ಮಾದಪ್ಪ ಏಳುಮಲೆ ಕೈಲಾಸದಲ್ಲಿ ಕೂತ್ಕಂಡು
ಆನಂದವಾಗಿ ಬೇಡಗಂಪಣದವರ ಕೈಲಿ ಪೂಜೆ ಮಾಡಿಸ್ಕಂಡು
ನಾನು ಕೂತಿದ್ದೀನಿ
ನನ್ನ ಗದ್ದುಗೆಯೊಳಗೆ ಮೆರೆಯುವಂತ ದೇವರಿಲ್ಲ
ನಾನು ಪುಟುಲಿಂಗವಾಗಬೇಕು ಕಲಿಯುಗದಲ್ಲಿ
ಮರೆಯುವಂತ ದೇವರು ಮಾಡಬೇಕಲ್ಲ
ಐದು ಜನ ಋಷಿಗಳಾಗಬೇಕು
ಈಗ ಮೂರು ಜನ ಇದ್ದಾರೆ
ಅವರಿಗೆ ಮೆರೆಯೊ ಪಟ್ಟವಾಗಬೇಕು
ನನಗೆ ಗೊರವ ಪಟ್ಟವಾಗಬೇಕು ಅಂತ್ಹೇಳಿ
ನಾಗರಾಜನನ್ನು ಏಕವಾಗಿ ನೋಡ್ತಾ
ಆನಂದವಾಗಿ ಕುಳ್ತಿದ್ದಾರೆ

ಈ ಕಡೆ ನೋಡಪ್ಪಾ
ಕೊಕ್ಕರ ಕೊನಬೋಳಿ ಬೆಟ್ಟದ ಮಾಳದಲ್ಲಿ
ಹಿಂಡು ಸ್ವಾಲುಗರ ದೊಡ್ದಿವಳಗೆ
ಬೊಪ್ಪೇಗೌಡ ಅಂತ್ಹೇಳಿ
ಬೊಪ್ಪೇಗೌಡನಿಗೆ ಆರು ಜನ ಗಂಡುಮಕ್ಕಳಿದ್ದಾರೆ
ಆರು ಜನ ಗಂಡು ಮಕ್ಕಳಲ್ಲಿ
ಕಿರಿಯವನಾಗಿರತಕ್ಕಂಥವ ನೀಲೇಗೌಡ
ಆರು ಜನ್ದಲ್ಲಿ ಐದು ಜನ್ಕೆ ಲಗ್ನವಾಗಿದೆ
ಕಿರೀಮಗ ನೀಲೇಗೌಡ್ನಿಗೆ ಲಗ್ನವಿಲ್ಲ
ನೀಲೇಗೌಡ ಅಂದರೆ ಅಸಮಾನುಕಾರ ದುಸುಮಾನಕಾರ
ಕಾಡು ಕಟ್ಟೋನು ಮೇಘ ಕಟ್ಟೋನು

ಅಯ್ಯ ಕುಲದಲ್ಲಿ ಕರುಬೊಕ್ಕಲುಗೌಡ
ನೀತಿಯವೊಳಗೆ ನೀಲಯ್ಯ
ಜಾತಿಯವೊಳುಗೆ ಸ್ವಾಲುಗ

ಮಲೆಯ ಸ್ವಾಲುಗ ನೀಲಯ್ಯನಿಗೆ ಇಷ್ಟಕೊಪ್ಪುವ ಹೆಣ್ಣಿಲ್ಲ || ಕೋರಣ್ಣ ನೀಡಮ್ಮ ಕೋಡುಗಲ್ಲು ಮುನಿಗೆ ||

ಸತ್ತಿಗೆ ಸೂರಿ ಪಾಣಿಗಳು
ಗುರುವಿಗೆ ಹೊತ್ತಿನಲಿ ತಂಬಡಗೇರಿ
ಇತ್ತಿ ಮೆರೆದರು ಮಾದೇವರ ಗಂಡುಲಿಯಾ ಮ್ಯಾಲೆ

