ಕಾಲ ವಿವೇಚನೆ

ಮಳೆಯಪ್ಪಯ್ಯನವರ ಬಗೆಗಿನ ಐತಿಹಾಸಿಕ ಆಕರಗಳಿಗೆ ಹುಡಕಾಡಿದರೆ ನಮಗೆ ಸಾಹಿತ್ಯಿಕ ಆಕರಗಳನ್ನು ಬಿಟ್ಟರೆ ಗದ್ದನಗಿರಿಯ ಎರಡು ದರ್ಗಾಗಳು ಮತ್ತು ಅಲ್ಲಿ ಸುತ್ತ ಮುತ್ತ ಸಿಕ್ಕಿರುವ ಒಂದೆರಡು ಶಿಲಾಶಾಸನಗಳು ಶಾಸನಗಳು ಮೊದಲು ನೋಡೋಣ೧೯.

ಒಂದು ಶಾಸನದ ಕಾಲ ೧೧೦೭ ವಿಶ್ಯವಸು, ಸಂಕ್ರಮಣವೆಂದಿದೆ. ಇದು ಕ್ರಿ.ಶ. ೧೧೮೫-೮೬ಕ್ಕೆ ಸಮವಾಗುತ್ತದೆ. ಇದರಲ್ಲಿ ಬಹಳಷ್ಟು ಸಾಲುಗಳು ತ್ರುಟಿತವಾಗಿದ್ದು ಅಳಿದುಳಿದ ಅಕ್ಷರಗಳಿಂದ ಸೋಮ ಸಾಮಂತನ ಉಲ್ಲೇಖವಿದ್ದು, ಶಿವಾಲಯವೊಂದರ ಸುತ್ತಲೂ ಕಿತ್ತಳೆ, ವಕುಳ, ಹಲಸು, ಹೊಂಗೆ, ಬಾಳೆ, ಮಾವುಗಳಿಂದ ಕೂಡಿದ್ದ ಉದ್ಯಾನ ವನವಿತ್ತೆಂದು ವರ್ಣನೆ ಇದೆ. ಈ ಶಿವಾಲದಯ ಖಂಡ ಸ್ಫುಟಿತ ಜೀರ್ಣೋದ್ಧಾರ ಮತ್ತು ದೇವತಾ ಕಾರ್ಯಕ್ಕಾಗಿ ಜಗದ್ದಾ ಜಗತಾಪ ಅಮ್ಮ ಸಾವಂತನು ಭೂಮಿದಾನ ಮಾಡಿದ್ದನ್ನ ಉಲ್ಲೇಖಿಸುತ್ತದೆ.

ಇನ್ನೊಂದು ಶಾಸನ ಗದ್ದನಕೇರಿಯ ಹತ್ತಿರ ಬಾಗಲಕೋಟೆಯ ರಸ್ತೆಯ ಬದಿಯಲ್ಲಿ ಊರಿನಿಂದ ಪೂರ್ವಕ್ಕೆ ಸ್ವಲ್ಪ ದೂರದಲ್ಲಿರುವ ಕಲ್ಲಿನ ಮೇಲಿದೆ. ಶಾಸನದಲ್ಲಿ ಕಾಲದ ಉಲ್ಲೇಖವಿಲ್ಲ. ಭಾಷೆ ಮತ್ತು ಲಿಪಿಯ ಆಧಾರದ ಮೇಲೆ ಕ್ರಿ.ಶ. ಸುಮಾರು ೧೪-೧೫ನೆ ಶತಮಾನಕ್ಕೆ ಸೇರಿಸಬಹುದಾಗಿದೆ. ಮಾಳಿಗಪ್ಪನ ಮಗ ಮೋನಪ್ಪತ್ತೈಯ್ಯನಿಗೆ ಮಾನ್ಯ ನೀಡಿದ ಉಲ್ಲೇಖವಿದೆ. ಅದರ ಪಾಠ ಹೀಗಿದೆ.

ಶ್ರೀ ಗುರು ಮಾಳಿಗ []
ಮಗ ಮೋನಪತೈ []
ನವರಿಗೆ ಕೆರಿಯ ಕಟಿ
ದಕೆ ಕೊಟ [ಮಾನ್ಯ]

ಮೂರನೆ ಶಾಸನ ಗದ್ದನಕೇರಿ ಗ್ರಾಮದ ಕೆರೆಯ ತೂಬಿನ ಬಳಿ ಬಿದ್ದಿರುವ ಕಲ್ಲಿನ ಮೇಲೆ ಇದೆ. ಇದೂ ಬಹಳಷ್ಟು ಹಾಳಾಗಿದ್ದು ಉಲ್ಲೇಖವಿದ್ದರಿಬಹುದಾದ ಭಾಗ ಹಾಳಾಗಿದೆ. ಆದರೂ ತ್ರಿಭುವನಮಲ್ಲನ ಉಲ್ಲೇಖವಿರುವುದರಿಂದ ಇದು ಕ್ರಿ.ಶ.೧೨ನೆ ಶತಮಾನದ ಆರಂಭ ಕಾಲದ ಶಾಸನವಾಗಿದೆ. ತ್ರಿಭುವನ ಮಲ್ಲನ ಸಾಮಂತನೊಬ್ಬನ ಹೊಗಳಿಕೆ ಬಂದಿದೆ.

ಈ ಮೂರು ಶಾಸನಗಳಲ್ಲಿ ಒಂದನೆ ಮತ್ತು ಮೂರನೆ ಶಾಸನಗಳು ೧೨ನೆ ಶತಮಾನವಾಗಿದ್ದು ಈ ಪ್ರದೇಶ ಸಾಮಂತರಾಜರ ಆಳ್ವಿಕೆಯಲ್ಲಿ ಶಿವದೇವಾಲಯ ಸುಂದರ ಉದ್ಯಾನವನ್ನು ಹೊಂದಿದ್ದ ರಮ್ಯತಾಣವಾಗಿತ್ತೆಂದು ತಿಳಿದುಬರುತ್ತದೆ. ಚಾರಿತ್ರಿಕವಾಗಿ ನಮಗೆ ಎರಡನೇ ಶಾಸನವೇ ಮುಖ್ಯವಾದುದು. ದುರ್ದೈವಾದುದು. ಇದರಲ್ಲಿ ಕಾಲ ಕೊಡಲಾಗಿಲ್ಲ. ಶ್ರೀ ಗುರು ಮಾಳಿಗಪ್ಪನ ಮಗ ಮೋನಪತೈಯ ಕೆರೆಯನ್ನು ಕಟ್ಟಿಸಿದಂತೆಯೂ ಅದಕ್ಕಾಗಿ ಮಾನ್ಯವನ್ನು ಕೊಟ್ಟದ್ದಾಗಿಯೂ ಮಾಹಿತಿ ಇದೆ. ಮಳೆಯಪ್ಪ, ಮೋನಪ್ಪಯ್ಯ ಎಂಬ ಹೆಸರುಗಳು ಸ್ವಲ್ಪ ವ್ಯತ್ಯಾಸವಾಗಿ ಮಾಳಿಗಪ್ಪ, ಮೋನಪತೈಯ ಆಗಿರಬಹುದೆಂದು ಊಹಿಸಲು ಸಾಧ್ಯವಿದೆ. ಕಟಿದಕೆ, ಕೊಟ ಎಂಬ ಶಬ್ದದೋಷಗಳು ಯಾರೋ ನುರಿತಿಲ್ಲದ ಕೆಲಸಗಾರನಿಂದ ಕೆತ್ತಲಾಗಿರುವುದನ್ನು ಸೂಚಿಸುತ್ತವೆ. ನುರಿತ ಶಿಲ್ಪಿಗಳು ಕೊರೆದಿರುವ ಶಾಸನಗಳ ಸ್ವರೂಪ ಬೇರೆಯೇ ಇರುತ್ತದೆ. (ಶಾಸನಗಳ ಕಾವ್ಯಾತ್ಮಕತೆಯೂ ಪ್ರಸಿದ್ಧವಾದುದು) ಕೆರೆ ಕಟ್ಟಿದ್ದಕ್ಕೆ ಒಂದು ದಾಖಲೆ ಇರಲಿ ಎಂಬಂತೆ ಅವಸರಲ್ಲಿ ಹಾಕಿಸಿದಂತಿದೆ.

