ಅಯ್ಯೊ ನನ್ನಪ್ಪ ಮಾಯ್ಕಾರ ಗಂಡ
ನನ್ನ ಹೊಟ್ಟೆಪಾಡಿಗೋಸ್ಕರವಾಗಿ
ಬೇಟೆಮಾರ್ಗ ಹೋಗ್ತಾ ಇದ್ದೆ ಗುರುವೇ
ನನ್ನನ್ನು ಕೂಗುಬಿಟ್ಟು
ಎಲ್ಲಿ ಮರೆಯಾಗಿದ್ದಿ ಮಾತನಾಡಪ್ಪ ಅಂತ್ಹೇಳಿ
ಬೇಡರ ಕಣ್ಣಪ್ಪ ಎರಡು ಮಂಡಿ ಊರ್ಕಂಡು

ಅಯ್ಯ ಕರವೆತ್ತಿ ಕೈಯಾಮುಗದವ್ನೆ
ಶಿರವೆತ್ತಿ ಶರಣ ಮಾಡವ್ರೆ
ಮಲ್ಲಯ್ಯ ಶರಣು
ಬೆಟ್ಟದ ಮಾದಪ್ಪ ಶರಣ
ವೀರಯ್ಯ ಶರಣು ವೀರಭದ್ರಯ್ಯ ಶರಣು

ಮಹದೇವಾ ಬೇಡರ ಕಣ್ಣಪ್ಪನ
ದುಕ್ಕವನ್ನು ನೋಡ್ ಲಾರ್ದೆ
ಇಂತ ಭಕ್ತರು ನನಗೆ ಸಿಕ್ಕುವುದಿಲ್ಲ
ತಿರುವಣ್ಣಮಲೆಯೊಳಗೆ
ನನ್ನ ರೂಪನ್ನು ನೋಡಿ
ನನ್ನ ಕಷ್ಟವನ್ನು ನೋಡಿ
ಎರಡು ಕಣ್ಣು ಕಿತ್ತುಕೊಟ್ಟಿದ್ದಂಥ ಭಕ್ತ ಈತ
ಇವನಿಗೆ ನಾನು ನನ್ನ ನಿಜರೂಪ ತೋರ್ಬೇಕಂತೇಳಿ
ಆ ಪುಟ್ಟಲಿಂಗದಲ್ಲಿ ಪ್ರತ್ಯಕ್ಷವಾದರು ಮಾದೇವ

ಎಳಗಾವಿ ಎಳೆದೊದ್ದು
ಸುಳಿಗಾಯಿ ಮುಸುಕಟ್ಕೊಂಡು
ಒಕ್ಕಳಗಂಟ ಹುಲಿಚರ್ಮ
ಅಷ್ಟಪಾದಕ್ಕೆ ಅಮೀರ್ ಗೆಜ್ಜೆ
ಕೊರಳತುಂಬಾ ರುದ್ರಾಕ್ಷಿ ಧರಿಸಿಗಂಡು
ಕಂದಾ ಹೆದರಬೇಡ ಕಣ್ಣಯ್ಯ
ಬೆದರಬೇಡ ಕಣ್ಣಯ್ಯ
ಬೇಡರ ಕಣ್ಣಯ್ಯ ಘನಶರಣ
ಮಗನೇ ನಾನಿದ್ದ ಮೇಲೆ
ಬಯವೇಕಪ್ಪ ಬೇಡರ ಕಣ್ಣಯ್ಯ ಘನಶರಣಾ ಕಣ್ಣಯ್ಯ

