ಏಳುಮಲೆ ಕೈಲಾಸಕ್ಕೆ ಹಿಂತಿರುಗಾ ಹೋದರು ಮಾದೇವ
ಆವಾಗಲೇ ಬೇಡರ ಕಣ್ಣಪ್ಪ
ಕಾರಯ್ಯ ಬಿಲ್ಲಯ್ಯ
ಅಲಂಬಾಡಿ ಬಸವಣ್ಣ
ಒಂಟ್ ಜಡೆ ಶೇಷಣ್ಣ ಎಲ್ಲಾ ಓಡಬಂದ್ರು
ಮಹಾದೇವ ಬರ್ತಾ ಇದ್ದಾರೆ
ಮಾದಪ್ಪ ಎಳ್ಳು ಹೊತ್ಕಂಡು ಬಂದಿರಬಹುದು
ನೋಡಾಬೇಕಲ್ಲ ಅಂತ ಓಡ್ ಬಂದ್ರು
ಬರಿಜೋಳ್ಗೆ ಬಸ್ಮ ತುಂಬದೆ
ಎಲ್ಲಿ ಗುರುವೆ ಎಳ್ಳು ಅಂದ್ರು
ಅಯ್ಯೋ ಮಕ್ಕಳೆ
ಅ ಬೇವಿನ ಕಾಳಮ್ಮ
ನನಗೆ ಒಕ್ಲಾದಳ
ಆ ಮುಂಡೆಮಗಳು ಅಂಕಾರ ಪಟ್ಟುಬುಟ್ಟಳು
ದಾಸಯ್ಯನಿಗೆ ಧರ್ಮವಿಲ್ಲ
ಭೀಮನಿಗೆ ಭಿಕ್ಷವಿಲ್ಲ
ಜಂಗುಮಯ್ಯನಿಗೆ ಕ್ವಾರಣ್ಯವಿಲ್ಲ
ಕೆಟ್ಟ ಮುಂಡೆಮಗಳು
ಆದರೆ ಆ ಜೀನಮುಂಡೆ ಮಡಗಬಾರ್ದು ಅಂತೇಳಿ
ಬೇಕಾದಷ್ಟು ಧರ್ಮದಲ್ಲಿ ಕೇಳ್ದಿ
ಅವಳು ನನಗೆ ಭಿಕ್ಷೆ ಕೊಡ್ದೆ ಹೋದಳು
ಏಳೇಳದಿನಾಲ್ಕು ಹಟ್ಟಿಯನ್ನ
ನಡೆಯುವವರಿಗೆ ದಾರಿ ಆಗಲಿ ಅಂತ
ಕಟ್ಟ ಕಡೆ ಒಳಗೆ ಅದೇ ರೀತಿಯಾಗಿ ಬೇಯ್ಸಿಬುಟ್ಟು ಬಂದಿವ್ನಿ
ನಡೆಯೋಕೆ ದಾರಿ ಮಾಡಿ ಬುಟ್ಟು
ಕಾರಯ್ಯ
ಕೋಲುಮಂಡೆ ಕಾರಯ್ಯ
ಇವಾಗಲಾದ್ರು ನೋಡಪ್ಪ
ಈ ನಾಕು ರಾಜ್ಯದಲ್ಲಿ ಎಲ್ಲಾದ್ರು ಇದ್ರೆ ಭಕ್ತರು
ಗಂಡ ಹೆಂಡಿರು ಒಂದು ನಿಜ ಇರಬೇಕು
ತರಿಗೆಂಡದಲ್ಲಿ ತಳಿಗೆ ಆಗಬೇಕು
ಅಚ್ಚಳೆಲ್ಲಿ ಮಜ್ಜನವಾಗಬೇಕು
ಈ ಬ್ಯಾಡಕಂಪಣದ ಮಲೆಯೊಳಗೆ
ನನ್ನ ಯಾರೂ ಕೂಡ ಮಾದೇವ ಅಂತೇಳಿ
ಮುಟ್ಟಿ ಪೂಜೆ ಮಾಡೋರಿಲ್ಲ
ಈ ಬೇಡಗಂಪಣದವರ್ಗೆ ಪೂಜೆನೈವೇದ್ಯ ಗೊತ್ತಿಲ್ಲ
ಮರಾಳೆ ಎಣ್ಣೆ ಮುಂದೆಗೊತ್ತಿದ್ದಾರೆ
ಉಚ್ಚಾಳೆಣ್ಣೆ ನೆತ್ತಿಗೊತ್ತಿದ್ದಾರೆ
ಕಣ್ಣು ಕಾಣುವುದಿಲ್ಲ ಕಿವಿ ಕೇಳುವುದಿಲ್ಲ ಕಂದಾ
ಈ ಬರಗನಕ್ಕಿ ಎಡ ಉಣ್ಣುವುದಕ್ಕೆ ಸಾಧ್ಯವಿಲ್ಲ
ಬೂದು ಬಾಳೆ ಹಣ್ಣು ನೋಡಿ
ವಾಂತಿ ಬರ್ತಾ ಇದೆ ಕಂದಾ
ನೀನು ದೃಷ್ಟಿ ಇಟ್ಟು ನೋಡಪ್ಪ ಕಾರಯ್ಯ
ಗುರುವೇ ಗುರುಪಾದವೇ ನನ್ನಪ್ಪಾಜಿ
ನಮ್ಮಿಂದ ಸಾಧ್ಯವಿಲ್ಲ ಗುರುವೆ
ನಾವು ನೀವು ಬರೋವರ್ಗುವೆ
ಏಳುಮಲೆ ಕೈಲಾಸದಲ್ಲಿ
ಸಂತೋಷವಾಗಿ ದೂಪ ನೈವೇದ್ಯ ಮಾಡ್ಕಂಡಿರ್ತಿವಿ ಪೂಜೆಯ
ನೀವೆ ನೋಡ್ ಕಂಡು ಬನ್ನಿ ಗುರು ಅಂದ್ರು
ಆಗಾದ್ರೆ ಕಂದಾ
ನಾನು ಮೈಸೂರು ಮೇಲ್ ನಾಡ್ಗೋಗ್ತಿನಿ
ಪೂರ್ವ ಭಾಗಕ್ಕೆ ಹೋಗೋಣ ಅಂದರೇ
ಬರಿ ತಮಿಳು ಜನ ಅವರ ಮಾತು ನನಗೆ ಗೊತ್ತಿಲ್ಲ
ಇನ್ನು ತಂಕ್ಲಾಲಗ್ ಹೋಗೋಣ ಅಂದ್ರೆ
ಅದೂ ಕೀಳ್ ನಾಡು ನನಗೆ ಗೊತ್ತಿಲ ಅವರ ಮಾತು
ಬಡಗ್ಲಾಗೋಗೋಣ ಅಂದ್ರೆ ಬರಿ ರೆಡ್ಡಿಗ್ರು
ಅವರ ಮಾತು ಗೊತ್ತಿಲ್ಲ
ಪಡ್ಲಾಗ್ ಹೋಗ್ತಿನಿ ಕಣಫ್ಫ
ನನ್ನ ಮೈಸೂರು ಮೇಲ್ ನಾಡ್ನ ನೋಡ್ತಿನಿ
ನನ್ ಸಮದ್ ದೇವ್ರಿದ್ದಾರೆ
ಯಾರೆಂದರೆ
ಮೇಳು ಕೋಟೆ ಚಲುವರಾಯ
ತಿರುಪತಿ ವೆಂಕ್ಟರಮಣಸ್ವಾಮಿ
ಬಿಳಿಗಿರಿ ರಂಗಸ್ವಾಮಿ
ಮಧ್ಯೆ ಬಾಗದಲ್ಲಿ ಮುದ್ಕು ತೊರೆ ಮಲ್ಲಣ್ಣ
ಅವರನ್ಯಾರಾದ್ರೂ ಹೋಗಿ ನೋಡಿ
ಅವರ ಒಕ್ಕಲಿನಲ್ಲಿ ಒಂದು ವಕ್ಕಲ ಪಡ್ಕಂಬರ್ತಿನಿ ಅಂತ ಮಾದಪ್ಪ
ಇವರೈದ್ ಜನ ಋಷಿಗಳಿಗೆ ಹೇಳಿಬುಟ್ಟು
ಮುತ್ತಿನ ಜೋಳಿಗೆ ಧರಸ್ಗಂಡು
ತುಂಬಿದ ಸೋಮವಾರ
ಮಾದಪ್ಪ ದಂಡಗೋಲು ಹಿಡ್ಕಂಡು

