ಎಲ್ರುನು ಬಾಳ ಕೋಪ್ದಿಂದ ಕೇಳ್ತಾ ಇದ್ನಲ್ಲ
ಕಿರೀ ಮಗ ಕೋಪಿಷ್ಟ ಮನಸ ಅಂತ್ಹೇಳಿ
ತಂದೆ ತಾಯಿ ಅಣ್ಣ ತಮ್ಮ ಓಡಿಬಂದ್ರು
ನೀಲೇಗೌಡ ಕೋಪ ಮಾಡ್ಬೇಡ ಮಗನೆ
ನಿನ್ನ ಮಡದೀಯಾದ ಸಂಕಮ್ಮ ಎಲ್ಲೂ ಹೋಗ್ಲಿಲ್ಲ
ಇಲ್ಲೇ ಇದ್ದಾಳೆ ಬಾರಪ್ಪ ಅಂತ್ಹೇಳಿ ಸಮಾಧಾನವಾಗಿ ಕೂರಿಸ್ಕಂಡ್ರು
ನೋಡಪ್ಪ ನಿನ್ನ ಮಡದಿಯಾದ ಸಂಕೆಣ್ಣು
ದಾಯಿಂದಕಾರರು ಅತ್ಗೆ ನಾದ್ನೀರು
ಹೆಬ್ಬಳ್ಳದ ಕೆರೆಗೆ ನೀರ್ಗೋಗ್ತಾಯಿದ್ದರು
ತಾನೊಂದ್ಕೊಡ ತರಬೇಕಂತ್ಹೇಳಿ ಇವತ್ತು ಹೋದಳು
ಏನು ದಾರಿವೊಳಗೆ ಅತ್ತಿಗ್ನಾದೀರು ಸರಸಾದ ಮಾತು
ಗೇಲಿನ ಮಾತು ಗಂಧದ ಮಾತ್ನಾಡುವತ್ಗೆ ಮಗನೆ
ಕೋಪಮಾಡ್ಕಂಡು ನಿನ್ನ ಮಡದಿ
ನೀನು ಮಲಗೂವಂತ ಕ್ವಾಣೆವೊಳಗೆ ಮಲಗಿದ್ದಾಳೆ
ಹೋಗಪ್ಪಾ ಅಂದ್ರು
ನೀಲೇಗೌಡ್ನಿಗೆ ಮತ್ತಷ್ಟು ಕೋಪ ಬಂದ್ಬುಡ್ತು
ಕೆಟ್ಟ ಮುಂಡೇ ಮಗಳಿಗೆ ಆಂಕಾರ ಬಂತಾ ಅಂತ್ಹೇಳಿ
ಹಾರೆಯನ್ನೇ ತಂದು ಕದವನ್ನು ಮೀಟಿ ಒಂದ್ಕಡೆ ಮಡಗ್ಬಿಟ್ಟು
ಮೊಕಣ್ಣಾಗಿ ಮಲಗಿದ್ದ ಸಂಕಮ್ಮನ

ಅಯ್ಯಾ ಮಾರುದ್ದ ಮಂಡೆ ಹಿಡಿದವನೇ
ಮೇಲಕ್ಕೆ ಎತ್ತಿ ನಿಲಿಸವನೇs || ಕೋರಣ್ಯ ||

ಆಲಂಬಾಡಿ ಮಾದೇವ
ಅರಗಣ್ಣ ಬಿಟ್ಟು ನೋಡಯ್ಯಾ
ಆಲರವಿ ಮ್ಯಾಲೂವಿನ ದಂಡೆ
ವಾಲಾಡಿ ಬಂದೋ

ಮೇಲಕ್ಕೆ ಒಂದ್ಮಾರುದ್ದ ಮಂಡೀಯಿಂದೆಳ್ದು ಮೇಲಕ್ಕೆತ್ನಿಲಿಸ್ಕೊಂಡು
ಮಡದಿ ಮುಖ ನೋಡ್ದಾ
ಸಂಕಮ್ಮನ ಕಣ್ಣಲ್ಲಿ ಧಾರವಾತಿಯಾಗಿ ನೀರು ಹರೀತಾ ಆದೆ
ಮೊಕುವೆಲ್ಲ ಕಂದು ಕಪ್ಪಾಗ್ಹೋಗಿದೆ
ಏನೆಲೇ ಮಡದಿ ಸಂಕೆಣ್ಣೆ
ನಾನು ಕುರಿಯನ್ನು ಬಿಟ್ಟು ಹೋಗುವಾಗ
ನಿನ್ನ ಮೊಕ ಸಂಪ್ಗೆ ಹೂವಿನ ಹಾಗೆ ನಗನಗ್ತಾಯಿತ್ತಲ್ಲ ಮಡ್ದಿ
ಈವಾಗ ಮಲ್ಗೇ ಹೂವು ಬಾಡ್ದಪ್ಪಂದವಾಗಿ
ಬಾಡಿರುವುದಕ್ಕೆ ಕಾರಣವೇನು ಮಡದಿ
ಅಯ್ಯೊ ಯಜಮಾನ ಯಜಮಾನರೇ
ನನ್ನ ಮಂಡೇ ಬಿಟ್ಬಿಡಿ ಯಜಮಾನ ಅಂದಳು
ಮಂಡೇ ಬಿಟ್ಬಿಟ್ಟ ಯಾರೇನಂದಿದ್ದಾರೆ ಸಂಕೆಣ್ಣೆ?

