ಅಯ್ಯೋ ಯಜಮಾನ ಯಜಮಾನರೇ
ಎಂಥಾ ಪಾಪದ ಮಾತಾಡ್ತಾ ಇದ್ದೀರಿ
ಇಂಥಾ ಪಾಪದ ಮಾತಾಡಿ ನನಗೆ ಪಾಪ ಹೊರಿಸ್ಬೇಡಿ ಯಜಮಾನ
ನನಗೆ ಭಾವನಾಗಿರತಕ್ಕಂಥವರು ತಂದೆ ಸಮಾನವಲ್ಲವೇ ಯಜಮಾನ
ನನಗೆ ಮೈದುನನಾಗಿರ್ತಕ್ಕಂಥವರು ಮಕ್ಕಳು ಸಮಾನವಲ್ಲವೆ ಗುರುವೆ

ಇಂಥಾ ಪಾಪದ ಮಾತನ್ನಾಡಬೇಡ
ಪಾದ ಹೊತ್ತೆನೊ ಯಜಮನಾs || ಕೋರಣ್ಯ ||

ಕೇಳೀ ಯಜಮಾನರೆ
ಭೂಮಿ ತಾಯಿ ಆಕಾಸವೇಣಿ ಸಾಕ್ಷಿಯಾಗಿ
ಪತಿಗೆ ಭಾಷೆ ಕೊಡುವುದಿಲ್ಲ ಯಜಮಾನ
ಭಾಷೆ ಕೊಟ್ಟಮೇಲೆ ನನ್ನ ಧರ್ಮ ಉಳಿಯೋದಿಲ್ಲ

ಅಯ್ಯಾ ಹೇಳುದು ಮಾತ ಕೇಳಯ್ಯ
ಹೆಜ್ಜೇನು ಮಲೆಗೆ ಹೋಗಯ್ಯs || ಕೋರಣ್ಯ ||

04_81_MM-KUH

ಛೆ! ಕೆಟ್ಟು ಮುಂಡೆ ಮಗಳೆ
ನನಗೆ ಮೊದಲು ಜವಾಬು ಕೊಡಬೇಡ
ನೀನು ಭಾಷೆ ಕೊಡದೇ ಇದ್ದ ಮೇಲೆ
ನಾನು ಹೆಜ್ಜೇನು ಮಲೆಗೆ ಹೋಗೋದಿಲ್ಲ
ಹೆಜ್ಜೇನು ಮಲೆಗೆ ಹೋಗದೇ ಇದಮೇಲೆ
ನಮ್ಮ ಏಳೇಳು ಹದಿನಾಲ್ಕು ದೊಡ್ಡಿಯವರೂ ಕುಲ ಬಿಟ್ಬುಡ್ತಾರೆ
ಬಹಿಷ್ಕಾರ ಹಾಕ್ತಾರೆ ಮಡದಿ
ನಾವಿಬ್ಬರೂ ಬಾಳೋದಕ್ಕೆ ಸಾಧ್ಯವಿಲ್ಲ
ನೀನು ಭಾಷೆ ಕೋಡುವಾಗಿಲ್ಲ
ನಾನು ಹೆಜ್ಜೇನು ಮಲೆಗೆ ಹೋಗುವಾಗಿಲ್ಲ
ಇಲ್ಲಿ ಕುಲದೊಂದಿಗೆ ಕೂಡಿ ಬಾಳುವ ಹಾಗಿಲ್ಲ
ನಾವು ಯಾವ ರೀತಿಯಾಗಿ ಇರಬೇಕು ಮಡದಿ
ಹಾಗಾದ ಪಕ್ಷದಲ್ಲಿ
ಯಾರೂ ಇಲ್ಲದ ಮೇಲೆ ಮೂರು ಕೂಡಿದ ಕೋಗು
ಮಸುಬಿನ ಬೆಟ್ಟದ ಕಣಿವೆ
ಬ್ಯಾಡಗಂಪಣ ದೊಡ್ಡೀವೊಳಗೆ

ಮಡದಿ ಒಂಟಿದೊಡ್ಡಿಯ ಕಟ್ಟೋಣ
ನನ್ನ ಒಂದ್ಹಿಗೆ ನಡೆಯೇ ಸಂಕೆಣ್ಣೆs || ಕೋರಣ್ಯ ||

ಶಿವಶಿವಾ ಭೂಮಿ ತಾಯಿ ಆಕಾಶವೇಣಿ
ಯಜಮಾನರೇ ಎಂಥಾ ಮತೇಳ್ತಾ ಇದ್ದೀರಿ
ಯಾರೂ ಇಲ್ಲದ ಮಲೆ ಮೂರು ಕೂಡಿದ ಕೋಗು
ಮುಸುಬಿನ ಬೆಟ್ಟ ಕಣಿವೆ ಬ್ಯಾಡಗಂಪಣ ದೊಡ್ಡೀವೊಳಗೆ
ಕೊಕ್ಕರ ಕೊನೆಬೋಳಿವೊಳಗೆ ಒಂಟಿದೊಡ್ಡಿ ಕಟ್ಟಿ
ವಾಸ ಮಾಡುವುದಕ್ಕೆ ನಾವಿಬ್ರು

