ಮೂಗಯ್ಯನ ಮಾತ ಒಪ್ಕಂಡ್ರು ಮಾದಪ್ಪ
ಅಪ್ಪ ಮಲ್ಲಣ್ಣ
ಕಂಡ್ತವಾಗಿ ಈ ಶರಣ ನನ್ಗ ಎಣ್ಣೆಮಜ್ಜನ ಮಾಡ್ತಾನೆ
ಆದರೆ ಈ ಶರಣ ಬಂದು ನನ್ನ ಏಳುಮಲೆ ಕೈಲಾಸದಲ್ಲಿ
ನನ್ನ ದೇವಸ್ಥಾನದಲ್ಲಿ ಗರ್ಭಗುಡಿಯಲ್ಲಿ
ಎಣ್ಣೆ ಮಜ್ಜನಕ್ಕೆ ಇವನು ಬಂದಾಗಲೆ
ನಾನು ಬೆವ್ತೋಗ್ ಬುಡುತಿನಿ
ಆದರೆ ಇವನ ಕೈಯಿಂದ
ಅಂಗೈ ಅಗಲ ಒಳ್ ಮಾಡಿ
ಮುಂಗೈ ಒನಕೆ ಮಾಡಿ
ಎಳ್ಳನ ಹಿಂಡಿ ಕುಟ್ ಬುಟ್ರೆ
ನನ್ನ ಬ್ಯಾಡಗಂಪ್ಣದವ್ರಿದ್ದಾರೆ ಪೂಜಾರಿ
ಅವ್ರ ಕೈಲು ಸಾಧ್ಯವಿಲ್ಲ
ನನ್ನ ಸಾಲೂರ್ ಮಠದ ಗುರ್ಗಳಿದ್ದಾರೆ
ಶಾಂತಮಲ್ಲಿಕಾರ್ಜುನಸ್ವಾಮಿ
ಅವ್ರು ನನ್ಗ ಮಜ್ಜನ ಮಾಡ್ತಾರೆ
ಅನಂತರವಾಗಿ ಮೂಗಯ್ಯ ಹೊರ್ಟ್ ಬರ್ಲಿ
ಇವ್ನೆ ನನ್ಗ ಬುಕ್ತ ಆಗ್ಬೇಕು
ನಡೀರಪ್ಪ ಹೋಗಿ
ಮಠಮನೆಯೊಳ್ಗೆ ರಾಮವ್ವನ ಕೇಳೋಣ
ರಾಮವ್ವ ಆಗ್ದೇ ಹೋದ್ರೆ
ನಾನ್ ಒಕ್ಲ್ ಮಾಡ್ಕತಿನಿ ಅಂತೇಳಿ
ಆವಾಗ ತೆಂಕಲ ಗದ್ದೆಯನ್ನು ಬಿಟ್ಟು
ಮೂರ್ ಜನ ಮುನ್ಗಳುವೆ
ಸರಗೂರು ಮಠಕ್ಕೆ ಬರ್ತವ್ರೆ
ಮುನ್ಗಳು
ಸರಗೂರು ಮಠಕ ಬಂದ್ರು
ಆವಾಗಲೀಗ ಸತ್ಯವಂತ ರಾಮವ್ವ
ತಿರ್ಗ ಬತ್ತಾ ಇದ್ದಾರೆ ಮುನ್ಗಳು
ಇದೇನಾಶ್ಚರ್ಯವೋ ಕಾಣೆ
ನೋಡ್ಬೇಕು ಅಂತೇಳಿ
ಬಾಗಲಲ್ಲಿ ನಿಂತಿದ್ದಾಳೆ
ಅಟ್ಟಿ ಬಾಗ್ಲಲ್ಲೋಗಿ ನಿಂತ್ಗಂಡ್ರು
ಆವಾಗ ಮುಡುಕುತೊರೆ ಮಲ್ಲಪ್ಪ
ಸತ್ಯವಂತ ರಾಮವ್ವ
ನಿನ್ನ ಮಠಮಾನ್ಯಕೆ ನಡೆಯವ್ವ
ಬಂದ್ ವಾಕ್ಯ ಕೇಳ್ತಿವಿ ಅಂದ್ರು
ಏನ್ ಬಂದ್ರು ಬನ್ನಿ ಗುರುವೆ ಅಂತೇಳಿ
ಒಳ್ಗಡೆ ಕರ್ಕಂಡೋಗಿ
ಚಾಪೆಯನ್ನಾಸಿ ಕೂರ್ಸೂದ್ರು
ಚಾಪೆ ಮೇಲೆ ಕೂತ್ಗಂಡು ಮೂರ್ಜನ ಮುನ್ಗಳುವೆ
ಅಮ್ಮಾ ಸತ್ಯವಂತ ರಾಮವ್ವ
ಕೂಗೋ ನಿಮ್ಮ ದೇವ್ರು
ನಿಮ್ಮ ಮನೆದೇವರ ಮುಂದೆ ನಾವು
ನಿನ್ನನ್ನು ಕೇಳಬೇಕು ಅಂತ ಬಂದಿದ್ದೀವಿ
ಇವರು ಏಳುಮಲೆ ಮಾದೇಶ್ವರ
ಈ ಮಾದೇಸ್ವರನಿಗೆ
ತಿಂಗಾತಿಂಗಳು ಅಮವಾಸೆ ಒಂದಿನಾ ಅಂತೇಲಿ
ಆರು ಮಾನ ಅಚ್ಚೆಳ್ಳು
ಒಡೆಯದಿದ್ದ ಹೊಂಬಾಳೆ
ಒಂಬತ್ತು ಎಳನೀರು
ಮೂರು ಚಿಟ್ನ ಬೆಲ್ಲ ತಕಂಡು
ನಿನ್ನ ಗಂಡನಾದ ಮೂಗಯ್ಯ
ಬಿಳಿ ಪಾಜೆ ಸುತ್ಗಂಡು
ಆದರೆ ಎರಡ್ ಬಿಳಿನಾಮ ಇಟ್ಕಬೇಕು
ನಿಮ್ಮ ಮನೆ ದೇವ್ರಗೆ ಮೂರ್ ನಾಮ ಹಾಕ್ತಾ ಇದ್ದಿರಿ
ಮದ್ಯದ ಒಂದು ಕೆಂಪು ನಾಮ ತೆಗೆದುಬುಟ್ಟು
ಎತ್ತಿನ ಗಿಡ್ಡದ ಮೇಲೆ ಕೂತುಕಂಡು
ಕಂಚಿನ ಕಾಳೆ ಹೆಗಲ ಮೇಲೆ ಹೊತ್ಕಂಡು
ಮೈಸೂರು ನಾಡಿನ ಮೇಲೆ ಪರುಸೆ ಹೋಗ್ತಾರೆ
ಎಣ್ಣೇಳು ಕೋಟಿ ಗಂಡೇಳು ಕೋಟಿ
ಅವರ ಮದ್ಯ ನಿನ್ನ ಗಂಡನಾದ ಮೂಗಯ್ಯ
ದಂಡಿಗೆ ದಳವಾಯಿ ಆಗಿ

