ಹೆದರಬೇಡ ಕಂದಾ
ಇನ್ನೂ ಎರಡು ಮಕ್ಕಳ ಭಾಗ್ಯ ಕೊಡ್ತಿನಿ
ನಿನ್ನ ವಂಶ ಉದ್ದಾರವಾಗಬೇಕು
ಲೋಕದ ಬಳಗವಾಗಬೇಕು
ಅದು ಯಾವ ರೀತಿ ಗುರುವೆ ಅಂದರು
ನೋಡು ಕಂದ
ಎರಡು ಮಕ್ಕಳು ಭಾಗ್ಯ ಕೊಡ್ತಿನಿ ಅಂತೇಳಿ
ಮುತ್ತಿನ ಜೋಳಿಗೆಯಿಂದ
ಎರಡು ಕಾಡು ಬಾಳೆಹಣ್ಣು ತಕ್ಕಂಡು
ಏಳು ಮಲೆ ಬಸ್ಮ
ತನ್ನ ಸಾಲೂರು ಮಠದ ಗುರುಗೋಳು ಪಾದ ನೆನಕಂಡು
ನಮ್ಮ ಗುರುಕಟಾಕ್ಷ ಕಣಮ್ಮ ಇದು
ನನ್ನ ಗುರುವಿನಿಂದ
ನನಗೂ ಕೂಡ ಮೋಕ್ಷಕ್ಕೆದಾರಿಯಾಯ್ತು
ಆಡಿದ ಮಾತು ಅಮೃತವಾಯ್ತು
ನನ್ನ ಗುರು
ನನ್ನ ಗುರು ದೀಕ್ಷೆ ಮಾಡಿದಾಗ
ಗುರು ದೀಕ್ಷೆಯನ್ನ ಮಾಡಿ
ಕಣ್ಣು ಮುಚ್ಚುಕೋ ಮಗನೆ ಮರಿದೇವ್ರೆ ಅಂದ್ರು
ಕಣ್ಣ ಮುಚ್ಚಗಂಡೆ ಅರಗಳಿಗೆ
ಕಣ್ಣು ಮುಚ್ಚುದ್ರು ನನಗೆ ಪ್ರಪಂಚವೆಲ್ಲ ಬೆಳಕು ಕಾಣ್ತಾಯಿತ್ತು
ಕಂದಾ
ಆಗ ಕಣ್ಣು ಬಿಡು ಮಗನೆ ಅಂದ್ರು
ಕಣ್ಣ್ ಬಿಟ್ಟೆ
ಏನು ಕಂಡೆ ಮರಿದೇವ್ರೆ ಅಂದ್ರು
ಗುರುವೆ ಕಣ್ಣು ಮುಚ್ಚುದ್ರು ಲೋಕವೆಲ್ಲ ಬೆಳಗಾಗಿತ್ತು ಅಂದ್ರೆ
ಆ ಬೆಳಕೆ ನಿನ್ನದು ಅಂತ ಹೇಳುದ್ರು
ಅದೇ ರೀತಿಯಾಗಿ ಕಂದಾ
ನಿನ್ನ ಮನೆಯಲ್ಲಿ ಜ್ಯೋತಿಯನ್ನ ಹಸ್ಸುವುದಕ್ಕೆ
ಒಂದು ಸುಳಿ ನೆಡುವುದಕ್ಕೆ ಗಂಡು ಮಗ
ಬಳಗವಾಗುವುದಕ್ಕೆ ಏಳು ಬಳಗಕ್ಕೆ ಒಂದು ಹೆಣ್ಣು ಮಗ
ಅಂತೇಳಿ
ಎರಡು ಕಾಡು ಬಾಳೆ ಹಣ್ಣುಗೆ
