ಈ ದಾರಿವೊಳಗೆ ಕಾಡಿನೊಳಗೆ
ಬೊಂಬಾಯಿಬಳೆ ಅಂತ್ಹೇಳಿ
ಬಳೆಗಾರಸೆಟ್ಟಿ ಸಾರ್ಕೊಂಡು ಬಂದ್ರೆ
ನಿನ್ನಂಥ ಹೆಣ್ಣು ಪ್ರಾಣಿಗೆ
ಹರಿಶಿಣ ಕುಂಕುಮ ಹೂವು ಬಳೆಯನ್ನು ಕಂಡ್ರೆ ಬಾಳ ಪ್ರೀಥಿ
ಹೊಟ್ಟೇಗೆ ಊಟ ಇಲ್ಲದಿದ್ದರೂವೆ
ಅಂಥ ಮೂರು ಬದಕಂದ್ರೆ ಆಸೆ
ಆವಾಗ ಬಳೆಗಾರಸೆಟ್ಟಿಯ ಕೈಸನ್ನೆ ಮಾಡಿ ಕರೀತೀಯೆ
ಬಳೆಗಾರ ಸೆಟ್ಟಿ ಬರ್ತನೆ
ತನ್ನ ಹೆಗಲಿನ ಮೇಲಿರುವಂಥ ಗೋಣೀಚೀಲ ಹಾಸ್ಬುಟ್ಟು
ಬಳೆಯ ಮಲ್ಹಾರ ಮಡುಗ್ತಾನೆ
ಬಾರಮ್ಮ ಮಗುವೇ ನಿನಗೆ ಬೇಕಾದ ಬಳೆ ನೋಡು ಅಂತಾನೆ
ಆವಾಗ ಎಂದು ಕೂತ್ಕಂಡು
ಬಳೆಯನ್ನು ಎತ್ತಿ ನೋಡ್ಬುಟ್ಟು
ಬಳೆಗಾರ ಸೆಟ್ಟಪ್ಪನಿಗೆ ಈ ಬಳೆ ತೋಡಪ್ಪಾ ಅಂತ್ಹೇಳಿ ಕೈಕೊಡ್ತೀಯೆ
ಆವಾಗ ನಿನ್ನ ಕೈ ಹಿಡಕಂಡು
ನಿನ್ನ ದುಂಡುದೋಳನ್ನು ಮಿದ್ದಿಸಿ
ನೋಡ್ತನೆ ಬಳೆಗಾರ ಸೆಟ್ಟಿ
ನಿನ್ನ ದುಂಡುದೊಳೆನುತಕ್ಕಂಥಾದ್ದು

ಮಡದಿ ಅಂದಕ್ಕೊಂದು ಬಳೆಯ ತೊಡುತವರೆ
ಚೆಂದಕ್ಕೊಂದು ಬಳೆಯ ತೊಡುತವರೆ
ರೂಪಕ್ಕೊಂದು ಬಳೆಯ ತೊಡುತವರೆ
ರೇಖೆಗೊಂದು ಬಳೆಯ ತೊಡುತವರೆ
ಮಡದಿ ಅಂದಕ್ಕೊಂದು ಬಳೆಯ ತೊಡುತವರೇ
ಚೆಂದಕ್ಕೊಂದು ಬಳೆಯ ತೊಡುತವರೇs || ಕೋರಣ್ಯ ||

ನೋಡು ಮಡದಿ ಸಂಕೆಣ್ಣೇ
ನಿನ್ನ ಕೈಗೆ ಅಂದವಾದ ಬಳೆಯನ್ನು ಎಡಗೈ ಬಲಗೈಗೆ
ಬಳೆಯನ್ನು ತೊಟ್ಬುಡ್ತನೆ
ಆವಾಗ ನೀನು ಬಳೆಯ ಮಲ್ಹಾರಕೆ ನಮಸ್ಕಾರ ಮಾಡ್ಬುಟ್ಟು
ಒಳಗಡೆಗೆ ಎದ್ದು ಹೋಗ್ತೀಯೆ
ಮನವೊಳಗೆ ಕಾಸಿದ್ರೆ ಕಾಸು ಕೊಡ್ತಯಿದ್ದೀಯೆ
ದವಸ ಇದ್ದರೆ ದವಸನಾದರೂ ಕೊಡ್ತೀಯೆ
ಸಂಕೆಣ್ಣೇ ನೋಡು ಮಡದಿ ಸಂಕೆಣ್ಣೇ
ಆ ಕಡೆ ಈ ಕಡೆ ತಿರುಗಾಡ್ತಾಯಿದ್ದೀಯೆ
ಕೈಯೊಳಗೆ ಕಾಸಿಲ್ಲ ಮನೆಯೊಳಗೆ ದವಸವಿಲ್ಲ
ಬಳಗಾರಸೆಟ್ಟಿ ಕೂತ್ಕಂಡು ನೋಡ್ತಾನೆ ಅಷ್ಟು ಹೊತ್ತು ಇಷ್ಟು ಹೊತ್ತು
ಹೆಣ್ಣುಮಗಳು ಒಬ್ಬಳೇ ಓಡಾಡ್ತಾಯಿದ್ದಾಳೆ ಅಂತ್ಹೇಳಿ

