ರಾಮವ್ವ ಕುಂತಿದ್ದ ಜಾಗದಲ್ಲಿ
ಎಲ್ಲ ಪರ್ಸೆ ಗಣಂಗಳು ಕಲ್ಲನ್ನಲ್ಲಿ ಕಟೀ
ನೀರು ನಿಲ್ಸಗಂಡ್ರು
ಇದು ರಾಮವ್ವೆ ಕೊಳವಾಗಲಿ ಮುಂದೆ
ಸ್ನಾನ ಮಾಡು ತಾಯಿ ಅಂತೇಳಿ
ಸ್ನಾನ ಮಾಡ್ಸಕ್ಕಂಡ್ರು
ಸ್ನಾನ ಮಾಡ್ಸಕ್ಕಂಡೂ
ಆದರೆ ಮೂಗಪ್ಪನ್ನ ಹಿಂದ್ಗಡೆ
ಬಿಟ್ಕಂಡೂ
ಅವರು ಏಳು ಮಲೆಗೆ ಬರುತಾವನೆ
ರಾಮವ್ವ
ಏಲು ಮಲೆಗೆ ಹೋಗುವರು
ಗುರುವೇ ಎಳವಿಗೆ ಕಲ್ಲಿಗೆ ಸರಣಾ ಮಾಡವರು
ಹೌದಯ್ಯ ಹೌದು
ಎಳವಿನ ಕಲ್ಲಿನ ಮಾದೇವ
ಕೊಡು ನಮಗೆ ವರವ
ಚಿಕ್ಕಾಲಳ್ಳ ದೊಡ್ಡಾಲಳ್ಳದ ದಾಟ್ಕಂಡು
ಸರಗೂರಪ್ಪನವರು
ಆನೆ ತಲೆದಿಂಬಗ್ ಬಂದ್ರು
ಆನೆ ತಲೆದಿಂಬದಲ್ಲಿ
ಕಾಡ್ನಲ್ಲಿಂದ ಸೌದೆನೆಲ್ಲ ತರ್ಸಿ
ಅಲ್ಲಿ ಬೆಂಕಿ ಹಾಕಿ
ದೂಪ ಹಾಕ್ಕುದ್ರು
ಮಾದೇಶ್ವರನ ದೇವಸ್ಥಾನ ನೋಡುಬಿಟ್ಟು
ದೂಪ ಹಾಕಿ ತಮಟೆ ವಡೆದ್ರು
ಇಲ್ಲಿ ಮಣಿಗಾರ್ಗೆ ಗೋಚರ ಆಗೊಯ್ತು
ಎಲ್ಲಿ ಬೆಟ್ಟದ ಮ್ಯಾಲೆ
ಸರಗೂರಯ್ಯ ಬತ್ತಾವನೆ
ಇವತ್ತು ಎಣಮಜ್ಜನಕ್ಕೆ ಅಂತೇಳಿ
ದೇವಸ್ಥಾನದಲೆಲ್ಲ ಅರಾಜ್ ಮಾಂಡ್ಕದವರೆ
ಏನು ತಯಾರುಮಾಡ್ಕಂಡವರೇ
ಛತ್ರಿ ಚಾಮರ
ಸತ್ತಿಗೆ ವೀರಗಾಸೆ ಇಡ್ಕ ನಿಂತವರೆ
ಸರಗೂರಪ್ಪನ ಕರ್ಕಂಡ್ ಹೋಗಬೇಕಲ್ಲ
ಎಲ್ಲಿಗೆ ದೇವಸ್ಥಾನಕ್ಕೇ ಅಂತೇಳಿ
ಆವಾಗ ಸರಗೂರಪ್ಪನವರು
ರಾಮವ್ವ ಮೂಗಪ್ಪ
ಅವರು ದಿಂಬದ ಮಲೆಯ ಇಳದವರೇ
ಸರಗೂರಯ್ಯ
ಮಲೆಗಳ ನೋಡಯ್ಯಾ
ಅಲ್ಲೆ ಹೊನ್ನೆ ಗಿಡಗಳ ನೋಡಯ್ಯಾ
ಮಾದೇವ
ಯಿಮಲೆಲ್ಲಿರುವ ಮಾದೇವ ನಿಮ್ಮ
ವೈಭೋಗ ನೋಡಯ್ಯ
ಸರಗೂರಪ್ಪನವರು
ಆನೆದಿಂಬದ ಮ್ಯಾಲೆ ಇಳ್ದು ತಂಬಡಗೇರಿ
ಪಕ್ಕಕ್ಕೆ ಬಂದ್ರು
ಏಕಾಂತವಾಗಿ ಹೋಗಬಾರ್ದು
ಮಣಿಗಾರ್ರಿಂದ ಆರ್ಡರ್ ಪಡ್ಕಂಡ್
ಹೋಗಬೇಕು ಅಂತೇಳಿ
ಕತ್ತಿ ಪವಾಡದ ಕೊಳದತ್ತ ಬಂದು ಬಿಳಿಬಟ್ಟ ಒಳಗೆ ಡೇರಹಾಕ್ಕಂಡು
ಆ ಡೇರದೊಳಗೆ ಕೂತ್ಕಂಡ್ರು ಸರಗೂರಯ್ಯ
ರಾಮವ್ವ ಒಂದು ಕಡೆ ಕೂತ್ಕಂಡ
ಒಂದೇ ನೀರು ಸ್ನಾನ ಮಾಡಿದ್ದಾರೆ
ಇನ್ನು ಎರಡು ನೀರು ಸ್ನಾನಮಾಡ್ದ ಮ್ಯಾಲೆ
ರಾಮವ್ವನ ಜೊತೆಲಿ ಕರೆಕ್ಕಂಡು ಹೋಗೋಣ ಅಂತೇಳಿ
ಪಕ್ಕದಲ್ಲಿ ಗುಡಾರದಿಂದ
ಆಚೆ ಕೂರಿಸ್ಕಂಡ್ರು
ಆವಾಗ ಪರ್ಸೆ ಗಣಗಳೆಲ್ಲ ಹೋಗಿ
ಊಘೇ ಮಾತ್ಮಲೇ ಉಘೇ ಮಾತ್ಮಲೇ
ಪೀಠದ ದೂಪ ಮಡ್ಗಿ
ಅವರವರು ಬಿಡ್ದಿಲ್ಲಿ ಅಲ್ಲಲ್ಲೇ ತಂಕ್ಕಂಡ್ರು
ಸರಗೂರಪ್ಪ ಬಂದವರೇ ಅಂತೇಳಿ
ಎಲ್ಲ ಸುದ್ಧಿ ಆಗ್ಬುಡ್ತು
ಆವಾಗ ದೇವಸ್ಥಾನದ ಮಣೆಗಾರ‍
ನಾನ್ ಕರ್ಕಂಡ್ ಬಂದ್ರೇ
ಮಾದಪ್ಪನ್ಗೇ ಕೋಪ ನಾನ್ಕರಕ್ಕಂಡು ಬಂದ್ರೇ
ಅವರು ನಮ್ಮ ಗುರುಗಳವರಲ್ಲ
ಯಾರು ಸಾಲೂರು ಮಠದ ಗುರುಗಳು
ಅ ಸ್ವಾಮಿಗಳು ಬಂದು
ಸರಗೂರಯ್ಯನ್ಗೆ ಆರ್ಡರ್ ಕೊಟ್ಟು
