ಶ್ರದ್ಧೆಯಿಂದ ಸದ್ದಿಲ್ಲದೆ ಸಂಗೀತ ಸಾಧನೆ – ಬೋಧನೆ ಮಾಡುತ್ತಿದ್ದ ಸಂಗೀತ ಕಲಾವಿದರಲ್ಲಿ ಗುಳೇದ ಗುಡ್ಡದ ಅಂಧ ಗಾಯಕ ಶ್ರೀ ಮಲ್ಲೇಶಪ್ಪ ಬಿ. ಪತ್ತಾರ ಗವಾಯಿಗಳು ಒಬ್ಬರಾಗಿದ್ದರು. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಡಿವಾಲ ಕಲ್ಲಾಪುರ ಗ್ರಾಮದಲ್ಲಿ ಅಕ್ಕಸಾಲಿಗ ಮನೆತನದಲ್ಲಿ ೧೯೩೪ರಲ್ಲಿ ಜನಿಸಿದ ಶ್ರೀ ಮಲ್ಲೇಶಪ್ಪನವರು ತಮ್ಮ ಏಳನೆಯ ವಯಸ್ಸಿನಲ್ಲಿಯೇ ದೃಷ್ಟಿ ಕಳೆದುಕೊಂಡ ನತದೃಷ್ಟರು. ಅವರ ತಂದೆ ಶ್ರೀ ಭೀಮರಾಯಪ್ಪನವರು ವೃತ್ತಿಯಿಂದ ಅಕ್ಕಸಾಲಿಗರಾದರೂ ಪ್ರವೃತ್ತಿಯಿಂದ ಉತ್ತಮ ಪಿಟೀಲು ವಾದಕರಾಗಿದ್ದರು. ಈ ವಾತಾವರಣದಲ್ಲಿ ಬೆಳೆದ ಶ್ರೀ ಮಲ್ಲೇಶಪ್ಪನವರಿಗೆ ಎಳೆ ವಯಸ್ಸಿನಿಂದಲೇ ಸಂಗೀತದತ್ತ ಒಲವು ಬೆಳೆಯಿತು.

ತಮ್ಮ ಮಗ ಸಂಗೀತಗಾರನಾಗಬೇಕೆಂಬುದು ಭೀಮರಾಯಪ್ಪನವರ ಬಯಕೆ. ಅದನ್ನು ಮನಗಂಡ ಮುರನಾಳ-ಗದ್ದನಗಿರಿ ಶ್ರೀ ಮಳೇರಾಜೇಂದ್ರ ಮಠದ ಪೂಜ್ಯ ಶ್ರೀ ಗಂಗಾಧರಸ್ವಾಮಿ ಮಹಾ ಪುರುಷರು ಮಲ್ಲೇಶಪ್ಪನವರನ್ನು ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮಕ್ಕೆ ಹೋಗಿ ಸಂಗೀತ ಕಲಿಯಬೇಕೆಂದು ಆಶೀರ್ವದಿಸಿದರು. ಅವರ ಆಶೀರ್ವಾದದಂತೆ ಶ್ರೀ ಮಲ್ಲೇಶಪ್ಪನವರು ವೀರೇಶ್ವ ರ ಪುಣ್ಯಾಶ್ರಮಕ್ಕೆ ಬಂದು ಪಂ.ಡಾ. ಪುಟ್ಟರಾಜ ಗವಾಯಿಗಳಲ್ಲಿ ೧೨ ವರ್ಷ ಸಂಗೀತ ಕಲಿತು ಹಾಡುಗಾರಿಕೆ, ತಬಲಾ ಹಾಗೂ ಹಾರ್ಮೋನಿಯಂ ವಾದನದಲ್ಲಿ ಪಾರಂಗತರಾದರು. ಗಾಂಧರ್ವ ಮಹಾ ವಿದ್ಯಾಲಯದ ‘ಸಂಗೀತ ವಿಶಾರದ’ ಪರೀಕ್ಷೆಯಲ್ಲಿ ಪಾಸಾದರು. ಚಾಲುಕ್ಯ ಸಾಮ್ರಾಜ್ಯೋತ್ಸವ, ಪಟ್ಟದಕಲ್ಲು ಮುಂತಾದ ಸಂಗೀತ ಉತ್ಸವಗಳಲ್ಲಿ ಅವರು ಸಂಗೀತ ಕಾರ್ಯಕ್ರಮ ನೀಡಿದ್ದಾರೆ.

