ಮತೀಯ ಸಾಮರಸ್ಯ ಮತ್ತು ವಿಶ್ವಕರ್ಮ ಜನಾಂಗ

ಇಂಥ ಧರ್ಮ ಸವನ್ವಯ ಕಾರ‍್ಯದಲ್ಲಿ ವಿಶ್ವಕರ್ಮ ಜನಾಂಗದ ಮಹಾಪುರುಷರು ಅಧಿಕ ಸಂಖ್ಯೆಯಲ್ಲಿರುವುದನ್ನು ಗುರುತಿಸಿರುವ ರಹಮತ್ ತರೀಕೆರೆಯವರು ತಮ್ಮದೇ ಆದ ರೀತಿಯಲ್ಲಿ ಈ ವಿದ್ಯಮಾನವನ್ನು ವಿಶ್ಲೇಷಿಸಲು ಪ್ರಯತ್ನಿಸಿದಾರೆ. ವಿಶ್ವಕರ್ಮಿಗಳನ್ನು ಕುಶಲಕರ್ಮಿಗಳೆಂದು ಅವರು ಕರೆದಿದ್ದಾರೆ. ತಿಂಥಿಣಿ ಮೌನೇಶ್ವರ, ಗಂಗಪ್ಪಯ್ಯ, ಮಳಿಯಪ್ಪಯ್ಯ, ಎಚ್ಚರಸ್ವಾಮಿ, ಕೊಪ್ಪಳದ ಶಿರಸಪ್ಪಯ್ಯ, ಯಮನೂರಿನ ಚಾಂಗದೇವ ಮುಂತಾದವರೆಲ್ಲ ಈ ಜನಾಂಗಕ್ಕೆ ಸೇರಿದವರೆ. ತರೀಕೆರೆಯವರ ಅಭಿಪ್ರಾಯ ಹೀಗಿದೆ. “ಯುದ್ಧ ಸಂಸ್ಕೃತಿ ಹೇರುವ ಒತ್ತಡಗಳ ಪರಿಣಾಮ ಅಭದ್ರತೆ ಮತ್ತು ಹತಾಶೆ. ಅದರಲ್ಲೂ ಯುದ್ಧಗಳಿಂದ ಮೊದಲು ಜರ್ಝರಿತವಾಗುವುದು ಕರದುಶಲ ವರ್ಗ. ಸಾಮಾಜಿಕವಾಗಿ ಕೆಳಸ್ಥಾನ ಪಡೆದಿರವ. ಪ್ರತಿಷ್ಠಿತೆ ಜಾತಿ ಧರ್ಮಗಳಲ್ಲಿ ಸ್ಥಾನವಿಲ್ಲದೆ ಈ ವರ್ಗ ತನ್ನ ಆರ್ಥಿಕ ಬಿಕ್ಕಟ್ಟುಗಳಿಂದ ಪಾರಾಗಲು ಚಡಪಡಿಸುತ್ತಿರುತ್ತದೆ. ಅವುಗಳ ಚಡಪಡಿಕೆಯೆ ಪ್ರತಿಷ್ಠಿತ ಮತ ಜಾತಿಗಳನ್ನು ವಿರೋಧಿಸುವ, ರಾಜ ಪ್ರಭುತ್ವವನ್ನು ವಿರೋಧಿಸುವ ವಿದ್ರೋಹ ಮನೋಭಾವ ಉಂಟುಮಾಡುತ್ತದೆ. ಆಧ್ಯಾತ್ಮಿಕ ಸಮಾನತೆಯನ್ನು ಕಾಣಿಸಲು ಇದು ಕಾರಣವಿರಬೇಕು…. ನಗರಗಳಲ್ಲಿ ಕೇಂದ್ರಿಕೃತವಾಗುವ ಈ ವರ್ಗಗಳಿಂದ ಸಂಕರದಲ್ಲಿ  ಹುಟ್ಟುವ ತತ್ವಗಳು ಯಾವಾಗಲೂ ಏಕರೂಪತೆ ಹೇರುವ ಯಜಮಾನ ಶಕ್ತಿಗಳನ್ನು ಎದುರಿಸುವ ಗುಣ ಹೊಂದಿರುತ್ತವೆ.

ಆದರೆ ಈ ವಿಶ್ಲೇಷಣೆ ಸಮಂಜಸವಾಗಿಲ್ಲ. ಯುದ್ಧಗಳಿಂದ ಜರ್ಝುರಿತವಾಗುವುದು ಕೇವಲ ಕರಕುಶಲಕರ್ಮಿಗಳ ವರ್ಗವಲ್ಲ. ಎಲ್ಲ ವರ್ಗಗಳಿಗೂ ಅದರ ಬಿಸಿತಟ್ಟುತ್ತದೆ. ಎರಡನೆಯದಾಗಿ ಈ ವರ್ಷ ಪ್ರತಿಷ್ಠಿತ ಜಾತಿಧರ್ಮಗಳಲ್ಲಿ ಸ್ಥಾನವಿಲ್ಲದೆ ಬಿಕ್ಕಟ್ಟುಗಳಿಗೆ ಗುರಿಯಾಗಿ ಚಡಪಡಿಕೆ ಅನುಭವಿಸುತ್ತದೆ ಎಂಬ ವಿಚಾರಕೂಡ ಸರಿಯಲ್ಲ. ಹಾಗೆ ನೋಡಿದರೆ ಪ್ರತಿಷ್ಠಿತವಲ್ಲದ ತೀರ ಕೆಳವರ್ಗಗಳು ಅಸಂಖ್ಯವಾಗಿವೆ. ಆನೆಲೆಯಿಂದ ವಿದ್ರೋಹ ಹೆಚ್ಚಿಗೆ ಬರಬೇಕಾಗಿತ್ತು. ಉದಾಹರಣೆಗೆ ಹರಿಜನರು ಗಿರಿಜನರು ಮುಂ. ಆದರೆ ಹಾಗಾಗಿಲ್ಲ. ಮೂರನೆಯದಾಗಿ ನಗರಗಳಲ್ಲಿ ಇಂಥ ವಿದ್ರೋಹ ಚಟುವಟಿಕೆಗಳು ಹುಟ್ಟಿದವೆಂಬುದು ಕೂಡ ಸರಿಯಲ್ಲ, ವಿದ್ರೋಹ ಎನ್ನುವುದಕ್ಕಿಂತ ಕ್ರಾಂತಿಕಾರಿಯಾದ ಸಮಾನತೆಯ ತತ್ವದ ಹೊಸರೂಪಗಳು ಎನ್ನುವುದು ಇಲ್ಲಿ ಸರಿಯಾಗುತ್ತದೆ.

