ಶಿವಶಿವಾ ಕೆಟ್ಟು ಮುಂಡೇ ಮಗ ನೀಲೇಗೌಡ
ಹಿಂದೆ ಯಾರು ಮಾಡಬಾರ್ದು
ಮುಂದೆ ಯಾರು ಮಾಡಬಾರ್ದು
ಅಂಥಾ ಕೊಲೆಯನ್ನು ಮಾಡ್ಬೇಕು
ಗಂಡನಿಗೆ ದುಂಡಾರೀತಿ ಮಾಡ್ದೋಳು
ಪತಿಗೆ ಪ್ರತಿ ಉತ್ತರ ಕೊಟ್ಟೋಳು
ಅಂತ್ಹೇಳಿ ನೀಲೇಗೌಡ
ಆವಾಗಲೀಗ ಇದೇ ರೀತಿಯಲ್ಲಿ ಬಿಟ್ಟು ಹೋದರೆ
ನನ್ನ ಮಡದಿ ನರಳ್ತಾ ಮಲಗಿದ್ದಾಳೆ
ನರಳುವಂಥ ಶಭ್ದವನ್ನು ಕೇಳಿ
ಆ ಕಡೆ ಈ ಕಡೆ ಸ್ವಾಲುಗ್ರು ಬಂದರೆ
ಬಿಡುಗಡೆ ಮಾಡಿ ಇವಳ ಕಷ್ಟವನ್ನು ಕರಕೊಂಡ್ಹೋಗ್ಬುಡ್ತಾರೆ
ಯಾರೂ ಕೂಡ ಸೊಪ್ಪಿನ ದೊಡ್ಡಿವೊಳಗೆ ಬರಬಾರ್ದು
ನನ್ನ ಮಡದಿಯಾದ ಸಂಕೆಣ್ಣು ಹೊರಗೆದ್ದು ಬರಬಾರ್ದು
ಅಂಥಾ ರೀತಿ ಮಾಡಬೇಕು ಅಂತ್ಹೇಳಿ

ಅಯ್ಯಾ ಬಾಗೇಯ ಮರವ ತರದವರೆ
ಭಾರೀ ಗೊಂಬೆ ಮಾಡವರೆ
ತನ್ನ ರೂಪ ತಿದ್ದವರೆ
ಮಲೆಯ ಸೋಲುಗ ನೀಲಯ್ಯ
ಎಡಗಡೆ ಬಲಗಡೆ ನಿಲುಸವರೆ
ಅಯ್ಯಾ ಹೆಜ್ಜೇನು ಕತ್ತಿ ತಗದವರೆ
ಗೊಂಬೆ ಕೈಲಿ ಕೊಟ್ಟವರೆs || ಕೋರಣ್ಯ ||

ಭಾರಿಯಾಗಿರ್ತಕ್ಕಂಥಾದ್ದ ಬಾಗೇಮರವನ್ನು ತರ್ದ
ಎರಡು ಗೊಂಬೆಗಳ್ನ ಮಾಡ್ದ ತನ್ನ ರೂಪವಾಗಿ
ವೀರಣ್ಣ ಬೋಮ್ಮಣ್ಣ ನೀವು ಬಾಗ್ಲಲ್ಲಿ ಕಾದು ಕುಂತಿರಿ ಅಂತ್ಹೇಳಿ
ಸೊಪ್ಪುನ ಗುಡ್ಲು ಎಡಗಡೆ ಬಲಗಡೆ ನಿಲ್ಲಿಸ್ಬುಟ್ಟ
ಹೆಜ್ಜೇನು ಕತ್ತಿಯನ್ನು ತುರುಗಲ್ಲಿನ ಮ್ಯಾಲೆ
ಗರಾಗರ್ನೆ ಮಸ್ತು ಗೊಂಬೆಗಳ ಕೈಗೆ ಕೊಟ್ಟ
ನೋಡಪ್ಪ ಈರಣ್ಣ ಬೊಮ್ಮಣ್ಣ ನನ್ನಂಥ ಸ್ವಾಲುಗ ಒಳಗಡೆ ಬಂದರೆ
ಇಲ್ಲ ನನ್ನ ಮಡದಿಯಾದ ಸಂಕೆಣ್ಣು ಹೊರಗಡೆ ಬಂದರೆ

