ಹುಳಾ ಅರ್ಧ ಸೊಪ್ಪರ್ಧ ಮಿಳ್ಳಾಡ್ತ ಇತ್ತು
ಕೊತ್ತೆಗಾಲದ ಹೆಣ್ಣೆ
ಎಲ್ಲಿಂದ ಬೆಯ್ಸಿಕಬಂದೆ ಇದಾ ಅಂದ್ರು
ಅಯ್ಯೋ ಯಜಮಾನರೆ
ನಾನು ಚೆನ್ನಾಗೀ ಸೋಸ್ ಬುಟ್ಟು ಸೊಪ್ಪನೆಲ್ಲನುವೆ
ಒದ್ರಿ ತೊಳ್ದು ಚೆನ್ನಾಗಿ ಬೆಯ್ಸಿಕಬಂದಿವ್ನಿ
ಇದು ಯಾರ ಮಾಯವೋ ಗೊತ್ತಿಲ್ಲ
ಮಾದಪ್ಪನ ಮಾಯವೋ ಗೊತ್ತಿಲ್ಲ
ಮಲ್ಲಣ್ಣನ ಮಾಯವೋ
ರಂಗಸಾಮಿ ಮಾಯವೋ ಗೊತ್ತಿಲ್ಲಾ
ಬನ್ನಿ ಯಜಮಾನ್ರೆ
ಯಾವ ತರದಲಿ ಜೀವನ ಮಾಡನ ನೋಡೋಣ
ಆ ಮಾದಪ್ಪನ ಮಾಯವೋ ಅಂತೇಳಿ
ಮೂಗಯ್ಯನ ಕರಕಂಡು

ಸರಗೂರು ಮಠಕೆ ಬರುತವಳೆ ರಾಮವ್ವ || ನೋಡಿ ನಮ್ಮ ಶಿವನಾ ||

ಆವಾಗಲೀಗ ಮಹಾದೇವ ಇದೊಂದು ಸಾರಿ ಹೋಗಿ
ಕೇಳೋಣ ನಡಿಯಪ್ಪ ಮುಡುಕುತೊರೆ ಮಲ್ಲಣ್ಣ
ರಂಗಸ್ವಾಮಿಯೇನೊ ಒಪ್ಗಂಡ
ರಂಗಸಾಮಿ ಮಾತಾಡ್ಸಂಗಿಲ್ಲ ನಡಿ ಅಂತೇಳಿ
ಮಲ್ಲಣ್ಣ ಮಾದೇವ ಇಬ್ರುವೇ
ಮುತ್ತಿನ ಜೋಳಿಗೆ ದರ್ಸಿಗಂಡು

ಅವರು ಸರಗೂರು ಮಠಕೆ ಬರುತವರೆ ಮಹಾದೇವಾ  || ನೋಡಿ ನಮ್ಮ ಶಿವನಾ ||

ಸರಗೂರು ಮಠಕ್ಕೆ ಬಂದು
ಯಾರು? ಮಹಾದೇವಾ
ಮುಡುಕುತೊರೆ ಮಲ್ಲಣ್ಣ
ಸತ್ಯವಂತ ರಾಮವ್ವನ
ಹಟ್ಟಿ ಒಳಗೆ ಹೋಗಿ ನಿಂತ್ಕಂಡು
ಕ್ವಾರಣ್ಯ ಸಾರಿದ್ರೂ
ಸತ್ವಂತ್ ರಾಮವ್ವ ಬಂದ್ಲು ಈಚೆಗೆ
ಮುಡುಕುತೊರೆ ಮಲ್ಲಣ್ಣ
ಈ ಮಾಯ್ಕಾರ ಗಂಡನ ಕರಕಂಡು ಬಂದವನೆ
ಇವನ್ಯಾವ ಯಂತ್ರಗಾರನೋ ಮಂತ್ರಗಾರನೋ
ಮೋಡಿ ಹಾಕನೋ ಗೊತ್ತಿಲ್ಲ
ನನ್ನ ಜ್ವಾಳದ ಗುಳಿ ರಾಗಿ ಗುಳಿಯಲ್ಲ ಬೂದಿಯಾಯ್ತು
ಚೌಳು ಮಾಳ್ದಲ್ಲೋತಿ
ಚೌಳು ಉಪ್ಪು ಕೆರ್ದು ಗುಡ್ಡೆ ಮಾಡ್ಸಿದ್ದೆ
ಅದು ಕೂಡಾ ಮಳೆ ಬಂದು ಹೊತ್ಕೊಂಡು ಹೊಯ್ತು
ಯಂತಹ ಜಂಗುಮ್ನ ಕರ್ಕಬಂದ್ಯಪ್ಪ

