ಡಾ. ಗದ್ದಗಿಮಠ ಅವರ ಇನ್ನೊಂದು ಕೃತಿ ‘ಮಲ್ಲಮಲ್ಲಾಣಿ’ ೧೯೫೯ ರಲ್ಲಿ ಪ್ರಕಟವಾಗಿದೆ. ಇದನ್ನು ಮಹಾಶೃಂಗಾರ ಹಾಡುಗಬ್ಬ ಎಂದು ಕರೆಯಲಾಗಿದೆ. ಜನಪದ ಕವಯಿತ್ರಿ ಶಿವಶರಣೆ ಶಾವಂತ್ರಾದೇವಿ ಹಾಡಿದ ಹಾಡುಗಬ್ಬವಿದು. ದಿ. ಗದ್ದಗಿಮಠ ಅವರ ಚಿಕ್ಕ ಅಜ್ಜಿ ಈ ಕವಿಯತ್ರಿ. ಮಲುಹಣ-ಮಲುಹಣಿಯರ ಪ್ರೇಮ ಸಂಬಂಧ ಮತ್ತು ಅವರ ಲಾವಣ್ಯ, ಉತ್ಕಟ ಪ್ರೀತಿ, ಶಿವಪೂಜೆ ಇತ್ಯಾದಿಗಳು ಈ ಹಾಡುಗಬ್ಬದಲ್ಲಿ ಮನಂಬುಗುವಂತೆ ಚಿತ್ರಣಗೊಂಡಿವೆ.

ಹಾಡುವುದೆ ಹಾಡುಗಬ್ಬದ ವೈಶಿಷ್ಟ್ಯ. ಅದನ್ನು ನೂರೊಂದು ರಾಗ ರಾಗಿಣಿಗಳಲ್ಲಿ ಹಾಡುವರು. ಅನೇಕ ರಾಗರಾಗಿಣಿಗಳನ್ನೊಳಗೊಂಡ “ಶರಣ ಲೀಲಾಮೃತ”ವು ಆಗಿನ ಕಾಲದ ಒಂದು ಮಾದರಿಯ ಹಾಡುಗಬ್ಬವೆಂದೇ ಖ್ಯಾತಿಪಡೆದಿದೆ. ಈಗ ಹಳ್ಳಿಗರ ಬಾಯಿಂದ ದೊರೆಯುವ ಹಾಡುಗಬ್ಬಗಳು ಹೆಚ್ಚಾಗಿ ಶಿವಶರಣರ ಕಥನ-ಕವನಗಳಾಗಿವೆ.

ಮಲ್ಲಮಲ್ಲಾಣಿ ಹಾಡುಗಬ್ಬವು ಶಿವಭಕ್ತನಾದ ಮಲುಹಣನ ಕಥೆಯನ್ನು ಒಳಗೊಂಡಿದೆ. ವೀರಶೈವ ಕವಿಗಳಲ್ಲಿ ಹಲವರು ತಮ್ಮ ಕೃತಿಗಳಲ್ಲಿ ಮಲುಹಣನ ಕಥೆಯನ್ನು ಪ್ರಸಂಗಕ್ಕನುಸಾರವಾಗಿ ಬಳಸಿಕೊಂಡಿದ್ದಾರೆ. ಹಂಪೆಯ ಹರಿಹರನೇ ಪ್ರಪ್ರಥಮವಾಗಿ ಮಲುಹಣನ ಕಥೆಯನ್ನು ಕನ್ನಡದಲ್ಲಿ ಕಾವ್ಯರೂಪದಲ್ಲಿ ಬರೆದಿರುವನು. ತ್ರಿಷಷ್ಠಿ ಶಲಾಕಾ ಪುರುಷರ ಚರಿತ್ರೆ ಕುರಿತು ರಗಳೆಯನ್ನು ರಚಿಸಿದ ಹರಿಹರನು ಶಿವಭಕ್ತ ಮಲುಹಣನ ರಗಳೆಯನ್ನು ಸೃಷ್ಟಿಸಿದ್ದಾನೆ. ಸಂಸ್ಕೃತದಲ್ಲಿ ‘ಮಲ್ಹಣ ಸೋತ್ರ’ ವೆಂಬ ಖಂಡಕಾವ್ಯವೂ ಇರುತ್ತದೆ.