ಅವರು ಪಡವಲ ರಾಜ್ಯಕ್ಕೆ ಬರುತವರೆ ಮಹಾದೇವ || ನೋಡಿ ನಮ್ಮ ಶಿವನಾ ||

ಪಡವಲ ರಾಜ್ಯಕ್ಕೆ ಎಲ್ಲಿಗೆ ಬಂದ್ರು ಮಾಡಪ್ಪ ಅಂದರೆ
ಪತ್ರಗಣ್ಣೆಲಿ ನಿಂತಕಂಡು ನೋಡಿದ್ರು
ಮೊದಲಾಗಿ ಮೊಟ್ಟ ಮೊದ್ಲು ಸಿಕ್ಕಬೇಕಾದ್ರೆ
ಮಡಕ್ ತೊರೆ ಕೈಲಸದಲ್ಲಿ
ಮಲ್ಲಿಕಾರ್ಜುನಸ್ವಾಮಿ
ಆ ಮಲ್ಲಿಕಾರ್ಜುನಸ್ವಾಮಿ ಕೇಳಬುಟ್ಟು
ಅನಂತ್ರವಾಗಿ ಅಲ್ದರೆ ತಿರುಪತಿ ವೆಂಕಟ್ರೋಣಸ್ವಾಮಿ ದಂಡಾಕೋಗೋಣ
ಇಲ್ದೆ ಇದ್ರೆ ಮೇಲುಕೋಟೆ ಚಲುವರಾಯ
ಕನ್ನಂಬಾಡಿ ಚಿನ್ನಾಗೋಪಾಲರಾಯ
ಬಿಳಿಗಿರಿ ರಂಗಸ್ವಾಮಿ ತೆಂಕಲದಿಕ್ಕಿನಲ್ಲಿದ್ದಾರೆ
ಆಮೇಲೋಗೋಣ
ಮೊದಲು ಮುಡುಕ್ ತೊರೆ ಮಲ್ಲಣ್ಣನ ವಿಚಾರಿಸೋಣ ಅಂತೇಳೀ