ಮಾಯ್ಕಾರ ಗಂಡ ಮಾದಪ್ಪ
ಆನಂದದಲ್ಲಿ ನೋಡ್ತಾ ಕೂತಿದ್ದಾರೆ
ಈ ಕಡೆ ನೀಲೇಗೌಡನಿಗೆ
ಎಲ್ಲೂ ಕೂಡ ಅವನ ತಂದೆ ತಾಯ್ಗಳು ಹೆಣ್ಣು ನೋಡ್ತಾ ಇದ್ದಾರೆ
ತಂದೆ ತಾಯ್ಗಳು ಬಂಧು ಬಳಗ
ಕಿರೀಮಗ ನೀಲೇಗೌಡ
ಕೋಪಿಷ್ಠ ಮನಸ
ಹೆಚ್ಚಾದ ಲಗ್ನ ಮಾಡಬೇಕು ಅಂತ್ಹೇಳಿ
ಹೊರಗಡೆ ಜಗಲೀಮ್ಯಾಲೆ ಕೂತ್ಕಂಡು

ಅವರು ತಂದೆತಾಯಿ ಕರೆದವರೆ
ಬಂಧು ಬಳಗ ಕರೆದವರೆ
ಅಣ್ಣ ತಮ್ಮ ಕರೆದವರೆ
ಕುಲದವರೆಲ್ಲ ಕೂಡವರೆ
ಜಾತಿಯವರೆಲ್ಲ ಸೇರವರೆ
ನೀಲಯ್ಯನಾದರೆ ಕರೆದವರೆ
ಕರೆದು ಬುದ್ಧಿ ಹೇಳವರೇ || ಕೋರಣ್ಣ ||

ನೋಡಪ್ಪ ಮಗನೆ ನೀಲೇಗೌಡ
ನಮಗೆ ನೀನು ಕಿರೀಮಗನು
ಬಹಳ ಹೆಚ್ಚಾಳದಲ್ಲಿ ಸಂತೋಷದಲಿ ಲಗ್ನ ಮಾಡ್ತೀವಿ
ಏಳೇಳು ಹದಿನಾಲ್ಕು ದೊಡ್ಡಿಯಿವೆ
ಆ ದೊಡ್ಡಿವೊಳಗೆ ಹೆಣ್ಣು ನೋಡ್ಕಂಡು ಬತ್ತೀವಿ ಅಂದ್ರು
ನೀಲೇಗೌಡ ನೀವು ನೋಡಿದಂತ ಹೆಣ್ಣು-ನನಗಿಷ್ಟವಿಲ್ಲ
ಅಂದವಾದ ಮಡದಿಯಿಲ್ಲ
ಚೆಂದವಾದ ಮಡದಿಯಿಲ್ಲ
ನನ್ನ ರೂಪಕ್ಕೆ ತಕ್ಕಂಥ ಹೆಂಡಿರಿಲ್ಲ
ನೀವು ಮದುವೆ ಮಾಡಬೇಡಿ ನನಗೆ
ನನಗೆ ಬೇಡ ಅಂತೇಳಿಬಿಟ್ಟು
ಕುರಿಕೋಲು ಕೈಲಿಡುಕೊಂಡು

ಅಯ್ಯ ಕುರಿಯನ್ನಾದರೆ ಒಡಕೊಂಡು
ಒಂದು ಕಾಡು ಪೋಡಿಗೆ ಹೊಯ್ತಾವರೇ
ನೀಲಗಿರಿ ನಿಜಭಕ್ತರು ಮರಳಿ
ಲೋಲ ಕಾಣೊ ದೇವಾ

