ಮಳೆಯಪ್ಪಯ್ಯನವರು

ಮಳೆಯಪ್ಪನವರನ್ನು ಮಳಿಯಪ್ಪಯ್ಯ ಎಂದು ಆಡುಭಾಷೆಯಲ್ಲೂ, ಮಳೆಯ ರಾಜೇಂದ್ರ ಮಹಾಸ್ವಾಮಿ ಎಂದು ಗೌರವಪೂರ್ವಕವಾಗಿಯೂ ಕರೆಯುತ್ತಾರೆ. ಅವರ ಬಗ್ಗೆ ಯಾದಗಿರಿ ಮಠದ ಶ್ರೀ ಗುರುನಾಥ ಮಹಾಸ್ವಾಮಿಗಳು ಹೇಳುವುದು ಹೀಗೆ:

“ಗದ್ದನಕೇರಿಯ ಅಘಟಿತ ಘಟನಾ ಪೇಶಿಯಾದ ವರುಣದೇವನೆ ನರರೂಪದಲ್ಲಿ ಅವತಾರ ಮಾಡಿದ ಸದ್ಗುರು ಶ್ರೀ ಮಳೆಯ ರಾಜೇಂದ್ರ ಮಹಾಸ್ವಾಮಿಗಳು”. ಈ ಪರಂಪರೆಯು ಮೂಡಿ ಬಂದದ್ದು ಕರ್ನಾಟಕದ ಹಿಂದೂ ಮುಸ್ಲಿಂ ಭಾವೈಕ್ಯತೆಯ ಹರಿಕರರಾದ ಸರ್ವಧರ್ಮ ಸನ್ವಯ ಲೀಲಾ ಪುರುಷರಾಗಿ ಮೆರೆದ ತಿಂಥಿಣಿ ಜಗದ್ಗುರು ಶ್ರೀ ಮೌನೇಶ್ವರರ ಕರಕಮಲ ಸಂಜಾತರಾದ ಗಗನಪುರದ ಶ್ರೀ ಗುರು ಗಂಗಪ್ಪಯ್ಯನವರಿಂದ ಸದ್ಗುರು ಮೌನೇಶ್ವರರ ಆಣತಿಯಂತೆ ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಬಂದಂಥ ಮಹನೀಯರು.

ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ವಿಶ್ವಕರ್ಮ ಬ್ರಾಹ್ಮಣ ದಂಪತಿಗಳಿಗೆ ಸಂತಾನವಿರದೆ ಪರಿತಪಿಸುತ್ತಿರುವಾಗ ‘ಹರಸಿ ಕಮ್ಮಾರನಾಗಿ ನರರೂಪ ತಾಳಿದ ಗುರುವಿನ ಮುಂದೆ ಗುರುವುಂಟೆ’ ಎಂಬ ಮೌನೇಶ್ವರರ ವಚನದಂತೆ, ಪರಶಿವನ ಅಂಶಾವತಾರಿಯಾದ ಶ್ರೀ ಮೌನೇಶ್ವರರು ಆ ದಂಪತಿಗಳ ಕನಸಿನಲ್ಲಿ ಕಾಣಿಸಿಕೊಂಡು ನನ್ನ ಪರಮ ಶಿಷ್ಯನಾದ ಗಂಗಪ್ಪಯ್ಯನೆಂಬ ಮಹಾಪುರುಷರು ಭಕ್ತರ ಉದ್ಧಾರಕ್ಕಾಗಿ ಸಂಚಾರ ಮಾಡುತ್ತ ನಿಮ್ಮ ಗ್ರಾಮಕ್ಕೆ ಬಂದು ನಿಮಗೆ ಸಂತಾನ ಭಾಗ್ಯವನ್ನು ಕೊಡುವುದರ ಜೊತೆಗೆ, ಕೈ ಮಾಡಿದರೆ ಮಳೆ ತರಿಸುವಂಥ ದುರ್ಭಿಕ್ಷೆ ನಿವಾರಣೆ ಮಾಡುವಂಥ ಮಹಾಪುರುಷನನ್ನು ಅನುಗ್ರಹಿಸುತ್ತಾರೆ. ಅವನಿಗೆ ‘ಮಳೆಯ ರಾಜೇಂದ್ರ ಎಂಬುದಾಗಿ ಹೆಸರಿಟ್ಟು ಕರೆಯಿರಿ’ ಎಂದು ಹೇಳಿ ಅದೃಶ್ಯರಾಗುತ್ತಾರೆ. ಅಂತಹ ಲೀಲಾ ಪುರುಷನ ಹಸ್ತದಿಂದ ಧರೆಗೆ ಬಂದ ವರುಣ ದೇವನೇ ಗದ್ದನಕೇರಿಯ ಶ್ರೀ ಮಳೆರಾಜೇಂದ್ರ ಮಹಾಸ್ವಾಮಿ ಅಥವಾ ಮಳಿಯಪ್ಪಯ್ಯಸ್ವಾಮಿ೧೩.

ಮಳೆಪ್ಪಯ್ಯ ಸ್ವಾಮಿಯ ಸ್ವಲ್ಪ ವಿವರವಾದ ಕಥೆ ಹೀಗಿದೆ. ಅದರಲ್ಲಿ ಮೋನಪ್ಪಯ್ಯ ನವರು ದಂಪತಿಗಳ ಕನಸಿನಲ್ಲಿ ಬರುವ ಪ್ರಸ್ತಾಪವಿಲ್ಲ. ಬಿಜಾಪುರ ಜಿಲ್ಲೆಯ ಬಾಗೇವಾಡಿ ತಾಲೂಕಿನ ಉಕ್ಕಲಿ ಎಂಬ ಗ್ರಾಮದಲ್ಲಿ ಗುರುನಾಥಪ್ಪ ತುಳಸಾಬಾಯಿ ಎಂಬ ದಂಪತಿಗಳಿದ್ದರು. ಅವರಿಗೆ ಮಕ್ಕಳಿದ್ದಿಲ್ಲ. ಆ ಚಿಂತೆಯಿಂದ ಅವರು ಹಗಲೂ ರಾತ್ರಿ ಗಗನಪುರ ಸ್ವಾಮಿಗಳನ್ನು ಮನಸ್ಸಿನಲ್ಲಿ ಧ್ಯಾನಿಸುತ್ತಿದ್ದರು. ಒಂದು ದಿವಸ ಗುರಪ್ಪನು ಪೇಟೆಗೆ ಹೋಗಿದ್ದನು. ಅಲ್ಲೇ ಗಂಗಾಧರ ಗುರುಗಳು ಕುದುರೆ ಹತ್ತಿಕೊಂಡು ಬಂದರು. ಅವರನ್ನು ಕಂಡು ಗುರಪ್ಪನು ಸಾಷ್ಟಾಂಗ ನಮಸ್ಕಾರ ಮಾಡಿ ಮನೆಗೆ ಕರೆದುಕೊಂಡು ಬಂದನು. ಅವರ ಮನೆಯಲ್ಲಿ ಯಾಕೆ ಗುರಪ್ಪ ನಿನ್ನ ಮುಖದ ಮೇಲೆ ಚಿಂತೆಯ ಕಳೆ ತೋರುತ್ತಿದೆ. ನೀನು ಚಿಂತೆ ಮಾಡುವ ಕಾರಣವಿಲ್ಲ. ನಿನಗೆ ಜಗತ್ತಿನಲ್ಲಿ ಪ್ರಸಿದ್ಧ ಯೋಗಿಯಾಗುವ ಒಬ್ಬ ಮಗನು ಜನಿಸುವನು. ಅವನಿಂದ ಲೋಕ ಕಲ್ಯಾಣವಾಗುತ್ತದೆ. ನಾವು ಆತನ ನಾಮಕರಣಕ್ಕೆ ಬರುತ್ತೇವೆಂದು ಹೇಳಿ ಗಗನಾಪುರಕ್ಕೆ ಹೊರಟು ಹೋದರು. ಕುದುರೆಯಿಂದ ಎಲ್ಲಿ ಇಳಿದರೊ ಅಲ್ಲಿ ಬಂಡೆಗಲ್ಲಿನ ಮೇಲೆ ಕುದುರೆಯ ನಾಲ್ಕು ಹೆಜ್ಜೆಗಳು ಮೂಡಿದವು. ಅವು ಈಗ್ಯೂ ಇರುತ್ತವೆ.

ಕೆಲವು ದಿವಸಗಳ ನಂತರ‍ ತುಳಸಾಬಾಯಿಗೆ ಗರ್ಭನಿಂತು ನವಮಾಸ ತುಂಬಿ ಚೈತ್ರ ಮಾಸ ಶುಕ್ಲಪಕ್ಷ ಪೌರ್ಣಿಮೆಯ ಪ್ರಾತಃಕಾಲ ಶನಿವಾರ ಗುರು ಮಹರ್ದಶ ಶುಭಕೃತು ನಾಮ ಸಂವತ್ಸರದಲ್ಲಿ ತುಳಸಾಬಾಯಿ ಗಂಡು ಮಗುವನ್ನು ಹಡೆದಳು. ಜಾತಕರ್ಮ ಮಾಡಿ ನಾಮಕರಣ ಕಾಲಕ್ಕೆ ಗುರುಗಳನ್ನು ನೆನೆಸಿದರು. ಆಗಲೇ ಗಗನಪುರದಿಂದ ಸ್ವಾಮಿಗಳು ಬಂದರು. ಎಲ್ಲರಿಗೂ ಆನಂದವಾಯಿತು. ಆಗ ಗುರಪ್ಪ ಮಗನ ನಾಮ ಏನೆಂದು ಕರೆಯಬೇಕು ಎಂದು ಕೇಳಿದನು. ಅದಕ್ಕೆ ಗುರುಗಳು “ಹುಟ್ಟಿದಾಗ ತನ್ನ ನಾಮವನ್ನು ತಾನೇ ಹೇಳುತ್ತಾ ಬಂದಿರುವನು. ನಾವೇನು ಹೇಳಬೇಕು” ಎಂದರು. ಆ ಗೂಢ ಮಾತು ತಿಳಿಯದೆ ಗುರುಗಳೇ ನೀವೇ ತಿಳಿಸಿ ಹೇಳಿರಿ ಎಂದು ಕೇಳಿದನು. ಹಾಗಾದರೆ ಅವನು ಹುಟ್ಟುವಾಗ ಮಳೆ ಬರುತ್ತಿತ್ತಲ್ಲಾ ಅದೇ ಹೆಸರಿಂದ ಕರೆಯಿರಿ ಎಂದು ಹೇಳಿದರು. ಆಗ ಆ ಮಗುವಿಗೆ ಮಳೆರಾಜ, ಮಳೆಯಪ್ಪಯ್ಯ ಎಂದು ನಾಮಕರಣ ಮಾಡಿದರು. ಮಗುವು ಬಾಲಲೀಲೆಗಳನ್ನು ತೋರಿಸಿ ತಂದೆ ತಾಯಿಗಳಿಗೆ ಆನಂದವುಂಟು ಮಾಡುತ್ತಿದ್ದನು. ಆ ಮೇಲೆ ಸಾಲಿಗೆ ಹಾಕಿದರು. ಸಾಲೆಯಲ್ಲಿ ಸಕಲ ವಿದ್ಯಾಪಾರಂಗತನಾಗಿ ತಂದೆ ತಾಯಿಗಳ ಅಪ್ಪಣೆ ಪಡೆದುಕೊಂಡು ಗಗನಾಪುರಕ್ಕೆ ಹೋದನು. ಅಲ್ಲಿ ಸರ್ವವಿದ್ಯಾನಿಪುಣನಾಗಿ ಉಪನಿಷತ್ತು ಮೀಮಾಂಸಾದಿ ಜ್ಞಾನವನ್ನು ಗಳಿಸಿದನು. ಗಂಗಾಧರ ಗುರುಗಳು ಮಳೆರಾಜಾ ನೀನು ವಜ್ರಗಿರಿಗೆ ಹೋಗಿ ಅಲ್ಲಿ ಮಠ ಕಟ್ಟಿಸಿಕೊಂಡು ನೆಲೆಸು ಎಂದು ಹೇಳಿ ಕಳಿಸಿದರು. ಅದರಂತೆ ಮಳೆರಾಜನು ಗದ್ದ ಗಿರಿಗೆ ಬಂದು ಅಲ್ಲಿ ಮಠ ಕಟ್ಟಿಸಿಕೊಂಡು ಇರ ಹತ್ತಿದನು.