“ಮಲ್ಲಮಲ್ಲಾಣಿ” ಹಾಡು ಒಂದು ಮಹಾಶೃಂಗಾರ ಹಾಡುಗಬ್ಬ. ಪ್ರೇಮ ಅಂಕುರಿಸಿ ಪ್ರಣಯ ಮಳೆಗರೆದು ದಾಂಪತ್ಯ ವೃಕ್ಷವಾಗಿದೆ-ಪಾರಮಾರ್ಥ ಪರಿಮಳದೊಡನೆ ಈ ಹಾಡುಗಬ್ಬ. ಈ ಹಾಡುಗಬ್ಬವು ಪ್ರಣಯಿಗಳಿಗೆ ಪ್ರಣಯರಸಾಯನ, ದಂಪತಿಗಳಿಗೆ ಪ್ರಣಯ ದಾಂಪತ್ಯದ ಗುಟ್ಟು, ಶಿವಭಕ್ತರಿಗೆ ಪ್ರಪಂಚದಲ್ಲಿಯ ಪಾರಮಾರ್ಥದ ಗುಟುಕು. ಆದುದರಿಂದ ಹಳ್ಳಿಯ ಹೆಣ್ಣು ಪ್ರಣಯ ದಾಂಪತ್ಯ ಪಾರಮಾರ್ಥ-ಈ ಮೂರನ್ನು ಅರಿತುಕೊಳ್ಳಲು ಈ ಹಾಡನ್ನು ಭಕ್ತಿಯಿಂದ ಇಂದಿನವರೆಗೆ ಹಾಡುತ್ತ ಬಂದಿದೆ. ಇದರಲ್ಲಿಯ ಪ್ರೇಮವು ಪ್ರಣಯಕ್ಕಿಳಿದರೂ ದಾಂಪತ್ಯದಲ್ಲಿ ಅರಳಿದೆ. ಆದುದರಿಂದ ಅದನ್ನು ಓದಲು ಪ್ರೇಮ ಹಾಗೂ ಕೇಳಲು ಭಕ್ತಿ ತುಂಬುವುವು. ಇವೆರಡರೊಡನೆ ಬೇಡೆಂದರೂ ಆ ಪ್ರಪಂಚವು ಪಾರಮಾರ್ಥವಾಗುವುದು. ಅಷ್ಟು ಅಪೂರ್ವವಾಗಿದೆ ಜನಪದದಲ್ಲಿ ‘ಮಲ್ಲಮಲ್ಲಾಣಿ’ ಹಾಡು-ಎಂದು ಈ ಕೃತಿಯ ‘ಅಂತದರ್ಶನ’ದಲ್ಲಿ ಡಾ. ಗದ್ದಗಿಮಠ ಅವರು ನುಡಿದಿದ್ದಾರೆ.

