ಮಳೆಗಾಲ ಆರಂಭವಾದಾಗ ಜೂನ್ ಜುಲೈ ತಿಂಗಳಲ್ಲಿ ಕಾಡಿನ ಮರಗಳಲ್ಲಿ ಅರಳಿ ಕಂಗೊಳಿಸುವ ಸೀತಾಳ ದಂಡೆ ಪುಷ್ಪಪ್ರಿಯರ ಮೆಚ್ಚಿನ ಹೂ. ಕಾನನದ ಮಡಿಲಲ್ಲಿ ಎಲ್ಲಾದರೂ ಸೀತಾಳ ದಂಡೆ ಕಂಡು ಬಂದರೆ , ಅದನ್ನು ಆಸ್ವಾದಿಸುವ ಮನಸ್ಸು ಹೆಂಗಳೆಯರಿಗೆ. ಶುಭ್ರವಾದ ಕೋಮಲವಾದ ಹೂ ಗೊಂಚಲು ಇದಾಗಿರುವುದರಿಂದ ಸೀತಾಪುಷ್ಪ ಎನಿಸಿರಬಹುದು. ಕನ್ನಡದಲ್ಲಿ ಸಿತಾಳಿ ಎಂಬ ಪದ ಕೂಡಾ ಬಳಕೆಯಲ್ಲಿದೆ. ಸಿತ ಎಂದರೆ ಬಿಳಿ, ಅಳಿ ಎಂದರೆ ದುಂಬಿ. ಬಿಳಿ ದುಂಬಿಗಳ ಸಾಲು ಜೋಡಿಸಿಟ್ಟಂತೆ ಕಾಣುವ ಸೀತಾಳ ದಂಡೆಯ ಸಸ್ಯ ಶಾಸ್ತ್ರೀಯ ಹೆಸರು ರಿಂಕೋಸ್ಟೈಲಿಸ್ ರೆಟೂಸ್ ವನವಾಸದಲ್ಲಿ ರಾಮಾಯಣದ ಸೀತೆ ಈ ಹೂವನ್ನು ಮುಡಿಯುತ್ತಿದ್ದುದರಿಂದ ಸೀತಾದಂಡೆ ಎಂಬ ಹೆಸರು ಬಂತೆಂದು ಹೇಳಲಾಗುತ್ತದೆ. ಬಿಳಿ, ನೇರಳೆ, ಬಿಳಿ ಕಂದು ಬಣ್ಣಗಳಲ್ಲಿ ಹೆಚ್ಚಾಗಿ ಕಂಡು ಬರುವ ಸೀತಾಳ ದಂಡೆ ೮ -೧೦ ದಿನಗಳವರೆಗೆ ಬಾಡದೆ ಉಳಿಯುತ್ತದೆ. ಬಣ್ಣವೂ ಮಾಸುವುದಿಲ್ಲ. ಆರ್ಕಿಡ್ ಗುಂಪಿಗೆ ಸೇರುವ ಈ ಸಸ್ಯದ ಹೂವು ಪ್ರಕೃತಿಯ ವಿಶೇಷ ಕೊಡುಗೆ. ಸೀತಾಳ ದಂಡೆಯ ಸಸ್ಯ ಯಾವುದೇ ಗಿಡಮರ ಬಳ್ಳಿಗಳಿಗೆ ಅಂಟಿಕೊಂಡು ಸಹಜವಾಗಿ ಬೆಳೆಯುತ್ತದೆ. ಪ್ರಕೃತಿಯಲ್ಲಿ ಲಭಿಸುವ ನೀರು ಗೊಬ್ಬರಗಳನ್ನು ಬಳಸಿಕೊಂಡು ಸೊಗಸಾಗಿ ಬೆಳೆಯುವ ಸೀತಾಳ ದಂಡೆ ಸಸ್ಯದ  ಕಾಂಡದಿಂದಲೇ ಪುನರುತ್ಪತ್ತಿಯಾಗುತ್ತದೆ. ನಾವು ಸೀತಾಳದಂಡೆ ಎಂದೋ ಸೀತಾಪುಷ್ಪವೆಂದೋ ಸೀತೆ ಹೂವೆಂದೋ ಮೋಹಕವಾಗಿ ಹೆಸರಿಸುವ ರಿಂಕೋಸ್ಟೈಲಿಸ್ ರೆಟೂಸ ಎಂಬ ಸಸ್ಯಶಾಸ್ತ್ರೀಯ ನಾಮದ ಈ ಆಕರ್ಷಣೀಯ ಹೂಗೊಂಚಲು ಆಂಗ್ಲ ಭಾಷೆಯಲ್ಲಿ ಫಾಕ್ಸ್ ಟೈಲ್ ಆರ್ಕಿಡ್ (ನರಿಬಾಲದ ಆರ್ಕಿಡ್) ಎನ್ನಿಸಿಕೊಂಡಿದೆ. ಕಾರಣವಿಷ್ಟೇ ಈ ಹೂಗೊಂಚಲಿರುವುದು ಕೊಳವೆಯಂತೆ, ಉದ್ದನೆಯ ಬಾಲದಂತೆ. ಆರ್ಕಿಡ್ ಗಳ ಕುಟುಂಬದಲ್ಲಿ ರಿಂಕೋಸ್ಟೈಲಿಸ್ ಬಹಳ ಸುಂದರವಾದ ಸಣ್ಣ ಜೀನಸ್ಸು, ಹೂವುಗಳು ಸಣ್ಣವಾದರೂ ಅವು ಜೋತಿರುವ ಅಥವಾ ನೇರವಾಗಿರುವ ಹೂಗೊಂಚಲುಗಳ ಮೇಲೆ ಒತ್ತಾಗಿ ಬರುತ್ತವೆ. ಸಸ್ಯ ಸುಮಾರು ಇಪ್ಪತ್ತು ಸೆಂ.