ಮಡದೀ ಅತ್ತೇ ಮಾವ ಏನಂದಾರು
ಭಾವ ಮೈದ್ನ ಏನಂದಾರು
ಅತ್ತುಗು ನಾದ್ನೀರು ಏನಂದಾರು
ವಾರಾರ್ಗಿತ್ತೀರು ಏನಂದಾರು
ಅಕ್ಕಾ ತಂಗೀರು ಏನಂದಾರು
ಸಂಗಡಗಾತಿರು ಏನಂದಾರು
ಮಡದಿ ಯಾರೇನಂದಾರು ಸಂಕಣ್ಣೆ
ನನ್ನೊಂದಿಗೇಳು ಮಡದೀಯೇs || ಕೋರಣ್ಯ ||

ಅಯ್ಯೋ ಶಿವ ಶಿವಾ ಯಜಮಾನರೇ
ಪ್ರಪಂಚದಲ್ಲಿ ಹೊಡೆದು ಹೋದಂತ ಮಡ್ಕೆ ವಾಪ್ಸು ಬರೋದಿಲ್ಲ
ಆಡಿದಂತ ಮಾತು ಅಮೃತಾ ಆಗೋದಿಲ್ಲ ಯಜಮಾನ
ಯಾರೇನೆಂದರೆ ನಮಗೇನಾಯ್ತು ಅಂದ್ರು
ಛೆ ಕೆಟ್ಟು ಮುಂಡೆ ಮಗಳೇ
ಯಾರೇನಂದಿದ್ದಾರೆ ಜಾಗ್ರತೆಯಾಗಿ ಹೇಳು ಮಡ್ದಿ ಅಂದ್ರು
ಯಜಮಾನರೇ
ನಿಮ್ಮ ಅತ್ತಿಗ್ನಾದ್ನೀರು ನಿನ್ನ ಅಕ್ಕ ತಂಗೀರು ಜೊತೆ
ಹೆಬ್ಬಳ್ಳದ ಕೆರೆಗೆ ನೀರ್ಗೋದೆ
ಒಂದು ಕೊಡಾ ನೀರ್ತರೋದಕ್ಕೆ
ಆಗ ನೀರಿನ್ದಾರಿವೊಳಗೇ

ನನ್ನ ಕ್ಯಾಣದೊಂದು ಮಾತಡವರೆ
ಕೇಳಲಾರೆ ಯಜಮಾನs || ಕೋರಣ್ಯ ||

ಎಲವೋ ಸಂಕೆಣ್ಣೆ
ಗಂಡನಿಗೆ ದುಂಡಾರೀತಿ ಮಾಡ್ಬೇಡ
ಪತಿಗೆ ಪ್ರತಿ ಉತ್ತರ ಹೇಳ್ಬೇಡ
ಯಾರೇನಂದಿದ್ದಾರೆ ಹೇಳು ಅಂದ್ರು
ಯಜಾಮಾನರೇ
ನನ್ನ ಮೈದುನನಾದ ನೀಲೇಗೌಡ
ಏಳೇಳು ಹದಿನಾಲ್ಕು ಲೋಕ ತಿರುಗಿ
ಅಂದವಾದ ಈ ಮಡದಿ ತಂದ್ನಲ್ಲ ಈ ಸಂಕೆಣ್ಣೆ

ನಾನು ಹುಟ್ಟೀ ಬಂದ ಮೂವತ್ತು
ಮಂಡೆ ಮಾರಿ ಹನ್ನೆರಡು
ಮೈಯಾನ ಬಣ್ಣ ಕೆಡನಿಲ್ಲ
ದಟ್ಟಾ ಧರಣಿ ನಾನಂತೆ
ಹುಟ್ಟು ಬಂಜೆ ನಾನಂತೆ
ಸಂಗಾಢ ದನಗಳ ಕಾದರೆ
ಅವ್ರ ದನಗಳು ಬಂಜೇರು ಆಗುವವು
ಮಾಡಿದ ಅಡಿಗೆ ಉಂಡರೆ
ಅವರೂ ಬಂಜೇರಾಗುವರು
ಮೀದ ನೀರ ದಾಟಿದರೆ
ಅವರೂಬಂಜೇರಾಗುವರು
ಅವರ ಮಕ್ಕಾಳು ಬಂಜೇರಾಗುವರೂ
ನನಗೆ ಪಾಪನ್ನಾದರು ಮಾಡಬೇಡಿ
ಪಾದ ಹೊತ್ತೇನು ಯಜಮಾನಾs || ಕೋರಣ್ಯ ||