ಕರಕ್ಕಂಡು ಹೋಗಬೇಕಂತೇಳೀ
ಆವಾಗ ಸಾಲೂರ ಮಠಕ್ಕೆ ಬರುತಾವರೇ
ಸರಣಾರೂ || ನೋಡಿ ||

ಸಾಲೂರು ಮಠಕ್ಕೆ ಸುಮ್ನೆ ಬರ್ತಿರನಿಲ್ಲ
ಹಿಂದ್ಲು ವಾದ್ಯ ತಮಟೆ
ಒಂದು ಛತ್ರಿ ಕಳ್ಸುತ್ತಾಯಿದ್ರು
ಒಬ್ಬರು ಚಾಕ್ರಿ ಆಳು ಕಳುಹಿಸತಾಯಿದ್ರು
ಜವಾನ್ನ
ಅ ಜವಾನ ಛತ್ರಿ ಚಾಮರ ವಾದ್ಯ ತಕ್ಕೊಂಡು ಹೋಗಿ
ಸರಗೂರು ಮಠದಲ್ಲಿ ವೀಳ್ಯ ಕೊಡ್ತಾರೆ
ವಿಭೂತಿ ವೀಳ್ಯ
ಗುರುವೇ
ದೇವಸ್ಥಾನದ ಮಣೆಗಾರ‍ಆಡ್ರ್ ಆಗದೆ
ಉಕುಂ ಪಡ್ಕಂದ್ ಬಂದಿಮೀ
ಎಣಮಜ್ಜನಕ್ಕೆ ನಡಿರೀ ಗುರುವೇ
ಸರಗೂರಪ್ಪ ಬಂದಿದ್ದಾರೆ ಇವತ್ತು
ಎಣಮಜ್ಜನ ಮಾಡ್ಸಬೇಕು ಅಂದ್ರು
ಓಹೋ ಏನಯ್ಯ ಸರಗೂರಪ್ಪ ಅಂದ್ರೆ ಯಾರು
ನಾವೇ ಎಣಮಜ್ಜನ ಮಾಡ್ತಾ ಇರಲಿಲ್ಲವ
ಹೌದು ಗುರುವೇ
ನೀವು ಮಾಡ್ದಂತಹ ಅಭಿಷೇಕ
ನೀವು ಮಾಡ್ದಂತ ಎಣ್ಮಜ್ಜನ
ಮಾದಪ್ಪನ್ಗ ಅರುವಾಗುತ್ತಾ ಇತ್ತು
ನೀವು ಹೋದಮ್ಯಾಲೆ
ನಮ್ಮ ಪೂಜಾ ಅವನ್ಗ ಇಡಿಲಿಲ್ಲ
ಕಣ್ಣು ಕಾಣುದಿಲ್ಲ ಕಿವಿ ಕೇಳುದಿಲ್ಲ
ಅಚ್ಜೆಳ್ನಲ್ಲಿ ಮಜ್ಜನವಾಗಬೇಕು
ತರ್ಗೆಂಡದಲ್ಲಿ ತಳಗೆ ಹಾಗಬೇಕು
ನನ್ನ ಗುರುವಿನಿಂದ ಅಂತೇಳಿ
ಪಡ್ಲರಾಜ್ಯದಿಂದ ವಕ್ಕಲು ಪಡ್ಕಂಡು ಬಂದವರೇ
ಸೆಟ್ಟಿ ಸರಗೂರಪ್ಪ
ಎತ್ತಿನ ಗಿಡ್ನ ಮ್ಯಲೇ ಕೂತ್ಕಂಡು
ಬಿಳಿ ನಾಮ ಇಕ್ಕಂಡು
ಕಂಚಿನ ಕಾಯ ಇಡ್ಕಂಡು ಬತ್ತಾವನೇ ಗುರುವೇ
ಬನ್ನಿ ಮುತ್ತನ ಗುಡಾರದಲ್ಲವರೇ
ಕತ್ತಿ ಪವಾಡದ ಕೊಳದತ್ತ
ಕರ್ಕಂಡು ಬರೋಣ ಅಂದ್ರು
ಆವಾಗ ಚಾಕ್ರೀ ಆಳ್ಗ ಹೇಳುದ್ರು
ಚಾಕ್ರಿ ಆಳ್ಗನ್ನೆಲ್ಲಾ ಕರ್ಕಂಡು ದೇವಸ್ಥಾನಕ್ಕೆ
ಬಂದ್ರು ನಮ್ಮ ಗುರುಗಳು
ದೇವಸ್ಥಾನದೊಳಗೆ ಕೂತ್ಕಂಡು
ಅವ ಚಾಕ್ರೀ ಆಳು ಕಳುಹಿಸಿದ್ರು
ನೀವೇ ಕರ್ಕಂಡು ಬರೋಗಿ ಅಂತ
ತಮಟೆ ವಾದ್ಯ ತಕ್ಕಂಡು ಅವರು
ತಂಬಡಗೇರಿ ಬರುತಾವರೇ
ಆಳುಗಳೂ || ನೋಡಿ ||

ಆವಾಗಲೀಗ ಚಾಕ್ರೀ ಆಳುಗಳು
ಕೊಂಬು ತಮಟೆ ತಕ್ಕಂಡು
ಛತ್ರಿ ಇಡ್ಕಂಡು ಅವಾಗ ಕತ್ತಿ ಪವಾಡದ ಕೊಳಕೆ ಬಂದ್ರು
ಸರಗೂರಯನ ಡೇರಿನ ಮುಂದೆ ನಿಂತ್ಕಂಡು
ಸರಗೂರಯ್ಯನಗೆ ವಿಭೂತಿ ವೀಳ್ಯ ಕೊಟ್ರು
ಮಣಿಗಾರ್ರ ಕಲ್ಸಿದ್ದಾರೇ
ನಮ್ಮ ಸಾಲೂರು ಮಠದ ಗುರುಗಳು ಬಂದವರೇ
ಬನ್ನೀ ಗುರುವೇ ಅಂದ್ರು
ಆವಾಗ ಕೊತ್ತೆಗಾಲ್ದ ಹೆಣ್ಣೇ
ರಾಮವ್ವ ಹೇಳುದ್ರು ಮೂಗಪ್ಪ
ನೀನು ಇಲ್ಲೇ ಇರು ಗೂಡಾರದಲ್ಲಿ
ನಾನು ಹೋಗಿ ಮಾದಪ್ಪನ್ಗ ಎಣ್ಮಜ್ಜನ ಮಾಡುಬಿಟ್ಟು
ಪರ್ಸಾದ ತಕ್ಕಂಡು ಬತ್ತಿನಿ
ಅ ಪರ್ಸಾದ ತಕ್ಕಂಡೂ ಹೋಗಿ
ನಮ್ಮ ಪಸೆಗೆಲ್ಲಾ ಅಂಚೋಣ ಅಂತೇಳಿ
ಯಾರು ಮೂಗಯ್ಯ
ಕಂಚಿನ ಕಾಳ ಹೆಗಲ ಮ್ಯಾಲೆ ಇಟ್ಕಂಡು
ಎಡ್ದ ಕಂಕ್ಳಲ್ಲಿ ಮೂರು ಚಿಟ್ನ ಬೆಲ್ಲ
ಆರುಮಾನ ಅಚ್ಚೆಳ್ಳು
