ಅಯ್ಯೊ ನಮ್ಮಪ್ಪನ ಮನೆ ದೇವರೆ
ಮಾಯಕಾರದ ಗಂಡ ಮಾದಪ್ಪ
ನನ್ನ ಹರಕೆ ನಿಮಗೆ ಒಪ್ಪುವಾಗಿಲ್ಲ
ನನಗೆ ಮಕ್ಕಳ ಭಾಗ್ಯ ನೀವು ಕೊಡುವಾಗಿಲ್ಲ ಗುರುವೆ
ನನ್ನ ಗಂಡನಾದ ನೀಲೇಗೌಡ
ಹಿಂದೆ ಯಾವ ರೀತಿಯಾಗಿ ನನಗೆ ಕೊಲೆ ಕೊಟ್ಟಿದ್ರೋ
ಅದೇ ರೀತಿ ಸೊಪ್ಪಿನ ಗುಳ್ಳು ಮಾಡಿ
ಕೊಲೆ ಕೊಟ್ಟು ಹೊಂಟೋಗಪ್ಪ
ನನ್ನದಾರಿ ನನ್ನದಾಗಲಿ ಅಂತ ಹೇಳಿದ್ರು

ಕಂದ ಹೆದರಬೇಡ ಕಂದ
ಬೆದರಬೇಡ ಕಂದ
ಪರಿವ್ರತೆ ಸಂಕಮ್ಮ
ಮಗಳೆ ನಾನಿದ್ದಮ್ಯಾಲೆ ಭಯವೇಕಮ್ಮ
ಸತ್ತುಭಾವೆ ಸಂಕಮ್ಮಾs || ಕೋರಣ್ಯ ||

ಇನ್ಯಾವರಿಕೆ ಮಾಡಿ ಹೇಳು ಮಗಳೆ ಧೈರ್ಯವಾಗಿ ಅಂದ್ರು
ಮಾದಪ್ಪ ಇನ್ನೊಂದರಿಕೆ ಮಾಡ್ತೀನಿ ಗುರುವೆ
ಅದನ್ನಾರು ಒಪ್ಪಿಕೊಂಡು ಮಕ್ಕಳ ಭಾಗ್ಯಕೊಡು ಅಂದ್ರು
ಅಂತಾಹದ್ಯಾವುದು ಹೇಳು ಕಂದ ಅಂದ್ರು
ನೋಡಿ ಗುರುವೇ
ಗಂಡೇಳು ಕೋಟಿ ಹೆಣ್ಣೇಳು ಕೋಟಿ
ಏಳು ಮಲೆ ಕೈಲಾಸಕ್ಕೆ ಬರ್ತಾರೆ
ಯಾವ ರೀತಿಯಾಗಿ ಅಂದ್ರೆ ಮಾದಪ್ಪ
ಮೀದು ಮಡಿಯುಟ್ಟು ಮೀಸಲು ಕಟ್ಟಿಕೊಂಡು
ಅವರ ಮನೆಯಿಂದ ಬರುವಾಗ
ಅಂದವಾದ ಮಡದಿ ಚಂದವಾದ ಮಡದಿ
ಒಳ್ಳೊಳ್ಳೆ ಮಕ್ಕಳ ಬಿಟ್ಟು ಬರ್ತಾರೆ
ದನ ಕುರಿ ಅಟ್ಟಿ ಮನೆ ಮಠ ಬಿಟ್ಟು ಬರ್ತಾ ಇದ್ದಾರೆ
ಮಾದಪ್ಪನ ಬೆಟ್ಟಕ್ಕೆ ಹೋಗೋರೆಲ್ಲ
ಆವಾಗ ಕಂದ ಅವರ ಮನೆಯಲ್ಲಿ
ನಾನು ಇಲ್ಲಿರುವುದಿಲ್ಲ ಏಳುಮಲೆಯೊಳಗೆ
ಅವರವರ ಮನೆಯಲ್ಲಿ ಕಾವಲಾಗಿ ಕಾಯ್ತಿನಿ ಕಂದ
ಅರಗಣ್ಣ ತಿರುಗಿ ಬುಟ್ಟುಗೊಂಡು
ಒಂದು ರ್ವಾಮ ಚುಳ್ಳೆನ್ನುವ ಹಾಗಿಲ್ಲ
ಅದೇ ರೀತಿಯಾಗಿ ನೋಡಿಕೊಳ್ಳೀನಿ
ಅದ್ಕ್ಕೋಸ್ಕರವಾಗಿ
ಏಳು ಮಲೆಗೆ ಹೊರಟಂತ ಪರುಸೆ
ನಡು ದಾರಿಯೊಳಗೆ ಬರ್ತಾರೆ ಕಂದ
ಅಪದುಡವಾದ ಮನುಷ್ಯ ಏನ್ಮಾಡ್ತನೆ ಅಂದ್ರೆ
ನಡು ದಾರಿಯೊಳಗೆ ಬಂದು
ನಾನು ಹೆಂಡ್ತಿಬುಟ್ಟು ಬಂದಿದ್ದೀನಿ
ಮಕ್ಕಳ ಬಿಟ್ಟು ಬಂದಿದ್ದೀನಿ
ನನ್ನ ದನಕುರಿ ಬಿಟ್ಟು ಬಂದಿದ್ದಿನಿ
ಮಾದೇಶ್ವರನ ಬೆಟ್ಟಕ್ಕೆ
ಹೋಗೋದು ಮೂರುದಿನ
ಬರೋದು ಮೂರುದಿನ
ಆರು ಮೂರು ಒಂಬತ್ತು ದಿನ ಆಯ್ತದಲ್ಲಪ್ಪ
ನಾನು ಹೋಗುವ ಹೊತ್ತಿಗೆ
ಏನಾದರೋ ನನ್ನ ಹೆಂಡತಿ ಮಕ್ಳು ಅಂತೇಳಿ
ನನ್ನ ಗ್ಯಾನ ಬಿಟ್ಟು
ಹಿಂದಕ್ಕೆ ಮನೆ ಗ್ಯಾನ ಮಾಡಿದ್ರೆ
ಅಂತಹ ಅಪದುಡವಾದ ಮಗನಿಗೆ
ಕಾಲಿನಲ್ಲಿ ಅಳ್ಳೊಪ್ಪಳೆ ಚಳ್ಳೊಪ್ಪಳೆ ಕೊಡ್ತೀನಿ
ಹಲ್ಲು ಸೂಲಿ ತಲೆ ಸೂಲಿಕೊಟ್ಟು
ಚಳಿಜ್ವರ ಕೊಟ್ಟುಬುಡ್ತೀನಿ ಕಂದ

