ಮಲೆಮಾದೇಶ್ವರ ಕಾವ್ಯದ ಕಲಾವಿದ ಶ್ರೀ ಹೆಬ್ಬಣಿ ಮಾದಯ್ಯನವರೊಡನೆ ಸಂದರ್ಶನ
ಸಂದರ್ಶಿಸಿದವರು: ಡಾ. ಕೇಶವನ್ ಪ್ರಸಾದ್ ಕೆ.

 

ಕೆ.ಪಿ.ಕೆ : ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದಿಂದ ನಾವುಗಳು ನಿಮ್ಮಿಂದ ಕಳೆದ ಹಲವಾರು ದಿನಗಳಲ್ಲಿ ಮಲೆ ಮಾದೇಶ್ವರ ಕಾವ್ಯವನ್ನು ದಾಖಲಾತಿ ಮಾಡಿಕೊಂಡಿದ್ದೇವೆ. ಈಗ ನಿಮ್ಮ ಬಗ್ಗೆ, ಆಮೇಲೆ ನಿಮ್ಮ

ಸಂಪ್ರದಾಯವನ್ನು ಕುರಿತು ಕೆಲ ಪ್ರಶ್ನೆಗಳ್ನ ಕೇಳ್ತೀವಿ ಉತ್ರ ಕೋಡ್ಬೇಕು. ಮೊದಲ್ನೆದಾಗಿ ನಿಮ್ಮ ತಂದೆ ತಾಯಿ ಹೆಸ್ರೇನು?

ಹೆ.ಮಾದಯ್ಯ : ತಂದೆ ಎಸ್ರು ನಂಜಯ್ಯ ಅಂತೇಳು ತಾಯಿ ಎಸ್ರು ಮಾದಮ್ಮ

ಕೆ.ಪಿ.ಕೆ : ನಿಮ್ಮ ಹೆಂಡ್ತಿ ಹೆಸ್ರೀನು ?

ಹೆ.ಮಾದಯ್ಯ : ಮೊದಲ್ನೆವ್ಳು ಹೆಣ್ಣು ಅವ್ಳಿಂಚರಿ ಏಡ್ಗಂಡು

ಕೆ.ಪಿ.ಕೆ : ನೀವೇನಾದ್ರೂ ಶಾಲೆ ಕಲ್ತೀದ್ದೀರಾ ?

ಹೆ.ಮಾದಯ್ಯ : ಕನ್ನಡ ೫ನೇ ಕ್ಲಾಸ್ ವರ್ಗು ಓದಿವ್ನೆಳಿ

ಕೆ.ಪಿ.ಕೆ: ನಿಮ್ದೂ ಯಾವ್ ಒಕ್ಲು?

ಹೆ.ಮಾದಯ್ಯ : ಮಾದೇಸ್ವುರ್ನ ಒಕ್ಲು ಹಿಂದೂ ಮಡಿವಾಳ್ ಶೆಟ್ರ ಅನ್ನಿ ನಮ್ದು.

ಕೆ.ಪಿ.ಕೆ: ನಿಮ್ಮ ಸ್ವಂತ ಊರ್ಯಾವ್ದು?

ಹೆ.ಮಾದಯ್ಯ : ಮಳವಳ್ಳಿ ತಾಲ್ಲೂಕು, ಮಂಡ್ಯ ಜಿಲ್ಲಾ ಹೆಬ್ಣಿ ಗ್ರಾಮ

ಕೆ.ಪಿ.ಕೆ : ನಿಮ್ಗೆ ಎಷ್ಟನೆ ವಯ್ಸನಲ್ಲಿ ಗುಡ್ಡನ ಬಿಟ್ರು?

ಹೆ.ಮಾದಯ್ಯ : ೧೯೩೮ನೆ ಇಸ್ವಿಲಿ ಅಂದ್ರೆ ಹನ್ನೆಡ್ನೆ ವಯ್ಸಲಿ ಗುಡ್ನ ಬಿಟ್ರು ಅನ್ನಿ.

ಕೆ.ಪಿ.ಕೆ : ಯಾವ ಗುರ್ಗಳತ್ರ ಗುಡ್ನ ಧೀಕ್ಷ ತಕ್ಕಂಡ್ರಿ?

ಹೆ.ಮಾದಯ್ಯ : ಮಾದೇಸ್ವುರ್ನ ಬೆಟ್ದಲ್ಲಿ ಸಾಲೂರ್ ಮಟ್ದ ಮುದ್ವೀರ್ ಸ್ವಾಮ್ಗುಳು

ದೀಕ್ಶ ಕೊಟ್ರು ನೋಡಿ.

ಕೆ.ಪಿ.ಕೆ: ನಿಮ್ಗೀಗ ವಯ್ಸೆಷ್ಟು ?

ಹೆ.ಮಾದಯ್ಯ : ಎಪ್ಪತ್ತುಂಬಿ ಎಪ್ಪತ್ತೊಂದ್ ನಡಿತದೇಳಿ.

ಕೆ.ಪಿ.ಕೆ: ನಿಮ್ಮ ಗುರ್ಗಳ್ ಯಾರು? ಅವರ ಹೆಸ್ರೇನು ?

ಹೆ.ಮಾದಯ್ಯ ; ಟಿ. ನರ್ಸಿಪುರ್ದ್ ತಾಲ್ಲೂಕ್ ಅಕ್ಕೂರು ಗ್ರಾಮ ಗುಡಿಮಗ್ಗಪ್ನೋರ ಮಗ ಕೆಂಚಯ್ಯನೋರು ಗಂಗ ಮತಸ್ಥರು. ಅವ್ರು ಈ ಕಲೆವೊಳ್ಗೆ ಮೈಸೂರ್ ಜಿಲ್ಲೆಲೆ ಬಾರಿಜೋರು ಕಲೆನೆಲ್ಲಾ ಕಲ್ತ್ ಬುಟ್ಟಿದ್ರು . ನಮ್ಮೂರು ಹೆಬ್ಣಿಪಕ್ದಲ್ಲಿ

ಮಂಚ್ನಳ್ಳಿ ಅಂತಿತ್ತು ಅಲ್ಲಿ ಗುರ್ಗಳಿದ್ರು ಅವ್ರು ಏಳ್ಕೊಟ್ರೂ

ಕೆ.ಪಿ.ಕೆ: ಎಷ್ಟು ವರ್ಷದ ಒಳ್ಗ ನಿಮ್ಮ ಮಾದಪ್ನ ಕಥಾ ಕಲ್ತಗಂಡ್ರಿ ?

ಹೆ.ಮಾದಯ್ಯ : ೧೯೪೦-೪೧ ಎರ್ಡೊಸ್ದ ಒಳ್ಗ ಕಲ್ತ್ ಬುಟ್ಟೇಳಿ.

ಕೆ.ಪಿ.ಕೆ : ನಿಮ್ಮ ಜೊತೇಲಿ ಇನ್ಯಾರ್ಯಾರಿದ್ರು ?

ಹೆ.ಮಾದಯ್ಯ : ನನ್ ಜೊತೆಲಿ ಇನ್ನಿಬ್ರಿದ್ರು ಅವ್ರು ಕಲಿನೆಲ್ಲೇಳಿ, ನನ್ಗ ಚೆನ್ನಾಗಿ ಮಿದ್ಲಾ ಓಡ್ತಿತ್ತು. ಆಮ್ಯಾಲ ನಮ್ ಗುರ್ಗಳ್ಗ ಚೆನ್ನಾಗಿ ಸೇವಾ ಮಾಡ್ತ ಇದ್ದೇಳಿ.

ಕೆ.ಪಿ.ಕೆ: ಮಾದಪ್ಪ ಕಥಾ ಕಲ್ತ್ ಮ್ಯಾಲ್ ಮೊದ್ ಮೊದ್ಲು ನೀವು ಎಲ್ಲಿ ಕಥಾ ಮಾಡಿದ್ರಿ ?

ಹೆ.ಮಾದಯ್ಯ : ಮಳವಳ್ಳಿ ತಾಲ್ಲೋಕು, ಮಂಡ್ಯಜಿಲ್ಲೆ, ಮಲ್ಲಿನಾಥಪುರ್ದ ಅರಸ್ನೋರು ಕರ್ಸಿ ಬೀಸ್ ಕಂಸಾಳೆ ಮಾಡ್ಸಿ ಕತಾ ಮಾಡ್ಸಿದ್ರು

ಕೆ.ಪಿ.ಕೆ: ನಿಮ್ಮ ಗುರ್ಗಳು ಮಾದಪ್ನ ಕಥ ಯಾವ ರೀತಿಲಿ ಹೇಳ್ಕೊಟ್ರು ?

ಹೆ.ಮಾದಯ್ಯ : ಅವ್ರು ಊರಿಂದ ಬಂದು ಒಂದೊಂದ್ವಾರ ಇರ್ತಿದ್ರು. ಊರೂರ್ಮೆಲ ಕರ್ಕೋಗವ್ರು. ಆಗ ಊರ್ಮೆಲಾ ಭಿಕ್ಷಾ ಮಾಡಾಗ ಬಂದ್ ಕತಾ ಏಳವ್ರು. ಮಾದೇಸ್ವುರ ಈ ರೀಗ್ಯಾತಿ ಹುಟ್ದ. ಈ ರೀಗ್ಯಾಗಿ ಆದಂತ. ಮಾದೇಸ್ವುರ ಈ ದಾರೀಲಿ

ಬಂದವ್ರೆ. ಈ ಗುರ್ಗಳತ್ತ ಹೋಗಿ ಇಂಗ್ಮಾಡುದ್ರು. ಮಾದೇಸ್ವುರ ಉಟ್ಟಂದದ್ದು ಎಲ್ಲಾನೂ ದಾರೀಲೆ ಏಳವ್ರು. ಅದ್ನೆಲ್ಲಾ ಗ್ಯಾಪ್ನದಲ್ಲಿ ಮಡಿಕಂಡಿವ್ನಿ.

ಕೆ.ಪಿ.ಕೆ : ಗುರುಸೇವೆ ಚೆನ್ನಾಗಿ ಮಾಡ್ದಿ ಅಂದ್ರಲ್ಲ. ಯಾವ ರೀತಿ ಮಾಡಿದ್ರಿ ?