ಅಲ್ಲಿಗೆ ಜನರು ಹೋಗುವುದೂ ಬರುವುದೂ ನಡೆಯಿತು. ಅವರು ದೇಶ ಸಂಚಾರ ಮಾಡಿ ಹಣ ಕೂಡಿಸಿ ಅದರಿಂದ ಎಷ್ಟು ಮಂದಿ ಬಂದರೂ ಊಟ ಮಾಡಿಸುತ್ತಿದ್ದರು. ಮಳೆ ಹೋದ ವೇಳೆಯಲ್ಲಿ ಮಳೆ ತರಿಸುತ್ತಿದ್ದರು. ಅವರು ಸಂಚಾರ ಮಾಡುತ್ತಾ ಬಿಜಾಪುರಕ್ಕೆ ಹೋದರು. ಅಲ್ಲಿ ಅವರು ಕಹಳೆ ಹಿಡಿಸಿ ಪಾಲಕಿಯಲ್ಲಿ ಕುಳಿತು ರಾಜ ರಾಜರಗಂಡ ಮಳೆರಾಜಾ ಎಂದು ಹೊಗಳಿಸಿಕೊಳ್ಳುತ್ತ ನಡೆದಿದ್ದರು. ಆ ಸುದ್ದಿ ಅಲ್ಲಿ ಆಳುವ ಮುಸಲ್ಮಾನ ರಾಜರ ತನಕ ಹೋಯಿತು. ಅವರು ಮಳೆರಾಜನನ್ನು ಕರೆಸಿ ನೀನು ನಮ್ಮ ಸಂಗಡ ಯುದ್ಧ ಮಾಡಿ ಜಯಿಸು, ಇಲ್ಲವಾದರೆ ಹೀಗೆ ವದುರುವುದನ್ನು ಬಿಡು ಎಂದು ಹೆಳಿದರು. ಅದಕ್ಕೆ ಮಳೆರಾಜನು ಯುದ್ಧ ಮಾಡಲಿಕ್ಕೆ ಇಲ್ಲಿ ನಮ್ಮ ದಂಡು ಇಲ್ಲ, ವಜ್ರಗಿರಿಗೆ ಬಂದು ಯುದ್ಧ ಮಾಡಿ ಜಯಿಸು, ಇಲ್ಲದಿದ್ದರೆ ನಮಗೆ ಶರಣು ಬಾ ಎಂದು ಹೇಳಿ ಹೋದರು.

ಅದರಂತೆ ಮುಸಲ್ಮಾನರ ಎಷ್ಟೋ ಸೈನ್ಯ ಹೊರಟು ಗದ್ದನಗಿರಿಯ ಬಯಲಲ್ಲಿ ಯುದ್ಧಕ್ಕೆ ನಿಂತಿತು. ಆದರೆ ಮಳೆರಾಜನಿಗೆ ದಂಡು ಎಲ್ಲಿಂದ ಬರಬೇಕು. ಮಳೆ ಹನಿಗಳೇ ಅವರ ದಂಡು. ಗುಡುಗು ಮಿಂಚು ಸಿಡಿಲುಗಳೇ ಅವರ ಅಯುಧಗಳು. ದಂಡು ಮಳೆಯ ಹೊಡೆತಕ್ಕೆ ಸೋತು ಪಲಾಯನ ಮಾಡಿತು. ಇದನ್ನು ನೋಡಿ ಅರಸನು ಇವರು ಮಹತ್ವ ಪುರುಷರು ಎಂದು ತಿಳಿದು ಅವರ ಹತ್ತಿರ ಹೋಗಿ ನಿಮಗೆ ಮೆಚ್ಚಿದೆನು. ಏನು ಬೇಡುತ್ತೀರಿ ಬೇಡಿರಿ ಎಂದನು. ನಮ್ಮ ರಾಜ್ಯದಲ್ಲಿ ನಿಮ್ಮಂಥ ವಲಿಗಳು ಇರಬೇಕು ಎಂದು ಬೇಡಿಕೊಂಡನು. ಅದಕ್ಕೆ ಮಳೆರಾಜರು ಹಾಗಾದರೆ ನಾನು ಈ ಗುಡ್ಡದ ಮೇಲೆ ನೆಲೆಸುತ್ತೇನೆ. ನನ್ನ ನೆರಳು ಎಲ್ಲಿಯವರೆಗೆ ಬೀಳುವುದೋ ಅಲ್ಲಿಯವರೆಗೆ ಭೂಮಿಯನ್ನು ನನಗೆ ಕೊಡಬೇಕು ಎಂದನು. ಅದರಂತೆ ಅವರ ನೆರಳನ್ನು ಅಳೆದರೆ ನೂರು ಕೂರಿಗಿ ಆಯಿತು. ಅರಸನು ಆ ಭೂಮಿಯನ್ನು ಮಳೆರಾಜನ ಹೆಸರಿನಲ್ಲಿ ಮಾಡಿಸಿಕೊಟ್ಟು ಹೋದನು.

ಅಲ್ಲಿಂದ ಮುರನಾಳಿಗೆ ಬಂದು ಆ ಊರು ಗೌಡನ ಸ್ನೇಹ ಸಂಪಾದಿಸಿ ಅಲ್ಲಿ ಮಠ ಕಟ್ಟಿಸಿ ಜಾತ್ರೆ ಮಾಡಿ ತೇರು ಎಳೆಸಿದರು. ಪಾಲ್ಗುಣ ಶುದ್ಧ ನವಮಿಗೆ ಪ್ರತಿ ವರ್ಷ ಈಗಲೂ ಅಲ್ಲಿ ತೇರು ಎಳೆಯುವರು. ಆ ಊರಲ್ಲಿರುವಾಗ ಮಳೆರಾಜನೂ ಗೌಡನೂ ಕೂಡಿ ಒಂದು ದಿನ ಚದುರಂಗ ವಾಡುತ್ತ ಕುಳಿತಿದ್ದರು. ಗೌಡನು ತನ್ನ ಮನೆಯ ಮಾಳಿಗೆಯ ಮೇಲೆ ಕಡಲೆಯನ್ನು ಒಣಗಲು ಹಾಕಿ ಬಂದು ಆಡಲು ಕುಳಿತಿದ್ದನು. ಚದುರಂಗದಾಟ ನಡೆದಿರುವಾಗ ಮಳೆ ಅತಿ ರಭಸದಿಂದ ಬರತೊಡಗಿತು. ಗೌಡ ಮಾಳಿಗೆ ಮೇಲಿನ ಕಡಲೆಯನ್ನು ತೆಗೆಯಲಿಕ್ಕೆ ಮಳೆಪ್ಪಯ್ಯನ ಅಪ್ಪಣೆಯನ್ನು ಎರಡು ಮೂರು ಸಾರಿ ಕೇಳಿದ. ಅದಕ್ಕೆ ಮಳೆಪ್ಪಯ್ಯ ಆಟವನ್ನು ಮುಗಿಸಿ ಹೋಗೆಂದು ಹೇಳಿದರು. ಆಗ ಗೌಡ ಕಡಲೆ ಆಸೆ ಬಿಟ್ಟು ಸುಮ್ಮನೆ ಕುಳಿತ. ಮಳೆ ಹೆಚ್ಚಾಗಿ ಊರಿನ ಬೀದಿಗಳಲ್ಲೆಲ್ಲ ನೀರು ಹರಿಯತೊಡಗಿತು. ಮಳೆ ನಿಂತ ನಂತರ ಮಳೆಸ್ವಾಮಿಗಳು ಯಾಕೆ ಗೌಡ, ಬಹಳ ಅವಸರ ಮಾಡುತ್ತೀ ಮನೆಗೆ ಹೋಗೆಂದು ಹೋಳಿದರು. ಗೌಡ ಸ್ವಾಮೀ ಹೋಗಿ ಮಾಡುವುದೇನು ಇನ್ನೊಂದು ಆಟವಾಗಲಿ ಎಂದನು. ಸ್ವಾಮಿಗಳು ಹುಚ್ಚಾ, ಕತ್ತಲಾಗುತ್ತಿದೆ ಬೇಗ ಹೋಗಿ ಕಡಲೆಯನ್ನು ತುಂಬಿ ಬಿಡು ಎಂದು ಹೇಳಿದರು. ಆಗಲಿ ಎಂದು ಗೌಡ ಚಿಂತೆ ಮಾಡುತ್ತ ಬಂದು ಮಾಳಿಗೆ ಹತ್ತಿ ನೋಡುತ್ತಾನೆ ಗುಡಾರದ ಮೇಲಿನ ಕಡಲೆಗಳು ತೋಯದೆ ಹಾಗೇ ಇದ್ದವು. ಗೌಡನಿಗೆ ಚಿಂತೆ ದೂರಾಗಿ ಸಂತೋಷದಿಂದ ಕುಣಿದಾಡತೊಡಗಿದನು. ಮಳೆಪ್ಪಯ್ಯ ಸ್ವಾಮಿಯ ಮಹಿಮೆಯನ್ನು ಕೊಂಡಾಡತೊಡಗಿದನು೧೪.