ಮಡದೀ ರೂಪು ರೇಖೆ ನೋಡುವನು
ಅಂದ ಚೆಂದ ನೋಡುವನು
ಸುದ್ದಾ ಸುಳಿಯ ನೋಡುವನು
ನಡಿಗೆ ನುಡಿಗೆ ನೋಡುವನು
ಮಡದೀ ಒಲುಮೆಯ ಮದ್ದ ಕೊಡುವಾನೂs
ನಿನ್ನ ವಾಲೀಸೀಕೊಂಡು ಹೋಗುವನುs || ಕೋರಣ್ಯ ||

ಮಡದಿ ಬಳಗಾರಸೆಟ್ಟಿಯೊಂದಿಗೆ ಹೋದೀಯೋ
ನನ್ನ ಬಾಯಿಗೆ ಮಣ್ಣ ಊದೀಯೋs || ಕೋರಣ್ಯ ||

ಅಯ್ಯೋ ಯಜಮಾನ
ನಿಮ್ಮ ಪಾದ ಹೊತ್ತೇನು ದಮ್ಮಯ್ಯಾ
ಇಂಥಾ ಅನ್ಯಾಯದ ಮಾತ ಆಡ್ಬೇಡಿ ಅಡವಿಯೊಳಗೆ
ಆಕಾಸವೇಣಿ ಭೂಮಿತಾಯಿ ನೆಚ್ಚೋದಿಲ್ಲ
ನನ್ನ ದಾಯಿಂದಕಾರ್ರ ದೊಡ್ಡೀವೊಳಗೇ
ತಂದೆ ತಾಯ್ಗಳ ಮೇಲೆ ಸಾಕ್ಷಿ ಮಾಡ್ದಿ
ನನ್ನ ಅಕ್ಕಾ ತಂಗೀರು ಬಂಧು ಬಳಗದವರ ಮೇಲೆ ಆಣೆ ಮಾಡ್ದಿ
ಈ ಅಡವಿ ಅರಣ್ಯದಲ್ಲಿ ಯಾರಿದ್ದಾರೆ
ಸೂರ್ಯ ಚಂದ್ರಾದಿಗಳೇ ನನಗೆ ತಂದೆ ತಾಯಿ
ಇಲ್ಲಿರುವಂಥ ಗಿಡ ಗಿಂಡಾರವೇ ನನಗೆ ಬಂಧು ಬಳಗವಾಗಿವೆ
ಈ ಗಿಡ ಗಿಂಡಾರಗಳ ಪಾದ ಸಾಕ್ಷಿಯಾಗಿ
ನಿಮಗೆ ಪತಿಗೆ ಭಾಷೆ ಕೊಡುವುದಿಲ್ಲ ಯಜಮಾನ
ನಾನು ಭಾಷೆ ಕೊಟ್ಟ ಮೇಲೆ ನನ್ನ ಧರ್ಮ ಉಳಿಯೋದಿಲ್ಲ
ಪ್ರಪಂಚದಲ್ಲಿ ಯಜಮಾನರೇ
ನನ್ನಂಥ ಹೆಣ್ಣು ಪ್ರಾಣಿಯಿಲ್ವ
ನಿಮ್ಮಂಥ ಗಂಡು ಪ್ರಾಣಿಯಿಲ್ವ
ಇಂಥ ಕಳವಳ ಮಾಡ್ಕಂಡು ಭಾಷೆ ಕೇಳ್ತಾಯಿದ್ದೀಯಲ್ಲ ಯಜಮಾನ