ಮಗಳೆ ಮೂರು ಮೈಲಿ ದೂರಾಗವನ
ಜೋಲು ಕೊಟ್ಟಿ ಹೊರಿಸುರೆನೂs || ಕೋರಣ್ಯ ||

ಮೂರು ಮೈಲಿದೂರ ಜೋಲಿಕಟ್ಟಿಕೊಂಡು ಹೋಗಿ
ಹೊರುಬಾರದವರಿಗೆ ಹೊರೆ ಕೊಟ್ಟು ಬುಡ್ತೀನಿ ಕಂದ
ಅಲ್ಲೋಗಿ ಇಳಕ್ ಬುಡ್ತಾರೆ
ಒಬ್ಬ ಯಜಮಾನ ಕೇಳ್ತಾನೆ
ಏನಪ್ಪ ಮಗನೆ ಮಾದೇಶ್ವರನಿಗೆ
ಏನು ತಪ್ಪು ಮಾಡ್ದಪ್ಪ ಅಂತರೆ
ಏನೂ ಇಲ್ಲ ಯಜಮಾನ್ರೆ
ನಾನೂ ಮಾದೇಶ್ವರ ಬೆಟ್ಟಕ್ಕೆ ಹೊರಟುಬಿಟ್ಟೆ
ಆಡವರೊಂದಿಗೆ ಆಡ್ಕಂಡು
ಬಾಡು ಮೀನುತಿಂದಾಗೆ ಹೊರಟುಬಿಟ್ಟೆ
ಜೊತೆಯವರೊಂದಿಗೆ
ನನ್ನ ಹೆಂಡ್ತಿ ಬಿಟ್ಟು ಬಂದಿದ್ದೀನಿ
ಮಕ್ಕಳು ಬಿಟ್ಟು ಬಂದಿದ್ದೀನಿ
ನನ್ನ ದನ ಕುರಿ ಬಿಟ್ಟು ಬಂದೆನಲ್ಲ
ಒಂಬತ್ತು ದಿನದವರೆಗೂ
ಏನಾಗುತ್ತೋ ಅಂತೇಳಿ ಯೋಚನೆ ಮಾಡದಿ ಅಂತೇಳಿದ್ರು
ಅಯ್ಯೋ ಮುಂಡೇಮಗನೇ
ಮಾದೇಶ್ವರ ಬೆಟ್ಟಕ್ಕೆ ಹೊರಟ ಮ್ಯಾಲೆ
ಮನೆಗ್ಯಾನ ಮಾಡಬಾರ್ದು
ಮಾದಪ್ಪ ನಮ್ಮ ಮನೆ ಕಾವಲ್ಕಾಯ್ತನ
ಅಂತೇಲಿ ಆವಾಗ ಯಜಮಾನ್ರು
ದಾರಿಯಲ್ಲಿರ್ತಕ್ಕಂತ ಧೂಳ್ತ ತಗದು
ಅವನ್ ಮೈಕೈಗೆ ಸವರಿಬುಡ್ತಾರೆ
ಅವನಿಗೆ ಆನೆಯಂತ ರಭಸ
ಕುದುರೆಯಂತ ಓಟವಾಗುಬುಡುತ್ತೆ