ಇದು ಸಂಪ್ರದಾಯ ಶೈಲಿಯಲ್ಲಿ ಬರೆಯಲಾದ ಮಳೆ ಯಪ್ಪಯ್ಯನವರ ಜನನ ಮತ್ತು ಮಹೊಮೆಗಳ ಬಗೆಗಿನ ಕಥೆ. ಇಲ್ಲಿಯ ಪ್ರಸಂಗಗಳೆಲ್ಲ ಹೆಸರಿಗೆ ತಕ್ಕಂತೆ ಮಳೆಯಸುತ್ತಲೇ ನಡೆಯುತ್ತವೆ. ಅವರಿಗೆ ಮಳೆ ತರಿಸುವ ಸಿದ್ಧಿ ಸಾಧಿತವಾಗಿತ್ತು ಎಂಬುದಂತೂ ಇದರಿಂದ ಸಿದ್ಧವಾಗುತ್ತದೆ. ಮೌಖಿಕವಾಗಿ ಅವರ ಜೀವನದ ಬಗ್ಗೆ ಹೇಳುವ ವಿಷಯಗಳೂ ಇಷ್ಟೇ. ಇದಕ್ಕಿಂತ ಹೆಚ್ಚಿನ ಸಂಗತಿಗಳು ತಿಳಿದು ಬರುವುದಿಲ್ಲ. ಅವರ ಬಗ್ಗೆ ಯಾರೋ ಪುರಾಣ ಬರೆದಿದ್ದರೆಂದೂ, ಕೈ ಬರಹದ ಆ ಪ್ರತಿಯೂ ಡ್ಯಾಮಿನ ಹಿನ್ನೀರಿನಲ್ಲಿ ಮುರನಾಳ ಗ್ರಾಮ ಮುಳುಗಿದಾಗ ಅದು ಹೋಯಿತೆಂದು ವಿ.ಜಿ. ಮಹಾಪುರುಷ ಹೇಳಿದರು. ಇನ್ನು ಮಳೆಯಪ್ಪಯ್ಯನವರ ಬಗ್ಗೆ ಬೇರೆ ಬೇರೆ ಯವರು ವ್ಯಕ್ತ ಮಾಡಿರುವ ವಿಷಯಗಳನ್ನು ನೋಡೋಣ. ಬಸವರಾಜ ಹಲಗತ್ತಿಯವರ ಅಭಿಪ್ರಾಯ.

ಸೂಫಿಗಳ ಹಾಗೂ ಶರಣ, ಸಂತರ, ಸಿದ್ಧರ ದಟ್ಟ ಪ್ರಭಾವಕ್ಕೆ ಒಳಗಾಗಿ ರೂಪುಗೊಂಡ ಅನುಭಾವಿ ತಿಂಥಿಣಿಯ ಮೋನಪ್ಪಯ್ಯನವರ ಶಿಷ್ಯ ಪರಂಪರೆಯಲ್ಲಿ ಬಾಗಲಕೋಟ ಜಿಲ್ಲೆಯ ಮುರನಾಳದ ಹಾಗೂ ಗದ್ದನಕೇರಿಯ ಮೋನಪ್ಪಯ್ಯನವರು ಒಬ್ಬರು. ಈ ಮಠಗಳಿಗೆ ಹಿಂದೂ ಮುಸ್ಲಿಂ ಜನರು ಭಕ್ತರಿದ್ದಾರೆ. ಸೂಫಿ ಸಂತರ ಉರುಸುಗಳಲ್ಲಿ ಕಾಣುವಂತೆ ಇಲ್ಲಿಯೂ ಮಜಾರ(ನೈವೇದ್ಯ), ಊದು ಹಾಕುವುದು, ಪರಾಕು ಹೇಳುವುದು ನಡೆಯುತ್ತದೆ. ಈ ಮಠದ ಪೀಠಸ್ಥರು ಇಂದಿಗೂ ಸೂಫಿ ಸಂತರ ಹಾಗೆ ಹಸಿರು ಪೇಟ ಹಾಗೂ ಶಿಲಾಮಣಿಗಳನ್ನು ಧರಿಸುತ್ತಾರೆ. ಸೂಫಿದರ್ವೇಶಿಗಳು ತಮ್ಮ ಅಂತರಿಕ ಶಕ್ತಿಯಿಂದ ಮಳೆಯನ್ನು ತರಿಸುವ ಪವಾಡಗಳನ್ನು ಮಾಡಿದಂತೆ ಮಳೆಯಪ್ಪನವರು ಜಿಲ್ಲೆಯಲ್ಲಿ ಬರಗಾಲ ಬಿದ್ದಾಗ ಮಳೆ ತರಿಸಿ ಈ ಭಾಗದ ಜನರು ಅನ್ನ ನೀರು ಕಾಣುವಂತೆ ಇವರೂ ಪವಾಡ ಮಾಡಿದ್ದಾರಂತೆ. ಹಿಂದೂ ಮುಸ್ಲಿಂ ಆಚರಣೆಗಳು, ಸಂಪ್ರದಾಯಗಳು, ಪದ್ಧತಿಗಳು ಈ ಮಠದ ಭಕ್ತರಲ್ಲಿವೆ.

ಹಲಗತ್ತಿಯವರು ಗದ್ದನಕೇರಿಯ ಮಳೆಯಪ್ಪಯ್ಯನವರನ್ನು ಮೋನಪ್ಪಯ್ಯ ಎಂದು ತಪ್ಪಾಗಿ ಭಾವಿಸಿದ್ದಾರೆ. ಸೂಫಿ ಸಂಪ್ರದಾಯಗಳನ್ನು ಅವರು ಗುರುತಿಸಿರುವುದು ಸರಿಯೇ. ಆದರೆ ದರ್ವೇಶಿ ಸೂಫಿಗಳೇ ಮೊದಲು ಮಳೆ ತರಿಸುವ ಕಾರ‍್ಯ ಮಾಡುತ್ತಿದ್ದರು. ಅವರಂತೆ ಮಳೆಯಪ್ಪನವರೂ (ಇಲ್ಲ ತಿದ್ದಿಕೊಂಡಿದ್ದಾರೆ) ಅವರ ಅನುಕರಣೆ ಎಂಬಂತೆ ಮಳೆ ತಿರಿಸುವ ಪವಾಡ ಮಾಡಿದ್ದಾರಂತೆ ಎಂದು ಹೇಳಿರುವುದನ್ನು ಒಪ್ಪಲಾಗದು. ಈ ಶಕ್ತಿ ಮೋನಪ್ಪಯ್ಯನವರಲ್ಲಿತ್ತು. ಅದು ಶಿಷ್ಯಪರಂಪರೆಯಲ್ಲಿ ಉಳಿದು ಬೆಳೆದು ಬಂದಿದೆ. ದೇಶ ಸೇವೆಯ ಒಂದು ಕರ್ತವ್ಯವೆಂಬಂತೆ ಅದನ್ನು ತಪಶ್ಯಕ್ತಿಯಿಂದ ಸಿದ್ಧಿಸಿಕೊಂಡವರು ಮಳೆಯಪ್ಪಯ್ಯನವರು.

ತಿಂಥಿಣಿ ಮೋನಪ್ಪಯ್ಯನವರು ದೇಶ ಸಂಚಾರ ಮಾಡುತ್ತ ದೇವದುರ್ಗ, ಲಿಂಗನ ಬಂಡಿ ಮುಂತಾದ ಜನರ ಅಪೇಕ್ಷೆಯ ಮೇರೆಗೆ ಮಳೆ ತರಿಸಿದರೆಂಬುದು ಪ್ರಸಿದ್ಧವಾಗಿದೆ. ತಮ್ಮ ವಚನಗಳಲ್ಲಿ ಮಳೆ ಲಿಂಗ, ಬೆಳೆ ಲಿಂಗವೆಂದು ಕರೆಯುವ ಮೂಲಕ ಮಳೆಯಲ್ಲಿ ದೈವತ್ವವನ್ನು ಕಂಡಿದ್ದಾರೆ ಮೋನಪ್ಪಯ್ಯ.

ಐನೂರು ಕೋಟಿ ಯೋಜನಕೆ ಕೌಲು ಬಂದಾವು
ದೀನ ಸಯ್ಯದ್ ಮಹಮ್ಮದನೆ ಸಲಹೆಂಬ ಸಮಯಕ್ಕೆ
ಕೌದಿಯ ಬೀಸಿ ಮಳೆ ಕರೆದ ಬಸವಣ್ಣ

ಹೀಗೆ ಮಳೆಗಾಗಿ ಜನರಿಂದ ಬೇಡಿಕೆ ಬಂದದ್ದರಿಂದ ಕೌದಿಯನ್ನು ಬೀಸಿ ಮಳೆ ಕರೆದ ಸಂದರ್ಭವನ್ನು ಮೋನಪ್ಪಯ್ಯ ತಮ್ಮ ವಚನದಲ್ಲಿ ಹೇಳಿದ್ದಾರೆ. ಅವರಿಗೆ ಮಹಮ್ಮದನು ಒಂದೆ ಅಲ್ಲಮನು ಒಂದೇ, ಅವರು ಸರ್ವಶಕ್ತ ಪರಮಾತ್ಮನ ಸಂಕೇತ. ಆತನನ್ನೇ ಮಳೆಗಾಗಿ ಬೇಡುವುದು ಸರಿಯಷ್ಟೆ. ಮಳೆಗಾಗಿ ಬೇಡುವುದು ಇಂದು ನಿನ್ನೆಯದಲ್ಲ. ವೇದಗಳ ಕಾಲದಿಂದಲೂ ಸಸ್ಯಧಾನ್ಯಗಳ ಸಮೃದ್ಧಿಗೆ ಕಾರಣ ಕರ್ತನಾದ ವರುಣದೇವನನ್ನು ಪ್ರಾರ್ಥಿಸುವುದು ಕಂಡುಬರುತ್ತದೆ. ಮಳೆಗಾಗಿ ಮಾಡುವ ಸರ್ಜನ್ಯ ಹೋಮ ಅಂದಿನಿಂದ ಇಂದಿನವರೆಗೂ ಪ್ರಚಾರದಲ್ಲಿದೆ.

ಪಿ.ವೈ. ಗಿರಿಸಾಗರ ಅವರ ಕೆಲವು ವಿಚಾರಗಳು ಹೀಗಿವೆ : ತಿಂಥಿಣಿ ಮೋನಪ್ಪಯ್ಯನ ಅಚಲ ಭಕ್ತನಾದ ಉಕ್ಕಲಿಯಲ್ಲಿ ಜನಿಸಿದ ಮೋನಪ್ಪಯ್ಯ ಈ ಮಠದ ಸ್ಥಾಪಕ ಎಂದು ಪ್ರತೀತಿ. ಇವನು ಮಳೆಯರಾಜನನ್ನು ವಶೀಕರಣ ಮಾಡಿಕೊಂಡ ಎಂಬ ಹೆಗ್ಗಳಿಕೆ ಇದೆ… ಮಳೆಯಿಂದ ತನ್ನ ಸೈನ್ಯವನ್ನು ಸೋಲಿಸಿದ ಮೋನಪ್ಪಯ್ಯನಿಗೆ ಬಾದಶಾ ಮೆಚ್ಚಿ ಏಕ್‍ಲಾಖ್ ಐಸಿ ಹಜಾರ್…. ಎಂಬ ಬಿರುದನ್ನು ದಯಪಾಲಿಸಿದ. ಈ ಬಿರುದನ್ನು ಪ್ರತಿ ವರ್ಷ ಜಾತ್ರೆಯಲ್ಲಿ ಅವರ ಗದ್ದುಗೆಗೆ ಉಗ್ಗಳಿಸುತ್ತಾರೆ. ಇವರ ಕಾಲವನ್ನು ಖಚಿತವಾಗಿ ಹೇಳಲಿಕ್ಕಾಗದು. ಅವರ ಮಗನಾದ ಮಳಿಯಪ್ಪಯ್ಯ ಮಹಾಜ್ಞಾನಿಯಾಗಿದ್ದ…. ಮುಂದೆ ಅವರ ಮಗ ಅಖಂಡಪ್ಪ ಮಹಾಸಿದ್ಧಿ ಪುರುಷನೆಂದೂ, ಮಳೆಯನ್ನು ಅಜ್ಜನಂತೆ ವಶಪಡಿಸಿಕೊಂಡಿದ್ದಾನೆಂದೂ ಹೇಳುತ್ತಾರೆ. ಅದನ್ನು ಕಂಡು ಆ ಕಾಲದ ಜನ ಅವರಿಗೆ ಹರಿವ ಹಾವಿನ ಗಂಡ, ಉರಿವ ಕಿಚ್ಚಿನ ಗಂಡ, ಹಿಂಡು ದೇವರ ಗಂಡ, ಪುಂಡ ಮಳೆರಾಯ ಎಂಬ ಬಿರುದನ್ನು ಅವರ ಗದ್ದುಗೆಗೆ ಉಗ್ಗಳಿಸುವುದು ಅವರ ಸಿದ್ದಿಯ ಪ್ರತೀಕವೆಂದು ಹೇಳಬಹುದು೧೬.