ನೀಲೇಗೌಡ ಕುರಿಯನ್ನೊಡಕೊಂಡ್ಹೋಗಿ
ಕಾಡುಪೋಡ್ನಲ್ಲಿ ಮೇಯಿಸಿಕೊಂಡು
ಹೆಬ್ಬಳ್ಳದ ಕೆರೆ ಏರಿಮ್ಯಾಲೆ ಕೂತ್ಕಂಡ
ನೀರು ಕುಡುದು ನೆರಳಲಿ ನಿಂತಿದ್ದಾವೆ ಕುರಿಗೋಳೆಲ್ಲ
ಯೋಚ್ನೆ ಮಾಡ್ತ ಕೂತ್ಕಂಡ
ಅಯ್ಯೊ ಪರಮಾತ್ಮ
ನನ್ನ ಹಣೇಬರ್ಯ ಇಷ್ಟೇ ಇರ್ಬೋದು
ನನ್ನ ತಂದೆ ತಾಯ್ಗಳು ನೋಡ್ದ ಹೆಣ್ಣನ್ನು ಲಗ್ನವಾಗ್ಲಿಲ್ಲ
ನನ್ನ ಹಣೇಬರ್ಯ ಎಷ್ಟು ಜನಕ್ಕೆ ಬರ್ಬೋದು ಅಂತ್ಹೇಳಿ
ಆವಾಗ ಕುರಿ ಮೆಯಿಸ್ಕೊಂಡು ಬಂದು
ದೊಡ್ಡಿವೊಳಗೆ ತಂದು ಕೂಡ್ಬಿಟ್ಟು
ಊಟಾನು ಕೂಡ ಮಾಡದೇನೆ
ಅಣ್ಣ ತಮ್ಮಂದಿರ ಕೂಡ ಮಾತ್ನಾಡ್ದೇನೆ ಹೋಗಿ ಮುನಿಸ್ಕೊಂಡು
ಜಗಲಿಮ್ಯಾಲೆ ಮಲೀಕೊಂಡ
ತಂದೆ ತಾಯ್ಗಳು
ಕಿರೀಮಗ ಕೋಪಿಷ್ಠ ಮನಸ
ಮಗನೇ ನೀಲೇಗೌಡ ಬಾರಪ್ಪ ಮಗನೇ
ಏಳೇಳು ರಾಜ್ಯವೇ ಆಗ್ಲಿ ಪ್ರಪಂಚದಲ್ಲಿ
ಹುಡೀಕೊಂಡು ಬಾರಪ್ಪ
ನಿನ್ನ ಇಷ್ಟಕ್ಕೊಪ್ಪಿದ ಮಡದಿ ಮಾಡ್ತೀವೆಂದರು
ಆ ದಿವ್ಸ ನೀಲೇಗೌಡ ಊಟ ಮಾಡ್ಕಂಡು
ತಂದೆ ತಾಯ್ಗಳ ಮಾತಕೇಳಿ
ಕುರಿಕೋಲ ಮೂಲೇಲಿ ಮಡುಗಬುಟ್ಟು

ಅವನು ಬಡಗಲ ರಾಜ್ಯಕ್ಕೆಹೋಗವರೆ
ಅಲ್ಲಿ ಒಂದೆಣ್ಣ ನೋಡವರೆ
ತೆಂಕಲ ರಾಜ್ಯಕ್ಕೆ ಹೋಗವರೆ
ಅಲ್ಲಿ ಬಂದಣ್ಣ ನೋಡವರೆ
ಮಲೆಯ ಸ್ವಾಲುಗ ನೀಲಯ್ಯ
ಮೂಡಲ ರಾಜ್ಯಕೆ ಹೋಗವರೆ
ಅಲ್ಲಿ ಒಂದಣ್ಣ ನೋಡವರೆ
ಪಡುವಲ ರಾಜ್ಯಕ್ಕೆ ಹೋಗವರೆ
ಈರೇಳು ದೊಡ್ಡಿ ನೋಡವರೆ
ಏಳೇಳು ದೊಡ್ಡಿ ನೋಡವರೆ

ಅವನು ಇಷ್ಟು ಲೋಕ ತಿರುಗಿದರೂ
ಅವನ ಇಷ್ಟಕ್ಕೊಪ್ಪಾದ ಹೆಣ್ಣಿಲ್ಲ || ಕೊರಣ್ಯ ||

ಕೋಗುಲೆ ಎದ್ದು ಕೊಂಬೆಗಳೇರಿ
ಕೂಗುತವೆ ವಾದೇವರಾs
ರಾಗವೆತ್ತಿ ಪಾಡುತವೆ ಮಾದೇವರ ಪಾದಾವಾ

ಏಳೇಳು ಹದಿನಾಲ್ಕು ದೊಡ್ಡಿ ತಿರುಗಿದ ನೀಲೇಗೌಡ
ಅವನ ಇಷ್ಟಕ್ಕೊಪ್ಪುವ ಹೆಣ್ಣು ಸಿಕನಿಲ್ಲ
ಆವಾಗಯ್ಯೊ ನನ್ನ ಹಣೇ ಬರಹ
ತಂದೆ ತಾಯ್ಗಳ ಮಾತನ್ನ ಕೇಳಿ
ನಾನು ಲಗ್ನವಾಗ್ಬೇಕಾಗಿತ್ತು
ಹಿಂದೆ ಹೇಳ್ತಾಯಿದ್ರು
ತಾಯಿ ಮಾತು ಕೇಳದೇ ಇದ್ದವನು
ನಾಯಿ ತಿಕದ ಸೆತ್ತೆ ಅಂತ ಹೇಳ್ತಿದ್ರು
ಅದೇ ರೀತಿ ಆಗೋಯ್ತು
ನನ್ನ ತಂದೆ ತಾಯ್ಗಳ ಮಾತ ಈಂಕಾರ ಮಾಡ್ದಿ
ಈವತ್ತು ನನಗೆ ಅಂದವಾದ ಮಡದಿ ಇಲ್ಲ ಅಂತ್ಹೇಳಿ
ನನ್ನ ಹಣೆಬರಹ ಎಷ್ಟು ದಿನ ಇರಬೋದು ಅಂತ್ಹೇಳಿ
ಮನೇಲಿ ಬಂದು ಊಟ ಭೋಜನ ಮಾಡ್ಕಂಡು
ಕುರಿ ಕೋಲ ಕೈಲಿ ಹಿಡ್ಕಂಡ
ಕೊಕ್ಕೆ ಜೋಡು ಮೆಟ್ಟುಕೊಂಡು