ವಡೆಯದ ಹೊಂಬಾಳೆ
ಒಂಬತ್ತು ಎಳನೀರು ತಕ್ಕಂಡು
ಆವಾಗ್ಲೇ ಛತ್ರಿ ಚಾಮರ ಸಹಿತವಾಗಿ
ಅವರು ಮಾದೇವನ ಮಠಕ್ಕೆ ಬರತಾವರೇ
ಮೂಗಯ್ಯ || ನೋಡಿ ||
ಹಾಲರಬಿ ಬಂದೂ
ಗುರುವೇ ನೂರೊಂದು ಹಾಲರಬಿ ಬಂದೂ
ಹಾಲರಂಬಿ ಮ್ಯಾಲೆ ಹೂವಿನದಂಡೆ ವಾಲಾಡಿಬಂದೋ
ಸೆಟ್ಟೀ ಸರಗೂರಪ್ಪನ ವಾಲಗ ಸಮೇತವಾಗಿ
ಕರ್ಕಬಂದ್ರು
ಸರಗೂರಪ್ಪನವರು
ಆವಾಗ ತನ್ನ ಜೋಳ್ಗೆಲಿದ್ದಂತಹ
ಈಡ್ಗಾಯಿ ಎಕ್ಕಂಡ್ರು
ತೆಂಕ ಬಾಗ್ಲಲಿ ಹೋಗಿ ಗಣಪತಿಗೆ ನಮಸ್ಕಾರ ಮಾಡಿ
ಮಂಗಳಾರತಿ ತಕ್ಕಂಡು
ಈಡ್ಗಾಯಿ ತಕ್ಕಂಡ್ರು ನೆಲೆದಲ್ಲಿ ವಡೆಯೋದಿಲ್ಲ
ಈವೊತ್ತು ಕೂಡ
ಈಗ ಸರಣ್ರು ಬತ್ತಾಯಿಲ್ಲ
ಯಾತ್ಕೋಷ್ಕರ ಅಂದರೆ ನಮ್ಮ ಸೆಟ್ಟಿ ಸರಗೂರಯ್ಯನಲ್ಲಿ
ಇರತ್ಕಂತವರು
ಸರಗೂರನ್ನವರು ಚಿನ್ನಸ್ವಾಮಿ
ಆಕಡೆ ಎಂಗಯ್ಯನ ಕೆರೆ ಮೋಳೆ ಅಂತದೇ
ಅವರ ದಯಾದಿಗಳಗೂ ಅವರ್ಗೂ ವೈರಾಣ್ಕ
ಬಂದುಬುಡ್ತು
ನಾನೊಯ್ತಿನಿ ನಾನೊಯ್ತಿನಿ ಅಂತೇಳಿ
ಆವಾಗ ಗೌರ್ಮೆಂಟ್ ನವ್ರು
ನಿಮ್ಮಗೆ ಯಾರ ಚಪ್ಪೋಡದೆ
ಮಾದಪ್ಪನ ದಿನದಿಂದ
ಅವರು ಕೋರ್ಟನಲ್ಲಿ ಆರ್ಡರ್ ತಕ್ಕ ಬನ್ನೀ
ಎಲ್ಲಿ ಡೆಲ್ಲಿ ಪಾರ್ಲಿಮೆಂಟ್ನಿಂದ
ಅವರ್ಗೆ ನಾವು ಕೊಡ್ತಿವಿ ಅಂತೇಳ್ ಬುಟ್ರು
ಈಗ ಇಬ್ಬರು ನಿಂತೋಗವರೇ
ನಮ್ಮ ಸಾಲೂರು ಮಠದವರೇ
ಎಣ್ಮಜ್ಜನ ಮಾಡ್ತಾ ಇರೋರು
ಆವಾಗ ಸರಗ್ಲೂರಪ್ಪ ಒಳಗೆ ಬಂದೂ
ಮಾದಪ್ಪನ್ನ ಗರ್ಭಗುಡಿ ಎದುರ್ಗೆ
ಏನಪ್ಪಾ
ಹತ್ತಿಕಟ್ಟೇ ಆಲ್ದಕಟ್ಟೇ ಮಾಂತಕಟ್ಟೆ
ಆ ಮಾಂತಕಟ್ಟೇ ಗೋಪುರ್ದಲ್ಲಿ
ಆವಾಗ ಗರುಡುಗಂಬಕ್ಕೆ ಒಂದು ಈಡ್ಗಾಯಿವಡಿತರೇ
ತಿರ್ಗ ಬಳಸ್ಕ ಬತ್ತಾರೇ
ಮಾದಪ್ಪನ ಹಿಂಬದಿ ಒಳಗೆ
ದೇವಸ್ಥಾನಕ್ಕೆ ಒಂದು ಈಡ್ಗಾಯಿವಡೆಬುದುಟ್ಟು
ಆವಾಗ ಬಾಗಲ್ಗೆ ಬಂದ ತಕ್ಷಣ
ನಮ್ಮ ಸ್ವಾಮಿಗಳಲ್ಲೂ ತೆರೆ ಹಾಕುಬಿಟ್ಟು
ನೀನು ತಂದಿರುವಂತಹ ಎಳ್ಳು ಕೊಡಪ್ಪ ಅಂತಾರೆ
ಯಾತಗೋಷ್ಕರ ಅಂದರೆ
ಮಾದಪ್ಪ ಹೇಳಿದ್ರು
ಸರಗೂರಯ್ಯನ್ಗೇ
ನನ್ನ ದೇವಸ್ಥಾನಕ್ಕೆ ಬಂದಾಗ
ನೀನು ನನ್ನನ್ನು ಎದುರುದಿಷ್ಟಿ ನೋಡಬೇಡ
ನನಗಿಂತ ಹೆಚ್ಚಿನ ಸರಣ ನೀನು ಮೂಗಯ್ಯ
ದಡ್ಡನಾದ್ರುವೇ
ನಾನು ಬೆವತೋಗ್ ಬುಡ್ತಿನೀ ಏಳುಮಲೆ ಒಳಗೆ
ಅಂತೇಳಿದ್ರು
ಬಾಗಲ್ಗ ಬಂದ ತಕ್ಷಣ ತೆರೆ ಹಾಕ್ ಬುಟ್ಟು
ಸರಗೂರಯ್ಯನ ಕೈಯಿಂದ ಹಸ್ತದಿಂದ
ಅರಮಾನ ಅಚ್ಚೆಳ್ಳೂ
ವಡೆಯದಿದ್ದ ಹೊಂಬಾಳೆ
ಒಂಬತ್ತು ಎಳನೀರು ಇಸ್ಕಂಡು
ಮಾದಪ್ಪನಿಗೆ
ನಮ್ಮ ಸಾಲೂರು ಮಠದ ಗುರುಗಳೂ
ಆವಾಗಲೀಗ ಹೋಗಿ ನಿಂತ್ಕಂಡು ಮಾದಪ್ಪನ ಲಿಂಗಕ್ಕೆ
ಹಾಲಿನಲೀ ಮಜ್ಜನ
ತುಪ್ಪದಲ್ಲೀ ಮಜ್ಜನ
ಜೇನುತುಪ್ಪದಲ್ಲಿ ಮಜ್ಜನ
ಎಳನೀರ್ ಮಜ್ಜನ
ಎಲ್ಲ ಅಭಿಷೇಕವಾದ ಮ್ಯಾಲೆ
