ಅಯ್ಯಾ ಮಲೆಯ ಬಸ್ಮ ತೆಗೆದವರೇs
ಹುಲಿಗಳ ಮೇಲೆ ಪಿಡಿದವರೇ
ಅಂತರಗಂಗ ನೋಡಯ್ಯ
ಮಾದೇವ ಕುಂತಿರುವ ಚಂದ ನೋಡು
ಆಗದ ನೋಡು ಅಯ್ಯಾನ ಬೋಗುವ ನೋಜು

ಹುಲಿಗಳ ಮೇಲೆ ಯಾವಾಗ ಬೇಡರ ಕಣ್ಣಪ್ಪ
ಏಳುಮಲೆ ಬಸ್ಮ ಪಿಡಿದರೋ
ಮಾದೇಶ್ವರ್ನ ಬಸ್ಮ ಬಿದ್ದ ಕ್ಷಣವೇ
ಅಲ್ಲಿ ಕೂಗಿ ಬರ್ದಂತ ಹುಲಿಗಳೆಲ್ಲ
ಗೊಲ್ಲಗುರಿಯಾಗಿ
ಆಡುಮರಿಯಾಗಿ ಬಂದು
ಬೇಡರಕಣ್ಣಪ್ಪನ ಸುತ್ತ ನಿಂತ್ಗಂಡೋ
ಎಲ್ಲಾ ಹುಲಿನು ಮೈಸವ್ರೆ ನೋಡುದ್ರು
ಯಾವ್ ಹುಲಿ ಒಡ್ಕಂಡೋಗ್ಲಿ ಮಾದಪ್ಪನ್ಗೆ
ಒಂದ್ಕಿಂತ ಒಂದ್ ಹೆಚ್ಚಾಗದೆ ಅಂತ್ಹೇಳಿ
ಯೋಚ್ನೆ ಮಾಡುದ್ರು ಬೇಡ್ರಕಣ್ಣಪ್ಪ
ಎಲ್ಲ ಹುಲೀನು ಒಡ್ಕಂಡೋಗಿ ನಿಲ್ಸ್ ಬುಡೋಣ
ಮಾದೇಶ್ವರ ಒಪ್ಪದಂತ ಹುಲಿಮೇಲೆ
ಸವಾರಿಮಾಡಿ ಹೋಗ್ಲಿ ಅಂತ್ಹೇಳಿ
ಬೇಡ್ರ ಕಣ್ಣಪ್ಪ
ಕಂಬದ ಬೋಳಿ ದಿಂಬ್ದಲ್ಲಿ

ಅಯ್ಯ ಕಬ್ಬಾಳಿ ಅಂಬ ಕಿತ್ತವ್ರೆ
ಒಟ್ಟಿಗೆ ಕಡವಾಣ ಊಡವ್ರೆ
ಏಳುಮಲೆಗೆ ಹೋಗುವರು
ಎಡವಿನ ಕಲ್ಲಿಗೆ ಶರಣ ಮಾಡುವರು
ಎಡವಿನ ಕಲ್ಲಿನ ಮಾದೇವ
ಕೊಡು ನಮಗೆ ಮತಿಯಾ

ಕಬ್ಬಳಿ ಅಂಬನ್ನು ಕಿತ್ತುs
ಎಲ್ಲಾ ಹುಲಿನು ಒಟ್ಗೆ
ತಳಿಕೆ ಹಾಕ್ಕೊಂಡು
ನಮ್ಮ ಸ್ವಾಮೆರ್ಗ ಟೈಮು ಆಗ್ಬುಡ್ತದೆ
ಯಾವ ಕಾರ್ಯಕ್ಕೋದರೊ ಅಂತ್ಹೇಳಿ ಬೇಡರಕಣ್ಣಪ್ಪ
ಹುಲಿನೆಲ್ಲ ಹಿಡ್ಕಂಡು
ತನ್ನ ಬಿಲ್ಲುಬಾಣ
ಬೆನ್ನಿಗೆ ಕಟ್ಕಂಡು