ಈ ದೃಷ್ಠಿಯಿಂದ ವಿಶ್ಲೇಷಣೆಯನ್ನು ಬೇರೆ ಆಯಾಮದಿಂದ ಮಾಡಬೇಕಾಗುತ್ತದೆ. ವಿಶ್ವಕರ್ಮ ಜನಾಂಗವು ತರೀಕೆರೆಯವರು ತಿಳಿದಂತೆ ಪ್ರತಿಷ್ಠಿತ ಜಾತಿಧರ್ಮಗಳಲ್ಲಿ ಸ್ಥಾನವಿಲ್ಲದ ವರ್ಗವಾಗಿರಲಿಲ್ಲ. ಅದಕ್ಕೆ ವಿರುದ್ಧವಾಗಿ ಹಿಂದೂ ಸಮಾಜದಲ್ಲಿ ಪ್ರಾಚೀನ ಯುಗ ಮತ್ತು ಮಧ್ಯಯುಗಗಳಲ್ಲಿ ಅತ್ಯುನ್ನತ ಪ್ರತಿಷ್ಠಿತ ವರ್ಗವಾಗಿ ನಿಜವಾದ ಬ್ರಾಹ್ಮಣತ್ವಕ್ಕೆ ಅರ್ಹವಾದದ್ದು ವಿಶ್ವಬ್ರಾಹ್ಮಣ ಅಥವಾ ವಿಶ್ವಕರ್ಮ ಜನಂಗವೇ ಆಗಿತ್ತು. ರಾಜನ ಕಿರೀಟ, ಸಿಂಹಾಸನ, ರಥ, ಆಯುಧಗಳಿಂದ ಹಿಡಿದು ಜನಸಾಮಾನ್ಯರ ಕುಂಟೆ, ಕೂರಿಗೆ, ತಾಳಿ, ಆಭರಣ, ತೇರು, ಪ್ರತಿಮೆ, ಇತ್ಯದಿಗಳನ್ನೆಲ್ಲ ನಿರ್ಮಿಸುತ್ತಾ ಬಂದಿದ್ದ (ಈಗಲೂ ಹಾಗೇ ಮುಂದುವರಿದಿದೆ) ಕಮ್ಮಾರ, ಬಡಿಗ, ಕಂಚುಗಾರ, ಅಕ್ಕಸಾಲಿ, ಶಿಲ್ಪಿ ಎಂಬ ಐದು ಕುಲಕಸುಬುಗಳನ್ನು ಮಾಡುತ್ತ ವೇದ, ವೇದಾಂತ, ವೈದ್ಯ, ವಾಸ್ತು, ಜ್ಯೋಗಿಷ್ಯ, ಸಂಗೀತ-ನಾಟ್ಯ-ಚಿತ್ರ-ಶಿಲ್ಪಿ ಮಂತಾದ ಕಲೆಗಳಲ್ಲಿ ಶಾಸ್ತ್ರಗಳಲ್ಲಿ ಪರಿಣಿತವಾಗಿದ್ದ ಈ ಜನಾಂಗ ನಿಜವಾದ ಅರ್ಥದಲ್ಲಿ ಪುರದ ಹಿತವನೇ ಹಾರೈಸುವ ಪುರೋಹಿತ ವರ್ಗವಾಗಿತ್ತು. ಈ ವರ್ಗದ ಪೈಪೋಟಿ ಪಂಗಡವೊಂದು ಇದರೊಳಗಿಂದಲೇ ಹುಟ್ಟಿ, ಕರಕುಶಲ ಕಲೆ ಕರ್ಮಗಳ ಸಂಬಂಧವಿಲ್ಲದೆ, ಕೇವಲ ಮಂತ್ರಗಳನ್ನು ಕಂಠಪಾಠಮಾಡಿ ಹೇಳುವುದನ್ನು ಕಲಿತು ಯಜ್ಞ ಯಾಗ, ದೇವಾಲಯಗಳ ಪೂಜೆ ಮುಂತಾದವುಗಳನ್ನು ವೃತ್ತಿಯನ್ನಾಗಿ ಮಾಡಿಕೊಂಡು ರಾಜರನ್ನು ಓಲೈಸುತ್ತ ಸಮಾಜದ ಧಾರ್ಮಿಕ ಶ್ರೇಷ್ಠ ಸ್ಥಾನವಾದ ಬ್ರಾಹ್ಮಣತತ್ವವನ್ನು ಪಡೆಯಲು ಪ್ರಯತ್ನಿಸುತ್ತ ನಿಜವಾದ ಬ್ರಾಹ್ಮಣರಾಗಿದ್ದ ವಿಶ್ವಕರ್ಮರನ್ನು ಕೆಳಗೊತ್ತುತ್ತಾ ಬಂದಿರುವುದು ಚರಿತ್ರೆಯ ಕಠೋರಸತ್ಯ.

ತಮ್ಮ ದಾಯಾದಿಗಳಾದ ಕರ್ಮಠ ಬ್ರಾಹ್ಮಣರು ಉಂಟುಮಾಡುವ ಧರ್ಮದ ಹೆಸರಿನ ಗೊಂದಲ-ದುಷ್ಟರಿಣಾಮಗಳ ವಿರುದ್ಧ ದನಿಯೆತ್ತುತ್ತ ಹೊಸ ಮಾರ್ಗಗಳನ್ನು ರೂಪಿಸುತ್ತಾ ಜವಾಬ್ದಾರಿಯನ್ನು ಹೊರುತ್ತ ಬಂದಿರುವುದು – ಜನಾಂದೋಲನಗಳನ್ನು ರೂಪಿಸುತ್ತಾ ಬಂದಿರುವುದು ಈ ವಿಶ್ವಕರ್ಮ ಜನಾಂಗವೇ, ಬಸವಾದಿ ಶರಣರ ಆಂದೋಲನದಲ್ಲಿ ಮಂಚೂಣಿಯಲ್ಲಿದ್ದವರೂ ಇವರೇ. ನಂತರ ಇಸ್ಲಾಂ ಆಡಳಿತದಲ್ಲಿ ತಲೆದೋರಿದ ಧಾರ್ಮಿಕ ವಿಪತ್ತಿಗೆ ಪರಿಹಾರವಾಗಿ ಸೂಫೀ ಪಂಥದೊಡನೆ ಕೈಜೋಡಿಸಿ ಸಮನ್ವಯ ಸಾಧನೆ ಮಾಡುವುದರಲ್ಲಿ ಮಹತ್ವದ ಪಾತ್ರವಹಿಸಿದ್ದೂ ಈ ಜನಾಂಗವೇ. ೧೨ನೇ ಶತಮಾನದ ಜಾತ್ಯತೀತ ತಾತ್ವಿಕತೆಗೂ ೧೬-೧೭ನೇ ಶತಮಾನದ ಧರ್ಮಾತೀತವಾದ ತಾತ್ವಿಕತೆಗೂ ಸಮಾನ ಅಂಶಗಳು ಬಹಳ ಇರುವುದನ್ನು ಈ ನೆಲೆಗಟ್ಟಿನಿಂದ ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯ.

ಈ ಹಿನ್ನಲೆಯಲ್ಲಿ ವಿಶ್ವಕರ್ಮ ಜನಾಂಗದ ಮಹಾತ್ಮರು-ಪ್ರಸ್ತುತ ಮಳಿಯಪ್ಪಯ್ಯನವರ ಬದುಕು ಭಾವಗಳನ್ನು ರೂಪಿಸಿದವರು ಅವರ ಬಗ್ಗೆ ಸಂಕ್ಷಿಪ್ತವಾಗಿ ಪರಿಚಯ ಮಾಡಿಕೊಂಡು ಮಂದುವರಿಯಬೇಕಾಗುತ್ತದೆ. ಭಾರತದ ಧಾರ್ಮಿಕ ಚರಿತ್ರೆಯಲ್ಲಿ ಕರ್ಮಠ ಬ್ರಾಹ್ಮಣದ ವಿರುದ್ಧ ಕ್ರಾಂತಿ ಮಾಡಿ ಸರ್ವ ಸಮಾನತೆಯ ಮತ್ತು ಜೀವಪರವಾದ ಮಾನವೀಯವಾದ ಒಂದು ಹೊಸ ಧರ್ಮವನ್ನು ನೀಡಿದ ಭಗವಾನ್ ಬುದ್ಧ ವಿಶ್ವಕರ್ಮ ಜನಾಂಗ ಮೂಲದವರು. ಪ್ರಪಂಚಕ್ಕೆ ಮಾನವೀಯತೆ ಸೋದರತೆ ಪ್ರೇಮಗಳ ಆಧಾರದ ಮೇಲೆ ಒಂದು ವಿಶಾಲ ಧರ್ಮ ಕೊಟ್ಟ ಏಸುಕ್ತಿಸ್ತ ಒಬ್ಬ ಬಡಗಿಯ ಮಗ. ವಿಶ್ವವನ್ನು ವಿಶ್ವಾತ್ವವನ್ನು ಜೀವಾತ್ಮನೊಡನೆ ಮೇಳೈಸಿ ಅದ್ವೈತ ಸಿದ್ಧಾಂತವನ್ನು ಭಾರತಕ್ಕೆ ಕೊಟ್ಟ ಕ್ರಿ.ಶ. ೮ನೇ ಶತಮಾನದ ಆದಿಶಂಕರಚಾರ್ಯ ವಿಶ್ವಬ್ರಾಹ್ಮಣರ ತ್ವಷ್ಟ್ರು ಗೋತ್ರದವನು. ಪಾರ್ಸಿ ಧರ್ಮವನ್ನು ಕೊಟ್ಟ ಪರ್ಷಿಯಾದ ಜರತೃಷ್ಟ್ರನು ತ್ವಷ್ಟ್ರಗೋತ್ರದವನು. ಈ ಎಲ್ಲ ಮಾಹಿತಿಗಳನ್ನು ತನ್ನ ವಿಶ್ವಕರ್ಮ ಅಂಡ್ ಈಸ್ ಡಿಸೆಂಡೆಂಟ್ಸ್ ಎಂಬ ಕೃತಿಯಲ್ಲಿ ನೀಡಿರುವಾತ ಸಿಲೋನಿನಲ್ಲಿ ಸುಪ್ರೀಂಕೋರ್ಟಿನಲ್ಲಿ ನ್ಯಾಯಾದೀಶನಾಗಿದ್ದ ಕ್ರಿಶ್ಚಿಯನ್ ವಿದ್ವಾಂಸ ಆಲ್‍ಫ್ರೆಡ್ ಎಡ್‍ವರ್ಡ್.