ಅವರ ತಲೆಯಾ ಬುಂಡೆ ತರಿರಯ್ಯಾ
ಈ ಸೊಪ್ಪಿನ ಗುಡ್ಲಿಗೆ ಕಟ್ರಯ್ಯಾs || ಕೋರಣ್ಯ ||

05_81_MM-KUH

ಕೋಪಗಾರ ಮಾಡಪ್ಪ ನಿನಗೆ
ಕೋಪವ್ಯಾಕೊ ನಮಮ್ಯಾಲೇ
ಮನವ ಒಪ್ಪೀದ ಗುರುಗಳ ನೋಡೋ
ದುಂಡುಳ್ಳ ಮಾದೇವ

ಮಲೇಸ್ವಾಲುಗ ನೀಲೇಗೌಡ
ಗೊಂಬೆಗಳ ನಿಲ್ಲಿಸ್ಬುಟ್ಟ
ಮುಂದ್ಗಡೆ ಗೊಂಬೆಗಳ ಕಾವಲಾಯ್ತು
ಹಿಂದ್ಗಡೆ ಬಂದು ಯಾರಾದ್ರೂ ಸೊಪ್ಪುನ ಗುಡ್ಲ ಇಕ್ಕುಲ ಮಾಡ್ಬುಟ್ಟು
ನನ್ನ ಮಡದಿ ಕಷ್ಟ ಬಿಡಿಸ್ಬುಡ್ತಾರೆ
ಯಾರೂ ಕೂಡ ಸೊಪ್ಪುನ ಗುಡ್ಲ ಹೆಜ್ಜೆಗೆ ಬರಬಾರದಂತ್ಹೇಳಿ
ತನ್ನ ಕಾವಿ ಚೌಕ್ದಲ್ಲಿ ತಂದಿದ್ದನಲ್ಲ
ಅ ಮರಳ ತಕ್ಕೊಂಡ್ಬಂದು ಸೊಪ್ಪುನ ಗುಡ್ಲ ಸುತ್ತ ಅಂಡ್ಬುಟ್ಟು
ಆವಾಗ ನಾಗಬೆತ್ತ ಬಲಗೈಲಿಡಿದುಕೊಂಡು

ಬಂದ ಉಳುಕುಮಂಡಲದ ಬರೆದವನೆ
ಕೊಳಕು ಮಂಡಾಲದ ಬರೆದವನೆ
ಗೆಜ್ಜು ಮಂಡಾಲ ಬರೆದವನೆ
ಗಿಲುಕು ಮಂಡಾಲ ಬರೆದವನೆ
ಆರು ಮಂಡಾಲ ಬರೆದವನೆ
ತೋರು ಮಂಡಾಲ ಬರೆದವನೆ
ಎಪ್ಪತೇಳು ಮಂಡಾಲನೆಲ್ಲ ತಪ್ಪಾದೆ ಬರದವ್ನೆ ನೀಲಯ್ಯಾs || ಕೋರಣ್ಯ ||

ಎಪ್ಪತ್ತೇಳು ಮಂಡ್ಲ ಬರೆದ್ಬುಟ್ಟು
ಒಂದೆಳನಾಗರ ಮರಿಯನ್ನು ಕರೆದು
ಹಿಂದಗಡೆ ಕಾವಲಿಟ್ಟುಬುಟ್ಟ
ನೋಡಪ್ಪ ಆದಿಶೇಷ ಕಾಳಿಂಗಸರ್ಪ
ಈ ಮಂಡಲಗಳ ದಾಟಿ ಯಾರಾದ್ರೂ ಹೋದರೆ

ಒಂದು ಮಂಡಾಲ ದಾಟಿದರೆ
ಕಾಲೆ ಸೇದಿ ಹೋಗಾಲಿ
ಎರಡು ಮಂಡಾಲ ದಾಟಿದರೆ
ಕೈಯೇ ಬರದೇ ಹೋಗಾಲಿ
ಮೂರು ಮಂಡಾಲ ದಾಟಿದರೆ
ಕಣ್ಣೇ ಹಿಂಗಿ ಹೋಗಾಲಿ
ನಾಕು ಮಂಡಾಲ ದಾಟಿದರೆ
ಬಾಯೇ ಬರದೆ ಹೋಗಾಲಿ
ಐದು ಮಂಡಾಲ ದಾಟಿದರೆ
ಕಣ್ಣೇ ಹಿಂಗಿ ಹೋಗಾಲಿ
ಆರು ಮಂಡಾಲ ದಾಟಿದರೆ
ಅವರ ತಲೆಯೂ ಸಾವ್ರಚೂರಾಗಲಿs || ಕೋರಣ್ಯ ||

