕೋರಣ್ಯ ||

ಹೆಣ್ಣೂ ಗಂಡ್ಗೂ ಅವರ ಜಾತಿ ಪದ್ಧತಿಯಂತೆ
ಹಸೆ ಮ್ಯಾಲೆ ಕೂರುಸ್ಕಂಡು ಕಂಕಣ ಧಾರ್ಣೆ ಮಾಡಿದ್ರು
ತಿರುಗ ಬೆಳಗಾಗುತ್ತಲೇ ಎದ್ದು
ಆವಾಗ ಅವ್ರ ಜಾತಿ ಪದ್ಧತಿ ಕುಲ ಪದ್ಧತಿಯಂತೆ
ಹೆಣ್ಣೋರು ಗಂಡ್ನೋರು ಸೇರುಕೊಂಡ್ರು
ಕುಂಬಾರ ಗುಂಡಯ್ನಿಂದ ದೇವರ ಗಡಿಗೆ ತರಿಸ್ಕಂಡು
ಅವರ ಮನದೇವ್ರು ಕುಲದೇವ್ರ ತಂದು
ಆವಾಗ ಚಪ್ಪರದಟ್ಟೀಲಿ ಮಡಗಬುಟ್ಟು
ಆವಾಗ ಒಳ್ಳೇ ಗಳಿಗಿವೊಳ್ಗೆ
ನೀಲೇಗೌಡನಿಗೆ ಧಾರಮಾರ್ತ ಮಾಡ್ಬೇಕಂತ್ಹೇಳಿ

ಅಯ್ಯ ಕೆಲ್ಸಿ ಕುಳ್ಳಯ್ಯ ಬಂದವರೆ
ತೂಂಡಾಳು ಬಾಸಿಂಗ ತಂದವರೆ
ವಾಜರ ಮಲ್ಲಯ್ಯ ಬಂದವರೆ
ಮಾಂಗಲ್ಯಸೂತ್ರ ತಂದವರೆ
ಕಾಸಿ ಪುರೋಯಿತ್ತು ಬಂದವರೆ
ಸಂಬಂಧ ಮಾಲೆ ತಂದವರೆ
ಧರ್ಮ ದೇವತೆ ಬಂದವರೆ
ಧಾರಗಾದರೆ ನಿಂತವರೆ
ಐದು ಜನ ಮುತ್ತೈದೇರು ಬಂದವರೆ
ಶಾಸ್ತ್ರಾನ್ನಾದರೆ ಮಾಡವರೆ
ಸೋಬಾನನಾದರೆ ಹೇಳವರೆ
ಒಳ್ಳೇ ಗಳಿಗೆ ನೋಡವರೆ
ಧಾರೆ ಮೂರ್ತಕೆ ನಿಲ್ಲಿಸವರೆ
ಸಂಬಂಧ ಮಾಲೆ ಕೊಟ್ಟವರೆ
ಹೆಣ್ಣಿನ ಕೈಲಿ ಕೊಟ್ಟವರೆ
ಗಂಡಿನ ಕೈಲಿ ಕೊಟ್ಟವರೆ
ಒಳ್ಳೆ ಗಳಿಗೆ ನೋಡವರೆ
ಸಂಬಂಧ ಮಾಲೆ ಊಡವರೆs || ಕೋರಣ್ಯ ||