ನಾನು ಹಾದೀಲಿ ನಿಂತಿದ್ದು ಬಂದವಳ
ಹಾಗೇ ನಾನು ಬಂದವಳ
ಒಬ್ಬಾಳೆ ಹುಟ್ಟಿ ಬೆಳೆದವಳ
ತಾಯಿ ತಂದೆ ಉಳ್ಳವಳು
ಬಂಧು ಬಳಗ ಉಳ್ಳವಳು
ಅಕ್ಕಾ ತಂಗೇರ ಉಳ್ಳವಳು
ಅಣ್ಣ ತಮ್ಮರ ಉಳ್ಳವಳು
ಸಂಗಡಗಾತಿರು ಉಳ್ಳವಳು
ದಾಯಂದಿಕಾರರ ಉಳ್ಳವಳು
ಇಂಥ ಸಂಗಡಗಾತಿರ ಮರೆಲಾರಿ
ನನ್ನ ಪ್ರಾಣವಾದರು ಬಿಡಲಾರಿs || ಕೋರಣ್ಯ ||

ಎಲವೋ ಕೆಟ್ಟು ಮುಂಡೇ ಮಗಳೆ ಸಂಕೆಣ್ಣೆ
ನೀನು ಮಾತ್ರ ಹಿಂಡು ಬಳಗದಲ್ಲಿರಬಹುದು
ನಾನು ಕೂಡ ಒಬ್ಬನೇ ಹುಟ್ಟಿ ಒಬ್ಬನೇ ಬೆಳೀಲಿಲ್ಲ
ಹೇಳ್ತಾ ಇದ್ದೀನಿ ಕೇಳು ಮಡದಿ
ನಾನು ಹಾಗೇನೆ ಕರಕೊಂಡು ಬರ್ನಿಲ್ಲ ನಿನ್ನನ್ನು
ಹನ್ನೆರಡು ಕಂಬದ ಸಾಕ್ಷಿಯಾಗಿ
ಲಗ್ನವಾಗಿದ್ದೀನಿ ಮಡದಿ
ಹೊಲೆಯರ ಹೊನ್ನಯ್ಯ ವಾದ್ಯ ಮಾಡ್ಲಿಲ್ಲ
ಮಡಿವಾಳ ಮಾಚಯ್ಯ ಬಂದು ಮೇಲುಕಟ್ಟ ಕಟ್ಟಿಲ್ವ

ಮಡದಿ ಕಾಸಿ ಪುರೋಯಿತ್ತು ಬರಲಿಲ್ಲವಾ
ಸಂಬಂಧಮಾಲೆ ಹಾಕಲಿಲ್ಲವಾ
ಕೆಲ್ಸಿ ಕುಳ್ಳಯ್ಯ ಬರಲಿಲ್ಲವಾ
ತೊಂಡಾಲು ಬಾಸಿಂಗ ತರಲಿಲ್ಲವಾ
ವಾಜಾರ ಮಲ್ಲಯ್ಯ ಬರಲಿಲ್ಲಲ್ವಾ
ಮಾಂಗಲ್ಯ ಸೂತ್ರ ತರಲಿಲ್ಲವಾ
ಐದುಜನ ಮುತ್ತೈದೀರು ಬರಲಿಲ್ಲವಾ
ಶಾಸ್ತ್ರಾ ನಮಗೆ ಮಾಡಲಿಲ್ಲವಾ
ಸೋಬಾನೆ ನಮಗೆ ಹೇಳಲಿಲ್ಲವಾ
ಮಡದಿ ತೊಂಡಾಲು ಬಾಸಿಂಗ ಕಟ್ಟೀ
ನಮಗೆ ದಂಡೆ ಕಟ್ಟಿ ಧಾರೆ ಎರೆಯಲಿಲ್ಲವಾs || ಕೋರಣ್ಯ ||

ನಮ್ಮ ಕುಲದೋರು ಜಾತಿಯವರು ಸೇರಿಕೊಂಡು
ಏಳೂರು ಗಡಿಕಾರ್ರೂವೆ
ಹನ್ನೆರಡು ಕಂಬದ ಸಾಕ್ಷಿಯಾಗಿ ಲಗ್ನವಾಗಿದ್ದೀನಿ ಮಡದಿ
ಯಾರೂ ಕೂಡ ಅಡ್ಡಿ ಮಾಡುವ ಹಾಗಿಲ್ಲ