ಅಂಜಬೇಡ ಬೆಚ್ಚಬೇಡ ಕಂದ
ಧೈರ್ಯವಾಗಿರು ಮಗನೆ ಅಂದ್ರು
ಮಾದಪ್ಪ ನಿನ್ನ ಮಹಿಮೆ ಕಂಡವರಿಲ್ಲ
ನಿನ್ನ ಮಾಯಾ ತಿಳಿದವರಿಲ್ಲ ಗುರುವೆ
ಈ ಬೇಡಗಂಪಣ ಮಲೆಯೊಳಗೆ
ಇಷ್ಟ ಮಹಿಮ ತೋರ್ದ ಇದ್ದೀಯಲ್ಲ ಗುರುವೇ
ನನ್ನ ಹೊಟ್ಟೆಪಾಡಿಗೆ ಬೇಟೆ ಮಾರ್ಗ ಹೋಗ್ತಾ ಇದ್ದಿ
ಯಾತಗೋಸ್ಕರ ಕೂಗ್ದೆ ಗುರುವೆ ನನ್ನ ಹಿಂದಕ್ಕೆ ಅಂದ್ರು
ಕಂದ ಬೇಡರಕಣ್ಣಪ್ಪ ನಾನು ಹುಟ್ಟಿ ಬಂದ ಕಾಲಕ್ಕಿಲ್ಲ
ಕುಂತೂರು ಮಠಕ್ಕೆ ಬಂದ ಕಾಲಕ್ಕಿಲ್ಲ
ಸುತ್ತೂರು ಮಠ ಸೇರಿದ ಕಾಲಕ್ಕಿಲ್ಲ
ಕಂದಾ ಅರ್ಧನಳ್ಳಿ ಮಠದಲ್ಲಿ
ನಾಲ್ಕಾರು ಕಾಲ ನಾನು ಪೀಠವಾಗಿ ಅಧಕ್ಷನಾಗಿ
ಗುರುಪೀಠದಲ್ಲಿದ್ದ ಕಾಲಕ್ಕಿಲ್ಲ ಕಂದ
ಈ ಏಕಾಂಗಿ ಏಳುಮಲೆಗೆ ಬಂದು
ಸೀಗೆ ಸಿರುಗಂಧ ಹೆಮ್ಮತ್ತಿವಾಡೆಬಾಕ್ಲಿನಾಗೆ
ತಪಸ್ಸು ಮಾಡಿದ ಕಾಲಕ್ಕಿಲ್ವಲ್ಲ ಕಂದ ಅಂದ್ರು
ಏನಾಯ್ತು ಗುರುವೆ ಅಂದ್ರು
ಏನಾಗೊದು ಕಂದ
ನಾನು ನೆನ್ನೇರಾತ್ರಿ
ಅಂತರಗಂಗ ಆಲಳ್ಳದಲ್ಲಿ ಹೋಗಿ
ಶಿವಪೂಜೆಮಾಡ್ತ ಇದ್ದಿ
ಸ್ನಾನ ಮಡಿಯನ್ನು ಮಾಡಿ
ಯಾವ್ದು ಹಕ್ಕಿ ಕಣ್ಣೀರೋ
ಪಕ್ಷಿ ಕಣ್ಣೀರೋ
ಇಲ್ಲ ನರಮನ್ಸುರು
ಶಿವಸರಣಿಯರಾಗಿರ್ತಕ್ಕಂಥವರು
ಇಲ್ಲ ಪರಿವ್ರತೆ ಹೆಣ್ಣುಮಗಳ ಕಣ್ಣೀರೊ
ನನ್ನ ಏಳುಮಲೆ ಕೈಲಾಸಕ್ಕೆ
ಹುಣಿಸೇ ತರಗಂಡ
ಊದೊಪ್ಪಂದವಾಗಿದೆ ಕಂದ
ಇದನ್ನು ವಿಚಾರ್ಸಬೇಕು
ಜಾಗ್ರತಿಯಾಗಿ ವಿಚಾರಣೆ ಮಾಡಿ
ಅವರ ಕಷ್ಟ ಪರಿಹರಿಸ್ತಿದ್ದ ಮೇಲೆ
ಮೇಗದಲ್ಲಿ ಮಳೆಯಿಲ್ಲ
ಭೂಮಿಯಲ್ಲಿ ಮಳೆಯಿಲ್ಲ
ಅಗ್ಗಮ್ಮ ಅತ್ತೋದಿಲ್ಲ
ಕಾಮ್ಜೇನು ಕರೆಯೋದಿಲ್ಲ
ಜ್ಯೋತಮ್ಮ ಉರಿಯೋದಿಲ್ಲ
ಅಸುಮಕ್ಕಳಿಗಾಗಲಿ
ಶಿಸುಬಾಲರಿಗಾಗಲಿ ಊಟವಿಲ್ಲ
ನನ್ನಂತ ಜಂಗುಮರಿಗೆ
ಶಿವಪ್ರಾರ್ಥ್ನೆ ಶಿವಪೂಜೆಯಿಲ್ಲ ಕಂದ
ಹೋಗಿ ಬನ್ನಿ ಗುರುವೆ ಅಂದ
ಯಾರು? ಬೇಡರ ಕಣ್ಣಪ್ಪ
ಕಂದ ನಡ್ಕಂಡು ಹೋಗ್ ಬೇಕಂದ್ರೆ
ಬೆಜ್ಜಲಟ್ಟಿ ಸಾಲ್ಮೆಳೆ ಬಳಗ
ಕಾರ್ಮೂಳ್ಳೂದು ನುಜ್ಜಗಲ್ ನೆಸ್ಗಂಡವೇ
ನನ್ನ ಪುಟ್ಟಪಾದ ನೊಂದೋಗುತ್ತೆ ಅಂದ್ರು
ಆಗ ನನ್ನ ಎಗಲಮೇಲ ಕೂತ್ಗಪ್ಪ
ಹೊತ್ಕೊಂಡೊಯ್ತಿನಿ ಅಂತರೆ ಬೇಡರಕಣ್ಣಪ್ಪ
ಬ್ಯಾಡ ಕಂದ
ಒಂದ್ ಸಣ್ ಮಾತೇಳ್ತಿನಿ ಕೇಳು ಅಂದ್ರು
ಹೇಳಿಕೊಡಿ ನನ್ನಪ್ಪ ಅಂದ