ಕಾಸಿ ಪುರೋಹಿತ್ರು ಹೆಣ್ಣಿನ ಕೈಲಿ ಗಂಡಿನ ಕೈಲಿ
ಸಂಬಂಧ ಮಾಲೆಯನ್ನು ಕೊಟ್ರು
ನೋಡಪ್ಪ ನೀಲೇಗೌಡ ಶಿವಶರಣೆಯಾದ ಸಂಕಮ್ಮ
ಹೆಣ್ಣು ಗಂಡಿಗೆ ಅಂದರೆ ಈವೊತ್ತು ನಿಮಗೆ ಮನಾ ಬೆರ್ತುಕೊಳ್ಬೇಕು
ಹೆಣ್ಣು ಗಂಡು ಒಂದಾಗ್ಬೇಕು
ಅದಕ್ಕೋಸ್ಕರಅಂತ್ಹೇಳಿ ಸಂಬಂಧ ಮಾಲೆ ಅಂತ್ಹೇಳಿ
ಸಂಬಂಧ ಬೆಳೆಯಲಿ ಅಂತ್ಹೇಳಿ
ಹೆಣ್ಣಿನಿಂದಾ ಗಂಡಿಗೆ ಗಂಡಿನಿಂದಾ ಹೆಣ್ಣಿಗೆ
ಸಂಬಂಧ ಮಾಲೆಯನ್ನು ಹಾಕ್ಸಿದ್ರು
ಸಂಬಂಧ ಮಾಲೆ ಅಂದ್ರೆ ಬಿಲ್ಪತ್ರೆದಾಳ
ಆ ಸಂಬಂಧ ಮಾಲೆಯನ್ನು ಹಾಕಿಸ್ಬುಟ್ರು
ಆವಾಗ ಎಳ್ಳು ಜೀರಿಗೆ ಕೈಗೆ ಕೊಟ್ಟರು
ನೀಲೇಗೌಡ ಸಂಕಮ್ಮ
ಗಂಡನಿಗೆ ಹೆಂಡ್ತಿ ಸಾಕ್ಷಿ ಹೆಂಡತಿಗೆ ಗಂಡನೇ ಸಾಕ್ಷಿ
ಹೆಂಡಿರ ಮಾತ ಗಂಡ ಮೀರಬಾರದು
ಗಂಡನ ಮಾತ ಹೆಂಡ್ತಿ ಮೀರಬಾರದು ಅಂತ್ಹೇಳಿ

ಅಯ್ಯಾ ಒಳ್ಳೇ ಗಳಿಗೆ ನೋಡವರೆ
ಎಳ್ಳು ಜೀರಿಗೆ ಬಿಟ್ಟವರೆs || ಕೋರಣ್ಯ ||

ಒಳ್ಳೇ ಗಳಿಗೇಲಿ ಗಂಡಿನ ತಲೇಮೇಲೆ ಮೂರಿಡಿ ಎಳ್ಳು ಜೀರಿಗೆ
ಹೆಣ್ಣಿನ ತಲೆಮೇಲೆ ಮೂರಿಡಿ ಎಳ್ಳುಜೀರಿಗೆ ಬಿಡಿಸ್ತ್ರು
ಆವಾಗಲೀಗ ಹೆಣ್ಣು ಗಂಡಿಗೆ ಎರಡು ಹಸ್ತವನ್ನು ನೀಡಿಸ್ಬುಟ್ಟು
ಅಕ್ಕಿಯನ್ನು ತುಂಬಿಸ್ಬುಟ್ಟು ತಾಂಬೂಲ ಬಾಳೇಣ್ಣ ಮಡಗಿ
ಬೆಲ್ಲ ತೆಂಗಿನಕಾಯನ್ನ ಮಡಗಿಬಿಟ್ಟು
ಕಾಸಿ ಪುರೋಹಿತ್ರು ಪಕ್ದಲ್ಲಿ ನಿಂತಕೊಂಡು

ಅವರ ಸ್ವಂತಕ ಸೋದರ್ರು ಬಂದವರೆ
ತೊಂಡಾಲು ಬಾಸಿಂಗ ಕಟ್ಟವರೆ
ಮಂಡೆಕಟ್ಟಿ ಧಾರೆ ಎರದವರೆ
ತಂದೆ-ತಾಯಿ ಬಂದವರೆ
ಧಾರೆಮೋರ್ತ ಎರದವರೆ
ನೆಂಟಾರು ಎತ್ತಾರು ಬಂದವರೆ
ಧಾರೆನ್ನಾದರೆ ಎರದವರೆ