ಮಳೆಯಪ್ಪನವರು ಗದ್ದನಗಿರಿಯ ಮೂಲ ಪುರುಷರು. ಅವರಿಗೆ ಸುಲ್ತಾನನೇ ಭೂಮಿಯ ಉಂಬಳಿ ಕೊಟ್ಟ ಚರಿತ್ರೆ ಇದೆ. ಆ ಜಾಗದಲ್ಲೇ ಆತನ ಮಗನಾದ ಮೋನಪ್ಪಯ್ಯ ಒಂದು ಕರೆಯನ್ನು ಕಟ್ಟಿಸುವ ಲೋಕಸೇವೆಯ ಮಹತ್ವದ ಕಾರ‍್ಯ ಮಾಡಿದ್ದಾನೆ ಎಂಬುದು ಈ ಶಾಸನದಿಂದ ತಿಳಿದು ಬರುತ್ತದೆ. ಇದರ ಕಾಲವನ್ನು ಲಿಪಿತಜ್ಞರು ೧೪-೧೭ನೆ ಶತಮಾನದಗಳ ಕಾಲವೆಂಬುದು ಉಳಿದ ಆಧಾರಗಳ ಮೇಲಿಂದ ತಿಳಿದುಬರುತ್ತದೆ. ಹೀಗಿರುವಾಗ ಈ ಮಾಳಿಗಪ್ಪ-ಮೋನಪ್ಪತೈಯನವರು ಮಳೆಯಪ್ಪ ಮೋನಪ್ಪಯ್ಯಗಳಿಗಿಂತ ಸುಮಾರು ನೂರು ವರ್ಷ ಹಿಂದಿನವರಾಗಿರಬೇಕು. ಇಲ್ಲವೆ ಲಿಪಿತಜ್ಞರ ಊಹೆ ಸ್ವಲ್ಪ ತಪ್ಪದೆಯೇನೋ ಇನ್ನೊಮ್ಮೆ ಸರಿಯಾಗಿ ಪರಿಶೀಲಿಸಬೇಕು.

ಮಳಿಯಪ್ಪಯ್ಯನವರ ಕಾಲ ನಿರ್ಣರ್ಯಕ್ಕೆ ಕೆಳಗಿನ ಆಧಾರಗಳನ್ನು ಗ್ರಹಿಸಬೇಕು.
೧. ಶಿಲಾಶಾಸನ
೨. ದರ್ಗಾಗಳು
೩. ಜೀವನ ಚರಿತ್ರೆ
೪. ಚೆನ್ನಬಸವ ಪುರಾಣ
೫. ಮೌನಪ್ಪಯ್ಯನ ಕಾಲ
೬. ಆದಿಲ್‍ಶಾಹಿಗಳ ಕಾಲ
ಈಗ ದರ್ಗಾಗಳನ್ನು ಕುರಿತು ನೋಡವಾ.

Two miniation forms of the world famous gol goumlarj can be seen as you reach baglkot from belgaum road, you near them you find the malyappayya gadduge road which will lead your to the two gumlaejshagde temples.

These white technolly significant and historically important temples have been neaglected. . .

ಎಂದು ಈ ಎರಡು ಗುಡಿ-ದರ್ಗಾಗಳ ಬಗ್ಗೆ ಡೆಕ್ಕನೆ ಹೆರಾಲ್ಡ್ ಪತ್ರಿಕೆಯಲ್ಲಿ ಪರಿಚಯ ಮಾಡಿಕೊಡಲಾಗಿದೆ. ಇವು ಇಂಡೋ ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಾಣವಾಗಿದೆ. ಎರಡರಲ್ಲಿ ದೊಡ್ಡದು ಮೌನಪ್ಪಯ್ಯನದು ಸುಮಾರು ೫೦ ಅಡಿ ಎತ್ತರವಿದೆ. ಸಣ್ಣದ್ದು ಮಳಿಯಪ್ಪನದು ಸುಮಾರು ೪೦ ಅಡಿ ಎತ್ತರವಿದೆ. ಸುತ್ತಮುತ್ತಲಿನ ಹಳ್ಳಿಗಳ ಜನ ಜಾತಿಭೇದವಿಲ್ಲದೆ ಈ ಗದ್ದುಗೆಗಳಿಗೆ ನಡೆದುಕೊಳ್ಳುತ್ತಾರೆ. ಈ ಬಗ್ಗೆ ಇನ್ನೂ ಸಂಶೋಧನೆಗಳಾಗಬೇಕಾಗಿದೆ ಎಂದು ಅದರಲ್ಲಿ ಬರೆಯಲಾಗಿದೆ೨೦.

ಸೂಫಿಗಳ ಸಮಾಧಿ ಉತ್ತರ ದಕ್ಷಿಣಕ್ಕೆ ಮಲಗಿರುವ ಆಕಾರದಲ್ಲಿದ್ದರೆ ಸೂಫಿ ಸಂತನಿಗೆ ಕುಳ್ಳಿರಿಸಿದ ರೀತಿಯಲ್ಲಿರುತ್ತವೆ. ಸಮಾಧಿಯ ಕಟ್ಟಡದ ಹೊರ ರೂಪ ಮಾತ್ರ ಗುಂಬಜವನ್ನುಳ್ಳದ್ದಾಗಿದ್ದು ಒಂದೇ ರೀತಿಯಲ್ಲಿರುತ್ತವೆ. ಸಾವಳಗಿ, ತಿಂಥಿಣಿ, ಶಿರಹಟ್ಟಿ, ಕೊಡೇಕಲ್ಲು, ದಿಗ್ಗಿ, ನಾಯಕನ ಹಟ್ಟಿ, ಸಾಲೋಟಗಿ, ಜಲದುರ್ಗ, ಮಡ್ಯಾಳಗಳ ಕೆಳಗೆ ಸಂತನಗದ್ದುಗೆ ಇರುತ್ತದೆ. ದಿಗ್ಗಿ ಸಂಗಮನಾಥ ಮೇಲೆ ಚಾಂದಸಾಬನ ಗದ್ದಿಗೆ, ಸಾವಳಗಿ ಶಿವಲಿಂಗನ ಮೇಲೆ ಖಾಜಾಬಂದನವಾಜನ ಗದ್ದಿಗೆ, ಮೋನಪ್ಪಯ್ಯನ ಮೇಲೆ ಮಹಮ್ಮದ ಪೈಗಂಬರನ ಗದ್ದಿಗೆಗಳಿವೆ.

ವರವಿಯ ಮೋನಪ್ಪಯ್ಯನ ಗುಡಿಯನ್ನು ಗುಡಿಯನ್ನು ಬಿಜಾಪುರದ ರಾಜ್ಯಪಾಲ ಅಂಕುಶಖಾನ್, ಗದ್ದನಕೇರಿಯ ಮಳೆಯಪ್ಪಯ್ಯನ ಗುಡಿಯನ್ನು ಬಿಜಾಪುರದ ಸುಲ್ತಾನರು ಕಟ್ಟಿಸಿದ್ದರಿಂದ ದರಗಾಗಳಾದವು. ಇದು ಮುಸ್ಲಿಂ ದಾಳಿಕೋರರಿಂದ ರಕ್ಷಣೆಗಾಗಿ ಮಾಡಿದ ತಂತ್ರ ಎಂಬ ವಾದ ತಪ್ಪು. ಇಸ್ಲಾಮಿ ವಾಸ್ತುಶೈಲಿಯಲ್ಲಿರುವ ದರಗಾ ಗುಡಿಗಳು ಮಾತ್ರ ಕೋಮುವಾದಿ ಚರಿತ್ರೆಕಾರಕ ಎಲ್ಲ ಥಿಯರಿಗಳನ್ನು ಧಿಕ್ಕರಿಸುವಂತ ಜನತೆಯ ಶ್ರದ್ಧಾ ಕೇಂದ್ರಗಳಾಗಿವೆ೨೧.

ಇಂಗ್ಲಿಷ್ ದಿನಪತ್ರಿಕೆಯಲ್ಲಿ ಆ ಎರಡು ದರ್ಗಾಗಳಲ್ಲಿ ದೊಡ್ಡದು ಮೋನಪ್ಪಯ್ಯನದು ಸಣ್ಣದು ಮಳೆಯಪ್ಪಯ್ಯನದು ಎಂಬ ಹೇಳಿಕೆ ಇದ್ದರೆ, ಮಠದವರು ದೊಡ್ಡ ಗುಡಿ ಮಳೆಯಪ್ಪಯ್ಯನದು ಸಣ್ಣದು ಆತನ ಮಗ ಮೋನಪ್ಪಯ್ಯನದು ಎಂದು ಹೇಳುತ್ತಾರೆ.

ಕಾಲದ ದೃಷ್ಟಿಯಿಂದ ಈ ಕಟ್ಟಡಗಳಲ್ಲಿಯೂ ಯಾವುದೇ ದಿನಾಂಕ ನಮೂದಿಸಿಲ್ಲ. ಯಾವುದೇ ಹೆಸರನ್ನೂ ನಮೂದಿಸಿಲ್ಲ. ಆ ಕಟ್ಟಡಗಳ ನಿರ್ಮಾಣದ ರೀತಿಯನ್ನು ನೋಡಿ ಅವುಗಳ ಸುಮಾರು ಕಾಲಾವಧಿಯನ್ನು ಅಂದಾಜು ಮಾಡಬಹುದು. ಈಗಾಗಲೇ ನೋಡಿದಂತೆ ಬಿಜಾಪುರದ ಆದಿಲ್‍ಶಾಹಿಗಳ ಕಾಲದಲ್ಲಿ ಇವು ಕಟ್ಟಿಸಲಾಗಿದೆ ಎಂಬುದು ಸಿದ್ಧವಾದ ಮಾತು ಆದರೆ ಎಷ್ಟನೇ ಇಸವಿ ಎಂಬ ಮಾಹಿತಿ ಇದರಿಂದ ಗೊತ್ತಾಗುವುದಿಲ್ಲ.

