ಭಾರತ ದೇಶವು ಹಲವು ಮತ ಪಂಥಗಳ, ಜನಾಂಗಗಳ, ಭಾಷೆಗಳ, ಸಂಸ್ಕೃತಿಗಳ ಸಮಷ್ಠಿರೂಪ. ಅತ್ಯಂತ ಪ್ರಾಚೀನವಾದ ಇಂಥ ಪರಂಪರೆಯನ್ನು ಹೊಂದಿರುವ ಪ್ರಪಂಚದ ಏಕೈಕ ರಾಷ್ಟ್ರವೆಂಬ ಹಿರಿಮೆ ಇದಕ್ಕಿದೆ. ಚರಿತ್ರೆಯಲ್ಲಿ ಕಾಲಕಾಲಕ್ಕೆ ಪ್ರವೇಶಿಸಿದ ಪರಕೀಯ ಧರ್ಮ-ಸಂಸ್ಕೃತಿಗಳನ್ನು ತನ್ನೊಳಗೆ ಸೇರಿಸಿಕೊಳ್ಳುತ್ತ ಹೊಸ ರೂಪಗಳನ್ನು ತಳೆಯುತ್ತ ಸಮ್ಮಿಶ್ರವಾದರೂ ತನ್ನ ಸಮಗ್ರತೆಯನ್ನು ಕಾಯ್ದುಕೊಳ್ಳುತ್ತಾ ಬಂದಿರುವ ಒಂದು ವಿಶಿಷ್ಟ ರಾಷ್ಟ್ರವಾಗಿದೆ. ಇಲ್ಲಿ ಆದಿ ಮಾನವ ಕಾಲದ ಬುಡಕಟ್ಟು ಜನಾಂಗಗಳ ಮತಾಚರಣೆಗಳೂ ಇವೆ. ಈ ದೇಶದ್ದೇ ಎನ್ನಬಹುದಾದ ವೇದ, ಉಪನಿಷತ್, ಪುರಾಣ, ಪೌರಣಿಕ ದೇವತೆಗಳು, ಬೌದ್ಧ, ಜೈನ, ಶೈವ, ವೈಷ್ಣವ ಮುಂತಾದ ಧಾರ್ಮಿದ ಪಂಥಗಳು ತಮ್ಮ ಸುತ್ತಲೂ ವಾಸ್ತು ಶಿಲ್ಪಕಲೆ, ಆಗಮ, ಶಾಸ್ತ್ರ, ಸಾಹಿತ್ಯ, ಕಲೆಗಳ ಆವರಣಗಳನ್ನು ಬೆಳೆಸಿಕೊಂಡು ಬಂದಿವೆ. ಸನಾತನ ಧರ್ಮವೆಂಬ ಜಡವ್ಯವಸ್ಥೆಗೆ ಭಿನ್ನವಾದ ಬೌದ್ಧ, ಜೈನ, ವೀರಶೈವ, ಸಿಖ್ ಮುಂತಾದ ಬಂಡಾಯಗಳು ಹುಟ್ಟಿ ಬೆಳೆದು ಬಂದಿವೆ. ಇವುಗಳ ಜೊತೆಗೆ ಮಧ್ಯಯುಗದಲ್ಲಿ ಪ್ರವೇಶಿಸಿದ ಇಸ್ಲಾಂ ಧರ್ಮ ಸಂಸ್ಕೃತಿಗಳನ್ನು, ಪಾರ್ಸಿ, ಕ್ರಿಶ್ಚಿಯನ್ ಮತ ಸಂಸ್ಕೃತಿಗಳನ್ನು ಈ ದೇಶವು ತನ್ನ ಉದಾರ ನೆಲದೊಳಗೆ ಸೇರಿಸಿಕೊಂಡಿದೆ.

ಇಂಥ ಬಹುರೂಪ ಸಂಸ್ಕೃತಿಯ ವಾಸ್ತವತೆಯ ಅರಿವಿಲ್ಲದೆ ಏಕಮುಖಿ ಸಂಸ್ಕೃತಿಗಳ ಸಂಘರ್ಷಗಳಂತೆ ಚರಿತ್ರೆಯನ್ನು ನೋಡುವುದು ಸರಿಯಾದ ರೀತಿಯಲ್ಲ. ಈಗ ನಾವು ಭಾರತದ ಚರಿತ್ರೆಯಲ್ಲಿ ಹಿಂದೂ, ಮುಸ್ಮಿಂ, ಕ್ರಿಶ್ಚಿಯನ್, ಬೌದ್ಧ, ಜೈನ ಮುಂತಾದ ಹಣೆಪಟ್ಟಿಗಳ ಕೆಳಗೆ ಧಾರ್ಮಿಕ ವಿದ್ಯಮಾನಗಳನ್ನು ಅಭ್ಯಸಿಸುತ್ತೇವೆ. ಅದೇ ರೀತಿ ಕರ್ನಾಟಕದ ಚರಿತ್ರೆಯಲ್ಲಿ ಜೈನ, ವೀರಶೈವ, ಬ್ರಾಹ್ಮಣಧರ್ಮಗಳ ಚೌಕಟ್ಟುಗಳಲ್ಲಿ ಧಾರ್ಮಿಕ ಪರಂಪರೆಗಳನ್ನು ಸೇರಿಸುತ್ತೇವೆ. ಇಮ್ಥ ಸರಳ ದೃಷ್ಠಿಕೋನವನ್ನು ಮೀರಿದ ಒಂದು ವಿಶಿಷ್ಟ ಪರಂಪರೆ ‘ಗದ್ದನಕೇರಿಯ ಮಳೆಯಪ್ಪ ಸ್ವಾಮಿ’ ಅಥವಾ ಮಳೆರಾಜ ಪರಂಪರೆಯಾಗಿದೆ.

. ಧಾರ್ಮಿಕತಾತ್ವಿಕ ಹಿನ್ನಲೆ

ಭಾರತದ ನೆಲದಲ್ಲಿ ಕೆಲವು ಪ್ರಧಾನವಾದ ಮತ ಪಂಥಗಳಿಗೆ ಹೆಚ್ಚು ಮಹತ್ವಕೊಟ್ಟು ಉಳಿದ ಹಲವಾರು ಮತ ಪಂಥಗಳನ್ನು ಕಡೆಗಣಿಸುತ್ತಾ ಬರಲಾಗಿದೆ. ಆದರೆ ಅಂಥ ಕಡೆಗಣೆಸಲಾದ ಮತಪಂಥಗಳು ನೆಲಮಟ್ಟದಲ್ಲಿ ಬದುಕುತ್ತಿರುವ ಜನಸಾಮಾನ್ಯರ ವಾಸ್ತವ ಸತ್ಯಗಳಾಗಿರುತ್ತವೆ. ಪ್ರಾಚೀನ ಕಾಲದ ಸಾಂಖ್ಯ, ವೈಶೇಷಿಕ, ಚಾರ್ವಾಕ ಮುಂತಾದ ದರ್ಶನಗಳು ಹಾಗೆಯೇ ಬೌದ್ಧದಂತಹ ಪಂಥಗಳೂ ಅವಜ್ಞೆಗೆ ಒಳಗಾದವು. ಅಲ್ಲಿಂದ ಮುಂದೆ ಸಿದ್ಧ, ನಾಥ, ಅವದೂತ, ಆರೂಢ, ಕಾಳಾಮುಖ, ಪಾಶುಪತ, ಲಾಕುಳ ಮುಂತಾದ ದರ್ಶನ ಅಥವ ಪಂಥಗಳು ಪ್ರಬಲವಾಗಿ ಬೆಳೆದು ವೀರಶೈವ, ವೈಷ್ಣವದಂತಹ ಪ್ರಧಾನ ಭಕ್ತಿ ಪಂಥಗಳ ಪ್ರಚಾರಗಳ ನಡುವೆ ಅಡಗಿ ಹೋದವು. ಹಾಗೆಯೇ ಮುಸ್ಲಿಂ ಧರ್ಮದ ಜೊತೆಗೆ ಬಂದ ಸೂಫೀ ಪಂಥವು ಜನಸಾಮಾನ್ಯರ ನಡುವಿದ್ದ ಆಧ್ಯಾತ್ಮಿಕ ಸಾಮರಸ್ಯದ ಹರಿಕಾರರಾದ ಎಷ್ಟೋ ಮಹಾಮಹಿಮರು ಭಾರತ ಭೂಮಿಯಲ್ಲಿ ಆಗಿಹೋಗಿದ್ದಾರೆ. ಅಂಥವರಲ್ಲಿ ಒಬ್ಬರಾಗಿ ಪ್ರಸ್ತುತ ವಿವೇಚನೆಯ ಮಳೆಯಪ್ಪಯ್ಯನವರು ಗಮನ ಸೆಳೆಯುತ್ತಾರೆ.