ಅಲ್ಲಮ ಪ್ರಭು : ಕರ್ನಾಟಕಕ್ಕೆ ಸೀವಿತವಾಗಿ ಆಲೋಚಿಸುವುದಾದರೆ ಅಲ್ಲಮಪ್ರಭು ಬಹಳ ಮುಖ್ಯ ವ್ಯಕ್ತಿಯಾಗಿದ್ದಾನೆ. ಶರಣರ ಶೂನ್ಯಸಿಂಹಾಸನದ ಅಧ್ಯಕ್ಷನಾಗಿ, ಬಸವಾದಿ ಶರಣರಿಗೆಲ್ಲ ಮೂಲ ಗುರುವಾಗಿ ವ್ಯೋಮ ಮೂರ್ತಿಯೆನಿಸಿಕೊಂಡ ಎಲ್ಲವನ್ನು ಮೀರಿದ ಅತೀತನಾಗಿ, ತನ್ನ ಅದ್ಭುತ ವಚನಗಳಿಂದ ವಚನ ಸಾಗಿತ್ಯದ ತಲೆಮಣಿಯಾಗಿ ಬೆಳೆದಿದ್ದ ಅಲ್ಲಮನ ವ್ಯಕ್ತಿತ್ವವನ್ನು ಮತ್ತು ವಿಚಾರಗಳನ್ನು ಸಾಮಾನ್ಯರಿಗೆ ಅರ್ಥಮಾಡಿಕೊಳ್ಳುವುದು ಕಷ್ಟ. ಸಾಮಾನ್ಯ ನಟುವ ಜಾತಿಯವನೆಂದು ಎಲ್ಲ ವಿದ್ವಾಂಸರು ಬರೆಯುತ್ತಾ ಬಂದಿದ್ದಾರೆ. ಆದರೆ ಆತನು ಆಧ್ಯಾತ್ಮದಷ್ಟೇ ಗಂಧರ್ವ ಕಲೆಯಲ್ಲೂ ಪರಿಣಿತನಾದ ನಾಟ್ಯಾಚಾರ‍್ಯ ವಿಶ್ವಕರ್ಮನೇ. ಆತನ ಚರಿತ್ರೆ ಕಲ್ಪನಾಲೋಕದಲ್ಲಿ ಮುಚ್ಚಿಹೋಗಿದೆ. ನಾಥ, ಸಿದ್ಧಪಂಥದವರೊಡನೆ ಆತನ ಸಂಪರ್ಕವನ್ನು ಚಾಮರಸನ ಪ್ರಭುಲಿಂಗಲೀಲೆ ಹೇಳುದೆ. ಅದೇರೀತಿ ಆಗ ತಾನೆ ಭಾರತಕ್ಕೆ ಪ್ರವೇಶಿಸಿದ್ದ ಇಸ್ಲಾಂ ಪಂಥ ಸೂಫೀಪಂಥಗಳ ಜೊತೆಗೂ ಆತನ ಸಂಪರ್ಕಬಂದಿರಲು ಸಾಧ್ಯವಿದೆ. ಇಸ್ಲಾಮಿನ ಅಲ್ಲಾಹುವಿನ ಅಲ್ಲಾ, ಅಲ್ಲಪ್ಪ ಎಂಬ ಅರ್ಥದ ಅಲ್ಲಮ ಎಂಬ ಹೆಸರು ಬಂದಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ.

ಆದರೆ ತರೀಕೆರೆಯವರು ಅಲ್ಲಮನಿಗೆ ಆಲಂ-ಜಗತ್ತು ಎಂಬುದರಿಂದ ಆ ಹೆಸರು ಬಂದಿರುವ ಊಹೆಯನ್ನು ಮಾಡಿದ್ದಾರೆ. ಆಲಂ ಪ್ರಭು-ಅಲ್ಲಮ ಪ್ರಭು. ವಡಬಾಳದ ನಾಗನಾಥನು ಅಲ್ಲಮಗೆ ಗುರು ಎಂಬ ಒಂದು ವಾದವಿದೆ. ನಾಸೆರುದ್ದೀನನೇ ನಾಗನಾಥ-ಆತನಿಂದಲೇ ಮಹಾನುಭಾವ, ನಾಥೆ, ವೀರಶೈವಪಂಥಗಳು ಪ್ರಾರಂಭವಾದವೆಂಬ ಪರಂಪರೆಯ ಕಥನವಿದೆ. ಅಲ್ಲಮನ ವಚನದಲ್ಲಿ “ಆದಿಗಣನಾಥದಿಂದ ಗುರು ಅನಿಮಿಷನಾಥ” (ಮತ್ಸ್ಯೇಂದ್ರನಾಥ) ಎಂಬ ಉಲ್ಲೇಖಬರುತ್ತದೆ.

ತಿಂಥಿಣಿ ಮೋನಪ್ಪಯ್ಯನ ಪರಾಕಿನಲ್ಲಿ ‘ಆದಿ ಮೂರ್ತಿ ಅಲ್ಲಮಪ್ರಭು ಮುಲ್ಲ ಮಹಮ್ಮದ್ ರಸೂಲಿಲ್ಲ ಬಹುಪರಾಕ್’ ಎಂಬ ಘೋಷಣೆ ಇದೆ. ಇದರಲ್ಲಿ ಇಸ್ಲಾಂ ಧರ್ಮಕ್ಕೆ ಮಹಮ್ಮದ್ ಇರುವಂತೆ ತಮಗೆ ಆದಿಮೂರ್ತಿಯಾಗಿ ಅಲ್ಲಮ ಪ್ರಭು ಇದ್ದಾನೆಂಬ ಅರ್ಥಬರುತ್ತದೆ. ಅವರ ವಚನದಲ್ಲೂ ‘ಅಲ್ಲಮ ಪ್ರಭುವನ್ನು ಅರಿಯದ ತುರುಕರು’ ಎಂಬ ಮೃತು ಬರುತ್ತದೆ. ಮೈಸೂರಿನ ಕಡೆಯ ಮಂಟೇಸ್ವಾಮಿ ಅಲ್ಲಮನ ಅವತಾರ ಎಂಬ ಭಾವನೆ ಇದೆ. “ತುರುಕಾಂಡದಲ್ಲಿ ಮುಸ್ಲುಮಾನರು ಅರೆ ಅಲ್ಲಾಂತ ಹಸ್ತ ತೋರೆದಣ  ಅಲ್ಲಮಪ್ರಭು” ಎಂಬ ಹೆಸರು ಬಂತೆಂಬ ಮಾತು ಬರುತ್ತದೆ.

ಸಾವಳಗಿ ಶಿವಲಿಂಗವನ್ನು ದಿಲ್ಲಿ ಬಾದಶಹನ ಹೆಂಡತಿ ‘ಅಲ್ಲಮ’ ನೆಂದು ಕರೆಯಯುತ್ತಾಳೆ. ವಡಬಾಳದ ನಾಗನಾಥನಿಗೆ ಪೈಥಣದ ‘ಅಲ್ಲಮಖಾನ್’ ಎಂಬ ಶಿಷ್ಯನಿದ್ದ. ಈತನೇ ಅಷ್ಟೂರಿನ ಶಾಆಲಮ್‍ಪ್ರಭು ಆಗಬಹುದು. ಬೀದರ್‌ನ ಅಷ್ಟೂರಿನ ಅಹಮ್ಮದ್‍ಶಾ ಬಹಮನಿಯ ಸಮಾಧಿಯ (೧೪೨೨-೩೬) ದರ್ಗಾದ ಚೌಕಟ್ಟಿನ ಮೇಲೆ ‘ಅಲ್ಲಮ ಪ್ರಭು’ ಎಂದು ಕೊರೆಯಲಾಗಿದೆ. ಈತನು ಬಂದೇನವಾಜನ ಶಿಷ್ಯನಾಗಿದ್ದು ನಂತರ ಆತನ್ ಶಿಷ್ಯ ಶಾನಿಯಾಮತ್ ಉಲ್ಲಾ ಸೂಫಿಯಿಂದ ಖಾದ್ರಿಪಂಥಕ್ಕೆ ಸೇರಿದ. ಶಾಆಲಮ್ ಪ್ರಭುವಿನ ಉರುಸಿಗೆ ಮಡ್ಯಾಳದ ಜಂಗಮರು ಬರುತ್ತಾರೆ. ಅವರು ಸೂಫಿವೇಷದಲ್ಲಿರುತ್ತಾರೆ. ಅಕ್ಕಲಕೋಟೆಯ ದಾತಾಪೀರನಿಗೂ ಅಲ್ಲಮಪ್ರಭು ಎಂಬ ಹೆಸರಿತ್ತು ಎಂಬೆಲ್ಲ ಮಾಹಿತಿಗಳನ್ನು ತರೀಕೆರೆಯವರು ಕೊಟ್ಟಿದ್ದಾರೆ. ಅಲ್ಲಮಪ್ರಭುವನ್ನು (ಮೂಲ) ಕಮಾಲುದ್ದೀನ ಎಂದೂ ಸೂಫಿಪರಂಪರೆಯಲ್ಲಿ ಹೇಳಲಾಗಿದೆ.

