ನಿನಗೆ ಒಕ್ಕಲು ಕಳಹ ಬೇಕಾದ್ರೆ ಮಾದಪ್ಪ
ನಮ್ಮಂತಹ ದೀಕ್ಷೆ ಆಗಿರ್ತಕ್ಕಂತ ಸುಯೋಗ್ದೋರೆ ಬೇಕಾ
ಶಿವಾಚಾರ್ಯರು ಬೇಕಾ ಅಂದ್ರು
ಹಾಗನ್ನಬೇಡ ಮಲ್ಲಣ್ಣ
ನನಗೆ ಪ್ರಪಂಚದಲ್ಲಿ
ಜಾತಿ ಬೇದವಿಲ್ಲ
ಹೆಣ್ಣು ಒಂದು ಜಾತಿ ಗಂಡು ಒಂದು ಜಾತಿ
ಎರಡೇ ಜಾತಿ ನನಗೆ
ಯಾವ ಜಾತಿ ಆದರೇನು ಯಾವ ಕುಲವಾದರೇನು
ನನಗೆ ಜಾತಿಭೇದವಿಲ್ಲ
ಶರಣರಾಗಬೇಕು ಅಂದ್ರು
ಹಾಗಾದ್ರೆ ಮಾದಪ್ಪ
ಓಡೋಡಿ ಪಾರ್ರು ಮಾಡಿ
ಉಪ್ಪಲಿಗ ಶೆಟ್ರು ಅಂತ ಕರೀತಾರೆ
ಆದರೆ ಮೇಲಾಗಿ ಕರಿತಾರೆ ಇವಾಗ ಮೇಳ್ ಶೆಟ್ರು ಅಂತೇಳಿ
ಉಪ್ಪಾರು ಅಂದ್ರೆ ಉಪ್ಪಿನ ಮಾಳ್ಗೆಯಲ್ಲಿ
ಚೌಳು ಮಣ್ಣು ತಂದು ಅಟ್ಟುಪ್ ಮಾರೋರು
ಉಪ್ಪಲಿಗ ಶೆಟ್ಗಳು ಅಂದ್ರೆ
ಮೀನು ಮಿರ್ಚಿ ಹಿಡಿಯೋರು
ಅವ್ರರೊಂದ್ ಜಾತಿ
ಆದರ್ ಸರಗೂರ ಗೌರವ್ನ ಮಗ ದಡ್ಡ
ಆದ್ರೆ ನೀರು ಉಯ್ಕೊಳಬೇಕು ಬಟ್ಟೆ ಹಿಂಡ್ಕಳಬೇಕು ಅಂದ್ರೆ
ಆರ್ ತಿಂಗಳಾದ್ರು ನೀರು ಉಯ್ಕೊಳ್ಳದಿಲ್ಲ
ನೀರು ಉಯ್ಕಂಡು ಮಡಿ ಮಾಡೋದಿಲ್ಲ
ಅವನ್ ದಂಡೆಲಿ ಕೂತ್ಗಂಡ್ರೆ ಬಾರಿ ವಾಸ್ನೆ
ಮೀನಿನ ವಾಸ್ನೆ
ಮೀನಿನ ಚೊಂಗು
ನಳ್ಳಿ ವಾಸ್ನೆ
ಕೊತ್ತೆಗಾಲ್ದವುಳು ಮುತ್ನ ಮುಡಿಸೂಸೆ ರಾಮವ್ವ
ಅವರಿಬ್ಬರೂ ಒಂದು ಕಂಡ್ರೆ ಒಂದು ಗೊತ್ತಿಲ್ಲ ಅವರಿಗೆ
ಗಂಡ ಹೆಂಡ್ತಿ ಇಬ್ಬರೂ ಒಂದೆ
ಗಂಡ ಮುಂದುಗಡೆ ಹೋದ್ರೆ
ಹೆಂಡ್ತಿ ಹಿಂದುಗಡೆ ಹೊಯ್ತಳೆ
ಗಂಡ ಒಂದೋರೆ ಹುಲ್ಲು ಕೊಯ್ಕಂಡ್ರೆ
ಹೆಂಡ್ತಿ ಒಂದೋರೆ ಕಳ್ಳಿ ಮುಳ್ಳಾಕ್ತಾಳೆ
ಆಯ್ಕಂಡು ಬಂದು ಅಡ್ಗೆ ಮಾಡ್ಕಂಡು ಊಟ ಮಾಡ್ತಾರೆ
ತೆಂಕಲಾಗಿ ಒಂದು ಗದ್ದೆ ಮಡ್ಗವರೆ
ಅವರಿಬ್ಬರ ತಕ್ಕಂಡು ಬಂದು ನಾನು
ಆ ಕಾಲ್ದಲ್ಲಿ ಮುಡುಕುತೊರೆ ಕೈಲಾಸದಲ್ಲಿ ಧರ್ಮ ಕಲ್ಯಾಣ ಮಾಡಿ
ರಾಮವ್ವ ಮೂಗಪ್ನಳ್ಳಿ
ಸರಗೂರ ಮಠದಲ್ಲಿ ಬುಟ್ಟಿವ್ನಿ
ಇವರೆನಾದ್ರು ನಿನಗೆ ಆಗಬಹುದು