ಗಿರಿಸಾಗರ ಅವರ ಪ್ರಕಾರ ತಿಂಥಿಣಿ ಮೋನಪ್ಪಯ್ಯನ ಭಕ್ತನಾದ ಉಕ್ಕಲಿಯ ಮೋನಪ್ಪಯ್ಯ ಈ ಮಠದ ಸ್ಥಾಪಕ, ಈತ ಮಳೆಯರಾಜನನ್ನು ವಶೀಕರಣ ಮಾಡಿಕೊಂಡಿದ್ದ ಎಂಬುದು, ಅವರ ಮಗ ಮಳಿಯಪ್ಪಯ್ಯ ಎಂಬುದು ಈ ಎರಡೂ ಸಿಕ್ಕಿರುವ ಆಧಾರಗಳ ಮೇಲಿಂದ ಅದಲು ಬದಲಾಗಬೇಕು. ಗದ್ದನಕೇರಿಯ ಮಠದ ಸ್ಥಾಪಕ ಮಳೆಯಪ್ಪಯ್ಯ ಆತನ ಮಗ ಮೋನಪ್ಪಯ್ಯ ಈ ಕ್ರಮ ಸರಿ. ಬಾದಶಹ ಈತನ ಮಳೆಯ ಪವಾಡಕ್ಕೆ ಮೆಚ್ಚಿ ಏಕಲಾಕ್ ಹಜಾರ್…. ಚಿರುದನ್ನಿ ದಯಪಾಲಿಸಿದ ಎಂಬುದು ಈತನ ಬಿರುದಲ್ಲ. ಮೊದಲನೆ ಆದಿಲ್‍ಶಾಹಿ ಬಾದಶಹನೇ ಮೌನೇಶ್ವರರಿಂದ ಪ್ರಭಾವಿತನಾಗಿ ಅವರನ್ನು ಗುರುವೆಂದೂ, ಪೈಗಂಬರರಿಗೆ ಸಮಾನರೆಂದೂ ಕೊಟ್ಟ ಗೌರವ ಬಿರುದು, ಮಂತ್ರದಂತೆ ತಿಂಥಿಣಿಯಲ್ಲೂ ಘೋಷಣೆಯಾಗುತ್ತದೆ. ಮತ್ತು ಅವರ ಶಿಷ್ಯ ಪರಂಪರೆಯ ಮಠಗಳಲ್ಲೂ ಘೋಷಣೆಯಾಗುತ್ತದೆ. ಅದೇ ಪರಂಪರೆಯ ಗದ್ದನಕೇರಿಯ ಮಳೆಯಪ್ಪಯ್ಯನವರ ಮಠದಲ್ಲೂ ಆ ಮಂತ್ರ ಘೋಷಣೆ ಕೇಳಿ ಬಂದರೆ ಆಶ್ಚರ್ಯವಿಲ್ಲ.

ಮಳೆಯಪ್ಪಯ್ಯನವರ ಬಗ್ಗೆ ರಹಮತ್ ತರೀಕೆರೆಯವರು ಕೊಟ್ಟಿರುವ ವಿವರಗಳು, ಸಂಶೋಧನಾತ್ಮಕವಾಗಿವೆ. ಹಂಪೆಯ ವಿರೂಪಾಕ್ಷ ಪಂಡಿತನ ಚೆನ್ನಬಸವ ಪುರಾಣ, ರಾಘವಾಂಕನ ಸಿದ್ಧರಾಮ ಚರಿತೆ ಮುಂತಾದ ಮೂಲಗಳಿಂದ ಮಳೆಯ ಮಲ್ಲೇಶ ಎಂಬ ಹೆಸರಿನ ಮೂಲಕ ಮಳೆಯಪ್ಪಯ್ಯನ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿದ್ದಾರೆ. ವಿರೂಪಾಕ್ಷ ಪಂಡಿತ ತನ್ನ ಗುರು ಪರಂಪರೆಯ ಆದಿ ಗುರುವಾದ ಮಳೆಯ ಮಲ್ಲೇಶನ ಬಗ್ಗೆ ಕೊಡುವ ವಿವರ ಕುತೂಹಲಕಾರಿಯಾಗಿದೆ.

ಪರ ಖಲಂದರರೇಳು ನೂರ್ವರ್ಗೆ ಗುರುವಗಿ
ಹರುಷದಿಂ ಮುಖ್ಯಕ್ಕೆ ಪೋಗಿ ಮಹಿಮೆಯ ತೋರಿ
ತುರುಕಾಣ್ಯದೊಳಗನಾವೃಷ್ಟಿ ದೋಷಮಂ ಬಂದು ಪರಿಹರಿಸಿ ಪವಾಡದಿಂದಂ
ವರುಷಮಂ ಸುರಿಸಿ ಸುರತಾಳನಿಂ ಪೂಜೆಯಂ
ಧರಿಸಲಂದಂದಿತ್ತ ಮಳೆಯ ಮಲ್ಲೇಶ ನಾಮವನಾಂತನು ||-(೧೯)

ಇಲ್ಲಿಯ ಮುಖ್ಯ ಸಂಗತಿಗಳು : ೧. ಮಳೆಯ ಮಲ್ಲೇಶನು ಏಳು ನೂರು ಖಲಂದರರಿಗೆ (ದರವೇಶಿ ಸೂಫಿಗಳಿಗೆ) ಗುರುವಾಗುವುದು. ೨. ಮಕ್ಕಾಕ್ಕೆ ಹೋಗುವುದು ೩. ಬರಗಾಲ ಬಂದಾಗ ಮಳೆ ಸುರಿಸುವುದು ೪. ತನ್ನ ಮಳೆಯ ಪವಾಡದಿಂದ ಸುರತಾಳ (ಸುಲ್ತಾನ)ನಿಂದ ಪೂಜೆಯನ್ನು ಪಡೆದುಕೊಂಡು ಮಳೆಯ ಮಲ್ಲೇಶನೆಂಬ ನಾಮವನ್ನು ಪಡೆಯುವುದು.

ಉತ್ತರ ಕರ್ನಾಟಕದ ತುಂಬ ಈ ಹೆಸರಿನ ಅನೇಕ ಸಂತರಿದ್ದಾರೆ. ಬಾಗಲಕೋಟ ಸೀಮೆಯ ಒಂದು ಮುರನಾಳದ ಗದ್ದನಕೇರಿ ಬೆಟ್ಟಗಳ ಮೇಲೆ ಎರಡು ಬೃಹತ್ ದರಗಾಗಳಿವೆ. ಒಂದು ಮುರನಾಳದ ಮಳೆಯಪ್ಪಯ್ಯನ ಗದ್ದುಗೆ, ಇನ್ನೊಂದು ಮೋನಪ್ಪಯ್ಯನ ಗದ್ದಿಗೆ. ಮೋನಪ್ಪಯ್ಯ ತಿರುಗಾಡಿದ ಜಾಗಗಳಲ್ಲಿ ಗದ್ದನಕೇರಿಯೂ ಒಂದು. ಸ್ವತಃ ಮೋನಪ್ಪಯ್ಯ ಮಳೆಯ ಪವಾಡ ಮಾಡಿದ್ದಾನೆ. (ಮೋನಪ್ಪಯ್ಯ ಕೌದಿ ಬೀಸಿ ಮಳೆ ಕರೆದ ವಚನ ಉಲ್ಲೇಖಿತವಾಗಿದೆ) ಮಳೆಯಪ್ಪಯ್ಯನಿಗೂ ಯಾವ ಬಗೆಯ ಸಂಬಂಧವೊ ಸ್ಪಷ್ಟವಾಗುವುದಿಲ್ಲ. ಮಳೆ ಹೋದಾಗ ಈಗಲೂ ಕುರುಬರು ಕಂಬಳಿ ಬೀಸಿ ಮಳೆ ಬೇಡುವ ಆಚರಣೆಗಳಿವೆ. ಈ ನಂಬಿಕೆ ಮಾಡ್ಯಾಳದ ಅಮೋಘ ಸಿದ್ಧನ ಗುಡಿಯಲ್ಲೂ ಮಾನ್ವಿಯ ಸಬ್ಜಲಿ ಸಾಬನ ದರ್ಗಾದಲ್ಲಿಯೂ ಇದೆ. ಸೂಫಿಗಳೂ ಸಿದ್ಧನೂ ಒಂದೇ ಬಗೆಯ ಆಚರಣೆಗೆ ಕಾರಣರಾಗಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ನೂರಾರು ಮಳೆಪ್ಪಯ್ಯನ ಗುಡಿಗಳಿವೆ. ಬಿಜಾಪುರದ ಬೆಳ್ಳುಬ್ಬಿಯಲ್ಲಿ ಮಳೆಯ ಪ್ರಭುವಿನ ಸಮಾಧಿ ಇದೆ. ಮಳೆಪ್ಪಯ್ಯನ ಬಗ್ಗೆ ಸಿಗುವ ವಿವರಗಳೂ ವೈವಿಧ್ಯ. ಎಡೆಯೂರು ತೋಂಟದ ಸಿದ್ಧಲಿಂಗನ ೭೦೦ ಶಿಷ್ಯರಲ್ಲಿ ಒಬ್ಬ ಮಳೆಯ ದೇವನಿದ್ದಾನೆ. ಮಳೆಪ್ಪಯ್ಯ ಮಳೆಯ ಪ್ರಭು, ಮಳೆಯ ದೇವರು ಎಲ್ಲಾ ಒಬ್ಬನೇ ಅಥವಾ ಬೇರೆ ಬೇರೆಯೋ? ಚೆನ್ನಬಸವ ಪುರಾಣದ ನೂರೊಂದು ವಿರಕ್ತರಲ್ಲಿ ಬರುವ ತೇರದಾಳದ ಬಸವಪ್ರಭು, ರುದ್ರಮುನಿ ಸ್ವಾಮಿ, ಬೆಳೆಯೊಡೆಯ ಇವರು ಹಿಂದಿಲ್ಲೊಂದು ಬಗೆಯಲ್ಲಿ ಸೂಫೀಗಳ ಇಸ್ಲಾಮಿನ ಸಹವಾಸ ಕಂಡವರು.