ಅಪ್ಪಾ ಹೇಳೂದು ಮಾತ ಕೇಳಯ್ಯಾ
ಹೆಜ್ಜೇನು ಮಲೆಗೆ ಹೋಗಯ್ಯಾs || ಕೋರಣ್ಯ ||

ಕರಡಿ ಕಕ್ಕರಿದೋ
ಮಾದೇವ ಗಂಡು ಹುಲಿಗಳು ಅಮ್ಮರಿದೋ
ಕಾರಯ್ಯ ನಿನ್ನ ಮಲೆಯವೊಳಗೆ
ಕಾಮದೇನು ಕರೆದೋ

ಎಲಾ ಕೆಟ್ಟು ಮುಂಡೇ ಮಗಳೇ
ನಿನ್ನೆ ದಿವ್ಸ ಹೊರಟೋಗಿದ್ದಾರೆ ಕುಲಸ್ತ್ರು
ಈವೊತ್ತು ಹನ್ನೆರಡು ಗಂಟೆಯಾಗಿದೆ
ಗಂಡನಿಗೆ ದುಂಡಾರೀತಿ ಮಾಡ್ತಾಯಿದ್ದೀಯೆ
ಈ ಅಡವಿ ಅರಣ್ಯದಲ್ಲಿ
ಪತಿಗೆ ಪ್ರತಿ ಉತ್ತರ ಕೊಡ್ತಾ ಇದ್ದೀಯೆ
ಇಂಥಾ ಹೆಣ್ಣು ಪ್ರಾಣಿಗೇ
ಕೊಡುಬಾರ್ದ ಕೊಲೆ ಕೊಟ್ಟೂ ನನಗೆ ದೋಸುವಿಲ್ಲ
ನೋಡಲಾ ಮಡದಿ ಸಂಕೆಣ್ಣೆ
ಪ್ರಪಂಚದಲ್ಲಿ ಮೇಘವನ್ನೇ ಕಟ್ಟಿ ಮೋಡದಲ್ಲಿ ಆಡುವಂಥ
ಬಿಳೀ ಕಾಗೆ ನೋಡಬಹುದು
ಹನ್ನೆರಡಾಳು ಮಟ ಜಲವನ್ನಿಳಿದು
ಹೆಣ್ಣು ಮೀನು ಗಂಡುಮೀನು ಅಂತ್ಹೇಳಿ
ಮೀನಿನ ಮಚ್ಚೆ ಪತ್ತೆ ಮಾಡಬಹುದು
ಇದೂ ಅಲ್ಲದೆ ಧರೆವೊಳುಗೆ
ಕೊತ್ತೀ ಸೆತ್ತೆಯನ್ನು ನೋಡಬಹುದು
ಕೊತ್ತಿ ಸೆತ್ತೆ ಅಂದರೆ ಕೊತ್ತಿ ಮಾಸನ್ನು ನೋಡಬಹುದು
ಅತ್ತಿ ಮರದಲ್ಲಿ ಅತ್ತಿ ಹೂ ಕಾಣಬಹುದು
ಪ್ರಪಂಚದಲ್ಲಿ ಸಂಕೆಣ್ಣೆ

ನಿನ್ನ ಈ ಹೆಣ್ಣೆಂಬ ಏಳು ಜಾತಿಯ
ನಂಬಲಾರೆ ಸಂಕೆಣ್ಣೆs || ಕೋರಣ್ಯ ||

ಅರಕೂಲಾತಿ ಸಣ್ಣಾನವರು
ಅರಕೋಲ್ಹೆತ್ತಿ ಬರುವಾರು
ಏಳನೂರು ಸರಳೆಮ್ಮೆ ಹಿಂಡು
ಮೇದು ಕೆಡೆದಾವು

ಯಜಮಾನ ನಿನ್ನ ಪಾದ ಹೊತ್ತೇನು ದಮ್ಮಯ್ಯ
ಈ ಅಡವಿಯಾರಣ್ಯದಲ್ಲಿ ನನಗೆ ಹಿಂದೂ ಮುಂದೂ ಯಾರು ಇಲ್ಲ
ನನ್ನ ಶಿರಸವನ್ನು ತರಿದು ದೊಡ್ಡಿ ಬಾಗ್ಲಿಗೆ ಕಟ್ಟಿದ್ರೂವೆ
ಪತಿಗೆ ಭಾಷೆ ಕೊಡೂದಿಲ್ಲ ಯಜಮಾನ ಅಂದಳು

