ಕೈಯಾಕದ್ದು ಉಳರ್ಧ ಸೊಪ್ಪರ್ಧ
ಆಗುಬಿಡ್ತು
ಛೇ ಕೊತ್ತೆಗಾಲ ಹೆಣ್ಣೆ
ರಾಮವ್ವನ ಕೂಗುದ್ರು
ಏನು ನಿನ್ನ ಅಹಂಕಾರ ಉಳ ಬೇಯ್ಸಿದ್ದಿಯಲ್ಲ ಅಂದ್ರು
ರಾಮವ್ವ ಓಡ್ ಬಂದು ನೋಡ್ದ
ಯಜಮಾನರೇ ಚೆನ್ನಾಗಿ ಬೇಯ್ಸಿದ್ದಿ ಉಳ ಇಲ್ಲ ಏನಿಲ್ಲ
ಇದು ಯಾರ ಮಾಯೇ ಗೊತ್ತಿಲ್ಲ ಅಂತೇಳಿ
ಬಟ್ಟೆತ್ಕಂಡು ಕೈತೋಳ್ದ್ ಬಿಟ್ಟು
ತಕ್ಕಂಡು ಹೋಗಿ ಮನೆಯಿಂದ್ಲ ಹಿತ್ಲಗ್ ಸುರ್ದ್ ಬಿಟ್ಳು
ಗಂಡ ಹೆಂಡಿರಿಬ್ಬರು ಅಸ್ಸೂ ಉಸ್ಸೋ ಅಂತೇಳಿ

ಅವರು ಸರಗೂರು ಮಠದಲ್ಲಿ ಮಲಗವರೇ ರಾಮವ್ವ || ನೋಡಿ ನಮ್ಮ ಶಿವನಾ ||

ಆವಾಗಲೀಗ ಮಲ್ಲಣ್ಣನು ಮಾದಪ್ಪನೂ ಕೂತ್ಕಂಡು
ಮಾದೇವ ಹೇಳ್ತರೇ
ಮಲ್ಲಣ್ಣ ಈವಾಗ ನೋಡು ಸರಗೂರು ಗೌರವ್ವನ ಮಗ ಮೂಗಯ್ಯ
ಒಳ್ಳೇ ಮನ್ಸ
ಸತ್ವಂತೆ ರಾಮವ್ವ ಕೊತ್ತೆಗಾಲ್ದವಳೂ
ಮುತ್ತು ಮುಡಿಯೋಳು
ನಾನು ನಡುಮಲೆಗೆ ಬರೋದಿಲ್ಲ
ಏಳುಮಲೆ ಸುತ್ತಿ ಏಳಬೇಡ ಅಂತೇಳ್ದಳು
ಅನ್ನಕ್ಕೆ ಅರಬಟ್ಟೆ ಮಾಡಿದ್ದಿನೀ
ಚಿನ್ನಕ್ಕೆ ಮೂರುಬಟ್ಟೆ ಮಾಡಿದ್ದಿನೀ
ಗಂಡ ಹೆಂಡಿರಿಬ್ಬರೂವೆ
ಒಂದೊಂದ್ ಬಟ್ಟೇಲವ್ರೇ
ಕುಡಿವದಕ್ಕೆ ಹಂಬಲಿಲ್ಲ ಉಣ್ಣುವದಕ್ಕೆ ಅನ್ನವಿಲ್ಲ
ಅಂತ ಕೊಲೆ ಕೊಟ್ಟಿದ್ದಿನಿ
ಇವತ್ತು ಅದೇ ಪಟ್ಟದ ರಂಗಸ್ವಾಮಿ ಕರ್ಕೊ
ಅವರ ಮನೆ ದೇವರ ಇವತ್ತಾರು ಹೋಗಿ ಕೇಳು ಬಿಡೋಣ
ಕಡೇ ಪಕ್ಷ
ಇಲ್ದೋವೋದ್ರೇ ಬೇವನ ಕಾಳಮ್ಮನ ಮಾಡ್ಕಂಗೆ
ಸುಟ್ಟು ಬಸ್ಮ ಮಾಡುಬುಡ್ತೀನಿ ರಾಮವ್ವೆಯ ಅಂತೇಳಿ
ಮಾದಪ್ಪ
ರಂಗದ ಸ್ವಾಮಿಯ ಕರ್ಕಂಡು
ಮಲ್ಲಣ್ಣನ್ನು ಕರ್ಕಂಡು

