ಈ ದಿನ ಆಗಲೇ ಮಳೆಯ ಮಬ್ಬು ; ಛಳಿಗಾಳಿ. ಒಂಬತ್ತು ಗಂಟೆಯ ವೇಳೆಗೆ ಬಂದ ಕಾರಲ್ಲಿ ಕೂತು ಸುಮಾರು ದೂರ ಹೋದ ಮೇಲೆ ಕಾಣಿಸುವ ಟೆಲಿವಿಜನ್ ಗೋಪುರದ ಸಮೀಪದಲ್ಲಿರುವ ‘ಓಸ್ಟೆನ್ ಕಿನೊ ಅರಮನೆ’ ಗೆ (Osten kino palace) ಹೋದೆವು. ಇದು ಕ್ರಿ. ಶ. ೧೭೯೭ರಂದು ರಾಜಮನೆತನಕ್ಕೆ ಸೇರಿದ ಕೌಂಟ್‌ಷೆರಿಮತ್ಯೆಯೇವ್ ಎಂಬಾತನು ಕಟ್ಟಿಸಿದ್ದು. ಕ್ರಾಂತಿಯ ನಂತರ ಇದನ್ನೊಂದು ವಸ್ತುಪ್ರದರ್ಶನಾಲಯವನ್ನಾಗಿ ಮಾಡಲಾಯಿತು.  ಈ ಅರಮನೆಯ ಹಿಂದೆ ದೊಡ್ಡ ಕಾಡಿನ ತೋಪು; ಅದರಲ್ಲಿ ದಿಕ್ಕು ದಿಕ್ಕಿಗೆ ಹಾದುಹೋಗಿರುವ ಹಾದಿಗಳು. ಸಣ್ಣಗೆ ಮಳೆ ಹನಿಯುತ್ತಿದ್ದ ಕಾರಣ ನಾವು ಈ ಕಾಡಿನ ಹಾದಿಯಲ್ಲಿ ಹೋಗಲಾಗದೆ, ಅರಮನೆಯ ಒಳಭಾಗವಷ್ಟನ್ನೇ ನೋಡಿದೆವು. ಒಳಗೆ ಪ್ರವೇಶಿಸುವ ಮುನ್ನ ನಮ್ಮ ಬೂಡ್ಸುಗಳ ಮೇಲೆ, ಅಲ್ಲಿರಿಸಿರುವ ಬಟ್ಟೆಯ ಬೂಡ್ಸುಗಳನ್ನು ಕಟ್ಟಿಕೊಳ್ಳಬೇಕು. ಅರಮನೆಯೊಳಗೆ ಪ್ರೇಕ್ಷಕರ ಪಾದಧೂಳಿ ಬಿದ್ದು ಮಲಿನವಾಗದಿರಲಿ ಎಂಬುದೆ ಈ ಏರ್ಪಾಡಿನ ಉದ್ದೇಶ.

ಅರಮನೆ ತುಂಬ ವಿಸ್ತಾರವಾದದ್ದು. ನೆಲವೆಲ್ಲಾ ಮರದ್ದು. ಪಾಲಿಷ್ ಮಾಡಿದ್ದ ಕಾರಣ ಥಳಥಳ ಹೊಳೆಯುತ್ತಿತ್ತು. ಅಮೃತ ಶಿಲೆಯ ಕಂಬಗಳನ್ನುಳ್ಳ ಅದೆಷ್ಟೋ ಕೊಠಡಿಗಳನ್ನು ಹಾದು ಹೋದೆವು. ಒಂದೊಂದು ಕೊಠಡಿಯಲ್ಲೂ ಗ್ರೀಕ್ ಶಿಲಾ ಪ್ರತಿಮೆಗಳು; ಸೊಗಸಾದ ವರ್ಣ ಚಿತ್ರಪಟಗಳು; ಹಲವು ಶತಮಾನಗಳ ಹಿಂದಿನ ಪೀಠೋಪಕರಣಗಳು; ಅಂದಿನ ಶ್ರೀಮಂತಿಕೆಯನ್ನು ಬಿಂಬಿಸುವ ಅನೇಕ ಬಗೆಯ ವಸ್ತುಗಳು. ಈ ಅರಮನೆಯೊಳಗಣ ನಾಟ್ಯಮಂದಿರವಂತೂ ಸಮ್ಮೋಹಕವಾಗಿದೆ. ಅದಕ್ಕೆ ಸಂಬಂಧಿಸಿದ ಅಂದಿನ ಸುಪ್ರಸಿದ್ಧ ನಟನಟಿಯರ ಭಾವಚಿತ್ರಗಳಿವೆ. ರಷ್ಯದ ಜನ ಶ್ರೀಮಂತಿಕೆಯ ಶೋಷಣೆಯ ವಿರುದ್ಧ ದಂಗೆ ಎದ್ದರು; ರಾಜರನ್ನು