ಅಯ್ಯಾ ತೊಂಡಾಲು ಬಾಸಿಂಗ ಕಟ್ಟವರೆ
ಮಂಡೆಕಟ್ಟಿ ಧಾರೆ ಎರದವರೇs || ಕೋರಣ್ಯ ||

ಹಲಸಾನ ಮರದ ನೆರಳಲ್ಲಿ
ಪರುಸೆ ಪವಾಡ ಹೂಡವರೇ
ಹರುಷದಿಂದ ಮಾದಯ್ಯನ ಗಿರಿಗೆ
ಪರುಸೆ ನೆರೆದಾವೋ

ಆವಾಗ ಧಾರೆ ಮೂರ್ತವನ್ನು ಮಾಡಿ
ಕಾಸಿ ಪುರೋಯಿತ್ರು ಮಾಂಗಲ್ಯವನ್ನು ಈಸ್ಕೊಂಡ್ರು
ಗಂಡಿನ ಕೈಲಿ ಮಾಂಗಲ್ಯವನ್ನು ಪೂಜೆ ಮಾಡಿಸಿ
ನಮಸ್ಕಾರವನ್ನು ಮಾಡಿಸಿ
ಆವಾಗ ಐದ್ಜೆನ ಮತ್ತೈದೇರ ಕೈಲಿ ನಮಸ್ಕಾರ ಮಾಡ್ಸಿ
ಯಜಮಾನ್ರ ಕೈಲಿ ಮುಟ್ಟಿಸ್ಬುಟ್ಟು ಮಾಂಗಲ್ಯವನ್ನು
ನೀಲೇಗೌಡ್ನ ಕೈಲಿ ಕೊಡ್ತಾ ಇದ್ದಾರೆ
ಅಪ್ಪ ನೀಲೇಗೌಡ
ಈ ಮಾಂಗಲ್ಯವಾಗಿರತಕ್ಕಂಥಾದ್ದನ್ನು
ಬ್ರಹ್ಮ ವಿಷ್ಣು ಈಸ್ವುರ ತ್ರಿಮೂರ್ತು ಋಷಿಗಳ ಕೈಲಿ
ಸಾಧ್ಯವಿಲ್ಲ ಇದನ್ನು ಬಿಚ್ಚುವುದಕ್ಕೆ
ನೀನು ಕಟ್ಟಬೇಕು
ಕಟ್ಟಿದ ಗಂಟ ನೀನೇ ಬಿಚ್ಚಬೇಕು
ಬ್ರಹ್ಮ ವಿಷ್ಣು ಈಸ್ವುರ ಅಂತ್ಹೇಳಿ ಮೂರು ಗಂಟನ್ನೇ ಹಾಕಿ
ಮಾಂಗಲ್ಯ ಕಟ್ಟು ಅಂತ್ಹೇಳಿ

ಅಯ್ಯಾ ಒಳ್ಳೇ ಗಳಿಗೆ ನೋಡವರೆ
ಮಾಂಗಲ್ಯ ಸೂತ್ರ ಊಡವರೆs || ಕೋರಣ್ಯ ||

ಐದ್ಜೆನ ಮತ್ತೈದೇರು ಬಂದವರೆ
ಸಾಸ್ತ್ರನ್ನಾದರೆ ಮಾಡವರೆ
ಸೋಬಾನೆನಾದರೆ ಹೇಳವರೆ
ಹೆಣ್ಣಿನ ಹೆಸ್ರ ಕೇಳವರೆ
ಗಂಡಿನ ಹೆಸ್ರ ಕೇಳವರೆ
ಅಯ್ಯಾ ನೆಂಟಾರು ಎತ್ತಾರು ಬಂದವರೆ
ಮುಯ್ಯನಾದರೆ ಮಾಡವರೆ
ಅಯ್ಯಾ ಒಳ್ಳೇ ಗಳಿಗೆ ನೋಡಿ ಅವರು
ಎಚ್ಚಾಳದಲ್ಲಿ ಲಗ್ನನಾದರೂ ಆಗವರೆs || ಕೋರಣ್ಯ ||

ನೀಲೇಗೌಡ್ನಿಗೆ ಒಳ್ಳೇ ಗಳಿಗೇಲಿ ಲಗ್ನವಾಯ್ತು
ಆವಾಗಲೀಗ ಗಂಡ ಹೆಂಡಿರೂ
ಸಂತೋಷವಾಗಿ ನಿಂತ್ಕಂಡ್ರು
ಅಯ್ಯ ಕುಲದವರೆಲ್ಲ ಕೂಡವರೆ
ಕುಲಕೆ ಊಟ ಕೊಟ್ಟವರೆ
ಕುಲಕೆ ವೀಳ್ಯ ತಿದ್ದವರೆ
ಮಲೆಯ ಸ್ವಾಲುಗ ನೀಲಯ್ಯ
ಬಹಳ ವೆಚ್ಚಾಳದಲ್ಲಿ ಅವರು
ಲಗ್ನನಾದರೂ ಆಗವರೇs || ಕೋರಣ್ಯ ||

