ಹೊರಗೆ ಮಳೆ, ಗುಡುಗು, ಮಿಂಚು.
‘ತಲ್ಲಣಿಸದಿರು ಕಂಡ್ಯ ತಾಳು ಮನವೇ’
ಹಾಡು ಮುಗಿವುದರೊಳಗೆ ದೀಪ ಹೋಯಿತು,
ಹಾಳು ಶನಿ, ಅಗೊ ಬಂತು !
ಏನಿದರ ಕಣ್ಣುಮುಚ್ಚಾಲೆ ?

ಮತ್ತೆ ಹೋಗುವುದೇನೊ ಹಾಳು ವಿದ್ಯುದ್ದೀಪ,
ಹುಡುಕಿಟ್ಟಿರೋ ನಿನ್ನ ಹಳೆಯ ಹಣತೆ.
ಸಿಕ್ಕಿತೆ ? ಬತ್ತಿ ಹೊಸೆದಿದ್ದೀಯೊ ? ಎಣ್ಣೆ ?
ಎಲ್ಲವೂ ಇರಲಯ್ಯ ನಿನ್ನ ಜೊತೆಗೆ.

ಧೂಳಾಗಿ ಕಿಮಟು ಹತ್ತಿದೆ ಹಣತೆ-
ಉಜ್ಜು ; ಹಾ ! ಭೂತವೆದ್ದೀತು ಜೋಕೆ,
ಕೇಳೀತು ‘ಏನಪ್ಪಣೆ?’
ಈಗಲೇ ಯೋಚಿಸಿಟ್ಟಿರು ಯಾವುದಾದರು ಒಂದು
ಬಹು ದೊಡ್ಡ ಕೆಲಸ.
ನೀನಾಗಲಾರೆ ಈ ಕಾಲದಲ್ಲಿ ಅಲಸ !

ಹೊರಗೆ ಮಳೆ, ಗುಡುಗು, ಮಿಂಚು ;
ಹಾಳು ವಿದ್ಯುದ್ದೀಪ ಹೋಯ್ತು ಮತ್ತೆ,
ಸುತ್ತ ಭೋರೆಂಬ ದಂಡಕಾರಣ್ಯ-
ಎಲ್ಲಿ ದಾರಿ ?
ತಡಕು ಬೆಂಕೀಕಡ್ಡಿ ಪೊಟ್ಟಣವ ; ಗೀಚು ;
ಹೊತ್ತಿಸಯ್ಯ ಮತ್ತೆ ಹಳೆಯ ಹಣತೆ