ಎಲಾ ಕೆಟ್ಟು ಮುಂಡೇ ಮಗಳೇ
ಹೇಳ್ತಾಯಿದ್ದೀನಿ ಕೇಳು ಮಡದಿ
ಯಜಮಾನರೇ ನನ್ನ ಹೆಣ್ಣೆಂಬ ಏಳು ಜಾತಿಯನ್ನು
ನಂಬಲಾರಿ ಅಂತ ಹೇಳ್ತಾಯಿದ್ದೀರಲ್ಲ
ನನ್ನ ಹೆಣ್ಣೆಂಬ ಏಳುಜಾತಿವೊಳಗೆ ಏನು ಗುಣಯಿದೆ ಅಂದ್ರು
ನೋಡಲಾ ಮಡದಿ ಸಂಕೆಣ್ಣೆ
ಒಂದು ಮಡವಿನಲ್ಲಿ ಒಂದು ಕೆರೆವೊಳುಗೇ
ಸಾವಿರಾರು ಕೋಟಿ ಮೀನು ತುಂಬಿ ತುಳುಕಾಡ್ತಾಯಿದೆ
ಏನಾದರೂ ಮುಂಗಾರು ಮಳೆ ಹೂದು
ಕಾರ್ಮಳೂದು ಹಳ್ಳ ಕೊಳ್ಳದಲ್ಲಿ ನೀರು ಬರ್ತಾಯಿದ್ರೆ
ಆ ಮಡುವಿನಲ್ಲಿರತಕ್ಕಂಥ ಮೀನು
ಮ್ಯಾಲೆ ಬರುವಂತಾ ಬೆಳ್ಳಿ ನೀರಿಗೆ
ಮ್ಯಾಲಕ್ಕತ್ಕೊಂಡ್ಹೋಗ್ತವೆ
ಕಾರೆ ಮಳೂದು ನಿಂತ್ಹೋದ ತಕ್ಷಣ
ಹೋದಂತ ಮೀನು ಅಲ್ಲಲ್ಲಿ ಗುಂಡಿಯಲ್ಲಿ ನಿಲ್ತವೆ
ಅಂಬಿಗಣ್ಣ ಏನ್ಮಾಡ್ತನೇ ಅಂದ್ರೆ
ಈವೊತ್ತು ಕಾರ್ಮಳೂದು ಕೆರೆಕಟ್ಟೆ ತುಂಬದೆ
ಕೆರೆವೊಳಗಿರ್ತಕ್ಕಂಥ ಮೀನೆಲ್ಲ ಮೇಲಕ್ಕೆ ಬಂದವೆ
ನಾನು ಮೀನು ಬೇಟೆಯಾಡಬೇಕಂತ್ಹೇಳಿ
ಹರಿಯುವಂತಾ ನೀರಿಗೆ ಕೊಡಬೆವೊಡ್ತಾನೆ
ಆ ಕೊಡಬೇಗೆ ಬಿದ್ಧ ಮೀನು ಪ್ರಾಣ ಹೋಗುತ್ತೆ
ಆ ಕೆರೆವೊಳಗಿರುವಂಥ ಮೀನು
ನನ್ನ ಪ್ರಾಣ ಹೋಗುತ್ತೇ ಅನ್ನೋದು ಗೊತ್ತಿಲ್ಲ
ಏರಿ ಬರುವಂಥ ಬೆಳ್ಳೀ ನೀರಿನ ಚೆಂದಕ್ಹೋಗಿ
ಆ ಅಂಬಿಗಣ್ಣನ ಬಲೆಗೆ ಬಿದ್ದು ಪ್ರಾಣಕಳ್ಕೊತ್ತದೆ
ಆ ರೀತಿಯಾಗಿ ಸಂಕೆಣ್ಣೆ

ನಿನ್ನಾ ಹೆಣ್ಣಿನ ಬುದ್ದು ಮೀನಿನ ಬುದ್ದು
ಒಂದು ಕಾಣೋ ಸಂಕೆಣ್ಣೆs || ಕೋರಣ್ಯ ||

ನನಗೆ ಬಲಗೈ ಭಾಷೆ ಕೊಡುವಾಗಿಲ್ಲ
ನಾನು ಹೆಜ್ಜೇನು ಮಲೆಗೆ ಹೋಗುವಾಗಿಲ್ಲ
ಹಾಗಾದ ಪಕ್ಷದಲ್ಲಿ ಸಂಕೆಣ್ಣೆ
ನಾನೇ ಹೆಚ್ಚಲ್ಲ ಈ ಪ್ರಪಂಚದಲ್ಲಿ
ನನಗಿಂತ ಹೆಚ್ಚಿನ ಸ್ವಾಲುಗ್ರು ಇದ್ದಾರೆ
ಎಂಥಾವರು ಅಂದರೆ ಮಡದಿ

ಆಕಾಸಕಂತು ನೋಡಿದರೆ
ಆಕಾಸದ ಬಾಯ ಬಿಡಿಸುವರು
ಭೂಮಿಯ ಬಗ್ಗಿ ನೋಡಿದರೆ
ಭೂಮಿಯ ಬಾಯ ಬಿಡಿಸುವರು
ಕೆಟ್ಟಾ ಸ್ವಾಲುಗ್ರು ಬರುವರು
ಕಲ್ಲ ಮಂತರಿಸಿ ಇಟ್ಟಾರೆ
ಕರಡಿ ಮರಿಯ ಮಾಡುವರು
ಹುಲ್ಲ ಮಂತ್ರಿಸಿ ಇಟ್ಟಾರೆ
ಹುಲಿಯ ಮರಿಯ ಮಾಡುವರು
ಆನೆ ಬಾಯ ಕಟ್ಟುವರು
ಹುಲಿಯ ಬಾಯ ಕಟ್ಟುವರು
ಮಡದಿ ಹೇಳುದು ಮಾತ ಕೇಳೆಣ್ಣ
ಬಲಗೈಯ ಭಾಷೆ ಮಾಡ್ಹೆಣ್ಣೆ || ಕೋರಣ್ಯ ||