ಅವರು ಸರಗೂರಯ್ಯನ ಮಠಕ್ಕೆ ಬರ್ತವರೇ ಸರಣಾರೂ || ನೋಡಿ ನಮ್ಮ ಶಿವನಾ ||

ಸರಗೂರಯ್ಯನ ಮಠಕ್ಕೆ ಬಂದ್ರು
ಮೂರ ಜನ ಮುನಿಗಳುವೇ
ಸರಗೂರು ಮಠದ ಬಾಗ್ಲಲ್ಲಿ ನಿಂತ್ಕಂಡು
ಹೇಳ್ತಾವರೇ

ಶೆಟ್ಟಿ ಸರಗೂರಯ್ಯನ
ಹೆಟ್ಟೆಲ್ಲ ಬಲು ಚೆಂದಾ
ಇದು ಹೆಚ್ಚು ಮೂಗಯ್ಯನ
ಗುರು ಮಠ || ನೋಡಿ ನಮ್ಮ ಶಿವನಾ ||

ನಮ್ಮ ಏಳು ಮಲೆ ಕೈಲಾಸಕ್ಕೆ
ದೊಡ್ಡದಾಗಿದೆ ಈ ಗುರುಮಠ ಅಂತೇಳಿ ಮಾದಪ್ಪ
ಮೂರು ಜನ ಮುನಿಗಳು ಸರಗೂರಯ್ಯನ ಮಠಕ್ಕೆ
ಹೋದ್ರು ಒಳಗಡೆ
ಆಗ ತೊಳೆವಂತ ಪಚ್ಜೆ ಕಲ್ಲಮ್ಯಾಲೆ ನಿತ್ಕಂಡು
ಮಾದಪ್ಪ ಲಿಂಗದ ಮೊರ್ತ
ಜಂಗುನ ಸಬ್ದ ಮಾಡುದ್ರು
ಮುಡ್ಕುತೊರೆ ಮಲ್ಲಣ್ಣನ್ನು ಕೊಡ
ಜಂಗುನ ಸಬ್ದ ಮಾಡುದ್ರು
ಬಿಳಿಗಿರಿ ರಂಗಸ್ವಾಮಿ
ಒಂದು ಸಾರಿ ಜಾಗಟೆ ವಡೆದ್ರು
ಒಂದು ಸಾರಿ ಶಂಕು ಊದುಬಿಟ್ಟರು
ಎಚ್ಚರವಾಗ್ಲಿ ಗಂಡ ಹೆಂಡ್ತೀರ್ಗೇ
ಏನು ಕಷ್ಟದಲ್ಲಿ ಮಲ್ಗಿದ್ದರೋ ಅಂತೇಳಿ
ಯಾವಾಗ ಶಂಕನಾದ ಕೇಳ್ದರೋ
ಜಾಗಟೆ ಸಬ್ದ ಕೇಳ್ದರೋ
ಮನೆಯೊಳಗಿದ್ದ ಮನಿಗಿದ್ದಂತಹ
ಗಂಡ ಹೆಂಡ್ರು ಎದ್ರು
ಬಲಮೊಗ್ಗಲಾಗಿ ಎದ್ರು
ನಡಟ್ಟಿ ಒಳಗೆ ಬಂದು ನಿಂತ್ಗಂಡು
ಮೂರು ಜನ ಮುನಿಗಳ ನೋಡ್ತಾವರೇ ರಾಮವ್ವ || ನೋಡಿ ನಮ್ಮ ಶಿವನಾ ||

ಆವಾಗ ಮುನಿಗಳ ನೋಡುಬುಟ್ಟು
ರಾಮವ್ವಗೆ ಸಂಕಟ ಬಂದ್ ಬುಡ್ತು
ಮೂಗಪ್ಪನ್ನಗೆ ದುಃಖ ಬಂದುಬಿಟ್ತು
ಮೂಗಪ್ಪ ತನ್ನ ಹೆಗಲಮ್ಯಾಲೆ ಇತ್ತಲ್ಲ ಹಳೇ ದುಪುಟಿ ಬಟ್ಟೇ
ಕೊಳೆ ಬಟ್ಟೇನೇ ತಂದು ಆ
ಜಂಗುಮರ ಮುಂದೆ ಹಾಸುಬುಟ್ಟ
ರಾಮವ್ವ ಓಡ ಬಂದು
ತನ್ನ ಮುತ್ತಿನ ಮುಂದರ್ಗ ಹಾಸ್ಕಂಡು
ಗಂಡ ಹೆಂಡ್ರು ಇಬ್ಬರು ಮೂರು ಜನ ಮುನಿಗಳಿಗೆ