ಅಪ್ಪ ಕಂಬದ ಬೋಳಿ ಇಳುದಾವರೆ
ಕಂಬದ ಬೋಳಿ ಇಳ್ದವರೆ
ಬೇಡರ ಕಣ್ಣಯ್ಯ ಘನಶರಣ
ಚಿಕ್ಕಾಲಳ್ಳ ಕಡದವರೇ
ದೊಡ್ಡಾಲಳ್ಳಕೆ ಬಂದವರೇ
ದಿಂಬದ ಮಲೆಯ ಇಳ್ದವರೇ
ಬೆಡರಕಣ್ಣಯ್ಯ ಘನಶರಣ
ಘನಶರಣ
ಅಪ್ಪಾ ದೇವರಳ್ಳಿ ಬೀದಿ ಒಳಗೆ
ಕಣ್ಣಯ್ಯ ದಯಮಾಡವರೇ

ಅಡ್ಡೆ ಗುಡ್ಡೆಗಳೊ ಮಾದೇವ
ಒಡ್ಡಿನ ಪೂಜೆಗಳೋ
ಮಹದೇವ
ಅಡ್ಡೆಗುಡ್ಡೆ ಮೇಲೆ ಮಾದೇವs
ರಡ್ಡೆ ದೆಂಡುಗಳೋ

ದ್ಯಾವರಳ್ಳಿ ಬಾಗ್ಲಿಗ್ ಬಂದ್ರು
ದ್ಯಾವ್ರಳ್ಳಿ ಅಂದ್ರೆ ತಂಬ್ಡಗೇರಿ
ತಂಬ್ಡಗೇರಿ ಬಾಗ್ಲಗ್ ಬಂದು ಬೇಡರಕಣ್ಣಪ್ಪ
ಈ ಹುಲಿನೆಲ್ಲಾ ಹೊಡ್ಕಂಡ್ ಹೋದ್ರೆ
ನನ್ನ ಮಾದೇಶ್ವರ್ನಗೆ ಕ್ವಾಪಬರ್ತದೆ
ಅವ್ರೇಳಿದ್ರು ಒಂದೇ ಹುಲಿಯಂತ
ಅವರ ನಡುದೇವಸ್ಥಾನದಲ್ಲಿ
ನಿಲ್ಸಬೇಕಂತ್ಹೇಳಿ
ತಂಬಡಗೇರಿ ಬಾಗಲ್ಗೂವೆ
ಆ ಬಸವ್ನ ಬಾಗಲ್ಗುವೆ
ಹೆಜ್ಜಗೊನ್ನೊಂದ್ ಹುಲಿ
ನಿಲ್ಸುಬುಟ್ಟು ಸಾಲಾಗಿ
ಹನ್ನೆರಡೆಜ್ಜೆ ಹುಲಿ ಅಂದ್ರೆ
ವ್ಯಾಗ್ರಾನಂದ ಸ್ವಾಮ್ಗಳ್ ಕೊಟ್ಟಿದ್ರು
ಹನೆರಡೆಜ್ಜೆ ಇಲ್ಲ
ಒಂದ್ ಸಾರಿ ಹೆಜ್ಜೆ ಎತ್ ಮಡಗಿದ್ರೆ
ಹನ್ನೆರಡೆಜ್ಜೆ ಆಗಬೇಕು
ಅಂಗ ಹೆಬ್ಬುಲಿ
ಆ ಹುಲಿ ಇಡ್ಕಂಡು
ನಡು ದೇವಸ್ಥಾನದಲ್ಲಿ ನಿಂತ್ಕಂಡು
ಬೇಡ್ರಕಣ್ಣಪ್ಪ

ಅಪ್ಪ ಒಪ್ಪಿದ ಹುಲಿಯ ತಂದಿದ್ನಿ
ನೀವು ಒಪ್ಪಿಸಿಕೊಳ್ಳಿ ಮಾದೇವ
ಕುಂತೂರು ಮಠವ ನೋಡು
ಮಾದೇವ ಕುಂತಿರುವ ಚಂದವs ನೋಡು
ನಿಮ್ಮ ಮುಟ್ಟಿ ಪೂಜೆ ಮಾಡವರ್ಯಾರು
ಬೇಡರ ಕಣ್ಣಯ್ಯ