ನೀವು ಹಟ್ಟಿ ಬುಟ್ಟು ಹೋಗಿ ಅಂತವಳೇ ರಾಮವ್ವ || ನೋಡಿ ನಮ್ಮ ಶಿವನಾ ||

ರಾಮವ್ವನ ಮಾತ ಕೇಳಿದ್ದೆ
ಮಾದಪ್ಪನಿಗೆ ಸಂತೋಸವಾಯ್ತು
ಅವಳು ಕ್ವಾಪದ ಮಾತಾಡ್ದ್ರು ಇವರ್ಗೆ ಸಂತೋಸ
ಯಾತಕೆ ? ತನ್ನ ತಾಯಿ
ಯಾರು ? ಮಾದಪ್ಪನ ತಾಯಿ
ಯಾವ ರೀತಿ ಎಂದರೆ
ಉತ್ತರಾಜಮ್ಮನವ್ರು
ಆದೇಸ ನೀಡಿದ್ರು ಇಲ್ಲಿ ಶಾಪ ಕೊಟ್ಟಿದ್ರು
ತಾಯಿ
ನೀನು ನರಲೋಕದಲ್ಲಿ
ಸೂರ್ಣವತಿಯಾಗಿ ನದಿಯಾಗಿ ಹರೀಲಿ ಅಂತೇಳಿ
ಎದೆ ಪಾಲು ಕರೆದುಬುಟ್ಟು
ತವಸರ ಕಂಬದ ಜೋಳಿಲಿ ಲಿಂಗೈಕವಾಗಿ
ಕಲಿಯುಗದಲ್ಲಿ
ನೀವು ಮೇಲ್ಸಕ್ರೆ ಸೆಟ್ರ ಜಾತಿ ಒಳ್ಗುಟ್ಟು
ರಾಮವ್ವೆಯಾಗಿ ನಿನ್ಹುಟ್ಟು
ಮೂಗಯ್ಯನಾಗಿ ಸರಗೂರಯ್ಯ ಹುಟ್ಟಲಿ
ನೀವಿಬ್ಬರೂ ಬಂದು
ಏಳುಮಲೆಯೊಳಗೆ ಕಲಿಯುಗದಲಿ ನನಗೆ
ಎಣ್ಣೆ ಮಜ್ಜನ ಮಾಡ್ರಿ ಅಂತೇಳಿ ಶಾಪ ಕೊಟ್ಟಿದ್ರು
ಅದಕಾಗಿ ಮಾದಪ್ಪನಿಗೆ ಕ್ವಾಪವಿಲ್ಲ
ತಾಯಿ ಶಿವ ಶರಣೆ
ರಾಮವ್ನ ಆಡ್ದ ಮಾತಿಗೆ ಮಾದಪ್ಪ
ನೋಡಪ್ಪ ಮುಡುಕುತೊರೆ ಮಲ್ಲಣ್ಣ
ಈ ತಾಯಿ ಮಾತಿಗೆ ನನಗೆ ಕ್ವಾಪ ಬರೂದಿಲ್ಲ
ನೋಡವ್ವ ಸತ್ಯವಂತ ರಾಮವ್ವ
ನಿನ್ನ ಕೈಯಿಂದ ಒಂದು ಬಿಡುಗಾಸು ತರ್ಬೇಡ
ಒಂದು ಕಾವೆಲೆ ತರಬೇಡ
ಯಳಂದೂರ ಅಡಕೆ ತ್ವಾಟದಲ್ಲಿ
ಮೊದಲಾಗಿ ಹೊಂಬಾಳೆ ಬಂದಂತಹ
ಆ ಯಳಂದೂರು ತ್ವಾಟಗಾರ‍ಬರ್ತಾನೆ
ಮಾದೇಸ್ವರನ ಬೆಟ್ಟಕ್ಕೆ ಕಳಿಸ್ತೀನಿ ಅಂತೇಳಿ
ತೆಂಗಿನ ತ್ವಾಟದೊಳಗೆ
ಮೊದಲುಬುಟ್ಟಂತಹ ತೆಂಗಿನ ತಾರಿನಲಿ
ಎಳ್ನೀರ್ ಕಳಿಸ್ತೀನಿ ಅಂತೇಲಿ ಮೊದಲು ಹುಲುಪೆ ಕಟ್ತಾನೆ
ನನ್ನ ಮೈಸೂರ್ ಮೇಲ್ ನಾಡಿನಲ್ಲಿ
ಈ ಮೈಸೂರ ಮುಂಭಾಗದಲ್ಲಿ
ಯಾರು ಮುಂಗಾರು ಪಸಲು ಮಾಡ್ತಾರೆ
ಎಳ್ಳು ಚೆನ್ನಾಗಿ ಬೆಳೆದುಬುಟ್ರೆ ಮೂಕುಮಾರಿಲ್ಲದನೆ
ಎಳ್ಳಾಗಿಬುಟ್ರೆ ಸರಗೂರು ಮಠಕ್ಕೆ ಕಳುಸ್ತಿನಿ ಕಣಪ್ಪ ನಾನು
ಏಲುಮಲೆಗ್ಲೆ ಬರುದಿದ್ರುವೆ ಅಂತೇಳಿ
ಮುಂದಾಗಿ ಒಕ್ಕಣೆ ಮಾಡ್ದಾಗಾ
ಐದು ಪಾವು ಎಳ್ಳು ಎತ್ತಿಕಟ್ಟಿ ಮಡ್ಗಿ
ಮಿಸುಲು ತಂದು ಸರಗೂರು ಮಠಕ್ಕೆ ಎಳ್ಳು ಕೊಡ್ತಾರೆ
ಎಳ್ಳು ಹೊಂಬಾಳೆ ಎಳನೀರು ಬರ್ತಾವೆ
ಬನ್ನೂರು ಬಯಲಿನಲ್ಲಿ
ಆದರೆ ಕಬ್ಬನ್ನೆ ಆಡ್ಸಿ ಆಲೆಮನೆಯೊಳಗೆ
ಅಚ್ಚು ಕುಯ್ತಾರೆ ಯಾರು ಒಕ್ಕಲಿಗ್ ಗೌಡ್ ಗಳು
ಒಕ್ಕಲಿಗ ಮಕ್ಳು
ಮಾದಪ್ಪ
ಏಲುಮಲೆ ಕತೃ
ನನ ಕಬ್ಬಿನ ತ್ವಾಟವೆಲ್ಲ ಮುಗಿಯೊವರ್ಗೆ ಬೆಲ್ಲ ಅಡಿಗೆ ಎಲ್ಲ
ಚೆನ್ನಾಗಿ ಬಿದ್ದುಬುಡ್ತ್ರೆ
ಒಂದೊರೆ ಬೆಲ್ಲ ಕಳುಸ್ತೀನಿ ನಾನು
ಸರಗೂರು ಮಠಕೆ ಅಂತೇಳಿ ಅವರು ಹುಲುಪೆ ಕಟ್ತಾನೆ
ಕಂದಾ
ನಿನ್ನ ಕೈನಿಂದ ಒಂದು ಕಾಸು ತರಬೇಡ