ಸರಗೂರಯ್ಯನ ಮಜ್ಜನ ಇದು ಅಂತೇಳೀ
ಎಳ್ಳನ್ನ ತೀಡಿ
ಅವರು ಎಳ್ಳ ಮಜ್ಜನ ಮಾಡವರೇ
ಗುರುದೇವ || ನೋಡಿ ||

ಹಾಲು ಮಜ್ಜನ ಹರನೀಗೇ
ಮಾದಪ್ಪ ಎಳನೀರು ಮಜ್ಜನ ಶಿವನಿಗೇ
ಮಾದೇವ
ಎನ್ನೊಡೆಯ ಮಾದಪ್ಪ ನಿಮಗೆ ಎಳ್ಳಿನ ಮಜ್ಜನವೋ
ಆವಾಗ ನಮ್ಮ ಸಾಲೂರು ಮಠದ ಗುರುಗಳು
ನೆತ್ತಿ ಮ್ಯಾಗೆ ಎನ್ಮಜ್ಜನ ಮಾಡಿದ ಮ್ಯಾಲೆ
ಆವಾಗ ತಂಬಡಿ ಮಕ್ಕ
ಎಡೆ ತಕ್ಕಂಡು ಬತ್ತರೇ
ತಳ್ಗೆ ಮಾಡ್ಕಂಡು ಮಾಳಿಗೆಯಿಂದ
ಆವಾಗ ಗುರುಗಳು ಒಂದು ಕಡೆ
ಮಾದಪ್ಪನನ ಲಿಂಗಕ್ಕೆ ಒಂದು ಕಡೇ
ಆವಾಗ ಸಹಪಂಕ್ತಿಯೊಳ್ಗ ಭಿನ್ನ ಮಾಡ್ಕಂಡು
ನಮ್ಮ ಗುರುಗಳು
ಮಾದಪ್ಪನ ಪೂಜೆ ತಿರ್ಸಿಕಂಡು
ವರಗಡೆ ಬಂದು ಆ ಎಳ್ಳನಲ್ಲಿ ಮಜ್ಜನ ಮಾಡಿದ್ರಲ್ಲ
ಅ ಪರ್ಸಾದ ತಂದು ಸರಗೂರಪ್ಪನ ಕೈಯ್ಲ್ ಕೊಡ್ತಾರೆ
ಪೊಟ್ಲ ಕಟ್ಟಕ್ಕಂಡು ಬತ್ತ
ಯಾರಗೇ ಸಾಲೂರು ಮಠದವ್ರು ಪಿಂಡ್ ಪರ್ಸಾದ
ಕೊಟ್ಟಂಗ್ ಕೊಡವು ಅಂತ
ಆದಾಗುದಿಲ್ಲ
ಆ ಪರ್ಸಾದ ನೆಲ್ಕ್ ಮಾತ್ರ ಬೀಳುವಂಗಿಲ್ಲ
ಈವೊಗ್ಗೂ ಕೂಡ
ಅ ಎಣಮಜ್ಜನ ಪರ್ಸಾದ ಅಲ್ಲೇ ಬಾಯ್ಗಾಕಬೇಕು
ಅದೇ ರೀತಿಯಾಗಿ ಸರಗೂರಪ್ಪ
ಎಣ್ಮಜ್ಜನ ಪರ್ಸಾದ ತಕ್ಕಂಡೂ
ತಮ್ಮ ಗುಡಾರಕ್ಕೆ ದಯಮಾಡವರೇ
ಸರಗೂರಯ್ಯ
ಮಂಜುಮಲೇ ಮಾದಪ್ಪ ನಿಮಗೇ
ಶಿವನೇ ಮಂಜೀನಲಿ ಶಿವಪೂಜೆಗಳು
ಮಾದೇವ
ಮರ ಬಂದ ಮಾದಪ್ಪ: ನಮಗೆ ನೆರಳಲ್ಲಿ ಗದ್ದಿಗೆಯೋ
ಆವಾಗಲೀಗ ಎಣಮಜ್ಜನವಾದ ಬೆಳಗ್ಗೆ
ಅಮಾಸೇ ಅಮವಾಸೇ ದಿವಸ
ಮಾದೇಶ್ವರನಿಗೆ
ಯಾವರೀತಿ ಮಾಡ್ತರೇ ಅಂದ್ರೇ
ದೀಪಾವಳಿ ತಿಂಗಳು
ನೂರೊಂದು ಜನ ತಂಬಡಿ ಮಕ್ಕಳು ಬೇಡ್ಗಂಪ್ಣದವ್ರು
ಹನ್ನೆರಡ್ ಗಂಟೆ ರಾತ್ರೇ ಒಳಗೆ
ತಮ್ಮ ಹಸುನಲ್ಲಿ ಇವತ್ಗೂ ಕೂಡ ಒಂದು ತೊಟ್ಟು
ಹಾಲು ಕೊಡೋದಿಲ್ಲ
ತಂಬಡಗೇರಿ ಒಳಗೆ ಒಂದು ಗ್ಲಾಸ್ ನೀರು ಕೊಡೋದಿಲ್ಲ
ಪೂಜಾರಿಗಳು
ಮಾದ್ಪಪ್ಪನಿಗೆ ಎಣಮಜ್ಜನ ಆಗೊವರುಗೂವೇ
ಎಣಮಜ್ಜನ ಹಾಲರಬಿ ಆಗೋವರೆಗುವೇ ಅಂತೇಳಿ
ನೂರೊಂದು ಜನ ತಂಬಡಿ ಮಕ್ಕಳು
” ಮಲೀಯಲೀ ಮಾದೇವ ಬರುವ ಚಂದಾ ” || ನೋಡಿ ನಮ್ಮ ಶಿವನಾ ||
ಆವಾಗಲೀಗ ನೂರೊಂದು ಜನ ತಂಬಡಿ ಮಕ್ಕಳು
ಇನ್ನು ಕೂಡು ಋತುಷ್ಯಾಂತಿಯಾಗದ ಸಣ್ಣ ಮಕ್ಕಳ
ನೂರೊಂದು ಜನ ಕರ್ಕಂಡು
ತಮ್ಮ ಹಸುನಿನಲ್ಲಿ ಹಾಲಕರಕ್ಕಂಡೂ
ಆದರೆ ದೊಡ್ಡಾಲಳಕ್ಕೆ ಬಂದೂ
ಆಳವಿದ್ದ ನೀರನ್ನ ತುಂಬಿಕಂಡು
ಹಾಲಳ್ಳದಲ್ಲಿ ಬಿಳಿ ನೀರಿನಾಗಿದೇ
ಹಾಲ್ನಗದೇ ನೀರೆಲ್ಲ ಹನ್ನೆರ್ ಡ್ ಗಂಟೇ
ರಾತ್ರಿಯೊಳಗೆ ಹೆಣ್ಣು ಮಕ್ಕಳಿಗೆ ಬಿಳಿ ಸೀರೆ
ಉಟ್ಟಕ್ಕಂಡು ಬಂದೂ ಆವಾಗ ನೂರೊಂದು
ಕನ್ನಯರ ಚೆಂಬನ್ನ ಪೂಜೆ ಮಾಡಿ
ತಾವು ತಂದಂತ ಹಾಲೆಲ್ಲನು ಆ
ನೂರೊಂದು ಚೆಂಬಗೂ ಉಯ್ಕಂಡು