ನೀ ಬೇಕಾದ್ರೆ ನೋಡಿ ಹಿಡಿಯಯ್ಯಾ || ನೋಡಿ ನಮ್ಮ ಶಿವನಾ ||

ಸರಗೂರಯ್ಯನ ಮಾತ ಕೇಳಿದ್ರು ನನ್ನಪ್ಪಾಜಿ
ಮಲ್ಲಣ್ಣ
ಇಲ್ಲಿ ಶರಣರ ಬಿಟ್ಗಂಡು
ನನಗೆ ಎಣ್ಣೆಮಜ್ಜಣ ಮಾಡುವಂತ ಶರಣ ಇದಾರ‍
ಅವರ ಬಿಟ್ಗಂಡು ದೇಸನೆಲ್ಲಾ ಹೇಳ್ತಾ ಇದ್ದಿಯಲ್ಲ
ಈಗ ಸರಗೂರಯ್ಯ ಮಠಕ್ಕೆ ಹೋಗೋಣ ಅಂದ್ರು
ಮಾದೇವ ಇನ್ನೂ ಒಂದ್ ವಿಚಾರ‍ವಿದೆ
ಆ ಸೆಟ್ಟಿ ಸರಗೂರಪ್ಪ
ಮೂಗಯ್ಯ, ರಾಮವ್ವ, ಅಂದ್ರೆ ನನ್ನ ದೇವರ ಒಕ್ಲು
ಬಿಳಿಗಿರಿ ರಂಗಸ್ವಾಮಿ ಒಕ್ಕಲು
ಆ ಬಿಳಿಗಿರಿ ರಂಗಸ್ವಾಮಿ ಒಪ್ಪಕಂಡ್ರೆ
ನಿನಗೆ ಒಕ್ಕಲು ಕಳುಹಿಸ್ತಿನಿ
ಇಲ್ದೆ ಹೋದ್ರೆ ಸಾಧ್ಯವಿಲ್ಲ ನನ್ನಿಂದ ಅಂದ್ರು
ಕರಿಯಪ್ಪ ಬಿಳಿಗಿರಿ ರಂಗಸ್ವಾಮಿನ ಅಂದ್ರು
ಬಿಳಿಗಿರಿ ರಂಗಸ್ವಾಮಿ ಕರ್ಕಂಡ್ರು
ಯಾರು? ಮುಡುಕುತೊರೆ ಮಲ್ಲಣ್ಣ
ಮುಡುಕುತೊರೆ ಮಲ್ಲಣ್ಣ
ಬಿಳಿಗಿರಿ ರಂಗಸ್ವಾಮಿ
ಮಾದಪ್ಪ ಇವತ್ತು ಸರಗೂರಯ್ಯನ ಮಠ ನೋಡನ ನಡಿ ಅಂತೇಳಿ
ಮೂರು ಜನ ಮುನಿಗಳೂವೇ
ಮುತ್ತಿನ ಜೋಳಿಗೆ ಮುಂಗೈಲಿ ಧರಿಸ್ಗಂಡು
ತುಂಬಿದ ಸೋಮವಾರ‍

ಅವರು ಸರಗೂರ ಮಠಕೆ ಬರುತವರೆ ಮುನಿಗಳು || ನೋಡಿ ನಮ್ಮ ಶಿವನಾ ||

ಮುಂದೆ ಮುಂದೆ ಮುಡುಕುತೊರೆ ಮಲ್ಲಣ್ಣ
ಮದ್ಯದಲ್ಲಿ ಮಾದೇಸ್ವರ
ಹಿಂದುಗಡೆ ಬಿಲಿಗಿರಿ ರಂಗಸ್ವಾಮಿ
ಸಾಲಾಗಿ ಸರಗೂರಯ್ಯ ಮಠಕ್ಕೆ ಬಂದ್ರು
ಸರಗೂರು ಬೀದಿಗೆ ಬಂದು ನೋಡ್ ದ್ರು ಮಠದ
ಮಾದಪ್ಪನಿಗೆ ಆನಂದವಾಗ್ ಬುಡ್ತು
ಮಾದಪ್ಪ ಹೇಳ್ತಾ ಇದ್ದಾನೆ
ಮಲ್ಲಣ್ಣ
ಇಂತಹ ಭಕ್ತರ ಬುಟ್ಟು ನನ್ಗ ದೇಸ ಹೇಳ್ತಾ ಇದ್ದಿಯಲ್ಲ

ಸಟ್ಟಿ ಸರಗೂರಯ್ಯ
ಹಟ್ಟೆಲ್ಲ ಬಲು ಚೆಂದಾ
ಇದು ಹೆಚ್ಚು ಮೂಗಯ್ಯ ಗುರುಮಠಾ || ನೋಡಿ ನಮ್ಮ ಶಿವನಾ ||

