ಬೆಳಗಾಗ ಮೂರು ದಿನದಿಂದ ಹಿಡಿದ ಮಳೆ ಬಿಟ್ಟಿರಲಿಲ್ಲ. ಮೊನ್ನೆಯ ದಿನ ಕೈ ಬಿಟ್ಟುಹೋದ ಕಾರ್ಯಕ್ರಮ ಈ ದಿನಕ್ಕೆ ಮುಂದುವರಿದಿತ್ತು. ಲೆನಿನ್ ತನ್ನ ಕಡೆಯ ದಿನಗಳನ್ನು ಕಳೆದ ‘ಗೋರ್ಕಿ’ ಎಂಬ ಊರಿಗೆ ಹನ್ನೊಂದು ಗಂಟೆಯ ವೇಳೆಗೆ ಹೊರಟೆವು. ಮಾಸ್ಕೋಗೆ ೨೨ ಮೈಲಿ ದೂರದಲ್ಲಿರುವ ಈ ‘ಎಸ್ಟೇಟ್’ಗೆ ಕಾರಲ್ಲಿ ಹೊರಟು ನಗರದ  ತುದಿಯನ್ನು ಸಮೀಪಿಸಿದಾಗ ಎಡಗಡೆ ಎತ್ತರವಾಗಿ ಕಾಣಿಸಿತು – ಸೋವಿಯತ್ ವಿಜ್ಞಾನಿಗಳು ಬಾಹ್ಯಾಕಾಶವನ್ನು ಗೆಲ್ಲುವುದರಲ್ಲಿ ತೋರಿದ ಸಾಹಸಕ್ಕೆ ಸ್ಮಾರಕವಾಗಿ  ನಿಲ್ಲಿಸಿದ ೩೩೦  ಅಡಿ ಎತ್ತರದ ತ್ರಿಕೋನಾಕಾರದ ಕಂಬ. ಈ ಸ್ಮಾರಕವನ್ನು ಇದ್ದಷ್ಟು ದಿನ ನೋಡಲಾಗಲಿಲ್ಲವಲ್ಲ ಅನ್ನಿಸಿತು.

ಹನ್ನೆರಡು ಗಂಟೆಗೆ ‘ಗೋರ್ಕಿ’ಯನ್ನು ತಲುಪಿದೆವು. ಸುರಿಯುವ ಮಳೆಯಲ್ಲೆ ಕೆಸರು ತುಳಿಯುತ್ತ, ಲೆನಿನ್ ತನ್ನ ಕಡೆಯ ದಿನಗಳಲ್ಲಿ ವಾಸಿಸಿದ ಮನೆಯನ್ನು ನೋಡಲು ಹೊರಟೆವು. ಸುತ್ತ ಸೊಗಸಾದ ಏರಿಳಿಯುವ ಕಾಡು. ಅದರ ನಡುವೆ ಲೆನಿನ್ ಇದ್ದ ಮನೆ. ಕಾಲಿಗೆ ಬಟ್ಟೆಯ ಬೂಡ್ಸು ಬಿಗಿದುಕೊಂಡು ಮನೆಯನ್ನೆಲ್ಲಾ ಸುತ್ತಾಡಿದೆವು. ೧೯೨೩ ಮಾರ್ಚ್ ತಿಂಗಳಿಂದ ೧೯೨೪ನೆ ಜನವರಿಯ ತನಕ ಲೆನಿನ್ ಇದ್ದದ್ದು ಇಲ್ಲಿ. ಆ ಕಾಲದಲ್ಲಿ ಮ್ಯಾಕ್ಸಿಂಗಾರ್ಕಿ, ರೋಮೇನ್‌ರೋಲಾ ಮೊದಲಾದ ಸಾಹಿತಿಗಳು ಇಲ್ಲಿಗೆ ಬಂದು ಹೋಗುತ್ತಿದ್ದರಂತೆ. ಲೆನಿನ್‌ನ ಸಮಸ್ತವೂ ಇಲ್ಲಿವೆ. ಅವನ ಬಟ್ಟೆ ಬರೆ, ಬೂಡ್ಸು, ಗಾಲಿ ಕುರ್ಚಿ, ಅವನು ಓದಿದ ಪುಸ್ತಕಗಳು – ಇತ್ಯಾದಿ. ಲೆನಿನ್ ಈ ಮನೆಯಲ್ಲಿ ತನ್ನ ಕಡೆಯುಸಿರನ್ನು ಎಳೆದದ್ದು ೧೯೨೪ನೆ ಜನವರಿ ಇಪ್ಪತ್ತೊಂದನೆ ತಾರೀಖು.