ನೀಲೇಗೌಡ ಮಡದಿ ಮಾತ ಕೇಳಿದ
ಮತ್ತಷ್ಟು ಕೋಪ ಬಂದ್ಬುಡ್ತು
ಆದರೆ ಸಂಕೆಣ್ಣೆ
ಗಂಡಾ ಹೆಂಡತಿ ಅಂದ್ರೆ ಹೆಣ್ಣು ದೇವ್ರು ಗಂಡು ದೇವ್ರು
ಇವತ್ತು ನಿನ್ನನ್ನಾಡಿದ್ದಾರೆ
ನಾಳೆ ನನ್ನನ್ನಾಡ್ತಾ ಇದ್ದಾರೆ
ಹಾಗಾದ ಪಕ್ಷದಲ್ಲಿ ಈ ದಾಯಿಂದಕಾರರು
ಈ ಅಣ್ಣ ತಮ್ಮ ಅತ್ಗೆ ನಾದ್ನೀರ ಕೂಡ ನಾವು ಇರ್ಬಾರ್ದು ಅಂತ್ಹೇಳಿ
ಹೊರಗಡೆ ಬಂದು ಕೂತ್ಕಂಡು ಕೋಪದಲ್ಲಿ ನೀಲೇಗೌಡ

ಅವ್ರ ತಂದೆ ತಾಯಿ ಕರೆದವನೆ
ಬಂಧು ಬಳಗ ಕರೆದವನೆ
ಅಣ್ಣಾ ತಮ್ಮಾರ ಕರದವನೆ
ಅಕ್ಕಾ ತಂಗೀರ ಕರೆದವನೆ
ಕುಲದವರ್ನೆಲ್ಲ ಕೂರ್ಸವನೆ
ಜಾರಿಯವರ್ನೆಲ್ಲ ಸೇರ್ಸವನೆ
ನ್ಯಾಯ ಪಂಚಾಯ್ತಿ ಮಾಡ್ಸವನೆ
ಮಲೆಯ ಸೋಲುಗ ನೀಲಯ್ಯ
ಅಯ್ಯಾ ಬರತಕ್ಕ ಭಾಗ ತಗುವವನೇ
ಬೇರೆ ಮನೆಯ ಮಾಡವ್ನೇs || ಕೋರಣ್ಯ ||

ಆಲಂಬಾಡಿ ಮಾದೇವ
ಹಾಲರವಿ ಮಾದೇವರಿಗೆ
ಹಾಲರವಿ ಮ್ಯಾಲೂರಿನ ದಂಡೆ ವಾಲಾಡಿ ಬಂದೋ

ಇವರ ಕೂಡ ನಾನಿರಬಾರದು ಅಂತ್ಹೇಳಿ
ನ್ಯಾಯ ಪಂಚಾಯ್ತಿಯನ್ನ ಮಾಡಿ
ಬರುವಂಥ ಭಾಗ ತಕ್ಕೊಂಡು ನೀಲೇಗೌಡ
ಗಂಡ ಹೆಂಡಿರು ಒಂದು ರೂಮ್ನಲ್ಲಿ ವಾಸಮಾಡ್ತಾರೆ
ಒಂದು ಮನೇ ಮಾಡ್ಕಂಡು ಗಂಡಾ ಹೆಂಡಿರು
ಕಾಲ ಮಾಡ್ತಾ ಇದ್ದಾರೆ
ಅಂದ್ರೆ ತನ್ನ ಕೆಲಸ ಬದ್ಕ ಬಿಡ್ನಿಲ್ಲ
ಕುರಿಯನ್ನೇ ಕಾಯ್ಕೊಂಡ್ ಬತ್ನಾವ್ನೆ
ಅವರವರ ಅಣ್ಣ ತಮ್ದೀರೆಲ್ಲ ಅವರವರ ಕೆಲ್ಸ ಮಾಡ್ತರೆ