ಹನ್ನೆರಡು ಗಂಟೆ ಒಳಗೆ ಪೂಜೆ ಮಾಡ್ಕಂಡು
ಅವರು ತಾಳು ಬೆಟ್ಟವ ಬಿಟ್ಟವರೇ
ಸರಣಾರೂ
ಹಾಲರಬಿ ಬಂದೊ
ಗುರುವೇ ತೋಪಿನಲ್ಲಿ ನಿಂದೋ
ಹಾಲರಬಿ ಮ್ಯಾಲೆ ಹೂವಿನ ದಂಡೆ ವಾಲಾಡಿ ಬಂದೊ
ನೂರೊಂದು ಜನ ತಮ್ಮ ಮಕ್ಕಳು
ಒರ್ಸ್ಗಂಡು ತಮ್ಮಡಿಗಳು
ಹನ್ನೆರಡು ಗಂಟೇ ರಾತ್ರಿಯೊಳಗೆ
ಕತ್ತಿ ಪಾವಡದ ಕೊಳದತ್ರ ಬಂದೂ
ಮಂಟಪದಲ್ಲಿ ಕುಳತ್ತಿದ್ದಾರೇ
ಯಾತುಕ್ಕೋಷ್ಕರ ಅಂದ್ರೇ
ಹಿಂದೇ ಕಾರಯ್ಯ ಬಿಲ್ಲಯ್ಯ
ಕತ್ತಿಮ್ಯಾಲೆ ಬಿದ್ದಿದ್ರಲ್ಲ
ಪ್ರಾಣಬಿಡ್ತೀವಿ ಅಂತೇಳಿ ಮಾದಪ್ಪ ಕರ್ಕಂಡೋಗುವಾಗ
ಅದೇ ಕತ್ತಿ ಪವಾಡದ ಕೊಳ
ಅದೇ ರೀತಿಯಾಗಿ ಇವತ್ತು
ಪೂಜಾರಿ ಬಂದು ವರ್ಸುಕ್ಕೆ ಒಬ್ಬೊಬ್ಬ
ಹಾಲರವಿ ತಂದಂತಹ ಮಕ್ಕಳ ಮುಂದ್ಗಡೆ
ಕತ್ತಿ ಪವಾಡದ ಕೊಳದ ಏರಿಮ್ಯಾಲೆ
ಮಂಟಪದ ಮ್ಯಾಲೆ ಎರಡು ಕತ್ತಿ ಮ್ಯಾಲೆ ಹೋಗ್ಲಿ ಬಿಳ್ತಾನೆ
ಆವಾಗ ನಮ್ಮ ಗುರುಗಳು
ತೀರ್ಥ ಇಟ್ಟು ಮ್ಯಾಲೆ ಏಳ್ ಸ್ತಾರೆ
ನೂರೊಂದು ಜನ ಕೊಡಮಕ್ಕಳೂವೆ
ಅಲ್ಲಿ ಹಾಲರವಿ ಇಟ್ಕಂಡು ಕೂತ್ತವರೇ
ಆವಾಗ ಬೆಳಗಾಗುತ್ತಲೇ
ಯಾರೂ ಮಣಿಗಾರ್ರು
ಇವತ್ತು ಮಾದಪ್ನೆಗೆ ಹಾಲರಬಿಯಾಗಬೇಕು ಮಜ್ಜನ
ಸೇವೆಯಾಗಬೇಕು ಅಂತೇಳೀ ಆವಾಗ
ನಮ್ಮ ಮೈಸೂರು ಮೇಲ್ನಾಡ್ನ ಪರ್ಸೆಲ್ಲ ಸೇರುಬುಟ್ಟದೇ
ಆವಾಗ ತಮಟೇವಾದ್ಯ ಛತ್ರಿ ತಕ್ಕಂಡೂ
ದೇವಸ್ಥಾನದ ಜವಾನ್ ಕಳ್ಸಿದ್ದಾರೇ
ಎಲ್ಲಗೆ ಸಾಲೂರು ಮಠಕ್ಕೆ
ಜವಾನ್ರು ಹೋಗಿ ವೀಳ್ಯ ಕೊಟ್ಟ ಮ್ಯಾಲೆ
ಗುರುಗಳು ವೀಳ್ಯಾ ತಕ್ಕಂಡ್ರು
ತಮ್ಮ ಜವಾನರ ಕರ್ಕಂಡು
ಸಾಲಾಗಿ ಬರ್ತಾಯಿದ್ದಾರೇ ಯಾರು ಗುರುಗಳು
ಛತ್ರಿ ಚಾಮರ ಸಮೇತವಾಗಿ
ನಮ್ಮ ದೇವಸ್ಥಾನಕ್ಕೆ ದಯಮಾಡವರೇ
ಗುರುದೇವಾ || ನೋಡಿ ||

ಸಾಲಾಗಿ ದೇವಸ್ಥಾನಕ್ಕೆ ಬಂದ್ರು
ಸಾಲೂರು ಮಠದ ಪ್ರಭು ದೇವರು
ಶಾಂತಮಲ್ಲಿಕಾರ್ಜುನ ಸ್ವಾಮಿ
ಬಂದು ದೇವಸ್ಥಾನವನ್ನು ಬಳಸ್ಕಂಡು
ಮಾಳಗೆ ಮನೆಯತ್ರ ಹೋಗಿ ಕೂತ್ಕತ್ತಾಯಿದ್ದಾರೇ
ಒಂದು ಕುರ್ಚಿ ಮ್ಯಾಗೆ
ಆವಾಗ ಪೂಜಾರಿಗಳು
ಗುರುಗಳೂ ಹೋಗಿ ನಮಸ್ಕಾರ ಮಾಡಿ
ಒಂದು ಹೂವಿನಾರವನ್ನ ಹಾಕಿ
ಗುರುಗಳಿಂದ ಅಪ್ಪಣೆ ಕೇಳ್ತಾರೇ
ಗುರುವೇ ನಿಮ್ಮ ಅಪ್ಪಣೆಯಾದ್ರೇ
ನಮ್ಮ ಬಿರುದು ಬಿಂಕ ತಕ್ಕಂದು
ಕಡಿತಿವಿ ಅಂತಾರೆ
ಹಾಗ್ಲೀ ಹೊರಡ್ರಪ್ಪ ಅಂತ ಸ್ವಾಮಿಗಳೇಳ್ ತ್ತಾರೆ
ಆವಾಗ ತಂಬಡಿ ಮಕ್ಕಳು
ವೀರಗಾಸೆ ಛತ್ರಿ ಚಾಮರ
ಇದು ಅಲ್ಲದೇ
ನೂರೊಂದು ಜನ ಕೊಡ ಮಕ್ಕಳು
ಅಲ್ಲಿ ಹಸ್ದು ಕೂತಿದ್ದಾರೇ
ಜಾಗ್ರತೇಯಾಗಿ ಹೊರಡಿ ಅಂತೇಳೀ
ಎಲ್ಲ ಛತ್ರಿ ಚಾಮರ ಸಹಿತವಾಗಿ
ನಮ್ಮ ಗುರುಗಳು ತಂಬಡ ಗೇರಿಯೊಳಗೆ ಕಡೆದು
ಅವರು, ಕತ್ತಿ ಪವಾಡದ ಕೊಳದ ಹತ್ರಕ್ಕೆ ಬರುತಾವರೇ