ಚರಿತ್ರೆಕಾರರ ದೃಷ್ಠಿಯಿಂದ ಇಂಥವರು ಪರಿಗಣನೆಗೆ ಬಂದಿಲ್ಲವಾದರೂ ಇವರ ಹಿಂದೆ ಧರ್ಮ ಸಮನ್ವಯ ಮಾರ್ಗದ ಒಂದು ದೊಡ್ಡ ಪರಂಪರೆಯೇ ವ್ಯಾಪಿಸಿದೆ ಎಂಬುದನ್ನು ನಾವು ಸಂಕ್ಷಿಪ್ತವಾಗಿ ಗುರುತಿಸಿಕೊಳ್ಳಬೇಕಾಗುತ್ತದೆ. ಮುಸಲ್ಮಾನರ ಆಗಮನಕ್ಕಿಂತ ಮುಂಚೆ ಶೈವ, ವೈಷ್ಣವ, ವೀರಶೈವಗಳ ಪ್ರಾಬಲ್ಯವಿದ್ದ ಕಾಲದಲ್ಲೇ ಆಧ್ಯಾತ್ಮಿಕ ಸಾಧನೆಯ ಮಾರ್ಗಗಳಾದ ನಾಥ, ಸಿದ್ಧ, ಮಹಾನುಭಾವ ಮುಂತಾದವು ಗುಪ್ತವಾಗಿ ಚಾಲ್ತಿಯಲ್ಲಿದ್ದವು. ಯಾವುದೇ ಮತೀಯ ಚೌಕಟ್ಟಿಗೆ ಒಳಗಾಗದೆ ಸ್ವತಂತ್ರವಾಗಿ ಬಯಸಿದ್ದ ಇಂಥ ಮಾರ್ಗಗಳ ಜೊತೆಗೆ ಇಸ್ಲಾಮಿನ ಕಟೋರ ಚೌಕಟ್ಟಿಗೆ ಒಳಗಾಗದೆ ಸ್ವತಂತ್ರವಾಗಿರಲು ಎಮ್ಬಂತೆ ಬೆಳೆದು ಬಂದಿದ್ದ ಸೂಫಿ ಮಾರ್ಗವು ಭಾರತೀಯ ಪಂಥಗಳೊಡನೆ ಕೊಡುಕೊಳ್ಳುವಿಕೆಗಳನ್ನು ಮಾಡಿಕೊಂಡು ಅಧ್ಬುತವಾದ ಸಾಮರಸ್ಯವನ್ನು ಸಾಧಿಸಿದ್ದು ನಮ್ಮ ದೇಶದ ಧಾರ್ಮಿಕ ಚರಿತ್ರೆಯಲ್ಲಿ ಒಂದು ಉಲ್ವಲ ಅಧ್ಯಾಯ.

ಒಂದು ಕಡೆ ಮುಸ್ಲಿಂ ಆಡಳಿತಗಾರರ ದಬ್ಬಾಳಿಕೆ, ಇನ್ನೊಂದು ಕಡೆ ಶ್ರೇಣಿಕೃತ ಸಮಾಜದ ವರ್ಣಾಶ್ರಮ ಧರ್ಮದ ಬಲವಾದ ಹಿಡಿತ, ಇವೆರಡರ ನಡುವೆ ಮಾನವೀಯವಾದ ಮಾನವನ ಹಿರಿಮೆಯನ್ನು ಎತ್ತಿಹಿಡಿಯುವ ಒಂದು ಜೀವನ ಮಾರ್ಗದ ಅವಶ್ಯಕತೆಯನ್ನು ಅಂತರ್ಗತವಾಗಿದ್ದ ದೇಶಿಯ ಪಂಥಗಳೊದನೆ ಸೂಫಿ ಮಾರ್ಗವು ತೋರಿಸಿತು.

ಅಂಥ ಅಪೂರ್ವವಾದ ಹಿನ್ನಲೆಯನ್ನು ಸ್ವಲ್ಪ ಪರಿಶೀಲಿಸೋಣ. ಇಂದು ನಾವು ಹಿಮ್ದೂ ಪರಂಪರೆಯವರು ಎನ್ನಲಾಗುವ ಗದ್ದನಕೇರಿ ಮಳಿಯಪ್ಪಯ್ಯ, ಮೌನಪ್ಪಯ್ಯ ಗಗನಾಪುರದ ಗಂಗಪ್ಪಯ್ಯ, ಕೊಡೆಕಲ್ಲುಬಸವಣ್ಣ, ಮಂಟೇಸ್ವಾಮಿ, ಶಿರಹಟ್ಟಿ ಫಕೀರಸ್ವಾಮಿ, ಸಾವಳ್ಗಿ ಶಿವಲಿಂಗ, ಮುಂತಾದ ಅನೇಕ ಮಹಾಪುರುಷರು ಅವರ ಗದ್ದುಗೆ-ಗುಡಿ-ಮಠಗಳು ಮುಸ್ಲಿಂ ದರ್ಗಾಗಳಂತೆ ಏಕೆ ಕಟ್ಟಲ್ಪಟ್ಟಿವೆ? ಮತ್ತು ಅಲ್ಲಿ ನಡೆಯುವ ಪೂಜಾ ಆಚರಣೆಗಳು ಹಿಂದೂ ಧರ್ಮದ ಪದ್ಧತಿಗಳಂತಿರದೆ ಮುಸ್ಲಿಂ ಶೈಲಿಯಲ್ಲಿವೆ? ಹಾಗೂ ಇಂದಿಗೂ ಅಲ್ಲಿನ ಸಂಪ್ರದಾಯಗಳು ವಿಚಿತ್ರವಾಗಿ ಏಕಿವೆ? ಎಂಬ ಪ್ರಶ್ನೆಗಳಿಗೆ ಉತ್ತರಗಳ್ನ್ನು ನಾವು ಕಂಡುಕೊಳ್ಳಬೇಕಾಗುತ್ತದೆ. ಸೂಫಿ ಪಂಥದ ಸಂಕ್ಷಿಪ್ತ ವಿವೇಚನೆಯಿಂದ ಇಂಥ ಪ್ರಶ್ನೆಗಳಿಗೆ ಪರಿಹಾರ ಸಾಧ್ಯವಾಗುತ್ತೆ.

ಮಾನವರನ್ನು ಸೀಮಿತ ಸಂಪ್ರದಾಯಗಳೊಳಗೆ ಬಂಧಿಸಿ ಇತರ ಮಾನವರನ್ನು ಬೇರೆಯೆಂಬಂತೆ ಗೋಡೆಗಳನ್ನು ಕಟ್ಟುವ ಸಾಂಸ್ಥೀಕರಣದ ವಿರುದ್ಧ ಬಂಡಾಯಗಳು ಹುಟ್ಟುವುದು ಸಹಜ ಪ್ರಕ್ರಿಯೆ. ಹಿಂದೊಮ್ಮೆ ಹೀಗೆ ಜಡಗಟ್ಟಿದ ಬ್ರಾಹ್ಮಣ್ಯದ ವಿರುದ್ಧ ಬೌದ್ಧ ಜೈನ ಧರ್ಮಗಳು ಹುಟ್ಟಿಕೊಂಡಿದ್ದರೆ ಮುಂದೆ ೧೨ನೇ ಶತಮಾನದಲ್ಲಿ ಸನಾತನ ಬೌದ್ಧ ಜೈನಧರ್ಮಗಳು ಹುಟ್ಟಿಕೊಂದಿದ್ದರೆ, ಮುಂದೆ ೧೨ನೇ ಶತಮಾನದಲ್ಲಿ ಸನಾತನ ಬೌದ್ಧ ಜೈನಧರ್ಮಗಳ ಕರ್ಮಕತೆಯ ವಿರುದ್ಧ ವೀರಶೈವ ಎಂಬ ಮಾರ್ಗವೊಂದನ್ನು ಕನ್ನಡದ ಶರಣರು ರೂಪಿಸಿದರು. ಅಲ್ಲಿಂದ ಮುಂದೆ ಇಷ್ಟಲಿಂಗ, ಅಷ್ಟಾವರಣ, ಪಂಚಾಚಾರಗಳ ಚೌಕಟ್ಟಿಗೆ ಒಳಗಾಗಿ ಅದು ಸೀಮಿತವಾದಾಗ ಅವರ ವಿರುದ್ಧ ಒಂದು ವಿಶಾಲ ಮಾನವತೆಯ ಮತ್ತು ಹಿಂದೂ ಮುಸ್ಲಿಂ ಸಮನ್ವಯದ ಒಂದು ಪಂಥವು ದಕ್ಷಿಣ ಭಾರತದಲ್ಲಿ ಮೂಡಿಬಂತು. ಅಥವಾ ಅಂಥ ನೆಲಗಟ್ಟನ್ನು ಹೊಂದಿದ್ದ ಪಂಥಗಳೊಡನೆ ಇಸ್ಲಾಂನ ಜಡಗೋದೆಗಳನ್ನು ದಾಟಿ ಬೆಳೆದಿದ್ದ ಸೂಫಿ ಪಂಥವು ಸುಲಭವಾಗಿ ಬೆರೆತುಕೊಂಡು ಸಮನ್ವಯ ಮಾರ್ಗವೊಂದು ರೂಪಹೊಂದಿತು. ಈ ಪ್ರಕ್ರಿಯೆ ೧೫, ೧೬, ೧೭ನೇ ಶತಮಾನಗಳ ಅವಧಿಯಲ್ಲಿ ದಕ್ಷಿಣ ಭಾರತದ ದಖ್ಖನ್ ಪ್ರಸ್ಥಭೂಮಿಯ ಪ್ರದೇಶದಲ್ಲಿ ಹೆಚ್ಚಾಗಿ ನಡೆದಿದ್ದು ಕಂಡುಬರುತ್ತದೆ. ಉತ್ತರ ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ ಮತ್ತು ಆಂಧ್ರಗಳು ಇದರಲ್ಲಿ ಒಳಗೊಳ್ಳುತ್ತವೆಯಾದರೂ ಇದರ ವ್ಯಾಪ್ತಿ ಭಾರತ ಪಾಕಿಸ್ತಾನ, ಅಫಘಾನಿಸ್ತಾನಗಳವರೆಗೂ ಇತ್ತೆಂಬುದು ತಿಳಿದು ಬರುತ್ತದೆ.