ಇಂಥಾ ನನಗಿಂತ ಹೆಚ್ಚಿನ ಸ್ವಾಲುಗ್ರಿದ್ದಾರೆ ಮಡದಿ
ಆದ್ದರಿಂದ ಒಂದು ಮನೆಯಲ್ಲಿ ಬಿಟ್ಟು ಹೋಗಲಾರಿ
ಇಂಥ ಬಣ್ಣ ಬಂಗಾರ ಒಡಬೆಯನ್ನು ಬಿಟ್ಟೋದ್ರೆ
ನನ್ನಂಥ ಸ್ವಾಲುಗ ಬಂದು ನಿನ್ಮೇಲೆ ಕಣ್ಬಿಟ್ಟು
ಒಲಮೆ ಮದ್ದು ಕೊಟ್ಟು
ವಾಲೀಸಿಕೊಂಡು ಹೋಗ್ಬುಡ್ತಾನೆ ಮಡದಿ
ನಿನ್ನ ಒಬ್ಬಳೇ ಬಿಟ್ಟು ಹೋಗಬೇಕಾದರೆ

ಮಡದಿ ಉಟ್ಟಿದ ಸೀರೆ ಅಳಿಯೆಣ್ಣೆ
ತೊಟ್ಟಿದ ಕುಪ್ಪಸ ಅಳಿಯೆಣ್ಣೆ
ಬಣ್ಣ ಬಂಗಾರ ಕಳಿಯೆಣ್ಣೆ
ನಡುವಿನ ಒಡ್ಯಾಣ ಕಳಿಯೆಣ್ಣೆ
ಕಾಲಿನ ಕಡಗ ಕಳಿಯೆಣ್ಣೆ
ಕೈಯಿನ ಪದಕ ಕಳಿಯೆಣ್ಣೆ
ನೆತ್ತಿಯ ಮಲುಕು ಕಳಿಯೆಣ್ಣೆ
ಉಟ್ಟಿದ ಸೀರೆ ಅಳಿಯೆಣ್ಣೆ
ಮಡದೀ ಬದಲಿಗೆ ಬದಲೀಗೆ ಸೀರೆಯ ಕೊಡುವೆನು
ಉಟ್ಟಿದ ಸೀರೆ ಅಳಿಯೆಣ್ಣೇs || ಕೋರಣ್ಯ ||

ಅಯ್ಯೋ ಶಿವಶಿವ ಯಜಮಾನರೇ
ತಾಯಿ ತಂದೆ ಬಂಧು ಬಳಗ
ಅಣ್ಣಾ ತಮ್ಮ ಅಕ್ಕಾ ತಂಗೀರು
ಎಲ್ಲವನ್ನು ಮರೆತು ಬಿಟ್ಟು
ನನ್ನ ಪತಿ ಪಾದವೇ ಗತಿ ಅಂತ್ಹೇಳಿ
ಪತಿಯಿಂದಲೇ ಮೋಕ್ಷ ಪತಿಯಿಂದಲೇ ಸ್ವರ್ಗ
ನಾನು ಪತಿಯಿಲ್ಲದ ಹೆಂಗ್ಸು ಪಾಷಾಣಕ್ಕಿಂತ ಕಡೆ ಅಂತ್ಹೇಳಿ
ನಿನ್ನ ಪತಿ ಪಾದ ನಂಬ್ಕೊಂಡು ಬಂದಿ