ಗುರುದೇವ
ಸುತ್ತಿಗೆ ಸೂರಿಪಾನಿಗಳು
ಗುರುವಿಗೆ ಒಟ್ಟಿನಲ್ಲಿ ತಂಬಡಗೇರಿ
ಎತ್ತಿ ಮೆರೆದರು ಮಾದೇವನ ಹೆಬ್ಬುಲಿಯ ಮ್ಯಾಲೆ
ಸಾಲುಸಾಲಾಗಿ ಯಾವಾಗ ತಂಬಡಗೇರಿಲಿ
ಕಡದ್ರೋ
ಅದರ ಜೊತೆಗೆ
ನೂರೊಂದು ಜನ ತಂಬಡಿಗಳು ಹರಸ್ಕೊಂಡಿದ್ದವ್ರು
ಬಾಯಿಬೀಗ ದೂಪ್ದಾರ್ತಿ ಇಡ್ಕಂಡು
ನಮ್ಮ ಗುರುಗಳು ಮುಂದೇ
ಕತ್ತಿ ಪವಾಡದ ಕೊಳದತ್ತ ಬರುತ್ತಾರೆ
ಆವಾಗ ತಂಬಡಿ
ತಂಬಡಿ ಮಕ್ಕಳೆಲ್ಲಾ
ಮನೆಗೊಂದು ಕಾಯಿ ವಡೆದು ಗದ್ದುಗೆ ಮ್ಯಾಲೆ
ಪೂಜೆ ಮಾಡ್ತಾರೇ
ಎರಡೂ ಕತ್ತಿನೂ ಮಡುಗುಬುಟ್ಟು ಗದ್ಗೇ ಮ್ಯಾಲೆ
ಆವಾಗಲೇ ಪೂಜೆಯಾದ ಮ್ಯಾಲೇ
ಇಬ್ಬರು ಪೂಜಾರಿಗಳು ಕತ್ತಿ ಎತ್ತಿ ಇಡ್ಕತ್ತಾರೆ ಕೈಗೇ
ಆ ಹಸ್ದು ಬಂದಿರ್ತಕ್ಕಂತ ಪೂಜಾರಿ
ಓಡೋಗಿ ಮೂಕಾಡಾಗಿ ಕತ್ತಿಮ್ಯಾಗೆ ಬೀಳ್ತಾನೇ
ಹಿಂದ್ಗಡೆ ಒಬ್ಬ ಕಳಸ ಇಡ್ಕಂಡು
ಅವನ ಬೆನ್ನು ಮ್ಯಾಲೆ ಪಾದ ಮಡ್ಗೀ ಮೂರುಸಾರಿ
ಅಮ್ಕಿ ಹಿಂದ್ಕೇಳಿತಾನ
ಆವಾಗ ನಮ್ಮ ಸಾಲೂರು ಮಠದ
ಪ್ರಭುಸ್ವಾಮಿ ಗುರುಗಳು
ಶಾಂತಮಲ್ಲಿಕಾರ್ಜುನ ಸ್ವಾಮಿ
ಇವತ್ಗೂ ಕೂಡ ಗುರುಗಳು ಸಾಲೂರು ಮಠದ ಗುರುಗಳು
ಪಕ್ಕದಲ್ಲಿ ನಿಂತಿದ್ದು ತೀರ್ಥ ಇಟ್ಟು
ಮ್ಯಾಲ್ಕ ಹೇಳಿಸ್ತಾರೇ ಅವನ
ಹೇಳುಸುಬಿಟ್ಟು ಪೂಜೆ ತಿರ್ಸಕ್ಕಂಡು
ನೂರೊಂದು ಜನ ಹಾಲರಬಿ ಕೊಡ ಮಕ್ಕಳ ಮುಂದೆ
ಬಿಟ್ಕಂಡು
ಸತ್ತಿಗೆ ಸೂರಿಪಾನಿ ಸಹಿತವಾಗಿ
ಅವರು ದೇವಸ್ಥಾನಕ್ಕೆ ಬರುತವರೆ
ಗುರುಗಳೂ || ನೋಡಿ ||
ದೇವಸ್ಥಾನಕ್ಕೆ ಬರುವಾಗ ಹರಕೆ ಮಾಡಿಕೊಂಡಿದ್ದೋರು
ಮೈಸೂರು ಮೇಲ್ನಾಡಿನ ಪರ್ಸೇ
ಮಾದೇಶ್ವರನಿಗೆ
ನಮ್ಮ ಗುರುಗಳು ಪಾದ ದೂಳು ಬಿದ್ದು ಬುಡ್ಲಿ
ಅಂತೇಳಿ
ದಾಟು ಬಿಡ್ತಾರೇ
ದಾಟಿಸ್ಕತ್ತಾರೇ ಕಾಣಿಕೆ ಕೊಟ್ಟು ಬಿಟ್ಟು
ಪಾಪ ಪರಿಹಾರವಗಿಲೀ
ಮಾದಪ್ಪನಂತು ನಮಗೆ ಕಾಣೋಲ್ಲ
ಮಾದಪ್ಪನ ಲಿಂಗ ನೋಡ್ಕತ್ತಿವಿ
ಇವರು ಮಾತ್ನಾಡೋ ದೇವರು
ಯಾರು? ಸಾಲೂರು ಮಠದ ಗುರುಗಳು
ಇವರು ಪಾದ ದೂಳ ನಮ್ಮ ಮ್ಯಾಲಾದ್ರು ಬೀಳ್ಳಿ
ನಮ್ಮ ಕರ್ಮ ಕಳಿಲೀ
ನಮ್ಮ ಪಾಪ ಕಳಿಲೀ ಅಂತೇಳಿ
ಸ್ವಾಮಿಗಳು ಬರ್ತಾಯಿದ್ರೇ
ಎಲ್ಲ ಅಡ್ಲಾಗೀ ಮಲುಗುಬಿಡ್ತಾರೇ
ಸಾಲಾಗಿ
ಕಾಣಿಕೆ ಕೈಲಿಡ್ಕಂಡು
ಗುರುಗಳ ಅಕ್ಕ ಪಕ್ಕದಲ್ಲಿ ಬರ್ತಕ್ಕಿಂತ
ಚಾಕ್ರಿ ಕೈಲೀ ಕಾಣಕ್ಕೆ ಕೊಟ್ಟು ಬುಡ್ತಾರೆ
ಗುರುಗಳು
ಬಲಗಾಲು ಎಡಗಾಲು ಮುಂದಾಗಿ ಮುಂದಾಗಿ
ಹಾಕ್ಕಂಡು ದಾಟ್ಕಂಡು ಹೋಗ್ತಾರೇ
ಹೋಗಿ
ರಾತ್ರಿಏಳುಗಂಟೆಗೆ ಸರಿಯಾಗಿ
ಮುಂದೆ ನೂರೊಂದು ಜನ ಕೂಡ ಮಕ್ಕಳು ಹೋಗಿ
ಇಪ್ಪತ್ಮೂರಕ್ಕಂಣ ಚಪ್ಪರಮಾಳಿಗೆ ಅದಲ್ಲ
ಗರ್ಭ ಗುಡಿ ಮುಂದೆ ಕೂತ್ಕತರೆ ಸಾಲಾಗಿ
ಆವಾಗ ಗುರುಗಳು ದೇವಸ್ಥಾನ ಬಳಸ್ಕಂಡು ಹೋಗಿ