ಮಳೆಯಪ್ಪಯ್ಯನವರ ಜೀವನ ಚರಿತ್ರೆಯನ್ನು ವಿವರವಾಗಿ ಯಾರೂ ರಚಿಸಿಲ್ಲ. ಒಂದು ಚಿಕ್ಕ ಪರಿಚಯಾತ್ಮಕ ಪುಸ್ತಕದಲ್ಲಿ ಮಳಿಯಪ್ಪಯ್ಯನ ಜನನ ಶುಭಕೃತು ನಾವು ಸಂವತ್ಸರದಲ್ಲಿ ಚೈತ್ರ ಮಾಸದ ಶುಕ್ಷ ಪಕ್ಷ ಪೌರ್ಣಿಮೆ ಪ್ರಾತಃಕಾಲ ಶನಿವಾರದಿಂದ ಆಯಿತು ಎಂಬ ಉಲ್ಲೇಖವಿದೆ೨೨. ಇದರ ವಾಸ್ತವತೆಯನ್ನು ಅನುಮಾನದಿಂದ ನೋಡಬಹುದಾದರೂ ಒಂದು ದಿನಾಂಕವಂತೂ ದೊರೆತಂತಾಗಿದೆ. ಇದರ ಪ್ರಕಾರ ಸುಮಾರು ೧೫-೧೬ನೆ ಶತಮಾನಗಳಷ್ಟು ಹಿಂದೆ ಹೋದರೆ ಶುಭ ಕೃತು ಸಂವತ್ಸರ ಕ್ರಿ.ಶ. ೧೫೪೨ರಲ್ಲಿ ೧೬೦೨ರಲ್ಲಿ ಎಂಬ ಎರಡು ಇಸ್ವಿಗಳು ಸಿಗುತ್ತವೆ. ಇದಕ್ಕೂ ಮುಂಚೆ ಮೋನಪ್ಪಯ್ಯ(ತಿಂಥಿಣಿ) ಕಾಲನಿರ್ಣಯವನ್ನು ನೋಡೋಣ. ಕೆ.ಪಿ. ಈರಣ್ಣನವರು ಮೌನೇಶ್ವರ ವಚನ ಸಂಗ್ರಹದ ಪ್ರಸ್ತಾವನೆಯಲ್ಲಿ ಮೌನೇಶ್ವರರ ಕಾಲ ನಿರ್ಣಯವನ್ನು ಮಾಡಿದ್ದಾರೆ.

ವಿಜಯನಗರದ ಕಾಲದಲ್ಲಿದ್ದ ಇಮ್ಮಡಿ ಬಸವಣ್ಣನ (ಹೊಸಪೇಟೆಯ ಜಂಬುನಾಥನ ಭಕ್ತ ೧೫೪೦-೧೫೭೦) ಡಂಗೂರ ಸಾರಲು ತಾನು ಬಂದಿರುವುದಾಗಿ ಮೋನಪ್ಪ ಹೇಳಿಕೊಂಡಿರುವುದು. ಬಿಜಾಪುರದ ೧ನೆ ಆದಿಲ್‍ಶಾಹಿಗೆ (೧೫೫೭-೧೫೮೦) ತಾನು ಪಟ್ಟ ಕಟ್ಟಿರುವುದು ಅಂಕುಶ ಖಾನ ಲಕ್ಷ್ಮೇಶ್ವರದಲ್ಲಿ ಬಾವಿ ತೋಡಿಸುವಾಗ (೧೬೧೨) ತಾನು ನೀರು ತರಿಸಿದ್ದು ಮುಂತಾದ ಆಧಾರಗಳಿಂದ ಮೌನೇಶ್ವರರು ಕ್ರಿ.ಶ. ೧೬ ಮತ್ತು ೧೭ನೇ ಶತಮಾನಗಳಲ್ಲಿ ಬದುಕಿದ್ದರು ಎಂದು ತೀರ್ಮಾನಿಸಿದ್ದಾರೆ.

ಈ ಹಿನ್ನಲೆಯಲ್ಲಿ ಮಳೆಯಪ್ಪನವರ ಕಾಲವನ್ನು ೧೭ನೆ ಶತಮಾನವೆಂದು ನಿರ್ಣಯಿಸಬೇಕಾಗುತ್ತದೆ. ಅಥವಾ ಸ್ವಲ್ಪ ಹಿಂದೆ ಬೇಕಾದರೆ ಸರಿಸಬಹುದು. ಏಕೆಂದರೆ ಅಂಕುಶ ಖಾನದ ಕಾಲಕ್ಕೆ ಅವರು ಇಳಿವಯಸ್ಸಿನಲ್ಲಿದ್ದರು. ೧೬೧೨ ಎಂದುಕೊಂಡರೂ ೧೬ನೇ ಶತಮಾನದ ಆದಿಭಾಗದಲ್ಲಿ ಮೋನಪ್ಪಯ್ಯ ಜನಿಸಿರಬಹುದು. ಅವರ ಶಿಷ್ಯನ ಶಿಷ್ಯನಾದ ಮಳೆಯಪ್ಪಯ್ಯ ೧೫೫೦ರ ಸುಮಾರಿಗೆ ಮೇಲಿನ ಸಂವತ್ಸರದ ಲೆಕ್ಕ ತೆಗೆದುಕೊಂಡರೆ ೧೫೪೨ರ ಶುಭಕೃತ್ ಸಂವತ್ಸರದಲ್ಲಿ ಜನಿಸಿರಬಹುದೆಂದು ಹಿಡಿಯಬಹುದು. ಮೌನಪ್ಪಯ್ಯ ೧ನೇ ಆದಿಲ್‍ಶಾಹನಿಗೆ ೧೫೫೨ರಲ್ಲಿ ಪಟ್ಟಿಕಟ್ಟುವಾಗ ಸಾಕಷ್ಟು ಪ್ರೌಧರೂ ತಪಿಸ್ವಿಗಳೂ ಸುಪ್ರಸಿದ್ಧರೂ ಆಗಿರಬೇಕು. ಸುಮಾರು ಆ ಹಂತದಲ್ಲಿ ಮಳೆಯಪ್ಪಯನವರು ಈ ಪ್ರಪಂಚಕ್ಕೆ ಕಣ್ಣು ತೆರೆದಿರಬೇಕು.

ಕಾಲನಿರ್ಣಯಕ್ಕೆ ಸಹಾಯವಾಗುವ ಇನ್ನೊಂದು ವಿಷಯವನ್ನು ಗಮನಿಸಬಹುದು. ಮೌನೇಶ್ವರರ ಮಹಿಮಾ ಲೀಲೆಗಳು ಬಿಜಾಪುರದ ೧ನೇ ಆದಿಲ್‍ಶಾಹನ ಕಾಲಕ್ಕೆ ಸಂಬಂಧಿಸಿದ್ದರೆ, ಮಳೆಯಪ್ಪಯ್ಯನ ಮಹಿಮೆ ಪವಾಡಗಳು ನಡೆದಿರುವುದು ಎರಡನೆ ಆದಿಲ್‍ಶಾಹನ ಕಾಲ ಕ್ರಿ.ಶ. ೧೫೫೭ ರಿಂದ ೧೫೮೦. ೨ನೇ ಆದಿಲ್‍ಶಹನದು ನಂತರದ್ದು.

ಇನ್ನೂ ವಿರುಪಾಕ್ಷ ಪಂಡಿತ, ಅದೃಶ್ಯಕವಿಗಳ ಕಾಲಗಳೊಡನೆ ತುಲನೆ ಮಾಡೋಣ. ಅದೃಶ್ಯ ಕವಿಯ ಕಾಲವನ್ನು ೧೫೮೦ ಎಂದು ವಿದ್ವಾಂಸರು ತೀರ್ಮಾನಿಸಿದ್ದಾರೆ. ವಿರುಪಾಕ್ಷ

ಪಂಡಿತ ಆತನ ಸಹಪಾಠಿ ಸಮಕಾಲೀನ. ಇವರಿಬ್ಬರೂ ಮಳೆಯ ಮಲ್ಲೇಶನನ್ನು ಗುರುವೆಂದು ನೆನೆದಿದ್ದಾರೆ. ಅಂದರೆ ಸುಮಾರು ೧೫೫೦ ಆ ಗುರುವಿನ ಕಾಲವಾಗುತ್ತದೆ. ಮಳೆಯಪ್ಪಯ್ಯನೇ ಮಳೆಯ ಮಲ್ಲೇಶನೆಂದು ಸ್ವೀಕರಿಸುವುದರಿಂದ ಸ್ವಲ್ಪ ಹೆಚ್ಚು ಕಡಿಮೆಯಲ್ಲಿ ಈ ಕಾಲಗಳ ಗಣನೆ ಹೊಂದುತ್ತದೆನ್ನಬಹುದು. ಅಂದರೆ ಒಟ್ಟಿನ್ಲಲಿ ಮಳೆಯಪ್ಪಯ್ಯನವರು ಸುಮಾರು ೧೫೪೦ರಿಂದ ೧೬೫೦ರ ಅವಧಿಯಲ್ಲಿ ಬಾಳಿರಬೇಕೆಂದು ಒಂದು ನಿರ್ಣಯಕ್ಕೆ ಬರಬಹುದು.