ಅವರು ಶಿರಬಗ್ಗಿಸಿ ಸರಣು ಮಾಡವರೇ ಮೂಗಯ್ಯ || ನೋಡಿ ನಮ್ಮ ಶಿವನಾ ||

ಈರಯ್ಯ ಸರಣೂ
ಈರಭದ್ರಯ್ಯ ಸರಣೋ
ಮಲ್ಲಯ್ಯ ಸರಣೂ
ಬೆಟ್ಟದ ಮಾದಪ್ಪ ಸರಣೂ

ಮಾದಪ್ಪ ನನ್ನ ಎತ್ತಂತಹ ತಾಯಿ
ಹಿಂದ್ಲ ಜನ್ಮದಲ್ಲೀ ಅಂತೇಳಿ
ರಾಮವ್ವಗೇ ಕೈಹಿಡಿದು ಮ್ಯಾಗೆ
ಎತ್ತಿ ನಿಲ್ಸಿಕೊಂಡ್ರು
ಮಲ್ಲಣ್ಣ ಒಂದು ಕೈಯಿ
ರಂಗ್ದಸ್ವಾಮಿ ಒಮ್ದು ಕೈಯಿ
ಮೂಗಪ್ಪನ್ನ ಎತ್ತಿ ನಿಲ್ಸಗಂಡ್ರು
ಏನವ್ವ ಸತ್ವಂತ ರಾಮವ್ವ
ಈಗಲಾದ್ರು ನನಗೇ ಸರಣೆಯಾಗಬೇಕು ನೀನು
ಬರುವಂತ ಅಮವಾಸೆಯೊಳಗೆ ನನ್ನ ಏಳುಮಲೆಗೆ

ನೀನು ಸರಣೆ ಬರಬೇಕು ನನ್ನ ನಡು ಮಲೆಗೆ || ನೋಡಿ ನಮ್ಮ ಶಿವನಾ ||

ಆವಾಗಲೀಗ ಸತುವಂತ ರಾಮ್ವ್ವ
ಮೂಗಯ್ಯನ ಮ್ಯಾಲಕ್ಕೆ ಎತ್ತಿ ನಿಲ್ಸಿದ್ರೂ ಮೂರ್ ಜನ ಮುನಿಗಳು
ಏನಪ್ಪ ಮೂಗಯ್ಯ ರಾಮವ್ವ ಈವಾಗಲಾದ್ರುವೇ
ನಮ್ಮ ಏಳುಮಲೆ ಕೈಲಾಸಕ್ಕೆ ಬಂದು
ಎಣ್ ಮಜ್ಜನ ಮಾಡಿಯ ಅಂದ್ರು
ಮೂಗಪ್ಪ
ಆಗಲಿ ಗುರುವೇ ಬರ್ತಿನೀ
ನಾನು ಬರುವಾಗ
ನನ್ನ ಕಣ್ಣಿಗೆ ಏನೂ ಗೋಚರವಾಗಬಾರ್ದು
ಏನಪ್ಪ ಅಂದ್ರು
ಒಂದು ಹುಲಿ ಕಾಣಬಾರ್ದು
ಒಂದು ಹುಲ್ಲೇ ಕಾಣ ಬಾರ್ದು
ಹಕ್ಕಿ ಪಕ್ಷಿ ಕಾಣಬಾರ್ದು
ಕಳ್ಳ ಕಾಕರ ಭಯ ಇರಬಾರ್ದು
ಆ ರೀತಿಯಾಗಿ ನಿನ್ನ ಏಳು ಮಲೆಗೆ ಬಂದಾಗ
ನನ್ಗ ಯಾವುದು ಕೂಡ ಮೈ ರೋಮು ಚುಕ್ಕ್ ಅನ್ನಬಾರ್ದು
ಆ ರೀತಿಯಾದ್ರೆ ನಾ ಬರ್ತಿನೀ
ಆದರೆ ನನ್ನ ಜೊತೆಯಲ್ಲಿ
ನನ್ನ ಮಡ್ದಿ ರಾಮವ್ವ ಕೂಡ ಬರಬೇಕು
ನನಗೆ ಒಂದು ಗೊತ್ತಿದ್ರೇ ಒಂದು ಗೊತ್ತಿಲ್ಲ
ನನ್ನ ಮಡದಿಯಾದ ರಾಮವ್ವ ಬಂದ್ರೆ
ನಾನು ಬಂದು ಏಳುಮಲೆಯಲ್ಲಿ
ಎಣ್ಣೆಮಜ್ಜನ ಮಾಡ್ತಿನೀ ಅಂದ್ರು
ಮಾದಪ್ಪ ನಿಂತ್ಕಂಡು ಯೋಚ್ನೆ ಮಾಡುದ್ರು
ನಾನು ಕರಿ ಜಾತಿ ಕಣ್ಣೆತ್ತಿ ನೋಡದೇ
ಹೆಣ್ಣು ಮಣ್ಣನ್ನ ಮರೆತೂ ಏಕಾಂಗಿ ಮಲೆಗೋದೆ
ಇವತ್ತು ಹೆಂಗಸು ಬರಬೇಕೆಂದು ಹೇಳ್ತಾರೆ
ಆದರೆ ಸರಣೇ ಬಂದೂ
ನನಗೆ ಎಣ್ಣೆ ಮಜ್ಜನ ಮಾಡ್ಲಿ
ಆಗ್ಲೀ ಎಂದು ಮಾದಪ್ಪ
ಒಪ್ಪಗಂಡ್ರು ಆವಾಗ
ಅವರು ಭಾಷೆ ಕೇಳ್ತಾವರೆ ಜಗದೊಡೆಯ