ಹೆ.ಮಾದಯ್ಯ : ಗುರ್ಸೇವೆ ಅಂದ್ರು ಅವ್ರಿಗೆ ನಾವು ಕತೆ ಮಾಡಾಕೆ ಹೋಗ್ತಾ ಜೊತೆ ಒಳ್ಗೆ ಅವ್ರ ಮುಂದೆ ನಾನು ಹೋಗ್ತಾ ಇರ್ಲಿಲ್ಲ. ಅಮ್ಯಾಲ ಪ್ರಜೆಗಳು ಕೊಟ್ಟಾಂತ ಕಾಸು ಏನಾದ್ರು ದಾನ ಕೊಟ್ಟದ್ದನ್ನ ನಾನು ಅವ್ರಿಗೆ ಕೊಡ್ಬುತ್ತಿದೆ. ಗುರುವೆ ನೀನೇ

ತಕಂಬೇಕಪ್ಪ ನಾಕ್ ಜನ ಮಕ್ಳುಳ್ಳವ್ರು ಅಂದ್ಬುಡ್ತಿದ್ದಿ. ಕರ್ಕಂಡೋಗಿ ಅವ್ರ ಊರತ್ರ ಹೊಳೆಯಿಂದಾಚ್ಗೆ ಕಳ್ಸ್ ಬುಟ್ಟು ಬರ್ತಾಯಿದ್ದಿ ಅರ್ಗೋಲ್ ಮ್ಯಾಲೆ ಕೂರ್ಸಿ. ಊರೆಲ್ಲಾ ಭಿಕ್ಷಾ ಮಾಡಿದ್ರು ಕೂಡ ಒಂದ್ಕಾಳು ರಾಗಿ ತಕಂತಿರ್ಲಿಲ್ಲ.

ಅವ್ರುರ್ಗೆ ಸ್ನಾನ ಮಡಿ ಮಾಡ್ಸೋದು, ಅವ್ರ ಬಟ್ಟೆ ಹಿಂಡೋದು, ಕರ್ಕಂಡೋಗಿ ಕೆರ ಅತ್ರ ಮೈ – ಕೈ ನಸಿಯೋದು ಚೆನ್ನಾಗ್ ಸೇವಾ ಮಾಡ್ತ ಇದ್ದಿ.

ಕೆ.ಪಿ.ಕೆ: ಆಗ ನೀವು ಪ್ರತಿ ತಿಂಗಳು ಮಾದಪ್ನ ಸೇವೆಗ್ಹೋಗ್ತಿದ್ರ ?

ಹೆ.ಮಾದಯ್ಯ : ತಪ್ದೆ ಪ್ರತಿ ತಿಂಗ್ ತಿಂಗುಳ ಹೋಗ್ತಾ ಇದ್ದೇಳಿ

ಕೆ.ಪಿ.ಕೆ: ಮಾದಪ್ನ ಸೇವೆಗ್ಹೋಗೋವಾಗ ಏನಾದ್ರು ಕ್ರಮ ಉಂಟಾ ?

ಹ್.ಮಾದಯ್ಯ : ಮನೆ – ಕೋಣೆ ಸಾರ್ಸಿ ಹೆಂಗಸ್ರು ಕೂಡ ಮಡಿಯಾರಿ ರಾತ್ರಿ ಹಾಲ್ ತಂದು ತಾಯ್ಸಿ ಎಪ್ಪಾಕ್ ಬೇಕು. ಬೆಳಿಗ್ಗೆ ಎದ್ದು ಪೂಜೆ ಮಾಡಿ ಒಲೆ ಹತ್ಸಿ ಅನ್ನ ಮಾಡಿ ಬುತ್ತಿ ಕಟ್ಟಕ ಅಡ್ಕ ಪತ್ರ ತಂದು ಅದನ್ನು ತೊಳ್ದು ಒಂದು ಮೊರ್ದ

ಮ್ಯಾಲ ಮಡ್ಗಿ ಅಡಿಗ ದಾರಾ ಅಕ್ತಿದ್ರು ಕಟ್ಟಕ. ಆಗ ಅಡ್ಕ ಪ್ರತ್ಯಕ್ಕ ಮೊಸ್ರು ಸಾವ್ರಿ ಅನ್ನ ಬೆಳ್ಳುಳ್ಳಿ ಉಪ್ಪು ಕಲ್ಸಿ ಮೀಸಲ ಬುತ್ತಿ ಕಟ್ಟುತ್ತಿದ್ದೋ. ಅದಕ್ಕ ಅರಸ್ಣ, ಕುಂಕುಮ ಹಾಕಿ ಪೂಜೆ ಮಾಡಿ ನಡ್ ಮನೆಲಿ ಮಡ್ಗ್ ಬುಡದು. ಆಮ್ಯಾಲ

ಬೆಟ್ಗೋಗವ್ರು ಸ್ನಾನ ಮಡಿ ಮಾಡಿರ್ತಿದ್ರೂ. ಊಟ ಮಾಡ್ಕಂಡು ಊರ್ನೆಲ್ಲಾ ಕೇಳ್ಕಂಡು ಎಲ್ರದು ಆಗಿದ್ರ ಸಾಂಬ್ರಾಣಿ ಹಾಕಂದು ಕಂಸಾಳೆ ಒಡ್ಕಂದ್ ಎಲ್ಲಾ ದೇವ್ ಸ್ತಾನ್ದತ್ರ ಜೊತೆ ಸೇರ್ತಿತಿದ್ದು. ಅಲ್ಲಿ ಹಣ್ಣು – ಕಾಯಿ ಪೂಜೆ

ಮಾಡ್ಸಿ ಮಂಗಳಾರ್ತಿ ಕೊಟ್ಟು ತೀರ್ತ ತಕಂಡು ಉಗ್ಯವ್ ಆಕ್ಬುಟ್ಟು ನಾವು ಮೀಸಲು ಬುತ್ತಿ ಎತ್ಕತಿದ್ವಿ. ಆಗ್ನೋಡಿ ಆಲ್ಕಂಡ್ ಜೋಲ್ಕಂದ್ ಎಲ್ರು ಸಾಲಿಡ್ಕಂಡ್ ಹೋಯ್ತಿದ್ವಿ.

ಕೆ.ಪಿ.ಕೆ: ನಿಮ್ಮ ಸ್ವಂತ ಊರ್ಬುಟ್ಟುಟ್ಟು ಬೆಂಗ್ಳೂರ್ಗೆ ಯಾವಾಗ್ ಬಂದದ್ದು ?

ಹೆ.ಮಾದಯ್ಯ : ೧೯೫೯ರಲ್ಲಿ ಬಂದ್ಬುಟ್ಟೆ ಅನ್ನಿ ಬೆಂಗ್ಳೂರ್ಗೆ.

ಕೆ.ಪಿಕೆ. :ಊರ್ಬಿಟ್ಟದುಯಾವ್ಕಾರ್ಣಕ್ಕೆ ?

ಹೆ.ಮಾದಯ್ಯ; : ಅಲ್ಲಿಕ್ಸಾಮ್ಗಾಲಬಂದ್ಬುಡ್ತು.ಬೆಜ್ಜಲಬೂಮುಜೀವ್ನಮಾಡಾದುಕಸ್ಟಆಯ್ತು

ಕೆ.ಪಿ.ಕೆ: ಬೆಂಗ್ಳೂರ್ಲಿ ಕಥಾ ಮಾಡಕ ಕರೀತಾಯಿದ್ರ್ ?

ಹೆ.ಮಾದಯ್ಯ : ಮನೆವೊಳ್ಗೆ ಮಾಡ್ತಾ ಇದ್ವೊ. ಪೋಟ ತಕಂಡೋಗಿ ಪೂಜೆ ಮಾಡ್ಬುಟ್ಟು ಕತಾ ಮಾಡ್ತಿತ್ತಿದ್ದೇಳಿ.

ಕೆ.ಪಿ.ಕೆ: ಊರ್ಲಿ ಕಥಾ ಮಾಡದ್ಕು ಬೆಂಗ್ಲೂರ್ಲಿ ಕಥಾ ಮಾಡದ್ದು ಎನ್ ವ್ಯತ್ಯಾಸ ಕಂಡ್ರಿ ?

ಹೆ.ಮಾದಯ್ಯ : ಏನು ಇಲ್ಲೇಳಿ ಹಳ್ಳಿಲಿ ದುಡ್ದುಕಾಸು ಕಡ್ಮಿ ಆದ್ರೆ ಬೆಳಗಾನ ಕೇಳ್ತಿದ್ರು ಬೆಂಗ್ಲೂರ್ಲಿ ಕಡ್ಮಿ ಟೈಮ್ ಕೇಳುದ್ರು ಅವ್ರಿಗಿಂತ್ಲು ಖುಷ್ಯಾಗಿ ಕೇಳ್ತಾರೇಳಿ.

ಕೆ.ಪಿ.ಕೆ : ನಿಮ್ಮ ಕಲೇನ ಎಷ್ಟ್ ಜನಕ್ಕೆ ಕಲ್ಸಿದ್ದೀರಿ?

ಹೆ.ಮಾದಯ್ಯ : ಕೊತ್ತೆಗಾಲ್ದ ನಂಜಯ್ಯ, ಟಿ. ನರ್ಸಿಪುರ್ದ ಮಾದೇವಯ, ಮಳವಳ್ಳಿ ತಾಲೋಕ್ನ ಬೂದ್ಗೆರೆ ಕೆಂಪಯ್ಯ. ಇನ್ನು ಸ್ವಲ್ ಸ್ವಲ್ಪ ಕಳ್ತವ್ರು ಅವ್ರು ಅನ್ನ.

ಕೆ.ಪಿ.ಕೆ : ನಿಮ್ಮ ಮನೇಲಿ ಯಾರ್ಗ್ ಕಲ್ಸಿದ್ದೀರಿ ?

ಹೆ.ಮಾದಯ್ಯ : ನನ್ನಿರಿ ಮಗನ್ನ ಗುಡ್ಡನ್ ಬಿಟ್ಟು ಅವನ್ಗೂ ಕಲ್ಸಿದ್ದೀನೇಳಿ. ಆಮ್ಯಾಲ ನನ್ನ ಮೊಮ್ಮಕ್ಳುಗು ಕಲ್ಸಿದ್ದೆನೇಳಿ.