ನನಗೆ ಸಣ್ಣಾದು ಒಂದು ಹುಲಿಯಾ ತಂದು
ಸಿಂಗಾರಮಾಡು ಕಣ್ಣಯ್ಯ || ಕೋರಣ್ಯ ||
ಈರಯ್ಯ ಶರಣು ಈರುಭದ್ರಯ್ಯ ಶರಣು
ಮಲ್ಲಯ್ಯ ಶರಣು ಬೆಟ್ಟದ ಮಾದಪ್ಪ ಶರಣು

ಹುಲಿಯ ಸಬ್ದವನು ಕೇಳಿ
ಬೇಡರ ಕಣ್ಣಪ್ಪ ನಿಂತಜಾಗದಲ್ಲಿ
ಗಡಗಡ್ನೆ ವದುರ್ತಾವ್ನೆ
ಯಾಕೋ ನನ ಕಂದ
ಹುಲಿ ಅಂದ ಮಾತ್ರಕ್ಕೆ
ನಡ್ಗತ ಇದ್ದಿಯಲ್ಲ ಬೇಡರಕಣ್ಣಪ್ಪ ಅಂದ್ರು
ಮಾದಪ್ಪ
ಎತ್ತಲ್ಲ ಎಮ್ಮೆಲ್ಲ
ಆಡಲ್ಲ ಕುರಿಯಲ್ಲ
ನಿಮ್ಮ ಮುಂದೆ ನಿಲ್ಲಬೇಕಂದ್ರೆ ಬಂದು
ಆ ಕಾಡುಮೃಗ ಜಾತಿಲಿ ಹೆಬ್ಬುಲಿ
ಮನ್ಸರ ವಾಸನವನ್ನು ಕಂಡರೆ
ಹಾರಿ ಕೂಗಿಬಂದು ಎಕ್ಕತ್ತಿನ ಮೇಲೆ ಕೂತಗಂಡು
ಮೂರು ಕುಕ್ಕಿಗೆ ಮೂಗಳ ರಕ್ತ ಕುಡ್ದು
ಬೇಲ್ಗೊಂದ್ ಕಂಡ ಬೆಜ್ಜಲಗೊಂದ್ ಕಂಡ ಮಾಡ್ಬುಡ್ತದೆ
ಮಾದಪ್ಪ