ಬಹಳ ಹೆಚ್ಚಾಳದಲ್ಲಿ ಲಗ್ನ ಮಾಡ್ಕಂಡ್ರು
ನೆಂಟರೆತ್ತರೆಲ್ಲ ತಮ್ಮ ತಮ್ಮ ಪೋಡ್ಗೊಂಟೋದ್ರು
ಈ ಕಡೆ ನೀಲೇಗೌಡ ಶಿವಶರಣೆಯಾದ ಸಂಕಮ್ಮ
ತಂದೇ ತಾಯಿಗಳ ಮನೇವೊಳ್ಗೆ ತಂದೆತಾಯ್ಗಳ ಪಾದ್ಸೇವ ಮಾಡಿ
ಪತಿವ್ರತಾ ಧರ್ಮ ಉಳಿಸ್ಕಂಡಿದ್ದರು
ನೀಲೇಗೌಡ್ನ ಲಗ್ನವಾದ ಮೇಲೆ
ನನ್ನ ಪತಿಯಿಂದಲೇ ಮೋಕ್ಷ
ಪತಿಯಿಂದಲೇ ಸ್ವರ್ಗ
ಪತಿಯಿಲ್ಲದ ಹೆಂಗ್ಸು ಪಾಷಾಣಕ್ಕಿಂತ ಕಡೆ ಅಂತ್ಹೇಳಿ
ಪತಿ ಸೇವೆ ಮಾಡ್ಕಂಡ್ ಬರ್ತಾಳೆ
ಯಾವ್ ರೀತಿಯಾಗೆಂದರೆ
ಬಲದ ಮೊಗ್ಗಲಾಗಿ ಮಲಗಿ ಎದ್ದ ತಕ್ಷಣ
ಗಂಡನ ಪಾದ್ಕೆ ನಮಸ್ಕಾರವನ್ನ ಮಾಡಿ
ತನ್ನ ಮನೇ ಕೆಲ್ಸ ಬದುಕ್ಮಾಡ್ತಳೆ
ಗಂಡನಾದ ನೀಲೇಗೌಡ ಹೊರಗಡೆ ಹೋಗುವಾಗ
ಪಾದಕ್ಕೆ ನಮಸ್ಕಾರ ಮಾಡಿ ಹೊರಗಡೆ ಕಳಿಸ್ತಾ ಇದ್ದಳು
ಸಾಯಂಕಾಲ ಬರೂದೇ ತಡವಾಗಿ
ಚೆಂಬನಲ್ಲಿ ನೀರ ಮಡೀಕೊಂಡು ಬಾಗ್ಲಲ್ಲಿ ಕಾಯ್ತಾ ಇದ್ದಳು
ಬಂದ ತಕ್ಷಣವೇ ಪತಿ ಪಾದವ ತೊಳ್ದು
ಪತಿ ಪಾದಕ್ಕೆ ನಮಸ್ಕಾರವನ್ನ ಮಾಡಿ ಒಳಗಡೆ ಕರೀತಾ ಇದ್ದಳು
ದಿನಕ್ಕೆ ಮೂರು ಸಾರಿ ನಮಸ್ಕಾರವನ್ನು ಮಾಡಿ
ತನ್ನ ಪತೀವ್ರತಾ ಧರ್ಮ ಕಾಪಾಡ್ಕೊಂಡು ಬರ್ತಾ ಇದ್ದಳು
ಯಾರು? ಶಿವಶರಣೆಯಾದ ಸಂಕಮ್ಮ
ನೀಲೇಗೌಡ ಇದೇ ಪ್ರಕಾರವಾಗಿ
ಕುರಿಯನ್ನು ಕಾಯ್ಕೊಂಡು ಬರ್ತಾ ಇದ್ದಾರೆ
ತುಂಬಿದ ಬಳಗ
ಆದರೆ ಆರ್ಜನ ಅಕ್ಕಾ ತಂಗೀರು ವಾರಾರ್ಗಿತ್ತೀರು
ಅತ್ತಿಗೆ ನಾದ್ನೀರು ಸಂಕಮ್ಮನ ಅಂಚಾ ಚೆಂದ ನೋಡಿ