ಈ ಹೆಸರಿನ ಅನೇಕರು ಮುಂದೆ ಆಗಿರಬಹುದು. ಆದರೆ ೧೨ನೇ ಶತಮಾನದ ಅಲ್ಲಮಪ್ರಭು ಮಾತ್ರ ಒಬ್ಬನೇ. ಆತನೇ ಸೂಫೀ-ಹಿಂದೂ ಎರಡೂಕಡೆಗಳಲ್ಲಿ ಅತ್ಯಂತ ಪೂಜ್ಯನಾಗಿದ್ದಾನೆ. ಆತನ ಮಾರ್ಗದಲ್ಲೇ ವೀರಶೈವಧರ್ಮದ ವಿರಕ್ತಪಂಥ ವ್ಯಾಪಕವಾಗಿ ಬೆಳೆದಿದೆ. ತಿಂಥಿಣಿ ಮೌನೇಶ್ವರನೂ ಆತನನ್ನು ತನ್ನ ಆದರ್ಶವನ್ನಾಗಿ ಮಾಡಿಕೊಂಡಿದ್ದಾನೆ.

ಚಾಂಗದೇವ : ಗುಜರಾತಿನ ಪಾಂಚಾಳರ ಜಾತಿಯಲ್ಲಿ ಜನಿಸಿ ೧೩ನೇ ಶತಮಾನದಲ್ಲಿ ಬಾಳಿದ ಚಾಂಗದೇವ ಯೋಗಸಿದ್ಧಿಗಳನ್ನು ಪಡೆದ ಒಬ್ಬ ನಾಥಸಿದ್ಧ. ಕರ್ನಾಟಕದ ನವಲಗುಂದದ ಹತ್ತಿರದ ಯಮನೂರು ಆತನ ಒಂದು ಲೀಲಾಕೇಂದ್ರವಾಗಿದ್ದು ದೊಡ್ಡ ಪ್ರಮಾಣದ ಉರುಸು ನಡೆಯುತ್ತದೆ. ಆತನನ್ನು ಯಮನೂರಪ್ಪ ರಾಜಾಬಾಗ್ ಸವಾರ, ಜಿಂದೇವಲಿ ಎಂದೆಲ್ಲ ಕರೆಯುತ್ತಾರೆ. ಮರಾಠಿ ಸಂತ ಜ್ಞಾನೇಶ್ವರನೊಡನೆ ಆತನ ಮುಖಾಮುಖಿಯಾಗಿ ಚಾಂಗದೇವ ಮುಲಿಯ ಮೇಲೆ ಸವಾರಿಮಾಡಿಕೊಂಡು ಆತನಲ್ಲಿಗೆ ಹೋದಾಗ ಆತನು ಗೋಡೆಯನ್ನೇ ನಡೆಸಿಕೊಂಡು ಬಂದು ಉತ್ತರಿಸಿದನೆಂದು ಕಥೆ ಇದೆ. ಮುಕ್ತಾಬಾಯಿ(ಜ್ಞಾನೇಶ್ವರನ ತಂಗಿ)ಯಿಂದ ರಾಜಯೋಗದ ರಹಸ್ಯಗಳನ್ನು ಚಾಂಗದೇವ ತಿಳಿದ. ಆತನ ಸಮಾಧಿ ಮಹಾರಾಷ್ಟ್ರದ ಪುಣತಾಂಬೆಯಲ್ಲಿದೆ. ಆತನ ಶಿಷ್ಯ ಕ್ಷೇತ್ರೋಜಿ ಬರ್ಗೆಯಿಂದ ಯಮನೂರಿನ ಸಮಾಧಿ ದರ್ಗಾನಿರ್ಮಾಣವಾಯಿತು. ಚಾಂಗದೇವನೆ ಮಹಾನುಭಾವ ಪಂಥದ ಆದಿಗುರುವೆಂದೂ, ಗುಂಡಮಪ್ರಭುವಿಗೆ ಆತನು ದೀಕ್ಷೆಕೊಟ್ಟನೆಂದೂ, ಗುಂಡುಮನ ಶಿಷ್ಯ ಚಕ್ರಧರನೆಂದೂ ತಿಳಿದುಬರುತ್ತದೆ. ಸೂಫೀಸಂಪ್ರದಾಯವನ್ನೂ ಆತನು ಅನುಸರಿಸಿದ್ದರಿಂದ ಆತನನ್ನು ಚಾಂಗಪೀರನೆಂದು ಕರೆಯುತ್ತಾರೆ. ಈಗಿನ ದರ್ಗಾ-ಉರುಸುಗಳ ಸಂಪ್ರದಾಯಗಳೆಲ್ಲ ಸೂಫೀಪದ್ಧತಿಯಂತೆ ನಡೆಯುತ್ತವೆ.

ಕೊಡೇಕಲ್ ಬಸವಣ್ಣ : ಗುಲಬರ್ಗಾ ಸೀಮೆಯ ಡೋಣಿ ಹೊಳೆಯ ಸಮೀಪದ ಕೊಡೇಕಲ್ಲು ಈತನ ಕಾರ‍್ಯರಂಗ. ಇದನ್ನು ಕಡೇಕಲ್ಯಾಣವೆಂದು ಕರೆಯಲಾಗುತ್ತದೆ. ಬಸವಣ್ಣನ ಹೆಸರನ್ನೇ ಹೊಂದಿದ್ದು ಈತನ ಪತ್ನಿಯ ಹೆಸರೂ ನೀಲಮ್ಮನೆಂದಿರುವುದರಿಂದ ಈತನಿಗೆ ಸಂಬಂಧಪಟ್ಟ ಕಥನದಲ್ಲಿ ೧೨ನೇ ಶತಮಾನದ ಬಸವಣ್ಣನೆಂದು ತಪ್ಪು ತಿಳಿಯುವಂಥ ಅರ್ಥೈಕೆಗಳಿವೆ. ಈತನ ಕಾಲಜ್ಞಾನದ ವಚನಗಳು ಪ್ರಸಿದ್ಧವಾಗಿವೆ. ಕೊಡೇಕಲ್ಲಿನಲ್ಲಿ ಈತನ ಸಮಾಧಿಯ ಜೊತೆಗೆ ಅಲ್ಲಮ ಪ್ರಭುವಿನ ಗುಡಿಯೂ ಇದೆ. ೧೯ನೆ ಶತಮಾನದಲ್ಲಿದ್ದ ಈತನು ನಾಥಸಿದ್ಧ ಪಂಥದವನಾಗಿದ್ದು ಸೂಫಿ ಮತದ ಅಂಶಗಳನ್ನು ಅಳವಡಿಸಿಕೊಂಡು ಒಂದು ಹೊಸ ಪಂಥಕ್ಕೆ ಬುನಾದಿ ಹಾಕಿದನೆಂದು ಈತನ ಬಗ್ಗೆ ಆಳವಾದ ಸಂಶೋಧನೆ ಮಾಡಿರುವ ಬಸವಲಿಂಗಯ್ಯ ಸೊಪ್ಪಿಮಠ ಅವರು ಅಭಿಪ್ರಾಯಪಡುತ್ತಾರೆ. ವಡಬಾಳದ ನಾಗನಾಥ, ತಿಂತಿಣಿ ಮೋನಪ್ಪಯ್ಯ ಮಂಟೇಸ್ವಾಮಿ ಮುಂತಾದವರು ಈತನ ಶಿಷ್ಯರೆಂದು ಮಂಟೆಸ್ವಾಮಿ ಮೈಸೂರಿನ ಕಡೆಗೆ ಹೋಗಿ ನೆಲೆಸಿ ಕೊಡೇಕಲ್ಲ ಸಂಪ್ರದಾಯದ ಒಂದು ಕವಲನ್ನು ಅ ಭಾಗದಲ್ಲಿ ಬೆಳೆಸಿದನೆಂದೂ, ಮೋನಪ್ಪಯ್ಯ ಮುಂತಾದವರು ಉತ್ತರ ಕರ್ನಾಟಕದ ಸೀಮೆಯಲ್ಲಿ ಅದೇ ಪಂಥವನ್ನು ಬೆಳೆಸಿದರೆಂದೂ ಅವರು ತೀರ್ಮಾನಿಸಿದ್ದಾರೆ. ಇಷ್ಟಲಿಂಗ ತ್ಯಾಗ ಮಾಡಿದ ಕೊಡೇಕಲ್ ಪಂಥದವರು ೧೨ನೇ ಶತಮಾನದ ಶರಣರ ಮಂದುವರಿಕೆಯಾಗಿ ಕಂಡುಬರುವುದಿಲ್ಲ. ಆದರೆ ಅವರನ್ನು ಪೂರಾ ವಿರೋಧಿಸುವುದೂ ಇಲ್ಲ.