ನನ್ನ ಹೋಗುವಂತ ಪ್ರಾಣಕ್ಕೆ ಗುರುವೆ
ಹೊಣೆಯಾರಪ್ಪ ಮಾದೇವ || ಕೋರಣ್ಯ ||

ಕಂದ ಬೇಡರಕಣ್ಣಪ್ಪ
ಹುಲಿ ಅಂದ ಮಾತ್ರಕೆ ಭಯ ಪಡಬೇಡ ಕಂದ
ಹುಲಿ ಇಡ್ಕಂಡು ಬರುವಮ್ತ ರೀತಿಯನ್ನು ಹೇಳ್ಕೊಡ್ತೀನಿ ಅಂದ್ರು
ಹೇಳಿಕೊಡಿ ನನ್ನಪ್ಪ
ಆರೀತಿಯಾಗಿ ಹೇಳಿಕೊಟ್ರೆ
ಕುರಿಗೊಲ್ಲ ಗೌಡ ಹಿಂಡುಕುರಿ ಹೊಡ್ಕಂಡೋಗ್ತನೆ
ಆ ಹಿಂಡ್ಕುರಿವೊಳಗೆ ನಡುವೆಯಿದ್ದ ಬಡಮರಿ ಸಿಕ್ಕಂಡ್ರೆ
ಎತ್ತಿ ಹೆಗಲ ಮ್ಯಾಲ ಹಕ್ಕೊಂಡೋಗ್ತಾನೆ
ಅದೇ ರೀತಿಯಾಗಿ
ಹಿಂಡುಲಿ ಬಿಟಕಂಡು
ಗಂಡುಲಿ ಹೊತ್ಕಂಡು ಬತ್ತಿನಿ
ಇಗೋ ನನ್ನ ಕಂದ
ನನ್ನ ಮುತ್ತಿನ ಜೋಳ್ಗೆ ಮುಂಗೈಗೆ ಧರ್ಸಕೊಂಡ್ಹೋಗು ಅಂದ್ರು
ಮಹಾದೇವ
ನಿನ್ನ ಮುತ್ತಿನ ಜೋಳಿಗೆ ಒಳಗೆ
ಏನ್ ಮಡ್ಗಿದ್ದಿಯಪ್ಪ
ಏನುಯಿಲ್ಲ ಕಂದ
ನನ್ನ ಏಳುಮಲೆ
ಬಸ್ಮ ಮಡ್ಗಿದ್ದೀನಿ ಅಂದ್ರು
ಅಯ್ಯೋ ಗುರುವೇ
ಹಸೀ ಮಾಂಸ ತಿಂದು
ಬಿಸಿರಕ್ತ ಕುಡಿವಂತ ಜಾತಿಗೆ
ನಿನ್ನ ಏಳುಮಲೆ ಬೂದಿ
ಏನು ಮಾಡುವುದಪ್ಪ ಅಂದ್ರು
ಹಾಗನ್ನಬೇಡ ಕಂದ
ನನ್ನ ಮೇಲೆ ಭಸ್ಮ ಅಂದರೆ
ಸಾಮಾನ್ಯವಾದ ಭಸ್ಮವಲ್ಲ
ಹಾಸ್ಯ ಮಾಡೋರ ಮನೆ
ಹಾನಿ ಮಾಡುವಂತ ಭಸ್ಮ
ದೂಷಣೆ ಮಾಡೊವಂತವರ್ನೆಲ್ಲ
ಧೂಳು ಪಟ ಮಾಡೋವಂತ ಭಸ್ಮ
ಎಕ್ಕಾಸೊಕ್ಕಿನ ಮಾತಾಡ್ ದ್ರೆ
ಎಕ್ಕದ ಗಿಡವಾಗುಟ್ಟೊ ಬಸ್ಮ
ನಂಬಿದೋರ ಮನೆಯಲ್ಲಿ
ತುಂಬಿ ತುಳುಕಾಡುವಂತ ಬಸ್ಮ
ಹುಟ್ಟು ಬಂಜೆಗೆ ಮಕ್ಕಳ ಭಾಗ್ಯ ಕೊಡೋ ಬಸ್ಮ
ಕಂದಾ
ನಂಬಿ ನಂಬಿದವರಿಗೆ
ಮಕ್ಕಳ ಸಿರಿ ಮನಸಿರಿ
ಕೋಟೈಶ್ವರ್ಯ ಕೊಮಾರಭಾಗ್ಯ
ಕೊಡುವಂತ ಭಸ್ಮ ಕಂದ
ಆ ಬಸ್ಮ ಏನ್ ಮಾಡ್ಲಿ
ಗುರುವೇ ಅಂದ್ರು
ಅಂಗೈ ಮ್ಯಾಲಿಟ್ಗಂಡು
ಕಂಬದ ಬೋಳಿ ಮ್ಯಾಲೆ ನಿಂತ್ಕಂಡು
ಹುಲಿಯನ್ನು ಕೂಗ್ ಬುಡು ಕಂದ
ಹುಲುಗಳು ಬರುವಂತ ರಬಸಕ್ಕೆ
ಬಯವಾದ್ರೆ