ವೀರಶೈವದಲ್ಲಿ ಇಷ್ಟಲಿಂಗ ಪದ್ಧತಿ ಬಹಳ ಮುಖ್ಯವಾದುದು. ಬಸವಾದಿ ಶರಣರು ಆಡಂಬರದ ಮೌಢ್ಯ ಬೆಳೆಸುವ, ಪುರೋಹಿತಶಾಹಿಯ ಶೋಷಣೆ ಇರುವ ದೇವಾಲಯಗಳ ಸ್ಥಾವರಲಿಂಗ ಪೂಜೆಯ ವಿರುದ್ಧವಾಗಿ ಜಾತಿ ವೃತ್ತಿಗಳನ್ನು ಮೀರಿದ ಪದ್ಧತಿಯಾಗಿ ಇದನ್ನು ಜಾರಿಗೆ ತಂದಿದ್ದರು. ಆದರೆ ಅದುಕೂಡ ಪರಮಾತ್ಮನ ನಿರಾಕಾರ ನಿರ್ಗುಣ ರೂಪಕ್ಕೆ ಒಂದು ಅಡ್ಡಿಯೇ ಎಂಬ ಆಲೋಚನೆ ಅಲ್ಲಮನಂಥ ಅನುಭಾವಿಗಳವಾದವಾಗಿತ್ತು. ಅಲ್ಲಮನ ನಾಥ ಪಂಥದೊಡನಿದ್ದ ಸಂಬಂಧ ಕಾವ್ಯಗಳಲ್ಲಿ ಉಲ್ಲೇಖಗೊಂಡಿದೆ. ಆಗಲೇ ಆತನಿಗೆ ಸೂಫೀ ಪಂಥದೊದನೆ ಸಂಬಂಧ ಬಂದಿರಲು ಸಾಧ್ಯ. ತೋಂಟದ ಸಿದ್ಧಲಿಂಗ ಇಷ್ಟಲಿಂಗ ಸಂಪ್ರದಾಯದವನಾದರೂ ಆತನ ಶಿಷ್ಯ ಬೋಳಬಸವ ಇಷ್ಟಲಿಂಗ ವಿರೋಧಿಯಾಗಿ ಕಂಡುಬರುತ್ತಾನೆ. ಇದೇ ಪರಂಪರೆಗೆ ಸೀರಿದ ಸಿದ್ಧವೀರ ದೇಶಿಕೇಂದ್ರ ನಾಥ ಸಿದ್ಧರಾದ ಗೋರಕ್ಷ, ಮತ್ಸ್ಯೇಂದ್ರನಾಥರನ್ನು ಯೋಗದ ರಹಸ್ಯವನ್ನರಿತ ಗುರುಗಳೆಂದು ನನೆಯುತ್ತಾನೆ. ಕರಿಬಸವೇಶ್ವರನನ್ನು ಕರಿಖಲಂದನೆಂದೂ, ಬಹುದೂರ್ ಖಾನನನ್ನು ಮಹಂತಖಾನನೆಂದೂ ಕರೆಯಲಾಗುತ್ತಿತ್ತು. ಕಾಡಸಿದ್ದೇಶ್ವರ ದಖನಿ ಉರ್ದುವಿನಲ್ಲಿ ವಚನಗಳನ್ನು ಬರೆದಿದ್ದಾನೆ. ತಿಂತಿಣಿ ಮೌನೇಶ್ವರರ ಕೆಲವು ಉರ್ದು ವಚನಗಳು ಸಿಗುತ್ತವೆ. ಇಂಥ ಉದಾಹರಣೆಗಳನ್ನು ನೋಡಿದರೆ ಸೂಫಿ ಪಂಥದ ಪ್ರಭಾವ ದಟ್ಟವಾಗಿ ಕಂಡುಬರುತ್ತದೆ. ಆ ಕಾಲದ ಮತೀಯ ಸಾಮರಸ್ಯವನ್ನು ಗುರುತಿಸುವ ಶಂಬಾ ಅವರು ಹೀಗೆ ಹೇಳುತ್ತಾರೆ “ರಾಜಕೀಯ ಸಾಮಾಜಿಕ ರಂಗಗಳಲ್ಲಿ ಹಿಂದೂ ಮುಸ್ಲಿಂರ ನಡುವೆ ಸಂಘರ್ಷ ತಲೆದೋರಿದರೂ ಅವರಿಬ್ಬರಲ್ಲಿ ಆಧ್ಯಾತ್ಮಿಕ ಪ್ರವೃತ್ತಿಯವರಲ್ಲಿ ಸಾಮರಸ್ಯಕ್ಕೆ ಯಾವ ಬಾಧೆಯಯೂ ಉಂಟಾಗಲಿಲ್ಲ…. ಗುರುದತ್ತ ಮಾರ್ಗದಲ್ಲಿಯ ಎಲ್ಲಾ ಶಾಖೆಗಳಲ್ಲಿ ಮುಸಲ್ಮಾನರಿಗೆ ಅವಕಾಶವಿತ್ತೆಂದು ಹೇಳುವುದಕ್ಕೆ ಆಧಾರಗಳಿವೆ. ಅದರಂತೆ ಮಹಾನುಭವ ಪಂಥದವರಿಗೆ ಆಧ್ಯಾತ್ಮಿಕ ಪ್ರವೃತ್ತಿಯ ಮುಸಲ್ಮಾನರು ಪರಕೀಯರೆಂದು ಕಂಡಿರಲಿಕ್ಕೂ ಇಲ್ಲ.

ಸೂಫಿ ಪಂಥವು ಇಸ್ಲಾಂ ಧರ್ಮದ ಅನುಭಾವ ಶಾಖೆ ಎಂಬ ಅಭಿಪ್ರಾಯವನ್ನು ಅಲ್ಲಗಳೆಯುವ ರಹಮತ್ ತರೀಕೆರೆಯವರು ಅದು ಮಹಮ್ಮದ್ ಪೈಗಂಬರನಿಗಿಂತಲೂ ಹಿಂದಿನಿಂದ ಬೆಳೆದದ್ದು ಮತ್ತು ಅದಕ್ಕೆ ಭಾರತೀಯ ತತ್ವಶಾಸ್ತ್ರದ ಪ್ರಭಾವವೂ ಇತ್ತೆಂದು ಅಭಿಪ್ರಾಯಪಡುತ್ತಾರೆ. ಸೂಫಿಪಂಥ ಮಧ್ಯ ಏಷಿಯಾದಲ್ಲಿ ಇಸ್ಲಾಮಿ ಜಗತ್ತಿನಲ್ಲಿ ಹುಟ್ಟಿದ ಒಂದು ದರ್ಶನ. ಅದರಲ್ಲಿ ಫಲತೂನ್ ಎಂಬ ಹೆಸರಿನಲ್ಲಿ ಗ್ರೀಸ್‍ನ ತತ್ವಜ್ಞಾನಿ ಪ್ಲೇಟೊನ ಸೇರ್ಪಡೆ ಇದೆ. ಗ್ರೀಕ್ ತತ್ವಶಾಸ್ತ್ರದ ‘ಸೋಫಿಸ್ಟರಿಂದ’ ‘ಸೂಫಿ’ಪದ ಬಂದಿದೆ. ಸೂಫ್ ಎಂದರೆ ಉಣ್ಣೇ, ಜಗುಲಿಗಳೆಂಬ ಅರ್ಥಗಳೂ ಇವೆ. ಆದಿಯ ಸೂಫಿಗಳು ಮದೀನಾದ ಜಗುಲಿಯ ಮೇಲೆ ವಾಸಿಸುತ್ತಿದ್ದರು. ಹಾಗೂ ಉಣ್ಣೆಯ ನಿಲುವಂಗಿ ಗುದಡಿಯನ್ನು ಧರಿಸುತ್ತಿದ್ದರು. ಹೀಗೆ ಸೂಫಿ ಎಂಬುದು ಈ ಎಲ್ಲಾ ಅರ್ಥಗಳೂ ಇವೆ. ಆದಿಮ ಸೂಫಿಗಳು ಮದೀನಾದ ಜಗುಲಿಯ ಮೇಲೆ ವಾಸಿಸುತ್ತಿದ್ದರು. ಹೀಗೆ ಸೂಫಿ ಎಂಬುದು ಎಲ್ಲಾ ಅರ್ಥಗಳ ಹಿನ್ನಲೆಯನ್ನು ಹೊಂದಿದೆ. ಕ್ರಿಸ್ತನ ಸುವಾರ್ಗೆಗಳಿಂದಲೂ, ಇರಾನಿನ ಜರತುಷ್ಟನ ತತ್ವಗಳಿಂದಲೂ ಹಾಗೂ ಕಾಬುಲ್ ಕಂದಹಾರಗಳವರೆಗೆ ವ್ಯಾಪಿಸಿದ್ದ ಬೌದ್ಧ ಧರ್ಮದಿಂದಲೂ ಸೂಫಿಗಳು ಪ್ರೇರಣೆ ಪಡೆದಿದ್ದರು. ಭಾರತದ ಉಪನಿಷತ್ತು, ಯೋಗ, ಅದ್ವೈತಗಳು ಸೂಫಿ ಚಿಲುಮೆಯ ಗರ್ಭಕ್ಕೆ ಒಳಜಲ ಒದಗಿಸಿದವು. ಪೈಗಂಬರನಿಂದ ಈ ಮಾರ್ಗಕ್ಕೆ ಹೊಸ ಚೈತನ್ಯ ಬಂತು.

ಗುದಡಿ, ದಂಡ, ಗಂಡಿ, ಚಾಪೆಗಳನ್ನು ಸೂಫಿ ಗುರು ತನ್ನ ಶಿಷ್ಯನಿಗೆ ಕೊಡುತ್ತಿದ್ದ, ಅಂದರೆ ಅವರದು ಅತ್ಯಂತ ವೈರಾಗ್ಯದ, ಸರಳವಾದ ಬದುಕಿನ ರೀತಿ. ಆತ್ಮಜ್ಞಾನ ಸಾಧನೆಗಾಗಿ ಪ್ರಾಪಂಚಿಕ ಗೊಂದಲಗಳನ್ನು ಹರಿದುಕೊಂಡ ಫಕೀರರು ಈ ಸೂಫಿಗಳು. ಗುರುವಿಗೆ ಈ ಪಂಥದಲ್ಲಿ ಬಹಳ ಮಹತ್ವ, ಗುರು-ಪೀರ್, ಸಮಾ-ಸಂಗೀತ, ವಜದ್-ಭಾವ ಸಮಾಧಿಗಳು ಇವರಿಗೆ ಮುಖ್ಯ. ಗುರುವನ್ನು ಹುಡುಕುವುದು, ದೀಕ್ಷೆಪಡೆಯುವುದು, ಗುರುವಿಗೆ ತನ್ನನ್ನು ಅರ್ಪಿಸಿಕೊಳ್ಳುವುದು ಇವರ ಮಾರ್ಗ. ಕನ್ನಡದ ಶರಣರು, ಅನುಭಾವಿಗಳು, ಅವಧೂತರ ಪಂಥಗಳೊಡನೆ ಇವರಲ್ಲಿ ಸಾಮ್ಯ ಕಂಡುಬರುತ್ತದೆ. ಇದು ಕಟ್ಟಾ ಇಸ್ಲಾಂ ಪದ್ಧತಿಗಳಿಗೆ ಭಿನ್ನವಾದುದು.