ಮಾದಪ್ಪನ್ನ ಲಿಂಗದ ಪಕ್ಕದಲ್ಲಿ ನಿಂತ್ಕಂಡು
ಮಕ್ಕಳು ತಂದಂತಹ ಹಾಲರಬಿ ಸೇವೆ ಮಾಡ್ತರೇ
ಎಳನೀರು ಮಜ್ಜನ ಮಾಡ್ತರೇ
ಅಭಿಷೇಕ ಮಾಡ್ತರೇ
ಮಾದಪ್ಪ ಅಭಿಷೇಕವಲ್ಲಾ ಆದ ಮ್ಯಾಲೇ ಗುರುಗಳು
ಆವಾಗ ತೆರೆಯನ್ನ ಹಾಕುಬುಟ್ಟು
ಎಳ್ಳು ಮಜ್ಜನ ಮಾಡುಬಿಟ್ಟು
ಆ ಪ್ರಸಾದ ಹಿಂದಕ್ಕೆ ಕೊಟ್ಟು ಬುಟ್ಟು
ನೂರೊಂದು ಜೊತೆ ತಂಬಡಿ ಮಕ್ಕಳು
ಬಿಲ್ವರ್ಚನೆ ಪೂಜೆ ಮಾಡ್ತಾರೇ
ಹೂವನ ಧರಿಸ್ಕಂಡು ಅಲಂಕಾರ ಮಾಡಿ
ಮಾದಪ್ಪನಿಗೆ
ದೀಪಾವಳಿ ತಿಂಗಳು
ಬಾಳ ಐಭೋಗದಲ್ಲಿ ಮಾಡವರೇ
ಗುರುದೇವಾ
ಹೂವಮ್ಮಹೂವೋ
ಇದು ಮಲ್ಲಿಗೇಯ ಹೂವೋ
ಮಾದೇವ
ತಂದೇ ಗುರು ಮಾದೇವರ ಪೂಜೆಗೆ ತಂದರು ಮಲ್ಲಿಗೆಯ

ಲಿಂಗಕ್ಕೆ ಸರಣೂ ಗುರುವಿನ ಜಂಗುಮಕ್ಕೆ ಸರಣೂ
ಮಾದೇವ
ಲಿಂಗಧಾರಣೇ ಮಾಡಿದ ಗುರುವಿನ ಪಾದಕ್ಕೆ ಸರಣೂ
ಮಲೆಗಳ ನೋಡಯ್ಯ
ಮಾದೇವ ಹೊನ್ನೇ ಗಿಡಗಳಾ ನೋಡಯ್ಯಾ
ಮಹದೇವ
ಮಲೆಯಲ್ಲಿರುವ ಮಾದಪ್ಪ ನಿಮ್ಮ
ಐಭೋಗ ನೋಡಯ್ಯ
ಆವಾಗಲೀಗ ನೂರೊಂದು ಜನ ತಮ್ಮಡಿ ಮಕ್ಕಳು
ಸ್ವಾಮಿಯೋರ್ಗೆ ಹಾಲರವಿ
ಧೂಪ್ದಸೇವೆ ಪೂಜೆ ಮಾಡ್ಕಂಡು
ಆವಾಗಲೀಗ ಎಡೆ ನೈವೇದ್ಯ ಮಾಡುಬಿಟ್ಟು
ಅವರು ನೂರೊಂದು ಒಕ್ಕಲು
ತಮ್ಮಡಿ ಮಕ್ಕಳುವೇ
ತಮ್ಮ ತಮ್ಮ ಮಠ ಮನೆಗೆ ಹೋಗ್ಬುಡ್ತಾರೇ
ಆವಾಗಲ್ಲೇ ಪರ್ಸೆ ಗಣಂಗಳು
ಕಾಸ್ನ ಧೂಪ ಹಾಕಿ ಕರ ಎತ್ತಿ ಕೈ ಮುಗಿದು
ಆವಾಗಲೀಗ ಮೈಸೂರು ಮೇಲ್ನಾಡಿಗೆ ಹೊರಟಿದ್ದಾರೆ
ಈ ಕಡೇತಮ್ಮಡೀ ಮಕ್ಕಳು
ಬೆಳಗಾಗುತ್ತಲೇ
ಎಲ್ಲಾ ನಾಡಿನ ಪರುಸೇ ಬಂದೂ
ದೇವಸ್ಥಾನದಲ್ಲಿ ಪೂಜೆ ನೈವೇದ್ಯ ಆಯ್ತು
ಮಾದಪ್ಪನಿಗೆ ನಿತ್ಯ ಪೂಜೆ ಮಾಡಬೇಕಾದ್ರೇ
ತಮ್ಮಡಿ ಮಕ್ಕಳು ಅಗ್ನಿ ವಳಗೇ ಒತ್ಕಂಡು
ಅಗ್ನಿ ತಪ್ಪಲೇಲೀ ಅಗ್ನಿ ಜಾವ
ಹೊತ್ತು ಮೂಡುವತ್ನಲ್ಲಿ ಮಾದೇಶ್ವರನ
ಕೂಗ್ತಾಯಿದ್ದಾರೆ
ಕಾ ಕೋಳಿ ಕೂಗಾಲೀ ಗುರುವೇ
ಲೋಕವೆಲ್ಲ ಬೆಳಕಾದವೂ
ಕಾ ಕೋಳಿ ಕೂಗಿದ ಮ್ಯಾಲೆ ಲೋಕವೆಲ್ಲ
ಮೇರೆ ದಾವೊ
ಹಗ್ಗಾರೀ ತಂದವನೇ ಕಾರ‍ಯ್ಯ
ಮಧ್ಯಾಹ್ನ ಮಾಡೇಳೀ ಮಾದೇವ
ಪುಷ್ಮ ತಂದವರೇ ಬಿಲ್ಲಯ್ಯ ಶಿವಪೂಜೆ ಮಾಡೇಳಿ
ಪಾಲಿಸಯ್ಯ ಗುರುವೇ ಮಾದೇವ
ಪಾಲಿಸಯ್ಯ ಗುರುವೇ
ನಿಮ್ಮ ಮುಂಡೆ ಮ್ಯಾಗಳ ಮಧ್ಯಾಹ್ನದೂವ
ಪಾಲಿಸಯ್ಯ ಗುರುವೇ
ತಮ್ಮಡೀ ಮಕ್ಕಳು
ಆವಾಗ ಮಾದಪ್ಪನ ದೇವಸ್ಥಾನದ ಬಾಗಲು ತೆಗ್ದು
ಮಾದಪ್ಪನ ಕೂಗ್ತಾಯಿದ್ದಾರೇ
ನಿಮ್ಮ ಮುಂಡೇ ಮೇಲೆ ಪೂಜೆ ಮಾಡಿರುವಂತ ಹೂವನ್ನು
ಕೊಟ್ಟು ಬಿಡಪ್ಪ
ನಾವು ಹೊಸದಾಗಿ ಪೂಜೆ ಮಾಡ್ತಿವಿ
ಬೆಳಗೆ ಬಂದಿದ್ದೀವೀ ಅಂತೇಳಿ
ಮಾದಪ್ಪನಿಗೆ ನಮಸ್ಕಾರ ಮಾಡಿ
ಆವಾಗಲೀಗ ಮಂಡೆ ಮೇಲಿರುವ ಹೂವನ್ನು ತೆಗೆದು ಬಿಟ್ಟು