ಶಿಲಾಶಸನದ ಕಾಲವನ್ನು ಕ್ರಿ.ಶ. ೧೬-೧೭ನೇ ಶತಮಾನಗಳೆಂದು ಲಿಪಿತಜ್ಞರ ಕಾಲವನ್ನು ತಿದ್ದಿಕೊಂಡರೆ ಮಳಯಪ್ಪಯ್ಯನವರ ಕಾಲದ ಬಗ್ಗೆ ಒಂದು ತೀರ್ಮಾನಕ್ಕೆ ಬಂದಂತಾಗುತ್ತದೆ.

ಸಂಪ್ರದಾಯಗಳು

ಮಳೆಯ ಮಲ್ಲೇಶನ ಅಥವಾ ಮಳೆಯಪ್ಪಯ್ಯನ ಮಠದ ಸಂಪ್ರದಾಯಗಳಿಗೆ ಮತ್ತು ಅವರ ಮಹಾಗುರುವಾದ ಮೌನಪ್ಪಯ್ಯನ ಮಠಗಳಿಗೆ ಮೂಲಭೂತವಾದ ತತ್ವಗಳು ಒಂದೇ ಆಗಿವೆ. ಸಂಪ್ರದಾಯ ಆಚರಣೆಗಳಲ್ಲಿ ಕೆಲವು ವ್ಯತ್ಯಾಸಗಳಿರುವುದು ಸಹಜ. ಕೊಡೇಕಲ್ ಬಸವಣ್ಣ. ಮೌನಪ್ಪಯ್ಯನಂಥವರು ಮಧ್ಯಕಾಲೀನ ಭಾರತದ ಪಂಥ ಪ್ರಚಾರದಲ್ಲಿದ್ದ ನಾಥ, ಸಿದ್ಧ, ಮಹಾನುಭಾವ, ದತ್ತ, ಆರೂಢ, ಅವಧೂತ ಮುಂತಾದ ಹಿಂದೂ ಸಂಪ್ರದಾಯಗಳನ್ನು ಮತ್ತು ಹೊಸದಾಗಿ ಆಕ್ರಮಣ ಶೀಲವಾಗಿ ಬಂದು ಸೇರಿದ ಇಸ್ಲಾಂ ಮತ್ತು ಸೂಫಿಪಂಥಗಳನ್ನು ಒಳಗೊಂಡಂಥ ಮತ್ತು ಇವೆಲ್ಲವುಗಳನ್ನು ಮೀರಿದ ಜಾತ್ಯತೀತವಾದ, ಮತಾತೀತವಾದ ಒಂದು ಧಾರ್ಮಿಕ ಮಾರ್ಗವನ್ನು ರುಪಿಸಲು ಈ ಮಹನೀಯರು ಪ್ರಯತ್ನಿಸಿದಂತೆ ಕಾಣುತ್ತದೆ. ಕೊಡೇಕಲ್ ಸಂಪ್ರದಾಯದವರು ಇಂಥ ಸಮನ್ವಯವನ್ನು ಸಾಧಿಸಿದರೂ ಕೊನೆ ಕೊನೆಗೆ ಇದು ಕೇವಲ ಶಾಂತಿಯಿಂದಾಗುವ ಕೆಲಸವಲ್ಲ, ಇದಕ್ಕೆ ಸೈನ್ಯಕ್ರಾಂತಿಯೇ ಆಗಬೇಕೆಂದು ನಿರ್ಧರಿಸಿದಂತೆ ಕಾಣುತ್ತದೆ. ಆದ್ದರಿಂದ ತಮ್ಮ ಕಾಲಜ್ಞಾನ ವಚನಗಳ ಮೂಲಕ ಮುಂದೆ ಆಗಲಿರುವ ಮುಸ್ಲಿಮೀಕರಣದ ವಿರುದ್ಧ ಜನರು ಎಚ್ಚರಗೊಳ್ಳುವಂಥ ಸೂಚನೆಗಳನ್ನು ಊರೂರುಗಳಲ್ಲಿ ಸಾರುತ್ತಾ ಹೋಗಿದ್ದಾರೆ. ಕೊಡೇಕಲ್ ಬಸವಣ್ಣನನ್ನು ಮಗ ಸಂಗಮನಾಥನನ್ನು ಮಂಟೇಸ್ವಾಮಿ ಮುಂತಾದವರೊಡನೆ ದಂಡು ಕೂಡಿಸಲು ಮಂಡ್ಯ ಮೈಸೂರುಗಳ ಕಡೆಗೆ ಕಳಿಸಿದಂತೆ ತಿಳಿದುಬರುತ್ತದೆ. ಆದರೆ ಅವರ ಕ್ರಾಂತಿ ಅಲ್ಲಲ್ಲೇ ತಣ್ಣಗಾದಂತೆ ತೋರುತ್ತದೆ. ಆದರೆ ಅವರು ನೆಲೆಸಿದ್ದಲ್ಲೆಲ್ಲ ಹಿಂದೂ ಮುಸ್ಲಿಂ ಸಮನ್ವಯದ ಸಂಪ್ರದಾಯಗಳೇ ಉಳಿದು ಬಂದಿವೆ.

ಆದರೆ ಮೌನಪ್ಪಯ್ಯ ಮತ್ತು ಅವರ ಶಿಷ್ಯವರ್ಗ ಜನ ಸಾಮಾನ್ಯರ ಬೆಂಬಲವನ್ನು ಒಂದು ಕಡೆಯಲ್ಲಿ ಸಂಪಾದಿಸಿ (ಮಳೆ ತರಿಸುವ ಮುಂತಾದ ಲೋಕಕಲ್ಯಾಣ ಕಾರ್ಯಗಳಿಂದ) ಇನ್ನೊಂದು ಕಡೆಯಲ್ಲಿ ಆಳರಸರಾದ ಬಿಜಾಪುರದ ಆದಿಲ್‍ಶಾಹಿಗಳ ಒಲವು ಮತ್ತು ಗೌರವಗಳನ್ನು ಸಂಪಾದಿಸಿ ತಮ್ಮ ಆದರ್ಶವಾದ ಸಮನ್ವಯ ದರ್ಶನವನ್ನು ಕಾರ‍್ಯರೂಪಕ್ಕೆ ತರಲು ಪ್ರಯತ್ನಿಸಿದಂತೆ ಕಾಣುತ್ತದೆ. ದಂಡು ದಶಗಳ ಗೋಜಿಗೆ ಇವರು ಹೋಗದೆ ಆತ್ಮಬಲದ ಮೇಲೆಯೇ ಅವಲಂಬಿಸಿದಂತೆ ಕಂಡುಬರುತ್ತದೆ.

ಮುಂದೆ ಇವರ ಕ್ಷೇತ್ರಗಳಲ್ಲಿ ಬೆಳೆದು ಬಂದ ಸಂಪ್ರದಾಯಗಳಿಗೆ ಮೂಲವಾಗಿ ಏಕೇಶ್ವರ ವಿರಾಕಾರ ನಿರ್ಗುಣ ಸಿದ್ಧಾಂತ, ಮಾನವರೆಲ್ಲ ಒಂದೆಂಬ ಜಾತಿ ಪಂಥ ಮತಾದಿಗಳನ್ನು ಮಿರಿದ ಕೇವಲ ಮಾನವ ಧರ್ಮ, ಮೌಢ್ಯಮೂರ್ತಿ ಪೂಜೆ ಪೂಜಾರಿ ವ್ಯವಸ್ಥೆಗೆ ಭಿನ್ನವಾದ ನಿರ್ಗುಣೋಪಾಸನೆಯ ಮಾರ್ಗ, ದೇಹ ಮನಸ್ಸುಗಳ ಸಬಲೀಕರಣದ ಲೌಕಿಕ ಧರ್ಮದ ಮೂಲಕ ಆಧ್ಯಾತ್ಮಿಕ ಸಿದ್ಧಿಗಳನ್ನು ಸಾಧಿಸುವ ತಪೋಮಾರ್ಗ ಇವು ಆಧಾರವಾಗಿವೆಯೆನ್ನಬಹುದು.

ಈಗಲೂ ಗದ್ದನಕೆರೆ ಮುರನಾಳಗಳಲ್ಲಿ ನಡೆಯುತ್ತಿರುವ ಸಂಪ್ರದಾಯಗಳನ್ನು ಈ ಹಿನ್ನೆಲೆಯಲ್ಲಿ ಪರಿಶಿಲಿಸಬಹುದು ೧. ಈ ಪಂತಗಳಲ್ಲಿ ಸ್ನಾನ, ಪೂಜೆ ನಾಮ ವಿಭೂತಿಗಳು ಕಟ್ಟುಪಾಡಿಲ್ಲ. ಬಾಹ್ಯ ಸಂಕೇತಗಳು ಜಾತಿಸೂಚಕವಾಗಿರುವಂಥವು. ಲಿಂಗಾಯತರಿಗೆ ವಿಭೂತಿ ಸೂಚಕನಾಮ ಬ್ರಾಹ್ಮಣರ ಸಂಕೇತ. ಪೂಜೆಯನ್ನು ಸ್ನಾನ ಮಾಡಿಯೇ ಮಾಡಬೇಕೆಂಬ ಮಡಿವಂತಿಕೆಗೆ ಇವಾವುಗಳ ಹಂಗು ಈ ಪಂಥದಲ್ಲಿಲ್ಲ.