ಬೇಡರಕಣ್ಣಪ್ಪನ ಶಬ್ದವನ್ನು ಕೇಳಿದ್ರು
ನನ್ನಪ್ಪಾಜಿ ಅಖಂಡ ಮಹಿಮ
ಅಲ್ಲಮಾಪ್ರಭು ಮಾದೇವ
ಬೆಳಗ್ಗೆ ಆರ್ ಗಂಟೆ ಒಳ್ಗೆ ಬೇಡರಕಣ್ಣಪ್ಪ
ಹುಲಿ ತರ್ವುದಕ್ಕೆ ಹೋಗು ಅಂತ್ಹೇಳ್ದೆ
ಹುಲಿ ಹೆಸ್ರು ಕುಲ ಗೊತ್ತಿಲ್ಲ
ಯಾವ್ ಕಾಡ್ನಲ್ಲಿ ಇದ್ದವೊ
ಅಂತಹೇಳ್ತ ಇದ್ದ
ಈವಾಗ್ ಬಂದು ಬೇಡ್ರಕಣ್ಣಪ್ಪ
ಕೂಗ್ತಾ ಇದ್ದಾನೆ
ನೋಡ್ಬೇಕಲ್ಲ ಅಂತೇಳಿ ಮಾದಪ್ಪ
ಆತ್ಮಲಿಂಗದಿಂದ ಪ್ರತ್ಯಕ್ಷವಾಗಿ
ಎಳಗಾವಿ ಎಳದ್ಹೊದ್ದು
ಸುಳಗಾಳಿ ಮುಸುಗಿಟ್ಕಂಡು
ಲಿಂಗಲಿಂಗ ಅಂತೇಳಿ
ಲಿಂಗಕ್ಕೆ ಶರಣ ಮಾಡ್ಕಂಡು
ಆ ಬಸವ್ನ ಬಾಗ್ಲಿಗ್
ಬಂದು ಬಗ್ ನೋಡುದ್ರು
ಸಾಲಾಗಿ ಹುಲಿ ನೋಡ್ಬುಟ್ರು
ಕಂದಾ
ಬೇಡ್ರ ಕಣ್ಣಯ್ಯ
ಈ ಏಳುಮಲೆ ಕೈಲಾಸ್ದಲ್ಲಿ
ನಾನೇ ಹೆಚ್ಚು ಅಂತ ಇದ್ದಿ
ನನಗಿಂತ ಹೆಚ್ಚಿನ ಭಕ್ತ ನೀನು
ಕಂದಾ ಬೇಡರ ಕಣ್ಣಪ್ಪ
ಮದ್ದು ತತ್ತ ಅಂದ್ರೆ
ಮರ ತಂದಾಗೆ ತಂದಿದ್ದಿಯಲ್ಲ ಕಂದ
ಒಂದೇ ಹುಲಿ ಸಾಕಾಗಿತ್ತು
ಈ ಸಣ್ ಹುಲಿಯಲ್ಲ್
ಮುಂದನ ಕೆಲ್ಸಕ್ಕೆ ಬೇಕು
ನೀನು ಹಿಡ್ದಿರುವಂತ
ಹನ್ನೆರಡೆಜ್ಜೆ ಹುಲಿಯನ್ನು