ಕೆ.ಪಿ.ಕೆ: ಗುಡ್ಡನ್ನ ಬಿಡಾದು ಎಷ್ಟ್ನೆ ವರ್ಷಕ್ಕೆ?

ಹೆ.ಮಾದಯ್ಯ : ಹನ್ನೆರಡ್ನೆ ವರ್ಸಕ್ ಮಾಡ್ಬೇಕೇಳಿ. ಚಿಕ್ ಮಯಸಾದ್ರ ಬಕ್ತಿ ಗೊತ್ತಾಗಲ್ಲ ಎಂಜ್ಲು. ಪಂಜ್ಲು ತಿನ್ ಬಾರ್ದೇಳಿ.

ಕೆ.ಪಿ.ಕೆ: ಗುಡ್ನಬಿಡೋ ಕ್ರಮ ಹೇಗೆ ತಿಳಿಸ್ತಿರಾ ?

ಹೆ.ಮಾದಯ್ಯ : ಮೊದಲುಟ್ದ ಗಂಡ್ ಮಗನ್ ಗುಡ್ಡನ್ ಬುಡ್ಬೇಕಾದ್ರೆ ಆಸ್ವಾಮಿಗೆ ಮೊದ್ಲೆ ಕೈ ಮುಗಿತಾರೆ. ಆಗ ಮಗನ್ಗ ಹನ್ನೆರಡ್ ವರ್ಸ ತುಂಬ್ದಾಗ ಗುಡ್ಡನ್ ಬುಡ್ಬೇಕೇಳಿ. ಸಾಮಾನ್ ಸರಂಜೆಲ್ಲ ಅಂಬುರ್ಸಕಬಿಟ್ಟು

ಮಾದೇಸ್ವುರ್ನ ಬೆಟ್ದಲ್ಲಿ ನಮ್ಮ ಗುರ್ಗಾಳು ಶಾಂತಮಲ್ಕಾರ್ಜುನಸ್ವಾಮಿ ಅವಿಂದ ಆಡ್ರು ಪಡಿಬೇಕ್ ನೋಡಿ. ನಮ್ ಗುರ್ಗಾಳು ನಮ್ ಹಳ್ಳೀಮೊಳ್ಗೆ ಹತ್ತಾರು ಹಳ್ಳಿಗೊಬ್ಬ ಪುರ್ಸಿಕಾನಿ ಅಂತೇಳಿ ಒಬ್ಬ ಗುಡ್ಡನ್ನ ನೇಮ್ಕ ಮಾಡವ್ರೆ.

ಅವ್ರು ಗುಡ್ಡನ ಬುಡ್ಸಾಕ ಬರ್ತಾರ.

ನೆಂಟ್ರು – ಎತ್ತು, ಬಂಧು-ಬಳ್ಗ ಎಲ್ರುನು ಕರ್ದುಬುಟ್ಟು ರಾತ್ರಿವೊತ್ತು ಹುಡ್ಗನ್ನ ಕೂರ್ಸಕಂಡು ಒಟ್ಗೆ ಊಟಮಾಡ್ಕತ್ತಾರೆ. ಗುಡ್ನಾದ್ ಮ್ಯಾಲ ಅವ್ನು ಬ್ಯಾರವ್ರ ಎಂಜ್ಲು ಮುಟ್ಟಂಗಿಲ್ಲ. ನಮ್ಮೆಂದ್ಲ ಅಂದ್ರ ಗುಡ್ಗಳ ಎಂಜ್ಲ ಮುಟ್ಟಹ್ದು. ಬೆಳಿಗ್ಗೆ

ಎದ್ದು ಅಜಮರವ್ನ ಕರ್ಸಿ ಅವುನ್ಗ ಕಾಣ್ಕೆ ಮೊರ್ದಲ್ಲಿ ಅಕ್ಕಿ, ತೆಂಗಿನ್ ಕಾಯಿ, ತಾಂಬೂಲ, ಐದ್ಹಣ ಮಡಗ್ತಾರೆ, ಹುಡ್ಗನ್ಗ ಉಪ್ವಾಸ ಇರ್ಸಿ ಅಸೆಮ್ಯಾಲ ಕೂರ್ಸಿ ಬಟ್ಟಲ್ಗೆ ಹಾಲು – ತುಪ್ಪ ಮಡ್ಗಗ್ತಾರೆ. ಅವ್ನು ಕತ್ತಿ ಪೂಜೆ ಮಾದಿ ಹುಡುಗ್ನ

ಮಂಡೆಗೆ ಹಾಲು – ತುಪ್ಪ ಹಾಕಿ ಚೌರಾಮಾಡ್ತಾನೆ. ಹುಡುಗ್ನ ಕರ್ಕಂಡೋಗಿ ಬಂಧು- ಬಳ್ಗವೆಲ್ಲ ಅಸೆಮ್ಯಾಲ್ ಕೂರ್ಸಿ ಎಣ್ಣೆ ಒತ್ತಿ ಅರಸ್ಣ -ಸೀಗೆಯಾಯಿ ಹಾಕಿ ಕರ್ಕಂಡೋಗಿ ಬಂಧು- ಬಳ್ಗವೆಲ್ಲ ಅಸೆಮ್ಯಾಲ್ ಕೂರ್ಸಿ ನೀರುಯ್ದು

ಬಿಡ್ತಾರೆ ಬಂಧು- ಬಳಗದ್ದು ಅಲ್ಲಿಗ್ ತೀರೋಯ್ತು.

ಪೂರ್ಸೀಕಾನಿ ಬಂದು ಅವ್ನ ನೆತ್ತಿ ಮ್ಯಾಲ ನಿಂಬೆ ಹಣ್ಣಿಂಡ್ತಾರೆ ಗೋಮೂತ್ರ ತೆಗ್ದಾಕಿ ಮೂರ್ ಸಲ ಹುಡ್ಗನ್ಗ ಗೋಮೂತ್ರ ಕುಡಿಸ್ತಾರ. ತಿರ್ಗಾ ಕಸ್ತೂರಿ ಗ್ವಾರಂಜ ಅಂತ ಕುಡಿಸ್ತಾರ. ಅಮ್ಯಾಲ ಉಡ್ದಾರ ಹಳೇದ್ ಕಳಿಸಿ ಬಿಸಾಕ್ಬುಟ್ಟು

ಹೊಸುಡುದಾರ ಕಟ್ಟಿ ಪುಟ್ಗೋಸಿ ಕಟ್ತಾರೆ. ಮೈ-ಕೈ ವರ್ಸಿ ಒಂದ್ ಕಾವಿ ಚೌಕ ಒದ್ದುಸ್ಕಂಡು ಆ ಗುರ್ಗಳು ತಂದೆ-ತಾಯಿರ್ನ ಮಣೆಮ್ಯಾಲೆ ಕೂರ್ಸಿ ಅವ್ರ ಪೂಜೆ ಮಾಡಿಸ್ತಾರ ಹುಡ್ಗುನ್ ಕೈಲಿ. ತಂದೆ – ತಾಯಿ ಇಬ್ರು ಹುಡ್ಗನ್ನ

ಇಡ್ಕಂಡು “ಗುರ್ವೆ ನಮ್ ಮಗನಲ್ಲ- ಇಲ್ಲಿವರ್ಗೂ ನಮ್ ಮಗನಾಗಿದ್ದ ಇಲ್ಲಿಂದೀಚ್ಗೆ ನಿಮ್ ಮಗ ಅಂತೇಳಿ ಗುರ್ಗಳ್ ಕೈಗೆ ಕೊಟ್ಟುಡ್ತಾರೆ. ಅವ್ರು ಹುಡ್ಗಾನ ಇಡ್ಕಂಡು. ” ಏನಪ್ಪಾ ಈ ಹುಡುಗ್ನ ಬಸವನ್ ಬುಡ್ತಿವಿ ನಾವು ಬುಡ್

ಬೋದಪ್ಪ ಅಂತಾರೆ. ಆವಾಗ ನಮ್ಮ ಯಜಮಾನ್ರು, ನಾಡುದೇಶವೆಲ್ಲಾ ಬಸವನ್ ಬುಡ್ ಬಹ್ದು ಅಂತಾರೆ. ಬಸವನ್ ಬುಟ್ಮೇಲ್ ಎಲ್ಲಾ ಹೊಲದಲ್ಲೂ ಮೆಯ್ತದೆ ಮೆಯ್ ಬೌದ – ಮೆಯ್ ಬೌದು ಅಂತಾರೆ.

 

ಅದ್ಯಾತ್ಕೇಳ್ತಾರೆ ಅಂದ್ರ ಗುಡ್ನಾದ ಮೇಲೆ ಎಲ್ಲಾ ಮನೆಗೋಗಿ ಭಿನ್ನ ಮಾಡ್ಬೇಕು, ಪೂಜೆ ಮಾಡ್ಬೇಕು, ಜಾತಿ ಭಾದವಿಲ್ಲೇಳಿ, ಯೆತ್ತಮನಜೋತಿ, ಸತ್ತಮನೆ ಜೋತಿ, ವನ್ನಯ್ಯ ಮನೆ ಜೋತಿ, ಚೆನ್ನಯ್ಯನ ಮನೆ ಜೋತಿ, ಕುರುಬ್ರ

ಮನೆ ಜೋತಿ, ಕುಂಬಾರ್ರ ಮನೆಜ್ಯೋತಿ ಕುಲ ಹದ್ನೆಂಟು ಮನೆವೊಳ್ಗ ಉರಿವಂತ ಜೋತಿ ಇದು ಗುಡ್ಡ ಅಂದ್ರೆ . ಅದ್ರಿಂದ ಬಸವ್ನ ಬುಡಪ್ಪ ಅಂದಾಗ ಆ ಹುಡುಗ್ನ ಕರ್ಕಂಡೋಗಿ ಅಸೆಮಣೆಮ್ಯಾಲ ಕೂರುಸ್ತಾರೆ. ಅಂವ ಬಸ್ಮದಾಣೆ