ಅವರು ಮುಡುಕ್‌ತೊರೆ ಕೈಲಾಸಕ್ಕೆ ಬರುತವರೇ ಮಹಾದೇವ || ನೋಡಿ ನಮ್ಮ ಶಿವನಾ ||

ಮುಡುಕ್ ತೊರೆ ಕೈಲಾಸಕ್ಕೆ ಬಂದ್ರು ಮಾದಪ್ಪ
ಆವಾಗ ಪಾರ್ವತಿ ಪರಮೇಸ್ವರ
ಮಲ್ಲಿಕಾರ್ಜುನ ಸ್ವಾಮಿ
ಬಾಗಲ್ಲಿ ಹೋಗಿ ನಿಂತ್ಕಂಡು ನೋಡಿದ್ರು ಕಡೆಬಾಗಲ್ಲಿ
ಪಟ್ಟೆ ಮಂಚದ ಮೇಲೆ ಪಾರ್ವತಿ ಅಮ್ಮಯ್ಯ
ಮಲ್ಲಿಕಾರ್ಜುನ ಸ್ವಾಮಿ
ಸಂತೋಷದಲ್ಲಿ ಪೂಜೆ ತೀರಸ್ಗಂಡು
ದಾಳ ಪಗಡೆ ಆಡ್ತ ಇದ್ರು ಪಟ್ಟೆ ಮಂಚದ ಮೇಲೆ
ಮಾದಪ್ಪ ಬಗ್ಗಿನೋಡುಬುಟ್ರು
ಇವತ್ತು ದಂಪತಿಗಳು ಸಂತೋಷದಲ್ಲಿ ಪಗ್ಡೆ ಆಡ್ತ ಅವರೆ
ನಾನು ಹೋಗಿಬುಟ್ರೆ ಇವರು ಪಗಡೆ ಬುಟ್ಟುಬುಡ್ತಾರೆ
ಇವರ ಪಗಡೆ ಆಟಕೆ ನಾನು ಭಿನ್ನ ಮಾಡಿದ ಅಪ್ಪಂದವಾಗ್ತದೆ
ಇವರ ಆಟವೆಲ್ಲ ಮುಗ್ದೋಗ್ಲಿ ಅಂತೇಳಿ
ಹೊಲ ಕೆರಗೋದ್ರು ಮಾದಪ್ಪ
ಹೊಳಕೆರೆ ಒಳಗೆ
ಹುಲ್ಲೆ ಚರ್ಮ ಹಾಸಿಬಿಟ್ಟು
ಹುಲಿಚರ್ಮ ಉಟ್ಗಂಡು
ನಾಲ್ಕು ಮೂಲ್ಗ ನಾಲ್ಕು ಈಭೂತಿ ಗಟ್ಟಿ ಮಡ್ಗ್ ಬುಟ್ಟು
ಇಬೂತಿ ಗಟ್ಟಿ ಮಡ್ಗಬಿಟ್ಟು ಉಲ್ಲೆ ಚರ್ಮದ ಮೇಲೆ
ಈ ಅಡಕೆ ಎಲೆ ತಾಂಬೂಲವನು ಮಡಗಿ
ತಾಂಬೂಲದ ಮೇಲೆ ಇಂಬಿ ಹಣ್ಣು ಮಡ್ಗಿ
ಇಂಬಿಹಣ್ಣ್ ಮೇಲೆ ಚೂಚಿ ನಿಲ್ಲಿಸಿಬುಟ್ಟು

ಅವರು ಉಗ್ರ ತಪಸ್ಸಿಗೆ ನಿಂತವರೇ ಮಾಯ್ಕಾರಾ || ನೋಡಿ ನಮ್ಮ ಶಿವನಾ ||

ಮಾದೇಶ್ವರ ಯಾವಾಗ ಹೊಳಕೆರೆ ಒಳ್ಗೆ ತಪಸ್ಸಿಗೆ ನಿಂತ್ಕಂಡ್ರೋ
ಇವರ ಉಗ್ರ ತಪಸ್ಸಿನ ಜ್ವಾಲೆ
ಕೈಲಾಸಕ ಅರವಾಗ್ಬುಡ್ತು ಎಲ್ಲಿ ಮುಡುಕ್ ತೊರೆ ಕೈಲಾಸಕ್ಕೆ
ಪಾರ್ವತಿ ಪರಮೇಶ್ವರ ಆಡ್ತ ಇದ್ದಂತ ಪಗ್ಡೆ
ಚಟಾ ಪಟ್ನ ಸಿಡ್ದ್ ಬುಟ್ಟೊ ಅಲ್ಲೇ
ಓಹೋ ಪರಮೇಶ್ವರ ಎದ್ದು ನೋಡಿದ್ರು
ಪಾರ್ವತಿ ನಾವು ಉಟ್ದಕಾಲ್ದಿಂದ್ಲೂ ಇಲ್ವಲ್ಲ
ಮುಡುಕ್ ತೊರೆ ಕೈಲಾಸಕ್ ಬಂದು ನೆಲೆ ಮಾಡ್ದ್ ಕಾಲ್ಕಾಲ್ವಲ್ಲ
ನಮ್ಮ ಪಗಡೆ ಹಾರ್ ಬುಡ್ತಲ್ಲ
ಇದು ಯಾರ ಶಾಪ ಇರಬಹುದು
ಯಾರೋ ಬ್ರಹ್ಮಚಾರಿಗಳು
ಮಹಾ ಮುನಿಗಳು
ಜಂಗಮರು ಬಂದು ತಪಸ್ಸು ಮಾಡಬಹುದು
ಇಲ್ಲ ಅವರೇನಾದ್ರು ಶಾಪ ಹಾಕಿರಬಹುದು
ನೋಡೋಣ ಬಾರೋ ಪಾರ್ವತಿ ಅಂತೇಳಿ
ಪಾರ್ವತಿ ಅಮ್ಮಯ್ಯನ ಕರಕಂಡು ಮಲ್ಲಣ್ಣ
ಕಡೆ ಬಾಗಿಲಿಗೆ ಅಂದು