ಎಪ್ಪತ್ತೇಳು ಮಂಡಲದ ಬರೆದವನೆ
ಏಳು ನಾಗರಮರಿಯ ಮಡಗವನೇs || ಕೋರಣ್ಯ ||

ಶಿವಶಿವಾ ಶಂಭೋ ಶಂಕರ
ಆ ಶಿವಶರಣೆಯಾದ ಹೆಣ್ಣುಮಗಳಿಗೆ
ಪತಿವ್ರತೆಯಾದ ಹೆಣ್ಣುಮಗಳಿಗೆ
ಕೊಡಬಾರ್ದ ಕೊರೆ ಮಾಡಬಾರ್ದ ಶಿಕ್ಷೆ ಮಾಡ್ದ ನೀಲೇಗೌಡ
ಎಲಾ ಕೆಟ್ಟು ಮುಂಡೇ ಮಗಳೇ
ನಾನು ಹೆಜ್ಜೇನು ಮಲೆಯಿಂದ ಬರೂವರ್ಗೂವೆ
ಇರೀನ್ಗೂಡಾಗಿ ಬಿದ್ದಿರೂ ಅಂದ್ಬುಟ್ಟು
ತನ್ನ ಸಾಮಾನು ಜೋಡಿಸ್ಕಂಡು ಹೊರಟಿದ್ದಾನೆ ಹೆಜ್ಜೇನು ಮಲೆಗೆ
ನೆನ್ನೆ ದಿವ್ಯ ಎಲ್ಲಾ ಹೊರಟ್ಹೋಗಿದ್ದಾರೆ ಕುಲಸ್ತ್ರು
ಈವತ್ತೋಗಿ ನಾನು ಕುಲ ಸೇರ್ಬೇಕು ಅಂತ್ಹೇಳಿ

ಒಂದ ನರಮುರಿ ಜೋಡ ಮೆಟ್ಟವರೆ
ಚಕಳಾದ ಚೆಡ್ಡಿ ಇಕ್ಕವರೆ
ಹನುಮಂತ ಪರಿವಾಳವ ಧರಿಸವರೆ
ಯಾರ್ನ ನಾಮ ಹಣೆಯಲ್ಲಿ
ದಾರಾದ ಟೋಪಿ ತಲೆಯಲ್ಲಿ
ಭಾರಿ ಬಂಧೂಕ ತಗದವನೆ
ಚಿಲಕಾದ ನಾಯ ಕರೆದವನೆ
ಬಲಗೈಲಾದ್ರೆ ಹಿಡುದವನೆ
ಅಯ್ಯಾ ಬೀಸು ಮಚ್ಚ ತಗದವನೆ
ಕೈಯೊಳಗಾದಾರೆ ಹಿಡುದವನೆ
ಅಂಡೆ ಮೂರುಂಡೆ ತಗದವನೆ
ಗ್ವಾಟೊವೊಳಗೇ ಮಡಗವನೆ

ಅಯ್ಯಾ ಸುತ್ತು ಭಾವ ಸಂಕಮ್ಮನ ಬಿಟ್ಟು
ಹೆಜ್ಜೇನು ಮಲೆಗೆ ಹೊಯ್ತಾವನೇs || ಕೋರಣ್ಯ ||

ಕೋಗುಲೆ ಎದ್ದು ಕೊಂಬೆಯ ಮೇಲೆ
ಕೂಗುತವೆ ಮಾದೇವರಾ
ರಾಗವೆತ್ತಿ ಪಾಡುತವೆ
ಮಾದೇವರ ಪಾದಾವಾ

ಮೇಲೆ ಸ್ವಾಲುಗ ನೀಲೇಗೌಡ
ಪತಿವ್ರತೆಯಾದ ಸಂಕಮ್ಮಿಗೆ
ಕೊಡಬಾರ‍ದ ಕೊಲೆ ಕೊಟ್ಟು
ಕೊಕ್ಕಾರಿ ಕೊನಬೋಳಿ ಬೆಟ್ಟದ ಮಾಳ್ದಲ್ಲಿ ಬಿಟ್ಟು ಬಿಟ್ಟು
ಹೆಜ್ಜೇನು ಮಲೆಗ್ಹೋಗ್ತಾಯಿದ್ದಾನೆ ಕುಲಸ್ತ್ರು ಹುಡೀಕೊಂಡು

ಅವರು ಹೆಜ್ಜೇನು ಮಲೆಗೆ ಹೋಗವರೆ
ಹೆಜ್ಜೇನು ಬ್ಯಾಟೆ ಮಾಡವರೆ
ಕಿರುಜೇನು ಮಲೆಗೆ ಹೋಗವರೆ
ಕಿರುಜೇನು ಬ್ಯಾಟೆ ಮಾಡವರೆ
ಕಾಡು ಬಾಳೆ ಕಿತ್ತವರೆ
ಕಟ್ಟೆಯ ನೀರ ಮೊಗದವರೆ
ಬೀದ್ಹೂರಕ್ಕಿ ಕೂಡ್ಸವರೆ
ಬೆಲ್ಲೂ ಗೆಣ್ಸ ಕಿತ್ತವರೆ
ಅಲಸುಂಡೆ ಹಣ್ಣ ಆದವರೆ
ಮಾಗಾಳಿ ಬೇರ ಕಿತ್ತವರೆ
ತನ್ನ ಬೇಟೆ ಮಾಡವ್ನೆ
ತನ್ನ ಕುಲದವರ ಬಳಿಗೆ ಬಂದವ್ನೆs || ಕೋರಣ್ಯ ||