ಅವರು ನಡುಮಲೆಗೆ ಹೋಗಬೇಕು ಮುಗಯ್ಯ || ನೋಡಿ ನಮ್ಮ ಶಿವನಾ ||

ಏನಪ್ಪ ಮುಡುಕುತೊರೆ ಮಲ್ಲಣ್ಣ
ನಮ್ಮಂತಹ ಸರಿಜಂಗುಮ ಅಂತೇಳಿ
ಆದರೆ ಬಿಳಿಗಿರಿ ರಂಗಸಾಮಿ ಒಪ್ಕೊ ಬಹುದು
ನೀವು ಕೂಡ ಒಪ್ಕೊ ಬಹುದು
ಆದರೆ ಇಲ್ಲಿ ಬಂದಿರುವಂತಹ ಹೊಸ ದೇವ್ರು
ನನ್ನ ಗಂಡನಾದ ಮೂಗಯ್ಯ
ಏಳು ಬೆಟ್ಟಕ್ಕೆ ಹೋಗಿ
ಏಳು ಬೆಟ್ಟದ ಮದ್ಯದಲ್ಲಿ
ಆನೆಕಾಟ ಹುಲಿಕಾಟ ಕಳ್ಳರ ಭಯ
ನನ್ನ ಗಂಡನಾದ ಮೂಗಯ್ಯ
ಹಿಂದಿನ ಬಟ್ಟೆ ಮುಂದಕ್ಕೆ ಎತ್ಕಳಕ್ ಬರೋಲ್ಲ
ಮುಂದಿಲ ಬಟ್ಟೆ ಹಿಂದಕ್ಕೆ ಎತ್ಕಳಕ್ ಬರಲಿಲ್ಲ
ಅಂತಹ ದಡ್ಡ ಮೂಗಯ್ಯನ ಹೋಗು ಅಂತ ಹೇಳ್ತಾ ಇದ್ದೀರಲ್ಲಾ

ನಮಗೆ ಏಳು ಮಲೆ ಸುದ್ದಿ ತರವಲ್ಲ ಅಂತವಳೇ ರಾಮವ್ವ || ನೋಡಿ ನಮ್ಮ ಶಿವನಾ ||

ಕೇಳಪ್ಪ ಮುಡುಕುತೊರೆ ಮಲ್ಲಣ್ಣ
ನನ್ನ ಗಂಡನಾದ ಮೂಗಯ್ಯನ ಏಳುಮಲೆಗೆ ಕಳುಸಲಾರೆ
ನಮ್ಮ ಒಕ್ಕಲು ಮಾಡ್ಬೇಡ ಗುರುವೇ
ನೀವು ಒಂದಾರಿ ಹಿಡ್ಕಂಡು ಹೊರ್ಟೋಗಿ
ಈ ಮರಿದೇವ್ರಿಗೆ ಯಾವ ನಾಡಿನಲ್ಲಾದ್ರುವೇ
ಒಕ್ಕಲು ಮಾಡಿಕೊಡಿ ಗುರುವೆ ಅಂದಳು
ಆವಾಗ ಮುಡುಕುತೊರೆ ಮಲ್ಲಣ್ಣ
ಮಾದೇಸ್ವರನ ಕರ್ಕಂಡು ಪಟ್ಟದ ರಂಗಸಾಮಿ ಕರ್ಕಂಡು