ಸರಣಾರ್ತಿ, ಈಬೂತಿ ಬಸ್ಮದಾಣೆ ಸರಣಾರ್ತಿ ಅಂತ ಕೈ ಮುಕ್ಕಂಡು ಬಸ್ಮದಾಣೆ ಮಾಡ್ತಾನೆ. ಅಸ್ಟ್ರಲ್ಲಿ ಅಕ್ಕಿ, ಕಾಯಿ, ಬೆಲ್ಲ, ಎಲೆ, ಅಡ್ಕೆ, ಬಾಳೆಹಣ್ಣು, ಹೂವ, ಹಾಲು – ತುಪ್ಪ ಎಲ್ಲ ಇಟ್ಕಂಡವ್ರೆ. ಹುಡಗ್ನ ನೆತ್ತಿಮ್ಯಾಲ ಹೂವ್ ಮಡ್ಗಿ

ಗುರುಪಾದತೀರ್ತ ಹಾಕ್ಬುಟ್ಟು ಅಕ್ಕಿ ಇಡಿಸ್ತಾರೆ. ಕಂಕ್ಣದಾರೆ ಮಾಡ್ಸೋದಿಕ್ಕೆ ಕೈ ತುಂಬ ಅಕ್ಕಿ ತುಂಬ್ಸಿ ಅದರ ಮ್ಯಾಲೆ ಈಳ್ಯ ಮಡ್ಗಿ ಈಳ್ಯದ ಮ್ಯಾಲ ನಾಲ್ಕಾಣಿ ಮಡ್ಗಿ, ಎರ್ಡು ಬಾಳೆಣ್ಣು, ಬೆಲ್ಲ ಮಡ್ಗಿ ಬೆಲ್ಲದ ಮ್ಯಾಲ ಕಾಯಿ

ಮಡಗ್ತಾರ‍. ಆಗ ಮಣಿಕಟ್ಟಾ ಪೂಜೆ ಕಂಕ್ಣ ಕಟ್ಟಾದು.

 

ಹಾಲು – ತುಪ್ಪ ಹಾಕಿ ಪೂಜ ಮಾಡಿ ತೋಳ್ದುಬುಟ್ಟು ಈಬೂತಿ ಇಕ್ಕಿ, ಬಸುವಂಗ ಇಕ್ಕಿ, ಅರಸ್ಣ – ಕುಂಕುಮ – ಇಕ್ಕಿ ಐದೊ ಕೊಂಬಿರೋ ಒಂದ್ ಅರಸ್ಣ ತಕಂಡು ಅದಕ್ಕೆ ಐದು ಕಣ್ಣು, ಒಂದ್ ಕಣ್ಗ ಕಬ್ಣದ ಉಂಗ್ರ, ಕಂಬ್ಳಿದಾರ‍,

ಕರಿದಾರ‍, ಬಿಳಿದಾರ‍, ಉರಿದಾರ‍ಸೇರ್ಸಿ ನೂಲು ಸೇರ್ಸಿಕಂಡು ಅದನ್ನ ಅವ್ನ ಕೈಗೆ ಕಟ್ತಾರೆ. ಅದರ ಮ್ಯಾಲ್ ಅರಸ್ಣ ಬಟ್ಟೆ ಮಾಡಿ ಸುತ್ತಿ ಮೂರು ಗಂಟಾಕ್ತಾರೆ. ಆ ಗಂಟ್ಗೆ ಪೂಜೆ ಮಾಡಿ ಹಾಲು – ತುಪ್ಪ ತಕಂಡು ಬಂಧು – ಬಳ್ಗ

ಎಲ್ರು ಮದ್ವೆ ಲಗ್ನದಲ್ಲಿ ಧಾರೆ ಎರ್ದಂಗೆ ಧಾರೆ ಎರಿತಾರೆ. ಅಮ್ಯಾಲ ಸೂತ್ಗ ತಕಂಡು ಕಂಕ್ಣದ ಮುಂದೆ ಐದು ಕಳ್ಸ ಊಟಿ ತೆಂಗಿನ್ ಕಾಯಿ ಮಾಡ್ಗಿದ್ದು. ಒಂದೊಂದ್ ಕಳ್ಸಕ್ಕು ಸೂತ್ರ ಹಾಕ್ತಾನ, ನೂಲ್ನಲ್ಲಿ, ಸೂತ್ರಹಾಕಿ ನೆತ್ತಿ ಮ್ಯಾಲ

ಬುಟ್ಬುಡ್ತಾನೆ. ಆಗ ರುದ್ರಾಕ್ಷಿಗೆ ಪೂಜ ಮಾಡಿ ಅದಕ್ಕೆ ಅರಸ್ಣ ಕುಂಕುಮ, ಈಬೂತಿ ಇಕ್ಕಿ ಹೂವು ಮಡ್ಗಿ ಪೂಜಮಾಡಿ, ದೊಡ್ಡವ್ರು, ಯಜಮಾನ್ರು ಐದ್ಜನ್ರ ಕೈಲಿ ಮುಟ್ಸಿ ನಮಸ್ಕಾರ ಮಾಡ್ಸಿ ಮುತ್ತೈದೆರ ಕೈಲಿ ಮುಟ್ಸಿ ಲಿಂಗ್ದಾರ್ಣೆ

ಮಾಡ್ಬೋದಪ್ಪ ಅಂತಾಎ. ಆ ಹುಡ್ಗನ್ನು ಕೇಳ್ತಾರೆ. ಏನಪ್ಪಾ ಮಗು ಅಂಜನದ ರುದ್ರಾಕ್ಷಿ ಇದು. ಲಿಂಗ್ದಾರ್ಣೆ ಮಾಡ್ತಿವಿ. ರುದ್ರಾಕ್ಷಿಯಲ್ಲ್ ಇದು ಒಂದ್ ಟೇಮ್ನಲ್ಲಿ ಹಾವಾಯ್ತದೆ. ಒಂದ್ ಟೇಮ್ನಲ್ಲಿ ಚೋಳಾಯ್ತದೆ. ಒಂದ್ ಟೇಮ್ನಲ್ಲಿ

ಮೈಮ್ಯಾಲ ಅಂಗಾಂಗನೆಲ್ಲ ಸುಡ್ತದ. ತಡ್ಡಿಯೇನಪ್ಪ ಅಂತಾರ‍ೆ. ಆಗ್ಲಿ ಸ್ವಾಮಿ ಕಚ್ಚಿದ್ರು ಕಚ್ಚಿಸ್ಕಂತೀನಿ, ಸುಟ್ರೂ ಸುಡ್ಸಕಂತೀನಿ ಅಂತಾನೆ. ಒಂದ್ ಟೇಮ್ನಲ್ಲಿ ಬಾರಿಕಷ್ಟ ಕೊಡ್ತದೆ. ಕೊಡ್ಲಿ ಸ್ವಾಮಿ ಅಂತಾನೆ. ಮೊದ್ಲಾಗಿ ಮನ್ಗಿದ್ದು ಎದ್ದ

ತಕ್ಷಣ ಅದನ್ನು ನೋಡಿ ಅನಂತ್ರ ಮೊಕ ತೊಳಿಯ ಮೊದ್ಲು ಅದಕ್ಕೆ ನೀರಾಕಿ ತೊಳ್ದು ಆಮ್ಯಾಲ ಮೊಕತೊಳಿಯಬೇಕು. ಬಸುವಂತ ಎತ್ತಿ ಇಕ್ಕುವಾಗ ಬಸವಣ ಅಂತೇಳಿ ಸಿವನೆಸ್ರೇಳಿ ಬಸುವಂಗ ಮೊದಲಿಕ್ಕಿ ಆಮ್ಯಾಲ ನೀನು

ಅಣೆಗೆ ಈಬೂತಿ ಇಕ್ಬೇಕು. ಊಟ ಮಾಡ್ವಾಗ ಅನ್ನ ತಕಂಡು ದೇವರ್ಗೆ ತೋರ್ಸಿ ಒಂದಿಡಿ ಅನ್ನ ತಗ್ದು ಮಡ್ಗಿ ಆಮ್ಯಾಲ ನೀನು ಊಟ ಮಾಡ್ಬೇಕು ಅಂತೇಳು ಹುಡ್ಗನ್ಗೆ ಹೇಳ್ತಾರೆ. ಲಿಂಗ್ದಾರ್ಣೆಗೆ ಸರಣಾರ್ತಿ, ಲಿಂಗ್ದಾರ್ಣೆಗೆ ಸರಣಾರ್ತಿ,

ಲಿಂಗ್ದಾರ್ಣೆಗೆ ಸರಣಾರ್ತಿ ಅಂತ ಸುತ್ತಾ ಇರಾವ್ರೆಲ್ಲಾ ಹೇಳಿ ಲಿಂಗ್ದಾರ್ಣೆ ಮಾಡ್ತಾರೆ. ಆಮ್ಯಾಲ ಐದು ಹೂವಾಕಿ ಪೂಜೆ ಮಾಡ್ಬಿಟ್ಟು ಕೈಸೆರೆ, ಅಕ್ಕಿಸೆರೆ, ಬುಡ್ಸುಬುಟ್ಟು ಏಳಿಸ್ ಬುಡ್ತಾರ‍ೆ. ಮ್ಯಾಲಕೆದ್ದು ನಿಂತ್ಕಂಡು ಭೂಮುತೂಕ್ದ

ಜೋಳಿಗೆ ತಕ್ಕಂಡು ಕೈಲಿಡ್ಕಂಡು ಬೆತ್ತ ತಕಂತಾರೆ – ನಾಗ್ಬೆತ್ತ ಬೆತ್ತ ತಕಂಡು ಕೈಲಿಡ್ಕಂಡು ಈವಾಗ ನೀನು ಯಾರ ಮಗನಪ್ಪ ಅಂತಾರೆ ಗುರ್ಗಳು. ಗೊತ್ತಾತಿದ್ರೆ ಯೇಳ್ತಾನೆ ಗೊತ್ತಾಗ್ದೆಯಿದ್ರೆ ಗೊತ್ತಿಲ್ಲ ಬುದ್ಧಿ ಅಂತಾನೆ. ಇಲ್ಲಿವರ್ಗೂ