ಸೊನ್ನಲಿಗೆ ಸಿದ್ಧರಾಮನು ತನ್ನ ವಚನದಲ್ಲಿ “ಗುರುವಾಕ್ಯದಿಂದ ಮಳೆಯ ಮಲ್ಲೇಶಂಗೆ ಪಾತಾಳ ಪದಾರ್ಥ ಸಿದ್ಧಿಯಾಯ್ತು” ಎಂದು ಮಳೆಯ ಮಲ್ಲೇಶನನ್ನು ಉಲ್ಲೇಖಿಸುತ್ತಾನೆ. ಯಾರೀ ಮಳೆಮಲ್ಲೇಶ? ಈ ಹೆಸರಿನ ಗುರು ಪರಂಪರೆ ೧೨ನೆ ಶತಮಾನದಿಂದಲೇ ಇದೆಯಾ? ಕೊಡೇಕಲ್ ಬಸವಣ್ಣನ ಜಾರಿತ್ರ‍್ಯ. ನಂದಿಯಾಗಮ ಲೀಲೆ ಹೇಳುವಂತೆ ಮಳೆಯ ಪ್ರಭುವಿಗೆ ಶಿವಸನ್ನಿಧಿಗೆ ಸೇರುವ ಬಯಕೆಯಾಯಿತೆಂದೂ, ಕೋಡೆಕಲ್ ಬಸವಣ್ಣ ಅವನಿಗೆ ಅದನ್ನು ತೋರಿಸಿದನೆಂದೂ ಉಲ್ಲೇಖವಿದೆ. “ಗುರುವಾಕ್ಯದಿಂದ……” ಪಡೆದ ಮಳೆಯ ಮಲ್ಲೇಶ (ಸಿದ್ಧರಾಮ ಹೇಳುವ) ಈತನೇ? ಇದು ಶೋಧ ಆಗಬೇಕು.

ಒಟ್ಟಿನಲ್ಲಿ ಯಾರೋ ಒಬ್ಬ ಮಳೆಯ ಮಲ್ಲೇಶ ಸೂಫೀ ಪ್ರಭಾವಕ್ಕೆ ಬಂದವನು. ಜತೆಗೆ ಚೆನ್ನಬಸವ ಪುರಾಣ ಹೇಳುವಂತೆ ೭೦೦ ಖಲಂದರರಿಗೆ ಗುರುವಾದವನು. ಈ ಕಾರಣದಿಂದೇ ಅವನು ತಿಂಥಿಣಿ ಮೋನಪ್ಪಯ್ಯನಿಗೆ ಲಗತ್ತಾಗಿರಬೇಕು.

ಈಗಲೂ ಗದ್ದನಕೇರಿಯ ಮಳೆಪ್ಪಯ್ಯನ ದರಗಾದೊಳಗೆ ಮೊಹರಂ ದೇವರುಗಳಿವೆ…….. ಈ ದರಗಾವನ್ನು ಆದಿಲ್‍ಶಾಹನು ಕಟ್ಟಿಸಿದ್ದಕ್ಕೆ ಮಳೆಪ್ಪಯ್ಯನು ಅವನ ಸೈನ್ಯವನ್ನು ಮಳೆಯಿಂದ ಸೋಲಿಸಿದ್ದಕ್ಕೆ ಶರಣಾಗಿ ಹಳ್ಳಿಗಳನ್ನು ಮತ್ತಿತರ ವಸ್ತುಗಳನ್ನು ಇನಾಮಾಗಿ ಕೊಟ್ಟು ಗೌರವಿಸಿದ ಕಥೆ ಪ್ರಚಾರದಲ್ಲಿವೆ. ಪ್ರಭುತ್ವದೊಡನೆ ಸಂಘರ್ಷದ ಕಥೆ ಹಲವಾರಿದೆ. ಪ್ರಭುತ್ವವನ್ನು ಸೋಲಿಸಿ ಭಕ್ತರನ್ನಾಗಿಸುವ ಸಂದರ್ಭಗಳೂ ಇವೆ೧೭.

ರಹಮತ್ ತರೀಕೆರೆಯವರ ಪರಿಶೀಲನೆಗಳನ್ನು ಮರುಚಿಂತನೆಗೆ ಒಳಪಡಿಸಿ ನೋಡುವುದು ಉಪಯುಕ್ತವಾಗುತ್ತದೆ. ಅವರು ಮಳೆಯ ಮಲ್ಲೇಶನ ಸುತ್ತ ಅಧ್ಯಯನ ಮಾಡಿರುವುದು ಅದನ್ನು ಗದ್ದನಕೇರಿಯ ಮಳೆಯ ರಾಜೇಂದ್ರನಿಗೆ ಅನ್ವಯಿಸಿರುವುದು ಬಹಳ ಮುಖ್ಯವಾದ ಸಂಗತಿ. ಮಳೆಯ ಮಲ್ಲೇಶನ ಆತ ಪ್ರಾಚೀನ ಉಲ್ಲೇಖ ೧೨ನೆ ಶತಮಾನದ ಸಿದ್ಧರಾಮನ ವಚನದಲ್ಲಿದೆ. ಆ ಮಳೆಯ ಮಲ್ಲೇಶ ಗುರುವಾಕ್ಯದಿಂದ ಪಾತಾಳ ಪದಾರ್ಥಗಳನ್ನು ಸಿದ್ಧಿಮಾಡಿಕೊಂಡವನು. ಅದರಲ್ಲಿ ಮಳೆ ತರಿಸುವ ಪ್ರಸ್ತಾಪವಿಲ್ಲ. ಆದರೆ ಆ ಹೆಸರಿನ ಆಧಾರದ ಮೇಲೆ ಮಳೆಯನ್ನು ತರಿಸುವ ವಿಶೇಷ ಶಕ್ತಿಯನ್ನು ಹೊಂದಿದ್ದ ಒಬ್ಬ ಶರಣ ಬಸವ ಪೂರ್ವ ಯುಗದಲ್ಲಿದ್ದ ಎಂಬುದು ಇದರಿಂದ ಖಾತ್ರಿಯಾಗುತ್ತದೆ. ಉಳಿದಂತೆ ವಿರುಪಾಕ್ಷ ಪಂಡಿತನು ಹೇಳುವ ಮಳೆಯ ಮಲ್ಲೇಶನ ಲಕ್ಷಣಗಳಿಗೆ ಆತನು ಹೊಂದುವುದಿಲ್ಲ. ಏಕೆಂದರೆ ಅಷ್ಟು ಹಿಂದೆ ದಕ್ಷಿಣ ಭಾರತದಲ್ಲಿ ಸುರತಾಳರ (ಮುಸ್ಲಿಂ ರಾಜರ) ಆಳ್ವಿಕೆಯಾಗಲೀ, ಸೂಫಿಸಂತ ಖಲಂದರರು ಧಾರ್ಮಿಕ ಭೂಮಿಕೆಯಲ್ಲಿ ಪ್ರವೇಶಿಸಿರಲಿಲ್ಲ. ಮಾನವನ ಮೂಲಭೂತವಾದ ಬೇಡಿಕೆಯಾದ ಮಳೆ ತರಿಸುವ ಪರಂಪರೆ ಬಸವಪೂರ್ವ ಯುಗದಿಂದಲೂ ಇದ್ದುದರ ಬಗ್ಗೆ ಸಿದ್ಧರಾಮನ ವಚನ ಬೆಳಕು ಬೀರುತ್ತದೆ. ಆದ್ದರಿಂದ ಆ ಮಳೆಯ ಮಲ್ಲೇಶ ವಿರುಪಾಕ್ಷ ಪಂಡಿತನ ಕಾಲದ ಮಳೆಯ ಮಲ್ಲೇಶನಿಗಿಂತ ಭಿನ್ನನಾದವನು ಮತ್ತು ಬಹಳ ಹಿಂದೆ ಇದ್ದವನು.

ಇನ್ನು ಚೆನ್ನಬಸವ ಪುರಾಣದಲ್ಲಿ ಪ್ರಶಂಸಿತನಾದ ಮಳೆಯ ಮಲ್ಲೇಶ ಸುರತಾಳರ ಕಾಲದಲ್ಲಿದ್ದು ಸುಲ್ತಾನನಿಂದ (ಬಹುಶಃ ಬಿಜಾಪುರದ ಆದಿಲ್‍ಶಾಹಿ ಸುಲ್ತಾನನಿಂದ) ಪೂಜಿತನಾಗಿದ್ದು ಅದೂ ಮಳೆಯ ಪವಾಡದಿಂದ ಏಳುನೂರು ಸೂಫಿಪಂಥದ ಶಿಷ್ಯರನ್ನು ಪಡೆದದದ್ದು ಅದ್ಭುತ ಸಾಧನೆಯಾಗಿದೆ. ಗದ್ದನಕೇರಿಯ ಮಳೆಯ ರಾಜ ಅಥವಾ ಮಳೆಪ್ಪಯ್ಯನ ಜೀವನವನ್ನು ಹಿಂದೇ ಉಲ್ಲೇಖಿಸಿದಂತೆ ಪರಿಶೀಲಿಸಿದರೆ ಈ ವಿವರಗಳೆಲ್ಲ ಸರಿಯಾಗ ಹೊಂದುತ್ತವೆ. ಅದರ ಜೊತೆಗೆ ಏಳುನೂರು ಖಲಂದರರನ್ನು ಶಿಷ್ಯರನ್ನಾಗಿ ಪಡೆದದ್ದು ಒಂದು ಹೆಚ್ಚಿನ ಅಂಶವಾಗಿದೆ. ಮಳೆಯಪ್ಪಯ್ಯನ ಸೂಫಿಕರಣದ ಅಂಶಗಳನ್ನು ಅಲ್ಲಿ ನಡೆಯುತ್ತಾ ಬಂದಿರುವ ಸಂಪ್ರದಾಯಗಳ ಆಧಾರದ ಮೇಲೆ ಸ್ವೀಕರಿಸಬೇಕಾಗುತ್ತದೆ.