ಆಲಂಬಾಡಿ ಮಾದೇವ
ಅರಗಣ ಬಿಟ್ಟು ನೋಡಯ್ಯ
ಹಾಲರವಿ ಮ್ಯಾಲ್ಹೂವಿನ ದಂಡೆ ವಾಲಾಡಿ ಬಂದೋ

ಮಲೆಗಳ ನೋಡಯ್ಯಾ ಮಾದೇವ
ಹೊನ್ನೆ ಗಿಡಗಳ ನೋಡಯ್ಯ
ಮಲೆಯಲ್ಲಿರುವ ಮಾದಯ್ಯ ನಿಮ್ಮ
ಐಭೋಗ ನೋಡಯ್ಯ

ಮಲೆಯ ಸ್ವಾಲುಗ ನೀಲೇಗೌಡ
ತಂದೆ ತಾಯಿ ಬಂಧು ಬಳಗ
ಕುಲದೋರು ಜಾತಿಯವ್ರ ಕರ್ದು
ಬೇರೆ ಮನೆ ಮಾಡ್ಕಂಡು
ಗಂಡ ಹೆಂಡಿರಿಬ್ರೂ ಕೂಡ ಒಂದ್ಮನೆಯಲ್ಲಿ
ವಾಸಮಾಡ್ಕಂಡ್ ಬದುಕ್ತಾ ಇದ್ದಾರೆ
ಇದೇ ರೀತಿಯಾಗಿ ನೀಲೇಗೌಡ
ತನ್ನ ಕೆಲ್ಸ ಬದುಕ್ನೆಲ್ಲ ಮಾಡ್ಕಂಡ್ ಬರ್ತಾ ಇದ್ದಾನೆ
ಅದೇ ಪ್ರಕಾರವಾಗಿ ಊರ್ನಲ್ಲಿ
ಒಂದು ವರ್ಷ ಕಾಲ ನಡ್ಕಂಡ್ ಬಂತು ಅವ್ರ ದೊಡ್ಡೀವೊಳಗೆ
ಅವಾಗಲೀಗ ಬೆಟ್ಟದ ಸ್ಚಾಲುಗ್ರು ಅಟ್ಟದ ಸ್ವಾಲುಗ್ರು ಅಂದ್ರೆ
ಸ್ವಾಲುಗ ಪದ್ಧತಿ ಏನಪ್ಪಾ ಅಂದ್ರೆ
ವರ್ಷಕ್ಕೊಂದ್ಸಾರಿ ಆರು ತಿಂಗಳಿಗೊಂದ್ಸಾರಿ
ಊರಬ್ಬ ಮಾಡ್ಬೇಕೂಂತ್ಹೇಳಿ
ಊರಬ್ಬ ಮಾಡಬೇಕಾದರೆ
ಎಲ್ಲಾ ಮನೆಗೊಬ್ಬೊಬ್ಬ ಮನ್ಸ ಸೇರ್ಕೊಂಡು
ಹೆಜ್ಜೇನು ಮಲೆಗ್ಹೋಗಿ ತಮ್ಮ ಬೇಟೆ ಮಾಡ್ಕಂಡು
ಕಾಡ್ನಲ್ಲಿರುವಂತ ಪದಾರ್ಥ ತಕ್ಕೊಂಡು ಬಂದು
ಊರಬ್ಬ ಮಾಡುವ ಪದ್ಧತಿ ಇದೆ
ಅದಕ್ಕೋಸ್ಕರವಾಗಿ
ಏಳೇಳು ಹದಿನಾಲ್ಕು ದೊಡ್ಡಿಯವರು
ಆವತ್ತೊಂದಿನ

ಅಯ್ಯಾ ಮಂದಲಕಟ್ಟಿಯ ಸೇರವರೆ
ನ್ಯಾಯ ಪಂಚಾಯ್ತಿ ಮಾಡವರೇs || ಕೋರಣ್ಯ ||

ಎಲ್ಲಾ ಗಡಿಕಾರರು ಮಂದಲಕಟ್ಟೆ ಸೇರ್ಕೊಂಡ್ರು
ಚಿಕ್ಕೆಜಮಾನ ದೊಡ್ಡೆಜಮಾನ ಸೇರ್ಕೊಂಡ್ರು
ಏಳೇಳು ಹದಿನಾಲ್ಕು ದಿಡ್ಡಿ ಜನಗಳು ಸೇರ್ಕೊಂಡ್ರು
ಯಜಮಾನ್ರು ಮಾತಾಡ್ತರೆ
ನೋಡಯ್ಯ ನಾಳೆ ದಿವ್ಸ ನಾವು
ಹೆಜ್ಜೇನು ಮಲೆಗ್ಹೋಗಬೇಕು
ಒಂದೊಂದು ಮನೆಯಲ್ಲಿ ಒಬ್ಬೊಬ್ಬ ಮನ್ಸ ಬರಬೇಕು
ಆದರೆ ಬೊಪ್ಪೇಗೌಡನ ದೊಡ್ಡೀವೊಳಗೆ
ಬೊಪ್ಪೇಗೌಡನ ಮನೆಯೊಳಗೆ
ಆರು ಜನ ಗಂಡುಮಕ್ಕಳಿದ್ದರು
ನಮ್ಮ ಗ್ರಾಮದಲ್ಲಿ ನಮ್ಮ ದೊಡ್ಡೀವೊಳಗೆ
ಒಂದೇ ಒರಿ ಕೊಡ್ತ ಇದ್ದರು ಒಮ್ದೇ ಆಳು ಬರ್ತಾ ಇದ್ದ
ಇವತ್ತು ನೀಲೇಗೌಡ ಒಂದು ವರ್ಷವಾಯ್ತು ಬೆರೆ ಮನೆ ಮಾಡ್ಕಂಡು
ಅವನು ಊರಿಗೆ ಒಕ್ಕಲಾಗಿದ್ದಾನೆ
ಅವನೂ ಕೂಡ ನಮ್ಮ ಸಮಕೆ ಹೆಜ್ಜೇನು ಮಲೆಗೆ ಬರ್ಬೇಕು
ಆ ರೀತಿಯಾಗಿ ನಮ್ಮ ಗ್ರಾಮದಲ್ಲೀ ನಮ್ಮ ಪೋಡ್ನಲ್ಲೀ
ಯಾರಾದರೀ ಒಂದು ಮನೆಯಲ್ಲಿ ಒಬ್ಬ ಬರ್ದೆ ಹೋದ್ರೆ
ಅವನನ್ನು ಹಂತೀಪಂತಿಗೆ ಸೇರಿಸ್ಬಾರ್ದು
ಕುಲಾ ಕೂಟಕ್ಕೆ ಸೇರಿಸ್ಬಾರ್ದು
ನಮ್ಮ ದೊಡ್ಡಿವೊಳಗೆ ಬೆಂಕಿ ಬಿಸ್ನೀರು ಕೊಡ್ಬಾರ್ದು
ಅವನ ಕೋಡ ಮಾತಾದಬಾರ್ದು
ಬಹಿಷ್ಕಾರ ಹಾಕಿ ಬಿಟ್ಬಿಡಬೇಕಂತ್ಹೇಳಿ
ಆ ಮಂಡಲದ ಕಟ್ಟೆ ಒಳಗೆ ಚಿಕ್ಕೆಜಮಾನ್ರು ದೊಡ್ಡೆಜಮಾನ್ರು