ನಿಮ್ಮಪ್ಪನ ಮಗನಾಗಿದ್ದೆ. ನಿನ್ನೆಸ್ರು ಮಾದೇವಯ್ಯ, ನಿಮ್ಮಪ್ಪನ ಯೆಸ್ರು ನಂಜಯ್ಯ ಇಲ್ಲಿಂದೀಚ್ಗೇ ಯಾಗ ಮಗ ನೀನು- ಗುರುಮಗಸ್ವಾಮಿ. ಈ ಮುತ್ತುನ ಜೋಳ್ಗೆ ಕೊಡ್ತಿವಿ ಕೈಗೆ ಐದ್ಮನೆ ಭಿಕ್ಷಾ ಮಾಡ್ಬೇಕು. ತಂದೆ- ತಾಯಿ ಮಾತ

ಕೇಳ್ತೀಯಾ ? ಕೇಳ್ತೀವಿ ಗುರು, ತಂದೆ – ತಾಯಿಗೆ ನೀನು ತಿರ್ಗಿ ಯೇಳೋದಿಲ್ವಾ ? ಇಲ್ಲಾ ಸ್ವಾಮಿ. ಕೆಟ್ಟ ಮಾತು ಬೈತೀಯಾ ? ಬೈಯದಿಲ್ಲ ಗುರು. ಗುರುಪಾದ ಸಾಕ್ಷಿಯಾಗಿ ನಾನು ಬಯ್ಯೋದಿಲ್ಲ. ಅಂತೇಳಿ ಸತ್ಯಮಾಡು. ನಾಲ್ಕು

ದಿಕ್ಕುಗೂವೇ ಮೂರು ಸಾರಿ ಸತ್ಯ ಮಾಡ್ತಾನೆ. ಆವಾಗ ಮುತ್ತುನ ಜೋಳ್ಗೆ, ಬೆತ್ತ ಕೊಡ್ತಾರೆ, ಐದ್ಮನೆ ಬಿಕ್ಷ ಮಾಡ್ಕಂಡು ಬರ್ಬೇಕು. ಬಿಕ್ಶ ಮಾಡ್ತೀಯಾ? ಯಾವ ರೀತಿ ಮಾಡೀಯಾ ಬಿಕ್ಷೆಯಾ ? ಧರ್ಮಗುರು ಕ್ವಾರಣ್ಯದ ಬಿಕ್ಷಾ,

ಗುರುವರ್ಯ ಕ್ವಾರ‍ಣ್ಯದ ಭಿಕ್ಷಾ ಅಂತ ಮಾಡ್ಬೇಕು. ಮಾಡ್ತಿನಿ ಬುದ್ಧಿ ಅಂತಾನೆ.

 

ಅನಂತ್ರ ತಂದೆ – ತಾಯಿಗೆ ಅನ್ನ ಹಾಕ್ತಿಯಾ ? ಹಾಕ್ತೀನಿ ಬುದ್ಧಿ. ಯ್ಯಾಗಾಕ್ತಿಯೇ ? ಗೊತ್ತಿಲ್ದೆ ವೋದ್ರೆ ಕೇಳ್ಬೇಕು. ಗುರು ಕೊಟ್ಟ ಜೋಳ್ಗೇಲಿ ಭಿಕ್ಷಾಮಾಡ್ಕಂಬಂದು ಅನ್ನ ಹಾಕ್ತಿನಿ ಬುದ್ದಿ ಅನ್ಬೇಕು. ಮಾರಿ ಚಾವ್ಡಿ ಒಳ್ಗ ಒಬ್ಬ ಪರ್ದೇಸಿ

ಬಂದು ಕೂತ್ಕಂತಾನೆ ಅವನ್ಗೆ ಅನ್ನ ಆಕ್ತಿಯಾ ? ಹಾಕ್ತಿನಿ ಬುದ್ಧಿ ನಾಲ್ಕು ಮನೆಗೋಗಿ ಭಿಕ್ಷ ಈಸ್ಕಂಬಂದು ಅನ್ನ ಹಾಕ್ತಿನಿ ಬುದ್ದಿ ಕರ್ದು. ಬಸವಣ್ಣ ಬಂದು ಮೋಲ್ದಲ್ಲಿ ಮೇಯ್ತನೆ ವಡ್ದು ಓಡಿಸ್ತೀಯಾ ? ವಡೆಯದಿಲ್ಲ ಬುದ್ಧಿ ಬಸವಣ್ಣನ

ಸತ್ಯಮಾಗೂ ನಾನು ಗುರುಪಾದ ಸಾಕ್ಷಿಯಾಗಿ ನಡೀತೀನಿ ಅಂತ. ನಾಲ್ಕುದಿಕ್ಕಿಗೂ ಸತ್ಯಮಾಡಿಸ್ತಾರೆ. ಆವಾಗ ಭಿಕ್ಷ ಮಾಡ್ಕಂಬಾರ‍ಯ್ಯ ಅಂತ ಕಳಿಸ್ತಾರೆ. ಭಿಕ್ಷೆಗೋಗ್ತಾನೆ. ಕಂಸಾಳೆ ಇಡ್ಕಂಡು ಧರ್ಮ ಗುರುಕ್ವಾರ‍ಣ್ಯದ ಭಿಕ್ಶ,

ಸೂರ್ಯ ಮಾದೇವಾಯ ಪಾದಾರಕ್ಷವಾಗ್ಲಪ್ಪ. ಗುರುಬಲವಾಗ್ಲಪ್ಪ ಅಂತೇಳಿ ಮೂರ್ಸಲ ಯೇಳ್ತಾನೆ. ಆವಾಗ ತಾಯಿಯಿಂದ ಮೊರದಲ್ಲಿ ಭಿಕ್ಷ ತಕೋವಾಗ ಮೊರ ಇಡ್ದು ನಮಸ್ಕಾರ ಮಾಡಿ ಮುತ್ತುನ ಜೋಳ್ಗೇಲಿ ಭಿಕ್ಷೆ ತಕಂತಾನೆ.

ಇನ್ನೂ ಕೆಲ ಮನೆಗಳ್ಗು ಹೋಗಿ ಭಿಕ್ಷೆ ಮಾಡ್ಕಂಡು ಬರ್ತಾರೆ. ಈಗೇ ಭಿಕ್ಷೆ ಮಾಡ್ಕಂಡು ಬಂದಾಗ ಅದನ್ನ ಧೂಳು ಬಿಕ್ಷ ಅಂತೇಳಿ ಬಂದ ತಕ್ಷಣ ಮಗನ್ಗೆ ಆರ್ತಿ ಬೆಳ್ಗಿ ಮಗನ ಪಾದತೊಳ್ದು, ಬಂದ ಗುಡ್ಡಗಳ ಪಾದನೆಲ್ಲ ತೊಳ್ದು ಅವನ್ಗೆ

ಬ್ಯಾರೆ ಗದ್ಗೆ ಊಡಿರ್ತಾರೆ ಮನೆವೊಳ್ಗೆ ಆ ಗದ್ಗೆ ಮುಂದೆ ಕೂರಿಸ್ಕಂಡು ತಂದಿರುವ ಭಿಕ್ಷಾನೆಲ್ಲಾ ಇಟ್ಟು ಆ ರಾಸಿಗೆ ಪೂಜೆ ಮಾಡ್ತಾಳೆ ಮೊದ್ಲು, ಬಂದಿರೊ ಗುಡ್ಗಳು ಅಂದ್ರಲ್ಲಿ ಕಾಸು ಬ್ಯಾರೆ, ಅಕ್ಕಿಬ್ಯಾರೆ, ರಾಗಿಬ್ಯಾರೆ ವಿಂಗಡಿಸ್ತಾರೆ,

ಗುರುಕೊಟ್ಟ ಜೋಳಿಗ್ಗೆ ಐದ್ಸೆರೆ ಹಾಕ್ಬೇಕು. ಐದ್ಸೆರೆ ಹಾಕಿ ಐದ್ ಪಾವಲಿ ಅವ್ನ ಜೋಳಿಗ್ಗಾಕಿ ಅವನ್ಗೆ ಕೊಡ್ಬುಡ್ತಾರೆ. ಆವತ್ತು ಅವುನ್ಗೆ ಲಿಕ್ಕಕ್ಕ ತಕಳಾದಿಲ್ಲ. ಗದ್ಗೆ ಮ್ಯಾಗ್ಲ ಎಡೆನೆಲ್ಲ ತರ್ಸಿಕ್ಕಿ ನೈವೇದ್ಯ ಮಾಡಿ ಎಲ್ಲ ಗುಡ್ಗಳು ಊಟಕ್ಕೆ

ಕುಂತ್ಕಾತರೆ. ಇವನ್ಗು ಒಂದ್ ಮಣ್ಣನ್ ಬಟ್ಲು ಕೊಡ್ತಾರೆ. ಅದಕ್ಕೆ ಬಿದ್ರ ತೆಕ್ಕೆ, ಮಾದೇಸ್ವುರ ಆಲಂಬಾಡಿ ಜವುಳಲ್ಲಿ ನಾಗಸರ್ಪನ್ನ ತೆಕ್ಕೆ ಮಾಡ್ಕಂಡು ಊಟ ಮಾಡಿದ್ನಲ್ಲ ಅದ್ಕೆ ಬಿದ್ರತೆಕ್ಕೆ ಮಾಡವ್ರೆ. ಅದನ್ನ ಯಾರಾದ್ರುವೇ

ಸಂಬಂಧಿಕ್ರು ದೊಡ್ಡಪ್ಪದಿರು, ಚಿಕ್ಕಪ್ಪದಿರು. ಮಾವಂದಿರು ತಂದ್ಕೊಡ್ತಾರೆ. ನಾಲಕ್ಕಾಣೆ ಮಡ್ಗಿ ಅಕ್ಕಿ ತುಂಬಿ ಅದ್ಕೆ ಪೂಜೆ ಮಾಡಿ ಅವ್ನ ಕೈಗೆ ಅ ಬಟ್ಲು ಕೊಡ್ತಾರೆ.