ಅವರು ಲಾಲಿಸಿ ನೋಡವರೆ ಮಲ್ಲಣ್ಣ || ನೋಡಿ ನಮ್ಮ ಶಿವನಾ ||

ಬಾಗಲಲಿ ನಿಂತ್ಕಂಡು ಪಾಡ್ಲಾಗಿ ನೋಡುದ್ರು ಹೊಳಕೆರೆ
ಹೊಳಕೆರೆ ಒಳ್ಗೆ ಕಾವಿಬಟ್ಟೆವ್ರು
ಕಿಡಗಣ್ಣು ಕಿಚ್ಚಗಣ್ಣ
ಉತ್ತರ ದೇಶದ ಮಾಯ್ಕಾರ
ಮಾಯ್ಕಾರಗಂಡ ಮಾದಪ್ಪ
ಏಳುಮಲೆ ಕೈಲಾಸದಿಂದ ಬಂದಿದಾನೆ ಪಾರ್ವತಿ
ಮಾದೇಶ್ವರನಿಗೆ ಏನು ಕಷ್ಟ ಇದ್ದದೋ
ನಾನಿರೋದಿಲ್ಲ ಅಲ್ಲಿ
ಅಖಂಡಮಯಿಯಾಗ್ತಿನಿ
ಅಲ್ಲಮ ಪ್ರಭುವಾಗ್ತಿನಿ ಅಂತೇಳಿ
ತಾವು ಹೋಗಿ ನೆಲ್ ಗೊಂಡಿದ್ದರು
ಇವತ್ತು ಬಂದು ಹೊಳೆ ಕರೆ ಒಳಗೆ ತಪಸ್ಸು ಮಾಡ್ತಾವರೆ
ಪಾರ್ವತಿ ಏನು ಕಷ್ಟ ಇದ್ದದೋ ನಡೆ ಅಂತೇಳಿ
ಪಾರ್ವತಿ ಮಲ್ಲಣ್ಣ ಮಾತಾಡ್ಕಂಡು

ಅವರು ಹೊಳೆಯ ಕೆರೆಗೆ ಬರುತವರೇ ಮಲ್ಲಣ್ಣ || ನೋಡಿ ನಮ್ಮ ಶಿವನಾ ||

ಹೊಳಕೆರೆಗೆ ಬಂದು
ಮಲ್ಲಣ್ಣ ಗುರುವೆ
ಗುರುಪಾದವೆ ಮಾಯ್ಕಾರ ಗಂಡಾ
ದೀರ್ಘ ದಂಡವಾಗಿ ಶರಣು ಶರಣಾರ್ಥಿ ಎಂದರು
ಮಲ್ಲಣ್ಣ ನಿನಗೆ ವಿಜಯವಾಗಲಿ ಜಯವಾಗಲಿ
ಪಾರ್ವತಿ ಅಮ್ಮಯ್ಯ ದೀರ್ಘದಂಡ ನಮಸ್ಕಾರ ಮಾಡ್ದಳು
ಅಮ್ಮ ಪಾರ್ವತಿ
ನಿನಗೆ ಮುತ್ತೈದೆ ಸ್ಥಾನ ಚಿರಂಜೀವಿಯಾಗಲಿ
ಏನಪ್ಪ ಗುರುವೆ
ಈ ಹೊಳಕೆರೆಗೆ ಬಂದು
ನಮ್ಮಂತವರಿಗೆ ಕೊಲೆ ಕೊಡಬೇಕು ಅಂತೇಳಿ
ಉಗ್ರ ತಪಸ್ಸು ಮಾಡಿಯಪ್ಪ ತಪಸ್ಸನ್ನು ಬಿಡಪ್ಪ ಅಂತಂದ್ರು ಪಾರ್ವತಿ
ಅಮ್ಮ ನನ್ನ ಕಷ್ಟ ನೀವು ಪರಿಹಾರ ಮಾಡಿರ್ಯ ಅಂದ್ರು
ಅಯ್ಯೋ ಗುರುವೆ
ನಿನಗೇನಪ್ಪ ಅಂತ ಕಷ್ಟ
ಕರಿಜಾತಿ ಕಣ್ಣೆತ್ತಿ ನೋಡುವುದಿಲ್ಲ
ಹೆಣ್ಣು ಮಣ್ಣು ಬೇಕಾಗಿಲ್ಲ ನಿನಗೆ
ಅಂತೇಳಿ ತೊರ್ದು ಹೋದಿಯಲ್ಲಪ್ಪಾ
ನಿನಗೆ ಏನುಬೇಕಪ್ಪ ಅಂದ್ರು
ಹಾಗಲ್ಲಾ ಪಾರ್ವತಿ ಅಮ್ಮ
ಎಣ್ಣು ಜಂಗುಮನಾಗೋದು ಉಂಟಾ
ಕ್ವಾಣ ಬಸವನಾಗೋದು ಉಂಟಾ ಕಂದಾ
ನಮ್ಮ ಕಷ್ಟ ಪರಿಹಾರ ಮಾಡಿರ್ಯ ಅಂದ್ರು
ನಿಮ್ಮ ಕಷ್ಟ ಬಿಡುಗಡೆ ಮಾಡ್ತಿವಿ ನಾವು
ನಿನ್ನ ತಪಸ್ಸು ಬಿಡಪ್ಪ ಅಂತೇಳಿ