ಇಸ್ಲಾಮಿನ ಪ್ರಕಾರ ನಿರಾಕಾರ ದೇವರನ್ನು ಬಿಟ್ಟು ಇನ್ನರಿಗೂ ತಲೆಬಾಗಬಾರದು. ಗುರುವಿಗೆ ಮಣಿಯುವುದು ದೈವದ್ರೋಹ. ಹಾಗೆಯೇ ಮಸೀದಿಗೆ ಹೋಗಿ ನಮಾಜು ಮಾಡಿವುದು ಉಪವಾಸ ಹಜ್‍ಯಾತ್ರೆ ಮುಂತಾದುವನ್ನು ಪಾಲಿಸಬೇಕು. ಮೌಲ್ವಿಗಳ ಮಾತು ಅಂತಿಮ ತೀರ್ಪು. ಅದನ್ನು ಪಾಲಿಸಲೇಬೇಕು. ಸೂಫಿಗಳು ಇವಾವುಗಳನ್ನೂ ಮಾನ್ಯಮಾಡುವುದಿಲ್ಲ. ಆದ್ದರಿಂದ ಇಂಥವರನ್ನು ಕಟ್ಟಾ ಮುಸ್ಲಿಮರು ಶಿಕ್ಷೆಗಳಿಗೆ ಮರಣದಂಡನೆಗೆ ಗುರಿಮಾಡಿದ್ದೂ ಇದೆ.

ಸೂಫಿಗಳ ಚರಿತ್ರೆಯಲ್ಲಿ ಮೊದಲನೆ ಹಂತದಲ್ಲಿ ಅಲೆಮಾರಿ ತಾಪಸಿಗಳಿದ್ದರು. ಎರಡನೆ ಹಂತದಲ್ಲಿ ಗುರು ಶಿಷ್ಯಪರಂಪರೆ ನೆಲೆಗೊಂಡು ಪ್ರರಿಭಾನ್ವಿತ ತತ್ವಜ್ಞಾನಿಗಳು ಮೂಡಿಬಂದರು. ಜಲಾಲುದ್ದೀನ್ ರೂಮಿ, ಶೇಕ್‍ಸಾದಿ, ಫರೀರುದ್ದೀನ್ ಅತ್ತಾರ್, ಉಮರ್ ಖಯಾಂ ಮುಂತಾದವರು ಉದಾಹರಣೆಗಳು. ಮೂರನೆ ಹಂತದಲ್ಲಿ ದರ್ಗಾ ಸಂಸ್ಕೃತಿ ಶುರುವಾಯಿತು. ಅದರೊಡನೆ ಮಹಿಮೆಗಳು ಪುರಾಣಗಳು, ದರ್ಗಾ ಆಸ್ತಿಪಾಸ್ತಿ, ವಂಶಾನುಗತ ವಾರಸುದಾರಿಕೆ ಮುಂತಾದವು ಬೆಳೆದವು.

ಎರಡನೆ ಹಂತದಲ್ಲಿ ಸುಮಾರು ೧೧ನೇ ಶ್ರಮಾನದಲ್ಲಿ ಸೂಫಿಗಳಲ್ಲೇ ಸಿಲ್‍ಸಿಲಾಗಳು ಅಥವಾ ಶಾಖೆಗಳು ಕವಲೊಡೆದವು. ಚಿಸ್ತಿಯಾ, ಖಾದ್ರಿಯಾ, ರಫಾಯಿಯಾ ಮುಂತಾದುವು ಒಳಪಂಥಗಳು. ಇವು ಕೂಡ ಮಧ್ಯಏಷ್ಯಾದ ಮುಸ್ಲಿಂ ರಾಷ್ಟ್ರಗಳಲ್ಲೇ ಹುಟ್ಟಿದವು. ಭಾರತದಲ್ಲಿ ಚಿಸ್ತಿ. ಖಾದ್ರಿಯಾ ಮತ್ತು ನಕ್ಷ್‍ಬಂದಿ ಪಂಥಗಳು ಮುಖ್ಯವಾಗಿ ಕಂಡುಬರುತ್ತವೆ. ಕರ್ನಾಟಕದ ಖಂದೇನವಾಜ, ಲಾಡ್ಲೆ ಮುಶಾಯಿಕ್, ಶಾಮಿರಾಂಜಿ, ಅಮೀನುದ್ದೀನ, ಖಾದರಲಿಂಗ, ಹೊನ್ನೂರುಸ್ವಾಮಿ ಮುಂತಾದ ಚಸ್ತಿಗಳು. ಜಂಗ್ಲಿ, ಡೊಂಗ್ಲಿ, ರಫಾಯಿ, ಜವಾಲಿ, ಮಜ್‍ಸೂಚ ಪಂಗಂಡಗಳು ತಮ್ಮ ಸ್ವೇಚ್ಛವರ್ತನೆ, ಹುಚ್ಚಾಟ, ಸ್ವಹಿಂಸೆಗಳಿಗೆ ಪ್ರಸಿದ್ಧವಾಗಿವೆ. ನಾಥಪಮ್ಥದಲ್ಲೂ ಪಾಗಲ್ ಪಂಥಿಗಳಿದ್ದಾರೆ. ಕಾಡಸಿದ್ಧರು ಕೂಡ ಇದೇಸಾಲಿಗೆ ಸೇರುತ್ತಾರೆ. ಚೇಳ್ಳುಗುರ್ಕಿಯೆರಿತಾತ, ನವಲುಗುಂದದ ನಾಗಲಿಂಗಸ್ವಾಮಿಗಳು ತಮ್ಮ ಹುಚ್ಚುವರ್ತನೆಗಳಿಗೆ ಪ್ರಸಿದ್ಧರು.

ಮಲಬಾರ ತೀರದವರೊಡನೆ ಅರಬ್ಬಿಯರು ವ್ಯಾಪಾರ ಪ್ರಾರಂಭಿಸಿದಾಗಿನಿಂದ ಅಂದರೆ ಕ್ರಿ.ಶ. ೭ನೇ ಶತಮಾನದಿಂದಲೇ ಇಸ್ಲಾಂ ಮತ ಪ್ರಚಾರಕರು ಕೂಡ ಭಾರತಕ್ಕೆ ಆಗಮಿಸಿದ್ದಾರೆ. ಕ್ರಿ.ಶ. ೮೧೫ರಲ್ಲಿ ಕೋಡಂಗಲ್ಲಿನ ದೊರೆ ಇಸ್ಲಾಂ ಧರ್ಮ ಸ್ವೀಕರಿಸಿದ. ಕಾಸರಗೋಡಿಗೆ ಮಾಲಿಕ್ ಬಿನ್ ದೀನಾರ್ ಏಂಬುವನು ಮದೀನಾದಿಂದ ಬಂದ. ಅಫಘಾನಿಸ್ಥಾನದಿಂದ ಬಂದ ಶೇಖ್ ಅಬಲ್‍ಹಸನ್ ಹುಜವೇರಿ (ಕ್ರಿ.ಶ. ೧೦೭೦ರಲ್ಲಿ) ಭಾರತಕ್ಕೆ ಬಂದ ಮೊದಲ ಸೂಫಿ ಎಂದೂ ಅಜ್ಮೀರಿನಿಂದ ಬಿಜಾಪುರಕ್ಕೆ ಬಂದ ಹಾಜಿರೂಮಿಬಾಬಾ (೧೧೬೦) ಕರ್ನಾಟಕಕ್ಕೆ ಬಂದ ಮೊದಲ ಸೂಫಿ ಎಂದೂ ಗುರುತಿಸಲಾಗಿದೆ, ದೆಹಲಿಯ ಘೋರಿ ಶಹಾಬುದ್ದೀನನ ಆಹ್ವಾನದ ಮೇರೆಗೆ ಮೊಯಿನುದ್ದೀನ್ ಚಿಸ್ತಿ ಆಗಮಿಸಿದ.

೧೪ನೇ ಶತಮಾನದಲ್ಲಿ ಬಹಮನಿ ಸುಲ್ತಾನರ ನಂತರ ಬಿಜಾಪುರದ ಆದಿಲ್‍ಶಾಹಿಗಳು ಆಳತೊಡಗಿದಾಗ ಇಸ್ಲಾಂ ಮತ ಪ್ರಚಾರದೊಡನೆ ಸೂಫಿಗಳ ಚಟುವಟಿಕೆಗಳು ಹೆಚ್ಚಾದವು. ದೆಹಲಿಯಿಂದ ನಾಸಿರುದ್ದೀನನ ಶಿಷ್ಯ ಬಂದೇನವಾಜನು ಗುಲಬರ್ಗಾಕ್ಕೆ ಬಂದು ಸುಲ್ತಾನರಿಗೆ ರಾಜ ಗುರುವಾಗಿ ಸೂಫಿ ಧರ್ಮ ಪ್ರಚಾರಕ್ಕೆ ಕಾರಣನಾದ, ಬಿಜಾಪುರದ ಅಮೀನುದ್ದೀನ್ ಚಿಸ್ತಿಯೂ ಆದಿಲ್ ಶಾಹಿ ಆಡಳಿತಲ್ಲಿ ಸ್ವಾಮರಸ್ಯದ ವಾತಾವರಣಕ್ಕೆ ಕಾರಣನಾಗಿದ್ದಾನೆ.