ಕಂದಾss ಮಲೆಯ ಬಸ್ಮ ತೆಯ್ಯಯ್ಯಾ
ಹುಲಿಗಳ ಮೇಲೆ ಪಿಡಿಯಯ್ಯ
ಮಲೆಗಳ ನೋಡಯ್ಯ ಅಲ್ಲಿ
ಹೊನ್ನೆ ಗಿಡಗಳ ನೋಡಯ್ಯ
ಮಲೆಯಲ್ಲಿರುವ ಮಾದೇವ ನಿಮ್ಮ
ಐಬೋಗ ನೋಡಯ್ಯ

ಎದ್ರಬೇಡ ಮಗನೆ
ದೈರ್ಯವಾಗಿ ಹೋಗಂತೇಳಿ
ಮುತ್ತಿನ್ ಜೋಳ್ಗ ಎತ್ತಿ
ಯಾವಾಗ್ ಕಂಕ್ಳುಗ್ ಕೊಟ್ರೊ ಮಾದಪ್ಪ
ಬೇಡರ ಕಣ್ಣಯ್ಯನಿಗೆ
ಆನೆಯಂತ ಹರ್ಸವಾಯ್ತು
ಕುದ್ರೆಯಂತ ಓಟವಾಯ್ತು
ಮಾದೇವ ಒಂದೇ ಹುಲಿ ಅಂತೇಳಿದ್ದೀಯಾ
ಕಾಡ್ನಲ್ಲಿರೊ ಹುಲಿನೆಲ್ಲಾ ಒಡ್ಕೊಂಬತ್ತಿನಿ

ನನ್ಗೆ ಹುಲಿಗಳ ಹೆಸರ
ಹೇಳಿಕೊಡಿ ಏಳು ಮಲೆಯ ಮಾದೇವ
ಇಡಗಲ್ಲಿನ ಬೋಗೆ ಒಳಗೆ
ಮಡಗವರೆ ಒಂದ್ ಹೆಬ್ಬುಲಿಯಾ
ಸನ್ನೆ ಮಾಡಿ ಕರೆದಾರು ನಮ್ಮ
ಬಣ್ಣಾದ್ ಹೆಬ್ಬುಲಿಯಾ

ಕಂದ ಬೇಡರ ಕಣ್ಣಪ್ಪ
ಹುಲಿಹೆಸ್ರ ಕೇಳ್ತಾ ಇದ್ದಿಯಲ್ಲ ಮಗನೇ
ನನ್ನ ಎಪ್ಪತ್ತೇಳು ಮಲೆಗೆ
ಆನಂದವಾದ ಮಲೆ ಕಂಬದ ಬೋಳಿದಿಂಬ
ಆ ದಿಂಬದ ಮೇಲೆ
ಹುಟ್ಟರೆಕಲ್ಲಿನ ಮೇಲೆ
ಹುಲಿ ಹೆಸರ್ನೆಲ್ಲಾ ಬರಿಸಿ
ಓದ್ ಬುಡು ಕಂದ ಅಂದ್ರು
ನನ್ಗೆ ಓದಕ ಬರದಿಲ್ಲ ಮಾದೇವ
ಅಕ್ಸರ ಬರಿಯಾದಕ್ಕೆ ಬರೋದಿಲ್ಲ
ಬಾಯ್ನಲ್ಲಿ ಹೇಳಿಕೊಡಪ್ಪ
ಗ್ನಾಪ್ ನಲ್ಲಿ ಇಟ್ಕೊತೀನಿ ಅಂದ್ರು
ಆಗಾದರ ಕಂದ
ಹುಲಿ ಹೆಸ್ರ ಹೇಳ್ತಿನಿ
ಉಸಾರಾಗಿ ಕೂಗ್ ಬುಡು ಅಂತೇಳಿ
ಮಾದೇಶ್ವರ ಹುಲಿ ಹೆಸ್ರ ಹೇಳ್ತಾ ಇದ್ದಾರೆ