ಆವಾಗ ಪಿಂಡ ಪ್ರಸಾದವನ್ನು ಮಾಡಿ
ಬಸ್ಮವನ್ನ ಹಾಕಿ
ಗುರುಗೋಳ ಪಾದ ನೆನೆದುಬುಟ್ಟು
ಆಣೀ ಜೋಡೆ ಬಾಳೆ ಹಣ್ಣು ತಗದು
ಸಂಕಮ್ಮನ ಕೈಲಿ ಕೊಟ್ಟವರೆ
ಕಂದಾ ಈ ಹಣ್ಣನ ಸಿಪ್ಪೆನ್ನು ತೆಗಿಬೇಡ
ಊಟ ಮಾಡು ಇಲ್ಲೆ ಮಗಳೇ ಅಂದ್ರು
ಮಾದಪ್ಪನ ಮುಂದೆ ಎರಡಣ್ಣನು
ನುಂಗುಬಿಟ್ಟಳು ಹಾಗೆ ಸಂಕಮ್ಮ
ಮಾದಪ್ಪನಿಗೆ ನಮಸ್ಕಾರ ಮಾಡುದ್ರು ದೀರ್ಘದಂಡವಾಗಿ
ಸಂಕಮ್ಮ
ಈವಾಗ ಅರಮನೆಯನ್ನು ಬುಟ್ಟು ಗಂಡ ಹೆಂಡರು
ಹೊರಟುಬಿಡಿ ಭಾಗ್ಯ ನೋಡಬೇಡಿ ಅಂದ್ರು
ನೀಲೇಗೌಡ ಹೋದ ಮನೆ ಒಳಗೆ
ಏನು ಸಂಕೆಣ್ಣೇ
ನನ್ನಪ್ಪನ ಮನೆ ಮಾದೇವ ಅರಮನೆ ಕೊಟ್ಟ ಅಂತಿದ್ದೆ
ಅರಮನೆಯಲ್ಲಿ ನಾಕಾರು ಜಿನ ಕಾಲ ಕಳೆಯೋಣ
ನಮ್ಮ ದೊಡ್ಡಿ ಒಳಗೆ ಸಪ್ಪಿನ ಗುಡ್ಲು
ಮುಟ್ಟಾಳೇ ಗುಡ್ಲು
ಇದುವಲ್ಲದೆ ಈ ಕೈನಾಲೆ ಹುಲ್ಲುನ ಗುಡ್ಲು
ಕಾಲಮಾಡ್ತಿದ್ದಿ
ಈ ಅರಮನೆ ಒಳಗೆ ನಾಲ್ಕು ದಿನ ಇರೋಣ ಅಂದ್ರೆ
ನಿಮ್ಮಪ್ಪನ ಮನೆ ದೇವ್ರು ಬಿಡು ಅಂತರಲ್ಲ ಸಂಕೆಣ್ಣೆ ಅಂದ್ರು
ಹೌದು ಯಜಮಾನರೇ
ನಮಗೆ ಶಾಶ್ವತವಾಗಿರೊದೇ
ಸೋಲಗರ ದೊಡ್ಡಿ ಪೋಡು ಗುಡ್ಡ ಬೆಟ್ಟ
ಇದು ನಮಗೆ ಶಾಶ್ವತವಲ್ಲ ಅರಮನೆ
ಅಂತೇಳಿ
ಮಾದಪ್ಪನ ಹೆಸ್ರು ಹೇಳ್ಕಂಡು
ಮಾದಪ್ಪನ ಮಾತಿನಂತೆ
ಗಂಡ ಹೆಂಡಿರುಬ್ಬರು ತಾವು ಮಡಗಿದಂತ
ಅಂಡೆ ಬುಂಡೆ ಎಲ್ಲನು ಹೊತ್ಗಂಡು
ಅರಮನೆ ಬುಟ್ಟೂ ಹೊರಟ್ರು