ಈ ಕೃತಿಯ ಪ್ರಾರಂಭದಲ್ಲಿ ಪೀಠಿಕಾ ಸಂಧಿಯಂತೆ ಎರಡು ಭಾಗಗಳಿರುತ್ತವೆ. ಮುಂದಿನ ನಾಲ್ಕು ಸಂಧಿಗಳಲ್ಲಿ ಕಥೆ ಮುಕ್ತಾಯವಾಗುತ್ತದೆ. ಮಾಹಾತ್ಮರನ್ನು ನೆನಸಿ ಹಾಡಿಕೊಂಡ ತ್ರಿಪದಿಗಳಲ್ಲಿ ಕವಿಯಿತ್ರಿಯ ಒಂದು ವ್ಯಾಪಕ ಮನೋಭಾವ ಕಂಡುಬರುತ್ತದೆ. ವೈಷ್ಣವ ಸಂಪ್ರದಾಯದಲ್ಲಿ ಹೆಚ್ಚಾಗಿ ನೆಲೆಗೊಂಡು ಮೇಲ್ಮೆ ಹೊಂದಿದ ಸೀತಾ ದ್ರೌಪದಿಯರು ಈ ಶೈವ ಪ್ರಬಂಧದಲ್ಲಿ ಗೌರವದಿಂದ ಸೇಪರ್ಡೆಯಾದುದು ಕೌತುಕದ ವಿಷಯವೇ ಸರಿ! ದರೆ ಮಲುಹಣಿಯ ತಾಯಿ ಪದ್ಮಾವತಿ, ಈ ಕಥೆಯಲ್ಲಿ ಮದುವೆಗಾಣದೆ ಹಾದರದ ಹಾದಿಯನ್ನು ಹಿಡಿದ ಹಾರುವರ ಪದ್ಮಕ್ಕನಾಗುತ್ತಾಳೆ. ಆಕೆ ಒಬ್ಬ ದೇವದಾಸಿ, ಮಲುಹಣನೂ ಕಾಶ್ಮೀರದ ಶೈವ ಬ್ರಾಹ್ಮಣನೇ. ಈ ಪದ್ದಕ್ಕನ ಹಾದರಕ್ಕೆ ಹುಟ್ಟಿದ ಮಗಳೊಡನೆ ಮಲುಹಣ ರತಿ ಬೆಳೆಸುತ್ತಾನೆ, ಇದ್ದ ದುಡ್ಡೆಲ್ಲ ಹಾಳು ಮಾಡಿಕೊಳ್ಳುತ್ತಾನೆ. ಕುಟ್ಟಿನಿ ಮತಾನುಸಾರವಾಗಿ ಮಲುಹಣಿಯ ತಾಯಿ ಮಲುಹಣ-ಮಲುಹಣಿಯರನ್ನು ಅಗಲಿಸುತ್ತಾಳೆ. ಮಲುಹಣಿ ತಮ್ಮ ತಾಯಿಗೆ ಆದೀನೆ. ಮಲುಹಣದ ವಿರಹ ಪ್ರೇಮಪಾಕವನ್ನು ತಂದು ಕೊಡುತ್ತದೆ. ಮಲುಹಣಿ ಆಡಿದ ಮಾತೇ ಮಲುಹಣನಿಗೆ ಶಿವಬೋಧೆ ತಂದು ಕೊಡುತ್ತಾನೆ. ‘ನಂಬಿಯಣ್ಣ’ ‘ಪರವೆನಾಚಿ’ ‘ಪ್ರಭುದೇವರು-ಕಾಮಲತೆ-ಜಂಗಮಕ್ಕೆ ಅಂಗಭೋಗವನ್ನು ಕೊಡುವ ಕಾಯಕ ನಿಂಬಿ, ಮತ್ತೆ ಬೇರೆ ಅನೇಕ ವಿಟಜಂಗಮರ ಕಥೆಗಳು – ಇವೆಲ್ಲ ಓದಿದ ಪಂಡಿತ ವಾಚಕನಿಗೆ ಆಗಲಿ, ಶೈವಭಕ್ತರ ಇಂಥ ಕಥೆಗಳನ್ನು ಕೇಳಿ ಅಭ್ಯಾಸವಾದ ಜನಕ್ಕಾಗಲಿ ಇದರಲ್ಲಿ ಅಸಾಮಾನ್ಯ, ಅಸಂಭವ ಏನೂ ತೋರುವುದಿಲ್ಲ. ಆದರೂ ಜಾನಪದ ಕವಿಯಿತ್ರಿ ಶಾವಂತ್ರಾದೇವಿಯವರು ಮಲುಹಣನಿಗೆ ಶಿವಸಾಕ್ಷಾತ್ಕಾರವಾದ ಮೇಲೆ ಮಲುಹಣ-ಮಲುಹಣಿಯರ ಸಂಬಂಧ ಸತಿ – ಪತಿಯರದಾಯಿತು ಎಂದು ಹೇಳುತ್ತಾರೆ. ಮಲುಹಣ- ಮಲುಹಣಿಯರ ಕಥೆಯಲ್ಲಿ ಅವರ ಜೀವನ ಸ್ಥಿತಿಯ ಪೂರ್ವಭಾಗ ಘಟನಾಂತರಗಳಿಂದ ಕೂಡಿದೆ. ಆದರೆ, ಆ ಮೇಲಿನ ನೂರು ವರ್ಷದ ಜೀವನ ಸತಿ-ಪತಿಗಳ ಶಿವರತಿ-ಭೋಗದಲ್ಲಿಯೇ ಕಳೆದು ಹೋಯಿತು ಎಂಬ ಮಾತಿನಿಂದಲೇ ಕುತೂಹಲಿ ತೃಪ್ತನಾಗಬೇಕಾಗುತ್ತದೆ.