ಅಯ್ಯಾ ಕೋನಾಚಿ ಕೊಲಗಯ್ಯ ಬಾ
ಕೋನಾಚಿ ಕೊಲಗಯ್ಯ ಬಾs
ನಡುಬೆಟ್ಟದ ನಡುಸಣ್ಣ ಬಾ
ತಾಳಬಾಯಿ ತಲದೂಗ ಬಾ
ಕೌದಳ್ಳಿ ಕರಿಬರಗ ಬಾ
ಸಂತೆಕಾನಿs ಸರಣ ಬಾ
ಗೂಳ್ಯದs ಗುಡ್ಡಗಣ್ಣ ಬಾ
ಇಕಡಳ್ಳಿs ಎಡತುಂಟ ಬಾ
ಕಾರೆತಾಳಲ್ಲಿ ಕಾಯೊವನೆ
ಕಾದಿದ್ದು ಗೋಣ ಮುರಿಯುವನೆ
ತಾಳು ಬಾಯಲ್ಲಿ ತಳುಗವನೆ
ತಪ್ಪು ನೆಪ್ಪ ಮಾಡವನೆ
ಕತ್ತು ಮರ್ದೆತ್ಕಂಡ್ ಹೋಗವನೆ
ಗೆಂಡೊಟ್ಟೆನ್ನೆ ಗಿರಿವೊಟ್ಟೆನ್ನ
ನನ್ನ ಕುಂತೂರ್ ಮಠದ ಗುರುಗಳು ಕೊಟ್ಟ
ಹನ್ನೆರಡೆಜ್ಜೆ ಕೆಂಬರ್ಗಾ
ಆಲಂಬಾಡಿ ಮಾದೇವ
ಅರಗಣ್ಯ ಬಿಟ್ಟು ನೋಡಯ್ಯ
ಹಾಲರವಿ ಮೇಲೂವಿನದಂಡೆ
ವಾಲಾಡಿ ಬಂದೋ

ಮಾದಪ್ಪ ನೀನು ಹೇಳಿದ ಪ್ರಕಾರವಾಗಿ
ಹುಲಿ ತಕ್ಕಂಡ್ ಬತ್ತೀನಿ ಅಂತ್ಹೇಳಿ
ಮಾದಪ್ಪನ ಜೇಳ್ಗೆ ಮುಂಗೈಗೆ
ಧರಿಸ್ಕಂಡ ಬೇಡರ ಕಣ್ಣಯ್ಯ
ತನ್ನ ಬಿಲ್ಲು ಬಾಣ ಬೆನ್ನಲ್ಲಿ ಕಟ್ಟಕಂಡು
ಹೋಗಿಬರ್ತಿನಿ ಗುರುಗಳೆ ಅಂತ್ಹೇಳಿ
ಮಾದಪ್ಪನಿಗೆ ನಮಸ್ಕಾರವನ್ನು ಮಾಡಿ
ದೀರ್ಘದಂಡವಾಗಿ ನಮಸ್ಕಾರ ಮಾಡ್ದ
ಮಗನೆ ಹೋದ ಕಾರ್ಯ ಜಯವಾಗಲಿ ಹೋಗು ಅಂತ್ಹೇಳುದ್ರು
ಮಾದಪ್ಪನಿಗೆ ನಮಸ್ಕಾರ ಮಾಡ್ಬುಟ್ಟು