ನೋಡಪ್ಪ ಮೂಗಯ್ಯ
ಇಲ್ಲಿಂದೀಚ್ಗೇ ನೋಡವ್ವ ಸತ್ತುವಂತೆ ರಾಮವ್ವ
ನಿನ್ನ ಸರಗೂರು ಮಠ ಎಳಿಗೆಯಾಗಿ ಹೆಚ್ತಾ ಅದೇ
ನೀವೇನು ನಿಮ್ಮ ಕೈಯಿಂದ
ಒಂದು ಬಿಡಗಾಸು ತರಬೇಡಿ
ನಿಮ್ಮ ಮನೆದೇವ್ರ ಹೆಸರೇಳಿ
ಈ ಎರಡು ಬಿಳಿ ನಾಮ ಇಟ್ಕಳಿ
ನಿನ್ನ ಗಂಡನಾದ ಮೂಗಯ್ಯನಿಗೇ
ಬೂದ್ಗಂಬಳಿ ಅಡ್ಡೊದ್ಕೆ ಹಾಕು
ಬಿಳಿಪಾದ ಸುತ್ತುಬುಟ್ಟು
ಒಂದು ಎತ್ತಿನ ಗಿಡ್ನ ಮ್ಯಾಲೆ ಕುಂಡ್ಸು
ಮೂರು ಕಂಡ್ಗ ಹೇಳ್ತಾಯಿದ್ದಿನೀ ಕೇಳು
ಆದರೆ ಆರಮಾನ ಅಚ್ಚೆಳ್ಳು
ವಡೆಯದೊಂಬಾಳೆ
ಒಂಬತ್ತು ಎಳನೀರು
ಮೂರು ಚಿಟ್ಟಿನ ಬೆಲ್ಲವನ್ನು ಕಟ್ ಕಟ್ಟಿ
ಯಗಲಮ್ಯಾಲೆ ಅಸುಬೆ ಮ್ಯಾಲೆ ತುಂಬಿ
ಕಂಚಿನ ತಾಳಯನ್ನು ಯಗಲ ಮ್ಯಾಲೆ ಒರ್ಸಿ
ಕತ್ತಲೆ ಒಳಗೆ ಬರಲಾರಿ ಎಂದರೆ
ಸಿದ್ದಯ್ಯನಪುರದ ಚಾಮನ ಕೈಲಿ
ಕಡ್ಡಿ ಬೆಳಕ ಇಡಿಸ್ಕಂಡು