ಆಮೇಲೆ ಮೂರು ಮೈಲಿ ದೂರಾಗವನು
ಕುಣುಕೊಂಡು ಕುಣಕಂಡೋಯ್ತವರೇs || ಕೋರಣ್ಯ ||

ಮಾಯಕಾರ ಮಾದೇವ ನಿಮ್ಮ
ಮಾಯ ಬಲ್ಲವರಾರಯ್ಯ
ಮನವ ಒಪ್ಪಿ ದುದುಗಳ ನೋಡೋ
ದುಂಡುಳ್ಳ ಮಾದೇವ

ಆವಾಗ ಮಾದಪ್ಪ
ಆ ಬರುವಂತ ಪರುಸೆಗಣಂಗಳಿಗೆ
ಸಸ್ತರಗಣಮೆ ಬಡ್ನಲ್ಲಿ ನಿಂತುಕೊಂಡು
ಯಂತ ಅರಾಯದವರು ಪರಾಯದವರು
ಅಸುಮಕ್ಕ ಹಾಲುಮಕ್ಕ ಮುದುಕೀರು ಮೋಟಿರು ಬರ್ತಾರೆ
ಎಲ್ಲ ಏಳು ಬೆಟ್ಟ ಹತ್ತಿಕೊಂಡು ಬರಬೋದು
ಸಸ್ತರಗಣಮೆ ಒದ್ದು ಅಂದರೆ ರಂಗನೊಡ್ಡಿನಲ್ಲಿ
ಯಂತಾ ಅರಾಯದಾಳು ಪರಾಯದಾಳಾದ್ರೂ
ಧಣಿದು ದಾಸಯ್ಯನಾಗಿ ಬೆವರು ನೀರು ಕಿತ್ತುಕೊಂಡು
ಹತ್ತನಾರದೆ ಮಂಡಿ ಹಿಡಕೊಂಡು ಬರ್ತನೆ
ಅಂತ ಜಾಗದಲ್ಲಿ ಕೂತುಗಂಡು
ಸಕ್ಕರೆ ಪಲಾರ ಕಿತ್ತಲೆ ಹಣ್ಣು ಪಲಾರ ಮಾಡಿ
ಅವರಿಗೆ ನನ್ನ ಮೈಮೇಗಲ ಬಟ್ಟೆ ತೆಗೆದು
ಸೆಕೆ ಬೀಸಿ ಜಳ ಹೊಡೆದು
ಅವರ ಸಂಕಟ ಪರಿಹಾರ ಮಾಡ್ತೀನಿ
ಹತ್ತಲಾರದ ಮುದುಕಿಯರು ಬಂದ್ರೆ
ಹೊತ್ಕೋಂಡೋಗಿ ಮ್ಯಾಲಕ್ಕೆ ಬಿಡ್ತಿನಿ ಕೈಡಿಡು
ಮಕ್ಕಳೆತ್ಕೊಂಡೋಗೊ ತಂದೆ ತಾಯಿಗಳ
ಮಕ್ಕಳೊತ್ಕೊಂಡೋಗಿ ಮ್ಯಾಲಕ್ಕೆ ಬಿಡ್ತಿನಿ ಮಾದಪ್ಪ
ತಿಂಗಾತಿಂಗಳು ಕೂತುಕೊಂಡು
ಚಾಕ್ರಿ ಮಾಡ್ತಿನಿ
ಇದನ್ನಾದ್ರು ಒಪ್ಪುಗೊಂಡು