ಅವರು ಮುಡುಕುತೊರೆ ಕೈಲಾಸಕೆ ಬಂದವರೇ ಮುನಿಗಳು  || ನೋಡಿ ನಮ್ಮ ಶಿವನಾ ||

ಮುಡುಕುತೊರೆ ಕೈಲಾಸದಿಂದ ಬಂದು
ಮುಡುಕುತೊರೆ ಮಲ್ಲಪ್ಪ ಕೇಳ್ತಾ ಇದಾರೆ
ಮಹಾದೇವಾ
ಅವ್ರು ದಡ್ಡರು ಒಕ್ಕಲು ಆಗದಿಲ್ಲ ಅಂದ್ರು
ಮಲ್ಲಣ್ಣ ಅವರು ಒಕ್ಕಳು ಆಗೇ ಆಯ್ತರೆ
ನಾ ಒಕ್ಕಲು ಮಾಡ್ಕಿತ್ತಿನಿ
ಪಟ್ಟದ ರಂಗಸಾಮಿ ನೀವು ಒಕ್ಕಲಾದ್ರೆ
ನನಗೆ ಒಕ್ಕಲು ಕಳ್ಸಿಯಪ್ಪ ಅಂದ್ರು
ಗುರುವೇ ನಿನ್ನ ಮಾತಿಗೆ ನಾನು ಮೀರೋದಿಲ್ಲ
ನನ್ನ ಹೆಸರಿನಲ್ಲಿ ಇದ್ರೆ ಇರುವಂತಹುದ್ದು
ಆದಿ ಎರಡು ಬಿಳಿನಾಮ ಇರ್ಲಿ ಅವರ್ಗೆ
ಮದ್ಯ ಕೆಂಪುನಾಮ ತೆಗೆದು ಬುಡ್ಲಿ
ನಿನ್ನ ಒಕ್ಕಲು ಮಾಡ್ಕಳಪ್ಪ ಅವರು ಆದ್ರೆ ಅಂದ್ರು
ರಂಗಸ್ವಾಮಿ ವರ ಕೊಟ್ಟುಬುಟ್ರು
ಮಲ್ಲಣ್ಣೂ ಕೂಡ
ಅವರ್ಗೆ ಏನ್ ಕೊಲೆ ಕೊಡ್ತ ಇದ್ದೀಯೊ
ಏನ್ ಬುದ್ದಿ ಏಳ್ತಾ ಇದ್ದಿಯೋ
ಕೇಳಿ ನೀ ಒಕ್ಕಲ್ ಮಾಡ್ಕಪ್ಪ ಅಂದ್ರು
ಆಗ್ಲಿ ಮಲ್ಲಣ್ಣ ಅಂತೇಳಿ
ಮಾದೇವ ಮುಡ್ಕುತೊರೆ ಕೈಲಾಸ್ ದಲ್ಲಿ ಕೂತ್ಗಂಡು

ಸರಗೂರಯ್ಯನ ಮಠಕೆ ದೃಷ್ಟಿಮಡಗಿದರು
ಅರಗಣ್ನು ಕಿರಗಣ್ಣು ಬಿಟ್ರು ಮಾದಪ್ಪ
ಆವಾಗ ಅವರು ತುಮ್ಬಿದ್ದಂತಹ ರಾಗಿ ಗುಳಿ ಜ್ವಾಳದ ಗುಳಿ
ನಾಳೆ ಸೋಮವಾರ‍ಮೂಗಯ್ಯನೋರು
ರಾಗಿ ಜ್ವಾಳ ತಕ್ಕಳಕ ಹೋಗ್ತಾರೆ
ಅಷ್ಟು ಹೊತ್ತಿಗೆ ಮಾದಪ್ಪ
ರಾಗಿ ಗುಳಿ ಜ್ವಾಳದ ಗುಳಿಯನ್ನೇ
ಅವರು ಬೂದಿ ರಾಸ್ಯಾ ಮಾಡವರೇ
ಮಹದೇವಾ