ನನ್ನ ಏಳು ಮಲೆಗೆ ಬರಬೇಕು ಅಂತವರೇ ಮಾದಪ್ಪ || ನೋಡಿ ನಮ್ಮ ಶಿವನಾ ||

ಮಾದಪ್ಪ
ರಾಮವ್ವ ಮೂಗಪ್ಪನಿಂದ ಭಾಷೆ ತಕ್ಕಂಡು
ಮೈಸೂರು ಮೇಲ್ನಾಡಿಗೆ
ಅರೆಗಣ್ಣು ಕಿರಗಣ್ಣು ಬಿಟ್ಟು ನೋಡುದ್ರು
ಎಳಂದೂರು ತ್ವಾಟದವ್ರು
ವಾರಕ್ಕೆ ಒಂದೊಂದು ಸಾರಿ ಬರ್ತಾರೇ
ಸರಗೂರು ಮಠಕ್ಕೆ
ನೋಡಪ್ಪ
ಸರಗೂರು ಮಠಕ್ಕೆ ಬಂದು ಸರಗೂರು ಅಯ್ಯನೋರು
ರಾಮವ್ವ ಮೂಗಪ್ಪನ ಮಠದಲ್ಲಿ
ನೋಡಿ ನಮ್ಮ ಅಡಕೆ ತ್ವಾಟದಲ್ಲಿ
ಬರುವ ಅಮವಾಸೆಗೆ ನಾವು ಎಳನೀರು ಕಳಿಸ್ತಿವಿ
ಒಂದ ಹನ್ನೆರಡು ಎಳನೀರ ಅಂತಾರೆ
ಅಡಕೆ ತ್ವಾಟದವ್ರು ಹೊಂಬಾಳೆ ಕಳಿಸ್ತೀವಿ ಅಂತಾರೆ
ಮೈಸೂರು ಮೇಲ್ನಾಡ್ ನೋರು
ಎಳ್ಳ ಬೆಳೆದಂತಾವರು
ಒಂದು ಪಾವು ಎರಡು ಪಾವು ಐದು ಪಾವು
ಐದು ಸೇರ್ನವರ್ಗು ತಂದು ತಂದು ಉಲ್ಟೆ ಕೊಡ್ತಾವರೆ
ಸರಗೂರು ಮಡದಲ್ಲೀ ತುಂಬ್ತ ಅವ್ರೆ
ರಾಮವ್ವ ಮೂಗಪ್ಪ
ಬನ್ನೂರು ಬಯಲ್ನಲ್ಲಿ ಹೋಗಿ
ಅಲ್ಲೀರ್ತಕ್ಕಂತ ಒಕ್ಕಲಿಗರ ಮಕ್ಕಳು
ಆಲೆ ಮನೆಕಟ್ಟ ಕಬ್ಬು ತರ್ದು ಬೆಲ್ಲೆ ಆಡುವುದಕ್ಕೆ
ಮೊದಲಾಗಿ ಮಾದಪ್ಪನ್ಗೆ
ಅಟ್ಟಂತಹ ಅಡುಗೆ ಒಳಗೆ
ಬೆಲ್ಲದ ಅಚ್ಚು ಬೆಲ್ಲ
ವರೆ ಕಟ್ಟಿ ಮೊದಲು ಸರಗೂರು ಮಠಕ್ಕೆ ಕಳ್ಸುತ್ತಾರೆ
ಆವಾಗಲೀಗ ಮೂಗಯ್ಯ ರಾಮವ್ವ
ಇಬ್ಬರು ಮಾತಾಡ್ಕಂಡ್ರು
ಕೊತ್ತೇಗಾಲ್ದ ಹೆಣ್ಣೇ
ಮಾದೇಶ್ವರ್ನ ಬೆಟ್ಟಕ್ಕೆ ಹೋಗಬೇಕು
ಇನ್ನು ಮೂರು ದಿವಸ ಅಮಾಸೇ ಅದೇ
ಮಾದಪ್ಪನ್ಗೆ ಹೋಗಬೇಕು ಅಂದ್ರು
ಆವಾಗಲೀಗ ಗಂಡ ಹೆಂಡರು
ಸ್ನಾನ ಮಡಿ ಮಾಡ್ಕಂಡು
ಮೀರು ಮಡಿ ಉಟ್ಕಂಡು ಮೀಸಲು ಬುತ್ತಿ ಕಟ್ಕಂಡು
ಆವಾಗ ಆರಮಾನ ಅಚ್ಚೆಳ್ಳು
ವಡೆಯದ ಹೊಂಬಾಳೆ ಒಂಬತೆಳ್ನೀರು
ಮೂರು ಚಿಟ್ನ ಬೆಲ್ಲ ಕಟ್ಟಿ
ಅಸ್ಬೆಯಲ್ಲಿ ತುಂಬ್ಕಂಡು
ಯಗಲಮ್ಯಾಕೆ ವತ್ಕುಂಡು
ವರ್ಸೇ ಗಣಂಗಳ ಕರ್ಕಂಡು
ಕಂಚಿನ ಕಾಳೆ ಇಡ್ಕಂಡು
ಬಿಳಿ ರುಮಾಲು ಸುತ್ಕಂಡು
ಬೂದ್ಗಂಬಳಿ ಅಡ್ಡೊದ್ಕೆ ಹಾಕ್ಕಂಡು
ಬಿಳಿ ನಾಮ ಇಟ್ಕಂಡು