ನನಗೆ ಮಕ್ಕಳ ಭಾಗ್ಯ ಕೊಟ್ಹೋಗಿ
ಸನ್ನಪ್ಪನ ಮನೆಯ ಮಾದೇವಾs || ಕೋರಣ್ಯ ||

ಕೋಟಿ ರಾಜನ ಕೊಂದವರೆ
ಕೊಂಗ ನಾಡಿಗೆ ಬಲದವರೆ
ಕೊಂಗ ನಾಡ ಗುಡಗಲ್ಲಲ್ಲಿ
ಮಾದೇವ ಒರಗವರೆ

ಅಯ್ಯೋ ಕಂದಮ್ಮ
ಆ ರೀತಿಯಾಗಿ ಬಡತನ ಸಿರಿತನ ಮಾತಾಡುಬ್ಯಾಡ
ಸಂಕಮ್ಮ
ಈ ಬರುವಂತಾ ಪರುಸೆಗಣಂಗಳು
ತಾವೇ ಕುಸಿಯಾಗಿ ಕಂದಾ
ತಾಳು ಬೆಟ್ಟದಲ್ಲಿ ಪೇಪರುಮಿಂಟು
ಕಿತ್ತಳೆಹಣ್ಣು ಬಾಳೆಹಣ್ ತಕ್ಕೂಂಡು ಬಂದು
ಆ ಸಸ್ತರುಗಣಮೆ ಒಡ್ಡ್ ನಲ್ಲಿ ಕುಂತುಗೊಂಡು
ಒಬ್ಬರಿಗೊಬ್ಬರು ಕುಸಿಮಾಡಿಕೊಂಡು
ಹತ್ತನಾರದೇನೆ ಏನಾರು ದಮ್ ಬಂದ್ಬುಟ್ಟು ಏದಿದರೆ
ಏನಯ್ಯ ನಗಾರಿ ಹಣ್ ತಿಂದ್ಯಾ ಅಂತೇಳಿ
ಕುಸಿಮಾಡ್ಕಂಬದು ಕೈಹಿಡಿದು
ಮ್ಯಾಲಕ್ಕೆತ್ತುಕೊಂಡು ಹೋಗಿ
ತಾವು ತಾವೆ ಕೂತುಗಂಡು
ಹಿಂದುಗಡೆ ಕೊಟ್ಟು ಬುಡ್ತಾರೆ
ಮುಂದುಗಡೆ ತಾವೇ ಈಸ್ಕಂಡ್ ತಿನ್ಕತ್ತರೆ
ತಮ್ಮ ಮೈಮೇಗಳ ಬಟ್ಟೆ ತೆಗೆದು
ತಾವು ತಾವೇ ಜಳೆಬೀಸಿ
ಕುಸಿಮಾಡ್ಕಂಡು ರಂಗನೊಡ್ಡಿಗೆ
ಬಂದುಬುಡ್ತರೆ ಕಂದ
ನಿನ್ನಿಂದ ಸಾಧ್ಯವಿಲ್ಲ ಮಗಳೆ

ನಿನಗೆ ಮಾಯದಲ್ಲಿ ಮಕ್ಕಳ ಕೊಟ್ರೆ ಮಗಳೆ
ನನಗೇನರಿಕೆ ಮಾಡೂವೇs || ಕೋರಣ್ಯ ||

ಅಂತರಗಂಗೆ ಅರುವಾರದಲ್ಲಿ
ಸಂತೋಷವೇನೂ ಮಾದಯ್ಯ
ಬಲೆಗಳ ಒಡ್ಡಿ ಹುಲಿಗಳ ಕರೆದಿ
ಮಾದೇವ ಬರುವನು ನೋಡಯ್ಯ

ಮಾದಪ್ಪ
ನನ್ನ ಕಷ್ಟ ನಿನಗೆ ಇನ್ನೂ ಅರುವಾಗಲಿಲ್ಲ ತಂದೆ
ನನ್ನ ಗಂಡನಾದ ನೀಲೇಗೌಡನ
ದುಷ್ಟ ಮಾತು-ಅಸುಮಾನುಕಾರ ದುಸುಮಾನುಕಾರ
ನನ್ನ ಗಂಡಾನಾದ ನೀಲೇಗೌಡ
ಈ ಟೈಮಿನಲ್ಲಿ ಬಂದು ಬಿಟ್ರೆ
ನನ್ನನ್ನು ಬಿಡುವಾಗಿಲ್ಲ
ನಿಮ್ಮನ್ನೂ ಬಿಡುವಾಗಿಲ್ಲ ಗುರುವೆ
ನಿಮ್ಮನ್ನು ನಿಂತಾಗೆ ಗೋಗಲ್ಲು ಮಾಡ್ ಬಿಡ್ತನೆ
ಕಾಡು ಕಟ್ಟೋನು ಮೇಘ ಕಟ್ಟೋನು
ಯಂತ್ರಗಾರ ಮಂತ್ರಗಾರ ಮಾಟಗಾರ ಸೂನ್ಯಗಾರ
ನನ್ನನ್ನು ಹೆಜ್ಜೇನು ಕತ್ತೀಲಿ
ತುಂಡೇಟು ಮುಂಡೇಟು ಮಾಡ್ ಬುಡ್ತನೆ
ಮಾದಪ್ಪ