ಒಂದು ಕುಲವನ್ನಾದರೆ ಸಾರವರೇ
ಒಂದು ಕಟ್ಟನ್ನಾದರೆಮಾಡವರೇs || ಕೋರಣ್ಯ ||

ಬಾ ನನ್ನ ಗುರುವೆ ಭಕ್ತರಗಂಡ
ಬಾಗಿದೆವು ಮಾದೇವರಾ ಮಾದೇವಾ
ಸೋಲುಗರ ಕೈನ್ವಾಲುದಲ್ಲಿ ಸ್ವಾಮಿ ಎದ್ದುಬಂದಾ

ಮಂಡಲದ ಕಟ್ಟೆವೊಳಗೆ
ಕುಲದವರು ಜಾತಿಯವರ ಮಾತು ಕೇಳದ ನೀಲೇಗೌಡನಿಗೇ
ಭಾರಿ ಯೋಚನೆ ಬಂದು ಬಿಡ್ತು ಪರಮಾತ್ಮಾ
ನಾನು ಲಗ್ನವಾಗಿ ಒಂದು ವರ್ಷ ತುಂಬ್ನಿಲ್ಲ
ದಾಯಂದಿಕಾರ್ರ ಬಿಟ್ಟು ಬೇರೊಂದು ಮನೆ ಮಾಡ್ಕೊಂಡೆ
ಬೇರೆ ಮನೆ ಮಾಡ್ಕೊಂಡ್ರೂ ಕೂಡಾ
ಒಂದು ವರ್ಷ ತುಂಬ್ನಿಲ್ಲ
ಇನ್ನೂ ನನಗೆ ಮಕ್ಕಳ ಫಲವಾಗ್ನಿಲ್ಲ
ಯಾರೂ ಮನೆವೊಳಗೆ ಅದಲೀಬದಲಿಲ್ಲ
ನನ್ನ ಮಡದಿಯಾದ ಸಂಕೆಣ್ಣು ಒಬ್ಳೇ ಇರ್ತಳೆ
ಆರು ಮುರು ಒಂಭತ್ತಿಂಗ್ಳು ವಜ್ರಗಿರಿಯಾಗಿ ಮಲೆಗೆ ಹೋಗ್ಬೇಕು
ಇಂಥ ಭಾವ್ಹೀರಿದ್ದಾರೆ ಮೃದ್ದೀರಿದ್ದಾರೆ ಹಗೇವ್ರಿದ್ದಾರೆ
ನೀಲೇಗೌಡ ಕಳವಳವಾದ ಮನಸ
ತಾನು ಮನಸಿನಲ್ಲಿ ಇಪ್ಪತ್ತೇಳು ಯೋಚನೆ ಮಾಡ್ಕಂಡು
ಆದರೂ ಆಗಲಿ ನಾನು ಕುಲಾ ಬಿಡಬಾರ್ದು
ನನ್ನ ಮಡದಿಯಾದ ಸಂಕ್ರ್ಣ್ಣ ಎರಡು ಮಾತ ಕೇಳ್ಕಂಡು
ಹೆಜ್ಜೇನುಮಲೆಗೆ ಹೋಗಲೇ ಬೇಕೆಂತ್ಹೇಳಿ
ಆ ಮಂದಲದ ಕಟ್ಟೆ ಬಿಟ್ಟು ನೀಲೇಗೌಡ
ಮಡದಿ ಮನೆಗೆ ಬರ್ತಾ ಇದ್ದಾನೆ