ಅವರು ನಡುಮಲೆಗೆ ಹೊರಟವರೇ ಮೂಗಯ್ಯ || ನೋಡಿ ನಮ್ಮ ಶಿವನಾ ||

ಹೆಣ್ಣೇಳು ಕೋಟಿ ಗಂಡೇಳು ಕೋಟಿ
ಮೈಸೂರು ಮೇಲ್ನಾಡ್ನ ಪರ್ಸೆ ಜೊತೆ ಒಳಗೆ
ದಂಡ್ಗೆ ದಳವಾಯಿಯಾಗಿ
ಮದ್ಯದಲ್ಲಿ ಬರ್ತಾಯಿದ್ರೇ
ಮೂಗಪ್ಪ ರಾಮವ್ವ
ಮಾದೇಶ್ವರನಿಗಿಂತ ಹೆಚ್ಚಾಗಿ ಪರ್ಸೇ ಒಳಗೆ
ಪದ ಹೇಳ್ಕಂಡು ಕಾಕ
ಹಾಕ್ಕಂಡು ಗುಳ್ಳಾಕ್ಕಂಡು
ಕಂಸಾಳೆ ಸಬ್ದ ಮಾಡ್ಕಂಡು
ತಮಟೆ ನಾದ ಮಾಡ್ಕಂಡು
ಮೂಗಯ್ಯನ ಮದ್ಯ ಬಿಟ್ಟಕ್ಕಂಡು
ಮೆರೆಸ್ಕಂಡು
ಎತ್ನ ಗಿಡ್ಡದ ಮ್ಯಾಗೆ ಕೂತ್ಕಂಡು
ಅದೇ ಸಿದ್ದಯ್ಯನಪುರದ ಚಾಮ ಅಂದ್ರೇ
ಕೊಳ್ಳೇಗಾಲದ ಪಕ್ಕ
ಆ ಚಾಮವ ಕೈಲೀ ಗೌರಿ ಕಡ್ಡಿ ಬೆಳಕು
ನಾವು ದೀಪಾವಳಿ ತಿಂಗಳು
ಗೌರಿ ಕಡ್ಡಿ ಉರಿಸ್ತಿವಲ್ಲ ಆತರ ಕಡ್ಡಿ ಬೆಳಕು
ಅಮವಾಸೆ ಕತ್ತೆಲೆ
ಏಳು ಮಲೆ ಕೈಲಾಸ ಅಂತೇಳಿ
ಕಡ್ಡಿ ಬೆಳಕು ಇಡ್ಸಿಕ್ಕಂಡೂ

ಅವರು ನಡುಮಲೆಗೆ ದಯಮಾಡವರೇ ಮೂಗಯ್ಯ || ನೋಡಿ ನಮ್ಮ ಶಿವನಾ ||
ಸರಗೂರು ಸರಣಾರು ಬರುವಾರು
ಗುರುವೇ ಸಡಗರ ಎಲ್ಲಾ ಮನೆಯೊಳಗೆ

ಮಾದಪ್ಪ
ಆವಾಗಲೀಗ ಅರಗಣ್ಣು ಕಿರುಗಣ್ಣು
ಬಿಟ್ಟು ನೋಡ್ತಾರೇ
ಇನ್ನೀಗ ನನಗೆ ಆನಂದವಾಯ್ತು
ಮಲೆನಾಡು ಸೀಮೆಯೊಳಗೆ
ಆನಂದವಾಗಿ ಲೋಕ ಕಲ್ಯಾಣ ಮಾಡ್ತಿನಿ
ತರ್ಗೆಂಡದಲ್ಲಿ ತಳಗೆ ಕಲ್ಯಾಣ
ಎಳ್ನಲ್ಲಿ ಮಜ್ಜನವಾಗ್ತದೇ
ನನಗಿರ್ತಕ್ಕಂತ ಸರಣರು ಬರ್ತಾರೇ
ಎಣ್ಣೆ ಒತ್ತಿ
ನನಗೆ ಚೆನ್ನಾಗಿ ಸ್ನಾನ ಮಾಡ್ಸಿತಾರೆ ಅಂತೇಳಿ
ಆನಂದವಾಗಿ ಕೂತ್ಕಂಡು
ಮಾದಪ್ಪ ನಾಲ್ಕು ರಾಜ್ಯ ನೋಡ್ತಾಯಿದ್ದಾನೇ
ಮಾದೇಶ್ವರನಿಗೇ ಎಣ್ಣೆ ಮಜ್ಜನವಾದ ಮ್ಯಾಲೇ
ಗಿರಿ ಮಾಳದಲ್ಲಿ ದೇವಸ್ಥಾನ ಬರಸ್ಕಂಡು
ತಂಬಡಗೇರಿನೆಲ್ಲಾ ಸಾರ್ತರೇ
ನಾಳೆ ಅಮವಾಸೆ ಅಂತೇಲಿ ಸಾರ್ತನೇ
ಅದೇ ರೀತಿಯಾಗಿ
ಮಾದೇಶ್ವರನ ಬೆಟ್ಟಕ್ಕೋಗ್ತಾ ಇದ್ದಾರೆ
ಯಾರು? ಸಿದ್ದಯ್ಯನಪುರದ ಚಾಮನ ಕೈಲಿ
ಕಡ್ಡಿ ಬೆಳಕಿಡಿಸ್ಕಂಡು ಮಾದಪ್ಪ
ನಡುಮಲೆಗೆ ಹೋಗುವಾಗ
ಆ ಸುತ್ತ ಹಳ್ಳಿಯೆಲ್ಲಾ
ಕಾಮಗೆರೆ ಕೊಂಗರಹಳ್ಳ ಸಿಂಗನ್ನೂರು
ಕಣ್ಣೂರು ಮಂಗಲ ಹನೂರು
ಇಂತ ಪರ್ಸೆಯೆಲ್ಲ ತಲ್ಲಣ್ ಸ್ತ ಅದೇ
ಏನಪ್ಪ ಇವತ್ತು
ಮೈಸೂರು ಮಲ್ನಾಡ್ನ ಪರ್ಸೇ ಇಷ್ಟು
ಆನಂದವಾಗಿ ಹೋಗ್ತಾವರೇ
ಯಾರೋ ಎತ್ತಿನ ಗಿಡ್ಡದ ಮ್ಯಾಗೆ ಹೋಗ್ತಾವರಲ್ಲ
ಯಾವ ಸರಣರೋ ಅಂತೇಳಿ