ಮಡದಿ ಗಂಡನ ಹಿಂದೆ ಹೆಂಡತಿ ಹೋದರೆ
ಯಾರೇನಂದರು ಸಂಕೆಣ್ಣೆs || ಕೋರಣ್ಯ ||

ಅಯ್ಯೋ ಯಜಮಾನರೇ ಶಿವ ಶಿವಾ
ನಿಮ್ಮ ಪಾದ ಹೊತ್ತೇನು ದಮ್ಮಯ್ಯ
ನನ್ನ ಶಿರಸವನ್ನು ತುಂಡೇಡು ಮುಂಡೇಡು ಮಾಡಿ
ನನ್ನ ತಲೆ ಬುಂಡೆಯನ್ನು ಈ ದೊಡ್ಡಿ ಬಾಗಿಲಿಗೆ ಕಟ್ಟುದ್ರೂವೆ
ನಾನು ಮಾತ್ರ ಒಬ್ಬಳೇ ಬಿಟ್ಟು ಬರಲಾರೆ ಯಜಮನ ಅಂದಳು
ಎಲಾ ಕೆಟ್ಟು ಮುಂಡೆ ಮಗಳೇ
ಗಂಡನಿಗೆ ದುಂಡಾರೀತಿ ಮಾಡ್ತಾಯಿದ್ದೀ
ಇಂಥ ಹೆಣ್ಣು ಪ್ರಾಣಿಗೆ
ಕೊಡಬಾರ್ದ ಕೊಲೆ ಮಾಡಬಾರ್ಕ ಶಿಕ್ಷೆಮಾಡಿದರೂ ಗೋತ್ರುವಿಲ್ಲ

ಮಡದಿ ತಾಯಿ ತಂದೆ ಮರಿಯೆಣ್ಣೆ
ನಿನ್ನ ಅಣ್ಣಾ ತಮ್ಮನ ಮರಿಯೆಣ್ಣೆ
ಅಕ್ಕಾ ತಂಗೀರ ಮರೆಯೆಣ್ಣೆ
ಭಾವ ಮೈದಾರ ಮರೆಯೆಣ್ಣೆ
ಅತ್ತುಗು ನಾದ್ನೀರ ಮರಿಯೆಣ್ಣೆ
ಕುಲದೋರ್ನೆಲ್ಲ ಮರಿಯೆಣ್ಣೆ
ಸಂಗಾಡಗಾತೀರ ಮರಿಯೆಣ್ಣೆ
ಮಡದಿ ಹೇಳೂದು ಮಾತ ಕೇಳೆಣ್ಣೆ
ನಾನೊಪ್ಪಿದ ಮಲೆಗೆ ನಡಿಯೆಣ್ಣೆs || ಕೋರಣ್ಯ ||

ಮಲೆಗಳ ನೋಡಯ್ಯ
ಮಾದೇವ ಹೊನ್ನೆ ಗಿಡಗಳ ನೋಡಾಯ್ಯಾs
ಮಲೆಯಲ್ಲಿರುವ ಮಾದೇವ ನಿಮ್ಮ
ಐಭೋಗ ನೋಡಯ್ಯ

ಶಿವಶಿವಾ ಪತಿವ್ರತೆಯಾದ ಸಂಕಮ್ಮ
ಭೂಮಿತಾಯಿ ಆಕಾಶವೇಣಿ ಸತ್ಯಮಾಡಿದೆ ಯಜಮಾನ
ಇನ್ನಾರು ಸತ್ಯ ಮಾಡಬೇಕು
ನನ್ನ ತಾಯಿ ತಂದೆಗಳ ಪಾದಸಾಕ್ಷಿಯಾಗಿ ಭಾಷೆಕೊಡುವುದಿಲ್ಲ
ನಿಮ್ಮ ಕೂಡ ನಾನು ಬರುವುಲಿಲ್ಲ ಯಜಮನ ಅಂದಳು

ಎಲ್ಲಾ ಕೆಟ್ಟು ಮುಂಡೇ ಮಗಳೇ
ಇಂಥಾ ಹೆಣ್ಣು ಪ್ರಾಣಿಗೆ
ಕೊಡಬಾರ್ದ ಕೊಲೆ ಮಾಡಬಾರ್ದ ಶಿಕ್ಷೆ ಮಾಡಬೇಕು ಅಂತ್ಹೇಳಿ
ನೀಲೇಗೌಡನಿಗೆ ಆವಾಗಲೀಗ ಕೋಪ ಬಂದ್ಬುಡ್ತು

ಒಂದ ಮಾಟದ ಚೀಲ ತಗದವರೆ
ಮದ್ದು ಮಾಯಾ ಮಾಡವರೆ
ಸದ್ದು ವಿದ್ಯ ಜಪಿಸವರೆ
ಮದ್ದು ಮಾಯಾ ಮಾಡವರೆ
ಬೀಳಿಮೆ ಬೂದಿ ತಗದವರೆ
ಮಂಡೆಯ ಮ್ಯಾಲೆ ಪಿಡುದವರೆ
ಚೀಟಿ ಬರೆದು ಮಡಗವರೆ
ಶಾಸ್ತ್ರದ ನೀರ ಬಿಟ್ಟವರೆ
ಮಲೆಲ್ಯ ಸ್ವಾಲುಗ ನೀಲಯ್ಯ
ಒಂದು ಮಂಕು ಮರಳ ಮಾಡವನೆ
ಮಲೆಯ ಸ್ವಾಲುಗ ನೀಲಯ್ಯಾ s || ಕೋರಣ್ಯ ||