ಅವರು ಕೈ ಮುಗುದು ನಿಂತವರೆ ಮಲ್ಲಣ್ಣ || ನೋಡಿ ನಮ್ಮ ಶಿವನಾ ||

ನನ್ನ ಕಷ್ಟ ಪರಿಹಾರ ಮಾಡ್ದ ಮೇಲೆ
ನಾನು ತಪಸ್ಸು ಬಿಡ್ತಿನಿ ಅಂತೇಳಿ
ಮಾದಪ್ಪ ಒಂಟ್ ಕಾಲ ತಪಸ್ಸಿಗೆ ನಿಂತಿದ್ರೂ ಚೂಚಿ ಮ್ಯಾಲೆ
ತಪಸ್ಸನ್ನೆ ಬಿಟ್ಟು ಇಳಿದುಬಿಟ್ಟು
ಆವಾಗ ತಾಂಬೂಲ ಇಂಬಿ ಹಣ್ಣು ಚೂಜಿ
ಎಲ್ಲವನ್ನು ಗೋರಿ ತನ್ನ ಜೋಳಿಗೆಯೊಳಗ್ಲೆ ಇಟ್ಟುಕಂಡು

ಮಾಯ್ಕಾರ ಗಂಡ ಮಾದಪ್ಪಾ
ಮುಡುಕುತೊರೆ ಮಲ್ಲಣ್ಣ ಪಾರ್ವತಿ ಮಾತನ್ನ ಕೇಳಿ
ತಪಸ್ಸನ್ನ ಬಿಟ್ಟು
ತಮ್ಮ ಇಳ್ಯ ತಾಂಬೂಲ ಎಲ್ಲ ಎತ್ಕಂಡು
ಇಂಬಿ ಹಣ್ಣು ಚೂಜಿ ಎತ್ಕಂಡು
ಉಲ್ಲೇಚರ್ಮ ಇಬೂತಿಗಟ್ಟಿ ಎತ್ಕಂಡು
ತನ್ನ ಜೋಳಿಗೆ ಒಳಗೆ ಇರಿಸಿಕಂಡು

ಅವರು ಮುಡುಕುತೊರೆ ಕೈಲಾಸಕ್ಕೆ ಬರುತವರೇ ಮಹಾದೇವ || ನೋಡಿ ನಮ್ಮ ಶಿವನಾ ||

ಹೊಳೆಕೆರೆಯನ್ನ ಬಿಟ್ಟು ಮುಡುಕುತೊರೆ ಕೈಲಾಸಕೆ ಬಂದು
ಪಟ್ಟೆ ಮಂಚದ ಮೇಲೆ ಕೂತಕಂಡು
ಮಲ್ಲಣ್ಣ ಪಾರ್ವತಿ ಮಾದೇಶ್ವರ ಒಂದು ಕಡೆ ಕೂತ್ಕಂಡು
ಏನಪ್ಪ ಮಾದೇವ
ನಿನಗೆ ಏನು ಕಷ್ಟ ಬಂದಿದ್ದು ಅಂದ್ರು
ಏನು ಕಷ್ಟವಿಲ್ಲ ಪಾರ್ವತಿ ಪರವೇಸ್ವರ
ನನ್ನ ಏಳುಮಲೆ ಕೈಲಾಸದಲ್ಲಿ
ಇರತಕ್ಕಂತವರೆಲ್ಲ ಬೇಡ ಗಂಪಣದವರು
ಅವರಿಗೆ ಪೂಜೆ ನೈವೇದ್ಯ ಒಂದೂ ಗೊತ್ತಿಲ್ಲ
ನಮ್ಮ ಸಾಲೂರು ಮಠದ ಗುರುಗಳು ಬಂದು
ಶಾಂತ ಮಲ್ಲಿಕಾರ್ಜುನಸ್ವಾಮಿ
ಎಳನೀರ ಮಜ್ಜಣ ಮಾಡ್ತಾರೆ ಹಾಲು ಮಜ್ಜಣ ಮಾಡ್ತಾರೆ
ಅಭಿಷೇಕ ಮಾಡಿ ಪೂಜೆ ಮಾಡ್ಕಂಡು ಹೋದಮೇಲೆ
ಈ ಬೇಡಗಂಪಣ್ಣದೋರು ಬಂದು ನನ್ಗೆ ಬರ್ಗನಕ್ಕಿ ಎಡೆ ಮಾಡ್ತಾರೆ
ಬೂದು ಬಾಳೆ ಹಣ್ಣ್ ಮುಂದೆ ಮಡ್ಗತಾರೆ
ಮರಾಳೆ ಎಣ್ಣೆ ನನ್ನ ಮಂಡೆಗೊತ್ತಾರೆ
ಉಚ್ಚೆಳ್ಳೆಣ್ಣೆ ನೆತ್ತಿಗೊತ್ತಾರೆ
ಪೂಜೆ ನೈವೇದ್ಯ ಗೊತ್ತಿಲ್ಲ