ದ್ವೇಷಿಸಿದರು; ಮೂಲೆಗೆ ಒತ್ತಿದರು. ಆದರೆ ಆ ರಾಜಭೋಗದ ಮಹಲುಗಳನ್ನು ಮತ್ತು ಅಂದಿನ ಭೋಗಜೀವನದ ವಸ್ತುಗಳನ್ನು, ತಮ್ಮ ಇತಿಹಾಸದ ಒಂದು ಭಾಗವೆಂಬಂತೆ ಉಳಿಸಿಕೊಂಡಿದ್ದಾರೆ. ಹಾಗೆ ಉಳಿಸುವಲ್ಲಿ ಇವತ್ತಿನ ಪ್ರೇಕ್ಷಕರಿಗೆ, ಆ ಹೊತ್ತಿನ ಆವರಣವನ್ನೆ ಕಲ್ಪಿಸುತ್ತಾರೆ. ಅದಕ್ಕಾಗಿ ಅವರು ಇಂಥ ಸ್ಥಳಗಳಿಗೆ ವಿದ್ಯುದ್ದೀಪಗಳನ್ನು ಕೂಡ ಹಾಕುವುದಿಲ್ಲ. ವಿದ್ಯುದ್ದೀಪಗಳಿಲ್ಲದ ಆ ಪ್ರಾಚೀನ ಕಾಲದಲ್ಲಿ ಈ ಅರಮನೆ ಹೇಗೆ ಕಾಣಿಸುತ್ತಿತ್ತೋ ಹಾಗೇ ಈ ಹೊತ್ತೂ ಕಾಣಿಸಬೇಕೆಂಬುದು ಇದರ ಉದ್ದೇಶ.

ಆಗಲೇ ಹನ್ನೆರಡು ಗಂಟೆಯಾಗಿತ್ತು. ಎರಡೂವರೆ ಗಂಟೆಗೆ ಆರ್ಮರಿಗೆ ಹೋಗುವ ಟಿಕೇಟು ನಮ್ಮ ಬಳಿಯಲ್ಲಿತ್ತು. ಅಷ್ಟರೊಳಗೆ ಊಟ ಮುಗಿಸಬೇಕು. ಮಧ್ಯಾಹ್ನದ ಊಟ ಎಂದರೆ ಮುಗಿಯಿತು ಗತಿ; ಆದರು ಬೇಗ ಮುಗಿಸೋಣವೆಂದು, ನ್ಯಾಷನಲ್ ಕೆಫೆಗೇ ಹೋದೆವು. ಊಟ ತರಿಸಿ ಮುಗಿಸುವ ವೇಳೆಗೆ ಆಯುಧಾಗಾರ ಪ್ರವೇಶಕ್ಕೆ ನಮಗೆ ಕೊಟ್ಟ ಸಮಯ ಮೀರಿ ಹೋಗಿತ್ತು. ಎರಡೂಮುಕ್ಕಾಲರ  ವೇಳೆಗೆ ಹೊರಬಿದ್ದು, ಸಣ್ಣಗೆ ಸುರಿವ ಮಳೆಯಲ್ಲಿ, ತಣ್ಣಗೆ ಕೊರೆವ ಛಳಿಯಲ್ಲಿ ಇಪ್ಪತ್ತು ನಿಮಿಷ ಕ್ರೆಮ್ಲಿನ್ನಿನ ಒಳಗೆ ಧಾವಿಸಿದೆವು. ನಡೆದು ನಡೆದು ಆ ಛಳಿಯಲ್ಲೂ ಬೆವರಿದೆ. ಆತುರದಲ್ಲಿ ವೊಲೋಜ ಯಾವ್ಯಾವುದೋ ಬಾಗಿಲನ್ನು ದಬ್ಬಿದ. ಕಡೆಗೆ ಸರಿಯಾದ ಬಾಗಿಲು ಸಿಕ್ಕಿತು. ಮೇಲಂಗಿಗಳನ್ನು ಕಳಚಿ ಒಪ್ಪಿಸಿ, ಕಾಲಿಗೆ ಬಟ್ಟೆಯ ಬೂಡ್ಸುಗಳನ್ನು ಕಟ್ಟಿಕೊಂಡು ಮೆಟ್ಟಿಲೇರಿದವು. ಸದ್ಯ ತುಂಬ ತಡವಾಗಿ ಬಂದೆವೆಂಬ ಕಾರಣದಿಂದ ಎಲ್ಲಿ ಒಳಕ್ಕೆ ಬಿಡುವುದಿಲ್ಲವೋ ಎಂಬ ಆತಂಕ, ಒಳಗೆ ಹೋದ ಮೇಲೆ ಪರಿಹಾರವಾಯಿತು. ಮೆಟ್ಟಿಲುಗಳನ್ನೇರಿ ಹೊಕ್ಕೊಡನೆ ಕಾದಿತ್ತು ದಿಗ್ಭ್ರಮೆ.