ಅನೇಕ ತತ್ವಚಿಂತನೆಗಳು, ಬಹುದೇವತಾ ಆರಾಧನೆಗಳು, ಬಹುಭಾಷೆ, ಬಹು ಸಂಸ್ಕೃತಿಗಳು ನೆಲೆಸಿದ್ದ ನಾಡಿನಲ್ಲಿ ಸೂಫಿಗಳಿಗೆ ಇಲ್ಲಿಯ ಅದ್ವೈತಚಿಂತನೆ, ನಿರ್ಗುಣಬ್ರಹ್ಮ ಉಪಾಸನೆ ಯೋಗದ ಪಂಥಗಳು ಗುರು ಮಾರ್ಗಗಳು, ‘ದೋಸ್ತಾರಕ್ಕೆ’ (ಸ್ನೇಹಕ್ಕೆ) ಅನುಕೂಲಕರವಾದ ಸಂಗತಿಗಳಾದವು. ಅರಬಸ್ತಾನದಲ್ಲಿ ಜ್ಞಾನಮಾರ್ಗಿಯೂ, ಪರ್ಶಿಯಾದಲ್ಲಿ ಪ್ರೇಮಮಾರ್ಗಿಯೂ ಆಗಿ ಬೆಳೆದಿದ್ದ ಸೂಫಿ ಅನುಭಾವಕ್ಕೆ ಭಾರತದ ಭಕ್ತಿಪಂಥಗಳ ಒಡನಾಟ ಧ್ಯಾನಮಾರ್ಗಿಯಾಗುವ ಒತ್ತಾಸೆ ನೀಡಿತು ಎನ್ನುತ್ತಾರೆ ತರೀಕೆರೆಯವರು.

ಭಾರತದ ಭಕ್ತಿಪಂಥಗಳು ಯೋಗ ಮಾರ್ಗಕ್ಕಿಂತ ಭಿನ್ನ. ಅವುಗಳಲ್ಲಿ ಮೂರ್ತಿಪೂಜೆ ಪ್ರಧಾನ. ಅವುಗಳು ಸೂಫಿಗಳಿಗೆ ಧ್ಯಾನಮಾರ್ಗಕ್ಕೆ ಪ್ರೇರಣೆಯಾಗಿರುವುದು ಸಾಧ್ಯವಿಲ್ಲ. ನಿರಾಕಾರ ನಿರ್ಗುಣೋಪಾಸನೆಯ ಧ್ಯಾನ, ಯೋಗಗಳು ಮುಖ್ಯವಾಗಿದ್ದ ಆರೂಡ, ಅನುಭವ ಪಂಥಗಳೇ ಸೂಚಿ ಪಂಥಕ್ಕೆ ಸಮೀಪವಾಗಿದ್ದು ನಿಜ. ಇಂಥ ನಾಥ ಸಿದ್ಧ, ಮಹಾನುಭಾವ ದತ್ತ, ಆರೂಢ ಮುಂತಾದ ಆಧ್ಯಾತ್ಮ ಮತ್ತು ಯೋಗಪ್ರಧಾನವಾದ ಪಂಥಗಳೊಡನೆ ಸೂಫಿಪಂಥವು ಬಹಳ ಅನ್ಯೋನ್ಯವಾದ ಸಂಬಂಧ ಬೆಳೆಸಿತು.

ದರಿಯಾನಾಥ ಶೇಖ್ ತಾಹಿರ್‍ಆದಂತೆ, ಕಾಯಾನಾಥನು ಸಿಂಧ್ ಮುಸ್ಲಿಮರಲ್ಲಿ ಖಯಾಮುದ್ದೀನ್ ಆಗುತ್ತಾನೆ. ಮೋನಪ್ಪ ಮೌನುದ್ದೀನ್ ಆಗುತ್ತಾನೆ. ಮುಸ್ಲಿಂ ಅನುಯಾಯಿಗಳ ನಾಯಕ ಗಂಗಾಪೀರ್ ಗೋರಖನಾಥನ ಶಿಷ್ಯನಾಗುತ್ತಾನೆ. ಯಮನೂರಿನ ಚಾಂಗದೇವನು ಚಾಂಗ್‍ಪೀರನಾಗುತ್ತಾನೆ.

ಉತ್ತರ ಕರ್ನಾಟಕದಲ್ಲಿ ಬೆಳೆದುಬಂದ ಇಂಥ ಸಹಯೋಗದ ಉದಾಹರಣೆಗಳೂ ಹೀಗಿವೆ- “ಹಿಂದೂ ಅನುಭಾವಿಗಳ, ಸೂಫಿಗಳ ಅನುಸಂಧಾನ ಮತ-ಧರ್ಮ, ರಾಷ್ಟ್ರ, ಕುಲಗಳ ಗಡಿಗಳನ್ನು ಮೀರಿ ನಡೆದಿದೆ. ಹುನಗುಂದದ ಸಿದ್ಧನಕೊಳ್ಳದ ಮಾರನಬಸರಿ ಸಿದ್ಧಯ್ಯಸ್ವಾಮಿಗಳು ತಮ್ಮನುಭಾವ ಗೋಷ್ಠಿಯಲ್ಲಿ ಈ ಭಾಗದ ಸೂಫಿಗಳ ಜೊತೆ ಆಧ್ಯಾತ್ಮಿಕ ಚಿಂತನ ಮಂಥನ ಮಾಡುತ್ತಿದ್ದರು. ಬೀಳಗಿಯ ದಿಗಂರೇಶ್ವರರು ಸೂಫಿಗಳ ಒಡನಾಟದಲ್ಲಿದ್ದವರು. ಇವರು ಗದ್ದುಗೆಯೂ ಸೂಫಿಗಳಂತಯೇ ಇದೆ. ನಾಥರು, ಕಾಡಸಿದ್ದರ ಜೊತೆಯಲ್ಲೂ ಸೂಫಿಗಳ ಒಡನಾತದಲ್ಲಿದ್ದವರು. ಇವರ ಗದ್ದುಗೆಯೂ ಸೂಫಿಗಳಂತಯೇ ಇದೆ. ನಾಥರು, ಕಾಡಸಿದ್ದರ ಜೊತೆಯಲ್ಲೂ ಸೂಫಿಗಳ ಸಂಬಂಧ ಇತ್ತು. ಜಮಖಂಡಿ ಸೀಮೆಯ ಗುಂಡೆವಾಡಿಯ ಸಿದ್ಧನಬಳಿ ಶೇಖ್ ಸಲೀಂ ಎಂಬ ಸೂಫಿಬರುತ್ತಿದ್ದ. ಈ ಭಾಗದ ಕಾಡಸಿದ್ಧ  ಸಿದ್ಧಗಿರಿಗೆ ಹೋದಾಗ ಮಿರ್ಜಾಮೀರ ಸಾಹೇಬನೆಂಬ ಸೂಫಿ ಸಂತನೋಡನೆ ಗೆಳೆತನ ಮಾಡಿದ್ದ ಲೋಕಾಪೂರ ಛತ್ರಭಾನು ಕೋಟೆಗಳಲ್ಲಿ ಜ್ಞಾನದೇವನ ಪರಂಪರೆಯ ಮಠಗಳಲ್ಲಿ ಧಾರ್ಮಿಕ ಆಚರಣೆಗಳು ಸೂಫಿಗಳಂತಿದೆ. ಮಹಾಲಿಂಗಪುರದ ಕುಬ್ಬಣ ತನ್ನ ಗುರು ರಾಣಾಸೂಫಿಯ ಹೆಸರಿನಲ್ಲಿ ರಾಣಾಕುಬ್ಬಣ್ಣ  ಎಂದೇ ಪ್ರಸಿದ್ಧನಾಗಿದ್ದ.

ಮುಧೋಳದ ಸಯ್ಯದ ಸಾಹೇಬನ ಉರುಸಿನಲ್ಲಿ ಮೊದಲ ಝಂಡಾ ಹಿಂದೂಗಳ ಮನೆಯಿಂದ ಬರುತ್ತದೆ. ಬಾದಾಮಿ ತಾಲೂಕಿನ ಜಾಲಿಹಾಳದ ಬಳಿ ಶಂಕರಲಿಂಗನ ಗುಡಿಯಲ್ಲಿ ಯೋಗಿಯ ಗದ್ದುಗೆಗೆ ಹಿಂದು ಮುಸ್ಲಿಮರಿಬ್ಬರೂ ನಡೆದು ಕೊಳ್ಳುತ್ತಾರೆ. ಬನಹಟ್ಟೆಯ ಸಮೀಪ ಕಾಡಸಿದ್ಧೇಶ್ವರ ಗುಡಿಯ ಪಕ್ಕದಲ್ಲೇ ನೂರಾಸಾಬ ಮೊರಾಸನ ಸೂಫಿಗದ್ದುಗೆಯೂ ಇದೆ. ಹೀಗೆ ಬದಾಮಿಯ ಸಯ್ಯದ್ ಬಾದಶಾವಲಿ, ಹುನಗುಂದದ ಅಮೀರ್ ಹಮ್‍ಜಾ, ಬಾಗಲಕೋಟೆಯ ಶಾ ಅಬ್ದಲ್ ಖಾದ್ರಿ, ಇಲಕಲ್ಲಿನ ಶಾ ಮೆಹಬೂಬ್ ಖಾದ್ರಿ, ಬೀಳಗಿಯ ಹಸನ್ ಡೋಂಗ್ರಿ, ಕಲಾದಗಿಯ ಶರ್ಪುದ್ದೀನ್, ಜಮಖಂಡಿಯ ಅಬೂಬಕರ್ ಮುಂತಾದ ಅನೇಕ ದರ್ಗಾಗಳು ಹಿಂದೂಮುಸ್ಲಿಂ ಸೌಹಾರ್ದತೆಯ ಸಂಕೇತವಾಗಿ ಕನ್ನಡ ನಾಡಿನಲ್ಲೆಲ್ಲ ವ್ಯಾಪಿಸಿವೆ.