ಕಂದ ಬಲಿಯ ಕಲ್ಲಿಗೆ ಕಟ್ಟಯ್ಯ
ಹುಲಿಯ ಸುಂಗಾರ ಮಾಡಯ್ಯ || ಕೋರಣ್ಯ ||

ಅಯ್ಯೋ ಮಾದಪ್ಪ
ನಿನ್ನ ಮಾಯ ಕಂಡವ್ರಿಲ್ಲಾ ಗುರುವೇ
ಮುಂದಿನ್ ಕೆಲ್ಸಕ್ಬೇಕು ಅಂತೇಳ್ತ ಇದ್ದಿರಲ್ಲ
ನನಗ್ ಸ್ವಲ್ಪ ಹೇಳಪ್ಪ
ನನಗ್ ಭಯ್ ವಾಗುತ್ತೆ ಅಂದ್ರು
ಅಂಜಬೇಡ ಕಂದ
ನಾನು ಸುತ್ತೇಳು ಕೋಟೆನೆಲ್ಲಾ
ಕಷ್ಟದಿಂದ ಕಟ್ಟಾಳ್ತಿನಿ
ಅಮವಾಸೆ ಒಂದಿನ ಅಂತ್ಹೇಳಿ
ಹೆಣ್ಣೇಳು ಕೋಟಿ
ಗಂಡೇಳು ಕೋಟಿ ಬರ್ತಾರೆ
ಕಂದಾ
ಗುಬ್ಬಿ ಧಾರವಾಡ
ನಾಗೇರು ನಂಜಲಗೂಡು
ಕೋಲೂರು ಕೊಯಿಮತ್ತೂರು
ಅರೆಪಾಳ್ಯ ಮರೇಪಾಳ್ಯ
ಅರೆಕೆರೆ ಬನ್ನೂರು
ಕೊಂಗು ಕೊಡಗು
ಮದರಂಗ ಮಲೆಯಾಳ
ಮಗ್ಗ ಮರಳ್ಳಿ ಹೆಗ್ಗಡದೇವನ ಕೋಟೆ
ಬೀಮನಕೊಲ್ಲಿ ಬೀರಂಬಳ್ಳಿ
ಬೆಂಗಳೂರು ಬಿಡದಿ ಪರಸೆ
ಕಂದಾ ಹೆಣ್ಣೇಳು ಕೋಟಿ
ಗಂಡೇಳು ಕೋಟಿ
ಎಳ್ಳು ಅಕ್ಕಿ ಬೆರಸಿದೂಪ್ಪಂದವಾಗಿ ಬರ್ತಾರೆ
ಆ ಊರಿಂದ ಅತ್ತೆ ಮಗ
ಈ ಊರಿಂದ ಮಾವ್ನ ಮಗಳು ಬರ್ತಳೆ
ನಡುದಾರಿಯಲ್ಲಿ ಬಂದು
ಕೂಡ್ದಲೆ ಕೊಳ್ಳೇಗಾಲ ಬಂದು ಮೀಟ್ ಆಗ್ತರೆ
ಹೆಣ್ ಚಂದಕ್ಕೆ ಗಂಡ್ಗೊಲಿತ್ತಾರೆ
ಗಂಡುನೆ ಚಂದ್ಕೆ ಹೆಣ್ಣು ಒಲಿತಾ ಇದ್ದಾರೆ
ಸರಸ ವಿನೋದ ಆಡ್ಕಂಡು
ಒತ್ತರ್ಗಾಡ್ಕಂಡು ಕಾಕ ಅಕ್ಕೊಂಡು
ಗುಲ್ಲಾಕ್ಕಂಡು ಬಂದ್ರೆ
ಎಲ್ಲನು ವಹಿಸ್ಕತ್ತಿನಿ ಕಂದ
ತಾಳ್ ಬೆಟ್ಟದಲ್ಲಿ ಬಂದು
ಸಾವಿರಾರು ಕೋಟಿ ಗಣಂಗಳು
ತಂಗಳನ್ನ ತಿಂದು ತಣ್ಣೀರ್ ಕುಡ್ದು
ಅಸ್ಸೊ ಹುಸ್ಸೊ ಅಂತೇಳಿ
ಒಂದೆಡೆ ಮಲಗ್ತಾರೆ
ಮತ್ತೆ ಸಾವಿರಾರು ಗಣಂಗಳು
ಮೂಕಳ್ಳಿ ಮಾರಮ್ಮನ
ದೇವಸ್ಥಾನದ ಮುಂದೆ
ಕಾಕ ಆಕ್ತಾರೆ ಪದ ಹೇಳ್ತಾರೆ
ಗುಲ್ಲಾಕ್ತಾರೆ ಕಂದ
ಈ ಆಮವಾಸೆಲಿ ಹುಟ್ದಂತ ಮುಂಡೆಮಕ್ಳ
ಅತ್ತೆಮಗ ಮಾವ್ನ ಮಗಳೂವೆ
ಮಾದೇಶ್ವರ
ಕಳ್ತನ ಸುಳ್ತನ
ಕೊಳಕ್ತನ ಬಡಸ್ತನ
ಎಲ್ಲ ಒಳಕ್ಕುತ್ತ ಆವ್ನ
ಮಾದೇವ ಸತ್ತೆ ನೋಡೋಣ
ಈ ಅಮಾವಾಸೆ ಕತ್ಲೆ ಒಳ್ಗೆ ಅಂತೇಳಿ
ಅತ್ತೆ ಮಗ ಮಾವ್ನ ಮಗ ಮಾತ್ನಡ್ಕಂಡು
ಸಾವಿರ ಕೋಟಿ ಮಧೆದಲ್ಲಿ
ಹೆಣ್ಣಿನ ಚಂದಕೆ ಗಂಡು ಒಲ್ದು
ಗಂಡಿನ ಚಂದಕ್ಕೆ ಹೆಣ್ ಒಲ್ದು
ಹೆಣ್ಣಿನ ಕೈನ ಈಳ್ಯ ಗಂಡ್ಗ
ಗಂಡಿನ ಕೈನ ಈಳ್ಯ ಹೆಣ್ಣಿಗೆ ಕೊಟ್ಟು
ಹೆಣ್ಣುಗಂಡು ಒಂದಾಗ್ ಬುಟ್ರೆ ಕಂದ
ಅದ್ಕೆ ಕಡ್ದು ಎಲೆಮಡಚುವರ್ಗೆ ಬುಡೊದಿಲ್ಲ
ಗುಡ್ಡದ ಮೇಲೆ ದುಂಬಾರೋದ್ರೂ ವರ್ಗೂ ಬಿಡೋದಿಲ್ಲ