ಕಂದಾ ಸಂಕಮ್ಮ
ಈ ಕೊಕ್ಕರ ಕೊನಬೋಳಿ ಬೆಟ್ಟದ ಮಾಳವನ್ನ ಬುಟ್ಟು
ಮುಂದ್ಲು ಬೆಟ್ಟಕ್ಕೆ ಹೋಗಿ
ಅಲ್ಲೊಂದು ತಿಂಗ್ಳ ಕಾಲಮಾಡಿ
ಇದೇ ರೀತಿಯಾಗಿ ಹನ್ನೆರಡು ಬೆಟ್ಟವನದಲ್ಲುವೇ
ಹನ್ನೆರಡು ತಿಂಗ್ಳಕಾಲಮಾಡಿ ಹೋಗು ಹೊತ್ತುಗೆ
ಒಬ್ಬ ಮಗ ಹುಟ್ತನೆ
ನಿನ್ನ ವಂಶ ಉದ್ದಾರ ಮಾಡುದಕ್ಕೆ
ಒಬ್ಬ ಹೆಣ್ಣು ಮಗಳು ಹುಟ್ತಾಳೆ
ನಿನ್ನ ಕೀರ್ತಿ ಕೊಂಡಾಡುದಕ್ಕೆ ಲೋಕ ಬೆಳಗುವುದಕ್ಕೆ
ಆ ಮಗಳಿಗೇನು ಸಾಮಾನ್ಯವಲ್ಲ
ಬಿಳಿಗಿರಿರಂಗಸ್ವಾಮಿ ತಕ್ಕಂಡು ಹೋಗ್ತಾನೆ ಬಂದು
ಅಂತೇಳಿ ಸಂಕಮ್ಮನನ್ನು ನೀಲೇಗೌಡನ್ನು ಕಳುಹಿಸಿಬುಟ್ಟು
ಮಾದಪ್ಪ ಅರಗಣ್ಣು ಕಿರುಗಣ್ಣು ಬುಟ್ರು
ಅರಮನೆ ಸುಟ್ಟು ಬಸ್ಮವಾಯ್ತು
ಕಾರಯ್ಯ ಬಿಲ್ಲಯ್ಯ
ಜೋಳಗೆಲ್ಲಿದ್ದ ಮಕ್ಕಳ ಹೊತ್ಗಂಡು ಹೆಗಲ ಮೇಲೆ
ಎಡಗಡೆ ಒಬ್ಬ ಬಲಗಡೆಗೊಬ್ಬ
ಆಂಜುನೇಯ
ರಾಮಲಕ್ಷ್ಮರ ಒತ್ತಗಂಡಂಗೆ ಒತ್ತಗಂಡ ಮಾದಪ್ಪ
ಕಾರಯ್ಯ ಬಿಲ್ಲಯ್ಯನ
ಕಾರಯ್ಯ ಬಿಲ್ಲಯ್ಯನ ಎತ್ಗಂಡು

ಹಾಲಳ್ಳದ ಬೋರೆಗಾಣೆ
ಆದಿಗುರು ದಯsಮಾಡವರೆ || ಕೋರಣ್ಯ ||

ಕೊಕ್ಕರೆ ಕೊನಗೋಳಿಯಿಂದ ಮಾದಪ್ಪ ಹೆಗಲಮ್ಯಾಲೆ
ಕೂರಸ್ಗಂಡು ಎರಡು ಮಕ್ಕಳ್ನು

ಅಯ್ಯ ಕಂಬದಬೋಳಿ ಇಳಿದವರೆ
ಮೂಡಲ ಮಲೆಯ ಮಾದೇವ
ಚಿಕ್ಕಾಲಳ್ಳ ನಡೆದವರೆ
ದೊಡ್ಡಾಲಳ್ಳ ಬಿಟ್ಟವರೆ
ಮಾಯಿಕಾರ ಮಾದೇವ
ದಿಂಬದ ಮಲೆಯ ಏರವರೇ