ನಿನ್ನ ಗಂಡ ಮೂಗಯ್ಯ ಕಳುಹು ಅಂತವರೆ ಮಾದೇವಾ || ನೋಡಿ ನಮ್ಮ ಶಿವನಾ ||

ನೋಡಪ್ಪ ಮಯಕಾರ ಗಂಡ ಮಾದಪ್ಪ
ನನ್ನ ಗಂಡನಾದ ಮಾಗಯ್ಯನ ಕಳುಹು ಅಂತ ಕೇಳ್ತಾಯಿದ್ದೀರಿ
ನನ್ನ ಗಂಡ ದಡ್ಡ
ಒಬ್ಬನ್ನೆ ಯಾವ ರೀತಿ ಕಳಹಬೇಕು
ಏಳು ಬೆಟ್ಟ ಅತ್ತಬೇಕು
ಏಳು ಬೆಟ್ಟ ಇಳಗಬೇಕು
ಆ ಏಳು ಬೆಟ್ಟದ ಮಧ್ಯದಲ್ಲಿ
ದಾರಿಯೊಳಗೆ ಕಳ್ಳರ ಕಾಟ
ಹುಲಿ ಭಯ ಆನೆ ಭಯ ಚಿರತೆ ಭಯ

ನನ್ನ ಗಂಡ ಮೂಗಯ್ಯನ ಕಳುಹದಿಲ್ಲ ಅಂತವಳೇ ರಾಮವ್ವ || ನೋಡಿ ನಮ್ಮ ಶಿವನಾ ||

ನೋಡಪ್ಪ ಖಂಡಿತವಾಗಿ ನಾವು
ಏಳು ಮಲೆಗೆ ಬರುವಂತ ಭಕ್ತರಲ್ಲ ಅಂದಳು
ಮಲ್ಲಣ್ಣ
ಈ ಮಾತ್ಗವಳು ಬಗ್ಗೊದಿಲ್ಲ
ಇನ್ನು ಕಷ್ಟ ಕೊಡ್ತಿನಿ ಅಂತೇಳಿ
ಮಲ್ಲಣ್ಣನ ಕರಕಂಡು ಮಾದಪ್ಪ