ಮಗನೇ ಕಾರೇ ತಾಳಲ್ಲಿ ಕಾಯಯ್ಯ
ಕಾದಿದ್ದು ಗೋಣ ಮುರಿಯಯ್ಯ
ಅವರ ತಪ್ಪುನೆಪ್ಪು ನೋಡಯ್ಯ
ನೀ ಕುತ್ಮುರ್ದೆತ್ಕಂಡ್ಹೋಗಯ್ಯಾ ಹೋಗಯ್ಯಾ || ಕೋರಣ್ಯ ||

ಸಾವಿರ ಕೋಟಿ ಗಣಂಗಳು
ಮಲಗಿದ್ರು ಕೂಡ ಕಂದ
ಕೊತ್ತಿ ಮೆಳೆ ಅಡಿಯಲ್ಲಿ
ಬೆಕ್ಕಿನ್ ಮರಿ ಹೋದಾಗ
ಅತ್ತೆಮಗ ಮಾವ್ನ ಮಗಳ
ಮೂರು ಕುಕ್ಕಕುಕ್ಕಿ
ಮೂಗಳ ರಕ್ತ ಕುಡಿಸ್ಬುಟ್ಟು
ಬೇಲ್ಗೊಂದ್ ಖಂಡ ಬಿಸಿಲ್ಗೊಂದ್ ಖಂಡ ಅಂದ್ರೆ
ಆ ಹೆಣ್ಣು ಗಂಡ ತಕ್ಕಂಡೋಗಿ
ಬಿಕ್ಕಾಲಳ್ಳವಾಗ್ಲಿ ದೊಡ್ಡಾಲಳ್ಳವಾಗಗ್ಲಿ
ಎಡಗಡೆ ಒಂದು ಬಲಗಡೆ ಒಂದು
ಎತ್ನಾದಿಯೊಳ್ಗೆ ಮಲಗ್ಸ್ ಬುಡ್ತಿನಿ
ಅವರ ಹೆಣ ಎಲ್ಲೀವರ್ಗೆ
ಗೋಚ್ರ ಕೊಡೋದಿಲ್ಲ ಅಂದ್ರೆ
ನನ್ನ ಶೆಟ್ಟಿಸರ್ಗೂರಪ್ಪ ಬರ್ತನೆ
ಯಾರು ಮೇಲುಸಕ್ರೆ ಸೆಟಿ ಅವರು
ಸರ್ಗೂರಿಂದ ನನ್ನ ಶರಣು
ಯಾವ್ ರೀತಿಯಾಗಿ ಬರ್ತಾನೆ ಅಂದ್ರೆ
ಎರ್ಡು ಬಿಳಿನಾಮ ಇಟ್ಗಂಡು
ಬಿಳಿಪಾಕ್ ಕಟ್ಕಂಡು
ಆರಮಾನ ಅಚ್ಚೆಳ್ಳು
ಒಡೆಯದ ಹೊಂಬಾಳೆ
ಒಂಬತ್ತು ಎಳನೀರು
ಮೂರು ಚೆಟ್ಟಿನ ಬೆಲ್ಲ ತಕ್ಕಂಡು
ಬೂದ್ಗಂಬ್ಳಿ ಅಡ್ಡೊದ್ಕ ಹಾಕ್ಕಂಡು
ಎತ್ತಿನ್ ಗಿಡ್ಡನ್ ಮೇಲೆ ಕೂತ್ಗಂಡು
ಕಂಚಿನತಾಳ ಎಗಲ್ ಮ್ಯಾಲೆ ಹೊತ್ಗಂಡು