ಓಹೋ ಮಾದೇವಾ
ಏನಪ್ಪ ಇಷ್ಟು ಕುಶಿಯಾಗಿ ಬುಟ್ಯಲ್ಲಾ
ಇವ್ನ ಗುರುಮಠ ಹೊಗಳ್ತಾ ಇದ್ದಿಯಲ್ಲ
ಇವ್ನ ಗುರುಮಠವಪ್ಪ ಇದು
ಈ ಕಡೆ ಏನೋ ಒಂದಂಕಣ ಹಂಚಿನ ಮನಿಯದೇ
ನೋಡಪ್ಪ ಆ ಕಡೆ
ದನ ಕುರಿ ಕಟ್ಟಿದ್ರಲ್ಲಾ ಹುಲ್ಲು ಸಡ್ಡು
ಆ ಕಡೆ ಮೀನಿನ ಚೊಂಗು
ಈ ಕಡೆ ಸೊಪ್ಪು ಬೆಯ್ಸಿ ಮಡ್ಗ್ ದರಲ್ಲಾ ಅಂದ್ರು
ಇದೇ ನನ್ನಾನಂದ
ಏನು ಕೊಡ್ಲಿಲ್ಲ ಇವರು ಭಕ್ತಿವಂತ್ರು
ಬಾರ‍ಪ್ಪ
ಇವರನ್ನ ಭಿಕ್ಷಾ ಕೇಳೋಣ ಅಂತೇಳಿ
ಮೂರು ಜನ ಮುನಿಗಳೂವೇ
ಸರಗೂರ ಮಠದೊಳಗೆ ಹೋಗಿ
ನಡ ಹಟ್ಟಿಯೊಳಗೆ ನಿಂತ್ಕಂಡು
ಸತ್ಯವಂತ ರಾಮವ್ವ
ಅಕ್ಕಿ ರಾಜ್ಣ ಹಾಕ್ಕಂಡು ಅಕ್ಕಿ ತೊಳಸ್ತವ್ಳೆ
ಮೂರು ಜನ ಮನ್ಗಳು ನಿಂತ್ಗಂಡು
ಮಾದಪ್ಪ

ಪಂಚೇಳಕ್ಷರ ಕೂಗವರೇ ಮಹದೇವಾ || ನೋಡಿ ನಮ್ಮ ಶಿವನಾ ||

ಹರಹರನ ಭಿಕ್ಷ ಗುರುಧರ್ಮ ಕ್ವಾರಣ್ಯ ಭಿಕ್ಷಾ
ಯತಿಗಳ ಮುನಿಯಳಗ ಭಿಕ್ಷಾ
ತಂದೆ ಕಲ್ಯಾಣದೋರಾ ಭಿಕ್ಷಾ
ತಾಯಿ ಜುತ್ರಾಜಮ್ಮನ ಭಿಕ್ಷಾ
ಜ್ಯೋತಿ ಲಿಂಗಯ್ಯನ ಭಿಕ್ಷ
ಜೋಳ್ಗೆ ಹಿಡಿದಾತ್ಮನ ಭಿಕ್ಷಾ

ನಾಲ್ಕು ಪಾದ ಜೋಳಿಗೆ ಭಿಕ್ಷಾ
ನನ್ನ ಹೆಗಲ ಮೇಲಿರುವಂತಹ ನಾಗ ಬೆತ್ತದ ಭಿಕ್ಷಾ ಅಂದ್ರು
ಭವತಿ ಭಿಕ್ಷಾಂದೇಹಿ
ಧರ್ಮಗುರು ಕ್ವಾರಣ್ಯದ ಭಿಕ್ಷಾ
ಗುರುಧರ್ಮ ಕ್ವಾರ‍ಣ್ಯ ಭಿಕ್ಷಾ ಅಂತೇಳಿ
ಜೋರಾಗ್ ಸಾರುದ್ರು ಮಾದಪ್ಪ
ಭಿಕ್ಷ ಸಾರುದ್ರುವೆ
ರಾಮವ್ವ ಮ್ಯಾಲ್ಕ ಅಂತ್ ನೋಡ್ಲಿಲ್ಲ
ಅಕ್ಕಿ ತೊಳಸ್ತಾ ಇದಾರೆ
ಮಲ್ಲಣ್ಣ ಹೇಳಿದ್ರು
ಮಹಾದೇವಾ
ಹುಚ್ಚಿಯೇ ನೋಡಪ್ಪ ಬೆಪ್ಪಿಯೊ ಮೂಗಿಯೇ ಕ್ಯಿವ್ಡಿಯೋ
ಇವಳು ಒಕ್ಕಲಾದಳೋ ನಮಗೆ
ನಡಿಯಪ್ಪ ಅಂದ್ರು
ಹುಚ್ಚಿಯಲ್ಲ ಬೆಪ್ಪಿಯಲ್ಲ
ಮೂಗಿಯಲ್ಲ ಕೆವ್ಡಿಯಲ್ಲ ಮಲ್ಲಣ್ಣ
ನಾನು ಮಾತ್ನಾಡ್ತಿನಿ ರಾಮವ್ವ ಅಂತ ಹೇಳಿ
ಮಾದಪ್ಪ ಒಂದು ಪದ್ಯ ಹೇಳ್ತಾ ಅವ್ರೆ