ಮೀ. ಎತ್ತರಕ್ಕೆ ಬೆಳೆದರೆ ಅದರ ಎಲೆ ಅದಕ್ಕಿಂತಲೂ ಹೆಚ್ಚು ಅಂದರೆ ಸುಮಾರು ೨೫ ಎಂ.ಮೀ. ನಷ್ಟು ಉದ್ದವಾಗಿದ್ದು ಬಾಗಿರುತ್ತದೆ. ಎಲೆಯ ಜತೆಯಲ್ಲಿ ಜೋತಿರುವ ಹೂಗೊಂಚಲು ವೀಕ್ಷಣೆಗೆ ಬಲು ಸೊಗಸು. ಹೂಗೊಂಚಲಿನ ತುಂಬಾ ಎರಡು ಎಂ.ಮೀ. ಅಗಲದ ಹೂಗಳು ತುಂಬಿರುತ್ತದೆ. ಪುಪ್ಷಪತ್ರ ಮತ್ತು ದಳ ಬಿಳುಪು ಬಣ್ಣದಿಂದ ಕೂಡಿದ್ದು ಆಕರ್ಷಣೀಯವಾಗಿದೆ. ದಳದ ಮೇಲೆ ನೀಲಿ ಹಾಗೂ ಕೆನ್ನೀಲಿ ಚುಕ್ಕೆಯದ್ದು ಹೂಗೊಂಚಲಿಗೆ ಮತ್ತಷ್ಟು  ಮೆರುಗು ತಂದಿತ್ತಿದೆ. ಹೆಚ್ಚಿನ ಜನರು ಸೀತಾಳದಂಡೆ ಮರದ ಮೇಲೆ ಬೆಳೆಯುವಂತಾದ್ದು ಎಂಬ ತಿಳುವಳಿಕೆಯನ್ನು ಹೊಂದಿದ್ದು, ಅದನ್ನು ತಮ್ಮ ಮನೆಯ ಹೂದೋಟದಲ್ಲಿ ಬೆಳೆಸುವ ಪ್ರಯತ್ನ ಮಾಡುವುದಿಲ್ಲ. ಯಾವುದೇ ಗಿಡ ಮರ ಬಳ್ಳಿಗಳ ಮೇಲೆ ಸೀತಾಳೆ ದಂಡೆಯ ಒಂದು ಕಾಂಡವನ್ನು ಇಟ್ಟರೆ ಅದು ಮುಂದಿನ ವರ್ಷದ ಮಳೆಗಾಲದ ಸಮಯಕ್ಕೆ ಹೂ ಬಿಡುತ್ತದೆ. ಉದ್ದುದ್ದ ಗೊಂಚಲುಗಳಾಗಿ ಬಣ್ಣಬಣ್ಣದ ಮುತ್ತುಗಳನ್ನು ಪೋಣಿಸಿದಂತೆ ತೋರುವ ಈ ಹೂವು ಹೆಣ್ಣುಮಕ್ಕಳ ಮುಡಿಯನ್ನು ಅಲಂಕರಿಸುತ್ತದೆ. ಸ್ವಲ್ಪ ಯ್ರಯತ್ನಿಸಿ ಸೀತಾಳೆದಂಡೆ ಯನ್ನು ಮನೆಯ ಹೂದೋಟಗಳಲ್ಲಿ ಬೆಳೆಸಬಹುದು. ಇದನ್ನು ಒಣಮರದ ತುಂಡುಗಳ ಮೇಲೆ ಬೆಳೆಸಬಹುದಾಗಿದೆ. ಒಂದಿಂಚಿನ ಇಟ್ಟಿಗೆ ಚೂರು ಇದ್ದಿಲು ಚೂರು, ತೆಂಗಿನನಾರಿನ ಚೂರುಗಳಿಂದ ಮಿಶ್ರಣ ಸಿದ್ದಪಡಿಸಿ ಕುಂಡಗಳಲ್ಲಿ ಸೀತಾಳೆದಂಡೆಯ ಗಿಡಗಳನ್ನು ಬೆಳೆಸಬಹುದು. ಗಿಡದ ಕಾಂಡದಿಂದ ಮೂಡುವ ಸರಕುಗಳಿಂದ ಸಸ್ಯಗಳನ್ನು ವೃದ್ದಿಸಿಕೊಳ್ಳಬಹುದು. ಅನೇಕ ದಿನಗಳ ಕಾಲ ಉಳಿಯುವ ಈ ಸುಂದರ ಹೂಗೊಂಚಲು ಕೇವಲ ಕಾಡಿಗೆ ಮಾತ್ರ ಮೀಸಲಲ್ಲ. ಇದೀಗ ಮನೆಗಳ ಹೂಕುಂಡಗಳಲ್ಲಿ ಉದ್ಯಾನಗಳಲ್ಲಿ ರಾರಾಜಿಸತೊಡಗಿರುವ ಸೀತಾಳ ದಂಡೆಯನ್ನು ನೀವೂ ಬೆಳೆದು ನೋಡಿ…