ಅಪ್ಪ ನೀವು ಕೊಟ್ಟ ಭಾಗ್ಯವೆಲ್ಲ
ನೀವೇ ತಕ್ಕಂಡ್ಯೋಗಪ್ಪs || ಕೋರಣ್ಯ ||

ಅಡ್ಡೆ ಗುಡ್ಡೆಗಳೋ ಮಾದೇವ
ಒಡ್ಡಿನ ಪೂಜೆಗಳೋ
ಅಡ್ಡೆ ಗುಡ್ಡೆಗಳ ಮೇಲೆ ನಿಮ್ಮ
ರಡ್ಡೆ ಚಂಡುಗಳೋ

ಅಮ್ಮ ಸಂಕಮ್ಮ
ನಿನ್ನ ಗಂಡನಾದ ನೀಲೇಗೌಡ
ನನ್ನನ್ನು ಗೋಗಲ್ಲು ಮಾಡುವನು
ನಿನ್ನನ್ನೇನು ಕಡಿದಾಕಿದರೂ ಕಡಿದಾಕಿಬಿಡಬಹುದು
ನನ್ನ ಗೋಗಲ್ಲು ಮಾಡುವುದಕೆ
ನಿನ್ನ ಗಂಡನಿಂದ ಸಾಧ್ಯವಿಲ್ಲ ಮಗಳೆ

ನಿನ್ನ ಗಂಡ ಮಾಡುವ ಗಾರುಡುಗರವಿದ್ಯ
ನೋಡುವೆನೊಂದರಗಳಿಗೆ
ಕಂದ ಮಾಯ್ದಲ್ಲಿ ಮಕ್ಕಳ ಕೊಟ್ಟರೆ ಮಗಳೆ
ನನಗೇನರಿಗೆ ಮಾಡೀಯೇ || ಕೋರಣ್ಯ ||

ಅಯ್ಯೋ ಮಾದಪ್ಪ
ನಾನು ಮಾಡಿದಂತ ಹರಕೆ ನಿಮಗೆ ಇನ್ನೂ ಒಂದು ಒಪ್ಪಲಿಲ್ಲ
ಇನ್ನೊಂದು ಕಡೇ ಹರಕೆ ಮಾಡ್ತಿನಿ ಮಾದಪ್ಪ
ಅಂತಾದ್ಯಾವುದು ಮಗಳೆ ಅಂದ್ರು
ಸಿರಿ ಸಂಪತ್ತಿನ ಮಾತನಾಡುಬ್ಯಾಡ
ಬಡತನದಲ್ಲಿ ಹರಿಕೆ ಹೇಳು ಕಂದ ಒಪ್ಕೋತೀನಿ ಅಂದ್ರು
ಬಡತಾನದ ಮಾತೇ ಗುರುವೆ
ನನಗೆ ಅಡವಿ ಅರಣ್ಯದಲ್ಲಿ
ಹಿಂದಲಬಟ್ಟೆ ಮುಂದಕ್ಕೆ ಕೊಡೋರಿಲ್ಲ
ಮುಂದಲಬಟ್ಟೆ ಹಿಂದಕ್ಕೆಕೊಡೋರಿಲ್ಲ
ಅಸ್ನೀರು ಬಿಸ್ನೀರು ಕೊಡೋರಿಲ್ಲ ಗುರುವೆ
ಅಂದಕಾರದೊಡ್ಡಿ ನಿಂದಕಾರ ಪಟ್ಣ ಇದು
ಕಾ ಅನ್ನೋಕೆ ಕಾಗಿಲ್ಲ ಗೂ ಅನ್ನೋಕೆ ಗೂಗಿಲ್ಲ
ಈ ಜಾಗದಲ್ಲಿ
ನನಗೆ ಮಕ್ಕಳ ಭಾಗ್ಯ ಕೊಡಬೇಕಾದರೆ
ಅರುಮೂರೊಂಬತ್ತು ತಿಂಗಳು ತುಂಬಿದ ತಕ್ಷಣ
ಮೈತೂಗು ಬರಬಾರ್ದು
ಎದೆ ಕಪ್ಪತ್ತಬಾರದು ಬಾಣಂತಿ ಸೊಗಡೊಡಿಬಾರ್ದು
ಆ ರೀತಿಯಾಗಿ ನನ್ನಪ್ಪ
ನನಗೆ ನನ್ನ ಗರ್ಭದಲ್ಲಿ ಗುರುವೆ

ಅಪ್ಪ ಜೋಡಿಮಕ್ಕಳ ಕೊಟ್ಟರೆ ಗುರುವೆ
ಜೋಳುಗು ದಾನ ನೀಡುವೆನೋ
ಜೋಡಿ ಮಕ್ಕಳ ಕೊಟ್ಟಾರೆ ನಿಮ್ಮ
ಮುತ್ತಿನ ಜೋಳಗೆ ದಾನ ನೀಡುವೆನೋs || ಕೋರಣ್ಯ ||