ಅವರು ಮುಡ್ಕುತೊರೆಗೆ ದಯಮಾಡವರೇ ಮಾದೇವ || ನೋಡಿ ನಮ್ಮ ಶಿವನಾ ||

ಮುಡ್ಕುತೊರೆ ಕೈಲಾಸದಲ್ಲಿ ಹೋಗಿ ಕೂತ್ಕಂಡು
ಈ ಕಡೆ ಸತ್ವಂತೆ ರಾಮವ್ವ
ದಡ್ಡನಾದ ಮೂಗಪ್ಪನ್ನ ಕರ್ದು
ಬನ್ನಿ ಯಜಮಾನರೇ
ಏನು ಇಲ್ಲ ಮನೇಲಿ ಎಂದು ತಿಳಿಬೇಡಿ
ಮನೆ ಹಿಂದ್ಲ ತ್ವಾಟ ಕೀರೆಪಾತಿ ಅದೇ
ಚೆನ್ನಾಗಿ ಗೊಬ್ರ ಹಾಕಿ ನೀರಾಕಿ
ಕೀರೆ ಸೊಪ್ಪು ಕೂಯ್ಕಿಳೀ ಒಂದು ಬುಟ್ಟಿಯಾ
ಮುಡ್ಕುತೊರೆ ಸಂತೆಲೀ ಹೋಗಿ ಮಾರ್ಬುಟ್ಟು ಬರೋಣ
ಅಲ್ಲಾದ್ರೆ ಆರ್ಕಾಸು ಮೂರ್ಕಾಸು ಸಿಕ್ತದೆ
ತಕ್ಕಂಡು ಬಂದು
ನಾವೇನಾದ್ರೂ ಒಂದು ಪಾವು ಅಕ್ಕಿನಾಗ್ಲಿ
ಒಂದು ಸೇರು ರಾಗಿನಾಗ್ಲಿ ತಗ್ದು
ಬಿಸಿ ಅಂಬಲಿ ಕುಡಿಯೋಣ ಅನ್ನಿ ಅಂತೇಳಿ
ಮನೆ ಹಿಂದ್ಗಡೇ ಕೀರೇ ತ್ವಾಟ್ದಲ್ಲೀ
ನೀರಾಕಂಡು ಸೊಪ್ಪು ಬೆಳ್ಕಂಡು ಯಾರು? ರಾಮವ್ವ
ಕೀರೇ ಸೊಪ್ಪು ಕೂದು
ಗಂಡ ಒಂದು ಮಂಕ್ರೀ
ಹೆಂಡ್ತಿ ಒಂದು ಮಂಕ್ರೀ ತುಂಬ್ಕಂಡು
ಸೋಮಾರ ಸೋಮಾರ ಮುಡ್ಕುತೊರೆ ಸಂತೆ

ಅವರು ಮುಡ್ಕತೊರೆ ಸಂತ್ಗೆ ಹೊಯ್ತವರೇ ಮೂಗಯ್ಯ || ನೋಡಿ ನಮ್ಮ ಶಿವನಾ ||

ಆವಾಗ ಮುಡ್ಕುತೊರೆ ಸಂತ್ಗೆ ಸೊಪ್ನ
ಬುಟ್ಟಿ ಒತ್ಗ ಹೊಯ್ತಾವರೇ
ಯಾರು? ರಾಮವ್ವ ಮೂಗಪ್ಪ
ಸರಗೂರು ಮಠ ಬಿಟ್ಟುದ್ದೇ ನೋಡುದ್ರು ಮಾದಪ್ಪ
ಮುಡ್ಕುತೊರೆ ಕೈಲಾಸಕು ಸರಗೂರ್ಗು
ಕಾಣ್ತದೆ ದಾರಿ ಒಂದೇ ರೋಡು
ಮಹದೇವ
ಮುಡ್ಕುತೊರೆ ಮಲ್ಲಣ್ಣ
ಮೂಗಯ್ಯನು ರಾಮವ್ವನೋ
ಸಂತ್ಗೆ ಮಾಳುಕೆ ಸೊಪ್ಪು ಒತ್ಗಂಡ್ ಬರ್ತಾವರೇ
ಇವರ್ಗೆ ಒಂದು ಉಪಾಯಮಾಡ್ತಿನೀ ಬಾ ಅಂತೇಳಿ
ಯಾರು? ಮಾಯ್ಕಕ್ಕಾರ ಗಂಡ ಮಾದಪ್ಪ
ನೀನು ಪೋಲಿಸ್ ನವನಾಗು
ನಾನು ದೆಪೇದಾರನಾಗ್ತಿನೀ
ಬಾಗ್ಲಲ್ಲಿ ಸಂತೇ ಕಡೇ ಬಾಗ್ಲಲ್ಲಿ
ನಾವಿಬ್ಬರೂ ಕೂತ್ಕಳ್ಳೋಣ
ಅವರು ಬರೀ ಸೊಪ್ಪೋತ್ಕಂಡು ಬತ್ತಾರೆ
ಏನಾದ್ರೂ ಸುಂಕದ ಕಾಸು
ಕೊಡ್ದೆ ಹೋದ್ರೆ ಓಡಿಸ್ ಬಿಡೋಣ
ಬಾ ಅಂತೇಳಿ
ಮುಡ್ಕುತೊರೆ ಮಲ್ಲಣ್ಣನೂವೆ
ಮಾದಪ್ಪನೂ ಪೋಲಿಸ್ ನೋರಾ
ವ್ಯಾಸ ತಾಳ್ಕೊಂಡು