ನಮ್ಮ ಮನಗ ಭಾಗ್ಯಲಕ್ಷ್ಮೀ ಬಂದಿದ್ದಾಳೆ
ಇವ್ಳ ಕೈಲಿ ಕಲಸಾಬದ್ಕ ಮಾಡಿಸ್ಬಾರ್ದು
ಅಂತ್ಹೇಳಿ ಬಾಳೆ ಪ್ರೀತಿಯಿಂದ ಸಾಕ್ತಾ ಇದ್ದಾರೆ
ಅಮ್ಮಾ ಸಂಕರಮ್ಮ
ನೀನು ಕೆಲ್ಸಾ ಬದ್ಕು ಮುಟ್ಟುಬ್ಯಾಡ
ಚೆನ್ನಾಗಿರಮ್ಮ ಅಂತ್ಹೇಳಿ ಬಾಳ ಮುದ್ದಿನಿಂದ ಸಾಕ್ತಾ ಇದ್ದಾರೆ
ಸಂಕಮ್ಮನಿಗೆ ಇದೇ ಪ್ರಕಾರವಾಗಿ
ಆರು ಮೂರು ಒಂಭತ್ತು ತಿಂಗ್ಳು ನಡೆದುಕೊಂಡು ಬಂತು
ನೀಲೇಗೌಡ ಮಾತ್ರ ಕುರಿಯನ್ನ ಕಾಯ್ಕಾಂಡು ಬತ್ತಾವ್ನೆ
ಅಸಮಾನುಕಾರ ದುಸುಮಾನುಕಾರ ಕೋಪಿಷ್ಟ ಮನಸ
ಆದರೆ ಬೇದನಸಕ್ತಿ
ಮನಸನಲ್ಲಿ ಕಳವಳ ಆವನ್ಗೆ
ಅಣ್ಣಾ ತಮ್ಮಂದ್ರು ಭಾವಮೈದ್ದೀರು ಇದ್ದಾರೆ
ನನ್ನ ಮಡದಿಯಾದ ಸಂಕೆಣ್ಣೆ ಅಂದವಾದವುಳು ಚೆಂದವಾದವಲು
ಯಾವನಾದರೂ ಕಣ್ಣಿಟ್ಟುಟ್ಟುನೇನೋ
ಏನು ಮಾತಾಡಾನೋ ಅಂತ್ಹೇಳಿ
ಮನ್ಸ್ನಲ್ಲೇ ಕಳವಳ ಅವನ್ಗೆ
ಆದರೂ ನೀಲೇಗೌಡ ಕುರಿಕಾಯ್ಕೊಂಡು ಬತ್ತಾ ಇದ್ದ
ಆವಾಗೊಂಬತ್ತು ತಿಂಗಳಾಯ್ತು
ಸಂಕಮ್ಮನಿಗೆ ಬೇಜಾರಾಗ್ಬುಡ್ತು
ಹುಟ್ಟುವಾಗ ಅಣ್ಣ ತಮ್ಮ ಬೆಳೆಯುವಾಗ ದಾಯಾದಿ
ಎಂದಾದರು ನಮ್ಮ ಗಂಡಾ ಹೆಂಡರನ್ನು ಕರೆದು
ಬೇರೆ ಮನೆ ಕೊಡ್ತಾರೆ
ಅವತ್ತು ನಾನು ಕೆಲ್ಸ ಬದ್ಕು ಮಾಡಬಾರ್ದ
ಇವತ್ತು ನಾನು ಗುಂಪ್ನಲ್ಲಿ ಗೋವಿಂದ ಅಂತ್ಹೇಳಿ
ಗುಂಪ್ನಲ್ಲಿ ಕಲೀಬೇಕಂತ್ಹೇಳಿ
ಎಲ್ಲಾ ಅಕ್ಕಾತಂತೀರು ವಾರ್ವಾರ್ಗಿತ್ತೀರು ನೀರ್ಗೊಗ್ತಾಯಿದ್ದರು
ನಾನೂ ಒಂದು ಕೊಡ ನೀರ್ತರಬೇಕೆಂತ್ಹೇಳಿ

