ಬಿರುಬಿಸಿಲ ಬೇಗೆಯಲಿ ಸೊರಗಿ ಸೊಪ್ಪಾಗಿರುವ
ತಿರೆಯ ಹಸುರಿನ ಕರೆಯು ಕೇಳದೇನು ?
ಯಾವ ಕಿವುಡೋ ನಿನಗೆ, ಮುಗಿಲನ್ನೆ ತುಂಬಿರುವೆ
ಬರಿಯ ನಟನೆಯು ನಿನಗೆ ಸಾಜವೇನು ?

ಹಗಲೆಲ್ಲ ಧಗೆಯಲ್ಲಿ ಬೆಂದ ಮನ, ಸಂಜೆಯಲಿ
ಒಂದುಗೂಡುತ ನಭವ ತುಂಬಿ ನಿಂದು
ಮಿಂಚುಗಣ್ಣನು ಅತ್ತ ಇತ್ತ ಹೊರಳಿಸುತ ಆನು-
ರಾಗವತಿಯಾಗಿರುವ ನಿನ್ನ ಕಂಡು
ಇಂದು ಬಂದೇ ಬರುವುದಯ್ಯ ಮಳೆ
ಸುರಿಯುವುದು ಧಾರೆಯಾಗಿ,
ಎಂದು ಬಯಕೆಯ ಬಟ್ಟಲಂತಿರುವ ಕಣ್‌ತೆರೆದು
ನಿಲ್ಲುವುದು ದೀನವಾಗಿ !

ಮಿಂಚೇನು ಮೊಳಗೇನು, ನಿನ್ನ ವೈಭವದಿಂದ
ಭರವಸೆಯ ಬಿತ್ತುವೀ ಚೆಲುವಿದೇನು !
ಕಡೆಗೆ ಬಂದಂತೆಯೇ ಎಲ್ಲಿಗೋ ಮುನ್ನಡೆದು
ನಿಡುಸುಯ್ಲುಗಳ ನೇಣ ಬಿಗಿವುದೇನು !

ಮಾನವರ ಲೋಕದೀ ಕೃಪಣ ಕೃತಕತೆಯೆಲ್ಲ
ನಿನಗು ತಟ್ಟಿದುವೇನು ಈ ಕಾಲಕೆ ?
ಅದಕೇನು ಈ ಬಗೆಯ ಬೂಟಾಟಿಕೆ ?

ಕೂಗಿದರೆ ಬೇಡಿದರೆ ಸ್ತುತಿಸಿದರೆ ಓಗೊಡುವ
ಕಾಲವೆಂದೋ ಹೋಯ್ತು ; ಆದರಿಂದು
ಬಯ್ದು ಮೂತಿಗೆ ತಿವಿದು ಹೇಳಿದರೆ, ಒಂದಿನಿತು
ತಿಳಿದೀತು ಇಲ್ಲಾರೊ ಇರುವರೆಂದು !