ಕಾಡು ಕಾಮಾರಿಯೋ
ರಂಗಯ್ಯ ಜೇನು ಬಿಳಿಗಿರಿಯೇ
ಸುತ್ತಾ ಕಾಮಾರಿಯೋ
ರಂಗಯ್ಯ ಸುರಗಿರಿ ಬಿಳಗಿರಿಯೋ

ಹೋಗ್ತ ಹೋಗ್ತಾ ನೀಲೇಗೌಡ
ತನ್ನ ಬ್ಯಾಟೇನೆಲ್ಲ ಮಾಡಿಕೊಂಡು
ಏಳೂರು ಗಡಿಕಾರ್ರು ಏಳೂರು ಕುಲಸ್ತ್ರು
ಸೇರಿದ್ರಲ್ಲ ಆ ಹೆಜ್ಜೇನು ಮಲೆಗ್ಹೋಗಿ
ಅವ್ರ ಮುಂದೆ ಮಡಗ್ಬುಟ್ಟು ಸಾಮಾನ್ನೆಲ್ಲನೂವೆ
ದೀರ್ಘದಂಡವಾಗಿ ನಮಸ್ಕಾರ ಮಾಡ್ದ
ಅಪ್ಪಾ ಕುಲಸ್ತರೇ
ನನ್ನ ಮಡದಿಯಾದ ಸಂಕೆಣ್ಣಿಗೇ
ಒಂದು ಮನೆಯಲ್ಲಿ ನಾನು ಬಿಟ್ಟು ಬರಬೇಕಾದರೆ
ಅವಳಿಗಾದಂಥ ರೇಷನ್ನು
ಊಟಕ್ಕೆ ಸಾಮಗ್ರಿಯನ್ನು ಕೊಟ್ಬುಟ್ಟು
ಬರುವುದು ಒಂದು ದಿನ ತಡವಾಯ್ತು
ಕುಲಾ ಸೇರಿಸ್ಕಳ್ಳಿ ಅಂತ್ಹೇಳಿ ಕುಲಕ್ಕೆ ಕೈಮುಗ್ದ
ಆಗಲೀ ಬಾರಪ್ಪ ನೀಲೇಗೌಡ ಅಂತ್ಹೇಳಿ
ಕುಲದವರೆಲ್ಲ ಕುಲಾ ಸೇರಿಸ್ಕೊಂಡು
ವಜ್ರಗಿರಿ ಮಲೆಯೊಳಗೆ ಹೆಜ್ಜೇನು ಬೇಟೆ ಆಡ್ತಾಯಿದ್ದಾರೆ
ಎಲ್ಲಾ ಸೇರ್ಕೊಂಡು ಬ್ಯಾಟೆ ಆಡ್ತಾಯಿದ್ದಾರೆ

ಈ ಕಡೆ ಸಂಕಮ್ಮ ಕೋಳಿಯಾಕ್ಹೂಗಿ ನಾಯಿಯಾಗಿ ನರಳ್ತಾ ಇದ್ದಾಳೆ
ಕಟ್ಟಿರುವಂಥ ಕಟ್ಟೆಲ್ಲ ಕೊರೆದು ಗಾಯವಾಗಿದೆ
ಉಗನಿ ಅಂಬೆಲ್ಲ ಒಣಗಿ ಗಾಳಿಗೆ ತೂರೊಯ್ತಾ ಇದೆ
ಬೆಲ್ಲದ ಸೀಗೋಸ್ಕರವಾಗಿ
ಇರಗಳು ಕಿತ್ತು ತಿನ್ನುತ್ತಾಯಿದ್ದಾವೆ