ಅಯ್ಯಾ ಮಂದಾಲ ಕಟ್ಟೆ ಬಿಟ್ಟವನೆ
ತನ್ನ ಮಡದೀಯ ಮನೆಗೆ ಬತ್ತಾವನೇ
ವೀರಯ್ಯ ಶರಣು ವೀರುಭದ್ರಯ್ಯ ಶರಣೂs || ಕೋರಣ್ಯ ||

ಮಾಳಿಗೆ ಮನೆಗೆ ಬಂದ ತಕ್ಷಣವೇ
ಪತಿವ್ರತೆಯಾದ ಸಂಕಮ್ಮಾ
ಗಂಡನಪಾದಕ್ಕೆ ನೀರನ್ನೂ ಕೊಟ್ಟು ತೊಳೆದು ನಮಸ್ಕಾರ ಮಾಡ್ದಳು
ಒಳಗಡೆ ಹೋಗಿ ಕೂತ್ಕಂಡ್ರು ನೀಲೇಗೌಡ
ಏನಾಯ್ತು ಯಜಮಾನ್ರೆ
ನಮ್ಮ ಗ್ರಾಮದಲ್ಲಿ ಪಂಚಾಯ್ತಿ ಮಾಡುದ್ರು
ಮಂದಲದ ಕಟ್ಟೆಯಲ್ಲಿ ಏನಾಯ್ತು ಅಂದ್ರು
ಏನಾಗುವುದು ಮಡದಿ ಸಂಕೆಣ್ಣೇ ನನಗೆ
ಏಳೂರು ಗಡಿಕಾರರೂ ಏಳೇಳು ದೊಡ್ಡಿಯವರೂವೆ
ನಾಳೆ ದಿವ್ಸ ಹೆಜ್ಜೇನು ಮಲೆಗೆ ಹೋಗ್ತರೆ

ಮಡದೀ ಹೆಜ್ಜೇನು ಮಲೆಗೇ ಹೋಯ್ತಾವರೆ
ಹೆಜ್ಜೇನು ತುಪ್ಪ ತರುವುದಕೆ
ಕಿರುಜೇನು ಮಲೆಗೆ ಹೊಯ್ತವರೆ
ಕಿರುಜೇಜು ತುಪ್ಪ ತರುವುದಕೆ
ಕಾಡು ಬಾಳಣ್ಣ ತರುವುದಕೆ
ಕಟ್ಟೆಯ ನೀರ ತರುವುದಕೆ
ಬಿದ್ಹೂರಕ್ಕಿ ತರುವುದಕೆ
ಬೆಲ್ಲೂದ ಗೆಣ್ಸ ತರುವುದಕೆ
ಅಲಸುಂಡೆ ಹಣ್ಣ ತರುವುದಕೆ
ಮಾಗಾಳಿ ಬೇರ ತರುವುದಕೆ
ಗೊನೆ ಬಾಳಿ ಹಣ್ಣ ತರುವುದಕೆ
ಹೋಗಾದೆ ಮೂರು ತಿಂಗಾಳು
ಬರುವಾದೆ ಮೂರು ತಿಂಗಾಳು
ಇರುವಾದ ಮೂರು ತಿಂಗಾಳು
ಮಡದಿ ಆರು ಮೂರು ಒಂಭತ್ತು ತಿಂಗಾಳು
ತುಂಬೊಯ್ತದೆ ಸಂಕೆಣ್ಣೇs || ಕೋರಣ್ಯ ||

ಬೆಟ್ಟದರಸು ಮಾದಪ್ಪ ನಿಮಗೆ
ಮಜ್ಜಣದ ಹೊತ್ತಾದೋ
ಕಾಕೋಳಿ ಕೂಗಾದು ನೋಡು
ಲೋಕವೆಲ್ಲ ಬೆಳಗಾಗಲೀ
ಕಾಕೋಳಿ ನವಿಲಿಂಡಿನ ಮೇಲೆ
ಲೋಕ ಮೆರೆದಾವೋ

ಹೇಳು ಮಡದಿ ಸಂಕೆಣ್ಣೆ
ಆರು ಮೂರು ಒಂಬತ್ತು ತಿಂಗ್ಳಾಯ್ತದೆ ಹೆಜ್ಜೇನು ಮಲೆಯಿಂದ
ಹೆಜ್ಜೇನು ಬ್ಯಾಟೆ ಮಾಡ್ಕಂಡು ಬರುವುದು
ಆದ್ದರಿಂದ ನಾನು ಹೆಜ್ಜೇನು ಮಲೆಗೆ ಹೋಗ್ಬೇಕು
ಯಜಮಾನರೇ ಹಾಗಾದ ಪಕ್ಷದಲ್ಲಿ
ಪ್ರಪಂಚದಲ್ಲೇ ಕುಲಾ ಮೀರಿದ ಹೆಣ್ಣು ಹೊಲಾ ಮೀರಿದ ಪಕ್ಷಿ
ಬಾಳುವದಕ್ಕೆ ಸಾಧ್ಯವಿಲ್ಲ ಯಜಮಾನ
ಕುಲವನ್ನು ಮೀರಬಾರದು