ಚಂಡಿಕಟ್ಟಿ ಚಾಮುಂಡಿ ಬಾ
ಚಾಮರಾಯರ ಮಗಳೇ ಬಾs
ಗಂಡು ಪಿರಂಗಿ ನೆರಳಲ್ಲಿ ಮಾದೇವ
ದಂಡಿಗೆ ಪಯಣಾವೋ

ಮಲೇ ಸ್ವಾಲುಗ ನೀಲೇಗೌಡ
ಕಾಡು ಕಟ್ಟೋನು ಮೇಘ ಕಟ್ಟೋನು
ಅಂತರಕಟ್ಟ ಕಟ್ಟೋನು
ಆ ಮಡದಿಯಾದ ಸಂಕಮ್ಮನಿಗೆ
ತನ್ನ ಕಂಕ್ಳಲ್ಲಿದ್ದಂತ ಮ್ಯಾಣಗಂಪಣದ ಚೀಲ ತಕ್ಕಂಡ
ಮದ್ದು ಮಾಯ ಸದ್ದು ವಿದ್ಯ ಜಪದ ಮಂತ್ರ ಮಾಡಿದ
ಬೀಳಿಮೆ ಬೂದಿಯ ಅವ್ಳ ಮಂಡೇಮ್ಯಾಲೆ ಮಡ್ಗದ
ನೀರು ಮಂತ್ರಿಸಿ ದಾಟಿಸ್ಬುಟ್ಟು
ಚೀಟಿ ಬರೆದು ಮುಂದೆ ಮಡ್ಗದ
ಸಂಕಮ್ಮನಿಗೆ ಮಂಕುಬಡ್ದಂತೆ ದಾನವಾಯ್ತು
ಉಸುರು ಪಸರು ಒಂದೂ ಇಲ್ಲ
ಧರೆಯ ಮ್ಯಾಲೆ ಮರ ನೆಟ್ಟರೆ ಯಾವ ರೀತಿಯಾಗಿ ನಿಂತಿದೆ
ಅದೇ ರೀತಿಯಾಗಿ ನಿಂತ್ಕಂಡವಳು ಹೆಣ್ಣು ಮಗಳು
ಇದೇ ಒಳ್ಳೇ ಸಮಯವಾಯ್ತು
ನಾನು ಬಂಧು ಬಳಗ ಬಿಟ್ಟು ಬರಲಾರಿ ಅಂತ ಇದ್ದಳು
ಕೆಟ್ಟು ಮುಂಡೇ ಮಗಳು
ಯಾರು ಇಲ್ಲದ ಮಲೆಗೆ ಎಳಕೊಂಡ್ಹೋಗಿ
ಇವ್ಳಿಗೆ ಕೊಡಬಾರ್ದ ಕೊಲೆಕೊಟ್ಟು
ನಾನು ಹೆಜ್ಜೇನು ಮಲೆಗೆ ಹೋಗಬೇಕಂತ್ಹೇಳಿ
ತನಗಾಗುವಂಥ ಸಾಮಾನು ಜೋಡಿಸ್ತಾ ಇದ್ದಾನೆ ನೀಲೇಗೌಡ
ಏನು? ಹೆಜ್ಜೇನು ಮಲೆಗೆ ಬೇಕಾದ ಸಾಮಾನು
ಒಂದ ಚಕಳದ ಚಡ್ಡಿ ಇಕ್ಕವನೆ
ಹನುಮಂತ ಪರಿವಾಳ ಧರಿಸವನೆ
ಯಾರನ್ನಾಮ ಹಣೆಯಲ್ಲಿ
ದಾರಾದ ಟೋಪಿ ತಲೆಯಲ್ಲಿ
ಭಾರಿ ಬಂದೂಕ ತಗದವನೆ
ಹೆಗಲ ಮ್ಯಾಲೆ ಮಡಗವನೆ
ಹೆಜ್ಜೇನು ಗಡಿಗೆ ತಗದವನೆ
ಕಿರುಜೇನುಗಡಿಗೆ |ತಗದವನೆ
ಗ್ವಾಟೆವೊಳಗೆ ಮಡಗವನೆ
ಬೀಸು ಮಚ್ಚ ತಗದವನೆ
ಬಲಗೈಲಾದರೆ ಹಿಡುದವನೆ
ಚೆಲುಕಾದ ನಾಯ ಕರೆದವನೆ
ಮಲೆಯ ಸೋಲುಗ ನೀಲಯ್ಯ
ನರಮುರಿ ಜೋಡ ಮೆಟ್ಟವನೆ
ಉದ್ದುಗಂಬಳಿ ತಗುದವನೆ
ಹೆಗಲ ಮ್ಯಾಲೆ ಮಡಗವನೆ
ಮಲೆಯ ಸೋಲುಗ ನೀಲಯ್ಯ
ಅವಳ ಮಾರುದ್ಧ ಮಂಡೆ ಹಿಡುದವನೆ
ಎಳ್ಕೊಂಡ್ ಎಳ್ಕೊಂಡ್ ಹೊಯ್ತಾವನೇs || ಕೋರಣ್ಯ ||