ಅವರು ಸರಗೂರ ಸರಣರ ನೋಡ್ತಾವರೇ ಜನಗಳು || ನೋಡಿ ನಮ್ಮ ಶಿವನಾ ||

ಸಾವಿರಾರು ಕೋಟಿ ಗಣಂಗಳ ಮಧ್ಯದಲ್ಲೀ
ಸರಗೂರಪ್ಪ
ಸೆಟ್ಟಿ ಸರಗೂರಪ್ಪ ಮೂಗಯ್ಯ ರಾಮವ್ವ
ಆವಾಗಲೀಗ ಏಳು ಮಲೆ ಕೈಲಾಸಕ್ಕೆ ಬಂದರೂ
ತಾಳು ಬೆಟ್ಟದಲ್ಲಿ ಬಂದೂ
ಪರ್ಸೆ ಗಣಂಗಳ್ಗೆ ಮೂಕಳ್ಳಿ ಮಾರಮ್ಮ
ಧೂಪಾಕ್ ಬಿಟ್ಟು
ಬೆಟ್ಟ ಅತ್ತುತಾವರೇ
ಮೂಗಯ್ಯ – ರಾಮವ್ವ
ಬೆಟ್ಟವನ್ನ ಅತ್ಕಂಡು
ಇಂಬಿ ಮೇಳೆ ಒಡ್ಡು
ಪತ್ರಗಳ ವಡ್ಡುಗ ಹೋಗಿ
ರಂಗದಸ್ವಾಮಿ ಪೂಜೆ ಮಾಡ್ಕಂಡು
ಮುಂದೆ ಹೋಗೋಣ ಅಂತೇಳಿ
ವಿಶ್ರಾಂತಿ ಪಡತ ಇದ್ರು
ಅಷ್ಟೊತ್ಗೆ ರಾಮವ್ವ ವರ್ಗಡೆ ಹೋಗುಬುಟ್ಟ
ವರ್ಗಡೆ ಆಗೋಗ್ ಬುಡ್ತು ಇನ್ನು
ಮುಂದೆ ಹೋಗುವಂಗಿಲ್ಲವಲ್ಲ
ಏಳು ಮಲೆ ಕೈಲಾಸಕ್ಕೆ
ಏನಾದ್ರು ಮುಂದ್ಕ ಹೆಜ್ಜೆ ಇಟ್ರೆ
ಆ ಕಡೆ ಈ ಕಡೆ ಹುಲಿ ಬಂದುಬಿಡ್ತವೆ
ಇಲ್ಲ ಅಂದ್ರೇ ಹೆಜ್ಜೇನು ಬಂದುಬುಡ್ತವೇ
ಅದೇ ಪರಂಪರಾಯ
ಪರಂಪರೆಯಾಗಿ
ನಾನು ತಿಂಗಳ ಸೇವೆ ಮಾಡ್ತಾ ಇದ್ದಾಗ
ನಾನು ಕಣ್ಣಿಂದ ನೋಡಿವ್ನಿ
ಎಣ್ದೆಮ್ಮೀ ಕೊಳ ಇದ್ದಾಗ
ಡೆಂಕಣೀ ಕೋಟೆಯವ್ರು
ಎಲ್ಲಾ ಪರ್ಸೆ ಸುತ್ತ ಸ್ನಾನ ಮಾಡ್ತಾವರೇ
ಎಲ್ಲೀ ಎಣ್ದಿಮೀ ಕೊಳದಲ್ಲಿ
ಆವಾಗ ಅಲ್ಲೊಂದ್ ದೊಡ್ಡ ಮಾವಿನಮರ ಇತ್ತು
ಮಾವನ ಮರದೊಳಗೆ ಹೆಜ್ಜೇನು ಕಟ್ಟಿತ್ತು
ಗಂಡ ಹೆಂಡ್ತಿರು ಸ್ನಾನ ಮಾಡ್ತಾವರೇ
ಸುತ್ತ ಪರ್ಸೆಲ್ಲ ಅದೇ
ಸ್ನಾನಮಾಡಿ ಈಚ್ಗ್ ಬಂದ್ ತಕ್ಷಣ
ಬಂದ್ಬುಟ್ಟೊ ಹೆಜ್ಜೇನು
ಅವರೀಬ್ಬರ್ಗ್ ವಡಿತಾವೇ ತಲೇ ಮ್ಯಾಲೆ ಏಟ
ಆದ್ರು ಕೂಡ ಏಟ್ ಕಡಿಸ್ಕಂಡು
ಅವರಿಬ್ಬರೂ ಹೋಗಿ
ಮೈಯೆಲ್ಲ ಜುಮ್ ಅಂತ್ತಾದೆ
ಅವರಿಬ್ಬರು ಕಡಿಸ್ಕಂಡೂ
ಮಾದಪ್ಪನ ದೇವಸ್ಥಾನ ಪ್ರದಕ್ಷಿಣೆ ಮಾಡಿ
ದಿಂಬುಳ ಸೇವೆ ಮಾಡ್ಕಂಡು ಬಂದು
ಆ ಎಣ್ ದಿಮ್ಮಿಕೊಳದಲ್ಲಿ ಮುಳ್ಗು ಗಂಟ
ಬುಡ್ನಿಲ್ಲ ಅವ
ಎಣ್ ದಿಮ್ಮಿ ಕೊಳದಲ್ಲಿ ಬಂದೂ
ಸ್ನಾನ ಮಾಡೆದ್ರು ಆವಾಗೋಗಿ ಮರಸೇರ್ಕಂಡೋ ಜೇನು
ಆ ರೀತಿಯಾಗಿ ರಾಮವ್ವ ವರಗಡೆಯಾಗ್ಬುಟ್ಟ
ಇನ್ನುಮುಂದೆ ಹೋದ್ರೆ ಹೆಜ್ಜೇನು ಬತ್ತವೇ
ಹುಲಿ ಬರುಬಹುದು ಅಂತೇಳಿ
ಅಲ್ಲಿ ಯೋಚ್ನೆ ಮಾಡ್ತ ಕೂತ್ಕಂಡ್ರು
ಮಾದಪ್ಪ
ನನ್ನ ಸರಣರೂ ನನಗೆ ಎಣ್ಣೆಮಜ್ಜನ
ಮಾಡುದು ಟೈಮಾಗೋಯ್ತೆ ಅಂತೇಲಿ
ಅಲ್ಲಿ ದೇವಿಂದ್ರಾಯಾನ ಕರೆದವರೇ
ಮಾದೇವ || ನೋಡಿ ||