ಅಯ್ಯಾ ಕುರಿಯನಾದರೆ ಹೊಡಕೊಂಡು
ಒಂದು ಕಾಡು ಪೋಡಿಗೆ ಹೋಯ್ತಾವರೇs || ಕೋರಣ್ಣ ||

ಕೊಂಬು ಕೋಡು ಸುಳಿ ಸುದ್ದಾ ನೋಡು
ಜಂಜೂ ದ್ವೀಪದ ಬಸವಣ್ಣಾ
ಕೊಂಬಲ್ಲಳಸೊ ಅಳೆಯಲ್ಲಿ ಗಂಥ
ಆಲಂಬೋಡಿ ಬಸವಣ್ಣನಿಗೇ

ನೀಲೇಗೌಡ ಹನ್ನೆರಡು ಗಂಟೆಗೆ ಸರಿಯಾಗಿ
ಕುರೀಗೆ ನೀರ ಕುಡಿಸಬೇಕು ಅಂತ್ಹೇಳಿ
ಹೆಬ್ಬಳದ ಕೆರೆಗೆ ಕುರಿ ಒಡಕೊಂಡ್ಹೋಗಿ
ನೀರು ಕುಡಿಸ್ಬುಟ್ಟು ಆಲ್ಕದ ಮರದ ನೆಳ್ಳಲ್ಲಿ ಕೂತ್ಕಂಡ
ಆ ಹೆಬ್ಬಳದ ಕೆರೆ ಪಕ್ಕದಲ್ಲಿ ಒಂದು ಮೂಡಲದ ಹೊಡ್ಡಿ ಇದೆ
ಮೂಡಲ್ಲೊಡ್ಡಿ ದುಂಡೇಗೌಡನ ದೊಡ್ಡಿ
ಆ ದುಂಡೇಗೌಡನ ದೊಡ್ಡಿಯಿಂದ
ಸಣ್ಣ ಸಣ್ಣ ಹೆಣ್ಣು ಮಕ್ಕಳೆಲ್ಲ
ಕಂಕಲ್ಲಿ ತಮ್ಮ ಹರವಿ ಇರೀಕೊಂಡು
ನೀರಿನ ಬಿಂದಿಗೆ ತಕ್ಕಂಡು
ಹೆಬ್ಬಳ್ಳದ ಕೆರೆಗೆ ನೀರಿಗೆ ಬತ್ತಾವ್ರೆ
ಅವರ ಜೊತೇಲಿ ದುಂಡೇಗೌಡನ ಮಗಳು
ಶಿವಶರಣೆಯಾದ ಸಂಕಮ್ಮ
ಮಕರ ಸಂಕ್ರಾಂತಿವೊಳಗೆ ಹುಟ್ಟಿದೋಳು
ಅದ್ಕೆ ಸಂಕಮ್ಮ ಅಂತ್ಹೇಳಿ ನಾಮಕರಣ ಮಾಡಿದ್ದು
ಆ ಹೆಣ್ಣು ಮಗಳು
ಯೌವನದ ಕಾಲ ಬಂದ ಟೇಮಿನಲ್ಲಿ
ತಂದೆ ತಾಯ್ಗಳ ಪಾದ ಸೇವೆ ಮಾಡಿ
ಪತೀವ್ರತ ಧರ್ಮ ಕಾಪಾಡ್ತ ಇದ್ದಳು
ಯಾವ ರೀತಿಯಾಗೆಂದರೆ
ಬೆಳಗಾಗುತ್ತ ಎದ್ದು
ತಂದೆ ತಾಯ್ಗಳ ಪಾದಕ್ಕೆ ನಮಸ್ಕಾರವನ್ನು ಮಾಡಿ
ಮನೆ ಕೆಲಸ ಬದುಕು ಮಾಡ್ತಾ ಇದ್ದಳು
ಆವತ್ತಿನ ದಿನ ಕಂಕುಳಲ್ಲಿ ಹರವಿ ಇರೀಕೊಂಡು
ಸಂಗಡಗಾತಿಯರ ಜೊತೆವೊಳಗೆ