ಅಮ್ಮ ಗಾಳಗೋಳಿಂದಳುತಾವಳೆ
ಬಾಲ ದುಃಖವ ಮಾಡವಳೇs || ಕೋರಣ್ಯ ||

ಹರಹರ ದೇವ ಸೋಲಗ ನೀಲೇಗೌಡ
ವಾರವಾರ‍ಎಂಟು ದಿನ ಆಗಬಿಡ್ತು
ಈ ಕಡೆ ಪತಿವ್ರತೆಯಾದ ಹೆಣ್ಣು ಮಗಳು
ಕೋಳಿಯಾಗ್ ಕೂಗಿ ನಾಯಿಯಾತಿ ನರಳ್ ಬಿಟ್ಟಳು
ಆ ಹೆಣ್ಣು ಮಗಳ ಕಷ್ಟ ಯಾವ್ ದೇವ್ರಿಗೂ ಅರ್ವಾಗ್ಲಿಲ್ಲ
ಗಂಡನ ಮನೆ ದೇವ್ರನೆಲ್ಲಾ ಕೂಗ್ತಾ ಇದ್ದಾಳೆ
ತಿರುಪತಿ ವೆಂಕ್ಟ್ರಮಣಸ್ವಾಮಿ
ಕನ್ನಂಬಾಡಿ ಚಿನ್ನಗೋಪಾಲ್ ರಾಯ
ಮೇಲ್ಕೋಟೆ ಚೆಲುವರಾಯ
ಅಕ್ಕಮ್ಮ ಚಿಕ್ಕಮ್ಮ ಚಿಕ್ಕಮ್ಮ ಚಿಕ್ಕದೇವಿ
ಬದ್ಧರ ಬನ್ನಂಕಾಳಿ ಬನ್ನೂರು ಯೇಮಾದ್ರಿ
ಮೂಗೂರು ತಿಬ್ಬಾದೇವೆ
ಇಂತಾ ದೇವರುಗಳುಗು ಕೂಡ
ಆ ಹೆಣ್ಣು ಮಗಳ ಕಷ್ಟ ಅರ್ವಾಗಲಿಲ್ಲ
ಗಂಡನ ಮನೆದೇವ್ರು
ಬೆರಳ ತೋರಿದ್ರ ಅಸ್ತ ನುಂಗ್ವಂತ ದೇವ್ರು
ಆ ಹೆಣ್ಣು ಮಗಳ ಕಷ್ಟ ಅರ್ವಾಗಲಿಲ್ಲ
ಕಟ್ಟ ಕಡೆಯಲ್ಲಿ ಸಂಕಮ್ಮ
ಮೊಕಣ್ಣಾಗ್ ಮಲಿಕಂಡು
ಅಪ್ಪನ ಮನೆ ದೇವ್ರ ಕೂಗ್ತಾ ಇದ್ದಾಳೆ
ಅವಳ ಅಪ್ಪನ ಮನೆ ದೆವ್ರು ಅಂದ್ರೆ
ಅಲ್ಲಮ ಪ್ರಭು ಅಖಂಡಮಹಿಮ
ಜಗಕೆ ಸೂತ್ರದಾರಿ ಜಗತ್ತಿಗೆ ಒಡೆಯನಾದ ತಂದೆ
ಬೂದಿಮುಚ್ಚಿದ ಕೆಂಡ ಮೂಲೋಕದಲ್ಲಿ ಉದ್ದಂಡ
ಮಾತಿಗ ಮೆರೆದವನು ನೀತಿಗ ಲಿಂಗಯ್ಯ
ತಂದೆಗೆ ಚಂದ್ರಶೇಕರ ಮೂರ್ತಿ
ಮಾಯಿಕಾರಗಂಡ ಮಾದಪ್ಪ
ಮಾದಪ್ಪನಿಗೆ ಮೊಕಣ್ಣಾಗಿ ಮಲಿಕಂಡು
ಮಾದಪ್ಪನ ಸ್ಮರಣೇ ಮಾಡ್ತಾ ಇದ್ದಾಳೆ

ನನ್ನ ಪಾಪಿ ಮಾಡಿದ ಕಣ್ಣೀರು
ಪಾದಕ್ಕರ್ವಾಗಲಿ ಮಾದೇವ
ಮಾದೇವಾss ಮಾಯ್ಕಾರಾss

ಶಿವ ಶಿವ ಹೆಣ್ಣುಮಗಳು ಅತ್ತಂತ ಕಣ್ಣೀರು
ಏಳುಮಲೆ ಕೈಲಾಸ್ದಲ್ಲಿ ಹೋಗಿ
ಎಣ್ಣೊಳ ನೀರಿನಾಗೆ ಹರಿತಾ ಅವೇ
ಮಾದಪ್ಪನಿಗೆ ಯಾವ ರೀತಿ ಅರ್ವಾಗುತ್ತೆ ಅಂದ್ರೆ
ಮಾಯ್ಕಾರ ಗಂಡ ಮಾದಪ್ಪ
ತುಂಬಿದ ಸೋಮವಾರ
ಸ್ನಾನ ಮಡಿ ಮಾಡಿಕೊಂಡು ಶಿವಪೂಜೆ ಮಾಡಿಕೊಂಡು
ಬರಬೇಕು ಅಂತೇಳಿ
ಮಾದೇವ ಸ್ನಾನ ಮಾಡುವುದು
ಅಂತರಗಂಗೆ ಹಾಲಳ್ಳ
ಮಜ್ಜನ ತರುವುದು ಶಿವಬಾವಿ
ಹನ್ನೆರಡುಗಂಟೆ ರಾತ್ರಿಯೊಳಗ
ಶಿವಪೂಜೆಗೆ ಹೋಗ್ತಾ ಇದ್ದಾರೆ