ಆಲಂಬಾಡಿ ಮಾದೇವ
ಅರಗನ ಬಿಟ್ಟು ನೋಡಯ್ಯ
ಹಾಲರವಿ ಮ್ಯಾಲೆ ಹೂವಿನದಂಡೆ
ವಾಲಾಡಿ ಬಂದೊ

ಯಾರೂ ಇಲ್ಲದ ಮಲೆಗೆ ಎಳ್ಕೊಂಡು ಹೊಯ್ತಾ ಇದ್ದಾನೆ ನೀಲೇಗೌಡ
ಮುಳ್ಳು ತುಳಿದು ಮೂರಡವಿ ನಡೆದ
ಕಲ್ಲು ತುಳಿದು ಆರಡವಿ ನಡೆದ
ಅಟ್ಟ ಬೆಟ್ಟ ಮೂರಡವಿ ನಡೆದ
ಆರು ಮೂರು ಒಂಭತ್ತು ಅಡವಿ ಎಳೆದೊ ಎಳೆದೊ
ನೀಲೇಗೌಡನಿಗೆ ರಟ್ಟೆ ನೋವು ಬಂದ್ಬುಡ್ತು
ಆವಾಗ ಮಲೆಸ್ವಾಲುಗ ನೀಲೇಗೌಡ

ಅಯ್ಯಾ ಕೊಕ್ಕಾರ ಕೊನಬೋಳಿ ಬೆಟ್ಟದ ಮಾಳಕ್ಕೆ
ದೃಷ್ಟಿಮಡಗವನೆ ನೀಲಯ್ಯಾs || ಕೋರಣ್ಯ ||

ಕೊಕ್ಕರ ಕೊನಬೋಳಿ ಬೆಟ್ಟದ ಮಾಳದಲ್ಲಿ ಹೋಗಿ
ಹುಟ್ಟರೆ ಕಲ್ಲಮ್ಯಾಲೆ ಸಂಕಮ್ಮನ ನಿಲ್ಲಿಸ್ಬುಟ್ಟು

ಈವಾಗ ನನ್ನ ಮಡದೀಗೆ ಎರಡ ಮಾತ ಕೇಳ್ತೀನಿ
ಈವಾಗ ನನ್ನ ಒಂದು ಕೂಡ ಬರ್ತಾ ಇದ್ದಾಳೊ
ಇಲ್ಲ ನನ್ನ ಮಾತಿಗೆ ಜವಾಬು ಕೊಡ್ತಳೊ ಅಂತ್ಹೇಳಿ
ಹುಟ್ಟರೆ ಕಲ್ಲಮ್ಯಾಲೆ ನಿಲ್ಸಿ
ಮದ್ದು ವಿದ್ಯೆ ಸದ್ದುಮಾಯ
ಜಪದ ಮಂತ್ರಾವೆಲ್ಲ ಮೋಡಿ ತಗುದ್ಬುಟ್ಟು
ಸಂಕಮ್ಮ ಉಸ್ಸೋ ಅಂತ್ಹೇಳಿ ಹುಟ್ಟರೆ ಕಲ್ಲಮ್ಯಾಲೆ ಕೂತ್ಕಂಡಳು
ನೋಡಲಾ ಮಡದಿ ಸಂಕೆಣ್ಣೆ
ನನ್ನ ತಾಯಿ ತಂದೆ ಬಂಧು ಬಳಗ ಬಿಟ್ಟು ಬರಲಾರಿ ಅಂತಾ ಇದ್ದೆ
ಈವಾಗ ನೋಡು ಮಡದಿ ಅಂದ
ಸಂಕಮ್ಮ ನಾಲ್ಕಾರು ದಿಕ್ಕು ನೋಡವಳು
ಕಾ ಅನ್ನಾಕೆ ಕಾಗಿಲ್ಲ ಗೂ ಅನ್ನಾಕೆ ಗೂಗಿಲ್ಲ
ಹಕ್ಕೀ ಗಲಗಿಲ್ಲ ಪಕ್ಷಿ ಗಲುಗಿಲ್ಲ
ಅಂಧಕಾರುಣ್ಯ ನಿಂಧಕಾರ ಪಟ್ಟಣ
ಸೂರ್ಯ ಚಂದ್ರಾದಿಗಳ ಬೆಳಕಿಲ್ಲ
ಅಂಥಾ ಅಡವಾರ
ನಾಲ್ಕು ದಿಕ್ಕು ನೋಡ್ಬುಟ್ಟು
ಅಯ್ಯೋ ಯಜಮಾನ