ಜ್ವಾಳದ ಗುಳಿ ರಾಗಿ ಗುಳಿ ಬೂದಿ ರಾಸ್ಯ ಆಗ್ ಬುಡ್ತು
ಭೂಮಿ ಒಳಗೆ ತುಂಬಿದ್ದಂತಹ ಧಾನ್ಯ
ಆವಾಗಲಿಗ ಮೂಗಯ್ಯನದ್ರು
ಕೆಂದಾ ಬೂದ್ನ ಒಡ್ಕಂಡ್ ಬಂದು
ಮಠಮನೆಯಲ್ಲಿ ಕಟ್ಟುದ್ರು
ಆವಾಗ ರಾಮವ್ವ ಕೈಕಾಲಿಗೆ ನೀರು ಕೊಟ್ಟು
ಮೂಗಪ್ಪ ಊಟಮಾಡಕಂಡು
ಏನು ಕೊತ್ತಗಾಲದ ಹೆಣ್ಣೆ
ನೆನ್ನೆ ದಿವಸ ಯಾರು ಮಠಕೆ ಬಂದಿದ್ರು ಅಂದ್ರು
ನೋಡಿ ಯಜಮಾನ್ರೆ
ಮುಡುಕುತೊರೆ ಮಲ್ಲಪ್ಪ
ಪಟ್ಟದ ರಂಗಸ್ವಾಮಿ
ಯಾರೋ ಏಳುಮಲೆ ಮಾದೇಸ್ವರನಂತೆ
ಮಾದೇಸ್ವರ ನಮ್ಮ ಒಕ್ಕಲು ಮಾಡ್ಕಳಕೆ ಬಂದಿದ್ರು
ನಾನು ಖಂಡುತವಾಗಿ
ನನ್ನ ಗಂಡನ ಕಳುಹಲ್ಲ ಅಂತ ಹೇಳಿದ್ದೀನಿ
ನೀವು ಕೂಡ ಅದೇ ರೀತಿ ಹೇಳ್ ಬುಡಿ ಅಂದ್ರು
ಅಯ್ಯೋ ಕೊತ್ತೆಗಾಲದ ಹೆಣ್ಣೇ
ಬಂದಂತಹ ಮುನಿಗಳ ಮುಖ ಮುರ್ದು ಮಾತಾಡಬಾರ್ದು
ನಮ್ಮ ಹಣೇಬರ ಇದ್ರೆ
ಏಳುಮಲೆಗಾದ್ರು ಹೋಗಬಹುದು
ಹೋಗ್ದೆ ಇದ್ರು ಇರಬಹುದು
ಹಾಗನ್ನಬೇಡ ಕೊತೇಗಾಲದ ಹೆಣ್ಣೆ ಅಂದ್ರು
ಅಯ್ಯೋ ಯಜಮಾನ್ರೆ ಆ ಮಾತಾಗಿರ್ಲಿ
ಇವತ್ತು ಸ್ವಾಮವಾರ‍
ಒಳ್ಳೆ ದಿನ
ಹೋಗಿ ನಮ್ಮನೆಗೆ
ಊಟಮಾಡುವತ್ತಿಗೆ ಅಷ್ಟಷ್ಟು ರಾಗಿ ಜ್ವಾಳ ಆಗಬೇಕು
ಗುಳಿ ಬಾಯಿತೆಗೆದು
ರಾಗಿ ಜ್ವಳ ತೆಗೆದು ಹಾಕೋಗಿ ಅಂದಳು
ಮಡದಿ ರಾಮವ್ವನ ಮಾತ ಕೇಳ್ಕಂಡು
ಮೂಗಪ್ಪನೋರು ಮನೆ ಹಿಂದೆ ಹಿತ್ತಲಿಗೋದ್ರು
ಹಿತ್ತಲಿನಲ್ಲಿ ಎರಡು ಅಗೆ ಗುಳಿ ಇದ್ದೋ
ಆ ಗುಳಿ ಬಾಯಿನಲ್ಲಿ ಮಣ್ಣೆಲ್ಲಾ ತೆಗೆದುಹಾಕಿ
ಕಟ್ಟುನಕಲ್ಲು ಮರ ತೆಗೆದು ಹಾಕ್ ಬುಟ್ಟು
ಮೂಗಪ್ಪ ಕಂಬಳಿ ಹಾಕಂಡು ಸೆಕೆ ತೆಗೆದು ಸೆಕೆ ಬೀಸಿ
ಸೆಕೆನೆಲ್ಲ ತಗದು ಬುಟ್ಟು
ಒಂದು ಗುಳಿಗುಕ್ಕದೆ
ದೀಪಮಡ್ಗಿ ನೋಡಿದ್ರು ಒಳಗಡೆ ಸೆಕೆ ಇದ್ರೆ ದೀಪ ಕೆಟ್ಟೊಯ್ತದೆ
ಸೆಕೆ ಇಲ್ಲದಿದ್ರೆ ದೀಪ ಉರಿತದೆ
ಆವಾಗ ಗುಳಿ ಒಳಗೆ ಸೆಕನೆಲ್ಲ ನೋಡಿಬುಟ್ಟು
ಯಾರು ಮೂಗಪ್ಪನೋರು
ಒಳಗಡೆ ಒಂದು ಕೈ ಏಣಿ ಅಂದ್ರೆ
ಐದು ಕಾಲ್ನೇಣಿ ಸಣ್ಣೇಣಿ ಬುಟ್ಟಕಂಡು