ಮೂಡಲಮಲೆಯ ಮಾದೇವ
ಅಪ್ಪ ತಮ್ಮಡಗೇರಿ ಎತ್ತಾಣ
ಆದಿಗುರು ದಯಮಾಡವರೆs || ಕೋರಣ್ಯ ||

ತಮ್ಮಡಗೇರಿ ಹತ್ರ ಬಂದ್ರು ತಲಬಾಗಲಿಗೆ
ತಮ್ಮಡಗೇರಿ ಅಂದ್ರೆ ತಮುಡುಗೊಳಿರುವಂತ ಬೀದಿ ಬಳಗ
ಅಲ್ಲಿ ಒಂದು ಕೊಳ ಅದೆ
ಆ ಕೊಳಕೆ
ಮಜ್ಜನ ಕೊಳ ಅಂತಿದ್ರು ಮೊದಲಿಗೆ
ಆ ಕೊಳದ ಏರಿಮೇಲೆ
ಕಂದ ಕಾರಯ್ಯ ಬಿಲ್ಲಯ್ಯ
ಈ ಕೊಳದ ಏರಿ ಮೇಲೆ ಕತ್ತಿ ಪಾವಡ ಆಡಿ
ಈ ಮಕ್ಕಳು ನಿಜ ನೋಡಬೇಕು ನಾನು
ಈವಾಗಲೇ ನೋಡುದ್ರೇ
ನನ್ನ ಕೈಲಾಸದಲ್ಲಿ ತಕ್ಕಂಡೋಗೆ
ನನ್ನ ಗದ್ದಗೆಲಿ ಇರಸ್ಕಂತೀನಿ
ಈ ಮಕ್ಕಳು ಅಪದುಡವಾದ್ರೆ
ಹಿಂದಕ್ಕೆ ಕಳುಸುಬುಡೋಣ ಅವರ ದೊಡ್ಡಿಗೆ ಅಂತೇಳಿ
ಮಕ್ಕಳು ನಿಜ ನೋಡುವ
ನನ್ನ ಮಕ್ಕಳೋ
ಬೇರೆಯವರ ಮಕ್ಕಳು ಅಂತೇಳಿ
ಎರಡು ಕತ್ತಿ ಕೊಟ್ಟರು
ಕಾರ‍ಯ್ಯಾ ಬಿಲ್ಲಯ್ಯ ಇಲ್ಲಿ ಕತ್ತಿ ಪಾವಡ ಆಡಿ
ಸ್ವಲ್ಪ ಬೇಜಾರಾಗದೆ ನಾನು ನಿದ್ರೆ ಮಾಡ್ತಿನಿ ಅಂತೇಳಿ ಮಾದಪ್ಪ
ಕತ್ತಿ ಕೊಟ್ಟುಬುಟ್ಟು
ನಿದ್ರೆ ಮಾಡ್ತ ಬಲಮಗ್ಲಿಗೆ ಮಲೀಕಂಡ್ರು
ದೊಡ್ಡು ಸೊಲ್ನೆಲ್ಲ ಎಳಕಂಬಿಟ್ರು ಮಾದಪ್ಪ
ಉಸಿರು ಬಿಡದೆ ಕಣ್ಣು ಮೂಗೆಲ್ಲ
ಇರಮುತ್ತಿಸ್ಕಂಡು ಮಲಕಂಬಿಟ್ರು
ಕಾರಯ್ಯ ಬಿಲ್ಲಯ್ಯ ಕತ್ತಿ ಪಾವಾಡ ಕೊಳದಲ್ಲಿ ಮಾಡ್ತಾವರೆ

ಅಯ್ಯಾ ಕತ್ತಿಯ ಪವಾಡ ಕೊಳದಲ್ಲಿ
ಗುರುವೆ ಎತ್ತಿನ ಬಟ್ಟಾಲ ಸತ್ತಿಗೆಯೋ