೨. ಜಾತಿ ಮತಗಳ ಭೇದವಿಲ್ಲ. ಈ ಗುಡಿಗಳಿಗೆ ಬ್ರಾಹ್ಮಣರೂ, ಹೊಲೆಯರೂ ಬರಬಹುದು. ಹಿಂದೂಗಳೂ ಮುಸ್ಲಿಮರೂ ಬರಬಹುದು. ಇಲ್ಲಿಯ ಪ್ರಸಾದ ಪಂಕ್ತಿಯಲ್ಲೂ ಯಾವ ಭೇದವಿಲ್ಲ. ಮಾನವ ನಿರ್ಮಿತವಾದ ಈ ಭೇದಗಳನ್ನು ಮೀರುವುದರಿಂದ ಮಾತ್ರ ಮಾನವತೆಯನ್ನು ಪಡೆಯುವುದು ಸಾಧ್ಯವೆಂದು ಈ ಪಂಥದ ಕರ್ತೃಗಳು ಇದಕ್ಕೆ ಭದ್ರಬುನಾದಿ ಹಾಕಿದ್ದಾರೆ.

೩. ಅದೇ ರೀತಿ ಬಡವ ಬಲ್ಲಿದ ಭೇದವಿಲ್ಲ. ವಯಸ್ಸು-ಸ್ತ್ರೀಲಿಂಗ-ಪುಲ್ಲಿಂಗ ಭೇದಗಳೂ ಇಲ್ಲಿಲ್ಲ. ದೇವಾಲಯ ಪರಂಪರೆ ಕೇವಲ ಉಳ್ಳವರಿಗೆ ಮಾತ್ರ ಅನುಕೂಲ ವಾಗಿರುವಂಥದ್ದು. ಪುರುಡರು ಶ್ರೇಷ್ಠ ಸ್ತ್ರೀಯರು ಮುಕ್ತಿಯೋಗ್ಯರಲ್ಲ ಎಂಬ ಜಡ ಹಿಂದೂ ದೃಷ್ಟಿಯೂ, ಜಡ ಇಸ್ಲಾಂ ದೃಷ್ಟಿಯೂ ಮಾನವರ ಮುಕ್ತ ಬೆಳವಣಿಗೆಗೆ ಆತಂಕಕಾರಿ, ಇಂಥ ಭೇದಗಳನ್ನೆಲ್ಲ ಈ ಪಂಥ ಮೀರಿದೆ.

೪. ಮಳೆಯಪ್ಪಯ್ಯ ಪ್ರಸಿದ್ಧವಾಗಿರುವುದೇ ಮಳೆಗಾಗಿ. ಮಾನವರ ಜೀವಜಲ ಬದುಕಿನ ಸೆಲೆ ಮಳೆ. ಅದರಲ್ಲೂ ಉತ್ತರ ಕರ್ನಾಟಕದ ಭಾಗ ಮಳೆಯಿಲ್ಲದ ಬೆಂಗಾಡು ಸೀಮೆಯೆಂದೇ ಪ್ರಸಿದ್ಧ. ಆದ್ದರಿಂದ ಮಳೆಯಪ್ಪನಂಥ, ಮೌನಪ್ಪಯ್ಯನಂಥ ಸಿದ್ಧಿಪರುಷರಿಗೆ ಬಹಳ ಮಾನ್ಯತೆ. ಮಳೆಯಪ್ಪಯ್ಯನನ್ನು ವರುಣ ದೇವನ ಅವತಾರ ಎಂದೇ ನಂಬುತ್ತಾರೆ. ಭಕ್ತರು ಈ ಮಠವನ್ನು ನೆಚ್ಚಿರುವುದೇ ನಡೆಸಲಾಗುತ್ತದೆ. ಅದು ವಾರ್ಷಿಕ ಜಾತ್ರಾ ಉತ್ಸವವೂ ಹೌದು. ಶಿವರಾತ್ರಿ ಅಮವಾಸ್ಯೆಯಿಂದ ಎಂಟು ದಿನ ಉಚ್ಚಾಯ ಎಳೆಯುತ್ತಾರೆ. ಸಾವಿರಾರು ಕಳಸ ಆರತಿಗಳನ್ನು ಹಿಡಿದು ಸುಮಂಗಲೆಯರು ಬರುತ್ತಾರೆ. ಎಂಟನೆ ದಿನ ಮಹಾಪ್ರಸ್ಥವೆಂದು ಸಾಮೂಹಿಕ ಪ್ರಸಾದ ನಡೆಯುತ್ತದೆ. ಒಂಭತ್ತನೆಯ ದಿನ ಐದು ನೆಲುವಿನ ದೊಡ್ಡ ತೇರಿನ ರಥೋತ್ಸವ ಅದ್ದೂರಿಯಾಗಿ ನಡೆಯುತ್ತದೆ. ಹತ್ತನೆಯ ದಿವಸ ಕಡುಬಿನ ಕಾಳಗ ನಡೆಯುತ್ತದೆ. ಅದರ ನಂತರ ಮಳೆ ಕೇಳುವ ಕಾರ‍್ಯ ನಡೆಯುತ್ತದೆ. ಸುಮಂಗಲೆಯರೆಲ್ಲ ವಾದ್ಯಮೇಳದೊಡನೆ ಹೊಳೆಗೆ ಹೋಗೆ ಐದು ಮಣ್ಣಿನ ಕೊಡಗಳಲ್ಲಿ ಗಂಗೆಯನ್ನು ತರುತ್ತಾರೆ. ಒಂದೊಂದು ಮಗಿಗೂ ಒಂದೊಂದು ಮುಖ್ಯವಾದ ಮಳೆಯ ಗುರುತು ಮಾಡಿರುತ್ತಾರೆ. ಬರುವುದರೊಳಗೆ ಯಾವ ಕೊಡವ ನೀರು ಕಮ್ಮಿಯಾಗಿರುವುದೋ ಆ ಮಳೆ ಕಮ್ಮಿಯಾಗುತ್ತದೆ. ಸೋರದೇ ಹಾಗೇ ಇರುವ ಕೊಡವ ಮಳೆ ಚೆನ್ನಾಗಿ ಬರುತ್ತದೆ ಎಂಬುದು ನಂಬಿಕೆ.

೫. ಇದಲ್ಲದೆ ಆಷಾಢ ಮಾಸದಲ್ಲಿ ಆಷಾಢ ಪರ್ವವೆಂದು ದೇವರು, ಸುಮಂಗಲೆ ಯರೊಡನೆ ಹೊಳೆಗೆ ಹೋಗಿ ಅಲ್ಲಿ ಅಡಿಗೆ, ಪೂಜೆ, ನೈವೇದ್ಯ ಮಾಡಿ ಎಲ್ಲರೂ ಊಟ ಮಾಡಿ ಬರುತ್ತಾರೆ. ಆ ಕಾಲದಲ್ಲಿ ಒಂದು ವೇಳೆ ಮಳೆ ಕೈಕೊಟ್ಟರೆ ವಿಶೇಷ ಪೂಜೆ ಮಾಡಿ ಮಠದವರು ಉಪವಾಸ ಕೂಡುತ್ತಾರೆ. ರೈತರು ಕಂಬಳಿ ಬೀಸುತ್ತಾರೆ. ಮಳೆ ಬರುವವರೆಗೂ ದಿನಾಲೂ ಉಪವಾಸ ವ್ರತ ನಡೆಯುತ್ತದೆ. ಮಳೆ ಬಂದ ನಂತರ ಪೂಜೆ ಪ್ರಸಾದ ನಡೆಯುತ್ತದೆ.

೬. ಗದ್ದನಕೇರಿಯ ಮಠದಲ್ಲಿ ಶ್ರಾವಣ ಮತ್ತು ಕಾರ್ತಿಕ ಮಾಸಗಳಲ್ಲಿ ವಿಶೇಷ ಪೂಜೆ ಮತ್ತು ಪಾಲಕಿ ಉತ್ಸವ ನಡೆಯುತ್ತವೆ. ಆ ಎರಡೂ ಸಂದರ್ಭಗಳಲ್ಲೂ ದೊಡ್ಡ ಜಾತ್ರೆ ಆ ಗುಡ್ಡದ ಮೇಲೆ ನಡೆಯುತ್ತವೆ.

ಈಗ ಮುರನಾಳ ಗ್ರಾಮ ಆಲಮಟ್ಟಿ ಆಣೆಕಟ್ಟಿನ ಹಿನ್ನೀರಿನಿಂದ ಮುಳುಗಿ ಹೋಗಿರುವುದರಿಂದ ಹಿಂದಿನ ಸಂಪ್ರದಾಯಗಳನ್ನೆಲ್ಲ ಹೊಸ ಊರಲ್ಲೇ ಮಾಡುತ್ತಾರೆ.