 

ಆನಂತ್ರ ಗುಡ್ಡಗಳೆಲ್ಲಾ ಊಟ ಬಡಿಸ್ತಾರೆ. ಅವ್ರ ಕೈಲಿ ಈಸ್ಕಬೇಕು ಪ್ರಸಾದವ. ಅವ್ರು ಇಕ್ಕಿರುವ ಊಟವ ಒಂದ್ಹಿಡಿ ತಗ್ದು ಸರಣಾರ್ತಿ ಗುಡ್ಡಪ್ಪ ಅಂತ ಎತ್ತಿ ಮಡಗ್ತಾರೆ ಅವ್ನ ಬಟ್ಲಿಗೆ ನಮಸ್ಕಾರ ಮಾಡಿ ಸರಣಾರ್ತಿ ಅಂತ ಈಸ್ಕಂತಾನೆ.

ಆಗ ಗದ್ಗೆಗೆ ಕರ್ಪೂರ ಹತ್ಸಿ ಧೀರ್ಗದಂಡವಾಗಿ ದೇಸಾಭಾಗದ ಗುಡ್ಡುಗಳ್ಗೆಲ್ಲ ಸರಣು ಸರಣಾರ್ತಿ ಮಾಡ್ತಾನೆ. ಅಂದ್ರೆ ದಾಸಯ್ಯ, ಜೋಗಯ್ಯ, ಗುಡ್ಡಾಯ್ಯ, ಗೊರವಯ್ಯಗಳ್ಗೆ (ಐದು ಪಂಚಮಿ ಗುಡ್ಡಗೋಳು ದೇಸಭಾಗ ಅಂತಾರೆ)

ಅವ್ರು ಸರಣು ಸರಣಾರ್ತಿ ಊಟ ಮಾಡಪ್ಪ ಅಂತಾರೆ. ಆವಾಗ ಮಣ್ಣು ಬಟ್ಲಲ್ಲಿದ್ದ ಅಮ್ಮ ತೆಗ್ದು ಸ್ವಾಮಿಗೆ ನಮಸ್ಕಾರ ಮಾಡಿ ಎತ್ತಿ ಮಡಗ್ಬುಟ್ಟು ಊಟ ಮಾಡ್ತಾಮೆ. ಆಮ್ಯಾಲ ನೆಂಟ್ರು ಎತ್ರೆಲ್ಲ ಊಟ ಮಾಡ್ಕಂಡು ಅವ್ರವ್ರ

ಮನೆಗೊರ್ಟೋಗ್ತಾರೆ.

ಹೀಗೆ ಮುಂದೆ ಇದೇ ಪ್ರಕಾರವಾಗಿ ಗುಡ್ನಾಗಿ ಇರ್ತಾನೆ. ಭಿಕ್ಷಾಮಾಡ್ಕಂದು ಮನೇಲಿ ದೇವ್ರ ಪೂಜೆ ವಾರ‍ವಾರ ಮಾಡ್ಕಂಡು ಇರ್ತಾನೆ.

ಕೆ.ಪಿ.ಕೆ: ಮಾದಪ್ನ ಗುಡ್ಡನ್ನ ಬಿಡೋ ಕ್ರಮ ಪೂರ್ತಿ ಹೇಳಿದ್ರಿ. ಆದ್ರಿಂದ ಬಹಳ ವಿಚಾರ ಗೊತ್ತಾಯ್ತು. ಆಮ್ಯಾಲೆ ನೀವು ಮಾದಪ್ಪ ಕತೆ ಅಲ್ದೆ ಬೇರೆ ಯಾವ್ಯಾವ್ ಕತಾ ಕಲ್ತಿದ್ದೀರಿ?

ಹೆ.ಮಾದಯ್ಯ : ನೋಡಿ ನಾನು ಮಾದಪ್ನ ಕತೆ ಅಲ್ದೆ ಚೆನ್ನಿಗರಾಯನ ಕತ ಬಾಲ್ನಾಗಮ್ನ ಕತ, ವೀರಾದಿ ಅರ್ಸು ಲಿಂಗ್ರಾಜಮ್ನ ಕತ, ಬಂಜೆವನ್ನಮ್ನ ಕತ, ನಂಜುಡೇಸ್ವುರ್ನ ಕತ, ಅರ್ಜುನ್ ಜೋಗಿ ಕತ ಅಮ್ಯಾಲ ಬಸವಣ್ಣ ಕತ ಸ್ವಲ್ಪ ಯೇಳ್ತಿನೇಳಿ

ಕೆ.ಪಿ.ಕೆ : ನೋಡಿ ನೀವು ಸುಮಾರು ೫೦-೬೦ ವರ್ಷದಿಂದ ಮಾದಪ್ನ ಸೇವಾ ಮಾಡ್ತ ಇದ್ದೀರಿ ಏನಾದ್ರೂ ಮಾದಪ್ನ ಸೂಕ್ಷ್ಮ ಕಂಡೀದ್ದೀರಾ ?

ಹೆ.ಮಾದಯ್ಯ:: ಕುತ್ನಳ್ಳಿ ಒಳ್ಗ ಹೋಗಿ ಕತ ಮಾಡ್ತಿದ್ದೊ ನೋಡಿ. ಹರಿಜನ ಎಲ್ಲ, ಕೈ ಮುಗ್ಗದೋರ್ ಬ್ಯಾರೆ. ಊಟಕಿಕ್ಕಿದ್ರು ನಾವು ಊಟ ಮಾಡಲ್ಲ ನಿಮ್ಮನೇಲಿ ಅಂತ ಹೇಳುದ್ವಿ. ಆಗ ಗೌಡ್ಗಳು ಬಂದ್ರು ನಾವು ಹೋದೊ. ಅಲ್ಲೋಗಿ ಊಟ

ಮಾಡ್ಸುಬುಟ್ಟು ಅವ್ರ ಬೀದೊವೊಳ್ಗೆ ಮಠಮಾಡಿ ಚಾಲ್ದಿ ಮಡಿಕಂಡಿದ್ರು. ಪೂಜ ಮಾಡ್ಬುಟ್ಟು ಕತ ಮಾಡ್ತಿದಾಗ್ಲೇ ಮಾದೇಸ್ವುರ ಹುಟ್ಕತಿಯ ಹನ್ನೆರ್ಡ್ ಗಂಟ ರಾತಿವೊಳ್ಗೆ ಒಂದ್ಸಲ ಮುಂಗಾರ್ ಮಿಂಚ್ದಂಗ ಪಳಾರ್ ಅಂದ್ಬುಡ್ತು,

ನೋಡಿ. ದೇವಸ್ತಾನ್ವೆ ಬೆಳಕಾಗ್ಬುಡ್ತು ಎಲ್ಲಾ ಗಾಬ್ರಿಯಾಗ್ಬುಟ್ರು. ಜನವೆಲ್ಲಾ ಎದ್ಬುಟ್ಟು ಮಾದಪ್ಪ ಬಂದ್ಬುಟ್ಟ ಕಣಪ್ರೋ. ಮಾದೇಸ್ವುರ ಬಂದ್ಬುಟ್ಟ ನಮ್ಗ ಬೆಳ್ಕ ರೋರ್ಬಿಟ್ಟ ಅಂದ್ಬುಟ್ಟು ಆಗ ಮುಂಗ್ಳಾರ್ತಿ ಮಾಡ್ದೋ ಮಾದಪ್ಪಂಗೆ

ಆ ತರ ಆಯ್ತು ನೋಡಿ ಒಂದ್ಸಾರಿ. ಅದ್ಕೇಳಿ ನಾವು ಎಲ್ಲೋದ್ರು ಭೇದ ಭಾವ ಮಾಡದಿಲ್ಲೇಳಿ.

ಕೆ.ಪಿ.ಕೆ. :ನಿಮ್ಮವೈಯಕ್ತಿಕಜೀವನ್ದಲ್ಲಿಏನಾದ್ರುಮಾದಪ್ಪದಯ್ದೆಕಾಪಾಡುತ್ತಅಂತನಂಬ್ತೀರಾ?

ಹೆ.ಮಾದಯ್ಯ:೧೯೬೯ರಲ್ಲಿಕೂಲಿಕೆಲ್ಸಮಾಡ್ತಇದ್ದೀಳಿ.ಬೇಧಿಬಂದ್ಬುಡ್ತು.ನಮ್ಮೆಂಗಸ್ರು? ಕೂಲಿಕೆಲ್ಸಮಾಡ್ತಇದ್ರು.ಆಸ್ಪತ್ರೆಯಸೇರ್ಸಿಅಲ್ಲೂಏನುಕಾಯ್ಲಿಇಲ್ಲಅಂದ್ಬುಟ್ರು.ಸರಿಜನವೆಲ್ಲಾರುದ್ರಮ್ಮನಿನ್ಗಂಡ್ನಮರ್ತುಬುಡುಅಂತಿದ್ರು.

ಮನಅಟ್ಲಲ್ಲಿದೇವ್ರಸಾಮಾನ್ನೆಲ್ಲಮಡ್ಗಿದ್ದಿ.ಮೂರ್ಮಕ್ಳಹಾಕಂದ್ಅಳ್ತಾಕುಂತಿದ್ದ.ಯಾಕ್ಅತ್ತಿಯನಾಸತ್ತೋದ್ರಈದೇವ್ರಸಾಮಾನೆಲ್ಲತಕಂಡೋಗಿಕೆರ್ಗಏಸ್ತ್ಬುಡು.ನೀನುನಿಮ್ಮಪ್ಪನಮನಸೇರ್ಕೊಅಂತೇಳ್ಬುಟ್ಟಿ.

ರಾತ್ರಿಒಂದ್ಗಂಟನಮ್ಮಮಾವಮುದ್ಕಒಂದುಮಾದಯ್ಯ? ಊಟಮಾಡುಅಂತಯೇಳ್ಸಬುಟ್ಟಸಪ್ನದಲ್ಲಿಎದ್ಬುಟ್ಟುಎಷ್ಟ್ಗಂಟೆಅಂದೊ.ಒಂದ್ಗಂಟಅಂದ್ರುನಾಸಾಯಿಲ್ಲಅಂತಸಮಾದಾನಯೇಳಿಕೂತ್ಗಂಡುಹಾಲ್ಕುಡ್ಡಿ

ಮನಸ್ಲೆಮಾದೇವಅಂತಹರ್ಸ್ಕಂಡಿ.ಅದೇಪ್ರಕಾರ್ವಾಗಿಮೂವತ್ತೈದ್ತಿಂಗುಳಸೇವಾಮಾಡ್ದಿ.ಮೂವತ್ತಾರ್ನೆತಿಂಗ್ಳುಬೆಳಿಗ್ಗೆದೇವ್ರಸೇವ್ಗೆ.ಒಂಟ್ಬೇಕುರಾತ್ರಿಬೆಳ್ಗಾನ್ನನ್ನಮಗಳ್ಗಬೇಧಿಆಗ್ಬುಟ್ಟದಬೆಳಿಗ್ಗೆವೊತ್ಗಸ್ವಲ್ಪ

ಗ್ಯಾನಬಂತುನನ್ನದೈರ್ಯಬಂತು.ಆಗ್ಲೂಸೇವೆತಪ್ದೆಮಾಡ್ಕಂಬಂದಿನೋಡಿ.ನಂಬದವ್ರಎಂದ್ಗೂಮಾದಪ್ಪಕೈಬಿಡಾಕಿಲ್ಲೇಳಿನನ್ನಮಗ್ಳುಬರಾಗಂಟಉಷಾರಾಗಿದ್ದ.