ಚನ್ನಬಸವ ಪುರಾಣದ ಮಳೆಯ ಮಲ್ಲೇಶನ ಆಧಾರದಿಂದ ಗದ್ದನಕೇರಿಯ ಮಳೆಪ್ಪಯ್ಯನ ಕಾಲವನ್ನು ನಿಗದಿ ಮಾಡಬಹುದು. ಅದನ್ನು ಮುಂದೆ ನೋಡಬಹುದು. ಗದ್ದನಕೇರಿಯ ಎರಡು ಬೃಹತ್ ದರ್ಗಾಗಳಲ್ಲಿ, ಒಂದು ಮುರನಾಳದ ಮಳೆಪ್ಪಯ್ಯನ ಗದ್ದಿಗೆ, ಇನ್ನೊಂದು ಮೋನಪ್ಪಯ್ಯನ ಗದ್ದಿಗೆ ಎಂದು ಹೇಳಿರುವ ತರೀಕೆರೆಯವರು ಮಳೆಪ್ಪಯ್ಯನಿಗೂ, ಮೋನಪ್ಪಯ್ಯನಿಗೂ ಯಾವ ಬಗೆಯ ಸಂಬಂಧವೋ ಸ್ಪಷ್ಟವಾಗುವುದಿಲ್ಲ ಎಂದಿದ್ದಾರೆ. ಅದು, ಮಳೆಪ್ಪಯ್ಯನ ಮಗನಾದ ಮೋನಪ್ಪಯ್ಯನ ಗದ್ದಿಗೆ ಎಂಬುದು ಸ್ಥಳೀಯರ ಮತ್ತು ಮಠದವರ ಹೇಳುವಿಕೆಯಿಂದ ಸ್ಪಷ್ಟವಾಗುತ್ತದೆ. ಮಳೆಪ್ಪಯ್ಯ, ತಿಂಥಿಣಿ ಮೋನಪ್ಪಯ್ಯನ ಪ್ರಶೀಷ್ಯನಾಗಿರುವುದರಿಂದ ಪೂಜ್ಯತೆಯ ಭಾವವನ್ನು ಹೊಂದಿರುವುದರಿಂದ ತನ್ನ ಮಗನಿಗೆ, ಆ ಮಹಾ ಗುರುವಿನ ಹೆಸರನ್ನು ಇಟ್ಟಿರುವುದು ಅಚ್ಚರಿಯಲ್ಲ. ಅಥವಾ ತರೀಕೆರೆಯವರೇ ಹೇಳುವಂತೆ ತಿಂಥಿಣಿ ಮೋನಪ್ಪಯ್ಯ ತನ್ನ ಸಂಚಾರದಲ್ಲಿ, ಗದ್ದನಕೇರಿಗೂ ಬಂದು ಹೋಗಿರುವುದರಿಂದ ಬೇರೆ ಕಡೆಗಳಲ್ಲಿ ಅದರ ಕುರುಹಾಗಿ ದರ್ಗಾಗಳನ್ನು ಕಟ್ಟಿಸಿರುವಂತೆ ಇಲ್ಲಿಯೂ ಕಟ್ಟಿಸಿರುವ ಸಾಧ್ಯತೆ ಇದೆ.

ಉತ್ತರ ಕರ್ನಾಟಕದಲ್ಲಿ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ, ನೂರಾರು ಮಳೆಪ್ಪಯ್ಯನ ಗುಡಿಗಳಿರುವುದು ನಿಜ. ಅಲ್ಲೆಲ್ಲಾ ಗದ್ದನಕೇರಿಯ ಮಳೆಪ್ಪಯ್ಯನು ಜನರ ಬೇಡಿಕೆಯಂತೆ ಹೋಗಿ ಮಳೆ ತರಿಸಿರುವ ಕುರುಹಾಗಿ ಆತನ ನೆನಪಿಗೆ ಆ ಗುಡಿಗಳನ್ನು ಕಟ್ಟಿಸಲಾಗಿದೆ ಎಂದು ನಂಬಬಹುದು.

ಎಡೆಯೂರು ತೋಂಟದ ಸಿದ್ಧಲಿಂಗನ ಏಳುನೂರು ಶಿಷ್ಯರಲ್ಲಿ ಒಬ್ಬ ಮಳೆಯ ದೇವನಿದ್ದಾನೆ ಎಂದು ತರೀಕೆರೆಯವರು ಗುರುತಿಸಿದ್ದಾರೆ. ಆದರೆ, ಗುರು-ಶಿಷ್ಯ ಪರಂಪರೆಯ ದೃಷ್ಟಿಯಿಂದಲೂ ಕಾಲಮಾನದ ದೃಷ್ಟಿಯಿಂದಲೂ ಆತನು ಗದ್ದನಕೇರಿಯ ಮಳೆಪ್ಪಯ್ಯನಿಗಿಂತ ಭಿನ್ನನಾದವನು ಎಂದು ಹೇಳಬಹುದು. ಕೋಡೆಕಲ್ ಬಸವಣ್ಣನ ಚರಿತ್ರೆ ನಂದಿ ಆಗಮ ಲೀಲೆ’ ಹೇಳುವಂತೆ, ಕೋಡೆಕಲ್ ಬಸವಣ್ಣನು ತನ್ನ ಶಿಷ್ಯ ಮಳೆಯ ಪ್ರಭುವಿಗೆ ಶಿವಸನ್ನಿಧಿಯನ್ನು ಅಥವಾ ಕೈಲಾಸವನ್ನು ಆತನ ಬಯಕೆಯಂತೆ ತೋರಿಸಿದನೆಂಬ ಉಲ್ಲೇಖವಿದೆ. ಇದು, ಮೌನೇಶನು ತನ್ನ ಶಿಷ್ಯ ಗಂಗಪ್ಪಯ್ಯನಿಗೆ ಕೈಲಾಸವನ್ನು ತೋರಿಸಿದ ಪ್ರಸಂಗವನ್ನು ನೆನಪಿಸುತ್ತದೆ. ಮೌನೇಶ್ವರ ಮತ್ತು ಕೋಡೆಕಲ್ ಬಸವಣ್ಣ, ಒಂದೇ ಸಂಪ್ರದಾಯದವರಾಗಿದ್ದು ಮತ್ತು ಸಮಕಾಲೀನರಾಗಿದ್ದು, ಈ ಪ್ರಸಂಗವನ್ನು, ಮಳೆಯ ಪ್ರಭುವಿಗೆ ಜೋಡಿಸಲಾಗಿದೆ ಎನ್ನಬಹುದು. ಕೈಲಾಸವನ್ನು ತೋರಿಸುವುದು ಎಂದರೆ ಪರಲೋಕ  ಮತ್ತು ಪಾರಮಾರ್ಥದ ಚಿಂತನೆಯೆಂದೇ ನಾವು ಸ್ವೀಕರಿಸಬೇಕಾಗುತ್ತದೆ ಎಂಬುದನ್ನು ಹಿಂದೆಯೇ ವಿವರಿಸಲಾಗಿದೆ.

ಮಳೆಪ್ಪಯ್ಯ, ಮಳೆಯ ಪ್ರಭು, ಮಳೆಯ ದೇವು ಎಂಬುವವರು ಒಬ್ಬನೋ ಅಥವಾ ಬೇರೆ ಬೇರೆಯವರೋ ಎಂಬ ಅನುಮಾನವನ್ನು ತರೀಕೆರೆಯವರು ವ್ಯಕ್ತಪಡಿಸಿದ್ದಾರೆ. ಆದರೆ ಇವೆಲ್ಲಾ ಹೆಸರುಗಳು ಗದ್ದನಕೇರಿಯ ಮಳೆಪ್ಪಯ್ಯನವರಿಗೆ ಅನ್ವಯಿಸುತ್ತವೆ. ಅವರನ್ನು ಮಳೆಯ ಪ್ರಭು, ಮಳೆಯಸ್ವಾಮಿ, ಮಳೆಯ ದೇವರು. ಮಳೆಯ ರಾಜ, ಮಳೆಯ ರಾಜೇಂದ್ರ, ಮಳೆಯ ದೇವ ಮುಂತಾದ ಹೆಸರುಗಳಲ್ಲಿ ಕರೆಯಲಾಗಿದೆ. ಆದ್ದರಿಂದ ಆ ಕಾಲದ ಅತ್ಯಂತ ಮಹಿಮಾಶಾಲಿಯಾದ ಮಳೆಯಪ್ಪಯ್ಯನನ್ನು ಬಗೆ ಬಗೆಗಳಿಂದ ಬಣ್ಣಿಸಿರುವುದು ಆಶ್ಚರ್ಯವಲ್ಲ. ಇದರ ಜೊತೆಗೆ ಮಳೆಯ ಮಲ್ಲೇಶ ಎಂಬ ಇನ್ನೊಂದು ಹೆಸರು ಇವರಿಗೆ ಅನ್ವಯವಾಗುತ್ತದೆ ಎಂದು ಹೇಳಬಹುದು. ಈ ಹೆಸರು ಬಹಳ ಹಿಂದಿನ ಕಾಲದಿಂದ ಬಂದ ಮಳೆಯ ಮಲ್ಲೇಶನ ಪರಂಪರೆಗೆ ಕೂಡ ಸರಿಹೊಂದುತ್ತದೆ. ಮಳೆ ಹೋದಾಗ ರೈತರು ಮಳೆ ಮಲ್ಲೇಶನನ್ನು ಪೂಜೆ ಮಾಡಿ ಬೇಡಿಕೊಳ್ಳುವುದು ಹಳ್ಳಿಯಲ್ಲಿ ಇಂದಿಗೂ ಪ್ರಚಲಿತವಾಗಿರುವ ಸಂಪ್ರದಾಯ.

ಹೀಗೆ ಒಟ್ಟಿನಲ್ಲಿ ತರೀಕರೆಯವರು ಅನೇಕ ವಿಚಾರಗಳಿಗೆ ಆಹಾರ ಒದಗಿಸಿದ್ದಾರೆ. ಅಂತಿಮವಾಗಿ ನಾವು ಈ ತೀರ್ಮಾನಗಳನ್ನು ಈ ಚರ್ಚೆಯಿಂದ ತೆಗೆದುಕೊಳ್ಳಬಹುದು.

೧. ಬಸವಪೂರ್ವ ಯುಗದಲ್ಲಿ ಒಬ್ಬ ಮಳೆಯ ಮಲ್ಲೇಶನಿದ್ದ. ಆತನು ಮಳೆ ತರಿಸುವ ಸಂಪ್ರದಾಯಕ್ಕೆ ಸೇರಿದವನೂ, ಮಹಮಾನ್ವಿತನೂ ಆಗಿದ್ದನೆಂದು ಭಾವಿಸಬಹುದು.

೨. ಚೆನ್ನಬಸವ ಪುರಾಣ ಹೇಳುವ ಮಳೆಯ ಮಲ್ಲೇಶನೂ ಗದ್ದನಕೇರಿಯ ಮಳೆಯಪ್ಪನೂ ಒಬ್ಬನೇ ಎಂದು ಊಹಿಸಲು ಸಾಧ್ಯವಿದೆ.

೩. ತಿಂಥಿಣಿ ಮೋನಪ್ಪಯ್ಯನು ಮಳೆ ತರಿಸುವ ಅನೇಕ ಪವಾಡಗಳನ್ನು ಮಾಡಿದ್ದು ಅದೇ ಪರಂಪರೆಯನ್ನು ಆತನ ಶಿಷ್ಯ ಗಂಗಪ್ಪಯ್ಯ ಮತ್ತು ಗಂಗಪ್ಪಯ್ಯನ ಶಿಷ್ಯ ಮಳೆಯಪ್ಪಯ್ಯ ಇವರೂ ಅನುಸರಿಸಿದ್ದಾರೆ.

೪. ಗದ್ದನಕೇರಿಯಲ್ಲಿ ಇರುವ ಗದ್ದಿಗೆಗಳು ಒಂದು ಮಳೆಯಪ್ಪಯ್ಯನವರದು, ಇನ್ನೊಂದು ಆತನ ಮಗ ಮೋನಪ್ಪಯ್ಯನವರದು. ಈ ಮೋನಪ್ಪಯ್ಯ ತಿಂಥಿಣಿ ಮೋನಪ್ಪಯ್ಯನಿಗಿಂತ ವಿಭಿನ್ನ.