೭. ಪ್ರತಿ ನಿತ್ಯ ದಾಸೋಹದ ವ್ಯವಸ್ಥೆ ಇರುವ ಮಠದಲ್ಲಿ ನುಚ್ಚಿನ ಅನ್ನ ಮತ್ತು ಸಾರು ದಿನನಿತ್ಯದ ಪ್ರಸಾದ. ವಿಶೇಷ ಸಂದರ್ಭಗಳಲ್ಲಿ ಮಾಲದಿ ನೈವೇದ್ಯ ಮತ್ತು ಪ್ರಸಾದ.

೮. ಮಠದ ಪೀಠಸ್ಥರು ಇಂದಿಗೂ ಸೂಫಿ ಸಂತರ ಹಾಗೆ ಹಸಿರು ಪೀಠ ಮತ್ತು ಶಿಲಾಮಣಿಗಳ ಹಾರವನ್ನು ಧರಿಸುತ್ತಾರೆ.

೯. ಉತ್ಸವದಲ್ಲಿ ಶ್ರೀ ಮಠಕ್ಕೆ ಮುಸಲ್ಮಾನ್ ಮಹಿಳೆಯರು ಬುರ್ಖಾ ಧರಿಸಿಕೊಂಡೇ ಸ್ವಾಮಿಗಳಿಗೆ ಆರತಿ ಬೆಳಗುತ್ತಾರೆ. ಇದು ಹಿಂದು ಮುಸ್ಲಿಮರಿಗೆ ಒಬ್ಬನೇ ದೇವನೆಂಬ ಆಚರಣೆ.

೧೦. ಈ ಮಠದ ಸ್ವಾಮಿಗಳು ಸಂಸಾರಸ್ಥರೇ ಆಗಿರುವುದು ಪದ್ಧತಿ. ಬ್ರಾಹ್ಮಣ ಲಿಂಗಾಯತ ಮಠಗಳಲ್ಲಿ ಮದುವೆಯಾಗದೆ ಇರುವವರು ಮಾತ್ರ (ಬ್ರಹ್ಮಚಾರಿಗಳಲ್ಲಿ)

ಸ್ವಾಮಿಗಳಾಗುವ ಒಂದು ಸಂಪ್ರದಾಯ ಸಾಗಿಬಂದಿದೆ. ಇದು ಜೀವವಿರೋಧಿ ಪ್ರಕೃತಿ ವಿರೋಧಿ ಪದ್ಧತಿ ಎಂಬುದು ಇಸ್ಲಾಂ ಧರ್ಮದಲ್ಲಿ ಪ್ರಚಾರದಲ್ಲಿದೆ. ಅದನ್ನು ಈ ಪಂಥ ಮಾನ್ಯ ಮಾಡಿ ನಡೆಸಿಕೊಂಡು ಬಂದಿದೆ.

೧೧. ಗುರುಮಾತೆಯ ಶಿಷ್ಯಮಕ್ಕಳನ್ನು ಹರಸುವ ಬಗೆ ಅನನ್ಯವಾದುದು. ಏನೆಂದರೂ ಈ ಮಠದಲ್ಲಿ ಮಡಿ ಮೈಲಿಗೆ ಭೇದವಿಲ್ಲ. ಇದು ಮಾನವೀಯ ವರ್ತನೆಯ ಕುರುಹು.

೧೨. ಭಕ್ತರನ್ನು ಕಳಿಸಿಕೊಡುವಾಗ ಗುರುಮಾತೆ ಆಶೀರ್ವದಿಸಿ ಬುತ್ತಿಯನ್ನು ಕಟ್ಟಿ ಕೊಟ್ಟು ಕಳಿಸುವುದೊಂದು ಸಂಪ್ರದಾಯ.

೧೩. ಈ ಮಠದ ವಿಶಿಷ್ಟವಾದ ಸಂಪ್ರದಾಯವೆಂದರೆ ಗಂಡ ಸತ್ತರೂ ಹೆಂಡತಿ ತನ್ನ ಮುತ್ತೈದೆ ಸಂಕೇತಗಳಾದ ತಾಳಿ, ಕುಂಕುಮ, ಮೂಗುತಿ, ಬಳೆ ಮುಂತಾದವನ್ನು ತೆಗೆಯುವುದಿಲ್ಲ. ವಿಧವಾ ಪದ್ಧತಿ ಹಿಂದೂ ಧರ್ಮ ಸಂಪ್ರದಾಯದಲ್ಲಿ ಒಂದು ಶಾಪ. ಸ್ತ್ರೀಯರನ್ನು ಅತಿ ಕೀಳಾಗಿ ನೋಡುವ ಪದ್ಧತಿ. ಅದಕ್ಕೆ ಭಿನ್ನವಾಗಿ ಪತಿ ಪತ್ನಿಯರ ಸಂಬಂಧ ದೇಹ ಮೂಲವಾದದ್ದಲ್ಲ ಆತ್ಮ ಮೂಲವಾದದ್ದು ಎಂಬ ಅದ್ವೈತ ಸಿದ್ಧಾಂತ ಇಲ್ಲಿ ಪಾಲನೆಯಾಗುತ್ತಿದೆ.

೧೪. ಮಠದಲ್ಲಿ ಗದ್ದಿಗೆಯ ಮೇಲೆ ಸಣ್ಣ ಮಡಿಕೆಯಲ್ಲಿ ನೀರಿಟ್ಟು ಪೂಜಿಸುತ್ತಾರೆ. ಅವರಿನ್ನೂ ಜೀವಂತವಾಗಿದ್ದಾರೆಂಬ ಆತ್ಮದ ಅಜರಾಮರತ್ವದ ಸಂಕೇತವಿದು.

೧೫. ಪೂಜಾ ಸ್ಥಳಗಳಲ್ಲಿ ಮನೆಗಳಲ್ಲಿ ಕೊಡಲಿ ಮತ್ತು ಹೂಜೆಗಳು ಮಾತ್ರ ಇರುತ್ತವೆ. ಯಾವುದೇ ಮೂರ್ತಿಯನ್ನಿಟ್ಟು ಪೂಜಿಸುವುದು ಈ ಪಂಥದಲ್ಲಿ ನಿಷಿದ್ಧ.

೧೬. ಕೆಲವರು ಮಧ್ಯವನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ. ಮತ್ತು ಸೇವಿಸುತ್ತಾರೆ. ಕೆಲವೆಡೆ ಭಂಗಿ ಸೇದುವುದೂ ನಡೆಯುತ್ತದೆ. ಭಕ್ತಿಯ ಆಧ್ಯಾತ್ಮದಲ್ಲಿ ತಲ್ಲೀನವಾಗುವ ಬಯಕೆಯಿಂದ ಲೌಕಿಕದ ಗೊಂದಲಗಳನ್ನು ಮೀರಲೆಂದು ಇಂಥ ಪದ್ಧತಿಗಳು ಯಾವಾಗಲೋ ಈ ಸಂಪ್ರದಾಯದಲ್ಲಿ ಪ್ರವೇಶ ಮಾಡಿವೆ. ಆದರೆ ಜನಸಾಮಾನ್ಯರಿಂದ ಈ ಪದ್ಧತಿಯ ದುರುಪಯೋಗುವ ಸಾಧ್ಯತೆಯೂ ಇದೆ.

೧೭. ಜಾತಿ ಸೂತಕ ಮರಣ ಸೂತಕಗಳೂ ಈ ಪರಂಪರೆಯಲಿಲ್ಲ. ಹುಟ್ಟಿದ ಮನೆ ಸತ್ತ ಮನೆಗಳ ಜನರನ್ನು ಕೆಲವು ದಿವಸಗಳವರೆಗೆ ಮುಟ್ಟಿಸಿಕೊಳ್ಳದೆ ಇರುವುದು. ಅಸ್ಪೃಶ್ಯತೆಯ ಆಚರಣೆ. ಈ ರೀತಿ ಮಾಡುವುದು ಅಮಾನವೀಯವಾದ ಆಚರಣೆ. ಇದನ್ನು ಈ ಪಂಥ ಅನುಸರಿಸುವುದಿಲ್ಲ.

ಇಂಥ ಅನೇಕ ಮಾನವೀಯವಾದ ಸಂಪ್ರದಾಯಗಳನ್ನು ಈ ಪಂಥ ಜಾರಿಗೆ ತಂದಿದೆ. ದುರ್ದೈವವೆಂದರೆ ಇಂಥ ಬದಲಾವಣೆ ಎಲ್ಲ ಕಡೆಯೂ ಆಗಲಿಲ್ಲ. ಅದಕ್ಕೆ ಕಾರಣ ಜಡ ಸಂಪ್ರದಾಯಗಳ ಪ್ರಾಬಲ್ಯ ಮತ್ತು ನಮ್ಮ ದೇಶದ ಜನರ ಅಜ್ಞಾನ.