ಗುಂಡು ಪಿರಂಗಿ ನೆಲದಲ್ಲಿ
ಮಾದೇವ ದಂಡಿಗೆ ಪಯಣವೋs || ಕೋರಣ್ಯ ||

ಆವಾಗಲೀಗ ಕಾರ‍ಯ್ಯ ಬಿಲ್ಲಯ್ಯ
ಕತ್ತಿ ಪಾವಡ ಆಡಿ ಆಡಿ ಸಾಕಾಗುಬಿಟ್ತು
ಅಣ್ಣಯ್ಯ ಸಾಕು
ಮಧ್ಯಾಹ್ನವಾಗುಬುಟ್ತು
ನಮ್ಮ ತಾತನ ಎತ್ತಿಕೊಂಡು
ಮುಂದೆ ಹೋಗೋಣ ನಡು ಮಲೇಗೆ ಅಂತೇಳಿ
ಬಂದು ಮಾದಪ್ಪನ ಎಡಬಲದಲ್ಲಿ ಕೂತ್ಗಂಡು
ತಾತ
ಮೇಲ್ಕೇಳು ಅಂತೇಳಿ
ಕಾರ‍ಯ್ಯ ಬಿಲ್ಲಯ್ಯ ಏಳಿಸ್ತರೆ
ಮಾದಪ್ಪನಂಗೆ ಕಣ್ಣು ಮೂಗ್ನಲ್ಲೆಲ್ಲ ಇರ
ದೊಡ್ಡು ಸೂಲೀಲ್ಲ
ಉಸಿರಿಡ್ದುಬುಟ್ಟವರೆ ಮಾಯಿಕಾರ
ಅಣ್ಣಯ್ಯಾ
ನಮ್ಮ ತಾತ ಸತ್ತೋದ
ಇವರು ಬೇಡಗಂಪಣದೋರು
ಇವರ ಮಾತು ನಮಗೆ ಗೊತ್ತಿಲ್ಲ
ಉಣ್ಣುವ ಊಟಗೊತ್ತಿಲ್ಲ
ಇವರು ತಿನ್ನುವಂತ
ರೊಟ್ಟಿ ಗೊತ್ತಿಲ್ಲ ಹಿಟ್ಟು ಗೊತ್ತಿಲ್ಲ
ಕಮ್ನಕ್ಕಿ ಅನ್ನ ಏನೇನೋ ತಿನ್ಯಾಯಿದ್ದಾರೆ
ನಾವು ಯಾರ್ನ ಸೇರವ ಅಣ್ಣಯ್ಯ
ನಮ್ಮ ತಾತ ಇಲ್ಲಿ ಸತ್ತೋಗವರೆ
ಇದೇ ಜಾಗದಲ್ಲಿ ನಾವಿಬ್ಬರು ಸಾಯಬೇಕು ಅಣ್ಣಯ್ಯಾ
ಅಂತೇಳಿ
ಎರಡು ಕತ್ತಿ ನೆಟ್ಟುಬುಟ್ಟು
ಕಾರಯ್ಯ ಬಿಲ್ಲಯ್ಯಾ
ಕಣ್ಣಿಗೆ ಬಟ್ಟೆ ಕಟ್ಟಕ್ಕಂದ್ರು
ಕತ್ತಿ ಮೇಲೆ ಬಿದ್ದು
ಪ್ರಾಣ ಬಿಟ್ಟು ಬುಡೋಣ ಅಂತೇಳಿ
ಕತ್ತಿ ನೆಟ್ಟು ಬಿಟ್ಟು ಕಾರಯ್ಯ ಬಿಲ್ಲಯ್ಯ

ಅಯ್ಯಾ ಕಣ್ಣಿಗೆ ಬಟ್ಟೆ ಕಟ್ಟವರೆ
ಕತ್ತಿಯ ಮೇಲೆ ಬೀಳುವುದಕ್ಕೆ
ಸಾಲು ಸಂಪಂಗಿ ಮರದಡಿಯಲ್ಲಿ