ಸುರಿಯುವ ಮಳೆಯಲ್ಲೂ ಈ ಸ್ಥಳವನ್ನು ನೋಡಲು ಬಂದ ಸಂದರ್ಶಕರ ಸಂಖ್ಯೆ ಕಡಮೆಯಿರಲಿಲ್ಲ. ಲೆನಿನ್ನನ ವಿಚಾರಕ್ಕೆ ಜನ ತೋರುತ್ತಿರುವ ಗೌರವ ಅಪಾರವಾದದ್ದು; ಈ ಜನ ಲೆನಿನ್ನನ ನೆನಪನ್ನು ಎಷ್ಟು ರೀತಿಯ ಸ್ಮಾರಕ               ಗಳಲ್ಲಿರಿಸಿದ್ದಾರೆಂಬುದು ಆಶ್ಚರ್ಯಕರವಾಗಿದೆ.

ಮಾಸ್ಕೋಗೆ ಹಿಂತಿರುಗಿದಾಗ ಮೂರೂವರೆ. ಸಂಜೆ ‘ಚಾಯ್‌ಕೊವಸ್ಕಿ’ ಸಂಗೀತ ಮಹಲಿನಲ್ಲಿ ಭಾರತೀಯ ಸಂಗೀತ-ನರ್ತನದ ಕಾರ್ಯಕ್ರಮಕ್ಕೆ ಟಿಕೆಟ್‌ತೆಗಿಸಿ ಆಗಿತ್ತು. ಲಾಲ್‌ಗುಡಿ ಜಯರಾಮನ್ ಅವರ ಪಿಟೀಲು; ದಮಯಂತಿ ಜೋಷಿಯವರ ಕಥಕ್; ಝವೇರಿ ಸೋದರಿಯರ ಮಣಿಪುರಿ ನರ್ತನ. ನನ್ನ ದ್ವಿಭಾಷಿ ವೊಲೋಜನನ್ನು ಕರೆದುಕೊಂಡು ಆರೂವರೆಗೆ ಕಾರ್ಯಕ್ರಮಕ್ಕೆ ಹೋದೆ. ‘ಚಾಯ್‌ಕೊವಸ್ಕಿ’ ಸಂಗೀತ ಮಹಲಿನಲ್ಲಿ ಜನ ಕಿಕ್ಕಿರಿದಿದ್ದರು. ರಷ್ಯನ್ ಉಡುಪುಗಳ ನಡುವೆ ಸಾಕಷ್ಟು ಭಾರತೀಯ ಮುಖಗಳೂ ಇದ್ದವು. ಭಾರತೀಯ ಸಂಗೀತ-ನರ್ತನಾದಿಗಳನ್ನು, ರಷ್ಯಾ ದೇಶದ ಜನ ಹೇಗೆ ಸ್ವಾಗತಿಸುತ್ತಾರೆ ಎಂಬುದನ್ನು ವೀಕ್ಷಿಸುವುದೆ, ನಾನು ಈ ಕಾರ್ಯಕ್ರಮಕ್ಕೆ ಟೆಕೆಟ್ಟು ತೆಗೆಯಿಸಲು ಮುಖ್ಯ ಕಾರಣವಾಗಿತ್ತು.