ರಂಗನ ವಡ್ನಲ್ಲೀ ವರಗಡೆಯಾದ ತಾಯಿ
ಅರ್ಧ ಮೈಲಿ ದೂರ ನಿತ್ಕಂಡ
ಮೈಲ್ ಗ್ಯಾಯ್ತದೆ ಪರ್ಸೆ ಮುಟ್ ಬಾರ್ದು ಅಂತೇಳಿ
ಆವಾಗಲೀಗ ಹರದೆ ಮಾಡುದ್ರು
ಒಂದು ಸಾರಿ ಮುಂಗಾರು ಮಿಂಚು ಗುಡುಗುಬುಡಪ್ಪ
ಮುಂದ್ಗಡೆ ಒಂದು ಕೊಳವಾಗ್ಲಿ
ಆ ತಾಯಿ ಸ್ನಾನ ಮಾಡ್ಲಿ
ನನಗೆ ಸರಣೆ ಬಂದು ಎಣ್ಣೆಮಜ್ಜನ
ಮಾಡ್ತಳೇ ಅಂದ್ರು
ದೇವಿಂದ್ರಾಯ ಮಾದಪ್ಪ ಮಾತಕೇಳಿ
ಒಂದು ಸಾರಿ ಗುಡುಗಿದ್ದಾನೇ
ಆವಾಗ ಒಂದು ಸಾರು ಗುಡ್ಗಿ
ಒಂದು ಸಾರಿ ಮಿಂಚಿದರೂ
ಮುಂದೇ ಬಾರಿ ಗುಂಡಲದ ಮಳೆ ಬಂದ್ ಬಿಡ್ತು
ಅವರು ಬಾರಿ ಮಳೆಯ ಸುರಿದವರೇ
ದೇವೇಂದ್ರ || ನೋಡೀ ||