ಅಮ್ಮಾ ಕಂಕ್ಳಲ್ಲಿ ಹರವಿ ಇರಕವಳೆ
ನೀರಿಗಾದರು ಹೊಯ್ತಾವಳೇs || ಕೋರಣ್ಯ ||

ಬೆಳ್ಳೀಯ ತಟ್ಟೇಲಿ ಭನ್ನವ ತಂದವ್ರೆ
ಮೊಂಗಳ್ಳಿ ಮಲ್ಲಣ್ಣನಿಗೆ
ಮುತ್ತಿನ ಕಂಸಾಳೆ ಮುನಿಗಳು ಬಂದವ್ರೆ
ಭಿಕ್ಷಾವ ನೀಡಪ್ಪಾ

ಎಲ್ಲಾ ವಾರಾರ್ಗಿತ್ತೀರ ಜೊತೆಯೊಳಗೆ
ಶಿವಶರಣೆಯಾದ ಸಂಕಮ್ಮಾ
ಕಂಕ್ಳಲ್ಲಿ ಹರವಿ ಇರೀಕೊಂಡು ನೀರ್ಗೋಗ್ತಾ ಇದ್ದಳು
ಅರ್ಧಾ ದಾರ್ಗೋದ್ರು ತಮ್ಮ ಪೋಡ್ಬುಟ್ಟು
ಮಧ್ಯೆ ದಾರೀಲಿ ನಿಂತುಕೊಂಡ್ರು ಎಲ್ಲವಾರಾರ್ಗಿತ್ತೀರು ದಾಯಾದಿಕಾರ್ರು ಅತ್ಗೆನಾದ್ನೀರು
ಸಂಕಮ್ಮನ ಮಧ್ಯನಿಲ್ಲಿಸ್ಕೊಂಡ್ರು
ಅಕ್ಕಯ್ಯ ಅತ್ಗೆಮ್ಮಾ
ನೋಡಿ ಈ ಸಂಕಮ್ಮನಾ
ನಮ್ಮ ಮೈದನನಾದ ನೀಲೇಗೌಡ
ನಾಲ್ಕು ರಾಜ್ಯನೇ ತಿರುಗಿದ
ಏಳೇಳು ಹದಿನಾಲ್ಕು ದೊಡ್ಡಿ ತಿರುಗ್ದ
ಅಂದವಾದ ಮಡದಿ ಚೆಂದವಾದ ಮಡದಿ
ನನ್ನ ರೂಪಕ್ಕೆ ತಕ್ಕಂಥ ಹೆಂಡಿರು
ಅಂತ್ಹೇಳಿ ಲಗ್ನವಾದ್ನಲ್ಲ ಈ ಸಂಕೆಣ್ಣ

ಇವಳು ಹುಟ್ಟೀ ಬಂದ ಮೂವತ್ತು
ಮಂಡೇ ಮಾರಿ ಹನ್ನೆರಡು
ಮೈಯಾನ ಕಲೆಯೇ ತಪ್ಪಲಿಲ್ಲ
ದಟ್ಟಾ ಧರಣಿ ಸಂಕೆಣ್ಣು
ಹುಟ್ಟೂ ಬಂಜೆ ಸಂಕೆಣ್ಣು
ಮಕ್ಕಾಳ ಫಲವೇ ಮೊದಲಿಲ್ಲ
ಎದ್ದು ಮುಡವ ನೋಡಿದರೆ
ನಾವು ಬಂಜೇರಾಗುವೆವು
ಸಂಗಡ ದನಗಳ ಕಾದಾರೆ
ದನಗಳು ಬಂಜೇರಾಗುವವು
ಮಾಡಿದ ಅಡಿಗೆ ಉಂಡಾರೆ
ನಾವು ಬಂಜೇರಾಗುವೆವು
ಮೀದ ನೀರ ದಾಟಿದರೆ
ನಾವು ಬಂಜೇರಾಯ್ತೀವಿ
ನಮ್ಮ ಮಕ್ಕಳು ಬಂಜೇಲಾಗುವರುs || ಕೋರಣ್ಯ ||
ಬಾ ನನ್ನ ಗುರುವೇ ಭಕ್ತರ ಗಂಡ
ಬಾಗಿದೆವು ಮಾದೇವರಾ
ನಿಮ್ಮ ಮುಟ್ಟಿ ಪೂಜೆ ಮಾಡುವರ್ಯಾರೋ
ಬೇಡರ ಕನ್ನಯ್ಯಾ