ಸೊಲ್ಲಾಪುರದ ವಡಬಾಳದ ನಾಗನಾಥನ ಜಾತ್ರೆಯಲ್ಲಿ ‘ನಾಸಿರುದ್ದೀನ್ ಚಿರಾಗ್‍ಕಿದೋಸ್ತಾರದೀನ್ ಹರಹರಾ’ ಎಂಬದೀನ್, ಸಾವಳಗಿ ಶಿವಲಿಂಗೇಶ್ವರನಲ್ಲಿ ಬಂದೇ ನವಾಜನ ದೀನ್, ಶಿರಹಟ್ಟಿಯ ಫಕೀರೇಶ್ವರನ ಉತ್ಸವದಲ್ಲಿ ಬಿಜಾಪುರದ ಅಮೀನುದ್ದೀನ  ನದೀನ್ ಜಗಾಯಿಸುತ್ತವೆ. ಹಾಗೆಯೇ ತಿಂತಿಣಿ ಮೌನೇಶನ ಉತ್ಸವದಲ್ಲಿ ಮಹಮದ್ ಪೈಗಂಬರನ ದೀನ್ ಘೋಷಣೆ ದತ್ತಪಂಥದವರೊಡನೆ ಕೆಲಕಾಲವಿದ್ದು ಹೊಸಪೇಟೆಗೆ ಬಂದು ನೆಲೆಸಿದ. ಹೊಸಪೇಟೆಯ ಆತನ ಉರುಸಿಗೆ ಪ್ರತಿವರ್ಷ ಅಕ್ಕಲ ಕೋಟೆಯಿಂದ ಭಕ್ತರು ಬರುತ್ತಾರೆ.

ದಿಲ್ಲಿಯ ಚಿರಾಗ್ (ದೀಪ) ಎನಿಸಿಕೊಂಡ ನಾಸಿರುದೀನನ್ನು ಆದಿನಾಥ ಎಂದು ಕರೆಯುತ್ತಾರೆ. ಏಕೇಶ್ವರ ವಾದವನ್ನು ಹರಡಲು ದಖ್ಖನ್ನಿಗೆ ಬಂದು ಇಲ್ಲಿದ್ದ ಮಹಾನುಭಾವ, ನಾಥ, ಚೈತನ್ಯ ಮತ್ತು ಲಿಂಗಾಯಿತ ಪಂಥಗಳನ್ನೆಲ್ಲ ಸೂಫಿಯೊಳಗೆ ತರುವ ಪ್ರಯತ್ನಮಾಡಿದ. ಈತನ ಶಿಷ್ಯ ವಡಲಾಳದ ನಾಗನಾಥನನ್ನು ಈ ಎಲ್ಲ ಪಂಥಗಳ ಮೂಲ ಪುರುಶನನ್ನಾಗಿ ಪರಿಭಾವಿಸಿದ ಒಂದು ದೊಡ್ಡ ಪರಂಪರೆಯೇ ಆ ಕಾಲದಲ್ಲಿ ಪ್ರಚಲಿತವಿದ್ದಂತೆ ಕಂಡುಬರುತ್ತದೆ. ಇದರಲ್ಲಿ ಮಚ್ಚೇಂದ್ರ, ಗೋರಖನಾಥ, ಚಾಮದೇವ, ನಾಮದೇವರೂ, ಗುಲಬರ್ಗೆಯ ಬಂದೇನವಾಜ್, ಆಳಂದೆಯ ಲಾಡ್ಲೆ ಮಶಾಯಿಕ್, ದೆಹಲಿಯ ಸಂತ ತುಕಾರಾಂ ಅವರೂ, ವೀರಶೈವದ ಸೊಲ್ಲಾಪುರದ ಸಿದ್ಧರಾಮ, ಕಲ್ಯಾಣದ ಬಸವಣ್ಣ, ಚೆನ್ನಬಸವಣ್ಣ, ಅರವತ್ತುಮೂರು ಪುರಾತನರು ಬಜಾಪುರ ಶಿರಹಟ್ಟಿಗಳ ಅಮೀನುದ್ದೀನ್ ಪಕೀರೇಶ್ವರರೂ, ಎಲ್ಲರನ್ನೂ ಸಮಗ್ರವಾಗಿ ತನ್ನೊಳಗೆ ಸೇರಿಕೊಂಡ ಒಂದು ಬೃಹತ್ ಪಂಥವನ್ನು ರೂಪಿಸುವ ಪ್ರಯತ್ನ ನಡೆದಂತೆ ಕಂಡುಬರುತ್ತದೆ.

ಬಂದೇನವಾಜನ ಶಿಷ್ಯ ಕುಸುನೂರಿನ ಸಿದ್ಧಯ್ಯ, ಕಲಬುರ್ಗಿ ಶರಣಬಸವೇಶ್ವರ ‘ದೋಸ್ತಾರ್’ರಾಗಿ ನಡೆದುಕೊಂಡಿರುವುದು ಚರಿತ್ರೆಯಲ್ಲಿ ಕಂಡುಬರುತ್ತದೆ. ಇಬ್ರಾಹಿಂ ಆದಿಲಶಾನು ರುಕ್ಮಾಂಗದ ಪಂಡಿತರ ಪ್ರಭಾವಕ್ಕೊಳಗಾಗಿ ಸರಸ್ವತೀ ವಿಗ್ರಹವನ್ನು ಅರಮನೆ ಆವರಣದಲ್ಲಿ ಸ್ಥಾಪಿಸಿ ಆರಾಧನೆ ಮಾಡಿದ್ದಲ್ಲದೆ ತನ್ನ ‘ಕಿತಾಬೆನೌರಸ’ದಲ್ಲಿ ಸರಸ್ವತಿಸ್ತುತಿಯನ್ನೇ ಮೊದಲು ಮಾಡಿದ್ದಾನೆ. ಸುಲ್ತಾನನ ಧರ್ಮಭ್ರಷ್ಟತೆಯನ್ನು ಸರಿಪಡಿಸಲು ಬಂದ ಅಜ್ಮೀರಿನ ಅಬುಲ್‍ಹಸನ್ ಖಾದ್ರಿ ರುಕ್ಮಾಂಗದನ ಗೆಳೆಯನೇ ಆಗುತ್ತಾನೆ. ಆದಿಲ್‍ಶಾಹಿ ಆಸ್ಥಾನದಲ್ಲಿ ಅಧಿಕಾರಿಯಾಗಿದ್ದ ಮಹೀಪತಿರಾಯ ಶಾನಂಗಾ ಎಂಬ ದರವೇಶಿ ಸೂಫಿಯಿಂದ ಪ್ರಭಾವಿತನಾದ, ಗಾಣಗಾಪುರದ ನರಸಿಂಹ ಸರಸ್ವತಿ ದತ್ತಸಂಪ್ರದಾಯದ ಮುಖ್ಯಗುರು ಅಲ್ಲಾವುದ್ದೀನ್ ಬಹಮನಿ ಆತನ ಶಿಷ್ಯನಾಗಿದ್ದ. ಯುಸುಫ್ ಆದಿಲ್‍ಶಾನ ಅರಮನೆ ಆವರಣದಲ್ಲಿ ನರಸಿಂಹ ದತ್ತ ಮಂದಿರವಿತ್ತು. ಎರಡನೆ ಇಬ್ರಾಹಿಮನು ಅ ಮಂದಿರದ ದರ್ಶನಕ್ಕೆ ಬರುತ್ತಿದ್ದ.

ಹೀಗೆ ೧೪ನೇ ಶತಮಾನದಿಂದ ೧೭ನೇ ಶತಮಾನದವರೆಗೆ ಅನೇಕ ದೃಷ್ಟಾಂತಗಳು ಹಾಗು ೧೯ನೇ ಶತಮಾನದವರೆಗಿನ ಕಡಕೋಳ ಮಡಿವಾಳಪ್ಪ, ಕೂಡಲೂರು ಸಿದ್ದಪ್ಪ ಗಾದಿಲಿಂಗಪ್ಪ, ಅಲ್ಲಿಸಾಬು, ಶರೀಫಸಾಹೇಬ ಮುಂತಾದವರೆಗೆ ಗುರು ಶಿಷ್ಯಸಂಪ್ರದಾಯಗಳಲ್ಲಿ ಹಿಂದೂ ಮತ್ತು ಸೂಫಿಗಳ ಸಂಬಂಧ ಅನೂಚಾನವಾಗಿ ಸಾಗಿಬಂದಿದೆ. ಕಡಕೋಳ ಮಡಿವಾಳಪ್ಪ-ಚನ್ನೂರ ಜಲಾಲಸಾಬ, ಕೂಡಲೂರು ಸಿದ್ದಪ್ಪ-ಸಾಹಿಬಣ್ಣತಾತ, ಶೇಕ್ಷಾವಲಿ-ಗಾದಿಲಿಂಗಪ್ಪ, ಅಲ್ಲಿಸಾಬು-ಶಿಲವೇರಿ ಶಿವಪ್ಪ ಮುಂತಾದ ಇಳಕಲ್ಲಿನ ಮಹಾಂತಸ್ವಾಮಿ-ಸೂಫೀಸಂತ ಮುರ್ತುಚಾಖಾದ್ರಿ ಇಂಥ ಸಂಬಂಧಗಳು ಹಿಂದೂ ಮತ್ತು ಮುಸ್ಲಿಂ ಸಂಪ್ರದಾಯಗಳನ್ನು ಮೀರಿ ಒಂದು ಸಾಮರಸ್ಯದ ನೆಲೆಯಲ್ಲಿ ಸಾಗಿ ಬಂದಿವೆ.