ದಂಡಗ್ ದಳ್ ವಾಯಾಗಿ ಬರ್ತಾನೆ
ಸೆಟ್ಟಿ ಸರ್ಗೂರಪ್ಪ
ಏಳುಮಲೆ ಕೈಲಾಸಕ್ಕ ಬಂದು
ಅಂಗೈ ಒಳ್ ಮಾಡಿ
ಮುಂಗೈ ಒನಕೆಮಾಡಿ
ನನ್ಗೆ ಎಳ್ನಲ್ಲಿ ಮಜ್ಜನ ಮಾಡಿ
ಇಂತಿರ್ಗಿ ಹೋಗುವಾಗ
ನನ್ನ ಪೂಜಾರಿ ಹೋಗಿ
ಉಗ್ರಾಣದ ಮನೆ ಒಳಗೆ
ಹುಲಿವಾನ ಕಟ್ಟಿದೆ
ಆ ಹುಲಿವಾನ ಬಾಯ್ಗ ಕೈಆಕದ್ರ
ಆವಾಗ್ ಗೋಚ್ರ ಕೊಡ್ತಿನಿ ಕಂದ
ಆವಾಗ್ ಪೂಜಾರಪ್ಪ ತಮ್ಟೆ ಹಾಕ್ಕಂಡ್
ಸಾರ್ತಾನೆ ಗಿರಿಮಾಳದಲ್ಲಿ
ಯಾವ್ದೊ ಪರ್ಸೆ ಹುಲಿ ಕುಕ್ ಬುಟ್ಟದೆ
ಹುಲಿ ಕುಕ್ ಬುಟ್ಟದೆ ನೋಡ್ರಪ್ಪ ಅಂತೇಳಿ
ಆವಾಗ್ ಗೋಚರವಿಲ್ಲ
ಎಲ್ಲಾ ಬೈಕಂಡ್ ಆಡ್ಕಂಡ್ ಹೊರ್ಟುಬಿಡ್ತಾರೆ
ದೂಪ ಆಕ್ಬುಟ್ಟು ಬರುವಾಗ ಆನೆ ತಲೆ ದಿಂಬ್ದಲ್ಲಿ
ಎತ್ನಾದಿ ಒಳಗ ಸರ್ಪನಾದಿ ಒಳಗೆ
ಆಕಡೆ ಈಕಡೆ ಹೆಣ ಮಡ್ಗವೆ
ನೋಡ್ಬುಡ್ತಾರೆ ಪರ ಗಣಂಗಳು
ಅಯ್ಯೋ ಮುಂಡೆ ಮಕ್ಳೆ
ಈ ಮಾದೇಶ್ವರ ಯಾತ್ರೆಗೆ ಬರ್ಬೇಕ್ ನೀವು
ಇಂತ ಕೆಲ್ಸ ಮಾಡುವುದಕ್ಕೆ ಅಂತೇಇ
ಸಾವಿರಾರು ಕೋಟಿ ಗಣಂಗಳು
ಒಂದೊಂದ್ ಕಲ್ಲಾಕಿ
ಕಲ್ ಮಲ್ಲಯ್ಯನ್ ಮಾಡ್ತಾರೆ ಕಂದ
ಅದಕ್ಕಾಗಿ ಸಣ್ಣುಲಿ ಮಡಿಗಿದ್ದಿನಿ ಅಂತೇಳಿ
ಮಾದಪ್ಪ ಎಲ್ಲಾ ಹುಲೀನು ಹೊಡ್ಕಂಡೋಗಿ
ಅಂತರಗಂಗ ಒಳ್ಗ ಹೆಜ್ಜೆಗೊಂದು
ಕರಿಕಒ ಮಾಡ್ಬುಟ್ರು