ಆಮ್ಯಾಲಮೊನ್ನನಮ್ಮಹೆಂಗಸ್ರು.ಎದನೋವುಅಂತಅವುಸ್ತಿತಕಂತಿದ್ರು.ನಾನುಎಲ್ಲೊವೊರಕ್ಕೊಗಿದ್ದುಅಂದಿನೆಮ್ಮಂಗ್ಸ್ಎತ್ಗಂಡುಆಸ್ಪತ್ರಗಹೋಗವ್ರೆಅಂದ್ರು.ಹೋಗಿನೋಡ್ತಿನೇಳಿಬಾಳದುಕ್ಕಬಂದ್ಬುಡ್ತು.ಅಳ್ತಾ

ಒದ್ದಾಡ್ತಅವ್ನಿ.ಇವತ್ತುನಮ್ಮಮನದೀಪತುಂಬೋದ್ರನಾನುದೇವ್ರುಮಾಡಲ್ಲಏನೂಮಾಡಲ್ಲಇಸ್ಟೊರ್ಸನಿನ್ನಸೇವೆಮಾಡಿನಮ್ಮಮನೆಕತ್ತಲ್ಮಾಡ್ದೆಲ್ಲಾ.ದೇವ್ರಸಾಮಾನ್ತಕಂಡೋಗಿಕರ್ಗೆಬಿಸಾಕ್ಬುಡ್ತಿವಿಅಂತೇಳ್ದಿ

ನೋಡಿಮಾದೇವಕಾಪಾಡ್ದೇಳಿ.ನನ್ಗೂಕಾಲಬರಾವರ್ಗೂಅವ್ನಸೇವಾಮಾಡ್ಬುಡ್ತಿನಿ.

ಕೆ.ಪಿ.ಕೆ. :ನಿಮ್ಮಕಂಸಾಳೆಕಲೇನಎಸ್ಟ್ಜನಕ್ಕೆಕಲ್ಸಿದ್ದೀರಿ ?

ಹೆ.ಮಾದಯ್ಯ:ಬೆಂಗ್ಳೂರ್ಲೆನೂರಾರ್ಜನಕ್ಕಕಲ್ಸಿನೇಳಿ.ಅಮ್ಯಾಲಇಲ್ಲೆನಮ್ಮಸಂಗದವ್ರುನಲವತ್ಮಂದಿಬರ್ಜರಿಯಾಗಿಎಲ್ಲಾಮಟ್ನುಕಲ್ತರೇಳಿ.ನೋಡಿಕಲ್ತವಿದ್ಯಾಇಟ್ಗಂದುಸಾಯ್ಬಾರ್ದು.ಇರದ್ನೆಲ್ಲಾಕಲ್ಸುಬುಟ್ಟುಸತ್ತೋಗ್

ಬೇಕೇಳಿ.

ಕೆ.ಪಿ.ಕೆ: ನಿಮ್ದು ಮಾದೇಶ್ವರ್ನ ಒಕ್ಲು. ಮಂಟೇಸ್ವಾಮಿ ಕಥಾ ಮಾಡ್ತಿರಾ ?

ಹೆ.ಮಾದಯ್ಯ : ಮಂಟೇಸ್ವಾಮಿ ನೆನವಾರ್ತಿ ಮಾಡ್ತಿವಿ ಕತಮಾಡಲ್ಲೇಳೀ

ಕೆ.ಪಿ.ಕೆ: ಮಾದಪ್ಪ ಸಿದ್ದಪ್ಪಾಜಿಗೂ ಏನಾದ್ರೂ ಸಂಬಂಧ ಇದೆ ಅಂತೀರಾ ?

ಹೆ.ಮಾದಯ್ಯ : ಸಂಬಂಧ ಅದೇಳಿ, ಅಂದ್ರೆ ಸಿದ್ದಪ್ಪಾಜಿಗೆ ಸ್ವಲ್ಪ ಚೊಂಗು ಮಾಡ್ತರೇಳಿ. ಆದ್ರಿಂದ ಪೂಜ ಮಾಡ್ಬೇಕಾದ್ರ ಬೇರೆ ಮಾಡ್ಬೇಕು. ಮಾದೇಸ್ವುರ್ನ ಪೂಜೇಲಿ ಸೀಊಟ ಮಾತ್ರ. ಈಗ್ಲೂ ನೋಡಿ ಕಾರ್ತೃ ಮಾಸ್ದಲ್ಲಿ ಒಂದ್ ತಿಂಗ್ಳು ಮನೆಲಿ

ಮಾಂಸ- ಮಡ್ಡಿ, ಮೀನು-ಮಿಡ್ಜ, ಚೊಂಗು ಒಂಚೂರು ವಾಸ್ನೆ ಮಾಡ್ಬಾರ್ದು. ಅಮಾಸೆ ದಿವ್ಸ ಲಕ್ಷ ಕೊಟ್ರು ನಮ್ಮನೇಲಿ ಮಾಡದೇ ಇಲ್ಲೇಳಿ. ಅಮಾಸೆ ಒಂದಿವ್ಸ ಎಣೆಮಜ್ನ ಸ್ವಾಮಿಗೆ ಅವ್ನ ಯೆಸ್ರೇಳಿ ನಾವು ಧೂಪ ಹಾಕಿ ದೀಪ

ಹಚ್ಬೇಕು. ಆ ಧೂಪದ ಒಗೆಯೊಂದ್ಗೆ ಇದೆಲ್ಲಾ ನಾವು ಮಾಡದಿಲ್ಲ. ಅದೇ ಪರಂಪರೆ ನಡ್ಕೊಂಡು ಬಂದಿದೆ ಅವ್ನೆ ಯೆಸ್ರಲ್ಲಿ.

ಕೆ.ಪಿ.ಕೆ : ಗುಡ್ನ ಬಿಟ್ಟವ್ರು ಶಾಲ – ಕಾಲೇಜ್ನು – ಕಲಿಬಹುದು, ಮದ್ವೇನು ಆಗ್ ಬಹುದಲ್ವಾ ?

ಹೆ.ಮಾದಯ್ಯ : ಹೋಗ್ಬೋದು, ಮದೇವೇನು ಆಗ್ಬೋದು. ಕಂತೆ ಧೀಕ್ಸೆ, ತಾವ್ರೆ ಧೀಕ್ಷೆ ಅಂತ ಇದೆ. ನಮ್ದು ತಾವ್ರ ಧೀಕ್ಷ. ಕಂತೆ ದೀಕ್ಸೆ ಮಾಡ್ದ್ರೆ. ಅವ್ನು ಸನ್ಯಾಸಿಯಾಗಿ ಕಾವಿ ಬಟ್ಟೆ ಆಕಂಡು ಗುರು ಮಠದಲ್ಲೇ ಇರ್ಬೇಕು. ಮದ್ವೆ ಮಾಡ್ಕೊಳೋಗಿಲ್ಲ.

ಕೆ.ಪಿ.ಕೆ : ತಾವರೆ ಧೀಕ್ಷಾ ಅಂದ್ರೇನು ?

ಹೆ.ಮಾದಯ್ಯ : ಇದ್ರಲ್ಲಿ ಮದ್ವೆ ಆಗ್ಬೋದು ಅನ್ನ್.

ಕೆ.ಪಿ.ಕೆ: ಗುಡ್ಡ ಆದವ್ರು ತೀರ್ಕೊಂಡ್ರೆ ಶವ ಸಂಸ್ಕಾರ ಮಾಡೊಕ್ರಮ ಹೇಗ್ ಮಾಡ್ತಿರಿ ?

ಹೆ.ಮಾದಯ್ಯ : ಗುಡ್ಡ ಆಗಿದವ್ನು ಸತ್ತೋದ್ ತಕ್ಷಣ ಈಚೆ ತಂದೆ ಮಡಿಕಂಡು ಅವ್ನ ಮೊಕ ತೊಳ್ದುಈಬೂತಿ ಇಕ್ಕಿ ಅವನ್ಗೆ ಪೂಜೆ ಮಾಡಿ ಕಾಯಿ ಒಡ್ದಿಟ್ಟು ರಾತ್ರಿ ಕತ ಮಾಡ್ತಿವಿ ಬೆಳ್ಗಾನ. ಬೆಳಿಗ್ಗೆ ಎದ್ದು ಹೆಂಗಸ್ರು ಮನೆನೆಲ್ಲಾ ಒರ್ಸಿ ಸಾರ್ಸಿ ಕೈ ಕಾಲು

ಮೊಕ ತೊಳ್ಕಂಡು ಒಂದರ್ದ ಪಾವು ಅಕ್ಕಿ ಹಾಕಿ ಪೊಂಗಲ್ ಮಾಡ್ತಾರೆ. ಪೊಂಗಲ್ ಮಡ್ಗಿ ಇನ್ನೊಂದ್ ಹೊಸ ರುದ್ರಾಕ್ಷಿ ತಕಂಬಂದು ಅಲ್ಲಿ ಮಡ್ಗಿ ಉಡ್ದಾರ‍ದ ಮ್ಯಾಲೆ ಇನ್ನೊಂದ್ ಉಡ್ದಾರ ಕಟ್ತಿವಿ. ಬಟ್ಟೆನೆಲ್ಲಾ ಬಿಚ್ಚಾಕ್ಬುಟ್ಟು