ಗಾಜಿನ ಅರಮನೆಯ ಒಳಗೆ
ಬಾಗಿ ರಾಜಣವ ತೊಳಸವಳೆ
ಬಾಗೆ ರಾಜಣವ ತೋಳ್ಸ ರಾಮವ್ವ
ನಿನ್ನ ಕೊರಳ ರುದ್ರಾಕ್ಷಿ ಸರ ಚಂದಾ || ನೋಡಿ ನಮ್ಮ ಶಿವನಾ ||

ಕೊರಳ ರುದ್ರಾಕ್ಷಿ ಸರಾ ಯಾವಾಗ ಹೇಳಿದ್ರೋ
ವನಕೆ ಹಿಡ್ಕಂದು ಮೇಲ್ಕಂತ ನೋಡ್ದ ರಾಮವ್ವ
ಮೂರು ಜನ ಮುನಿಗಳು ಸಾಲಾಗಿ ನಿಂತವ್ರೆ
ಓಹೋ
ನನ್ನ ಮನೆದೇವ್ರು ಬಂದವರೆ ಪಟ್ಟದ ರಂಗಸಾಮಿ
ಮುಡುಕುತೊರೆ ಮಲ್ಲಪ್ಪ ಬಂದವ್ರೆ
ಯಾರೋ ಹೊಸ ಜಂಗಮರು ಬಂದವ್ರೆ ಕಾವಿಬಟ್ಟೆವ್ರು
ತೊಂಡೆ ಹಣ್ಣಿನಾಗ್ ಕಾಣ್ತವ್ರಲ್ಲಾ
ಯಾರಿಗ್ ನಾ ಭಿಕ್ಷ ಕೊಡ್ಲಿ
ನನ್ನ ಮನೇಲಿರೋ ದವಸ ತಕಂಡೋಗಿ
ಪಟ್ಟದರಂಗಸ್ವಾಮಿಗೆ ಕೊಟ್ರೆ
ಮಲ್ಲಣ್ಣ ತನ್ನ ಮನೆ ದೇವ್ರಿಗೆ ಕೊಟ್ಟ ಅಂತ ಹೇಳಿ ಕ್ವಾಪ
ಮಲ್ಲಣ್ಣನಿಗೆ ಕೊಟ್ರೆ ನಮ್ಮ ರಂಗಸ್ವಾಮಿಗೆ ಕ್ವಾಪ
ಅವ್ರ ಬಿಟ್ಟು ಹೊಸಜಂಗಮ್ನಿಗ್ ಕೊಟ್ರೆ ಇವರಿಬ್ಬರ್ಗ್ ಕ್ವಾಪ
ಯಾರಿಗೆ ಕೊಡ್ಲಿ ನಾನು
ಆದರೆ ಇವ್ರ ಅಂಗೆ ಕಳುಹ ಬಾರ್ದು
ನಾನು ಭಿಕ್ಷತಕಂಡು ಹೋಗೋಣ
ಯಾರು ಮೊದ್ಲಾಗಿ ಜೋಳ್ಗೆ ಒಡ್ತಾರೋ
ಅವರ್ಗೆ ಇಕ್ಗ್ ಬುಡಾನ ಅಂತೇಳಿ
ರಾಮವ್ವ ವನಕೆ ತಗದು ಮುಡ್ಗ್ ಬುಟು
ಮನೆ ಒಳಗೆ ಹೋಗಿ ಬೆತ್ತದ ಮೊರ ತಕ್ಕಂಡಳು
ಆವಾಗಲೀಗ ಬೆತ್ತದ ಮೊರಕ್ಕೆ
ಅಕ್ಕಿ ರಾಜಣವ ತುಂಬ್ಕಂಡಿ
ಹತ್ತದ್ಕ ಐದೆಲೆ ಮಡ್ಗಿ
ಚಿಜ್ಜಲು ಕೆಂಡ ಮಾಡಿ ಮಡ್ಗು ದೂಪ ಹಾಕಂಡು
ಹಿಟ್ಟಿನ ದೊಣ್ಣೆ ತಕಂಡು
ಕ್ವಾರಣ್ಯ ತಕಂಡು ಬಂದು
ಬೆತ್ತದ ಮೊರದಲಿ
ಮೂರು ಜನ ಮುನಿಗಳ ಮುಂದೆ
ಸುಮ್ಮನೆ ಮಾತಿಲ್ಲದೆ ನಿಂತವಳೆ
ರಾಮವ್ವ

ಹಳ್ಳದ ಕರಿಯವಳೇ
ತಾಯಿ ಬೆಳ್ಳಿಯ ಬಳೆಯವಳೇ
ಕಣ್ಣು ಮಣಿ ಕಾಲುಂಗುರದವಳೆ ಸರಣಿ || ನೋಡಿ ನಮ್ಮ ಶಿವನಾ ||