ಸ್ವಾಮಿ ಮಾದೇವ್ರು ಮಾತಕೇಳವುರೆ
ಮಾದೇವ್ನ ಮಾತ ಕೇಳವ್ರ
ಬೇಡರಕಣ್ಣಯ್ಯ ಗನಶರುಣ
ಮಜ್ಜನ್ವ ಬಾವ್ಗೆ ಬಂದವರೇ
ಹುಲಿಯಾನ್ನಾದರು ಕಟ್ಟವರೇ
ಬೆಳ್ಳಿಯ ಚೌಲ ತೆಗೆದವರೇ
ದುಂಬು ದೂಳ ತೆಗೆದವರೇ
ಗೊಂಡೆ ಕೌದಿ ಪಿಡುದವರೇ
ನೀಲೆ ಕೌದಿ ತೆಗೆದವರೇ
ಹೋಲಾವ ಪಿಡಿದವರೇ
ಉರಿಯ ಗದ್ಗೆ ಮಾಡವರೇ
ಸುಂಟುಗನಾದ ಹಿಡುದವರೇ
ಗಂಟಿಯ ಸರವ ಮಾಡವರೇ
ಮಂಡಲದಾವ ಹಿಡುದವರೇ
ಮಂಡಿಗೆ ಜಂಗ ಧರಿಸವರೇ
ಅಯ್ಯ ಹುಲಿಯ ಸುಂಗಾರ ಮಾಡುವರೇ
ಬಲಿಯ ಕಲ್ಲಿಗೆ ಕಟ್ಟವರೇ
ಗುರುವೇ ಹುಲಿಯ ಸುಂಗಾರ ಮಾಡಿವ್ನಿ
ತಾವು ಸುಂಗಾರವಾಗಪ್ಪ || ಕೋರಣ್ಯ ||

ಏಳುಮಲೆ ಮಾದಪ್ಪ ನಿಂಗೆ
ಎತ್ತಿದೆವು ಮಂಗಳಾರತಿಯಾ
ಮಹದೇವ
ದೂಪ ಸಾಂಬ್ರಾಣಿ ಹೊಗೆ
ಮಂಜು ಕವಿದಾವೋ

ಗುರುವೇ ಗುರುಪಾದವೇ
ಮಾಯ್ಕಾರ ಗಂಡ ಮಾದಪ್ಪ
ಹುಲಿ ಸುಂಗಾರವಾಯ್ತು ಗುರುವೇ
ಮಾದೇವ ಹೇಳ್ದ ಪ್ರಕಾರವಾಗಿ
ಹುಲಿಯನ್ನ ಬಲಿ ಕಲ್ಗೆ ಕಟ್ಟಾಕ್ಬುಟ್ಟು
ಬೇಡರಕಣ್ಣಪ್ಪ
ಮಾದೇಸ್ವರ ಕೋಟ್ಟಂತ ಮುತ್ತಿನ ಜೋಳ್ಗೆಯನ್ನು
ಅವ್ರ ಮುಂದೆ ತಕ್ಕಂಡೋಗ್ ಮಡ್ಗ್ ದ
ಬೇಡರ ಕಣ್ಣಪ್ಪ
ನಾನೊಂದ್ ಮಾತೇಳ್ತಿನಿ ಕೇಳು ಮಗನೇ
ಹೇಳಿಕೊಡಿ ನನ್ನ ಗುರುವೇ
ಒಂದ್ ಊರ್ಗೆ ಹೋದಂತ ಮುನ್ಸ
ಈ ಹೊತ್ತೆ ಬರ್ತಾನೆ ನಾಳೆ ಬರ್ತಾನೆ
ಎಂಬುದು ಗೊತ್ತಿಲ್ಲ
ಆ ಹೆಣ್ ಮಗಳು ಎಲ್ಲಿರುವಳೋ
ಯಾವ ಅಡವಿ ಅರಣದಲ್ಲಿರುವಳೋ
ಯಾವೂರು ಕೇರಿ ಒಳ್ಗಿರುವಳೋ
ಇಲ್ಲ ಪಟ್ಣ ಪಾಲಳ್ಳಿ ಒಳ್ಗಿರುವಳೋ
ನಾನು ನೋಡ್ಕಂಡ್ ಬರುವರ್ಗು ಕಂದ
ನನ್ನ ಏಳುಮಲೆ ಕೈಲಾಸ್ದಲ್ಲಿ
ನನ್ನ ಅತ್ತಿಕಟ್ಟೆ ಆಲದಕಟ್ಟೆ
ವೀರನಕಟ್ಟೆ ಮಾಂತಕಟ್ಟೆ
ಬಸವನ ಕಟ್ಟೆ
ಇದುವಲ್ಲದೆ ಕಂದ
ನನ್ನ ಬೇಡಗಂಪಣದವ್ರಿದ್ದಾರೆ

ನನ್ನ ನೂರೊಂದು ಒಕ್ಕಲು ತಮ್ಮಡಿ ಮಕ್ಕಳು
ಒಟ್ಟಿಗೆ ಜೋಕೆ ಕಣ್ಣಯ್ಯ || ಕೋರಣ್ಯ ||
ಕೋಲುಮಂಡೆ ಜಂಗುಮರು
ಕೋರಣ್ಯಕೆ ದಯಮಾಡವರೆ
ಕೋರಣ್ಯ ನೀಡಮ್ಮ ವೀರತು ಮುನಿಗಳಿಗೆ