ಇಂಥ ಪಾಪದ ಮಾತನ್ನಾಡಬೇಡಿ
ಪಾದ ಹೊತ್ತೇನು ಯಜಮಾನಾs || ಕೋರಣ್ಯ ||

ಬೆಟ್ಟೆಲ್ಲ ಜೋಲು ಮಾದೇವ
ಬಿದಿರೆಲ್ಲ ಜೋಲು
ಬೆಟ್ಟದರಸು ಮಾದಪ್ಪ ನಿಮ್ಮ
ಮುಟ್ಟಿದರೆ ಜೋಲು

ಶಿವಶರಣೆಯಾದ ಸಂಕಮ್ಮ
ಭೂಮಿತಾಯಿ ಬಗ್ಗಿನೋಡಿ ಆಕಾಸ ಅಂತ್ನೋಡ್ದಳು
ಭೂಮಿ ತಾಯಿ ಆಕಾಸವೇಣಿ
ಸೂರ್ಯ ಚಂದ್ರಾದಿಗಳೇ
ಈ ಅಡವಿಯಾರಣ್ಯದಲ್ಲಿ
ನೀವೇ ನನಗೆ ತಂದೆ ತಾಯಿಗಳು ಬಂಧುಬಳಗ
ಅಂಥಾ ಹಿಂಡೇಳು ಬಳಗವನ್ನು ಬಿಟ್ಟುಬಂದೆ
ಆ ಬಳಗಕ್ಕಿಂಥ ಈ ಬಣ್ಣ ಬಂಗಾರ ಹೆಚ್ಚಿಲ್ಲ
ನನ್ನ ಪತಿಯಿಂದಲೇ ಪ್ರಾಣ ಹೋದರೂ ಹೋಗಲೀ ಅಂತ್ಹೇಳಿ
ಆ ಹೆಣ್ಣು ಮಗಳು ಸೊಪ್ಪುನ ದೊಡ್ಡೀಮೊಳಗೆ ನಿಂತ್ಕೊಂಡು
ದುಃಖ ಮಾಡ್ಕಂಡು ಸಂಕಮ್ಮ

ಅಯ್ಯಾ ಉಟ್ಟಿದ ಸೀರೆ ನನಗ್ಯಾಕೆ
ತೊಟ್ಟಿದ ಕುಪ್ಸ ನನಗ್ಯಾಕೆ
ಬಣ್ಣ ಬಂಗಾರ ನನಗ್ಯಾಕೆ
ನಡುವಿನ ಒಡ್ಯಾಣ ನನಗ್ಯಾಕೆ
ಕಾಲಿನ ಕಡಗ ನನಗ್ಯಾಕೆ
ಕೈಯ್ಯಿನ ಪದಕ ನನಗ್ಯಾಕೆ
ನೆತ್ತಿಯ ಮಲಕು ನನಗ್ಯಾಕೆ
ನಡುವಿನ ಒಡ್ಯಾಣ ನನಗ್ಯಾಕೆ
ಅಮ್ಮಾ ಎಡಗೈಲಿ ಸೀರೆ ಎಳೆದವಳೇ
ಬಲಗೈಲಿ ಕಣ್ಣೀರ ಒರೆಸವಳೇs || ಕೋರಣ್ಯ ||

ಆಲಂಬಾಡಿ ಮಾದೇವ
ಅರಗಣ್ಯ ಬಿಟ್ಟು ನೋಡಯ್ಯ
ಹಾಲರವಿ ಮ್ಯಲ್ಹೂವಿನ ದಂಡೆ
ವಾಲಾಡಿ ಬಂದೊs

ಶಿವಶರಣೆಯಾದ ಸಂಕಮ್ಮ
ತನ್ನ ಬಣ್ಣ ಬಂಗಾರ ಒಡವೆಯನ್ನೆಲ್ಲ ಕಳೆದು
ಉಟ್ಟಿರುವಂಥ ಸೀರೆ ತೊಟ್ಟಿರುವಂಥ ಕುಪ್ಸವನ್ನು ಕಳೆದು
ಮುದುರಿ ಪೊಟ್ಲ ಕಟ್ಟಿ
ಯಜಮಾನರೇ ಯಜಮಾನರೇ
ನಿಮ್ಮ ಬಣ್ಣ ಬಂಗಾರ ತಕ್ಕಳ್ಳಿ ಅಂತ್ಹೇಳಿ
ಸೊಪ್ಪುನ ಗುಡ್ಲಿಂದ ಆಚೆ ಮಡುಗ್ಬುಟ್ಟು
ತಾಯಿ ಹೊಟ್ಟೇಲಿ ಹುಟ್ಟಿದಪ್ಪಂದವಾಗಿ
ಹುಟ್ಟಿದ ನಿರ್ವಾಣದಲ್ಲಿ ಮೊಕ್ಕಣ್ಣಾಗಿ ಮಲಿಕಂಡಳು
ನೀಲೇಗೌಡ
ತನ್ನ ಮಡದಿ ಪತೀವ್ರತಾಧರ್ಮ ನಂಬಲಿಲ್ಲ ನೆಚ್ಚಲಿಲ್ಲ
ಇವಳಿಗೆ ತಕ್ಕಂಥ ಕೊಲೆ ಮಾಡಿ
ಹೆಜ್ಜೇನು ಮಲೆಗೆ ಹೋಗಬೇಕಂತ್ಹೇಳಿ