ರಾಮವ್ವ ಆವಾಗಲೀಗ
ಸತ್ಯವಂತ ರಾಮವ್ವ
ಯಾರಿಗೂ ಕೂಡ ಕೊನ್ನಿ ಗುರುವೆ ಅಂತ ಹೇಳಿಲ್ಲ ಸುಮ್ಮನ್ನಿಂತ್ಕಂಡಳು
ಮಲ್ಲಣ್ಣ ಹೇಳ್ತಾರೆ
ನೋಡಿದ್ಯ ಮಾದೇವಾ
ಮೂಗಿ ಇವಳು ಕ್ಯಿವ್ಡಿ
ಮಾತ್ನಾಡುದಿಲ್ಲಾ ಕಣಪ್ಪ
ಕಳಿಸ್ ಬುಡನ ಮಾದಪ್ಪ ಅಂತೇಳಿ
ಮಲ್ಲಣ್ಣ ಕೇಳ್ತಾ ಅವರೆ
ಇವಳು ನಮ್ಗೆ ಒಕ್ಕಲಾದಳಪ್ಪ
ಏಳು ಮಲೆ ಕೈಲಾಸಕೆ ಬಂದು
ಇವಳು ಎಣ್ಣೆ ಮಜ್ಜನ ಮಾಡದ್ ನಿಜವಾ
ನಡಿಯೋ ಮಾದೇವ ಹೊರ್ಟೋಗೋಣ ಅಂದ್ರು
ಮಲ್ಲಣ್ಣ
ಮೂಗಿ ಅಲ್ಲ ಕ್ಯಿವ್ಡಿ ಅಲ್ಲ
ಸತ್ಯಂವಂತೆ ಭಾಗ್ಯವಂತೆ ಇವಳು
ಬಹಳ ಶರಣೆ
ನನ್ನ ಹೆತ್ತಂತ ತಾಯಿಗಿಂತಲು ಶರಣೆ
ಆದರೆ ನಾನಿವುಳ ಮಾತ್ನಾಡ್ ಸ್ತೀನಿ ನೋಡು ಅಂತೇಳಿ
ಮಾದಪ್ಪ ಒಂದು ತತ್ವ ಹೇಳ್ತಾ ಇದ್ದಾರೆ

ಬಾಳೆ ಪಟ್ಟಿನ ಬಣದವಳೆ
ಸೀಗೆ ಹೂವಿನ ರವಿಕೆಯವಳೆ
ಇದು ಯಾವ ದೇವರಿಗೆ ಎಡೆಯಮ್ಮ || ನೋಡಿ ನಮ್ಮ ಶಿವನಾ ||

ಯಾವಾಗ ಮಾದಪ್ಪ ಈ ತತ್ವ ಹೇಳಿದ್ರೋ
ರಾಮವ್ವ ಮ್ಯಾಲಕ್ಕೆ ಅಂತ್ನೋಡಿ ನಗನಾಡ್ಬುಟ್ಟಳು
ನೆಗ್ನಾಡಿದ ತಕ್ಷಣ ಮಾದಪ್ಪ ನೋಡಿದ್ರು
ಅಂಗಳಲ್ಲಿ ತಾವರೆ ಕಮಲ ನೋಡುಬುಟ್ರು
ಮಲ್ಲಣ್ಣ ಇವಳೇ ನನಗೆ ಶರಣೇ ಆಗಬೇಕು
ಅಂತ ಹೇಳಿದ್ರು
ಆವಾಗ ಭಿಕ್ಷ ತಕಳಪ್ಪ ಅಂದ್ರು
ಮಾದೇಶ್ವರ ಮುತ್ತಿನ ಜೋಳ್ಗಿಯನ್ನ ಒಡ್ಡಿ
ರಾಮವ್ವ ತಂದಿರುವಂತ
ಬೆತ್ತದ ಮೊರವನ್ನ ಎರಡು ಕೈಲಿ ನಮಸ್ಕಾರ ಮಾಡಿ
ಭಕ್ತರ ಮನೆಯ ಪ್ರಸಾದ
ಈ ತಾಯಿಂದ ನನಗೆ ಎಣ್ಣೆ ಮಜ್ಜಣವಾಗಲಿ ಅಂತೇಳಿ
ಮುತ್ತಿನ ಜೋಳ್ಗೆ ಭಿಕ್ಷ ತಕಂಡ್ರೂ
ಆವಾಗ ಮಲ್ಲಣ್ಣ ಕೇಳುದ್ರು
ರಾಮವ್ವ
ನಿನ್ನ ಗಂಡನಾದ ಮೂಗಯ್ಯ ಎಲ್ಲಿ ಹೋದ ಅಂದ್ರು
ನೋಡಿ ಗುರುವೇ
ನನ್ನ ಗಂಡನಾದ ಮೂಗಯ್ಯ ಕೆಂದವಾದ ಎತ್ತೊಡಕಂಡು
ಕವಣೆ ಕಲ್ಲ್ ತಕ್ಕಂಡು
ತೆಂಕಲ ಗದ್ದಿಗೆ ಹೋಗಿದ್ದಾರೆ
ಗೀಜಗನ ಹಕ್ಕಿ ಹೊಡೆಯಾಕೆ ಅಂದ್ರು ಹಾಗಾದ್ರೆ
ಇವರು ಯಾರಪ್ಪ ಗುರುಗಳು ಅಂದ್ರು
ನೋಡವ್ವ ಸತ್ಯವಂತ ರಾಮವ್ವ
ಇವರು ಏಳುಮಲೆ ಕೈಲಾಸದಿಂದ ಬಂದಿದಾರೆ
ಮಾಯಕಾರ ಗಂಡ ಮಾದಪ್ಪ
ಇಲ್ಲಿ ಒಂದು ಒಕ್ಕಲು ಆಗಬೇಕು ಅಂತ ಹೇಳಿ ಬಂದಿದಾರೆ
ನೀವಿಬ್ಬರೂ ಗಂಡ ಹೆಂಡಿರು
ಏಳುಮಲೆ ಕೈಲಾಸಕ್ಕೆ ತಿಂಗಾತಿಂಗಳು ಹೋಗಿ
ಮಾದಪ್ಪನಿಗೆ ಎಣ್ಣೆ ಮಜ್ಜನ ಮಾಡಬೇಕಂತೆ ಕಣವ್ವ
ಅಯ್ಯಯ್ಯೋ ಮಲ್ಲಣ್ಣ
ನನ್ನ ಗಂಡ ಮೂಗಯ್ಯನ ಕರಕಂಡುಹೋಗಬೇಕಾ
ನಮಗೇನು ಬೇಕಾಗಿಲ್ಲ
ಇವಾಗ ಬಂದುದ್ದಕ್ಕೆ ದಾನ ಕೊಟ್ಟಿದ್ದಿನೀ