ಅವ್ರು ಕಡೆ ಬಾಗ್ಲಲ್ಲಿ ಕುಂತವರೇ ಮಲ್ಲಣ್ಣ || ನೋಡಿ ನಮ್ಮ ಶಿವನಾ ||

ಕಾಕೀ ಬಟ್ಟೇ ದಿರಸಾಕ್ಕೊಂಡು
ಪೇಟಾ ಕಟ್ಕಂಡು ದೊಣ್ಣೆ ಹಿಡ್ಕಂಡು
ಕಡೆ ಬಾಗ್ಲಲ್ಲಿ ಸುಂಕದ ಗೇಟ್ನಲ್ಲಿ ಕೂತವರೆ
ಮುಡ್ಕುತೊರೆ ಮಲ್ಲಣ್ಣ ವಂದ್ಕಡೆ ಮಾದಪ್ಪ ವಂದ್ಕಡೆ
ರಾಮವ್ವ ಮೂಗಪ್ಪ ಒಂದೊಂದು ಮೂಟೆ
ಒಂದೊಂದು ಮಕ್ರಿ ಒಳಗೆ ಕೀರೇ ಸೊಪ್ಪು ಒತ್ಕಂಡು ಬತ್ತಾ ಅವರೇ
ಕಡೆ ಬಾಗ್ಲಲ್ಲಿ ಬಂದ ತಕ್ಷಣವೇ
ಓ ಗೌಡ
ಓ ನಿಲ್ಲಿಸ್ಬುಟ್ರು ಅಲ್ಲಿ
ಮಾದಪ್ಪ ಮಲ್ಲಣ್ಣ ಇಬ್ಬರು ಎದ್ರು
ಯಾರಯ್ಯ ನೀವು
ಸಂತೇ ಯಾಪಾರ್ಕ ಹೋಗ್ತೀವಿ ಸ್ವಾಮಿ
ಮೊದ್ಲು ನಿಮ್ಮ ಮಂಕ್ರಿಗಾಗ್ತಕಂತ ಸುಂಕವ
ಕೊಟ್ಟು ಬಿಟ್ಟು ಒಳಗಡೆ ಹೋಗು
ಸುಂಕವಿಲ್ಲದೆ ಸಂತೆಗ್ ಬಿಡುದಿಲ್ಲ ಅಂದ್ರು
ಸ್ವಾಮಿ
ಸೊಪ್ಪ ಮಾರ್ಕಂಡು ಬತ್ತಿವಿ
ಮಾರ್ದಮ್ಯಾಲೆ ನಿಮ್ಮ ಸುಂಕ ಕೊಡ್ತಿವಿ ಅಂದ್ರು
ಇಲ್ಲ ಕಾಣಯ್ಯ ಮೊದಲು ಸುಂಕ ಕೊಟ್ಟು ಗೇಟ್ನಲ್ಲಿ ಚೀಟಿ ತಕ್ಕೊ
ಹೋಗು ಅಂದ್ರು
ಇಲ್ಲವಾದ್ರೆ ಒಳಕೆ ಬಿಡೋದಿಲ್ಲ ಅಂತ ಹಿಂದಕ್ಕೆ ತಳ್ಳುಬಿಟ್ಟ್ರು
ಏನು ಕೊತ್ತೆಗಾಲ್ದ ಹೆಣ್ಣೆ
ಈ ಗತಿಯಾಯ್ತಲ್ಲ ನಮ್ಗೆ
ಸಂತೆಲು ಕೂಡ ಮಾರುವಂಗಿಲ್ಲ
ನಡಿ ಹಿಂದಕೆ
ಬಿಳಿ ಜಗ್ಲಿ ಮೋಳೆ ಬೆಟ್ಟಳ್ಳಿ
ಆ ಕಡೆ ಹೋಗಿ ನಾವು ಸೊಪ್ಪು ಮಾರ್ಕಂದ್ದು
ಕೇರಿ ಮನೆ ಒಳ್ಗೆ
ಅರಪವೋ ಒಂದೋಳೊ ಕೊಟ್ಟಷ್ಟ
ಕೇರೀ ಒಳ್ಗ ಮಾರ್ಕ ಬರುವ ಅಂತೇಳಿ
ಸೊಪ್ನ ಮಂಕ್ರಿ ಒತ್ತಕ್ಕಂಡು