ಮಹಲಿನ ತುಂಬ ಬೆಳಕು. ತಬಲ, ಪಿಟೀಲು, ಫಟಂ ಬಾರಿಸುವ ಬೆರಳುಗಳಿಗೆ ಕಾದಿದ್ದವು. ಏಳುಗಂಟೆಗೆ ಇಡೀ ಮಹಲಿನ ದೀಪಗಳು ಹಿಂದೆ ಸರಿದು, ರಂಗದ ಮೇಲೆ ಬೆಳಕು ಸುರಿಯಿತು. ಲುಂಗಿ ಪಂಚೆ ಉಟ್ಟು, ಅರ್ಧ ತೋಳಿನ ಷರಟು ತೊಟ್ಟು, ಹಣೆಯಲ್ಲಿ ಎದ್ದು ಕಾಣುವ ವಿಭೂತಿಯ ನಡುವೆ ಕುಂಕುಮದ ಬೊಟ್ಟನಿಟ್ಟ ದಕ್ಷಿಣ ಭಾರತದ ಕಲಾವಿದರು ಪ್ರವೇಶಿಸಿದಾಗ, ರಷ್ಯಾದ ಜನಕ್ಕೆ ಅವರ ಉಡುಗೆ ತೊಡುಗೆ ವಿಲಕ್ಷಣವಾಗಿ ಕಂಡಿರಬೇಕು. ಸುರಿಯುವ ಚಪ್ಪಾಳೆಯ ನಡುವೆ ಕೈ ಮುಗಿದು ಕೂತರು ಜಯರಾಮನ್ ಮತ್ತು ಸಂಗಡಿಗರು. ಕೂದಲುಬಿದ್ದರೆ ಕೇಳುವಷ್ಟು ನಿಶ್ಯಬ್ದ. ಜಯರಾಮನ್ ತ್ಯಾಗರಾಜರ ಕೀರ್ತನೆಯೊಂದನ್ನು ನುಡಿಸಿದರು. ತಬಲ, ಫಟಂಗಳು ಪೂರಕವಾದವು. ನನಗೇನೋ ಶಾಸ್ತ್ರೀಯವಾದ ಸಂಗೀತ ಚೆನ್ನಾಗಿತ್ತು; ಆದರೆ ಈ ಜನಕ್ಕೆ ಇಂಥದು ಹಿಡಿಸುವುದೋ ಇಲ್ಲವೋ ಅನ್ನಿಸಿತು. ಅನಂತರ ಜಯರಾಮನ್ ಚಮತ್ಕಾರಕ್ಕೆ ಇಳಿದಾಗ, ಆ ದ್ರುತಗತಿಯ ವಾದನಕ್ಕೆ ಚಪ್ಪಾಳೆ ಸುರಿಯಿತು. ಅದಕ್ಕೂ ಮಿಗಿಲಾಗಿ ಫಟಂ ಮತ್ತು ತಬಲಾಕ್ಕೆ ನಡೆದ ದ್ವಂದ್ವ ಸಂವಾದ ಆ ಜನಕ್ಕೆ ತುಂಬ ಹಿಡಿಸಿದಂತೆ ತೋರಿತು; ಜನ; ಚಪ್ಪಾಳೆಯ ಮಳೆಗರೆದರು. ತಮಗೆ ಅರ್ಥವಾಗದಿದ್ದರೂ ಸಹ ಮೌನವಾಗಿ ಕುಳಿತು ಕೇಳುವ ಮತ್ತು ರಾಗ ಮುಗಿದ ಕೂಡಲೇ ಚಪ್ಪಾಳೆ ತಟ್ಟಿ ಪ್ರಶಂಸೆಯನ್ನು ಪ್ರಕಟಿಸುವ ಆ ಜನದ ಸೌಜನ್ಯ ಮೆಚ್ಚುವಂಥದ್ದು. ಶಾಸ್ತ್ರೀಯ ಸಂಗೀತದ ಪರಿಚಯವಿರುವ ನಮ್ಮಲ್ಲೇ, ಇಂಥ ಸಂಗೀತಕ್ಕೆ ಎಂಥ ಪ್ರತಿಕ್ರಿಯೆ ಇದೆ ಎಂಬುದನ್ನು ನಾನು ಬಲ್ಲೆ.

ನಲವತ್ತು ನಿಮಿಷದ ಪಿಟೀಲಿನ ನಂತರ, ದಯಯಂತಿ ಜೋಷಿಯವರ ಕಥಕ್. ಹಿಂದೂಸ್ಥಾನೀ ರಾಗಾಲಾಪದ ವಿಲಂಬ ಗತಿಯಲ್ಲಿ ಆಮೆಯ ಚಲನೆಯಂತೆ ಸಾಗಿದ ಕಥಕ್ ಅಷ್ಟಾಗಿ ಸೊಗಸಲಿಲ್ಲ. ಪಾಶ್ಚಾತ್ಯ ಸಂಗೀತ ನರ್ತನಾದಿಗಳಲ್ಲಿ ಕಾಣುವ ಆ ನಿಸರ್ಗ ಸಮೀಪವಾದ ರಭಸ, ಉತ್ಸಾಹ ಕ್ರಿಯೆಗಳು ಈ ನರ್ತನದಲ್ಲಿ, ಹಾಗೂ ಅದಕ್ಕೆ ಹಿನ್ನೆಲೆಯಾದ ಸಂಗೀತದಲ್ಲಿ ಕಾಣಲಿಲ್ಲ. ಝವೇರಿ ಸೋದರಿಯರ ಮಣಿಪುರಿ ನರ್ತನ ಕೂಡಾ ಅಷ್ಟೆ. ರಾಧಾ-ಕೃಷ್ಣರಿಗೆ ಸಂಬಂಧಪಟ್ಟ, ಹೋಳಿ ಹಬ್ಬದ, ಚಂಡಾಟದ ನರ್ತನದಲ್ಲಿ ಕಂಡ ಕ್ರಿಯಾತ್ಮಕತೆ ಸಭಾಸದರಿಗೆ ಹಿಡಿಸಿದಂತೆ ತೋರಿತು. ಅಂತೂ ಮೂರು ಗಂಟೆಗಳ ಕಾಲ ರಷ್ಯಾದ ಪರಿಸರದಲ್ಲಿ ನಮ್ಮ ಪರಂಪರೆಯ ಒಂದು ಪ್ರದರ್ಶನವನ್ನು ಕಂಡದ್ದಾಯಿತು.