ಮಂಟೇಸ್ವಾಮಿಯನ್ನು ಮಾಂಕ್ಷಾವಲಿ ಎಂದೂ ಕರೆಯುತ್ತಾರೆ. ಕೊಡೇಕಲ್ಲು ಬಸವಣ್ಣನ ಒಬ್ಬ ಮಗ ಸಂಗಮನಾಥ ಕಾಗಿನೆಲೆಗೆ ಬಂದು ಅಲ್ಲೇ ಐಕ್ಯನಾದ. ಅಲ್ಲಿ ಆತನ ದರ್ಗಾ ಇದೆ. ಮಂಟೇಸ್ವಾಮಿಯೊಡನೆ ಕಲ್ಯಾಣದಿಂದ ಬಂದು ಮರ್ದಾನೆಗೈಬ್ ಎಂಬ ಸೂಫಿ ಶಿವನ ಸಮುದ್ರದಲ್ಲಿ ನೆಲೆಸಿದನೆಂದೂ ಮಂಟೇಸ್ವಾಮಿಗೆ ಕೆಂಪಾಚಾರಿ ಮುಂತಾದ ಶಿಷ್ಯರಿದ್ದರೆಂದು ತಿಳಿದುಬರುತ್ತದೆ.

ಇಷ್ಟಲಿಂಗಕ್ಕೆ ಮಹತ್ವಕೊಡಲಿಲ್ಲ ಎಂಬುದಕ್ಕೆ ಮೌನೇಶ್ವರ ತನ್ನ ಕಾಲಿಗೆ ಲಿಂಗ ಕಟ್ಟಿಕೊಂಡು ಪ್ರಸಂಗ, ಹಾಗೂ ಕೌತಾಳದ ಖಾದರಲಿಂಗ ಮತ್ತು ಉರುಕುಂದಿ ಈರಣ್ಣರ ಸಂವಾದದಲ್ಲೂ ಕಾಲಿಗೆ ಲಿಂಗ ಕಟ್ಟಿಕೊಳ್ಳುವ ಪ್ರಸಂಗ ಉಲ್ಲೇಖವಾಗಿವೆ. ವಡಬಾಳದ ನಾಗನಾಥ ತನ್ನಲ್ಲಿದ್ದ ಇಷ್ಟಲಿಂಗವನ್ನು ಕತ್ತೆಯ ಕೊರಗಳಿಗೆ ಕಟ್ಟಿ ಕೊಡೇಕಲ್ಲ ಬಸವಣ್ಣನಿಂದ ಹಸ್ತ ಮಸ್ತಕ ದೀಕ್ಷೆ ಪಡೆದನೆಂಬ ಕಥೆ ಇದೆ. ಈ ಸಂಪ್ರದಾಯದಲ್ಲಿ ಗುರುವಿಗೆ ಬಹಳ ಮಹತ್ವ ಗುರುವಾಣಿಯನ್ನು ಹಾಡುವುದು. ಗುರು ಗ್ರಂಥವನ್ನು ಪೂಜಿಸುವುದು ಇದೆ. ಇವರಲ್ಲಿ ನಾಥ ಪಂಥದ ಕುರುಹಾದ ಹಂಡಿಭಿಕ್ಷೆ, ಮಣ್ಣಿನ ಬೋಗುಣಿಗಳಿವೆ.

ಹೀಗೆ ಒಂದು ಹೊಸ ಸಂಪ್ರದಾಯವನ್ನು ಶರಣರು, ನಾಥಸಿದ್ಧರು ಹಾಗೂ ಇಸ್ಲಾಂ ಸೂಫಿಗಳ ಅಂಶಗಳೆಲ್ಲ ಸೇರಿಕೊಂಡಿರುವಂತೆ ಕೊಡೇಕಲ್ಲು ಬಸವಣ್ಣ ರೂಪಿಸಿದರು. ಇದಕ್ಕೆ ನಿರ್ದಿಷ್ಟವಾದ ಹೆಸರಿಡಲಿಲ್ಲ. ಇವರ ಮತ್ತು ತಿಂತಿಣಿ ಮೌನಪ್ಪನವರ ಮೇಲೆ ಸೂಫಿ ಪಂಥಕ್ಕಿಂತಲೂ ಇಸ್ಲಾಂ ಪಂಥವೇ ಹೆಚ್ಚು ಪ್ರಭಾವ ಬೀರಿದಂತಿದೆ, ಇವರ ಜೊತೆಗೆ ಯಾವ ಸೂಫಿಸಂತರ ಹೆಸರು ಕಡುಬರುವುದಿಲ್ಲ. ಆದರೆ ಇದೇ ಸಂಪ್ರದಾಯ ಅನುಸರಿಸಿದ ಶಿರಹಟ್ಟಿ ಫಕೀರೇಶ ಮತ್ತು ಸಾವಳಗಿ ಶಿವಲಿಂಗರ ಚರಿತ್ರೆಗಳಲ್ಲಿ ನಿರ್ದಿಷ್ಟ ಸೂಫಿಗಳ ಸಂಪರ್ಕ ಕಂಡುಬರುತ್ತದೆ. ಕೊಡೇಕಲ್ಲ ಬಸವಣ್ಣನನ್ನು ಮಹಮ್ಮದನ ಅವತಾರವೆಂದು ಭಾವಿಸಿ ಮುಸ್ಲಿಮರು ಸರ್ವರ್ ಮಹಮ್ಮದನೆಂದೂ ಕರೆಯುತ್ತಾರೆ.

ಸಾವಳಗಿ ಶಿವಲಿಂಗನಿಗೆ ಮೊದಲನೆ ಬಂದೇನವಾಜನಿಂದ ೧೬ನೇ ತಲೆಯ ಹುಸೇನ್ ಬಂದೇನವಾಜನು ಗುರುವಾಗಿದ್ದನೆಂದೂ ಶಿವಲಿಂಗ ಔರಂಗಜೇಬನೊಡನೆ ಭೇಟಿಯಾಗಿ ಪವಾಡ ಮೆರೆದನೆಂದು(೧೯೭೬) ತಿಳಿದುಬರುತ್ತದೆ. ಶಿರಹಟ್ಟಿ ಫಕೀರೇಶನಿಗೆ ಬಿಜಾಪುರದ ದರವೇಶ್ ಅಮೀನುದ್ದೀನ ಗುರುವಾಗಿದ್ದನೆಂದೂ ತಾನೇ ಮುಂದೆ ಮೌನೇಶನಾಗಿ ಹುಟ್ಟಿಬರುತ್ತೇನೆಂದು ಹೇಳಿದ ಕಥೆಇದೆ. ಅರ್ಕಾಟಿನ ಟೀಪುಜಾಲಿಯಾ (ಇವನ ಹರಕೆಯಿಂದ ಟೀಪುಸುಲ್ತಾನ್ ಹುಟ್ಟಿದ), ಕೌತಾಳದ ಖಾದರಲಿಂಗ, ಬಳ್ಳಾರಿ ಜಿಲ್ಲೆಯ ಹೊನ್ನೂರಿನ ಹೊನ್ನೂರುಸ್ವಾಮಿ, ಮುಂತಾದವರು ಅಮೀನುದ್ದೀನ ಶಿಷ್ಯರೆಂದು ತಿಳಿದುಬರುತ್ತದೆ.

ತಿಂತಿಣಿ ಮೋನಪ್ಪಯ್ಯ : ಈತನು ಕೊಡೇಕಲ್ಲು ಬಸವಣ್ಣನ ಶಿಷ್ಯನೆಂಬ ಒಂದು ವಾದವಿದೆ. ಮೌನಪ್ಪಯ್ಯನ ವಚನಗಳ ಅಂಕಿನ ತನ್ನ ಗುರುವಾದ ಬಸವಣ್ಣನದೇ ಆಗಿದೆ ಎಂಬ ವಾದವೂ ಇದೆ. ಆದರೆ ಆತನು ತನ್ನವಚನಗಳಲ್ಲಿ ಬಸವಣ್ಣನೇ ತನ್ನ ಗುರುವೆಂದು ಹೇಳಿಕೊಂಡಿಲ್ಲ. ತನ್ನ ವಚನಗಳಲ್ಲಿ ಅಲ್ಲಮನನ್ನು ಅತ್ಯಂತ ಪೂಜ್ಯವಾಗಿ ನೆನೆದಿದ್ದಾನೆ. ಅಲ್ಲಮನೇ ತನ್ನಲಿಂಗವೆಂದು ಭಾವಿಸಿದ್ದ ಆತ ಇಷ್ಟಲಿಂಗವನ್ನು ತ್ಯಜಿಸಿದ. ಮೌನಪ್ಪಯ್ಯನ ಗುರು ಯಾವ ವ್ಯಕ್ತಿಯೂ ಅಲ್ಲ-ಅದು ನಿರಾಕಾರ ನಿರ್ಗುಣ ಬಸವಣ್ಣ-ಕಬೀರದಾಸರಿಗೆ ನಿರಾಕಾರ ರಾಮನಿದ್ದಂತೆ-ನಂದಿಯ ರುಪದಲ್ಲಿ ಎಲ್ಲ ಕಡೆಯೂ ಪೂಜಿಸಲಾಗುವ ಬಸವಣ್ಣನೇ ಆತನ ವಚನಗಳ ಅಂಕಿತವಾಗಿದೆ ಎಂದು ಶೀಲಾಕಾಂತ ಪತ್ತಾರ ಅಭಿಪ್ರಾಯ ಪಡುತ್ತಾರೆ.

