ಇಲ್ಲಿ ಬೆಳೆಯಿತು ಮಲ್ಲಿಗೆ
ಸುತ್ತ ಹತ್ತೂ ದಿಕ್ಕಿನಲ್ಲಿ ಹಬ್ಬಿಕೊಂಡಿತು ಮೆಲ್ಲಗೆ
ಇದರ ಕಂಪಿನ ಜಾಲ ಹಾಸಿದೆ
ಈಗ ಎಲ್ಲಿಂದೆಲ್ಲಿಗೆ !

ಇಲ್ಲಿ ಬೆಳೆಯಿತು ಮಲ್ಲಿಗೆ
ನೂರುಭಾವದ ನೀರು ಬೆರೆಯಿತು
ಬೇರ ಸುತ್ತಣ ಪಾತಿಗೆ,
ಪಂಚಭೂತಗಳೆಲ್ಲ ಕೈ ಕೈ ಹಿಡಿದು ಮಾಡಿದ ಸಂಚಿಗೆ
ಹತ್ತು ದಿಕ್ಕಿಂದೆರಗಿ ಬಂದಿವೆ ನೂರು ದುಂಬಿಯ ಕೋರಿಕೆ !

ಇಲ್ಲಿ ಬೆಳೆಯಿತು ಮಲ್ಲಿಗೆ ;
ಸುತ್ತ ಬೇಲಿಯ ಕಟ್ಟಿ ಕಾದೆವು
ನಮ್ಮ ಚೆಲುವಿನ ತೋಟಕೆ.
ತೋಟ ನಮ್ಮದು ; ಬೇಲಿ ನಮ್ಮದು ;
ಬೇಲಿ ತಡೆವುದೆ ಕಂಪಿಗೆ ?
ಹಾರಿಹೋಗಿದೆ, ಹರಡಿ ಹೋಗಿದೆ
ಗಾಳಿ ಬೀಸಿದ ದಿಕ್ಕಿಗೆ.
ಎಲ್ಲೊ ಯಾರೋ ‘ಆಹ’ ಎಂದರೆ
ತೃಪ್ತಿಯಾಗಿದೆ ಮನಸಿಗೆ.