ನಮ್ಮಮಠವಾ ಬಿಟ್ಟು ಹೋಗ್ಲಿ ಅಂತವಳೇ ರಾಮವ್ವ || ನೋಡಿ ನಮ್ಮ ಶಿವನಾ ||

ಹೌದು ಹೋಗ್ತಿನಿ ರಾಮವ್ವ
ಅಂತ ಹೇಳಿ ಆವಾಗಲೀಗ
ಮಾಯಕಾರ ಗಂಡ ಮಾದಪ್ಪ
ಮಲ್ಲಣ್ಣ ಇವಳ ಗಂಡನಾದ ಮೂಗಯ್ಯನ ನೋಡೋಣ
ಅವನ ಮಾತನಾಡ್ಸಿ ನೋಡೋಣ
ಅವನ ಗುಣ ಹ್ಯಾಗಿದೆಯೋ
ಇವಳು ಒಕ್ಕಲಾಗೋದು
ಒಕ್ಕಲಾಗದೆ ಇರೋದ್ನ ನಾ ಮಾಡಿಕಳ್ತಿನಿ
ನಡಿಯಪ್ಪ ಅಂತ ಹೆಳಿ
ಮೂರು ಜನ ಮುನಿಗಳುವೇ

ಅವರು ತೆಂಕಲ ಗದ್ದೆಯೊಳಗೆ ಬರುತವರೇ ಮುನಿಗಳು || ನೋಡಿ ನಮ್ಮ ಶಿವನಾ ||

ತೆಂಕಲ ಗದ್ದೆಯೊಳಗೆ ನಿಂತ್ಕಂಡು ನೋಡ್ತವರೇ
ಮುಡುಕುತೊರೆ ಮಲ್ಲಣ್ಣ ಪಟ್ಟದ ರಂಗಸ್ವಾಮಿ
ಮಾಯ್ಕಾರ ಗಂಡ ಮಾದಪ್ಪ
ಇಗೋ ನೋಡು ಗುರುವೇ ಮಹಾದೇವ
ಅಲ್ಲಿ ಕವಣಿ ಕಲ್ಲು ತಕಂಡು
ಗೀಜಗನ ಹಕ್ಕಿ ಹೊಡೆತಿರೋನ ಮೂಗಯ್ಯ
ಅವನ ಬಟ್ಟೆ ನೋಡಿ
ಕಕ್ಲು ಬಟ್ಟೆಯಾಗಿದೆ
ಅವನ ಬಟ್ಟೆ ಒಗೆದು ಆರು ತಿಂಗಳಾಗಿವೆ
ಅವನ ಎಡಗೈ ಬಲಗೈ ನೋಡಿ
ಮುಗ್ನಲ್ಲಿ ಗೊಣ್ಣೆಯ ಏಡಗೈ ಬಲಗೈಲಿ ವರಿಸ್ಕತ್ರ ಅವ್ನೆ
ಅವನ ಹತ್ರಕ್ಕೆ ಹೋದ್ರೆ ದುರ್ ವಾಸನೆ
ಮೀನು ಮಿಡ್ಜ ಹಿಡ್ದು ತಿನ್ನೋರು
ನಳ್ಳಿ ಗುಳ್ಳೆ ತಿನ್ನೋರು
ನಾವು ಬಂದ್ರು ಕೂಡ ಯಾರೋ
ಬಂದವರೆ ಅಂತೇಳಿ ತಿರ್ಗಿ ನೋಡಲಿಲ್ಲ
ಬಾರ‍ಪ್ಪ ಮಲ್ಲಣ್ಣ
ಅವನ ಹತ್ರ ಹೋಗೋಣ ಅಂತೇಳಿ