ಅಗ್ನಿಯನ್ನೆ ಎರೆದುಬಿಟ್ಟು ತಮ್ಮಡಿ ಮಕ್ಕಳು
ವಿಭೂತಿ ಧಾರ‍ಣೆಯನ್ನ ಮಾಡಿ
ಮಾದಪ್ಪನಿಗೇ
ಹಾಲುಮಜ್ಜನ ಎಳನೀರ್ ಆಯ್ಯ
ಎಳನೀರು ಮಜ್ಜನ ಶಿವನಿಗೇ
ಎನ್ನೊಡೆಯ ಮಾದಪ್ಪ ನಿಮಗೆ
ಎಣ್ಣೇಲಿ ಮಜ್ಜನವೋ
ಬಂಡಳ್ಳಿ ಬಸವಣ್ಣನವರೂ
ಮುಂದು ಮುಂದೆ ಶೇಷಣ್ಣನವುರೋ
ಮಹದೇವ ಮಹದೇವ
ಮುಂದಲ ಪೂಜೆ ಮಾಡೆಳಿ ಗುರುವೇ
ನಾಗುಭೂಷಣಕೆ
ಹಾಲು ಮಜ್ಜನವನು ಮಾಡಿ
ತುಪ್ಪದಲ್ಲಿ ಅಭಿಷೇಕವನ್ನು ಮಾಡಿ
ಮಹದೇಸ್ವರನಿಗೇ ಮೊಸರಿನಲ್ಲಿ ಅಭಿಷೇಕವನ ಮಾಡಿ
ಆವಾಗ
ಪಂಚಾಮೃತ
ದ್ರಾಕ್ಷಿ ಕರ್ಜೂರ ಜೇನುತುಪ್ಪ
ಆವಾಗಲೀಗ ಪಂಚಾಮೃತದಲ್ಲಿ
ಅಭಿಷೇಕವನ್ನ ಮಾಡಿ ಮಾದಪ್ಪನಿಗೆ
ಕಟ್ಟ ಕಡೆಯಲ್ಲಿ ಎಳ ನೀರು ಮಜ್ಜನವನ್ನು ಮಾಡಿ
ಆವಾಗಲೀಗ ಗುರುಗಳು ಬಂದು ನಿಂತ್ಗಂಡು
ಸ್ವಾಮಿಯವರಿಗೆ ಎಳನೀರಿನ ಮಜ್ಜನ
ಮಾಡಿ ಬೆಡ್ತಾಯಿದ್ದಾರೇ
ಮಜ್ಜನ ಮಾಡಿದ ಮ್ಯಾಲೆ
ಹೂವು ಬಿಲ್ವಪತ್ರೆಯನ್ನ ಧರಿಸಿಕ್ಕಂಡು
ಮಾದಪ್ಪನಿಗೆ ಆವಾಗ ತಮ್ಮಡಿ ಮಕ್ಕ
ಆಯ್ಯ ಕಾಯಿ ಒಡೆದು ಕರ್ಪೂರ ಅಚ್ಚಿ
ಕಾರಯ್ಯ ಬಿಲ್ಲಯ್ಯ ದೇವರಿಗೆ
ಬಾಳೆಹಣ್ಣು ಸಕ್ಕರೆ ಪೂಜೆ
ಶೇಷಣ್ಣ ಸಕ್ಕರೆ ಪೂಜೆ
ಶೇಷಣ್ಣ ಒಡೆಯರಿಗೆ
ಬೆಳ್ಳಿಯ ತಟ್ಟೆಲೀ ಭಿನ್ನವ ತಂದವರೇ
ಕೊಂಗಳ್ಳಿ ಮಲ್ಲಣ್ಣನಿಗೇ
ಮರಳಿ ಬಂದ ಮಾದಪ್ಪ ನಿನಗೆ ನೆರಳಲ್ಲ ಗದ್ದಿಗೆಯೋ
ಮಾದೇಶ್ವರನಿಗೇ
ತಾಂಬೂಲ ವೀಳ್ಯ ಮುರುದು
ಹಣ್ಣನು ಮುರುದು ಕಾಯನು ವಡದೂ
ಕರ್ಪೂರವನ್ನು ಅಸ್ಸಿ ಪೂಜೆ ಮಾಡುಬುಟ್ಟು
ಮಾದಪ್ಪನ ಕೂಗ್ತಾಯಿದ್ದಾರೇ
ತಮ್ಮಡಿ ಮಕ್ಕ
ಕರದಾರೂ ಬರನೊಲ್ಲೊ ಆಯ್ಯ ಕೈಯೆತ್ತಿ ಮುಗಿದಾರೋ
ಬರನೊಲ್ಲೋ
ಮಾದೇವ
ಕರದಾರೂ ಮಾದೇವ ಎದ್ದು ಬರನಲ್ಲೋ
ಅಂಗೈಲಿ ಆಧಾರ‍ಮುಂಗೈಲಿ ಜೋಳಿಗೆ
ನಮ್ಮ ಲಿಂಗಯ್ಯ ದಯ ಮಾಡವರೇ
ಮಹದೇವ ಮಹದೇವ
ವರಗವರೆ ಶಿವಲಿಂಗಯ್ಯ ನಡು ಗೋಪುರದ ಮ್ಯಾಲೆ
ಸತ್ಯವಂತರ ಮನೆಯ ಒಳಗೆ ಗುರುವೇ
ಎತ್ತುವೆವು ನಿಮ್ಮ ಶಿವನುಡಿಯ
ಮರಳಿ ಬಂದ ಮಾದಪ್ಪ ನಿಮಗೆ ನೆರಳಲ್ಲಿ ಗದ್ದುಗೆಯು
ಹಾಲು ಹಣ್ಣಿಗೆ ಬಂದವರೇ ಗುರುವೇ
ನಾವಿಗ ನಿಜವಾ ಕಲಿತವರೇ
ಮುಂದಲ ಪೂಜೆ ಮಾಡುವರೇ ಗುರುವೇ ನಾಗಭೂಷಣಕೆ
ಬಡಗಾಲನಾಡಿಗೆ ಬಂದವರೇ
ಮಾದೇವ ಗಡಿಗಡಿಗೆ ವಕ್ಕಲು ಪಡೆದವರೇ
ನೀಲಗಿರಿಯ ನಿಜಭಕ್ತರು ಮನೇಲಿ
ಲೋಲಕಾರು ದೇವ
ಸೀಗೆತಾಳಲಿ ಶಿವನಂತೆ
ಸರಗೂರು ಬೆಟ್ಟಕ್ಕೆ ಬನ್ಯಪ್ಪ
ಲಿಂಗಕ್ಕೆ ಪೂಜೆ ಮಾಡವನೀ ಗುರುವೇ
ನಾಗಭೂಷಣಕೆ
ಮಾಯ್ಕಾರ ಗಂಡ ಮಾದಪ್ಪನಿಗೆ
ಆವಾಗಲೀಗ ಪೂಜೆ ನೈವೇದ್ಯವನ್ನು ಮಾಡಿ
ನೂರೊಂದು ಜನ ತಮ್ಮಡಿ ಮಕ್ಕಳು
ಕಟ್ಟ ಕಡೆಯಲಿ ನಿಂತ್ಕಂಡು ಪಂಚಾರ್ತಿ ಮಂಗಳಾರ್ತಿಯನ್ನು
ಮಾಡ್ತಾಯಿದ್ದಾರೆ