ಬಿಳಿ ಜಗ್ಲಿಗಾಣೇ ಹೊರಟವರೇ ರಾಮವ್ವ || ನೋಡಿ ನಮ್ಮ ಶಿವನಾ ||

ಬಿಳಿ ಜಗಲಿ ಮೋಳ್ಗೆ ಹೋಗ್ತಾಯಿದ್ರು
ಮಾದಪ್ಪ ಮಯ್ಕಾಕ್ಕಾರ ಗಂಡ
ಮಲ್ಲಣ್ಣ
ಈ ಡ್ರಸ್ ನೆಲ್ಲ ಬಿಚ್ಚಿ ಬಿಸಾಡು
ನಮ್ಮ ಪ್ರಥಮವಾದ ಪರಂಪರೇ ಡ್ರಸ್
ಕಾವಿ ಬಟ್ಟೆ ಹಾಕು
ನಾವು ಬಿಳಿಜಗಲೀ ಮೋಳೆ
ಊರ ಒಳಗೆ ಹೋಗೋಣ
ಸಾರ್ಕಂಡು ಹೋಗೋಣ
ರಾಮವ್ವ ಮೂಗಪ್ಪ ಸೋಪ್ಪ್ಗ ಬತ್ತಾವರೇ
ಹುಚ್ಚು ಬೆಪ್ಪು ಬಂದ್ಬುಟದೇ
ಹುಚ್ಚು ಕೀರೆ ಸೊಪ್ಪು ಹೆಡ್ಡನ್ ದಗ್ಳೆ ವತ್ಕ ಬತ್ತಾವರೆ
ಏನಾದ್ರು ಊರ್ನಲ್ಲಿ ತಕ್ಕಂಡು ಊಟಮಾಡದ್ರೇ
ನಿಮ್ಮ ಮಕ್ಕಳ್ಗೆ ಹಿಂಬೇದಿ ಮುಂಬೇದಿ ಬತ್ತದೆ ಅಂತೇಳಿ ಸಾರು ಬಿಡೋಣ
ಅವರ ಸೊಪ್ಪ ಒಬ್ಬರು ಮುಟ್ಟೋದಿಲ್ಲ ಅಂತೇಳಿ
ಮಾದೇವ
ರಾಮವ್ವ ಮೂಗಪ್ಪ
ಬಿಳಿ ಜಗಲೀ ಮೋಳೆ ಊರ ಬಾಗಲ್ಗೆ
ಹೋಗುಕೆ ಮುಂಚಿತವಾಗಿ ಹೋಗಿ
ಮುಂದ್ಗಡೆ ಮಾದೇವ್ನವೇ ಮಲ್ಲಣ್ಣನುವೆ

ಅವರು ಬೀದಿಗುಂಟ ಸಾರ್ಕಂಡು ಹೋಗಾವರೇ ಮಯ್ಕಾರಾ || ನೋಡಿ ನಮ್ಮ ಶಿವನಾ ||

ಬೀದ್ಗುಂಟ ಸಾರ್ಕೋ ಹೊಂಟಿದ್ರಲ್ಲ ಜಂಗ್ಮುರೂ
ಓಹೋ ಕಾಲ ಜ್ಞಾನದವರು ಕಾಣಪ್ಪ ಅವರು ಅಂತೇಳಿ
ಪಟೇಲರೂ ಶ್ಯಾನಬೋಗರು ಓಡಿಬಂದ್ರು
ಯಾವ ಊರೊರಪ್ಪ ಜಂಗುಮರೇ ಅಂದ್ರು
ನಾವು ಕಲಿಯುಗ ಕಾಲಜ್ಞಾನ ಸಾರತಿವಿ
ಊರುರು ಮ್ಯಲೆ ಕಾಯಿಲೆ ಸಾರ್ತಿವೀ ಅಂದ್ರು
ಏನು ಸಾರ್ತಿರಪ್ಪ ಅಂದ್ರು
ಯಾರೋ ಇಬ್ಬರು ಸೊಪ್ಪಿನ ಹೆಡ್ಗೆ ಒತ್ಕ ಬತ್ತಾವರೇ
ಅವರು ಯಾವ ಸೊಪ್ಪು ನೋಡ್ದೋ
ಕಾಲ ಜ್ಞಾನದಲ್ಲಿ ಹುಚ್ಚ ಅರವೆ ಸೊಪ್ಪು ಹೆಡ್ಡನ ದಗ್ಗೆ ಸೊಪ್ಪು
ವತ್ಕಂಡು ಬತ್ತಾವರೇ
ಅವರು ಬತ್ತಾಯಿದ್ದಾಗಲೇ ನೋಡುಬಿಟ್ಟೋ ನಾವು
ಅವರ ಸೊಪ್ಪೇನಾದ್ರೂ ಊರೊಳಗೆ ತಕ್ಕಂದು
ಊಟ ಮಾಡ್ದರ್ರೇ
ನಿಮ್ಮ ಮಕ್ಕಳ್ಗೆಲ್ಲ ಹುಚ್ಚು ಬೆಪ್ಪು ಹಿಂಬೇದಿ ಮುಂಬೇದಿ ಬತ್ತದೆ
ಅದಕ್ಕೆ ಬಂದು ಸಾರಕ್ಕು ಬಂದೋ ಕಾಲಜ್ಞಾನದ ಅಂದ್ರು
ಆವಾಗ
ಪಟೇಲ ಶ್ಯಾನುಬೋಗರು ತಳವಾರ್ನ ಕರೆದ್ರು
ಲೋ ತಳವಾರ
ಯಾತೋ ಸೊಪ್ಪುನೊರು ಬಂದರಂತೆ
ಊರ ರಾಡ ಬಾಗಲ್ಗ ಹೋಗು
ಊರೊಳಕೆ ಬಿಡಬೇಡ ಅಂತೇಳಿ