ಗಂಡುಲಿವಾಹನ ಏರವರೇ
ಮಾದೇವ ದಯಮಾಡವರೇ || ಕೋರಣ್ಯ ||
ಮಜ್ಜನದೊತ್ತಾದೊ ಗುರುವೆ ಮಲೆಗಳ ಪೂಜ್ಯಾದೋ
ಮಂಡೇ ಮೇಗಲ ಮಜ್ಜನದೂವ ಪಾಲಿಸಯ್ಯ ಗುರುವೆ

ಮಾದಪ್ಪ ಗಂಡುಲಿವಾಹನ ಏರಿಕಂಡು
ಅನ್ನೆರಡು ಗಂಟೆ ರಾತ್ರಿಯೊಳಗೆ
ಅಂತರಗಂಗೆ ಆಲಳ್ಳಕ್ಕೋಗ್ತಾ ಇದ್ದಾರೆ
ಅಂತರಗಂಗೆ ಆಲಳ್ಳಕ್ಕೋಗ್ತಾ ಹುಲಿಯನ್ನೆ ಹಿಡಿದು
ಕಲ್ಲು ಕಂಬದ ಮರಕ್ಕ ಕಟ್ಟಾಕ್ಬುಟ್ಟು
ಕಾವಿ ಕಮಂಡಲ ಕಳೆದು ಅರೆಕಲ್ ಮೇಲೆ ಮಡಗಿ
ಮಾಯ್ಕಾರಗಂಡ ಹೋಗಿ ಸ್ನಾನ ಮಾಡುವುದು
ಯಾವ್ ಟೈಮ ಅಂದ್ರೆ
ಹನ್ನೆರಡು ಗಂಟೆ ರಾತ್ರಿ ಒಳಗೆ
ಹರಿವಂತ ಗಂಗಮ್ಮ ಅರಗಳಿಗೆ
ನಿದ್ದೆ ಮಾಡುವಂತ ಟೈಮು
ಗಂಗಮ್ಮ ನಿಂತೋಗ್ತಾಳೆ
ಅದೇ ನಿದ್ದೇ ಮಾಡುವಂತ ಟೈಮು
ಆ ಟೈಮಿನಲ್ಲಿ ಸ್ನಾನ ಮಡಿಯನ್ನು ಮಾಡಿ
ಅರೆಕಲ್ಲ ಮೇಲೆ ಕೂತ್ಗಂಡು ಮಾದಪ್ಪ
ಗುರು ಕೊಟ್ಟಂತ ಲಿಂಗವನ್ನು ಅಂಗೈ ಮೇಲಿಟ್ಕಂಡು
ಶಿವಪೂಜೆ ಮಾಡ್ತಾ ಇದ್ದಾರೆ ಕಣ್ ಮುಚ್ಕಂಡು
ಮಹದೇವು ಶಿವಪೂಜೆ ಮಾಡುವಾಗ
ಆ ಹೆಣ್ ಮಗಳು ಕೊಕ್ಕರ ಕೊನ್ ಬೋಳಿ
ಬೆಟ್ಟದ ಮಾಳದಲ್ಲಿ ಅತ್ತಂತ ಕಣ್ಣೀರು
ಮಾದಪ್ಪನಿಗೆ ಅಂತರಗಂಗೆ ಅರಿವಾರದಲ್ಲಿ
ಮುತ್ತಿನ ಜೋಳ್ಗೆ ಮೇಲೆ ಮೂರು ಹನಿ ಬಿದ್ದೊ
ನಾಗಬೆತ್ತದ ಮೇಲೆ ನಾಕನಿ ಬಿದ್ದು
ಅವರ ಲಿಂಗದ ಮೇಲೆ ದರಿಸಿದ್ದಂತ ಪಾರಿಜಾತ ಪುಸ್ಮ
ಗರಗರ ತಿರ್ಗಿ ಗದ್ಗೆ ಮೇಲೆ ಬಿದ್ ಬಿಡ್ತು

ಅಯ್ಯ ಗಕ್ಕನ ಕಣ್ಣ ಬಿಟ್ಟವರೆ
ದಿಟ್ಟಿಸಿ ರಾಜ್ಯ ನೋಡವರೆ || ಕೋರಣ್ಯ ||
ಬಾ ನನ್ನ ಗುರುವೆ ಭಕ್ತರ ಗಂಡ
ಬಾಗಿದೆನು ಮಾದೇವರೆ
ಮನವ ಒಪ್ಪಿ ದುಡಗಳ ನೋಡು
ದುಂಡುಳ್ಳ ಮಾದೇವ