ನೂರೊಂದು ಒಕ್ಕಲು ತಮ್ಮಡಿ ಮಕ್ಕಾ ಅಂದ್ರೆ
ಕಂದ ಬೇಡ್ಗಂಪ್ಣದವು
ಪಡುವಲಿಂದ ಬರುವಂತ
ಪರ್ಸೆ ನೋಡಿದ್ರೆ ಬಯಪಡ್ತಾ ಅವ್ರೆ
ಅವರ ಉಷಾರಾಗ್ ನೋಡ್ಕೊ ಕಂದ
ಇದುವಲ್ಲದೆ ಬೇಡರ ಕಣ್ಣಪ್ಪ
ಏಳುಮಲೆ ಕೈಲಾಸ್ದೊಳಗೆ
ಕಂದಾ ಹೇಳ್ತಾ ಇದ್ದೀನಿ ಕೇಳುಮಗನೆ
ನಾನು ಹೋಗಿ ಬರುವರಗೂವೆ
ನನ್ನ ಏಳಂಕಣ ಗುಡಿ ಗುಂಡಾರ
ಜೋಕೆ ಅಂತೇಳಿ
ಬೇಡರಕಣ್ಣಯ್ಯನಿಗೆ ಬುದ್ಧಿ ಹೇಳ್ಬುಟ್ಟು ಮಾದಪ್ಪ
ಬಿಲಿಮೊಲದ ಕಾಚ ದರ್ಸಗಂಡ್ರು
ಎಳಗಾವಿ ಎಳೆದೊದ್ದು
ಸುಳುಗಾವಿ ಮುಚ್ಚಕಟ್ಕಂಡು
ಒಕ್ಕಳಗಂಟಿ ಹುಲಿಚರ್ಮ
ಅಷ್ಟ ಪಾದಕ್ಕೆ ಅಮೀರ್ಗೆಜ್ಜೆ
ಕೊರಳತುಂಬ ರುದ್ರಾಕ್ಷಿ
ಮುತ್ತಿನ ಜೋಳ್ಗೆ ಧರಿಸ್ಕಂಡು
ಧರಗಾತ್ರದ ದಂಡಕೋಲು
ಬಲಗೈಲಿ ಹಿಡ್ಕಂಡು
ಅಯ್ಯ ವಾಲಿದರು ಹುಲಿಯನ್ನೇರಿದರು
ಜಾರಿದರು ಜಪಮಾಡಿದರು ಮಾದೇವಾ
ವಾಲಿದರು ಹುಲಿಯನ್ನೇರಿದರು
ಮಾಯ್ಕಾರಗಂಡ ನನ್ನಪ್ಪಾಜಿ
ಹನ್ನೆರಡೆಜ್ಜೆ ಹುಲಿಮೇಲೆ
ಪ್ರಸನ್ನವಾಗಿ ಕೂತ್ಗಂಡ್ರು
ಮಹಾದೇವ
ಆ ಹುಲಿ ಆಗಿರ್ತಕ್ಕಂತಾದ್ದು
ಹನ್ನೆರಡೆಜ್ಜೆ ಹುಲಿ
ತಾವು ದರ್ಸಿದಂತ ಆಭರ್ಣನೇ
ಹೊರ್ಲಾರ್ದೇನೆ ಅಲ್ಲಾಡ್ತ ತೂರಾಡ್ತ ಇತ್ತು
ಉರ್ಸಿಂಗ ಕೊಡ ಬಲಗೈಲಿ ಹಿಡ್ಕಂಡು
ಎಲಾ ಕೆಟ್ಟ ಮುಂಡೆ ಮಗ್ನ ಹುಲಿಯೇ
ನಾನು ಹೋಗುವಂತ ಕಾರ್ಯಕ್ಕೆ ನಿದಾನ ಮಾಡ್ಬೇಡ
ಜಾಗ್ರತೆಯಾಗಿ ನಡಿ ಅಂತ್ಹೇಳಿ

ಅಯ್ಯ ಉರ್ಸಿಂಗಿ ಕೊರಡ ತಗ್ದಾವ್ರೆ
ಮೂರು ಎಳ್ತ ಎಳದವ್ರೆ || ಕೋರಣ್ಯ ||