ಅವರು ಗುಳಿಯ ಒಳಗೆ ಇಳಿದವರೇ ಮೂಗಯ್ಯ || ನೋಡಿ ನಮ್ಮ ಶಿವನಾ ||

ಗುಳಿ ಅಂದ್ರೆ ಅಗೆ ಗುಳಿ
ಅಗೆ ಗುಳಿ ಒಳಗೆ ಯಾವಾಗ ಇಳಿದ್ರೋ
ತುಂಬಿದಂತಹ ಜ್ವಾಳವೆಲ್ಲಾ
ಬೂದಿಯಾಗಿ ಹೋಗಿ ಬುಟ್ಟದೆ
ಅಯ್ಯೋ ಇದ್ಯೇನಪ್ಪ ಆಶ್ಚರ್ಯ
ಮಂಗರ ಮಾಯವಾಗದೆ ಅಂತೇಳಿ ಮ್ಯಾಲಿಕ್ಕ ಹತ್ತಿ ಬಂದು ಮೂಗಪ್ಪ
ಜ್ವಾಳದ ಗುಳಿಗೆ ಹೋಗಿ ಅದೇ ರೀತಿಯಾಗಿ ಇಳಿದು ನೋಡಿದ್ರು
ಜ್ವಾಳದ ಗುಳಿನೊ ಬೂದಿಯಾಗ್ ಬುಟ್ಟಿತ್ತು
ಕೊತ್ತೆಗಾಲದ ಹೆಣ್ಣೆ
ಇದೇನು ಮಾಯ ಸೂತ್ರ
ಮೂರು ಜನ ಮುನಿಗಳು ಬಂದು ಭಿಕ್ಷೆ ಕೇಳಿದ್ರು
ನೀನು ಭಿಕ್ಷೆ ಕೊಟ್ಟಿದ್ದು ಸರಿಯಾಯ್ತು
ಆ ಮುನಿಗಳೊಂದಿಗೆ ಯಾಕೆ ತಿರ್ಗ ಮಾತಾಡ್ದೆ ನೀನು
ಈವತ್ತು ನೋಡು ನಮ್ಮ ಬಾಳೇನಾಯ್ತು
ತಂಕಲ ಗದ್ದೆಲಾದ್ರು ಹೋಗಿ
ಬತ್ತ ಕೂಯ್ಕಂಡು ಬತ್ತಿನಿ
ಒಣಗ್ಸಿ ಕುಟ್ಟಿ ಗಂಜಿನಾದ್ರು ಕಾಯ್ಸು ಅಂತೇಳಿ
ತೆಂಕಲ ಗದ್ದೆಗೆ ಬರುತವನೇ
ಮೂಗಯ್ಯಾ

ತೆಂಕಲಗದ್ದೆಗೆ ಬರೋವತ್ತಿಗೆ
ಮಾಯ್ಕಾರಗಂಡ ಮಾದೇವಾ
ಆ ಭೂಲೋಕದಲಿ ಹೊಳೆ ಕೆರಲಿದ್ದಂತಹ ಗೀಜಗನ ಹಿಂಡನ್ನೆಲ್ಲಾ ಕರೆದು
ಮೂಗಯ್ಯನ ಗದ್ದೆಗೆ ಬುಟ್ಟಿದ್ದಾರ‍
ಮೂಗಯ್ಯ ಮನೆಗೆ ಬಂದ ಟೈಮಿನಲಿ
ಆ ಗೀಜಗನ ಹಿಂಡೆಲ್ಲ ಸೇರ್ಕಂಡು
ತೆಂಕನ ಗದ್ದೆ ಒಳಗೆ ಇರ್ತಕಂತಹದ್ದು
ಭತ್ತ ಒಂದು ಕಾಳಿಲ್ದಂಗೆ ಎಲ್ಲಾ ಊರ್ಕಂಡು
ಬರಿ ಹುಲ್ಲು ನಿಲ್ಲಿಸಿಬುಟ್ಟೋ
ಮೂಗಯ್ಯ ಹೋಗಿ ನೋಡ್ದ
ಎಲ್ಲಾ ಬರು ಹುಲ್ಲಾಗದೇ
ನನ್ನ ಮಡ್ದಿ
ಕೊತ್ತಗಾಲದ ಹೆಣ್ಣು ರಾಮವ್ವನ ಮಾತ ಕಟ್ಟಿಕೊಂಡು
ನಾನು ಊರಿಗೆ ಹೋಗಿ ಗುಳಿ ತಕಂಡು ನಿಂತ್ಗಂದಿ
ಬೆಳಗಿನ ಜಾವ
ನನ್ನಗದ್ದೆ ಒಳಗೆ ಗೀಜಗನ ಹಕ್ಕಿ ಒಂದು ಭತ್ತ ಮಡ್ಗನಿಲ್ಲವಲ್ಲ
ಯೋಚನೆ ಮಾಡ್ಕಂಡು ಮೂಗಪ್ಪ