ಅಮ್ಮ ಹೆಬ್ಬಳ್ಳದ ಕೆರೆಗೆ ಬತ್ತಾವಳಲ್ಲೋ
ಸತ್ತುವಂತೆ ಸಂಕಮ್ಮs

ಬಾ ನನ್ನ ಗುರುವೆ
ಭಕ್ತರ ಕಂದ ಬಾಗಿದೆನು ಮಾದೇಸ್ಪುರನೇs
ನೀಲಗಿರಿ ನಿಜ ಭಕ್ತರು ಮರಳಿ
ಲೋಲ ಕ್ಹಾಣೊ ದೇವಾs

ಹೆಬ್ಬಳದ ಕೆರೆಗೆ ಬರ್ತಾಇದ್ರೆ ಸಂಕಮ್ಮ
ಮ್ಯಾಲಕೆ ಅಂತು ನೋಡಲಿಲ್ಲ
ಅಕ್ಕಾ ಪಕ್ಕದವರ ದೃಷ್ಟಿ ಇಟ್ಟು ನೋಡಲಿಲ್ಲ
ಭೂಮಿ ತಾಯಿಗೆ ಬೊಕ್ಕೊಂಡು
ನಿಧಾನವಾಗಿ ಪುಟ್ಟೆಜ್ಜೆ ಹಾಕ್ಕೊಂಡು ಬರ್ತಾ ಇದ್ದಳು
ನೀಲೇಗೌಡ ಆಲದಮರದ ನೆಳ್ಳಲ್ಲಿ ಕೂತ್ಕೊಂಡು ನೋಡ್ದ
ಎಲ್ಲಾ ಹೆಣ್ಣು ಮಕ್ಳು ಒಂದು ರೀತಿಯಾಗಿ ಬತ್ತಾವ್ರೆ
ಮಧ್ಯ ಬರುವಂತ ಹೆಣ್ಣು ಮಗಳೂ
ಮ್ಯಾಲಕೆ ಅಂತು ನೋಡ್ದೆ ಬರ್ತಾ ಇದ್ದಾಳೆ ಅಂತ್ಹೇಳಿ
ಆ ಸಂಕಮ್ಮನ ಮೇಲೆ ದೃಷ್ಟಿ ಇಡ್ತಾವ್ನೆ

ಅವಳ ಅಂದಾ ಚೆಂದ ನೋಡವರೆ
ರೂಪು ರೇಖೆ ನೋಡವರೆ
ಕೆಂಪು ರಂಪ ನೋಡವರೆ
ಸುದ್ದ ಸುಳಿಯ ನೋಡವರೆ
ನಡಿಗೆ ನಡಿಗೆ ನೋಡವರೆ
ಒಂದು ದೃಷ್ಟಿನಾದರು ಇಟ್ಟವರೇ
ಮೋರ್ಚುನಾದರು ಹೋಗವರೆ || ಕೋರಣ್ಯ ||

ನೀಲೇಗೌಡ ಸಂಕಮ್ಮನ ಮೇಲೆ ದೃಷ್ಟಿ ಇಟ್ಟುಬುಟ್ಟ
ಕಣ್ಗೆ ಅಂಜನವೊಡದಪ್ಪಂದವಾಯ್ತು
ಯಾತಕ್ಕೋಸ್ಕರ ಅಂದ್ರೆ
ಆಕೆ ಪತೀವ್ರತೆಯಾದ ಹೆಣ್ಣು ಮಗಳು
ಈವತ್ಗೂ ಕೂಡಾ
ಪತೀವ್ರತೆಯಾಗಿರ್ತಕ್ಕಂಥ ಹೆಣ್ಮಕ್ಳಿಗೆ
ಕಣ್ಣೆತ್ತು ನೋಡಿದ್ರೆ ಕಣ್ಗೆ ಅಂಜನವೊಡದಪ್ಪಂದವಾಯ್ತದೆ
ಅದೇ ರೀತಿಯಾಗಿ ಕಣ್ಗೆ ಅಂಜನವೊಡದ್ಬುಡ್ತು
ಮೂರ್ಚೆ ಬಂದು ಮಲೀಕೊಂಡ ನೆರ್ಳಲ್ಲಿ
ಎಲ್ಲಾ ಹೆಣ್ಮಕ್ಳು ಬಂದು
ತಮ್ಮ ತಮ್ಮ ಹರವಿ ಬಿಂದಿಗೆಗಳನ್ನ ಬೆಳಗಿ
ನೀರು ತುಂಬಿ ಮಡಗ್ಬುಟ್ಟು ಕೈಕಾಲ್ಮೊಕ ತೊಳೀತಾವ್ರೆ
ನೀಲೇಗೌಡ ಮಲೇಸ್ವಾಲುಗ
ಕಾಡು ಕಟ್ಟೋನು ಮೇಘ ಕಟ್ಟೋನು
ತನ್ನ ಮೂರ್ಚೆ ತಾನೇ ತಿಳಿದ್ಕೊಂಡು ಉಸ್ಸೂ ಅಂತ್ಹೇಳಿ
ಎದ್ದು ಕೂತ್ಕೊಂಡು
ಕಣ್ಣು ತೀಡ್ಕೊಂಡು ಆ ಕೆರೆ ಏರಿ ಮ್ಯಾಲೆ ನಿಂತ್ಕೊಂಡ
ಸಂಕಮ್ಮನ ಪಕ್ದಲ್ಲಿ

