ಜನನ : ೧೮-೧೦-೧೯೦೪ ರಂದು ಸೊರಟಗ್ರಾಮದಲ್ಲಿ, ಗದಗ ಜಿಲ್ಲೆ

ಮನೆತನ: ಸಂಗೀತಗಾರರ ಕೀರ್ತನಕಾರರ ಮನೆತನ. ತಂದೆ ಕಲ್ಲೇಶ್ವರರಾವ್ ಅವರು ಕೀರ್ತನಕಾರರಾಗಿದ್ದರು. ತಾಯಿ ಕೃಷ್ಣಾಬಾಯಿ. ಮಗ ಪಂ. ವಿನಾಯಕ ತೊರವಿ ಪ್ರಸಿದ್ಧ ಹಿಂದುಸ್ತಾನಿ ಗಾಯಕರು.

ಗುರುಪರಂಪರೆ : ತಂದೆ ಕಲ್ಲೇಶ್ವರರಾಯರೇ ಮೊದಲ ಗುರು. ಜೊತೆಗೆ ಬ್ರಹ್ಮ ಚೈತನ್ಯರ ಹಾಗೂ ಬ್ರಹ್ಮಾನಂದ ಗುರುಗಳವರ ಅನುಗ್ರಹ. ಅನಂತರ ಮುಳುಗುಂದದ ರಾಮಾಶಾಸ್ತ್ರಿಗಳಲ್ಲಿ ಪ್ರೌಢ ಶಿಕ್ಷಣ, ಕೀರ್ತನ ಕಲೆಯ ಪ್ರಮುಖ ಅಂಗಗಳಾದ ಸಾಕೀ, ಆರ್ಯ, ಡಿಂಡಿ, ಛಂದಾ, ಕೌಮುದಾ ಇತ್ಯಾದಿಗಳಲ್ಲಿ ಆಳವಾದ ಅಭ್ಯಾಸ. ಅದಕ್ಕೆ ಬೇಕಾದ ಕನ್ನಡ, ಸಂಸ್ಕೃತ, ಮರಾಠಿ ಭಾಷೆಗಳ ಗ್ರಂಥಗಳ ವ್ಯಾಸಂಗ.

ಕ್ಷೇತ್ರ ಸಾಧನೆ: ಮೊದ ಮೊದಲಿಗೆ ತಂದೆಯವರ ಜೊತೆಯಲ್ಲಿ ಸಹ ಗಾಯಕರಾಗಿ ಕಾರ್ಯಕ್ರಮ ಅನಂತರ ಗುರುಗಳಾದ ಬ್ರಹ್ಮಾನಂದರ ಉತ್ತೇಜನ ಸ್ವತಂತ್ರವಾಗಿ ಕಥೆ ಮಾಡಲು ಪ್ರೇರಣೆ. ಇವರ ಭಕ್ತ ಪ್ರಹ್ಲಾದ, ದತ್ತ ಜನ್ಮ ದಾಮಾಜಿ ಪಂತ, ಭಕ್ತಿ ಸಿರಿಯಾಳ ಮುಂತಾದ ಕಥಾ ಪ್ರಸಂಗಗಳು ಅತ್ಯಂತ ಜನಾದರಣೀಯವಾದವುಗಳು. ಉತ್ತಮ ಸಾಹಿತ್ಯ ನಿರೂಪಣೆ, ವಿಡಂಬನಾತ್ಮಕ ರಸ ನಿರೂಪಣೆಯಿಂದಾಗಿ ಇವರ ಕಾರ್ಯಕ್ರಮಗಳು ಜನಾದರಣೀಯ. ಇವರ ಮತ್ತೊಂದು ಸಾಧನೆಯೆಂದರೆ ಚಿದಂಬರ ವಾಜ್ಮಯವನ್ನು ಕೀರ್ತನೆಗೆ ಅಳವಡಿಸಿ ಹರಿಕಥೆ ಮಾಡುತ್ತಿದ್ದುದು. ಕರ್ನಾಟಕ, ಮಹಾರಾಷ್ಟ್ರದ ಗಡಿ ಪ್ರದೇಶದ ಹಳ್ಳಿ ಹಳ್ಳಿಗಳಲ್ಲೂ ಯಾವ ಫಲಾಪೇಕ್ಷೆಯೂ ಇಲ್ಲದೆ ಕೇವಲ ಪ್ರಚಾರ ಮನೋಭಾವದಿಂದ ಕೀರ್ತನ ಕಲೆಯ ಪ್ರಚಾರ ಮಾಡುತ್ತಿದ್ದ ನಿಸ್ವಾರ್ಥ ಮನೋಭಾವದ ಕಲಾವಿದರು.

ಪ್ರಶಸ್ತಿ – ಪುರಸ್ಕಾರಗಳು : ಇವರಿಗೆ ’ಕೀರ್ತನ ಕೇಸರಿ’ ಎಂಬ ಬಿರುದಿನೊಂದಿಗೆ ಅನೇಕ ಮಠ-ಮಂದಿರಗಳು ಗೌರವಿಸಿ ಸನ್ಮಾನಿಸಿವೆ. ಅಖಿಲ ಕರ್ನಾಟಕ ಕೀರ್ತನ ಕಲಾ ಪರಿಷತ್ತಿನಿಂದ ಇವರು ಸನ್ಮಾನಿಸಲ್ಪಟ್ಟಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೧೯೮೭- ೮೮ರ ಸಾಲಿನ ’ಕರ್ನಾಟಕ ಕಲಾ ತಿಲಕ’ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ಸರ್ಕಾರ ಗೌರವ ಮಾಸಾಶನ ನೀಡಿ ಗೌರವಿಸಿದೆ.

ಇವರೂ ಸಹ ೯೦ರ ದಶಕದಲ್ಲೇ ನಿಧನರಾದರು.