ಮಾದಪ್ಪ ಅಂಗೈ ಮೇಲೆ ಶಿವಲಿಂಗ ಇಟ್ಗಂಡು
ಗಕ್ಕನ ಕಣ್ ಬಿಟ್ಟು ಮೇಗವನ್ನ ನೋಡಿದ್ರು
ಮೇಗ್ದಲ್ಲಿ ಮೋಡದಲ್ಲಿ ಗುಡಗಿಲ್ಲ ಮಿಂಚಿಲ್ಲ
ಸಿಡ್ಲಿಲ್ಲ ಮಳೆಯಿಲ್ಲ
ನನ್ನ ಏಳುಮಲೆ ಕೈಲಾಸ್ದಲ್ಲಿ
ಮುತ್ತಿನ ಜೋಳ್ಗೆ ಮೇಲೆ ಮೂರನಿ
ನಾಗಬೆತ್ತದ ಮೇಲೆ ನಾಲ್ಕನಿ
ನನ್ನ ಪಾರಿಜಾತ ಪುಸ್ಮ ದರಣಿಗ ಬಿದ್ದು ಬಿಡ್ತಲ್ಲ
ನನ್ನ ನಾಗಮಲೆ ನಡುಮಲೆ
ಗುಂಡುಮಲೆ ಗುರುಗುಂಜಿ ಮಲೆ
ಎಪ್ಪತ್ತೇಳು ಮಲೆ ದಗದಗನೆ ಕತ್ತಿ
ಬಗಬಗನೆ ಉರಿತಾ ಇದೆ
ಹಕ್ಕಿ ಕಣ್ಣೀರೋ ಗೊತ್ತಿಲ್ಲ
ಪಕ್ಷಿ ಕಣ್ಣೀರೋ ಗೊತ್ತಿಲ್ಲ
ನರಮನ್ಸರ ಕಣ್ಣೀರೋ ಗೊತ್ತಿಲ್ಲ
ಇದನ್ನು ಹೋಗಿ ನಾನು ವಿಚಾರಿಸ್ಬೇಕು
ವಿಚಾರಿಸ್ದೆ ಇದ್ದ ಮೇಲೆ
ಮೇಗದಲ್ಲಿ ಮಳೆಯಿಲ್ಲ
ಭೂಮೀಲಿ ಬೆಳೆಯಿಲ್ಲ
ನನ್ನ ಕೈಲಾಸ ಉಳಿಯೋದಿಲ್ಲ ಅಂತ್ಹೇಲಿ
ಮಹದೇವ ಶಿವಪೂಜೆ ತೀರಿಸ್ಕೊಂಡು
ಕಾವಿ ಕಮಂಡ್ಲವನ್ನು ದರಿಸ್ಗಂಡು
ಹುಲಿಯನ್ನೆ ಬಿಚ್ಚಿ ಕಳಿಸಿಬಿಟ್ಟರು ಕಾಡಿಗೆ
ಹೋಗಪ್ಪ ನೀನು ಹೊರಗಡೆ
ಸಂಚಾರ ಮಾಡ್ಕಂಡ್ ಬಾ ಅಂತ್ಹೇಳಿ
ಮಾದೇವಾ ಕಾಲ್ನಡಿಗೆಯಲ್ಲಿ
ದೇವಸ್ಥಾನಕ್ಕೆ ಬಂದ್ರು
ಹೆಜ್ಜೆನು ಕಣದಲ್ಲಿ ನೋಡ್ತಾ ಇದ್ದಾರೆ
ಹನ್ನೆರಡು ಅಂಕಣ ಗರ್ಭಗುಡಿಯಲ್ಲಿ
ಬೇಡರಕಣ್ಣಪ್ಪನ ಕಾವಲಿಟ್ಟಿದ್ರು
ಬೇಡರಕಣ್ಣಪ್ಪ ಬೆಳಗಿನ ಜಾವ
ಬೇಟೆ ಮಾರ್ಗ ಹೋಗ್ತ ಇದ್ರು ಆನೆದಿಂಬದ ಮಲೆಯಲ್ಲಿ

