ಗಗನಚುಕ್ಕಿ ಜಲಪಾತ

ದೂರ ತಾಲ್ಲೂಕು ಕೇಂದ್ರದಿಂದ – ೨೦ ಕಿ.ಮೀ.
ಜಿಲ್ಲಾ ಕೇಂದ್ರದಿಂದ – ೬೫ ಕಿ.ಮೀ.

 ಗಗನಚುಕ್ಕಿ ಜಲಪಾತವು ವಿಶ್ವವಿಖ್ಯಾತ ಜಲಪಾತವಾಗಿದ್ದು, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ (ಬ್ಲಫ್)ನಲ್ಲಿದೆ. ಸುಮಾರು ೨೨೦ ಅಡಿಗಳಷ್ಟು ಎತ್ತರದಿಂದ ಧುಮುಕುವ ಜಲಧಾರೆ ರಮ್ಯಮನೋಹರವಾಗಿದ್ದು, ಪ್ರತಿ ದಿನ ಸಾವಿರಾರು ಪ್ರವಾಸಿಗರು ಭೇಟಿನೀಡುತ್ತಾರೆ. ಈ ಪ್ರದೇಶದಲ್ಲಿ ಸುತ್ತಮುತ್ತ ಬೆಟ್ಟಗುಡ್ಡಗಳ ಸಾಲಿದ್ದು, ಸಮುದ್ರ ಮಟ್ಟದಿಂದ ೧೯೮೮ ಅಡಿಗಳಷ್ಟು ಎತ್ತರದಲ್ಲಿದೆ. ಈ ಜಲಪಾತಕ್ಕೆ ಹರಿಯುವ ಸ್ವಲ್ಪ ನೀರನ್ನು ಉಪಯೋಗಿಸಿಕೊಂಡು ಶಿವನಸಮುದ್ರದಲ್ಲಿ ವಿದ್ಯುತ್ ತಯಾರಿಸುತ್ತಿದ್ದು ಏಷ್ಯಾದಲ್ಲಿಯೇ ಪ್ರಥಮ ಜಲ ವಿದ್ಯುತ್ ಘಟಕವಾಗಿದೆ. ೧೯೦೨ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನ್ ಶೇಷಾದ್ರಿ ಅಯ್ಯರ್ ನೇತೃತ್ವದಲ್ಲಿ ವಿದ್ಯುತ್ ತಯಾರಿಸುವ ಯೋಜನೆ ರೂಪಿಸಲಾಯಿತು.

 

ಮುತ್ತತ್ತಿ

ದೂರ ತಾಲ್ಲೂಕು ಕೇಂದ್ರದಿಂದ – ೩೫ ಕಿ.ಮೀ.
ಜಿಲ್ಲಾ ಕೇಂದ್ರದಿಂದ – ೭೦ ಕಿ.ಮೀ.

ಕನ್ನಡ ನಾಡಿನ ಜೀವ ನದಿ ಕಾವೇರಿಯ ದಡದಲ್ಲಿ ಪ್ರಕೃತಿ ಸಿರಿಯನ್ನೇ ಮೈಹೊದ್ದು ಮಲಗಿರುವ ಪುಟ್ಟ ಗ್ರಾಮವೇ “ಮುತ್ತತ್ತಿ”. ಶ್ರೀರಾಮನ ಧರ್ಮಪತ್ನಿ ಸೀತಾದೇವಿಯು ಕಾವೇರಿ ನದಿಯಲ್ಲಿ ಸ್ನಾನ ಮಾಡುವಾಗ ಆಕೆಯ ಮುತ್ತಿನ ಮೂಗುತಿ ನೀರಿನಲ್ಲಿ ಬಿದ್ದು ಹೋಯಿತೆಂದೂ ಅದನ್ನು ರಾಮನ ಭಂಟನಾದ ಹುನುಮಂತನು ತನ್ನ ಬಾಲದಿಂದ ಎತ್ತಿ ಕೊಟ್ಟ ಕಾರಣದಿಂದ ಮುತ್ತತ್ತಿ ಎಂಬ ಹೆಸರು ಬಂದಿತೆಂದೂ ಇಲ್ಲಿ ಹನುಮಂತನು ಮುತ್ತತ್ತಿರಾಯನೆಂಬ ಹೆಸರಿನಿಂದ ಪೂಜಿಸಲ್ಪಡುತ್ತಿದ್ದಾನೆ. ರಮ್ಯ ಮನೋಹರ ಪ್ರಕೃತಿ ಸಿರಿಯಿಂದ ಕೂಡಿರುವ ಮುತ್ತತ್ತಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.