03_81_MM-KUH

ಏನಮ್ಮ ಮಗಳೇ
ಯಾರ ಮಗಳು ನೀನು? ಲಗ್ನವಾಗಿದೀಯೋ ಲಗ್ನವಾಗ್ಲಿಲ್ಲವೋ ?
ಹೆಸರೇನು? ನಾಮಾಂಕಿತ ಅಂದರು
ಆವಾಗ ಸಂಕಮ್ಮ ಮ್ಯಾಲಕ ಅಂತು ನೋಡ್ಲಿಲ್ಲ
ಕೆಳಗೆ ಬಕ್ಕೊಂಡು ಕೇಳಪ್ಪ ಗಂಡುಪ್ರಾಣಿ
ಇಲ್ಲಿರುವಂತ ಮಕ್ಕಳ ಬಿಟ್ಟು ನನ್ಕೇಳ್ತಾ ಇದ್ದೀರಿ
ನಾನು ಇಲ್ಲಿ ಕಾಣುವಾಂತ ಮೊದಲುದೊಡ್ಡಿ
ದುಂಡೇಗೌಡನ ಮಗಳು
ನಾನು ಮಕರ ಸಂಕ್ರಾಂತಿ ಫಲದಲ್ಲಿ ಹುಟ್ಟುದೋಳು
ಅದಕ್ಕೆ ಸಂಕಮ್ಮ ಅಂತ್ಹೇಳಿ ನಾಮಕರಣ ಮಾಡಿದ್ದಾರೆ

ನಾನು ಹುಟ್ಟೀ ಬಂದ ಮೂವತ್ತು
ಮಂಡ ಮಾರಿ ಹನ್ನೆರಡು
ಮೈಯಾನ ಬಣ್ಣಾ ಕೆಡಲಿಲ್ಲ
ಬೊಕದ ಕಲೆಯೇ ತಪ್ಪಲಿಲ್ಲ
ನನ್ನ ಮೈಯಾನ ಬಣ್ಣ ಕೆಡಲಿಲ್ಲ
ನನಗೆ ಲಗ್ನ ಪ್ರಸ್ಥ ಆಗಿಲ್ಲ || ಕೋರಣ್ಯ ||

ನೀಲೇಗೌಡ ಅದೇ ತಕ್ಷಣ ಸಂಕಮ್ಮನಮಾತ ಕೇಳಿ
ತನ್ನ ಗ್ವಾಟೆವೊಳ್ಗೆ ಮಡಗಿದ್ದ ಮ್ಯಾಣಗಂಬದ ಚೀಲ್ದಲ್ಲಿ
ಪಂಚ ಮುಖದ ಕವ್ಡೆ ಬಿಟ್ಟು ನೋಡ್ದ
ಶಾಸ್ತ್ರ ಸರಿಯಾಗಿ ಬಂದ್ಬುಡ್ತು
ಶಿಲ್ಪಿ ಪಂಚಂಗ ಒಡ್ದು ಓದ್ದ
ಸಂಕಮ್ಮುನ್ಗೂ ನೀಲೀಗೌಡ್ನುಂಗೂವೆ
ಹೆಸರುಬಲ ಗುರ್ಬಲ ಕೂಟ ಗಣ ಸರಿಯಾಗಿ ಬಂದ್ಬಿಡ್ತು
ಅಯ್ಯೊ ಪರಮಾತ್ಮ ನನ್ನ ತಂದೆ ತಾಯ್ಗಳ ಮಾತ್ಮೀರಿ
ಏಳೇಳು ಹದಿನಾಲ್ಕು ಲೋಕ ತಿರುಗ್ದಿ
ಇವಳೇ ಹೆಂಡ್ತಿ ನಾನೇ ಗಂಡ
ನನಗೆ ತಕ್ಕಂಥ ಮಡದಿ ಸಿಕ್ದಳು ಅಂತ್ಹೇಳಿ
ತನ್ನ ಗ್ವಾಟೆವೊಳ್ಗೆ ಪಂಚಾಂಗ ಇರಿಸ್ಕಂಡು
ಕವ್ಡೆ ಇರಿಸ್ಕೊಂಡು