ಅಲ್ಲೀ ತಳವಾರ್ನ ಕಾವಲಾಕವರೇ ಮಹಾರಾಜ || ನೋಡಿ ನಮ್ಮ ಶಿವನಾ ||

ತಳವಾರ್ನ ಕಾವಲ್ಕಾದುರು
ಯಾರು ? ಗ್ರಾಮದವರು
ಆವಾಗ ಬಿಳಿಜಗಲೀ ಊರು ಬಾಗಲ್ಗೆ ಹೋದ್ರು
ರಾಮವ್ವ ಮೂಗಪ್ಪ
ಅಳ್ಳಾಡ್ತ ತೋರಾಡ್ತ ಕೀರೆ ಸೊಪ್ಪು ಒತ್ಕಂಡು ಹೋದ್ರು
ತಡದ್ ಬುಟ್ರು ಕಾವಲುಗಾರ್ರು
ತಳವಾರ
ಅಯ್ಯೋ ಯಾವೊರ್ನೋರಪ್ಪ ಸೊಪ್ನೋರು ಅಂದ್ರು
ಅಯ್ಯ ಸರಗೂರೂರವು ಬಿಡಯ್ಯ
ಅಯ್ಯ ಸರಗೂರು
ಬಿಡಪ್ಪ ಸೊಪ್ಪಮಾರ್ಕಂಡ್ ಹೋಯ್ತಿವಿ
ನಾವೆನುವೇ ಒತ್ಕಂದ್ ದ್ದು ಬಂದಿಲ್ಲ
ಪಡ್ಸಾಲೇ ಮ್ಯಾಲೆ ಕೂತ್ಕಂಡು ಕೂಗ್ತುವಿ
ಯಾರಾರು ಹೆಂಗಸ್ರುಗಳು ರಾಗಿ ತಂದರೇ
ಮೊರ್ಕೆ ಸೊಪ್ಪು ಇಕ್ಕಿ ಕಳ್ಸುಬಿಡ್ತಿವಿ
ಅ ರಾಗಿ ತಕ್ಕೊಂಡು ಹೋಗ್ತಿವಿ ಬಿಡಪ್ಪ ಅಂದ್ರು
ಆ ಗ್ರಾಮಕ್ಕೆ ತಳವಾರ್ರು ದಾರಿ ಬಿಡ್ನಿಲ್ಲ
ಅಯ್ಯೋ ನಮ್ಮ ಪಟೇಲ್ ಶ್ಯಾನುಭೋಗ್ರು
ಆಡರ್ರು ಕೊಟ್ಟವರೇ
ಊರೋಳ್ಗೆ ಯಾರ್ನು ಬಿಡಲ್ಲ ಹೋಗಪ್ಪ ಅಂತ ಹಿಂದಕ್ಕೆ ತಳ್ ಬುಟ್ರು
ಕೊತ್ತೆಗಾಲ್ದ ಹೆಣ್ಣೆ
ನಮ್ಮ ಗ್ರಾಚಾರ ನೋಡು
ಆ ಮಾದೇವ್ನು ಮಲ್ಲಣ್ಣನ್ನುವೇ ರಂಗಸ್ವಾಮಿ ಬಂದ್ರು
ಅವರ್ನೇನಾದ್ರೂ ಒಂದು ವರ ಕೇಳ್ಕದೆ ಹೋದೆ
ನನ್ನ ಗಂಡ ದಡ್ಡ ದಡ್ಡ ಅಂತೇಳು ಬಿಟ್ಟೇ
ನಾನು ಹೋಗ್ದೆಯಿದ್ರು ನೀನಾದ್ರು ಒಂದ ವರ ಕೇಳಿ
ಆ ದೇವರ್ಗೆ ಏನಾದರೂ ಒಂದು ಹರಕೆ ಮಾಡ್ಕಂಡಿದ್ರೆ
ನನ್ನ ಭಾಗ್ಯ ಉಳಿತಾಯಿತ್ತು
ಇವತ್ತು ನಮ್ಮ ಗೊಳ್ ನೋಡು
ಹೊಟ್ಗೆ ಊಟಯಿಲ್ಲ ಈ ಸೊಪ್ಪನಾದ್ರು ಒತ್ಗ ನಡಿಯೇ
ಕೊತ್ತೆಗಾಲ್ದ ಹೆಣ್ಣೆ ಅಂತೇಳಿ
ಗಂಡ ಹೆಂಡ್ರು ಮಾತಾಡ್ಕಂಡು
ಆ ಎರಡು ಮಕ್ರೀ ಸೊಪುನ್ನು ಒತ್ಕಂಡೂ
ರಾಮವ್ವ ಮೂಗಪ್ಪ

ತಮ್ಮ ಗುರು ಮಠಗೆ ಬರುತ್ತವರೇ ರಾಮವ್ವಾ || ನೋಡಿ ನಮ್ಮ ಶಿವನಾ ||

ಅಯ್ಯೋ ಕೊತ್ತೆಗಾಲ್ದ ಹೆಣ್ಣೆ
ಈ ಸೊಪ್ಪನಾದ್ರು ಬೇಯ್ಸಿಕ್ಕಂಡು
ತಿಂದು ನಾವು ನೀರ್ನಾರೂ ಕುಡಿಯೋಣ
ನಡಿ ಅಂತೇಳಿ
ರಾಮವ್ವ ಮೂಗಪ್ಪ ಮಾತಾಡ್ಕಂಡು
ಬಿಳಿ ಜಗಲೀ ಮೋಳೆಯಿಂದ