ಕ್ರೆಮ್ಲಿನ್ ಅರಮನೆಯ ಬದಿಯಲ್ಲಿರುವ ‘ಆರ್ಮರಿ’ ಎಂಬ ಈ ಭಾಗ ಜಾರ್ ಚಕ್ರವರ್ತಿಗಳ ವೈಭವವನ್ನು ಕಾದಿರಿಸಿದ ಸ್ಥಳವಾಗಿದೆ. ಹದಿನಾರನೆಯ ಶತಮಾನದಲ್ಲಿ ಈ ಸ್ಥಳ ಯುದ್ಧಕ್ಕಾಗಿ ತಯಾರು ಮಾಡುವ ಆಯುಧಗಳ ಕಮ್ಮಟವೂ, ಸಂಗ್ರಹ ಶಾಲೆಯೂ ಆಗಿತ್ತಂತೆ. ಕ್ರಾಂತಿಯ ನಂತರ, ೧೮೫೧ರಲ್ಲಿ ಈ ಸ್ಥಳವನ್ನು ಪ್ರದರ್ಶನಾಲಯವನ್ನಾಗಿ ಪರಿವರ್ತಿಸಲಾಯಿತು.

ಇಲ್ಲಿರಿಸಿರುವ ರಾಜ – ರಾಣಿಯರ ಉಡುಪುಗಳು ಗಜಗಾತ್ರಕ್ಕೆ ಹೇಳಿ ಮಾಡಿಸಿದವುಗಳಾಗಿ ಚಿನ್ನ – ಬೆಳ್ಳಿ – ಮುತ್ತುಗಳ ಕಸೂತಿಯಿಂದ ಕೂಡಿವೆ. ಚಿನ್ನದ ದಂತದ ಬೆಳ್ಳಿಯ ಸಿಂಹಾಸನಗಳು; ಮುತ್ತು ರತ್ನ ಖಚಿತವಾದ ರಾಜ ಮಕುಟಗಳು; ಎತ್ತರವಾದ ಕುದುರೆಯ ಪ್ರತಿಕೃತಿಗಳು; ಕುದುರೆಗಳಿಗೆ ಬಳಸುತ್ತಿದ್ದ ತಂಗು – ತಡಿ – ಲಗಾಮುಗಳಿಗೂ ಚಿನ್ನ, ಬೆಳ್ಳಿ, ಮುತ್ತುಗಳ ಪೋಣಿಕೆ. ರಥಗಳು, ಸಾರೋಟುಗಳು; ಅವಕ್ಕೂ ಚಿನ್ನದ ಮುಲಾಮು ಕೊಡಲಾಗಿದೆ. ಲೋಹದ ಕೆತ್ತನೆಯ ಕೆಲಸ ಮಾಡಲಾಗಿದೆ; ವರ್ಣಚಿತ್ರಗಳನ್ನು ಬಿಡಿಸಲಾಗಿದೆ. ಸಾರೋಟುಗಳ ಗಾತ್ರ ಅದ್ಭುತ; ಚಳಿಗಾಲಕ್ಕೆ, ಬೇಸಗೆಗೆ ಬೇರೆ ಬೇರೆ ಸಾರೋಟುಗಳು. ರಾಜಕುಮಾರರ ತಳ್ಳುಬಂಡಿ; ಅನೇಕ ಬಗೆಯ ಬೆಳ್ಳಿಯ, ಚಿನ್ನದ, ದಂತದ ತಟ್ಟೆಗಳು, ಬಟ್ಟಲುಗಳು, ಪಾನಪಾತ್ರೆಗಳು; ಬಳುವಳಿಯಾಗಿ ಬಂದ ಅಪೂರ್ವದ ವಸ್ತುಗಳು. ಇವೆಲ್ಲವನ್ನೂ ಜನ ಟೀಕೇಟು ತೆಗೆದುಕೊಂಡು, ಕಿಕ್ಕಿರಿದು ಬಾಯಿ ಬಾಯಿ ಬಿಟ್ಟುಕೊಂಡು ನೋಡುತ್ತಾರೆ -ರಾಜರ ಕಿರೀಟಗಳನ್ನು, ರಾಣಿಯರ ಕೊರಳ ರತ್ನಹಾರಗಳನ್ನು !