ಅವನು ಹಳ್ಳಾದ ಕೆರೆಗೆ ಹೋಗವನೆ
ಉಗುನಿಯ ಸೊಪ್ಪ ಕೂದವನೆ
ಎಕ್ಕಾದ ಇಲೆಯ ಕೂದವನೇ
ಕಬ್ಬಳಿಯಂಬ ಕೂದವನೇ
ಮುದುರಿ ಪೊಟ್ಟಣ ಕಟ್ಟವನೆ
ಸಣ್ಣ ಮರಳ ಕೊಡ್ಸವನೆ
ಅಯ್ಯಾ ಸತ್ತುಭಾವ ಸಂಕಮ್ನ ಗುಡ್ಲಿಗೆ
ಬತ್ತಾವುನಲ್ಲೋ ನೀಲಯ್ಯಾs || ಕೋರಣ್ಯ ||

ಹಾಲರವಿ ಬಂದೋs ಗುರುವೇ
ತೋಪಿನಲ್ಲಿ ನಿಂದೋs
ಹಾಲರವಿ ಮ್ಯಾಲ್ಹೂವಿನ ದಂಡೆ
ವಾಲಾಡಿ ಬಂದೋs

ನೀಲೇಗೌಡ ಎಕ್ಕದ ಸೊಪ್ಪು ಉಗುನಿಯಂಬು
ತೇಗ್ಹೆಲೆ ಎಲ್ಲಾವನ್ನು ಕೂದು ಪೊಟ್ಲ ಕಟ್ಟುಕೊಂಡು
ಸಣ್ಣ ಮರಳ ಮೂರು ಸೇರು ಮರಳ ಕಟ್ಕೊಂಡು
ಶಿವಶರಣೆಯಾದ ಸಂಕಮ್ಮಳ ಗುಡ್ಲುತಾಕೆ ಬಂದ
ಹೊರಗಡೆ ನಿಂತ್ಕಂಡು
ಆವಾಗಲೀಗ ನೀಲೇಗೌಡ
ಎಲವೋ ಸಂಕೆಣ್ಣೆ
ಈ ಉಡುಗೆಯನ್ನು ಉಟ್ಕೊಂಡು ಈಚೆಗ್ಬಾ ಅಂತ್ಹೇಳಿ
ಆ ಸೊಪ್ಪಿನ ಗಂಟನ್ನ ಒಳಗಡೆ ಬಿಸಾಡ್ದ
ಶಿವಶರಣೆಯಾದ ಸಂಕಮ್ಮ
ನನ್ನ ಪತಿ ಕೊಟ್ಟುದ್ದೇ ನನಗೆ ಪರಮಾನ್ನ ಅಂತ್ಹೇಳಿ
ಆ ಸೊಪ್ಪಿನ ಗಂಟನ್ನ ಬಿಚ್ಚಿನೋಡ್ದಳು
ಉಗುನಿಯಂಬು ಎಕ್ಕದೆಲೆ ತೇಗದೆಲೆ ಕಬ್ಬಳಿಯಂಬ ನೋಡದ
ಇದನ್ನ ಉಡುಗೆ ಮಾಡಬೇಕಂತ್ಹೇಳಿ

ಅಮ್ಮಾ ಉಗುನಿಯ ಸೊಪ್ಪು ತಗುದವಳೇ
ದಂಡು ಉಡುಗೆ ಉಟ್ಟವಳೆ
ಎಕ್ಕದ ಎಲೆಯ ತಗದವಳೆ
ಎದೆ ಕಟ್ಟನ್ನಾದರೆ ಕಟ್ಟವಳೆ
ಕಬ್ಬಾಳಿಯಂಬ ತಗದವಳೆ
ನಡು ಕಟ್ಟನ್ನಾದರೆ ಕಟ್ಟವಳೆ
ಒಂದ ತೇಗದ್ಹೆಲೆಯ ತಗದವಳೆ
ಮೇಲೆ ಮುಸುಕ ಹಾಕವಳೇs || ಕೋರಣ್ಯ ||

ಆಲಂಬಾಡಿ ಮಾದೇವ
ಅರಗಣ್ಯ ಬಿಟ್ಟು ನೋಡಯ್ಯ
ಹಾಲರವಿ ಮ್ಯಾಲೂವಿನ ದಂಡೆ
ವಾಲಾಡಿ ಬಂದೊ

ಶಿವಶರಣೆಯಾದ ಸಂಕಮ್ಮ
ಆವಾಗಲೀಗ ತೇಗದೆಲೆ ಮುಸುಕಿಟ್ಟುಕೊಂಡು
ಆವಾಗ ಗಂಡ ಕೊಟ್ಟಂಥ ಉಡುಗೆ ಉಟ್ಕೊಂಡ್ಬಂದು