ಸಾಭಾಸು ನನ್ನ ಕಂದ ಸಂಕಮ್ಮ
ಮಾಡ್ತಾ ಮಾಡ್ತ ಚೆನ್ನಾಗಿರುವಂತ ಹರಕೆ ಮಾಡ್ದೇ
ಹೆತ್ತಮ್ಮನಿಗೆ ಹೆಗ್ಗಣದ ಮರಿಯಾದ್ರೂ ಪ್ರೀತಿ ಅಂತೇಳಿ
ಹೆತ್ತಮ್ಮ ಮಕ್ಕಳ ಕೊಡೋದು ನಿಜವಾ ಕಂದ
ಬಿತ್ತಿದವರು ಬೆಳೆ ಕೊಡುವುದು ನಿಜವಾ ಮಗಳೇ ಅಂದ್ರು
ನಿನ್ನ ಪಾದ ಸಾಕ್ಷಿಯಾಗಿ ನಿನ್ನ ಜೋಳಿಗ್ಗೆ
ದಾನ ಕೊಟ್ಟು ಬಿಡ್ತಿನಿ
ಮಾದೇವ್ರು
ನನ್ನ ಬಂಜೆ ಅನ್ನುವ ಸ್ವರಣೆ ತಪ್ಪೋಗಲಿ ಗುರುವೆ ಅಂದಳು
ಕಂದ
ಏನು ಸತ್ಯ ಬಂಧಾನ ಮಾಡಿಯೇ ಅಂದ್ರು
ಬೆತ್ತದ ಮೊರವನ್ನು ಮಡುಗಬುಟ್ಟು ಸಂಕಮ್ಮ
ಮಾದಪ್ಪನ ಪಾದ ಹಿಡುಕೊಂಡಲು
ಮುರಡಿ ಬೆತ್ತ ಲಿಂಗ ಜಂಗು ಮುಟ್ಟಿ
ಮಾದೇವಾ
ನಿಮ್ಮ ಜಂಗು ಸಾಕ್ಷಿಯಾಗಿ
ಮುರುಡಿ ಬೆತ್ತದ ಸಾಕ್ಷಿಯಾಗಿ
ನನ್ನ ಮಕ್ಕಳ ದಾನ ಕೊಟ್ಟುಬುಡ್ತಿನಿ ಅಂತೇಳಿ

ಬೆತ್ತದ ಮೊರೆವ ಮಡುಗವಳೇ
ಮಾದೇವರ ಪಾದ ಹಿಡಿದವಳೇs || ಕೋರಣ್ಯ ||
ಒದೊಂದು ಪಾದ ಗುರುವೇ
ಒಂದೊಂದೇ ಪಾದ
ಒಂದೊಂದು ಪಾದದ ಮುಂದೆ
ಮಾದೇವರ ಪಾದ

ಸಹಾಭಾಷ್ ಕಂದ ಆಗಲಿ ಮಗಳೇ
ಧೈರ್ಯವಾಗಿರು ಅಂತೇಳಿ ಮಾದಪ್ಪ
ಈ ಮಗಳ ಗುಣ ತಿಳಿಯಬೇಕು
ಮಕ್ಕಳಿಗೋಸ್ಕರ ಇಷ್ಟು ಆಸೆ ಬಿಳ್ತಾ ಇದ್ದಾಳೆ
ಇವಳ ರುದಯದಲ್ಲಿ ಏನು ಭಕ್ತಿ ಇದೆಯೋ
ಏನು ಅಸಾಧ್ಯವಿರುವದೋ
ಇದನ್ನು ತಿಳಿಯಬೇಕಂತೇಳಿ ಮಾದಪ್ಪ
ಅಮ್ಮ ಸಂಕಮ್ಮ
ಈ ಅರಮನೆಯೊಳಗೆ ಮಕ್ಕಳಭಾಗ್ಯ ಕೊಡುವಂತ ಸ್ಥಳವಲ್ಲ
ನಾಳೆ ಮೂಡ್ಳಾಗಿ ಕಾಣುವಂತಾ
ಆಲೆಸ್ತ್ರೀ ಕೊಳ
ಹೊನ್ನರಳಿ ಮರದಡಿಯಲ್ಲೀ
ಬೆಳಗಿನ ಜಾವ ಸೂರ್ಯ ಉದಯವಾಗೊ ಹೊತ್ತಿಗೆ
ಹೊತ್ತು ಮೂಡುವ ಹೊತ್ತಿಗೆ
ಎಂಟುಗಂಟೆ ಹೊತ್ತಿಗೆ ಬಾ ಕಂದ ಅಲ್ಲಿಗೆ
ಮಕ್ಕಳ ಭಾಗ್ಯ ಕೊಡ್ತಿನಿ ಧೈರ್ಯವಾಗಿ ಅಂತೇಳಿ ಬುಟ್ಟು
ಮಹದೇವಾ

ಅಯ್ಯ ಹಾಲಳ್ಳದ ಹಾದಿಗಾಣೆ
ಆದಿಗುರು ದಯ ಮಾಡವರೇ
ಬೆಟ್ಟದ ಮಾದೇವ ಬರುವಾಗ
ಹುಟ್ಟುಗಲ್ಲು ಗುದುಗುಟ್ಟಿದವೋ