ರಾಜಗುರುವಿನ ಉಡುಪಂತೂ ಆನೆಮರಿಗೆ ತೊಡಿಸುವಷ್ಟು ಗಾತ್ರದ್ದು. ಅದರ ಮೇಲೂ ಚಿನ್ನ, ಬೆಳ್ಳಿ, ಮುತ್ತುಗಳ ಕೆತ್ತನೆ ಕೆಲಸ. ಅವನ ತಲೆಯ ಟೊಪ್ಪಿಗೆಯಂತೂ ಅನೇಕ ವರ್ಣಗಳ ಮುತ್ತು – ರತ್ನಗಳಿಂದ ಕೂಡಿದೆ. ಅವಕಾಶ ದೊರೆತರೆ ಎಂಥ ಬಡ ಅರ್ಚಕನೂ ಮಠಾಧಿಪತಿಯಾಗಿ ಮೆರೆಯಲು ಹವಣಿಸುತ್ತಾನೆ. ಹೀಗಿರುವಾಗ ಚಕ್ರವರ್ತಿಯ ಅರಮನೆಯ ರಾಜಗುರು ಎಂದರೆ ಸಾಮಾನ್ಯವೆ ? ಮುತ್ತು – ರತ್ನಗಳಿಂದ ಆತ ಝಗಝಗಿಸಬೇಡವೆ – ಆತ ಸರ್ವಸಂಗಪರಿತ್ಯಾಗಿಯಾದ ಏಸುಕ್ರಿಸ್ತನ ಆರಾಧಕನಾಗಿದ್ದರೂ !

ಆಯುಧಗಾರ (ಆರ್ಮರಿ) ಎಂಬ ಹೆಸರನ್ನು ಉಳಿಸುವ ಹಾಗೆ ಇಲ್ಲಿ ಆಯುಧಗಳ ಸಂಗ್ರಹವೂ ಸ್ವಲ್ಪ ಇದೆ. ಕತ್ತಿ-ಖಡ್ಗ-ಭಲ್ಲೆ-ಕವಚ-ಶಿರಸ್ತ್ರಾಣ-ಬಂದೂಕುಗಳೂ ಇವೆ. ಇಷ್ಟೊಂದು ಭಾರವಾದ ಈ ಉಡುಗೆ-ತೊಡಿಗೆಗಳನ್ನು  ತೊಟ್ಟರೆ ಆ ಭಾರಕ್ಕೆ ತತ್ತರಿಸಿ ಹೆಜ್ಜೆಯನ್ನಿಡುವುದೂ ಕಷ್ಟ ಅನಿಸುತ್ತದೆ; ಅಂಥದರಲ್ಲಿ ಯುದ್ಧವನ್ನು ಹೇಗೆ ಮಾಡುತ್ತಿದ್ದರೋ ಏನೊ !

