ಬೆಂಗಳೂರು ನಗರದ ಮಲ್ಲೇಶ್ವರಂ ಬಡಾವಣೆ ಯಾವಾಗಲೂ ಸಂಗೀತಗಾರರ ಸಂಗೀತಾಭಿಮಾನಿಗಳ ರಸಿಕರ ಬೀಡಾಗಿದ್ದು ಕರ್ನಾಟಕ ಹಾಗೂ ಹಿಂದೂಸ್ಥಾನಿ ಸಂಗೀತ ಕಲಾವಿದರ ಮೇಳವೇ ಇಲ್ಲಿ ನೆರೆದಿರುತ್ತಿತ್ತು. ಆದರೆ ಕಚೇರಿಗಳನ್ನು ನಡೆಸಲು ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ವ್ಯವಸ್ಥೆ ಇರಲಿಲ್ಲ. ಈ ಬಡಾವಣೆಯ ಎಂಟನೇ ಅಡ್ಡ ರಸ್ತೆಯ ಪಶ್ಚಿಮ ಉದ್ಯಾನ ರಸ್ತೆಯಲ್ಲಿ ಒಂದು ರಾಮಭಜನಾ ಮಂದಿರವಿದೆ. ಅದರ ಪಕ್ಕದಲ್ಲೇ ಮಹಾಗಣಪತಿಯ ಆಲಯವಿದೆ. ಆದರೆ ಇದಾವುದೂ ಸಂಗೀತ ಕಚೇರಿಗಳನ್ನು ನಡೆಸಲು ಸಹಕಾರಿಯಾಗಿರಲಿಲ್ಲ. ಕೆಲವು ಆಸಕ್ತರು ಸೇರಿ ೨೯-೧-೧೯೪೮ ರಂದು ಸಾಯಿಬಾಬ ಸಂಗೀತ ಸಭಾ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಅನೇಕ ಹಿರಿಯರು. ರಸಿಕರು ಇದರ ಸದಸ್ಯರಾದರು. ಮೈಸೂರು ಟಿ. ಚೌಡಯ್ಯನವರ ಸಹಕಾರ ಪ್ರಯತ್ನದ ಫಲವಾಗಿ ಅದೇ ವರ್ಷ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಇದನ್ನು “ಮಲ್ಲೇಶ್ವರ ಸಂಗೀತ ಸಭಾ” ಎಂದು ಹೆಸರು ಬದಲಾಯಿಸಲಾಯಿತು. ಅನೇಕಾನೇಕ ವಿದ್ವಾಂಸರು ಕೇವಲ ಪ್ರಯಾಣದ ಖರ್ಚನ್ನು ಮಾತ್ರ ತೆಗೆದುಕೊಂಡು ಸಂಭಾವನೆ ನಿರೀಕ್ಷಿಸದೆ ಕಚೇರಿಗಳನ್ನು ನಡೆಸಿ ಸಭೆಯು ಉನ್ನತ ಸ್ಥಿತಿಗೆ ಏರಲು ಕಾರಣರಾದರು.

ಇ. ನಟೇಶನ್ ಅವರ ಪುತ್ರ ಇ. ಎನ್. ಸೀತಾರಾಮನ್, ರಾಮಾನುಜ ಅಯ್ಯಂಗಾರ್, ರಾಮಯ್ಯ, ಟಿ. ಬಿ. ನರಸಿಂಹಾಚಾರ್, ಕೆ. ಎನ್. ವಿ. ರಾವ್, ಸಿಂಗ್ರ ಐಯ್ಯಂಗಾರ್, ಸಂಪತ್ಕುಮಾರನ್ ಮುಂತಾದವರೊಡನೆ ಬಡಾವಣೆಯ ಹಿರಿಯ ಪ್ರತಿಷ್ಠಿತ ವ್ಯಕ್ತಿಗಳೆಲ್ಲರೂ ಈ ಸಂಸ್ಥೆಯ ಮೇಲ್ಮೆಗಾಗಿ ದುಡಿದರು. ಇದರ ಫಲವಾಗಿ ಇಂದಿ ಈ ಸಂಸ್ಥೆಯ ಸದಸ್ಯತ್ವ ಸಾವಿರವನ್ನೂ ಮೀರಿದೆ.

ಕೇವಲ ಸಂಗೀತ ಕಚೇರಿಗಳು ಮಾತ್ರವಲ್ಲದೆ ಯುವ ಕಲಾವಿದರಿಗಾಗಿ ಸಂಗೀತೋತ್ಸವ, ಸಂಗೀತ ಸ್ಪರ್ಧೆಗಳು, ಇನ್ನಿತರ ಕಲಾಭಿವೃದ್ಧಿ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಿದೆ. ಇದುವರೆಗೂ ತನ್ನದೇ ಆದ ಸ್ವಂತ ಭವನ ಸಭಾಂಗಣ ಇಲ್ಲದಿರುವ ಈ ಸಂಸ್ಥೆ ಮಲ್ಲೇಶ್ವರಂ ರಾಮಮಂದಿರ ಸಭಾಂಗಣ, ವರದಾಚಾರ್ ಸಭಾಂಗಣ, ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಸಭಾಂಗಣ, ಅನನ್ಯ ಸಭಾಂಗಣಗಳಲ್ಲಿ ತನ್ನ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

೧೯೮೮ ರಲ್ಲಿ ಸರ್ಕಾರ ಹಾಗೂ ಬೆಂಗಳೂರು ಮಹಾನಗರ ಪಾಲಿಕೆ ಮಂಜೂರು ಮಾಡಿದ ನಿವೇಶನಕ್ಕೆ ಕೆಲವರು ವಿರೋಧ ಒಡ್ಡಿದರು. ನ್ಯಾಯಾಲಯದಿಂದ ತಡೆಯಾಜ್ಞೆ ತಂದರು. ಈಗ ಸುಪ್ರೀಂಕೋರ್ಟ್‌ಆದೇಶದಂತೆ ಈ ನಿವೇಶನದ ಪಕ್ಕದಲ್ಲಿಯೇ ಮತ್ತೊಂದು ೭೫ * ೧೦೦ ಚದರ ಅಡಿಗಳ ನಿವೇಶನ ಸಂಸ್ಥೆಗೆ ದೊರಕಿದೆ. ಟಿ. ಎಸ್. ರಾಜಂ ಹಾಗೂ ಹಿರಿಯ ಸಂಗೀತ ವಿದ್ವನ್ಮಣಿಗಳ ಸಹಾಯ ಧನ ಸಂಸ್ಥೆಯ ಕಟ್ಟಡ ನಿರ್ಮಾಣಕ್ಕೆ ಸಹಾಯವಾಗುತ್ತಿದೆ.

೨೦೦೩ರ ಸಾಲಿನ ರಾಜ್ಯ ಸಂಗೀತ ನೃತ್ಯ ಅಕಾಡೆಮಿಯಿಂದ “ಕರ್ನಾಟಕ ಕಲಾಶ್ರೀ” ಪ್ರಶಸ್ತಿ ಗಳಿಸಿರುವ ಈ ಸಂಸ್ಥೆ ಸದ್ಯದಲ್ಲೇ ತನ್ನ ಸ್ವಂತ ಭವನದಲ್ಲಿ ಕಾರ್ಯಾಚರಣೆಯಲ್ಲಿ ತೊಡಗುವಂತಾಗಲಿದೆ.