ಇಲಕಲ್ಲ ಚಿತ್ತರಗಿ ಸಂಸ್ಥಾನದ ಶ್ರೀಮ ನಿ. ಪ್ರ. ಮಹಾಂತಸ್ವಾಮಿಗಳ ಅಪ್ಪಣೆಯ ಮೇರೆಗೆ ಹುನಗುಂದ ತಾಲೂಕಿನ ಹಿರೇ ಬಾದವಾಡಗಿಯಲ್ಲಿ ಸತತ ಎಂಟು ವರ್ಷ ಪುರಾಣದಲ್ಲಿ ಸಂಗೀತ ಸೇವೆ ಸಲ್ಲಿಸಿದರು. ಗುಳೇದಗುಡ್ಡದ ಶ್ರೀ ಗುರು ಸಿದ್ದೇಶ್ವರ ಬೃಹನ್ಮಠದ ಜಗದ್ಗುರು ಬಸವರಾಜ ಪಟ್ಟರಾರ್ಯ ಮಹಾ ಸ್ವಾಮಿಗಳ ಅಪ್ಪಣೆಯಂತೆ ಶ್ರೀ ಗುರು ಸಿದ್ದೇಶ್ವರ ಸಂಗೀತ ಪಾಠಶಾಲೆಯಲ್ಲಿ ಕೆಲ ವರ್ಷ ಸಂಗೀತ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದರು. ೧೯೮೪ರಲ್ಲಿ ಗುಳೇದಗುಡ್ಡದಲ್ಲಿ ತಾವೇ ಸ್ವತಃ ಶ್ರೀ ಗಾನಯೋಗಿ ಪಂಚಾಕ್ಷರಿ ಸಂಗೀತ ವಿದ್ಯಾಲಯ ಸ್ಥಾಪಿಸಿ ಆಸಕ್ತರಿಗೆ ಸಂಗೀತ ಶಿಕ್ಷಣ ನೀಡಿದ್ದಾರೆ. ಅವರು ಅನೇಕ ಜನ ಶಿಷ್ಯರನ್ನು ತಯಾರಿಸಿದ್ದಾರೆ. ಅಂಥವರಲ್ಲಿ ಸಂಗಪ್ಪ ಹಳಿಮನಿ, ಯಮನೂರಪ್ಪ ಹೂಗಾರ, ಗಣೇಶಪ್ಪ ಹಳ್ಳಿ ಕಲ್ಲಪ್ಪ ಕಲ್ಯಾಣಿ, ಸಣಬಸಪ್ಪ, ದಿಂಡಿ, ಶ್ರೀದೇವಿ ಹರಿದಾಸ, ಸವಿತಾ ಕಟ್ಟಿ, ವಾಣಿಶ್ರೀ ಢಾಣಕ ಶಿರೂರ, ಕಿರಣ ಯರಪಲ್ಲ, ಶಂಕರಲಮಾಣಿ, ಸುಮಿತ್ರಾ ಪತ್ತಾರ, ಅಖಂಡೇಶ ಪತ್ತಾರ, ಶ್ರೀದೇವಿ ಧುತ್ತರಗಿ, ಲಕ್ಷ್ಮಿಬಾಯಿ ಕವಾತರ, ವಿನಯಾ ಕುಪ್ಪಸ್ತ ಪ್ರಮುಖರಾಗಿದ್ದಾರೆ.

ಶ್ರೀ ಮಲ್ಲೇಶಪ್ಪ ಗವಾಯಿಗಳ ಸಂಗೀತ ಸೇವೆಗೆ ಅನೇಕ ಪ್ರಶಸ್ತಿ – ಪುರಸ್ಕಾರ ದೊರೆತಿವೆ. ಸಂಗೀತ ವಿದ್ವಾನ್‌, ಗಾನ ಕಂಠೀರವ, ಗಾನ ಗಂಧರ್ವ, ಸಂಗೀತ ಸುಧಾಕರ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ, ಕರ್ನಾಟಕ ಕಲಾಶ್ರೀ (೧೯೯೯-೨೦೦೦) ಅಂಥವುಗಳಲ್ಲಿ ಉಲ್ಲೇಖನೀಯವಾಗಿವೆ. ೭೫ ವರ್ಷ ತುಂಬು ಜೀವನ ಬಾಳಿದ ಅಂಧ ಗಾಯಕ ಶ್ರೀ ಮಲ್ಲೇಶಪ್ಪ ಬಿ. ಪತ್ತಾರ ೧೮-೧೧-೨೦೦೪ ರಂದು ನಿಧನರಾದರು.