ಅಯ್ಯಾ ಕುರಿಯನ್ನಾದರೆ ಒಡಕೊಂಡು
ತಮ್ಮ ಪೋಡಿಗಾದರು ಬತ್ತಾವರೇs || ಕೋರಣ್ಯ ||

ಬಂಡಳ್ಳಿಯ ಬಸುವಣ್ಣಾನವರು
ಮುಂದು ಮುಂದೆ ಸೇಸಣ್ಣನವರೂ
ಮುಂದಲ ಪೂಜೆ ಮಾದಿರಿ ಗುರುವೇ
ನಾಗಭೂಷಣಗೇs

ಕುರಿಯನ್ನ ಒಡಕೊಂಡ್ಬಂದು ನೀಲೇಗೌಡ
ದೊಡ್ಡಿಯಲ್ಲಿ ಕೊಡ್ಬುಟ್ಟು ಆವಾಗ
ಕುರಿ ಕೋಲು ಮೂಲೇಲಿ ಮಡ್ಗಬುಟ್ಟು
ಕೊಕ್ಕೆ ಜೋಡ ಬಿಟ್ಟುಬಿಟ್ಟ
ಉದ್ದುಗಂಬಳಿ ಬಿಸಾಕಿ ಬಿಟ್ಟ
ಸಂತೋಷದಿಂದ ಕೈಕಾಲ್ಮೊಖ ತೊಳಕೊಂಡು
ಅಣ್ಣ ತಮ್ಮ ಅತ್ತಿಗ್ನಾದೀರ ಕೂಡ ಊಟ ಮಾಡ್ಕಂಡು
ಹೊರಗಡೆ ಬಂದು ಜಗಲೀಮ್ಯಾಲೆ ಕೂತ್ಕಂಡು

ಅವರ ತಂದೆ ತಾಯ ಕರೆದವರೆ
ಅಣ್ಣ ತಮ್ಮನ ಕರೆದವರೆ
ಕುಲದೋರ್ನೆಲ್ಲ ಕೂಡ್ಸವರೆ
ಅಕ್ಕ ತಂಗೀರ ಕರೆದವರೆ
ಭಾವ ಮೈದ್ನಾರ ಕರೆದವರೆ
ಜಾತಿಯವರ್ನೆಲ್ಲ ಸೇರಿಸ್ಯವರೆ
ಸೇರಿ ಮಾತನ್ನಾಡವರೇ || ಕೋರಣ್ಯ ||

ಅಯ್ಯಾ ಸಾಲು ಸಂಪಂಗಿ ಮರದಡಿಯಲ್ಲಿ
ಸಾಲಿಟ್ಟು ಮಲಗವರ್ಯಾರಯ್ಯಾ
ನೂರೊಂದಯ್ಯನ ತಮ್ಮಡಿ ಮಕ್ಕಳು
ಹೂವಿಗೆ ಬರುವಾರೊ

ಆವಾಗ ತಂದೆ ತಾಯಿ ತನ್ನ ಬಳ್ಗಾನೆಲ್ಲ ಸೇರಿಸ್ಕಂಡ
ನೋಡ್ರಪ್ಪ ನನ್ಗೆ ಲಗ್ನ ಮಾಡ್ಬೇಕಂತಿದ್ರಿ
ನಾನೊಂದೆಣ್ಣು ನೋಡ್ಕಂಡ್ಬಂದಿದ್ದೀನಿ
ಲಗ್ನ ಮಾಡ್ಕೊಡಿ ಅಂದ
ಎಲ್ಲರ್ಗೂ ಸಂತೋಸವಾಯ್ತು
ಆಗಲೀ ಮಗನೆ ಅಂತ್ಹೇಳಿ ಒಪ್ಕೊಂಡು
ತಿರುಗಾ ಬೆಳಗಾಗುತ್ತಲೇ
ನೀಲೇಗೌಡ ತನಗೆ ಬೇಕಾದಂಥ
ಯಜಮಾನರು ತಂದೆ ತಾಯಿ ಅಣ್ಣ ತಮ್ಮನ್ನ ಕರ್ಕೊಂಡು