೫. ಕೋಡೆಕಲ್ ಬಸವಣ್ಣ, ತಿಂಥಿಣಿ ಮೋನಪ್ಪಯ್ಯನವರಿಂದ ಪ್ರಾರಂಭವಾದ ಹಿಂದೂ ಮುಸ್ಲಿಂ ಸಾಮರಸ್ಯದ ಒಂದು ವಿಶಾಲ ಪಂಥವನ್ನು ಶ್ರದ್ಧೆಯಿಂದ ಪ್ರಸಾರ ಮಡುವುದರಲ್ಲಿ ಮಳೆಯಪ್ಪಯ್ಯ ಶ್ರಮಿಸಿದ್ದಾರೆ. ಸೂಫೀ ಅಂಶಗಳನ್ನು ತಮ್ಮ ಧರ್ಮಾಚರಣೆಗಳಲ್ಲಿ ಸೇರಿಸಿಕೊಂಡು ಸೂಫಿಗಳಿಗೆ ಆತ್ಮೀಯರಾಗಿ ಅಸಂಖ್ಯ ಖಲಂದರರಿಗೆ ಇವರು ಗುರುವಾಗಿದ್ದಾರೆ.

೬. ಮಳೆಯ ಪವಾಡವನ್ನು ಮಾಡಿ ಬಾದಶಹನ ಸೈನ್ಯವನ್ನು ಸೋಲಿಸಿ ಬಾದಶಹನ ಗೌರವಕ್ಕೆ ಪಾತ್ರರಾಗಿ ಸನ್ಮಾನಿತರಾಗಿದ್ದಾರ. ಇದರ ಜೊತೆಗೆ ಅಪರಮಿತ ತಪಶ್ಯಕ್ತಿ, ವಿಶಾಲ ಮತಾತೀತವಾದ ಧಾರ್ಮಿಕ ನಿಲುವು, ಉನ್ನತ ಅನುಭಾವಿಕ ಸಿದ್ಧಿಗಳೂ ಸುಲ್ತಾನನ ಗೌರವಕ್ಕೆ ಕಾರಣವಾಗಿವೆ. ಆತನು ಭೂಮಿಯ ಇನಾಮು ಕೊಟ್ಟಿದ್ದಾನೆ. ಮಠ-ದರ್ಗಾಗಳನ್ನು ಕಟ್ಟಿಸಿಕೊಟ್ಟಿದ್ದಾನೆ. ಗುಲ್ಬರ್ಗಾದ ಬಹುಮನಿ ಸುಲ್ತಾನರೂ, ಬಿಜಾಪುರದ ಆದಿಲ್‍ಶಾಹಿಗಳು ಇಂಥವರ ಪ್ರಭಾವದಿಂದ ದಖ್ಖನ್ ಪ್ರದೇಶದಲ್ಲೆಲ್ಲ ನೂರಾರು ದರ್ಗಾಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಪೋಷಣೆ ಒದಗಿಸಿದ್ದಾರೆ.

೭. ಮಳೆ ಮಲ್ಲೇಶ ಮತ್ತು ಮಳೆಯಪ್ಪ ಎಂಬ ಹೆಸರು ಭಿನ್ನವೆನಿಸುತ್ತವೆ. ಮೂಲ ಹೆಸರು ಮಲ್ಲೇಶ ಮಲ್ಲಯ್ಯ ಎಂದಿದ್ದು ಮಳೆಯಪ್ಪ ಎಂಬುದು ಅನ್ವರ್ಥಕವಾಗಿ ಬಂದ ಹೆಸರಾಗಿರಬಹುದು ಎಂದು ಊಹಿಸಬಹುದು. ಆಗಿನ ಕಾಲದಲ್ಲಿ ಮೂಲ ನಾಮವೇ ಹೆಚ್ಚಾಗಿ ಬಳಕೆಯಾಗುತ್ತಿದ್ದು ವಿರೂಪಾಕ್ಷ ಪಂಡಿತನು ಅದೇ ಹೆಸರಿನಲ್ಲಿ ಎಂದರೆ ಮಳೆಯ ಮಲ್ಲೇಶನೆಂದೇ ಬಳಸಿದ್ದಾನೆನಿಸುತ್ತದೆ. ಬರುಬರುತ್ತ ಅವರ ಅನ್ವರ್ಥನಾಮವೇ ಹೆಚ್ಚಾಗಿ ಬಳಕೆಯಾಗುತ್ತ ಮಳೆಪ್ಪಯ್ಯ ಎಂಬ ಹೆಸರೇ ಸ್ಥಿರವಾಗಿರಬೇಕು.

ಇಲ್ಲಿಗೆ ಈ ಚರ್ಚೆಯನ್ನು ಮುಗಿಸಿ ಇತರ ಆಕರಗಳನ್ನು ನೋಡಬಹುದು. ಬಿಜಾಪುರ ಜಿಲ್ಲೆಯ ತೊರೆಸಾಲ ಪರಗಣಿಯ ಕೊಲ್ಲಾರದಲ್ಲಿದ್ದ ಅದೃಶ್ಯ ಕವಿಯು ಪ್ರೌಢದೇವರಾಯನ ಕಾವ್ಯವನ್ನು ರಚಿಸಿದ್ದಾನೆ. ಮಳೆಯ ಮಲ್ಲೇಶನು ಆತನ ಮನೆತನದ ಗುರುವೆಂದು ಆ ಕಾವ್ಯದಿಂದ ತಿಳಿದುಬರುತ್ತದೆ. ಅದೃಶ್ಯಕವಿಯ ಕಾಲವನ್ನು ವಿದ್ವಾಂಸರು ೧೫೨೫ರಿಂದ ೧೫೭೪ ಎಂದು ನಿರ್ಧರಿಸಿದ್ದಾರೆ. ಮಳೆಯ ಮಲ್ಲೇಶನು ಆ ಕವಿಯ ಅಜ್ಜನ ಕಾಲದಿಂದಲೂ ಆ ಮನೆತನಕ್ಕೆ ಗುರುವಾಗಿದ್ದನೆಂದು ತಿಳಿದುಬರುತ್ತದೆ. ಕವಿಯ ಸಮಕಾಲೀನರಾದ ಸಿದ್ಧನಂಜೇಶ, ವಿರುಪಾಕ್ಷ ಪಂಡಿತರು ತಮ್ಮ ಗುರುವಿನ ಗುರುವಾದ ಮಳೆಯ ಮಲ್ಲೇಶನನ್ನು ನೆನೆದಿದ್ದಾರೆ. ವಿರೂಪಾಕ್ಷ ಆತನನ್ನು ನೆನೆದಿರುವ ಬಗೆಯನ್ನು ಹಿಂದೆ ನೋಡಲಾಗಿದೆ. ಆತನು ಆ ಕಾಲದ ಅತಿಮಹಿಮಾನ್ವಿತ ಗುರು ಎಂಬುದರಲ್ಲಿ ಸಂದೇಹವಿಲ್ಲ.

‘ದೇಸಾಯರ ಮನೆಯ ದೇವರ ಮಂಟಪದಲ್ಲಿ ಮಧ್ಯದಲ್ಲಿ ಸಂಗಮನಾಥ, ಬಲಗಡೆ ಮಲ್ಲೇಶ್ವರ, ಎಡಗಡೆ ಬನಶಂಕರಿದೇವಿ ಪೂಜೆಗೊಳ್ಳುತ್ತಿದ್ದಾರೆ. ಕುಲದೈವ ಸಂಗಮನಾಥನ ದೇವಾಲಯ ಉಪ್ಪಲದಿನ್ನಿಯಲ್ಲಿದೆ. ಕುಲಗುರು ಮಳೆಯ ಮಲ್ಲೇಶ್ವರರ ಗದ್ದುಗೆ ಬೆಳ್ಳುಬ್ಬಿಯಲ್ಲಿದೆ. ಅಲ್ಲಿ ಆ ಗುರು ಕುಳಿತು ಬೋಧಿಸುತ್ತಿದ್ದ ಕಟ್ಟೆಯೂ ಇದೆ೧೮.

ಮಳೆಯಪ್ಪಯ್ಯನವರ ಕುರುಹೀನ ಗದ್ದುಗೆ ಬೆಳ್ಳುಬ್ಬಿಯಲ್ಲಿರುವುದನ್ನು ತರೀಕೆರೆಯವರು ಗುರುತಿಸಿದ್ದಾರೆ. ಅದು ಮಳೆಯ ಮಲ್ಲೇಶನ ಗದ್ದುಗೆ ಎಂದು ಆರ್.ಜಿ. ಅಣ್ಣಾನವರು ಹೇಳಿದ್ದಾರೆ. ಇವು ಪರಸ್ಪರ ಹೊಂದಾಣಿಕೆಯಾಗುತ್ತವೆ. ಇದರಿಂದ ಮಳೆಯ ಮಲ್ಲೇಶ ಅಥವಾ ಮಳೆಯಪ್ಪಯ್ಯ ಒಂದು ಕಡೆ ಲಿಂಗವಂತರಿಗೂ ಇನ್ನೊಂದು ಕಡೆ ಸೂಫಿಗಳಿಗೂ ಮಹಾಗುರುವಾಗಿ ಪ್ರಸಿದ್ಧನಾಗಿದ್ದನೆಂದು ತಿಳಿದುಬರುತ್ತದೆ. ಸಿದ್ಧನಂಜೇಶ, ವಿರೂಪಾಕ್ಷ ಪಂಡಿತ ಅದೃಶ್ಯಕವಿಗಳಂಥ ಪ್ರಸಿದ್ಧ ಪ್ರತಿಭಾನ್ವಿತ ಕವಿಗಳು ಆ ಮಹಾಗುರು ಪರಂಪರೆಯ ಶಿಷ್ಯವರ್ಗವೆಂದರೆ ಅವರ ವ್ಯಕ್ತಿತ್ವದ ಉನ್ನತಿಯ ಬಗ್ಗೆ ಅಚ್ಚರಿಯುಂಟಾಗುತ್ತದೆ. ಆ ಗುರುವಿನ ವಿದ್ವತ್ತು ಎಷ್ಟು ಅಗಾಧವಾಗಿರಬೇಕು? ಆತನ ತಪಶ್ಯಕ್ತಿ ಎಷ್ಟಿರಬೇಕು? ಆತನ ಭಾಷಾ ಪಾಂಡಿತ್ಯ ಎಂಥದಿರಬೇಕು? ಆ ಕಾಲದಲ್ಲಿ ಮಕ್ಕಾಕೂ ಯಾತ್ರೆ ಮಾಡಿದ್ದ ಆ ಮಹನೀಯ ಧರ್ಮ ಸಾಮರಸ್ಯದ ಬಗ್ಗೆ ಎಷ್ಟು ತಲೆ ಕೆಡಿಸಿಕೊಂಡಿದ್ದ? ಬಾದಶಾಹನೆಂದಲೂ ಪೂಜಿತನಾದ ಆತನ ಗಿರಿಶಿಖರ ಸದೃತ ಮಹಿಮೆ ಎಷ್ಟಿರಬೇಕು?

ಹೀಗೆ ಯೋಚಿಸುತ್ತಾ ಹೋದರೆ ಮಳೆಯಪ್ಪಯ್ಯನವರ ಉನ್ನತ ಆಕೃತಿಯೊಂದು ನಮ್ಮ ಕಣ್ಣಮುಂದೆ ಬಂದ ಅನುಭವವಾಗುತ್ತದೆ.