ವೊಸಬಟ್ಟೆ ಪುಟ್ಗೋಸಿ ಕಟ್ಟಿ ಅರಸ್ಣ ಸೀಗೆಕಾಯಿ ಹಾಕಿ ಸ್ನಾನ ಮಾಡ್ಸಿ ತೆರೆ ಹಾಕಂಡು. ನಮ್ಮ ಗುಡ್ಡಗೋಳು ತಿರ್ಗಾ ಬಸುವಂಗ ಬಳ್ದು ಹೂ ಹಾಕಿ, ಒಳಗಿಟ್ಟಿರೋ ರುದ್ರಾಕ್ಷಿ ತಕಂಬಂದು ಲಿಂಗ್ದಾರ್ಣೆ ಮಾಡ್ತಾರೆ. ಹೊಸ್ತಾಗಿ ಅವನೆ

ಒಂದು ಬಟ್ಟೆ ಜೋಳ್ಗೆ ಕಟ್ಟಿ ಬೆತ್ತ ಅವ್ನ ಕಂಕಳ್ಗ್ ಕೊಟ್ಟು ಆ ಪ್ರಸಾದನ ಅವ್ನ ಕೈ ಹಿಂಗಿಡ್ದು ಮುತ್ಟುಸ್ಬುಡ್ತಾರೆ. ಆ ಎಡೆ ತೆಗ್ದು ಒಂದಿಷ್ಟ ಅವ್ನ ಮೊಕಕ್ಕೆ ತೋರಿ ಸುತ್ತ ಇರೋ ಐದ್ಜನ ಗುಡ್ಡಗಳ್ಗೆ ಕೊಟ್ಬುಡ್ತಾರೆ. ಮೊದ್ಲು ಗುಡ್ಡನ್ ಬುಡಾಗ

ಮಣ್ಣನ್ ಬಟ್ಲ ಕೊಟ್ಟಿದ್ರಲ್ಲ ಈವೊತ್ತು ಅವ್ನು ಕೊಟ್ಬುಟ್ಟು ಒಂಟೋಯ್ತನಲ್ಲ ಅಂತೇಳಿ ಅವ್ನ ಮೊಕಕೆ ತೋರ್ತಾರೆ. ಆಮ್ಯಾಲಿಂದ ಬಟ್ಟೆ ಹಾಕ್ಬುಡ್ತಾರೆ. ಆಗ ಬಂಧು – ಬಳ್ಗ ಎಲ್ಲಾ ಕೈಮುಗ್ದು ಪೂಜೆ ಮಾಡ್ಬಹುದು. ಪೂಜೆ ಎಲ್ಲಾ

ಆದ್ಮೇಲಾ ಸ್ಮಶಾಣಕ್ಕೆ ಹೆಣ ಹೊತ್ಗಂದೊಯ್ತಾರೆ. ಅಲ್ಲಿ ಗುಂಡಿ ತಗ್ದಿರ್ತಾರೆ. ಅದೋಳ್ಗ ಸುತ್ತ ಐದುಗೂಡ್ ಮಾಡ್ತಿವಿ. ಗೂಡ್ಗೊಂದ್ ದೀಪ ಹಚ್ತಿವಿ. ಐದ ಈಳ್ಯ ಮಡಗ್ತಿವಿ. ಈಬೂತಿ ಉಂಡೆ ಮಡಗ್ತಿವಿ. ಆಗ ಅವ್ನ ಎತ್ತಿ ಗುಂಡಿಲಿ

ಮಲಗ್ಸಿ ಹಳೆ ರುದ್ರಾಕ್ಷಿ ತೆಗ್ದು ಮನೆಯವ್ರ ಕೈಲಿ ಕೊಡ್ತಾರೆ. ಇದು ಗುರು ಕಟ್ಟೀರೋದು. ಸತ್ತ ಮ್ಯಲ ಇಟ್ಟಿರೋದಾನ್ನ ತೋಳಿಗ್ ಕಟ್ತಾರೆ. ಉಡ್ದಾರ ಬಿಚ್ತೀವಿ. ದೀಪ ಹತ್ಸಿ ಪೂಜೆ ಮಾಡ್ಬಿಟ್ಟು ಐದೀಳ್ಯದಲ್ಲಿ ಒಂದೀಳ್ಯ ಅಲ್ಲೆ ಇಟ್ಬುಟ್ಟು

ನಾಕೀಳ್ಯ ಎತ್ಕೊತೀವಿ. ದಾಸಯನ್ಗೆ, ಜೋಗಯ್ಯನ್ಗೆ, ಗೊರವಯ್ಯನ್ಗೆ, ಸಿದ್ದಪ್ಪಾಜಿ ಗುಡ್ಡನ್ಗೆ ಅಂತ ಕೊಟ್ಬುಟ್ಟು ಮಣ್ ಮುಚ್ಬುಡ್ತೀವಿ.

 

ದಿವ್ಸ ಮಾಡೋ ದಿನ ಕೂಳು ಮಾಡೋವಾಗ ಅವ್ನ ಆರಾದ್ನೆ ಮಾಡ್ದಾಗ ದೇವ್ರ ಗುಡ್ರಿಗಲ್ದೆ ಬೇರೆಯವ್ರಿಗೆ ಕೊಡೊಲ್ಲ. ಅವ್ನ ಮಗ ಉಣ್ಬೇಕು. ಸಂಬಂಧ ಉಣ್ಬೇಕು. ಮಾಂಸ ತಿನ್ನಬಹುದು. ಒಂಚೂರು ಪಕ್ದಲ್ಲಿ ಇಟ್ಟಿರ್ತೀವಿ. ಬೆತ್ತಮಡ್ಗಿ

ಪೂಜೆ ಮಾಡಿ ಬಟ್ಟೆ ಮಡ್ಗಿ ಅವ್ನ ಪೋಟ ಮಡ್ಗಿ ಸಿಹಿ ಊಟ ಅನ್ನೆಸ್ರು ಪಾಯ್ಸ ಎಡೆ ಮಾಡಿ ಪೂಜೆ ಮಾಡಾದ್ಮೇಲೆ ಸಮಾದಿ ತವ ಹೋಗಿ ಹಾಗೇ ಮಾಡ್ಬೇಕು. ಸಮಾಧಿ ಮ್ಯಲ ಐದ್ಕಳ್ಸ ಮಡ್ಗಿ ನಕ್ಮಾಲಗೂವೇ ಬೆತ್ತನೆಟ್ಟು ಸೂತ್ರಹಾಕಿ

ಅಲ್ಲೂ ಅದೇ ತರ ಎಡೆಪಡ್ಸಿ ಕರ್ಪೂರ ಹತ್ಸಿ ಪೂಜೆ ಮಾಡಿ ಸೂತ್ರದ ದಾರ ಬುಟ್ಟು ಜೋಗಯ್ಯನ್ಗೆ ಒಂದ್ಮೂಲೆ, ದಾಸಯ್ಯನ್ಗೆ ಒಂದ್ಮೂಲೆ. ಸಿದ್ದಪ್ಪಾಜಿ ಗುಡ್ದನ್ಗೊಂದ್ಮೂಲೆ, ಪಾರ್ವತಿ ಗುಡ್ಡನಿಗೊಂದ್ಮೂಲೆ

ಮಾದಪ್ನಗುಡ್ಡನಿಗೊಂದ್ಮೂಲೆ ಐದು ಭಾಗ ಮಾಡಿ ಕೊಟ್ಬುಟ್ಟು ಬಂದು ಮನೆವೊಳ್ಗೆ ಇರೋ ಎಡೆಯನ್ನ ಮಗ ಊಟ ಮಾಡ್ಬೇಕು. ಇದಿಷ್ಟ್ ಕ್ರಮ ಮಾಡ್ತಾರೇಳಿ.

ಕೆ.ಪಿ.ಕೆ: ಸೇರೊಕ್ಲು ಅಂದ್ರೇನು.

ಹೆ.ಮಾದಯ್ಯ : ಅವ್ರೆಲ್ಲ ಮರಬಿದ್ದೋವ್ರು ಅಂತ.

ಕೆ.ಪಿ.ಕೆ: ಮರಬಿದ್ದೇವ್ರು ಅಂದ್ರೇನು ?

ಹೆ.ಮಾದಯ್ಯ : ನಿಮ್ಗೆ ಬ್ಯಾರೆ ದೇವ್ರಿತ್ತು. ನಿಮ್ಗೇನಾದ್ರು ಕಷ್ಟ ಬಂದ್ರ ಮಾದಪ್ಪ ನನ್ನ ಕಷ್ಟ ಪರಿಹಾರ ಮಾಡಿದ್ರೆ ಒಕ್ಲಾಗೋಗ್ತಿನಿ ಅವ್ನಿಗೆ ಅಂದಾಗ ಹರ್ಕ ಮಾಡ್ಕಂಡು ಮಾದಪ್ನ ಜಾತ್ರ, ಸೇವಾ ಮಾಡ್ತಾರೆ. ಅವರ್ನೆ ಮರ ಬಿದ್ದೊಕ್ಲು ಅನ್ನದು. ನಿಮ್ಮ

ದೇವ್ರು ಇರ್ತದೆ, ತಾಳದೇವ್ರು ಈಗ ನಮ್ಮ ದೇವ್ರು ಬಿಸ್ಲುಮಾರಿ. ಮಾದಪ್ಪ ಮರಬಿದ್ದಲ್ಲ ಆದಿಯಿಂದ ಬಂದ ದೇವ್ರು. ಹೆಣ್ಣು ದೇವ್ರ ಮರಬಿದ್ದೇವ್ರು ನಮ್ಗೆ.

ಕೆ.ಪಿ.ಕೆ : ಮಾದಪ್ಪ ಸಂಪ್ರದಾಯ ಕುರ್ತು ಬಾಳ ಮಾಹಿತಿ ಮಾಡ್ಕೊಟ್ರಿ ತುಂಬಾ ಸಂತೋಷ. ನಮ್ಮ ಬುಡಕಟ್ಟು ವಿಭಾಗದ ವತಿಯಿಂದ ನಿಮಗೆ ಮತ್ತು ನಿಮ್ಮ ತಂಡಕ್ಕೂ ತುಂಬಾ ವಂದನೆಗಳು.