ನನ್ನ ಮಹಾದೇವ ಅನ್ನವರೆ ಮೊದಲಿಲ್ಲ || ನೋಡಿ ನಮ್ಮ ಶಿವನಾ ||

ನನ್ನ ಮಾದಪ್ಪ ಅಂತ ಮುಟ್ಟಿ ಪೂಜೆಮಾಡ್ವರಿಲ್ಲ
ಇದಕ್ಕೋಸ್ಕರವಾಗಿ
ಈ ಕಲಿಯುಗದಲ್ಲಿ ನನಗೆ ತರಗೆಂಡಾದಲ್ಲಿ ತಳಿಗೆಯಾಗಬೇಕು
ಅಚ್ಚಳ್ಳೆಣ್ಣೆಯಲ್ಲಿ ಮಜ್ಜನವಾಗಬೇಕು ಕಾಣಪ್ಪ
ಆರು ಮಣ ಅಚ್ಚಳ್ ತಂದು
ತಿಂಗಾತಿಂಗಳು ಅಮಾವಾಸೆಗೆ ಮುಂದಿನ ದಿನಾ
ಅಂಗೈ ಹೊರಳು ಮಾಡಿ ಮುಂಗೈ ವನಕೆ ಮಾಡಿ
ಎಳ್ನಲ್ಲಿ ಮಜ್ಜನ ಮಾಡುವಂತೆ ಭಕ್ತರಾಗಬೇಕು
ಮಲ್ಲಣ್ಣ
ನಿನಗೆ ಸಾವಿರಾರು ಒಕ್ಕಲಿದೆ
ಈ ಒಕ್ಕಲಿನಲ್ಲಿ ಗಂಡ ಹೆಂಡರಿಬ್ಬರ ನಿಜ ಒಂದಾಗಿರಬೇಕು
ಆರುಮಾನ ಅಚ್ಚೆಳ್ಳ ತಂದು
ತಿಂಗಾತಿಂಗಳು ನನಗೆ ಎಣ್ಣೆ ಮಜ್ಜನ ಮಾಡುವಂತವರ

ಬಂದಾ ಒಕ್ಲನೋಡು ಅಂತವರೆ ಮಾದೇವಾ|| ನೋಡಿ ನಮ್ಮ ಶಿವನಾ||

ಅಯ್ಯೋ ಮಾದೇವ ನನ್ನ ಒಕ್ಕಲ್ನಲ್ಲಿ ಯಾರಪ್ಪ ಅಂತವರಿದ್ದಾರೆ
ಬಡಗ್ಲಾಗ್‌ಹೋಗಪ್ಪ ತಿರುಪ್ತಿ ವೆಂಕಟ್ರೋಣಸ್ವಾಮಿ
ಒಕ್ಕಲು ನೋಡ್ಕ ಬಾ ಅಂದ್ರು
ತಿರುಪತಿ ವೆಂಕಟ್ರೋಣ್‌ಸ್ವಾಮಿ ಒಕ್ಕಲು
ಎಲ್ಲಾ ಅವ ರೀತಿಲಿ ಮಾತಾಡ್ತಾರೆ
ಅದು ನನಗೆ ಗೊತ್ತಿಲ್ಲ
ಪಡ್ಲಗ್‌ಹೋಗಪ್ಪಾ ಅಂದ್ರು
ಪಡ್ಲಗ್‌ನನ್ನ ಕೈಲ್‌ಸಾಧ್ಯವಿಲ್ಲ ಅವರು ಬರಲಾರ್ರು‍
ತೆಂಕ್ಲಗ್‌ಹೋಗನ ಬಳಿಗಿರಿ ರಂಗಸ್ವಾಮಿ ಅಂದ್ರೆ ಅವರ್ರ‍ಗೂ ಸಾಧ್ಯವಿಲ್ಲ
ಈ ಮದ್ಯ ಭಾಗದಲ್ಲಿ
ನನ್ಗೆ ಸಂಬಂಧ ಪಟ್ಟವನು
ಮುಡುಕುತೊರೆ ಮಲ್ಲಣ್ಣ
ಸಿವ ಯೋಗದಲಿ ಇರ್ತಕಂತವರು
ಆದರೆ ನಿನ್ನ ಸಾವಿರ ಒಕ್ಕಲಿನಲ್ಲಿ