ಇಂಥ ಕಾಡು ಸ್ವಾಲುಗನ ಕೈಯಾ ಹಿಡಿದು
ಕೆಟ್ಟೇನಲ್ಲ ಧರೆಯಲ್ಲಿ
ಕಾಡು ಸ್ವಾಲುಗಾನ ಕೈಯ ಹಿಡಿದು
ಕಾಡಲ್ಲಿ ಪ್ರಾಣ ಬಿಡುವೇನೂs || ಕೋರಣ್ಯ ||

ಛೆ ಕೆಟ್ಟು ಮುಂಡೆ ಮಗಳೇ
ನಾನು ಕಾಡು ಸ್ವಾಲುಗನಾದಿ
ನನ್ನ ಕೈಹಿಡಿದು ಕಾಡ್ನಲ್ಲಿ ಪ್ರಾಣ ಬಿಡಬೇಕೆಂದು
ದುಃಖ ಮಾಡ್ತಾ ಇದ್ದೀಯೆ
ಎಲಾ ಕೆಟ್ಟು ಮುಂಡೆ ಮಗಳೇ
ನನ್ನ ತಂದೆ ತಾಯಿ ಬಂಧುಬಳಗ
ನನ್ನ ದಾಯದಿಕಾರರೆಲ್ಲ ನೋಡಿದ್ರು
ಏಳೇಳು ಹದಿನಾಲ್ಕು ದೊಡ್ಡಿಯಲ್ಲಿ
ಎಲ್ಲೂ ಹೆಣ್ಣ ಒಪ್ನಿಲ್ಲ
ನಾನು ಏಳೇಳು ಹದಿನಾಲ್ಕು ಲೋಕವನ್ನ ತಿರುಗಿ
ಅಂದವಾದ ಮಡದಿ ಚೆಂದವಾದ ಮಡದಿ ಅಂತ್ಹೇಳಿ
ನಿನ್ನ ಲಗ್ನವಾದ ಸಂಕೆಣ್ಣೆ
ನನ್ನ ರೂಪಕ್ಕೆ ತಕ್ಕಂಥ ಹೆಂಡರು ಅಂತ್ಹೇಳಿ
ಲಗ್ನವಾಗಿ ಕೂಡ ಆರುಮೂರುಕಾಲ ನಿನ್ನ ಕಟ್ಕಂಡು
ನನ್ನ ಅಕ್ಕ ತಂಗೀರು ಅಣ್ಣ ತಮ್ವೀರ ಕೂಡ ಬಾಲನಿಲ್ಲ
ಬೇರೆಮನೆ ಮಾಡ್ಕೊಂಡೆ ನಿನ್ನ ಪ್ರಾಣಕ್ಕೋಸ್ಕರವಾಗಿ
ಕ್ಯಾಣದ ಮಾತಿಗೋಸ್ಕರವಾಗಿ
ಬೇರೆ ಮನೆ ಮಾಡ್ಕಂಡು ದಾಯಂದಿಕಾರ್ರ ದೊಡ್ಡೀವೊಳಗೆ
ನಾಲ್ಕಾರು ಕಾಲ ಬಾಳ್ನಿಲ್ಲ ನಿನ್ನ ಪ್ರಾಣಕ್ಕೋಸ್ಕರವಾಗಿ
ಕುಲ ಬಿಡಬೇಕಾಗುತ್ತೇ ಅಂತ್ಹೇಳಿ