ತನ್ನ ಮಠಮನೆಗೆ ಬರುತವನೇ ಮೂಗಯ್ಯ || ನೋಡಿ ನಮ್ಮ ಶಿವನಾ ||

ರಾಗಿ ಗುಳಿ ಜ್ವಾಳದ ಗುಳಿ ಕೊತ್ತೆಗಾಲದ ಹೆಣ್ಣೆ
ಬರ್ದಾಗ್ ಬುಡ್ತು
ಗದ್ದೆ ಒಳಗೆ ನೋಡೋಗು
ನಮ್ಮ ಸುಂಡ ಕರ್ಕಬೇಕು ಅಂದ್ರೆ ಬಂದ ಕಾಳು ಬತ್ತಿಲ್ಲ
ಎಲ್ಲಾ ಗೀಜಗನ ಹಿಂಡು ತಿಂದುಬುಟ್ಟವೇ
ನಮಗೆ ಏನು ದಂಡ ಆಗ್ತಾ ಇದಿಯೋ ಗೊತ್ತಿಲ್ಲ
ಮೂಗಪ್ಪನೂ ದಡ್ಡ
ಆಗ ರಾಮವ್ವ ಹೇಳ್ತಾಳೆ
ಹೇದರ್ಬೇಡ ಯಜಮಾನ
ಆ ಮುನಿಗಳು ಒಂದು ಶಾಪಕೊಟ್ಟು ಅಂತ ಹೆದರ್ಬೇಡ
ಮಾವನಳ್ಳಿ ಚೌಡ್ ಮಾಳಕ್ಕೆ ಹೋಗು
ನಮ್ಮ ಜಾತಿಪದ್ದತಿ ಇದ್ದೆ ಅದೇ
ನಾವು ಉತ್ತಾರ್ರು
ಆದರೆ ಚೌಡ್ ಮಾಳದಲ್ಲಿ ಹೋಗಿ
ಚೆನ್ನಾಗಿ ಬೆಳ್ಳ ಬೆಳ್ಳಗೆ ಇರುವಂತಹದ್ದು
ಚೌಳ ಮಣ್ಣನ್ನೆಲ್ಲಾ ಕೆರ್ದು ಗುಡ್ಡೆ ಹಾಕು
ನಾನು ಮನೆಯಿಂದ ತ್ವಾಟದೊಳಗೆ
ಎರಡು ಪಾತಿ ಕೀರೆಸೊಪ್ಪುದೇ
ಕೀರೆ ಸೊಪ್ಪು ಕೂದೂ
ಸೊಪ್ಪು ಬೇಯ್ಸಿಕಂಡು ಅಂಬ್ಲಿ ಕಾಯ್ಸಿಕಂಡು ಬರ್ತಿನಿ
ನನ್ನ ಕಣಜದಲ್ಲಿ ಇರೋ ರಾಗಿನೇ ಸಾಕು
ಅಂಬ್ಲಿ ಕಾಯ್ಸಿ ಕುಡ್ದು
ನಾವು ಚೌಳನಾದ್ರು ತಂದು
ಚೌಳುಪು ಮಾಡಿ ಜೀವ್ನ ಮಾಡಾನ
ಅ ಮುನಿಗಳ ಸಾಪ ನಮ್ಗೇನು ಇಲ್ಲ ಅಂತೇಳಿ

ಅವಳು ಮಾವನಳ್ಳಿ ಮಾಳಿಗೆ ಕಳುಹುವ್ನೆ ರಾಮವ್ವ || ನೋಡಿ ನಮ್ಮ ಶಿವನಾ ||
ಮಲಿಯಲೆ ಮಾದೇವ ಬರುವ ಚಂದಾವ || ನೋಡಿ ನಮ್ಮ ಶಿವನಾ ||

ಆವಾಗಲೀಗ ಮೂಗಯ್ಯನೋರು
ಮಡದಿಯಾದ ರಾಮವ್ವನ ಮಾತ ಕೇಳ್ಕಂಡು
ಕೊತ್ತೆಗಾಲದ ಹೆಣ್ಣೇ
ನೀನು ಮಧ್ಯಾಹ್ನ ಹನ್ನೆರಡು ಗಂಟೆಗೆ ಸರಿಯಾಗಿ
ಮಾವಿನಳ್ಳಿ ಮಾಳಕೆ
ನನ್ನ ಹೊಟ್ಟೆಗೇನಾದ್ರು ಆಧಾರ ತಕ್ಕಂಡು ಬಾ
ಜ್ವಾಳದ ಗುಳಿ ರಾಗಿ ಗುಳಿ ಬೂದಿ ಆಯ್ತು ಅಂತೇಳಿ
ನನ್ನ ಹೊಟ್ಟೆಗೆ ಊಟ ಕಡಿಮೆ ಮಾಡಬೇಡ
ಅಂತೆಳಿಬುಟ್ಟು ರಾಮವ್ವಗೆ
ಮೂಗಯ್ಯನೋರು ಎಲಗುದ್ಲಿಯನ್ನೆ
ಹೆಗಲಮೇಲಿಟ್ಟುಕಂಡುಗಿ
ಹಳೆ ದುಬುಟಿ ಹೆಗಲ ಮ್ಯಾಲಾಕಂಡು