ಅವರು ಮೂಗಯ್ಯ ದಂಡಕೆ ಬರುತವರೇ ಮಾದೇವಾ || ನೋಡಿ ನಮ್ಮ ಶಿವನಾ ||

ಮೂಗಯ್ಯನ ದಂಡೆಗೆ ಬಂದ್ರು ಹತ್ರ
ಕವಣೆ ಕಲ್ಲು ನಿಲ್ಸಿಬುಟ್ಟು ಮ್ಯಾಲ್ಕ ಅಂತ ನೋಡ್ದಾ
ಓಹೋ ರಂಗಸ್ವಾಮಿ ಬಂದವ್ರೆ
ಮುಡುಕುತೊರೆ ಮಲ್ಲಣ್ಣ ಬಂದವ್ನೆ
ಇವರ್ಯಾರೋ ಜಂಗುಮರು ಬಂದವರಲ್ಲ
ನಮ್ಮ ಮನ್ದೆವ್ರು ಬಂದಿದ್ರೆ ಪಾದ ಇಡ್ದು
ನಮಸ್ಕಾರ ಮಾಡಿ ಕಳುಸುತ್ತಿದ್ದಿ
ಮುಡುಕುತೊರೆ ಮಲ್ಲಣ್ಣಂಗಾದ್ರು ನಮಸ್ಕಾರ ಮಾಡ್ತಾ ಇದ್ದೆ
ಈ ಜಂಗುಮ್ರೂ ಬಂದವರಲ್ಲಾ
ಯಾರಿಗೆ ಮಾಡ್ಲಿ ಅಂತೇಳಿ
ಮೂಗಯ್ಯ ಬಂದಿರ್ವಂತ ಮೂರ್ಜನ ಮುನಿಗಳ
ಅವನು ದುರು ದುರನೆ ನೋಡ್ತಾ ನಿಂತವನೇ ಮೂಗಯ್ಯ
ಮಾಯ್ಕಾರ‍ಗಂಡ ಮಾದಪ್ಪ
ಮುಡುಕುತೊರೆ ಮಲ್ಲಣ್ಣ
ಪಟ್ಟದ ರಂಗಸಾಮಿ
ಆವಾಗಲೆ ತೆಂಕಲಗದ್ದೆ ಹೊಲ್ದಲ್ಲಿ ಹೋಗಿ
ಸತ್ಯವಂತ ಮೂಗಯ್ಯನ

ಅವರು ದೃಷ್ಟಿ ಇಟ್ಟ ನೋಡವರೇ ಮಾದೇವಾ || ನೋಡಿ ನಮ್ಮ ಶಿವನಾ ||

ಮೂರುಜನ ಮುನಗಳು ಹೋಗಿ ನಿಂತ ಕಾಲದಲ್ಲಿ
ಮೂಗಪ್ಪನೋರು ಆವಾಗ
ಕವಣೆ ಕಲ್ಸ್ ನಿಲ್ಲಿಸಬುಟ್ಟು ದುರುದುರು ನೋಡ್ತಾ ಅವರೇ
ನಮ್ಮ ಮನೆದೇವ್ರು ಪಟ್ಟದ ರಂಗಸ್ವಾಮಿ ಬಂದವನೇ
ಮುಡುಕುತೊರೆ ಮಲ್ಲಣ್ಣ ಬಂದವನೆ
ಯಾರೋ ಹೊಸ ಜಂಗಮ್ರು ಬಂದವರೆ ಅಂತ ಹೇಳಿ
ಆವಾಗ ಕವಣೆ ಕಲ್ಲು ನಿಲ್ಲಿಸ್ ಬುಟ್ಟು