ನನಗೆ ಒಂದೊಕ್ಕಲ ಕೊಡು ಅಂತವರೇ ಮಾದೇವ|| ನೋಡಿ ನಮ್ಮಶಿವನಾ||

ಅಯ್ಯೋ ಗುರುವೇ ಮಾಯ್ಕಾರ ಗಂಡ ಮಾದಪ್ಪ
ನನ್ನ ಸಾವಿರ ಒಕ್ಕಲಿನಲ್ಲಿ ಯಾರೂ ಇಲ್ಲ
ನಿನ್ನ ಏಳುಮಲೆ ಕೈಲಾಸಕೆ ಬಂದು ಎಣ್ಣೆ ಮಜ್ಜನ ಮಾಡೋರು
ನಾನು ಹೇಳ್ತಿನಿ ಒಳ್ಳೆ ಶರಣರ
ಅಲ್ಲೋಗಿ ಒಕ್ಕಲು ಹಿಡಿಯಪ್ಪ ಅಂದ್ರು
ಹೇಳಿಕೊಡಪ್ಪ ಮಲ್ಲಣ್ಣ ಅಂದ್ರು
ನೋಡಪ್ಪ ಕಲ್ಯಾಣ ಪಟ್ಟಣದಲ್ಲಿ
ಬಿಜ್ಜಳ ರಾಯನ ದೊರೆತಾನ
ಕರ್ಚುಲ್ಯ ವಂಶದವನು
ದೊಡ್ಡ ಬಸವಣ್ಣನೋರ ಆಳ್ವಿಕೆ
ಅವರ ಮಡದಿ ನೀಲಾಂಬಿಕೆ ಅಂದ್ರೆ
ಬಹಳ ಸತ್ಪುರುಷರು ಸುಯೋಗದೋರು
ಏಳುನೂರು ಎಪ್ಪತ್ತು ಮಂದಿ ಅಮರಗಣಂಗಳು
ಲಕ್ಷದ ಮೇಲೆ ತೊಂಬತ್ತಾರು ಕೋಟಿ ಗಣಂಗಳಿಟ್ಟುಕೊಂಡು
ಯಾರು? ಬಸವಣ್ಣನವರು
ಆದರೆ ಒಂದು ಒಕ್ಕಳಕ್ಕಿಯಾಗಿ
ಒಂದು ಬದನೆಕಾಯಾಗಿ
ಲಕ್ಷದ ಮೇಲೆ ತೊಂಬತ್ತಾರು ಕೋಟಿ ಗಣಂಗಳಿಗೆಲ್ಲ
ನಿಚ್ಚ ಬೋಜನ ಮಾಡ್ತಾರ
ಅದೂ ಕೂಡ ಹೆಚ್ಚಾಗಿ ಮಿಕ್ಕಿದಂತ ಪ್ರಸಾದ ಉಳಿತದೆ
ಆ ಪ್ರಸಾದವನ್ನು ಕಲ್ಲು ಬಂಡೆ ಮೇಲೆ ಹೇರಿ
ಕೈಲಾಸಕ್ಕ ಕಳಿಸ್ತಾ ಇದ್ದಾರೆ ಬಸವಣ್ಣನವರು
ಆ ಕಲ್ಯಾಣ ಪಟ್ಟಣದಲ್ಲಿ
ಬೇಕಾದಂತ ಶರಣರಿದ್ದಾರೆ
ಆ ಲಕ್ಷದ ಮೇಲೆ ತೊಂಬತ್ತಾರು ಕೋಟಿ ಗಣಂಗಳ ಮೇಲೆ
ಇನ್ನಾರು ಶರಣರು ಅಂದ್ರು
ಹೊಲೇರ ಹೊನ್ನಯ್ಯ ಶರಣ
ಮಾದಾರ ಚನ್ನಯ್ಯ ಶರಣ
ಮಡಿವಾಳ ಮಾಚಯ್ಯ ಶರಣ
ಕುರುಬರ ಬಾರಯ್ಯ
ಕುಂಬಾರ ಗುಂಡಯ್ಯ ಶರಣ
ಒಕ್ಕಲಿಗ ಮುದ್ದಯ್ಯ ಶರಣ
ತುರುಕರ ಪೀರಯ್ಯ ಶರಣ
ಇಂತಿಂತಹ ಶರಣಮಾತ್ಮರಿದ್ದಾರೆ

ನೀನು ಬೇಕಾದವರ ನೋಡಿ ಹಿಡಿಯಯ್ಯ|| ನೋಡಿ ನಮ್ಮ ಶಿವನಾ||

ಅಯ್ಯೋ ಮಲ್ಲಣ್ಣ
ಈ ಕಲ್ಯಾಣದ ಪಟ್ಣದಲ್ಲಿ ಇರ್ತಕ್ಕಂತ ಶರಣರ ಹೇಳ್ತಾ ಇದ್ದಿಯಲ್ಲಾ
ಆ ಶರಣರು ಬಂದು ನನಗೆ ಎಣ್ಣೆ ಮಜ್ಜನ ಮಾಡುವರಾ
ನನಗಿಂತ ಹೆಚ್ಚಿನ ಭಕ್ತಿವಂತರು ಅವ್ರು
ಶರಣರು ಅಂದ್ರೆ ಸಾಮಾನ್ಯವಲ್ಲ
ನನ್ನ ಮನೆ ಒಳ್ಗೆ ಮಾಡುವಂತ ಅಡಿಗೆ
ಅವ್ರು ಅಂಗೈಲಿ ನೋಡಿ ಹೇಳ್ತಾರೆ
ಅಂತಹ ಶರಣರು ಕಲ್ಯಾಣ ಪಟ್ಟಣದಲ್ಲಿ
ಅವರು ನನ್ನ ಒಕ್ಕುಲಾಗೋದಿಲ್ಲ
ನಿನ್ನ ಸಾವಿರಾರು ಒಕ್ಕಲಿನಲ್ಲಿ