ಶರಣಕ್ರಾಂತಿಯ ಹರಿಕಾರರಾದ ಅಲ್ಲಮ, ಬಸವಣ್ಣ, ಚೆನ್ನಬಸವಣ್ಣ ಮುಂತಾದವರೆಲ್ಲ ವಿಶ್ಯಕರ್ಮಜನಾಂಗದವರು ಎನ್ನುವ ಆಧಾರಗಳು ಸಿಗುವುದು ಮೌನಪ್ಪಯ್ಯನ ವಚನಗಳಲ್ಲೇ. ತಾನು ಚೆನ್ನಬಸವಣ್ಣನ ಅವತಾರವೆಂದೂ ಹೇಳಿಕೊಂಡಿದ್ದಾನೆ. ಆ ಶರಣರ ತತ್ವಗಳಿಗೆ ಬಹಳ ಮಹತ್ವಕೊಡುವ ಆತ ಇಷ್ಯಲಿಂಗ. ಅಷ್ಟಾವರಣಗಳಿಂದ ಸಾಂಸ್ಥೀಕರಣಗೊಂಡು ಜಡವಾಗಿ ಹೋಗಿದ್ದ ವೀರಶೈವ ಸಂಪ್ರದಾಯಗಳನ್ನು ಒಪ್ಪದೆ ನಿರಾಕಾರ ನಿರ್ಗುಣತ್ವವನ್ನೇ ಎತ್ತಿಹಿಡಿದು ಇಸ್ಲಾಂನ ತತ್ವಗಳಿಗೆ ಸಮೀಪನಾದ. ಈತನನ್ನು ಸೂಫಿಗಳ ಸಾಲಿಗೆ ಸೇರಿಸಲು ಬರುವುದಿಲ್ಲವಾದರೂ ಈತನ ಮಠ. ಗುಡಿಗಳು ಮುಂದೆ ದರ್ಗಾಗಳ ಮಾದರಿಯಲ್ಲೇ ನಿರ್ಮಾಣಗೊಂಡು ಹಿಂದೂ ಮುಸ್ಲಿಮರ ಭಾವೈಕ್ಯತೆಯನ್ನು ಸಾಧಿಸಿವೆ.

ಈತನು ೧೭ನೇ ಶತಮಾನದಲ್ಲಿ ಹುಟ್ಟಿದನೆಂದು ತರೀಕೆರೆಯವರು ಅಭಿಪ್ರಾಯ ಪಟ್ಟರೆ. ಕೆ.ಪಿ. ಈರಣ್ಣ ಹದಿನೈದನೆ ಶತಮಾನದ ಉತ್ತರಾರ್ಧ ಮತ್ತು ಹದಿನಾರನೆ ಶತಮಾನದ ಪೂರ್ವಾರ್ಧದಲ್ಲಿ ಅವತರಿಸಿದನೆಂದು ಅಭಿಪ್ರಾಯಪಡುತ್ತಾರೆ೧೦.‌‌‌‌‌‌‌‌‌‌‌‌‌‌‍‌‍

ಹುಟ್ಟಿದ್ದು ಗೋನಾಳ, ಬೆಳೆದದ್ದು ಲಿಂಗನಬಂಡಿ, ಕುರುಹು ತೋರಿದ್ದುವರವಿ, ನೆಲೆಗೊಂಡಿದ್ದು ತಿಂತಿಣಿಯಲ್ಲಿ ಎಂಬ ಪ್ರಚಲಿತ ಮಾತು ಮೌನಪ್ಪಯ್ಯನ ಜೀವನದ ಬಗ್ಗೆ ಹೇಳುತ್ತದೆ. ಕಲ್ಯಾಣ ಕುಲಬುರ್ಗಿ. ಗೋಗಿ, ಬಿಜಾಪುರ, ಹಾನಗಲ್ಲು, ಶಿರಹಟ್ಟಿ, ಮುದಗಲ್ಲು, ಲಕ್ಷೇಶ್ವರ, ಹಂಪಿ ಮುಂತಾದೆಡೆಗಳಲ್ಲಿ ಆತ ತಿರುಗಾಡಿ ಲೀಲೆಗಳನ್ನು ತೋರಿದ್ದಾನೆ. ಆತನು ಸುತ್ತಾಡಿದ ಊರುಗಳಲ್ಲೇಲ್ಲ ಆತನ ಹೆಸರಿನ ಮಠಗಳಿವೆ. ಬಿಜಾಪುರದ ಸರದಾರ ಅಂಕುಶಖಾನ ಲಕ್ಷೇಶ್ವರದಲ್ಲಿ ಬಾವಿ ತೆಗೆಯುವಾಗ ನೀರು ಬಾರದಿರಲು ನೀರು ಬರುವಂತೆ ಮಾಡಿದ್ದು, ಬಿಜಾಪುರದ ಸುಲ್ತಾನನಿಗೆ ಹಿಂದೂ ಮುಸ್ಲಿಂ ಎಲ್ಲರಿಗೂ ದೇವನೊಬ್ಬನೇ ಎಂಬುದನ್ನು ಮನವರಿಕೆ ಮಾಡಿಕೊಟ್ಟು ಪ್ರಭಾವ ಬೀರಿದ್ದು ಸುರಪುರದಲ್ಲಿ ಬೇಡನಾಯಕನಿಗೆ ಪಟ್ಟಕಟ್ಟಿದ್ದು ಮುಂತಾದ ಮಹತ್ವದ ಐತಿಹಾಸಿಕ ಘಟನೆಗಳು ಆತನ ಬದುಕಿನಲ್ಲಿವೆ. ಹೊಲೆಯ ಮಲ್ಲನ ಮಗಳ ಮದುವೆಗೆ ಹೋಗಿ ಉಂಡು ಆಶೀರ್ವದಿಸಿ ಜಾತಿಭೇದ ಮೀರಿದ ತನ್ನ ನಿರಂಜನತೆಯನ್ನು ತೋರಿದ್ದಾನೆ. ಮಳೆ ಹೋಗಿ ಬರಗಾಲ ಬಂದಾಗ ಜನರು ಹಾಹಾಕಾರ ಮಾಡುತ್ತಿದ್ದಾಗ ಮಳೆ ತರಿಸಿದ ಪವಾಡವನ್ನೂ ಮೋನಪ್ಪಯ್ಯ ಮಾಡಿದ್ದಾನೆ. ಮಳೆಬರಿಸುವ ವಿದ್ಯೆಯಲ್ಲಿ ಮೋನಪ್ಪಯ್ಯನಂತೆ ಆತನ ಶಿಷ್ಠ ಗದ್ದನಕೆರೆಯ ಮಳಿಯಪ್ಪಯ್ಯನೂ ಪ್ರಸಿದ್ಧನಾಗಿದ್ದಾನೆ.

ಸೂಫಿಗಳಿಗೂ ಮೋನಪ್ಪಯ್ಯ ಬಹಳ ಪ್ರಿಯವಾಗಿದ್ದ. ಆತನನ್ನು ವರವಿಯ ಪಾಚ್ಷಾ, ಮೌನುದ್ದೀನ್, ಮೌನದೀನ ಎಂದೆಲ್ಲಾಕರೆದಿದ್ದಾರೆ, ಮೊಯಿನುದ್ದೀನ ಎಂಬದೂ ಇದರ ರೂಪಾಂತರವಿರಬಹುದು. ಈತ ಕಪನಿ ಟೋಪಿ, ಜಂಗುಗಳನ್ನು ಧರಿಸಿದ ಫಕೀರನಾಗಿದ್ದ. ಅಲ್ಲಾ ಅಲ್ಲಮರಲ್ಲಿ ಅಭೇದ್ಯ ಕಲ್ಪಿಸಿ ಧರ್ಮ ಸಮನ್ವಯ ಸಾಧಿಸಿದ ಈತನನ್ನು ಉತ್ತರ ಹಿಂದೂಸ್ತಾನದ ಪ್ರಸಿದ್ಧ ಸಂತ ಕಬೀರನೊಡನೆ ಹೋಲಿಸಲಾಗುತ್ತದೆ.