ಈ ಸಾಮರಸ್ಯದ ತಳಹದಿ ಎರಡೂ ಸಂಪ್ರದಾಯಗಳ ತಾತ್ವಿಕಚಿಂತನೆಯಲ್ಲಿದೆ. ಪರಮಾತ್ಮ-ಪ್ರಭು ಯಾರು? ಎಂಬ ಬಗೆಗಿನ ಚಿಂತನೆ ಎಲ್ಲ ಧರ್ಮಗಳ ಮೂಲವಾಗಿದೆ. ಹಿಂದೂಗಳ ಈ ಪಾರಮಾರ್ಥಜ್ಞಾನವನ್ನು ಸೂಫಿಯಲ್ಲಿ ಮಾರಿಫತ್ ಎಂದು ಕರೆಯುತ್ತಾರೆ. ಇದು ಏಕೇಶ್ವರವಾದವನ್ನು ವಿವರಿಸುತ್ತದೆ, ನಿರಾಕಾರ ನಿರ್ಗುಣತ್ವವನ್ನೇ ವರ್ಣಿಸುತ್ತದೆ.

ಆ ಪ್ರಭುವನ್ನು ಪಡೆಯುವುದು ಹೇಗೆ ಎಂಬುದನ್ನು ಮಾರ್ಗದರ್ಶನ ಅಥವ ತರೀಖತ್ ಎಂದು ಸೂಫೀಧರ್ಮ ಹೇಳುತ್ತದೆ. ಇದರ ವಿವರಗಳು ನಮ್ಮ ವೀರಶೈವದ ಅಷಾವರಣಗಳನ್ನು ತಾತ್ವಿಕವಾಗಿ ಹೋಲುತ್ತದೆ. ಪಟಸ್ಥಲಗಳೂ ಶಿವ ಜೀವೈಕ್ಯಸಾಧನೆಯ ಹಂತಗಳಾಗಿ ಈ ಸಾಧಕ ಮಾರ್ಗದಲ್ಲೇ ಬರುತ್ತವೆ. ಗುರುವನ್ನು ಪೀರ ಎಂದು ಗೌರವಿಸಲಾಗುತ್ತದೆ.

ಯೌಗಿಕ ಪರಿಭಾಷೆಗಳೂ ಸೂಫಿ ಮತ್ತು ಹಿಂದೂ ತತ್ವಗಳಲ್ಲಿ  ಸಮಾನವಾಗಿದೆ. ಸೂಫಿಯಲ್ಲೂ ಆಸನ ಮುದ್ರೆಗಳಿವೆ. ಶೂನ್ಯಸ್ಥಿಯನ್ನು ‘ಫನಾ’ ಎನ್ನಲಾಗುತ್ತದೆ. ಪ್ರಾಣಾಯಾಮವು ‘ಫಸ್ ಇ ಅನಫಾಸ್’ ಎಂದೂ, ಮಂತ್ರವನ್ನು ‘ಜಕ್ರ್’ ಎಂದೂ ಷಟ್‍ಚೆಕ್ರಗಳನ್ನು ‘ಲತಾಯಿಫ್’ ಎಂದೂ ಕರೆಯಲಾಗುತ್ತದೆ. ಸೂಫಿಥಿಂಗಿದ್ದ ಅಲ್ಬರೂನಿಯೂ ಪತಂಜಲಿಯ ಯೋಗಸೂತ್ರವನ್ನು, ಯೋಗ ವಾಸಿಷ್ಠವನ್ನು ಫಾರಸಿಗೆ ಅನುವಾದ ಮಾಡಿದ. ಹಠಯೋಗದ ‘ಅಮೃತಕುಂಡ’ ಕೃತಿಯನ್ನು ಶೇಕ್ ಅಬ್ದುಲ್ ಖುದ್ದೂಸ ಗಂಗೂಹಿ ಸೂಫಿಯು ‘ಹೌಜ್ ಉಲ್ ಹಯಾತೆ’ ಎಂದು ಅನುವಾದಿಸಿದ್ದಾನೆ. ಸೈಯದ್ ಮುರ್ತುಜಾ ‘ಯೋಗ ಖಲಂರ್ದ’ ಕೃತಿಯನ್ನು ರಚಿಸಿದ್ದಾನೆ.

ಕನ್ನಡದ ಶರೀಫ ಸಾಹೇಬ, ಕಡಕೋಳ ಮಡಿವಾಳಪ್ಪ ಮುಂತಾದವರ ತತ್ವಪದಗಳಲ್ಲಿ ಬರುವ ಯೋಗಾನುಭವದ ವರ್ಣನೆಗಳನ್ನು ಮತ್ತು ಯೋಗಿಕ ಪರಿಭಾಷೆಗಳನ್ನು ನೆನೆಯಬಹುದು. ಅದ್ವೈತ ಪಂಥದ ‘ಅಹಂ ಬ್ರಹ್ಮಾಸ್ಮಿ’ ಅಥವಾ ‘ತತ್ವಮಸಿ’ ಬೀಜ ಮಂತ್ರಗಳು ಸೂಫೀ ಪಂಥದಲ್ಲಿ ಹಲ್ಲಾಜನು ಘೋಷಿಸಿದ ‘ಅನಲ್‍ಹಕ್’ನಲ್ಲಿ ಒಳಗೊಂಡಿವೆ. ಗೊರಖ್ ಪಂಥದವರ ಮುಕ್ಯ ಘೋಷಣೆಯೂ ‘ಅಲಖ್ ನಿರಂಜನ್’. ಅಲಖ್ ಎಂದರೆ ನಿರಾಕಾರ. ನಿರಾಕಾರ ನಿರ್ಗುಣ ಪ್ರಭು ನನ್ನೊಳಗೇ ಇದ್ದಾರೆ. ನಾನೇ ಅವನು ಎಂಬಂಥ ತತ್ವ ಇಸ್ಲಾಂ ಸಂಪ್ರದಾಯಕ್ಕೂ ವಿರುದ್ಧವಾದುದು, ಹಾಗೇ ಭಾರತೀಯ ದ್ವೈತ ಸಿದ್ಧಾಂತ ಮತ್ತು ಭಕ್ತಿ ಸಂಪ್ರದಾಯಗಳಿಗೂ ವಿರುದ್ದವಾದುದು. “ಅರಬ್ ಇಸ್ಲಾಂ ತೀಕ್ಷ್ಣವಾದುದು, ಬದಲಾವಣೆಯನ್ನು ವಿರೋಧಿಸುವಂಥದ್ದು ಹಾಗೂ ಆಕ್ರಮಣಕಾರಿಯಾದುದು. ಭಾರತೀಯ ಹಿಂದೂ ಸಂಸೃತಿ ಚಿಂತನಶೀಲವಾದುದು, ಸಂಕರರೂಪಿಯಾದುದು ಹಾಗೂ ಭಾವನಾತ್ಮಕವಾದುದು” ಎನ್ನುತ್ತಾನೆ ಈಟನ್.

ಮುಸ್ಲಿಂ ಆಡಳಿತದಲ್ಲಿ ಭಾರತೀಯರ ಮತಾಂತರ ಬಹಳ ದೊಡ್ಡ ಪ್ರಮಾಣದಲ್ಲಿ ನಡೆದಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಆ ದೃಷ್ಟಿಯಿಂದ ಈಟನ್ನನ ಮಾತು ಸೈರಿಯಾಗಿಯೇ ಇದೆ. ಹಿಂದುಗಳಿಗೆ ತಮ್ಮ ಧರ್ಮ ಸಂಪ್ರದಾಯಗಳನ್ನು ಉಳಿಸಿಕೊಂಡು ಮುಸ್ಲಿಂ ಆಕ್ರಮಣಶೀಲತೆಗೆ ವಿರುದ್ಧವಾಗಿ ನಿಲ್ಲುವುದು ಬಹಳ ಕಷ್ಟದ ಕೆಲಸವಾಗಿತ್ತು. ಇದಕ್ಕಾಗಿ ಇಸ್ಲಾಮಿನೊಡನೆ ರಾಜೀ ಮಾಡಿಕೊಳ್ಳುವುದು ಅನಿವಾರ‍್ಯವಾಗಿತ್ತು. ಇಂಥ ಸಮಯದಲ್ಲಿ ಹಿಂದೂ ಧರ್ಮದ ಮಹಿಮಾನ್ವಿತ ಯೋಗಿಗಳು, ಸಂತರು ಆ ಕಾಲದಲ್ಲಿ ಮೂಡಿ ಬಂದು ಮುಸ್ಲಿಂ ಆಡಳಿತಗಾರರನ್ನು ಪ್ರಭಾವಗೊಳಿಸುವುದು ಹಾಗೆಯೇ ಮುಸ್ಲಿಂ ತೀವ್ರವಾದಕ್ಕೆ ಭಿನ್ನವಾದ ಸೂಫಿಗಳಲ್ಲೂ ಉನ್ನತ ವ್ಯಕ್ತಿತ್ವವುಳ್ಳ ಸಂತರು ಹಿಂದೂ ಧರ್ಮಿಯರ ಮೇಲೆ ಪ್ರಭಾವ ಬೀರುವುದೂ ನಡೆದಿದೆ. ಗುಲಬರ್ಗಾ, ಬಿಜಾಪುರ ಮುಂತಾದೆಡೆಗಳಲ್ಲಿ ನೆಲೆಸಿದ್ದ ಬಂದೇನವಾಜ್, ಅಮೀನುದ್ದೀನನಂಥ ಮಹನೀಯರು ಮುಸ್ಲಿಂ ಆಡಳಿತಗಾರರ ತೀವ್ರತೆಯನ್ನು ಕ್ರೌರ‍್ಯವನ್ನು ಕಡಿಮೆ ಮಾಡುವಂಥ ಪ್ರಭಾವ ಬೀರಿದ್ದು ಚಾರಿತ್ರಿಕವಾಗಿ ಬಹಳ ಮಹತ್ವದ ವಿಷಯ. ಹೀಗೆ ಹಿಂದೂ ಮತ್ತು ಸೂಫಿಗಳು ತಂತಮ್ಮ ಮತೀಯ ಗೋಡೆಗಳ ಹೊರಗೆ ಬಂದು ಇಬ್ಬರಿಗೂ ಸಮಾನವಾದ ಆಧ್ಯಾತ್ಮಿಕ ನೆಲೆಯಲ್ಲಿ ಕೈ ಕೈ ಮೀಲಾಯಿಸಿದ್ದು ಅದ್ಭುತವಾದುದು.