ಅವರು ಮಾವ್ನಳ್ಳಿ ಮಾಳಕ್ಕೆ ಬರುತವರೆ ಮೂಗಯ್ಯ || ನೋಡಿ ನಮ್ಮ ಶಿವನಾ ||

ಮಾವ್ನಳ್ಳಿ ಮಾಳಕೆ ಬಂದರು ಮೂಗಪ್ಪ
ಆದರೆ ಸೂರ್ಯನ  ಬಿಸ್ಲು
ಬಸಿಲು ಜೋರಾಗ ಹೊತ್ತಿಗೆ
ಬಿಸಿಲೇನಾದ್ರು ಮೇಲ್ಕೆ ಜೋರಾಗಿಬುಟ್ರೆ
ಚೌಳುಪ್ಪು ಕಾಣದಿಲ್ಲ ಅಂತೇಳಿ
ಹೊತ್ತಿನಂತೆ ಹೋಗಿ ಇಭಿ ಹೊತ್ನಲ್ಲಿ
ಎಲಗುದ್ಲಿ ತಕಂಡು
ಆ ಮಾವಿನಲ್ಲಿ ಮಾಳ್ದಲಿ ಚೌಳ್ನೆಲ್ಲ ಎಳೆದು ಗುಡ್ಡೆ ಹಾಕ್ತ ಅವ್ರೆ
ಎಂಟೊಬತ್ತು ಗಂಟೆ ಆಯ್ತು
ಅಷ್ಟು ಹೊತ್ತಿಗೆ ಮಾದಪ್ಪ ನೋಡಿದ್ರು ಕೂತ್ಗಂಡು
ಮುಡುಕುತೊರೆ ಕೈಲಾಸದಲಿ
ರಾಮವ್ವ ಗಂಡನಾದ ಮೂಗಯ್ಯನ ಮಾವ್ನಳ್ಳೀ
ಮಾಗಳಿಗೆ ಕಳಿಸಿದ್ದಾಲೆ
ಚೌವ್ಳು ಉಪ್ಲಾದ್ರು ಕಲ ಕಳೆಯೋಣ ಅಂತೇಳಿ
ಇದ್ನು ಕೂಡ ನಾನು ಅಡ್ಡಿ ಮಾಡಬೇಕು ಅಂತೇಳಿ ಮಾಯ್ಕಾರಗಂಡ
ಆಕಾಶ ಅಂತು ನೋಡಿ
ಭೂಮಿತಾಯಿ ಬಗ್ಗಿ ನೋಡಿ
ಆವಾಗಲೀಗ ಮೂಗಯ್ಯ ಹೋಗಿ ಕರ್ದು
ಅಲ್ಲಲ್ಲಿ ಚೌವ್ಳು ಉಪ್ಪನ್ನೆಲ್ಲಾ ಗುಡ್ಡೆ ಮಾಡಿ
ಗುಡ್ಡೆ ಮಾಡಿಬುಟ್ಟು ಹೋಗಿ ಮರದ ನೆರಳಲ್ಲಿ ಕೂತ್ಗಂಡ್ರು
ರಾಮವ್ವ ಊಟ ತರಲಿ ಅಂತೇಳಿ
ಅಷ್ಟು ಹೊತ್ತಿಗೆ ನನ್ನಪ್ಪಾಜಿ ಮಾದೇವ

ದೇವೇಂದ್ರರಾಯನ ಕರೆದವರೆ ಮಹಾದೇವ || ನೋಡಿ ನಮ್ಮ ಶಿವನಾ ||

ನೋಡಪ್ಪ ದೇವೇಂದ್ರರಾಯ
ಯಾವ ಕಡೆ ಗುಡ್ಗು ಮಿಂಚು ಇಲ್ಲದೆ ಇದ್ರುವೆ
ಆ ಮಾವ್ನಳ್ಳಿ ಚೌಳದ ಮಾಳದ ನ್ಯಾರಕೆ
ಒಂದು ಸಾರಿ ಗುಡುಗಿ
ಒಂದು ಸಾರಿ ಮಿಂಚಿಸ್ ಬುಟ್ಟು
ಸ್ವಲ್ಪ ಮಳೆ ಬೀಳ್ಸ್ ಬುಡಪ್ಪ
ಮಾಳದಲ್ಲಿ ಇರ್ತಕಂತಹ ಚೌಳನ ಗುಡ್ಡೆಯಲ್ಲಾ
ಕೊಚ್ಚಗಂಡೋಗಿ ಹೊಳಗೆ ಬಿದ್ದೋಗ್ಲಿ ಅಂದ್ರಂತೆ ಮಾದಪ್ಪ
ಮಾಯದಂತೆ
ಆವಾಗ ದೇವೆಂದ್ರ ಪತಿ ಒಂದು ಸಾರಿ ಗುಡುಗಿದ್ದಾರೆ
ಒಂದು ಸಾರಿ ಗುಡುಗಿ ಒಂದು ಸಾರಿ ಮಿಂಚಿ
ಆವಾಗ ಮಾವ್ನಳ್ಳಿ ಮಾಳ ಕಟ್ಗಂಡು
ಕಲ್ಲೂರು ತೋಪ ಕಟ್ಗಂಡು
ಇದು ಅಲ್ಲದೆ ಮೇಲ್ಗಡೆ ಹೊಳೆಸರದ್ದು ಕಟ್ಗಂಡು