ಅಯ್ಯ ದುಂಡೆಗೌಡನ ದೊಡ್ಡೀಗೆ
ಹೆಣ್ಣು ನೋಡಾಕೆ ಹೊಯ್ತವರೇs || ಕೋರಣ್ಯ ||

ದುಂಡೇಗೌಡ್ನ ಪೋಡಿಗ್ಹೋಗಿ
ಅವ್ರ ಜಾತಿ ಪದ್ದತಿ ಕುಲಪದ್ದತಿಯಂದರೆ
ಆ ಬೆಟ್ಟದ ಸ್ವಾಲುಗರು
ಸ್ವಾಲುಗ್ರ ದೊಡ್ಡೀ ಅಂದರೆ
ಅಟ್ಟಾ ಬೆಟ್ಟದಲ್ಲೀ
ಒಂದೊಂದು ದೊಡ್ಡೀ ಕಟ್ಕೊಂಡು
ಇರೋದ್ಕೆ ಸ್ವಾಲುಗರ ಪೋಡು ಅಂತ್ಹೇಳ್ತೀವಿ
ಆ ಸ್ವಾಲುಗರ ಪೋಡ್ನೊಳಗೆ

ನೀಲೇಗೌಡ ದುಂಡೇಗೌಡನ ದೊಡ್ಗೋಗಿ
ಅಯ್ಯಾ ಪಂತಿ ಒಳಗೆ ಊಟ ಮಾಡಿ
ಪಂತಿ ಒಳಗೆ ವೀಳ್ಯಾ ತಿದ್ದಿ
ಒಂದ ಪಂಚ್ ವೀಳ್ಯಾ ತಗದವನಂತೆ
ಮಲೆಯ ಸ್ವಾಲುಗ ನೀಲಯ್ಯಾs || ಕೋರಣ್ಯ ||

ಸೀಗೆ ತಾಳಲ್ಲಿ ಸಿವನಂತೆ
ಸರಗೂರು ಬೆಟ್ಟಕ್ಕೆ ಬನ್ನಪ್ಪ
ಮರಳಿ ಬಂದ ಮಾದಪ್ಪ ನಿಮಗೆ
ನೆರಳಲ್ಲಿ ಗದ್ದಿಗೆಯೋs

ನೀಲೇಗೌಡ ಆವಾಗ ಹಂತಿವೊಳಗೆ ಊಟಾ ಮಾಡಿ
ಪಂತಿವೊಳಗೆ ವೀಳ್ಯಾ ತಿದ್ದಿ
ಒಂದು ಪಂಚ್ ವೀಳ್ಯಾ ಅಮ್ದ್ರೆ
ಅವರ ಹೆಣ್ಣವ್ರ ಕಡೆ ನಾಲ್ಕಾರ್ಜನ
ಕೂತ್ಕೊಂಡು ಮಧ್ಯೆ ಒಪ್ಪಂದ್ ವೀಳ್ಯ ತಕ್ಕೊಂಡ್ರು
ಅದಕ್ಕೆ ಪಂಚ್ ವೀಳ್ಯಾಅಂತ್ಹೇಳಿ
ಸಂಕಮ್ಮನ ಕೂಟ ನೀಲೇಗೌಡ್ನ ಕೂಟ
ಇಬ್ಬರ ಗಣ ಹೆಸರುಬಲ ನೋಡಿ
ಅಲ್ಲೇ ಗುರುಹಿರಿಯರು ಯಜಮಾನ್ರು
ಲಗ್ನ ಬರಿಸ್ಕೊಂಡು
ವಾರಾವಾರ ಎಂಟು ದಿನಕ್ಕೆ ಲಗ್ನವಾಗ್ಬೇಕು ಅಂತ್ಹೇಳಿ
ನೀಲೇಗೌಡ ಲಗ್ನ ಬರಿಸ್ಕೊಂಡು

ಅಯ್ಯಾ ತಮ್ಮಾ ಪೊಡಿಗೆ ಬರ್ತಾವ್ರಲ್ಲೋ
ಮಲೆಯ ಸ್ವಾಲುಗ ನೀಲಯ್ಯಾs || ಕೋರಣ್ಯ ||