ಅಪ್ಪ ಸ್ವಾಮಿಯವ್ರ ಮಾತ ಕೇಳವರೆ
ಸ್ವಾಮಿಯವ್ರ ಮಾತ ಕೇಲವರೆs
ಬೇಡರ ಕಣ್ಣಯ್ಯ ಘನಶರುಣಾs
ಗುಡಿಯ ಗುಂಡಾಲs ಕಡೆದವರೆ
ವೀರತ್ತಕಟ್ಟೆ ಕಡೆದವರೇ
ಅತ್ತಿಕಟ್ಟೆ ಕಡೆದವರೇ
ಆಲದಕಟ್ಟು ಕಡೆದವರೇ
ಮಹಾಂತ ಕಟ್ಟೆ ಕಡೆದವರೇ
ಬಸವನಕಟ್ಟೆ ಬಿಟ್ಟವರೇ
ಯಣದಿಮ್ಮಿಕೊಳವ ಕಡೆದವರೇ
ಕುರ್ಜಾನ ಮಾಳ್ರಕ್ಕ ಬಂದವರೇ
ಅಯ್ಯಾ ತುಂಬ್ಯಾಡಗೇರಿ ಬೀದಿ ಒಳಗೆ
ಕಣ್ಣಯ್ಯ ದಯಮಾಡವರೇ || ಕೋರಣ್ಯ ||

ಬೇಡರಕಣ್ಣಪ್ಪ ಬಿಲ್ಲುಬಾಣ ಕಟ್ಗಂಡು
ತಂಬಡಗೇರಿ ಬೀದಿಗಾನ ಕಡೆದು
ಹಗ್ಗದಬಳೆ ಗಗ್ಗರದೀಟಿ ಹಿಡ್ಕಂಡು
ಹೋಗ್ತಾಇದ್ದಾರೆ ಬೇಟೆ ಮಾರ್ಗ

ಅಯ್ಯ ತಂಬಡಗೇರಿ ಬೆಟ್ಟವರೇ
ತಂಬಡಗೇರಿ ಬಿಟ್ಟವರೇ
ದಿಂಬಹ ಮಲೆಯ ಏರವರೆ
ಚಿಕ್ಕಾಲಳ್ಳ ಕಡೆದವರೇ
ದೊಡ್ಡಾಲಳ್ಳಕ್ಕ ಬಂದವರೇ
ಅಯ್ಯ ಕಂಬದ ಬೋಳಿ ದಿಂಬದ ಮೇಲೆ
ಕಣ್ಣಯ್ಯ ದಯ ಮಾಡವರೇ || ಕೋರಣ್ಯ ||

ಕಂಬದ ಬೋಳಿ ದಿಂಬದ ಮ್ಯಾಲ್ಹೋಗಿ ನಿಂತ್ಗಂಡು
ಮಹದೇವ
ಆವಾಗ್ಲೀಗ ಬೇಡರ ಕಣ್ಣಪ್ಪ

ಮಲೆ ಆನಂದ ನೋಡ್ತರೆ
ಎಪ್ಪತ್ತೇಳು ಮಲೆಗೆ ಆನಂದವಾದ ಮಲೆ
ಕಂಬದ ಬೋಳಿ ದಿಂಬ
ಮಾದಪ್ಪ ತಪಸ್ಸು ಮಾಡಿ
ದೇವಸ್ಥಾನ ಕಟ್ಟಿರುವುದು ನಡುಮಲೆ
ಮಾದೇವ
ನೀನು ನೆಲೆಗೊಂಡಿರುವಂತೆ ಮಲೆ
ಆನಂದವಾದ ಜಾಗ
ನಿನ್ನೆಸರಮೇಲೆ ಕೂಗ್ತಿನಪ್ಪ
ಹುಲಿಗಳ ಅಂತ್ಹೇಳಿಬಿಟ್ಟು
ಆ ಬಂಡೆ ಮೇಲ್ ನಿಂತ್ಗಂಡು

ಅಯ್ಯ ಬರ್ಗ ಬರ್ಗ ಎಂದವರೇ
ಬರ್ಗನ ಸ್ಮರಣೆ ಮಾಡವರೇ
ಎಲ್ಲಿದ್ದಿಯಪ್ಪ ಮಾದೇವ
ಭಕ್ತರ ನಿಜವ ನೋಡಯ್ಯ
ಮಾದೇವ
ನೀಲಗಿರಿ ನಿಜಭಕ್ತರ ಮನೇಲಿ
ಲೋಲಾ ಕಾಣೋ ದೇವಾ