ಅವರು ಕುಟುಗಲ ಮಳೆಯ ಕರೆದವರೆ ದೇವೇಂದ್ರ || ನೋಡಿ ನಮ್ಮ ಶಿವನಾ ||

ಯಾವಾಗ ಮಳೆ ಬಿದ್ ಬುಡ್ತೊ
ಮೂಗಯ್ಯನೋರು ಕೆರ್ಕ್ದು ಗುಡ್ಡೆ ಹಾಕಿದಂತಹ
ಚೌವ್ನು ಉಪ್ಪೆಲ್ಲ ಕರಗಿ ಮಣ್ಣಾಗಿ ಹೋಗ್ ಬುಡ್ತು
ಅಷ್ಟೋತ್ತಿಗೆ ಹನ್ನೆರಡ್ ಗಂಟೆ ಒಂದು ಗಂಟೆ ಆಯ್ತು
ಮಧ್ಯಾಹ್ನ ಹೊತ್ತು ತಿರುಗಿಬುಡ್ತು
ರಾಮವ್ವ
ಅಂಬಲಿ ಕಾಯ್ಸಿಕಂಡು ಸೊಪ್ಪು ಬೆಯ್ಸಿಕಂಡು ಹೊತ್ಕಂಡು ಬಂದಳು
ಚೌಳು ಮಾಳದಲ್ಲಿ ಮರ್ದಂಡಿ ಕೂತಿದ್ದ ಮೂಗಪ್ಪ
ಬನ್ನಿ ಯಜಮಾನ್ರೆ ಊಟ ಮಾಡಿ ಅಂದಳು
ಅಯ್ಯೋ ಕೊತ್ತೆಗಾಲದ ಹೆಣ್ಣೆ
ಇವಾಗ ತಾನೆ ನೀ ಬಂದೆ
ಸ್ವಲ್ಪ ಹೊತ್ತಿನಲ್ಲಿ
ಒಂದು ಸ್ವರ ಮಳೆ ಬಿದ್ ಬುಡ್ತು ಆನೆಕಲ್ಲು ಮಳೆ ಹೊಯ್ದಂಗೆ
ನಾ ಕೆರ್ದು ಗುಡ್ಡೆ ಹಾಕಿದ್ದೆಲ್ಲಾ
ಚೌಳು ಉಪ್ಪೆಲ್ಲ ಕೊಚ್ಚುಕಂಡು ಹೋಗಿಬುಡ್ತು
ಏನು ಅಡಿಗೆ ಮಾಡಿಕಂಡು ಬಂದಿದ್ದಿಯಾ ಅಂದ್ರು
ಅಂಬ್ಲಿ ಕಾಯ್ಸಿಕಂಡು
ಸೊಪ್ಪು ಬೇಯ್ಸಿಕಂಡು ಬಂದಿದ್ದೀನಿ
ಇದನ್ನಾದ್ರು ಊಟ ಮಾಡಿ ಅಂತೇಳಿ ಕೈ ತೊಳ್ಸಿಬುಟ್ಟು
ಯಾರು ಮೂಗಯ್ಯನಿಗೆ ರಾಮವ್ವ
ಬಟ್ಲ ಮಡ್ಗಿ
ಒಂದು ಬಟ್ಲಿಗೆ ಸೊಪ್ಪು ಒಂದು ಬಟ್ಲಿಗೆ ಅಂಬ್ಲಿ ಬುಟ್ಟಳು
ಮೂಗಯ್ಯ ಎಂತಹ ಬಡ್ತಾನ ಬಂತು
ಪರಮಾತ್ಮ ಪಟ್ಟದ ರಂಗಸ್ವಾಮಿ
ನನಗೂ ಕೂಡ ಅರಿವಾಗೋದಿಲ್ಲಾ ನನ್ನ ಕಷ್ಟ ಅಂತೇಳಿ
ಒಂದು ಸಾರಿ ಸೊಪ್ಪನ್ನೆ ಎತ್ತಿ ಬಾಯ್ಗಾಕಿದ್ದಾನೆ
ಇನ್ನೊಂದು ಸಾರಿ ಕೈ ಹಾಕೊ ಹೊತ್ತಿಗೆ
ಅವನು ಉಣ್ಣುವಂತಹ ಬಟ್ಲಲ್ಲಿ

ಬೆಯಿಸಿದಂತಹ ಸೊಪ್ಪೆಲ್ಲಾ ಹುಳುವಾಗಿ ಮಿಳ್ಳವೆ
ಗುರುದೇವಾ || ನೋಡಿ ನಮ್ಮ ಶಿವನ ||