ನಿನ್ನ ಧಟ್ಟಧರಣೆ ಕಯ್ಯ ಹಿಡಿದು
ಕೆಟ್ಟೇನಲ್ಲ ಧರೆಯಲ್ಲೀs || ಕೋರಣ್ಯ ||

ಅಯ್ಯೋ ಯಜಮಾನ ನಿನ್ನ ಪಾದ ಹೊತ್ತೇನು ದಮ್ಮಯ್ಯ
ದಾಯಂದಕಾರರ ದೊಡ್ಡೀವೊಳುಗೆ
ಭಾವ ಮೈದ ಅತ್ತೆ ಮಕ್ಕಳಿದ್ದಾರೆ ಅಂತ್ಹೇಳಿ
ಮನಸಿನಲ್ಲಿ ಕಳವಳ ಮಾಡ್ತಾ ಇದ್ರಿ
ಈ ಅಂಧಕಾರ ದೊಡ್ಡೀವೊಳುಗೆ ಯಾರೂ ಇಲ್ಲ
ಕಾ ಅನ್ನಾಕೆ ಕಾಗಿಲ್ಲ ಗೂ ಅನ್ನಾಕೆ ಗೂಗಿಲ್ಲ
ಯಜಮಾನರೇ
ನಿನ್ನ ಕುಲೋಸ್ತರೆಲ್ಲ ಹೆಜ್ಜೇನು ಮಲೆಗೆ ಹೋಗಿದ್ದಾರೆ
ಈವತ್ತಾದರೂ ಹೋಗಿ ನೂವು ಕುಲಾ ಸೇರ್ಕಳ್ಳಿ ಯಜಮಾನ
ನೀವು ಬರೂವರೆಗೂವೆ
ಹಣ್ಣು ಹಂಪಲ ಗೆಡ್ಡೆ ಗೆಣಸು
ಬಿದಿರಕ್ಕಿ ಕೂಡಿಸಿಕೊಂಡು ಬಂದು ಗಂಜಿ ಕಾಯಿಸಿ
ನನ್ನ ಹೊಟ್ಟೆಗೆ ಆಧಾರ ಮಾಡ್ಕಂಡು
ಈ ಮರದ ನೆಳ್ಳಲ್ಲಿ ಕಾಲಾ ಮಾಡ್ತೀನಿ

ಅಪ್ಪಾ ಹೇಳುದು ಮಾತಾ ಕೇಳಯ್ಯ
ಹೆಜ್ಜೇನು ಮಲೆಗೆ ಹೋಗಯ್ಯಾs || ಕೋರಣ್ಯ ||

ಹೊನ್ನಳ್ಳಿಯ ಹೊಸ ಬರಗಾನ ಮೇಲೆ
ಹೊಳೆಯುತ ಬಂದಾರು ಮಾದೇವಾs
ಹೋದ ಬಂಡಿ ಕೈಲಿ ಮುರ್ದ
ಬಂಡಳ್ನಿಯಾ ಬಸವ
ಎಲಾ ಕೆಟ್ಟ ಮುಂಡೇ ಮಗಳೇ
ಈ ಅಡವಿ ಅರಣ್ಯದಲ್ಲಿ ಬಂದರೂ ಕೂಡ
ಗಂಡನ ಮಾತಿಗೆ ಜವಾಬು ಕೊಡ್ತಾ ಇದ್ದೀಯೆ
ಗಂಡನಿಗೆ ದುಂಡಾರೀತಿ ಮಾಡ್ತೀಯೆ
ಪತಿಗೆ ಪ್ರತಿ ಉತ್ತರ ಕೊಡ್ತಾಯಿದ್ದೀಯೆ
ನಿನಗೆ ತಕ್ಕಂಥ ಮನೆ ಮಾಡಿ
ನಿನಗೇನು ಕೊಲೆ ಕೊಡ್ಬೇಕೊ ಕೊಟ್ಬುಟ್ಟು
ನಾನು ಹೆಜ್ಜೇನು ಮಲೆಗೋಯ್ತಿನಿ ಅಂತ್ಹೇಳಿ
ಆ ಕೊಕ್ಕರ ಕೊನಬೋಳಿ ಬೆಟ್ಟದ ಮಾಳದಲ್ಲಿ ನೀಲೇಗೌಡ

ಒಂದ ಆಲದ ಮರವಾ ತರದವರೆ
ಜಾಲದ ಮರವಾ ತರದವರೆ
ಯರ್ಕವೆ ಕುರ್ಕವೆ ನೆಟ್ಟವರೆ
ಮೂರು ಮೊಳದ ಗಳುವ ತಂದವರೆ
ಕಾರಾಚಿನಾರ ಎಡದವರ
ಭೀಮು ಕಟ್ಟ ಕಟ್ಟವರೆ
ಒಡಕೆಯ ಹುಲ್ಲ ಕೂದವರೆ
ಹೊದಿಕೇನಾದರೆ ಮಾಡವರೆ
ಬಾಳೆಯಹುಲ್ಲ ತಂದವರೆ
ಬಾಳಿಗೆ ಮನೆಯ ಮಾಡವರೆ
ಅಲ್ಲಿ ತೆಕ್ಕಲಾ ತರಿದು ಒಕ್ಕಲ ಪಡೆದು
ಒಂಟು ದೊಡ್ಡಿ ಕಟ್ಟವರೇs || ಕೋರಣ್ಯ ||