ಒಂದೊಂದಾಗಿ ಹುಲಿಯನ್ನ
ಕೂಗ್‌ಬಿಟ್ರು ಬೇಡ್ರಕಣ್ಣಪ್ಪ
ಹಳ್ಳದಲ್ಲಿ ಕೊಳ್ಳದಲ್ಲಿ
ಕಲ್ಲು ಗವಿಯಲ್ಲಿ
ಬಿದ್ರಮೆಳೆ ಪೊದೆ ಒಳಗೆ
ಮಲ್ಗಿರುವಂತೆ ಹುಲಿಗಳು
ಬೇಡ್ರಕಣ್ಣಪ್ಪನ ಶಬ್ದಕೇಳ್ದೊ
ನಮ್ಮ ಸ್ವಾಮಿ ಮಾದೇಶ್ವರ
ಕೂಗ್ತಾ ಇದ್ದಾರೆ ಏನು ಕಾರ್ಯ
ಇತ್ ಬಹ್ದು ಅಂತ್ಹೇಳಿ
ಆ ಮಲ್ಗಿದ್ದಂತ ಜಾಗದಲ್ಲಿ
ಗರ್ಜನೆ ಮಾಡ್ಕಂಡು
ಬರ್ತಾ ಅವೆ ಹುಲಿಗಳು
ಕೆರ್ದು ಕೆಂದೂಳ್ ಎರ್ಚಕಂಡು
ಸಣ್ಣಬಾಲ ಎತ್ತಿ ನೆತ್ತಿಮ್ಯಾಲೆ ಇಟ್ಗಂಡು
ಹಿಂದುಲ್ ದೂಳ್ ಹಿಂದ್ಕೆ
ಮುಂದಲ್ ದೂಳ್ ಮುಂದಕ್ಕೆ ಇಟ್ಗಂಡು
ಕೊಂಗ್ದಗ್ಲ ನಾಲ್ಗೆ
ಮೊಟ್ಟೆಗಾತ್ರ ತಲೆ
ಮೂಲಂಗಿ ಗೆಡ್ಡೆಗಾತ್ರ
ಹಲ್ ಬಿಟ್ಕಂಡು
ಮಾದೇವs

ಅಯ್ಯ ಬರ್ಗ ಕೂಗುವ ರಬಸಿಗೆ
ಬರಗೂರು ಬೆಟ್ಟ ನಡಗಿದವು
ಬರಗೂರು ಬೆಟ್ಟ ನಡಗಿದವು
ಮಾದೇವರ ಪಾದ ನಲಗಿದವು

ಮಹದೇವ
ಆ ಹುಲಿಗಳು ಗರ್ಜನೆ ಮಾಡ್ಕಂಡು ಬರ್ತಾ ಇದ್ರೆ
ತವಸ್ರೆ ಬೆಟ್ಟದಲ್ಲಿ
ಬರಗೂರು ಬೆಟ್ಟ ಅದೆ ಈಗ
ಆ ಬರಗೂರ ಬೆಟ್ಟವೆ ಗುಡ್ಗುಗ್ತಾ ಇತ್ತಂತೆ
ಬೇಡರ ಕಣ್ಣಪ್ಪ ನೋಡುದ್ರು
ಮಾಡಪ್ನ ಬಸ್ಮ ಇರ್ ಬಹುದು
ಆದ್ರೆ ಹುಲಿಗೆ ಎದುರಾಗಿ
ನಿಲ್ ಬಾರ್ದು ಅಂತ್ಹೇಳಿ

ಬಂದು ಕೋಡುಗಲ್ಲಿಗೆ
ಮರೆಯಾಗಿ ನಿಂತ್ಗಂಡು
ಬೇಡರ ಕಣ್ಣಪ್ಪ
ಮಾದೇಶ್ವರ ಕೊಟ್ಟಿದಂತ
ಬಸ್ಮವನ್ನುಮುತ್ತಿನ ಜೋಳ್ಗೆಯಿಂದ
ಎತ್ತಿ ಅಂಗೈ ಮೇಲಿಟ್ಕಂಡ್ರು
ಮಾದೇವ
ಮಾದೇಶ್ವರನ ಗುರುಗಳು
ಶಾಂತಮಲ್ಲಿಕಾರ್ಜುನಸ್ವಾಮಿ
ಪಾದ ನೆನೆದುಬಿಟ್ಟು
ಬಂಡೆಮರೆಯಲ್ಲಿ ನಿಂತ್ಗಂಡು