ಅಯ್ಯಾ ಹೆಜ್ಜೇನು ಮಲೆಗೆ ಹೋಗಿ ನೀವು
ಹೇಳುದ ಮಾತ ಕೇಳಯ್ಯಾs || ಕೋರಣ್ಯ ||

ಹೇಳು ಮಡದಿ ಸಂಕೆಣ್ಣೆ
ನಾನೂ ಕೂಡ ಯೋಚ್ನೆ ಮಾಡ್ಕಂಡು ಬಂದೆ
ಕುಲ ಬಿಡಬಾರ್ದು ಅಂತ್ಹೇಳಿ
ಆದರೆ ಸಂಕೆಣ್ಣೆ
ನಾವು ಬೇರೆ ಮನೆ ಮಾಡ್ಕಂಡು ಒಂದು ವರ್ಷವಾಯ್ತು
ಇಂಥಾ ಹಗೆಯವರಿದ್ದಾರೆ
ಭಾವಮೈದ್ದೀರು ಅತ್ತೆ ಮಕ್ಳು ಭಾವನ ಮಕ್ಳು ಮಡದಿ
ಆದ್ದರಿಂದ ಒಂದು ಮನೇಲಿ ಬಿಟ್ಟು ಹೋಗಲಾರಿ
ನಾನು ಹೆಜ್ಜೇನು ಮಲೆಗೆ ಹೋಗಬೇಕಾದ್ರೆ

ನನಗೆ ಬಲಗೈ ಭಾಷೆ ಮಾಡ್ಹೆಣ್ಣೆ
ನನ್ನ ಹೆಜ್ಜೇನು ಮಲೆಗೆ ಕಳುಗೆಣ್ಣೆs || ಕೋರಣ್ಯ ||

ಗುರುವೇ ಗುರುಪಾದವೇ
ಯಜಮಾನರೇ ಯಜಮಾನ
ಎಂಥ ಮಾತ ಹೇಳ್ತಾ ಇದ್ದೀರಿ ಯಜಮಾನ
ಏಕಾಂತವಾಗಿ ನನ್ನ ಭಾಷೆ ಕೇಳ್ತಾ ಇದ್ದೀರಲ್ಲಾ
ಕಳನಿಲ್ಲ ಕಳವರಿಗೆ ಒಳಗಾಗನಿಲ್ಲ
ಪರ ಪುರುಷರ ಕಣ್ಣೆತ್ತು ನೋಡ್ನಿಲ್ಲ
ಯಜಮಾನರೇ ನಾನು ಭಾಷೆ ಕೊಡಬೇಕಾ ನಿಮಗೆ?

ಅಯ್ಯಾ ನನ್ನಲ್ಲಿ ತಪ್ಪ ತೋರಯ್ಯ
ನೀನು ಆಮೇಲೆ ಭಾಷೆ ಕೇಳಯ್ಯಾs || ಕೋರಣ್ಯ ||

ಆನೆ ದಿಂಬಾದ ಮಲೆಯಂತೆ
ಗುರುವಿಗೆ ಬಳವೆಳಸು ಬೇಡರಗಣವೀ

ನಿಮ್ಮ ಮುಟ್ಟಿ ಪೂಜೆ ಮಾಡುವರ್ಯಾರೋ
ಬೇಡರ ಕನ್ನಯ್ಯಾ

ಕೇಳೇ ಕೆಟ್ಟುಮುಂಡೆ ಮಗ್ಳೇ ಸಂಕೆಣ್ಣೇ
ಗಂಡನಿಗೇ ದುಂಡಾರೀತಿ ಮಾಡಬೇಡ
ಪತಿಗೆ ಪ್ರತಿ ಉತ್ತರ ಕೊಡಬೇಡ ಮಡದಿ
ಪತಿಗೆ ಪ್ರತಿ ಉತ್ತರ ಕೊಟ್ಟ ಮೇಲೆ
ನಿನ್ನ ಪತಿವ್ರತಾಧರ್ಮ ಉಳಿಯೋದಿಲ್ಲ
ನೀನು ಭಾಷೆ ಕೊಡದೇ ಇದ್ದ ಮೇಲೆ
ನಾನು ಹೆಜ್ಜೇನು ಮಲೆಗೆ ಹೋಗೋದಿಲ್ಲ
ನಾನು ಹೆಜ್ಜೇನು ಮಲೆಗೆ ಹೋಗ್ದೇ ಇದ್ಮೇಲೆ
ನನ್ನ ಕುಲಾ ಬಿಟ್ಟುಬಿಡ್ತಾರೆ ಈ ದೊಡ್ಡೀ ಒಳಗೆ
ನಾವಿಬ್ಬರೂ ಯಾವ ರೀತಿಯಾಗಿ ವಾಸ ಮಾಡಬೇಕು ಮಡದಿ