ನನಗೆ ಒಂದು ಒಕ್ಕಲು ಕೊಡುವಂತವರೆ ಮಹದೇವಾ || ನೋಡಿ ನಮ್ಮ ಶಿವನಾ ||

ಕಲ್ಯಾಣ ಪಟ್ಟಣದಲ್ಲಿ ಇನ್ನು ಬೇಕಾದಂತ ಶರಣರಿದ್ದಾರೆ
ಮಾದಪ್ಪ
ಎಂತಹ ಶರಣರು ಅಂದ್ರೆ
ನೋಡಪ್ಪ ಮುಂಗಾಲ ಮೇಲೆ ತೆಂಗಿನ ಮರ ಹುಟ್ಟೋರು
ತೋಳು ಮೇಲೆ ಬಾಳೆ ಕಂಬ ಹುಟ್ಟುದೋರು
ಇದು ಅಲ್ಲದೆ ಬೆನ್ನಿನ ಮೇಲೆ ಬನ್ನಿಮರ ಹುಟ್ಟುದೋರು
ಶಿವಾ ಶಿರದ ಮೇಲೆ ಮನೆಕಟ್ತಕ್ಕಂತವರು
ನೆತ್ತಿ ಮೇಲಾ ಮತ್ತಿಮರ ಹುಟ್ಟಿ
ಕರ್ರ ಕಪಾಲಕ ಬೇರು ಬಿಟ್ಟಂತವರು
ಕಣ್ಣಿನೊಳಗೆ ಕಡಜನ ಗೂಡು ಕಟ್ಟಿದವರು
ಮೂಗಿನೊಳಗೆ ಮೂಗುತ್ತ ಬೆಳೆದು
ಏಳುತಲೆ ಕಾಳಿಂಗ ಸರ್ಪಮರಿ ಮಾಡುವಂತಹ ಶರಣರು
ಇದು ಅಲ್ಲದೆ ಕರ್ಣದಲ್ಲಿ ತುಡುಬೆ ಜೇನುಕಟ್ತಕ್ಕಂತವರು
ಗಡ್ಡದೊಳಗೆ ಹೆಜ್ಜೇನು ಕಟ್ತಕ್ಕಂತವರು
ಬಾಯಿನೊಳಗೆ ಕಂದ
ಯಾರು ಮಾದೇವ
ಬಾಯ್ನೊಳಗೆ ಬಾಳೆಬುಡ ಹುಟ್ಟಿ
ಹಣ್ಣಾಗಿ ಕಾಯಾಗಿ
ಶಿವನಿಗೆ ಎಡೆ ಮಾಡ್ತಕ್ಕಂತಹ ಶರಣರಿದ್ದಾರೆ
ಇಂತಹ ರುಶು ಕೋಟಿ ಮುನಿಗಳು
ಕಲ್ಯಾಣ ಪಟ್ಟಣದಲ್ಲಿದ್ದಾರೆ

ನೀ ಬೇಕಾದವನ ನೋಡ ಹಿಡಿಯಯ್ಯಾ || ನೋಡಿ ನಮ್ಮ ಶಿವನಾ ||

ಅಪ್ಪ ಮುಡುಕುತೊರೆ ಮಲ್ಲಣ್ಣ
ಹೇಳ್ತಾ ಹೇಳ್ತಾ ಎಂತ ಮಾತ ಹೇಳ್ತಾ ಇದ್ದಿಯೇ
ಹಗೆನೋಗಿ ಗುರುಬಲ ಕೇಳಿದ್ರೆ
ಮದ್ಯಾಹ್ನಕ್ಕೆ ಬ್ಯಾಡ ಅಂತಹೇಳಿ ಶಾಸ್ತ್ರ ಹೇಳ್ತಾನೆ
ಅ ರೀತಿಯಾಗಿ
ಅಂತಹ ಶರಣರು
ಸತ್ಪುರುಷರು ಬಂದು ನನಗೆ ಎಣ್ಣೆ ಮಜ್ಜಣ ಮಾಡೋದು ನಿಜವೇ
ತಿಂಗಾತಿಂಗಳು ಎಣ್ಣೆಯ ಮಜ್ಜಣ ಮಾಡೋದು ನಿಜವೇ
ಅಂತಹವರು ಬೇಡಪ್ಪ
ಬಡವರಾಗಲಿ
ಆದರೆ ಗಂಡ ಹೆಂಡಿರುನಿಜ ಒಂದಾಗಿರಬೇಕು
ಹೆಂಡ್ತಿ ಮಾತ ಗಂಡ ಮೀರಬಾರ್ದು
ಗಂಡನ ಮಾತ ಹೆಂಡ್ತಿ ಮೀರಬಾರ್ದು
ಅಂತಹವರಾಗಬೇಕು ಶರಣರು
ಅವರ ಕೈಯಿಂದ ಏನು ತರುವ ಹಾಗಿಲ್ಲ
ನೋಡಪ್ಪ ಹೇಳ್ತಾ ಇದ್ದಿನಿ ಈ ಒತ್ತಿನಲ್ಲಿ
ನಾನೆ ಕೊಡುತಿನಿ ಅವರಿಗೆ
ಅವರು ಶರಣರಾದ್ರೆ
ನನ್ನ ಏಳುಮಲೆಗೆ ಆಗ್ತಾಕ್ಕಂತಹ
ಸಾಮಾಗ್ರಿನ ನಾನೆ ತಂದುಕೊಡ್ತಿನಿ
ಅಂತವ್ರು ಯಾರಾದ್ರು ಇದ್ರೆ

ನನಗೆ ಒಂದು ಒಕ್ಕಲು ಕಳುಹು ಅಂತಹವರೆ ಮಹಾದೇವಾ || ನೋಡಿ ನಮ್ಮ ಶಿವನಾ ||