ಶಂಕರಾಚಾರ್ಯರು ಬರೆದಿರುವ ‘ಅಮರಶತಕ’ ಅಥವಾ ಅವರ ಸಮಗ್ರ ‘ಸೌಂದರ್ಯಲಹರಿ’ ಇವುಗಳನ್ನು ನೋಡಿದರೆ ಮಲುಹಣ ರಚಿತ ಶಿವಸ್ತೋತ್ರ ಶೃಂಗಾರದ ರೀತಿಯಲ್ಲಿ ಸಪ್ಪೆಯಾಗಿ ತೋರುತ್ತದೆ. ಆದರೂ ಅದು ಉದ್ಧೀಪ್ತ ಭಾವನೆಯ ಕಾವ್ಯ. ಅದರೊಳಗಿನ ರತ್ಯಾಸೆಯು ಪ್ರಚ್ಛನ್ನವಾಗಿದೆ. ಇದಲ್ಲದೆ ಆ ಸ್ತ್ರೋತ್ರದಲ್ಲಿ ಕರ್ನಾಟಕದ ವಿಶೇಷ ಉಲ್ಲೇಖವಿದೆ. ಇದರ ಮೂಲಕ ಮೋಳಿಗೆಯ ಮಾರಯ್ಯನಂತೆ ಮಲುಹಣನ ಕಾಶ್ಮೀರವೂ ಕಲ್ಯಾಣಕ್ಕೆ ಬಹಳ ಸಮೀಪದ್ದಾಗಿ ತೋರುತ್ತದೆ.

ಈ ಹಾಡುಗಬ್ಬದ ತುಂಬ ಬರುವ ಸೊಲ್ಲಿನ ವೈವಿಧ್ಯ ಕಿವಿಯಾರೆ ಕೇಳದೆ ಅದರ ಸೊಗಸನ್ನು ಊಹಿಸುವುದು ಕಷ್ಟ. ಆದರೆ ಕೆಲವೊಂದು ಸೊಲ್ಲುಗಳ ಔಚಿತ್ಯ ಜೇನಿನ ತೊಟ್ಟಿನಂತಿರುವ ಅವುಗಳ ರಸೋದ್ದೀಪಕತೆ ನಮ್ಮನ್ನು ಕಲ್ಪನಾ ರಾಜ್ಯಗಳಲ್ಲಿ ತೇಲಿಸುವದು. ಉದಾ-

ಪ್ರಣಯ ಪ್ರಪಂಚೆರಡು ಪ್ರಣಮರೂಪಿಗೆಡೆಯು
ಪ್ರಣಯಿ ಮಲ್ಲಾಣ ವಿರಹವನೆ
|ನೀ| ಎಡಿಮಾಡಿ
ಪ್ರಣಯುಂಡು ತೊಳೆದ ಶತವರುಷ
|ನೀ|

ಮಲುಹಣ-ಮಲುಹಣಿಕಯರ ಪರಸ್ಪರಾನುರಾಗ, ಅವರ ಲಾವಣ್ಯ ಮಲುಹಣ ಶಿವಪೂಜೆಯೊಳಗಿನ ಹೂವುಗಳನ್ನು ಪೂಜೆಗಾಗಿ ಕರೆಯುವ ಆತ್ಮೀಯತೆ, ಕಾವ್ಯಮಯತೆ ಇವನ್ನೆಲ್ಲ ಕಂಡು ನೃಪತುಂಗನು ಕನ್ನಡ ನಾಡಿನ ಜನರ ರಸಿಕತೆಯನ್ನು ವರ್ಣೀಸಿರುವದು ಆತಿಶಯೋಕ್ತಿ ಯೆನಿಸದು.