ಅವರು ಸರಗೂರ ಮಠಕೆ ಬರತ್ತವರೇ ರಾಮವ್ವ || ನೋಡಿ ನಮ್ಮ ಶಿವನಾ ||

ಸರಗೂರು ಮಠಕ್ಕೆ ಬಂದ್ರು
ಅಯ್ಯೋ ಉಸ್ಸೋ ಅಂತೇಳಿ ಗಂಡ ಹೆಂಡ್ರು
ಸೊಪ್ನ ಮಕ್ರೀ ಮಡ್ಗಬಿಟ್ಟು ಒಂದ್ಕಡೆ
ಕೊತ್ತೆಗಾಲ್ದ ಹೆಣ್ಣೇ
ಜಾಗ್ರತೆಯಾಗಿ ಹೊಲೆ ಹಸ್ಸಿ ನೀರ್ ಮಡಗು
ನಾನು ಸೊಪ್ಪು ಸೋಸಿ
ಕತ್ರಿಸಿ ಕೊಡ್ತಿನಿ ಅಂತೇಳಿ ಮೂಗಪ್ಪ
ಸೊಪ್ಪನ್ನೆಲ್ಲ ಸೋಸಿ ವದ್ರಿ
ರಾಮವ್ವ ಒಲೆಮ್ಯಾಗೆ
ನೀರಮಡ್ಗಿ ಬೆಂಕಿಯನ್ನಚ್ಚಿ
ಆವಾಗ ಸೊಪ್ಪನ್ನ ನೀರ್ ಕಾಯಿಸಿ
ಸೊಪ್ಪು ಬೆರೆಸಿ ಉಪ್ಪಾಕ್ಕಂಡೂ
ತಾಯಿ ಮಂಕ್ರೀಗೆ ಬಸ್ತುಬಿಟ್ಟು
ಪರಮಾತ್ಮ
ಸೊಪ್ಪು ತಿಂದು ಅಂಬಲೀ
ಕುಡಿಬೇಕು ಅಂದ್ರೆ ಹಂಬಲೀ ಇಲ್ಲವಲ್ಲ
ಇರ್ಲೀ ನಮ್ಮ ಹಣೇ ಬರ ಇದ್ದಂಗೆ ಆಗ್ಲಿ ಅಂತೇಳಿ
ಆವಾಗ್ಲೆ ಗಂಡನಾದ ಮೂಗಯ್ಯನ ಕರೆದೊ
ಕೈಕಾಲು ಮುಖ ತೊಳಿ ಯಜಮಾನ ಅಂತೇಳಿ

ಅವಳು ನೀರಕೊಡ್ತವಳೇ ರಾಮವ್ವಾ || ನೋಡಿ ನಮ್ಮ ಶಿವನಾ ||

ದಡ್ಡ ಮೂಗಯ್ಯ
ಕೈಕಾಲು ನೀರ್ಕೊಟ್ಟ ತಕ್ಷಣ
ಮುಖ ಸವರುಬಿಟ್ಟ ಹಲ್ಲು ಉಜ್ಜುವಂಗಿಲ್ಲ
ಏನು ವಿಕಾರವಾಗಿ ವಾಸ್ನ ವಡಿತ್ತಾವ್ನೆ
ಮುಖತೊಳ್ಕಂಡ
ಹೋಗಿ ಮನೆಯೊಳಗೆ ಕೂತ್ಗಂಡ
ಸತುವಂತೆ ರಾಮವ್ವ
ಒಂದು ಕಂಚಿನ ಅರಿವಾಣಾಮಡ್ಗಿ
ಆವಾಗ ಬಲಗಡೆ ಒಂದು ಚಂಬು ನೀರ್ಮಡ್ಗುಬಿಟ್ಟು
ಸೊಪ್ಪು ತಗಬಂದು ಒಂದು
ಮುದ್ದೆ ಸೊಪ್ಪು ಮಡ್ಗದಳು
ಮೂಗಪ್ಪ
ಒಂದು ತುತ್ತ ಸೊಪ್ಪು ಎತ್ತಿ ಬಾಯ್ಗಕ್ಕಂಡು
ಒಂದು ಚೂರು ಮೆಣಸಿನಕಾಯಿ ಕಡಿತಾವ್ನೆ
ಪುನಃ ಆಗದ್ಬುಟ್ಟು
ಒಂದು ಲೋಟ ನೀರ್ ಕುಡ್ದುಬಿಟ್ಟು
ಅರ್ಧಗಳಾಸ್ ನೀರು ಕುಡ್ದು ಬಿಟ್ಟು ತಿರ್ಗ ಕೈಯಾಕಿದ್ದಾನೆ

ಅದ ಉಳವ ಮಾಡವರೇ ಮಾಯ್ಕಾರ || ನೋಡಿ ನಮ್ಮ ಶಿವನಾ ||