ಕೊಕ್ಕರ ಕೊನಬೋಳಿ ಬೆಟ್ಟದ ಮಾಳದಲ್ಲಿ
ಒಂದು ಸೊಪ್ಪುನ ಗುಡ್ಲನ್ನೇ ಮಾಡಿದ ನೀಲೇಗೌಡ
ಸಂಕಮ್ಮನಿಗೆ ತಕ್ಕಂತ ಮನೆ ಮಾಡಿದ
ನೋಡು ಮಡದಿ ಸಂಕೆಣ್ಣೆ
ನಾನು ಮರದ ನೆರಳಲ್ಲಿ ಕಾಲಮಾಡ್ತೀನಂತೇಳಿದೆ
ನಿನ್ನಗೆ ತಕ್ಕಂಥ ಮನೆ ಮಾಡಿದ್ದೀನಿ
ಈ ಮನೆಯಲ್ಲಿ ನಿನ್ನ ಬಿಟ್ಟು ಹೋಗ್ತೀನಿ ಮಡದಿ
ಈ ಹೊತ್ತು ನಾನು ಹೋಗಿ ಕುಲ ಸೇರಬೇಕು ವಜ್ರಗಿರಿ ಮಲೆಗೆ

ಈವಾಗ ಮಡದಿ ನನಗೆ ಬಲಗೈಯ ಭಾಷೆ ಮಾಡೆಣ್ಣೆ
ಹೆಜ್ಜೇನು ಮಲೆಗೆ ಕಳುಗೆಣ್ಣೆs || ಕೋರಣ್ಯ ||

ಅಯ್ಯೋ ಶಿವ ಶಿವ ಯಜಮಾನರೇ
ಇಲ್ಲೂ ಕೂಡ ಭಾಷೆ ಕೇಳ್ತಾ ಇದ್ದೀರಲ್ಲ
ದಾಯಂದಕಾರರ ದೊಡ್ಡೀವೊಳಗೆ ಎಲ್ಲಾ ಇದ್ದಾರು
ಭಾವ್ದೀರು ಮೈದ್ದೀರು ಅತ್ತೆ ಮಕ್ಕಳವರೇ
ಅಂತ್ಹೇಳಿ ಭಾಷೆ ಕೇಳ್ತಾಯಿದ್ರಿ
ಈ ಅಡವಿ ಅರಣ್ಯದಲ್ಲಿ ಕಾ ಅನ್ನಾಕೆ ಕಾಗಿಲ್ಲ ಗೂ ಅನ್ನಾಕೆ ಗೂಗಿಲ್ಲ
ಹಕ್ಕೀ ಗಲುಗಿಲ್ಲ ಪಕ್ಷಿ ಗಲುಗಿಲ್ಲ
ನರ ಮನಸರ ಸದ್ದು ಮೊದಲಿಲ್ಲ
ಇಲ್ಲಿ ಯಾತಕ್ಕೆ ಭಾಷೆ ಕೇಳ್ತೀರಿ ಯಜಮಾನ ಅಂದಳು
ಹಾಗೆನ್ನಬೇಡ ಮಡದಿ
ನೀನೇನಾದರೂ ಬಿದರಕ್ಕಿ ತಕೊಂಡು ಬಂದು
ಗಂಜೀ ಕಾಯ್ಸುವುದಕೆ ಒಲೆ ಅಂಟಿಸ್ದರೆ
ಈ ಅಡವಿ ಅರಣ್ಯದಲ್ಲಿ
ಕದುರು ಕಡ್ಡಿಗಾತ್ರ ಹೊಗೆ ಕಡೆದರೆ
ಬೆಟ್ಟವಾದ ಬೆಟ್ಟವೆಲ್ಲ ಕವೀತದೆ
ಆವಾಗ ವ್ಯಾಪಾರಗಾರ್ರು‍ಕಣ್ಣಿಡ್ತಾರೆ
ಯಾವುದೊ ಒಂದು ದೊಡ್ಡಿಯಿದೆ
ಯಾವುದೋ ಒಂದು ಪೋಡಿದೆ
ಯಾವುದೋ ಒಂದು ಸಣ್ಣ ಊರಿದೆ
ಅಲ್ಲಿ ತಾಯಿ ಕೈಕೆಳಗಿನ ಮಕ್ಕಳಿದ್ದಾರೆ
ಅತ್ತೆ ಕೈಕೆಳಗೆ ಸೊಸೆಯರಿದ್ದಾರೆ
ವ್ಯಾಪಾರ ಚೆನ್ನಗಾಗುತ್ತೇ ಅಂತ್ಹೇಳಿ
ಹೊತ್ತಲ್ಲದ ಹೊತ್ನಲ್ಲಿ

ಬಡಗಾಲ ನಾಡಿಂದೊಬ್ಬಾನು
ಬಳಗಾರ ಸೆಟ್ಟಿ ಬರುವಾನು
ಬಳೆ ಎಂದು ಸಾರುವನು
ಬಳೆಗಾರ ಸೆಟ್ಟಿ ನೋಡೂವೆ
ಕೈಸನ್ನೆ ಮಾಡಿ ಕರೆಯೂವೆ
ಮಡದಿ ಕೈಸನ್ನೆ ಮಾಡಿ ಕರೆಯೂವೆ
ಬಳೆಗಾರ ಸೆಟ್ಟಿ ಬರುವಾನೂs || ಕೋರಣ್ಯ||