ಈ ಧಾರ್ಮಿಕ ಸಾಮಾಜಿಕ ಚಳುವಳಿಯ ಮುಖ್ಯ ಕೊರತೆಯೆಂದರೆ ಇದಕ್ಕೊಂದು ಹೆಸರು ಇಲ್ಲದೇ ಇರುವುದು. ಮಾನವೈಕೈತೆಯನ್ನು ದೇವೈಕ್ಯತೆಯನ್ನು ಸಾಗುವ ಈ ವಿಶ್ವವಿಶಾಲ ಜೀವನ ಮಾರ್ಗಕ್ಕೆ ಏನೆಂದು ಹೆಸರು. ಇದು ಇಸ್ಲಾಂ ಅಲ್ಲ, ಹಿಂದೂ ಅಲ್ಲ, ನಾಥ ಸಿದ್ದವಲ್ಲ, ಶರಣರ ಇಷ್ಟಲಿಂಗ ಮಾರ್ಗವಲ್ಲ, ಆರೂಢವಲ್ಲ, ಅವಧೂತವಲ್ಲ, ಬೌದ್ಧವಲ್ಲ, ಜೈನವಲ್ಲ, ಹಾಗಾದರೆ ಇದು ಮಾನವ ಧರ್ಮ, ಮಾನವ ಮಾರ್ಗ ಆದರೆ ಇದಕ್ಕೊಂದು ಹೆಸರಿಲ್ಲ.

ವಂಶಶಿಷ್ಯಪರಂಪರೆ 

ಮಳಿಯಪ್ಪಯ್ಯನವರ ಶಿಷ್ಯಪರಂಪರೆಯಲ್ಲಿ ಹೊಳೆಆಲೂರಿನ ಎಚ್ಚರಸ್ವಾಮಿಯದು ಮುಖ್ಯವಾದ ಹೆಸರು. ರಾಯಚೂರು ಜಿಲ್ಲೆಯ ಕುಷ್ಟಗಿ ತಾಲೂಕಿನ ಲಿಂಗನಬಂಡಿಯಲ್ಲಿ ಅಯ್ಯಪ್ಪ-ಕೋನಮ್ಮನವರ ಪುತ್ರನಾಗಿ ಜನಿಸಿದ ಎಚ್ಚರೇಶನು ತನ್ನ ನಂತರ ಹುಟ್ಟಿದ ತಮ್ಮ ಉಳವೀಶನನ್ನು ಕರದುಕೊಂಡು ದೇಶಾಂತರ ತಿರುಗುತ್ತ ಗದ್ದನಗಿರಿಗೆ ಬಂದು ಮಳೆಯಪ್ಪಸ್ವಾಮಿಯಿಂದ ಅನುಗ್ರಹ ಪಡೆದ ಮಹಾತ್ಮನಾಗಿ ರೂಪುಗೊಂಡ. ಮುಂದೆ ಅನೇಕ ಪವಾಡ ಲೀಲೆಗಳನ್ನು ಮಾಡುತ್ತ ತಿರುಗಾಡಿ ಮತ್ತೆ ಗುರುವಿನ ಹತ್ತಿರ ಬಂದು ಸೇವೆಮಾಡುತ್ತ ಅವರಿಂದ ವಟ್ಟಿಚೀಲ ವೆಂಬ ಅಕ್ಷಯ ಚೀಲವನ್ನು ಆಶೀರ್ವಾದವಾಗಿ ಪಡೆದು ಮಲಪ್ರಭಾನದಿತೀರದ ಪಟಿಪುರ(ಹೊಳೆಆಲೂರು)ಕ್ಕೆ ಬಂದು ನೆಲೆಸಿ ಗುರುವಿನ ಸಂಪ್ರದಾಯ ಪಾಲಿಸುತ್ತ ಲೋಕಕಲ್ಯಾಣ ಮಾಡುತ್ತ ಸಮಾಧಿಯಾದಂಥ ಮಹನೀಯ. ಕೆಲದಿನ ಚೆಲವಾದಿ ದುರುಗವ್ವನ ಮನೆಯಲ್ಲಿದ್ದು ಆಕೆಯನ್ನು ತಾಯಿಯೆಂದು ಭಾವಿಸಿರುತ್ತಾರೆ. ಕಾಳಮ್ಮ. ಕರಿಯಮ್ಮ, ಹನುಮಂತ, ಮಾನಪ್ಪ ಎಂಬ ಹೆಸರಿಟ್ಟು ಸಾಕಿದ ನಾಯಿಗಳು ಅವರ ಜೀವನ ಸಂಗಾತಿಯಾಗಿರುತ್ತವೆ. ಇಂದಿಗೂ ಅಲ್ಲಿನ ಮಠದಲ್ಲಿ ನಾಯಿಗಳ ಸೇವೆ ನಡೆಯುತ್ತಿದೆ.

ಈ ಮಠದ ಪರಂಪರೆ ವಂಶಾನುಗತವಾದ್ದರಿಂದ ಇಲ್ಲಿ ಗರ್ಭಸಂಜಾತರೇ ಕರಸಂಜಾತರೂ ಆಗುವ ಪದ್ಧತಿ. ಅಂದರೆ ಮಕ್ಕಳೇ ಶಿಷ್ಯರಾಗಿ ಹಿರಿಯರ ಧರ್ಮಾಚರಣೆಗಳನ್ನು ಮುಂದುವರಿಸಿಕೊಂಡು ಹೋಗುವ ಪದ್ಧತಿ. ಆದ್ದರಿಂದ ಇಲ್ಲಿಯವರೆಗೆ ಸಾಗಿಬಂದಿರುವ ವಂಶಪರಂಪರೆಯೆಲ್ಲ ಶಿಷ್ಯ ಪರಂಪರೆಯೇ ಆಗಿದೆ. ಇದು ಕರ್ನಾಟಕದಲ್ಲಿರುವ ವಿಶ್ವಕರ್ಮಜನಾಂಗದ ಮಠಗಳಲ್ಲೆಲ್ಲಾ ರುಢಿಯಾಗಿರುವ ಪದ್ಧತಿ. ಕೃತಕವಾದ ಬ್ರಹ್ಮದರ‍್ಯ ಪಟ್ಟಿಕ್ಕಿಂತಲೂ ಸಂಸಾರಸ್ಥ ಪಟ್ಟವನ್ನೇ ಇದು ಮಾನ್ಯಮಾಡುತ್ತ ಬಂದಿದೆ.

ಈ ವಂಶದವರು ಸಮಾಜಕ್ಕೆ ಮಹತ್ವದ ಸೇವೆಗಳನ್ನು ಮಾಡುತ್ತ ಮಹಾತ್ಮರೂ ಮಹಾಪುರುಡರು ಆಗಿರುವುದರಿಂದ ಈ ವಂಶಕ್ಕೆ ‘ಮಹಾಪುರುಷ’ ಎಂಬುದೇ ಮನೆತನದ ಹೆಸರಾಗಿ ಪ್ರಚಲಿತವಾಗಿದೆ.

ಮಳಿಯಪ್ಪಯ್ಯನವರ ಮಠದ ಪ್ರಭಾವ ಎಷ್ಟಿದೆಯೆಂದರೆ ಹಿಂದುಗಳಲ್ಲದೆ. ಮುಸಲ್ಮಾನರೂ ಈ ಮಠಕ್ಕೆ ನಡೆದುಕೊಳ್ಳುತ್ತಾರೆ. ಇಲ್ಲಿಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮಳಿಯಸಾಬ್, ಮೌನಾಸಾಬ್, ಅಖಂಡಾಸಾಬ್ ಮುಂತಾದ ಹೆಸರುಗಳು ಹೆಚ್ಚಾ‌ಗಿ ಕಂಡುಬರುತ್ತವೆ. ಇಂಥವರೂ ಈ ಮಠದ ಶಿಷ್ಯವರ್ಗವಾಗಿ ನಡೆದುಕೊಳ್ಳುತ್ತಾರೆ.