ಅಕ್ಕಾ ತಂಗೀರೆಲ್ಲ ಯಾವ ರೀತಿಯಾಗಿ ಮಾತ್ನಾಡಿದರೋ
ಇವರ ಮಾತ ಕೇಳಿದ ತಕ್ಷಣವೇ
ಅ ಶಿವಶರಣೆಯಾದ ಸಂಕಮ್ಮನಿಗೆ
ಕರ್ಣಕ್ಕೆ ಕಿವಿಗೆ ಭರಸಿಡಿಲೊಡೆದಪ್ಪಂದವಾಯ್ತು
ಅಯ್ಯೋ ಪರಮಾತ್ಮ
ಭೂಮಿ ತಾಯಿ ಬಗ್ಗಿ ನೋಡ್ದಳು ಆಕಾಸ ಅಂತ್ನೋಡ್ದಳು
ಭೂಮು ತಾಯಿ ಆಕಾಸವೇಣಿ
ಲಗ್ನವಾಗಿ ಇನ್ನೂ ಒಂದ್ವರ್ಷ ತುಂಬ್ಲಿಲ್ಲ
ನಾನೇ ಸರಿಯೆ ದಟ್ಟಧರಣಿ ಹುಟ್ಟ ಬಂಜೆ
ಇಂಥಾ ಮಾತ ಆಡ್ತಾ ಇದ್ದಾರೆ
ಈ ಅತ್ಗೆ ನಾದ್ನೀರು ವಾರಾರ್ಗಿತ್ತೀರು
ಇಂಥಾ ಕ್ವಾಪದ ಮಾತಾಡ್ತಾ ಇದ್ದಾರೆ
ಇವರ ಮೊಖ ನಾನು ನೋಡಬಾರ್ದು
ಇವರ ಕೂಡ ನಾನು ಮಾತ್ನಾಡಬಾರ್ದು
ಇವರ ಜೋತೇಲಿ ಕೂತ್ಕಂಡು ಊಟಮಾಡ್ಬಾರ್ದು
ನನ್ನ ಪತಿಯಾದ ನೀಲೇಗೌಡ ಬರುವವರೆಗೂವೆ
ನನ್ನ ರೂಮ್ ನಲ್ಲಿರಬೇಕೂಂತ್ಹೇಳಿ
ನನ್ನ ಮಲಗೂವಂತ ಕ್ವಾಣೆವೊಳಗಿರಬೇಕೂಂತ್ಹೇಳಿ

ಅಮ್ಮಾ ಕಂಕ್ಳಲ್ಲಿ ಕೊಡವ ಇರಕವರೆ
ತಮ್ಮ ಪೋಡಿಗಾದರು ಬತ್ತಾವರೆs || ಕೋರಣ್ಯ ||

ಕಂಕ್ಳಲ್ಲಿ ಬಿಂದ್ಗೆ ಎರೀಕೊಂಡು
ಶಿವಶರಣೆಯಾದ ಸಂಕಮ್ಮಾ
ತನ್ನ ದೊಡ್ಡೊವೊಳ್ಗೆ ತಂದು ಮಡಗ್ಬುಟ್ಟ
ಇವರ್ಕೂಡ ಮಾತ್ನಾಡ್ಲಿಲ್ಲ
ಊಟಾನು ಮಾಡ್ಲಿಲ್ಲ
ತಾನು ಮಲಗುವಂತಾ ರೂಮ್‌ನಲ್ಲೀ
ಇವರ ಮುಂದೆ ಎದುರಾಗಿರಬಾರದೂ ಅಂತ್ಹೇಳಿ
ಆವಾಗ ಸಂಕಮ್ಮ ಓಡೋಗಿ
ತಾನು ಮಲಗೂವಂತ ರೂಮ್ ನಲ್ಲೀ
ಮೊಕಣ್ಣಾಗಿ ಮಲೀಕೊಂಡಳು ಊಟ ಬುಟ್ಬುಟ್ಟು