ವರವಿ, ಲಕ್ಷ್ಮೇಶ್ವರಗಳಲ್ಲಿ ಈತನ ಮಠಗಳನ್ನು ಎರಡನೆ ಆದಿಲ್ ಶಾಹಿ ಕಟ್ಟಿಸಿದನೆಂದೂ ತಿಂತಿಣಿಯ ಗುಡಿಯನ್ನು ಅದೇ ದರ್ಗಾದ ಮಾದರಿಯಲ್ಲಿ ಸೊಲಬಣ್ಣ ಶೆಟ್ಟಿ ಎಂಬ ಭಕ್ತನು ಕಟ್ಟಿಸಿದನೆಂದೂ ತಿಳಿದುಬರುತ್ತದೆ.

ಆತನ ದರ್ಗಾಗಳಲ್ಲಿ ಫೋಷಿಸಲ್ಪಡುವ ದೀನ್ ವಿಶಿಷ್ಟವಾದುದು. “ಓಂ ಏಕ್ ಲಾಖ್ ಐಸೀ ಹಜಾರ್ ಪಾಂಚೋಪೀರ ಪೈಗಂಬರ್ ಮೌನ್‍ದೀನ್ ಕಾಶಿಪತಿ ಹರಹರ ಮಹಾದೇವ” ಒಂದು ಲಕ್ಷದ ಎಂಬತ್ತು ಸಾವಿರ ಪೈಗಂಬರರು ಮಹಮ್ಮದನಿಗಿಂತ ಮೊದಲು ಆಗಿ ಹೋಗಿದ್ದಾರೆ ಎಂದು ಇಸ್ಲಾಂ ಪುರಾಣಗಳು ಹೇಳುತ್ತವೆ. ಇವರಲ್ಲಿ ಈಸಾ, ಮೂಸಾ, ಅಬ್ರಾಹಂ, ಮಹಮದ್ ಇವರ ಜೊತೆಗೆ ಮೌನುದ್ದೀನನೂ ಸೇರಿ ಐದು ಮಂದಿ (ಪಂಚೋಪೀರ್) ಗುರುಗಳು, ಮೌನುದ್ದೀನ ಜಿತಾಪೀರನಾಗಿದ್ದಾನೆ ಎಂದು ಈ ದೀನದ ಅರ್ಥ, ಜೊತೆಗೆ ಕಾಶಿಪತಿ ಹರಹರ ಮಹಾದೇವನನ್ನು ಸ್ತುತಿಸುವ ಈ ದೀನವು ಹಿಂದೂ ಮುಸ್ಲಿಂ ಸಾಮರಸ್ಯದ ಅತಿ ಶ್ರೇಷ್ಠಮಂತ್ರವಾಗಿದೆ.

ಗಗನಾಪುರದ ಗಂಗಪ್ಪಯ್ಯ : ಮಳಿಯಪ್ಪಯ್ಯ ಸ್ವಾಮಿಯ ಗುರು ಗಂಗಪ್ಪಯ್ಯನಂದೂ, ಮೋನಪ್ಪಯ್ಯನೆಂದೂ ವಿಭಿನ್ನ ಹೇಳಿಕೆಗಳಿವೆ. ಮೋನಪ್ಪಯ್ಯನ ಶಿಷ್ಯ ಗಂಗಪ್ಪಯ್ಯನ ಶಿಷ್ಯ ಮಳಿಯಪ್ಪನಾದ್ದರಿಂದ ಇವರಿಬ್ಬರೂ ಮೋನಪ್ಪಯ್ಯನ ಶಿಷ್ಯವರ್ಗದವಕೀ ಆಗುತ್ತಾರೆ. ಗಂಗಪ್ಪಯ್ಯನವರ ಬಗ್ಗೆ ಸಂಕ್ಷಿಪ್ತವಾಗಿ ಪರಿಚಯ ಮಾಡಿಕೊಳ್ಳುವುದು ಒಳ್ಳೆಯದು.

ದೇವದುರ್ಗದ ಸದಾಚಾರಶೀಲರಾದ ಗುರಪ್ಪ ಶಂಕ್ರಮ್ಮ ಎಂಬ ದಂಪತಿಗಳಿಗೆ ಬಹುದಿನ ಮಕ್ಕಳಾಗಲಿಲ್ಲ. ಶಂಕ್ರಮ್ಮ ಅಲ್ಲಿಯೇ ಹರಿಯುತ್ತಿದ್ದ ಕೃಷ್ಣಾನದಿಗೆ ೧೨ವರ್ಷ ಪೂಜೆಮಾಡಿ ಮಕ್ಕಳಿಗಾಗಿ ಬೇಡಿಕೊಂಡಳು. ಹುಟ್ಟಿದ ಮೊದಲ ಮಗುವನ್ನು ನಿನಗೇ ಅರ್ಪಿಸುತ್ತೇನೆ ಎಂದೂ ಮಾಡಿಕೊಂಡಳು, ಆ ತಾಯಿಗೆ ಪುಣ್ಯವಿಶೇಷದಿಂದ ಅವಳಿ ಗಂಡು ಮಕ್ಕಳಾದವು. ತನ್ನ ಹರಕೆಯಂತೆ ಮೊದಲನೆ ಮಗುವನ್ನು ತೆಪ್ಪದಲ್ಲಿಟ್ಟು ಕೃಷ್ಣಾನದಿಯಲ್ಲಿ ತೇಲಿಬಿಟ್ಟಳು. ಆ ಮಗು ಮೋನಪ್ಪಯ್ಯನಿಗೆ ಸಾವಳಗಿ ಎಂಬ ಗ್ರಾಮದಲ್ಲಿ ನದಿಯಲ್ಲಿ ಸಿಕ್ಕಿತು. ಆ ಮಗುವನ್ನು ರಕ್ಷಿಸಿ ಗಂಗೆಯ ವರಪ್ರಸಾದವಾದ್ದರಿಂದ ಗಂಗಪ್ಪನೆಂದು ಹೆಸರಿಟ್ಟು ಮೋನಪ್ಪ ಸಾಕಿ ಬೆಳೆಸಿದ. ಬೆಳೆದ ಗಂಗಪ್ಪಯ್ಯ ಗುರುಸೇವೆ ಮಾಡುತ್ತ ತಾನೂ ಯೋಗಿಯಾದ. ಒಂದು ಸಾರಿ ಅದೆ ಊರಿನ ಮಹಾಶಿವಭಕ್ತನಾದ ಶಿವಲಿಂಗಪ್ಪನು ಶಿವನನ್ನು ಅನನ್ಯ ಭಕ್ತಿಯಿಂದ ಅರ್ಚಿಸಿ ಪ್ರಸನ್ನೀಕರಿಸಿಕೊಂಡು ಪರಿವಾರ ಸಮೇತನಾಗಿ ಕೈಲಾಸಕ್ಕೆ ಹೋಗುವುದನ್ನು ಕಂಡು ತಾನೂ ಕೈಲಾಸ ನೋಡಬೇಕು ಎಂದು ಆಶೆಪಟ್ಟ. ಮೌನೇಶ್ವರ “ಗಂಗಪ್ಪಾ ನೀನೂ ಕೈಲಾಸಕ್ಕೆ ಹೋಗಬೇಕೆಂದಿರುವೆಯಾ?” ಎಂದು ಕೇಳಿದ. ಗಂಗಪ್ಪ “ಸ್ವಾಮಿ ಎಲ್ಲಿರುವರೋ ಅದೇನನಗೆ ಕೈಲಾಸ. ಆದರೂ ಕೈಲಾಸವನ್ನು ನೋಡಬೇಕೆಂಬ ಆಶೆ ಹುಟ್ಟಿದ್ದು ನಿಜ” ಎಂದ. ಹಾಗಾದರೆ ಇಲ್ಲಿ ನೋಡು ಎಂದು ಮೌನೇಶ್ವರ ತನ್ನ ಅಂಗೈಯನ್ನು ಶಿಷ್ಯನ ಕಣ್ಣೆದುರು ಹಿಡಿದ. ಅಲ್ಲಿ ಕೈಲಾಸದ ವೈಭವವನ್ನೆಲ್ಲ ನೋಡಿ ಗಂಗಪ್ಪ ತೃಪ್ತಿಪಡೆದ.