ಅವರ ಜೀವನಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ವಿಷಯಗಳು ತಲೆತಲಾಂತರದಿಂದ ವಾಡಿಕೆಯಲ್ಲಿ ಉಳಿದು ಬಂದಂಥವುಗಳನ್ನು ಶ್ರೀ ವಿಶ್ವನಾಥ ಮಹಾಪುರುಷ ಇವರು ಮೌಖಿಕವಾಗಿ ತಿಳಿಸಿದ್ದಾರೆ. ಉಕ್ಕಲಿಯಲ್ಲಿ ಜನಿಸಿದ ಮಳೆಯಪ್ಪಯ್ಯ ಗುರುವಿಗಾಗಿ ಹುಡುಕುತ್ತ, ಗಂಗಪ್ಪಯ್ಯ ಗುರುಗಳನ್ನು ಪಡೆದು ವಿದ್ಯಾಸಾಧನೆಗಳನ್ನು ಮಾಡಿ, ಕೊನೆಗೆ ಬಾಗಲಕೋಟೆ ತಾಲೂಕಿನ ಮುರನಾಳದಲ್ಲಿ ನೆಲೆಸಿದರು. ಅಲ್ಲಿ ಅವರಿಗೆ ಸ್ನೇಹಿತರಾಗಿ ಆಶ್ರಯ ಕೊಟ್ಟವರು ಆ ಊರಿನ ಗೌಡರಾದ ಛಾಯಪ್ಪಗೌಡರು. ಒಣಹಾಕಿದ ಕಡಲೆ ತೋಯದಂಥ ಪವಾಡ ನಡೆದಿದ್ದೂ ಅಲ್ಲೇ. ಬಹುಶಃ ಅಲ್ಲಿರುವಾಗಲೇ ಅವರು ಮದುವೆ ಮಾಡಿಕೊಂಡಿರಬೇಕು. ಅವರ ಪತ್ನಿಯ ಹೆಸರು ತಿಪ್ಪಮ್ಮ. ಅವರ ತವರು ಮನೆ ಬೆಳಗಾಂ ಜಿಲ್ಲೆಯ ಬದಗಿ. ಅವರಿಗೆ ನಾಲ್ಕೈದು ಮಕ್ಕಳಾದರಂತೆ. ಗೌಡರ ಹುಡೇದ ಮೇಲೆ ಅವರ ವಾಸ, ಭಿಕ್ಷಾಟನೆ ಮಾಡಿ ಸಂಗ್ರಹಿಸಿದ ಜೋಳದ ಹಿಟ್ಟಿನಲ್ಲಿ ಯಾವ ಯಾವುವೋ ಸೊಪ್ಪುಗಳನ್ನು ಸಣ್ಣಗೆ ಹೆಚ್ಚಿ ಕಲೆಸಿ ಉಪ್ಪುಕಾರ ಮುಂತಾದವನ್ನು ಬೆರೆಸಿ ಭಕ್ರಿ ಮಾಡಿಕೊಂಡು ಆಭಕ್ರಿಗೆ ಮಂದಾಲಗಿರಿ ಎಂದು ಕರೆಯುತ್ತಾರೆ. ಮಕ್ಕಳಿಗೆ ಉಣಿಸಿ ತಾವೂ ಉಣ್ಣುತ್ತಿದ್ದರಂತೆ. ಬಹುಶಃ ಬರಗಾಲದ ಜೀವನ ಅದಾಗಿರಬೇಕೆನಿಸುತ್ತದೆ.

ಮುರನಾಳದ ಜಾಗೀರದಾರ ಹುಸೇನ್ ಡೋಂಗ್ರಿ ಎಂಬುವವನು. ಆಗಲೇ ತಮ್ಮ ಪವಾಡ ಲೀಲೆಗಳಿಂದ ಪ್ರಸಿದ್ಧರಾಗಿದ್ದ ಮಳೆಯಪ್ಪನವರನ್ನು ಪರೀಕ್ಷೆ ಮಾಡಲು ಮಾಂಸದ ನೈವೇಧ್ಯವನ್ನು ಕಳಿಸಿದ. ಮಳೆಯಪ್ಪನವರು ಅದರ ಮುಸುಕ ತೆರೆದಾಗ ಆ ತಟ್ಟೆಯ ತುಂಬಾ ಗುಲಾಬಿ ಹೂವಾಗಿದ್ದವು. ಜಾಗೀರದಾರನು ಅವರ ಮಹಿಮೆಗೆ ಬೆರಗಾಗಿ ಬಂದು ಶರಣಾಗತನಾಗಿ ಅವರ ಭಕ್ತನೇ ಆದ. ನಿಮ್ಮ ಮನೆಯಲ್ಲಿ ಎಂಜಲೆಲೆ ಬೀಳುತ್ತವೆ ಎಂದು ಸ್ವಾಮಿಗಳು ಜಾಗಿರದಾರನಿಗೆ ಭವಿಷ್ಯ ಹೇಳಿದರಂತೆ. ಅದು ಶಾಪವೆಂದಲ್ಲ ಮುಂದೇನಾಗುವುದೆಂಬ ಸೂಚನೆ. ಬಹುಶಃ ಹುಸೇನ್ ಡೋಂಗ್ರಿಯ ನಂತರ ಆ ಮನೆ ಹಾಳಾಗಿ ತಿಪ್ಪೆಯಾಗಿರಬಹುದು. ಮಲಪ್ರಭಾ ನದಿಯ ದಂಡೆಯ ಹೊಲದಲ್ಲಿ ಆತನ ಸಮಾಧಿ ದರ್ಗಾ ಕಟ್ಟಲಾಗಿದೆ.

ಮಳೆಯಪ್ಪಯ್ಯನವರ ಧ್ಯಾನ ತಪಸಾಧನೆಗೆ ವಜ್ರಗಿರಿ ಅಥವಾ ಗದ್ದನಗಿರಿಯ ಗವಿಯು ಯೋಗ್ಯ ತಾಣವಾಗಿತ್ತು. ಕೊನೆಗೆ ಅವರ ಸಮಾಧಿಯೂ ಅಲ್ಲೇ ಆಯಿತು. ಅವರ ಪತ್ನಿ ತಿಪ್ಪಮ್ಮನ ಸಮಾಧಿ ಮುರನಾಳದಲ್ಲೇ ಆಯಿತು. ಇಬ್ಬರವೂ ಜೀವ ಸಮಾಧಿಗಳು. ಜೀವ ಸಮಾಧಿಯಾದವರು ಅವರ ಮರಣದ ನಂತರವೂ ಬದುಕಿರುತ್ತಾರೆಂಬ ನಂಬಿಕೆ ಶ್ರದ್ಧೆಗಳು ಜನರಲ್ಲಿವೆ. ಅದರಂತೆಯೇ ಆಗಿನಿಂದ ಇಲ್ಲಿಯವರೆಗೂ ಅವರ ಸಮಾಧಿಗಳು ಜಾಗೃತ ಸ್ಥಳಗಳಾಗಿ ಸಾಗಿ ಬಂದಿವೆ.

ಮಳೆಯಪ್ಪನ ನಂತರ ಅವರ ಮಗ ಮೋನಪ್ಪಯ್ಯನೂ ಮಹಿಮಾ ಪುರುಷನಾಗಿ ಬಾಳಿ ಗತಿಸಿದ ಬಳಿಕ ಆತನದೂ ಸಮಾಧಿ ದರ್ಗಾ ನಿರ್ಮಾಣವಾಯಿತು. ಮುಂದೆಯೂ ಅವರ ವಂಶದಲ್ಲಿ ಯೋಗಿಗಳು, ತಪಸ್ವಿಗಳು, ಅನುಭಾವಿಗಳು ಆಗಿ ಹೋಗಿದ್ದಾರೆ. ಆದರೆ ಆದಿಲ್‍ಶಾಹಿಗಳಂಥ ಭಕ್ತಿಶ್ರದ್ಧೆಗಳ ಶಿಷ್ಯರು ಮುಂದೆ ಇಲ್ಲದಂತಾಗಿ, ರಾಜಕೀಯವಾಗಿಯೂ ಆ ವಂಶ ಅವನತಿ ಹೊಂದಿದ ಮೇಲೆ ಭವ್ಯ ದರ್ಗಾಗಳನ್ನು ನಿರ್ಮಿಸುವುದು ನಿಂತಿರಬೇಕು.

ಆದರೂ ಆ ಮಳೆಯಪ್ಪಯ್ಯನವರ ವಂಶ ಬೂದಿ ಮುಚ್ಚಿದ ಕೆಂಡದಂತೆ ಎಂದು ಜನರಲ್ಲಿ ಆ ಪರಂಪರೆಯ ಬಗ್ಗೆ ಭಯ ಮಿಶ್ರಿತ ಗೌರವವಿದೆ. ವಕ್ತೃಗಳು ಹೇಳಿದರು.

ಅವರ ಹೇಳಿಕೆಯಲ್ಲಿ ಕೆಲವು ಹೊಸ ಸಂಗತಿಗಳು ತಿಳಿದುಬರುತ್ತವೆ. ಅವರ ಪತ್ನಿಯ ಹೆಸರು ತಿಪ್ಪಮ್ಮ ಒಬ್ಬ ಮಹಾವ್ಯಕ್ತಿಯ ಹಿಂದಿದ್ದ ಸಮರ್ಥ ಸಂಗಾತಿ. ಅವರ ಕಷ್ಟ ಸಂಕಷ್ಟಗಳಲ್ಲಿ ಹೆಗಲಿಗೆ ಕೊಟ್ಟು ಪತಿ-ಪುತ್ರರನ್ನು ಪೋಷಿಸಿದ ಮಹಾಮಾತೆ ಎಂಬ ತಿಳುವಳಿಕೆ ಬರುತ್ತದೆ. ಅವರೂ ಜೀವಸಮಾಧಿ ಹೊಂದಿರಬೇಕಾದರೆ ಪತಿಯ ಜೊತೆ ಜೊತೆಯಲ್ಲಿ ಸಂಸಾರ ಯೋಗದೊಡನೆ ಆಧ್ಯಾತ್ಮಯೋಗ ಮಾಡಿದ ಅಪೂರ್ವ ಸ್ತ್ರೀಮಣಿಯಾಗಿ ತಿಪ್ಪಮ್ಮ ಕಂಡುಬರುತ್ತಾರೆ.

ಇದಲ್ಲದೆ ಮುರನಾಳದ ಜಾಗೀರ್‌ದಾರನಾದ ಹುಸೇನ್ ಡೋಂಗ್ರಿಯ ಪರಿಚಯ, ಅವನು ಮಳೆಸ್ವಾಮಿಗಳ ಶಿಷ್ಯನಾದುದು, ಆತನ ಸಮಾಧಿ ದರ್ಗಾವು ಹೊಳೆಯ ದಂಡೆಯ ಮೇಲಿರುವುದು ಈ ಎಲ್ಲ ವಿಷಯಗಳು ತಿಳಿದು ಬರುತ್ತದೆ. ತಲತಲಾಂತರದ ವಕ್ತೃಗಳ ತಿಳುವಳಿಕೆಯಿಂದ ಗದ್ದನಗಿರಿಯ ಮೇಲಿರುವ ಎರಡು ದರ್ಗಾಗಳ ಮಳೆಯಪ್ಪಯ್ಯ, ಮೋನಪ್ಪಯ್ಯ ತಂದೆ ಮಕ್ಕಳವು ಎಂಬುದು ಖಾತ್ರಿಯಾಗುತ್ತದೆ.