ಈ ವಂಶಪರಂಪರೆಯಲ್ಲಿ ಸುಮಾರು ೧೮ನೆ ಶತಮಾನದಿಂದ ಕ್ರಮಬದ್ಧವಾದ ವಂಶ ವೃಕ್ಷ ಸಿಗುತ್ತದೆ. ಶ್ರೀಮಳಿಯಪ್ಪಯ್ಯನವರೆಂಬ ಸ್ವಾಮಿಗಳಿಗೆ ಮೋನಪ್ಪಯ್ಯ, ಗಂಗಾಧರಸ್ವಾಮಿ ಎಂಬ ಮೂವರು ಪುತ್ರರು. ೨ನೆಯವರಾದ ಗಂಗಾಧರಸ್ವಾಮಿಗಳಿಗೆ ಏಕೈಕ ಪುತ್ರ ಅಖಂಡಸ್ವಾಮಿ. ಇವರು ಪೋತಲೂರು ವೀರಬ್ರಂಹೇಂದ್ರಸ್ವಾಮಿಗಳ ವಂಶಜರಾದ ಓಂಕಾರನಾಥಸ್ವಾಮಿಗಳಿಂದ ದೀಕ್ಷೆಪಡೆದು ಮಹಾವೇದಾಂತಿಗಳೂ ನಾದೋಪಾಸಕರೂ ಆಗಿದ್ದರು. ಅವರು ಪಿಟೀಲು ನುಡಿಸುತ್ತಿದ್ದರು. ಅಲ್ಲದೆ ಹೆಸರಾಂತ ಆಯುರ್ವೇದ ವೈದ್ಯರಾಗಿದ್ದರು. ವೇದಾಂತ ನಾದಾಂತ ಒಂದೇ ಆಗಿದ್ದ ಅಖಂಡಸ್ವಾಮಿಗಳು ಮುರನಾಳ ಮಠದಲ್ಲಿ ನಾದೋಪಾಸನೆಗೆ ನಾಂದಿ ಹಾಕಿದರು. ಅಂದಿನಿಂದ ಅವ್ಯಾಹತವಾಗಿ ನಾದ ದಾಸೋಹ ಸಾಗಿ ಬಂದಿದೆ. ಅವರ ಚಿಕ್ಕಪ್ಪನ ಮಗನಾದ ಸೋದರ ಗಂಗಾಧರಸ್ವಾಮಿಗೆ ಅಣ್ಣನೇ ಗುರುವಾಗಿ. ಸಂಗೀತ ಕಲಿಸಿದರು. ಸಂಗೀತ ಅವರಿಂದ ಹೆಮ್ಮರವಾಗಿ ಬೆಳೆಯಿತು. ಅವರು ಅನೇಕ ಪವಾಡಗಳನ್ನು ಮಾಡಿದ ಮಹಿಮಾಪುರುಷರು ಗಂಗಾಧರ ಸ್ವಾಮಿಗಳಿಗೆ ಸಿತಾರವಾದನ ಶಿಕ್ಷಣ ಶಿರಸಂಗಿ ಲಿಂಗರಾಜರ ಅಸ್ಥಾನ ಸಂಗೀತಗಾರರಾದ ದಾದಾಸಾಹೇಬರಿಂದಾಯಿತು ದಾದಾ ಸಾಹೇಬರು ತಮ್ಮ ಉತ್ತರಾವಸ್ಥೆಯಲ್ಲಿ ಮುರನಾಳಕ್ಕೆ ಬಂದು ನೆಲೆಸಿ ಸಂಗೀತ ಕಲಿಸಿದರು. ಇವರ ಸಮಾಧಿ ಜನ್ಮಸ್ಥಳವಾದ ತಡಲಗಿಯಲ್ಲಿದೆ.

ಗಂಗಾಧರ ಸ್ವಾಮಿಗಳ ಪುತ್ರರಾದ ವಿಶ್ವನಾಥ ಮಹಾಪುರುಷರು ಪ್ರಾರಂಭದ ಸಂಗೀತ ತಮ್ಮ ತಂದೆಯಿಂದ ಪ್ರಾರಂಭಿಸಿ ಹೆಚ್ಚಿನ ವಿದ್ವತ್ತನ್ನು ಧಾರವಾಡದ ಸುಪ್ರಸಿದ್ಧ ಸಿತಾರ್‌ ವಾದಕರಾದ ಬಾಲೇಖಾನರಿಂದ ಪಡೆದರು. ಜಗತಪ್ರಸಿದ್ಧ ಸಂಗೀತಗಾರರಾದ ಮಲ್ಲಿಕಾರ್ಜುನ ಮನ್ಸೂರ ಅವರನ್ನು ತಮ್ಮವಾದನದಿಂದ ಮೆಚ್ಚಿಸಿ ಬಾಗಲಕೊಟೆಯ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಸಂಗೀತ ಉಪನ್ಯಾಸಕರಾಗಿ ನೇಕಗೊಂಡು ಸೇವೆಸಲ್ಲಿಸಿ ನಿವೃತ್ತಿಹೊಂದಿದ್ದಾರೆ.

ಶ್ರೀಮಠದಲ್ಲಿ ಪ್ರತಿವರ್ಷ ಜಾತ್ರೆಯ ಸಮಯದಲ್ಲಿ ಸಂಗೀತೋತ್ಸವ ನಡೆಯುತ್ತದೆ. ನಾಡಿನ ಸಂಗೀತ ದಿಗ್ಗಜರೆಲ್ಲ ಈ ಉತ್ಸವದಲ್ಲಿ ಭಾಗವಹಿಸಿದ್ದಾರೆ. ಈ ಭಾಗದಲ್ಲಿ ಸಂಗೀತ ಪ್ರಸಾರವಾಗಲು ಮಠವು ಕಾರಣವಾಗಿದೆ. ಬಾಗಲಕೋಟೆಯ ಶ್ರೀನಟರಾಜ ಸಂಗೀತ ವಿದ್ಯಾಲಯದ ಉದ್ಘಾಟನೆ ೧೯೫೮ರಲ್ಲಿ ಗಂಗಾಧರ ಸ್ವಾಮಿಗಳಿಂದಲೇ ಆಯಿತು. ಕುಷ್ಟಗಿ ತಾಲೂಕಿನ ಹನುಮನಾಳದಲ್ಲಿಯೂ ಆ ಸ್ವಾಮಿಗಳ ಹೆಸರಿನಲ್ಲಿ ‘ಶ್ರೀಗಂಗಾಧರ ಸಂಗೀತ ವಿದ್ಯಾಲಯ’ ಶ್ರೀಗಂಗಾಧರ ಶಿಕ್ಷಣಸಂಸ್ಥೆ’ ಪ್ರಾರಂಭವಾಗಿವೆ. ಮಠದ ಭಕ್ತರಾದ ಚಂದ್ರಶೇಖರ ಬಡಿಗೇರ, ಗುರಪ್ಪ ಪತ್ತಾರವರು ಅವುಗಳನ್ನು ನಡೆಸುತ್ತಿದ್ದಾರೆ. ಮಠದ ಈಗಿನ ತಲೆಮಾರಿನವರಾದ ಜಗನ್ನಾಥಸ್ವಾಮಿ. ಮೋನಪ್ಪಯ್ಯ ಸ್ವಾಮಿಗಳು ಸಿತಾರ ಸಂಗೀತವನ್ನು ಮುಂದುವರಿಸಿದ್ದಾರೆ.

ಹೀಗೆ ಮಳಿಯಪ್ಪಯ್ಯಸ್ವಾಮಿ ಮಠವು ಅನ್ನ-ಅಧ್ಯಾತ್ಮ-ನಾದಗಳೆಂಬ ತ್ರಿವಿಧ ದಾಸೋಹಗಳನ್ನು ನಡೆಸುತ್ತ ಸಮಾಜಸೇವೆಯಲ್ಲಿ ನಿರತವಾಗಿದೆ.

ಈ ಮಠದ ವ್ಯಾಪ್ತಿಯಲ್ಲಿ ಬಾಗಲಕೋಟೆ, ಬದಾಮಿ, ಬೀಳಗಿ, ಕುಷ್ಟಗಿ, ಹುನಗುಂದ, ರೋಣ ತಾಲೂಕುಗಳಿಗೆ ಸೇರಿದ ಸುಮಾರು ೩೬೦ ಗ್ರಾಮಗಳು ಬರುತ್ತವೆ. ಕೆಲವು ಊರುಗಳಲ್ಲಿ ಮಳೆಯಪ್ಪಯ್ಯಸ್ವಾಮಿ ಕುರುಹಿನ ಮಠ-ಗುಡಿಗಳಿವೆ. ಆ ಗ್ರಾಮಗಳ ಜನರು ಮಠಕ್ಕೆ ಭಕ್ತಿ ಶ್ರದ್ಧೆಗಳಿಂದ ನಡೆದುಕೊಳ್ಳುತ್ತಾರೆ. ಮಠದ ಸ್ವಾಮಿಗಳು ಅವುಗಳನ್ನು ಹಂಚಿಕೊಂಡಿದ್ದು ಪ್ರತಿವರ್ಷ ತಂತಮ್ಮ ವ್ಯಾಪ್ತಿಯೊಳಗೆ ಬರುವ ಊರುಗಳಿಗೆ ಕಾಳು-ಕಡಿ ಕಾಣಿಕೆಗಳನ್ನು ಪಡೆಯಲು ಹೋಗುವ ಪದ್ಧತಿ ಇದೆ. ಮುದ್ದೇಬಿಹಾಳೆ, ರಾಮದುರ್ಗ ತಾಲೂಕುಗಳಲ್ಲೂ ಹಾಗೂ ಗೋವಾದಲ್ಲಿ ಕೂಡ ಮಠದ ಶಾಖೆಗಳಿವೆ. ಮಳೆಯಪ್ಪಯ್ಯ ಸ್ವಾಮಿಯ ಮಠದ ವ್ಯಾಪ್ತಿಗೊಳಪಡುವ ಕೆಲವು ಹಳ್ಳಿಗಳ ಪಟ್ಟಿಯನ್ನು ಶ್ರೀವಿಶ್ವನಾಥ ಮಹಾಪುರುಷ ಅವರು ಸಂಗ್ರಹಿಸಿ ಕೊಟ್ಟಿದ್ದಾರೆ. ಹಾಗೆಯೇ ಮಠದ ವಂಶವೃಕ್ಷವನ್ನೂ ಅವರೇ ತಯಾರು ಮಾಡಿದ್ದಾರೆ, ಅವುಗಳನ್ನು ಅನುಬಂಧದಲ್ಲಿ ಕೊಟ್ಟಿದೆ.