ಸಹಾಯಕ್ಕೆ ಬರುವರು ಯಾರಯ್ಯಾ
ನೂರೋಂದಯ್ಯನ ತಮ್ಮಡಿ ಮಕ್ಕಳು ಊರಿಗೆ ಬರುವರೂs || ಕೋರಣ್ಯ ||

ಅತ್ತಿಂದ ಉಕ್ಕಳಿಸ್ಕಂಡು ಕುಣ್ಕಂಡು ಬರ್ತಾಯಿದ್ರು
ಕತ್ತಿ ಮೇಲೆ ಬೀಳುಕೆ
ಮಾದಪ್ಪ ಮೇಲುಕ್ಕೆದ್ರು ಕಾಕ ಹಾಕಂಡು
ಕಂದ ಕಾರಯ್ಯ ಬಿಲ್ಲಯ್ಯ
ಪ್ರಾಣಬುಡುಬೇಡಿ ಮಕ್ಕಳೆ ಅಂತೇಳಿ
ಎಡದಲ್ಲಿ ಕಾರಯ್ಯ ಬಲದಲ್ಲಿ ಬಿಲ್ಲಯ್ಯನ ಇಡ್ಕಂಡ್ರು
ನನ್ನ ಮಕ್ಕಳಲ್ದೆ ಇವರು ಬೇರೆಯೋರ ಮಕ್ಕಳಲ್ಲ
ನನ್ನ ಕೈಲಾಸವನ್ನು
ಸೂರ್ಯ ಚಂದ್ರಾದಿಗಳಿರುವರುಗೂವೇ
ನಿಜವಾಗಿ ಕಟ್ಟಾಳ್ತರೆ ಅಂತೇಳಿ
ಕಾರಯ್ಯ ಬಿಲ್ಲಯ್ಯನ ಎಡಗೈಲಿ ಬಲಗೈಲಿ ಇಡ್ಕಂಡು
ಏಳುಮಲೆ ಕೈಲಾಸಕ್ಕೆ ಹೋಗಿ
ಮಾದಪ್ಪ
ಪುಟ್ಟೂ ಲಿಂಗವಾಗಿದ್ರಲ್ಲ
ಹನ್ನೆರಡಾಂಕಣ ಸಜ್ಜೆ ದೇವಸ್ಥಾನದಲ್ಲಿ
ಎಡಗಡೆ ಕಾರಯ್ಯಾ ಬಲಗಡೆ ಬಿಲ್ಲಯ್ಯನ ಕೂರಸ್ಗಂಡ್ರು
ಐದುಜನ ಋಷಿಗಳಾದ್ರು
ಬೆನ್ನಿಂದ್ರೆ ಬೇಡ್ರ ಕಣ್ಣಯ್ಯಾ
ಬಡಬಾಗ್ಲಲ್ಲಿ ಆಲಂಬಾಡಿ ಬಸವಣ್ಣ
ಅಂತರಗಂಗೆ ಒಳಗೆ ಒಂಟಿಜೇನು ಶೇಷಣ್ಣ
ಎಡದಲ್ಲಿ ಕಾರ‍ಯ್ಯ ಬಲದಲ್ಲಿ ಬಿಲ್ಲಯ್ಯ
ಇನ್ನು ಮುಂದೆ ನನ್ನ ಭಕ್ತರೆ
ಬೇಡರ ಕಣ್ಣಪ್ಪ
ಕಾರಯ್ಯ ಬಿಲ್ಲಯ್ಯ
ಮೇಲ್ನಾಡ್ನ ಪರಸೆ ಬರ್ತದೆ
ಮೈಸೂರು ನಾಡ್ನಲ್ಲಿ
ಹೆಣ್ಣೇಳು ಕೋಟಿ ಗಂಡೇಳು ಕೋಟಿ
ಕೂಗುವಂತ ಕೂಗು ನಿಮಗಾಗಲಿ
ಮಾಡುವಂತ ಪೂಜೆ ನಿಮಗಾಗಲಿ