ಒಂದು ಸಾರಿ ಗುರುಶಿಷ್ಯರಿಬ್ಬರೂ ಆಧ್ಯಾತ್ಮಚಿಂತನೆಯ ವಿಚಾರಗಳನ್ನು ಮಾತನಾಡಿಕೊಳ್ಳುತ್ತ ಕೃಷ್ಣಾನದಿಯ ದಂಡೆಯ ಮೇಲೆ ಕುಳಿತಿದ್ದರು. ಕೃಷ್ಣಾನದಿಯ ಭೋರ್ಗರೆತದಿಂದ ಅವರಿಗೆ ಪರಸ್ಪರರ ಮಾತುಗಳು ಕೇಳದಾದವು ಮೋನಪ್ಪಯ್ಯ ‘ಹೇಕೃಷ್ಣೆ ನೀನು ಹೀಗೆ ಸದ್ದು ಮಾಡಿದರೆ ನಾವು ಮಾತಾಡುವುದು. ಹೇಗೆ ಶಾಂತವಾಗಿ ಹರಿ” ಎಂದು ನುಡಿದರು. ಅದರಂತೆ ಕೃಷ್ಣಾನದಿ ತಿಂಥಿಣಿಯ ದೇವಸ್ಥಾನದ ಆಚೀಚೆ ಒಂದು ಫರ್ಲಾಂಗು ದೂರ ಎಕ್ಷ್ಟೇಮಹಾಪೂರ ಬಂದರೂ ಸದ್ದಿಲ್ಲದೆ ಹರಿಯುತ್ತದೆ.

ಮೋನಪ್ಪಯ್ಯ ತನ್ನ ಶಿಷ್ಯನಿಗೆ ನಿನ್ನಿಂದ ಅನೇಕ ಕಾರ್ಯಗಳಾಗಬೇಕಾಗಿದೆ. ನೀನು ನಾಲತ್ತವಾಡಕ್ಕೆ ಹೋಗಿ ನೆಲೆಸಿ ಲೋಕಕಲ್ಯಾಣಕ್ಕೆ ತೊಡಗು’ ಎಂದು ಅಪ್ಪಣೆ ಮಾಡಿದರು. ಅದರಂತೆ ಗಂಗಪ್ಪಯ್ಯ ಹೊರಟರು. ದಾರಿಯ ಒಂದು ಊರಿನಲ್ಲಿ ಒಂದು ಬಲಿಷ್ಠ ಕೋಣವು ಜನರಿಗೆ ಬಹಳ ತೊಂದರೆ ಕೊಡುತ್ತಿತ್ತು. ಗಂಗಪ್ಪಯ್ಯ ಅದನ್ನು ಮಣಿಸಿ ಹಿಡಿದು ಕೊರಳಿಗೊಂದು ತಾಯತವನ್ನು ಕಟ್ಟಿ, ನೀನಿನ್ನು ಕೈಲಾಸಕ್ಕೆ ಹೋಗು ಎಂದು ಆದೇಶ ನೀಡಿದರು. ಕೂಡಲೆ ಅದು ಗಗನ ಹಾರುತ್ತಾ ‘ನನ್ನ ಬೆನ್ನ ಮೇಲೆ ಕುಳಿತು ಸ್ವರ್ಗಕ್ಕೆ ಬರುವವರಿದ್ದರೆ ಬನ್ನಿ’ ಎಂದು ಕರೆಯಿತು. ಈ ಅಚ್ಚರಿಯನ್ನು ನೋಡುತ್ತ ಜನ ಗಂಗಪ್ಪಯ್ಯನವರಿಗೆ ಜಯಕಾರ ಹಾಕಿದರು. ಅಂದಿನಿಂದ ಆ ಊರಿಗೆ ಗಗನಾಪುರವೆಂದು ಹೆಸರು ಬಂತು.

ಮುಂದೆ ಗಂಗಪ್ಪಯ್ಯ ಅಕಾಲದಲ್ಲಿ ಮಳೆತರಿಸುವುದು ಕಾಶಿವಿಶ್ವನಾಥನಿಗೆ ಅನ್ನತುಪ್ಪ ಉಣ್ಣಿಸುವುದು. ಗೋಡೆಯನ್ನು ನಡೆಸುವುದು. ಕಟ್ಟಿಗೆ ಕೋಲನ್ನು ಬೆಳ್ಳಿ ಕೋಲಾಗಿ ಮಾಡುವುದು, ಕೃಷ್ಣಾನದಿಯ, ಮೇಲೆ ಕಂಬಳಿಹಾಸಿ ಅದರ ಮೇಲೆ ಕುಳಿತು ದಾಡುವುದು. ಮೊದಲಾದ ಪವಾಡಗಳನ್ನು ಮಾಡುತ್ತ ಪ್ರಸಿದ್ಧರಾದರು. ಜಾವೂರು, ದೇವರಗಡ್ಡಿ, ಮೇಲಗಡ್ಡಿ, ಕಾಡಲಬಂಡಿ, ಚವನಬಾವಿ, ಗುಡಜಾವೂರು, ಹಿರಿಜಾವೂರು, ನಾರಾಯಣಪುರ, ಇಸ್ಲಾಂಪುರ ಮುಂತಾದ ಊರುಗಳಲ್ಲಿ ಇನಾಂ ಭೂಮಿಗಳನ್ನು ಪಡೆದರು. ತಮ್ಮ ಅಂತಿಮ ಕಾಲದಲಿ ಒಂದು ಗುಹೆಯೊಳಗೆ ಪ್ರವೇಶ ಮಾಡಿ ಐಕ್ಯರಾದರು. ಆ ಗವಿಯ ಬಾಗಿಲಿಗೇ ಪೂಜೆ ನಡೆಯುತ್ತದೆ೧೧.

ಇದು ಜನರಲ್ಲಿ ಪ್ರಚಾರದಲ್ಲಿರುವ ಗಗನಾಪುರದ ಗಂಗಪ್ಪಯ್ಯನವರ ಚರಿತ್ರೆ. ಇಂಥ ಕಥೆಗಳ ಪವಾಡಗಳಿಗೆ ಸೂಕ್ಷ್ಮವಾದ ವಾಸ್ತವಿಕ ನೆಲಗಟ್ಟಿರುತ್ತದೆ. ನಮ್ಮ ಜನರಿಗೆ ಕಲ್ಪನೆ ಸಂಕೇತಗಳ ಮೂಲಕ ವರ್ಣ ರಂಜಿತಗೊಳಿಸಿ ಮಹಾಪುರುಷರ ಬಗ್ಗೆ ಕಥೆ ಹೇಳುವುದು ಕೇಳುವುದು ಎಂದರೆ ಬಹಳ ಇಷ್ಟ. ಉದಾಹರಣೆಗೆ ಗಂಗಪ್ಪಯ್ಯನಿಗೆ ಕೈಲಾಸ ತೋರಿಸಿದ್ದು ಎನ್ನಲಾಗುವ ಕೈಲಾಸಕಟ್ಟೆ ತಿಂಥಿಣಿಯಲ್ಲಿ ಮೋನಪ್ಪಯ್ಯನ ಮಠದ ಎಡಗಡೆಯಲ್ಲಿದೆ. ಅದು ಸಾಧುಗಳ ಕಟ್ಟೆಯಾಗಿದೆ. ಅಲ್ಲಿ ಬಹುಶಃ ಮೋನಪ್ಪಯ್ಯ ‘ಕೈಲಾಸವೆಂಬುದು ಬೇರಿಲ್ಲ ಕಾಣಿರೊ, ಕಾಯಕವೇ ಕೈಲಾಸ, ಕಾಯಕವೇ ಕೈಲಾಸ ಎಂದೂ ಆಚಾರವೇ ಅನಾಚಾರವೇ ನರಕ ವೆಂದು ಸಾರಿ ಹೇಳಿದ ಬಸವಾದಿ ಶರಣರ ತತ್ವವನ್ನು ಗಂಗಪ್ಪಯ್ಯನಿಗೆ ಮನವರಿಕೆ ಮಾಡಿಕೊಟ್ಟಿರಬಹುದು. ಇನ್ನು ನೇರವಾಗಿ ಕೈಲಾಸಕ್ಕೆ ಹೋದವರ ಕಥೆಗಳು ಹಿಂದಿನ ಶರಣರ ಬಗ್ಗೆ ಸಾಕಷ್ಟಿವೆ. ಅಂಥ ಒಂದು ಕಥೆಯ ಪ್ರಸ್ತಾಪ ಅವರ ಚಿಂತನೆಯ ಜಿಜ್ಞಾಸೆಗೆ ಕಾರಣವಾಗಿರಬೇಕೆಂದು ಊಹಿಸಬಹುದಾಗಿದೆ.