ಅವನು ಓಡೋಡಿ ಬಂದವನೆ ಮೂಗಯ್ಯ || ನೋಡಿ ನಮ್ಮ ಶಿವನಾ ||

ಆವಾಗ ಶರಣಾನಾದ ಮೂಗಪ್ಪ
ಓಡಿಬಂದು ಮೂರು ಜನ ಮುನಿಗಳು ನೋಡ್ದಾ
ಓಹೋ ಹೊಸದಾಗಿ ಬಂದವ್ರೆ ಯಾರೋ
ಏನಾಗುವುದೋ ಅಂತ ಹೇಳಿ
ಆದರೆ ನಾನು ಪಟ್ಟದ ರಂಗಸಾಮಿಗೆ ಹೋಗಿ
ನಮಸ್ಕಾರ ಮಾಡಿದ್ರೆ
ಮಲ್ಲಿಪ್ಪಂಗೆ ಕೋಪ ಬರ್ತದೆ
ಮಲ್ಲಪ್ಪನಿಗೆ ಮಾಡಿದ್ರೆ ಮುನಿಗಳು ಕೋಪ ಬರ್ತದೆ
ಆದರೆ ದೂರದಲಿ ನಿಂತುಕಂಡು
ಈ ಮೂರು ಜನರೂ ಆಗಲಿ ನನ್ನ ಶರಣು ಅಂತೇಳಿ
ಆವಾಗ ತನ್ನ ಹೆಗಲ ಮೆಲ್ಲಿದ್ದಂತಹ
ಹಳೆ ದುಬುಟಿ ತೆಗ್ದು ಹಾಸ್ ಬುಟ್ಟು

ಅವನು ಮೂರು ಜನ್ಕು ಶರಣ ಮಾಡಾವನೇ ಮೂಗಯ್ಯ || ನೋಡಿ ನಮ್ಮ ಶಿವನಾ ||

ಏನಪ್ಪ ಮುನಿಗಳೇ
ನನ್ನ ಗದ್ದುಗೆ ನೀವು ಮೂರು ಜನರು ಬಂದಿದ್ದಿರಲ್ಲಾ
ಬ್ರಹ್ಮ ವಿಷ್ಣು ಈಶ್ವರ ಬಂದಾಂಗೆ
ನೀವು ಬಂದ ಕಾರ್ಯ ಏನಪ್ಪ ಅಂದ್ರು ಮೂಗಯ್ಯ
ಮಲ್ಲಪ್ಪ ಕರದ್ರು ಹತ್ರ
ಕೂರಪ್ಪ ಮೂಗಯ್ಯ ಹೆದರಬ್ಯಾಡಾ
ಇವರು ಬಂದಿರೋರು ಹೊಸಬರು
ಹೊಸಬರು ಏಳುಮಲೆ ಕೈಲಾಸದಿಂದ ಬಂದಿದಾರೆ
ನಿಮ್ಮನ್ನ ನೋಡೋದ್ಕೋಸ್ಕರ ಬಂದವರೆ ಮೂಗಯ್ಯ
ಬಾರ‍ಪ್ಪ ಅಂತೆಯೇ ಹತ್ರ ಕರದ್ರು
ಏನು ಗುರುವೇ ಅಂತ ಹೇಳಿ ಹತ್ರ ಬಂದಾ
ನಿಮ್ಮ ಮಠಮನೆಗೆ ಹೋಗಿದ್ದೊ
ನಿಮ್ಮಮಡದಿ ಆಗಿರ್ತಿಕ್ಕಂತಹ ರಾಮಮ್ಮ
ಭಿಕ್ಷಾ ಕೊಟ್ರು ಜಂಗಮರ್ಗೆ
ಆದರೆ ನಾವೊಂದು ಮಾತು ಕೇಳಬೇಕು ಅಂತ ಬಂದಿದ್ದೀವಿ
ನೀನಾದ್ರು ಒಪ್ಪಿಕಂಡಿಯಪ್ಪ ಅಂದ್ರು
ಏನಪ್ಪ ಹೇಳು ಮಲ್ಲಪ್ಪ ಅಂದ್ರು
ಏನು ಇಲ್ಲ ನೀನು ಏಳುಮಲೆ ಕೈಲಾಸಕೆ
ತಿಂಗಾ ತಿಂಗಳು ಹೋಗಿ
ಮಾದಪ್ಪಂಗೆ ಎಳ್ಳು ಮಜ್ಜನ ಮಾಡಬೇಕಂತೆ ಅಂದ್ರು
ಏನ್ ಗುರುವೇ
ಏಳ್ ಮಜ್ಜನ
ಎಳ್ಳು ಮಜ್ಜನ ಅಂದ್ರೆ ನನಗೆ ಗೊತ್ತಿಲ್ಲ ಗುರುವೇ
ನನ್ನ ಮನೆಯಲ್ಲಿ ಮಡದಿ ನನ್ನ ರಾಮವ್ವ ಇದ್ದಾಳೆ
ಕೊತ್ತೆಗಾಲದ ಹೆಣ್ಣು ಅವಳ ಕೆಳಿ
ನನ್ನ ಮಡದಿ ಮಾತ ನಾ ಮೀರೋದಿಲ್ಲ
ಅವಳೇನಾದ್ರು ಹೋಗಬೇಕು ಅಂದ್ರೆ
ನಾನು ಕೂಡ ಬರ್ತಿನಿ
ಇಲ್ಲಾವಾದ್ರೆ ಸಾಧ್ಯವಿಲ್ಲ ಗುರುವೇ

ನನ್ನ ಮಡದಿ ಕೇಳು ಅಂತವನೇ ಮೂಗಯ್ಯ || ನೋಡಿ ನಮ್ಮ ಶಿವನಾ ||