ಅವರು ಮಾಡುವಂತ ಹರಕೆ ನಿಮಗಾಗಲಿ
ಅವರು ನೆನೆದವರ ಮನದಲ್ಲಿ ನೀವು ಒರಗಬೇಕು
ಈ ಕಲಿಯುಗವನ್ನು ಕಣ್ಣೆತ್ತಿ ನೋಡ್ಲಾರೆ ನಾನು
ನಾನು ಕಣ್ಣು ಮುಚ್ಚಗಂಡ ಕಲಿ ನೋಡ್ತಾಯಿದ್ದಿನಿ ಕಂದ
ಪಾತಾಳ ಲೋಕದಲ್ಲಿ ಪಾದಪೂಜೆಯಾಗಲಿ
ಮೇಲು ಲೋಕದಲ್ಲಿ ನನಗೆ ಶಿರಸ ಪೂಜೆಯಾಗಲಿ
ಈ ಮರ್ತ್ಯ ಲೋಕದಲ್ಲಿ ಲಿಂಗಪೂಜೆಯಾಗಲಿ
ನಿಮ್ಮ ಕೈಲಾಸದಲ್ಲಿ ನಿಮ್ಗೆ ಮೆರೆ ಪಟ್ಟವಾಗಲಿ
ನನಗೆ ಒರಗು ಪಟ್ಟವಾಗಲಿ ಅಂತೇಳೀ ಮಾದಪ್ಪ

ಅಯ್ಯ ಏಳುಮಲೆಯ ಒಳಗೆ ಗುರುವೆ
ಯೋಗವಾಗಿ ಒರಗವರೆs || ಕೋರಣ್ಯ ||
ಕಾರಯ್ಯ ಬಿಲ್ಲಯ್ಯ
ಮಾದಪ್ಪ ನಿಮ್ಮ ಸೇವಕರು
ನಿಮ್ಮ ಮುಟ್ಟಿ ಪೂಜೆ ಮಾಡವರ್ಯಾರು
ಬೇಡರ ಕಣ್ಣಯ್ಯಾs || ಕೋರಣ್ಯ ||

ಈ ಕಡೆ ಸಂಕಮ್ಮನುವೆ ನೀಲೇಗೌಡ್ನುವೆ
ಒಂದೊಂದು ಬೆಟ್ಟಾದಲ್ಲಿ ವಾಸ ಮಾಡ್ಕಂಡು
ಒಂಬತ್ತನೇ ಬೆಟ್ಟಾಕ್ಕೆ ಬರುವೊತ್ತಿಗೆ
ಒಂಬತ್ತು ತಿಂಗಳು ಗರ್ಭಿಣಿಯಾಗಿ
ಒಂದು ಗಂಡು ಮಗು ಜನನವಾಯ್ತು
ಅವರ ಜಾತಿ ಪದ್ಧತಿಯಂತೆ
ಹಲ್ಲಯ್ಯ ಅಂತೇಳಿ ನಾಮಕರಣಮಾಡ್ಕಂಡು

ಶಿವ ಶರಣೆ ಸಂಕಮ್ಮ ಗಂಡ ನೀಲೇಗೌಡ
ತಮ್ಮ ದೊಡ್ದಿಗಾಗಲೇ ಬರುತಾವರೇ
ಮಲೆಯ ಸೋಲುಅ ನೀಲಯ್ಯಾs || ಕೋರಣ್ಯ ||
ಗಂಜುಮಲೇ ಮಾದಪ್ಪ ನಿಮಗೆ
ಮಂಜಿನಲೀ ಶಿವ ಪೂಜೆಗಳು
ಮಾದೇವ
ಒಡದು ಬಂದ ಮಾದಪ್ಪ ನಿಮಗೆ ನೆರಳಲ್ಲಿ ಗದ್ದಿಯೂs || ಕೋರಣ್ಯ ||