ಕತ್ತಲ ರಾಜ್ಯದ ಕೋಗಿಲೆ ಎದ್ದು
ಸ್ವರವೆತ್ತಿ ಕೂಗಿದವೋ

ಮಾದೇವಾ
ಮಾಯಕಾರ ಗಂಡ
ಆಲೇಸ್ತ್ರೀ ಕೊಳದ ಏರಿಯಮ್ಯಾಲೆ
ಹೊನ್ನಳ್ಳೀ ಮರದಡಿಯಲ್ಲಿ
ಅರವತ್ತ ವರ್ಷದ ಮುಪ್ಪಿನಕಾಲದ ಮುದುಕನಾಗಿ
ಮೂರು ಕಂಡುಗ ಹೆಗ್ಗಜ್ಜಿ
ಮೂರು ಕಂಡುಗ ತುರುಗಜ್ಜಿ
ಕಂಡವರು ಕಾರಬೇಕು
ನೋಡುದವರು ಇಸಿ ಇಸಿ ಅನ್ನಬೇಕು
ಆ ರೀತಿಯಾಗಿ ಗತಾಗತನೆ ನಾರ್ತ ಕೂತಿದ್ದಾರೆ
ಸಂಕಮ್ಮ
ಬೆಳಗಾಗುತ್ಲೆ ಎದ್ದು ಅರಮನೆಯೊಳಗೆ
ಸ್ನಾನ ಮಡಿಯನ್ನು ಮಾಡಿ
ಮೊಕವನ್ನೂ ತೊಳೆದುಕೊಂಡು
ಅರಸಿಣ ಕುಂಕುಮ ಧರಿಸಿಕೊಂಡು
ಅರಮನೆಯನ್ನು ಬಿಟ್ಟು ಹೊರಟಿದ್ದಾಳೆ

ಅಮ್ಮ ಅರಮನೆಯನ್ನಾದರೆ ಬಿಟ್ಟವಳೆ
ಆ ದೈವನ ಹುಡುಕೂತ ಹೊಯ್ತವಳೇs || ಕೋರಣ್ಯ ||
ಹರನ ಕಂಡಿ ಹಾದಿಯಲ್ಲಿ
ಶಿವನ ಕಂಡಿ ಶಿವರಾತ್ರಿಯಲ್ಲಿ
ಮಾದೇವಾ
ಎನ್ನೊಯಾ ಮಾದೇವರ ಕಂಡೆ
ನಾಗುಮಲೆಯೊಳಗೆ

ಮಾದೇವಾ ಮಾದೇವಾ
ನನ್ನಪ್ಪನ ಮನೆ ಮಾದೇವರೆ ಅಂತೇಳಿ
ಮಾದಪ್ಪನ ಸ್ಮರಣೆ ಮಾಡುತಾ
ಮೂಡ್ಲಾಗಿ ಹೊರಟಳು
ಆಲೇಸ್ತ್ರೀ ಕೊಳದತ್ರ ಹೋಗ್ತಾ ಹೋಗ್ತಾ
ಹೊನ್ನಳ್ಳಿ ಮರದಡಿಯಲ್ಲಿ ಕುಳಿತಿದ್ರು ಗುರುವೆ
ಸಂಕಮ್ಮನನ್ನು ನೋಡಿದ್ರು
ಯಾರವ್ವ ಕಂದ
ಹೆಣ್ಣು ಮಕ್ಕಳು ಬರುವಂತ ಸ್ಥಳವಲ್ಲ
ನೀನು ಬಂದುದು ಚೆನ್ನಾಯ್ತು ಮಗಳೇ
ಆದರೆ ನನಗೆ ಮೂರ್ತೀಗಳಾಯ್ತು ಕಂದ
ಹೆಗ್ಗಜ್ಜಿ ತುರುಗಜ್ಜಿ ಬಂದು
ನನ್ನ ಕಷ್ಟಾ ನೋಡೋರಿಲ್ಲ ಮಗಳೇ
ನನ್ನ ಮೈ ತೀಡಿ ನೆವೆತಪ್ಪಿಸವ್ವ ಅಂದ್ರು
ಸಂಕಮ್ಮ ನೋಡವಳೆ
ಅಸಿಸಿ ಇಸಿಸಿ ಅನ್ನಲಿಲ್ಲ
ಪತಿವ್ರತೆಯಾದ ಹೆನ್ಣು ಮಗಳು
ಏನಪ್ಪ ಜಂಗಮ ದೇವರೇ
ಇಂತಹ ಮುಪ್ಪಿನ ಕಾಲದಲ್ಲಿ
ಆ ಭಗವಂಗ ನಿಮಗೆ
ಇಂಥಾ ನೋವು ಕೊಡಬಹುದಾ ಅಂತೇಳಿ
ತನ್ನ ಎರಡು ಕೈನಿಂದ
ಆ ಮಾದೇವ ಹೇಳಿಹೇಳಿದ ಜಾಗದಲ್ಲೆಲ್ಲ
ಮೈನೆಲ್ಲ ತೀಡಿ ನೆವೆ ತಪ್ಪಿಸಿದಳು
ದಾವಾಗಬುಡ್ತು ಸಂಕಮ್ಮನಿಗೆ
ಏನಪ್ಪ ಜಂಗುಮರೆ
ಸ್ವಲ್ಪ ನೀರು ಕುಡಿಬೇಕಲ್ಲಪ್ಪ ಅಂದ್ರು
ಇಗೋ ನನಕಂದ
ಇಲ್ಲಿ ಕಾಣುವಂತ ಆಲೆಸ್ತ್ರೀ ಒಳುಗೆ
ಕುಡುಕೊಂಡು ಬಾ ಮಗಳೆ ಅಂದ್ರು
ಸಂಕಮ್ಮ ಓಡೋದ್ಲು ಆಲೆಸ್ತ್ರೀ ಕೊಳಕ್ಕೆ
ಕೈಬಾಯಿ ಒಂದ್ನೂ ತೊಳೀಲಿಲ್ಲ
ನೀರಿನ ದಾವಿಗೋಸ್ಕರವಾಗಿ
ಬಾಯಾರಿಕೆ ಜಾಸ್ತಿಯಾಗ್ಬುಡ್ತು
ಮೂರು ಬಗಸೆ ನೀರೆತ್ತಿ ಕುಡುಕೊಂಡು
ಹಿಂದುಮುನ್ನಾಗಿ ತಿರಿಗಿದ್ದಾಳೆ
ಮಾದಪ್ಪಾ
ಅದೇ ತಕ್ಷಣವಾಗಿ