ಈ ಸಾಮರಸ್ಯದ ಪ್ರಕ್ರಿಯೆಯನ್ನು ಇಸ್ಲಾಮೀಕರಣ, ಸೂಫೀಕರಣ, ಹಿಂದೂಕರಣ ಮುಂತಾದ ಪದಗಳಿಂದ ಗುರುತಿಸಲಾಗುತ್ತದೆ. ಪ್ರಭಾವಗೊಳಿಸುವಿಕೆ ಎಂಬ ಅರ್ಥದಲ್ಲಿ ಇದು ಸರಿಯೇ. ಆದರೂ ಇವು ಕೇವಲ ಸರಳವಾದ ಪ್ರಕ್ರಿಯೆಗಳಲ್ಲ. ಇಂಡಿಯಾದ ಧಾರ್ಮಿಕ ಸಮುದಾಯಗಳು ಸಂಸೃತಿಯ ಪದರಗಳು ಮತ್ತು ತಾತ್ವಿಕ ಧಾರೆಗಳು ತುಂಬಾ ಸಂಕೀರ್ಣರೀತಿಯಲ್ಲಿ ಸೂಫಿಗಳಿಗೆ ಎದುರು ಬದರಾಗಿವೆ. ಇದರಲ್ಲಿ ಹಿಂದೂಗಳು ತಮ್ಮತನವನ್ನು ಉಳಿಸಿಕೊಂಡೂ ಸೂಫಿಗಳು ತಮ್ಮತನವನ್ನು ಉಳಿಸಿಕೊಂಡು ಹಿಂದೂಗಳೊಡನೆ ಸಹಯೋಗ ಸಾಧಿಸಿದ್ದು ಸಾಮಾನ್ಯನೆಲೆಯದ್ದಾಗಿರದೆ ಮುಖ್ಯವಾಗಿ ಆಧ್ಯಾತ್ಮಿಕ ನೆಲೆಯಾದ್ದಾಗಿತ್ತು. ಭಾರತದ ಆಧ್ಯಾತ್ಮಿಕ ಪರಂಪರೆಯಲ್ಲಿ ಇಂಥದೊಂದು ಮತ-ಧರ್ಮಾತೀತವಾದ ಎಳೆಯೊಂದು ವೇದೋಷನಿಷತ್ತುಗಳ ಕಾಲದಿಂದಲೂ ಸಾಗಿಬಂದಿದೆ. ಇಲ್ಲಿಯ ಆತ್ಮಜ್ಞಾನದ ಸ್ವರೂಪವೇ ದೈಹಿಕ-ಭೌತಿಕ ಮಿತಿಗಳನ್ನು ಸಾಮಾಜಿಕ-ಧಾರ್ಮಿಕ ಸಂಪ್ರದಾಯಗಳನ್ನು ಮೀರುವುದರಿಂದ ಮಾತ್ರ ಸಾಧ್ಯವಾಗುವಂಥದ್ದು. ಇದೇ ನೆಲೆಯಲ್ಲಿಯೇ ಸೂಫಿಗಳು ಹಿಂದೂ ಚಿಂತಕರೊಡನೆ ಅನುಸಂಧಾನ ಮಾಡಿರುವುದು. ಸಾಮಾನ್ಯ ನೆಲೆಯಲ್ಲಿ ಈ ಅನುಸಂಧಾನ ಈ ಹಿಂದೆ ನೋಡಿದ ಹಿಂದೂ-ಸೂಫಿಗಳ ಮುರು ಶಿಷ್ಯಸಂಬಂಧ ಅಥವ ಸ್ನೇಹ ಸೌಹಾರ್ದತೆಗಳಲ್ಲಿ ಕಂಡುಬಂದು ವಿಚಿತ್ರವಾಗಿಯೂ ಆಶ್ಚರ‍್ಯಕರವಾಗಿಯೂ ಕಾಣಿಸುತ್ತದೆ. ಇದರಲ್ಲಿ ಎರಡೂ ಕಡೆಯವರು ತಮ್ಮ ಪೂರ್ವದ ಜಾತಿ ಮತಗಳ ಚೌಕಟ್ಟಿನಿಂದ ಹೊರಬಂದು ವಿಶಾಲಾಕಾಶದಲ್ಲಿ ಒಂದಾಗುತ್ತಾರೆ. ಅದ್ದರಿಂದ ಇವರು ಸಾಮಾನ್ಯ ಸಂಸಾರಸ್ಥರಂತಿರದೆ ಜನಗಳಿಂದ ದೂರವಾಗಿ ಏಕಾಂತದಲ್ಲಿ ಸಾಮಾನ್ಯವಾಗಿ ನಿರ್ಜನ ಪ್ರದೇಶದ ಗುಡ್ಡಗಳ ಗವಿಗಳಲ್ಲಿ ಅರಣ್ಯ ಪ್ರದೇಶಗಳಲ್ಲಿ ನೆಲೆಸಿ ಯೋಗಾಭ್ಯಾಸ, ಧ್ಯಾನ, ತಪಗಳಲ್ಲಿ ಗೊಡಗಿರುತ್ತಾರೆ. ಕೆಲವರು ವಿಶೇಷ ಸಿದ್ಧಿಗಳನ್ನು ಪಡೆದು ಸಿದ್ಧಿಪುರುಷರಾಗುತ್ತಾರೆ. ತಮ್ಮಂತೆ ಆಲೋಚಿಸುವ ಬೇರೆ ಅನುಭಾವಿಗಳನ್ನು ಹುಡುಕಿ ಆತ್ಮಚಿಂತನೆ ಮಾಡಲು ಅಲೆಮಾರಿಗಳಂತೆ ತಿರುಗಾಡುತ್ತಾರೆ. ಆತ್ಮದ ಅನುಸಂಧಾನ ಸಾಧಿಸಲು ಭಂಗಿ ಸೇವನೆ ಮಾದಕ ಪದಾರ್ಥಗಳ ಸೇವನೆಗಳನ್ನು ಅವಲಂಬಿಸುತ್ತಾರೆ ಉದರ ಪೋಷಣೆಗೆ ಭಿಕ್ಷಾಟನೆ ಮಾಡುತ್ತಾರೆ. ಅಂಥ ಸೂಫಿಸಂತರನ್ನು ಫಕೀರರೆಂದು ಕರೆಯುವುದು ವಾಡಿಕೆ. ಉಣ್ಣಿದಾರದಿಂದ ಮಾಡಿದ ಹಾರ. ಖರ್ಪುರ, ಸಿಂಗನಾದ, ನವಿಲುಗರಿ, ಕಬ್ಬಿಣದ ಆಯುಧ, ತೇಪೆಯ ನಿಲುವಂಗಿ, ಕಪ್ಪುಪೇಟ ಇವು ಸಾಮಾನ್ಯವಾಗಿ ಅವರ ವೇಷಭೂಷಣಗಳು.

ಹಿಂದೂ ಸಂತರಿಗೆ ಇಂಥದ್ದೇ ವೇಷಭೂಷಣಗಳಿರುವುದಿಲ್ಲ. ಅವರವರ ಪಂಥಗಳಿಗೆ ತಕ್ಕಂತೆ ಅವರವರ ವೇಷಭೂಷಣಗಳಿರುತ್ತವೆ. ಹಿಂದೂಗಳಲ್ಲಿ ಸಿದ್ಧರು, ಜೋಗಿ(ನಾಥ ಪಂಥದಯೋಗಿ), ಭೈರವ, ಸಾಧು, ಸನ್ಯಾಸಿ ಮುಂತಾದ ಪ್ರಕಾರಗಳಿವೆ. ಏಕಾಂತವನ್ನು ಬಿಟ್ಟು ಲೋಕಾಂತಕ್ಕೆ ಬಂದಾಗ ಜನರ ರೋಗಗಳನ್ನು ವಾಸಿಮಾಡುವುದು, ಅವರ ಸಮಸ್ಯೆಗಳನ್ನು ಪರಿಹರಿಸುವುದು ಮುಂತಾದ ಸಮಾಜ ಸೇವೆಯಲ್ಲಿ ತೊಡಗಿ ಜನರಿಂದ ಪೂಜ್ಯರೆನಿಸಿಕೊಳ್ಳುತ್ತಾರೆ. ನಂತರ ಅವರ ಮರಣಾನಂತರ ಅವರ ಸವಾಧಿಗಳ ಸುತ್ತ ಗುಡಿ, ಮಠ, ದರ್ಗಾಗಳು ನಿರ್ಮಾಣವಾಗುತ್ತವೆ. ಸಂಪ್ರದಾಯಗಳು ರೂಢವಾಗುತ್ತವೆ. ಇಂಥ ಶ್ರದ್ಧಾಕೇಂದ್ರಗಳು ದೇಶದ ಉದ್ದಗಲಕ್ಕೂ ವ್ಯಾಪಿಸಿರುವುದನ್ನು ನಾವಿಂದು ನೋಡಬಹುದು. ಇಂಥ ಸವನ್ವಯ ಸ್ಥಳಗಳಾದ ದರ್ಗಾಗಳು, ಮಠ, ಗುಡಿಗಳು ಉತ್ತರ ಕರ್ನಾಟಕವನ್ನು ಒಳಗೊಂಡಂತೆ ದಖ್ಖನ್ ಪ್ರದೇಶದಲ್ಲಿ ಹೆಚ್ಚಾಗಿರುವುದು ಗಮನಾರ್ಹ.