ಯಜಮಾನ ಯಜಮಾನ
ನಿಮ್ಮ ಪಾದ ಹೊತ್ತೇನು ದಮ್ಮಯ್ಯಾ
ನಾನು ಪತಿಗೆ ಭಾಷೆ ಕೊಟ್ಟ ಮೇಲೆ
ನನ್ನ ಪತೀವ್ರತಾ ಧರ್ಮ ಏನಾಗುತ್ತದೆ
ಯಜಮಾನ ನಾನು ಖಂಡಿತವಾಗ್ಲು ಭಾಷೆ ಕೊಡೂದಿಲ್ಲ

ಆಯ್ತಾ ಹೇಳಿದ ಮಾತ ಕೇಳಯ್ಯಾ
ಹೆಜ್ಜೇನು ಮಲೆಗೆ ಹೋಗಯ್ಯಾs || ಕೋರಣ್ಯ ||

ಛೇ! ಕೆಟ್ಟು ಮುಂಡೇ ಮಗಳೇ
ಹೇಳಿದ ಮಾತಿಗೆ ಜವಾಬು ಕೊಡ್ತಾ ಇದ್ದೀಯೆ
ನೋಡು ನನ್ನ ಏಳೂರು ಗಡಿಕಾರರು ಕುಲಸ್ತರೆಲ್ಲ ಸೇರ್ಕೊಂಡು
ಮಂದಲದ ಕಟ್ಟೆವೊಳಗೆ ತಮಟೆಕೊಂಬು ಹಾಕ್ಕೊಂಡು
ಎಲ್ಲಾ ಪೂಜೆ ಮಾಡ್ಕಂಡು
ಹಾಡ್ತಾ ಕೂಗ್ತಾ ಸಂಭ್ರಮದಲ್ಲಿ ನಿಂತಿದ್ದಾರೆ
ಹೆಜ್ಜೇನು ಮಲೆಗೆ ಹೋಗುವುದಕ್ಕೆ ಮಡದಿ
ನೀನು ನನಗೆ ಹೇಳಿದ ಮಾತಿಗೆ ಬರೀ ಉತ್ತರ ಕೊಡ್ತಾಯಿದ್ದಿಯೆ
ನೋಡು ಸಂಕೆಣ್ಣೆ ಹೇಳ್ತಾ ಇದ್ದೀನಿ
ನಿನ್ನ ಒಂದು ಮನೆಯಲ್ಲಿ ನಾನು ಬಿಟ್ಟು ಹೋದರೆ
ಅತ್ತೇ ಮಕ್ಕಳು ಭಾವನ ಮಕ್ಕಳಾಗಿರತಕ್ಕಂಥವರು
ನೋಡು ಸಂಕೆಣ್ಣೆ
ಈ ಹೊತ್ತಿನಲ್ಲೀ ಏಳೇಳು ಹದಿನಾಲ್ಕು ಲೋಕ ತಿರುಗಿ
ಅಂದವಾದ ಮಡದಿ ಚೆಂದವಾದ ಮಡದಿ
ನನ್ನ ರೂಪಕ್ಕೆ ತಕ್ಕಂಥ ಹೆಂಡ್ರು ಅಂತ್ಹೇಳಿ
ಲಗ್ನವಾಗಿದ್ದೀನಿ ಮಡದಿ
ಆದ್ದರಿಂದ ನಿನ್ನ ಒಬ್ಬಳ್ನೇ ಬಿಟ್ಟು ಹೋಗಲಾರಿ ಮಡದಿ
ಅದಕ್ಕೋಸ್ಕರವಾಗಿ ನಾನು ಒಬ್ಬಳ್ನೇ ಬಿಟ್ಟು ಹೋದರೆ

ಅತ್ತೆಯ ಮಕ್ಕಳು ಬರುವಾರು
ವಾವನ ಮಕ್ಕಳು ಬರುವಾರು
ಭಾವ – ಮೈದ ಬರುವಾರು
ಬೆಂಕಿ ಎಣೆಯಲ್ಲಿ ಬತ್ತವರೆ
ಬಿಸ್ನೀರ ಎಣೆಯಲ್ಲಿ ಬತ್ತವರೆ
ಗೇಲಿನ ಮಾತ ಆಡುವರು
ಗಂಧದ ಮಾತ ಆಡುವರು
ರೂಪು ರೇಖೆ ನೋಡುವರು
ಅಂದ – ಚೆಂದ ನೋಡುವರು
ನಿನ್ನ ಮೇಲೆ ಕಣ್ಣು ಇಡುವರು
ಮಡದಿ ಒಲುಮೆಯ ಮದ್ದ ಕೊಡುವಾರು
ನಿನ್ನ ವಾಲೀಸಿಕೊಂಡು ಹೋಗುವರೂs || ಕೋರಣ್ಯ ||