ರಾತ್ರಿ ಏಳು ಗಂಟೆಗೆ ‘ಪುಷ್ಕಿನ್ ನಾಟಕ ಶಾಲೆ’ಯಲ್ಲಿ ‘ಅಂತೋನಿ ಮತ್ತು ಕ್ಲಿಯೋಪಾತ್ರ’ ಎಂಬ ನಾಟಕವನ್ನು ನೋಡಿದೆವು. ರಷ್ಯನ್ ಜನ ಷೇಕ್ಸ್‌ಪಿಯರನನ್ನು ಹೇಗೆ ರಂಗದ ಮೇಲೆ ತರುತ್ತಾರೆ ಎಂಬ ಕುತೂಹಲ ನನಗೆ. ನಾಟಕ ರಷ್ಯನ್ ಭಾಷೆಯಲ್ಲಿ.  ಷೇಕ್ಸ್‌ಪಿಯರನ ನಾಟಕವನ್ನು, ಷೇಕ್ಸ್‌ಪಿಯರನ ಕಾಲದ ರಂಗಸ್ಥಳದಲ್ಲಿ ಪ್ರದರ್ಶಿಸಿದ್ದರೆ ಹೇಗೆ ಕಾಣುತ್ತಿತ್ತೊ ಹಾಗೆಯೇ ಕಾಣುವಂಥ ರಂಗಸಜ್ಜಿಕೆ. ಕ್ಲಿಯೋಪಾತ್ರ ಈಜಿಪ್ಟಿನ ರಾಣಿ; ಹಾಗೆಂದು ಅರಮನೆಯ ವೈಭವ ಪೂರ್ಣವಾದ ಹಿನ್ನೆಲೆಗಳನ್ನೇನೂ ಜೋಡಿಸಿರಲಿಲ್ಲ. ತಿರಗುವ ರಂಗಮಂದಿರ; ಒಂದೇ ಒಂದು ದೃಶ್ಯ, ಅಲ್ಲ ಸ್ವಲ್ಪ ವ್ಯತ್ಯಾಸದೊಡನೆ ಇನ್ನೊಂದು ‘ಅಂಕ’ಕ್ಕೆ ಹೊಂದುವ ವ್ಯವಸ್ಥೆ ಮಾಡಲಾಗಿತ್ತು. ಬೆಳಕಿನ ಯೋಜನೆ; ಹಿನ್ನೆಲೆಯ ಸಂಗೀತ; ಉಡುಗೆ ತೊಡುಗೆ; ಎಲ್ಲಕ್ಕೂ ಮಿಗಿಲಾಗಿ ನಟನಾ ಸಾಮರ್ಥ್ಯ-ಷೇಕ್ಸ್‌ಪಿಯರನ ನಾಟಕನವನ್ನು ತುಂಬಾ ಸೊಗಸಾದ ರೀತಿಯಲ್ಲಿ ತಂದರು ಎನಿಸಿತ್ತು.

ಇಲ್ಲಿ ಒಂದೇ ನಾಟಕವನ್ನು ಅನೇಕ ದಿನಗಳ ಕಾಲ ಆಡುತ್ತಾರೆ. ಜನ ಕಿಕ್ಕಿರಿದು ನೋಡುತ್ತಾರೆ.  ಈ  ಊರಿನಲ್ಲಿ  ಇಂಥ  ‘ಡ್ರಾಮಾ ಥಿಯೇಟರು’ಗಳು, ‘ನರ್ತನಶಾಲೆ’ಗಳು ಮೂವತ್ತೈದಕ್ಕೂ ಮಿಗಿಲಾಗಿವೆ.  ದಿನಾ ಒಂದಲ್ಲ ಒಂದು ಪ್ರದರ್ಶನ ಇವುಗಳಲ್ಲಿರುತ್ತದೆ. ವಿಶೇಷವೆಂದರೆ ಮಕ್ಕಳಿಗಾಗಿಯೆ ಒಂದು ಪ್ರತ್ಯೇಕವಾದ ಥಿಯೇಟರ್ ಇದೆ; ಅದರ ಜತೆಗೆ ‘ಪಪೆಟ್ ಥಿಯೇಟರ್’ (ಗೊಂಬೆಯಾಟದ ನಾಟ್ಯಶಾಲೆ) ಕೂಡಾ ಇದೆ. ಇವೆಲ್ಲವನ್ನೂ ನೋಡಿದರೆ ರಷ್ಯನ್ ಜನ ಗಾಣಕ್ಕೆ ಹೂಡಿದ ಎತ್ತುಗಳಂತೆ ದುಡಿಯುವವರಷ್ಟೆ ಅಲ್ಲ; ಉತ್ತಮ ಅಭಿರುಚಿಯುಳ್ಳ ಕಲಾಪ್ರೇಮಿಗಳೂ ಹೌದು ಅನಿಸುತ್ತದೆ.