ಅಯ್ಯ ಬೇಡರ ಕಣ್ಣಯ್ಯನ ಕೂಗ್ರವೆ
ಮೂಡಲ ಮಲೆಯ ಮಾದೇವ || ಕೋರಣ್ಯ ||

ಬಾರಪ್ಪ ನನ್ನ ಕಂದ ಬೇಡರಕಣ್ಣಯ್ಯ
ಎಲಿ ಹೋಗ್ತ ಇದ್ದಿಯಾ ಮಗನೆ ಅಂದರು
ಬೇಡರ ಕಣ್ಣಪ್ಪ ಆನೆತಲೆದಿಂಬದ ಮಲೆಯಲ್ಲಿ
ನಿಂತ್ ಕೊಂಡು ನೋಡಿದ್ರು
ಓಹೋ ನನ್ನಪ್ಪಾಜಿ ಮಾದೇಶ್ವರ
ಕೋಳ್ ಕೂಗೊ ಹೊತ್ನಲ್ಲಿ
ಅಂತರಗಂಗ ಹಳ್ಳಕ್ಕೆ ಶಿವಪೂಜೆಗೋಗಿದ್ರು
ಏನಾಗ್ತೋ ಗೊತ್ತಿಲ್ಲ
ನನ್ನನ್ನು ಬಂದು ದೇವಸ್ಥಾನದಲ್ಲಿ
ಕೂಗ್ತ ಇದ್ದಾರೆ ಅಂತ್ಹೇಳಿ
ಬೇಟೆ ಮಾರ್ಗವಾಗಿ ಆಮೇಲೆ ಹೋಗೋಣ ಅಂತ್ಹೇಳಿ
ಇಂತಿರುಗಿ ದಡಾ ದಡ್ನೆ ಓಡ್ಬತ್ತಾವ್ನೆ
ಓಡ್ ಬರಹೊತ್ಗೆ ಮಾದೇವ
ಪುಟ್ಟಲಿಂಗದಲ್ಲಿ ಮೌನ ಆಚರ್ಸಂಡು ಕುಂತವ್ರೆ
ಮರೆಯಾಗ್ ಕುಂತ್ಗಂಡ್ರು
ಬೇಡರಕಣ್ಣ ಓಡ್ಬಂದು
ದೇವಸ್ಥಾನನೆಲ್ಲಾ ಹುಡುಕ್ತಾನ
ಮಾದೇವ ಎಲ್ಲಿ ಮರೆಯಾದ ತಂದೆ
ಎಲ್ಲಿ ಅವ್ತುಕೊಂಡಿದ್ದೀಯಪ್ಪ ಅಂತ್ಹೇಳಿ
ದೇವಸ್ಥಾನನೆಲ್ಲಾ ಉಡಕ್ತಾನೆ ಎಲ್ಲೂ ಸಿಕ್ನಿಲ್ಲ
ಎಲ್ಲಿದ್ರು ಮಾತ್ನಾಡು ಗುರುವೆ
ನನಗ್ಮಾತ್ರ ಗೊತ್ತಿಲ್ಲ ಅಂತ್ಹೇಳಿ
ಮಾದೇಶ್ವರನ ಪುಟ್ಟ ಲಿಂಗದ ಮುಂದೆ
ನಿಂತ್ಗಂಡ ಎರಡುಮಂಡಿ ಊರ್ಕಂಡು
ಕರವೆತ್ತಿ ಕೈಮುಗ್ದು ಕೂಗ್ತಾ ಇದ್ದಾನೆ

ಮಾತಾಡು ಮಾತಾಡು ಲಿಂಗವೇ
ಮಾತಾಡು ಮಾದೇವ್ನ ಲಿಂಗವೇ
ಮಾತಾಡದಿದ್ದ ಮೇಲೆ ನಾ ತಾಳಲಾರೆ ಕಷ್ಟ
ಮಾತಾಡು ಮಾದೇವ್ನ ಲಿಂಗವೇ

ಎಲ್ಲಾ ದೇವರ ಪೂಜೆ ನಿಲ್ಲುತ ಬರುತೈತೆs
ನಿಮ್ಮ ಪೂಜೆ ಘನವಾಯ್ತು ಲಿಂಗವೇs

ಸ್ವಾಮಿ ನಿಮ್ಮ ಪೂಜೆ ಘನವಾಯ್ತು ಲಿಂಗವೇ
ನೀವು ಮಾತಾಡದಿದ್ದ ಮೇಲೆ ನಾ ತಾಳಲಾರೆನು
ಮಾತಾಡು ಮಾದೇವ್ನ ಲಿಂಗವೇ || ಮಾತಾಡು ||

ನಾನೊಂದು ಜ್ಯೋತಿಯ ನಂಬಿದೆ
ನನ್ನ ಮನೆಯಲ್ಲಿ ಆನಂದ ತುಂಬಿದೆ
ಪರಮಾತ್ಮ ಪಾರುಮ್ಡು ಪಾದವೆ
ನನ್ನ ಪರಿತಾಪವ ಕೂಗು ಕೇಳದ || ಮಾತಾಡು ||