ನಾಡ ಶರಣರ ಸಾತ್ವಿಕ ಜೀವನವು ಸಾಮಾನ್ಯ ಮನುಷ್ಯನನ್ನು ಆಕರ್ಷಿಸಲು ಅವನು ಅವರನ್ನು ಹಾಡಿಕೊಂಡಿದ್ದಾನೆ. ಆದ್ದರಿಂದ ಅನೇಕ ಶಿವಶರಣರ ಕಥೆಗಳು ಹಾಡುಗಬ್ಬಗಳಿಗೆ ಕಥಾವಸ್ತುಗಳಾಗಿವೆ. ಮಲುಹಣನ-ಪ್ರಣಯ-ದಾಂಪತ್ಯ- ಪಾರಮಾರ್ಥದ ಬಗೆಯನ್ನು ಮೆಚ್ಚಿದ ಹಳ್ಳಿಗರು ಸರಾಗವಾಗಿ ರಾಗರಾಗಿಣಿಗಳಲ್ಲಿ ಅವನ ಕಥೆಯನ್ನು ಹಾಡಿದ್ದಾರೆ. ಯಾವ ಸಂದರ್ಭದಲ್ಲಿಯೇ ಆಗಲಿ, ಮಲುಹಣನ ಕಥೆಯಲ್ಲಿ ಶೃಂಗಾರವು ಶಿವಭಕ್ತಿ ಸಾರವಾಗಿ ಪರಿಣಮಿಸಿದೆ. ಇದನ್ನು ಇನ್ನಿತರ ಕಾವ್ಯಗಳಿಗಿಂತ ಜನಪದ ಸಾಹಿತ್ಯದಲ್ಲಿ ಮಲ್ಲಮಲ್ಲಾಣಿ ಹಾಡಿನಲ್ಲಿ ತುಂಬ ಸ್ವಾರಸ್ಯಕರವಾಗಿ ಕಾಣಬಹುದು. ಈ ಹಾಡುಗಬ್ಬವನ್ನು ಹಾಡಿದ ಕವಯಿತ್ರಿಯು ಮೂಲ ಕಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ.

ಮಲುಹಣಿಯ ಮೂಲ ಹೆಸರು ‘ಗಂಗಾಜಮನೆ’, ಅವಳ ತಾಯಿಯ ಹೆಸರು ‘ಪದ್ದಕ್ಕ’. ಶಿವಭಕ್ತ ಮಲುಹಣನ ಸೋಬತಿಯಿಂದ ಅವಳು ‘ಮಲುಹಣಿ’ಯಾದವಳೆಂದು ಹಾಡಿದ್ದಾರೆ. ಈ ಮಾರ್ಪಾಟುಗಳಿಂದ ಕಥೆಯು ಮತ್ತಿಷ್ಟು ನೈಜವಾಗಿ ಓದುಗರನ್ನು ಆಯಸ್ಕಾಂತದಂತೆ ಸಹಜವಾಗಿ ಆಕರ್ಷಿಸುತ್ತದೆ. ಈ ಮಲ್ಲಮಲ್ಲಾಣಿಯ ಹಾಡುಗಬ್ಬವನ್ನು ಗದಗದಲ್ಲಿಯೂ ನವಲಗುಂದದಲ್ಲಿಯೂ ಗಲಗಲಿಯಲ್ಲಿಯೂ ಹಾಡುತ್ತಿದ್ದರೆಂದು ತಿಳಿದು ಬರುತ್ತದೆ.

ಜನಪದ ಸಾಹಿತ್ಯದ ಹಾಡುಗಳಲ್ಲಿ ಪ್ರತಿಪದ್ಯವನ್ನು ಹಾಡಿದ ಮೇಲೆ ಪಲ್ಲವಿಯ ಪುನರುಕ್ತವಾಗುತ್ತದೆ. ಆ ಪುನರುಕ್ತ ಪಲ್ಲವಿಯು ಸೊಲ್ಲೆತ್ತಿ ಹಾಡಿದರೆ ಆ ಹಾಡಿಗೆ ಹೆಚ್ಚಿನ ಸೊಗಸುಂಟಾಗುತ್ತದೆ. ಆದ್ದರಿಂದ ಹಾಡುಗಳಲ್ಲಿ ಸೊಲ್ಲಿಗೆ ಸಲಿಗೆ ರಾಗಕ್ಕೆ ಪ್ರಾಧಾನ್ಯ, ಈ ಹಾಡುಗಬ್ಬದಲ್ಲಿ ಪಲ್ಲವಿಯ ಸೊಲ್ಲು ಧಾಟಿ-ಧರತಿಗಳೊಂದಿಗೆ ಅತ್ಯಂತ ಸಮೃದ್ಧವಾಗಿ ಬಂದು ಹಾಡುಗಳ ಸನ್ನಿವೇಶಗಳನ್ನು ಮತ್ತಷ್ಟು ರಮಣೀಯಗೊಳಿಸಿರುತ್ತವೆ. ಈ ಕೃತಿಗೆ ದ.ರಾ. ಬೇಂದ್ರೆಯವರ ಮುನ್ನುಡಿಯೂ ಹೆಚ್ಚಿನ ಶೋಭೆಯನ್ನುಂಟು ಮಾಡಿರುತ್ತದೆ.