ಅಮ್ಮಾ ಮುಂದುಕೆ ಬಾಗಲ ಮುಚ್ಚವಳೇ
ಹಿಂದಕೆ ಬಾಗಲ ತೆಗೆದವಳೇs || ಕೋರಣ್ಯ ||
ಬದಗೂರು ಬಾಗಲ ಮಠದವರು
ಗುರುವೇ ಬೆಡಗಿನಲಿ ಚಂದಿರ ಶಾಲೇ
ಉತ್ತುರ ದೇಶದ ಮಾದೇವ ನೀವು
ಹುಟ್ಟುವಾಗ ಲಿಂಗಾ

ಮೊಕಣ್ಣಾಗಿ ಸಂಕಮ್ಮ ತಾನು ಮಲಗೂವಂತ ಕ್ವಾಣೆಒಲೀಕ್ಹೋಗಿ
ಮುಂದಕ್ಕೆ ಬಾಗಿಲು ಮುಚ್ಬುಟ್ಟು ಹಿಂದಕ್ಕೆ ಕದಾ ತೆರ್ಕಂಡ್ ಮಲೀಕಂಡಳು
ಐದುಗಂಟೇಯಾಯ್ತು ಸಾಯಂಕಾಲ ನೀಲೇಗೌಡ
ಕುರಿಯನ್ನೆ ಒಡಕೊಂಡ್ಬಂದು ದೊಡ್ಡೀವೊಳ್ಗೆ ಕೂಡ್ಬುಟ್ಟು
ಕೊಕ್ಕೆ ಜೋಡು ಮೆಟ್ಕೊಂಡು ಕುರಿದೊಣ್ಣೆ ಇಡಂಡ್ ಬತ್ತಾವ್ನೆ
ಮಾಳ್ಗೆ ಮನೆ ಬಾಗಿಲಿಗೆ ಬತ್ತಾ ಇದ್ದ
ಮಾಳ್ಗೆ ಮನೆ ಅಂದರೆ ಅಡ್ಗೆ ಮಾಡೋ ಮನೆ
ಆ ಬಾಗ್ಲಿಗೆ ಬತ್ತಾ ಇದ್ದ ಸಂಕಮ್ಮನ ಮೊಕ ಕಾಣ್ಲಿಲ್ಲ
ಯಾತಕ್ಕೋಸ್ಕರ ಅಂದ್ರೆ
ಲಗ್ನವಾದ್ದಿನದಿಂದ ಬಾಗ್ಲಲ್ಲಿ ಚೊಂಬಿಡುಕೊಂಡು ಕಾಯ್ತಾ ಇದ್ದಳು
ಆವೊತ್ತು ಅವಳ ಮೊಕ ಕಾಣ್ಲಿಲ್ಲ
ಅಲ್ಲೇ ಕೋಪ ಬಂದ್ಬುಡ್ತು ನೀಲೇಗೌಡ್ನಿಗೆ
ವರ್ಷ ತುಂಬ್ನಿಲ್ಲ ಕೆಟ್ಟ ಮುಂಡೆ ಮಗ

ಅಯ್ಯಾ ಕೆಂಜರಗಣ್ಣ ಬಿಟ್ಟವನೆ
ನೊರ್ನೊರ್ನಲ್ಲ ಕಡದವನೆ
ಕಿಡಿಕಿಡಿ ಕೋಪ ತಾಳವರೆ
ಮಾಳಿಗೆ ಮನೆಗೆ ಬಂದವನೆ
ತಾಯಿ ತಂದೆ ಕೇಳವನೆ
ಬಂಧೂ ಬಳಗಾನ ಕೇಳವನೆ
ಅಣ್ಣಾ ತಮ್ಮಾರ ಕೇಳವನೆ
ಅತ್ತಿಗು ನಾದ್ನೀರ ಕೇಳವನೆ
ಅವರ ಬಂಧೂ ಬಳಗ ಎಲ್ಲಾವನ್ನೂ
ಯೋಗವಾಗಿ ಕೇಳವನೇs || ಕೋರಣ್ಯ ||