ಅಲ್ಲಿ ಮಾಯವಾಗಿ ನಿಂತವರೇ
ಮಾಯಿಕಾರ ಮಾದೇವಾs || ಕೋರಣ್ಯ ||

ಏಳುನೂರು ಎಂಟನೂರು
ಮಂಟಪನೂರು ಮಠನೂರು
ಆಲಂಬಾಡಿ ಬಸವನ ಕೊರಳಲ್ಲಿ
ಗಂಟೆ ನೂರೊಂದೋ

ಮಾಯವಾಗಿ ಪ್ರತ್ಯಕ್ಷವಾಗಿ ನಿಂತುಕೊಂಡ ಮಾದಪ್ಪ
ಎಳಗಾವಿ ಎಳೆದೊದ್ದು ಸುಳಗಾವು ಮುಸಕಿಟ್ಟುಕೊಂಡು
ಮುತ್ತಿನಜೋಳಗೆ ಮುಂಗೈಲಿ ಧರಿಸಿಕೊಂಡು
ಧರೆಗಾತ್ರದ ದುಂಡುಗೋಲು ಬಲಗೈಲಿ ಹಿಡಿಕೊಂಡು

ಕಂದ ಹೆದರಬೇಡ ಕಂದಮ್ಮ
ಬೆದರಬೇಡ ಕಂದಮ್ಮ
ಪತೀವ್ರತೆ ಸಂಕಮ್ಮ
ಮಗಳೆ ನಾನಿದ್ದ ಮೇಲೆ ಭಯವೇಕಮ್ಮ
ಸತ್ತೂಭಾವೆ ಸಂಕಮ್ಮಾs || ಕೋರಣ್ಯ ||

ಕಂದ ಸಂಕಮ್ಮಾ
ಮಕ್ಕಳ ಭಾಗ್ಯಕೆ ಪಿಂಡ ಪ್ರಸಾದ ಕೊಡ್ತೀನಿ
ನಿನಗೆ ಮಕ್ಕಳಾಗ್ತಾವೆ ಕಂದ
ನಿನ್ನ ಗಂಡನಾದ್ ನೀಲೇಗೌಡ
ನಿನ್ನನ್ನು ದೊಡ್ಡಿಯೊಳಗೆ ಬಿಟ್ಟು ಹೋಗಿ ಆರು ತಿಂಗಳಾಗಿದೆ
ಗರ್ಭಿಣಿಯಾಕ್ತಿಯೆ ನನ್ನಕಂದ
ನಿನ್ನ ಗಂಡ ಬರೋಹೊತ್ತಿಗೆ
ನೀಲೆಗೌಡ ಅಸಮಾನುಕಾರ ಅಂತ ಹೇಳ್ತಾಯಿದ್ದೀಯೆ

ನಿನ್ನ ಗಂಡಬಂದ ಕೇಳಿದರೆ
ಏನು ಜವಾಬ ಹೇಳೂವೆs || ಕೋರಣ್ಯ ||