ಅಮ್ಮಾ ಗಂಡನ ಪಾದಕ್ಕೆ ಶರಣ ಮಾಡವಳೆ
ಸತ್ತುವಂತೆ ಸಂಕಮ್ಮಾs || ಕೋರಣ್ಯ ||

ಶಿರಬೊಗ್ಗಿ ಪತಿ ಪಾದಕ್ಕೆ ನಮಸ್ಕಾರವನ್ನ ಮಾಡ್ದಳು
ನೀಲೇಗೌಡ ಸಂಕಮ್ಮನ ದುರುದುರನ್ಹೆ ನೋಡ್ಬುಟ್ಟ ದೃಷ್ಟಿಯಿಟ್ಟು
ಓಹೋ ನನ್ನ ಮಡದಿ ಯಾಸ ಕೆಡಿಸಿ ನಾನು ಬಿಟ್ಟು ಹೋದರೆ
ನನ್ನಂಥ ಸ್ವಾಲಗ್ನ ಕೈವಸವಾಗೋಗ್ಬಿಡ್ತಾಳೆ
ಕಣ್ಣನ್ನ ಬಿಟ್ಟು ಹೋದರೆ ಕಣ್ಣೆತ್ತು ನೋಡ್ತಳೆ
ಬಾಯನ್ನ ಬಿಟ್ಟು ಹೋದರೆ ಮಾತ್ನಾಡ್ತಳೆ
ಕೈಯನ್ನ ಬಿಟ್ಟು ಹೋದರೆ ಕೈಸನ್ನೆ ಮಾಡ್ತಳೆ
ಆ ರೀತಿಯಾಗಿ ಸಂಕೆಣ್ಣ ಪಿಶಾಚಿಯನ್ನಾಗಿ ಮಾಡಿ
ಮೊಕಣ್ಣಾಗಿ ಕೆಡಗಬೇಕಂತ್ಹೇಳಿ
ನೀಲೇಗೌಡ
ಅಯ್ಯಾ ಕಣ್ಣಿಗೆ ಸೂಜಿಹಾಕವನೆ
ಕರ್ಣಕೆ ದಬ್ಳವ ಬಡದವನೆ
ಕಣ್ಣಿಗೆ ಸೂಜಿ ಹಾಕವನೆ
ಬಾಯಿಗೆ ಬೀಗ ಹಾಕವನೆ
ಹಿಂಕೈ ಮುರಿಯ ಕೆಟ್ಟವನೆ
ಮುಂಕೈ ಮುರಿಯ ಕಟ್ಟವನೆ
ಕಾಲಿಗೆ ಸಂಕೋಲೆ ಹಾಕವನೆ
ಮಲೆಯ ಸ್ವಾಲುಗ ನೀಲಯ್ಯ
ಅಯ್ಯಾ ಮುದುರಿ ಮೂಟೆ ಕಟ್ಟವ್ನೆ
ಮೊಕ್ಕಣ್ಣಾಗಿ ಕೆಡುಗವನೇs || ಕೋರಣ್ಯ ||

ಬಡಗಾಲ ನಾಡಿಗೆ ಬಂದವರೆ
ಮಾದೇವ ಗಡಿಗಡಿಗ್ಹೊಕ್ಕಲ ಪಡೆದವರೇs
ನೀಲಗಿರಿ ನಿಜಭಕ್ತರು
ಮರಳಿ ಲೋಲಕಾಣೋ ಮಾದೇವಾs

ಮುದುರಿ ಮೊಟ್ಟೆಯ ಕಟ್ಟಿ ಶಿವಶರಣೆಯಾದ ಸಂಕಮ್ಮನಾ
ಮೊಕ್ಕಣ್ಣಾಗಿ ಮಲಗಿಸ್ಬುಟ್ಟು
ಎತ್ತುಬಾರದ ಗುಂಡ ತಂದು ಬೆನ್ನಮೇಲೆ ಮಡಗ್ದ
ಎಡಮಗ್ಗಲಾಗಿ ಬಲಮಗ್ಗಲಾಗಿ
ನನ್ನ ಮಡದಿ ಹೊಳ್ಳಿಬಿಡುತ್ತಾಳೆ ಅಂತ್ಹೇಳಿ

ಅಯ್ಯಾ ನಗ್ಗಾಲು ಮುಳ್ಳಾ ತಂದವನೆ
ಮಗ್ಗಾಲು ಹಾಸಿಗೆ ಮಾಡವನೆ
ಬೆಲ್ಲದ ಹಾಸಿಗೆ ಮಾಡವನೆ
ಮೈಮೇಲಾದರೆ ಚೆಲ್ಲವನೆ
ಅಯ್ಯಾ ಮಾಡಬಾರ್ದ ಕೊಲೆಯ ಮಾಡವನೆ
ಮಲೆಯ ಸ್ವಾಲುಗ ನೀಲಯ್ಯs || ಕೋರಣ್ಯ ||